ಭಗವದ್ಗೀತಾ ತಾತ್ಪರ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹಿಂದೂ ಧರ್ಮಗ್ರಂಥಗಳು

Aum

ಋಗ್ವೇದ · ಯಜುರ್ವೇದ · ಸಾಮವೇದ · ಅಥರ್ವವೇದ

ಐತರೇಯ · ಬೃಹದಾರಣ್ಯಕ · ಈಶಾವಾಸ್ಯ · ತೈತ್ತಿರೀಯ · ಛಾಂದೋಗ್ಯ · ಕೇನ · ಮುಂಡಕ · ಮಾಂಡೂಕ್ಯ · ಕಠ · ಪ್ರಶ್ನ · ಶ್ವೇತಾಶ್ವತರ

ಗರುಡ · ಅಗ್ನಿ . ನಾರದ . ಪದ್ಮ . ಸ್ಕಾಂದ . ಭವಿಷ್ಯ . ಬ್ರಹ್ಮ . ಭಾಗವತ . ಬ್ರಹ್ಮವೈವರ್ತ . ಬ್ರಹ್ಮಾಂಡ . ವಾಯು . ಲಿಂಗ . ವಿಷ್ಣು . ವಾಮನ . ಮಾರ್ಕಂಡೇಯ . ವರಾಹ . ಕೂರ್ಮ . ಮತ್ಸ್ಯ

ಮಹಾಭಾರತ · ರಾಮಾಯಣ

ಭಗವದ್ಗೀತೆ · ಆಗಮ· ಶೂನ್ಯ ಸಂಪಾದನ· ಶ್ರೀ ಸಿದ್ಧಾಂತ ಶಿಖಾಮಣಿ · ವೀರಶೈವ ಪುರಾಣ · ವಿಷ್ಣು ಸಹಸ್ರನಾಮ . ಬಸವರಾಜ ವಿಜಯಂ

ಭಗವದ್ಗೀತೆಯ ಹುಟ್ಟು[ಬದಲಾಯಿಸಿ]

ಭಗವದ್ಗೀತ : ಕುರುಕ್ಷೇತ್ರ ನಲ್ಲಿ ಕೃಷ್ಣ ಮತ್ತು ಅರ್ಜುನ, 18-19 ನೇ ಶತಮಾನದ ವರ್ಣಚಿತ್ರದ ಜೋಡಣೆ.

ಮಹಾಭಾರತ ಮಹಾಕಾವ್ಯದಲ್ಲಿ ಭಗವದ್ಗೀತೆಯ ಬೋಧನೆಯ ಸನ್ನಿವೇಶವು ಬಹಳ ವಿಚಿತ್ರವಾಗಿದೆ. ಒಂದು ಕಡೆ ಪಾಂಡವರ ಏಳು ಅಕ್ಷೋಹಿಣಿ ಸೇನೆ; ಎದುರಿಗೆ ಕೌರವರ ಹನ್ನೊಂದು ಅಕ್ಷೋಹಿಣಿ ಸೇನೆ. ಇವೆರಡರ ಮದ್ಯೆ ಅರ್ಜುನನ ರಥ; ಶ್ರೀಕೃಷ್ಣ ಸಾರಥಿ. ಈ ಘಟ್ಟದಲ್ಲಿ ಅರ್ಜುನನಿಗೆ ಬಂಧುಗಳನ್ನು ಕೊಲ್ಲಬೇಕಾದ ದುಗುಡ. ಈ ಬಂಧು ಬಾಂಧವರನ್ನು ಕೊಂದು ಪಡೆವ ರಾಜ್ಯವೇ ಬೇಡ; ಭಿಕ್ಷ ಬೇಡಿ ಜೀವಿಸುವುದೇ ಲೇಸು ಎಂಬ ಭಾವನೆ. ಸಂದಿಗ್ಧ ಸ್ಥಿತಿಯಲ್ಲಿದ್ದ ಅರ್ಜನ ಶ್ರೀಕೃಷ್ಣನನ್ನು ಕುರಿತು, ನಾನು ನಿನ್ನ ಶಿಷ್ಯ, ಯುದ್ಧ ಮಾಡುವುದೋ ಬಿಡುವುದೋ, ಧರ್ಮಸಂಕಟದಲ್ಲಿದ್ದೇನೆ, ಯಾವುದು ಶ್ರೇಯಸ್ಸು? ನಿಶ್ಚಿತವಾಗಿ ಹೇಳು ಎಂದು ಶ್ರೀ ಕೃಷ್ಣನನ್ನು ಬೇಡಿಕೊಂಡನು. ಈ ಗೀತೋಪದೇಶದ ಸಂದರ್ಭದಲ್ಲಿ ಮಾತ್ರ ಭಗವಂತನು ಹೇಳಿದನು ಎಂದಿದೆ. ಆದ್ದರಿಂದಲೇ ಶ್ರೀ ಕೃಷ್ಣನು ಅರ್ಜುನನಿಗೆ ಸಂಭಾಷಣೆಗಳ ಮೂಲಕ ಉಪದೇಶ ಮಾಡಿದ, ಗೀತಾ ರೂಪದಲ್ಲಿರುವ ಈ ತತ್ವಬೋಧೆ ಭಗವದ್ಗೀತೆ ಎಂದು ಹೆಸರಾಗಿದೆ.

 • (ಮೋ : ಮ್+ಓ. ಮತ್ತು)
 • (ವೋ :ವ್+ಓ- ಎಂದು ಓದಬೇಕು)

ಮಹಾಭಾರತ ಕಾವ್ಯ ರಚನೆಯ ಕಾಲ[ಬದಲಾಯಿಸಿ]


[೩] ಮಹಾಭಾರತದ ಈಗಿನ ಕಾವ್ಯವು ಸುಮಾರು ಕ್ರಿಪೂ ೪೦೦ ವರ್ಷಗಳ ಹಿಂದೆ ಬರಹರೂಪಕ್ಕೆ ಬಂದಿರಬೇಕೆಂದು ಇತಿಹಾಸಕಾರರು ತೀರ್ಮಾನಿಸಿದ್ದಾರೆ. ಮೂಲ ಮಹಾಭಾರತ ಪಾಠವು ಸುಮಾರು ಕ್ರಿ ಪೂ. ೮ /೯ ನೇ ಶತಮಾನದಲ್ಲಿ ರಚನೆಯಾಗಿರಬೇಕೆಂದು ಅಭಿಪ್ರಾಯ ಪಡುತ್ತಾರೆ. ಕ್ರಿಶ. ೩೦೦/೪೦೦ ರ ಗುಪ್ತರ ಕಾಲದಲ್ಲಿ ಈಗಿನ ತಿದ್ದಿದ ಗ್ರಂಥ ರಚನೆ ಯಾಗಿರಬಹುದೆಂಬುದು ಭಾಷಾತಜ್ಞರ ಅಭಿಪ್ರಾಯ.

ಮಹಾಭಾರತದ ಮೂಲ ಪಾಠ :[ಬದಲಾಯಿಸಿ]


ಜಯ ವೆಂಬ ಹೆಸರಿನ, ಮಹಾಭಾರತದ ಮೂಲ ಪಾಠದ ೮೮೦೦ ಶ್ಲೋಕ ಗಳನ್ನು ಮೊದಲು ವೇದವ್ಯಾಸರು ರಚಿಸಿದರೆಂದೂ, ಅದನ್ನು ೨೪೦೦೦ ಶ್ಲೋಕಗಳಲ್ಲಿ ವೈಶಂಪಾಯನ ಮುನಿಗಳು ಜನಮೇಜಯನಿಗೆ ಹೇಳಿದರೆಂದೂ, ಅದಾದ ಅನೇಕ ವರ್ಷಗಳ ನಂತರ ಅದನ್ನು ಉಗ್ರಶ್ರವ ಸೂತ (ಸೌತಿ) ಪುರಾಣಿಕರು ನೈಮಿಷಾರಣ್ಯ ದಲ್ಲಿರುವ ವಿದ್ಯಾಲಯ ಕುಲಪತಿಗಳಾದ ಶೌನಕಮುನಿಗಳು ಮತ್ತು ಅವರ ಶಿಷ್ಯರಿಗೆ ೧,೦೦,೦೦೦ ಶ್ಲೋಕಗಳಲ್ಲಿ ಹೇಳಿದರೆಂದು ಕೆಲವು ಪಂಡಿತರು ಅಭಿಪ್ರಾಯ ಪಡುತ್ತಾರೆ. ಈ ಭಗವದ್ಗೀತೆಯು ಮೊದಲಿನ ಜಯ ಪಾಠದಿಂದಲೂ ಇತ್ತೇ ಅಥವಾ ನಂತರ ಸೇರ್ಪಡೆಯಾಗಿದೆಯೇ ಎಂದು ಕೆಲವು ವಿದ್ವಾಂಸರು ಸಂಶಯ ಪಡುತ್ತಾರೆ. ಆದರೆ ಈಗಿರುವ ಮಹಾಭಾರತದ ಆದಿಪರ್ವ ಪೀಠಿಕೆಯಲ್ಲಿ ಈ ಒಂದು ಲಕ್ಷ ಶ್ಲೋಕದ ಜಯ ಅಥವಾ ಮಹಾಭಾರತ ಇತಿಹಾಸವನ್ನು (ಕಾವ್ಯ) ವೇದವ್ಯಾಸರು ಮೂರುವರ್ಷಗಳಲ್ಲಿ ರಚಿಸಿದರೆಂದು ಹೇಳಲಾಗಿದೆ.

ಮಹಾಭಾರತ ಯುದ್ಧದ ಕಾಲ :[ಬದಲಾಯಿಸಿ]


ಖಗೋಲ ವಿಜ್ಞಾನಿ ಆರ್ಯಭಟ್ಟರು (ಕ್ರಿ ಶ.೬ ನೇ ಶತಮಾನ) ಕಲಿಯುಗಾದಿಯನ್ನು ಕ್ರಿ.ಪೂ. ೩೧೦೨ ಫೆಬ್ರವರಿ ೧೮ ಎಂದು ನಿರ್ಧರಿಸಿದ್ದಾರೆ ಮಹಾಭಾರತ ಯುದ್ಧವು ಅದಕ್ಕಿಂತ ೫೦/೬೦ವರ್ಷಹಿಂದೆ ಆಗಿರಬೇಕು. ೨ನೇ ಪುಲಕೇಶಿಯ ಕಾಲದ ಐಹೊಳೆ ಶಾಸನದಲ್ಲಿ ಶಕ ೫೫೬= ಕಿಪೂ.೬೩೪ ಎಂದರೆ ಭಾರತ (ಕುರುಕ್ಷೇತ್ರ ಯುದ್ಧವು) ನಡೆದು ೩೭೩೫ ವರ್ಷಗಳಾದವೆಂದು ಹೇಳಿದೆ. ಖಗೋಲ ಶಾಸ್ರಜ್ಞರಾದ ವೃದ್ಧಗರ್ಗ, ವರಾಹಮಿಹಿರರು ಮತ್ತು ಹಿಂದಿನ ಇತಿಹಾಸಕಾರ ಕಲ್ಹಣರು ಆ ಯುದ್ಧವು ಕ್ರಿ ಪೂ ೨೪೪೯ ವರ್ಷದಲ್ಲಿ (೨೪೪೯+೨೦೧೨ = ೪೪೬೧ ವರ್ಷದ ಹಿಂದೆ) ಆಯಿತೆಂದು ಹೇಳುತ್ತಾರೆ. ಆದರೆ ಈಗಿನ ಇತಿಹಾಸಕಾರರು ಮಹಾಭಾರತ ಯುದ್ಧವು ಕ್ರಿ ಪೂ.೧೨ ನೇ ಶತಮಾನದಿಂದ ಕ್ರಿ ಪೂ. ೮ ನೇ ಶತಮಾನದ ನಡುವೆ ಕಬ್ಬಿಣ ಯುಗದ ಆರಂಭದಲ್ಲಿ ನಡೆದಿರಬೇಕೆಂದು ಅಭಿಪ್ರಾಯ ಪಡುತ್ತಾರೆ. ([೪]) ಹಿಂದೂ ಪಂಚಾಂಗಗಳ ಪ್ರಕಾರ ಕಲಿಯುಗ ಆರಂಭವಾಗಿ ೫೧೦೦ ವರ್ಷವಾಗಿದೆ; ಕುರುಕ್ಷೇತ್ರ ಯುದ್ಧವು ಅದಕ್ಕೂ ೬೦ವರ್ಷಗಳ ಹಿಂದೆ ನಡೆದಿರಬೇಕು.

 • ಮಹಾಬಾರತದ ಭೀಷ್ಮ ಪರ್ವದಲ್ಲಿ (ಕುರುಕ್ಷೇತ್ರ ) ಯುದ್ಧವು ಆರಂಭವಾಗುವ ಸಂದರ್ಭದಲ್ಲಿ ಭಗವದ್ಗೀತೆಯು ಅರ್ಜುನ ಶ್ರೀ ಕೃಷ್ಣರ ಸಂವಾದ ರೂಪದಲ್ಲಿ ಹೇಳಲ್ಪಟ್ಟಿದೆ.

ಹಿನ್ನೆಲೆ ಮತ್ತು ಸನ್ನಿವೇಶ ವಿವರ:[ಬದಲಾಯಿಸಿ]


ಹಸ್ತಿನಾವತಿ ರಾಜಧಾನಿಯಾಗಿರುವ ಕುರುಜಾಂಗಲವನ್ನು ಶಂತನು ಚಕ್ರವರ್ತಿ ಆಳುತ್ತಿದ್ದನು. ಆವನ ಮಗ ವಿಚಿತ್ರವೀರ್ಯ. ಅವನ ಒಂದನೇ ಪತ್ನಿ ಅಂಬಿಕೆಗೆ ವ್ಯಾಸ ಮಹರ್ಷಿಯ ನಿಯೋಗದಿಂದ ಧೃತರಾಷ್ಟ್ರನೂ, ಎರಡನೇ ಪತ್ನಿ ಅಂಬಾಲಿಕೆಗೆ ಪಾಂಡುವೂ ಮಕ್ಕಳು. ಧೃತರಾಷ್ಟ್ರನಿಗೆ, ಕೌರವರು ಎಂದು ಹೆಚ್ಚಾಗಿ ಕರೆಯಲ್ಪಡುವ ದುರ್ಯೋಧನ ಮತ್ತು ೯೯ಜನ ತಮ್ಮಂದಿರು ಮಕ್ಕಳು. ಪಾಂಡುವಿಗೆ ಯುಧಿಷ್ಠಿರ (ಧರ್ಮರಾಯ), ಭೀಮ, ಅರ್ಜುನ, ನಕುಲ, ಸಹದೇವ, ಈ ಐವರು ಪಾಂಡವರು ಎಂದು ಕರೆಯಲ್ಪಡುವ ಮಕ್ಕಳು. ರಾಜ್ಯದ ಉತ್ತರಾಧಿಕಾರ ವಿಷಯದಲ್ಲಿ ಎರಡು ಕುಟಂಬದಲ್ಲಿ ವಿವಾದ ಉಂಟಾಯಿತು.ಇಬ್ಬರೂ ಕುರು ವಂಶದವರೇ. ದುರ್ಯೋಧನನು ಪಾಂಡವರನ್ನು ಪಗಡೆಯ ಜೂಜಿಗೆ ಕರೆದನು. ಅದರಲ್ಲಿ ಸೋತವರು ೧೨ವರ್ಷ ವನವಾಸ ಮತ್ತು ಒಂದುವರ್ಷ ಅಜ್ಞಾತವಾಸ ಮಾಡಬೇಕೆಂದು ಪಣವಿಟ್ಟು ಆಡಿದರು. ಪಾಂಡವರು ಸೋತು ಕಾಡಿಗೆ ಹೋದರು. ಹದಿಮೂರು ವರ್ಷಗಳ ನಂತರ ಪಾಂಡವರು ಅವಧಿ ಮುಗಿಸಿ ಬಂದು ತಮ್ಮ ಭಾಗದ ರಾಜ್ಯವನ್ನು ಕೇಳಿದಾಗ, ದುರ್ಯೋಧನನು ಅದನ್ನು ಕೊಡಲು ನಿರಾಕರಿಸಿದನು. ಎಲ್ಲಾ ಸಂಧಾನ ಪ್ರಯತ್ನಗಳೂ ವಿಫಲವಾಗಿ ಯುದ್ಧ ಅನಿವಾರ್ಯವಾಯಿತು. ಕೌರವರ ಹನ್ನೊಂದು ಅಕ್ಷೋಹಿಣಿ ಸೇನೆ ಮತ್ತು ಪಾಂಡವರ ಏಳು ಅಕ್ಷೋಹಿಣಿ ಸೇನೆ ಕುರುಕ್ಷೇತ್ರದಲ್ಲಿ ಯುದ್ಧಕ್ಕೆ ಸಿದ್ಧವಾಗಿ ನಿಂತವು. ಆಗ ಅರ್ಜುನನು ಕುರುಸೇನೆಯನ್ನು ನೋಡಿ ಅದರಲ್ಲಿ ತನ್ನ ಬಂಧು ಬಾಂಧವರನ್ನೂ ಗುರು ಹಿರಿಯರನ್ನೂ ನೋಡಿ, ಧೃತಿಗೆಟ್ಟು, ಅತೀವ ಚಿಂತಿತನಾಗಿ, ಯುದ್ಧಮಾಡಲು ಹಿಂಜರಿದು, ಅವನ ಸಾರಥಿಯಾಗಿದ್ದ ಶ್ರೀಕೃಷ್ಣನ ಸಲಹೆ ಕೇಳಿದನು ಆಗ ಅವರಿಬ್ಬರ ನಡುವೆ ನಡೆದ ಸಂಭಾಷಣೆ ಮತ್ತು ಭಗವಂತನಾದ ಶ್ರೀಕೃಷ್ಣ ಹೇಳಿದ ಉಪದೇಶವು ಭಗವದ್ಗೀತೆಯಾಗಿದೆ. ಇದನ್ನು ಸಂಜಯನು, ವ್ಯಾಸ ಮಹರ್ಷಿಗಳ ಅನುಗ್ರಹದಿಂದ ತಿಳಿದು, ಧೃತರಾಷ್ಟ್ರನಿಗೆ ಹೇಳಿದನು.

ಗೀತಾಜಯಂತಿ[ಬದಲಾಯಿಸಿ]


ಮಹಾತ್ಮರು ಹುಟ್ಟಿದ ದಿನವನ್ನು ಜಯಂತಿ ಎಂದು ಆಚರಿಸುವಂತೆ ಭಗವದ್ಗೀತೆಯು ಹುಟ್ಟಿದ ದಿನವನ್ನು, ಮಾರ್ಗಶಿರ ಮಾಸದ ಏಕಾದಶಿ ದಿನ (ಡಿಸೆಂಬರ್‌ನಲ್ಲಿ) ಗೀತಾ ಜಯಂತಿಯು ಆಚರಿಲ್ಪಡುವುದು. ಶ್ರೀ ಕೃಷ್ಣನು ಅರ್ಜುನನಿಗೆ ಭಗವದ್ಗೀತೆಯನ್ನು ಆ ದಿನ ಬೋಧಿಸಿದನೆಂಬುದು ನಂಬುಗೆ. ಅಂದು, ಪಾಂಡವರಿಗೂ ಕೌರವರಿಗೂ ಕುರುಕ್ಷೇತ್ರದಲ್ಲಿ ನಡೆದ ಮಹಾಭಾರತ ಯುದ್ಧದ ಆರಂಭದ ದಿನ. ಮಹಾಭಾರತದಲ್ಲಿ, ಮಾರ್ಗಶಿರ ತ್ರಯೋದಶಿ ಮತ್ತು ಚತುರ್ದಶಿ ಸೇರಿದ ದಿನದಂದು ಯುದ್ಧವು ಆರಂಭವಾಯಿತೆಂದು ಹೇಳಿದೆ. ಹದಿನೆಂಟು ದಿನ ಯುದ್ಧ ನಡೆದು ಅದೇ ಮಾರ್ಗಶಿರ ಅಮಾವಾಸ್ಯೆಯಂದು ದುರ್ಯೋಧನನ ವಧೆಯಾಗುವುದು. ಜಯದ್ರಥನ ವಧೆ ಹದಿನಾಲ್ಕನೆಯ ದಿನ ಆಯಿತು. ಅಂದು ಕೃಷ್ಣನ ಮಾಯೆಯಿಂದ ಸೂರ್ಯನು ಸ್ವಲ್ಪ ಹೊತ್ತು ಮರೆಯಾಗಿ ಕತ್ತಲಾವರಿಸಿ, ನಂತರ ಪನಃ ಸಂಜೆ ಸೂರ್ಯನು ಪುನಃ ಕಾಣಿಸಿಕೊಂಡಾಗ, ಅರ್ಜುನನು ಜಯದ್ರಥನನ್ನು ಕೊಂದನೆಂದು ಹೇಳಿದೆ. ಕೆಲವರು ಅಂದು ಖಾಗ್ರಾಸ ಸೂರ್ಯ ಗ್ರಹಣವಾಗಿರಬಹುದೆಂದು ಊಹಿಸುತ್ತಾರೆ. ಹಾಗಿದ್ದರೆ ಅಂದು ಅಮಾವಾಸ್ಯೆಯಾಗಿರಬೇಕು; ಹಾಗಿದ್ದರೆ ಕುರುಕ್ಷೇತ್ರ ಯುದ್ಧವು ಮಾರ್ಗಶಿರ ಬಹುಳ ಬಿದಿಗೆಯಂದು ಆರಂಭವಾಗಿ ಅಂದೇ ಗೀತೋಪದೇಶವಾಗಿರಬೇಕು. ಆದರೆ ಮಾರ್ಗಶಿರ ಶುದ್ಧ ದಶಮಿ/ಏಕಾದಶಿಯಂದು ಗೀತಾಜಯಂತಿಯನ್ನು ಆಚರಿಸುವ ಪದ್ದತಿ ಹೇಗೆ ಬಂದಿತೆಂಬುದು ಸಂಶೋಧಕರಿಗೆ ಬಿಟ್ಟ ವಿಷಯ.

ಭಗವದ್ಗೀತೆಯ ಸಂಯೋಜನೆ[ಬದಲಾಯಿಸಿ]


ಭಗವದ್ಗೀತೆಯು ಹದಿನೆಂಟು ಅಧ್ಯಾಯಗಳಿಂದ ಕೂಡಿದ್ದರೂ, ಶ್ರೀಕೃಷ್ಣನ ಉಪದೇಶ, ಎರಡನೆಯ ಅಧ್ಯಾಯದ ಹನ್ನೊಂದನೇ ಶ್ಲೋಕದಿಂದ ಆರಂಭವಾಗಿದೆ. ಮುಂದೆ ಅದೇ ಅಧ್ಯಾಯದ ಐವತ್ಮೂರನೇ ಶ್ಲೋಕದವರೆಗೆ, ಎಂದರೆ ನಲವತ್ಮೂರು ಶ್ಲೋಕಗಳಲ್ಲಿ ಅರ್ಜುನನಿಗೆ ಹೇಳಬೇಕಾದುದನ್ನೆಲ್ಲಾ ಹೇಳಿಯಾಯಿತು. ಆದರೆ ಸಂದೇಹ ನಿವಾರಣೆಗಾಗಿ, ಅವನ ಪ್ರಶ್ನೆಗಳಿಗೆ ಉತ್ತರ ರೂಪವಾಗಿ ಉಳಿದ ಆರುನೂರು ಶ್ಲೋಕಗಳು ಬಂದಿವೆ. ಅರ್ಜುನನ ವಿಷಾದದ ಸಂದರ್ಭದ ಶ್ಲೋಕಗಳೂ ಸೇರಿ ಭಗವದ್ಗೀತೆಯ ಹದಿನೆಂಟು ಅಧ್ಯಾಯಗಳಲ್ಲಿ ಒಟ್ಟು ಏಳು ನೂರು ಶ್ಲೋಕಗಳಾಗತ್ತವೆ.

 • ಯುದ್ಧಾರಂಭ ಸಮಯದಲ್ಲಿ ಏಳು ನೂರು ಶ್ಲೋಕಗಳನ್ನು ಹೇಳಿದ್ದುಂಟೇ? ಎಂಬ ಸಂಶಯ ಮೊದಲಿನಿಂದಲೂ ಇದೆ. ಸ್ವಾಮಿ ಆದಿದೇವಾನಂದರು, ತಮ್ಮ ಗೀತಾ ಪೀಠಿಕೆಯಲ್ಲಿ ಶ್ರೀ ಕೃಷ್ಣನು ಸಂಕ್ಷೇಪಿಸಿ ಹೇಳಿದುದನ್ನು ವ್ಯಾಸರು ವಿವರವಾಗಿ ಬರೆದಿರಬಹುದೆಂದು ಹೇಳುತ್ತಾರೆ. ಪ್ರಾಚೀನ ಪ್ರಸಿದ್ಧ ಟೀಕಾಕಾರರಾದ ಶ್ರೀಧರ ಸ್ವಾಮಿಯವರೂ ಇದೇ ಅಭಿಪ್ರಾಯ ಪಡುತ್ತಾರೆಂದು ಹೇಳಿದ್ದಾರೆ. ಭಗವಂತನ ಸ್ವರೂಪರಾದ ವ್ಯಾಸರು ಮಹಾಭಾರತದ ಸಾರವನ್ನು ಗೀತೆಯಲ್ಲಿ ತುಂಬಿರುವರೆಂದು ವಿನೋಬಾರ ಅಭಿಪ್ರಾಯ. ಶಂಕರಾಚಾರ್ಯರು ಶ್ರೀಮನ್ನಾರಾಯಣನೇ ಶ್ರೀ ಕೃಷ್ಣನಾಗಿ ಅವತರಿಸಿ, ಜಗತ್ತಿನಲ್ಲಿ ಬ್ರಹ್ಮಜ್ಞಾನ ಪ್ರಚಾರ ಮಾಡಲು ಮತ್ತು ಅರ್ಜುನನ ಮೋಹವನ್ನು ಕಳೆಯಲು ಮಾಡಿದ ಉಪದೇಶವನ್ನು, ಸರ್ವಜ್ಞರಾದ ವೇದವ್ಯಾಸರು ಭಗವಂತನು ಹೇಳಿದಂತೆಯೇ ಏಳುನೂರು ಶ್ಲೋಕಗಳಲ್ಲಿ ಗೀತೆಯನ್ನು ರಚಿಸಿದರೆನ್ನುತ್ತಾರೆ.
 • ಗೀತೆ ಚಿಕ್ಕದಾದರೂ ಹಿಂದೂ ಧರ್ಮದ ಮಹಾ ಗ್ರಂಥವೆಂದು ಹೆಸರು ಪಡೆದಿದೆ. ಅದನ್ನು ಉಪನಿಷತ್ತುಗಳ ಸಾರವೆಂದು (ಈಶಾವಾಸ್ಯೋಪನಿಷತ್) ಹೇಳುತ್ತಾರೆ. ಅದರಲ್ಲಿ ಅನೇಕ ಬಗೆಯ ಯೋಗಗಳನ್ನು ಹೇಳಿದ್ದರೂ, ಅದರಲ್ಲಿ ಹೇಳಿದ ಜ್ಞಾನಯೋಗ, ಕರ್ಮಯೋಗ, ಭಕ್ತಿಯೋಗಗಳೇ ಬಹಳ ಪ್ರಸಿದ್ಧವಾಗಿವೆ.

ಅದನ್ನು ಅರ್ಥ ಮಾಡಿಕೊಳ್ಳುವುದು ಸಮುದ್ರದಿಂದ ಬೊಗಸೆ ನೀರನ್ನು ತಂದಂತೆ. ಆದನ್ನು ಓದಿದವರು, ಅನುಷ್ಠಾನ ಮಾಡುವವರು ಗೀತೆಯನ್ನು ಪೂರ್ಣ ಅರಿತಿದ್ದೇವೆಂದು ಹೇಳುವಂತಿಲ್ಲ. ಇದನ್ನು ಕೇಳಿದ ಮಾತ್ರದಿಂದ ಅರಿಯಲಾರರು, ಎಂಬುದು ಅದರಲ್ಲಿರುವ ಎಚ್ಚರಿಕೆ. ಅದರಲ್ಲಿರುವ ಎಲ್ಲಾ ಉಪದೇಶಗಳೂ ಎಲ್ಲರಿಗೂ ಅನ್ವಯಿಸಲಾಗದು. ಅವರವರ ಗುಣ ಸ್ವಭಾವ, ನಂಬುಗೆಗಳಿಗೆ ತಕ್ಕಂತೆ ಬೇಕಾದ ಯೋಗವನ್ನು ಆರಿಸಿಕೊಳ್ಳಬಹುದು.

ಗೀತೆಯ ಪ್ರಭಾವ ಮತ್ತು ರಹಸ್ಯ :[ಬದಲಾಯಿಸಿ]


[೫] ನ್ಯೂ ಯಾರ್ಕಿನ ರಾಮ ಕೃಷ್ಣಾಶ್ರಮದ ನಿಖಿಲಾನಂದರು ಗೀತೆಯು ಒಂದು ದೀರ್ಘ ರೂಪಕವೆಂದು ಹೇಳಿದ್ದಾರೆ. ಅರ್ಜುನನು ಪ್ರತಿಯೊಬ್ಬರ ಆತ್ಮವೇ(ಜೀವಾತ್ಮ ) - ಶ್ರೀಕೃಷ್ಣನು ಮನುಷ್ಯನ ಒಳಗಿರುವ ಪರಮಾತ್ಮ ( ಹೃದಯದಲ್ಲಿರುವ ಪರಮಾತ್ಮನ ಅಂತರ್ವಾಣಿ) ಅಥವಾ ಬ್ರಹ್ಮ. ಸ್ವಾಮಿವಿವೇಕಾನಂದರೂ ಕೂಡ ಈ ಕುರುಕ್ಷೇತ್ರ ಯುದ್ಧವು ಒಳಿತು ಮತ್ತು ಕೆಡಕುಗಳ ನಡುವೆ ನಡೆಯುವ ಸಂಘರ್ಷದ ರೂಪಕವೆಂದು ಅಭಿಪ್ರಾಯ ಪಟ್ಟಿದ್ದಾರೆ. ಅರವಿಂದರೂ ಗಾಂಧೀಜಿಯವರೂ ಅದೇ ಅಭಿಪ್ರಾಯ ಪಟ್ಟಿದ್ದಾರೆ. ಗಾಂಧೀಜೀಯವರು ಗೀತೆಯು ತಮ್ಮ ಜೀವನದ ದಾರಿ ದೀಪವಾಗಿದೆಯೆಂದು ಹೇಳಿದ್ಧಾರೆ. ಅದು(ಗೀತೆ) ನಿಸ್ವಾರ್ಥ ಸೇವೆ ಮತ್ತು ಆತ್ಮ ಸಾಕ್ಷಾತ್ಕಾರಕ್ಕೆ ಮಾರ್ಗದರ್ಶಿಯೆಂದು ಗಾಂಧೀಜೀಯವರ ದೃಢ ನಂಬುಗೆ.

ಗೀತಾ ಅಧ್ಯಯನ ಕ್ರಮ - ಧ್ಯಾನ ಶ್ಲೋಕಗಳು[ಬದಲಾಯಿಸಿ]


 • ಗೀತಾ ಪಠಣ ಮತ್ತು ಧ್ಯಾನ ಶ್ಲೋಕಗಳು [೬]
 • ಕೆಲವು ಸಂಪ್ರದಾಯವಾದಿಗಳು ಗೀತೆಯನ್ನು ಉಪದೇಶದ ಮೂಲಕ ಪಡೆದು ಉಪಾಸನಾ ತಾಂತ್ರಿಕ ಕ್ರಿಯೆಗಳಾದ ಹೃದಯಾದಿ ಕರಷಡಂಗ ನ್ಯಾಸದೊಂದಿಗೆ ಪಠಣ ಮಾಡಬೇಕೆಂದು ಬರೆದಿದ್ದಾರೆ. ಆದರೆ ಮೊಟ್ಟಮೊದಲು ಭಗವದ್ಗೀತಾ ಭಾಷ್ಯ ಬರೆದ ಶ್ರೀ ಶಂಕರರಾಗಲಿ, ಆ ನಂತರದ ಭಾಷ್ಯಕಾರರಾಗಲೀ ಟೀಕಾಕಾರರಾಗಲೀ ಹಾಗೆ ಹೇಳಿಲ್ಲ. ಗೀತೆಯನ್ನು ಜೀವನದ ಮಾರ್ಗದರ್ಶನ ಮತ್ತು ಮೋಕ್ಷಸಾಧನೆಗಾಗಿ ಅರ್ಥ ತಿಳಿದು ಪಠಿಸಬೇಕೆಂಬುದು ಪ್ರಾಜ್ಞರ ಮತ. ಅದನ್ನು ಶ್ರದ್ಧಾ ಭಕ್ತಿಯಿಂದ ಪಠಿಸುವದು ಮೊದಲಿಂದ ನಡೆದು ಬಂದ ಪದ್ಧತಿ.
 • ಕೆಲವರು ಗೀತಾಪಠಣದ ಕೊನೆಯಲ್ಲಿ ವರಾಹ ಪುರಾಣ ದಲ್ಲಿರುವ ಗೀತಾಮಹಾತ್ಮ್ಯವನ್ನು ಪಠಿಸುವ ಸಂಪ್ರದಾಯವನ್ನು ಇಟ್ಟುಕೊಂಡಿದ್ದಾರೆ. ಹೃದಯಾದಿ ಕರಷಡಂಗ ನ್ಯಾಸದೊಂದಿಗೆ ಮುಗಿಸುತ್ತಾರೆ; ಆದರೆ ಅದು ಕಡ್ಡಾಯವಲ್ಲ; ಏಕೆಂದರೆ ಜ್ಞಾನಿಗಳಾದ ಭಾಷ್ಯಕಾರರು ಯಾರೂ ಹಾಗೆ ಹೇಳಿಲ್ಲ. ಅದನ್ನು ಕೆಲವೇ ಸಂಪ್ರಾದಾಯದವರು ಅನುಸರಿಸುತ್ತಾರೆ.
 • ಆದರೆ ಸಾಮಾನ್ಯವಾಗಿ ಎಲ್ಲರೂ ಗೀತಾ ಪಠಣದ ಆರಂಭದಲ್ಲಿ ಒಂಭತ್ತು ಧ್ಯಾನ ಶ್ಲೋಕಗಳನ್ನು ಹೇಳುವ ರೂಢಿ ಇದೆ. ಇವು ಸೊಗಸಾದ ಭಾಷಾ ಸೌಂದರ್ಯವುಳ್ಳ, ಲಯಬದ್ಧವಾದ, ಭಕ್ತಿಪೂರ್ಣವಾದ ಶ್ಲೋಕಗಳಾಗಿವೆ. ವೈಷ್ಣವರಲ್ಲಿ ಧ್ಯಾನ ಶ್ಲೋಕದ ಪ್ರಸಿದ್ಧವಾದ ಒಂಭತ್ತನೆಯ ಶ್ಲೋಕವನ್ನು ಮಾತ್ರಾ ಹೇಳುವ ರೂಢಿ ಇದೆ. ಹೆಚ್ಚಾಗಿ ಮೊದಲಿಗೆ,

ಗೀತಾ ಸುಗೀತಾ ಕರ್ತವ್ಯಾ | ಕಿಮನ್ಯೈಃ ಶಾಸ್ತ್ರ ವಿಸ್ತರೈಃ ||

ಯಾ ಸ್ವಯಂ ಪದ್ಮನಾಭಸ್ಯ | ಮುಖ ಪದ್ಮಾದ್ವಿನಿಃಸೃತಾ ||

ಎಂಬ ಶ್ಲೋಕ ಹೇಳಿ ಧ್ಯಾನ ಶ್ಲೋಕ ಹೇಳಿ ಗೀತಾ ಪಠಣ ಮಾಡುತ್ತಾರೆ.

 • ಒಂದೇ ಅಧ್ಯಾಯ ಓದುವವರು ಮುಂದಿನ ಅಧ್ಯಾಯದ ಮೊದಲ ಶ್ಲೋಕ ಓದಿ (ಪಠಿಸಿ) ನಂತರ ಧ್ಯಾನ ಶ್ಲೋಕಗಳನ್ನು ಹೇಳಿ ಮುಕ್ತಾಯ ಮಾಡುತ್ತಾರೆ. ಕಾಲಾವಕಾಶ ವಿರದಿದ್ದಲ್ಲಿ ಕೊನೆಯ ಧ್ಯಾನ ಶ್ಲೋಕದಿಂದ ಆರಂಭಿಸಿ ಪಠನಾನಂತರ ಅದನ್ನೇ ಹೇಳಿ ಮುಗಿಸಬಹುದು.
 • ಭಗವದ್ಗೀತೆಯ ಬಹಳಷ್ಟು ಶ್ಲೋಕಗಳು ಅನುಷ್ಟುಪ್ ಛಂದಸ್ಸಿನಲ್ಲಿವೆ. ಅವುಗಳನ್ನು ಸಾಂಪ್ರದಾಯಿಕ ಶೈಲಿಯಲ್ಲಿ ಓದುವುದು ಅಥವಾ ಹೇಳುವುದು ಸುಲಭ ಮತ್ತು ಕೇಳುವುದಕ್ಕೂ ಹಿತ. ಸಾಮೂಹಿಕವಾಗಿಯೂ ಹೇಳಬಹುದು. ಆದರೆ ಇತ್ತೀಚೆಗೆ ಅದಕ್ಕೆ ಸಂಗೀತದ ರಾಗ ಸಂಯೋಜನೆ ಮಾಡಿ ಹೇಳುವ ಪದ್ಧತಿ ಆರಂಭವಾಗಿದೆ. ಇದು ಸಂಗೀತ ಅರಿಯದವರಿಗೆ ಅನುಕರಣೆ ಕಷ್ಟ. ಸಾಮೂಹಿಕವಾಗಿ ಹೇಳಲೂ ಆಗುವುದಿಲ್ಲ. ಆದ್ದರಿಂದ ಗೀತೆಯನ್ನು ಓದುವವರು, ಪಠಿಸುವವರು ಸಾಂಪ್ರದಾಯಿಕ ಅನುಷ್ಟುಪ್ ಶೈಲಿಯನ್ನು ಅನುಸರಿಸುವುದು ಅನುಕೂಲ. ( ಉದಾ : ಸಂಗೀತ ವಿದುಷಿ ಎಂ.ಎಸ್.ಸುಬ್ಬಲಕ್ಷ್ಮಿಯವರು, ಅನುಷ್ಟುಪ್ ಛಂದಸ್ಸಿನ ವೆಂಕಟೇಶ ಸುಪ್ರಭಾತವನ್ನು ಸಾಂಪ್ರದಾಯಿಕ ಶೈಲಿಯಲ್ಲಿ ಹೇಳಿದ್ದಾರೆ)

ಅರ್ಜುನ ವಿಷಾದ ಯೋಗ - (ಒಂದನೆಯ ಅಧ್ಯಾಯ)[ಬದಲಾಯಿಸಿ]

ಅರ್ಜುನ ವಿಷಾದ ಯೋಗ -( ೪೭ ಶ್ಲೋಕಗಳು / ಒಟ್ಟು ಶ್ಲೋಕಗಳು)

 • ಮೊದಲಿನ ಪ್ರಸಿದ್ಧ ಶ್ಲೋಕ :

ಧೃತರಾಷ್ಟ್ರ ಉವಾಚ - ಧೃತರಾಷ್ಟ್ರನು ಹೇಳಿದನು( ಸಂಜಯನಿಗೆ ಹೇಳಿದ್ದು)

ಧರ್ಮ ಕ್ಷೇತ್ರೇ ಕುರು ಕ್ಷೇತ್ರೇ ಸಮವೇತಾ ಯುಯುತ್ಸವಃ |

ಮಾಮಕಾಃ ಪಾಂಡವಾಶ್ಚೈವ ಕಿಮಕುರ್ವತ ಸಂಜಯ ||

 • ಹಸ್ತಿನಾವತಿಯ ಚಕ್ರವರ್ತಿಯಾದ ಹುಟ್ಟು ಕುರುಡನಾದ ಧೃತರಾಷ್ಟ್ರನ ಮಂತ್ರಿ ಮತ್ತು ಆಪ್ತ ಸಂಜಯ. ವ್ಯಾಸ ಮಹರ್ಷಿಗಳು, ಯುದ್ಧ ಭೂಮಿ ಕುರುಕ್ಷೇತ್ರದಲ್ಲಿ ನಡೆಯುವ ಎಲ್ಲಾ ವಿದ್ಯಮಾನಗಳೂ, ಸಂಜಯನಿಗೆ ತಿಳಿಯುವ ಹಾಗೆ ಶಕ್ತಿಯನ್ನು ಕೊಟ್ಟಿದ್ದರೆಂದೂ ಮತ್ತು ಯುದ್ಧ ಸಮಾಚಾರವನ್ನು ಅರಸನಿಗೆ ಹೇಳುವಂತೆ ತಿಳಿಸಿದರೆಂದೂ, ಪ್ರತೀತಿ ಇದೆ.
 • "ಧರ್ಮಕ್ಷೇತ್ರವಾದ ಕುರುಕ್ಷೇತ್ರದಲ್ಲಿ ಯುದ್ಧಕ್ಕಾಗಿ ಸೇರಿದ ನನ್ನವರೂ, ಪಾಂಡವರೂ ಏನುಮಾಡಿದರು?" ಎಂದು ಧೃತರಾಷ್ಟ್ರನು ಸಂಜಯನನ್ನು ಕೇಳಿದನು.
 • ( ಟಿಪ್ಪಣಿ : ಇದರಲ್ಲಿ ಪಾಂಡವರು ನನ್ನವರಲ್ಲ ಎಂಬುದು ಸೂಚ್ಯವಾಗಿದೆ. ಕೃಷ್ಣನು ಸಂಧಾನಕ್ಕೆ ಕೌರವರ ಸಭೆಗೆ ಬಂದಾಗ ಯುದ್ಧದಿಂದ ಆಗುವ ಪರಿಣಾಮಗಳನ್ನು ವಿವರಿಸಿದ್ದಾನೆ. ಆದರೆ ಕೌರವನು ಶಾಂತಿ ಸಂಧಾನಕ್ಕೆ ಒಪ್ಪಲಿಲ್ಲ. ಯುದ್ಧವನ್ನು ಕೌರವನೇ ಆಯ್ಕೆ ಮಾಡಿಕೊಂಡಿದ್ದು (ಚರ್ಚೆಪುಟ:ಭಗವದ್ಗೀತಾ ತಾತ್ಪರ್ಯ). ಆದರೂ ಧೃತರಾಷ್ಟ್ರನು 'ಧರ್ಮಕ್ಷೇತ್ರೇ' ಎಂದಿರುವುದು ತಾವು ಧರ್ಮಯುದ್ಧ ಮಾಡುತ್ತಿದ್ದೇವೆ ಎಂಬ ಭಾವನೆ ಇರಬಹುದು. ಅಥವಾ ಸಂಧಾನ ಸಮಯದಲ್ಲಿ ಹಠಮಾರಿ ಕೌರವನ ಎದುರು ತಾನು ಅಸಹಾಯಕನಾಗಿದ್ದು - ಕೊನೆಗೆ ಧರ್ಮಿಷ್ಟರಾದ ಪಾಂಡವರಿಗೇ ಜಯ ಎಂಬ ಭಾವನೆ ಇದ್ದರೂ ಇರಬಹುದು.)
 • ಸಂಜಯನು ಹೇಳಿದ,- ದುರ್ಯೋನನು ದ್ರೋಣಾಚಾರ್ಯರ ಹತ್ತಿರ ಬಂದು ತನ್ನ ಮತ್ತು ಪಾಂಡವರ ಸೈನ್ಯವನ್ನು ಹೋಲಿಸುತ್ತಾನೆ. ಪಾಂಡವರ ಕಡೆ ಇರುವ ಅತಿರಥ ಮಹಾರಥರ ಹೆಸರನ್ನೂ ತನ್ನಕಡೆ ಇರುವ ಭೀಷ್ಮ ದ್ರೋಣಾದಿಗಳ ಹೆಸರುಗಳನ್ನೂ ಹೇಳಿ, ತಮ್ಮ ಸೈನ್ಯವು ಭೀಷ್ಮನಿಂದ ರಕ್ಷಿತವಾಗಿ ಅಪರಿಮಿತವಾಗಿದೆ, ಭೀಮನಿಂದ ರಕ್ಷಿಸಲ್ಪಡುತ್ತಿರವ ಚಿಕ್ಕ ಸೈನ್ಯವು ಪರಿಮಿತವಾಗಿದೆ. ಸೇನಾಧಿಪತಿಯಾದ ಭೀಷ್ಮನನ್ನು ನೀವೆಲ್ಲಾ ರಕ್ಷಿಸಿ, -ಎಂದು ದ್ರೋಣನಿಗೆ ಹೇಳುತ್ತಾನೆ.
 • (ಟಿ : ತಮ್ಮ ಸೈನ್ಯ ದೊಡ್ಡದಾಗಿದೆ ಭೀಷ್ಮ ವೀರ ಎಂದು ಉದಾಸೀನ ಮಾಡುವಂತಿಲ್ಲ ಎಂಬ ಅಭಿಪ್ರಾಯ )
 • ಆ ಸಮಯದಲ್ಲಿ ಶ್ರೀ ಕೃಷ್ಣನೂ, ಪಾಂಡವರೂ, ಅವರ ಕಡೆಯವರೂ ಯುದ್ಧೋತ್ಸಾಹದಿಂದ ಶಂಖವನ್ನು ಊದಿದರು. ಆ ದೊಡ್ಡ ಶಬ್ದದಿಂದ ಕೌರವರ ಎದೆ ನಡುಗಿತು.
 • "ದುರ್ಬುದ್ಧಿಯ ಧಾರ್ತರಾಷ್ಟ್ರರ ಸಹಾಯಕ್ಕಾಗಿ ಯುದ್ಧಮಾಡಲು ಬಂದವರು ಯಾರು ಯಾರು ಎಂದು ನೋಡುತ್ತೇನೆ," ಎಂದು, "ಎರಡೂ ಸೇನೆಗಳ ಮಧ್ಯದಲ್ಲಿ ನನ್ನ ರಥವನ್ನು ನಿಲ್ಲಿಸು," ಎಂದು ಅರ್ಜುನನು ಸಾರಥಿಯಾದ ಅಚ್ಯುತನಿಗೆ ಹೇಳಿದನು.
 • (ಟಿ : ಅರ್ಜುನನು, ಮಿತ್ರನೂ ಬಂಧುವೂ ಆದ, ಶ್ರೀಕೃಷ್ಣನೊಡನೆ, 'ನಮ್ಮ ರಥ' ಎನ್ನಲಿಲ್ಲ 'ನನ್ನ ರಥ' ಎಂದ, ಅದರಲ್ಲಿ ಅಹಂಕಾರದ ಸುಳಿವು ಇದೆ)
 • ಶ್ರೀಕೃಷ್ಣನು ಹಾಗೆಯೇ ಮಾಡಿ, 'ಅರ್ಜುನಾ ನೋಡು', ಎಂದನು.

ಅರ್ಜುನನ ಅತೀವ ಹತಾಶೆ ಮತ್ತು ಖಿನ್ನತೆ[ಬದಲಾಯಿಸಿ]


ಅರ್ಜುನನು ಎದುರಿನ ಸೈನ್ಯವನ್ನು ನೋಡಿದ. ಅವನಿಗೆ ಕಂಡಿದ್ದು ಶತ್ರುಗಳಲ್ಲ! ತಂದೆ ಸಮಾನರದ ಅಜ್ಜಂದಿರು, ಮಾವಂದಿರು, ಗುರುಗಳು, ತನ್ನ ಹಿತೈಷಿಗಳು- ಕೌರವರಕಡೆಯೂ ಅವರೇ, ತನ್ನ ಕಡೆಯೂ ಅವರೇ!

 • ಇದ್ದಕ್ಕಿದ್ದಂತೆ ಅವನಿಗೆ ಎಲ್ಲಾ ನನ್ನ ಪ್ರೀತಿಪಾತ್ರರೇ ಇದ್ದಾರಲ್ಲಾ, ಇವರನ್ನೆಲ್ಲಾ ಕೊಂದು ರಾಜ್ಯವಾಳಬೇಕಲ್ಲಾ ಎನಿಸಿ ದಿಗ್ಭ್ರಮೆಯಾಯಿತು. ತಾನು ಘೋರ ಅಪರಾಧ ಮಾಢುತ್ತಿದ್ದೇನೆ, ಎನ್ನಿಸಿತು. ಇದರಿಂದ ಪೂರ್ಣ ಧೃತಿಗೆಟ್ಟು, ಹತಾಶೆ ಮತ್ತು ಅತೀವ ಖಿನ್ನತೆ ಹೊಂದಿ ( ಸಿವಿಯರ್ ಡಿಪ್ರೆಶನ್) ಇಡೀ ದೇಹದಲ್ಲಿ ನಡುಕ ಉಂಟಾಯಿತು. ಹೀಗೆ ಧೃತಿಗೆಟ್ಟ ಅರ್ಜುನನ ಸ್ಥಿತಿಯನ್ನು ಕುರಿತು ಅವನೇ ಹೇಳುವ ವಿವರ:

ಸೀದಂತಿ ಮಮ ಗಾತ್ರಾಣಿ ಮುಖಂ ಚ ಪರಿಶುಷ್ಯತಿ |

ವೇಪಥುಶ್ಚ ಶರೀರೇ ಮೇ, ರೋಮ ಹರ್ಷಶ್ಚ ಜಾಯತೇ ||

ಗಾಂಡೀವಂ ಸ್ರಂಸತೇ ಹಸ್ತಾತ್, ತ್ವಕ್ಚೈವ ಪರಿದಹ್ಯತೇ |

ನ ಚ ಶಕ್ನೋಮ್ಯವಸ್ಥಾತುಂ, ಭ್ರಮತೀವ ಚ ಮೇ ಮನಃ || (೧-೨೯:೩೦)

 • ಅರ್ಜುನ ಹೇಳಿದ, "ನನ್ನ ಅವಯುವಗಳು ಸೊರಗುತ್ತಿವೆ, ಬಾಯಿ ಒಣಗುತ್ತಿದೆ, ಮೈ ನಡುಗುತ್ತಿದೆ; ಗಾಂಡೀವ ಬಿಲ್ಲು ಕೈಯಿಂದ ಬೀಳುತ್ತಿದೆ; ನನಗೆ ನಿಲ್ಲಲೂ ಆಗುವುದಿಲ್ಲ; ಮನಸ್ಸು ಭ್ರಮೆಗೊಂಡಿದೆ" .
 • "ಇವರನ್ನೆಲ್ಲಾ ಕೊಂದು ರಾಜ್ಯ ಪಡೆದು ಸುಖ ಅನುಭವಿಸಿ ಏನು ಪ್ರಯೋಜನ; ನನಗೆ ಜಯವೂ ಬೇಡ. ರಾಜ್ಯವೂ ಬೇಡ, ಅವರು ನನ್ನನ್ನು ಹೊಡೆದರೂ, ಮೂರು ಲೋಕಗಳನ್ನು ಕೊಟ್ಟರೂ ನಾನು ಹೊಡೆಯಲಾರೆ. ಈ ಪಾಪಿಗಳನ್ನು ಕೊಂದು ಕುಲಕ್ಷಯ ಮಾಡಿ, ನಾನೇಕೆ ಪಾಪವನ್ನು ಕಟ್ಟಿಕೊಳ್ಳಲಿ; ಸ್ವಜನರೂ, ಬಾಂಧವರೂ ಆದ ಇವರನ್ನು ಕೊಂದು ಸುಖ ಪಡುವುದು ಹೇಗೆ?" ಎಂದು ಹೇಳಿದ.
 • ಅಲ್ಲದೆ ಈ ವಿಷಯಗಳು ತನಗೆ ಮೊದಲೇ ಏಕೆ ಹೊಳೆಯಲಿಲ್ಲ -ಎಂದು ಪರಿತಪಿಸಿದ. ಇನ್ನೂ ಆಳವಾಗಿ ಯೋಚಿಸಿ, ಈ ಲಕ್ಷಾಂತರ ಯೋಧರು, ಸೈನಿಕರು ಸತ್ತರೆ ಅವರ ಹೆಂಡಿರ ಗತಿ ಏನು? ಆ ವಿಧವೆಯರು ಗಂಡರಿಲ್ಲದೆ ನಡತೆಗೆಟ್ಟು ಸಮಾಜ ಅಧೋಗತಿಗೆ ಹೋಗುತ್ತದೆ ಎಂದು ಪರಿತಪಿಸಿದ.
 • "ಅಹೋ ಬತ ಮಹತ್ಪಾಪಂ ಕರ್ತುಂ ವ್ಯವಸಿತಾ ವಯಂ !" "ರಾಜ್ಯಕ್ಕಾಗಿ ಎಂತಹ ಕೆಟ್ಟ ಪಾಪದ ಕೆಲಸಕ್ಕೆ ನಾವು ಕೈ ಹಾಕಿ ಬಿಟ್ಟೆವು ! ಶಸ್ತ್ರ ಹಿಡಿಯದ ನನ್ನನ್ನು ಈಗ ಯಾರಾದರೂ ಕೊಂದು ಹಾಕಿದರೆ, ಅದೇ ಒಳ್ಳೆಯದು!" ಎಂದು ಹೇಳತ್ತಾ ಬಿಲ್ಲನ್ನು ಕೆಳಗೆ ಹಾಕಿ ಶೋಕ ತಪ್ತನಾಗಿ ರಥದಲ್ಲಿ ದಿಕ್ಕು ತೋರದೆ ಕುಳಿತುಬಿಟ್ಟನು.
 • ( ಟಿಪ್ಪಣಿ : ಹೀಗೆ ಅತೀವ ಹತಾಶೆ ಖಿನ್ನತೆ ಹೊಂದಿದವರು-(ಸಿವಿಯರ್ ಡಿಪ್ರೆಶನ್ -ಹೊಂದಿದವರು) ಸಾಮಾನ್ಯವಾಗಿ ಆತ್ಮಹತ್ಯೆಗೆ ಪ್ರಯತ್ನಿಸುವುದು ಸ್ವಾಭಾವಿಕವೆಂಬುದು ಮನಶಾಸ್ತ್ರಜ್ಞರ ಅಭಿಪ್ರಾಯ. ಇಲ್ಲಿ ಅರ್ಜುನ, ಶತ್ರುಗಳೇ ತನ್ನನ್ನು ಕೊಲ್ಲಲಿ ಎಂದು ಬಯಸುತ್ತಿದ್ದಾನೆ. ಪ್ರಾಜ್ಞನಾದ ಶ್ರೀಕೃಷ್ಣ ಗಾಬರಿಯಾಗಲಿಲ್ಲ!)
 • (ಇತಿ ಶ್ರೀ ಭಗವದ್ಗೀತಾಸೂಪನಿಷತ್ಸು ಬ್ರಹ್ಮವಿದ್ಯಾಯಾಂ ಯೋಗ ಶಾಸ್ತ್ರೇ ಶ್ರೀ ಕೃಷ್ಣಾರ್ಜುನ ಸಂವಾದೇ ಅರ್ಜುನ ವಿಷಾದ ಯೋಗೋ ನಾಮ ಪ್ರಥಮೋsಧ್ಯಾಯಃ)

ಸಾಂಖ್ಯ ಯೋಗ - (ಎರಡನೆಯ ಅಧ್ಯಾಯ)[ಬದಲಾಯಿಸಿ]


 • ಸಾಂಖ್ಯ ಯೋಗ - ೭೨/೧೧೯
 • ಸಂಜಯ ಧೃತರಾಷ್ಟ್ರನಿಗೆ ಹೇಳುತ್ತಾನೆ,- ಹೀಗೆ ದುಃಖ ತಪ್ತನಾಗಿ ದಿಕ್ಕು ತೋಚದೆ ಕಣ್ಣಲ್ಲಿ ನೀರು ತುಂಬಿಕೊಂಡು ಕುಳಿತ ಅರ್ಜುನನನ್ನು ನೋಡಿ, ಮಧುಸೂದನನು ಹೇಳುತ್ತಾನೆ, "ಈ ವಿಷಮ ಸಂದರ್ಭದಲ್ಲಿ ತಿಳವಳಿಕೆಯಿಲ್ಲದ, ನರಕ ಭಾಜನವಾದ, ಹೇಡಿತನದ, ಬುದ್ಧಿ ನಿನಗೆ ತಕ್ಕದ್ದಲ್ಲ. ಈ ತುಚ್ಛವಾದ ಹೃದಯ ದೌರ್ಬಲ್ಯವನ್ನು ಬಿಟ್ಟು ಎದ್ದೇಳು!" ಈ ಮಾತು, ಹಿತವಚನ ಅರ್ಜುನನ ಮನಸ್ಸಿನ ಮೇಲೆ ಏನೂ ಪರಿಣಾಮ ಬೀರಲಿಲ್ಲ.
 • ಅರ್ಜುನ ಮತ್ತೆ ಅದೇ ವಾದವನ್ನು ಮುಂದುವರೆಸುತ್ತಾನೆ. "ಭೀಷ್ಮರನ್ನೂ, ಗುರುಗಳನ್ನೂ ಹೇಗೆ ಕೊಲ್ಲಲಿ? ಅವರನ್ನು ಕೊಲ್ಲುವುದಕ್ಕಿಂತ ಭಿಕ್ಷಾನ್ನದಿಂದ ಜೀವಿಸುವುದೇ ಮೇಲು. ಗುರುಗಳನ್ನು ಕೊಂದು ರಕ್ತ ಸಿಕ್ತವಾದ ಸುಖವನ್ನು ಹೇಗೆ ಅನುಭವಿಸಲಿ? ದಿಕ್ಕೇ ತೋಚದಂತಾಗಿದೆ" ಎನ್ನುತ್ತಾನೆ.
 • (ಟಿಪ್ಪಣಿ : ಆದರೆ ಅವನಲ್ಲಿ ಇನ್ನೂ ಸ್ವಲ್ಪ ಪ್ರಜ್ಞೆ ಉಳಿದಿದೆ. ಮುಂದಿನ ಎರಡು ಶ್ಲೋಕಗಳಲ್ಲಿರುವ ಅವನ ಮಾತು ಮತ್ತು ಶರಣಾಗತಿ, ಅವನ ಉದ್ಧಾರಕ್ಕೂ ಜಗತ್ತಿಗೆ ಮಾರ್ಗದರ್ಶನವಾದ ಈ ಗೀತೆಗೂ ನಾಂದಿಯಾಯಿತು.)

ಭಗವಂತನಾದ ಕೃಷ್ಣನಿಗೆ ಶರಣಾಗತಿ :[ಬದಲಾಯಿಸಿ]


ಕಾರ್ಪಣ್ಯ ದೋಷೋಪಹತಃ ಸ್ವಭಾವಃ |

ಪೃಚ್ಛಾಮಿ ತ್ವಾಂ ಧರ್ಮ ಸಂಮೂಢ ಚೇತಾಃ ||

ಯಚ್ಛ್ರೇಯ ಸ್ಯಾನ್ನಿಶ್ಚಿತಂ ಬ್ರೂಹಿ ತನ್ಮೇ|

ಶಿಷ್ಯಸ್ತೇsಹಂ ಶಾಧಿ ಮಾಂ ತ್ವಾಂ ಪ್ರಪನ್ನಂ || (೨-೭)

ನ ಹಿ ಪ್ರಪಶ್ಯಾಮಿ ಮಮಾಪನಯದ್ಯಾ -|

ದ್ಯಚ್ಛೋಕಮುಚ್ಛೋಷಣಮಿಂದ್ರಿಯಾಣಾಂ ||

ಆವಾಪ್ಯ ಭೂಮಾವಸಪತ್ನಮೃದ್ಧಂ |

ರಾಜ್ಯಂ ಸುರಾಣಾಮಪಿ ಚಾಧಿಪತ್ಯಂ|| (೨-೮)

 • ದಿಕ್ಕುಗೆಟ್ಟು ಅತೀವ ಖಿನ್ನತೆಹೊಂದಿದ ನಾನು ಧರ್ಮವನ್ನು ತಪ್ಪು ತಿಳಿಯುವ ಸಂಭವವಿದೆ. ನಾನು ನಿನಗೆ ಶರಣು ಬಂದಿದ್ದೇನೆ, ನಾನು ನಿನ್ನ ಶಿಷ್ಯ; ನನಗೆ ಶ್ರೇಯಸ್ಸು ಯಾವುದು ಎಂಬುದನ್ನು ಹೇಳು. ಭೂಮಿಯಲ್ಲಿ ಎದುರಿಲ್ಲದ ರಾಜ್ಯ ಸಿಕ್ಕಿದರೂ, ಸ್ವರ್ಗದ ಆಧಿಪತ್ಯ ಲಭಿಸಿದರೂ ನನ್ನ ಈ ದುಃಖವು, ದುಗುಡವು ಕಡಿಮೆಯಾದೀತೆಂದು ನನಗೆ ಕಾಣುವುದಿಲ್ಲ!
 • (ಟಿಪ್ಪಣಿ : ತೀವ್ರ ಖಿನ್ನತೆಗೆ ಒಳಗಾದವರು ಆಪ್ತರ ಮತ್ತು ತಿಳಿವಳಿಕೆಯುಳ್ಳವರ ಸಲಹೆ ತೆಗೆದುಕೊಳ್ಳಬೇಕು; ತಾವೇ ನಿರ್ಧಾರ ತೆಗೆದುಕೊಳ್ಳಬಾರದು; ಇದು ಸಂದೇಶ)

ಸಾಂಖ್ಯ ಮತ್ತು ಪರಮಾರ್ಥಿಕ ತತ್ವದ ಬೋಧೆ :[ಬದಲಾಯಿಸಿ]


ಭಗವಾನುವಾಚ -ಭಗವಂತನು ಹೇಳಿದನು: (ಎಂದಿದೆ)

 • ಶ್ರೀಕೃಷ್ಣನು ಮೂಲ ಪಾರಮಾರ್ಥಿಕ ತತ್ವವಾದ ಆತ್ಮದ ಅಮರತ್ವವನ್ನು ಹೇಳಿದನು ಪಾರಮಾರ್ಥಿಕವಾಗಿ ಆತ್ಮವು ಅಮರ, ಸಾವಿಲ್ಲದ್ದು. ಯಾರೂ ಕೊಲ್ಲುವುದೂ ಇಲ್ಲ ಯಾರೂ ಸಾಯುವುದೂ ಇಲ್ಲ. ಯೌವನ ಮುಪ್ಪಿನಂತೆ ಸಾವೂ ಒಂದು ಅನಿವಾರ್ಯ ಸ್ಥಿತಿ. ಶೀತ, ಉಷ್ಣವನ್ನು ಸಹಿಸಿಕೊಂಡಂತೆ ಸಾವಿನ ದಃಖವನ್ನೂ ಸಹಿಸಿಕೊಳ್ಳಬೇಕು.
 • ಸುಖ ದಃಖಗಳನ್ನು ಸಮನಾಗಿ ತೆಗೆದುಕೊಳ್ಳುವವನು ಮೋಕ್ಷಕ್ಕೆ ಅರ್ಹನಾಗುತ್ತಾನೆ. ಆದ್ದರಿಂದ ಬಂಧುಗಳನ್ನು ಕೊಲ್ಲುವೆನೆಂಬ ಭಾವನೆಯನ್ನು ಬಿಟ್ಟು ಯುದ್ಧಕ್ಕೆ ಸಿದ್ಧನಾಗು. ಆತ್ಮವು ಅವಿನಾಶಿ -ಸಾವಿಲ್ಲದ್ದು. ಪಾರಮಾರ್ಥಿಕವಾಗಿ ಯಾರೂ ಸಾಯುವುದೂ ಇಲ್ಲ - ಹುಟ್ಟುವುದೂ ಇಲ್ಲ. ಸಾವಿಲ್ಲದ ಆತ್ಮವನ್ನು ಕೊಲ್ಲುವುದು ಸಾದ್ಯವಿಲ್ಲ. ಈ ತಿಳಿವಳಿಕೆ ಹೊಂದಿ, ಜೀವಿಗಳು ಸಾಯುತ್ತವೆ ಎಂದು ಭಾವಿಸಿ ನೀನು ಶೋಕಿಸಬೇಡ.
 • ಈ ಸಾವು-ಹುಟ್ಟು, ಹಳೆಯ ಬಟ್ಟೆಯನ್ನು ತೆಗೆದು ಹೊಸ ಬಟ್ಟೆಯನ್ನು ತೊಟ್ಟಂತೆ (ಕೆಳಗಿನ ಶ್ಲೋ. ೨-೨೨)*.
 • ಒಂದೊಮ್ಮೆ ನೀನು ಲೋಕಾಯತರಂತೆ ಸತ್ತಮೇಲೆ ಇಲ್ಲವಾಗುತ್ತಾರೆ ಎಂದು ಭಾವಿಸಿದರೂ, ಹಿಂದೆ ಇರದ ಮುಂದೆ ಉಳಿಯದ ನಶ್ವರವಾದ ದೇಹಕ್ಕೆ ದುಃಖಿಸುವ ಅಗತ್ಯವಿಲ್ಲ ಎಂದು ಹೇಳಿದನು.
 • ಈ ಸಂದರ್ಭದಲ್ಲಿ ಬರುವ ಮೂರು ಶ್ಲೋಕಗಳು ಪ್ರಸಿದ್ಧವಾಗಿವೆ:

ನಾಸತೋ ವಿದ್ಯತೇ ಭಾವೋ ನಾಭಾವೋ ವಿದ್ಯತೇ ಸತಃ |'

ಉಭಯೋರಪಿ ದೃಷ್ಟೋಂsತಃ ತ್ವನಯೋಸ್ತತ್ವ ದರ್ಶಭಿಃ ||(೨-೧೬)

 • ಇಲ್ಲದಿರುವ (ಅಸತ್ತು) ವಸ್ತುವು ಹುಟ್ಟಲಾರದು (ಭಾವ - ಇರುವಿಕೆ, ತೋರಿಕೊಳ್ಳುವಿಕೆ ನ-ಇರಲಾರದು); ಇರುವುದು (ಸತ್ -ಇದೆ :ಎಂಬುದು -ಇದೆ ಎನ್ನುವುದು ನಾಶವಾಗಲಾರದು) ಇಲ್ಲದಂತಾಗಲಾರದು. ಇದು ತತ್ವವನ್ನು ಅರಿತವರ ಮತ. (ಆತ್ಮ ಅಥವಾ ಪರಬ್ರಹ್ಮ ವಸ್ತು ಇದೆ ಎನ್ನುವುದಕ್ಕೆ ಬೇರೆ ತರ್ಕ ಇಲ್ಲ. "ನಾನು ಇದ್ದೇನೆ" ಎಂಬ ಭಾವ ಇಲ್ಲದ್ದರಿಂದ ಹುಟ್ಟಲಾರದು- ಎಲ್ಲಾ ಉಪಾಧಿಗಳನ್ನು ತೆಗೆದಾಗ ಉಳಿಯುವುದೇ 'ಇದ್ದೇನೆ' ಎನ್ನುವ "ಬ್ರಹ್ಮ' ತತ್ವ, ಆದ್ದರಿಂದ ಈ ಹೇಳಿಕೆ ತರ್ಕಕ್ಕೆ ಮೀರಿದ ಮೂಲ ತತ್ವ)

ವಾಸಾಂಸಿ ಜೀರ್ಣಾನಿ ಯಥಾ ವಿಹಾಯ |ನವಾನಿ ಗೃಹ್ಣಾತಿ ನರೋಪರಾಣಿ ||

ತಥಾ ಶರೀರಾಣಿ ವಿಹಾಯ ಜೀರ್ಣಾನ್ಯನ್ಯಾನಿ ಸಂಯಾತಿ ನವಾನಿ ದೇಹೀ || (೨-೨೨)*

ಜಾತಸ್ಯ ಹಿ ಧ್ರುವೋ ಮೃತ್ಯುಃ| ಧ್ರುವಂ ಜನ್ಮ ಮೃತಸ್ಯ ಚ||

ತಸ್ಮಾದಪರಿಹಾರ್ಯೇsರ್ಥೇ ನ ತ್ವಂ ಶೋಚಿತುಮರ್ಹಸಿ||

 • ಹುಟ್ಟಿದವನಿಗೆ ಸಾವು ನಿಶ್ಚಿತ; ಸತ್ತವನಿಗೆ ಹುಟ್ಟು ನಿಶ್ಚಿತ; ಪರಿಹಾರವಿಲ್ಲದ ಇದಕ್ಕೆ ನೀನು ಶೋಕಿಸಬಾರದು.
 • ಆಶ್ಚರ್ಯಕರವಾದ ಈ ಆತ್ಮ ತತ್ವವನ್ನು ಕೇಳಿದ ಮಾತ್ರದಿಂದ ತಿಳಿಯಲಾಗದು! (ಶ್ರುತ್ವಾಪ್ಯೇನಂ ವೇದ ನ ಚೈವ ಕಶ್ಚಿತ್ |)

ಈಗ ಪ್ರಾಪಂಚಿಕ ಧರ್ಮವನ್ನು ಹೇಳುತ್ತಾನೆ.

ಪ್ರಾಪಂಚಿಕ ಧರ್ಮ ವಿಚಾರ :[ಬದಲಾಯಿಸಿ]


ಭಗವಂತನಾದ ಶ್ರೀಕೃಷ್ಣನು, ಏಳು ಶ್ಲೋಕಗಳಲ್ಲಿ ಪ್ರಾಪಂಚಿಕ ಧರ್ಮವನ್ನು ಹೇಳುತ್ತಾನೆ. ಪಾರಮಾರ್ಥಿಕ - ಆತ್ಮ ವಿಚಾರ ಅರಿತರೂ, ಪ್ರಾಪಂಚಿಕ ಧರ್ಮವನ್ನು ಬಿಡಬಾರದು ಅದೂ ಪ್ರಮುಖವಾದುದು, ಎನ್ನುವುದು ಅಭಿಪ್ರಾಯ. ಆತ್ಮವನ್ನು ಅರಿತವರು ಅಥವಾ ಜ್ಞಾನಯೋಗ ಕರ್ಮಯೋಗ ಅನುಸರಿಸುವವರು- ಅನಾಸಕ್ತಿಯನ್ನು ಅಂತರಂಗದಲ್ಲಿ ಮಾತ್ರಾ ಇಟ್ಟುಕೊಳ್ಳಬೇಕು; ಪ್ರಾಪಂಚಿಕ ಕರ್ಮಗಳನ್ನು ಬಿಡಬಾರದು (ಉದಾ: ಗಾಂಧೀಜೀ ಅವರ ಅನಾಸಕ್ತಿ ಯೋಗ ಮತ್ತು; ಕುರ್ವನ್ ಏವ ಇಹ ಕರ್ಮಾಣಿ -ಈಶಾವಾಸ್ಯ )

 • ನಿನ್ನ ಹುಟ್ಟು ಧರ್ಮವನ್ನು ನೆನೆ. ನೀನು ಕ್ಷತ್ರಿಯ (ಭಿಕ್ಷೆ ಬೇಡುತ್ತೇನೆ ಎನ್ನುವುದು ಸರಿಯಲ್ಲ). ಧರ್ಮ ಮತ್ತು ನ್ಯಾಯವನ್ನು ಎತ್ತಿ ಹಿಡಿಯಲು ಯುದ್ಧ ಮಾಡುವುದು ಕ್ಷತ್ರಿಯನಾದ ನಿನ್ನ ಧರ್ಮ. ನೀನು ಯುದ್ಧಕ್ಕೆ ವಿಮುಖನಾಗಿ ನಡುಗಬೇಡ. ಸ್ವಧರ್ಮವನ್ನು ಬಿಟ್ಟ ಅಪಕೀರ್ತಿಯೂ, ಪಾಪವೂ ನಿನಗೆ ಅಂಟಿಕೊಳ್ಳುವುದು. ಹೇಡಿ ಎಂಬ ಅಪಕೀರ್ತಿ ಬಂದರೆ ಅದಕ್ಕಿಂತಲೂ ದುಃಖ ಯಾವುದು? ಜನರಿಂದ ಕೆಟ್ಟ ನಿಂದೆಯನ್ನು ಕೇಳಬೇಕಾಗುವುದು. ಬದುಕಿಯೂ ಸತ್ತಂತೆ.
 • (ಟಿಪ್ಪಣಿ :೧.ಧರ್ಮ ಮತ್ತು ನ್ಯಾಯವನ್ನು ಎತ್ತಿ ಹಿಡಿಯಲು ಯುದ್ಧ ಮಾಡುವುದು ಕ್ಷತ್ರಿಯರಿಗೆ ಕರ್ತವ್ಯ ಮತ್ತು ಧರ್ಮ; ಪಾಂಡವರು ರಾಜ್ಯಕ್ಕಿಂತ ನ್ಯಾಯಕ್ಕಾಗಿ ಯುದ್ಧ ಮಾಡುತ್ತಿದ್ದಾರೆ. ಐದು ಗ್ರಾಮವನ್ನಾದರೂ ಕೊಡು ಎಂದು ಕೇಳಿದರೂ ಕೊಡಲು ಕೌರವನು ಒಪ್ಪಲಿಲ್ಲ. ಹಾಗಾಗಿ ಯುದ್ಧ ಅನಿವಾರ್ಯವಾಯಿತು)-ಮೇಲಿನ- ಚರ್ಚೆ-ವಿಭಾಗ ನೋಡಿ
 • ಸತ್ತರೆ ಸ್ವರ್ಗ, ಗೆದ್ದರೆ ರಾಜ್ಯ.; ತಸ್ಮಾದುತ್ತಿಷ್ಠ ಕೌಂತೇಯ, ಯುದ್ಧಾಯ ಕೃತ ನಿಶ್ಚಯಃ. - ಆದ್ದರಿಂದ ಯುದ್ಧ ಮಾಡಲು ಧೃಢ ನಿಶ್ಚಯಮಾಡಿ ಎದ್ದೇಳು !
 • (ಟಿ : ಜೊತೆಗೆ ಸಾಂಖ್ಯ- ಜ್ಞಾನಯೋಗ, ಪ್ರಾಪಂಚಿಕ ಧರ್ಮದ ಸಾರವನ್ನು ಒಂದೇ ಶ್ಲೋಕದಲ್ಲಿ ಹೇಳುತ್ತಾನೆ ).
 • ಸುಖ ದುಃಖಗಳನ್ನೂ ಲಾಭ ನಷ್ಠಗಳನ್ನೂ, ಸಮದೃಷ್ಟಿಯಿಂದ ನೋಡಿ ಯುದ್ಧಮಾಡಿದರೆ ಪಾಪವು ಅಂಟುವುದಿಲ್ಲ (ಬಂಧುಗಳನ್ನು ಕೊಂದ ಪಾಪ ಭಯವಿಲ್ಲ). ಈ ಬುದ್ಧಿಯೋಗದ ಸ್ವಲ್ಪ ತಿಳುವಳಕೆಯೂ ಕೂಡಾ ಮಹಾಭಯವನ್ನು ನಿವಾರಿಸುವುದು.

ಜ್ಞಾನ-ಕರ್ಮ ಯೋಗಗಳ ವಿಶೇಷ[ಬದಲಾಯಿಸಿ]


ಭಗವಂತನಾದ ಶ್ರೀಕೃಷ್ಣನು ಜ್ಞಾನ ಕರ್ಮಯೋಗಗಳ ವಿಶೇಷತೆಯನ್ನು ಹೇಳುತ್ತಾನೆ

 • 'ನೆಲೆ ನಿಂತ ಸ್ಥಿರ ಬುದ್ಧಿಯವನಾಗು. ನಿಷ್ಕಾಮಕರ್ಮವು ಜ್ಞಾನಕ್ಕೆ ಸಾಧನ. ಫಲಾಪೇಕ್ಷಯಿಂದ ಸ್ವರ್ಗಕ್ಕಾಗಿ (ಯಜ್ಞ, ಹೋಮ, ಹವನ, ಇತರೆ ಕರ್ಮ)ನಿರತರಾದವರಿಗೆ ಬುದ್ಧಿ ಸ್ಥಿರವಾಗಿರಲಾರದು.
 • ಆದ್ದರಿಂದ ಸತ್ವ ರಜ ತಮ ಗುಣಗಳನ್ನು ದಾಟಿದವನೂ, ದ್ವಂದ್ವಗಳನ್ನು(ಎರಡು ಬಗೆಯ ಬುದ್ದಿ) ದಾಟಿದವನೂ, ನಿನ್ನ ಸ್ವಂತ ಯೋಗ ಕ್ಷೇಮವನ್ನು ಸಹ ದಾಟಿದವನೂ ಆದ ಆತ್ಮ ಜ್ಞಾನಿಯಾಗು." ಎನ್ನುತ್ತಾನೆ.
 • ಕರ್ಮಯೋಗವನ್ನು ಜ್ಞಾನಯೋಗದ ಅರಿವಿನೊಂದಿಗೆ ಆಚರಿಸುವ ರಹಸ್ಯವನ್ನು ಒಂದೇ ಶ್ಲೋಕದಲ್ಲಿ ಹೇಳುತ್ತಾನೆ:
 • ಕರ್ಮಣ್ಯೇ ವಾಧಿಕಾರಸ್ತೇ | ಮಾ ಫಲೇಷು ಕದಾಚನ||
 • ಮಾ ಕರ್ಮಫಲ ಹೇತುರ್ಭೂ || ರ್ಮಾ ತೇ ಸಂಗೋಸ್ತ್ವಕರ್ಮಣಿ ||

(ಟಿ : ಇದು ಗೀತೆಯ ಸಾರವನ್ನೆಲ್ಲಾ ಹೇಳುವ ಒಂದೇ ಪ್ರಸಿದ್ಧ ಶ್ಲೋಕ)

 • "ನೀನು ನಿನ್ನ ಕರ್ತವ್ಯವನ್ನು ತಿಳಿದು ಅದನ್ನು ಮಾಡುವುದರಲ್ಲಿ ಮನಸ್ಸಿಡಬೇಕು; ಫಲದ ಚಿಂತೆ ಮಾಡದೆ ಕರ್ತವ್ಯ (ಕರ್ಮ) ಮಾಡುವುದರಲ್ಲಿ ಶ್ರದ್ಧೆ ಇಡಬೇಕು. ನಿನ್ನ ಕರ್ತವ್ಯ (ಕರ್ಮ)ವನ್ನು ಮಾಡದೆ ಇರುವ ವಿಚಾರ ನಿನಗೆ ಬಾರದೆ ಇರಲಿ.
 • ಸಮತ್ವವೇ ನಿಜವಾದ ಯೋಗ. ಈ ಸಮತ್ವ ಬುದ್ಧಿಯ, ಮೋಹವಿಲ್ಲದ ಯೋಗದಲ್ಲಿ ಸ್ಥಿರವಾಗಿರುವುದೇ ಜಾಣತನ (ಯೋಗಃ ಕರ್ಮಸು ಕೌಶಲಮ್) ಮುನಿಗಳು ಈ ನಿಷ್ಕಾಮ ಕರ್ಮಯೋಗವನ್ನು ಅನುಸರಿಸಿ, ಬಂಧಮುಕ್ತರಾಗಿ ಆತ್ಮರತರಾಗಿ ಮೋಕ್ಷ ಪದವಿ ಪಡೆದವರಾಗುತ್ತಾರೆ. ನೀನೂ ನಿಶ್ಚಲವಾದ, ಅಚಲವಾದ ಸಮಾಧಿ ಸ್ಥಿತಿಯುಳ್ಳ ಆತ್ಮದಲ್ಲಿ ನೆಲೆ ನಿಂತವನಾಗು." ಎಂದನು.
 • ( ಟಿಪ್ಪಣಿ : ಯೋಗ ಮತ್ತು ಭಾರತೀಯ ತತ್ವಶಾಸ್ತ್ರವು ಪ್ರಾಪಂಚಿಕ ವ್ಯವಹಾರದ ನಿರಾಕರಣೆ ಎನ್ನುವ ಅಪವಾದವಿದೆ. ಆದರೆ ಮೇಲಿನ ಶ್ರೀಕೃಷ್ಣನ ಬೋಧೆ ಜ್ಙಾನವಂತನಾಗು ಆದರೆ ಪ್ರಾಪಂಚಿಕ ಕರ್ತವ್ಯದ ನಿರಾಕರಣೆ ಮಾಡಬಾರದು" ಎಂದು ಸ್ಪಷ್ಟವಾಗಿ ಹೇಳಿದೆ)

ಸ್ಥಿತ ಪ್ರಜ್ಞನ ಲಕ್ಷಣ[ಬದಲಾಯಿಸಿ]


 • ಅರ್ಜುನನ ಪ್ರಶ್ನೆ
 • ಕೇಶವನೇ, ಆತ್ಮದಲ್ಲಿ ನೆಲೆನಿಂತ ಸ್ಥಿತ ಪ್ರಜ್ಞನ ಮಾತು ಹೇಗೆ? ಅವನ ಲಕ್ಷಣಗಳೇನು?
 • (ಟಿ : ಈಗಾಗಲೇ ಆತ್ಮನಲ್ಲಿ ನೆಲೆನಿಂತವನು ದ್ವಂದಾತೀತನಾಗಿದ್ದು ಸುಖ ದುಃಖಗಳನ್ನು ಸಮಭಾವದಿಂದ ನೋಡುವ ಲಾಭ ನಷ್ಠಗಳ ಚಿಂತೆಮಾಡದೆ ತನ್ನ ಕರ್ತವ್ಯವನ್ನು ಚೆನ್ನಾಗಿಮಾಡುವವನು ಜ್ಞಾನಿಯೂ ಮೋಕ್ಷಪ್ರದನೂ ಆಗುವನೆಂದು ಹೇಳಿದ್ದರೂ ಇನ್ನೂ ವಿವರವಾಗಿ ಕೇಳಲು ಈ ಪ್ರಶ್ನೆ ಬಂದಿದೆ. ಗಾಂಧೀಜಿಯವರು ಈ ಲಕ್ಷಣಗಳು ನಿಜ ಜೀವನ ಸಾಧನೆಗೆ ಈ ಭಾಗ ಮಾರ್ಗದರ್ಶಿಯಾಗಿರುವುದೆಂದು, ಅದನ್ನು ತಮ್ಮ ದಿನದ ಪ್ರಾರ್ಥನಾ ಕಾರ್ಯಕ್ರಮದಲ್ಲಿ ಸೇರಿಸಿಕೊಂಡಿದ್ದರು.)
 • ಭಗವಂತನ ಉತ್ತರ: ಯಾರು ಎಲ್ಲಾ ಕಾಮನೆ (ಬಯಕೆ)ಗಳನ್ನು ಬಿಟ್ಟು ಆತ್ಮನಲ್ಲಿ ತೃಪ್ತನಾದವನು; ಸುಖ ದಃಖಗಳಿಂದ ಪ್ರಭಾವಿತನಾಗದವನು; ಭಯ ಕ್ರೋಧಗಳಿಲ್ಲದವನು; ಅತಿ ಮಮತೆ ಇಲ್ಲದೆ, ಹಿಗ್ಗದೆ ಕುಗ್ಗದೆ ಇರುವ-ಅವನ ಬುದ್ದಿಯು ಆತ್ಮದಲ್ಲಿ ನೆಲೆ ನಿಲ್ಲವುದು.

ಇಂದ್ರಿಯಗಳನ್ನು ಬಿಗಿಹಿಡಿದು ಭಗವಂತನಲ್ಲಿ (ನನ್ನಲ್ಲಿ) ಮನಸ್ಸನಿಡಬೇಕು. ಆಗ ಬುದ್ದಿಯು ಪ್ರಜ್ಞೆಯಲ್ಲಿ (ಆತ್ಮ , ಸಾಕ್ಷಿ) ನೆಲೆ ನಿಲ್ಲುವುದು. ಸುಖದ ಚಿಂತೆ ಮಾಡಿದರೆ ಅದು ಮನಸ್ಸಿಗೆ ಅಂಟಿ ಆಸೆ ಹೆಚ್ಚುವದು, ಆದನ್ನು ಪಡೆಯಲು ಹಟ-ಸಿಟ್ಟು ಉಂಟಾಗಿ, ಅತಿ ಮೋಹಕ್ಕೆ ಸಿಲುಕಿ ಬುದ್ದಿ ಕೆಡುವುದು. ಕೇವಲ ಸುಖದ ಕಡೆ ಹರಿಯುವ ಇಂದ್ರಿಯಗಳನ್ನು ಇಂದ್ರಿಯಾರ್ಥ(ಶಬ್ದ, ಸ್ಪರ್ಶ, ರೂಪ, ರಸ, ಗಂಧ-ತನ್ಮಾತ್ರೆ) ಗಳಿಂದ ಬಿಗಿಹಿಡಿದಲ್ಲಿ ಅವನು ಪ್ರಜ್ಞೆಯಲ್ಲಿ (ಆತ್ಮನಲ್ಲಿ - ಪ್ರತಿಷ್ಠಿತಾ) ನೆಲೆ ನಿಲ್ಲುತ್ತಾನೆ.

 • ಎಲ್ಲರಿಗೂ ಯಾವುದು ಕತ್ತಲೋ (ಕಾಣದಿರುವುದೋ) ಅದರಲ್ಲಿ (ಆತ್ಮ -ಪರಬ್ರಹ್ಮ) ಜ್ಞಾನಿಯು ಎಚ್ಚರಿರುವನು (ಅದು ಜ್ಞಾನಿಗೆ ಎಚ್ಚರ ಆತ್ಮದ ಅನುಭವದಲ್ಲಿರುವನು) ; ಎಲ್ಲರಿಗೂ ಯಾವುದು ಎಚ್ಚರವೋ (ಕಾಣುವುದೋ) ಅದನ್ನು ಜ್ಞಾನಿಯು - ಅಜ್ಞಾನ (ನಿಶಾ- ಕತ್ತಲೆ) ಎಂದು ಭಾವಿಸುತ್ತಾನೆ. *(ಟಿ. ಏಕೆಂದರೆ ಅದು ಸಾರ್ವಕಾಲಿಕ ಸತ್ಯವಲ್ಲ).
 • ಯಾವನ ಬಯಕೆಗಳೆಲ್ಲಾ ಕರಗಿಹೋಗುವುವೊ, ಅವನು ಶಾಂತಿಯನ್ನು (ಆತ್ಮ ಜ್ಞಾನವನ್ನು) ಪಡೆಯುತ್ತಾನೆ.
 • ಕೊನೆಯಲ್ಲಿ, ಒಂದೇ ಶ್ಲೋಕದಲ್ಲಿ ಉಪಸಂಹಾರ ಮಾಡುತ್ತಾನೆ.

ಉಪಸಂಹಾರ[ಬದಲಾಯಿಸಿ]

ವಿಹಾಯ ಕಾಮಾನ್ ಯಃ ಸರ್ವಾನ್ |

ಪುಮಾಂಶ್ಚರತಿ ನಿಸಸ್ಪೃಹಃ ||

ನಿರ್ಮಮೋ ನಿರಹಂಕಾರಃ |

ಸ ಶಾಂತಿಮಧಿಗಶ್ಚತಿ ||

 • ಯಾವನು ಬಯಕೆಗಳನ್ನೆಲ್ಲಾ ಬಿಟ್ಟು (ಬಯಕೆಗಳು ಹುಟ್ಟದ ಮನಸ್ಥಿತಿ) ಸರಳ ಜೀವನ ನಡೆಸುವನೋ, ಮೋಹವಿಲ್ಲದ, ಅಹಂಕಾರ ಇಲ್ಲದವನು ಆಗುವನೋ ಅವನು ಶಾಂತಿಯನ್ನು (ಆತ್ಮ ಜ್ಞಾನವನ್ನು) ಪಡೆಯುತ್ತಾನೆ. ಇದು ಆತ್ಮನಲ್ಲಿ ನೆಲೆಗೊಂಡ ಸ್ಥಿತಿ. ವಯಸ್ಸಾದವನಾದರೂ, ಅಂತ್ಯಕಾಲದಲ್ಲಿದ್ದರೂ, ಇವನು ಮೋಕ್ಷವನ್ನು (ಬ್ರಹ್ಮ ನಿರ್ವಾಣಮೃಚ್ಛತಿ) ಪಡದವನಾಗುತ್ತಾನೆ.
 • (ಇತಿ ಶ್ರೀ ಭಗವದ್ಗೀತಾಸೂಪನಿಷತ್ಸು ಬ್ರಹ್ಮವಿದ್ಯಾಯಾಂ ಯೋಗ ಶಾಸ್ತ್ರೇ ಶ್ರೀ ಕೃಷ್ಣಾರ್ಜುನ ಸಂವಾದೇ ಸಾಂಖ್ಯ ಯೋಗೋ ನಾಮ ದ್ವಿತೀಯೋsಧ್ಯಾಯಃ

ಕರ್ಮಯೋಗ - ಮೂರನೇ ಅಧ್ಯಾಯ :[ಬದಲಾಯಿಸಿ]


 • ಕರ್ಮಯೋಗ - ೪೩/೧೬೨
 • ಅರ್ಜುನ ಹೇಳಿದನು (ಹೇಳಿದ್ದು)
 • ಜನಾರ್ದನನೆ, ಕರ್ಮಕ್ಕಿಂತ ಜ್ಞಾನವು ಹೆಚ್ಚಿನದಾದರೆ ನನ್ನನ್ನು ಕರ್ಮದಲ್ಲಿ ಏಕೆ ತೊಡಗಿಸುತ್ತಿದ್ದೀಯ? ಗೊಂದಲವಾಗಿದೆ ನಾನು ಯಾವುದನ್ನು ಅನುಸರಿಸಬೇಕು ನಿಶ್ಚಿತವಾಗಿ ಹೇಳು.
 • ( ಟಿ : ಕರ್ಮ-ಕರ್ಮಯೋಗ, ಜ್ಞಾನ-ಜ್ಞಾನಯೋಗ ಅಸೆ, ಮೋಹ ಹಿಂಗಿದ- ಆತ್ಮ ಜ್ಞಾನದಿಂದ ಮೋಕ್ಷ ; ಅದು ಗುರಿಯಾದರೆ, ಯುದ್ಧವೆಂಬ ಘೋರ ಕರ್ಮವೇಕೆ? ನೋಡಿ: ಈಶಾವಾಸ್ಯೋಪನಿಷತ್ )
 • ಭಗವಂತನು ಹೇಳಿದನು (ಹೇಳಿದ್ದು):
 • ಜ್ಞಾನಯೋಗದಿಂದ ಕರ್ಮಯೋಗವನ್ನು ಪ್ರತ್ಯೇಕಿಸಿ ಹೇಳುತ್ತಾನೆ
 • ಜ್ಞಾನಿಗೆ (ಸಾಂಖ್ಯರಿಗೆ) ಜ್ಞಾನಯೋಗ (ಸಾಂಖ್ಯಯೋಗ); ಮತ್ತು ಸಾಧಕನಿಗೆ (ಯೋಗಿಗೆ) ಕರ್ಮಯೋಗವೆಂದು ಎರಡುಬಗೆ. ಯಾರೂ ಯಾವ ಕ್ರಿಯೆಯನ್ನೂ ಮಾಡದೆ ಇರುವುದು ಆಗವುದಿಲ್ಲ. ಒಂದೊಮ್ಮೆ ಅವನು ದೈಹಿಕ ಕ್ರಿಯೆಗಳನ್ನು ಬಿಟ್ಟರೂ ಮಾನಸಿಕವಾಗಿ ಕ್ರಿಯಾಶೀಲನಾಗಿರುವನು. ಆವನು ಕರ್ಮಗಳನ್ನು ಬಿಟ್ಟ ಮಾತ್ರಕ್ಕೆ ಜ್ಞಾನಿಯೆನಿಸನು, ಆದರೆ ಠಕ್ಕನೆನಿಸುವನು. ಆದ್ದರಿಂದ ಸಾಧಕನು ಕರ್ಮದ ಫಲವನ್ನು ಬಯಸದೆ ಈಶ್ವರನಿಗೆ ಪ್ರೀತಿಯಾಗಲೆಂದು ಕರ್ಮವನ್ನು (ಕರ್ತವ್ಯವನ್ನು) ಮಾಡಬೇಕು. ನೀನು ಹಾಗೆ ಕರ್ಮಸಂಗದಿಂದ ಮುಕ್ತನಾಗಿ ಕರ್ಮದಲ್ಲಿ ತೊಡಗು.(೩-೯); ಇನ್ನು ಯಾಜ್ಞಿಕ ಕರ್ಮಗಳಲ್ಲಿ, ನಮಗೆ ದೇವತೆಗಳಿಂದ (ಪ್ರಕೃತಿಯ ಅಧಿದೇವತೆಗಳು) ಮಳೆ ಬೆಳೆಗಳಾಗುವುದರಿಂದ ನಾವು ಉಣ್ಣುವುದನ್ನು ಅವರಿಗೆ ಅರ್ಪಿಸಿ ಉಣ್ಣಬೇಕು.

ಜ್ಞಾನಯೋಗಿಗಳಿಗೆ ಕರ್ಮದ ಆಚರಣೆ :[ಬದಲಾಯಿಸಿ]


 • ಆತ್ಮದಲ್ಲಿ ತೃಪರಾದ ಜ್ಞಾನಿಗಳಿಗೆ ಯಜ್ಞ ಮತ್ತು ಇತರೆ ಕರ್ಮದಲ್ಲಿ ತೊಡಗಬೇಕೆಂಬ ಕಟ್ಟಳೆ ಇಲ್ಲ. ಬಿಟ್ಟರೆ ದೋಷವಿಲ್ಲ. ಅಂಥವರು ಅಸಕ್ತರಾಗಿ(ಅ+ಸಕ್ತ; ಸಂಗ ರಹಿತ) ಕರ್ಮಾಚರಣೆ ಮಾಡುವರು. ನೀನೂ (ಜ್ಞಾನಿಗಳ ಮಾರ್ಗದಲ್ಲಿ )ಫಲದಾಸೆಯಿಲ್ಲದೆ ಕರ್ತವ್ಯ(ಕರ್ಮ)ದಲ್ಲಿ ನಿರತನಾಗು. ಹಿಂದೆ ಜ್ಞಾನಿಗಳಾದ ಜನಕಾದಿಗಳು ಲೋಕಸಂಗ್ರಹಕ್ಕಾಗಿ (ಜನೋಪಕಾರಕ್ಕಾಗಿ- ಸಾಮಾನ್ಯ ಜನರಿಗೆ ಮಾದರಿಯಾಗಿ) ಕರ್ಮದಲ್ಲಿ ತೊಡಗಿದ್ದರು. ದೊಡ್ಡವರನ್ನು ಸಾಮಾನ್ಯರು ಅನುಸರಿಸುತ್ತಾರೆ. ಆದ್ದರಿಂದ ಜ್ಞಾನಿಗಳೂ ಸತ್ಕರ್ಮದಲ್ಲಿ ನಿರತರಾಗಿರಬೇಕು. ನನಗೆ ಕರ್ಮಮಾಡುವುದರಿಂದ ಯಾವ ಪ್ರಯೋಜನವೂ, ಅದರ ಬಯಕೆಯೂ ಇಲ್ಲದಿದ್ದರೂ ಸತತ ಕರ್ಮದಲ್ಲಿ ತೊಡಗಿದ್ದೇನೆ. ಏಕೆಂದರೆ ನನ್ನನ್ನು ಅನುಸರಿಸುವವರು ಕರ್ಮಗಳನ್ನು(ಕರ್ತವ್ಯವನ್ನು) ಬಿಟ್ಟು ಹಾಳಾಗಬಾರದು ಎಂಬ ಕಾರಣದಿಂದ (ಕರ್ಮದಲ್ಲಿ ನಿರತನಾಗಿದ್ದೇನೆ.)

ಜ್ಞಾನಿ ಮತ್ತು ಪ್ರಾಪಂಚಿಕ ಧರ್ಮ :[ಬದಲಾಯಿಸಿ]


 • ಜ್ಞಾನಿಗಳು ಪ್ರಾಪಂಚಿಕ ಧರ್ಮವನ್ನು ಸಾಮಾನ್ಯರಂತೆಯೇ ಅದರಲ್ಲಿ ಅಸಕ್ತನಾಗಿ (ಫಲದಾಸೆ ಇಲ್ಲದೆ) ಅನುಸರಿಸಬೇಕು. ಎಲ್ಲರೊಳಗೊಂದಾಗಿ ಇರಬೇಕು. ಫಲಾಪೇಕ್ಷೆಯಿಂದ ಕರ್ಮ ಮತ್ತು ಯಜ್ಞದಲ್ಲಿ ತೊಡಗಿರುವವರಿಗೆ ಅಸಂಗತ್ವ (ಜ್ಞಾನಯೋಗ) ಹೇಳಿ ಬುದ್ಧಿ ಕೆಡಿಸಬಾರದು. ಅವರೊಡನೆ ಸೇರಿ ಕೆಲಸ ಮಾಡಬೇಕು. ಇದು ಪ್ರಪಂಚ ಧರ್ಮ; ಅದನ್ನು ಕೆಡಿಸಬಾರದು. ಸಾಮಾನ್ಯರು ಎಲ್ಲಾ ತಾನು ಮಾಡಿದ್ದೆಂದು ಅಹಂಕಾರ ಪಡುತ್ತಾರೆ. ನ ಬುದ್ಧಿಭೇದಂ ಜನಯೇದಜ್ಞಾನಾಂ ಕರ್ಮಸಂಗಿನಾಮ್| ಜೋಷಯೇತ್ ಸರ್ವ ಕರ್ಮಾಣಿ ವಿದ್ವಾನ್ ಯುಕ್ತ ಸಮಾಚರನ್||೨೬|| ತಿಳಿದವರು, ಜ್ಞಾನಯೋಗಕ್ಕೆ ಮಾನಸಿಕವಾಗಿ ಸಿದ್ಧರಾಗದ ಅವರನ್ನು ವಿಚಲಿತಗೊಳಿಸಿ ಬುದ್ಧಿಕೆಡಿಸಬಾರದು. (ನೀನಾದರೋ ಉತ್ತಮನು, ನೀನು ಎಲ್ಲಾ ಕರ್ಮಗಳ ಫಲವನ್ನೂ ನನಗೆ (ಭಗವಂತನಿಗೆ) ಅರ್ಪಿಸಿ ಈ ವಿಷಾದವನ್ನು ಬಿಟ್ಟು ಯುದ್ಧಮಾಡು. ನಿನಗೆ ಪಾಪ ಅಂಟದು. ಬಯಕೆ ಸಿಟ್ಟು ಮೊದಲಾದ ಹುಟ್ಟಿನಿಂದ ಬಂದ ಪ್ರಕೃತಿ ಧರ್ಮವು ಬಲವಾದದ್ದು. ಅದನ್ನು (ಸಾಮಾನ್ಯರು) ಜ್ಞಾನಿಗಳು ಕೂಡಾ ನಿಗ್ರಹಿಸಲಾರರು. ನೀನು ತಿಳಿದವನು ಈ ಬಯಕೆ, ದುಃಖ, ಸಿಟ್ಟು, ಇಂದ್ರಿಯಗಳ ಸ್ವಭಾವವೆಂದು ಅದನ್ನು ಬೇರ್ಪಡಿಸಿ ತಿಳಿದು, ಅದಕ್ಕೆ ವಶನಾಗಬೇಡ ಎಂದನು.
ಜ್ಞಾನ-ಕರ್ಮಯೋಗಗಳ ಜೊತೆಗೆ ಪ್ರಾಪಂಚಿಕ -ಪ್ರಕೃತಿ ಧರ್ಮ ಅನುಸರಣೆ[ಬದಲಾಯಿಸಿ]

ಶ್ರೇಯಾನ್ ಸ್ವಧರ್ಮೊ ವಿಗುಣಃ | ಪರಧರ್ಮಾತ್ ಸ್ವನುಷ್ಠಿತಾತ್ ||

ಸ್ವಧರ್ಮೇ ನಿಧನಂ ಶ್ರೇಯಃ | ಪರಧರ್ಮೋ ಭಯಾವಹಃ ||

 • ನಿನ್ನದು ಹುಟ್ಟುಧರ್ಮ (ಪ್ರಕೃತಿ ಧರ್ಮ) ಕ್ಷತ್ರಿಯ ಧರ್ಮ. ಸ್ವಧರ್ಮದಲ್ಲಿ ಕೊರತೆ ಇದ್ದರೂ, ಅದನ್ನು ಅನುಸರಿಸುವುದು ಶ್ರೇಯಸ್ಸು; ಹುಟ್ಟು ಗುಣಕ್ಕೆ ವಿರುದ್ಧವಾದ ಮತ್ತೊಬ್ಬರ ಧರ್ಮ ಹೆದರಿಕೆಯನ್ನುಂಟುಮಾಡುತ್ತದೆ.

ಕರ್ಮಯೋಗದಿಂದ ಆತ್ಮ ಜ್ಞಾನ ಪಡೆಯುವ ಬಗೆ :[ಬದಲಾಯಿಸಿ]


ಆರ್ಜುನ:- ಹಿಂದಿನ ಪ್ರಕೃತಿ ಧರ್ಮದ ವಿಷಯಕ್ಕೇ ಬಂದು ಕೇಳಿದ : ಮನಷ್ಯ ತಪ್ಪು ಎಂದು ಗೊತ್ತಿದ್ದರೂ, ಇಷ್ಟವಲ್ಲದಿದ್ದರೂ ಯಾವ ಒತ್ತಡಕ್ಕೆ ಸಿಲುಕಿ ಪಾಪ ಕೆಲಸ (ತಪ್ಪು) ಮಾಡುತ್ತಾನೆ

 • ಭಗವಂತನ ಉತ್ತರ: ಪ್ರಕೃತಿ ಧರ್ಮವಾದ ರಜೋಗುಣವು ಮಾನವನ ಬಯಕೆ, ಸಿಟ್ಟುಗಳಿಗೆ (ಕಾಮ, ಕ್ರೋಧ) ಕಾರಣ. ಬಯಕೆ, ಸಿಟ್ಟುಗಳಿಗೆ ಕಾರಣ- ಇಂದ್ರಿಯಗಳು, ಮನಸ್ಸು, ಬುದ್ಧಿ; ಆತ್ಮವನ್ನು ಆವರಿಸಿರುವ, ಮರೆ ಮಾಡಿರುವ, ಇವಕ್ಕೆ ತೃಪ್ತಿ ಎನ್ನುವುದೇ ಇಲ್ಲ. ಇಂದ್ರಿಯಗಳನ್ನು ಬಿಗಿಹಿಡಿದು ಇವನ್ನು ವಿಚಾರದಿಂದ ಗೆಲ್ಲು.
ಉಪಸಂಹಾರ :[ಬದಲಾಯಿಸಿ]

ಇಂದ್ರಿಯಾಣಿ ಪರಣ್ಯಾಹುಃ| ಇಂದ್ರಿಯೇಭ್ಯಃ ಪರಂ ಮನಃ ||

ಮನಸಸ್ತು ಪರಾಬುದ್ಧಿಃ | ಯೋ ಬುದ್ಧೇಃ ಪರತಸ್ತು ಸ: ||

ಏವಂ ಬುದ್ಧೇಃ ಪರಂ ಬುದ್ಧ್ವಾ | ಸಂಸ್ತಭ್ಯಾತ್ಮಾನಮಾತ್ಮನಾ||

ಜಹಿ ಶತ್ರುಂ ಮಹಾಬಾಹೋ |ಕಾಮರೂಪಂ ದುರಾಸದಮ್ ||

 • (ಜಹಿ ಶತ್ರುಂ ಮಹಾಬಾಹೋ |ಕಾಮರೂಪಂ ದುರಾಸದಮ್ -ಆನೇಕ ರೂಪಹೊಂದಬಲ್ಲ ಗೆಲ್ಲುವುದು ಕಷ್ಟವಾದ ಈ ಬಯಕೆ ಎಂಬ ಶತ್ರುವನ್ನು ಕೊಂದುಹಾಕು.)
 • ಇಂದ್ರಿಯಗಳು ಪ್ರಬಲವಾದವು, ಅದಕ್ಕಿಂತ ಹೆಚ್ಚಿನದು ಮನಸ್ಸು, ಅದರ ಮೇಲಿನದು ಬುದ್ಧಿ , ಅದಕ್ಕಿಂತ ಮೇಲಿನದು ಆತ್ಮ ತತ್ವ. ಇದನ್ನು ವಿಚಾರಮಾಡಿ ತಿಳಿದು ಅವಗಳನ್ನು ಒಂದರಲ್ಲೊದರಂತೆ ಲಯ ಮಾಡಿ, ಆ ಜಯಿಸಲಸಾಧ್ಯವಾದ ಇಂದ್ರಿಯಗಳು, ಮನ, ಬುದ್ದಿ, ಬಯಕೆಗಳನ್ನು ಗೆಲ್ಲು; ಆತ್ಮನಲ್ಲಿ ನೆಲೆನಿಲ್ಲು.
 • (ಟಿಪ್ಪಣಿ : ವಿಚಾರ ಶಕ್ತಿಯಿಂದ ತಿಳಿದು, ಆತ್ಮನಲ್ಲಿ ನೆಲೆನಿಂತು ಅವುಗಳನ್ನು (ಇಂದ್ರಿಯಗಳು, ಮನಸ್ಸು, ಬುದ್ಧಿ, ಇವುಗಳಲ್ಲಿರುವ ಬಯಕೆಗಳು, ನಾನಾ ರೂಪಗಳನ್ನು ಹೊಂದಬಲ್ಲ ಇವನ್ನು ) - ಒಂದರಲ್ಲೊಂದರಂತೆ ಲಯ ಮಾಡು.
 • ಟಿ : - ಎಂದರೆ , ಬಲಿಷ್ಠವಾದ ಇಂದ್ರಿಯಗಳನ್ನು ಮನಸ್ಸಿನಲ್ಲಿ, ಮನಸ್ಸನ್ನು ಬುದ್ಧಿಯಲ್ಲಿ, ಬುದ್ಧಿಯನ್ನು ಚಿತ್ತದಲ್ಲಿ-ಚಿತ್ತವನ್ನು ಆತ್ಮದಲ್ಲಿ ಲಯಗೊಳಿಸಬೇಕು.
 • ಹೀಗೆ ಕರ್ಮಯೋಗ ಮತ್ತು ವಿಚಾರದಿಂದ ಆತ್ಮನಲ್ಲಿ ನೆಲೆನಿಲ್ಲುವ ಬಗೆಯನ್ನು ಭಗವಂತನು ಅರ್ಜುನನಿಗೆ ತಿಳಿಸಿದನು.
 • (ಇತಿ ಶ್ರೀ ಭಗವದ್ಗೀತಾಸೂಪನಿಷತ್ಸು ಬ್ರಹ್ಮವಿದ್ಯಾಯಾಂ ಯೋಗ ಶಾಸ್ತ್ರೇ ಶ್ರೀ ಕೃಷ್ಣಾರ್ಜುನ ಸಂವಾದೇ ಕರ್ಮಯೋಗೋ ನಾಮ ತೃತೀಯೋsಧ್ಯಾಯಃ)

ಜ್ಞಾನ ಯೋಗ -ನಾಲ್ಕನೇ ಅಧ್ಯಾಯ[ಬದಲಾಯಿಸಿ]


ಜ್ಞಾನ ಯೋಗ - ೪೨/೨೦೪

 • ಇದಕ್ಕೆ 'ಜ್ಞಾನ ಕರ್ಮಸಂನ್ಯಾಸಯೋಗ' ಎಂಬ ಹೆಸರೂ ಇದೆ
 • ಭಗವಂತನು ಗುರುಪರಂಪರೆಯನ್ನು ಹೇಳಿ ಮುಂದುವರೆಸುತ್ತಾನೆ.
 • ಈ ಅವ್ಯಯವಾದ ಯೋಗವನ್ನು ನಾನು, ಸೂರ್ಯನಿಗೆ ಹೇಳಿದೆನು, ಅವನು ಮನುವಿಗೆ, ಮನು ಇಕ್ಷ್ವಾಕುವಿಗೆ ಹೇಳಿದನು. ನಂತರ ಅದು ನಷ್ಟವಾಯಿತು. ಅದನ್ನೇ ನಿನಗೆ ಸ್ನೇಹಿತನೆಂದು ಹೇಳಿದೆನು ಎಂದನು. ಆದು ಹೇಗೆ? ನೀನು ಈಚಿನವನು ಸೂರ್ಯನು ಬಹಳ ಹಿಂದಿನವನು ಎಂದು ಅರ್ಜುನನು ಪ್ರಶ್ನಿಸಲು, ಶ್ರೀಕೃಷ್ಣನು, ನಾನು, ಆತ್ಮ ಸ್ವರೂಪನೂ ಈಶ್ವರನೂ ಆಗಿದ್ದರೂ, ಮಾಯೆಯನ್ನು (ಪ್ರಕೃತಿಯನ್ನು) ಹಿಡಿತದಲ್ಲಿಟ್ಟುಕೊಂಡು ಭೂಮಿಯಲ್ಲಿ ಹುಟ್ಟುತ್ತಿರುವೆನು ಎಂದು ಹೇಳಿದನು. ಏಕೆ ಎಂದರೆ -

ಯದಾ ಯದಾ ಹಿ ಧರ್ಮಸ್ಯ | ಗ್ಲಾನಿರ್ಭವತಿ ಭಾರತ ||

ಅಭ್ಯತ್ಥಾನಮಧರ್ಮಸ್ಯ || ತದಾತ್ಮಾನಂ ಸೃಜಾಮ್ಯಹಂ||

ಪರಿತ್ರಾಣಾಯ ಸಾಧೂನಾಂ | ವಿನಾಶಯ ಚ ದುಷ್ಕೃತಾಂ ||

ಧರ್ಮಸಂಸ್ಥಾಪನಾರ್ಥಾಯ | ಸಂಭವಾಮಿ ಯುಗೇ ಯುಗೇ ||

 • ಧರ್ಮಕ್ಕೆ ಹಾನಿಯಾದಾಗ ನಾನು (ಭಗವಂತನು) ಸಜ್ಜನರನ್ನು ಕಾಪಾಡಿ, ದುರ್ಜನರನ್ನು ನಾಶ ಮಾಡಲು, ಧರ್ಮಸಂಸ್ಥಾಪನೆ ಮಾಡಲು ಪ್ರತಿ ಯುಗದಲ್ಲಿ ಭೂಮಿಯಲ್ಲಿ ಅವತರಿಸುವೆನು. (ತನ್ನ ಮಾಯಾ ಶಕ್ತಿಯಿಂದ ತನ್ನನ್ನು ತಾನೇ ಸೃಷ್ಟಿ ಮಾಡಿ ಕೊಳ್ಳುವನು.)
 • ( ಟಿಪ್ಪಣಿ :ಧರ್ಮಸ್ಥಾಪನೆಗೆ ಭಗವಂತನಾದ ತಾನು ಹುಟ್ಟಿ ಬರುವೆನೆಂಬ ಶ್ರೀಕೃಷ್ಣ ವಚನಕ್ಕೆ ಹೆಸರಾದ ಶ್ಲೋಕಗಳು. )
 • ಈ ನನ್ನ ಜನ್ಮ ರಹಸ್ಯವನ್ನು ಅರಿತವರಿಗೆ ಜನ್ಮವಿಲ್ಲ; ಅವರು ಮೋಕ್ಷ ಪ್ರದರು. ಆತಿಯಾಸೆ, ಸಿಟ್ಟು, ಭಯವಿಲ್ಲದವರು ನನ್ನ ಆತ್ಮ ಸ್ವರೂಪವನ್ನೇ ಹೊಂದುತ್ತಾರೆ. ನನ್ನನ್ನು ಹೇಗೆ(ಯಾವ ದೇವತೆ ಎಂದು) ಭಾವಿಸಿದರೆ ನಾನು ಅವರಿಗೆ ಹಾಗೆಯೇ ಅನುಗ್ರಹಿಸುತ್ತೇನೆ, ಎಂದನು.
 • (ಟಿ : ಅವರು ಯಾವ ಪಂಥದವರಾದರೂ ಮೂಲ ತತ್ವವಾದ ಭಗವಂತನನ್ನು ಅನುಸರಿಸುವರು ಎಂದು ಭಾವ)

ಚಾತುರ್ವರ್ಣ್ಯಂ ಮಯಾ ಸೃಷ್ಟಂ | ಗುಣ ಕರ್ಮವಿಭಾಗಶಃ ||

ತಸ್ಯ ಕರ್ತಾರಮಪಿ ಮಾಂ | ವಿಧ್ಯಕರ್ತಾರಮವ್ಯಮ್ ||

 • ಜಗತ್ತಿನಲ್ಲಿ ನಾಲ್ಕು ಬಗೆಯ ಜನರು, ಅವರ ಗುಣ ಮತ್ತು ಅವರ ಕರ್ಮಸ್ವಾಭಾವಕ್ಕೆ ತಕ್ಕಂತೆ ನನ್ನಿಂದ ಸೃಷ್ಟಿಸಲ್ಪಟ್ಟಿದ್ದಾರೆ. ಆದರೆ ನನಗೆ ಆ ಕರ್ಮದ ಅಂಟಿಲ್ಲ . ಎಂದನು
 • ( ಟಿ : ಈ ಪ್ರಸಿದ್ಧವಾಕ್ಯವು ಬಹಳ ವಿವಾದ ಸೃಷ್ಟಿಸಿದೆ. ಜನರಿಗೆ ಗುಣಸ್ವಭಾವಗಳು ಹುಟ್ಟಿನಿಂದಲೇ ಬರುತ್ತವೆ ಎಂದು ಭಾವ ಅಥವಾ ಮಾನವ ಸ್ವಭಾವ ನಾಲ್ಕು ವಿಧ ಎಂದು ಅರ್ಥ- ಇದು ಜಾತಿ ಅಲ್ಲ; ಈಗಿನ ಸಾಮಾಜಿಕ ಮನಶ್ಶಾಸ್ತ್ರಜ್ಞರು ಮಾನವ ಗುಣ ಸ್ವಭಾವಕ್ಕೆ ಅನುಗುಣವಾಗಿ ಹದಿನಾರು ವಿಭಾಗ ಮಾಡಿದ್ದಾರೆ -ಅದಕ್ಕೆ ತಕ್ಕಂತ ಉದ್ಯೋಗ ಕೊಡುವ ಪದ್ಧತಿ ಇದೆ)
 • ಕರ್ಮದ ಅಂಟಿಲ್ಲ -ಎಂದರೆ, ಪ್ರತಿ ಕರ್ಮಕ್ಕೂ ಪಾಪ-ಪುಣ್ಯ, ಸ್ವರ್ಗ, ಪುನರ್ಜನ್ಮ- ಮೊದಲಾದವು ಪ್ರಕೃತಿ ನಿಯಮ; ಆದರೆ ಅಸಂಗನಾದ ಭಗವಂತನಿಗೆ ಆ ನಿಯಮದ ಕಟ್ಟು ಇಲ್ಲ.
 • ನನ್ನನ್ನು ಅನಸರಿಸಿ ಜ್ಞಾನಿಗಳು ಕರ್ಮದ ಅಂಟಿಲ್ಲದೆ ಕರ್ಮನಿರತರಾಗಿದ್ದರು. ನೀನೂ ಅದನ್ನು ಅನುಸರಿಸು ಎಂದನು.

ಕರ್ಮದ ವಿಶ್ಲೇಷಣೆ :[ಬದಲಾಯಿಸಿ]


 • ಭಗವಂತನು
 • ಕರ್ಮ, ಅಕರ್ಮ, ವಿಕರ್ಮಗಳನ್ನುಸರಿಯಾಗಿ ತಿಳಿದು ಆಚರಿಸಬೆಕು. ಕರ್ಮದ ಗತಿಯನ್ನು (ರೀತಿ-ಬಗೆ ) ತಿಳಿಯುವುದು ಕಷ್ಟ, ಎಂದನು
 • ವಿಕರ್ಮವೆಂದರೆ ಮಾಡಬಾರದ್ದು. ಅಕರ್ಮವೆಂದರೆ ಸುಮ್ಮನಿರುವುದು, ಕರ್ಮವೆಂದರೆ ಮಾಡಬೇಕಾದ ಕರ್ತವ್ಯಗಳು.

ಪ್ರಾಪಂಚಿಕ ವ್ಯವಹಾರದಲ್ಲಿ ಜ್ಞಾನಯೋಗ :[ಬದಲಾಯಿಸಿ]


ವ್ಯಕ್ತಿಯು ತಾನು ಕರ್ಮವನ್ನು ಮಾಡುವುದಿಲ್ಲ ಎಂದು ಭಾವಿಸಿ ಸುಮ್ಮನಿದ್ದರೆ; ಅದೇ ಕರ್ಮವೆನಿಸುವುದು (ಅದರಲ್ಲಿ (ನಾನು ಮಾಡೆನು - ಎಂಬ ಅಹಂಕಾರವಿದೆ); ಕರ್ಮವನ್ನು ಮಾಡುತ್ತಿದ್ದರೂ ಅವನ್ನು ಅದು ದೇಹ ಮನಸ್ಸಿಗೆ ಸಂಬಂಧ ಪಟ್ಟಿರುವುದೆಂದು ಕೇವಲ ಸಾಕ್ಷಿಯಾಗಿ ಈ ಎರಡೂ ಬಗೆಯ ಕ್ರಿಯೆಗಳನ್ನು ನೋಡುತ್ತಿರುವನೋ ಅವನು ಜಾಣನು. ಹೀಗೆ ಬಯಕೆ ಸಂಕಲ್ಪಗಳಿಲ್ಲದೆ, ಕರ್ತವ್ಯ ದೃಷ್ಟಿಯಿಂದ ಕರ್ಮನಿರತನಾದವನು. ತಿಳಿದವನು; ಜ್ಞಾನಿ;

ಶ್ರೌತ ಯಜ್ಞದಲ್ಲಿ ಜ್ಞಾನಯೋಗ :[ಬದಲಾಯಿಸಿ]


ಜ್ಞಾನವೆಂಬ ಬೆಂಕಿಯಲ್ಲಿ ಕರ್ಮಗಳನ್ನು ಸುಟ್ಟವನು. ಈಶ್ವರನಿಗೆ ಪ್ರೀತಿಯಾಗಲಿ ಎಂದು, ಸಂಗ ರಹಿತನಾಗಿ ಮಾಡಿದರೆ ಕರ್ಮವೆಲ್ಲಾ ಲಯವಾಗುವುದು. ಹಾಗೆ ಮಾಡಿದವನು ಯೋಗಿಯು. ಕೆಲವು ಯೋಗಿಗಳು ಯಜ್ಞದಲ್ಲಿ ದ್ರವ್ಯ ವಸ್ತು -ಎಲ್ಲವೂ ಬ್ರಹ್ಮವೆಂದು ತಿಳಿದು ಯಜ್ಞಮಾಡುವರು; ಸದಾ ಬ್ರಹ್ಮ ಸಮಾಧಿ (ಸ್ಥಿತ ಪ್ರಜ್ಞರು) ಯಲ್ಲಿರುವರು. ಕೆಲವು ಯೋಗಿಗಳು (ಇಂದ್ರಿಯಾದಿಗಳನ್ನು,) ಜೀವವನ್ನೇ ಬ್ರಹ್ಮವೆಂಬ ಅಗ್ನಿಯಲ್ಲಿ ಹೋಮ ಮಾಡುವರು (ಲಯ ಮಾಡುವರು) -ತಮ್ಮ ಆತ್ಮವನ್ನು ಬ್ರಹ್ಮವೆಂದು ಅರಿಯುವರು). (ಜ್ಞಾನ ಯೋಗಿಗಳು)

ಧ್ಯಾನ ಯೋಗ -ರಾಜ ಯೋಗಗಳಲ್ಲಿ ; ಜ್ಞಾನ ಯಜ್ಞ :[ಬದಲಾಯಿಸಿ]


ಪ್ರಾಣಾಯಾಮ ನಿರತರು ಪ್ರಾಣದಲ್ಲಿ ಅಪಾನವನ್ನೂ, ಅಥವಾ ಆಪಾನದಲ್ಲಿ ಪ್ರಾಣವನ್ನೂ ಹೋಮ ಮಾಡುವರು(ಕುಂಭಕದಲ್ಲಿ ನಿಲ್ಲಿಸಿ ). ಕೆಲವರು ನಿಯತ ಆಹಾರದಿಂದ ಕಠಿಣ ವ್ರತಮಾಡಿ ಬ್ರಹ್ಮ ಮನಸ್ಕರಾಗಿ ಬ್ರಹ್ಮ ಸ್ವರೂಪವನ್ನು ಪಡೆಯುತ್ತಾರೆ. ಹೀಗೆ ಬಹು ವಿಧ ಯಜ್ಞಗಳಿವೆ ಇವೆಲ್ಲಾ ದೇಹೇಂದ್ರಿಯಗಳಿಂದ ಆಗುವುದೆಂದು ತಿಳಿದು ಬ್ರಹ್ಮದಲ್ಲಿ ನೆಲೆನಿಂತವನು ಜ್ಞಾನಿ. ದ್ರವ್ಯಗಳನ್ನ ಹಾಕಿಮಾಡುವ ಯಜ್ಞಕ್ಕಿಂತ ಅರಿವಿನ ಜ್ಞಾನ ಯಜ್ಞ ಹೆಚ್ಚಿನದು. (ಎಲ್ಲಾ ಯೋಗವೂ) ಎಲ್ಲಾ ಶ್ರೌತ ಯಜ್ಞವೂ (ಕರ್ಮಗಳೂ) ಜ್ಞಾನದಲ್ಲಿ ಕೊನೆಗೊಳ್ಳುವುದು. ಇದನ್ನು ಅರಿತರೆ ಭ್ರಮೆಯಿಲ್ಲ. ಆಗ ಎಲ್ಲವೂ ನಾನೂ, ನೀನೂ, ಆತ್ಮ ರೂಪವಾಗಿ ಕಾಣುವದು.

ಉಪಸಂಹಾರ :[ಬದಲಾಯಿಸಿ]


ನ ಹಿ ಜ್ಞಾನೇನ ಸದೃಶಂ | ಪವಿತ್ರಮಿಹ ವಿದ್ಯತೇ || ಜ್ಞಾನಕ್ಕೆ ಸಮನಾದುದು ಯಾವುದೂ ಇಲ್ಲ. ಇದನ್ನು ಅರಿತವರಿಂದ ಕೇಳಿ ತಿಳಿಯಬೇಕು. ಜ್ಞಾನದಿಂದ ಎಲ್ಲಾ ಪಾಪಗಳನ್ನೂ ದಾಟಿಬಿಡಬಹುದು. ಕಾರಣ ಜ್ಞಾನಾಗ್ನಿಯು ಎಲ್ಲಾ ಪಾಪಗಳನ್ನು ಸುಟ್ಟುಬಿಡುತ್ತದೆ. ಶ್ರದ್ಧೆ ಇದ್ದವನಿಗೆ ಜ್ಞಾನ ಲಭಿಸುವುದು. ಸಂಶಯಾತ್ಮನಿಗೆ ಈ ಲೋಕವೂ ಇಲ್ಲ ಪರಲೋಕವೂ ಇಲ್ಲ. ಕರ್ಮಗಳನ್ನು ಸಂನ್ಯಾಸ ಮಾಡಿ ಸಂಶಯವನ್ನು ಕತ್ತರಿಸಿಕೊಂಡಿರುವ ಆತ್ಮವಂತನಿಗೆ ಕರ್ಮಗಳ ಕಟ್ಟು ಇಲ್ಲ. ಆದ್ದರಿಂದ ಸಂಶಯವನ್ನು ಜ್ಞಾನವೆಂಬ ಕತ್ತಿಯಿಂದ ಕತ್ತರಿಸಿ ಯೋಗ ನಿರತನಾಗಿ, ಏಳು ಯುದ್ಧಮಾಡು - ಎಂದು ಭಗವಂತನು ಹೇಳಿದನು.

(ಇತಿ ಶ್ರೀ ಭಗವದ್ಗೀತಾಸೂಪನಿಷತ್ಸು ಬ್ರಹ್ಮವಿದ್ಯಾಯಾಂ ಯೋಗ ಶಾಸ್ತ್ರೇ ಶ್ರೀ ಕೃಷ್ಣಾರ್ಜುನ ಸಂವಾದೇ ಜ್ಞಾನಯೋಗೋ ನಾಮ ಚತುರ್ಥೋsಧ್ಯಾಯಃ)

ಸಂನ್ಯಾಸ ಯೋಗ - ಐದನೆಯ ಅಧ್ಯಾಯ :[ಬದಲಾಯಿಸಿ]


ಸಂನ್ಯಾಸ ಯೋಗ - ೨೯/೨೩೩

 • ಅರ್ಜುನನ ಪ್ರಶ್ನೆ -
 • ಕರ್ಮ ಸಂನ್ಯಾಸವನ್ನೂ ಹೇಳುತ್ತೀಯೆ ; ಕರ್ಮವನ್ನು ಫಲದಾಸೆ ಇಲ್ಲದೆ ಮಾಡೆಂದೂ ಹೇಳುತ್ತೀಯೆ. ಯಾವುದು ಮೇಲು ನಿಶ್ಚಿತವಾಗಿ ಹೇಳು -ಎಂದನು.
 • (ಟಿಪ್ಪಣಿ: ಅರ್ಜುನನಿಗೆ ಇನ್ನೂ ಯುದ್ಧದಲ್ಲಿ ಮನಸ್ಸಿಲ್ಲ -ಕರ್ಮಸಂನ್ಯಾಸದ ಕಡೆಗೇ ಒಲವು. ಹಾಗಾಗಿ ಈ ಪ್ರಶ್ನೆ.)
 • ಭಗವಂತನ ಉತ್ತರ: (ಜ್ಞಾನಿಯಾದವನು) ಕರ್ಮಗಳನ್ನು ಬಿಡುವುದೂ, ಫಲದಾಸೆ ಇಲ್ಲದೆ ಮಾಡುವುದೂ ಎರಡೂ ಮೋಕ್ಷಕ್ಕೆ ಸಾಧನವು. ಅವೆರಡರಲ್ಲಿ ಫಲದಾಸೆ ಇಲ್ಲದೆ ಮಾಡುವುದು ಹೆಚ್ಚಿನದು. ಇಬ್ಬರೂ ಒಂದೇ ಫಲವನ್ನು ಪಡೆಯುತ್ತಾರೆ. ಇವರಡೂ ಒಂದೇ ಎಂದು ಕಂಡುಕೊಂಡವನು ನಿಜವನ್ನು ಅರಿತವನು. ಆದ್ದರಿಂದ ಕರ್ಮಯೋಗಿಯು ಸುಲಭ ಸಾಧನವಾದ ಫಲದಾಸೆ ಇಲ್ಲದ ಕರ್ಮದಲ್ಲಿ ತೊಡಗಬೇಕು.

ಕರ್ಮ ಸಂನ್ಯಾಸಿಯಾದ, ಜ್ಞಾನಿಯ ಲಕ್ಷಣ[ಬದಲಾಯಿಸಿ]


 • ಕರ್ಮ ಸಂನ್ಯಾಸವು ಕಷ್ಟ ಕರವಾದುದು ಅದನ್ನು ಸಾಧಿಸುವುದು ಕಷ್ಟ . ಯಾರು ಇಂದ್ರಿಯಗಳ ವಶನಾಗದೆ, ತನ್ನ ಆತ್ಮವು ಎಲ್ಲಾ ವಸ್ತುಗಳಿಗೂ ಆತ್ಮವೆಂದು ತಿಳಿದು ಕ್ರಿಯೆಯಲ್ಲಿ ತೊಡಗಿರುವವನು ಅದರ ಕಟ್ಟಿಗೆ ಒಳಗಾಗುವುದಿಲ್ಲ. . ಅವನು ಕರ್ಮ ನಿರತನಾದರೂ ಮಾಡಿದ ಹಾಗಲ್ಲ.

ಫಲದಾಸೆ ಇಲ್ಲದೆ ಕರ್ಮನಿರತರು ಮನಸ್ಸಿನ ಶುದ್ಧಿಗಾಗಿ ಕರ್ಮ ನಿರತರಾಗಿರುವರು. ದೇಹದಿಂದ ಕೂಡಿದ ಜ್ಞಾನಿಯು ತಾನು ಮಾಡುವವನಲ್ಲವೆಂದು ತಿಳಿದು ಒಂಭತ್ತು ಬಾಗಿಲುಳ್ಳ ಈ ದೇಹದಲ್ಲಿ ಬ್ರಹ್ಮ ದಲ್ಲಿ ಹಾಯಾಗಿರುವನು. ಆತ್ಮನಿಗೆ ಪಾಪ- ಪುಣ್ಯಗಳ ಸೋಂಕಿಲ್ಲ. ಜ್ಞಾನಿಗಳು ಹುಟ್ಟನ್ನು ಇಲ್ಲಿಯೇ ಗೆದ್ದವರಾಗಿ ಬ್ರಹ್ಮಸ್ವರೂಪದಲ್ಲಿಯೇ ಇರುವವರಾಗಿದ್ದಾರೆ. ಅವರು ಎಲ್ಲರನ್ನೂ ಸಮ ಭಾವದಿಂದ ನೋಡುತ್ತಾರೆ.

ವಿದ್ಯಾ ವಿನಯ ಸಂಪನ್ನೇ |

ಬ್ರಾಹ್ಮಣೇ ಗವಿ ಹಸ್ತಿನಿ ||

ಶುನಿ ಶೈವ ಸ್ವಪಾಕೇಚ |

ಪಂಡಿತಾಃ ಸಮದರ್ಶಿನಃ ||

 • ವಿದ್ಯೆ ವಿನಯವುಳ್ಳ ಬ್ರಾಹ್ಮಣನಲ್ಲಿಯೂ, ಹಸು, ಆನೆ, ನಾಯಿ, ಕೊಳಕನಲ್ಲಿಯೂ , ಜ್ಞಾನಿಯು ಸಮಾನವಾಗಿ ಆತ್ಮನನ್ನು ಕಾಣುತ್ತಾನೆ. ಯಾರು ಬ್ರಹ್ಮವನ್ನು ಕಂಡವರೋ ಅವರು ಇಲ್ಲಿಯೇ ಹುಟ್ಟು-ಸಾವುಗಳನ್ನು ಗೆದ್ದವರು.

ಉಪಸಂಹಾರ :[ಬದಲಾಯಿಸಿ]


ಬಯಕೆಯೂ ಸಿಟ್ಟೂ ಇರದ ಸಂನ್ಯಾಸಿಗೆ ಬದುಕಿರುವಾಗಲೂ, ಸತ್ತ ನಂತರವೂ ಮೋಕ್ಷವಿದೆ. ಇವರು ಭ್ರೂಮಧ್ಯದಲ್ಲಿ ಮನಸ್ಸನ್ನು ನಿಲ್ಲಿಸಿ, ಪರಮಾತ್ಮನಲಿ ಮನಸ್ಸನ್ನು ನಿಲ್ಲಸಿರುವ ಇವರು ಯಾವಾಗಲೂ ಮುಕ್ತರೇ. ಎಲ್ಲಾ ಕರ್ಮ(ಯಜ್ಞ,ತಪಸ್ಸು) ಫಲವನ್ನು ಉಣ್ಣುವ ಭಗವಂತನಾದ ನನ್ನನ್ನು ಎಲ್ಲಾಪ್ರಾಣಿಗಳ ಗೆಳೆಯನೆಂದು ತಿಳಿದವನು ಶಾಂತಿ (ಆತ್ಮ ಜ್ಞಾನ) ಯನ್ನು ಪಡೆಯುತ್ತಾನೆ.

(ಇತಿ ಶ್ರೀ ಭಗವದ್ಗೀತಾಸೂಪನಿಷತ್ಸು ಬ್ರಹ್ಮವಿದ್ಯಾಯಾಂ ಯೋಗ ಶಾಸ್ತ್ರೇ ಶ್ರೀ ಕೃಷ್ಣಾರ್ಜುನ ಸಂವಾದೇ ಸಂನ್ಯಾಸ ಯೋಗೋ ನಾಮ ಪಂಚಮೋsದ್ಯಾಯಃ)

ಧ್ಯಾನ ಯೋಗ : ಆರನೆಯ ಅಧ್ಯಾಯ :[ಬದಲಾಯಿಸಿ]


ಧ್ಯಾನ ಯೋಗ - ೪೭/೨೮೦

 • ಭಗವಂತನು (ಮುಂದುವರೆದು ಮತ್ತೂ) ಹೇಳುತ್ತಾನೆ :
 • (ಟಿ : ಹಿಂದಿನ ಅಧ್ಯಾಯದ ಉಪಸಂಹಾರದಲ್ಲಿ ಧ್ಯಾನದ ವಿಷಯವನ್ನು ಸೂಕ್ಷ್ಮ ವಾಗಿ ಹೇಳಿದ್ದನು; ಅದನ್ನು ಮುಂದುವರೆಸಿದನು)

ಧ್ಯಾನ ಯೋಗಕ್ಕೆ ಸಿದ್ಧತೆ :[ಬದಲಾಯಿಸಿ]


 • ಕರ್ಮಫಲಕ್ಕೆ ಅಂಟಿಕೊಳ್ಳದೆ ಕರ್ಮಗಳನ್ನು ಮಾಡುವವನು,- ಅವನ್ನು ಮಾಡುವವನೂ ಅಹುದು ಬಿಟ್ಟವನೂ ಅಹುದು. ಧ್ಯಾನದ ಸಾಧಕನಿಗೆ ಕರ್ಮವು ಸಾಧನ ; ಧ್ಯಾನ ಸಿದ್ಧಿಸಿದವನಿಗೆ ಅಸಂಗತ್ವವು (ಶಮವು) ಸಾಧನವು. ಎಲ್ಲಾ ಸಂಕಲ್ಪಗಳನ್ನು ಬಿಟ್ಟವನು ಯೋಗಾರೂಢನು. ತನ್ನ ಪ್ರಯತ್ನದಿಂದಲೇ ಇಂದ್ರಿಯಗಳನ್ನೂ, ಮನಸ್ಸನ್ನು ಗೆಲ್ಲಬೇಕು. ಉದ್ಧರೇದಾತ್ಮನಾತ್ಮಾನಂ|| ತನ್ನನ್ನು ತಾನೇ ಉದ್ಧಾರ ಮಾಡಿಕೊಳ್ಳಬೇಕು ; ತನಗೆ ತಾನೇ ನೆಂಟನು. ಬಯಕೆಗಳನ್ನೂ,ಇಂದ್ರಿಯಗಳನ್ನೂ ಹತೋಟಿಯಲ್ಲಿಟ್ಟುಕೊಂಡು ಎಲ್ಲರನ್ನೂ ಸಮಭಾವದಿಂದ ನೋಡುವ ಮನಸ್ಸಿನ್ನು ಹೊಂದಿದವನು ಧ್ಯಾನ ಮಾಡಲು ಯೋಗ್ಯನು.

ಧ್ಯಾನದ ಕ್ರಮ :[ಬದಲಾಯಿಸಿ]


 • ಧ್ಯಾನವನ್ನು ಅಭ್ಯಾಸ ಮಾಡುವವನು ಏಕಾಂಗಿಯಾಗಿ, ದೇಹವನ್ನೂ ಮನಸ್ಸನ್ನೂ ಬಿಗಿಹಿಢಿದು, ಮನಸ್ಸನ್ನು ಪರಮಾತ್ಮನಲ್ಲಿ ಕೂಡಿಸಿಕೊಂಡಿರಬೇಕು. ಧ್ಯಾನಕ್ಕೆ ತಕ್ಕ ಆಸನವನ್ನು ಸಿದ್ಧಗೊಳಿಸಬೇಕು. ತೀರಾ ಎತ್ತರವಲ್ಲದ ಸಮತಟ್ಟು ಜಾಗದಲ್ಲಿ, ದರ್ಭೆ,ಅದರಮೇಲೆ ಜಿಂಕೆಯ ಚರ್ಮ, ಅದರ ಮೇಲೆ ಬಟ್ಟೆ ಯನ್ನು ಹಾಸಿ , ಅದರಮೇಲೆ ಕುಳಿತು, ಮನಸ್ಸನ್ನು ಏಕಾಗ್ರಗೊಳಸಬೇಕು (ಮನೋನಿಗ್ರಹ ಅಭ್ಯಾಸ). *(ದೃಷ್ಟಿಯನ್ನು ಎಂದರೆ -ಮನಸ್ಸನ್ನು ಎಂದು ತಿಳಿಯಬೇಕು- ಮೂಗಿನ ತುದಿಯಲ್ಲಿ /ಬುಡದಲ್ಲಿ ಹುಬ್ಬುಗಳ ಮಧ್ಯೆ ಮನಸ್ಸನ್ನು ನಿಲ್ಲಿಸಬೇಕು*) ಮೆಲ್ಲ ಮೆಲ್ಲನೆ ಮನಸ್ಸನ್ನು ಶಾಂತಗೊಳಿಸಿ ಪರಮಾತ್ಮನಲ್ಲಿ ನೆಲೆಗೊಳಿಸಬೇಕು. . ತಲೆ, ಕುತ್ತಿಗೆ, ಬೆನ್ನು,, ನೇರವಾಗಿಟ್ಟುಕೋಡು ಪರಮಾತ್ಮನನ್ನು ಧ್ಯಾನಮಾಡಬೇಕು ;ಗುರುಸೇವೆ,ಮೊದಲಾದ ಸೇವಾಕಾರ್ಯ ನಿರತನಾಗಿರಬೇಕು.. ಹೀಗೆ ಅಭ್ಯಾಸ ಮಾಢಿದವನು ಕೊನೆಗೆ ಪರಮಾತ್ಮನಲ್ಲಿ ನೆಲೆನಿಂತು ಮೋಕ್ಷವನ್ನು ಪಡೆಯುತ್ತಾನೆ. ಹೀಗೆ ಸಾಧನೆ ಮಾಡುವವನು ಊಟ, ನಿದ್ದೆ, ಮಾತು,ನಡತೆ ಎಲ್ಲಾ ಹಿತ-ಮಿತವಾಗಿರಬೇಕು. ಇದನ್ನು ಸಾಧಿಸಿದ ಯೋಗಿಯು, ಆತ್ಮ ಸ್ವರೂಲ್ಲಿ ನೆಲೆನಿಂತಿದ್ದು, ದುಃಖವಿಲ್ಲದ ಸದಾ ಸ್ಥಿರಮನಸ್ಸಿನವನಾಗಿರುವನು. ಇದನ್ನು ಗುರುಗಳ ಮತ್ತು ಶಾಸ್ತ್ರಗಳ ಮಾರ್ಗದರ್ಶನದಲ್ಲಿ ಮಾಡತಕ್ಕದ್ದು. ಇದನ್ನು ಸಾವಕಾಶದಿಂದ ಮೆಲ್ಲ- ಮೆಲ್ಲಗೆ ಹರಿದಾಡುವ ಮನಸ್ಸನ್ನು ಶಾಂತಗೊಳಿಸಿ ಪರಮಾತ್ಮನಲ್ಲಿ ನೆಲೆಗೊಳಿಸಬೇಕು.
 • (ಟಿಪ್ಪಣಿ : ಈ ಧ್ಯಾನ ಯೋಗವನ್ನು ತಿಳಿದ ಗುರುಗಳ ಮಾರ್ಗದರ್ಶನದಲ್ಲಿ ಮಾಡಬೇಕೆಂಬುದು ಅಭಿಪ್ರಾಯ. ಅದಕ್ಕೆ ಪೂರ್ವ ಮಾನಸಿಕ ಸಿದ್ಧತೆ ಬೇಕು. ಮೆಲ್ಲನೆ ಸಾಧಿಸಬೇಕು, ಅವಸರ ಸಲ್ಲದು ಎಂದು ಹೇಳಿದೆ. ಸರಿಯಾದ ಮಾರ್ಗದರ್ಶನವಿಲ್ಲದೆ, ಅವಸರದಲ್ಲಿ ಸಾಧಿಸ ಹೊರಟವರಿಗೆ, ಮಾನಸಿಕ ತೊಂದರೆ, ಅಪಾಯ ಆಗಬಹುದು; ಹುಲಿಯ ಚರ್ಮ ಸಾಧಕರಿಗೆ ಉತ್ತಮವಲ್ಲ ಎಂಬ ಅಭಿಪ್ರಾಯವಿದೆ. *ಮೂಗಿನ ತುದಿಯಲ್ಲಿ ದೃಷ್ಟಿ ಇಡುವುದು ಧ್ಯಾನಕ್ಕೆ ಅಡಚಣೆ, ಆ ಕಡೆ ಈ ಕಡೆ ನೋಡದೆ ಮನಸ್ಸನ್ನು ಹಿಡಿತದಲ್ಲಿ ನಿಲ್ಲಿಸಬೇಕು (ಎಂದು ಭಾವಿಸಬೇಕು)- ಶ್ರೀ ಶಂಕರರ ಮತ, ಚಿನ್ಮಯಾನಂದರು, ಸ್ವಾಮಿ ವಿವೇಕಾನಂದರು ಕಣ್ಣಿಗೆ ತೊಂದರೆ ಕೊಡದೆ ಮನಸ್ಸನ್ನು ಕೇಂದ್ರೀಕರಿಸಲು ಹೇಳಿದ್ದಾರೆ. ಸ್ವಾಮಿ ವಿವೇಕಾನಂದರು ಹೃದಯಲ್ಲಿ ಕೇಂದ್ರೀಕರಿಸಲು ಹೇಳೀದ್ದಾರೆ.)

ಸಿದ್ಧ ಯೋಗಿಯ ಲಕ್ಷಣ :[ಬದಲಾಯಿಸಿ]

 • ಹೀಗೆ ಬ್ರಹ್ಮನಲ್ಲಿ ನೆಲೆನಿಂತ ಯೋಗಿಯು, ತನ್ನಲ್ಲಿ ಎಲ್ಲರನ್ನೂ , ಎಲ್ಲರಲ್ಲಿ ತನ್ನನ್ನೂ ಕಾಣುವನು. ಅವನು ಭಗವಂತನನ್ನು ಎಲ್ಲೆಡೆಯೂ ಕಾಣುವನು, ಮತ್ತು ಎಲ್ಲವನ್ನೂ ಭಗವಂತನಲ್ಲಿ ಕಾಣುವನು. ಸುಖ ದುಃಖಗಳನ್ನು ಒಂದೇ ರೀತಿಯಾಗಿ ನೋಡುವ ಆ ಜ್ಞಾನಿಯು ಎಲ್ಲರಿಗಿಂತ ಮೇಲಿನವನು.
ಉಪಸಂಹಾರ :[ಬದಲಾಯಿಸಿ]

 • ಅರ್ಜುನನು ಚಂಚಲ ಮನಸ್ಸನ್ನು ಸ್ಶಿರವಾಗಿ ನಿಲ್ಲಿಸುವುದು ಅಸಾಧ್ಯವೆಂದನು., ಅದಕ್ಕೆ ಭಗವಂತನಾದ ಕೃಷ್ಣನು ಮೊದಲು ವೈರಾಗ್ಯವನ್ನು ಸಾದಿಸಿ, ನಂತರ ಉಪಾಯದಿಂದ ಮತ್ತು ಅಭ್ಯಾಸ ದಿಂದ ಮನಸ್ಸನ್ನು ನೆಲೆಗೊಳಿಸಬೇಕು , ಎಂದು ಹೇಳಿದನು.

ಅರ್ಜುನನು ಕಷ್ಟಸಾಧ್ಯವಾದ ಇದನ್ನು ಸಾಧಿಸಲಾಗದೆ ಅರ್ಧದಲ್ಲಿ ಬಿಟ್ಟರೆ ಅವನ ಗತಿ ಏನು, ಗುರಿ ಮುಟ್ಟದೆ ಅವನು ಹಾಳಾಗಿ ಹೋಗನೇ ? ಎಂದನು. ಅದಕ್ಕೆ ಕೃಷ್ಣನು ಒಳ್ಳೆ ಕೆಲಸ ಪ್ರಾರಂಭಿಸಿದವನು ಹಾಳಾಗಲಾರನು ; ಆದರೆ ಮುಂದಿನ ಜನ್ಮದಲ್ಲಿ ಯೋಗ್ಯರೂ, ಸಜ್ಜನರೂ ಆದವರ ಮನೆಯಲ್ಲಿ ಹುಟ್ಟಿ ಆ ಯೋಗವನ್ನು ಮುಂದುವರೆಸಿ ಜ್ಞಾನ ಪಡೆದು ಮುಕ್ತನಾಗುವನು ಎಂದನು.

 • ಕೃಷ್ಣನು , -ತಪಸ್ವಿ, ಕರ್ಮಯೋಗಿ, ಜ್ಞಾನಯೋಗಿ ಇವರಿಗಿಂತ ಧ್ಯಾನಯೋಗಿ ಉತ್ತಮನೆಂದು ನನ್ನ ಮತ. ನೀನು ಕ್ರಮೇಣ ದ್ಯಾನಯೋಗಿಯಾಗು, ಎಂದನು
 • (ಇತಿ ಶ್ರೀ ಭಗವದ್ಗೀತಾಸೂಪನಿಷತ್ಸು ಬ್ರಹ್ಮವಿದ್ಯಾಯಾಂ ಯೋಗ ಶಾಸ್ತ್ರೇ ಶ್ರೀ ಕೃಷ್ಣಾರ್ಜುನ ಸಂವಾದೇ ಧ್ಯಾನ ಯೋಗೋ ನಾಮ ಷಷ್ಠೋsದ್ಯಾಯಃ)

ಜ್ಞಾನ ವಿಜ್ಞಾನ ಯೋಗ -ಏಳನೆಯ ಅಧ್ಯಾಯ :[ಬದಲಾಯಿಸಿ]


ಜ್ಞಾನ ವಿಜ್ಞಾನ ಯೋಗ - ೩೦/೩೧೦

ವಿಜ್ಞಾನ ಯೋಗ ವೆಂಬ ಹೆಸರೂ ಇದೆ

 • ಭಗವಂತನಾದ ಕೃಷ್ಣನು ಹೇಳಿದನು : ಭಗವಂತನನ್ನು ಪೂರ್ಣವಾಗಿ ತಿಳಿಯುವ ಜ್ಞಾನವನ್ನು ಹೇಳುತ್ತೇನೆ ಕೇಳು ಎಂದನು.

ಸಾವಿರದಲ್ಲಿ ಒಬ್ಬನು ಜ್ಞಾನವನ್ನು ಪಡೆಯಲು ಯತ್ನಿಸುತ್ತಾನೆ. ಅದರಲ್ಲಿ ಸಿದ್ಧಿಪಡೆದವರಲ್ಲಿಯೂ ಯಾರೋ ಒಬ್ಬನು ನನ್ನನ್ನು ಇದ್ದದ್ದು ಇದ್ದಂತೆ (ನಿರಾಕಾರ, ನಿರ್ಗುಣ ಪರಬ್ರಹ್ಮ ಸ್ಥಿತಿ) ತಿಳಿಯುವನು.

ಪ್ರಕೃತಿ ಶಕ್ತಿ :[ಬದಲಾಯಿಸಿ]


 • ಭೂಮಿ, ನೀರು, ಬೆಂಕಿ, ಗಾಳಿ, ಆಕಾಶ, ಮನಸ್ಸು, ಬುದ್ದಿ , ಅಹಂಕಾರ ಹೀಗೆ (ಭಗವಂತನ) ನನ್ನ ಮಾಯಾ ಶಕ್ತಿಯು ಎಂಟು ಬಗೆಯಾಗಿರುವುದು. ಇದಲ್ಲದೆ ಇದರ ಮೇಲಿನ ಸ್ತರದಲ್ಲಿ ಜೀವಭಾವವಿದೆ. ಈ ಜಗತ್ತೆಲ್ಲವೂ (ಭಗವಂತ) ನನ್ನಿಂದ ಹೊರಹೊಮ್ಮಿದ್ದು ನನ್ನಲ್ಲಿ ಅಡಗಿದೆ. ಸೂರ್ಯನಲ್ಲಿ ಪ್ರಭೆ ಇದ್ದಂತೆ ಎಲ್ಲಾ ವಸ್ತು - ಜೀವಿಗಳ ಶಕ್ತಿ ಭಗವಂತನ ಅಂಶ ; ನಾನು ವೇದಗಳಲ್ಲಿ ಓಂ ಕಾರ.. ಭಗವಂತ ಎಲ್ಲಾ ಚರಾಚರಗಳ ಬೀಜ ಮತು ಅದರ ಶಕ್ತಿ. ಪ್ರಾಣಿಗಳಲ್ಲಿ ಕಾಣುವ .ಸತ್ವ,ರಜ,ತಮೋ ಗುಣಗಳು ನನ್ನಿಂದ ಹುಟ್ಟಿದ್ದು, ಅವುನನ್ನಲ್ಲಿ ಇವೆ ; ನಾನು ಅವುಗಳಲ್ಲಿ ಇಲ್ಲ. ಈ ಮಾಯಾಶಕ್ತಿಯು ದಾಟಲು ಅಸಾಧ್ಯವಾದದ್ದು. ದಂಬ, ದರ್ಪಗಳಿರುವವರು ದಾಟಲಾರರು. ನನಗೆ ಶರಣು ಬಂದವರು ಈ ಮಾಯೆಯನ್ನು ದಾಟಬಲ್ಲರು.

ಭಗವಂತನ ಭಕ್ತರು :[ಬದಲಾಯಿಸಿ]


 • ಕಷ್ಟದಲ್ಲಿರುವವರು, ವಿಚಾರವಂತ, ಸುಖದ ಬಯಕೆಯುಳ್ಳವನು, ಜ್ಞಾನಿ ಹೀಗೆ ನಾಲ್ಕು ಬಗೆಯ ಜನರು ನನ್ನನ್ನು (ಭಗವಂತನನ್ನು) ಭಜಿಸುವರು. ಅವರಲ್ಲಿ ಜ್ಞಾನಿ ನನಗೆ ಇಷ್ಟ ; ಅವನು ನನ್ನ ಸ್ವರೂಪವೇ. ಬೇರೆ ಬೇರೆ ದೇವತೆಗಳನ್ನು ಪೂಜಿಸುವವರಿಗೆ ಅದೇರೂಪದಲ್ಲಿ ಅವರಿಗೆ ಬೇಕಾದುದನ್ನು ಕರುಣಿಸುತ್ತೇನೆ. ಕಣ್ಣಿಗೆ ಕಾಣದಿರುವ ನನ್ನನ್ನು ದಡ್ಡರಾದ ಜನರು ಕಣ್ಣಿಗೆ ಕಾಣುವ ರೂಪವಿರುವವನೆಂದು (ಅವತರಿಸಿದ ದೇಹದ ರೂಪಿನವನೆಂದು) ತಿಳಿದು ಪೂಜಿಸುತ್ತಾರೆ. ಮಾಯೆಯ ಮುಸುಕಿನಲ್ಲಿರುವ ನನ್ನನ್ನು ತಿಳಿವಳಿಕೆಇಲ್ಲದ ಅವರು ತಿಳಿಯಲಾರರು.

ಉಪಸಂಹಾರ :[ಬದಲಾಯಿಸಿ]


ಯಾರು ಸುಖ ದುಃಖ ಮೊದಲಾದ ಜೋಡಿಗಳಿಂದ ಬಿಡುಗಡೆಯಾಗಿ, ದೃಢಮನಸ್ಸಿನಿಂದ ನನ್ನನ್ನು ಭಜಿಸುವರೋ, ಮುಪ್ಪು, ಸಾವು ಗಳಿಂದ ಬಿಡುಗಢೆಗೊಳ್ಳಬೆಕೆಂದು ಬಯಸಿ ನನ್ನಲ್ಲಿ ಶರಣು ಬರುವರೋ, ಅವರು ಅಂತರಂಗದ ಆತ್ಮ ತತ್ವವನ್ನೂ ಕರ್ಮ ರಹಸ್ಯವನ್ನೂ ತಿಳಿದುಕೊಳ್ಳುವರು. ನನ್ನನ್ನು (ಭಗವಂತನನ್ನು) ಅಧಿಭೂತ, ಅಧಿಯಜ್ಞ, ಅಧಿದೈವದಿಂದ ಕೂಡಿದವನೆಂದು ತಿಳಿಯವರೋ ಅವರು ಅಂತ್ಯ ಕಾಲದಲ್ಲಿಯಾದರೂ, ನನ್ನನ್ನು ಅರಿಯುವರು.

 • (ಇತಿ ಶ್ರೀ ಭಗವದ್ಗೀತಾಸೂಪನಿಷತ್ಸು ಬ್ರಹ್ಮವಿದ್ಯಾಯಾಂ ಯೋಗ ಶಾಸ್ತ್ರೇ ಶ್ರೀ ಕೃಷ್ಣಾರ್ಜುನ ಸಂವಾದೇ ವಿಜ್ಞಾನ ಯೋಗೋ ನಾಮ ಸಪ್ತಮೋsದ್ಯಾಯಃ)

ಅಕ್ಷರ ಬ್ರಹ್ಮ ಯೋಗ : ಎಂಟನೆಯ ಅಧ್ಯಾಯ :[ಬದಲಾಯಿಸಿ]


ಅಕ್ಷರ ಬ್ರಹ್ಮ ಯೋಗ - ೨೮/೩೩೮

 • ಅಭ್ಯಾಸ ಯೋಗ ಎಂಬ ಹೆಸರೂ ಇದೆ
 • ಅರ್ಜುನನ ಪ್ರಶ್ನೆ :
 • ಬ್ರಹ್ಮ , ಅಧ್ಯಾತ್ಮ , ಕರ್ಮ, ಅಧಿಭೂತ, ಅಧಿದೈವ, ಅಧಿಯಜ್ಞ,, ಎಂದು ಹೇಳಿದೆಯಲ್ಲಾ , ಅದರ ಅರ್ಥವೇನು ಎಂದನು.

ಭಗವಂತನೆಂದನು : ನಾಶರಹಿತನಾದ ಪರಬ್ರಹ್ಮನೇ ಬ್ರಹ್ಮ , ಪ್ರತಿ ದೇಹದಲ್ಲಿಯೂ ಆತ್ಮ ವಾಗಿರುವುದು, ಅಧ್ಯಾತ್ಮ, , ಯಜ್ಞ , ಹೋಮ, ಮೊದಲಾದವು ಕರ್ಮ , ಹುಟ್ಟು-ನಾಶವುಳ್ಳ ವಸ್ತುಗಳು ಅಧಿಭೂತ, ಸಮಸ್ತ ಪ್ರಾಣಿಗಳಿಗಳಿಗೆ ಆಧಾರನಾಗಿರುವ ಸೂರ್ಯನಲ್ಲಿರುವ ಹಿರಣ್ಯಗರ್ಭನು ಅಧಿದೈವವು., ಈ ದೇಹದಲ್ಲಿರುವ ವಿಷ್ಣು ರೂಪನಾದ ನಾನೇ ಅಧಿಯಜ್ಞನು.

ಅಭ್ಯಾಸ ಯೋಗ :[ಬದಲಾಯಿಸಿ]


 • ಅಂತ್ಯಕಾಲದಲ್ಲಿ ಯಾವ ದೇವತೆಯನ್ನು ಧ್ಯಾನಮಾಡುವನೋ ಆ ದೇವತೆಯನ್ನು ಪಡೆಯುತ್ತಾನೆ. ಅಂತ್ಯಕಾಲದಲ್ಲಿ, ಮೊದಲು ಹೃದಯದಲ್ಲಿನಿಲ್ಲಿಸಿದ ಪ್ರಾಣವನ್ನು ಹುಬ್ಬುಗಳನಡವೆ (ಆಜ್ಞಾ ಚಕ್ರ)ನಿಲ್ಲಿಸಿರುವನೋ ಅವನು ಪರಮ ಪುರುಷನನ್ನು ಪಡೆಯುವನು. ಆದ್ದರಿಂದ ಸದಾ ಭಗವಂತನನ್ನು ನೆನೆಯುವುದನ್ನು ಅಭ್ಯಾಸ ಮಾಡಬೇಕು.

ಓಂಕಾರದ ಉಪಾಸನೆ :[ಬದಲಾಯಿಸಿ]


 • ಅವಿನಾಶಿಯಾದ ಆ ಬ್ರಹ್ಮವನ್ನು ಪಡೆಯುವ ಬಗೆಯನ್ನು ಹೇಳುವೆನು, ಸಂಯಮದಿಂದ ಮನಸ್ಸನ್ನು ಹೃದಯದಲ್ಲಿ ನಿಲ್ಲಿಸಿ ಓಂ ಕಾರವನ್ನು ಧ್ಯಾನ ಮಾಡುತ್ತಿರಬೇಕು. ಹೃದಯದಿಂದ ಪ್ರಾಣುವಾಯುವನ್ನು ನಡು ನೆತ್ತಿಗೆ ಏರಿಸಬೇಕು. ಹಾಗೆ ಓಂ ಕಾರವನ್ನು ಧ್ಯಾನಮಾಡುತ್ತಾ ದೇಹ ಬಿಟ್ಟಬಿಟ್ಟವನಿಗೆ ಹೆಚ್ಚಿನ ಮೋಕ್ಷ ಲಭಿಸುವುದು ಅವನಿಗೆ ಪುನರ್ಜನ್ಮವಿಲ್ಲ. ಅವನು ಪನಃ ಹುಟ್ಟುವುದಿಲ್ಲದ ಬ್ರಹ್ಮಲೋಕಕ್ಕೂ ಮೇಲಿನ ಲೋಕವನ್ನು ಪಡೆಯುತ್ತಾನೆ. ಈ ಚರಾಚರ ವಸ್ತುಗಳೆಲ್ಲಾ ಯಾವನ ಒಳಗಿರುವುವೋ, ಇವೆಲ್ಲಾ ಯಾವನಿಂದ ತುಂಬಿಕೊಂಡಿರುವುದೋ ಆ ಪುರುಷನನ್ನು ಪಡೆಯುವನು. ಉಳಿದವರು ಪ್ರತಿ ಪ್ರಲಯದಲ್ಲಿ ಬ್ರಹ್ಮನಲ್ಲಿ ಅಡಗಿ, ಸೃಷ್ಟಿಯಲ್ಲಿ ಪುನಃ ಹುಟ್ಟುವರು. ಶುಕ್ಲ ಮತ್ತು ಕೃಷ್ಣ ಗತಿಗಳೆಂದು ಉಪಾಸನೆಯು ಎರಡು ವಿಧ. ಪರಮ ಪುರುಷನನ್ನು ಧ್ಯಾನ ಮಾಡುವ ಶುಕ್ಲ ಮಾರ್ಗದವರಿಗೆ ಪುನರ್ಜನ್ಮವಿಲ್ಲ ; ಆದರೆ ಅವರು ಸಗುಣ ಬ್ರಹ್ಮವನ್ನು ಪಡೆಯುವರು. ಬೇರೆ ಅಭಿಮಾನಿ ದೇವತೆಗಳನ್ನು ಉಪಾಸನೆ ಮಾಡುವವರು ಪುನರ್ಜನ್ಮ ಪಡೆಯುವರು.
 • (ಟಿಪ್ಪಣಿ : ಇದು ರಾಜಯೋಗ, ಹಠಯೋಗದ ಕಠಿಣ ಮಾರ್ಗ, ಮತ್ತು ಓಂ ಕಾರದ ಉಪಾಸನಾ ವಿಧಾನ. ಜ್ಞಾನಯೋಗದಿಂದ ಸದ್ಯೋಮುಕ್ತಿ - ಬದುಕಿರುವಾಗಲೇ ಮುಕ್ತಿ ಪದವಿ ಸಿಗುವುದು. ಈ ಉಪಾಸನಾ ವಿಧಾನದಲ್ಲಿ ಕ್ರಮ ಮುಕ್ತಿ ಯಾಗವುದು,- ದೇಹಬಿಟ್ಟ ನಂತರ ಮುಕ್ತಿಯಾಗವುದು. ಬೇರೆ ಯೋಗದಲ್ಲಿ ಇರುವವರೂ ಅನೇಕರು ಈ ಯೋಗದಲ್ಲಿಯೂ ನಿರತರಾಗಿರುತ್ತಾರೆ.)

ಉಪಸಂಹಾರ :[ಬದಲಾಯಿಸಿ]


 • ಹೀಗೆ ಪರಮ ಪುರುಷನನ್ನು ಉಪಾಸನೆ ಮಾಡುವವರು, ದಾನ, ಯಜ್ಞ ಯಾಗಾದಿಗಳನ್ನೂ , ತಪಸ್ಸನ್ನೂ, ಮಾಡಿದವರ ಫಲವನ್ನು ಪಡೆಯುವರು. ನೀನೂ ಧ್ಯಾನಯೋಗವನ್ನು ನೆಡೆಸುತ್ತಿರು, -ಎಂದನು.

(ಇತಿ ಶ್ರೀ ಭಗವದ್ಗೀತಾಸೂಪನಿಷತ್ಸು ಬ್ರಹ್ಮವಿದ್ಯಾಯಾಂ ಯೋಗ ಶಾಸ್ತ್ರೇ ಶ್ರೀ ಕೃಷ್ಣಾರ್ಜುನ ಸಂವಾದೇ ಅಕ್ಷರ ಬ್ರಹ್ಮ ಯೋಗೋ ನಾಮ ಅಷ್ಟಮೋsದ್ಯಾಯಃ||

ರಾಜ ವಿದ್ಯಾ ರಾಜ ಗುಹ್ಯಯೋಗ -ಒಂಭತ್ತನೆಯ ಅದ್ಯಾಯ :[ಬದಲಾಯಿಸಿ]


ರಾಜ ವಿದ್ಯಾ ರಾಜ ಗುಹ್ಯಯೋಗ - ೩೪/೩೭೨

 • ಭಗವಂತನು ಮಂದುವರೆದು :
 • ಅರ್ಜುನ, ,ಇಲ್ಲಿಯೇ ಅನುಭವಕ್ಕೆ ಬರುವ, ರಹಸ್ಯವಾದ, ಎಲ್ಲಕ್ಕೂ ಮೇಲಾದ ರಾಜವಿದ್ಯೆ ಎನಿಸಿದ ಸರಳವಾದ, ಈ ಜ್ಞಾನವನ್ನು ನಿನಗೆ ಹೇಳುವೆನು ; ಎಂದನು

ಪರಮಾತ್ಮನಿಗೆ ಪ್ರಪಂಚದ ಸೋಂಕಿಲ್ಲ :[ಬದಲಾಯಿಸಿ]


 • ಈ ಜಗತ್ತೆಲ್ಲಾ ಕಣ್ಣಿಗೆ ಕಾಣದ ನನ್ನಿಂದ (ಭಗವಂತನಿಂದ) ತುಂಬಿರುವುದು. ಈ ಎಲ್ಲಾ ವಸ್ತುಗಳೂ ನನ್ನಲ್ಲಿ ಇರುವುವು ; ನಾನು ಅವುಗಳಲ್ಲಿ ಇಲ್ಲ (ನಾನು ಅವುಗಳಿಗೆ ಆಧಾರ, ಅವುನನಗೆ ಆಧಾರವಲ್ಲ). ಎಲ್ಲಾ ವಸ್ತುಗಳೂ ನನ್ನಲ್ಲಿ ಇದ್ದರೂ ಇಲ್ಲದಂತಿದೆ - ಕಾರಣ ನನಗೆ ಅವುಗಳ ಸೋಂಕಿಲ್ಲ. ಕಲ್ಪಾಂತ್ಯದ ಪ್ರಳಯ ಕಾಲದಲ್ಲಿ ಎಲ್ಲಾ ವಸ್ತುಗಳೂ ಮಾಯೆಯೊಳಗೆ ಅಡಕವಾಗುತ್ತವೆ. ಮತ್ತೆ ಸೃಷ್ಟಿಕಾಲದಲ್ಲಿ ಅವುಗಳಿಗೆ ಅರಿವಿಲ್ಲದಂತೆ ಮಾಯಾಶಕ್ತಿಯಿಂದ ಹೊರ ಹಾಕುತ್ತೇನೆ .ಕರ್ಮದಲ್ಲಿ ಆಸಕ್ತಿ ಇಲ್ಲದ ನನಗೆ ಸೃಷ್ಟಿ-ಸ್ಥಿತಿ-ಲಯಗಳ ಸೋಂಕು ಇಲ್ಲ. ನನ್ನ (ಭಗವಂತನ) ಚೈತನ್ಯ ಬಲದಿಂದ ಮಾಯಾಶಕ್ತಿಯು, ಈ ಜಗತ್ತಿಗೆ ಜನ್ಮ ನೀಡುತ್ತದೆ. ಅದು ಮಾಯಾಶಕ್ತಿಯ ಕಾರಣದಿಂದ ಬಗೆ ಬಗೆಯಾಗಿ ರೂಪುಗೊಳ್ಳುತ್ತದೆ.

ಭಗವಂತನ ವಿಭೂತಿಗಳು[ಬದಲಾಯಿಸಿ]


 • (ಮಹಿಮೆ)
 • ಎಲ್ಲೆಡೆ ಆವರಿಸಿರುವ ಭೂತ ಮಹೇಶ್ವರನಾದ ನನ್ನನ್ನು (ಭಗವಂತನನ್ನು)ಜಗತ್ತಿಗೆ ಮೂಲನೆಂದು ತಿಳಿದು ಭಜಿಸುತ್ತಾರೆ. ಜಗತ್ತನ್ನು ಆವರಿಸಿರುವ ನನ್ನನ್ನು ಈ ದೇಹದಲ್ಲಿ ಮಾತ್ರ ಇರುವವನೆಂದು ತಿಳಿದವರು ದಡ್ಡರು.

ವೇದಗಳೂ, ಅವುಗಳಲ್ಲಿ ಹೇಳಿದ ಕರ್ಮಗಳೂ, ಹವಿಸ್ಸೂ, ಅಗ್ನಿಯೂ, ಮಂತ್ರವೂ, ಹುಟ್ಟೂ,, ಸಾವೂ, ಎಲ್ಲವೂ ನಾನೇ. ನಾನು ಜಗತ್ತಿನ ಸೃಷ್ಟಿ , ಸ್ಥಿತಿ, ಲಯ, ಎಲ್ಲದರ ಆಧಾರ ; ಎಲ್ಲದರ, ನಾಶವಾಗದ ಬೀಜ ನಾನೇ.

ಕರ್ಮದ ನಶ್ವರತೆ ಮತ್ತು ಭಗವಂತನ ದಯೆ :[ಬದಲಾಯಿಸಿ]


 • ವೈದಿಕ ಕರ್ಮಗಳಾದ ಯಜ್ಞಗಳನ್ನು ಆಚರಿಸಿ ಸೋಮರಸವನ್ನು ಕುಡಿಯುವ, ವೇದ ಪಂಡಿತರು ಸ್ವರ್ಗದ ದಿವ್ಯ ಸುಖವನ್ನು ಪಡೆಯುತ್ತಾರೆ. ಆದರೆ ಅವರ ಪುಣ್ಯವು ಮುಗಿಯುತ್ತಲೆ ಪುನಹ ಬರುವರು, ಮತ್ತೆ ಕರ್ಮದಲ್ಲಿ ತೊಡಗುವರು. ಈ ಜನನ - ಮರಣ ಚಕ್ರದಲ್ಲಿ ಸಿಲುಕುವರು.

ಅನನ್ಯಾಶ್ಚಿಂತಯಂತೋ ಮಾಂ | ಯೇ ಜನಾಃ ಪರ್ಯುಪಾಸತೇ ||

ತೇಷಾಂ ನಿತ್ಯಾಭಿಯುಕ್ತಾನಾಂ | ಯೋಗಕ್ಷೇಮಂ ವಹಾಮ್ಯಹಂ ||

ಯಾವ ಜನರು, ತಮ್ಮ ಆತ್ಮವೆಂದು ನನ್ನನ್ನು (ಭಗವಂತನನ್ನು) ಧ್ಯಾನ ಮಾಡುತ್ತಾರೋ, ಯಾವಾಗಲೂ ನನ್ನಲ್ಲಿ ಮನಸ್ಸನ್ನಿಟ್ಟಿರುವ ಅವರ ಯೋಗ ಕ್ಷೇಮದ ಹೊರೆಯನ್ನು ವಹಿಸುತ್ತೇನೆ.

 • (ಟಿ : ಇದು ಭಗವಂತನು ಸಜ್ಜನ ಭಕ್ತರಿಗೆ ಕೊಟ್ಟ ಅಭಯದ ಭರವಸೆಯ ಪ್ರಸಿದ್ಧ ಶ್ಲೋಕ ; ಇದನ್ನು ಅನೇಕ ಕೃಷ್ಟನ ಭಕ್ತರು ದಿನನಿತ್ಯ ಪಠಿಸುವರು.)
 • ಯಾರು ಯಾರು ಬೇರೆ ದೇವತೆಗಳನ್ನು, ಯಕ್ಷ, ಭೂತ, ಪಿತೃ ಗಳನ್ನು ಪೂಜಿಸುವರೋ ಅವರು (ಅವರು ತಿಳಿಯದೆ ನನ್ನನ್ನೇ ಪೂಜಿಸಿದರೂ) , ಪೂಜಿಸಿದ ಅದನ್ನೇ ಪಡೆಯುತ್ತಾರೆ.
 • ಕಾಡು ಎಲೆ, ಹೂ, ನೀರು, ಇವುಗಳನ್ನು ನನಗೆ ಪ್ರೇಮದಿಂದ ಭಕ್ತನು ಕೊಡುವನೋ,ಕೊಡಲು ಪ್ರಯತ್ನಿಸುವನೊ, ಭಕ್ತಿಯಿಂದ ಕೊಡುವ ಅದನ್ನು ನಾನು ಸ್ವೀಕರಿಸುತ್ತೇನೆ.
 • (ಟಿ : ಹಣ, ವಡವೆ,ಬಟ್ಟೆ, ಬೆಲೆ ಬಾಳುವ ವಸ್ತುಗಳನ್ನು ಭಗವಂತ, ತನಗೆ ಕೊಡಬೇಕೆಂದು ಹೇಳಿಲ್ಲ.)
ಉಪಸಂಹಾರ[ಬದಲಾಯಿಸಿ]

 • ನನ್ನನ್ನು ಸರ್ವಾಂತರ್ಯಾಮಿ (ರೂಪ ರಹಿತ) ಪರಮಾತ್ಮನೆಂದು ಪೂಜಿಸುವವರು ನನ್ನನ್ನೇ ಪಡೆಯುತ್ತಾರೆ. ಹೀಗೆ ನನ್ನನ್ನು ಉಪಾಸನೆ ಮಾಡುವ, ಪಾಪ ಮಾಡಿದವನಾದರೂ, ಹೆಂಗಸರೂ, ಶೂದ್ರರೂ, ವೈಶ್ಯರೂ, ಕೂಡ ಉತ್ತಮವಾದ ಮೋಕ್ಷವನ್ನು ಪಡೆಯುತ್ತಾರೆ.
 • ಆದ್ದರಿಂದ ನನ್ನನ್ನು ಸರ್ವಾಂತರ್ಯಾಮಿ ಪರಮಾತ್ಮನೆಂದು, ನೀನೇ ಗತಿಯೆಂದು ನನ್ನನ್ನು ಉಪಾಸನೆ (ಧ್ಯಾನ) ಮಾಡಿದರೆ ಪರಮಾತ್ಮನಾದ ನನ್ನನ್ನೇ ಪಡೆಯುತ್ತೀಯೆ- ಎಂದು ಭಗವಂತನಾದ ಶ್ರೀ ಕೃಷ್ಣನು ಅರ್ಜುನನಿಗೆ ಹೇಳಿದನು.
 • (ಟಿಪ್ಪಣಿ : ಎಲ್ಲಿಯೂ ಮೂರ್ತಿ ಪೂಜೆಯನ್ನು ಹೇಳಿಲ್ಲ ; ಹಾಗೆಯೇ ಹೆಂಗಸರಿಗೂ, ಶೂದ್ರರಿಗೂ, ವೈಶ್ಯರಿಗೂ ಮೋಕ್ಷಕ್ಕೆ ಅವಕಾಶವಿದೆ ,)
 • (ಇತಿ ಶ್ರೀ ಭಗವದ್ಗೀತಾಸೂಪನಿಷತ್ಸು ಬ್ರಹ್ಮವಿದ್ಯಾಯಾಂ ಯೋಗ ಶಾಸ್ತ್ರೇ ಶ್ರೀ ಕೃಷ್ಣಾರ್ಜುನ ಸಂವಾದೇ ರಾಜ ವಿದ್ಯಾ ರಾಜ ಗುಹ್ಯ ಯೋಗೋ ನಾಮ ನವಮೋsದ್ಯಾಯಃ ||

ವಿಭೂತಿಯೋಗ - ಹತ್ತನೇ ಅಧ್ಯಾಯ[ಬದಲಾಯಿಸಿ]


 • ವಿಭೂತಿಯೋಗ - ಹತ್ತನೆಯ ಅಧ್ಯಾಯ -೪೨ / ೪೧೪
 • ಭಗವಂತನಾದ ಶ್ರೀ ಕೃಷ್ಣನು ಮತ್ತೂ ಮುಂದುವರಿದು ಹೇಳುತ್ತಾನೆ :

ಭಗವಂತ ಸರ್ವಕ್ಕೂ ಕಾರಣೀಭೂತ :[ಬದಲಾಯಿಸಿ]


 • ನಾನು ಎಲ್ಲಾ ದೇವತೆಗಳಿಗಿಂತ ಎಲ್ಲಾ ಋಷಿಗಳಿಗಿಂತ ಹಿಂದಿನವನು. ನನ್ನ ಹುಟ್ಟನ್ನು ಯಾರೂ ಅರಿಯರು. ಆದ್ದರಿಂದ. ನನ್ನನ್ನು (ಭಗವಂತನನ್ನು) ಹುಟ್ಟು ಇಲ್ಲದವನೆಂದೂ., ಆನಾದಿ ಪುರುಷನೆಂದೂ, ಲೋಕ ಮಹೇಶ್ವರನೆಂದೂ ಯಾವನು ಅರಿತುಕೊಳ್ಳುವನೋ ಅವನು ಎಲ್ಲಾ ಪಾಪಗಳಿಂದ ಮುಕ್ತಿ ಪಡೆಯುತ್ತಾನೆ.
 • ವಿವೇಕವೇ ಮೊದಲಾದ ಸರ್ವ ಸದ್ಗುಣಗಳೂ, ಭಾವಗಳೂ, ದುಃಖ, ಹುಟ್ಟು, ಸಾವು ಮೊದಲಾದ ಸರ್ವ ಕಷ್ಟ ಭಾವಗಳೂ ಅವರವರ ಕರ್ಮಕ್ಕೆ ತಕ್ಕಂತೆ ನನ್ನಿಂದಲೇ ( ನನ್ನ ಮಾಯೆಯಿಂದ) ಉಂಟಾಗುವುವು.
 • ಸಪ್ತ ಋಷಿಗಳು, ಸನಕಾದಿ ನಾಲ್ಕು ಬಾಲ ಮುನಿಗಳು ನನ್ನ ಮನಸ್ಸಿನಿಂದ ಹುಟ್ಟಿದವರು. ಭಗವಂತನಾದ ನನ್ನ ಮಹಿಮೆಯನ್ನು ಇದ್ದದ್ದು ಇದ್ದಹಾಗೆ ತಿಳಿದವನಿಗೆ ಮನಸ್ಸು ಚಂಚಲ ವಾಗದು. ಜ್ಞಾನಿಗಳು ಭಗವಂತನಿಂದಲೇ ಎಲ್ಲವೂ ನಡೆಯುವುದೆಂದೂ, ಅವನೇ ಎಲ್ಲಕ್ಕೂ ಫ್ರಭುವೆಂದೂ, ತಿಳಿದು ನನ್ನನ್ನು ಭಜಿಸು(ಧ್ಯಾನಿ)ಸುತ್ತಾರೆ. ಅಂಥವರಿಗೆ ತಮ್ಮ ಆತ್ಮವೇ ನಾನೆಂಬ (ಬ್ರಹ್ಮ) ಜ್ಞಾನವನ್ನು ಕೊಡುತ್ತೇನೆ.

ಭಗವಂತನ ವಿಭೂತಿ (ಮಹಿಮೆ) :[ಬದಲಾಯಿಸಿ]


 • ಅರ್ಜನನು ಹೇಳಿದನು :
 • ನೀನು ಚತುರ್ಮುಖ ಬ್ರಹ್ಮನಿಗಿಂತಲೂ ಮೇಲಿನವನೆಂದೂ, ಆದಿ ಪುರುಷನೆಂದೂ,, ಹುಟ್ಟಿಲ್ಲದವನೆಂದೂ ಜ್ಞಾನಿಗಳೂ, ವ್ಯಾಸ ಮಹರ್ಷಿಗಳೂ ಹೇಳುತ್ತಾರೆ. ನಾನೂ ನಂಬುತ್ತೇನೆ ; ನಿನ್ನನ್ನು ನೀನೇ ಅರಿತುಕೊಂಡಿರವ ಪುರುಷೋತ್ತಮನು, ನಿನ್ನನ್ನು ಯಾವ ಯಾವ ಭಾವದಿಂದ ಧ್ಯಾನಿಸಬೇಕೆಂದು ವಿವರವಾಗಿ ಹೇಳು. (ಎಂದನು)

ಭಗವಂತನು ಹೇಳುತ್ತಾನೆ :

 • ಎಲ್ಲಾ ಪ್ರಾಣಿಗಳ ಆತ್ಮನೂ ನಾನೇ, ಆದಿತ್ಯರಲ್ಲಿ ವಿಷ್ಣು, -ಸೂರ್ಯ, ವೇದಗಳಲ್ಲಿ ಸಾಮವೇದ, ದೇವತೆಗಳಲ್ಲಿ ಇಂದ್ರ, ಇಂದ್ರಿಯಗಳಲ್ಲಿ ಮನಸ್ಸು, ಎಲ್ಲಾಜೀವಿಗಳಲ್ಲಿ ನಾನು ಚೇತನವಾಗಿದ್ದೇನೆ.
 • ರುದ್ರರಲ್ಲಿ ಶಂಕರ, ಪುರೋಹಿತರಲ್ಲಿ ದೇವಗುರು ಬೃಹಸ್ಪತಿ, ಸೇನಾಪತಿಗಳಲ್ಲಿ ಕುಮಾರಸ್ವಾಮಿ. ಮಹರ್ಷಿಗಳಲ್ಲಿ ಭೃಗು, ಅಕ್ಷರಗಳಲ್ಲಿ (ನಾಶವಿಲ್ಲದವು) ಓಂಕಾರ , ಯಜ್ಞಗಳಲ್ಲಿ ಜಪಯಜ್ಞ , ಮರಗಳಲ್ಲಿ ಅಶ್ವತ್ಥ, ಹೀಗೆ ಯಾವ ಯಾವ ವಸ್ತುಗಳಲ್ಲಿ, ಜೀವಿಗಳಲ್ಲಿ , ಶ್ರೇಷ್ಠವಾದದ್ದು, ಅಧಿಕ ಶಕ್ತಿ ಶಾಲಿ ಇದೆಯೋ ಅದರಲ್ಲಿ ನನ್ನ ಮಹಿಮೆ ಇದೆ ಎಂದು ತಿಳಿ ; (ಎಂದನು)

ಮುಂದುವರೆದು,- ನಾನು ಅನಂತ, ವಾಸುಕಿ, ಗರುಡ, ಸಿಂಹ, ; ಯೋಧರಲ್ಲಿ ಶ್ರೀರಾಮ, ವಿದ್ಯೆಯಲ್ಲಿ ಆತ್ಮ ವಿದ್ಯೆ, ನದಿಯಲ್ಲಿ ಗಂಗೆ ; ಎಂದು ಭಾವಿಸು.

 • ನಾನು ಕಾಲವು, ಮೃತ್ಯವೂ ನಾನೇ, ಛಂದಸ್ಸಿನಲ್ಲಿ ಗಾಯತ್ರೀ, ಮಾಸಗಳಲ್ಲಿ ಮಾರ್ಗಶೀರ್ಷ, ಆಜ್ಞಾ ಶಕ್ತಿ, ಸತ್ವಗುಣ, ಛಲ, ಉದ್ಯೋಗ ಪ್ರವೃತ್ತಿ, ಇವೆಲ್ಲಾ ನಾನೇ,
 • ಯಾದವರಲ್ಲಿ ಕೃಷ್ಣ, ಪಾಂಡವರಲ್ಲಿ ಅರ್ಜುನ, ಮುನಿಗಳಲ್ಲಿ ವ್ಯಾಸ, ಕವಿಗಳಲ್ಲಿ ಶುಕ್ರಾಚಾರ್ಯ (ಇವರ ಯಾವ ಕಾವ್ಯವೂ ಲಭ್ಯವಿಲ್ಲ), ಜ್ಞಾನಿಗಳಲ್ಲಿ ಜ್ಞಾನವು, ನಾನು,

ಉಪಸಂಹಾರ :[ಬದಲಾಯಿಸಿ]


ಯಚ್ಚಾಪಿ ಸರ್ವ ಭೂತಾನಾಂ |

ಬೀಜಂ ತದಹಮರ್ಜುನ ||

ನ ತದಸ್ತಿ ವಿನಾಯತ್ ಸ್ಯಾತ್ |

ಮಾಯಾ ಭೂತಂ ಚರಾಚರಂ ||

 • ಅರ್ಜುನ, ಎಲ್ಲಾ ಚರಾಚರಕ್ಕೆ ಯಾವುದು ಕಾರಣವೋ(ಓ), ಆ ಚೈತನ್ಯವೆಂಬ ಬೀಜವು ನಾನು. ಚರಗಳಲ್ಲಿಯೂ, ಅಚರಗಳಲ್ಲಿಯೂ ನನ್ನ ಹೊರತಾದದ್ದು ಯಾವುದೂ ಇಲ್ಲ. ನನ್ನ ಮಹಿಮೆಗೆ ಕೊನೆ ಇಲ್ಲ. ಯಾವುದು ಹೆಚ್ಚುಗಾರಿಕೆಯಿಂದ ಕೂಡಿದೆಯೋ, ಹೆಚ್ಚು ಬಲದಿಂದ ಕೂಡಿದೆಯೋ, ಅದು ನನ್ನ ಮಹಿಮೆಯಿಂದ ಹುಟ್ಟಿದ್ದೆಂದು ತಿಳಿ. ನನ್ನ ವಿಭೂತಿಗಳನ್ನು ತಿಳಿದು ಪ್ರಯೋಜನವೇನು ? ನಾನು ಈ ಜಗತ್ತನ್ನು ಕೇವಲ ನನ್ನ ಒಂದು ಅಂಶ ಮಾತ್ರದಿಂದ ವ್ಯಾಪಿಸಿಕೊಂಡಿರುವೆನು. ಎಂದು ಭಗವಂತನಾದ ಶ್ರೀಕೃಷ್ಣನು ಹೇಳಿದನು
 • (ಟಿಪ್ಪಣಿ : ನನ್ನ (ಭಗವಂತನ) ಪೂರ್ಣ ಮಹಿಮೆಯನ್ನು ತಿಳಿಯುವುದು ಅಸಾಧ್ಯ , ಎಂದು ಭಾವ. ಪುರುಷ ಸೂಕ್ತದಲ್ಲಿ , ಪಾದೋಸ್ಯ ವಿಶ್ವಾ ಭೂತಾನಿ, ಪರಮ ಪುರುಷನ ಸ್ವಲ್ಪ ಭಾಗದಿಂದ ಈ ವಿಶ್ವವೂ, ಜೀವಿಗಳೂ, ಪಂಚಭೂತಗಳೂ ಆಗಿವೆ ; ಎಂದಿದೆ)
 • (ಇತಿ ಶ್ರೀ ಭಗವದ್ಗೀತಾಸೂಪನಿಷತ್ಸು ಬ್ರಹ್ಮವಿದ್ಯಾಯಾಂ ಯೋಗ ಶಾಸ್ತ್ರೇ ಶ್ರೀ ಕೃಷ್ಣಾರ್ಜುನ ಸಂವಾದೇ ವಿಭೂತಿ ಯೋಗೋ ನಾಮ ದಶಮೋsಧ್ಯಾಯಃ ||

ವಿಶ್ವ ರೂಪ ದರ್ಶನ ಯೋಗ - ಹನ್ನೊಂದನೆಯ ಅಧ್ಯಾಯ[ಬದಲಾಯಿಸಿ]


ವಿಶ್ವ ರೂಪ ದರ್ಶನ ಯೋಗ - ೫೫/೪೬೯

ಈಶ್ವರತ್ವದ ರೂಪವನ್ನು ನೋಡುವ ಅರ್ಜುನನ ಆಸೆ[ಬದಲಾಯಿಸಿ]


 • ಅರ್ಜುನನು ಹೇಳಿದನು (ಹೇಳಿದ್ದು) :
 • ನನ್ನ ಒಳಿತಿಗಾಗಿ, ರಹಸ್ಯವಾದ ಆತ್ಮ ತತ್ವವನ್ನು ಹೇಳಿದ್ದೀಯೆ. ನನ್ನ ಮೋಹ (ತಪ್ಪು ತಿಳಿವಳಿಕೆ) ಹೋಯಿತು. ಪುರುಷೋತ್ತಮ, ನಿನ್ನ ಅದ್ಭುತವಾದ ಈಶ್ವರತ್ವದ ರೂಪವನ್ನು ನೋಡಬೇಕೆಂದು ಆಸೆ ಆಗಿದೆ. ನಾನು ನೋಡಬಹುದಾದರೆ ಅದನ್ನು ತೋರಿಸು.
 • ಭಗವಂತನು ಹೇಳಿದನು :
 • ಅರ್ಜನ, ನಿನ್ನ ಮಾನುಷ ಕಣ್ಣಿನಿಂದ ಆ ದಿವ್ಯ ರೂಪವನ್ನು ನೋಡಲು ಅಸಾಧ್ಯ. ನಿನಗೆ ದಿವ್ಯವಾದ ಕಣ್ಣುಗಳನ್ನು ಕೊಡುವೆನು. ಚರ ಅಚರ ಜಗತ್ತಿನಿಂದ ಲೂ, ವಸು ರುದ್ರಾದಿ ದೇವತೆಗಳಿಂದಲೂ, ಕೂಡಿರುವ ನಾನಾ ಬಗೆಯಾಗಿರುವ ಅದ್ಭುತವಾದದ ನನ್ನ, ಸರ್ವೇಶ್ವರ ರೂಪವನ್ನು ನೋಡು. (ಎಂದನು.)
 • (ಟಿಪ್ಪಣಿ : ಭಗವಂತನ ನಿತ್ಯವಾದ, ನಿಜವಾದ, ಪರಮಾತ್ಮ ಸ್ವರೂಪವನ್ನು ನೋಡಲು ಆಗುವುದಿಲ್ಲ. ಅದು ನಿರಾಕಾರವೂ ನಿರ್ಗುಣವೂ ಆಗಿರುವುದು. ಜ್ಞಾನಿಯು ಭಗವಂತನಲ್ಲಿ ಲಯವಾಗಿ , ಸಾಕ್ಷೀ ರೂಪನಾಗಿ, ಅದರ ಆನಂದದ ಅನುಭವವನ್ನು ಹೊಂದಬಹುದು. ಈ ವಿಚಾರವನ್ನು , ಈ ಅಧ್ಯಾಯದ ಕೊನೆಯ ಎರಡು ಶ್ಲೋಕಗಳಲ್ಲಿ ಹೇಳಿದೆ.)

ವಿಶ್ವರೂಪ ವರ್ಣನೆ :[ಬದಲಾಯಿಸಿ]


 • ಈಗ ಸಂಜಯನು ಧೃತರಾಷ್ಟ್ರನಿಗೆ ಹೇಳುತ್ತಾನೆ :
 • ದೃತರಾಷ್ಟ್ರ , ಹೀಗೆ ಅರ್ಜುನನಿಗೆ ಶ್ರೀಕೃಷ್ಣನು ಶ್ರೇಷ್ಠವಾದ ಈಶ್ವರೀಯ (ಐಶ್ವರೀಯ) ರೂಪವನ್ನು ತೋರಿಸಿದನು. ಅದು, ಅನೇಕ ಮುಖ, ಕಣ್ಣು, ಕೈ,, ಆಯುಧಗಳನ್ನು ಹೊಂದಿರುವ, ಎಲ್ಲಾ ಕಡೆ ಮುಖವುಳ್ಳ ಆದಿ ಅಂತ್ಯ ವಿಲ್ಲದ ಪ್ರಕಾಶಮಾನವಾದ ರೂಪ. ಆ ದಿವ್ಯ ರೂಪವನ್ನು ತೋರಿಸಿದನು.

ದಿವಿ ಸೂರ್ಯ ಸಹಸ್ರಸ್ಯ |

ಭವೇದ್ಯಗಪದುಸ್ಥಿತಾ ||

ಯದಿ ಭಾಃ ಸದೃಶೀ ಸಾ ಸ್ಯಾತ್ |

ಭಾಸಸ್ತಸ್ಯ ಮಹಾತ್ಮನಃ || (೧೧-೧೨)

 • ಆಕಾಶದಲ್ಲಿ ಸಾವಿರಾರು ಸೂರ್ಯರ ಬೆಳಕು ಒಮ್ಮೆಗೇ ಹೊರಹಮ್ಮಿದರೆ ಅದು ಆ ಮಹಾತ್ಮನ ಬೆಳಕಿಗೆ ಸಮನಾದೀತು !
 • (ಟಿ. ವಿಜ್ಞಾನಿ ಐನಸ್ಟೀನ್ ರವರು ಮೊದಲ ಅಣುಬಾಂಬು ಸ್ಪೋಟಗೊಂಡಾಗ ಈ ವಾಕ್ಯವನ್ನು ನೆನಪು ಮಾಡಿಕೊಂಡರೆಂದು ಹೇಳುತ್ತಾರೆ)
 • ಅರ್ಜುನನು ಬೆರಗಾಗಿ ಕೈಮುಗಿದು ಹೇಳಿದನು :
 • ಹೇ ವಿಶ್ವರೂಪ, ನಿನ್ನಲ್ಲಿ ಎಲ್ಲಾ ದೇವತೆಗಳನ್ನೂ, ಋಷಿಗಳನ್ನೂ, ಪ್ರಾಣಿಗಳನ್ನೂ, ಲೆಕ್ಕವಿಲ್ಲದಷ್ಟು ಮುಖ,ಕೈ, ಹೊಟ್ಟೆ,ಕಣ್ಣುಗಳನ್ನೂ ನೋಡುತ್ತಿದ್ದೇನೆ. ನಿನ್ನ ಆದಿ , ಮಧ್ಯ, ಅಂತ್ಯ ಗಳನ್ನು ಕಾಣೆನು., ಬೆಂಕಿಯಂತೆ, ಸೂರ್ಯನಂತೆ ಬೆಳಗುತ್ತಿರುವ ನಿನ್ನನ್ನು ನೋಡಲಾಗದಿದ್ದರೂ ನೋಡುತ್ತಿದ್ದೇನೆ.
 • (ಟಿ : ಎಲ್ಲಾ ಪ್ರಾಣಿಪಕ್ಷಿ, ಜೀವಿಗಳ ಆತ್ಮನೂ ಅವನೇ ಅವಲ್ಲದರ ತಲೆ,ಕೈಕಾಲುಗಳೂ ಅವನವೇ.)

ತ್ವಮಕ್ಷರಂ ಪರಮಂ ವೇದಿತವ್ಯಂ |

ತ್ವಮಸ್ಯ ವಿಶ್ವಸ್ಯಪರಂ ನಿದಾನಮ್ ||

ತ್ವಮವ್ಯಯಃ ಶಾಶ್ವತೋ ಧರ್ಮಗೋಪ್ತಾ |

ಸನಾತನಸ್ತ್ವಂ ಪುರುಷೋ ಮತೋ ಮೇ || (೧೧-೧೮)

 • ನೀನು ಅಕ್ಷರವು (ಅವಿನಾಶಿ), ಅರಿಯಬೇಕಾದ ಬ್ರಹ್ಮವು. ಸರ್ವಕ್ಕೂ ಆಶ್ರಯನು, ಅವ್ಯಯನು, ಧರ್ಮ ರಕ್ಷಕನು , ನೀನು ಸನಾತನನು -ಎಂದು ನನ್ನ ಅಭಿಪ್ರಾಯ. ನಿನ್ನಿಂದ ಈ ಜಗತ್ತೆಲ್ಲಾ ತುಂಬಿಹೋಗಿದೆ. ದೇವತೆಗಳೂ, ಋಷಿ-ಮುನಿಗಳೂ ನಿನ್ನನ್ನು ಹೊಗಳುತ್ತಿದ್ದಾರೆ , ಕಳವಳದಿಂದ ನೋಡುತ್ತಿದ್ದಾರೆ.

ಬೆಂಕಿಯೊಳಗೆ ಹೇಗೆ ದೀಪದ ಹುಳುಗಳು ಹೋಗುತ್ತಿರುವುವೋ, ಹಾಗೆ ಕೌರವರೂ, ಈ ಕುರುಕ್ಷೇತ್ರದ ಎಲ್ಲಾ ಯೋಧರೂ ಕೋರೆದಾಡೆಗಳಿಂದ ಕೂಡಿದ ನಿನ್ನ ಭಯಂಕರವಾದ ಬಾಯಿಯೊಳಗೆ ವೇಗವಾಗಿ ಹೋಗುತ್ತಿದ್ದಾರೆ.

 • ಕೃಷ್ಣಾ , ನಿನಗೆ ನಮಸ್ಕಾರ , ಇಷ್ಟು ಭಯಂಕರವಾದ ರೂಪವುಳ್ಳ ನೀನು ಯಾರು ? ದಯಮಾಡಿ ತಿಳಿಸು. ಎಂದು ಅರ್ಜುನನು ಹೇಳಿದನು.

ಭಗವಂತನು ಹೇಳಿದನು : ಈ ಲೋಕ ಕ್ಷಯಕಾರಕನಾದ ಕಾಲನು ನಾನು (ಎಂದನು). ನಿನ್ನ ಹೊರತಾಗಿ ಎಲ್ಲಾ ಯೋಧರೂ ಇಲ್ಲವಾಗುವರು. ಇವರೆಲ್ಲಾ ನನ್ನಿಂದಲೇ ಸತ್ತವರಾಗಿದ್ದಾರೆ. ನೀನು ನೆಪಕ್ಕಾಗಿ ನಿಲ್ಲು . ಏಳು ಯುದ್ಧಮಾಡು ನನ್ನಿಂದ ಹತರಾದ ಇವರನ್ನು ನೀನು ಕೊಲ್ಲು. ರಾಜ್ಯವನ್ನು ಅನುಭವಿಸು ಎಂದನು.

 • ಅರ್ಜುನನು , ನಿನ್ನನ್ನು ನೋಡಿ ಎಲ್ಲರೂ ಹೆದರಿ ಓಡುತ್ತಿದ್ದಾರೆ. ಇದು ಸರಿಯೇ ? ಎಂದನು.

ತ್ವಮಾದಿ ದೇವಃ ಪುರುಷಃ ಪುರಾಣಃ |

ತ್ವಮಸ್ಯ ವಿಶ್ವಸ್ಯ ಪರಂ ನಿಧಾನಮ್ ||

ವೇತ್ತಾಸಿ ವೇದ್ಯಂ ಚ ಪರಂ ಚ ಧಾಮ |

ತ್ವಯಾ ತತಂ ವಿಶ್ವಮನಂತರೂಪ || (೧೧-೩೮)

 • ನೀನು ಆದಿ ದೇವನು, ಪುರಾಣ ಪುರುಷನು, ಈ ವಿಶ್ವಕ್ಕೆ ಮುಖ್ಯ ಆಧಾರನು, ತಿಳಿಯುವವನು, ತಿಳಿಯಬೇಕಾದವನು , ಹೆಚ್ಚಿನವನು , ಅನೇಕ ರೂಪದವನು . ಹೀಗೆ ಭಗವಂತನನ್ನು ರ್ಜುನನು ಬಗೆಬಗೆಯಾಗಿ ಹೊಗಳಿ ನಮಸ್ಕರಿಸಿದನು. ಕೃಷ್ಣಾ ನಿನ್ನ ಈ ರೂಪವನ್ನು ನೋಡಿ ನಾನು ತಳಮಳಗೊಂಡಿರುವೆನು ನಿನ್ನ ಹಳೆಯ ಗೆಳೆತನದ ರೂಪವನ್ನು ತೋರಿಸು, ಎಂದನು . ಅರ್ಜುನನು, ಕೃಷ್ಣಾ, ನಾನು ನಿನ್ನನ್ನು ಬಂಧು,ಗೆಳೆಯ, ಎಂದು ತಿರಸ್ಕಾರದಿಂದ ಆಡಿದ ಮಾತುಗಳನ್ನೂ, ಹಾಸ್ಯದಿಂದ ಅವಮಾನ ಗೊಳಿಸಿದುದನ್ನೂ ಕ್ಷಮಿಸು. ನಾನು ನಿನ್ನ ಆಳವನ್ನು ಅಳೆಯಲಾಗದವನು, ಎಂದು ಬೇಡಿಕೊಂಡನು.
 • ಆಗ ಶ್ರೀಕೃಷ್ಣನು ಅರ್ಜುನನ್ನು ಕುರಿತು , ಈ ನನ್ನ ದಿವ್ಯವಾದ ಈಶ್ವರೀಯ ರೂಪವನ್ನು ನಿನ್ನ ಹೊರತು ವೇದಾಧ್ಯಯನ ಮಾಡಿದವರಿಗೂ, ದೇವತೆಗಳಿಗೂ, ನೋಡಲು ಸಾದ್ಯವಿಲ್ಲ, (ಅಥವಾ ಅವರು ಕಂಡಿದ್ದಿಲ್ಲ)- ಎಂದು ಹೇಳಿ ತನ್ನ ಮೊದಲ ರೂಪವನ್ನು ಹೊಂದಿದನು.

ಉಪಸಂಹಾರ :[ಬದಲಾಯಿಸಿ]


 • ಶ್ರೀಕೃಷ್ಣನು ಅರ್ಜುನನ್ನು ಕುರಿತು ತನ್ನ ನಿಜರೂಪವನ್ನು ಕಾಣುವ ಬಗೆಯನ್ನು ಹೇಳುತ್ತಾನೆ.
 • (ಟಿ :ಈಗ ತೋರಿಸಿರುವುದು ಲಯಕರ್ತ ಕಾಲ ನ ರೂಪ; ಅರ್ಜುನನು ವಿಶ್ವ್ದದಲ್ಲಿರುವ ಎಲ್ಲವನ್ನೂ ಈ ರೂಪದಲ್ಲಿ ಕಂಡಿದ್ದರಿಂದ ಅದನ್ನು ವಿಶ್ವರೂಪ ಎನ್ನುತ್ತಾರೆ.- ಭಗವಂತನ ನಿಜ ಸ್ವರೂಪ - ನಿರ್ಗುಣ ನಿರಾಕಾರ)
 • ಯಾವನು ನನಗೆ ಪ್ರೀತಿಯಾಗಲೆಂದು ಕರ್ಮದಲ್ಲಿ ತೊಡಗಿರುವನೋ ನನ್ನನ್ನೇ ಗತಿಯೆಂದು ತಿಳಿಯುವನೊ, ಸಂಗ ವರ್ಜಿತನಾಗಿರವನೊ ಅವನು ನನ್ನನ್ನು . ಪಡಯುತ್ತಾನೆ. ನನ್ನನ್ನು ತನ್ನ ಆತ್ಮವೆಂದು ಪ್ರೀತಿಯಿಂದ ತಿಳಿಯುವುದಕ್ಕೂ, ನನ್ನನ್ನು ಇದ್ದದ್ದು ಇದ್ದ ಹಾಗೆ ತಿಳಿಯುವುದಕ್ಕೂ ನನ್ನೊಳಗೆ ಸೇರುವುದಕ್ಕೂ ಆಗುತ್ತದೆ ಎಂದನು.
 • (ಇತಿ ಶ್ರೀ ಭಗವದ್ಗೀತಾಸೂಪನಿಷತ್ಸು ಬ್ರಹ್ಮವಿದ್ಯಾಯಾಂ ಯೋಗ ಶಾಸ್ತ್ರೇ ಶ್ರೀ ಕೃಷ್ಣಾರ್ಜುನ ಸಂವಾದೇ ವಿಶ್ವರೂಪ ದರ್ಶನ ಯೋಗೋ ನಾಮ ಏಕಾದಶೋsಧ್ಯಾಯಃ ||

ಭಕ್ತಿಯೋಗ - ಹನ್ನೆರಡನೆಯ ಅಧ್ಯಾಯ :[ಬದಲಾಯಿಸಿ]


ಭಕ್ತಿಯೋಗ -೨೦/೪೮೯

 • ಅರ್ಜುನ ಹೇಳಿದನು (ಹೇಳಿದ್ದು - ಪ್ರಶ್ನೆ)  : ಹೀಗೆ ನಿನ್ನ ಸಾಕಾರ ರೂಪವಾದ ವಿಶ್ವರೂಪವನ್ನು ಸತತ ನೆನೆಯುತ್ತಾ ಭಕ್ತಿಯಿಂದ ಯಾವ ಭಕ್ತರು, ಉಪಾಸನೆ ಮಾಡುತ್ತಾರೋ ಮತ್ತು ಯಾರು ಕಣ್ಣಿಗೆ ಕಾಣದ ನಿರ್ಗುಣ ರೂಪವನ್ನು ಧ್ಯಾನಮಾಡುತ್ತಾರೋ , ಅವರಲ್ಲಿ ಯೋಗವನ್ನು ಯಾರು ಚೆನ್ನಾಗಿ ತಿಳಿದವರು ?

ಭಕ್ತಿಯೋಗ ಸುಲಭ -ಎಲ್ಲಕ್ಕಿಂತ ಕರ್ಮಯೋಗ ಮೇಲು :[ಬದಲಾಯಿಸಿ]

 • ಭಗವಂತ ಹೇಳಿದನು :
 • ಯಾರು ನನ್ನಲ್ಲಿ ಹೆಚ್ಚು ಪ್ರೀತಿಯನ್ನಿಟ್ಟು ನನ್ನ ವಿಶ್ವರೂಪವನ್ನು ಧ್ಯಾನಿಸುತ್ತಾ ಉಪಾಸನೆ ಮಾಡುವರೋ ಅವರು ಹೆಚ್ಚಿನ ಯೋಗಿಗಗಳು. ಯಾರು ಅವ್ಯಕ್ತವಾದ ಚಿಂತನೆಗೆ ಸಿಲುಕದ , ಅಚಲವಾದ ಕೂಟಸ್ಥವಾದ ಅಕ್ಷರವನ್ನು ಎಂದರೆ ನಿರ್ಗುಣ, ನಿರಾಕಾರವನ್ನು ಧ್ಯಾನಿಸುತ್ತಾರೋ ಅವರೂ ನನ್ನನ್ನೇ ಪಡೆಯುತ್ತಾರೆ. ನಿರ್ಗುಣದಲ್ಲಿ ಮನಸ್ಸಿಟ್ಟು ಧ್ಯಾನ ಮಾಡುವುದು ಆಯಾಸ -ಕಷ್ಟದ ಯೋಗ ಕ್ರಮ. ಸಾಮಾನ್ಯರಿಗೆ ,ದೇಹಾಭಿಮಾನ ಉಳ್ಳವರಿಗೆ ಆಗದು. ವಿವೇಕ ವೈರಾಗ್ಯಗಳಿಂದ ಅದನ್ನು ಅಭ್ಯಾ ಸಮಾಡಬೇಕು. ಅದು ಕಷ್ಟವಾದರೆ, ನನ್ನ (ಈಶ್ವರ)ಪ್ರೀತ್ಯರ್ಥವಾಗಿ ಕರ್ಮಗಳನ್ನು ಮಾಡು. ಅದೂ ಕಷ್ಟವಾದರೆ. ಕರ್ಮಗಳ ಫಲಗಳ ಬಯಕೆಗಳನ್ನೆಲ್ಲಾ ಬಿಡು.
 • ಅಭ್ಯಾಸಕ್ಕಿಂತ ಜ್ಞಾನವು ಮೇಲು, ಜ್ಞಾನಕ್ಕಿಂತ ಧ್ಯಾನ ಹೆಚ್ಚು , ಧ್ಯಾನಕ್ಕಿಂತ ಕರ್ಮಫಲಗಳನ್ನು ಬಿಡುವುದು ಶ್ರೇಷ್ಠ , ಫಲಗಳನ್ನು ಬಿಟ್ಟವರಿಗೆ ಶಾಂತಿ (ಬ್ರಹ್ಮಜ್ಞಾನ) ಸುಲಭವಾಗಿ ಸಿಗುವುದು

ಉಪಸಂಹಾರ - ಭಕ್ತನ ಲಕ್ಷಣ :[ಬದಲಾಯಿಸಿ]

ಭಗವಂತನಿಗೆ ಪ್ರಿಯರಾದವರು (ಅಕ್ಷರೋಪಾಸಕರು):

 • ಯಾರಲ್ಲೂ ಹಗೆತನವಿಲ್ಲದ, ಸರ್ವಜೀವಿಗಳಲ್ಲಿಯೂ ಸ್ನೇಹ-ಕರುಣೆ ಉಳ್ಳವನು , ತನ್ನದೆಂಬ ಅಭಿಮಾನವಿಲ್ಲದೆ, ಅಹಂಕಾರವಿಲ್ಲದೆ , ಕ್ಷಮಾಶೀಲನಾಗಿರವವನು , ಆತ್ಮ ತತ್ವ ತಿಳಿದವನು, ನಿಶ್ಚಯ ಬುದ್ಧಿಯವನು , ಮನಸ್ಸನ್ನು ನನಗೆ (ಭಗವಂತನಿಗೆ) ಅರ್ಪಿಸಿದ ಭಕ್ತನು ನನಗೆ ಪ್ರಿಯನು.

ಯಾರಿಂದ ಜನರು ತಳಮಳ ಹೊಂದುವುದಿಲ್ಲವೋ , ಯಾವನು ಸ್ವತಃ ತಳಮಳವಿಲ್ಲದವನೋ, ಯಾವನು ಹರ್ಷ, ಸಿಟ್ಟು, ತಳಮಳ ಇಲ್ಲದವನೋ ಅವನು ನನಗೆ ಪ್ರಿಯನು.

 • ಬಯಕೆ ಇಲ್ಲದವನು, ಶುಚಿಯಾಗಿರುವವನು, ಸಮರ್ಥನು, ಪಕ್ಷಪಾತವಿಲ್ಲದವನು, ತನ್ನ ಲಾಭಕ್ಕಾಗಿ ಮಾತ್ರ ಉದ್ಯೋಗ ಮಾಡದವನು, ನನಗೆ ಪ್ರಿಯನು.

ಸಮ ಶತ್ರೌ ಚ ಮಿತ್ರೇ ಚ | ತಥಾ ಮಾನಾಪಮಾನಯೋಃ ||

ಶೀತೋಷ್ಣ ಸುಖ ದುಃಖೇಷು | ಸಮಃ ಸಂಗ ವಿವರ್ಜಿತಃ || (೧೨ - ೧೮)

ತುಲ್ಯ ನಿಂದಾಸ್ತುತಿರ್ಮೌನೀ | ಸಂತುಷ್ಟೋ ಯೇನ ಕೇನಚಿತ್ ||

ಅನಿಕೇತಃ ಸ್ಥಿರಮತಿಃ | ಭಕ್ತಿಮಾನ್ ಮೇ ಪ್ರಿಯೋ ನರಾಃ || (೧೨ - ೧೯)

 • ಶತ್ರು ಮಿತ್ರರಲ್ಲಿ ಸಮಭಾವ , ಅದೇ ರೀತಿ ಮಾನ ಅಪಮಾನದಲ್ಲಿ , ಸುಖ ದಃಖದಲ್ಲಿ , ಶೀತ ಉಷ್ಣದಲ್ಲಿ ಸಮಭಾವ ; ವಿಷಯ ಸುಖದ ಆಸಕ್ತಿ ಇಲ್ಲದವ ; ಸ್ತುತಿ ನಿಂದೆ ಮೀರಿದವನು, ಕಡಿಮೆ ಮಾತಿನವನು , ಅಲ್ಪ ತೃಪ್ತನು, ನೆಲೆಗಾಗಿ ಹಂಬಲಿಸದವನು, ಸ್ಥಿರ ಬುದ್ಧಿಯವನು ನನಗೆ ಪ್ರಿಯನು.

ಯಾರು ಧರ್ಮ ಸಂಮತವಾದ ಇವುಗಳನ್ನು ಮೈಗೂಡಿಸಿಕೊಂಡಿರುವನೋ , ನನ್ನಲ್ಲಿ ವಿಶ್ವಾಸವಿಟ್ಟು ನನ್ನನ್ನೇ ಗತಿಯೆಂದು ತಿಳಿದಿರುವ ಭಕ್ತರು ನನಗೆ ಪ್ರಿಯರು. (ಹೀಗೆ ಭಗವಂತ ಹೇಳಿದನು)

(ಇತಿ ಶ್ರೀ ಭಗವದ್ಗೀತಾಸೂಪನಿಷತ್ಸು ಬ್ರಹ್ಮವಿದ್ಯಾಯಾಂ ಯೋಗ ಶಾಸ್ತ್ರೇ ಶ್ರೀ ಕೃಷ್ಣಾರ್ಜುನ ಸಂವಾದೇ ಭಕ್ತಿ ಯೋಗೋ ನಾಮ ದ್ವಾದಶೋsಧ್ಯಾಯಃ ||

ಕ್ಷೇತ್ರ ಕ್ಷೇತ್ರಜ್ಞ ಯೋಗ - ಹದಿಮೂರನೇ ಅಧ್ಯಾಯ :[ಬದಲಾಯಿಸಿ]


ಕ್ಷೇತ್ರ ಕ್ಷೇತ್ರಜ್ಞ ಯೋಗ - ೩೪ / ೫೨೩

 • ಭಗವಂತನು ಮುಂದುವರಿದು ಪ್ರಕೃತಿಯ ಅರ್ಥವನ್ನು ವಿವರಿಸಲು , ಕ್ಷೇತ್ರ ಮತ್ತು ಕ್ಷೇತ್ರಜ್ಞನ ಎಂದರೆ ಶರೀರ (ಹೊಲ) ಮತ್ತು ಅದರ ತಿಳಿವುಗಾರನ (ಈಶ್ವರನ-ಪರಮಾತ್ಮನ)ವಿಷಯವನ್ನು ಕುರಿತು ಹೇಳುತ್ತಾನೆ.

ಕ್ಷೇತ್ರ (ಹೊಲ)ದ ವಿವರಣೆ :[ಬದಲಾಯಿಸಿ]


 • ಶ್ರೀಕೃಷ್ಣನು ಕ್ಷೇತ್ರ (ಹೊಲ)ವನ್ನು ವಿವರಿಸುತ್ತಾನೆ : ಪಂಚ ಭೂತಗಳು ; ನಾನು ಎಂದು ತೋರುವ ಅಹಂಕಾರ ತತ್ವ ; ಬುದ್ಧಿ, ಅವ್ಯಕ್ತವಾದ ಮಾಯಾ ಶಕ್ತಿ (ಮೂಲ ಪ್ರಕೃತಿ) ; ಐದು ಜ್ಞಾನೇಂದ್ರಿಯಗಳು ; ಐದು ಕರ್ಮೇಂದ್ರಿಯಗಳು ; ಮನಸ್ಸು ; ಐದು ತನ್ಮಾತ್ರೆಗಳು (ಶಬ್ದ, ಸ್ಪರ್ಶ, ರೂಪ, ರಸ, ಗಂಧ) ಒಟ್ಟು ೨೪ ಪ್ರಕೃತಿಯ ತತ್ವಗಳು. ಮತ್ತು ಅವಕ್ಕೆ ಸಂಬಂಧಪಟ್ಟ ಗುಣಗಳು - ಇಚ್ಚೆ (ಬಯಕೆ), ದ್ವೇಷ, ಸುಖ, ದುಃಖ, ದೇಹೇಂದ್ರಿಯಗಳ ಗುಂಪು, ಮನಸ್ಸಿನ ವೃತ್ತಿ, ಇವುಗಳನ್ನು ಬಿಗಿಹಿಡಿಯುವ ಪ್ರಯತ್ನ , ಇವುಗಳೆಲ್ಲಾ ಕ್ಷೇತ್ರ (ಹೊಲ ). ಸ್ಥೂಲ, ಸೂಕ್ಷ್ಮ , ಕಾರಣ ಶರೀರಗಳು ಮತ್ತು ಅದಕ್ಕೆ ಸಂಬಂಧಪಟ್ಟ ವಾಸನಾ ವಿಶೇಷಗಳು. ಇವುಗಳು ಕ್ಷೇತ್ರವೆಂದು ಕರೆಯಲ್ಪಡುತ್ತವೆ.

ಕ್ಷೇತ್ರಜ್ಞ ನನ್ನು ಅರಿಯಲು ಸಾಧನವಾದ ಗೂಣಗಳು :[ಬದಲಾಯಿಸಿ]


 • ಹೆಮ್ಮೆ (ಜಂಬ)ಇಲ್ಲದಿರುವುದು (ಅಮಾನಿತ್ವ); ಧರ್ಮಸ್ವಭಾವವನ್ನು ಆಡಂಬರಕ್ಕಾಗಿ ತೋರಿಸಿಕೊಳ್ಳದಿರುವುದು (ಅದಂಭಿತ್ವ) ; ಪೀಡಿಸದಿರುವುದು(ಅಹಿಂಸಾ) ; ಸಮಾಧಾನ (ಕ್ಷಾಂತಿ); ಸರಳತೆ (ಕ್ಷಾಂತಿ) ; ಸೇವೆ (ಆರ್ಜವ) ; ಶುಚಿ ; ಸತತ ಪ್ರಯತ್ನ (ಸ್ಥೈರ್ಯ) ; ಮನಸ್ಸನ್ನು ಬಿಗಿಹಿಡಿಯುವುದು (ಆತ್ಮ ನಿಗ್ರಹ) ; ಪ್ರಾಪಂಚಿಕ ಸುಖದ ಬಗ್ಗೆ ಅಲಕ್ಷ್ಯ (ವೈರಾಗ್ಯ) ; ನಿಗರ್ವ ; ಹುಟ್ಟು, ಸಾವು, ಮುಪ್ಪು, ರೋಗ, ದುಃಖ ಇವು ದೋಷದಿಂದ ಕೂಡಿದವುಗಳೆಂದು ತಿಳಿಯುವುದು ; ಸಾಂಸಾರಿಕ ವ್ಯವಹಾರದಲ್ಲಿ ಆಂತರ‍್ಯದಲ್ಲಿ ವೈರಾಗ್ಯ ; ಇಷ್ಟವಾದದ್ದು - ಇಷ್ಟವಾಗದ್ದು ಬಂದರೂ ಸಮ ಚಿತ್ತದಿಂದ ಇರುವುದು ; ಏಕಾಂತದಲ್ಲಿ ಸದಾ ಭಗವಂತನನ್ನು ಧ್ಯಾನಿಸುವುದು ; ಆತ್ಮ ವಿಚಾರ, ಮೋಕ್ಷ ವಿಚಾರ ಮಾಡುತ್ತಿರುವುದು ; ಇವು ಜ್ಞಾನ ಸಾಧನಗಳು.

ಕ್ಷೇತ್ರಜ್ಞನ -(ಈಶ್ವರನ) -ಪರಬ್ರಹ್ಮದ ವಿಚಾರ :[ಬದಲಾಯಿಸಿ]

 • ಯಾವುದನ್ನು ತಿಳಿದರೆ ಮೋಕ್ಷ ವಾಗುವುದೋ ಅದಕ್ಕೆ ಹುಟ್ಟು ಇಲ್ಲ (ಅನಾದಿ) ; ಇದೆ ಎನ್ನುವಂತಿಲ್ಲ- ಇಲ್ಲ ಎನ್ನುವಂತಿಲ್ಲ ; ಅದಕ್ಕೆ ಎಲ್ಲಾ ಕಡೆ ಕೈ, ಕಾಲು , ತಲೆ, ಬಾಯಿ, ಕಣ್ಣು , ಕಿವಿ ; ಇದು ಜಗತ್ತನ್ನೆಲ್ಲಾ ಆವರಿಸಿಕೊಂಡಿದೆ. ಇದಕ್ಕೆ ಗುಣಗಳಿದ್ದಂತೆ ತೋರುವುದು- ಆದರೆ ಅವಿಲ್ಲ ; ಗುಣಗಳಲ್ಲಿ ಅದಿಲ್ಲ-ಆದರೆ ಅದರ ಫಲವನ್ನು ಉಣ್ಣುವುದು ; ಇದು ಜಗತ್ತನ್ನೆಲ್ಲಾ ಮುಸುಕಿರುವುದು. ಇದು ಎಲ್ಲದಕ್ಕೂ ಆಧಾರ ; ಇದಕ್ಕೆ ಇಂದ್ರಿಯಗಳಿಲ್ಲ-ಆದರೆ ಅರಿವು - ಜ್ಞಾನವೇ ಅದು ; ಚರ ಅಚರಗಳಲ್ಲಿ, ಸರ್ವ ಪ್ರಾಣಿಗಳ ಒಳಗೂ ಹೊರಗೂ ಆವರಿಸಿಕೊಂಡಿದೆ. ಇದು ಒಂದೇ ಅಗಿದ್ದು ಬೇರೆ ಬೇರೆ ಆಗಿರುವಂತೆ ತೋರುವುದು ; ಜಗತ್ತಿಗೆ ಆಧಾರ - ಜಗತ್ತನ್ನು ನುಂಗುವುದು, ಹೊರ ಹಾಕುವುದು ; ಅದು ಬೆಳಕು - ಅದು ಜ್ಞಾನವು ; ಇದೇ ಅರಿಯಬೇಕಾದುದು.
 • ಭಕ್ತನು ಇದನ್ನು ಅರಿತರೆ ನನ್ನ (ಭಗವಂತನ) ಸ್ವರೂಪವನ್ನು ಪಡೆಯುವುದಕ್ಕೆ (ಮೋಕ್ಷಕ್ಕೆ) ತಕ್ಕವನು ಆಗುತ್ತಾನೆ.

ಪ್ರಕೃತಿ - ಪುರುಷರಿಂದ, ಜಗತ್ತು -ಜೀವ ಉತ್ಪತ್ತಿ :[ಬದಲಾಯಿಸಿ]

 • ಪ್ರಕೃತಿ (ಕ್ಷೇತ್ರ - ಮಾಯೆ) ಕ್ಷೇತ್ರಜ್ಞ (ಪರುಷ) ಇವೆರಡೂ ಅನಾದಿ ; ಸತ್ವ,ರಜ,ತಮ, ಈ ತ್ರಿಗುಣಗಳು ಮಾಯೆಯಿಂದ ಹುಟ್ಟಿದವುಗಳು. ದೇಹ ಇಂದ್ರಿಯಗಳಿಗೆ ಮಾಯೆ ಕಾರಣ ; ಸುಖ ದುಃಖ ಕ್ಕೆ ಜೀವ ಭಾವ ಕಾರಣ ; ಪುರುಷನು ಕ್ಷೇತ್ರವನ್ನು ತಾನೆಂದು ತಿಳಿದು ಸುಖ-ದುಃಖ ಅನುಭವಿಸುತ್ತಾನೆ ; ಈ ಒಳಗಿನ ಅತ್ಮನು, ಚೈತನ್ಯವನ್ನು ಕೊಡುವವನು, (ಭರ್ತಾ ಭೋಕ್ತಾ ಮಹೇಶ್ವರಃ) ಅನುಭವಿಸುವವನು, ಒಡೆಯನು, ನೋಡುವವನು. ಈ ಪ್ರಕೃತಿ ಪುರುಷರನ್ನು ಹೀಗೆ ತಿಳಿದವನು ಮತ್ತೆ ಹುಟ್ಟುವುದಿಲ್ಲ (ಮೋಕ್ಷ ಪ್ರದನು). ಈ ಆತ್ಮ ತತ್ವವನ್ನು ಧ್ಯಾನದಿಂದ, ವಿಚಾರದಿಂದ, ಕರ್ಮಯೋಗದಿಂದ, ಅಥವಾ ಉಪಾಸನೆಯಿಂದ, ಅರಿತು ಮೋಕ್ಷ ಹೊಂದುವರು.

ಉಪಸಂಹಾರ :[ಬದಲಾಯಿಸಿ]

 • ಎಲ್ಲಾ ಪ್ರಾಣಿಗಳಲ್ಲಿ ಯಾವನು ಒಂದೇ ಸಮನಾಗಿರುವ, ನಾಶವಾಗದ, ಆತ್ಮನನ್ನು ನೋಡುತ್ತಾನೋ ಅವನು ಸತ್ಯವನ್ನು ನೋಡುತ್ತಾನೆ ; ಹೊರಗಿನ ಕರ್ಮಗಳು,ಆತ್ಮನಿಗೆ ಅಂಟಿಲ್ಲ ವೆಂದು ಅರಿಯುವನು .

ಯದಾ ಭೂತ ಪೃಥಗ್ಭಾವಂ | ಏಕಸ್ಥಮನುಪಶ್ಯತಿ||

ತತ ಏವ ಚ ವಿಸ್ತಾರಂ | ಬ್ರಹ್ಮ ಸಂಪದ್ಯತೇ ತದಾ|| (೧೩ - ೩೦)

 • ಬಿಡಿ ಬಿಡಿ ಯಾಗಿರುವ ವಸ್ತು -ಜೀವಿಗಳನ್ನು ಒಬ್ಬ ಆತ್ಮನಲ್ಲಿಯೇ ನೋಡುವವನು, ಹಾಗೆಯೇ ಒಬ್ಬನೇಆತ್ಮನಿಂದ ಈ ಜಗತ್ತು ಹೊರಬಿದ್ದಿರುವುದನ್ನು ಕಾಣುವನೊ, ಅವನು ಪರಬ್ರಹ್ಮ ರೂಪವನ್ನು ಪಡೆಯುತ್ತಾನೆ.
 • ಅನಾದಿಯಾದ ಈ ಆತ್ಮನು ನಾಶವಿಲ್ಲದವನು ; ಶರೀರದಲ್ಲಿದ್ದರೂ ಯಾವುದೇ ಅಂಟಿಲ್ಲದವನು. ಇವನು ಎಲ್ಲೆಡೆ ವ್ಯಾಪಿಸಿದ್ದರೂ, ಇಡೀ ದೇಹವನ್ನು ಅವರಿಸಿದ್ದರೂ, ಯಾವ ಸೋಂಕನ್ನೂ ಪಡೆಯುವುದಿಲ್ಲ. ಹೊಲ(ಕ್ಷೇತ್ರ) ಎಂಬ ಈ ಶರೀವನ್ನೂ ಇಂದ್ರಿಯಗಳನ್ನೂ ಈ ಪುರುಷನು ಬೆಳಗುವನು(ಶಕ್ತಿ ಕೊಡುವನು).
 • ಮಾಯಾ ಶಕ್ತಿಯನ್ನೂ ಕ್ಷೇತ್ರಜ್ಞ ನಾದ ಆತ್ಮನ ಅಂತರವನ್ನೂ , ಮತ್ತು ಮಾಯಾಶಕ್ತಿಯು (ಜೀವನಿಂದ) ಕಳಚಿಹೋಗುವುದನ್ನೂ ಯಾರು ಕಾಣುತ್ತಾರೋ, ಅವರು ಪರಬ್ರಹ್ಮ ಸ್ವರೂಪವನ್ನು ಪಡೆಯುತ್ತಾರೆ.
 • (ಇತಿ ಶ್ರೀ ಭಗವದ್ಗೀತಾಸೂಪನಿಷತ್ಸು ಬ್ರಹ್ಮವಿದ್ಯಾಯಾಂ ಯೋಗ ಶಾಸ್ತ್ರೇ ಶ್ರೀ ಕೃಷ್ಣಾರ್ಜುನ ಸಂವಾದೇ ಕ್ಷೇತ್ರ ಕ್ಷೇತ್ರಜ್ಞ ಯೋಗೋ ನಾಮ ತ್ರಯೋದಶೋsಧ್ಯಾಯಃ ||

ಗುಣತ್ರಯ ವಿಭಾಗ ಯೋಗ - ಹದಿನಾಲ್ಕನೆಯ ಅಧ್ಯಾಯ[ಬದಲಾಯಿಸಿ]

 • ಗುಣತ್ರಯ ವಿಭಾಗ ಯೋಗ - ೨೭ / ೫೫೦
 • ಭಗವಂತನು ಮುಂದುವರಿದು, ಹುಟ್ಟು ಸಾವು ಇವುಗಳ ಕಟ್ಟಿನಿಂದ ಬಿಡುಗಡೆ ಹೊಂದುವ ಜ್ಞಾನವನ್ನು ಇನ್ನಷ್ಟು ಹೇಳುತ್ತೇನೆ ಎಂದನು

(ಟಿ. ಇದನ್ನು ವಿವರಿಸಲು ಪ್ರಾಣಿಗಳ ಜನ್ಮ ವಿಧಾನವನ್ನು ರೂಪಕವಾಗಿ ಬಳಸಿಕೊಂಡಿದೆ)

ಮಾಯಾಶಕ್ತಿ ಯ ತ್ರಿಗುಣಗಳು ಮತ್ತು ಪರಬ್ರಹ್ಮ[ಬದಲಾಯಿಸಿ]

 • ಭಗವಂತನು, ಅರ್ಜುನಾ :
 • ತ್ರಿಗುಣಗಳಿಂದ ಕೂಡಿದ ಪ್ರಕೃತಿಯು (ಮಾಯಾ ಶಕ್ತಿಯು - ಕಾರ್ಯಬ್ರಹ್ಮವು- ಮಹತ್ತು -ಹಿರಣ್ಯಗರ್ಭ) ಯೋನಿಯು ; ಅದರಲ್ಲಿ ನಾನು(ಭಗವಂತನು) ಹುಟ್ಟುವುದಕ್ಕೆ (ಜಗತ್ ಸೃಷ್ಟಿಗೆ) ಬೇಕಾದ ಬೀಜವನ್ನು ಹಾಕುತ್ತೇನೆ. ಅದರಿಂದ ಎಲ್ಲವೂ ಹುಟ್ಟುತ್ತದೆ. ಎಲ್ಲಾ ಉತ್ಪತ್ತಿ ಸ್ಥಾನವು ಮಾಯಾಶಕ್ತಿ (ಸೃಷ್ಟಿಕರ್ತ-ಬ್ರಹ್ಮ) -ತಾಯಿ ; ನಾನು (ಚೈತನ್ಯ ) ತಂದೆ.
 • ಮಾಯಾಶಕ್ತಿಯಿಂದ ಹುಟ್ಟಿದವು- ಸತ್ವ, ರಜ,ತಮ ಈ ಮೂರು ಗುಣಗಳು.. ಸತ್ವವು ಬೆಳಕಿನ, ಸುಖದ, ವಿಚಾರದ ರೂಪ ; ರಜೋಗುಣವು ಪ್ರೀತಿ,ಬಯಕೆ ಅಹಂಕಾರದ ಕ್ರಿಯಾಶೀಲ, ರೂಪ ; ತಮವು ಅಜ್ಞಾನ, ತಪ್ಪು ತಿಳುವಲಿಕೆ, ಆಲಸ್ಯದ ತಪ್ಪು ಮಾಡುವ, ರೂಪ. ಅವು ತಮ್ಮ ಸ್ವಭಾವದಿಂದ ಆತ್ಮನನ್ನು ಕಟ್ಟಿಹಾಕುತ್ತವೆ. ಎಲ್ಲರಲ್ಲಿಯೂ ಇವು ಮೂರೂ ಇದ್ದರೂ ಉಳಿದ ಎರಡು ಗುಣಗಳನ್ನು ಹಿಮ್ಮೆಟ್ಟಿಸಿ ಒಂದು ಗುಣ ಎದ್ದು ಕಾಣುವುದು. ಸತ್ವ ಗುಣದವನಿಗೆ ತೇಜಸ್ಸು ಜ್ಞಾನ , ರಜೋಗುಣದವನಿಗೆ ಅತಿಬಯಕೆ, ಕ್ರಿಯಾಶೀಲತೆ , ತಮೋಗುಣದವನಿಗೆ ಅವಿವೇಕ, ಆಲಸ್ಯ ಇವು ಹೆಚ್ಚು.

ಮರಣಹೊಂದಿದ , ಸತ್ವ ಗುಣದವನು ಉತ್ತಮ ಲೋಕ, ಅಥವಾ ಉತ್ತಮ ಜನ್ಮ ; ರಜೋ ಗುಣದವನು ಮದ್ಯಮ ತರದ ಪುನರ್ಜನ್ಮ , ತಮೋ ಗುಣದವನು ಕೆಳಮಟ್ಟದ ಜನ್ಮವನ್ನು ಪಡೆತುತ್ತಾನೆ. -ಎಂದನು

ಗುಣ ತ್ರಯವನ್ನು ದಾಟಿ ಮೋಕ್ಷ ಪಡೆಯುವುದು[ಬದಲಾಯಿಸಿ]

 • ಯಾರು ಈ ಗುಣಗಳೇ ಕರ್ತರು ಎಂದು ಅರಿತು, ಆತ್ಮನು ಬೇರೆ ಅವನು ಕರ್ತನಲ್ಲ ಎಂದು ತಿಳಿದವನು ಜ್ಞಾನಿಯಾಗಿ ನನ್ನನ್ನು (ಭಗವಂತನನ್ನು ) ಸೇರುತ್ತಾನೆ.

ಉಪಸಂಹಾರ[ಬದಲಾಯಿಸಿ]


 • ಅರ್ಜುನನು ಹೇಳಿದನು (ಕೇಳಿದನು) :
 • ಮೂರೂ ಗುಣಗಳನ್ನು ದಾಟುವುದು ಹೇಗೆ ? ಹಾಗೆ ದಾಟಿದವನ ಗುಣ ಲಕ್ಷಣಗಳು ಹೇಗಿರುತ್ತವೆ ?

ಭಗವಂತನು ಹೇಳಿದನು :

 • (ಗುಣಗಳ ಪ್ರಭಾವಕ್ಕೆ ಸಿಲುಕದವನು) ಕರ್ಮದಲ್ಲಿ ತೊಡಗಿರುವುದಕ್ಕೂ ಅಥವಾ ಬಿಡುವುದಕ್ಕೂ ಅವನಿಗೆ ಬೇಸರವಿಲ್ಲ. ಸುಖ-ದುಃಖ, ಮಾನ-ಅಪಮಾನದಲ್ಲಿ ಒಂದೇ ರೀತಿಯಾಗಿರವನು. ವಿವೇಕಿ, ತನ್ನ ಇಂದ್ರಿಯ ಸುಖಕ್ಕಾಗಿ ಕರ್ಮದಲ್ಲಿ ತೊಡಗುವುದಿಲ್ಲ. ಎಲ್ಲರಲ್ಲೂ ಸಮಭಾವ ಹೊಂದಿರುವನು. ಭಕ್ತಿಯಿಂದ ನನ್ನನ್ನು ಸೇವಿಸುವವನು ಗುಣಗಳನ್ನು ದಾಟಿ ಬ್ರಹ್ಮವನ್ನು ಪಡೆಯಲು ಯೋಗ್ಯನು. ಅವನು ನಾಶವಿಲ್ಲದ ಆನಂದ ರೂಪವಾದ ಸಗುಣ ಬ್ರಹ್ಮ ವನ್ನು ಸೇರುವನು .
 • (ಇತಿ ಶ್ರೀ ಭಗವದ್ಗೀತಾಸೂಪನಿಷತ್ಸು ಬ್ರಹ್ಮವಿದ್ಯಾಯಾಂ ಯೋಗ ಶಾಸ್ತ್ರೇ ಶ್ರೀ ಕೃಷ್ಣಾರ್ಜುನ ಸಂವಾದೇ ಗುಣತ್ರಯ ವಿಭಾಗ ಯೋಗೋ ನಾಮ ಚತುರ್ದಶೋsಧ್ಯಾಯಃ ||

ಪುರುಷೋತ್ತಮ ಯೋಗ - ಹದಿನೈದನೆಯ ಅಧ್ಯಾಯ[ಬದಲಾಯಿಸಿ]


:

ಪುರುಷೋತ್ತಮ ಯೋಗ - ೨೦/೫೭೦

ಸಂಸಾರ ಮತ್ತು ಸೃಷ್ಟಿಕರ್ತ[ಬದಲಾಯಿಸಿ]


 • ಭಗವಂತನು ಮುಂದುವರೆದು ಅವನ (ಭಗವಂತನ)ಹಿರಿಮೆ ಯನ್ನು ವಿವರಿಸುತ್ತಾನೆ :
 • [ಟಿಪ್ಪಣಿ : ಇದನ್ನು ವಿವರಿಸಲು , ಸಂಸಾರಕ್ಕೆ (ಪ್ರಾಪಂಚಿಕ ಜೀವನ) ತಲೆ-ಕೆಳಗಾದ, ಅರಳಿ ಮರದ (ಅಶ್ವತ್ಥ ದ) ರೂಪಕವನ್ನು ಉಪಯೋಗಿಸುತ್ತಾನೆ.]
 • ಇದರ ಪ್ರಸಿದ್ಧ ಶ್ಲೋಕ :
 • ಊರ್ದ್ವ ಮೂಲಮಧಃ ಶಾಖಂ | ಅಶ್ವತ್ಥಂ ಪ್ರಾಹುರವ್ಯಯಂ ||
 • ಛಂದಾಂಸಿ ಯಸ್ಯ ಪರ್ಣಾನಿ | ಯಸ್ತಂ ವೇದ ಸ ವೇದವಿತ್ ||
 • ಸಂಸಾರವು (ಸಂಸಾರಿಕ ಜೀವನ-ಜಗತ್ತು) ಒಂದು ಅರಳಿ ಮರ (ಸೃಷ್ಟಿಗೆ ಕಾರಣನಾದ ಸಗುಣ ಬ್ರಹ್ಮ ವೇ ಅದು) ; ಈ ಮರದ ಬೇರು ಮೇಲೆ ಇದೆ. ಕೊಂಬೆಗಳು (ಜೀವರು) ಕೆಳಗೆ ಇವೆ. ಅದರ ಎಲೆಗಳು (ವೇದದ ಕರ್ಮ ಪರ ವಾಕ್ಯಗಳು). ಆತ್ಮನನ್ನು ಮರೆಮಾಡಿವೆ. ಅವು ನಾಶವಿಲ್ಲದಂತೆ ಕಾಣವುವು. ಇದರ ರಹಸ್ಯವನ್ನು ತಿಳಿದವನು ವೇದಗಳನ್ನು ತಿಳಿದವನು.
 • ಅವು ಮೂರು ಗುಣಗಳಿಂದ ಬೆಳೆದುಕೊಂಡಿದೆ. ಪಾಪ ಪ್ಮಣ್ಯಗಳ ಕರ್ಮಗಳನ್ನು ಅಂಟಿಸುವ ಒಳ ಬೇರುಗಳು ಮೇಲಕ್ಕೂ ಕೆಳಕ್ಕೂ ಹರಡಿಕೊಂಡಿದೆ. ವಿಷಯ (ಸುಖದ ಬಯಕೆ) ಗಳೆ ಅದರ ಚಿಗುರುಗಳು.
 • ಇದು ಸಂಸಾರದಲ್ಲಿರುವಾಗ ತಿಳಿಯುವುದಿಲ್ಲ. ಇದು ಆದಿ ಅಂತ್ಯವಿಲ್ಲದ್ದು. ಇದನ್ನು ವೈರಾಗ್ಯವೆಂಬ ಶಸ್ತ್ರದಿಂದ ಕತ್ತರಿಸಬೇಕು.

ಭಗವಂತನ ಮಹಿಮೆ[ಬದಲಾಯಿಸಿ]

 • ಸೃಷ್ಟಿಗಿಂತ ಮೊದಲಿನದಾದ ಆಪರಬ್ರಹ್ಮವನ್ನು ಹುಡುಕಬೇಕು. ಅಧ್ಯಾತ್ಮ ದಲ್ಲಿ ನಿರತರೂ, ಬಯಕೆ ಬಿಟ್ಟವರೂ, ಸುಖ ದುಃಖದಿಂದ ವಿಮುಕ್ತರೂ ನಾಶವಿಲ್ಲದ ಆ ಮೇಲಿನ ಬ್ರಹ್ಮ ಪದವಿಯನ್ನು ಪಡೆಯುತ್ತಾರೆ. ಅದು ಸೂರ್ಯ ಚಂದ್ರರ ಬೆಳಕಿಗಿಂತ ಮೇಲಿನದು ಅದು ನನ್ನ (ಪರಬ್ರಹ್ಮನ) ಸ್ಥಾನ.
 • ತಮ್ಮಲ್ಲಿರುವ ಈ ಪರಬ್ರಹ್ಮನನ್ನು ಯೋಗಿಗಳು ನೋಡುತ್ತಾರೆ. ಮನಸ್ಸು ಶುದ್ಧಿಯಿಲ್ಲದವರು ನೋಡಲಾರರು. ಸೂರ್ಯ, ಚಂದ್ರ , ಅಗ್ನಿಗಳಲ್ಲಿರುವ ಬೆಳಕು, ನನ್ನದೇ. ಈ ಜಗತ್ತಿನ ಮತ್ತು ಜೀವಿಗಳ, ಅವುಗಳ ಬುದ್ಧಿಯ ಒಳಗಿದ್ದೇನೆ. ಸರ್ವಭೂತಗಳೂ ನಾಶವಾಗುವುವು ; ಆದರೆ ಮಾಯಾಶಕ್ತಿಯು ನಾಶವಾಗದ್ದು. ಇವರಡರ ಮೇಲೆ ನಾಶವಾಗದ ಪುರುಷನಿರವನು.

ಉಪಸಂಹಾರ[ಬದಲಾಯಿಸಿ]


 • ಆ ಮೇಲಿರುವ ಪುರುಷನನ್ನು ಹುಡುಕಬೇಕು.ಇಂದ್ರಿಯ ಸುಖವನ್ನು ಗೆದ್ದವನೂ, ಬಯಕೆ ಇಲ್ಲದವನೂ, ನಾಶ ರಹಿತವಾದ ಆ ಬ್ರಹ್ಮವನ್ನು ಪಡೆಯುತ್ತಾನೆ. ಈ ಸಂಸಾರದಲ್ಲಿ ಸನಾತನನಾದ ಆ ಜೀವನು ನನ್ನ ಅಂಶವೇ. ಒಂದು ದೇಹದಿಂದ ಇನ್ರ್ನೆಂದುದೆಹಕ್ಕೆ ಹೋಗುವಾಗ ಇಂದ್ರಿಯ ಮನಸ್ಸುಗಳನ್ನು ಸೆಳದುಕೊಂಡೇ ಹೋಗುತ್ತಾನೆ. ಮನಸ್ಸು ವಿಷಯಗಳನ್ನು ಭೋಗಿಸುತ್ತದೆ. ಜ್ಞಾನಿಗಳು ಇದನ್ನು ಕಾಣುವರು. ಎಲ್ಲಾ ಪ್ರಾಣಿಗಳಲ್ಲಿರುವ ವೈಶ್ವಾನರನು ನಾನು. ಪ್ರಾಣಾಪಾನಾದಿಗಳಿಂದ ಅನ್ನವನ್ನು ಅರಗಿಸುತ್ತೇನೆ.
 • ಈ ಸಂಸಾರದಲ್ಲಿ ಕ್ಷರ - ನಾಶವುಳ್ಳದ್ದು , ಅಕ್ಷರ - ನಾಶವಿಲ್ಲದ್ದು ಎಂದು ಎರಡು ತತ್ವ ಇರುವುದು. ಸ್ಥಾವರ ಜಂಗಮಗಳೆಲ್ಲಾ ನಾಶವಾಗುವವು ; ಮಾಯಾಶಕ್ತಿಯು ನಾಶವಿಲ್ಲದ್ದು. ಮೂರು ಲೋಕಗಳನ್ನು ಒಳಹೊಕ್ಕು ಹಿಡಿದಿರುವ ಎಲ್ಲಕ್ಕೂ ಮೇಲಿನವನು ಉತ್ಕೃಷ್ಟ ಪುರುಷನು. ವೇದ ಉಪನಿಷತ್ತುಗಳು ಅವನನ್ನು ಪರಮಾತ್ಮ ನೆಂದು ಹೇಳಿರುವುವು. ಮಾಯಾಶಕ್ತಿಗಿಂತ ಮೇಲಿರುವ ನಾಶವಾಗದ ನಾನು (ಭಗವಂತನು) ಪುರುಷೋತ್ತಮನೆಂದು ಹೆಸರು ಗೊಂಡಿದ್ದೇನೆ. ನನ್ನನ್ನು ತಿಳಿದವನು ನನ್ನನ್ನೇ ಆಶ್ರಯಿಸಿರುವ ಸರ್ವಜ್ಞನು .
 • ಈ ನಾಶವಾಗದ ಪುರುಷನೇ ವೇದ ಉಪನಿಷತ್ತು ಹೇಳುವ ಪುರುಷೋತ್ತಮನು. ಇದನ್ನು ಅರಿತವನು ನನ್ನನ್ನು (ತನ್ನಲ್ಲಿರುವ ಪರಬ್ರಹ್ಮನನ್ನು-ಭಗವಂತನನ್ನು ) ಧ್ಯಾನಿಸುತ್ತಾನೆ ಮತ್ತು ಪಡೆಯುತ್ತಾನೆ. ಈ ರಹಸ್ಯವನ್ನು ನಿನಗೆ ಹೇಳಿದ್ದೇನೆ - (ಎಂದು ಭಗವಂತನಾದ ಶ್ರೀಕೃಷ್ಣನು ಅರ್ಜುನನಿಗೆ ಹೇಳಿದನು.)

(ಇತಿ ಶ್ರೀ ಭಗವದ್ಗೀತಾಸೂಪನಿಷತ್ಸು ಬ್ರಹ್ಮವಿದ್ಯಾಯಾಂ ಯೋಗ ಶಾಸ್ತ್ರೇ ಶ್ರೀ ಕೃಷ್ಣಾರ್ಜುನ ಸಂವಾದೇ ಪುರುಷೋತ್ತಮ ಯೋಗೋ ನಾಮ ಪಂಚದಶೋsಧ್ಯಾಯಃ ||

ದೈವಾಸುರ ಸಂಪದ್ವಿಭಾಗ ಯೋಗ : ಹದಿನಾರನೆಯ ಅಧ್ಯಾಯ[ಬದಲಾಯಿಸಿ]


ದೈವಾಸುರ ಸಂಪದ್ವಿಭಾಗ ಯೋಗ - ೨೪/೫೯೪

 • (ಟಿಪ್ಪಣಿ :ಸತ್ವ ಗುಣವು ಭಗವಂತನ ಪ್ರೀತಿಗೆ ಕಾರಣವಾದ್ದರಿಂದ, ಮತ್ತು ತಮೋಗುನವು ಅಧೋಗತಿಗೆ ಕಾರಣವಾದ್ದರಿಂದ ಅವುಗಳನ್ನು ಭಗವಂತನು ವಿವರಿಸುತ್ತಾನೆ)

ದೈವ (ಒಳ್ಳೆಯ) ಸ್ವಭಾವದ ಗುಣಗಳು :[ಬದಲಾಯಿಸಿ]


 • (ಭಗವಂತ)ಹೇಳುತ್ತಾನೆ (ಹೇಳಿದ್ದು) :
 • ನಿರ್ಭಯತೆ, ಶುದ್ಧ ಮನಸ್ಸು, ಜ್ಞಾನದಲ್ಲಿ ಶ್ರದ್ಧೆ , ದಾನ, ಇಂದ್ರಿಯಘಳನ್ನು ಬಿಗಿಹಿಡಿಯುವುದು, ತಪಸ್ಸು, ಸರಳತೆ, ಅಹಿಂಸೆ, ನಿಜ ನುಡಿಯುವುದು, ಶಾಂತ ಸ್ವಭಾವ ,ಇಂದ್ರಿಯ ಭೋಗದಲ್ಲಿ ನಿರಾಸಕ್ತಿ, ಪ್ರಾಣಿಗಳಲ್ಲಿ ದಯೆ, ತಪ್ಪಿಗೆ ನಾಚಿಕೆ ಪಡುವುದು, ಚಪಲತನವಿಲ್ಲದೆ ಇರುವುದು, ಇರೆಕರ ಪಡೆಯದ ನೆಡತೆ, ತಾಳ್ಮೆ , ಶುಚಿತ್ವ, ದ್ರೋಹ ಮಾಡದೆ ಇರುವುದು, ವಿನಯ ಅಥವಾ ಜಂಬ ಪಡದಿರುವುದು, ಈ ಮೊದಲಾದ ಸದ್ಗುಣಗಳು ಪೂರ್ವಜನ್ಮ ದ ಒಳ್ಳೆಯ ವಾಸನೆಯಿಂ ಜನಿಸಿದವನಿಗೆ ಉಂಟಾಗುತ್ತವೆ.
 • ದಂಬ ಎಂದರೆ ತನ್ನಲ್ಲಿ ಇಲ್ಲದೇ ಇರುವ ಗುಣವನ್ನು ತೋರಿಸಿಕೊಳ್ಳುವುದು, ಸೊಕ್ಕು , ಜಂಬ, ಸಿಟ್ಟು, ಕಟುಮಾತುಗಳನ್ನಾಡುವುದು, ಅವಿವೇಕ, ಮೊದಲಾದವು ಪೂರ್ವಜನ್ಮದ ಕೆಟ್ಟ ವಾಸನೆಯಿಂದ ಹುಟ್ಟಿ ದವನಿಗೆ ಉಂಟಾಗುತ್ತವೆ .
 • ಅರ್ಜನ ನೀನು ಒಳ್ಳೆಯ ವಾಸನೆಯಿಂದ ಹುಟ್ಟಿದವನು.

ಅಸುರ (ಕೆಟ್ಟ) ಸಂಪತ್ತಿನ ಪರಿಣಾಮ :[ಬದಲಾಯಿಸಿ]


ಒಳ್ಳೆಯದು ಯಾವುದು ಕೆಟ್ಟದು ಯಾವುದು ಎಂದು ಅಸುರ ಸಂಪತ್ತಿನ ಜನರಿಗೆ ತಿಳಿಯುವುದಿಲ್ಲ. ಅವರಲ್ಲಿ ಶುಚಿತ್ವ, ಆಚಾರ, ಸತ್ಯ ವಚನ- ಇವು ಇಲ್ಲ. ಧರ್ಮದಲ್ಲಿ ನಂಬಿಕೆಇಲ್ಲ, ಗಂಡು ಹೆಣ್ಣಿನ ಸಂಬಂಧದಿಂದ ಮಾತ್ರಾ ಈ ಜಗತ್ತು ನಿಂತಿದೆ ಎಂದು ಭಾವಿಸುವರು. ಇತರರಿಗೆ ವಿನಾಕಾರಣ ಹಾನಿಮಾಡುವರು. ಅತಿಯಾಸೆ, ದಂಬ, ಮದ, ಇವುಗಳಿಂದ ತಪ್ಪು ನಿಶ್ಚಯಮಾಡುವರು. ಅವರು ಇಂದ್ರಿಗಳ ಸುಖಕ್ಕೇ ಹೆಚ್ಚಿನ ಪ್ರಾಮುಖ್ಯತೆ ಕೊಡುವರು. ತಾನು ಬಲಿಷ್ಠ , ಸುಖಿ, ವಿರೋಧಿಗಳನ್ನು ನಾಶಮಾಡಿದೆ-ಎಂದು ಅಹಂಕಾರ ಪಡುವರು. ತಾವು ಹಣವುಳ್ಳವರೆಂದು ತೋರಿಸಿಕೊಳ್ಳುವುದಕ್ಕಾಗಿ ಮಾತ್ರ ದಾನ, ಯಜ್ಞ -ಯಾಗ ಗಳಲ್ಲಿ ತೊಡಗುವರು. ಇವರು ತಮ್ಮಲ್ಲಿಯೇ ಇರುವ ಭಗವಂತನನ್ನು ನಿರಾಕರಿಸುವರು. ಹಗೆತನ , ಹೊಟ್ಟೆಕಿಚ್ಚು, ಜಿಪುಣತನ ಇವರ ಸ್ವಭಾವ. ಇಂಥವರು ಮುಂದಿನ ಜನ್ಮದಲ್ಲಿ ಇನ್ನೂ ಕೀಳು ಜನ್ಮಕ್ಕೆ ಹೋಗುತ್ತಾರೆ.

ಉಪಸಂಹಾರ[ಬದಲಾಯಿಸಿ]


ಮನುಷ್ಯನು ಮಾನಸಿಕ ಶಾಂತಿ ಪಡೆಯಲು ಸುಲಭ ಮಾರ್ಗ :

ತ್ರಿವಿಧಂ ನರಕಸ್ಯೇದಂ | ದ್ವಾರ ನಾಶನಾತ್ಮನಃ ||

ಕಾಮಃ ಕ್ರೋಧಸ್ತಥಾ ಲೋಭಃ | ತಸ್ಮಾದೇತತ್ರಯಂ ತ್ಯಜೇತ್ || (೧೬-೨೧)

ಏತೈರ್ವಿಮುಕ್ತಃ ಕೌಂತೇಯ | ತಮೋದ್ವಾರೈಸ್ತ್ರಿ ಭಿರ್ನರಃ ||

ಆಚಾರತಾತ್ಮನಃ ಶ್ರೇಯಃ | ತತೋ ಯಾತಿ ಪರಾಂ Uಗತಿಮ್ || (೧೬-೨೨)

 • ಅರ್ಜುನಾ, ಬಯಕೆ (ಅತಿಯಾಸೆ), ಸಿಟ್ಟು (ಹಗೆತನ , ಹೊಟ್ಟೆಕಿಚ್ಚು,), ಜಿಪುಣತನ ಈ ಮೂರೂ ನರಕದ ಬಾಗಿಲುಗಳು. ಇವುಗಳಿಂದ ಬಿಡುಗಡೆ ಹೊಂದಿದ ಮನುಷ್ಯನು ತನಗೆ ಶ್ರೇಯಸ್ಸನ್ನು ಮಾಡಿಕೊಂಡು, ಉನ್ನತಿಯನ್ನು ಹೊಂದಿ ಮೋಕ್ಷವನ್ನು ಪಡೆಯುತ್ತಾನೆ
 • (ಟಿಪ್ಪಣಿ : ಇದು ನೋಡಲು ಸಾಧಾರಣ ವಚನವಾಗಿ ಕಂಡರೂ, ಇವುಗಳನ್ನು ಬಿಟ್ಟರೆ ಮಾನಸಿಕ ಶಾಂತಿಯನ್ನು ಸುಲಭವಾಗಿ ಪಡೆಯಬಹುದು. ಇದನ್ನು ಸಾಧಿಸಲು ಸದಾ ಆತ್ಮ ನಿರೀಕ್ಷೆಯನ್ನು ಮಾಡಿಕೊಳ್ಳುತ್ತಿರಬೇಕು)
 • ಅಸುರ ಗುಣವುಳ್ಳವರು ಮನಬಂದಂತೆ ನೆಡೆಯುವರು, ಅದರಿಂದ ಈ ಲೋಕದ ಸುಖವೂ ಇಲ್ಲ, ಪರ ಗತಿಯೂ ಇಲ್ಲ.
 • ಅರ್ಜುನಾ , ಆದ್ದರಿಂದ ಶಾಸ್ತ್ರವನ್ನೂ , ಧರ್ಮವನ್ನೂ ತಿಳಿದು ಅದರಂತೆ ನಡೆಯಬೇಕು. ನೀನು ನಿನ್ನ ಧರ್ಮವನ್ನು ತಿಳಿದು ಅದರಂತೆ ನಡೆ (ಎಂದನು)
 • (ಇತಿ ಶ್ರೀ ಭಗವದ್ಗೀತಾಸೂಪನಿಷತ್ಸು ಬ್ರಹ್ಮವಿದ್ಯಾಯಾಂ ಯೋಗ ಶಾಸ್ತ್ರೇ ಶ್ರೀ ಕೃಷ್ಣಾರ್ಜುನ ಸಂವಾದೇ ದೈವಾಸುರ ಸಂಪದ್ವಿಭಾಗ ಯೋಗೋ ನಾಮ ಷೋಡಶೋsಧ್ಯಾಯಃ)

ಶ್ರದ್ಧಾತ್ರಯ ವಿಭಾಗ ಯೋಗ ಹದಿನೇಳನೆಯ ಅಧ್ಯಾಯ.[ಬದಲಾಯಿಸಿ]


 • ಶ್ರದ್ಧಾತ್ರಯ ವಿಭಾಗ ಯೋಗ - ೨೮/೬೨೨
 • ಅರ್ಜುನನು ಹೇಳಿದನು (ಹೇಳಿದ್ದು) : ಶಾಸ್ತ್ರ ನಿಯಮಗಳನ್ನು ಬಿಟ್ಟು ಶ್ರದ್ಧೆಯಿಂದ ಪೂಜಿಸುವವರು, ಸತ್ವ, , ರಜ, ತಮ, ಇವುಗಳಲ್ಲಿ ಯಾವುದಕ್ಕೆ ಸೇರಿದವರು?
 • (ಟಿಪ್ಪಣಿ ; ಇಲ್ಲಿ ಪೂಜೆ ಎಂಬ ಪದವನ್ನು ಉಪಯೋಗಿಸದೆ ಯಜನ (ಯಜಂತೇ) ಎಂದು ಹೇಳಿದೆ, ಪೂಜಿಸು ಎನ್ನುವುದು ಗೌರವಿಸು ಎನ್ನುವ ಅರ್ಥದಲ್ಲಿ ಹೆಚ್ಚಾಗಿ ಉಪಯೋಗಿಸಲ್ಪಡುತ್ತದೆ. ಈಗಿನ ಮೂರ್ತಿಪೂಜಾ ಪದ್ಧತಿ ಆ ಕಾಲದಲ್ಲಿ ಇದ್ದಿರಲಾರದು.)
 • ಭಗವಂತನು ಹೇಳಿದನು : ಅವರವರ ಸಂಸ್ಕಾರಕ್ಕೆ ತಕ್ಕಂತೆ ಶ್ರದ್ಧೆ ಆಗುತ್ತದೆ. ಸತ್ವ ಗುಣದವರು ದೇವತೆಗಳನ್ನೂ, ರಜೋಗುಣದವರು ಯಕ್ಷ ರಾಕ್ಷಸರನ್ನೂ, , ತಮೋಗುಣದವರು ಭೂತ ಪ್ರೇತಗಳನ್ನೂ ಪೂಜಿಸುತ್ತಾರೆ (ಯಜಂತೇ- ಅವರಿಗಾಗಿ ಯಜ್ಞ ಮಾಡುತ್ತಾರೆ). (ಎಂದನು).

ಆಹಾರ, ದಾನ , ತಪಸ್ಸಿನಲ್ಲಿ ಸತ್ವ,ರಜ,ತಮ, ಸ್ವಭಾವಗಳು[ಬದಲಾಯಿಸಿ]

____________________

 • ಭಗವಂತನು ಹೇಳಿದನು :
 • ಶಾಸ್ತ್ರಗಳಲ್ಲಿ ಹೇಳದೆ ಇರುವ ಆತ್ಮ ತತ್ವಕ್ಕೆ ವಿರೋಧವಾದ ಇಂದ್ರಿಯಗಳನ್ನು ಹಿಂಸಿಸುವ, ನಾನಾ ಬಯಕೆಗಳ ಈಡೇರಿಕೆಗಳಿಗಾಗಿ ತಪಸ್ಸು (ಯಜನ-ಪೂಜೆ) ಮಾಡುವವರು ಅವಿವೇಕಿಗಳು ಮತ್ತು ಅಸುರ ಮನಸ್ಸಿನವರು.
 • ಆಹಾರದಲ್ಲೂ ಮೂರು ಬಗೆ. ರಸ, ಜಿಡ್ಡು, ಇದ್ದು, ಆರೋಗ್ಯವನ್ನು ಕೊಡುವ ಸುಖಕರ ಆಹಾರವನ್ನು ಸಾತ್ವಿಕರು ಬಯಸುವರು. ಕಾರ, ಹುಳಿ ಉಪ್ಪು .ಹೆಚ್ಚಾಗಿರುವ ಗಟ್ಟಿ ಯಾದ ಅನಾರೋಗ್ಯ ಕರ ಆಹಾರವು ರಾಜಸ ಗುಣದವರಿಗೆ ಇಷ್ಟ. ಅರೆಬೆಂದ, ಹಳಸಿದ, ಕೆಟ್ಟ ವಾಸನೆ ಇರುವ ಆಹಾರವನ್ನು ತಾಮಸರು ಇಷ್ಟಪಡುವರು.
 • ಫಲವನ್ನು ಗಮನಿಸದೆ ಕರ್ತವ್ಯದ ದೃಷ್ಠಿಯಿಂದ ಯಜ್ನ ಮಾಡುವ ಯಜ್ಞವು ಸಾತ್ವಿಕವು. ಫಲಾಪೇಕ್ಷೆಯಿಂದ ಮಾಡುವ ಯಜ್ಞವು ರಾಜಸ, ಶ್ರದ್ಧೆ ದಾನವಿಲ್ಲದೆ ಶಾಸ್ತ್ರ ವಿರುದ್ಧವಾಗಿ ಮಾಡುವ ಯಜ್ಞ ವು ತಾಮಸ.
 • ಹಿರಿಯರನ್ನು ಗುರುಗಳನ್ನೂ ಪ್ರಾಜ್ಞರನ್ನೂ ಗೌರವಿಸುವುದೂ, ಶರೀರದಿಂದ ಮಾಡುವ -ಸಾತ್ವಿಕ ತಪಸ್ಸು. ; ಸತ್ಯ ವಾದುದು ಹಿತವಾದುದು ಪ್ರಿಯವಾದುದನ್ನು ಹೇಳುವುದು, ಮಾತಿನ -ಸಾತ್ವಿಕ ತಪಸ್ಸು . ಮನಸ್ಸಿನಲ್ಲಿ ಒಳ್ಳೆಯದನ್ನೇ ಚಿಂತಿಸುವುದು , ವಂಚನೆ ಇಲ್ಲದಿರುವುದು -ಸಾತ್ವಿಕ ಮಾನಸಿಕ ತಪಸ್ಸು.
 • ಹೆಸರು ಪಡೆಯಲು ಮಾಡುವ, ಅಲ್ಪ ಕಾಲದ ಪ್ರಯೋಜನವುಳ್ಳ ಶ್ರದ್ಧೆ ಇಲ್ಲದೆ ಮಾಡುವ ತಪಸ್ಸು ರಾಜಸವು. ತನಗೂ, ಬೇರೆಯವರಿಗೂ, ಹಿಂಸೆಕೊಡುವ ತಪಸ್ಸು ತಾಮಸ.
 • ಪ್ರತಿಫಲಾಪೇಕ್ಷೆಯಿಲ್ಲದೆ ಸಕಾಲದಲ್ಲಿ ಯೋಗ್ಯರಿಗೆ ಕೊಡುವ ದಾನವು ಸಾತ್ವಿಕ. ಪ್ರತಿ ಫಲಾಪೇಕ್ಷಯಿಂದ ಅರೆಮನಸ್ಸಿನಿಂದ ಕೊಡುವ ದಾನವು ರಾಜಸ. ಅನಾದರದಿಂದ, ಇಷ್ಟವಿಲ್ಲದೆ ಅದೂ, ಯೋಗ್ಯರಲ್ಲದವರಿಗೆ ಕೊಡುವ ದಾನವು ತಾಮಸ.

ಉಪಸಂಹಾರ :[ಬದಲಾಯಿಸಿ]


 • ಭಗವಂತನು ಹೇಳಿದನು :
 • ಪರಬ್ರಹ್ಮ ವಾಚಕದಿಂದ ಯಜ್ಞ, ದಾನ, ತಪಸ್ಸು ಮಾಡಬೇಕು:
 • ಪರಬ್ರಹ್ಮವು ಓಂ, ತತ್, ಸತ್, ಎಂದು ಮೂರು ಬಗೆಯಾಗಿ ಹಿಂದಿನಿಂದ ಹೇಳಲ್ಪಟ್ಟಿದೆ. ಆದ್ದರಿಂದ ಯಜ್ಞ , ದಾನ , ತಪಸ್ಸು ಇವುಗಳನ್ನು ಓಂ, ತತ್, ಸತ್, ಎಂದು ಹೇಳಿ ಪ್ರಾರಂಭಿಸಬೇಕು. ಮೊದಲು ಓಂ ಕಾರ ಹೇಳಿಯೇ ಸತ್ಕಾರ್ಯವನ್ನು ಪ್ರಾರಂಭಿಸಬೇಕು. ತತ್ ಎನ್ನುವುದು ಇದೆ ಮತ್ತು ಯೋಗ್ಯ ಎಂಬ ಅರ್ಥದಲ್ಲಿಯೂ, ಸತ್ ಎಂಬುದು ಸತ್ಕರ್ಮದಲ್ಲಿ ಯಜ್ಞದಲ್ಲಿ, ದಾನದಲ್ಲಿ ತೊಡಗಿರುವುದನ್ನೂ ಸೂಚಿಸುತ್ತದೆ.

ಅರ್ಜುನಾ, ಶ್ರದ್ಧೆ ಇಲ್ಲದೆ ಮಾಡಿದ ಕಾರ್ಯ - ಕರ್ಮಗಳಿಗೆ ಫಲವಿಲ್ಲ. ಆದ್ದರಿಂದ ಮಾಡುವ ಕೆಲಸವನ್ನು ಶ್ರದ್ಧೆಯಿಂದ ಮಾಡಬೇಕೆಂದು ಭಗವಂತನು ಸೂಚಿಸಿದನು.

 • (ಇತಿ ಶ್ರೀ ಭಗವದ್ಗೀತಾಸೂಪನಿಷತ್ಸು ಬ್ರಹ್ಮವಿದ್ಯಾಯಾಂ ಯೋಗ ಶಾಸ್ತ್ರೇ ಶ್ರೀ ಕೃಷ್ಣಾರ್ಜುನ ಸಂವಾದೇ ಶ್ರದ್ಧಾತ್ರಯ ವಿಭಾಗ ಯೋಗೋ ನಾಮ ಸಪ್ತದಶೋsಧ್ಯಾಯಃ)

ಮೋಕ್ಷ ಸಂನ್ಯಾಸ ಯೋಗ : ಹದಿನೆಂಟನೆಯ ಅಧ್ಯಾಯ :[ಬದಲಾಯಿಸಿ]


 • ಮೋಕ್ಷ ಸಂನ್ಯಾಸ ಯೋಗ : ಹದಿನೆಂಟನೆಯ ಅಧ್ಯಾಯ : ೭೮/೭೦೦
 • ಅರ್ಜುನನು (ಹೇಳಿದ್ದು) , ಸಂನ್ಯಾಸ ಮತ್ತು ತ್ಯಾಗ ಇವುಗಳ ನಿಜವಾದ ಅರ್ಥವನ್ನು ತಿಳೀಯಲು ಬಯಸುತ್ತೇನೆ ಎಂದನು.
 • ಭಗವಂತನು ಹೇಳಿದನು : ಫಲದ ಬಯಕೆಯಿಂದ ಮಾಡುವ (ಮಾಡಬೇಕಾದ) ಕರ್ಮಗಳನ್ನು ಬಿಡುವುದು ಸಂನ್ಯಾಸ ; ಆ ಎಲ್ಲಾ ಕರ್ಮಗಳನ್ನು ಮಾಡಿ ಫಲವನ್ನ ಬಯಸದೇ ಇರುವುದು ತ್ಯಾಗ.

ವಿಹಿತ ಕರ್ಮವನ್ನು ಚಿತ್ತ ಶುದ್ಧಿಗಾಗಿ ಮಾಡಬೇಕು[ಬದಲಾಯಿಸಿ]


 • ಭಗವಂತನು ಹೇಳಿದನು : ಫಲದ ಬಯಕೆಯಿಂದ ಮಾಡುವ (ಮಾಡಬೇಕಾದ) ಕರ್ಮಗಳನ್ನು ಬಿಡುವುದು ಸಂನ್ಯಾಸ ; ಆ ಎಲ್ಲಾ ಕರ್ಮಗಳನ್ನು ಮಾಡಿ ಫಲವನ್ನು ಬಯಸದೇ ಇರುವುದು ತ್ಯಾಗ.
 • ( ಟಿಪ್ಪಣಿ : ಈ ಅಧ್ಯಾಯದಲ್ಲಿ ಗೀತಾ ಶಾಸ್ತ್ರದ ಅರ್ಥವೆಲ್ಲವನ್ನೂ ಉಪಸಂಹಾರ ಮಾಡಿ ಹೇಳಲಾಗಿದೆ ಎಂದು ಶ್ರೀ ಶಂಕರರು ಅಭಿಪ್ರಾಯ ಪಡುತ್ತಾರೆ)
 • ಅರ್ಜುನಾ, ಕೆಲವರು ಕರ್ಮಗಳೆಲ್ಲಾ (ಯಜ್ಞ ಯಾಗಾದಿಗಳು) ದೋಷದಿಂದ ಕೂಡಿದವುಗಳಾದ್ದರಿಂದ ಬಿಡಬೇಕೆಂದು ಕೆಲವು ವಿದ್ವಾಂಸರು ಹೇಳುತ್ತಾರೆ. ಆದರೆ ಯಜ್ಞ, ದಾನ, ತಪಸ್ಸು, ಚಿತ್ತ ಶುದ್ಧಿಯನ್ನು ಮಾಡುವುದರಿಂದ , ಅವು ಮಾಡಲೇಬೇಕಾದವು. ಈ ಶಾಸ್ತ್ರ ವಿಹಿತ ಕರ್ಮಗಳನ್ನು ತಪ್ಪುತಿಳುವಳಿಕೆಯಿಂದ ಬಿಟ್ಟರೆ ಅದು ತಾಮಸ ; ಆಯಾಸವೆಂದು ಬಿಟ್ಟರೆ ಅದು ರಾಜಸ ಗುಣ. ವಿಹಿತ ಕರ್ಮಗಳನ್ನು ಫಲದ ಬಯಕೆ ಇಲ್ಲದೆ ಮೋಹವಿಲ್ಲದೆ ಮಾಡುವವನು ಸಾತ್ವಿಕನು. ಏಕೆಂದರೆ ಈ ದೇಹ ಇರುವವರೆಗೂ ಕರ್ಮಗಳನ್ನು ಪೂರ್ತಿಯಾಗಿ ಬಿಡುವುದು ಸಾದ್ಯವಿಲ್ಲ. ಫಲದ ಬಯಕೆಯನ್ನು ಬಿಟ್ಟವನು ಕರ್ಮವನ್ನು ತ್ಯಾಗ (ಬಿಟ್ಟವನು)ಮಾಡಿದವನು ಎನಿಸುವನು.

ಮೂರು ವಿಧದ ಕರ್ಮ ಫಲ :[ಬದಲಾಯಿಸಿ]


 • ಕರ್ಮವು ಸತ್ತನಂತರ ಅಂಟುವುದು, ಅಂಟದಿರುವುದು ಮಿಶ್ರವಾಗಿರುದು. ತೀರಾ ಬಿಟ್ಟವರಿಗೆ ಅದು ಅಂಟದು. (೧-೧೨)

ಕರ್ಮದ ವಿಶ್ಲೇಷಣೆ : ದೇಹ, ಜೀವ, ಇಂದ್ರಿಯಗಳು(ಕರಣ), ಪಂಚ ಪ್ರಾಣಗಳು, ಅವುಗಳ ಅಭಿಮಾನಿ ದೇವತೆಗಳು ಕರ್ಮಕ್ಕೆ ಕಾರಣಗಳು . ಈಕಾರಣಗಳಲ್ಲಿ ತಾನೆಂಬ ಭಾವನೆ ಇಲ್ಲದವನಿಗೆ ಕಮ್ದ ಸೋಂಕಿಲ್ಲ- ಕೊಂದರೂ ಕೊಂದ ಹಾಗಲ್ಲ. ಅರಿವು (ಜ್ಞಾನ), ಅರಿಯಲ್ಪಡುವ ವಸ್ತು (ಜ್ಞೇಯ) ಅರಿಯುವವ (ಜ್ಞಾತೃ) ಕರ್ಮಕ್ಕೇ ಪ್ರೇರಣೆ ; ಕರ್ಮಗಳು ಕರಣಗಳಿಂದಾಗುವುವು (ತ್ರಿಕರಣ  :-೧. ಕಾಯ.೨.ವಾಕ್ಕು, ೩.ಮನಸ್ಸು,).

 • ವಿವಿಧತೆಯಲ್ಲಿ ಏಕತೆ ಕಾಣುವವನು, ಅಭಿಮಾವಿಲ್ಲದೆ, ಫಲಾಪೇಕ್ಷೆ ಇಲ್ಲದೆ, ಶ್ರದ್ಧೆಯುಳ್ಳ ಕರ್ಮನಿರತನು ಸಾತ್ವಿಕ ;
 • ವಿವಿಧತೆಯನ್ನು ಅದೇ ರೀತಿ ಕಾಣುವವನು, ಫಲಾಪೇಕ್ಷೆಯಿಂದ, ಆಯಾಸದ ಕರ್ಮನಿರತನು- ರಾಜಸ ;
 • ತತ್ವಾರ್ಥ ಅರಿಯದೆ ಏಕತೆಯಲ್ಲಿ ಎಲ್ಲಾ ಇದೆ ಎನ್ನುವವ, ವಿವೇಚನೆ ಇಲ್ಲದೆ ಸಾಧ್ಯಾಸಾದ್ಯತೆ ನೋಡದೆ ತನಗೂ ಪರರಿಗೂ ನೋವಾಗುವ, ಅನಪೇಕ್ಷ, *ಮೋಸದಿಂದ ಕೂಡಿದ ಕಾರ್ಯ ಮಾಡುವವ ತಾಮಸ. (೧೩-೨೮)
 • ಕರ್ಮದಲ್ಲಿ ಮಾಡಬೇಕಾದುದು, ಮಾಡಬಾರದ್ದು ತಿಳಿದು , ಕರ್ಮಪಲದ ಆಸೆಇಲ್ಲದೆ ಮಾಡವ ಕರ್ಮ ಸಾತ್ವಿಕ. ಹಾಗೆಯೇ ಮೊದಲು ದಃಖ ಕಷ್ಟವಿದ್ದರೂ ಅಂತ್ಯದಲ್ಲಿ ಶಾಶ್ವತ ಸುಖ ಕೊಡುವುದೋ ಆ ಕರ್ಮ ಸಾತ್ವಿಕ.
 • ಕರ್ಮದಲ್ಲಿ ಮಾಡಬೇಕಾದುದು, ಮಾಡಬಾರದ್ದು ತಿಳಿಯದೆ ಮಾಡುವುದು ರಾಜಸ. ಹಾಗೆಯೇ ಪ್ರಾರಂಭದಲ್ಲಿ ಸುಖಕರವಾದರೂ , ಅಂತ್ಯದಲ್ಲಿ ದಃಖಕರವೋ ಅದು ರಾಜಸ
 • ಧರ್ಮಕ್ಕೆ ವಿರುದ್ಧವಾಗಿ ಶಾಸ್ತ್ರಕ್ಕೆ ವಿರುದ್ಧವಾಗಿ ತಪ್ಪಾಗಿ ತಿಳಿದುಮಾಡುವ ಕರ್ಮ ತಾಮಸ.
 • ಇಂ ದ್ರಿಯಗಳನ್ನು ಬಿಗಿಹಿಡಿದು ಧೃತಿಯಿಂದ (ಮಧ್ಯ ಬಿಡದೆ) ಮಾಡುವ ಕರ್ಮ ಸಾತ್ವಿಕ. ಫಲದಾಸೆಯಿಂದ ಧರ್ಮ,ಅರ್ಥ,ಕಾಮ,ಇವುಗಳಿಗಾಗಿ ಬಯಕೆಯಿಂದ ಮಾಡುವ ಕರ್ಮ ರಾಜಸ.
 • ದುಃಖವಾದರೂ,ಕಷ್ಟವಾದರೂ ಬಿಡದೆ, ಭಯದಿಂದ ಕೂಡಿದ ತಿಳಿವಳಿಕೆಇಲ್ಲದೆ ಮಾಡುವ ಕರ್ಮ ತಾಮಸ. ಯಾವುದು ಮೊದಲಿಂದಲೂ ನಿದ್ರೆ, ಆಲಸ್ಯ, ಭ್ರಮೆ ಯಿಂದ ಕೂಡಿದ್ದೋ ಅದು ತಾಮಸ. (೧೪-೩೯)
 • ಸತ್ವ, ರಜ, ತಮೋ ಗುಣಗಳು ದೇವ ಮಾನವರೆಲ್ಲರಿಗೂ ಅಂಟಿದೆ. ಮನಸ್ಸನ್ನು ಬಿಗಿಹಿಡಿಯುವುದು, ಶುಚಿತ್ವ, ಶಾಂತಿ, ಜ್ಞಾನ ಇವು ಬ್ರಾಹ್ಮಣ್ಯದ ಗುಣಗಳು. ಶೌಚ, ಸಾಹಸ , ದಾನ, ಕ್ಷಾತ್ರ ಅಧಿಕಾರ, ಇವು ಕ್ಷತ್ರಿಯ ಸ್ವಭಾವವು. ಕೃಷಿ ವ್ಯಾಪಾರ, ಪಶುಪಾಲನೆ ಇವು ವೈಶ್ಯ ಸ್ವಭಾವವು. ಇದು ಯಾವುದೂ ಇಲ್ಲದೆ ಸೇವೆ ಮಾತ್ರ ಮಾಢುವುದು ಶೂದ್ರ ಸ್ವಭಾವವು.

ಕರ್ಮದ ಬಿಡುಗಡೆ ಮತ್ತು ಮೋಕ್ಷ :[ಬದಲಾಯಿಸಿ]


 • ಆದ್ದರಿಂದ ಯಾವನು ತನ್ನ ಹುಟ್ಟು ಗುಣವನ್ನು ಅರಿತು ಸರ್ವಾಂತರ್ಯಾಮಿಯಾದ ಪರಮಾತ್ಮನಿಗೆ ಪ್ರೀತಿಯಾಗಲಿ ಎಂದು ಆ ಕರ್ಮ ಮಾಢುವುದರಿಂದಲೇ ಪೂಜೆ ಮಾಡಿದರೆ ಅವನು ಜ್ಞಾನಕ್ಕೆ ತಕ್ಕ ಯೋಗ್ಯತೆ ಪಡೆಯುತ್ತಾನೆ.
 • ಹುಟ್ಟು ಗುಣಕ್ಕೆ ತಕ್ಕಂತೆ ಕರ್ಮಮಾಡಿದರೆ ಪಾಪ ವುಂಟಾಗುವುದಿಲ್ಲ. ದೋಷವಿದೆಯೆಂದು ತನ್ನ ಹುಟ್ಟುಗುಣ ಧರ್ಮವನ್ನು ಬಿಡಬಾರದು. ತನ್ನ ಹುಟ್ಟು ಗುಣ ಬೇರೆಯವರ ಹುಟ್ಟುಗುಣ ಅನುಸರಿಸುವುದಕ್ಕಿಂತ ಉತ್ತಮ. ಏಕೆಂದರೆ ಎಲ್ಲಾ ಕರ್ಮವಿಧಗಳಲ್ಲೂ ದೋಷಗಳಿರುವುದು. ಆದ್ದರಿಂದ ಅನಾಸಕ್ತಿಯಿಂದ ಪರಮಾತಮನಿಗೆ ಪ್ರೀತಿಯಾಗಲಿ ಎಂದು ನಿಷ್ಟೆಯಿಂದ ಕರ್ಮ ನಿರತನಾದರೆ ಅವನಿಗೆ ಜ್ಞಾನ ಪ್ರಾಪ್ತಿಯಾಗಿ ಮೋಕ್ಷ ಲಭಿಸುವುದು.

ಬ್ರಹ್ಮವನ್ನು ಪಡೆಯುವ ವಿಧಾನ[ಬದಲಾಯಿಸಿ]


 • ಇದಕ್ಕೂ ಮೇಲಿನ ಬ್ರಹ್ಮವನ್ನು ಪಡೆಯುವ ವಿಧಾನವಿದೆ. ಮನಸ್ಸನು ಬಿಗಿಹಿಡಿದು, ಮೋಹ, ಹಗೆತನ ಬಿಟ್ಟು, ಮಾತು, ಆಹಾರ ವಿಹಾರಗಳಲ್ಲಿ ಮಿತವಾಗಿರಬೇಕು. ಪ್ರಾಪಂಚಕ ವಿಷಯದಲ್ಲಿ ಮಾನಸಿಕವಾಗಿ ಸಂಪೂರ್ಣ ವೈರಾಗ್ಯ ತಾಳಿ, ಸದಾ ಅಂತರಂಗದಲ್ಲಿ ಭಗವಂತನನ್ನು ದ್ಯಾನಿಸುತ್ತಿರಬೇಕು. ಎಲ್ಲಾ ಕರ್ಮಗಳನ್ನು ಮಾಡುವವನಾದರೂ , ಆ ಭಕ್ತಿಯಿಂದ ಭಗವಂತನನ್ನು (ನನ್ನನ್ನು ) ಇದ್ದದ್ದು ಇದ್ದ ಹಾಗೆ ತಿಳಿದು (ನಿರ್ಗುಣ ನಿರಾಕಾರ ಆತ್ಮ ಸ್ವರೂಫ) ಭಗವಂತನಲ್ಲಿ (ನನ್ನಲ್ಲಿ) ಸೇರಿಹೋಗುತ್ತಾನೆ. ಬ್ರಹ್ಮ ಸ್ವರೂಪವನ್ನು ಪಡೆಯುತ್ತಾನೆ. ಮೋಕ್ಷಹೊಂದುತ್ತಾನೆ .

ಆದ್ದರಿಂದ,

ಚೇತಸಾ ಸರ್ವ ಕರ್ಮಾಣಿ | ಮಯಿಸಂನ್ಯಸ್ಯ ಮತ್ಪರಃ ||

ಬುದ್ಧಿಯೋಗಮುಪಾಶ್ರಿತ್ಯ | ಮಚ್ಚಿತ್ತ ಸತತಂ ಭವ || (೧೮-೫೭)

 • ಎಲ್ಲಾ ಕರ್ಮಗಳನ್ನೂ ನನಗೆ ಒಪ್ಪಿಸಿ, ಮನಸ್ಸನ್ನು ನನಗೆ ಒಪ್ಪಿಸಿ, ಬುದ್ಧಿಯೋಗವನ್ನು ಆಶ್ರಯಿಸಿ ನನ್ನಲ್ಲೇ ಮನಸ್ಸಿಟ್ಟವನಾಗು. ನನ್ನ ಅನುಗ್ರಹದಿಂದ ಎಲ್ಲಾ ನಿನ್ನೆಲ್ಲಾ ಕಷ್ಟಗಳೂ ಪರಿಹಾರವಾಗುವುವು.

ಹುಟ್ಟು ಗುಣದ ಪ್ರಭಾವ :[ಬದಲಾಯಿಸಿ]


 • ನೀನು ಬೇಡವೆಂದರೂ ನಿನ್ನ ಹುಟ್ಟುಗುಣವು ನಿನ್ನನ್ನು ಯುದ್ಧಕ್ಕೆ ನೂಕುವುದು. ಮೋಹದಿಂದ (ವಿವೇಕವಿಲ್ಲದೆ) ಯುದ್ಧ ಮಾಡುವುದಿಲ್ಲವೆನ್ನುತ್ತೀಯೋ ಅದನ್ನು (ಬಿಟ್ಟು) ನಿನ್ನ ಹುಟ್ಟುಗುಣ ಅಥವಾ ಸ್ವಭಾವದಿಂದ ನಿನಗೆ ಅರಿವಿಲ್ಲದೇ ಮಾಡಿಬಿಡುತ್ತೀಯೆ.

ಈಶ್ವರಃ ಸರ್ವಭೂತಾನಾಂ | ಹೃದ್ದೇಶೇsರ್ಜುನ ತಿಷ್ಠತಿ ||

ಭ್ರಾಮಯನ್ ಸರ್ವ ಭೂತಾನಿ | ಯಂತ್ರಾರೂಢಾನಿ ಮಾಯಯಾ|| (೧೮-೬೧)

 • ಆ ಈಶ್ವರನು ಎಲ್ಲರ ಹೃದಯದಲ್ಲಿದ್ದು ಯಂತ್ರದ ಬೊಂಬೆಗಳಂತೆ ಎಲ್ಲರಿಂದ ಕೆಲಸ ಮಾಡಿಸುತ್ತಾನೆ .

ತಮೇವ ಶರಣಂ ಗಚ್ಛ | ಸರ್ವ ಭಾವೇನ ಭಾರತ||

ತತ್ಪ್ರಸಾದಾತ್ ಪರಾಂ ಶಾಂತಿಂ| ಸ್ಥಾನಂ ಪ್ರಾಪ್ಸ್ಯಸಿ ಶಾಶ್ವತಮ್ || ೧೮-೬೨

 • ಅವನನ್ನೇ ಶರಣು ಹೋಗು ಅವನ ಅನುಗ್ರಹದಿಂದ ಮೋಕ್ಷ (ಶಾಂತಿ) ಯನ್ನು ಪಡೆಯುವೆ..

ಉಪಸಂಹಾರ :[ಬದಲಾಯಿಸಿ]


ಇತಿ ತೇ ಜ್ಞಾನಮಾಖ್ಯಾತಂ | ಗುಹ್ಯಾದ್ಗುಹ್ಯತರಂ ಮಯಾ ||

ವಿಮೃಶ್ಯೈ ತದಶೇಷೇಣ | ಯಥೇಚ್ಛಸಿ ತಥಾಕುರು || (೧೮-೬೩)

 • ನಿನಗೆ ನಾನು ರಹಸ್ಯವಾದ ಜ್ಞಾನ ವನ್ನು ಹೇಳಿದ್ದೇನೆ . ಇದನ್ನು ಮೊದಲಿನಿಂದ ಕೊನೆಯವರೆಗೆ ಆಲೋಚನೆ ಮಾಡಿ ನಿನ್ನ ಇಷ್ಟ ದಂತೆ ಮಾಡು ((ಯಥೇಚ್ಛಸಿ ತಥಾ ಕುರು) ಎಂದನು:
 • (ಟ್ಟಿಪ್ಪಣಿ : ಅರ್ಜುನನಿಗೆ ವಿವೇಚನಾ ಸ್ವಾತಂತ್ರ್ಯವನ್ನೂ ಕೊಡುತ್ತಾನೆ . )

ಮತ್ತೂ -

ಸರ್ವಧರ್ಮಾನ್ ಪರಿತ್ಯಜ್ಯ | ಮಾಮೇಕಂ ಶರಣಂ ವ್ರಜ ||

ಅಹಂ ತ್ವಾಂ ಸರ್ವ ಪಾಪೇಬ್ಯೋ | ಮೋಕ್ಷಯಿಷ್ಯಾಮಿ ಮಾ ಶುಚಃ || (೧೮-೬೫)

 • ನೀನು ಗೆಳೆಯನೆಂದು ಆಣೆ ಮಾಡಿ ಹೇಳುತ್ತಿದ್ದೇನೆ ; ಎಲ್ಲಾ ಧರ್ಮಗಳನ್ನು ಬಿಟ್ಟು ನನ್ನಲ್ಲಿಯೇ ಶರಣು ಹೊಂದು . ನಿನ್ನನ್ನು ಎಲ್ಲಾ ಪಾಪಗಳಿಂದ ಪಾರುಮಾಡುತ್ತೇನೆ . ಕೊರಗಬೇಡ . ಈ ರಹಸ್ಯ ವಿದ್ಯೆಯನ್ನು ಇಷ್ಟವಿಲ್ಲದವನಿಗೂ, ಭಕ್ತನಲ್ಲದವನಿಗೂ ಹೇಳಬೇಡ.
 • ಯಾವನು ಅಸೂಯೆ ಪಡದೆ ಶ್ರದ್ಧೆಯಿಂದ ಇದನ್ನು ಕೇಳುತ್ತಾನೋ ಅವನು ಪಾಪದಿಂದ ಬಿಡುಗಡೆಯಾಗಿ ಪುಣ್ಯ ಲೋಕಗಳನ್ನು ಪಡೆಯುತ್ತಾನೆ.
 • (ಭಗವಂತನು ಕೇಳಿದನು ) : ಅರ್ಜುನಾ ನಾನು ಹೇಳೀದ್ದನ್ನು ಮನಸ್ಸಿಟ್ಟು ಕೇಳಿದೆಯಾ ? ನಿನ್ನ ಅಜ್ಞಾನವು ದೂರವಾಯಿತೇ ?
 • ಅರ್ಜುನ ಹೇಳಿದನು : ನನ್ನ ಭ್ರಾಂತಿಯು ನಿನ್ನ ಅನುಗ್ರಹದಿಂದ ಹೋಯಿತು ಯುದ್ಧಕ್ಕೆ ಸಿದ್ಧನಾಗಿದ್ದೇನೆ . (ಎಂದನು).
 • ಸಂಜಯನು ಧೃತರಾಷ್ಟ್ರನಿಗೆ ಹೇಳಿದನು : ವ್ಯಾಸ ಮಹರ್ಷಿಗಳ ಅನುಗ್ರಹದಿಂದ ಶ್ರೀಕೃಷ್ಣನ ಮಾತುಗಳನ್ನು ಕೇಳಿದೆ, ಅವನ ವಿಶ್ವರೂಪವನ್ನು ನೋಡಿದೆ, ಅದನ್ನು ನೆನೆ ನೆನೆದು ಬಹಳ ಹರ್ಷವಾಗುತ್ತಿದೆ (ಎಂದನು)

ಯತ್ರ ಯೋಗೇಶ್ವರಃ ಕೃಷ್ಣಃ | ಯತ್ರ ಪಾರ್ಥೋ ಧನುರ್ಧರಃ||

ತತ್ರ ಶ್ರೀರ್ವಿಜಯೋ ಭೂತಿಃ | ಧ್ರುವಾ ನೀತಿರ್ಮತಿರ್ಮಮ || (೧೮-೭೮)

 • ಎಲ್ಲಿ ಯೋಗೇಶ್ವರನಾದ ಕೃಷ್ಣನಿರುವನೋ , ಧನುರ್ಧರನಾದ ಪಾರ್ಥನಿರುವನೋ ಅಲ್ಲಿ ನೀತಿಯೂ ತಿಳುವಳಿಕೆಯೂ, ವಿಜಯವೂ ಸದಾ ನೆಲೆಸಿರುವುದೆಂದು ನನ್ನ ಅಭಿಪ್ರಾಯ ( ಎಂದು ಸಂಜಯನು ಧೃತರಾಷ್ಟ್ರನಿಗೆ ಹೇಳಿದನು.)
 • (ಟಿಪ್ಪಣಿ : ಈ ಶ್ಲೋಕವನ್ನು ಶ್ರೀಕೃಷ್ಣನ ಭಕ್ತರು ದಿನ ನಿತ್ಯ ಪಠಿಸುತ್ತಾರೆ. ಇದರಲ್ಲಿ ಸಂಜಯನು ಯುದ್ಧ್ದ ದ ಮುಂದಿನ ಫಲಿತಾಂಶವನ್ನೂ ಹೇಳಿದಂತಾಗಿದೆ.)

.

 • ಓಂ ತತ್ ಸತ್

ಆಧಾರ[ಬದಲಾಯಿಸಿ]

ನೋಡಿ[ಬದಲಾಯಿಸಿ]

ಭಾರತೀಯ ದರ್ಶನಶಾಸ್ತ್ರ ಅಥವಾ ಭಾರತೀಯ ತತ್ತ್ವಶಾಸ್ತ್ರ
ಚಾರ್ವಾಕ ದರ್ಶನ ಜೈನ ದರ್ಶನ ಬೌದ್ಧ ದರ್ಶನ ಸಾಂಖ್ಯ ದರ್ಶನ
ರಾಜಯೋಗ ನ್ಯಾಯ ವೈಶೇಷಿಕ ದರ್ಶನ ಮೀಮಾಂಸ ದರ್ಶನ
ಆದಿ ಶಂಕರರು ಮತ್ತು ಅದ್ವೈತ ಅದ್ವೈತ- ಜ್ಞಾನ-ಕರ್ಮ ವಿವಾದ ವಿಶಿಷ್ಟಾದ್ವೈತ ದರ್ಶನ ದ್ವೈತ ದರ್ಶನ
ಮಾಧ್ವ ಸಿದ್ಧಾಂತ ಶ್ರೀಮನ್ಮಹಾಭಾರತಮ್ ಮತ್ತು ದ್ವೈತ ದರ್ಶನ ಭಾರತೀಯ ತತ್ವಶಾಸ್ತ್ರ ಸಮೀಕ್ಷೆ ಭಗವದ್ಗೀತಾ ತಾತ್ಪರ್ಯ
ಕರ್ಮ ಸಿದ್ಧಾಂತ ವೀರಶೈವ ತತ್ತ್ವ ಭಾರತೀಯ ತತ್ತ್ವಶಾಸ್ತ್ರದಲ್ಲಿ ದೇವರು - ಭಾರತೀಯ ತತ್ತ್ವಶಾಸ್ತ್ರದಲ್ಲಿ ಜಗತ್ತು
ಭಾರತೀಯ ತತ್ತ್ವಶಾಸ್ತ್ರದಲ್ಲಿ ಜೀವಾತ್ಮ ಮೋಕ್ಷ ಗೀತೆ ಬ್ರಹ್ಮಸೂತ್ರ

ದರ್ಶನಶಾಸ್ತ್ರ ಚಾರ್ವಾಕ ದರ್ಶನ ; ಜೈನ ಧರ್ಮ- ಜೈನ ದರ್ಶನ ; ಬೌದ್ಧ ಧರ್ಮ ; ಸಾಂಖ್ಯ-ಸಾಂಖ್ಯ ದರ್ಶನ ; (ಯೋಗ)->ರಾಜಯೋಗ ; ನ್ಯಾಯ ದರ್ಶನ ; ವೈಶೇಷಿಕ ದರ್ಶನ;; ಮೀಮಾಂಸ ದರ್ಶನ - ; ವೇದಾಂತ ದರ್ಶನ / ಉತ್ತರ ಮೀಮಾಂಸಾ ; ಅದ್ವೈತ ; ಆದಿ ಶಂಕರರು ಮತ್ತು ಅದ್ವೈತ ; ವಿಶಿಷ್ಟಾದ್ವೈತ ದರ್ಶನ ; ದ್ವೈತ ದರ್ಶನ - ಮಾಧ್ವ ಸಿದ್ಧಾಂತ ; ಪಂಚ ಕೋಶ ; ಶ್ರೀಮನ್ಮಹಾಭಾರತಮ್ ಮತ್ತು ದ್ವೈತ ದರ್ಶನ ; ಸೃಷ್ಟಿ ಮತ್ತು ಪುರಾಣ ದರ್ಶನ ಗಳಲ್ಲಿ ವಿಶ್ವ ಸೃಷ್ಟಿ . ಭಗವದ್ಗೀತಾ ತಾತ್ಪರ್ಯ ಹುಟ್ಟು , ಇತಿಹಾಸ, ಹಿನ್ನೆಲೆ, ಪಠನ ಕ್ರಮ ಶೈವ ದರ್ಶನಗಳು ಅಥವಾ ಶೈವ ಸಿದ್ಧಾಂತಗಳು-ಶೈವ ಪಂಥ - ಶಕ್ತಿ ವಿಶಿಷ್ಟಾದ್ವೈತ- ಪಂಚ ಕೋಶ- ವಿವೇಕ ಚೂಡಾಮಣಿಯಲ್ಲಿ ಪಂಚ ಕೋಶಗಳು.- ಓಂ ತತ್ಸತ್- ವೇದ ಕರ್ಮ ಸಿದ್ಧಾಂತ- ಭಾರತೀಯ ತತ್ತ್ವಶಾಸ್ತ್ರದಲ್ಲಿ ದೇವರು;- ಭಾರತೀಯ ತತ್ತ್ವಶಾಸ್ತ್ರದಲ್ಲಿ ಜಗತ್ತು-ಅಸ್ತಿತ್ವ-ಸತ್ಯವೇ-ಮಿಥ್ಯವೇ -ಭಾರತೀಯ ತತ್ತ್ವಶಾಸ್ತ್ರದಲ್ಲಿ ಜೀವಾತ್ಮ-ಮೋಕ್ಷ-ಭಾರತೀಯ ತತ್ತ್ವಶಾಸ್ತ್ರದಲ್ಲಿ ಮೋಕ್ಷ


ಉಲ್ಲೇಖ[ಬದಲಾಯಿಸಿ]

 1. ಮಹಾಭಾರತ -ವೇದವ್ಯಾಸ ಕೃತ; ಕನ್ನಡ ಅನುವಾದ. ಅಳಸಿಂಗಾಚಾರ್ಯುರು; ರಂಗನಾಥ ಶರ್ಮಾ;
 2. *ಶ್ರೀಮದ್ ಭಗವದ್ಗೀತಾ ಮೂಲ, ಪ್ರತಿಪದಾರ್ಥ ತಾತ್ಪರ್ಯ ಟಿಪ್ಪಣೆ ಯಿಂದಾ:ಸ್ವಾಮಿ ಆದಿದೇವಾಂದ ಶ್ರೀ ರಾಮಕೃಷ್ನ ಆಶ್ರಮ ಮೈಸೂರು.
 3. ಶ್ರೀ ಕೃಷ್ಣ ಚರಿತೆ - ಲೇಖಕರು ಬಂಕಿಮಚಂದ್ರರು ಕನ್ನಡ ಅನುವಾದ.
 4. en.wikipedia.org/wiki/Mahabharata
 5. ಗೀತಾ ಪ್ರವಚನಗಳು - ಶ್ರೀ ವಿನೋಬಾ ಭಾವೆ
 6. ಅನಾಸಕ್ತಿಯೋಗ (ಭಗವದ್ಗೀತೆ) ವ್ಯಾಖ್ಯಾನ ಗಾಂಧೀಜಿ ಕನ್ನಡ ಅನುವಾದ ಬೆಟಗೇರಿ ಕೃಷ್ಣ ಶರ್ಮ.
 7. ಶ್ರೀ ಶಂಕರರ ಗೀತಾ ಭಾಷ್ಯ (ಕನ್ನಡ)-ಅಧ್ಯಾತ್ಮ ಪ್ರಕಾಶ ಕಾರ್ಯಾಲಯ ಹೊಳೆನರಸಿಪುರ: ಎಲ್ಲಾ ಹದಿನೆಂಟು ಅಧ್ಯಾಯಗಳಿಗೆ
 8. ಶ್ರೀಮದ್ ಭಗವದ್ಗೀತಾ ಭಾಷ್ಯ -ಟೀಕೆ:ಯ.ಸುಬ್ರಹ್ಮಣ್ಯಶರ್ಮಾ- ಅದ್ಯಾತ್ಮ ಪ್ರಕಾಸ ಕಾರ್ಯಾಲಯ ಹೊಳೆನರಸಿಪುರ.ಹಾಸನ ಜಿಲ್ಲೆ, ಕರ್ನಾಟಕ.