ವಿಷಯಕ್ಕೆ ಹೋಗು

ಸಂಸ್ಕೃತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸಂಸ್ಕೃತ
संस्कृतम् saṃskṛtam
ಬಳಕೆಯಲ್ಲಿರುವ 
ಪ್ರದೇಶಗಳು:
ಭಾರತ, ಆಗ್ನೇಯ ಏಷ್ಯಾ, ಹಿಂದೂ ಧರ್ಮದ ಧಾರ್ಮಿಕ ಭಾಷೆ
ಒಟ್ಟು 
ಮಾತನಾಡುವವರು:
೪೯,೭೩೬ ಮಾತುಗಾರರು (೧೯೯೧ ಭಾರತದ ಜನಗಣತಿ)
ಭಾಷಾ ಕುಟುಂಬ: ಇಂಡೊ-ಯುರೋಪಿಯನ್
 ಇಂಡೊ-ಇರಾನಿಯನ್
  ಇಂಡೊ-ಆರ್ಯನ್
   ಸಂಸ್ಕೃತ 
ಬರವಣಿಗೆ: ದೇವನಾಗರಿ ಮತ್ತು ಕೆಲವು ಬ್ರಾಹ್ಮಿ ಲಿಪಿ ಆಧಾರಿತ ಲಿಪಿಗಳು 
ಅಧಿಕೃತ ಸ್ಥಾನಮಾನ
ಅಧಿಕೃತ ಭಾಷೆ: ಭಾರತ

ರಾಜ್ಯಗಳಲ್ಲಿ ಹೆಚ್ಚುವರಿ ಅಧಿಕೃತ ಭಾಷೆ

ಹಿಮಾಚಲ ಪ್ರದೇಶ, ಉತ್ತರಾಖಂಡ

ನಿಯಂತ್ರಿಸುವ
ಪ್ರಾಧಿಕಾರ:
no official regulation
ಭಾಷೆಯ ಸಂಕೇತಗಳು
ISO 639-1: sa
ISO 639-2: san
ISO/FDIS 639-3: san
Indic script
Indic script
ಈ ಪುಟ ಭಾರತೀಯ ಪದಗಳನ್ನು ಹೊಂದಿದೆ. ಸರಿಯಾದ ಪ್ರದರ್ಶನ ಬೆಂಬಲವಿಲ್ಲದೆದ್ದರೆ ನಿಮಗೆ ಅನಿಯತ ಸ್ವರಾಕ್ಷರ ಸ್ಥಾನ ಮತ್ತು ಸೇರ್ಪಡೆಗಳಲ್ಲಿ ತೊಂದರೆಗಲನ್ನು ಕಾಣಬಹುದು. ಹೆಚ್ಚು...
ದೇವಿ ಮಾಹಾತ್ಮ್ಯದ ಹಸ್ತಪ್ರತಿ, ೧೧ ನೆಯ ಶತಮಾನ

ಸಂಸ್ಕೃತ ಭಾಷೆ ಇಂಡೋ-ಯುರೋಪಿಯನ್ ಭಾಷಾ ಬಳಗಕ್ಕೆ ಸೇರಿದ ಅತಿ ಪ್ರಾಚೀನ ಭಾಷೆಗಳಲ್ಲಿ ಒಂದು ಮತ್ತು ಭಾರತದ ಶಾಸ್ತ್ರೀಯ ಭಾಷೆ. ಭಾರತದಲ್ಲಿ ಸಂಸ್ಕೃತ ಭಾಷೆ ಹೊಂದಿರುವ ಸ್ಥಾನವನ್ನು ಯುರೋಪಿನಲ್ಲಿ ಲ್ಯಾಟಿನ್ ಹಾಗೂ ಗ್ರೀಕ್ ಭಾಷೆಗಳು ಹೊಂದಿವೆ. ಇದು ಭಾರತದ ೨೨ ಅಧಿಕೃತ ಭಾಷೆಗಳಲ್ಲಿ ಒಂದು. ಪುರಾತನ ಭಾರತೀಯ ಸಂಸ್ಕೃತಿ, ಸಾಹಿತ್ಯ, ವಿಜ್ಞಾನ ಹಾಗೂ ತತ್ವಶಾಸ್ತ್ರಗಳಲ್ಲಿ ವಿಪುಲವಾಗಿ ಉಪಯೋಗಿಸಲ್ಪಟ್ಟಿರುವ ಭಾಷೆ ಇದಾಗಿದೆ. ಹಿಂದೂ, ಬೌದ್ಧ ಹಾಗು ಜೈನ ಧರ್ಮಶಾಸ್ತ್ರಗಳ ಪಾರಂಪರಿಕ ಭಾಷೆಯೂ ಇದಾಗಿದೆ. ಇಂದು ಲಭ್ಯವಿರುವ ಬಹಳಷ್ಟು ಸಂಸ್ಕೃತ ಕೃತಿಗಳು ಪ್ರಾಚೀನ ಕಾಲದ್ದಾಗಿವೆ. ಸದ್ಯಕ್ಕೆ ಸಂಸ್ಕೃತವನ್ನು ಮಾತನಾಡುವ ಭಾಷೆಯಾಗಿ ಉಪಯೋಗಿಸಲ್ಪಡುತ್ತಿರುವುದು ತೀರಾ ಕಡಿಮೆ. ಸಂಸ್ಕೃತವನ್ನು 'ದೇವಭಾಷೆ' ಎಂದೂ ಹಿಂದೆ ಕರೆಯುತ್ತಿದ್ದರು.

ಕೃತ ಗ್ರಂಥಗಳ ಜಾಡನ್ನೇ ಕನ್ನಡ ಅನುಸರಿಸಿಕೊಂಡು ಬಂತು.

ಚರಿತ್ರೆ

[ಬದಲಾಯಿಸಿ]

ಪ್ರಾಚೀನ ಕಾಲದಲ್ಲಿ ಧಾರ್ಮಿಕ ಹಾಗೂ ವೈಜ್ಞಾನಿಕ ಜಿಜ್ಞಾಸೆಗೆ ಉಪಯೋಗಿಸಲ್ಪಡುತ್ತಿದ್ದ ಸಂಸ್ಕೃತ ಆಡುಭಾಷೆಗಳಿಂದ ಸ್ವಲ್ಪ ಭಿನ್ನರೂಪದ್ದಾಗಿತ್ತು ಎಂದು ಚರಿತ್ರಜ್ಞರ ನಂಬಿಕೆ. ಸಂಸ್ಕೃತ ವ್ಯಾಕರಣದ ಮೇಲಿನ ಪುಸ್ತಕಗಳಲ್ಲಿ ಲಭ್ಯವಾಗಿರುವ ಅತ್ಯಂತ ಹಳೆಯದು ಪಾಣಿನಿಯ "ಅಷ್ಟಾಧ್ಯಾಯೀ" (ಸುಮಾರು ಕ್ರಿ.ಪೂ. ಐದನೆಯ ಶತಮಾನ). ವೇದಗಳ ಕಾಲದ ಸಂಸ್ಕೃತ ಮತ್ತು ಅದರ ನಂತರದ ಕೆಲ ಶತಮಾನಗಳ ಸಂಸ್ಕೃತದ ವ್ಯಾಕರಣ ಎನ್ನಬಹುದು. ನಂತರದ ಶತಮಾನಗಳಲ್ಲಿ ಸ್ವತಂತ್ರ ಸಾಹಿತ್ಯಕ್ಕೆ ಸಹ ಉಪಯೋಗಿಸಲಾದ ಸಂಸ್ಕೃತ ಭಾರತೀಯ ಸಾಹಿತ್ಯದಲ್ಲಿ ಬಹಳ ಮುಖ್ಯವಾದ ಪಾತ್ರವನ್ನು ವಹಿಸಿತು. ಆಧುನಿಕ ಭಾರತೀಯ ಭಾಷೆಗಳಲ್ಲಿನ ಅನೇಕ ಪದಗಳು ಸಂಸ್ಕೃತದಿಂದ ಎರವಲು ಪಡೆದವು.

ಪ್ರಾಚೀನ ದಾಖಲೆ

[ಬದಲಾಯಿಸಿ]

ಭಾರತದ ಪ್ರಾಚೀನ ಭಾಷೆಗಳಲ್ಲೊಂದಾದ ಸಂಸ್ಕೃತ ಕರ್ನಾಟಕದಲ್ಲಿ ಬಹು ಹಿಂದಿನಿಂದಲೂ ಪ್ರಚಾರದಲ್ಲಿದ್ದು ದೀರ್ಘವಾದ ಇತಿಹಾಸವನ್ನು ಹೊಂದಿದೆ. ಪ್ರತಿಷ್ಠಾನ ನಗರದಲ್ಲಿದ್ದ ಶಾತವಾಹನ ದೊರೆಗೆ ಸಂಬಂಧಿಸಿದ ‘ಮೋದಕಂ ತಾಡಯ’ದ ಕಥೆ ಬಹುಶಃ ದಕ್ಷಿಣ ಭಾರತದಲ್ಲಿ ಸಂಸ್ಕೃತದ ಹರಡುವಿಕೆಯ ಪ್ರಾರಂಭವನ್ನು ಸೂಚಿಸುತ್ತದೆ. ಕರ್ನಾಟಕದ ಪ್ರಾಚೀನತಮ ಸಂಸ್ಕೃತ ಶಾಸನವೆಂದರೆ ಕುಬ್ಜ (ನೋಡಿ) ಬರೆದ ತಾಳಗುಂದ ಶಾಸನ (ಸು.450). ಇದರಲ್ಲಿರುವ ರಚನಾ ಪಾಂಡಿತ್ಯ ಆ ಕಾಲಕ್ಕಾಗಲೇ ಸಂಸ್ಕೃತ ಈ ನಾಡಿನಲ್ಲಿ ಚೆನ್ನಾಗಿ ಬೇರೂರಿರಬೇಕೆಂಬುದನ್ನು ತಿಳಿಸುವುದಲ್ಲದೆ, ಅದೇ ಕಾಲದ ಹಲ್ಮಿಡಿ ಶಾಸನದಿಂದ ಸಂಸ್ಕೃತ ಭಾಷೆ ಕನ್ನಡ ರಚನೆಗಳ ಮೇಲೂ ಪ್ರಭಾವ ಬೀರುವ ಸ್ಥಿತಿಯಲ್ಲಿದ್ದಿತೆಂಬುದನ್ನು ತೋರಿಸುತ್ತದೆ. ಇಲ್ಲಿಂದ ಮುಂದೆ ಸಂಸ್ಕೃತ ಶಿಷ್ಟಭಾಷೆಯಾಗಿ ಬೆಳೆದು ಉನ್ನತ ಸ್ಥಾನವನ್ನು ಗಳಿಸಿ ತತ್ಕಾಲದ ಉನ್ನತ ವರ್ಗಗಳಿಂದ ಪ್ರೋತ್ಸಾಹ ಗಳಿಸಿತು. ನೂರಾರು ಸಂಸ್ಕೃತ ಶಾಸನಗಳು ಕನ್ನಡದಲ್ಲಿ ರಚಿತವಾದವು. ಅನೇಕ ಕವಿಗಳು, ಶಾಸ್ತ್ರಕಾರರು ಈ ನಾಡಿನಲ್ಲಿ ಆಗಿಹೋದರು. ನೂರಾರು ಸಂಸ್ಕೃತ ಗ್ರಂಥಗಳ ರಚನೆಯಾಯಿತು. ಸಂಸ್ಕೃತ ಸಾಹಿತ್ಯಕ್ಕೆ ಕರ್ನಾಟಕದ ಕೊಡುಗೆ ಗಣ್ಯವಾದುದು. ಹಾಗೆಯೇ ಸಂಸ್ಕೃತದ ಶ್ರುತಿ ಸ್ಮೃತಿ ಪುರಾಣ ಇತಿಹಾಸಗಳು ಕರ್ನಾಟಕದಲ್ಲಿ ಹರಡಿ ಅವು ಹಾಗೂ ಇತರ ಸಂಸ್ಕೃತ ಕೃತಿಗಳು ಕನ್ನಡ ದೇಶದ ಸಂಸ್ಕೃತಿ ಹಾಗೂ ನುಡಿಯ ಮೇಲೆ ಅಗಾಧ ಪ್ರಭಾವವನ್ನು ಬೀರುತ್ತ ಬಂದಿವೆ.

ಗುಣಾಢ್ಯ

[ಬದಲಾಯಿಸಿ]

ಕರ್ನಾಟಕದ ಭಾಗಗಳನ್ನು ಆಳುತ್ತಿದ್ದ ಸಾತವಾಹನರ ಆಸ್ಥಾನಭಾಷೆ ಪ್ರಾಕೃತವಾಗಿದ್ದರೂ ಅವರು ಸಂಸ್ಕೃತ ಭಾಷೆಯನ್ನು ಕೂಡ ಪ್ರೋತ್ಸಾಹಿಸುತ್ತಿದ್ದಿರಬಹುದು. ಇವರ ಕಾಲದಲ್ಲೇ ರಾಮಾಯಣ ಮಹಾಭಾರತಗಳಷ್ಟು ಕವಿಜನಪ್ರಿಯವಾದ ಬೃಹತ್ಕಥೆ ಪೈಶಾಚೀ ಪ್ರಾಕೃತದಲ್ಲಿ ಗುಣಾಢ್ಯನೆಂಬಾತನಿಂದ ರಚಿತವಾದಂತೆ, ಮಹಾರಾಷ್ಟ್ರೀ ಪ್ರಾಕೃತದಲ್ಲಿ ಏಳುನೂರು ಮುಕ್ತಕಗಳ ಸಂಗ್ರಹವಾದ ಸತ್ತಸ ರಾಜನಾದ ಹಾಲನಿಂದಲೇ ಸಂಗ್ರಹಿತವಾದಂತೆ, ಅವನ ಆಸ್ಥಾನಪಂಡಿತನಾದ ಸರ್ವವರ್ಮನಿಂದ ಕಾತಂತ್ರವೆಂಬ ನೂತನ ಸಂಸ್ಕೃತ ವ್ಯಾಕರಣವೂ ನಿರ್ಮಿತವಾಯಿತು. ಮುಂದೆ ಬೃಹತ್ಕಥೆ ಸಂಸ್ಕೃತಕ್ಕೂ ಮೂರುನಾಲ್ಕು ರೂಪಾಂತರಗಳನ್ನು ಉತ್ತರದ ಕವಿಗಳಿಂದ ಪಡೆದುದನ್ನು ನೋಡುತ್ತೇವೆ. ಆದರೆ ಮೂಲ ಬೃಹತ್ಕಥೆ ದಕ್ಷಿಣದ್ದೇ; ಇದರ ಒಂದು ಅಂಶದ ರೂಪಾಂತರವೇ ಸುಪ್ರಸಿದ್ಧವಾದ ಪಂಚತಂತ್ರ ಕೂಡ. ಈ ಪಂಚತಂತ್ರದ ಒಂದು ಆವೃತ್ತಿಯ ಪ್ರವರ್ತಕ ಕೂಡ ಕರ್ನಾಟಕದ ವಸುಭಾಗಭಟ್ಟ (ಈ ಕೃತಿ ಬೃಹತ್ತರ ಭಾರತದ ಲೇಯಾಸ್ ಹಾಗೂ ಜಾವ ದ್ವೀಪದ ಭಾಷೆಗಳಲ್ಲಿಯೂ ಭಾಷಾಂತರಗೊಂಡಿದೆ).

ಭಾಸನ (ಸು.2ನೆಯ ಶತಮಾನ) ದ್ವಿತೀಯಾಕ್ಷರ ಪ್ರಾಸಗಳನ್ನು ಅನುಲಕ್ಷಿಸಿ ಆತ ಕನ್ನಡಿಗನಿದ್ದಿರಬೇಕೆಂದು ಯು.ವೆಂಕಟಕೃಷ್ಣರಾವ್ ಊಹಿಸಿದ್ದಾರೆ (ಈ ಊಹೆಗೆ ಹೆಚ್ಚಿನ ಸಮರ್ಥನೆ ಬೇಕಾಗಿದೆ).

ಪಾಣಿನಿ

[ಬದಲಾಯಿಸಿ]

ಪೂಜ್ಯಪಾದ (ಅಥವಾ ದೇವನಂದಿ 5 ಅಥವಾ 6ನೆಯ ಶತಮಾನ) ಪಾಣಿನಿಯ ಸೂತ್ರಗಳಿಗೆ ಶಬ್ದಾವತಾರವೆಂಬ ವ್ಯಾಖ್ಯಾನ ರಚಿಸಿದ್ದನೆಂದು ಶಾಸನಗಳಲ್ಲಿ ಹೇಳಲಾಗಿದೆ. ಈತ ಜೈನೇಂದ್ರ ವ್ಯಾಕರಣವೆಂಬ ಹೊಸ ವ್ಯಾಕರಣ ಪಂಥವನ್ನು ನಿರ್ಮಾಣ ಮಾಡಿದ. ಇದರಲ್ಲಿ ಪ್ರಾಯೋಗಿಕ ದೃಷ್ಟಿಯಿಂದ ಪಾಣಿನಿಯ ಸೂತ್ರಗಳನ್ನು ಸಂಗ್ರಹಿಸಲಾಗಿದೆ.

ಗಂಗರ ಕಾಲ

[ಬದಲಾಯಿಸಿ]

ಗಂಗರಾಜನಾದ ದುರ್ವಿನೀತ (6ನೆಯ ಶತಮಾನ) ಬೃಹತ್ಕಥೆಯ ಸಂಸ್ಕೃತ ರೂಪಾಂತರಕಾರರಲ್ಲಿ ಒಬ್ಬನೆಂದು ಕೆಲವು ಶಾಸನಗಳು ಹೇಳುತ್ತವೆ. ದುರ್ವಿನೀತನ ಸಮಕಾಲೀನನೂ ಸಂಸ್ಕೃತದ ಪ್ರಸಿದ್ಧ ಮಹಾಕಾವ್ಯವಾದ ಕಿರಾತಾರ್ಜುನೀಯದ ಕರ್ತೃವೂ ಆದ ಭಾರವಿ ದುರ್ವಿನೀತನ ಆಸ್ಥಾನದಲ್ಲಿಯೂ ಕೆಲಕಾಲ ಇದ್ದನೆಂಬ ಐತಿಹ್ಯವನ್ನು ಈಚೆಗೆ ದೊರೆತ ದಂಡಿಯ ಅವಂತಿಸುಂದರೀ ಕಥಾ ಎಂಬ ಗದ್ಯಕೃತಿ ಒಳಗೊಂಡಿದೆ. ದಂಡಿ ಸಹ ಕೆಲವು ಕಾಲ ದುರ್ವಿನೀತನ ಆಸ್ಥಾನದಲ್ಲಿ ಇದ್ದಿರಬೇಕು. ನಾಟಕಕಾರರಲ್ಲಿ ಪ್ರಸಿದ್ಧನಾದ ಮೃಚ್ಫಕಟಿಕಕಾರ ಶೂದ್ರಕನು ಗಂಗರಾಜ ಶಿವಮಾರನಿರಬೇಕೆಂದು ಸಾಲೆತೊರೆ ಎಂಬ ವಿದ್ವಾಂಸರ ಊಹೆ.

ಭಾರವಿ ಮತ್ತು ಕಾಳಿದಾಸ

[ಬದಲಾಯಿಸಿ]

ಭಾರವಿ ಮತ್ತು ಕಾಳಿದಾಸ ಮಹಾಕವಿಗಳ ಸ್ಪಷ್ಟ ಶಿಲಾಶಾಸನೋಲ್ಲೇಖ ದೊರೆಯುವುದು ಬಾದಾಮಿ ಚಾಳುಕ್ಯ ವಂಶದ ಇಮ್ಮಡಿ ಪುಲಕೇಶಿಯ ಕಾಲದ ಐಹೊಳೆಯ ಶಾಸನದಲ್ಲಿ (634). ಆ ಶಾಸನದ ಕರ್ತೃ ರವಿಕೀರ್ತಿ ತನ್ನನ್ನು ಆ ಇಬ್ಬರು ಮಹಾಕವಿಗಳಿಗೆ ಸಮನೆಂದು ಹೊಗಳಿಕೊಂಡಿದ್ದಾನೆ. ಈ ಪ್ರಶಸ್ತಿ ಶಾಸನ ಇಮ್ಮಡಿ ಪುಲಕೇಶಿಯ ಪರಾಕ್ರಮಾದಿಗಳನ್ನು ಕಾವ್ಯಮಯ ಶೈಲಿಯಲ್ಲಿ ವರ್ಣಿಸುತ್ತದೆ. ಇದರ ಭಾಷೆ ಸರಾಗವಾಗಿ ಹರಿಯುತ್ತದೆ. ನಾನಾ ಬಗೆಯ ವೃತ್ತಗಳಲ್ಲಿ ರಚಿತವಾದ ಇದರಲ್ಲಿ ಕಾವ್ಯದ ಹಲವು ಲಕ್ಷಣಗಳು ಕಾಣಬರುತ್ತವೆ. ಇದಕ್ಕೂ ಮುಂಚಿನ ಮಂಗಲೀಶನ ಶಾಸನದಲ್ಲಿ (ಸು.600) ಒಂದನೆಯ ಕೀರ್ತಿವರ್ಮನ ದಿಗ್ವಿಜಯವನ್ನು ವರ್ಣಿಸುವಲ್ಲಿ ಕಾಳಿದಾಸನ ರಘುವಂಶದ ರಘು ದಿಗ್ವಿಜಯವನ್ನೇ ಮಾದರಿಯಾಗಿಟ್ಟುಕೊಳ್ಳಲಾಗಿದೆ. ಇಮ್ಮಡಿ ಪುಲಕೇಶಿಯ ಸೊಸೆ, ಚಂದ್ರಾದಿತ್ಯನ ರಾಣಿ ವಿಜಯಾ ಅಥವಾ ಬಿಜ್ಜಾ ಅಥವಾ ಬಿಜ್ಜಿಕಾ (ವಿಜ್ಜಿಕೆ) ಪ್ರೌಢ ಪಾಂಡಿತ್ಯ ಪಡೆದಿದ್ದಳೆಂದು ತಿಳಿದುಬರುತ್ತದೆ. ಕೌಮುದೀ ಮಹೋತ್ಸವವೆಂಬ ನಾಟಕ ಬರೆದವಳು ಇವಳೇ ಎಂದು ವಿದ್ವಾಂಸರ ಅಭಿಪ್ರಾಯ. muddi

ಚಾಲುಕ್ಯರ ಕಾಲ

[ಬದಲಾಯಿಸಿ]

ಬಾದಾಮಿಯ ಚಾಳುಕ್ಯರ ಕಾಲದಲ್ಲಿಯೇ ಶಂಕರಾಚಾರ್ಯರ ವೇದಾಂತ ಭಾಷ್ಯಗಳೂ ಹುಟ್ಟಿಕೊಂಡಿರಬಹುದು. ಸಮಂತಭದ್ರನ ತತ್ತ್ವಾರ್ಥ ಸೂತ್ರ ಮಹಾಭಾಷ್ಯ, ಆಪ್ತಮೀಮಾಂಸಾ ಮುಂತಾದ ಉದ್ದಾಮ ಧರ್ಮ ಗ್ರಂಥಗಳೂ ಈ ಕಾಲದಲ್ಲಿ ಬಂದವು. ತತ್ತ್ವಾರ್ಥಾಸೂತ್ರಕ್ಕೆ ಸರ್ವಾರ್ಥಸಿದ್ಧಿ ವ್ಯಾಖ್ಯೆಯನ್ನು ಪುಜ್ಯಪಾದ ರಚಿಸಿದ. ಮತ್ತೊಬ್ಬ ಜೈನ ಪಂಡಿತ ಅಕಲಂಕ ತತ್ತ್ವಾರ್ಥ ರಾಜವಾರ್ತಿಕ, ಅಷ್ಟಶತೀ, ನ್ಯಾಯವಿನಿಶ್ಚಯ ಮುಂತಾದುವನ್ನು ರಚಿಸಿದ್ದಾನೆ.

ರಾಷ್ಟ್ರಕೂಟರ ಕಾಲ

[ಬದಲಾಯಿಸಿ]

ರಾಷ್ಟ್ರಕೂಟರ ಕಾಲದಲ್ಲಿ ಸಂಸ್ಕೃತಕ್ಕೆ ವಿಶೇಷ ಪ್ರೋತ್ಸಾಹ ದೊರಕಿತು. ಒಂದನೆಯ ಅಮೋಘ ವರ್ಷ (814-78) ಸ್ವಯಂ ಗ್ರಂಥಕಾರನಾಗಿದ್ದುದಲ್ಲದೆ (ಪ್ರಶ್ನೋತ್ತರ-ರತ್ನಮಾಲಿಕಾ ಇವನ ಕೃತಿಯೆನ್ನುತ್ತಾರೆ) ಜಿನಸೇನಾಚಾರ್ಯರು ಮಹಾಪುರಾಣ, ಪಾಶಾರ್ವ್‌ಭ್ಯುದಯಗಳೆಂಬ ಉದ್ಗ್ರಂಥಗಳನ್ನು ಬರೆಯಲು ನೆರವಾದ. ಶಾಕಟಾಯನ ವ್ಯಾಕರಣವೆಂಬ ನವೀನ ಪ್ರಸ್ಥಾನವೂ ಈಗಲೇ ಉದಿಸಿತು. ಅದರ ವೃತ್ತಿಗೆ ಅಮೋಘ ವೃತ್ತಿಯೆಂದೇ ಹೆಸರಿದೆ. ಮಹಾವೀರನೆಂಬ ಪಂಡಿತ ಜ್ಯೋತಿಶಾಸ್ತ್ರದ ಗಣಿತಸಾರ ಸಂಗ್ರಹವನ್ನು ಬರೆದಿದ್ದಾನೆ.

ಅದ್ವೈತವೇದಾಂತ ದೃಷ್ಟಿಯಿಂದ ರಾಷ್ಟ್ರಕೂಟರ ಕಾಲವನ್ನು ಸುವರ್ಣಯುಗವೆಂದು ಕರೆಯಬಹುದು. ಶಂಕರಾಚಾರ್ಯರ ಶಿಷ್ಯರಾದ ಪದ್ಮಪಾದ ಮತ್ತು ಸುರೇಶ್ವರರು ವೇದಾಂತ ಪ್ರಚಾರದಲ್ಲಿ ನಿರತರಾಗಿದ್ದರು. ಸುರೇಶ್ವರರ ಶಿಷ್ಯ ಸರ್ವಜ್ಞಾತ್ಮನ್ ‘ಸಂಕ್ಷೇಪ ಶಾರೀರಕ’ ವನ್ನು ರಚಿಸಿದ. ಇದೇ ಯುಗದಲ್ಲಿ ಯಾಜ್ಞವಲ್ಕ್ಯಸ್ಮೃತಿಗೆ ವಿಶ್ವರೂಪ ಬರೆದ ‘ಬಾಲಕ್ರೀಡಾ ವ್ಯಾಖ್ಯೆ’ ಬಹಳ ಪ್ರಸಿದ್ಧವಾಯಿತು.

ಮುಮ್ಮಡಿ ಇಂದ್ರನ ಕಾಲ

[ಬದಲಾಯಿಸಿ]

ಮುಮ್ಮಡಿ ಇಂದ್ರನ (914-29) ಆಸ್ಥಾನ ಕವಿಯಾಗಿದ್ದ ತ್ರಿವಿಕ್ರಮಭಟ್ಟ ನಳಚಂಪು ಮತ್ತು ಮದಾಲಸಾಚಂಪು ಎಂಬ ಎರಡು ಕೃತಿಗಳನ್ನು ರಚಿಸಿದ. ಇವೆರಡು ಸಂಸ್ಕೃತ ಸಾಹಿತ್ಯದ ಚಂಪು ಪ್ರಕಾರದ ಉಪಲಬ್ಧ ಪ್ರಾಚೀನತಮ ಕೃತಿಗಳು. ಇವನ ಚಂಪುಶೈಲಿಯಲ್ಲಿ ಬಾಣನ ಗದ್ಯವೈಭವ ಹಾಗೂ ನಾಟಕಕಾರರ ಪದ್ಯ ಪ್ರಾಗಲ್ಭ್ಯಗಳೆರಡೂ ರಸಮಯವಾಗಿ ಜೊತೆಗೂಡಿವೆ. ಇವನಿಗೆ ಮೊದಲೇ ದಂಡಿ ಚಂಪು ಪ್ರಭೇದವನ್ನು ಹೇಳಿ, ಅದರ ಸ್ವರೂಪವನ್ನು ತಿಳಿಸಿದ್ದನಾದರೂ ತ್ರಿವಿಕ್ರಮನಿಗೆ ಮೊದಲು ಯಾವ ಚಂಪು ಕೃತಿಯೂ ದೊರೆತಿಲ್ಲ. ಮುಮ್ಮಡಿ ಕೃಷ್ಣನೂ (939-67) ಸ್ವತಃ ವಿದ್ವಾಂಸನಾಗಿದ್ದು ಪಿಂಗಲನ ಛಂದಸ್ಸೂತ್ರದ ಮೇಲೆ ವ್ಯಾಖ್ಯಾನ ಬರೆದ. ಇವನ ಆಶ್ರಯದಲ್ಲಿ ಹಲಾಯುಧ ಒಂದು ಕೋಶವನ್ನೂ ಕವಿಗಳಿಗೆ ಉಪಯುಕ್ತವಾದ ಕೃತಿಗಳನ್ನೂ ರಚಿಸಿದ.

ಜೈನ ಕವಿಗಳ ಕಾಲ

[ಬದಲಾಯಿಸಿ]

ಸಂಸ್ಕೃತ ಸಾಹಿತ್ಯಕ್ಕೆ ಕರ್ನಾಟಕದ ಜೈನರೂ ಅಮೋಘ ಕಾಣಿಕೆಯನ್ನಿತ್ತಿದ್ದಾರೆ. ವೀರಸೇನ ಮತ್ತು ಜಿನಸೇನರು 1,00,000 ಶ್ಲೋಕಗಳ ವಿಸ್ತಾರವಾದ ಧವಲಾ, ಜಯಧವಲಾ ಮತ್ತು ಮಹಾಧವಲಾ ಎಂಬ ಷಟ್ ಖಂಡಾಗಮ ವ್ಯಾಖ್ಯಾನವನ್ನು ಪುರೈಸಿದರು. ಜಿನಸೇನರು ಆದಿಪುರಾಣ ಮತ್ತು ಪಾಶರ್ವ್‌ನಾಥಪುರಾಣಗಳನ್ನೂ ಬರೆದು ಪ್ರಸಿದ್ಧರಾದರು. ಅಸಗನಿಗೆ ಸಂಸ್ಕೃತ ಕನ್ನಡಗಳೆರಡರಲ್ಲಿಯೂ ಸಮಾನವಾದ ಕವಿತಾ ಸಾಮಥರ್ಯ್‌ವಿತ್ತು. ಸಂಸ್ಕೃತದಲ್ಲಿ ಈತ ವರ್ಧಮಾನಪುರಾಣವನ್ನು ರಚಿಸಿದ್ದಾನೆ. ವಿದ್ಯಾನಂದ ಎಂಬುವನು ಸಮಂತಭದ್ರನ ಆಪ್ತಮೀಮಾಂಸಾ, ಆಪ್ತಪರೀಕ್ಷಾ ಇತ್ಯಾದಿ ಗ್ರಂಥಗಳಿಗೆ ಅಷ್ಟಸಾಹಸ್ರೀ ಎಂಬ ಅದ್ಭುತವಾದ ವ್ಯಾಖ್ಯಾನ ರಚಿಸಿದ್ದಾನೆ.

ಚಾಳುಕ್ಯರ ಕಾಲ

[ಬದಲಾಯಿಸಿ]

ವೇಮುಲವಾಡದ ಚಾಳುಕ್ಯರ ಆಶ್ರಯದಲ್ಲಿದ್ದ ಸೋಮದೇವಸೂರಿ (ಸು.959) ಯಶಸ್ತಿಲಕಚಂಪು ಎಂಬ ಕೃತಿಯನ್ನೂ ನೀತಿವಾಕ್ಯಾಮೃತವೆಂಬ ಗ್ರಂಥವನ್ನೂ ರಚಿಸಿದ. ಯಶಸ್ತಿಲಕಚಂಪುವಿನಲ್ಲಿ ಕವಿ ನಾನಾಶಾಸ್ತ್ರದಲ್ಲಿ, ತನಗಿದ್ದ ಪಾಂಡಿತ್ಯ ಹಾಗೂ ಜಾಣ್ಮೆಯನ್ನು ಪ್ರದರ್ಶಿಸಿಕೊಂಡಿದ್ದಾನೆ. ಸಾಂಸ್ಕೃತಿಕ ಇತಿಹಾಸದ ದೃಷ್ಟಿಯಿಂದ ಈ ಕೃತಿ ಅಮೂಲ್ಯವಾದು ದಾಗಿದೆ. ನೀತಿವಾಕ್ಯಾಮೃತ ರಾಜನೀತಿಶಾಸ್ತ್ರದ ಕೈಪಿಡಿಯಂತಿದೆ. ಇದರಲ್ಲಿ ರಾಜಕೀಯ ವ್ಯವಹಾರಗಳ ಸೂಕ್ಷ್ಮ ನಿರೂಪಣೆಯ ಜತೆಗೆ ಜನಸಾಮಾನ್ಯರಿಗೂ ಸಂಬಂಧಿಸಿದ ನೀತಿಗಳನ್ನು ಎಲ್ಲರಿಗೂ ಅರ್ಥವಾಗುವ ಕ್ರಮದಲ್ಲಿ ನಿರೂಪಿಸಿದ್ದಾನೆ. ಸೋಮದೇವಸೂರಿ ಕವಿಯಷ್ಟೇ ಅಲ್ಲ ತತ್ತ್ವಶಾಸ್ತ್ರದಲ್ಲಿಯೂ ನಿಷ್ಣಾತನಾಗಿದ್ದ ‘ಷಣ್ಣವತಿ ಪ್ರಕರಣ’ ಇವನ ಕೊಡುಗೆ. ಕಲ್ಯಾಣದ ಚಾಳುಕ್ಯರ ಕಾಲಕ್ಕೆ ಬಂದರೆ ಎರಡನೆಯ ಜಯಸಿಂಹನ ಆಳಿಕೆಯಲ್ಲಿ (1015-44) ವಾದಿರಾಜನ ಯಶೋಧರಚರಿತ ಮತ್ತು ಪಾಶರ್ವ್‌ನಾಥ ಚರಿತ ಎಂಬ ಸುಂದರ ಕಾವ್ಯಗಳು ಮೂಡಿಬಂದವು. ವಾದಿರಾಜನ ಪಾಂಡಿತ್ಯವನ್ನು ಅನೇಕ ಶಾಸನಗಳು ಕೊಂಡಾಡಿವೆ. ಅಕಲಂಕನ ಮಹಾಗ್ರಂಥವನ್ನು ಕುರಿತ ಸಮಗ್ರ ವ್ಯಾಖ್ಯಾನ ‘ನ್ಯಾಯ ವಿನಿಶ್ಚಯ ಟೀಕೆ’ ವಾದಿರಾಜನ ಮೇರು ಕೃತಿ. ಇವನು ಉತ್ತಮ ಬರೆಹಗಾರನಾಗಿದ್ದ, ಜೊತೆಗೆ ಸಮರ್ಥ ವಾಗ್ಮಿಯಾಗಿದ್ದನೆಂದು ತಿಳಿದುಬರುತ್ತದೆ. ಲಕುಲೀಶ ಪಂಡಿತ ಅಥವಾ ವಾದಿರುದ್ರಗುಣ ಮಹಾವಿದ್ವಾಂಸನೆಂದೂ ಜೈನ ವಾದಿರಾಜನನ್ನು ವಾದದಲ್ಲಿ ಸೋಲಿಸಿದನೆಂದೂ 1036ರ ಶಾಸನವೊಂದು ತಿಳಿಸುತ್ತದೆ. ವಾದಿರಾಜನ ಸಹಪಾಠಿ ಮತ್ತು ಮತಿಸಾಗರನ ಶಿಷ್ಯನಾದ ದಯಪಾಲ ಎಂಬುವನು ಶಾಕಟಾಯನ ವ್ಯಾಕರಣದ ಉಪಯುಕ್ತವಾದ ಪುನರ್ವಿಮರ್ಶಿತ ಕೈಪಿಡಿಯನ್ನು ಸಿದ್ಧಗೊಳಿಸಿದ. ರೂಪಸಿದ್ಧಿಯೆಂದು ಕರೆಯಲಾದ ಇದನ್ನು ಹಲವು ಶಾಸನಗಳಲ್ಲಿ ಹೊಗಳಲಾಗಿದೆ.

ಚಂಪೂ ಕಾಲ

[ಬದಲಾಯಿಸಿ]

ಇದೇ ಕಾಲದಲ್ಲಿ ಕಾವ್ಯಾವಲೋಕನದ ಕರ್ತೃ ನಾಗವರ್ಮ ಸಂಸ್ಕೃತ ಕೋಶವೊಂದನ್ನು ರಚಿಸಿದ್ದನೆಂದು ತಿಳಿದುಬರುತ್ತದೆ. ಆದರೆ ಇದು ಉಪಲಬ್ಧವಿಲ್ಲ. ಈ ಕಾಲದಲ್ಲಿ ವಾದೀಭಸಿಂಹನ ಗದ್ಯಚಿಂತಾಮಣಿ, ಕ್ಷತ್ರಚೂಡಾಮಣಿ ಎಂಬ ಗದ್ಯಕಾವ್ಯಗಳು ಬಾಣನ ಮಾದರಿಯಲ್ಲಿ ನಿರ್ಮಿತವಾದವು. ಜಯಕೀರ್ತಿಯ ಛಂದೋನುಶಾಸನವೂ ಇದೇ ಕಾಲದ್ದು. ಚಾಳುಕ್ಯ ಆರನೆಯ ವಿಕ್ರಮಾದಿತ್ಯ (1076-1127), ಕರ್ಣ, ಭೋಜಾದಿಗಳ ಆಸ್ಥಾನಗಳನ್ನೆಲ್ಲ ಸುತ್ತಿ ಬಂದಿದ್ದ ಕಾಶ್ಮೀರದ ಬಿಲ್ಹಣ ಮಹಾಕವಿಗೆ ತನ್ನ ಆಸ್ಥಾನದಲ್ಲಿ ವಿದ್ಯಾಪತಿಯೆಂಬ ಪದವಿಯನ್ನಿತ್ತು ಅವನಿಂದ ವಿಕ್ರಮಾಂಕ ದೇವಚರಿತವೆಂಬ ಮನೋಹರ ಐತಿಹಾಸಿಕ ಕಾವ್ಯವನ್ನು ಬರೆಯಿಸಿದ. ಇದೇ ವಿಕ್ರಮಾದಿತ್ಯನ ಕಾಲದಲ್ಲಿ ವಿಜ್ಞಾನೇಶ್ವರ ಎಂಬ ಪಂಡಿತ ಧರ್ಮಶಾಸ್ತ್ರ ಸಾಹಿತ್ಯದಲ್ಲಿಯೇ ತುಂಬಾ ಮನ್ನಣೆಗಳಿಸಿರುವ ಮಿತಾಕ್ಷರಾ ವ್ಯಾಖ್ಯೆಯನ್ನು ಯಾಜ್ಞವಲ್ಕ್ಯಸ್ಮೃತಿಗೆ ಬರೆದ. ಚಾಳುಕ್ಯ ಅರಸ ಮೂರನೆಯ ಸೋಮೇಶ್ವರ ಭೂಲೋಕಮಲ್ಲ (1127-39) ಅಭಿಲಾಷಿತಾರ್ಥಚಿಂತಾಮಣಿ ಅಥವಾ ಮಾನಸೋಲ್ಲಾಸ ಎಂಬ ವಿಶ್ವಕೋಶವನ್ನು ರಚಿಸಿದ. ಇದರಲ್ಲಿ ಸಂಸ್ಕೃತ ಕಾವ್ಯ, ಶಾಸ್ತ್ರ, ಕಲೆ, ವಿಜ್ಞಾನ, ಧರ್ಮ ಮುಂತಾದ ಸಕಲ ವಿದ್ಯಾಪ್ರಕಾರಗಳೂ ಸಂಕ್ಷಿಪ್ತವಾಗಿ ಹಾಗೂ ಸಪ್ರಮಾಣವಾಗಿ ಅಂತರ್ಗತವಾಗಿವೆ. ವನಸ್ಪತಿಗಳು, ಪ್ರಾಣಿಗಳು, ಪುಷ್ಪರಚನೆ, ಶಕುನಗಳು, ಕಾಮಶಾಸ್ತ್ರ, ಚಿತ್ರ, ಸಂಗೀತ, ರಾಜನೀತಿ, ಭೂಗೋಳ, ಪಾಕಶಾಸ್ತ್ರ ಮುಂತಾದ ಲೌಕಿಕ ವಿದ್ಯೆಗಳಿಗೂ ಇಲ್ಲಿ ಸಮಾವೇಶ ದೊರೆತಿರುವುದು ಈ ಕೃತಿಯ ವೈಶಿಷ್ಟ್ಯವಾಗಿದೆ. ಇಡೀ ಸಂಸ್ಕೃತ ಸಾಹಿತ್ಯದಲ್ಲೇ ಇಂಥ ಗ್ರಂಥ ಮತ್ತೊಂದಿಲ್ಲ. ಈ ದೊರೆಯ ಆಶ್ರಯದಲ್ಲೇ ಇದ್ದ ಪಾಶರ್ವ್‌ದೇವ ಸಂಗೀತ ಸಮಯಸಾರವನ್ನು ರಚಿಸಿದ್ದಾನೆ. ಇಮ್ಮಡಿ ಜಗದೇಕಮಲ್ಲ (1139-49) ಸಂಗೀತಕ್ಕೆ ಸಂಬಂಧಿಸಿದಂತೆ ಸಂಗೀತ ಚೂಡಾಮಣಿ ಎಂಬ ಗ್ರಂಥವನ್ನು ಬರೆದಿದ್ದಾನೆ.

ಹೊಯ್ಸಳರ ರಾಜ್ಯದಲ್ಲಿಯ ಎರಡನೆಯ ವೀರಬಲ್ಲಾಳನ ಆಸ್ಥಾನಕವಿ ವಿದ್ಯಾಚಕ್ರವರ್ತಿಯ ರುಕ್ಮೀಣೀಕಲ್ಯಾಣನಾಟಕ ಹಾಗೂ ಅಲಂಕಾರಸರ್ವಸ್ವ ಸಂಜೀವಿನೀ ಮತ್ತು ಕಾವ್ಯಪ್ರಕಾಶ ಸಂಪ್ರದಾಯಪ್ರಕಾಶಿನೀ ಎಂಬ ಅಲಂಕಾರ ಶಾಸ್ತ್ರಗ್ರಂಥಗಳು ಮಹತ್ತ್ವದ್ದಾಗಿದೆ. ಇವನ ಮಗನಾದ ಸಕಲವಿದ್ಯಾಚಕ್ರವರ್ತಿ ಗದ್ಯಕರ್ಣಾಮೃತ ಎಂಬ ಗ್ರಂಥವನ್ನು ಬರೆದಿದ್ದಾನೆ.

ಮಧ್ಯಕಾಲೀನ ಕಾಲ

[ಬದಲಾಯಿಸಿ]

ಕರ್ನಾಟಕದಲ್ಲಿಯೇ ಹುಟ್ಟಿಬೆಳೆದ ಮಧ್ವಾಚಾರ್ಯರು ವೇದಾಂತ ಪಂಥವೊಂದನ್ನು ಸ್ಥಾಪಿಸಿ ಉಪನಿಷತ್ತು, ಭಗವದ್ಗೀತೆ, ಬ್ರಹ್ಮಸೂತ್ರಗಳಿಗೆ ಭಾಷ್ಯಗಳನ್ನೂ ರಾಮಾಯಣ, ಮಹಾಭಾರತ, ಭಾಗವತಗಳ ತಾತ್ಪರ್ಯ ನಿರ್ಣಯ ಮೊದಲಾದ 37 ಗ್ರಂಥಗಳನ್ನೂ ರಚಿಸಿದರು. ವಿಜಯನಗರ ಸಾಮ್ರಾಜ್ಯ ಸ್ಥಾಪನೆ ಸಂಸ್ಕೃತ ವಾಙ್ಮಯ ಉನ್ನತಿಗೆ ಹೆಚ್ಚಿನ ಪ್ರಚೋದನೆ ನೀಡಿತು. ಸಾಮ್ರಾಜ್ಯ ಸ್ಥಾಪಕರಾದ ಮಾಧವ ವಿದ್ಯಾರಣ್ಯರು ಅವರ ಗುರುಗಳಾದ ಭಾರತೀತೀರ್ಥರು ಹಾಗೂ ಅವರ ತಮ್ಮಂದಿರಾದ ಸಾಯಣ ಮತ್ತು ಭೋಗನಾಥ ಇವರಿಂದ ಸಂಸ್ಕೃತ ವಾಙ್ಮಯದ ಎಲ್ಲ ಪ್ರಕಾರಗಳು ಸಮೃದ್ಧವಾದುವು. ತೈತ್ತೀರೀಯ ಸಂಹಿತೆ ಮುಂತಾದ ನಾಲ್ಕು ವೇದ ಸಂಹಿತೆಗಳು, ಅವುಗಳ ಬ್ರಾಹ್ಮಣಗಳು ಹೀಗೆ 18 ವೇದಗ್ರಂಥಗಳಿಗೆ ಮಾಧವಾಚಾರ್ಯ (ವಿದ್ಯಾರಣ್ಯರ) ನೇತೃತ್ವದಲ್ಲಿ ಅನೇಕರ ನೆರವಿನಿಂದ ಸಾಯಣಾಚಾರ್ಯರು ಭಾಷ್ಯ ರಚಿಸಿದರು. ಇವುಗಳಲ್ಲಿ ಒಂದೊಂದು ಸಂಹಿತೆಯ ಪ್ರಾರಂಭದಲ್ಲಿಯೂ ಪೀಠಿಕೆಯಲ್ಲಿ ವೇದಕ್ಕೆ ಸಂಬಂಧಿಸಿದ ಅನೇಕ ವಿಷಯಗಳನ್ನು ಪುರ್ವಮೀಮಾಂಸಾ ಸೂತ್ರಗಳ ಆಧಾರದ ಮೇಲೆ ವಿಸ್ತಾರವಾಗಿ ಚರ್ಚಿಸಲಾಗಿದೆ. ಸಾಯಣರ ಯಜ್ಞತಂತ್ರ ಸುಧಾನಿಧಿ ಮತ್ತು ಪ್ರಯೋಗ ರತ್ನಮಾಲಾ ಗ್ರಂಥಗಳು ಶ್ರೌತಯಜ್ಞಗಳ ಪ್ರಯೋಗವನ್ನು ಸ್ಪಷ್ಟಪಡಿಸುತ್ತವೆ.

ಸ್ಮೃತಿ ಕ್ಷೇತ್ರದಲ್ಲಿ ಪರಾಶರ ಸ್ಮೃತಿಗೆ ಮಾಧವೀಯ ವ್ಯಾಖ್ಯೆ ಮತ್ತು ವ್ಯವಹಾರದ ವಿಷಯದಲ್ಲಿ ಪರಾಶರಮಾಧವೀಯ ಗ್ರಂಥಗಳು ಹೊರಬಂದವು. ಪ್ರಾಯಶ್ಚಿತ್ತ ಸುಧಾನಿಧಿಯೂ ಇದೇ ವಿಭಾಗಕ್ಕೆ ಸೇರಿದ ಕೃತಿ. ದೇವಣ್ಣಭಟ್ಟ (ಸು.1145) ನಾನಾ ಸ್ಮೃತಿಗಳ ಆಧಾರದ ಮೇಲೆ ಸ್ಮೃತಿಚಂದ್ರಿಕೆಯನ್ನು ಮತ್ತು ನರಹರಿ ಎಂಬುವನು ಸ್ಮೃತಿಕೌಸ್ತುಭವನ್ನೂ ರಚಿಸಿದರು. ವ್ಯಾಕರಣದಲ್ಲಿ ಮಾಧವೀಯವಾದ ಧಾತುವೃತ್ತಿಯನ್ನು ಗಮನಿಸಬಹುದು.

ದರ್ಶನ ಪ್ರಪಂಚದಲ್ಲಿ ಮಾಧವ ವಿದ್ಯಾರಣ್ಯರ ಜೈಮಿನೀಯ ನ್ಯಾಯಮಾಲಾವಿಸ್ತರ ಮತ್ತು ವೈಯಾಸಿಕ ನ್ಯಾಯಮಾಲಾವಿಸ್ತರ ಮತ್ತು ಸಾಯಣಾಚಾರ್ಯರ ಸರ್ವದರ್ಶನಸಂಗ್ರಹ ಇವು ಮುಖ್ಯವಾದವು. ಪದ್ಮಪುರಾಣದ ಸೂತಸಂಹಿತೆಯ ವ್ಯಾಖ್ಯೆ ತಾತ್ಪರ್ಯ ದೀಪಿಕೆಯೂ ಇವರದು. ಅಲಂಕಾರಶಾಸ್ತ್ರಕ್ಕೆ ಸೇರಿದ ಅಲಂಕಾರಸುಧಾನಿಧಿಯೂ ಸಾಯಣರ ಹೆಸರಿನಲ್ಲಿದೆ. ಸಾಯಣರು ಸುಭಾಷಿತಸುಧಾನಿಧಿ ಎಂಬ ಸುಭಾಷಿತ ಸಂಗ್ರಹವನ್ನೂ ಸಿದ್ಧಪಡಿಸಿದರು. ಭೋಗನಾಥ ಉತ್ತಮ ಕವಿಯೆಂದೂ ಹಲವು ಕೃತಿಗಳನ್ನು ರಚಿಸಿದನೆಂದೂ ಉಲ್ಲೇಖವಿದೆ. ಆದರೆ ಆತನ ಕೃತಿಗಳು ಯಾವುವೂ ದೊರೆತಿಲ್ಲ.

ತನ್ನ ಪತಿ ಕಂಪಣ ಅಥವಾ ಕಂಪರಾಯ ಮಧುರೆಯನ್ನು ವಶಪಡಿಸಿಕೊಂಡುದನ್ನು ಕಣ್ಣಾರೆ ಕಂಡ ಗಂಗಾದೇವಿ, ಆ ವಿಜಯ ಯಾತ್ರೆಯನ್ನು ಮಧುರಾವಿಜಯ ಅಥವಾ ವೀರಕಂಪಣ ರಾಯಚರಿತವೆಂಬ ಹೆಸರಿನಲ್ಲಿ ಕಾವ್ಯವೊಂದನ್ನು ರಚಿಸಿದ್ದಾಳೆ (ಸು.1360). ವಿಜಯನಗರದ ವಿರೂಪಾಕ್ಷ ನರಕಾಸುರ ವಿಜಯವನ್ನು ರಚಿಸಿದ. ಈ ಕಾಲದಲ್ಲೇ ಮುಂದೆಯೂ ಸಾಲುವಾಭ್ಯುದಯ ಮುಂತಾದ ಅನೇಕ ಕಾವ್ಯಗಳು ರಚಿತವಾದವು. ವಿಜಯನಗರದ ಅನಂತರ ರಾಜಕೀಯ ಕೇಂದ್ರ ಹಂಚಿಹೋದಂತೆ ವಿದ್ಯಾಕೇಂದ್ರಗಳೂ ಹಂಚಿಹೋದವು. ಆದರೆ ಸಂಸ್ಕೃತಕ್ಕಿದ್ದ ಪ್ರೋತ್ಸಾಹ ಕುಂಠಿತವಾದರೂ ಅಳಿಸಿಹೋಗಲಿಲ್ಲ. ಕೆಳದಿಯ ದೊರೆ ಬಸವ ಭೂಪಾಲ ಸ್ವತಃ ಕವಿಯಾಗಿದ್ದ. ಸೋಮದೇವನ ಅಭಿಲಷಿತಾರ್ಥ ಚಿಂತಾಮಣಿಯ ಮಾದರಿಯನ್ನು ಅನುಸರಿಸಿ ಶಿವತತ್ತ್ವ ರತ್ನಾಕರ ಎಂಬ ಗ್ರಂಥವನ್ನು ಈತ ಸಿದ್ಧಪಡಿಸಿದ. ಇದು 108 ಅಧ್ಯಾಯಗಳುಳ್ಳ ಬೃಹದ್ಗ್ರಂಥ. ಇವನದೇ ಇನ್ನೊಂದು ಉದ್ಗ್ರಂಥ ಸುಭಾಷಿತ ಸುರದ್ರುಮ ಎಂಬ ಸೂಕ್ತಿಕೋಶ. ಶ್ರೀರಂಗಪಟ್ಟಣದ ದಳವಾಯಿ ನಂಜರಾಜ ನಂಜರಾಜಯಶೋಭೂಷಣ ಎಂಬ ಅಲಂಕಾರ ಗ್ರಂಥವನ್ನು ಬರೆದ. ಅಲ್ಲಿಯೇ ಪ್ರಧಾನಿಯಾಗಿದ್ದ ವೆಂಕಟಪ್ಪಯ್ಯ ಭೂಪತಿ ಅಥವಾ ವೆಂಕಾಮಾತ್ಯ ಹಲವಾರು ಗ್ರಂಥಗಳನ್ನು ರಚಿಸಿದ. ಇವನ ಅಲಂಕಾರಮಣಿದರ್ಪಣದಲ್ಲಿ ಅದುವರೆಗೆ ಅಲಂಕಾರ ಶಾಸ್ತ್ರದಲ್ಲಿ ನಡೆದ ಚರ್ಚೆಗಳನ್ನು ಸುಲಲಿತವಾಗಿ ಸಂಗ್ರಹಿಸಲಾಗಿದೆ. ಇವನ ಕುಶಲವ ವಿಜಯಚಂಪು ಭಟ್ಟಿಕಾವ್ಯದ ಮಾದರಿಯಲ್ಲಿ ವ್ಯಾಕರಣ ನಿಯಮಗಳಿಗೆ ಉದಾಹರಣೆ ಯಾಗಿರುವಂತೆ ರಚಿಸಲಾದ ಶಾಸ್ತ್ರಕಾವ್ಯ. ಈತ ಇವಲ್ಲದೆ ಹತ್ತು ಬಗೆಯ ರೂಪಕಗಳಿಗೂ ಒಂದೊಂದು ಉದಾಹರಣೆಯಾಗುವಂತೆ ಹತ್ತು ರೂಪಕಗಳನ್ನು ಬರೆದಿದ್ದಾನೆ.

ಮುಮ್ಮಡಿ ಕೃಷ್ಣರಾಜರ ಕಾಲ

[ಬದಲಾಯಿಸಿ]

19ನೆಯ ಶತಮಾನದಲ್ಲಿ ಹುಟ್ಟಿದ ಮುಮ್ಮಡಿ ಕೃಷ್ಣರಾಜ ಒಡೆಯರ ಶ್ರೀತತ್ತ್ವನಿಧಿ ಒಂದು ಸಚಿತ್ರ ಗ್ರಂಥ. ಇದರಲ್ಲಿ ಸಂವತ್ಸರಾಭಿಮಾನಿ ದೇವತೆಗಳು ರಾಗಾಭಿಮಾನಿ ದೇವತೆಗಳೇ ಮೊದಲಾಗಿ ನಾನಾ ದೇವತೆಗಳ, ಶಿವವಿಷ್ಣುವಿನ ನಾನಾ ರೂಪಗಳ ಸಂಸ್ಕೃತದ ಧ್ಯಾನ ಶ್ಲೋಕಗಳೊಡನೆ ಅದಕ್ಕೆ ಅನುಗುಣವಾದ ವರ್ಣರಂಜಿತ ಚಿತ್ರಗಳನ್ನು ಕೊಡಲಾಗಿದೆ. ಸಂಖ್ಯಾರತ್ನಮಾಲಾ ಒಂದು ಬಗೆಯ ಕೋಶ. ಪ್ರಪಂಚದಲ್ಲಿ ಕೆಲವೊಂದು ಪದಾರ್ಥಗಳು ಒಂಟಿಯಾಗಿರಬಹುದು, ಜೊತೆಜೊತೆಯಾಗಿರಬಹುದು. ಇಲ್ಲವೇ ಮೂರು ಅಥವಾ ಅದಕ್ಕೆ ಹೆಚ್ಚಿನ ಸಂಖ್ಯೆಯಲ್ಲಿನ ಗುಂಪುಗಳಲ್ಲಿರಬಹುದು. ಅಂಥ ಒಂಟಿ ಪದಾರ್ಥಗಳನ್ನೂ ಎರಡು ಅಥವಾ ಹೆಚ್ಚಿನ ಸಂಖ್ಯೆಯ ಗುಂಪುಗಳಲ್ಲಿ ಸೇರಿದ ವಸ್ತುಗಳ ಹೆಸರುಗಳನ್ನೂ ಆಯಾ ಸಂಖ್ಯೆಯ ಕ್ರಮದಲ್ಲಿ ಕೊಡಲಾಗಿದೆ. ಹೀಗೆ 127 ಕೊನೆಯ ಸಂಖ್ಯೆ ‘ಗ್ರಹಣದರ್ಪಣ’ 1841-1902ರ ವರೆಗಿನ ಅವಧಿಯಲ್ಲಿನ ಗ್ರಹಣದ ಬಗ್ಗೆ ಮಾಹಿತಿ ನೀಡುವ ಗ್ರಂಥ.

19ನೆಯ ಶತಮಾನದಲ್ಲಿ ನಡೆದ ಸಾಹಿತ್ಯ ಚಟುವಟಿಕೆಯಲ್ಲಿ ಇನ್ನೂ ಕೆಲವು ಹೆಸರುಗಳನ್ನು ಸೂಚಿಸಬಹುದು. ಯಾದವ ರಾಘವ ಪಾಂಡವೀಯ (1817) ಎಂಬ ತ್ರಿಸಂಧಾನ ಕಾವ್ಯವನ್ನು ಮೈಸೂರು ಅನಂತಾಚಾರ್ಯ ರಚಿಸಿದ್ದಾರೆ. ಭಾಗವತ, ರಾಮಾಯಣ ಹಾಗೂ ಮಹಾಭಾರತ ಕಥೆಗಳನ್ನು ಒಂದೇ ಬಾರಿಗೆ ಹೇಳುವ ಸಾಹಸ ಈ ಕಾವ್ಯದಲ್ಲಿ ನಡೆದಿದೆ. ಏಕಾಂಬರಶಾಸ್ತ್ರಿ ಎಂಬವರು ವೀರಭದ್ರವಿಜಯಚಂಪು ಎಂಬ ಕಾವ್ಯದಲ್ಲಿ ಬೆಂಗಳೂರು ಕೆಂಪೇಗೌಡನ ವಂಶದ ಚರಿತ್ರೆ ಹೇಳಲು ಅವಕಾಶ ಮಾಡಿಕೊಂಡಿದ್ದಾರೆ. ಮಲ್ಲಾರಿ ಆರಾಧ್ಯರು ಶಿವಲಿಂಗ, ಸೂರ್ಯೋದಯ ಎಂಬ ನಾಟಕವನ್ನು ಪ್ರಬೋಧ ಚಂದ್ರೋದಯದ ಮಾದರಿಯಲ್ಲಿ ರಚಿಸಿದ್ದರೆ, ಲಿಂಗಭಟ್ಟರು ಅಮರಕೋಶಕ್ಕೆ ಸಂಸ್ಕೃತ ಹಾಗೂ ಕನ್ನಡ ವಿವೃತ್ತಿಯನ್ನು ಬರೆದಿದ್ದಾರೆ. ಗುಡಿಬಂಡೆ ಸಮೀಪದ ಮಂಡಿಕಲ್ಲು ರಾಮಶಾಸ್ತ್ರೀ ‘ಮೇಘ ಪ್ರತಿಸಂದೇಶ’ ಎಂಬ ಗ್ರಂಥವನ್ನು ರಚಿಸಿದ್ದಾರೆ. ಸತ್ಯಪ್ರಿಯತೀರ್ಥರು ವ್ಯಾಕರಣ ಮಹಾಭಾಷ್ಯಕ್ಕೆ ವ್ಯಾಖ್ಯಾನ ರಚಿಸಿದ್ದಾರೆ. ಇದರ ಭಾಗಗಳು ಮಾತ್ರ ದೊರೆತಿವೆ.

ಮೇಲುಕೋಟೆಯ ಜಗ್ಗೂಆಳ್ವಾರರು ನಿರ್ಮಿಸಿದ ಪ್ರತಿಜ್ಞಾಕೌಟಿಲ್ಯಂ, ಪ್ರಸನ್ನರಾಘವಂ, ಮಹೀಹರಣಂ ಮುಂತಾದ ಅನೇಕ ಕಾವ್ಯಗಳು ಗಮನಾರ್ಹವಾಗಿವೆ. ಸಂಸ್ಕೃತ ಸಾಹಿತ್ಯ ಕೃತಿಗಳನ್ನು ಇಂಗ್ಲಿಷ್, ಕನ್ನಡ, ಹಿಂದೀಗಳಿಗೆ ಅನುವಾದಿಸಿ ಸಂಸ್ಕೃತ ಸಾಹಿತ್ಯವನ್ನು ಅನ್ಯರಿಗೆ ಪರಿಚಯ ಮಾಡಿಕೊಡುವಲ್ಲಿ ವಿದ್ವಾಂಸರಾದ ಕೆ. ಕೃಷ್ಣಮೂರ್ತಿ, ಎನ್. ರಂಗನಾಥಶರ್ಮ ತುಂಬಾ ಶ್ರಮಿಸಿದ್ದಾರೆ. ಇವರಂತೆಯೇ ಅನೇಕ ಆಧುನಿಕ ವಿದ್ವಾಂಸರು ತಮ್ಮದೇ ಆದ ಕೊಡುಗೆಯನ್ನು ಮೂಲ ಸಾಹಿತ್ಯಕ್ಕಾಗಲೀ ಅಥವಾ ಅನುವಾದ ಸಾಹಿತ್ಯಕ್ಕಾಗಲೀ ಅರ್ಪಿಸುತ್ತ ಬಂದಿದ್ದಾರೆ. ಅವುಗಳಲ್ಲಿ ಅನೇಕ ಕೃತಿಗಳು ಮಹತ್ಕೃತಿಗಳಾಗಿವೆ. ಇತ್ತೀಚಿನ ದಿನಗಳಲ್ಲಿ ಹಿಂದು ಸೇವಾ ಪ್ರತಿಷ್ಠಾನದ ಸಂಸ್ಕೃತ ಶಾಖೆ ಸಂಸ್ಕೃತದ ಬೆಳೆವಣಿಗೆಗಾಗಿ ಅನೇಕ ಕಾರ್ಯಕ್ರಮಗಳನ್ನು ಹಾಕಿಕೊಂಡು ಶ್ರಮಿಸುತ್ತಿದೆ.

ವಿಜಯನಗರ ಕಾಲದಾರಭ್ಯ ಆಧುನಿಕ ಕಾಲದ ತನಕ ಸಂಸ್ಕೃತದಲ್ಲಿ ಸೃಜನಾತ್ಮಕ ಕಾರ್ಯ ಎಷ್ಟೊಂದು ಅಗಾಧವಾಗಿ ಸಾಗಿದೆಯೆಂದರೆ ದೊರೆಯುವ ಸಂಸ್ಕೃತ ಹಸ್ತಪ್ರತಿಗಳ ಸಂಖ್ಯೆ ಹತ್ತುಸಾವಿರಕ್ಕೂ ಹೆಚ್ಚಾಗುತ್ತದೆ. ಈ ಗ್ರಂಥಗಳೆಲ್ಲ ಹೆಚ್ಚಾಗಿ ಪುರ್ವ ಮಹಾಕವಿಗಳ, ಸ್ತೋತ್ರಕಾರರ ಮಾದರಿಯಲ್ಲಿ ಬರೆದ ನೂತನ ರಚನೆಗಳು, ಇಲ್ಲವೆ ನಾನಾ ಶಾಸ್ತ್ರಗ್ರಂಥಗಳಿಗೆ ಟೀಕೆಟಿಪ್ಪಣಿಗಳು, ಇಲ್ಲವೆ ಧರ್ಮಶ್ರದ್ಧೆಯಿಂದ ಬರೆದ ಆಚಾರ್ಯ ಪುರುಷರ ದಿಗ್ವಿಜಯಗಳು, ಬಾಲೋಪಯೋಗಿ ಕಥಾನಕಗಳು ಮತ್ತು ಧರ್ಮಾಚರಣೆಗೆ ಉಪಯುಕ್ತವಾದ ಕೈಪಿಡಿಗಳು, ಮಂತ್ರ-ತಂತ್ರ ಪರಿಷ್ಕಾರಗಳು.

ಹೊಸಗನ್ನಡ ಕಾಲ

[ಬದಲಾಯಿಸಿ]

20ನೆಯ ಶತಮಾನದಲ್ಲಿಯೂ ಹಲವು ಕೃತಿಗಳು ಸಂಸ್ಕೃತದಲ್ಲಿ ರಚನೆಗೊಂಡವು. ಸುಂದರವಲ್ಲಿಯ (1900) ರಾಮಾಯಣ ಚಂಪು ಒಂದು ಗಮನಾರ್ಹ ಕೃತಿ. ಚಾಮರಾಜನಗರದ ಶ್ರೀಕಂಠಶಾಸ್ತ್ರೀ ಅವರು ಧಾತುರೂಪ ಪ್ರಕಾಶಿಕೆ ಎಂಬ ಗ್ರಂಥವನ್ನು ಬರೆದರಲ್ಲದೆ, ಯವನಯಾಮಿನೀವಿನೋದ ಕಥಾ ಎಂಬ ಹೆಸರಿನಲ್ಲಿ ಅರೇಬಿಯನ್ ನೈಟ್ಸ್‌ ಕಥೆಗಳನ್ನು ಸಂಸ್ಕೃತಕ್ಕೆ ಅನುವಾದ ಮಾಡಿದ್ದಾರೆ. ಶ್ರೀ ಕೃಷ್ಣಬ್ರಹ್ಮತಂತ್ರ ಪರಕಾಲ ಸ್ವಾಮಿಗಳು ಅಲಂಕಾರಮಣಿಹಾರ ಎಂಬ ಗ್ರಂಥವನ್ನು ರಚಿಸಿದ್ದಾರೆ. ಇದು ಅಲಂಕಾರಗಳನ್ನು ವಿವರಿಸುವ ಗ್ರಂಥ. ಇದರ ಉದಾಹರಣೆಗಳೆಲ್ಲವೂ ಶ್ರೀನಿವಾಸ ದೇವರನ್ನು ಕುರಿತವು. ವೇದಾಂತಾಚಾರ್ಯರು ರಚಿಸಿದ ಕೃತಿ ರಸಾಸ್ವಾದನೆ. ಇದು ಹಂಸಸಂದೇಶದ ವ್ಯಾಖ್ಯೆ.

ಲಕ್ಷ್ಮೀಪುರಂ ಶ್ರೀನಿವಾಸಾಚಾರ್ಯರು ಭಗವದ್ಗೀತಾ ಪ್ರಬಂಧ ಮೀಮಾಂಸಾ (1902), ಮೀಮಾಂಸಾ ಭಾಷಾಭೂಷಣ (1928) ಮುಂತಾದ ಹಲವು ಕೃತಿಗಳನ್ನು ರಚಿಸಿದ್ದಾರೆ. ಮೀಮಾಂಸಾ ಭಾಷಾಭೂಷಣ ಕುಮಾರಿಲಭಟ್ಟನ ತತ್ತ್ವಗಳನ್ನು ಪ್ರತಿಪಾದಿಸುವ ಗ್ರಂಥ. ದರ್ಶನೋದಯ (1933) ನಾನಾದರ್ಶನ ಪದ್ಧತಿಗಳ ವಿಷಯದೃಷ್ಟಿ ಮತ್ತು ವಿಮರ್ಶೆಯಿಂದ ಕೂಡಿದ ಲಲಿತ ಹಾಗೂ ಸ್ಪಷ್ಟ ನಿರೂಪಣೆಗಳನ್ನೊಳಗೊಂಡಿದೆ. ಮೇಲುಕೋಟೆಯ ಜಗ್ಗು ವೆಂಕಟಾಚಾರ್ಯರ ಹೆಸರಿನಲ್ಲಿ ಹತ್ತಾರು ಕೃತಿಗಳಿವೆ. ಕಾರ್ಕಳದ ಪಂಡಿತೆ ರಮಾಬಾಯಿ ಅವರು ಸುಲಲಿತ ಸಂಸ್ಕೃತದಲ್ಲಿ ಗ್ರಂಥರಚಿಸಿ ಖ್ಯಾತಿಪಡೆದಿದ್ದಾರೆ.

ಮುತ್ತಯ್ಯ ಭಾಗವತರ್ ಹುಟ್ಟುಕನ್ನಡಿಗರಲ್ಲದಿದ್ದರೂ ಅವರ ಸಂಗೀತ ಕೃತಿಗಳ ರಚನೆ ಬಹುತೇಕವಾಗಿ ಮೈಸೂರಿನಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ ಆಸ್ಥಾನದಲ್ಲಿ ನಡೆಯಿತು. ಇಲ್ಲೇ ಮೈಸೂರಿನ ಪ್ರಸಿದ್ಧ ವಾಗ್ಗೇಯಕಾರರಾದ ವಾಸುದೇವಾಚಾರ್ಯರ ಹೆಸರನ್ನು ಹೇಳಬಹುದು. ಇವರಿಬ್ಬರ ಕೃತಿಗಳೂ ಜನಪ್ರಿಯತೆಯನ್ನೂ ಗಳಿಸಿವೆ.

ಮೈಸೂರು ಮಹಾರಾಜರಾಗಿದ್ದ ಜಯಚಾಮರಾಜ ಒಡೆಯರ್ ಅವರ ಆಳ್ವಿಕೆಯಲ್ಲೂ ಸಂಸ್ಕೃತಕ್ಕೆ ಹೆಚ್ಚಿನ ಪ್ರೋತ್ಸಾಹ ದೊರೆಯಿತು. ಇವರೇ ಸ್ವತಃ ಹಲವು ಶ್ರೇಷ್ಠ ಕೃತಿಗಳನ್ನು ರಚಿಸಿದ್ದಾರೆ. ಇವರು ನಿಯೋಜಿಸಿದ ಪುರಾಣ, ವೇದ, ವೇದಾಂತ ಗ್ರಂಥಗಳನ್ನು ಮೂಲ ಮತ್ತು ಕನ್ನಡ ಅನುವಾದದೊಡನೆ ಪ್ರಕಟಿಸುವ ಮಹಾಯೋಜನೆಯಂತೆ 12 ಮಹಾ ಪುರಾಣಗಳು, 12 ಉಪಪುರಾಣಗಳು, 6 ಆಧ್ಯಾತ್ಮಿಕ ಗ್ರಂಥಗಳು (ಆನಂದ ಅಧ್ಯಾತ್ಮ ರಾಮಾಯಣಗಳು, ಯೋಗವಾಸಿಷ್ಠ, ಪ್ರಸ್ಥಾನತ್ರಯ ಭಾಷ್ಯಗಳು), ಒಂದೆರಡು ತಂತ್ರ ಗ್ರಂಥಗಳ ಋಕ್ಸಂಹಿತೆ, ಐತರೇಯ ಬ್ರಾಹ್ಮಣ ಮತ್ತು ಆರಣ್ಯಕ ಮತ್ತು ನಿರುಕ್ತ-ಈ ಗ್ರಂಥಗಳು ಸುಮಾರು 350 ಸಂಪುಟಗಳಲ್ಲಿ ಶ್ರೀ ಜಯಚಾಮರಾಜೇಂದ್ರ ಗ್ರಂಥಮಾಲೆಯಲ್ಲಿ ಪ್ರಕಾಶಿತವಾಗಿವೆ. ಪುರಾಣಗಳ, ವೇದಾಂತ ಗ್ರಂಥಗಳ ಮೂಲ ಮತ್ತು ಅನುವಾದ ಪ್ರಕಟವಾಗಿದ್ದರೆ, ಸಂಹಿತೆ, ಬ್ರಾಹ್ಮಣ ಗ್ರಂಥಗಳು ಸಾಯಣ ಭಾಷ್ಯ ವಿಸ್ತಾರವಾದ ಕನ್ನಡ ವಿವರಣೆಯೊಂದಿಗೆ ಹೊರಬಂದಿವೆ. ನಿರುಕ್ತಕ್ಕೂ ವಿಸ್ತಾರವಾದ ವಿವರಣೆಯಿದೆ. ವೇದಗ್ರಂಥಗಳಿಗೆ ಇಂಗ್ಲಿಷ್ ಅನುವಾದವನ್ನು ಕೊಡಲಾಗಿದೆ. ಈ ಮಾಲೆಯ ಮೂಲಕ ಕನ್ನಡ ಸಾಹಿತ್ಯಕ್ಕೆ, ಸಂಸ್ಕೃತಿ ಪ್ರಚಾರಕ್ಕೆ, ಸಂಸ್ಕೃತ ಭಾಷಾಧ್ಯಯನಕ್ಕೆ ಒಡೆಯರ್ ಅವರು ಇತ್ತ ನೆರವು ಅಪಾರವಾದುದು. ಇತ್ತೀಚೆಗೆ ಜಯಚಾಮರಾಜೇಂದ್ರರ ಕೃತಿಗಳಾದ ಶ್ರೀತತ್ತ್ವನಿಧಿ ಮೊದಲಾದ 9 ಕೃತಿಗಳು ಮೈಸೂರಿನ ಪ್ರಾಚ್ಯವಿದ್ಯಾ ಸಂಶೋಧನಾಲಯದಿಂದ ಕನ್ನಡ ಇಂಗ್ಲಿಷ್ ಅನುವಾದಗಳೊಂದಿಗೆ ಪ್ರಕಟವಾಗಿವೆ.

ವಿದ್ಯಾಭ್ಯಾಸ ಹಾಗೂ ಸಂಸ್ಕೃತ ಪ್ರಚಾರ ಕ್ಷೇತ್ರದಲ್ಲಿಯೂ ಸಾಕಷ್ಟು ಕಾರ್ಯ ಕಳೆದ ಶತಮಾನದ ಕೊನೆಯಿಂದ ನಡೆದು ಬಂದಿದೆ. ಎಚ್. ಸುಬ್ಬರಾವ್ ರಚಿಸಿದ, ‘ವಿದ್ಯಾಭ್ಯಾಸ ಪದ್ಧತಿ’ ಹರ್ಬರ್ಟ್ ಸ್ಪೆನ್ಸರನ ಗ್ರಂಥದ ಅನುವಾದ. ಪೆರಿಸ್ವಾಮಿ ತಿರುಮಲಾಚಾರ್ ಸದ್ವಿದ್ಯಾ ಆಂಗ್ಲೋ-ಸಂಸ್ಕೃತ ಪಾಠಶಾಲೆಯ ಸ್ಥಾಪಕರಲ್ಲೊಬ್ಬರಾಗಿದ್ದು, ಬಾಲಬೋಧಗಳನ್ನು ಸಿದ್ಧಪಡಿಸಿದರು.

ಹಿಂದಿನಿಂದಲೂ ಉಡುಪಿ, ಶೃಂಗೇರಿ, ಕೂಡ್ಲಿ, ಸಂಕೇಶ್ವರಗಳಲ್ಲಿಯೂ ದಕ್ಷಿಣ ಕನ್ನಡ ಜಿಲ್ಲೆಯ ಹಲವು ಕಡೆಗಳಲ್ಲೂ ಸಂಸ್ಕೃತ ಪಾಠಶಾಲೆಗಳಿದ್ದವು. ಪರ್ದಲ, ಕಾರ್ಕಳಗಳಲ್ಲಿ ಮಹಾ ಪಾಠಶಾಲೆಗಳಿದ್ದವು (ಓರಿಯಂಟಲ್ ಕಾಲೇಜು). ಈಚೆಗೆ ಆಧುನಿಕ ವಿದ್ಯಾಭ್ಯಾಸದ ಏರ್ಪಾಡುಗಳಾದಂತೆ ಸಂಸ್ಕೃತ ವಿದ್ಯಾಭ್ಯಾಸ ಪ್ರಗತಿ ಸಾಧಿಸಿದೆ. ಶೃಂಗೇರಿ, ಉಡುಪಿ, ಕಾರ್ಕಳಗಳಲ್ಲಿದ್ದ ಪಾಠಶಾಲೆಗಳು ಸುವ್ಯವಸ್ಥಿತವಾಗಿವೆ. ಮೈಸೂರು, ಬೆಂಗಳೂರುಗಳಲ್ಲಿ ಪ್ರೌಢ ವಿದ್ಯಾಭ್ಯಾಸಕ್ಕೆ ಉನ್ನತ ಮಟ್ಟದ ಸಂಸ್ಕೃತ ಪಾಠಶಾಲೆಗಳನ್ನು ಸ್ಥಾಪಿಸಲಾಗಿದೆ. ಶಾಲೆ, ಕಾಲೇಜು ಮತ್ತು ಸ್ನಾತಕೋತ್ತರ ಪದವಿ ಮಟ್ಟದಲ್ಲಿ ಸಂಸ್ಕೃತ ಶಿಕ್ಷಣಕ್ಕೆ ಅವಕಾಶವಿದೆ.

ಸಂಸ್ಕೃತದಲ್ಲಿ ಪತ್ರಿಕೆ, ನಿಯತಕಾಲಿಕೆಗಳು ಪ್ರಕಟವಾಗುತ್ತಿವೆ. ಬೆಳಗಾಂವಿಯಿಂದ ಪ್ರಕಟವಾಗುತ್ತಿದ್ದ ಸಂಸ್ಕೃತ ಚಂದ್ರಿಕಾ ಮತ್ತು ಮಧುರವಾಣೀ ನಿಯತಕಾಲಿಕೆಗಳು ಬಹಳ ಪ್ರಭಾವವನ್ನು ಬೀರಿವೆ. ಇದರ ಏಳ್ಗೆಗಾಗಿ ಪಂಡರೀನಾಥ ಗಲಗಲಿಯವರು ಬಹಳ ಶ್ರಮವಹಿಸಿ ದುಡಿದಿದ್ದಾರೆ. ಅಮರ ಭಾರತೀ ನಿಯತಕಾಲಿಕೆ ವಾರಾಣಸಿಯಲ್ಲಿ ಪ್ರಕಾಶಿತವಾದರೂ ಅದರ ಸಂಪಾದಕರಾದ ನರಸಿಂಹಾಚಾರ್ ಕರ್ನಾಟಕದವರು. ಏಕಮಾತ್ರ ದೈನಿಕವಾದ ಸುಧರ್ಮಾ ಮೈಸೂರಿನಲ್ಲಿ ಕೆ.ಎಸ್.ವರದರಾಜ ಅಯ್ಯಂಗಾರ್ ಅವರ ಸಂಪಾದಕತ್ವದಲ್ಲಿ ಪ್ರಕಟವಾಗುತ್ತಿತ್ತು. ಸಂಸ್ಕೃತ-ಕನ್ನಡ ಭಾಷೆಗಳೆರಡೂ ಸು.2000 ವರ್ಷಗಳಿಂದ ಜೊತೆಯಲ್ಲಿಯೇ ಬೆಳೆಯುತ್ತ ಬಂದಿವೆ; ಪರಸ್ಪರ ಪ್ರಭಾವಿತವಾಗಿವೆ. ಕನ್ನಡ ಭಾಷೆಯ ಪ್ರಭಾವವೂ ಸಂಸ್ಕೃತದ ಮೇಲೆ ಆಗಿದೆ ಎಂಬುದಕ್ಕೆ ಸಂಸ್ಕೃತ ಕನ್ನಡದಿಂದ ಎರವಲು ಪಡೆದಿರಬಹುದಾದ ಒಂದೆರಡು ಪದಗಳನ್ನು ಇಲ್ಲಿ ಉದಾಹರಣೆಗಾಗಿ ಹೇಳಬಹುದು. ಆರ್ಬಟ-ಆರ್ಭಟ, ಗುದ್ದಲಿ-ಕುದ್ದಾಲ, ಗೊಟರು-ಕೋಟಕ. ಹೆಂಟೆ-ಹೆಂಡೆ, ಪಿಂಡು-ಪಿಂಡ ಇತ್ಯಾದಿ. ಸಂಸ್ಕೃತ ಪದಗಳು ಕನ್ನಡದಲ್ಲಿ ಧಾರಾಳವಾಗಿ ಬಳಕೆಯಾಗುತ್ತಾ ಬಂದಿವೆ. ಇಂದಿನ ಪಾರಿಭಾಷಿಕ ಪದಗಳನ್ನು ರೂಪಿಸುವುದರಲ್ಲಿಯೂ ಸಂಸ್ಕೃತದ ಉಪಯೋಗ ಬಹಳಷ್ಟಿದೆ. ಆದರೆ ಸಂಸ್ಕೃತದಿಂದ ಕನ್ನಡಕ್ಕೆ ಬಂದಿರುವುದು ಹೆಚ್ಚು. ಸಂಸ್ಕೃತದಲ್ಲಿದ್ದ ವಿಜ್ಞಾನ, ಕಲೆ ಮತ್ತು ತತ್ತ್ವಶಾಸ್ತ್ರ ಮೊದಲಾದ ವಾಙ್ಮಯ ವಿಭಾಗಗಳ ಬಗೆಗಿನ ಗ್ರಂಥಗಳೆಲ್ಲವನ್ನೂ ಕ್ರಮೇಣ ಕನ್ನಡದಲ್ಲಿಯೂ ಬರೆಯಲಾಯಿತು. ಮೊದಮೊದಲಿಗೆ ವಿಷಯ ನಿರೂಪಣೆಯಲ್ಲಿ ಸಂಸ್

ಸಂಸ್ಕೃತದ ಕವಿಗಳು

[ಬದಲಾಯಿಸಿ]

ಸಂಸ್ಕೃತವನ್ನು ನೂರಾರು ಮಹಾಕವಿಗಳು, ದಾರ್ಶನಿಕರು ಸಮೃದ್ಧಗೊಳಿಸಿದ್ದಾರೆ. ಆ ಪಟ್ಟಿಯಲ್ಲಿ ಮೊದಲು ಬರುವವರು ವಾಲ್ಮೀಕಿ ಮುನಿ. ಅವರಿಂದಲೇ ಸಂಸ್ಕೃತದ ಮೊದಲ ಶ್ಲೋಕ ಹುಟ್ಟಿತು. ಅದು 'ಮಾ ನಿಷಾದ ಪ್ರತಿಷ್ಟಾಂ ತ್ವಮಗಮಃ ಶಾಶ್ವತೀ ಸಮಾಃ. ಯತ್ಕ್ರೌಂಚ ಮಿಥುನಾತ್ ಏಕಮವಧೀಹಿ ಕಾಮಮೋಹಿತಂ' ಎಂಬುದು. ಬೇಡನೊಬ್ಬ ಕಾಮಮೋಹಿತವಾಗಿದ್ದ ಕ್ರೌಂಚ ಪಕ್ಷಿಗಳ ಜೋಡಿಯಲ್ಲಿ ಒಂದನ್ನು ಕೊಂದಾಗ ಅದನ್ನು ನೋಡಿ ಸಿಟ್ಟುಗೊಂಡ ವಾಲ್ಮೀಕಿ ಮುನಿ ತಮಗೇ ಗೊತ್ತಿಲ್ಲದಂತೆ ಈ ಶ್ಲೋಕ ಹೇಳಿ ಬೇಡನಿಗೆ ಶಾಪ ಕೊಟ್ಟರು. ಶೋಕದಲ್ಲಿ ಹುಟ್ಟಿದ ಅದು ಶ್ಲೋಕವೆಂದು ಪ್ರಸಿದ್ಧಿಗೆ ಬಂತು. ಅವರ ಶಿಷ್ಯ ಭರಧ್ವಾಜ ಮುನಿ ಇದನ್ನು ದಾಖಲಿಸಿದ. ಇದೇ ವಾಲ್ಮೀಕಿ ಮುನಿಗಳು ರಾಮಾಯಣವನ್ನೂ ರಚಿಸಿದರು. ನಂತರ ವ್ಯಾಸರಿಂದ ಮಹಾಭಾರತ ರಚಿತವಾಯಿತು. ಇವರಿಬ್ಬರು ಸಂಸ್ಕೃತದ ಮೂಲ ಕವಿಗಳಾದರೆ, ಈ ಭಾಷೆಯ ಆದಿಕವಿ ಎಂದು ಹೆಸರಾದವರು ಕಾಳಿದಾಸ. ಅಭಿಜ್ಞಾನ ಶಾಕುಂತಲಮ್ ನಾಟಕ ಇವರ ಮಹತ್ವದ ಕೃತಿ. ಇದಲ್ಲದೆ ಮಾಲವಿಕಾಗ್ನಿಮಿತ್ರಮ್, ವಿಕ್ರಮೋರ್ವಶೀಯ ಎಂಬ ನಾಟಕಗಳನ್ನೂ, ರಘುವಂಶಮ್ ಮತ್ತು ಕುಮಾರಸಂಭವಮ್ ಎಂಬ ಮಹಾಕಾವ್ಯಗಳನ್ನೂ, ಮೇಘದೂತಮ್ ಮತ್ತು ಋತುಸಂಹಾರಮ್ ಎಂಬ ಖಂಡಕಾವ್ಯಗಳನ್ನೂ ಬರೆದಿದ್ದಾರೆ. ಇವರ ಜೊತೆಗೆ ಭಾಸ, ಭಾರವಿ, ಶ್ರೀಹರ್ಷ, ಬಾಣ ಮುಂತಾದ ಮಹತ್ವದ ಕವಿಗಳು ಸಂಸ್ಕೃತದಲ್ಲಿ ಆಗಿಹೋಗಿದ್ದಾರೆ.

ಗಮನಿಸಿ : ಕಾಳಿದಾಸರಿಗೆ ಭಾರತದ ಶೇಕ್ಸ್ ಪಿಯರ್ ಎಂಬ ಅಭಿದಾನವೂ ಇದೆ. ಆದರೆ ಕಾಳಿದಾಸರನ್ನು ಹೀಗೆ ಕರೆಯುವ ಯಾವುದೇ ಅಗತ್ಯವಿಲ್ಲ. ಏಕೆಂದರೆ, ಶೇಕ್ಸ್ ಪಿಯರ ಕಾಲ ಏಪ್ರಿಲ್ ೨೬ ೧೫೬೪, ಹಾಗು ಕಾಳಿದಾಸರ ಕಾಲ ೫ ನೇ ಶತಮಾನ. ಕಾಳಿದಾಸರ ಕಾವ್ಯಗಳು ಎಷ್ಟೋ ಶತಮಾನ ಹಳೆಯದು. ಇನ್ನು ಶೇಕ್ಸ್ ಪಿಯರನ್ನು ಇಂಗ್ಲೆಂಡಿನ ಕಾಳಿದಾಸರೆಂದು ಕರೆಯುವುದರಲ್ಲಿ ಅರ್ಥವಿದೆ. ತಪ್ಪಾದ ಈ ವಾಕ್ಯವನ್ನು ಭಾರತೀಯರು ಎಂದೂ ಒಪ್ಪುವುದಿಲ್ಲ, ಒಪ್ಪುವ ಅಗತ್ಯವೂ ಇಲ್ಲ.

ಸಂಸ್ಕೃತ ವಿಕಿಪೀಡಿಯಾ ೨೦೦೩ ರಲ್ಲಿ ಆರಂಭಿಸಲಾಯಿತು. ಇದುವರೆಗೂ ಸಂಸ್ಕೃತ ವಿಕಿಪೀಡಿಯಾದಲ್ಲಿ ೧೫೦೦೦ ಪುಟಗಳನ್ನು ರಚಿಸಲಾಗಿದೆ.

[ಬದಲಾಯಿಸಿ]
Sanskrit Documents
Primers
Grammars
"https://kn.wikipedia.org/w/index.php?title=ಸಂಸ್ಕೃತ&oldid=1265244" ಇಂದ ಪಡೆಯಲ್ಪಟ್ಟಿದೆ