ಕೂರ್ಮ ಪುರಾಣ

|
ಐತರೇಯ · ಬೃಹದಾರಣ್ಯಕ · ಈಶಾವಾಸ್ಯ · ತೈತ್ತಿರೀಯ · ಛಾಂದೋಗ್ಯ · ಕೇನ · ಮುಂಡಕ · ಮಾಂಡೂಕ್ಯ · ಕಠ · ಪ್ರಶ್ನ · ಶ್ವೇತಾಶ್ವತರ |
|
ಗರುಡ · ಅಗ್ನಿ . ನಾರದ . ಪದ್ಮ . ಸ್ಕಾಂದ . ಭವಿಷ್ಯ . ಬ್ರಹ್ಮ . ಭಾಗವತ . ಬ್ರಹ್ಮವೈವರ್ತ . ಬ್ರಹ್ಮಾಂಡ . ವಾಯು . ಲಿಂಗ . ವಿಷ್ಣು . ವಾಮನ . ಮಾರ್ಕಂಡೇಯ . ವರಾಹ . ಕೂರ್ಮ . ಮತ್ಸ್ಯ |
|
ಭಗವದ್ಗೀತೆ · ಆಗಮ· ಶೂನ್ಯ ಸಂಪಾದನ· ಶ್ರೀ ಸಿದ್ಧಾಂತ ಶಿಖಾಮಣಿ · ವೀರಶೈವ ಪುರಾಣ · ವಿಷ್ಣು ಸಹಸ್ರನಾಮ . ಬಸವರಾಜ ವಿಜಯಂ |
ಕೂರ್ಮ ಪುರಾಣ ಇದು ವಿಷ್ಣುವಿನ ಕೂರ್ಮಾವತಾರದ ಕಥೆಯನ್ನು ಮುಖ್ಯವಾಗಿ ಹೊಂದಿದೆ. ಇದರಲ್ಲಿ ಚತುವರ್ಣದವರ ಕರ್ತವ್ಯ ಹಾಗೂ ಜವಾಬ್ದಾರಿಗಳು,ಮೋಕ್ಷವಿಚಾರಗಳು ಇತ್ಯಾದಿಗಳು ಅಡಕವಾಗಿದೆ.
ಸ್ವರೂಪ
[ಬದಲಾಯಿಸಿ]ಇದರಲ್ಲಿ ಬ್ರಾಹ್ಮೀ, ಭಾಗವತೀ, ಸೌರೀ ಮತ್ತು ವೈಷ್ಣವೀ ಎಂಬ ನಾಲ್ಕು ಸಂಹಿತೆಗಳಿವೆ ಎಂದು ಪುರಾಣವೇ ಹೇಳಿದರೂ ಲಭ್ಯವಾಗಿರುವುದು ಮೊದಲನೆಯ ಸಂಹಿತೆಯೊಂದೇ. ಸಮುದ್ರಮಥನ ಸಂದರ್ಭದಲ್ಲಿ ಮಂದರಗಿರಿಯನ್ನು ಹೊತ್ತ ವಿಷ್ಣುವಿನ ಕೂರ್ಮಾವತಾರದ ಸ್ತೋತ್ರದೊಂದಿಗೆ ಪ್ರಸ್ತುತ ಪುರಾಣ ಆರಂಭವಾಗುತ್ತದೆ. ಆಗ ಕಡಲಿಂದೆದ್ದು ಬಂದ ಲಕ್ಷ್ಮಿ ವಿಷ್ಣುಪತ್ನಿಯಾಗುತ್ತಾಳೆ. ಇಂದ್ರದ್ಯುಮ್ನನೆಂಬ ದೊರೆ ಬ್ರಾಹ್ಮಣನಾಗಿ ಜನಿಸಿ, ಲಕ್ಷ್ಮಿಯಿಂದ ಉಪದೇಶಪಡೆದು, ಸರ್ವಚರಾಚರಗಳ ಸರ್ಗ, ಸ್ಥಿತಿ, ಪ್ರಲಯ ಕಾರಣನೆಂದು ಆರಾಧಿಸಿ, ಕೂರ್ಮಾವತಾರದ ಮೂಲಕ ಕೂರ್ಮಪುರಾಣವನ್ನು ಅರಿತುಕೊಳ್ಳುತ್ತಾನೆ. ಹರಸರ್ವೋತ್ತಮತ್ವವನ್ನೂ ತ್ರಿಮೂರ್ತಿಗಳ ಐಕ್ಯವನ್ನೂ ಪ್ರಸ್ತುತಪುರಾಣ ಪ್ರತಿಪಾದಿಸುತ್ತದೆ. ಹರನ ಶಕ್ತಿಯ 8,000 ಹೆಸರುಗಳಿಲ್ಲಿ ಬಂದಿವೆ. ಹರಿಹರರೊಂದು, ಲಕ್ಷ್ಮೀ ಪಾರ್ವತಿಯರೊಂದು ಎಂದು ಹೇಳಿದರೂ ವಿಷ್ಣುವಿನ ಅವತಾರವೆನ್ನಿಸಿದ ಕೃಷ್ಣ ತನ್ನ ಪತ್ನಿಯಾದ ಜಾಂಬವತಿಯಲ್ಲಿ ಮಗನನ್ನು ಪಡೆಯಬೇಕಾದರೆ ಕಠಿನ ತಪವನ್ನೆಸಗಿ, ಶಿವಾನುಗ್ರಹವನ್ನು ಪಡೆಯಬೇಕಾಯಿತು-ಎಂದು ಹೇಳಿರುವುದು ಹರ ಪಕ್ಷಪಾತಕ್ಕೆ ಪ್ರಮಾಣ. ಕೂರ್ಮಪುರಾಣ ಪಂಚಲಕ್ಷಣಗಳಿಂದ ಕೂಡಿದೆ. ವಿಷ್ಣುವಿನ ಕೆಲ ಅವತಾರಗಳನ್ನಿಲ್ಲಿ ಹೇಳಿದರೂ ಒಂದು ಇಡೀ ಅಧ್ಯಾಯ ಶಿವಾವತಾರಗಳ ವರ್ಣನೆಗೇ ಮುಡಿಪಾಗಿದೆ. ಕಾಶೀ ಪ್ರಯಾಗ ಮಾಹಾತ್ಮ್ಯಗಳಲ್ಲದೆ, ಭಗವದ್ಗೀತೆಗೆ ಸರಿದೊರೆಯಾದ ಈಶ್ವರಗೀತೆಯೂ ಬಂದಿರುವುದು ಈ ಪುರಾಣದ ವೈಶಿಷ್ಟ್ಯ. ಅನಂತರ ವ್ಯಾಸಗೀತೆ, ಪ್ರಾಯಶ್ಚಿತ ವಿಧಿ, ಪಾತಿವ್ರತ್ಯಪ್ರಶಂಸೆ ಮುಂತಾದ ವಿಷಯಗಳು ಬರುತ್ತವೆ. ರಾಮಾಯಣದಲ್ಲಿಲ್ಲದ ಸೀತಾವೃತ್ತಾಂತವೊಂದಿಲ್ಲಿ ಪಾತಿವ್ರತ್ಯ ಮಾಹಾತ್ಮ್ಯವನ್ನು ನಿದರ್ಶಿಸುತ್ತದೆ. ಇಲ್ಲಿ ರಾವಣನ ಕೈಯಿಂದ ಸೀತೆಯನ್ನು ಅಗ್ನಿಯೇ ಬಿಡಿಸಿ ಕಾಪಾಡುತ್ತಾನೆ.
ಕಾಲ
[ಬದಲಾಯಿಸಿ]ಇದರಲ್ಲಿ 17,000, ಶ್ಲೋಕಗಳಿದ್ದ ವೆಂದು ಪ್ರಸಿದ್ಧಿ; 6,000 ಶ್ಲೋಕಗಳನ್ನು ಮಾತ್ರ ಉಪಲಬ್ಧ ಪ್ರತಿಯಲ್ಲಿ ಕಾಣಬಹುದು. ಇದರ ಏಳನೆಯ ಅಧ್ಯಾಯದಲ್ಲಿ ಬರುವ ಸೃಷ್ಟಿ ವಿವರಣೆ ವ್ಯಾಹತವಾಗಿರುವುದರಿಂದ ಒಂದಕ್ಕಿಂತ ಹೆಚ್ಚು ಪೌರಾಣಿಕರ ಕೈವಾಡದಿಂದ ಇದು ರಚಿತವಾಯಿತೆಂಬುದನ್ನು ನಿರ್ಧರಿಸ ಬಹುದು. ಮಹಾಭಾರತದ ಸೃಷ್ಟಿ ವಿವರಣೆಯನ್ನು ಪ್ರಸ್ತುತ ಪುರಾಣ ಸ್ಪಷ್ಟವಾಗಿ ಅನುಸರಿಸಿರುವುದರಿಂದಲೂ ಮತ್ಸ್ಯಪುರಾಣಕ್ಕೆ ಗೊತ್ತಿಲ್ಲದಿದ್ದ ಮಹಾಪುರಾಣಗಳ ಹದಿನೆಂಟನ್ನಿದು ಉಲ್ಲೇಖಿಸುವುದರಿಂದಲೂ ಇದರ ಪ್ರಸ್ತುತರೂಪದ ಕಾಲ ಪ್ರ.ಶ. 650ಕ್ಕೂ ಈಚಿನದೆನ್ನಬಹುದು.
ಕೂರ್ಮಪುರಾಣದ ಪ್ರಕಾರ ದೇವರು ಅವ್ಯಕ್ತ, ಅಜ್ಞೇಯ, ನಿತ್ಯ, ಜಗತ್ಕಾರಣ, ಸದಸದಾತ್ಮಕ, ಪ್ರಕೃತಿಯಿಂದ ಅಭಿನ್ನ, ಸರ್ವನಿರ್ದೇಶಕ, ಗುಣತ್ರಯದ ಸಾಮ್ಯಾವಸ್ಥೆಯಲ್ಲದವ ಪರಬ್ರಹ್ಮ, ಪುರುಷಗರ್ಭ. ಇದು ಅವನ ಪ್ರಾಕೃತಪ್ರಲಯ ಸ್ಥಿತಿ. ಇಲ್ಲಿಂದ ಮುಂದೆ ಅವನು ಪ್ರಕೃತಿ, ಪುರುಷರಲ್ಲಿ ದೇವತ್ವಪ್ರಕಟಣೆಗಾಗಿ ಪ್ರವೇಶಿಸಿದಾಗ ಜಗತ್ಸೃಷ್ಟಿಗಾರಂಭ. ದೇವರು ಪ್ರಕೃತಿಯಾಗಿ ನಡೆದುಕೊಳ್ಳುವುದೆಂದರೆ ಸಂಕೋಚ ವಿಕಾಸಶೀಲನಾಗುವುದೆಂದರ್ಥ. ಪ್ರಧಾನ ಪುರುಷಾತ್ಮಕವಾದ ಮಹತ್ ಕಾರಣವೆಂಬುದು ಅವನ ಆದ್ಯಸೃಷ್ಟಿ. ಅದರಿಂದ ಮಹತ್, ಆತ್ಮ, ಮತಿ, ಬ್ರಹ್ಮ, ಪ್ರಬುದ್ಧಿ, ಖ್ಯಾತಿ, ಈಶ್ವರ, ಪ್ರಜ್ಞೆ, ಧೃತಿ, ಸ್ಮೃತಿ, ಅಥವಾ ಸಂವಿತ್ ಎಂಬ ಪದಾರ್ಥ ಹುಟ್ಟುತ್ತದೆ. ಹೀಗೆ ವಿವಿಧ ನಾಮಗಳುಳ್ಳ ಈ ಮಹತ್ತಿನಿಂದ ವೈಕಾರಿಕ, ತೈಜಸ ಮತ್ತು ಭೂತಾದಿ ಎಂಬ ಅಹಂಕಾರತ್ರಯ ಉದಯಿಸುತ್ತದೆ. ಈ ತ್ರಿವಿಧಾಹಂಕಾರಕ್ಕೆ ಅಭಿಮಾನ, ಕರ್ತ, ಮಂತ, ಆತ್ಮ, ಎಂಬ ಹೆಸರುಗಳಿವೆ.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- GRETIL etext Archived 2009-07-24 ವೇಬ್ಯಾಕ್ ಮೆಷಿನ್ ನಲ್ಲಿ.
ಉಲ್ಲೇಖಗಳು
[ಬದಲಾಯಿಸಿ]
ಈ ಲೇಖನವು ಯಾವುದೇ ಮೂಲಗಳನ್ನು ಉಲ್ಲೇಖಿಸಿಲ್ಲ. |