ಬ್ರಹ್ಮ
ಗೋಚರ
- ಅಜ ಇಲ್ಲಿ ಪುನರ್ನಿರ್ದೇಶಿಸುತ್ತದೆ. ಆಡು ಲೇಖನಕ್ಕಾಗಿ ಇಲ್ಲಿ ನೋಡಿ.
ಬ್ರಹ್ಮ | |
---|---|
ಪ್ರಪಂಚದ ಮತ್ತು ವೇದಗಳ ಸೃಷ್ಟಿಕರ್ತ | |
ದೇವನಾಗರಿ | ब्रह्मा |
ಸಂಸ್ಕೃತ ಲಿಪ್ಯಂತರಣ | Brahmā |
ಸಂಲಗ್ನತೆ | ದೇವ (ತ್ರಿಮೂರ್ತಿ) |
ನೆಲೆ | ಸತ್ಯಲೋಕ (ಬ್ರಹ್ಮಲೋಕ) |
ಮಂತ್ರ | Om Brang Brahmaneya Namaha |
ಸಂಗಾತಿ | ಸರಸ್ವತಿ, ಬ್ರಹ್ಮಣಿ, ಗಾಯತ್ರಿ |
ವಾಹನ | ಹಂಸ |
ಬ್ರಹ್ಮ ಹಿಂದೂ ಧರ್ಮದಲ್ಲಿ ಮೊಟ್ಟ ಮೊದಲು ಬಂದವರು ಎನ್ನಲಾಗುತ್ತದೆ. ಸರಸ್ವತಿಯು ಬ್ರಹ್ಮನ ಹೆಂಡತಿ, ಮತ್ತು ನಾರದರು ಬ್ರಹ್ಮನ ಮಾನಸ ಪುತ್ರರು. ಜಡಜಜ ಎಂಬ ಹೆಸರು ಉಂಟು. ಜಡ ಎಂದರೆ ಚಲನೆ ಇಲ್ಲದ ಎಂದರ್ಥ. ಜಡಕ್ಕೆ ಕೆಸರು ಎಂಬರ್ಥವೂ ಇದೆ. ಹೀಗೆ ಜಡಜ ಎಂದರೆ ಕೆಸರಿನಲ್ಲಿ ಜನಿಸಿದ್ದು ಅಂದರೆ ಕಮಲ ಎಂದರ್ಥ.
ಬ್ರಹ್ಮನನ್ನು ಗುಣತ್ರಯ ರಹಿತ, ಉಪಾಧಿರಹಿತ, ಪರಿಚ್ಛೇದಶೂನ್ಯ, ಸಚ್ಚಿದಾನಂದ ಸ್ವರೂಪ, ಪರಾತ್ಪರ, ಪರಮಾತ್ಮ, ಪರಬ್ರಹ್ಮ, ಸರ್ವಲೋಕಪಿತಾಮಹ, ಪ್ರಜಾಪತಿ, ಸ್ವಯಂಭು. ಸರ್ವಲೋಕಪ್ರಭು, ಮಹಾತಪಸ್ವಿ, ಹಿರಣ್ಯಗರ್ಭ ಎಂದು ಮುಂತಾಗಿ ಭಾರತ, ಭಾಗವತ, ರಾಮಾಯಣ ಮತ್ತು ಪುರಾಣಗಳಲ್ಲಿ ಹೊಗಳಲಾಗಿದೆ.
ಬ್ರಹ್ಮನಿಗೆ ಸಂಬಂಧಿಸಿದ ಸಂಗತಿಗಳು
[ಬದಲಾಯಿಸಿ]- ಇಂದ್ರಜಿತ್ತು ಇಂದ್ರನನ್ನು ಸೆರೆಹಿಡಿದಾಗ ಬ್ರಹ್ಮ ಅವನನ್ನು ಬಿಡಿಸಿದ. ರಾಮಾಯಣ ರಚಿಸುವುದಕ್ಕೆ ಮೊದಲು ಬ್ರಹ್ಮ ವಾಲ್ಮೀಕಿಯಲ್ಲಿಗೆ ಬಂದು ವರವಿತ್ತು ಅನುಗ್ರಹಿಸಿದ. ಸೀತೆ ಅಗ್ನಿಪ್ರವೇಶ ಮಾಡಿದ ಕಾಲದಲ್ಲಿ ರಾಮನೊಡನೆ ಆಕೆಯ ಸಚ್ಚಾರಿತ್ರ್ಯ ಹೊಗಳಿದ.
- ಬ್ರಹ್ಮ ತಾನೇ ಸೃಷ್ಟಿಸಿದ ಸರಸ್ವತಿಯನ್ನು ಕಾಮದಿಂದ ನೋಡಲು ಬಯಸಿದ. ಆಗ ಅವಳು ಹೆಣ್ಣು ಜಿಂಕೆಯಾಗಿ ಶಿವನ ಬಳಿ ರಕ್ಷಣೆ ಬೇಡಿದಳು. ಶಿವ ಆ ಜಿಂಕೆಯನ್ನು ತನ್ನ ತೊಡೆಯಮೇಲಿಟ್ಟುಕೊಂಡು ರಕ್ಷಿಸಿ ಬ್ರಹ್ಮನನ್ನು ಬಾಣಗಳಿಂದ ಹೊಡೆದೋಡಿಸಿದ. ಇದರಿಂದ ಶಿವನಿಗೆ ಮೃಗಧರ, ಮೃಗಾಲಯ ಎಂಬ ಹೆಸರು ಬಂತು.
- ಲಂಕೆಯೊಂದಿಗೆ ಸಂಬಂಧ - ಬ್ರಹ್ಮನ ಮಾನಸಪುತ್ರನಾದ ಪುಲಸ್ತ್ಯನಿಂದ ತೃಣಬಿಂದು ಎಂಬ ರಾಜರ್ಷಿಯ ಮಗಳಾದ ಗೋ ಎಂಬಾಕೆಯಲ್ಲಿ ವಿಶ್ವವಸು ಎಂಬಾತ ಜನಿಸಿದ. ಈ ವಿಶ್ವವಸ್‍ನಿಂದ ಭರದ್ವಾಜ ಮಹರ್ಷಿಯ ಪುತ್ರಿ ದೇವವರ್ಣಿನಿಯಲ್ಲಿ ವೈಶ್ರವಣ ಜನಿಸಿದ. ಈತ ತನ್ನ ತಪಸ್ಸಿನಿಂದ ಬ್ರಹ್ಮನನ್ನು ಮೆಚ್ಚಿಸಿ ಕುಬೇರನಾದ. ಪುಷ್ಪಕವಿಮಾನ ಪಡೆದು ಲಂಕೆಯಲ್ಲಿ ವಾಸಿಸುತ್ತಿದ್ದ. ಇವನ ತಂದೆ ವಿಶ್ವವಸುವಿನಿಂದ ಸುಮಾಲಿ ರಾಕ್ಷಸನ ಮಗಳಾದ ಕೇಕಸಿಯು ರಾವಣ, ಕುಂಭಕರ್ಣ, ಶೂರ್ಪನಖಿ, ವಿಭೀಷಣರೆಂಬ ಮಕ್ಕಳನ್ನು ಪಡೆದಳೂ. ಇದರಿಂದಾಗಿ ಬ್ರಹ್ಮ ರಾವಣ ಕುಂಭಕರ್ಣಾದಿಗಳ ಪ್ರಪಿತಾಮಹ.
- ಬ್ರಹ್ಮನ ಇನ್ನೊಬ್ಬ ಮಾನಸಪುತ್ರನಾದ ಕುಶನಿಗೆ ವೈದರ್ಭೀಯಲ್ಲಿ ಕುಶಾಂಬ, ಕುಶನಾಭ, ಅಧೂರ್ತ ರಜಸ, ವಸು ಎಂಬ ನಾಲ್ವರು ಮಕ್ಕಳು ಜನಿಸಿದರು. ಇವರಲ್ಲಿ ಕುಶನಾಭನಿಗೆ ಘೈತಾಚಿಯಲ್ಲಿ ನೂರು ಮಂದಿ ಹೆಣ್ಣು ಮಕ್ಕಳು ಜನಿಸಿದರು. ಇವರನ್ನು ಕುಶನಾಭ ಚೂಲಿ ಎಂಬ ಋಷಿಯಿಂದ ಸೋಮದೆಯೆಂಬ ಗಂಧರ್ವಿಯಲ್ಲಿ ಹುಟ್ಟಿದ ಬ್ರಹ್ಮದತ್ತನಿಗೆ ಮದುವೆ ಮಾಡಿಕೊಟ್ಟು ಅನಂತರ ಪುತ್ರಕಾಮೇಷ್ಠಿ ಮಾಡಿದ. ಕೆಲವು ಕಾಲಾನಂತರ ಗಾಧಿಯೆಂಬ ಪುತ್ರ ಜನಿಸಿದ. ಈತನ ಮಗನೇ ವಿಶ್ವಾಮಿತ್ರ. ಈತನಿಗೆ ಕೌಶಿಕನೆಂದು ಮತ್ತೊಂದು ಹೆಸರು. ಇದರಿಂದಾಗಿ ಬ್ರಹ್ಮ ವಿಶ್ವಾಮಿತ್ರನ ತಾತನ ತಾತ ಎಂದು ರಾಮಯಣದಿಂದ ತಿಳಿದುಬರುತ್ತದೆ.
- ಬ್ರಹ್ಮನ ಹುಟ್ಟು - ವಿಷ್ಣು ಶೇಷಶಾಯಿಯಾಗಿ ಯೋಗನಿದ್ರೆಯಲ್ಲಿದ್ದಾಗ ಸೂರ್ಯನಿಗೆ ಸಮಾನವಾದ ತೇಜಸ್ಸಿನಿಂದ ಕೂಡಿದ್ದ. ಬಹು ಸುಂದರವಾಗಿದ್ದ ಕಮಲಪುಷ್ಪವೊಂದು ಮಹಾವಿಷ್ಣುವಿನ ನಾಭಿಯಿಂದ ಉದಯಿಸಿತು. ಆ ನಾಭಿಕಮಲದಿಂದ ಬ್ರಹ್ಮ ಉದಯಿಸಿದ. ಸರ್ಪಶಯ್ಯೆಯಲ್ಲಿ ವಿಷ್ಣು ಯೋಗನಿದ್ರೆಯಲ್ಲಿ ಮಲಗಿರುವುದನ್ನೂ ಅವನ ನಾಭಿಕಮಲದಿಂದ ನಾಲ್ಕು ತಲೆಗಳುಳ್ಳ ಬ್ರಹ್ಮ ಉದಯಿಸಿರುವುದನ್ನೂ ನೋಡಿದ ಮಧುಕೈಟಭರೆಂಬ ರಾಕ್ಷಸರು ತಮ್ಮ ರಾಕ್ಷಸ ಸ್ವಭಾವಕ್ಕನುಗುಣವಾಗಿ ಬ್ರಹ್ಮನನ್ನು ಹೆದರಿಸಿದರು. ಆತ ನಡುಗಲಾರಂಭಿಸಿದ. ಆಗ ಅವನು ಕುಳಿತಿದ್ದ ನಾಭಿಪದ್ಮದ ದಳಗಳೂ ಸ್ವಾಭಾವಿಕವಾಗಿಯೇ ಕಂಪಿಸಿದವು. ಆದರಿಂದ ವಿಷ್ಣು ಎಚ್ಚರಗೊಂಡು ಆ ಇಬ್ಬರು ರಾಕ್ಷಸರನ್ನು ಸಂಹರಿಸಿದ.
- ಈ ಮಧುಕೈಟಭರ ಪುತ್ರ ಧುಂಧು ಬ್ರಹ್ಮನನ್ನು ಕುರಿತು ತಪಸ್ಸು ಮಾಡಿದ. ಬ್ರಹ್ಮ ಪ್ರತ್ಯಕ್ಷನಾದಾಗ ಆತ ದೇವ, ದಾನವ, ಯಕ್ಷ, ನಾಗ, ಗಂಧರ್ವ, ರಾಕ್ಷಸರಲ್ಲಿ ಯಾರೊಬ್ಬರೂ ತನ್ನನ್ನು ವಧಿಸಲು ಸಮರ್ಥರಾಗಬಾರದೆಂದು ವರ ಕೇಳಿದ. ಬ್ರಹ್ಮನಿಂದ ವರ ಪಡೆದ ಈತ ದೇವತೆಗಳಿಗೆ ಪೀಡೆಯಾದ. ಆಗ ಬ್ರಹ್ಮದಶ್ವನ ಮಗ ಕುವಲಾಶ್ವ ಆತನನ್ನು ಸಂಹರಿಸಿದ.
- ವ್ಯಾಸರು ತಮ್ಮ ಮಹಾಭಾರತವನ್ನು ಬರೆದುಕೊಳ್ಳಲು ಸಮರ್ಥ ಲಿಪಿಕಾರನಾರೆಂದು ಚಿಂತಿಸುತ್ತಿರುವಾಗ, ಇದನ್ನು ತಿಳಿದ ಬ್ರಹ್ಮ ತಾನೇ ವ್ಯಾಸರಲ್ಲಿಗೆ ಹೋಗಿ ಗಣಪತಿಯೇ ಸಮರ್ಥ ಲಿಪಿಕಾರನೆಂದು ಸೂಚಿಸಿದ.
- ಬ್ರಹ್ಮನ ಮಾನಸಪುತ್ರರು - ಬ್ರಹ್ಮನಿಗೆ ಮರೀಚಿ. ಅತ್ರಿ, ಆಂಗಿರಸ್ಸು. ಪುಲಸ್ತ್ಯ, ಪುಲಹ, ಕ್ರತು ಎಂಬುದಾಗಿ ಆರು ಮಂದಿ ಮಾನಸಪುತ್ರರು. ಸನಕ, ಸನಂದನ, ಸನತ್ಕುಮಾರ ಮತ್ತು ಸನತ್ಸುಜಾತರು ಸೃಷ್ಟಿಯ ಆದಿಯಲ್ಲಿ ಬ್ರಹ್ಮನ ಮಾನಸ ಪುತ್ರರು. ಇವರು ಯಾವಾಗಲು ಕೌಮಾರಾವಸ್ಥೆಯಲ್ಲಿಯೇ ಇರತಕ್ಕವರು. ಮಹಾತಪಸ್ವಿಗಳೂ ಜ್ಞಾನಸಂಪನ್ನರೂ ಆದವರು. ಈತನಿಗೆ ಸ್ವಾಯಂಭುವ ಮನ್ವಂತರದಲ್ಲಿ ಮರೀಚಿ, ಅತ್ರಿ, ಆಂಗಿರಸ, ಪುಲಸ್ತ್ಯ, ಪುಲಹ, ಕ್ರತು, ಭೃಗುದಕ್ಷ, ವಸಿಷ್ಠ ಎಂದು ಒಂಬತ್ತು ಜನ ಮಾನಸಪುತ್ರರು ಜನಿಸಿದ ಮೇಲೆ ಕಡೆಯದಾಗಿ ಈತನ ತೊಡೆಯಿಂದ ನಾರದ ಜನಿಸಿದ ಎಂಬುದಾಗಿ ಭಾಗವತದಿಂದ ಗೊತ್ತಾಗುತ್ತದೆ.
- ಬ್ರಹ್ಮನಿಂದ ಜನಿಸಿದವರು - ಬ್ರಹ್ಮನ ಮತ್ತೊಬ್ಬ ಮಗ ಮನು. ಮನುವಿನ ಮಗ ಪ್ರಜಾಪತಿ. ಬ್ರಹ್ಮನ ಬಲಗಡೆಯ ಸ್ತನವನ್ನು ಭೇದಿಸಿಕೊಂಡು ನಿರೂಪಿಯಾಗಿ ಸಕಲ ಲೋಕ ಸುಖಾವಹನಾದ ಭಗವಾನ್ ಧರ್ಮ ಹೊರಗೆ ಬಂದ. ಮಹಾತಪಸ್ವಿಯಾದ ದಕ್ಷ ಹುಟ್ಟಿದ್ದು ಬ್ರಹ್ಮನ ಬಲಗಾಲಿನ ಅಂಗುಷ್ಟದಿಂದ. ಬ್ರಹ್ಮನ ಎಡಗಾಲಿನ ಅಂಗುಷ್ಠದಿಂದ ದಕ್ಷನ ಭಾರ್ಯೆ ಹುಟ್ಟಿದಳು. ಇವರಿಗೆ ಐವತ್ತು ಜನ ಹೆಣ್ಣು ಮಕ್ಕಳು. ಇವರಲ್ಲಿ ಹತ್ತು ಜನರನ್ನು ಧರ್ಮನಿಗೆ ಮದುವೆ ಮಾಡಿಕೊಟ್ಟ. ಧರ್ಮ ಮೂರ್ತಿಯ ಸಂದರ್ಶನಕ್ಕೆ ಅವನ ಪತ್ನಿಯರಾದ ಕೀರ್ತಿ, ಲಕ್ಮ್ಷೀ, ಧೃತಿ, ಮೇಧಾ, ಪುಷ್ಟಿ, ಶ್ರದ್ಧಾ, ಕ್ರಿಯಾ, ಬುದ್ಧಿ, ಲಜ್ಜಾ, ಮತಿ-ಇವರೇ ಮಾರ್ಗದರ್ಶಕರೆಂದು ಬ್ರಹ್ಮನೇ ನಿಶ್ಚಯಿಸಿದ್ದಾನೆ. ಬ್ರಹ್ಮನ ಹೃದಯವನ್ನು ಭೇದಿಸಿಕೊಂಡು ಭೃಗುಮಹರ್ಷಿ ಹೊರಗೆ ಬಂದ. ಭೃಗುವಿನ ಮಗ ಕವಿ. ಕವಿಯ ಮಗ ಶುಕ್ರ. ಶುಕ್ರ ಬ್ರಹ್ಮನ ನಿರ್ದೇಶನದಂತೆ ಮೂರು ಲೋಕಗಳ ರಕ್ಷಣಾರ್ಥವಾಗಿ ಗ್ರಹವಾಗಿ ಪರಿವರ್ತನೆ ಹೊಂದಿ ಲೋಕದ ಜನರಿಗೆ ಅತಿವೃಷ್ಟಿ ಅನಾವೃಷ್ಟ್ಟಿ ಮತ್ತು ಸುವೃಷ್ಟಿಗಳನ್ನೂ ಭಯ ಮತ್ತು ಅಭಯವನ್ನೂ ಕಾಲಾನುಗುಣವಾಗಿ ನೀಡುತ್ತ ಪ್ರಪಂಚದ ಸುತ್ತಲೂ ತಿರುಗುತ್ತಿದ್ದಾನೆ. ಬ್ರಹ್ಮನಿಗೆ ಧಾತೃ, ವಿಧಾತೃ ಎಂಬ ಮತ್ತಿಬ್ಬರು ಮಕ್ಕಳು. ಆ ಇಬ್ಬರಲ್ಲಿ ಈ ಪ್ರಪಂಚದ ಆಗು ಹೋಗುಗಳು ಅಡಗಿವೆ. ವೈಶ್ರವಣ ತಂದೆಯಾದ ಪುಲಸ್ತ್ಯನೊಡನಿರದೆ ಪಿತಾಮಹನಾದ ಬ್ರಹ್ಮನ ಬಳಿಗೇ ಹೋದ. ಇದರಿಂದ ಕುಪಿತನಾದ ಪುಲಸ್ತ್ಯ ವೈಶ್ರವಣನನ್ನು ಬಾಧೆ ಪಡಿಸುವ ಸಲುವಾಗಿ ಯೋಗಬಲದಿಂದ ದೇಹಾಂತರದಿಂದ ವಿಶ್ರವಸನೆಂಬ ದೇಹಾಂತರ ಪಡೆದ. ತಂದೆಯನ್ನು ಬಿಟ್ಟು ತನ್ನ ಬಳಿಗೆ ಬಂದ ವೈಶ್ರವಣದ ವಿಷಯದಲ್ಲಿ ಬ್ರಹ್ಮ ಸುಪ್ರೀತನಾಗಿ ಅವನಿಗೆ ಅಮರತ್ವವನ್ನೂ ಸಕಲೈಶ್ವರ್ಯಗಳ ಈಶತ್ವವನ್ನೂ ಲೋಕಪಾಲಸ್ಥಾನವನ್ನೂ ಈಶಾನನೊಡನೆ ಸಖ್ಯವನ್ನೂ ನಳಕೂಬರನೆಂಬ ಹೆಸರಿನ ಪುತ್ರನನ್ನೂ ನೀಡಿ ರಕ್ಷೋಗಣಗಳಿಂದ ಪರಿವೃತವಾಗಿದ್ದ ಲಂಕಾರಾಜ್ಯಕ್ಕೆ ಅಧಿಪತಿಯಾಗಿ ಮಾಡಿದ. ಇಚ್ಛೆ ಬಂದಲ್ಲಿಗೆ ಹೋಗಬಹುದಾಗಿದ್ದ ಪುಷ್ಟಕ ವಿಮಾನವನ್ನೂ ಯಕ್ಷರ ನಾಯಕತ್ವವನ್ನೂ ರಾಜರಾಜನೆಂಬ ಅಭಿಧಾನವನ್ನೂ ಬ್ರಹ್ಮ ವೈಶ್ರವಣನಿಗೆ ನೀಡಿದ. ಈ ವೈಶ್ರವಣ ಅಥವಾ ಕುಬೇರ ತಂದೆಯಾದ ಪುಲಸ್ತ್ಯನ ಮತ್ತೊಂದು ಅವತಾರವೇ ವಿಶ್ರವಸನ ಸ್ವರೂಪವೆಂಬುದನ್ನು ತಿಳಿದು ಆತನ ಅನುಗ್ರಹ ಪಡೆಯಲೋಸುಗ ಲಂಕಾಪಟ್ಟಣದಲ್ಲಿ ವಾಸಮಾಡುತ್ತ ಆತನ ಸೇವಾರ್ಥವಾಗಿ ಪುಷ್ಪೋತ್ಕಟೆ, ರಾಕೆ, ಮಾಲಿನಿಯರೆಂಬ ಮೂರು ಮಂದಿ ರಾಕ್ಷಸ ಸ್ತ್ರೀಯರನ್ನು ನೇಮಿಸಿದ. ಇವರು ವಿಶ್ರವಸ್ಸಿನ ರೂಪದ ಪುಲಸ್ತ್ಯನ ಅನುಗ್ರಹಕ್ಕೆ ಪಾತ್ರರಾಗಿ ಪುಷ್ಟೋತ್ಕಟೆ ರಾವಣ ಕುಂಭಕರ್ಣರನ್ನೂ ಮಾಲಿನಿ ಧರ್ಮಾತ್ಮ ವಿಭೀಷಣನನ್ನೂ ರಾಕೆ ಖರ ಮತ್ತು ಶೂರ್ಪನಖಿಯೆಂಬ ಅವಳಿ ಮಕ್ಕಳನ್ನೂ ಪಡೆದರು. ಇದರಿಂದ ಬ್ರಹ್ಮ ರಾವಣ ಕುಂಭಕರ್ಣಾದಿಗಳ ಪಿತಾಮಹನೆಂದು ಮಹಾಭಾರತದಿಂದ ತಿಳಿಯುತ್ತದೆ.
- ಬ್ರಹ್ಮ ವಿಷ್ಣುವಿನ ನಾಭಿ ಕಮಲದಿಂದ ಜನಿಸಿದ. ಹುಟ್ಟಿದಾಗ ಒಂದೇ ಮುಖವಿತ್ತು. ಆಗ ಬ್ರಹ್ಮ ಕಮಲ ಮಧ್ಯದಲ್ಲಿ ಕುಳಿತು ಶೂನ್ಯನಾಗಿದ್ದ. ಅನಂತರ ನಾಲ್ಕು ದಿಕ್ಕು ನೋಡಿ ನಾಲ್ಕು ಮುಖಗಳನ್ನು ಪಡೆದ. ಅತ್ರಿ ಮುನಿಯ ಪತ್ನಿಯಾದ ಅನಸೂಯಾ ದೇವಿಯಲ್ಲಿ ಚಂದ್ರನಾಗಿ ಅವತರಿಸಿದ. ತ್ರಿಪುರ ಸಂಹಾರ ಸಂದರ್ಭದಲ್ಲಿ ಪರಮೇಶ್ವರನಿಗೆ ಸಾರಥಿಯಾದ. ನಾರಾಯಣನಿಂದ ಭಾಗವತ ಕಥೆ ಕೇಳಿ ಆತನನ್ನು ಸ್ತುತಿಸಿದ.
- ಲಿಂಗಪುರಾಣದಲ್ಲಿ - ಲಿಂಗಪುರಾಣದಿಂದ ಬ್ರಹ್ಮನ ಬಗ್ಗೆ ಗೊತ್ತಾಗುವ ವಿಷಯವಿದು. ಬ್ರಹ್ಮ ಶಿವನಿಂದ ಯೋಗಮಾಯೆಯಲ್ಲಿ ಜನಿಸಿದ. ಪಾರ್ವತಿ ಶಿವನನ್ನು ಮೆಚ್ಚಿಸುವುದಕ್ಕಾಗಿ ತೀವ್ರ ತಪಸ್ಸನ್ನು ಕೈಕೊಂಡಿರಲು, ಬ್ರಹ್ಮ ಆಕೆಯಲ್ಲಿಗೆ ಬಂದು ನಮಸ್ಕರಿಸಿ ಹೊಗಳಿ ಮಹಾದೇವ ತಪ್ಪದೆ ನಿನ್ನನ್ನು ವರಿಸುತ್ತಾನೆ. ನಾವೆಲ್ಲರೂ ಆತನ ಕಿಂಕರರು ಎಂದು ಹೇಳಿ ಕಣ್ಮರೆಯಾದ.
- ಶಿವನಿಗಿದ್ದಂತೆ ಬ್ರಹ್ಮನಿಗೂ ಐದು ತಲೆಗಳಿದ್ದುವು. ಬ್ರಹ್ಮ ತ್ರಿಮೂರ್ತಿಗಳಲ್ಲಿ ತಾನೇ ಸರ್ವಶ್ರೇಷ್ಠನೆಂದು ಭಾವಿಸಿ ವೇದಗಳನ್ನು ನಿಂದಿಸಿ ಮಾತನಾಡಿದಾಗ ಶಿವ ಮೈದೋರಿ, ಬ್ರಹ್ಮನಿಂದ ತಿರಸ್ಕೃತನಾಗಿ, ಭೈರವನನ್ನು ಸೃಜಿಸಿ, ಆತನ ಮೂಲಕ ಬ್ರಹ್ಮನ ಐದನೆಯ ತಲೆಯನ್ನು ಕತ್ತರಿಸಿದ. ಆಗ ಭೈರವನಿಗೆ ಬ್ರಹ್ಮಹತ್ಯೆ ಪ್ರಾಪ್ತವಾಯಿತು. ಬ್ರಹ್ಮಕಪಾಲ ಭೈರವನ ಕೈಗೆ ಅಂಟಿಕೊಂಡಿತು. ಭೈರವ ಕಾಪಾಲಿಕನಾಗಿ ತಿರುಗುತ್ತಿದ್ದು ವಿಷ್ಣುವನ್ನು ಸಂದರ್ಶಿಸಿದ. ಭೈರವ ಕಾಶೀ ಕ್ಷೇತ್ರಕ್ಕೆ ಬಂದಾಗ ಬ್ರಹ್ಮಹತ್ಯೆ ಪಾತಾಳಕ್ಕೆ ಕುಸಿಯಿತು. ಬ್ರಹ್ಮನಿಗೆ ಮಾನವಲೋಕದಲ್ಲಿ ದೇವಾಲಯ, ಪೂಜೆ, ರಥೋತ್ಸವಾದಿಗಳು ಇಲ್ಲದಿರುವಂತೆ ಶಿವನೇ ಶಾಪಕೊಟ್ಟನೆಂದು ಶಿವಪುರಾಣ ತಿಳಿಸುತ್ತದೆ.
- ಹರಿವಂಶದ ಪ್ರಕಾರ - ಬ್ರಹ್ಮನ ಮುಖದಿಂದ ದೇವತೆಗಳೂ ವಕ್ಷದಿಂದ ಪಿತೃಗಳೂ ಕೆಳಗಿನ ಇಂದ್ರಿಯದಿಂದ ಮಾನವರೂ ಬೆನ್ನುಭಾಗದಿಂದ ರಾಕ್ಷಸರೂ ಜನಿಸಿದರೆಂದು ಹರಿವಂಶದಿಂದ ಗೊತ್ತಾಗುತ್ತದೆ.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- http://santeknath.org/guru%20parampara.html Archived 2013-12-06 ವೇಬ್ಯಾಕ್ ಮೆಷಿನ್ ನಲ್ಲಿ.
- The Brahma-Samhita – Prayers of Lord Brahma at the start of creation Archived 2009-12-10 ವೇಬ್ಯಾಕ್ ಮೆಷಿನ್ ನಲ್ಲಿ. (Brahmasamhita.com)
- Brahma's Prayers for Creative Energy from the Bhagavata Purana Archived 2009-11-11 ವೇಬ್ಯಾಕ್ ಮೆಷಿನ್ ನಲ್ಲಿ. (vedabase.net)
- ಬ್ರಹ್ಮ ಓಪನ್ ಡೈರೆಕ್ಟರಿ ಪ್ರಾಜೆಕ್ಟ್
- Brahma Genealogy Chart
ಹಿಂದೂ ಧರ್ಮ | ಹಿಂದೂ ಪುರಾಣ | ಇತಿಹಾಸ | |
---|---|
ದೇವತೆಗಳು: ಶಿವ | ಬ್ರಹ್ಮ | ವಿಷ್ಣು | ರಾಮ | ಕೃಷ್ಣ | ಗಣೇಶ | ಕಾರ್ತಿಕೇಯ | ಹನುಮಂತ | ಲಕ್ಷ್ಮಣ | ಇಂದ್ರ | ಸೂರ್ಯ | |
ಗಾಯತ್ರಿ | ಸರಸ್ವತಿ | ಲಕ್ಷ್ಮಿ | ಪಾರ್ವತಿ | ಚಾಮುಂಡೇಶ್ವರಿ | ಕಾಳಿ | ಸೀತೆ | ವೈಷ್ಣೋ ದೇವಿ | ರಾಧೆ | |
ಧರ್ಮಗ್ರಂಥಗಳು: ವೇದಗಳು | ಉಪನಿಷತ್ತುಗಳು | ಪುರಾಣಗಳು | ರಾಮಾಯಣ | ಮಹಾಭಾರತ | ಭಾಗವತ |
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: