ಗರುಡ ಪುರಾಣ

|
ಐತರೇಯ · ಬೃಹದಾರಣ್ಯಕ · ಈಶಾವಾಸ್ಯ · ತೈತ್ತಿರೀಯ · ಛಾಂದೋಗ್ಯ · ಕೇನ · ಮುಂಡಕ · ಮಾಂಡೂಕ್ಯ · ಕಠ · ಪ್ರಶ್ನ · ಶ್ವೇತಾಶ್ವತರ |
|
ಗರುಡ · ಅಗ್ನಿ . ನಾರದ . ಪದ್ಮ . ಸ್ಕಾಂದ . ಭವಿಷ್ಯ . ಬ್ರಹ್ಮ . ಭಾಗವತ . ಬ್ರಹ್ಮವೈವರ್ತ . ಬ್ರಹ್ಮಾಂಡ . ವಾಯು . ಲಿಂಗ . ವಿಷ್ಣು . ವಾಮನ . ಮಾರ್ಕಂಡೇಯ . ವರಾಹ . ಕೂರ್ಮ . ಮತ್ಸ್ಯ |
|
ಭಗವದ್ಗೀತೆ · ಆಗಮ· ಶೂನ್ಯ ಸಂಪಾದನ· ಶ್ರೀ ಸಿದ್ಧಾಂತ ಶಿಖಾಮಣಿ · ವೀರಶೈವ ಪುರಾಣ · ವಿಷ್ಣು ಸಹಸ್ರನಾಮ . ಬಸವರಾಜ ವಿಜಯಂ |
ಗರುಡ ಪುರಾಣವು ಹಿಂದೂ ಧರ್ಮದ ಪುರಾಣಗಳಲ್ಲಿ ಒಂದು. ೧೯,೦೦೦ ಶ್ಲೋಕಗಳನ್ನು ಹೊಂದಿರುವ ಈ ಪುರಾಣವು ವಿಷ್ಣು ತನ್ನ ವಾಹನವಾದ ಗರುಡನಿಗೆ ನೀಡುವ ಉಪದೇಶದ ರೂಪದಲ್ಲಿದೆ.
ಸ್ವರೂಪ
[ಬದಲಾಯಿಸಿ]ಗರುಡ ಮಹಾಪುರಾಣವೊಂದು ಸಂಪೂರ್ಣ ವೈಷ್ಣವಪುರಾಣ. ಗರುಡನಿಗಿದನ್ನು ಮೊದಲು ವಿಷ್ಣು ಹೇಳಿದನೆಂದೂ ಆ ಬಳಿಕ ಗರುಡ ಇದನ್ನು ಕಶ್ಯಪಮುನಿಗೆ ಹೇಳಿದನೆಂದೂ ಆದುದುರಿಂದ ಇದಕ್ಕೀ ನಾಮಧೇಯ ಬಂದಿತೆಂದೂ ಉಲ್ಲೇಖಿಸಲಾಗಿದೆ. ಸೃಷ್ಟಿಕ್ರಮ, ಯುಗಚಕ್ರ, ವಂಶಾವಳಿ ಮುಂತಾದ ಪೌರಾಣಿಕ ವಿಷಯಗಳೊಟ್ಟಿಗೇ ವಿಷ್ಣುಪೂಜೆ, ವೈಷ್ಣವ ಧರ್ಮಕರ್ಮ, ಪವಿತ್ರಸ್ಥಳ, ಪಂಚಬ್ರಹ್ಮದೇವತಾರ್ಚನೆ ಮುಂತಾದ ವಿಷಯಗಳೂ ಇದರಲ್ಲಿವೆ. ಕೆಲಮಟ್ಟಿಗಿದು ಅಗ್ನಿಪುರಾಣದಂತೆಯೇ ವಿಶ್ವಕೋಶ ಲಕ್ಷಣವುಳ್ಳದ್ದು. ಇದರಲ್ಲಿ ರಾಮಾಯಣ, ಮಹಾಭಾರತ, ಹರಿವಂಶಗಳ ಕತೆಗಳಲ್ಲದೆ, ಸೃಷ್ಟಿವಿವರಣೆ, ಖಗೋಲವಿಚಾರ, ಜ್ಯೋತಿಶಾಸ್ತ್ರದ ಅಂಶ, ಶಕುನಶಾಸ್ತ್ರ, ಸಾಮುದ್ರಿಕ ಶಾಸ್ತ್ರ, ರತ್ನಪರೀಕ್ಷೆ, ರಾಜನೀತಿ, ಯಾಜ್ಞವಲ್ಕ್ಯ ಸ್ಮೃತಿಗನುಗುಣವಾದ ಧರ್ಮವಿವೇಕ ಮೊದಲಾದ ನಾನಾ ಜ್ಞಾನಾಂಗಗಳು ತುಂಬಿಕೊಂಡಿದೆ. ಈ ಪುರಾಣದ ಉತ್ತರಖಂಡವನ್ನು ಎರಡನೆಯ ಭಾಗ ಅಥವಾ ಪ್ರೇತಕಲ್ಪ ಎನ್ನುತ್ತಾರೆ. ಪ್ರೇತಕಲ್ಪದಲ್ಲಿ ಸತ್ತಮೇಲೆ ಜೀವಾತ್ಮನಿಗೊದಗುವ ಗತಿ, ಕರ್ಮ,ಪುನರ್ಜನ್ಮ, ಮೋಕ್ಷ, ಸಂಸಾರಬೀಜವಾಗಿರುವ ಆಸೆ, ಮರಣಶಕುನ ಯಮಲೋಕಮಾರ್ಗ, ಪ್ರೇತಗಳ ಗತಿ, ನರಕಹಿಂಸೆ, ಸ್ವಪ್ನ, ಅಪಶಕುನಗಳನ್ನುಂಟು ಮಾಡುವ ಪ್ರೇತಗಳು, ಮರಣಪೂರ್ವದ ಕರ್ಮ, ಸಾಯುತ್ತಿರುವ ಮತ್ತು ಸತ್ತವರ ಬಗ್ಗೆ ಮಾಡತಕ್ಕ ಕರ್ಮ, ಉತ್ತರಕ್ರಿಯೆ, ಪಿತೃಪೂಜೆ, ಸತೀವಿಧಿ, ಗಯಾಮಾಹಾತ್ಮ್ಯ ಇತ್ಯಾದಿ ವಿವಿಧ ವಿಷಯಗಳ ವಿವರಗಳಿವೆ.
ಕಾಲ
[ಬದಲಾಯಿಸಿ]ಈ ಪುರಾಣದ ಪ್ರಾಚೀನ ಮೂಲದ ಕಾಲ ಪ್ರ.ಶ. 3-4ನೆಯ ಶತಮಾನವಾಗಿರಬಹುದಾದರೂ ಸದ್ಯದ ರೂಪದ ಅವಧಿ ಪ್ರ.ಶ. 10ನೆಯ ಶತಮಾನಕ್ಕಿಂತ ಹಿಂದಿನದಲ್ಲವೆಂದು ತರ್ಕಿಸಲಾಗಿದೆ.
ಸಾರಾಂಶ
[ಬದಲಾಯಿಸಿ]ಬ್ರಹ್ಮನ ಬಾಯಿಗಳಿಂದ ಹೊರಬಿದ್ದ ವೇದಗಳಲ್ಲಿ ಹೇಳಿದ ಕರ್ಮಗಳನ್ನು ಮಾಡಲಾರದವ ಸ್ಮೃತಿ ಹೇಳಿದ ಕರ್ಮಗಳನ್ನಾದರೂ ಮಾಡಬೇಕು. ಅದೂ ಆಗದವ ನಡೆದುಬಂದ ಸದಾಚಾರವನ್ನು ಹಿಡಿಯಬೇಕು. ರಾಜನಿಲ್ಲದ ರಾಜ್ಯದಲ್ಲಿ ಇರಬಾರದು. ರಾಜ ವಿಷ್ಣುವಿನ ಮಾನಸಪುತ್ರ. ಆತ ಪ್ರಜೆಗಳನ್ನು ಮಕ್ಕಳಂತೆ ಪಾಲಿಸಬೇಕು. ಅವನ ಆಳಿಕೆ ಸತ್ಯ, ನ್ಯಾಯಬದ್ಧವಾಗಿರಬೇಕು. ಇಂಥ ಶೀಲವುಳ್ಳ ದೊರೆ ಜಗತ್ತಿಗೆ ಭೂಷಣಪ್ರಾಯ, ದುರ್ಬಲನಿಗಿರುವ ಮಹಾಬಲ-ಎಂದು ಮುಂತಾಗಿ ಗರುಡಮಹಾಪುರಾಣ ಬೋಧಿಸುತ್ತದೆ. ಗರುಡ ಪುರಾಣದ ಸಾರವನ್ನು ಮಿಕ್ಕ ಪುರಾಣಗಳ ಅಂಶದೊಂದಿಗೆ ಸಾರೋದ್ಧಾರ ಎಂಬ ಹೆಸರಿನಲ್ಲಿ ನೌನಿಧಿರಾಮನೆಂಬಾತ ಸಂಗ್ರಹಿಸಿರುವುದಿಲ್ಲಿ ಸ್ಮರಣೀಯ.
ಬಾಹ್ಯಸಂಪರ್ಕಗಳು
[ಬದಲಾಯಿಸಿ]- The Garuda Purana at sacred-texts.com (Wood and Subrahmanyam translation, 1911)
- Roman diacritic transliteration, Bombay: Venkatesvara Steam Press, part 1 Archived 2009-09-18 ವೇಬ್ಯಾಕ್ ಮೆಷಿನ್ ನಲ್ಲಿ.
- Roman diacritic transliteration, Bombay: Venkatesvara Steam Press, part 2 Archived 2010-11-10 ವೇಬ್ಯಾಕ್ ಮೆಷಿನ್ ನಲ್ಲಿ.
- Roman diacritic transliteration, Bombay: Venkatesvara Steam Press, part 3 Archived 2010-11-10 ವೇಬ್ಯಾಕ್ ಮೆಷಿನ್ ನಲ್ಲಿ.
- The Garuda Purana summary Archived 2010-03-02 ವೇಬ್ಯಾಕ್ ಮೆಷಿನ್ ನಲ್ಲಿ.
- The Garuda Purana excerpts English translation of important verses
