ವಿಷಯಕ್ಕೆ ಹೋಗು

ಕಠೋಪನಿಷತ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹಿಂದೂ ಧರ್ಮಗ್ರಂಥಗಳು

Aum

ಋಗ್ವೇದ · ಯಜುರ್ವೇದ · ಸಾಮವೇದ · ಅಥರ್ವವೇದ

ಐತರೇಯ · ಬೃಹದಾರಣ್ಯಕ · ಈಶಾವಾಸ್ಯ · ತೈತ್ತಿರೀಯ · ಛಾಂದೋಗ್ಯ · ಕೇನ · ಮುಂಡಕ · ಮಾಂಡೂಕ್ಯ · ಕಠ · ಪ್ರಶ್ನ · ಶ್ವೇತಾಶ್ವತರ

ಗರುಡ · ಅಗ್ನಿ . ನಾರದ . ಪದ್ಮ . ಸ್ಕಾಂದ . ಭವಿಷ್ಯ . ಬ್ರಹ್ಮ . ಭಾಗವತ . ಬ್ರಹ್ಮವೈವರ್ತ . ಬ್ರಹ್ಮಾಂಡ . ವಾಯು . ಲಿಂಗ . ವಿಷ್ಣು . ವಾಮನ . ಮಾರ್ಕಂಡೇಯ . ವರಾಹ . ಕೂರ್ಮ . ಮತ್ಸ್ಯ

ಮಹಾಭಾರತ · ರಾಮಾಯಣ

ಭಗವದ್ಗೀತೆ · ಆಗಮ· ಶೂನ್ಯ ಸಂಪಾದನ· ಶ್ರೀ ಸಿದ್ಧಾಂತ ಶಿಖಾಮಣಿ · ವೀರಶೈವ ಪುರಾಣ · ವಿಷ್ಣು ಸಹಸ್ರನಾಮ . ಬಸವರಾಜ ವಿಜಯಂ

ಕಠೋಪನಿಷತ್ಅತ್ಯಂತ ಪ್ರಮುಖವಾದ ಉಪನಿಷತ್ತು.ಪಾಶ್ಚಾತ್ಯ ವಿದ್ವಾಂಸರು ಭಾರತೀಯ ಅಧ್ಯಾತ್ಮ ರಹಸ್ಯಗಳನ್ನು ವಿವರಿಸುವಾಗ ಇದನ್ನು ಪರಮಾದರ್ಶವಾಗಿ ಉಲ್ಲೇಖಿಸುತ್ತಾರೆ.,[೧] ಇದು ಕೃಷ್ಣಯಜುರ್ವೇದದ ಕಾಠಕ ಶಾಖೆಗೆ ಸೇರಿದೆ.ಇದರಲ್ಲಿ ಮೂರು ವಲ್ಲಿಗಳನ್ನೊಳಗೊಂಡ ಎರಡು ಅಧ್ಯಾಯಗಳಿವೆ.ನಚಿಕೇತನು ಯಮಲೋಕಕ್ಕೆ ಹೋಗಿ ಯಮನಿಂದ ಆತ್ಮಜ್ಞಾನವನ್ನು ಹೊಂದಿದ ಕಥೆ ಇದರ ಮುಖ್ಯವಸ್ತು.

ಇದು ಎರಡು ಅಧ್ಯಾಯಗಳಿಂದ ಕೂಡಿದೆ. ಬ್ರಹ್ಮವಿದ್ಯೆಯನ್ನು ಬೇಡಿದ ನಚಿಕೇತನಿಗೆ ಯಮದೇವ ಪ್ರಲೋಭನಗಳನ್ನು ಒಡ್ಡಿದರೂ ಆತ ಅದಾವುದನ್ನೂ ಲಕ್ಷಿಸದೆ ಬ್ರಹ್ಮವಿದ್ಯೆಯನ್ನೇ ವರವಾಗಿ ಪಡೆದ ರೋಮಾಂಚನಕಾರಿ ಕಥೆ ಇರುವುದರಿಂದ ಅತ್ಯಂತ ಪ್ರಸಿದ್ಧವಾಗಿದೆ. ಜನ್ಮ, ಪುನರ್ಜನ್ಮಗಳು, ಮರಣಾನಂತರ ಆತ್ಮದ ಸ್ಥಿತಿ, ಇಂದ್ರಿಯನಿಗ್ರಹ ದಿಂದ ಪರಮಾತ್ಮಪ್ರಾಪ್ತಿ, ಶ್ರದ್ಧೆ, ಧೈರ್ಯಗಳಿಂದ ಪರಮಾತ್ಮ ಸ್ವರೂಪಜ್ಞಾನ, ಶಾಶ್ವತಸುಖ ಶಾಂತಿಗಳ ಪ್ರಾಪ್ತಿ-ಇವನ್ನು ಯಮ ಪ್ರಣವದಿಂದ ಸಂಗ್ರಹವಾಗಿ ನಚಿಕೇತನಿಗೆ ಉಪದೇಶಿಸಿ ದ್ದಾನೆ. ತಂದೆಯಾದ ವಾಜಶ್ರವಸ್ ಯಾಗ ಸಂದರ್ಭದಲ್ಲಿ ಕುಪಿತನಾಗಿ ತನ್ನನ್ನು ಯಮನಿಗೆ ಒಪ್ಪಿಸಿದರೂ ಧೈರ್ಯಗೆಡದೆ ಮಗನಾದ ನಚಿಕೇತ ಯಮನೊಂದಿಗೆ ವಾದಮಾಡಿ ಅಮೃತತ್ವವನ್ನು ಪಡೆಯುತ್ತಾನೆ. ತಂದೆಯ ಪ್ರಸನ್ನತೆಯೊಂದಿಗೆ ಅಗ್ನಿವಿದ್ಯೆಯನ್ನೂ ವರವಾಗಿ ಪಡೆಯುತ್ತಾನೆ. ಈ ಆಖ್ಯಾನವನ್ನು ಹೇಳಿದರೂ ಕೇಳಿದರೂ ಬ್ರಹ್ಮಲೋಕಪ್ರಾಪ್ತಿಯೆಂದು ಫಲಶ್ರುತಿ ಇದೆ. ಇದರಲ್ಲಿ ಮಾನವನ ಹುಟ್ಟು ಸಾವುಗಳ ಪ್ರಶ್ನೆಗೂ ಅವನ ಸುಖಕ್ಕೆ ಶ್ರೇಯ ಪ್ರೇಯಗಳಾವುವು ಎಂಬ ಪ್ರಶ್ನೆಗೂ ಉತ್ತರವಿದೆ. ನಿತ್ಯರಲ್ಲಿ ನಿತ್ಯನೂ ಚೇತನರಲ್ಲಿ ಚೇತನನೂ ಆಗಿ ಸಮಸ್ತಕ್ಕೂ ಏಕೈಕ ಕಾರಣನಾದ ಪರಮಾತ್ಮನನ್ನು ನಚಿಕೇತನಂಥ ಅಸಾಧಾರಣ ಧೀರನಾದವ ಮಾತ್ರ ಹೃದಯಗಹ್ವರದಲ್ಲಿ ಕಂಡುಕೊಳ್ಳುವನೆಂದು ಸ್ಪಷ್ಟಪಡಿಸಲಾಗಿದೆ. ಕೆಲವು ಸ್ವಾರಸ್ಯವಾದ ಅಂಶಗಳೂ ಇದರಲ್ಲಿ ಕಂಡುಬಂದಿವೆ. ಪರಲೋಕದಲ್ಲಿ ನಂಬಿಕೆ ಇಲ್ಲದವರು ಆ ಕಾಲದಲ್ಲೂ ಇದ್ದರೆಂದು ಸೂಚಿಸಲಾಗಿದೆ. ‘ಆಶ್ಚರ್ಯೋ ವಕ್ತಾ’. ‘ಅಣೋರಣೀಯಾನ್’, ‘ಅಜೋ ನಿತ್ಯಃ ಶಾಶ್ವತೋಯ ಪುರಾಣಃ’ ಎಂಬ ಉಕ್ತಿಗಳನ್ನು ಗೀತೆಯಲ್ಲಿ ತೆಗೆದುಕೊಳ್ಳಲಾಗಿದೆ. ಸಾಂಖ್ಯ ಮತ್ತು ಯೋಗದರ್ಶನಗಳಿಗಿಂತ ಈ ಉಪನಿಷತ್ ಹಿಂದಿನದೆಂದು ಕೆಲವು ವಾಕ್ಯಗಳು ಸೂಚಿಸುತ್ತವೆ: `ತದ್ವಿಷ್ಣೋಃ ಪರಮಂ ಪದಮ್’ ಎಂಬ ವಾಕ್ಯ ವಿಷ್ಣುವೇ ಪರಬ್ರಹ್ಮನೆಂದು ಈ ಉಪನಿಷತ್ತಿನ ನಿರ್ಣಯವೆಂದು ತೋರಿಸುತ್ತದೆ. ‘ಮೃತ್ಯೋಃ ಸಮೃತ್ಯುಮಾಪ್ನೋತಿ ಯ ಇಹ ನಾನೇವಪಶ್ಯತಿ’ ಎಂಬ ವಾಕ್ಯದಲ್ಲಿ ಅದ್ವೈತ ತತ್ತ್ವದ ಅಭಿಪ್ರಾಯವಿದೆ.

ಈ ಉಪನಿಷತ್ತಿನ ಪ್ರರ್ಥನಾ ಶ್ಲೋಕ ಇಂತಿದೆ.

    ಹರಿಃ ಓಂ
ಸಹ ನಾವವತು|ಸಹ ನೌ ಭುಜಕ್ತು|ಸಹ ವೀರ್ಯಂ ಕರವಾವಹೈ|
ತೇಜಸ್ವಿ ನಾವಧೀತಮಸ್ತು| ಮಾ ವಿದ್ವಿಷಾವಹೈ||
ಓಂ ಶಾಂತಿಃ   ಶಾಂತಿಃ  ಶಾಂತಿಃ

(ಭಗವಂತನು)ಗುರುಶಿಷ್ಯರಾದ ನಮ್ಮಿಬ್ಬರನ್ನೂ ಜೊತೆಯಲ್ಲಿ ಕಾಪಾಡಲಿ;ನಮ್ಮಿಬ್ಬರನ್ನೂ ಜೊತೆಯಲ್ಲಿ ಪೋಷಿಸಲಿ;(ನಾವು)ಜೊತೆಯಲ್ಲಿ ಸಾಮರ್ಥ್ಯವಂತರಾಗುವಂತೆ ಮಾಡಲಿ;ನಮ್ಮಿಬ್ಬರ ಅಧ್ಯಯನವು ತೇಜಸ್ವಿಯಾಗಲಿ;(ನಾವು ಪರಸ್ಪರ)ದ್ವೇಷಮಾಡದೆ ಇರುವಂತಾಗಲಿ.

ಆಧಾರ[ಬದಲಾಯಿಸಿ]

  • Max Muller:sacred Books of the east.
  • ಕಠೋಪನಿಷತ್:ಸ್ವಾಮೀ ಆದಿದೇವಾನಂದ
Recitation
ಅನುವಾದಗಳು
ಪಠ್ಯ

ಉಲ್ಲೇಖಗಳು[ಬದಲಾಯಿಸಿ]

  1. Max Muller:sacred Books of the east
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: