ಆಗ್ನೇಯ ಏಷ್ಯಾ
ಭಾರತದ ಪೂರ್ವಕ್ಕೆ ಮತ್ತು ಚೀನಾದ ದಕ್ಷಿಣಕ್ಕೆ ಏಷ್ಯಾ ಖಂಡದ ಆಗ್ನೇಯ ಭಾಗದಲ್ಲಿರುವ ದೇಶಗಳು ಆಗ್ನೇಯ ಏಷ್ಯಾದಲ್ಲಿ ಒಳಗೊಳ್ಳುತ್ತವೆ.
ರಾಜಕೀಯ ವಿಭಾಗಗಳು
[ಬದಲಾಯಿಸಿ]ಆಗ್ನೇಯ ಏಷ್ಯ ಈಸ್ಟ್ ಇಂಡಿಯ ದ್ವೀಪಗಳು, ಏಷ್ಯ ಖಂಡದಲ್ಲಿನ ಇಂಡೋಚೀನ ಪರ್ಯಾಯದ್ವೀಪ-ಇವುಗಳನ್ನೊಳಗೊಂಡ ಭೂಪ್ರದೇಶ.ಇಂಡೋನೇಷಿಯ,ಫಿಲಿಪ್ಪೈನ ದ್ವೀಪಗಳು, ಬೋರ್ನಿಯೋದ ಬ್ರಿಟಿಷ್ ಭಾಗಗಳು ಮತ್ತು ಪೋರ್ಚುಗೀಸರ ಟಿಮೋರ್-ಇವು ಮೊದಲ ಭಾಗದ ರಾಜಕೀಯ ವಿಭಾಗಗಳು.ಬರ್ಮ,ಥಾಯ್‍ಲ್ಯಾಂಡ್,ಕಾಂಬೋಡಿಯ,ಲಾವೋಸ್, ವಿಯಟ್ನಾಂ (ಪೂರ್ತ್),ಮಲೇಶಿಯಾ,ಸಿಂಗಪುರ,ಬ್ರುನೈ,ಪೂರ್ವ ಟೀಮೊರ್-ಇವು ಎರಡನೆಯ ಭಾಗದ ರಾಜಕೀಯ ವಿಭಾಗಗಳು.
ಸ್ವತಂತ್ರ ದೇಶಗಳು
[ಬದಲಾಯಿಸಿ]ಆಗ್ನೇಯ ಏಷ್ಯದ ಸ್ವತಂತ್ರ ದೇಶಗಳು ಮತ್ತು ಅವುಗಳ ವಿವರಗಳು.
ರಾಜ್ಯ | ವಿಸ್ತೀರ್ಣ (km2)[೧] |
ಜನಸಂಖ್ಯೆ (2014)[೧] |
ಸಾಂದ್ರತೆ (/km2) |
ಜಿಡಿಪಿ (nominal), USD (೨೦೧೬)[೧] |
ಜಿಡಿಪಿ (nominal) ತಲಾ ಅದಾಯ, USD (೨೦೧೬)[೧] |
ಮಾನವ ಅಭಿವೃದ್ಧಿ ಸೂಚ್ಯಂಕ(HDI) (2013)[೨] | ರಾಜಧಾನಿ |
---|---|---|---|---|---|---|---|
ಬ್ರುನೈ | 5,765 | 453,000 | 78 | 17,105,000,000 | $37,759 | 0.852 | ಬಂದರ್ ಸೆರಿ ಬಗೆವನ್ |
ಕಾಂಬೋಡಿಯ | 181,035 | 15,561,000 | 85 | 17,291,000,000 | $1,111 | 0.584 | ನೋಮ್ ಫೆನ್ |
ಪೂರ್ವ ಟೀಮೊರ್ | 14,874 | 1,172,000 | 75 | 4,382,000,000 | $3,239 [೩] | 0.620 | ಡಿಲಿ |
ಇಂಡೋನೇಷ್ಯಾ | 1,904,569 | 251,490,000 | 132 | 895,677,000,000[೪] | $3,511 [೪] | 0.684 | ಜಕಾರ್ತ |
ಲಾವೋಸ್ | 236,800 | 6,557,000 | 30 | 11,206,000,000 | $1,709 | 0.569 | ವಿಯೆನ್ ಟಿಯೇನ್ |
ಮಲೇಶಿಯ | 329,847 | 30,034,000 | 91 | 367,712,000,000 | $13,123[೫] | 0.773 | ಕೌಲಾಲಂಪುರ್>* |
ಮಯನ್ಮಾರ್ | 676,000 | 51,419,000 | 98 | 63,881,000,000 | $1,419[೬] | 0.524 | ನೇಪ್ಯಿಡಾವ್ |
ಫಿಲಿಪ್ಪೀನ್ಸ್ | 342,353 | 101,649,000 | 338 | 369,188,000,000[೭] | $3,568[೭] | 0.668 | ಮನಿಲಾ |
ಸಿಂಗಾಪುರ | 724 | 5,554,000 | 7,671 | 289,086,000,000 | $52,049 | 0.901 | ಸಿಂಗಾಪುರ (ನಗರ-ರಾಜ್ಯ) |
ಥೈಲ್ಯಾಂಡ್ | 513,120 | 65,236,000 | 127 | 437,344,000,000 | $5,697[೬] | 0.722 | ಬ್ಯಾಂಕಾಕ್ |
ವಿಯೆಟ್ನಾಮ್ | 331,210 | 92,571,000 | 279 | 187,848,000,000 | $2,370[೮] | 0.638 | ಹನೋಯಿ |
* ಆಡಳಿತಾತ್ಮಕ ಕೇಂದ್ರವು ಪುತ್ರಜಯ.
ಆಧೀನ ಪ್ರದೇಶಗಳು
[ಬದಲಾಯಿಸಿ]ಪ್ರದೇಶ | ವಿಸ್ತೀರ್ಣ (ಕಿಮೀ2) | ಜನಸಂಖ್ಯೆ | ಸಾಂದ್ರತೆ (/ಕಿಮೀ2) | ರಾಜಧಾನಿ |
---|---|---|---|---|
ಕ್ರಿಸ್ಮಸ್ ದ್ವೀಪಗಳು | 135[೧೦] | 1,402[೧೦] | 10.4 | ಪ್ಲಯಿಂಗ್ ಫಿಶ್ ಕೋವ್ |
ಕೊಕೊಸ್ (ಕೀಲಿಂಗ್) ದ್ವೀಪಗಳು | 14[೧೧] | 596[೧೧] | 42.6 | West Island (Pulau Panjang) |
ಆಡಳಿತಾತ್ಮಕ ಪ್ರದೇಶ
[ಬದಲಾಯಿಸಿ]ಪ್ರದೇಶ | ವಿಸ್ತೀರ್ಣ (ಕಿಮೀ2) | ಜನಸಂಖ್ಯೆ | ಸಾಂದ್ರತೆ (/ಕಿಮೀ2) | ರಾಜಧಾನಿ |
---|---|---|---|---|
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು | 8,250 | 379,944[೧೨] | 46 | ಪೋರ್ಟ್ ಬ್ಲೇರ್ |
ಮೇಲ್ಮೈ ಲಕ್ಷಣ
[ಬದಲಾಯಿಸಿ]ಆಗ್ನೇಯ ಏಷ್ಯದ ಭೂಭಾಗದಲ್ಲಿ ಉತ್ತರ ದಕ್ಷಿಣವಾಗಿ ಹಬ್ಬಿರುವ ಅನೇಕ ಪರ್ವತಶ್ರೇಣಿಗಳಿವೆ. ಕಣಿವೆಗಳಲ್ಲಿ ಮಿಕಾಂಗ್ ಮತ್ತು ಇರವಾಡಿಗಳಂಥ ದೊಡ್ಡ ನದಿಗಳು ಹರಿಯುತ್ತವೆ. ದ್ವೀಪಭಾಗಗಳಲ್ಲಿ ಜೀವಂತ ಜ್ವಾಲಾಮುಖಿಗಳಿವೆ. ಹವೆ ಸಾಮಾನ್ಯವಾಗಿ ಉಷ್ಣವಲಯದಾಗಿದ್ದು ವಾರ್ಷಿಕ ಮಳೆ 40'. ಬಹುಮಟ್ಟಿಗೆ ಇದು ಅರಣ್ಯ ಪ್ರದೇಶ. ಮಲೇಷಿಯಾದಲ್ಲಿ ಕಂಡುಬರುವ ಭಾಷೆ ಹಾಗೂ ಸಾಂಸ್ಕ್ರತಿಕ ಐಕ್ಯ ಇಲ್ಲಿ ಕಾಣದು. ಅಕ್ಕಿ ಮತ್ತು ಜೋಳ ಇಲ್ಲಿನ ಪ್ರಧಾನ ಬೆಳೆ. ಅಲ್ಲಿಂದ ರಬ್ಬರ್, ಅಕ್ಕಿ, ತೆಂಗಿನೆಣ್ಣೆ, ಸಕ್ಕರೆ, ತೇಗ, ಮನಿಲ ಹೆಂಪ್, ಟೀ, ಕಾಫಿ, ತಂಬಾಕು, ಮೆಣಸು. ಟಿನ್, ಪೆಟ್ರೋಲಿಯಂ, ಬಾಕ್ಸೈಟ್_ ಇವು ರಫ್ತಾಗುತ್ತವೆ. ಅಷ್ಟಾಗಿ ಕೈಗಾರಿಕೋದ್ಯಮಗಳು ಬೆಳೆದಿಲ್ಲ. 16ನೆಯ ಶತಮಾನಕ್ಕೆ ಹಿಂದೆ ಭಾರತ, ಚೀನ ಮತ್ತು ಇತರ ದೇಶಗಳೊಂದಿಗೆ ಆಗ್ನೇಯ ಏಷ್ಯ ಸಾಕಷ್ಟು ವಾಣಿಜ್ಯ ವ್ಯಾಪಾರ ಸಂಬಂಧಗಳನ್ನಿಟ್ಟುಕೊಂಡಿತ್ತು. ಅಲ್ಲಿಂದೀಚೆಗೆ 20ನೆಯ ಶತಮಾನದ ವೇಳೆಗೆ ದೇಶದ ಎಲ್ಲ ಭಾಗಗಳೂ ಪಶ್ಚಿಮದ ಪ್ರಭಾವಕ್ಕೊಳಗಾದುವಲ್ಲದೆ ಥಾಯಲೆಂಡ್ ಒಂದನ್ನುಳಿದು ಉಳಿದ ಎಲ್ಲ ಭಾಗಗಳೂ ಪಶ್ಚಿಮ ರಾಷ್ಟ್ರಗಳ ವಸಾಹತುಗಳಾದವು. 1961ರ ವೇಳೆಗೆ ಬ್ರಿಟಿಷ್ ಬೋರ್ನಿಯೊ ಮತ್ತು ಪೋರ್ಚುಗೀಸ್ ಟಿಮೋದರ್‍ಗಳನ್ನುಳಿದು ಎಲ್ಲ ಭಾಗಗಳೂ ಸ್ವಾತಂತ್ರ್ಯಗಳಿಸಿದುವು.
ಭಾಷೆಗಳು
[ಬದಲಾಯಿಸಿ]ಆಗ್ನೇಯ ಏಷ್ಯ ಬಹು ಭಾಷೆಗಳ ಸಂಗ್ರಹಾಲಯವಾಗಿದೆ. ಅವುಗಳ ಪರಸ್ಪರ ಸಂಬಂಧಗಳಂತೂ ಬೆರಗುಗೊಳಿಸುವಂತಿದೆ. ಬರ್ಮದಲ್ಲೆ 125-140 ಭಾಷೆಗಳಿವೆ. ಇವುಗಳಲ್ಲಿ ವಿಯೆಟ್ನಾಂ, ಕಾಂಬೋಡಿಯ, ಥಾಯ್, ಮಲಯ, ಬರ್ಮಗಳ ಭಾಷೆಗಳು ಅನೇಕ ಶತಮಾನಗಳಷ್ಟು ಪ್ರಾಚೀನವಾಗಿದ್ದು ಶಿಷ್ಟ ಸಾಹಿತ್ಯಕ ಭಾಷೆಗಳಾಗಿವೆ. ಕಾರೆನ್ ಮತ್ತು ಷಾನ್‍ಗಳಂಥ ಕೆಲವು ಬರೆವಣಿಗೆಗೆ ಬಂದು ಕೇವಲ ಒಂದು ಶತಮಾನ ಮಾತ್ರ ಆಗಿದೆ. ಉಳಿದ ಭಾಷೆಗಳ ವಿಷಯದಲ್ಲಿ ತಿಳಿದಿರುವುದು ಬಹು ಸ್ವಲ್ಪ. ಪಾದ್ರಿಗಳಲ್ಲಿ ಕೆಲವರು ಅವಕ್ಕೆ ನಿಘಂಟುಗಳನ್ನು ರಚಿಸಿದ್ದಾರೆ. ಪ್ರವಾಸಿಗಳು, ಅಧಿಕಾರಿಗಳು ಕೆಲವಕ್ಕೆ ಶಬ್ದಭಂಡಾರವನ್ನು ಪಟ್ಟಿ ಮಾಡಿದ್ದಾರೆ. ಉಳಿದವಕ್ಕೆ ಯಾವ ದಾಖಲೆಯೂ ಇಲ್ಲ. ಇಲ್ಲಿ ಅಸ್ಟ್ರೊನೀಸಿಯನ್ ಅಥವಾ ಮಲೆಯೊ-ಪಾಲಿನೀಸಿಯನ್, ಮಾನ್-ಖ್ಮರ್, ಸೈನೊ-ಟಿಬೆಟನ್ ಎಂಬ ಮೂರು ಭಾಷಾ ಕುಟುಂಬಗಳಿವೆ. ಇವಕ್ಕೆ ಸೇರಿದ ಭಾಷೆಗಳ ಅಧ್ಯಯನ ಸಾಕಷ್ಟು ಆಗದ ಹೊರತು ಆಗ್ನೇಯ ಏಷ್ಯದ ಭಾಷೆಗಳ ವಿಚಾರವಾಗಿ ಖಚಿತವಾಗಿ ಏನನ್ನೂ ಹೇಳಲು ಸಾಧ್ಯವಾಗದು.
ಭಾರತೀಯ ಸಂಪರ್ಕ
[ಬದಲಾಯಿಸಿ]ಭೌಗೋಳಿಕ ದೃಷ್ಟಿಯಿಂದ ಆಗ್ನೇಯ ಏಷ್ಯ ಅನೇಕ ಸಣ್ಣಸಣ್ಣ ರಾಜ್ಯಗಳನ್ನೂ ದ್ವೀಪಗಳನ್ನೂ ಒಳಗೊಂಡಿದ್ದರೂ ಪ್ರಾಚೀನ ಸಂಸ್ಕ್ರತಿಯ ದೃಷ್ಟಿಯಿಂದ ಒಂದು ದೇಶವೆಂದು ಪರಿಗಣಿಸಬಹುದು. ಇದರಲ್ಲಿ ಮುಖ್ಯವಾಗಿ ಇಂಡೋನೇಷ್ಯ ಮತ್ತು ಇಂಡೋಚೀನ ಎಂಬ ಎರಡು ಭಾಗಗಳಿವೆ. ಇವುಗಳಲ್ಲಿ ಈಗಿನ ಕಾಂಬೋಡಿಯ, ವಿಯಟ್‍ನಾಮ್, ಥಾಯ್‍ಲ್ಯಾಂಡ್, ಲಾವೋಸ್, ಬರ್ಮ, ಜಾವ ಮತ್ತು ಬಾಲಿ ದೇಶಗಳಿವೆ (ನೋಡಿ- ಇಂಡೋನೇಷ್ಯ) ಬಹು ಪ್ರಾಚೀನಕಾಲದಿಂದಲೂ ಆಗ್ನೇಯ ಏಷ್ಯದ ರಾಜ್ಯಗಳು ಭಾರತೀಯ ಸಂಸ್ಕೃತಿಯ ಪ್ರಭಾವಕ್ಕೊಳಗಾದವು. ಇದರಿಂದ ಅಲ್ಲಿ ಬಹುಕಾಲ ಈ ಸಂಸ್ಕೃತಿ ನೆಲೆಸಿ ಭಾರತ ಮತ್ತು ಆಗ್ನೇಯ ಏಷ್ಯಗಳ ಸಾಮೀಪ್ಯವನ್ನು ಹೆಚ್ಚಿಸಿದೆ. ಫ್ರೆಂಚ್ ಮತ್ತು ಡಚ್ ವಿದ್ವಾಂಸರು ಈ ಸಂಸ್ಕೃತಿಯ ಅಧ್ಯಯನಕ್ಕೆ ತಳಹದಿಯನ್ನು ಹಾಕಿದ್ದಾರೆ. ಅದರಲ್ಲೂ ಸೀಡಸ್, ಕ್ರೋಮ್ ಸ್ಟುಟರ್‍ಹೀಮ್, ವಿನ್ಸ್‍ಡೆಟ್. ಪೆಲಿಯಟ್, ಜಿಲುಸ್ಕಿ, ಹಾರ್ವೆ ಮುಂತಾದ ವಿದ್ವಾಂಸರುಗಳ ಕೊಡುಗೆ ಗಮನಾರ್ಹ. ಭಾರತೀಯ ಸಂಸ್ಕೃತಿ ಆಗ್ನೇಯ ಏಷ್ಯದಲ್ಲಿ ಯಾವ ರೀತಿ ಹರಡಿತು ಎಂದು ಹೇಳುವುದು ಕಷ್ಟ. ವಿನ್ಸ್‍ಡೆಟ್ ಹೇಳಿರುವಂತೆ ಹಿಂದೂಗಳು ಆಗ್ನೇಯ ಏಷ್ಯಕ್ಕೆ ಹಠಾತ್ತನೆ ಪ್ರಯಾಣ ಮಾಡಲಿಲ್ಲ; ಅವರ ಪ್ರಯಾಣ ಹಿಂಸಾತ್ಮಕಕೃತ್ಯಗಳಿಂದಲೂ ಕೂಡಿರಲಿಲ್ಲ; ಅದು ಶಾಂತಿಯುತವಾಗಿದ್ದುದಲ್ಲದೆ ಕ್ರಮಬದ್ಧವಾಗಿತ್ತು. ಸಂಬಾರ ಪದಾರ್ಥಗಳನ್ನು ಹೊತ್ತು ತಂದ ಹಡಗೊಂದು ಆಗ್ನೇಯ ಏಷ್ಯದ ರೇವುಪಟ್ಟಣದಲ್ಲಿ ಬೀಡು ಬಿಟ್ಟಿತು. ಈ ಹಡಗಿನಲ್ಲಿದ್ದ ವಸ್ತುಗಳು ಮಾರಾಟವಾಗುವವರೆಗೆ ಭಾರತೀಯ ನಾವಿಕರು ಸ್ಥಳೀಯ ಜನಗಳೊಡನೆ ಬೆರೆತರು. ಸಂಸ್ಕೃತ ಭಾಷೆಯನ್ನು ಬಲ್ಲ ಭಾರತೀಯರು ಅಲ್ಲಿಯ ಜನಗಳ ಪ್ರೀತಿ ಮತ್ತು ವಿಶ್ವಾಸಗಳನ್ನು ಗಳಿಸಿಕೊಂಡರು; ಮತ್ತೆ ಕೆಲವರು ಆ ದೇಶದ ಸುಂದರ ಯುವತಿಯರನ್ನು ಮದುವೆಯಾದರು; ಮತ್ತೆ ಕೆಲವರು ರಾಮಾಯಣ ಮತ್ತು ಮಹಾಭಾರತದ ಕಥೆಗಳನ್ನು ಜನಗಳಿಗೆ ಹೇಳಿದರು. ಅಷ್ಟರಲ್ಲಿಯೇ ಮತ್ತೊಂದು ಹಡಗು ಭಾರತದಿಂದ ಬಂದಿತು. ಈ ರೀತಿ ಆಗ್ನೇಯ ಏಷ್ಯ ಭಾರತೀಯ ಸಂಸ್ಕೃತಿಯ ಪ್ರಭಾವಕ್ಕೊಳಗಾಗಿರಬೇಕು. ಕೌಂಡಿನ್ಯ, ಅಗಸ್ತ್ಯ ಮುಂತಾದ ಋಷಿಗಳೇ ಆಗ್ನೇಯ ಏಷ್ಯದಲ್ಲಿ ಭಾರತೀಯ ಸಂಸ್ಕೃತಿ ಹರಡಲು ಕಾರಣರಾದರೆಂದು ಶಾಸನಗಳಿಂದ ತಿಳಿಯುತ್ತದೆ. ಭಾರತೀಯ ಧಾರ್ಮಿಕ ಗ್ರಂಥಗಳ ಪ್ರಕಾರ ಸಮುದ್ರಯಾನ ನಿಷಿದ್ಧಕಾರ್ಯ. ಹಾಗಾದರೂ ಭಾರತೀಯರು ಆಗ್ನೇಯ ಏಷ್ಯಕ್ಕೆ ಹೋಗಲು ಕಾರಣಗಳೇನು ಎಂದು ನೋಡುವುದು ಆವಶ್ಯಕ. ವ್ಯಾಪಾರವೇ ಅತ್ಯಂತ ಪ್ರಮುಖವಾದ ಮತ್ತು ಪ್ರಬಲವಾದ ಕಾರಣವೆಂದು ತೋರುತ್ತದೆ.ಅಲೆಕ್ಸಾಂಡರನ ದಂಡೆಯಾತ್ರೆಯಿಂದಲೂ ಪರ್ಷಿಯನ್ನರ ದಾಳಿಗಳಿಂದಲೂ ಭಾರತೀಯರಿಗೆ ಹೊರದೇಶಗಳಲ್ಲಿ ವ್ಯಾಪಾರ ಮಾಡುವ ಕುತೂಹಲ ಹೆಚ್ಚಾಯಿತು. ಪ್ರಾಚೀನ ಭಾರತೀಯರು ರೋಂ ದೇಶದೊಡನೆ ವ್ಯಾಪಾರ ಸಂಪರ್ಕಗಳನ್ನು ಹೊಂದಿದ್ದರು. ಆದರೆ ವೆಸ್‍ಪೆಲಿಸಿಯನ್ ಎಂಬ ಸಾಮ್ರಾಟ ರೋಂ ದೇಶಕ್ಕೆ ಆಗುತ್ತಿದ್ದ ನಷ್ಟವನ್ನು ತಪ್ಪಿಸಲು ಚಿನ್ನದ ನಾಣ್ಯಗಳು ಹೊರಕ್ಕೆ ಹೋಗದಂತೆ ತಡೆ ಹಾಕಿದ. ಇದರಿಂದ ಪ್ರಾಚೀನ ಭಾರತೀಯರು, ಚಿನ್ನಕ್ಕೋಸ್ಕರ ಬೇರೆ ದೇಶಗಳೊಡನೆ ಸಂಪರ್ಕ ಬೆಳೆಸಬೇಕಾಯಿತು. ಆಗ್ನೇಯ ಏಷ್ಯದ ಕೆಲವು ಭಾಗಗಳು ಸುವರ್ಣಭೂಮಿಯೆಂದು ಖ್ಯಾತಿ ಪಡೆದಿದ್ದುವು. ಆದ್ದರಿಂದ ಭಾರತೀಯರು ಈ ದೇಶಗಳ ಕಡೆಗೆ ತಮ್ಮ ಗಮನ ಹರಿಸಿದರು. ಆಗ್ನೇಯ ಏಷ್ಯಕ್ಕೆ ಹೋದ ಭಾರತೀಯರು ಭಾರತದ ಯಾವ ಪ್ರಾಂತ್ಯದವರು ಎನ್ನುವ ವಿಚಾರದಲ್ಲಿ ವಿದ್ವಾಂಸರಲ್ಲಿ ಒಮ್ಮತವಿಲ್ಲ. ಇವರು ವಂಗದೇಶದವರೆಂದು ಕೆಲವರು ವಾದಿಸುತ್ತಾರೆ. ಆಗ್ನೇಯ ಏಷ್ಯದ ಶಿಲ್ಪಸಂಪತ್ತನ್ನು ಗಮನಿಸಿದರೆ ಗುಪ್ತರ ಕಾಲದ ಲಕ್ಷಣಗಳು ಅಲ್ಲಿ ವಿಶೇಷವಾಗಿರುವುದು ನಮ್ಮ ಗಮನಕ್ಕೆ ಬರುತ್ತವೆ. ಜಾವ ದ್ವೀಪದ ಶಿಲ್ಪಗಳಲ್ಲಿ ಪಾಲ ಮತ್ತು ಸೇನರ ಕಾಲದ ಶಿಲ್ಪಲಕ್ಷಣಗಳು ವಿಶೇಷವಾಗಿವೆ. ಜಾವದ ಶೈಲೇಂದ್ರರು ಒರಿಸ್ಸದ ಶೈಲೋದ್ಭವರೆಂದೂ ಅವರ ಶಾಸನಗಳ ಲಿಪಿ ನಾಗರೀ ಲಿಪಿಗೆ ಸಮೀಪವಾಗಿರುವುದೆಂದೂ ಅಷ್ಟೇ ಅಲ್ಲದೆ ಬಂಗಾಳ ಆಗ್ನೇಯ ಏಷ್ಯಕ್ಕೆ ಜಲ ಮತ್ತು ಭೂಮಾರ್ಗದಿಂದ ಬಹು ಹತ್ತಿರವಾಗಿರುವುದರಿಂದ ಬಂಗಾಳದವರೇ ಮೊಟ್ಟಮೊದಲು ಆಗ್ನೇಯ ಏಷ್ಯಕ್ಕೆ ಹೋದರೆಂದೂ ಕೆಲವರ ವಾದ. ಜಾವದ ಹೋಲಿಂಗ್ ಎಂಬುದು ಕಳಿಂಗ ಎಂಬುದರ ರೂಪಾಂತರವೆಂದೂ ತಲೈಂಗ್ ಎಂಬುದು ತೆಲುಂಗ ಎಂಬುದರ ರೂಪಾಂತರವೆಂದೂ ವಿಯಟ್‍ನಾಮಿನ ಡಾಂಗ್‍ಡುವಾಂಗ್‍ನಲ್ಲಿ, ಜಾವದ ಜೆಂಬರ್ ಮತ್ತು ಸೆಲಿಬಿಸ್ ದ್ವೀಪದ ಸೆಂಪಗ ಮುಂತಾದ ಕಡೆಗಳಲ್ಲಿ ದೊರಕಿರುವ ಬುದ್ಧನ ವಿಗ್ರಹಗಳು ಅಮರಾವತಿ ಶಿಲ್ಪಶೈಲಿಗೆ ಸೇರಿರುವುದರಿಂದ, ಆಂಧ್ರ ಪ್ರದೇಶದಿಂದ ಭಾರತೀಯರು ಆಗ್ನೇಯ ಏಷ್ಯಕ್ಕೆ ಪ್ರಥಮವಾಗಿ ಹೋದರೆಂದೂ ಕೆಲವರು ವಾದಿಸುತ್ತಾರೆ. ಜಾವ ದ್ವೀಪದ ಕೆಲವು ದೇವಾಲಯಗಳು ಚಾಲುಕ್ಯ ವಾಸ್ತುಶೈಲಿಯಲ್ಲಿರುವುದರಿಂದ ಕರ್ನಾಟಕದವರೇ ಪ್ರಥಮವಾಗಿ ಆಗ್ನೇಯ ಏಷ್ಯಕ್ಕೆ ಹೋದರೆಂದು ಕೆಲವರ ಅಭಿಪ್ರಾಯ. ಆಗ್ನೇಯ ಏಷ್ಯದ ಅನಾಗರಿಕ ಬುಡಕಟ್ಟಿಗೆ ಸೇರಿದ ಕೆಲವು ಜನಾಂಗಗಳ ಹೆಸರು ಚೋಳ, ಮಲಯಾಳಿ, ಪಾಂಡ್ಯ ಎಂದಿರುವುದರಿಂದಲೂ ಜಾವದ ಶೈಲೇಂದ್ರರು ಮತ್ತು ಪಾಂಡ್ಯರು ಮೀನಲಾಂಛನವನ್ನು ಹೊಂದಿರುವುದರಿಂದಲೂ ಆಗ್ನೇಯ ಏಷ್ಯದ ಪ್ರಾಚೀನ ಶಾಸನಗಳ ಲಿಪಿಗೂ ಪಲ್ಲವ ಲಿಪಿಗೂ ಬಹಳ ಹೋಲಿಕೆಗಳಿರುವುದರಿಂದಲೂ ಜಾವದ ಚಂಡಿಕಲಶನ್ ಚಂದಿಗೋ ಮುಂತಾದ ದೇವಾಲಯಗಳು ಮಹಾಬಲಿಪುರದ ರಥಗಳನ್ನು ಬಹುವಾಗಿ ಹೋಲುವುದರಿಂದಲೂ ತಮಿಳು ದೇಶವೇ ಆಗ್ನೇಯ ಏಷ್ಯಕ್ಕೆ ಹೋದ ವಲಸೆಗಾರರ ಮೂಲನಿವಾಸಸ್ಥಾನವೆಂದೂ ಅನೇಕರು ವಾದಿಸುತ್ತಾರೆ. ಒಟ್ಟಿನಲ್ಲಿ ಬಂಗಾಳದ, ಆಂಧ್ರದ, ಕರ್ನಾಟಕದ ಮತ್ತು ತಮಿಳುನಾಡಿನ ಪ್ರಭಾವಗಳು ಆಗ್ನೇಯ ಏಷ್ಯದ ಪ್ರಾಚೀನ ಸಂಸ್ಕೃತಿಯಲ್ಲಿ ವಿಶೇಷವಾಗಿ ಕಾಣುವುದರಿಂದ, ಭಾರತದ ಎಲ್ಲ ಭಾಗಗಳಿಂದಲೂ ಆಗ್ನೇಯ ಏಷ್ಯಕ್ಕೆ ಜನಗಳು ಹೋಗುತ್ತಿದ್ದರು ಎಂದು ಹೇಳಬಹುದು. ಆಗ್ನೇಯ ಏಷ್ಯಕ್ಕೂ ಭಾರತಕ್ಕೂ ಸಂಪರ್ಕ ಯಾವಾಗ ಪ್ರಾರಂಭವಾಯಿತು ಎಂದು ನಿರ್ಧರಿಸಲು ಸಾಕಷ್ಟು ಮಾಹಿತಿಗಳು ದೊರಕಿಲ್ಲ. ಅತ್ಯಂತ ಪ್ರಾಚೀನವಾದ ಮಾಹಿತಿ ರಾಮಾಯಣ ಮಹಾಕಾವ್ಯದಲ್ಲಿ ದೊರಕುತ್ತದೆ. ಸೀತೆಯನ್ನು ಹುಡುಕಲು ವಾನರರು ಜಾವ ದ್ವೀಪಕ್ಕೆ, ಸುವರ್ಣ ದ್ವೀಪಗಳಿಗೆ ಹೋಗಬೇಕೆಂದು ಸುಗ್ರೀವ ಆಜ್ಞೆ ಮಾಡಿದ ಉಲ್ಲೇಖದಿಂದ, ರಾಮಾಯಣ ಕಾಲದಲ್ಲಿಯೇ ಭಾರತೀಯರಿಗೆ ಆಗ್ನೇಯ ಏಷ್ಯದ ಪರಿಚಯವಿತ್ತೆಂದು ಗೊತ್ತಾಗುತ್ತದೆ. ಬೌದ್ಧ ಗ್ರಂಥವಾದ ನಿದ್ದೇಸದಲ್ಲಿಯೂ ಜಾತಕ ಕಥೆಗಳಲ್ಲಿಯೂ ಆಗ್ನೇಯ ಏಷ್ಯ ದ್ವೀಪಗಳ ಉಲ್ಲೇಖ ಬರುತ್ತದೆ. ಟಾಲಮಿಯ ಭೂಗೋಳ ಗ್ರಂಥದಲ್ಲಿ ಜಾವ ದ್ವೀಪವನ್ನೂ ಸುವರ್ಣ ದ್ವೀಪವೆಂದು ವರ್ಣಿಸಿರುವುದು ಗಮನಾರ್ಹ. ಕ್ರಿ.ಶ. 132ರಲ್ಲಿ ಜಾವ ದ್ವೀಪದಲ್ಲಿ ದೇವವರ್ಮನೆಂಬ ರಾಜನಿದ್ದನೆಂದು ತಿಳಿದುಬರುತ್ತದೆ. ಇವುಗಳಿಂದ ಕ್ರಿಸ್ತನ ಕಾಲಕ್ಕಿಂತ ಮುಂಚೆಯೇ ಆಗ್ನೇಯ ಏಷ್ಯಕ್ಕೂ ಭಾರತಕ್ಕೂ ಸಾಂಸ್ಕೃತಿಕ ಸಂಪರ್ಕವಿತ್ತೆಂದು ಗೊತ್ತಾಗುತ್ತದೆ. ಅಭಿರಾಜ ಎಂಬ ಕಪಿಲವಸ್ತುವಿನ ರಾಜ ಬರ್ಮದೇಶಕ್ಕೆ ಬಂದು ಆಳಲು ಪ್ರಾರಂಭಿಸಿದನೆಂದು ಪಾಟಲೀಪುತ್ರದಲ್ಲಿ ಕ್ರಿ.ಪೂ. 241ರಲ್ಲಿ ನಡೆದ ಮೂರನೆಯ ಬೌದ್ಧ ಸಮ್ಮೇಳನ ಸೋನ ಮತ್ತು ಉತ್ತರ ಎಂಬುವವರನ್ನು ಬರ್ಮಕ್ಕೆ ಕಳುಹಿಸಿದ್ದಿತೆಂದೂ ತಿಳಿಯುತ್ತದೆ. ಹುಯೆನ್‍ತ್ಸಾಂಗ್ ಬರ್ಮದಲ್ಲಿ ದ್ವಾರವತೀ ಎಂಬ ರಾಜ್ಯವನ್ನು ಗುರುತಿಸಿದ್ದಾನೆ. ಇದರ ಪಶ್ಚಿಮಕ್ಕೆ ಶ್ರೀಕ್ಷೇತ್ರ ರಾಜ್ಯವಿತ್ತು. ಇಲ್ಲಿ ಬೌದ್ಧ ಸ್ತೂಪಗಳ ಅವಶೇಷಗಳು ದೊರಕಿವೆ. ಅನಂತರ ಪ್ಯು ರಾಜ್ಯ ಬೆಳೆದು, ಅದರ ನಾಶವಾದ ಅನಂತರ ಅರಿಮರ್ದನಪುರ ಸಾಮ್ರಾಜ್ಯ (ನೋಡಿ- ಅರಿಮರ್ದನಪುರ-ಸಾಮ್ರಾಜ್ಯ) ಸ್ಥಾಪನೆಯಾಯಿತು. ಈ ದೊರೆಗಳಲ್ಲಿ ಅನೋರಥ (1044-72) ಮತ್ತು ಕ್ಯಾನ್ಜಿತ್ಥ (1086-1112) ಮುಖ್ಯರು. ಇವರ ಕಾಲದಲ್ಲಿ ಬೌದ್ಧಧರ್ಮ ಬರ್ಮದಲ್ಲಿ ಚೆನ್ನಾಗಿ ಬೇರೂರಿತು. ಇವರ ಅನಂತರ ನರಥು, ನರಪೈಸಿಥು, ಜಯಥೇಂದ ಮುಂತಾದವರು ಆಳಿದರು. 1287ರಲ್ಲಿ ಕುಬ್ಲೆಖಾನನ ಮೊಮ್ಮಗನ ನೇತೃತ್ವದಲ್ಲಿ ಮಂಗೋಲ್ ಸೈನ್ಯ ಪಗನ್ ರಾಜ್ಯಕ್ಕೆ ಮುತ್ತಿಗೆ ಹಾಕಿ ಅದನ್ನು ಲೂಟಿಮಾಡಿತು. ಸಯಾಂ ಅಥವಾ ಥಾಯ್‍ಲ್ಯಾಂಡ್‍ನಲ್ಲಿ 2 ನೆಯ ಶತಮಾನಕ್ಕೆ ಸೇರಿದ ಭಾರತೀಯ ಅವಶೇಷಗಳು ದೊರಕ್ಕಿದ್ದರೂ ಬಲವತ್ತರವಾದ ರಾಜ್ಯ ಸ್ಥಾಪನೆಯಾದುದು 13ನೆಯ ಶತಮಾನದಲ್ಲಿ. ಅದಕ್ಕೆ ಮುಂಚೆ ಇದು ಕಂಬುಜ ಮತ್ತು ಬರ್ಮ ದೇಶಗಳ ಆಳ್ವಿಕೆಗೆ ಒಳಪಟ್ಟಿತ್ತು. ಕಂಬುಜದ ಏಳನೆಯ ಜಯವರ್ಮನ ಮರಣಾನಂತರ ಇಂದ್ರಾದಿತ್ಯ ಸುಖೋಥೈ ಎಂಬ ರಾಜ್ಯಸ್ಥಾಪನೆ ಮಾಡಿದ. ಇದರಲ್ಲಿ ರಾಮಕಮ್ ಹೆಂಗ್ (1280-1318) ಅತ್ಯಂತ ಮುಖ್ಯನಾದವ. ಈತ ಸುಖೋಥಯದ ಜೊತೆಗೆ ಸಜ್ಜನಾಲಯ ಎಂಬ ಇನ್ನೊಂದು ರಾಜಧಾನಿಯನ್ನು ಸ್ಥಾಪಿಸಿದ. ಈ ರಾಜ್ಯದ ಪತನವಾದ ಅನಂತರ ಅಯುಥಿಯ (ಅಯೋಧ್ಯಾ) ಎಂಬ ಇನ್ನೊಂದು ರಾಜ್ಯ ಸ್ಥಾಪನೆಯಾಯಿತು. ಭಾರತೀಯ ಸಂಸ್ಕೃತಿಯ ದೃಷ್ಟಿಯಿಂದ ಇದು ಅಂಥ ಮಹತ್ತರವಾದ ಪಾತ್ರವನ್ನೇನೂ ವಹಿಸಲಿಲ್ಲ. ಭಾರತದಿಂದ ಪ್ರಯಾಣ ಮಾಡಿದ ಕಂಬು ಸ್ವಾಯಂಭುವ ಶಿವಭಕ್ತನಿಂದ ಸ್ಥಾಪಿತವಾದ ಕಂಬುಜ ರಾಜ್ಯ ಭಾರತೀಯ ಸಂಸ್ಕೃತಿಯ ಪ್ರಭಾವಕ್ಕೆ ವಿಶೇಷವಾಗಿ ಒಳಗಾಯಿತು. ಪೂನಾನ್ ಎಂಬುದು ಇಲ್ಲಿಯ ಮೊಟ್ಟಮೊದಲ ರಾಜ್ಯ. ಕೌಂಡಿನ್ಯನೆಂಬ ಬ್ರಾಹ್ಮಣ ಈ ರಾಜ್ಯದಲ್ಲಿ ಭಾರತೀಯ ಸಂಸ್ಕೃತಿಯನ್ನು ಬಳಕೆಗೆ ತಂದನೆಂದು ಪ್ರತೀತಿ. ಕ್ರಿ.ಶ. 6 ನೆಯ ಶತಮಾನದಿಂದ ಜಯವರ್ಮ, ಶ್ರೇಷ್ಠವರ್ಮ, ಈಶಾನವರ್ಮ ಮುಂತಾದ ರಾಜರುಗಳು ಕಂಬುಜದಲ್ಲಿ ಆಳಿದರು. ಕಂಬುಜದ ಏಳಿಗೆಗೆ ಕಾರಣನಾದವ ಎರಡನೆಯ ಜಯವರ್ಮ (ಕ್ರಿ.ಶ. 802-54). ಈತ ಶೈವಮತಾವಲಂಬಿಯಾಗಿದ್ದು ದೇವರಾಜ ಲಿಂಗದ ಉಪಾಸನೆಯನ್ನು ಪ್ರಾರಂಭಿಸಿದ. ಇಂದ್ರಪುರ, ಹರಿಹರಾಲಯ, ಅಮರೇಂದ್ರಪುರ ಮುಂತಾದ ನಗರಗಳನ್ನು ನಿರ್ಮಿಸಿದ. ಇಂದ್ರವರ್ಮ, ಯಶೋವರ್ಮರು ಆಳಿದ ಅನಂತರ ಎರಡನೆಯ ಸೂರ್ಯವರ್ಮ (1113-50) ರಾಜನಾದ. ಈತ ವಿಶ್ವವಿಖ್ಯಾತವಾದ ಆಂಗ್ಕೋರ್ ವಾಟ್ ದೇವಾಲಯವನ್ನು ಸ್ಥಾಪಿಸಿದ. ಇವನ ಕಾಲದಲ್ಲಿ ಸಂಸ್ಕೃತ ಬಹಳ ಉಚ್ಛ್ರಾಯ ಸ್ಥಿತಿಯಲ್ಲಿತ್ತು. 7 ನೆಯ ಜಯವರ್ಮನೇ (1181-01) ಕಂಬುಜರಾಜ್ಯದ ಅತ್ಯಂತ ಸಮರ್ಥ ದೊರೆ. ಈತ ಆಂಗ್ಕೋರ್ ಥೊಮ್ ದೇವಾಲಯವನ್ನು ನಿರ್ಮಿಸಿದ. ಇವನ ಅನಂತರ ಕಂಬುಜರಾಜ್ಯದ ಅವನತಿ ಪ್ರಾರಂಭವಾಯಿತು. ಆಯುಥಿಯದ ರಾಜ ಕಂಬುಜವನ್ನು ವಶಮಾಡಿಕೊಂಡ. ಮಲಯ ಪರ್ಯಾಯದ್ವೀಪ ಕ್ರಿ.ಶ. ಒಂದನೆಯ ಶತಮಾನದಂದಲೇ ಭಾರತೀಯ ಸಂಸ್ಕೃತಿಯ ಪ್ರಭಾವಕ್ಕೆ ಒಳಪಟ್ಟಿತ್ತು. ಪ್ರಾಚೀನ ಸಾಹಿತ್ಯದಲ್ಲಿ ಈ ದ್ವೀಪಗಳನ್ನು ಸ್ವರ್ಣದ್ವೀಪ ಅಥವಾ ಸುವರ್ಣಭೂಮಿ ಎಂದು ಉಲ್ಲೇಖಿಸಲಾಗಿದೆ. ಮೊಟ್ಟ ಮೊದಲು ಇದು ಬೌದ್ಧಧರ್ಮದ ಕೇಂದ್ರವಾಗಿತ್ತು. ಜಾವದಲ್ಲಿ 5 ನೆಯ ಶತಮಾನದಲ್ಲಿ ಗುಣವರ್ಮನ ವಂಶದವರು ರಾಜ್ಯವಾಳುತ್ತಿದ್ದರು. ಇದೇ ಸಮಯದಲ್ಲಿ ಮಧ್ಯ ಜಾವದಲ್ಲಿ ಹೊಲಿಂಗ್ ಅಥವಾ ಕಳಿಂಗ ಎಂಬ ರಾಜ್ಯವಿದ್ದಿತು. ಸುಮಾತ್ರದಲ್ಲಿ ಕ್ರಿ.ಶ. 4 ನೆಯ ಶತಮಾನದಲ್ಲಿ ಶ್ರೀವಿಜಯ ರಾಜ್ಯ ಸ್ಥಾಪನೆಯಾಗಿತ್ತು. ಬೋರ್ನಯೊ ದ್ವೀಪದಲ್ಲಿ ಬಲಯುತವಾದ ರಾಜ್ಯವಿಲ್ಲದಿದ್ದರೂ ಭಾರತೀಯ ಸಂಸ್ಕೃತಿ ವಿಶೇಷವಾಗಿ ಬಳಕೆಯಲ್ಲಿತ್ತು. ಮಲಯೇಷ್ಯದ ಈ ಸಣ್ಣಪುಟ್ಟ ರಾಜರುಗಳನ್ನೆಲ್ಲ ಒಂದುಗೂಡಿಸಿ ಶೈಲೇಂದ್ರ ಸಾಮ್ರಾಜ್ಯ 8 ನೆಯ ಶತಮಾನದಲ್ಲಿ ಬೆಳೆಯಿತು. ಶೈಲೇಂದ್ರರಿಗೂ ಭಾರತದ ಚೋಳರಿಗೂ ಅನೇಕ ನೌಕಾಯುದ್ಧಗಳು ನಡೆದವು. ಚೋಳರಾಜ ರಾಜೇಂದ್ರ ಶೈಲೇಂದ್ರರನ್ನು ಸೋಲಿಸಿ, ಅನೇಕ ಪ್ರದೇಶಗಳನ್ನು ತನ್ನ ವಶಮಾಡಿಕೊಂಡ. ಸ್ವಲ್ಪ ಕಾಲಾನಂತರ ಶೈಲೇಂದ್ರಸಾಮ್ರಾಜ್ಯ ಅವನತಿಯನ್ನು ಹೊಂದಿತು. ಇತ್ತಕಡೆ ಜಾವ ದ್ವೀಪದಲ್ಲಿ ಕ್ರಿ.ಶ. 8ನೆಯ ಶತಮಾನದ ಆದಿಭಾಗದಲ್ಲಿ ಮತರಾಂ ರಾಜ್ಯಸ್ಥಾಪನೆಯಾಯಿತು. ಇದು ಸಾಹಿತ್ಯಕ್ಕೆ ವಿಶೇಷ ಪ್ರೋತ್ಸಾಹ ಕೊಟ್ಟಿತು. ಸಿಂಡಕ್‍ರಾಜನ ಆಶ್ರಯದಲ್ಲಿ ಪೂರ್ವಜಾವ ಬಲಯುತವಾಗಿ ಬೆಳೆಯಿತು. ಈ ವಂಶದ ರಾಜರಲ್ಲಿ ಏರ್ಲಂಗ (1019-49) ಅತಿಮುಖ್ಯ. ಈತ ಭಾರತೀಯ ಸಾಹಿತ್ಯ ಮತ್ತು ಶಿಲ್ಪಕಲೆಗಳಿಗೆ ವಿಶೇಷ ಪ್ರೋತ್ಸಾಹಕೊಟ್ಟ. ಏರ್ಲಂಗನ ಮರಣಾನಂತರ ರಾಜ್ಯ ಎರಡು ಭಾಗಗಳಾಗಿ ಕಡಿರಿ ಮತ್ತು ಸಿಂಘಸಾರಿ ಎಂಬ ರಾಜ್ಯಗಳಾದವು. ಸಾಹಿತ್ಯ ದೃಷ್ಟಿಯಿಂದ ಇವು ಬಹು ಮುಖ್ಯವಾದವು. ಈ ರಾಜ್ಯಗಳ ಪತನಾನಂತರ ಮಜಪಹಿತ್ ರಾಜ್ಯ ಸ್ಥಾಪನೆಯಾಯಿತು. ಕೃತನಗರ, ರಾಜಸನಗರ ಮುಂತಾದ ರಾಜರುಗಳು ಆಳಿದ ಅನಂತರ ಕ್ರಿ.ಶ. 1447 ರ ಸಮಯಕ್ಕೆ ಮಜಪಹಿತ್ ರಾಜ್ಯನಾಶವಾಯಿತು. ಇಲ್ಲಿಗೆ ಜಾವದ್ವೀಪದಲ್ಲಿ ಭಾರತೀಯ ಸಂಸ್ಕೃತಿಯ ಅವನತಿಯಾಯಿತು. ಅದರ ಸಮೀಪದಲ್ಲೇ ಇರುವ ಬಾಲಿದ್ವೀಪದಲ್ಲಿ ಭಾರತೀಯ ಸಂಸ್ಕೃತಿ ಚೆನ್ನಾಗಿ ಅಭಿವೃದ್ಧಿಯಾಗಿತ್ತು. ಆದರೆ ರಾಜಕೀಯ ದೃಷ್ಟಿಯಿಂದ ಬಲವತ್ತರವಾದ ಸಾಮ್ರಾಜ್ಯಗಳಾವುವೂ ಅಲ್ಲಿ ಬೆಳೆಯಲಿಲ್ಲ. ಚಂಪಾರಾಜ್ಯದಲ್ಲಿ (ವಿಯಟ್‍ನಾಂ) ಕ್ರಿ.ಶ. 2ನೆಯ ಶತಮಾನದಿಂದಲೇ ಭಾರತೀಯರು ಬಂದು ನೆಲೆಸಿದ್ದರೆಂದು ಗೊತ್ತಾಗುತ್ತದೆ. ವೊಕಾನ್ಹ್ ಶಾಸನದ ಶ್ರೀಮಾರನ ಮನೆತನದವರು ಭಾರತೀಯರೆಂದು ಚೆನ್ನಾಗಿ ಗೊತ್ತಾಗುತ್ತದೆ. ಕ್ರಿ.ಶ. 380-413 ರವರೆಗೆ ಆಳಿದ ಭದ್ರವರ್ಮ ಮುಖ್ಯ ದೊರೆಗಳಲ್ಲೊಬ್ಬ. ಈತ ಭದ್ರೇಶ್ವರ ದೇವಾಲಯವನ್ನು ಸ್ಥಾಪಿಸಿದ. ಸ್ವಲ್ಪಕಾಲಾನಂತರ ಕ್ರಿ.ಶ. 530ರಲ್ಲಿ ರುದ್ರವರ್ಮ ಇನ್ನೊಂದು ರಾಜವಂಶವನ್ನು ಸ್ಥಾಪಿಸಿದ. ಕ್ರಿ.ಶ. 8ನೆಯ ಶತಮಾನದಲ್ಲಿ ಪಾಂಡುರಂಗ ವಂಶ ಸ್ಥಾಪಿತವಾಯಿತು. ಇದರಲ್ಲಿ ಮುಖ್ಯನಾದವ ಇಂದ್ರವರ್ಮ. ಅನಂತರ ಭೃಗುವಂಶ ಸ್ಥಾಪಿತವಾಯಿತು. ಎರಡನೆಯ ಇಂದ್ರವರ್ಮ (ಕ್ರಿ.ಶ. 854-898) ಇಂದ್ರಪುರವೆಂಬ ಹೊಸನಗರವನ್ನು ಸ್ಥಾಪಿಸಿದ. ಭೃಗುವಂಶದಲ್ಲಿ ಹರಿವರ್ಮ, ಮೂರನೆಯ ಇಂದ್ರವರ್ಮ, ಪರಮೇಶ್ವರವರ್ಮ ಮುಂತಾದವರು ಮುಖ್ಯರು. ಈ ಮಧ್ಯೆ ಅನ್ನಾಂ ರಾಜ್ಯ ಚಂಪಾದ ಮೇಲೆ ಅನೇಕ ದಂಡಯಾತ್ರೆಗಳನ್ನು ನಡೆಸುತ್ತಿತ್ತು. ಇದರಿಂದಾಗಿ ಚಂಪಾರಾಜ್ಯವೂ ಅನ್ನಾಮಿನವರ ಕೈವಶವಾಯಿತು. ಈ ಎಲ್ಲ ರಾಜ್ಯಗಳಲ್ಲೂ ಭಾರತೀಯ ಸಂಸ್ಕೃತಿಯ ಪ್ರಭಾವವನ್ನು ಕಾಣುತ್ತೇವೆ. ವರ್ಣಾಶ್ರಮ ಧರ್ಮಗಳು, ಶೈವ, ವೈಷ್ಣವ ಮತ್ತು ಬೌದ್ಧಧರ್ಮಗಳು ಪ್ರಚಲಿತವಾಗಿದ್ದುವು. ಸಂಸ್ಕೃತ ಭಾಷೆ ಆಡಳಿತ ಭಾಷೆಯಾಗಿತ್ತು. ನೂರಾರು ಸಂಸ್ಕೃತ ಶಾಸನಗಳು ಈ ರಾಜ್ಯಗಳಲ್ಲಿ ದೊರಕಿವೆ. ರಾಮಾಯಣ, ಮಹಾಭಾರತ ಮತ್ತು ಇತರ ಕಾವ್ಯಗಳು ಬಹಳ ಜನಾನುರಾಗಿಯಾಗಿದ್ದುವು. ಮನುಧರ್ಮಶಾಸ್ತ್ರ, ಅರ್ಥಶಾಸ್ತ್ರ ಮುಂತಾದವುಗಳಿಂದ ರಾಜರು ಸ್ಫೂರ್ತಿ ಪಡೆಯುತ್ತಿದ್ದರು. ಅಷ್ಟರಮಟ್ಟಿಗೆ ಭಾರತೀಯ ಸಂಸ್ಕೃತಿ ಈ ದೇಶಗಳಲ್ಲಿ ಚೆನ್ನಾಗಿ ಬೇರೂರಿತ್ತು.
ಇತರ ಸಂಸ್ಕೃತಿಗಳು
[ಬದಲಾಯಿಸಿ]ಭಾರತೀಯ ಸಂಸ್ಕೃತಿಯ ಪ್ರಭಾವ ಆಗ್ನೇಯ ಏಷ್ಯದಲ್ಲಿ ಕ್ಷೀಣವಾಗುತ್ತಿದ್ದಂತೆಯೇ ಅದರ ಸ್ಥಾನವನ್ನು ಪ್ರಪಂಚದ ಎರಡು ಮುಖ್ಯ ಮತಗಳೆನಿಸಿದ, ಇಸ್ಲಾಂ ಮತ್ತು ಕ್ರೈಸ್ತ ಮತಗಳು ಆಕ್ರಮಿಸಿದುವು. ಆದರೂ ಭಾರತೀಯ ಸಂಸ್ಕೃತಿಯ ಪ್ರಭಾವದಿಂದ ಉಂಟಾದ ಪರಿಣಾಮಗಳು ಪೂರ್ಣವಾಗಿ ಅಳಿಸಿಹೋಗಲು ಸಾಧ್ಯವಾಗಲಿಲ್ಲ. ಜೊತೆಗೆ ಬೌದ್ಧಮತದ ಪ್ರಾಬಲ್ಯವೂ ಹೆಚ್ಚಾಯಿತು. ಸಾಮಾನ್ಯವಾಗಿ, ಬರ್ಮ, ಥಾಯ್‍ಲ್ಯಾಂಡ್, ಕಾಂಬೋಡಿಯ ಮತ್ತು ವಿಯಟ್ನಾಂಗಳು ಬೌದ್ಧಮತವನ್ನು ಅವಲಂಬಿಸಿದುವು. ಬರ್ಮ ಥಾಯ್‍ಲ್ಯಾಂಡ್‍ಗಳಲ್ಲಿ ಹೀನಯಾನ ಅಥವಾ ಥೇರವಾದ ಪಂಗಡವೂ ಕಾಂಬೋಡಿಯ ಮತ್ತು ವಿಯಟ್ನಾಂಗಳಲ್ಲಿ ಮಹಾಯಾನ ಪಂಗಡವೂ ಪ್ರಮುಖವಾದುವು. ಸುಮಾರು 1400ರಲ್ಲಿ ಮಲಯದೇಶದ ಪಶ್ಚಿಮತೀರದಲ್ಲಿ ಸ್ಥಾಪಿತವಾದ ಮಲಕ್ಕಾ ಎಂಬ ವ್ಯಾಪಾರಕೇಂದ್ರ ಆಗ್ನೇಯ ಏಷ್ಯದಲ್ಲಿ ಯೂರೋಪಿಯನ್ನರು ಬರುವತನಕ ವ್ಯಾಪಾರಕ್ಕಲ್ಲದೆ, ಇಸ್ಲಾಂ ಮತದ ಪ್ರಸಾರಕ್ಕೂ ಕೇಂದ್ರವಾಗಿತ್ತು. ಮಲಕ್ಕಾದಿಂದಲೇ ಇಸ್ಲಾಂ ಧರ್ಮ ಮಲೇಷಿಯ, ಇಂಡೋನೇಷಿಯ ಮತ್ತು ಫಿಲಿಪೈನ್ಸ್‍ನ ದಕ್ಷಿಣದ ಕೆಲವು ದ್ವೀಪಗಳಿಗೆ ಹಬ್ಬಿತು. ಆದರೆ ಕ್ರೈಸ್ತಮತವೇ ಫಿಲಿಪೈನ್ಸ್ ದ್ವೀಪಗಳಲ್ಲಿ ಪ್ರಾಮುಖ್ಯವಾಯಿತು.
ಇತಿಹಾಸ
[ಬದಲಾಯಿಸಿ]ಯೂರೋಪಿಯನ್ನರು ಆಗ್ನೇಯ ಏಷ್ಯದ ರಾಷ್ಟ್ರಗಳನ್ನು ತಮ್ಮ ವಸಾಹತುಗಳನ್ನಾಗಿ ಮಾಡಿಕೊಳ್ಳುವ ಮುನ್ನ, ಈ ಭಾಗದ ರಾಜಕೀಯ ಇತಿಹಾಸ ಪರಸ್ಪರ ಕದನಗಳಿಂದಲೂ ಆಂತರಿಕ ಒಡಕುಗಳಿಂದಲೂ ತುಂಬಿತ್ತು. ಬರ್ಮೀಯರು, ಬರ್ಮಿಯರಲ್ಲದ ಇತರ ಜನಾಂಗಗಳಾದ ಶಾನ್‍ಕಾಚಿನ್ ಮತ್ತು ಮಾನ್‍ರನ್ನು ಗೆದ್ದು 11 ನೆಯ ಶತಮಾನದ ಹೊತ್ತಿಗೆ ಪ್ಯಾಗನ್ ಸಾಮ್ರಾಜ್ಯವನ್ನು ಸ್ಥಾಪಿಸಿದರು. ಆ ಸಾಮ್ರಾಜ್ಯದ ರಾಜಧಾನಿ ಪ್ಯಾಗನ್ ಪಟ್ಟಣವೇ ಆಗಿತ್ತು. ಆ ಸಾಮ್ರಾಜ್ಯದ ಅವಶೇಷಗಳನ್ನು ಇಂದಿಗೂ ಆ ನಗರದಲ್ಲಿ ನೋಡಬಹುದು. 13 ನೆಯ ಶತಮಾನದ ಅನಂತರ ಈ ಸಾಮ್ರಾಜ್ಯ ಅವನತಿಗೊಂಡು, ಮತ್ತೆ 16 ನೆಯ ಶತಮಾನದವರೆಗೂ ಬರ್ಮದೇಶ ಮತ್ತೆ ಒಂದಾಗಲಿಲ್ಲ. 16 ನೆಯ ಶತಮಾನದಲ್ಲಿ ತೂಂಗೂ ರಾಜಮನೆತನದ ನೇತೃತ್ವದಲ್ಲೂ 18 ನೆಯ ಶತಮಾನದಲ್ಲಿ ಅಲಂಗಪಾಂಗು ರಾಜಮನೆತನದ ನೇತೃತ್ವದಲ್ಲೂ ಬರ್ಮ ಸ್ವಲ್ಪಕಾಲ ಉನ್ನತ ಸ್ಥಿತಿಗೆ ಬಂತು. ಈ ಮನೆತನದ ರಾಜರು ಕೊನೆಕೊನೆಗೆ ಅಶಕ್ತರಾಗಿ ಸುಖಲೋಲುಪರಾಗಿ ಮೂರು ಬರ್ಮ ಯುದ್ಧಗಳ ಅನಂತರ (1826,1856,1885), ಬ್ರಿಟಿಷರ ವಸಾಹತು ನೀತಿಗೆ 19 ನೆಯ ಶತಮಾನದ ಆದಿಯಲ್ಲಿ ಒಳಗಾಗಬೇಕಾಯಿತು. ಕೊನೆಗೆ ಬರ್ಮ ಸಂಪೂರ್ಣವಾಗಿ ಬ್ರಿಟಿಷರ ವಶವಾಯಿತು. ಸಯಾಂ ಅಥವಾ ಥಾಯ್‍ಲ್ಯಾಂಡಿನ ಇತಿಹಾಸ 13 ಮತ್ತು 14 ನೆಯ ಶತಮಾನಗಳಲ್ಲಿ ಸ್ಥಾಪಿತವಾದ ನಗರ ರಾಜ್ಯಗಳಾದ ಸುಖೋಥಾಯ್ ಮತ್ತು ಚಿಯಾಂಗಮಯ್‍ಗಳಿಂದ ಪ್ರಾರಂಭವಾಗುತ್ತದೆ. ಆದರೆ 1350 ರಲ್ಲಿ ಸ್ಥಾಪಿತವಾದ ಅಯುತ್ತಯ ರಾಜಮನೆತನ (1350-1767) ಸಯಾಂನಲ್ಲಲ್ಲದೆ, ಇಡೀ ಆಗ್ನೇಯ ಏಷ್ಯದಲ್ಲಿ ಪ್ರಾಮುಖ್ಯ ಪಡೆಯಿತು. 1767 ರಲ್ಲಿ ಬರ್ಮೀಯರ ದಾಳಿಯಿಂದಾಗಿ ಅಯುತ್ತಯ ನಾಶವಾಯಿತು. ಅನಂತರ ಚಕ್ರಿಮನೆತನ ಬ್ಯಾಂಕಾಕ್ ನಗರದಲ್ಲಿ ತನ್ನ ಆಡಳಿತವನ್ನು ಪ್ರಾರಂಭಿಸಿತು (1782). ಈ ರಾಜಮನೆತನದ ಆಶ್ರಯದಲ್ಲಿ ಥಾಯ್‍ಲ್ಯಾಂಡ್ ಹೊಸ ಯುಗವನ್ನು ಕಂಡಿತು. ಆಗ್ನೇಯ ಏಷ್ಯದಲ್ಲೆಲ್ಲ ಥಾಯ್‍ಲ್ಯಾಂಡ್ ಮಾತ್ರ, ಯೂರೋಪಿಯನ್ನರ ವಸಾಹತು ನೀತಿಗೆ ಒಳಗಾಗಲಿಲ್ಲ. ಇದಕ್ಕೆ ಕಾರಣ ಚಕ್ರಿಮನೆತನದ ರಾಜರ ಉನ್ನತ ಹಾಗೂ ದಕ್ಷತೆಯ ರಾಜನೀತಿ. ಪಶ್ಚಿಮದಲ್ಲಿ ಬ್ರಿಟಿಷರು, ಪೂರ್ವದಲ್ಲಿ ಫ್ರೆಂಚರು ವಸಾಹತುಗಳನ್ನು ಸ್ಥಾಪಿಸಿದಾಗ, ಚಕ್ರಿಮನೆತನದ ರಾಜರು, ಒಬ್ಬರ ಮೇಲೆ ಮತ್ತೊಬ್ಬರನ್ನು ಎತ್ತಿಕಟ್ಟುವುದರ ಮೂಲಕ ತಮ್ಮ ಸ್ವಾತಂತ್ರ್ಯವನ್ನು ಕಾಪಾಡಿಕೊಂಡರು. ಲಾವೋ ದೇಶದ ಇತಿಹಾಸ ಇತ್ತೀಚೆಗೆ ಪ್ರಾರಂಭವಾಯಿತು. 12ನೆಯ ಶತಮಾನದಲ್ಲಿ ತಲೆಎತ್ತಿದ್ದ ಚಿಕ್ಕ ಚಿಕ್ಕ ರಾಜ್ಯಗಳು, 1353ರ ಹೊತ್ತಿಗೆ ಲಾನ್‍ಗ್ಸಾಂಗ್ ರಾಜಮನೆತನದ ಅಧೀನಕ್ಕೆ ಒಳಗಾಗಿ, ಲುವಾಂಗ್ ಪ್ರಭಾಂಗ್ ನಗರದಿಂದ ತನ್ನ ಆಡಳಿತ ಪ್ರಾರಂಭಿಸಿತು. 18 ನೆಯ ಶತಮಾನದ ಹೊತ್ತಿಗೆ ಲಾವೋದೇಶದಲ್ಲಿ ಮೂರು ರಾಜಮನೆತನಗಳು, ಲುವಾಂಗ್ ಪ್ರಭಾಂಗ್‍ನಲ್ಲಿ, ವಿಯನ್ ಚಿಯನ್‍ನಲ್ಲಿ ಮತ್ತು ದಕ್ಷಿಣದ ಚಂಪಾಸಕ್‍ನಲ್ಲಿ ತಲೆಯೆತ್ತಿದುವು. ಅನಂತರ ಲಾವೋ ಸ್ವಲ್ಪಕಾಲ ಥಾಯ್‍ಲ್ಯಾಂಡಿನ ಅಧೀನದಲ್ಲಿದ್ದು 19 ನೆಯ ಶತಮಾನದ ಆದಿಭಾಗದಲ್ಲಿ ಫ್ರೆಂಚರ ವಸಾಹತುನೀತಿಗೆ ತುತ್ತಾಯಿತು. ಕಾಂಬೋಡಿಯ 12 ನೆಯ ಮತ್ತು 13 ನೆಯ ಶತಮಾನಗಳಲ್ಲಿ ಖ್ಮರ್ ಸಾಮ್ರಾಜ್ಯದ ನೇತೃತ್ವದಲ್ಲಿ ಅತ್ಯುನ್ನತ ಸ್ಥಿತಿಗೆ ಬಂದ ಅನಂತರ ಮತ್ತೆ ಅಂಥ ಯುಗವನ್ನು ನೋಡಲೇ ಇಲ್ಲ. ಇದಕ್ಕೆ ಕಾರಣ ಥಾಯ್ ಮತ್ತು ವಿಯಟ್‍ನಾಮೀಯರ ಪ್ರಾಬಲ್ಯ. 19 ನೆಯ ಶತಮಾನದ ಆದಿಭಾಗದಲ್ಲಿ ಕಾಂಬೋಡಿಯ ಫ್ರೆಂಚರ ಅಧೀನಕ್ಕೊಳಗಾಯಿತು. ವಿಯಟ್ನಮೀಸ್ ಅಥವಾ ಅನ್ನಮೀಸ್ ಜನಾಂಗದ ನಾಗರಿಕತೆಯ ಕೇಂದ್ರ ಕೆಂಪುನದಿಯ ಮುಖಜಭೂಮಿಯಾಗಿತ್ತು. ಈ ಜನಾಂಗದ ಇತಿಹಾಸ ಮುಖ್ಯವಾಗಿ ಉತ್ತರದಿಂದ ದಕ್ಷಿಣಕ್ಕೆ ವಲಸೆ ಬರುವುದೇ ಆಗಿತ್ತು. ಈ ಜನಾಂಗ ಚೀನಿ ಸಂಸ್ಕೃತಿಯ ಪ್ರಭಾವಕ್ಕೆ ಒಳಗಾಗಿತ್ತು. ಕ್ರಿ.ಪೂ. 111-ಕ್ರಿ.ಶ. 939ರವರೆಗೆ ವಿಯಟ್ನಾಂ ಚೈನದೇಶದ ಅಧೀನದಲ್ಲಿತ್ತು. ಈ ಕಾಲದಲ್ಲಿ ಅನೇಕ ಸಾರಿ ವಿಯಟ್ನಾಂ ಜನರು ಚೀನದ ರಾಜಕೀಯ ಆಡಳಿತದ ವಿರುದ್ಧ ದಂಗೆ ಎದ್ದರು. 1471 ರಲ್ಲಿ ದಕ್ಷಿಣಕ್ಕೆ ಒತ್ತರಿಸಿ ಬರುತ್ತಿದ್ದ ವಿಯಟ್ನಮಿಸ್ ಜನಾಂಗ, ಈಗಿನ ದಕ್ಷಿಣ ವಿಯಟ್ನಾಂನಲ್ಲಿದ್ದ ಚಂಪಾರಾಜ್ಯವನ್ನು ನಾಶಮಾಡಿದರು. ಅನಂತರ ಮೇಕಾಂಗ್ ನದಿಯ ಮುಖಜಭೂಮಿಯ ಪ್ರದೇಶವನ್ನು ಆಕ್ರಮಿಸಿಕೊಂಡು ಕಾಂಬೋಡಿಯನ್ನರನ್ನು ಅಲ್ಲಿಂದ ಓಡಿಸಿದರು. 18 ನೆಯ ಶತಮಾನದ ಮಧ್ಯಭಾಗದಲ್ಲಿ ವಿಯಟ್ನಾಂ ತನ್ನದೇ ಆದ ಒಂದು ಸಾಮ್ರಾಜ್ಯವನ್ನು ಹೊಂದಿತ್ತು. 1857 ರಲ್ಲಿ ಪ್ರಾರಂಭವಾದ ಫ್ರೆಂಚರ ಆಕ್ರಮಣ 1883 ರಲ್ಲಿ ಮುಕ್ತಾಯವಾಗಿ, ವಿಯಟ್ನಾಂ ಸಂಪೂರ್ಣವಾಗಿ ಅವರ ವಶವಾಯಿತು. 1400 ರಲ್ಲಿ ಸ್ಥಾಪಿತವಾದ ಮಲಕ್ಕಾ ವಾಣಿಜ್ಯಕೇಂದ್ರದಿಂದ ಮಲೇಷಿಯದ ಆಧುನಿಕ ಇತಿಹಾಸ ಪ್ರಾರಂಭವಾಗುತ್ತದೆ. 15 ಮತ್ತು 16 ನೆಯ ಶತಮಾನಗಳಲ್ಲಿ ಚಿಕ್ಕ ಚಿಕ್ಕ ಸುಲ್ತಾನ್ ರಾಜ್ಯಗಳು ಮಲಯದ ಅನೇಕ ಭಾಗಗಳಲ್ಲಿ ತಲೆ ಎತ್ತಿದುವು. 1511 ರಲ್ಲಿ ಮಲಕ್ಕಾ ಪೋರ್ಚ್‍ಗೀಸರ ವಶವಾಯಿತು. ಬ್ರಿಟಿಷರು ಸಿಂಗಪುರವನ್ನು ತಮ್ಮ ಕೇಂದ್ರವನ್ನಾಗಿ ಮಾಡಿಕೊಂಡು, ಮಲಯದ ಸಣ್ಣ ಪುಟ್ಟ ರಾಜ್ಯಗಳನ್ನು ತಮ್ಮ ಅಧೀನದಲ್ಲಿಟ್ಟುಕೊಂಡರು. 14 ನೆಯ ಶತಮಾನದಲ್ಲಿ ಸ್ಥಾಪಿತವಾದ ಜಾವದ್ವೀಪದ ಮಜಪಾಹಿತ್ ಸಾಮ್ರಾಜ್ಯ ಇಂಡೊನೇಷಿಯದ ಇತಿಹಾಸದಲ್ಲೆ ಬಹು ಪ್ರಸಿದ್ಧವಾದದ್ದು. ಮಜಪಾಹಿತ್ ಹಿಂದೂ ಸಂಸ್ಕೃತಿಯನ್ನು ಅನೇಕ ವಿಷಯಗಳಲ್ಲಿ ಅಳವಡಿಸಿಕೊಂಡಿತ್ತು. ಇದರ ಅವನತಿಯೊಂದಿಗೆ, ಇಸ್ಲಾಂ ಪ್ರಭಾವ ಇಂಡೋನೇಷಿಯದಲ್ಲಿ ಬೆಳೆದು, ಅನೇಕ ಮುಸ್ಲಿಂ ರಾಜರುಗಳು ಜಾವ ಮತ್ತು ಸುಮಾತ್ರ ದ್ವೀಪಗಳಲ್ಲಿ ಪಾಳೆಪಟ್ಟುಗಳನ್ನು ಕಟ್ಟಿದರು. ಅವುಗಳಲ್ಲಿ ಮತಾರಾಂ ಮತ್ತು ಜೋಗ್ ಜಕಾರ್ತ ರಾಜ್ಯಗಳು ಮುಖ್ಯವಾದುವು. ಬಾಲಿದ್ವೀಪದಲ್ಲಿ ಮಾತ್ರ ಹಿಂದೂಸಂಸ್ಕೃತಿ ಕೊನೆಯವರೆಗೂ ಉಳಿದುಕೊಂಡು ಬಂದಿತು. 16ನೆಯ ಶತಮಾನದಲ್ಲಿ ವ್ಯಾಪಾರಕ್ಕಾಗಿ ಬಂದ ಡಚ್ಚರು, ಜಾವದ್ವೀಪದಿಂದ ಪ್ರಾರಂಭವಾಗಿ, ಇಂಡೋನೇಷಿಯದ ಎಲ್ಲ ದ್ವೀಪಗಳನ್ನೂ ತಮ್ಮ ವಸಾಹತುಗಳನ್ನಾಗಿ ಮಾಡಿಕೊಂಡರು. ಫಿಲಿಪೈನ್ಸ್‍ನ ಆಧುನಿಕ ಇತಿಹಾಸ ಸ್ಪಾನಿಷರ ಆಡಳಿತದಿಂದ ಪ್ರಾರಂಭವಾಗುತ್ತದೆ. 16ನೆಯ ಶತಮಾನದಲ್ಲಿ ಪ್ರಾರಂಭವಾದ ಇವರ ಆಡಳಿತ 1899ರವರೆಗೆ ಇತ್ತು. ಈ ಕಾಲದಲ್ಲಿ, ಕ್ರೈಸ್ತಮತ ಯೂರೋಪಿಯನ್ನರ ಸಂಸ್ಕೃತಿ ಪ್ರಭಾವಗಳು, ಫಿಲಿಪೈನ್ಸ್ ಜನಾಂಗದವರ ಮೇಲೆ ಅಚ್ಚೊತ್ತಿದುವು. 1899ರ ಅನಂತರ ಈ ದೇಶ ಅಮೆರಿಕದ ವಸಾಹತಾಯಿತು. ಆಗ್ನೇಯ ಏಷ್ಯದಲ್ಲಿ ಯೂರೋಪಿಯನ್ನರ ಮತ್ತು ಅಮೆರಿಕನ್ನರ ಆಗಮನದಿಂದಾಗಿ ಒಂದು ದೊಡ್ಡ ಕ್ರಾಂತಿಯೇ ಈ ಭಾಗದಲ್ಲಿ ವಾಸಮಾಡುವ ವಿವಿಧ ಜನಾಂಗಗಳ, ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಉಂಟಾಯಿತು. ಆಗ ಪ್ರಾರಂಭವಾದ ಕ್ರಾಂತಿ ಈಗಲೂ ಮುಂದುವರಿಯುತ್ತಲೇ ಇದೆ. ಯೂರೋಪಿಯನ್ನರು 15ನೆಯ ಶತಮಾನದಲ್ಲಿ ಕೊಲಂಬಸ್‍ನಿಂದ ಪ್ರಾರಂಭವಾದ ಅನ್ವೇಷಣೆಯ ಅನಂತರ, ಆಗ್ನೇಯ ಏಷ್ಯದ ದ್ವೀಪಗಳಲ್ಲಿ ದೊರೆಯುವ ಮೆಣಸು, ಏಲಕ್ಕಿ, ಲವಂಗ ಮೊದಲಾದ ಸಾಂಬಾರ ಪದಾರ್ಥಗಳನ್ನು ಹುಡುಕಿಕೊಂಡು ಬಂದರು. ಮೊದಮೊದಲು ವ್ಯಾಪಾರವೇ ಅವರ ಮುಖ್ಯ ಉದ್ದೇಶವಾಗಿತ್ತು. ಹಾಗೆ ಬಂದವರಲ್ಲಿ ಪೋರ್ಚುಗೀಸರು ಮೊದಲಿಗರು. 1511ರಲ್ಲಿ ಅವರು ಮಲಕ್ಕಾವನ್ನು ಆಕ್ರಮಿಸಿಕೊಂಡು ಆಗ್ನೇಯ ಏಷ್ಯದ ಆಧುನಿಕ ಇತಿಹಾಸವನ್ನು ಪ್ರಾರಂಭಿಸಿದರು. ಅನಂತರ ಡಚ್ಚರು, ಇಂಗ್ಲಿಷರು, ಸ್ಪೇನಿನವರು, ಫ್ರೆಂಚರು, ಅಮೆರಿಕನ್ನರು ಪೋರ್ಚುಗೀಸರ ದಾರಿಯಲ್ಲೇ ಬಂದರು, ವ್ಯಾಪಾರಕ್ಕಾಗಿ ಕೋಟೆಗಳನ್ನು ಕಟ್ಟಿದರು. ಅಲ್ಲಿಂದ ರಾಜಕೀಯದಲ್ಲಿ ಆಸಕ್ತಿಹೊಂದಿ, ಅವನತಿ ಹೊಂದುತ್ತಿದ್ದ ಚಿಕ್ಕ ಪುಟ್ಟ ರಾಜ್ಯಗಳನ್ನು ಕುತಂತ್ರಗಳಿಂದಲೂ ಯುದ್ಧಗಳಿಂದಲೂ ಸೋಲಿಸಿ 19ನೆಯ ಶತಮಾನದ ಹೊತ್ತಿಗೆ ತಮ್ಮ ವಸಾಹತುಗಳನ್ನು ಸ್ಥಾಪಿಸಿದರು. ಕ್ರೈಸ್ತಮತವೂ ಆಗ್ನೇಯ ಏಷ್ಯಕ್ಕೆ ಬಂತು. ಬರ್ಮ ಮತ್ತು ಮಲಯ ಬ್ರಿಟಿಷರ ವಶವಾದುವು. ಇಂಡೋನೇಷ್ಯ ಡಚ್ಚರ ವಶವಾಯಿತು. ಫಿಲಿಪೈನ್ಸ್ ಸ್ಪೇನಿನ ಅಧೀನದಲ್ಲಿ 1899ರವರೆಗೆ ಇದ್ದು ಅನಂತರ ಸ್ಯಾನಿಷ್-ಅಮೆರಿಕನ್ ಯುದ್ಧದ ಪರಿಣಾಮವಾಗಿ, ಅಮೆರಿಕದ ಆಶ್ರಯಕ್ಕೆ ಬಂತು. ಫ್ರೆಂಚರು 19ನೆಯ ಶತಮಾನದ ಹೊತ್ತಿಗೆ, ವಿಯಟ್ನಾಂ, ಕಾಂಬೋಡಿಯ ಮತ್ತು ಲಾವೋಗಳಲ್ಲಿ ತಮ್ಮ ಪ್ರಾಬಲ್ಯವನ್ನು ಸ್ಥಾಪಿಸಿದರು. ಥಾಯ್‍ಲ್ಯಾಂಡ್ ಮಾತ್ರ ಯಾರ ಅಧೀನಕ್ಕೂ ಒಳಗಾಗಲಿಲ್ಲ. ಆಗ್ನೇಯ ಏಷ್ಯದಲ್ಲಿ ಈ ರೀತಿ ಆರಂಭವಾದ ವಸಾಹತುಗಳಿಂದ ಯೂರೋಪಿಯನ್ನರಿಗೆ ಮತ್ತು ಅಮೆರಿಕನ್ನರಿಗೆ ಎರಡು ರೀತಿಯ ಉಪಯೋಗವಿತ್ತು. ಒಂದು, ಇವು ಯೂರೋಪಿನ ಕೈಗಾರಿಕೆಗಳಿಗೆ, ಕಚ್ಚಾಪದಾರ್ಥಗಳನ್ನು ಒದಗಿಸಿಕೊಡುತ್ತಿದ್ದುವು. ಎರಡು, ಯೂರೋಪಿನಲ್ಲಿ ತಯಾರಾದ ಸಿದ್ಧವಸ್ತುಗಳಿಗೆ ಇವು ಮಾರುಕಟ್ಟೆಯಾಗಿದ್ದವು. ಟಿನ್, ರಬ್ಬರ, ಅಕ್ಕಿ, ಪೆಟ್ರೋಲಿಯಂಗಳಿಗೆ ಆಗ್ನೇಯ ಏಷ್ಯ ಬಹಳ ಪ್ರಾಮುಖ್ಯವಾಗಿತ್ತೆಂಬ ಅಂಶವನ್ನು ಇಲ್ಲಿ ಸ್ಮರಿಸಬಹುದು. ವಿವಿಧ ಯೂರೋಪಿಯನ್ ರಾಷ್ಟ್ರಗಳು ಅನೇಕ ರೀತಿಯ ರಾಜ್ಯಾಡಳಿತ ಕ್ರಮಗಳನ್ನು, ನೀತಿಗಳನ್ನು ತಮ್ಮ ವಸಾಹತುಗಳಲ್ಲಿ ಅನುಸರಿಸಿದರು. ಅವುಗಳ ಪರಿಣಾಮಗಳಲ್ಲಿ ವ್ಯತ್ಯಾಸಗಳಿದ್ದರೂ ಅವರ ವಸಾಹತು ನೀತಿ ದೇಶೀಯ ಜನರಿಗೆ ಅಷ್ಟಾಗಿ ಉಪಯೋಗವಾಗಲಿಲ್ಲ. ಅವರಿಂದ ದೇಶೀಯರಿಗೆ ತೊಂದರೆಯೇ ಹೆಚ್ಚಾಯಿತು. ಯೂರೋಪಿಯನ್ನರು ಸ್ಥಾಪಿಸಿದ ಗಣಿಗಳಲ್ಲಿ ರಬ್ಬರ್ ಮತ್ತು ಕಾಫಿತೋಟಗಳಲ್ಲಿ ದುಡಿಯಲು, ಚೀನೀಯರು ಆಗ್ನೇಯ ಏಷ್ಯದ ರಾಷ್ಟ್ರಗಳಿಗೆ ವಲಸೆಹೋಗಿ, ಅಲ್ಲಿ ನಿಂತು, ಅನೇಕ ಸಾರಿ ಆ ದೇಶಗಳ ಸ್ವಾತಂತ್ರ್ಯಹೋರಾಟದಲ್ಲಿ ಸಮಸ್ಯೆಯಾದರು. ಭಾರತೀಯರು ಮಲಯ ಮತ್ತು ಬರ್ಮದಲ್ಲೂ, ಚೀನೀಯರು ಇಂಡೋನೇಷಿಯ, ಥಾಯ್‍ಲ್ಯಾಂಡ್, ಮಲಯಗಳಲ್ಲೂ ಹೆಚ್ಚಾಗಿ ಆಯಾ ದೇಶಗಳ ಜನಾಂಗದ ಸಮಾಜದಲ್ಲಿ ಮುಖ್ಯ ಅಂಶವಾದರು. ಈ ರೀತಿಯ ವಸಾಹತುನೀತಿಯ ವಿರುದ್ಧವಾಗಿ, ಪರಕೀಯರ ಆಡಳಿತದ ಕಷ್ಟ ಪರಂಪರೆಗಳಿಗೆ ಬೇಸತ್ತ ದೇಶೀಯರು, ಈ ಶತಮಾನದ ಆದಿಭಾಗದಿಂದ ಸ್ವಾತಂತ್ರ್ಯ ಚಳುವಳಿಯನ್ನು ಪ್ರಾರಂಭಮಾಡಿದರು. ಮೊದಮೊದಲು ಈ ಸಂಗ್ರಾಮ ಆಧುನಿಕ ವಿದ್ಯಾಭ್ಯಾಸವನ್ನು ಪರದೇಶಗಳಲ್ಲಿ ಮುಗಿಸಿ ಬಂದ ವಿದ್ಯಾವಂತರಿಂದ ಪ್ರಾರಂಭವಾಗಿ, ಕೊನೆಗೆ ಎರಡನೆಯ ಮಹಾಯುದ್ಧವಾದ ಅನಂತರ ಎಲ್ಲರೂ ಭಾಗವಹಿಸುವಂತಾಯಿತು. ಇಂಡೋನೇಷಿಯದ ಸುಕಾರ್ನೊ ಮತ್ತು ಮಹಮದ್ ಹಟ್ಟಾ, ಬರ್ಮಾದ ಅಂಗ ಸಾನ್ ಮತ್ತು ಉನೂ, ಫಿಲಿಪೈನ್ಸ್‍ನ ಜೋಸ್ ರಿಜಾಲೆ, ವಿಯಟ್ನಾಂನ ಹೋ ಚಿ ಮಿನ್, ಮಲಯಾದ ಟುಂಕು ಅಬ್ದುಲ್ ರಹಮಾನ್ ಆಗ್ನೇಯ ಏಷ್ಯದ ಸ್ವಾತಂತ್ರ್ಯಸಂಗ್ರಾಮದ ಮೂಲಪುರುಷರಲ್ಲಿ ಅಗ್ರಗಣ್ಯರಾದರು. ಈ ಹೋರಾಟಕ್ಕೆ ಜಪಾನೀಯರು ಆಗ್ನೇಯ ಏಷ್ಯವನ್ನು 1942-45ರವರೆಗೆ ಆಕ್ರಮಿಸಿಕೊಂಡ ಕಾಲದಲ್ಲಿ ಅತಿ ಹೆಚ್ಚಿನ ಪ್ರೋತ್ಸಾಹ ದೊರೆಯಿತು ಎನ್ನಬಹುದು. ಜಪಾನೀಯರ ವಿಜಯದಿಂದ, ಯೂರೋಪಿಯನ್ನರನ್ನು ಏಷ್ಯನರು ಗೆಲ್ಲಲು ಸಾಧ್ಯವಿಲ್ಲ ಎಂಬ ನಂಬಿಕೆ ನಶಿಸಿಹೋಯಿತು. ಎರಡನೆಯ ಮಹಾಯುದ್ಧದ ಅನಂತರ ಒಂದೊಂದೇ ರಾಷ್ಟ್ರಗಳು ಸ್ವತಂತ್ರವಾದುವು. 1946ರಲ್ಲಿ ಫಿಲಿಪೈನ್ಸ್ ಅಮೆರಿಕನ್ನರಿಂದ ಸ್ವಾತಂತ್ರಗಳಿಸಿತು. 1948ರಲ್ಲಿ ಬರ್ಮ ಬ್ರಿಟಿಷ್‍ರಿಂದಲೂ, 1949ರಲ್ಲಿ ಇಂಡೋನೇಷಿಯ ಡಚ್ಚರಿಂದಲೂ, 1954ರಲ್ಲಿ ವಿಯಟ್ನಾಂ, ಲಾವೋ ಮತ್ತು ಕಾಂಬೋಡಿಯಗಳು, 1957ರಲ್ಲಿ ಮಲಯ ಫ್ರೆಂಚರಿಂದಲೂ ಸ್ವಾತಂತ್ರ್ಯಗಳಿಸಿದುವು. ರಾಜಕೀಯ ಸ್ವಾತಂತ್ರ್ಯ ಪಡೆದ ಆಗ್ನೇಯ ಏಷ್ಯದ ರಾಷ್ಟ್ರಗಳು ಈಗ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿವೆ. ಆರ್ಥಿಕ ಕ್ಷೇತ್ರದಲ್ಲಿ ಕ್ರಾಂತಿ ನಡೆದಿದ್ದರೂ ಈ ರಾಷ್ಟ್ರಗಳು ಇನ್ನೂ ಬಹಳ ಹಿಂದೆ ಉಳಿದಿವೆ. ರಾಜಕೀಯ ಕ್ಷೇತ್ರಗಳಲ್ಲಿ ಆಂತರಿಕ ಜಗಳ ಸಾಮಾನ್ಯವಾಗಿದೆ. ವಿವಿಧ ಜನಾಂಗಗಳಿಂದ ತುಂಬಿದ ರಾಷ್ಟ್ರಗಳಲ್ಲಿ ರಾಷ್ಟ್ರೀಯತೆಯ ತತ್ತ್ವಗಳನ್ನು, ಆದರ್ಶಗಳನ್ನು ಜನತೆಯ ಮುಂದೆ ಇಡುವುದು ಅಲ್ಲಿಯ ನಾಯಕರಿಗೆ ಕಷ್ಟವಾಗಿದೆ. ಬಹುಸಂಖ್ಯಾತರಾದ ಮೂಲಜನಾಂಗದವರಿಗೂ ಇತ್ತೀಚೆಗೆ ವಲಸೆಬಂದ ಚೀನೀಯರಿಗೂ ಭಾರತೀಯರಿಗೂ ಅನೇಕ ಸಾರಿ ಘರ್ಷಣೆಗಳಾಗಿ ರಾಜಕೀಯಸ್ಥಿತಿ ಅಲ್ಲೋಲಕಲ್ಲೋಲವಾಗಿರುವುದು ಉಂಟು. ಅಂತರರಾಷ್ಟ್ರೀಯ ಕ್ಷೇತ್ರದಲ್ಲಂತೂ ಆಗ್ನೇಯ ಏಷ್ಯ ಇತ್ತೀಚೆಗೆ ಬಹಳ ಪ್ರಾಮುಖ್ಯವಾಗಿದೆ. ಹಾಗೂ ಸಮಸ್ಯೆಯೂ ಆಗಿದೆ. 1954ರಲ್ಲಿ ನಡೆದ ಜಿನೀವ ಒಪ್ಪಂದದ ಪ್ರಕಾರ, ವಿಯಟ್ನಾಂ ದೇಶ ಇಬ್ಭಾಗವಾಗಿ, ಉತ್ತರ ವಿಯಟ್ನಾಂ ಕಮ್ಯುನಿಸ್ಟರ ಹಿಡಿತಕ್ಕೆ ಬಂತು; ದಕ್ಷಿಣ ವಿಯಟ್ನಾಂ ಯೂರೋಪಿನ ಮತ್ತು ಅಮೆರಿಕನ್ ಶಕ್ತಿಬಣಕ್ಕೆ ಸೇರಿದ ಪ್ರಜಾಸತ್ತೆಯ ರಾಷ್ಟ್ರವಾಯಿತು. ಈ ಸಮಸ್ಯೆ ಇವತ್ತಿಗೂ ಬೃಹದಾಕಾರವಾಗಿ ನಿಂತಿದೆ. ಅಮೆರಿಕ, ಚೀನ ಮತ್ತು ರಷ್ಯಗಳು ಆಗ್ನೇಯ ಏಷ್ಯದ ರಾಷ್ಟ್ರಗಳ ಪರ ಮತ್ತು ವಿರುದ್ಧವಾಗಿ ಬೆಂಬಲ ನಿಂತು ತಮ್ಮ ತಮ್ಮ ಶಕ್ತಿ ಪ್ರದರ್ಶನ ನಡೆಸುತ್ತಿವೆ. 1954ರಲ್ಲಿ ಅಮೆರಿಕದ ನೇತೃತ್ವದಲ್ಲಿ ಸಿಯಾಟೋ ಎಂಬ ಮಿಲಿಟರಿ ಬಣವನ್ನು ಫಿಲಿಪೈನ್ಸ್, ಥಾಯ್‍ಲ್ಯಾಂಡ, ಪಾಕೀಸ್ತಾನಗಳನ್ನು ಒಳಗೊಂಡಂತೆ ಕಮ್ಯುನಿಸ್ಟರ ಪ್ರಭಾವವನ್ನು ಆಗ್ನೇಯ ಏಷ್ಯದಲ್ಲಿ ತಡೆಯುವಂತೆ ರಚಿತವಾಯಿತು. 1955ರಲ್ಲಿ ಇಂಡೋನೇಷಿಯದ ಬಾಂಡುಂಗ್‍ನಲ್ಲಿ ಮೊತ್ತಮೊದಲಿಗೆ ಏಷ್ಯನ್ ಮತ್ತು ಆಫ್ರಿಕನ್ ರಾಷ್ಟ್ರಗಳ ಅಗ್ರಸಮ್ಮೇಳನ ನಡೆಯಿತು. ಕಾಂಬೋಡಿಯ, ಇಂಡೋನೇಷಿಯ, ಲಾವೋ ಮತ್ತು ಬರ್ಮ ದೇಶಗಳು ಯಾವ ಶಕ್ತಿಬಣಕ್ಕೂ ಸೇರದ ತಟಸ್ಥನೀತಿಯನ್ನು ಅನುಸರಿಸುತ್ತಿವೆ.
ವಾಸ್ತುಶಿಲ್ಪ
[ಬದಲಾಯಿಸಿ]ಪ್ರಾಚೀನ ಕಂಬುಜದ ವಾಸ್ತುಶಿಲ್ಪವನ್ನು ಶೈಲಿಯ ದೃಷ್ಟಿಯಿಂದ ಇಂಡೊಶಿಖ್ಮರ್ ಮತ್ತು ಖ್ಮರ್ ಎಂದು ಎರಡು ಪ್ರಕಾರಗಳಾಗಿ ವಿಂಗಡಿಸಬಹುದು. ಇಂಡೋಖ್ಮರ್ ಶೈಲಿಯ ವಾಸ್ತುಶಿಲ್ಪದಲ್ಲಿ ವಿಶೇಷವಾಗಿ ಭಾರತೀಯ ಸಂಪ್ರದಾಯಕ್ಕೆ ಸೇರಿದ ವಾಸ್ತುಶಿಲ್ಪದ ನಿರ್ಮಾಣವನ್ನು ಕಾಣುತ್ತೇವೆ. ಖ್ಮರ್ ಶೈಲಿಯಲ್ಲಿ ಭಾರತೀಯ ಪ್ರಭಾವ ಕಡಿಮೆಯಾದಂತೆ ತೋರುತ್ತದೆ. ಇಂಡೋಖ್ಮರ್ ಶೈಲಿಯ ದೇವಾಲಯವನ್ನು ವ್ಯಾಧಪುರದಲ್ಲಿ ಕಾಣಬಹುದು. ಇಲ್ಲಿಯ ದೇವಾಲಯಗಳು ಸಾಮಾನ್ಯವಾಗಿ ಇಟ್ಟಿಗೆಯಿಂದ ನಿರ್ಮಿತವಾದವುಗಳಾಗಿ ಗುಪ್ತಶೈಲಿಯ ದೇವಾಲಯಗಳನ್ನು ಹೋಲುತ್ತವೆ. ಹಂಚೆ ಎಂಬಲ್ಲಿರುವ ಕಲ್ಲಿನ ದೇವಾಲಯ ಶೈಲಿಯ ದೃಷ್ಟಿಯಿಂದ ಐಹೊಳೆಯ ಲಾಡ್‍ಖಾನ್ ದೇಗುಲಕ್ಕೆ ಸಮೀಪವರ್ತಿಯಾಗಿದೆ. ಪ್ರೆಕುಕ್ ಎಂಬಲ್ಲಿ ದೊರಕಿರುವ ದೇವಾಲಯವಂತೂ ಭಾರತೀಯ ವಾಸ್ತುಸಂಪ್ರದಾಯಕ್ಕೇ ಸೇರಿದುದಾಗಿದೆ. ಇಲ್ಲಿರುವ ಮಕರ ತೋರಣ, ಹಂಸಗಳ ಸಾಲು, ಚೈತ್ಯ ಗವಾಕ್ಷಿಗಳು ಗಮನಾರ್ಹವಾದುವು. ಬಯಾಂಗ್ ಎಂಬಲ್ಲಿರುವ ಕಲ್ಲಿನ ದೇವಾಲಯ ಅತ್ಯಂತ ಮನೋಹರವಾದ ಕಟ್ಟಡ. ಇದು ಚೌಕನೆಯ ಹಜಾರ ಮತ್ತು ಪದರಗಳುಳ್ಳ ಶಿಖರಗಳನ್ನು ಹೊಂದಿದೆ. ಈ ಪದರಗಳಲ್ಲಿ ಅಲಂಕೃತವಾದ ಲತೆಗಳೂ ಇತರ ಪ್ರಾಣಿಗಳೂ ಶಿಲ್ಪಿತವಾಗಿವೆ. ಈ ದೇವಾಲಯ ಪಲ್ಲವ ಶೈಲಿಯ ಪನಮಲೈ ದೇಗುಲವನ್ನು ಬಹುವಾಗಿ ಹೋಲುತ್ತದೆ. ಇಂಡೋಖ್ಮರ್ ಶೈಲಿಯ ಶಿಲ್ಪದಲ್ಲಿ ರಾಜ್‍ಗಿಯಾ ಎಂಬಲ್ಲಿ ದೊರಕಿರುವ ಅವಲೋಕಿತೇಶ್ವರ ವಿಗ್ರಹ ಮುಖ್ಯವಾದುದು. ಈ ವಿಗ್ರಹದ ಕೇಶಾಲಂಕಾರವನ್ನು ಭಾರತದ ಕನ್ಹೇರಿ ಗುಹಾಲಯದಲ್ಲೂ ಕಾಣಬಹುದು. ಪ್ರಸಾತ್ ಅಂದೆತ್‍ನಲ್ಲಿ ಸಿಕ್ಕಿರುವ ಹರಿಹರನ ಶಿಲ್ಪ ಕಾಂಚಿಯ ಕೈಲಾಸನಾಥ ದೇವಾಲಯದ ಶಿಲ್ಪಗಳನ್ನು ನಮ್ಮ ಗಮನಕ್ಕೆ ತರುತ್ತದೆ. ಖ್ಮರ್ ಶೈಲಿಯ ದೇವಾಲಯಗಳಲ್ಲಿ ಭಾರತೀಯ ಸಂಪ್ರದಾಯದ ಅವನತಿಯನ್ನು ಕಾಣುತ್ತೇವೆ. ಇಲ್ಲಿ ಮಕರತೋರಣಗಳಾಗಲೀ ಚೈತ್ಯ ಗವಾಕ್ಷಿಗಳಾಗಲೀ ದುಂಡನೆಯ ಕಂಬಗಳಾಗಲೀ ಕಾಣಬರುವುದಿಲ್ಲ. ಶಿಖರಗಳ ಬದಲು ಮನುಷ್ಯನ ಮುಖವುಳ್ಳ ಗೋಪುರಗಳಿವೆ. ಆದರೆ ಪೌರಾಣಿಕ ಕಥೆಗಳು ಮತ್ತು ಇತರ ಅಲಂಕಾರಗಳು ಭಾರತ ದೇಶದ ಸಂಪ್ರದಾಯಕ್ಕೇ ಸೇರಿದವುಗಳಾಗಿವೆ. ದೇವರಾಜಧರ್ಮ ಖ್ಮರ್ ಶೈಲಿಯ ಅನೇಕ ದೇವಾಲಯಗಳಿಗೆ ದಾರಿ ಮಾಡಿಕೊಟ್ಟಿತು. ಅಮರೇಂದ್ರಪುರ, ಹರಿಹರಾಲಯ, ಯಶೋಧರಪುರ ಮುಂತಾದುವು ಬೆಳೆದವು. ಹನ್ನೆರಡನೆಯ ಶತಮಾನದ ಆಂಗ್ಕೋರ್‍ವಾಟ್ ದೇವಾಲಯ ಖ್ಮರ್ ವಾಸ್ತುಶಿಲ್ಪದ ಮಹೋನ್ನತ ಕೃತಿ. ಇಲ್ಲಿ ಎಲ್ಲವೂ ಬೃಹತ್ ಪ್ರಮಾಣದಲ್ಲಿವೆ. ಮೊಟ್ಟಮೊದಲು ಇರುವ ಕಂದಕ ಸುಮಾರು 600'ಗಳಷ್ಟು ಅಗಲವಾಗಿದ್ದು, ಒಂದು ಸುತ್ತುಬಂದರೆ ಸುಮಾರು ಹನ್ನೆರಡು ಮೈಲಿಗಳಷ್ಟಾಗುತ್ತದೆ. ಇದರ ಒಳಗೆ ಕೋಟೆಯಿದೆ. ಇದಕ್ಕೆ ಬರಲು ನಾಲ್ಕೂ ದಿಕ್ಕಿನಿಂದ ರಾಜಪಥವಿದೆ. ಮಧ್ಯದಲ್ಲಿ ಎತ್ತರವಾಗಿ ಶಿಖರವೂ, ಅಲ್ಲಿಯೇ ಒಂದು ದೇವಾಲಯವೂ ಇದೆ. ದೇವಾಲಯದ ಗೋಡೆಗಳಲ್ಲಿ ರಾಮಾಯಣ ಮತ್ತು ಇತರ ಪೌರಾಣಿಕ ಕಥೆಗಳು ಶಿಲ್ಪಿತವಾಗಿವೆ. ಮತ್ತೆ ಕಂಬುಜದಲ್ಲಿ ಈ ರೀತಿಯ ವಾಸ್ತುಶಿಲ್ಪ ನಿರ್ಮಾಣವಾಗಲೇ ಇಲ್ಲ. ಆಗ್ನೇಯ ಏಷ್ಯ ವಾಸ್ತುಶಿಲ್ಪಕ್ಕೆ ಜಾವ ದ್ವೀಪದ ಕೊಡುಗೆ ಮಹತ್ತರವಾದದು. ಜಾವದ ದೇವಾಲಯಗಳು ಸಾಮಾನ್ಯವಾಗಿ ಎತ್ತರದ ಆಧಾರಜಗಲಿ, ಚೌಕವಾದ ದೇವಾಲಯ ಮತ್ತು ಶಿಖರ ಚಚ್ಚೌಕವಾಗಿದ್ದು ಮೇಲೆ ಹೋದಂತೆ ಕಿರಿದಾಗುತ್ತ ಬರುತ್ತದೆ. ಗೋಡೆಗಳ ಮೇಲೆ ಅಲಂಕಾರದ ಲತೆಗಳು, ಹೂಗಳು ಇರುತ್ತವೆ. ಕಾಲಮಕರ ಅಥವಾ ಕೀರ್ತಿಮುಖವೂ ಸಾಮಾನ್ಯವಾಗಿ ಕಾಣಬರುತ್ತದೆ. ಇಲ್ಲಿನ ದೇವಾಲಯಗಳಲ್ಲಿ ಕಂಬಗಳು ಇಲ್ಲವೆಂದೇ ಹೇಳಬೇಕು. ಮಧ್ಯ ಜಾವದಲ್ಲಿ ಎಂಟರಿಂದ ಹನ್ನೊಂದನೆಯ ಶತಮಾನದವರೆಗೆ ವಿಶೇಷವಾಗಿ ದೇವಾಲಯಗಳು ನಿರ್ಮಿತವಾದವು. ಡಿಯಾಂಗ್ ಪ್ರಸ್ಥಭೂಮಿಯಲ್ಲಿ ಎಂಟನೆಯ ಶತಮಾನಕ್ಕೆ ಸೇರಿದ ಅನೇಕ ದೇಗುಲಗಳಿವೆ, ಇಲ್ಲಿ ಮಹಾಭಾರತ ಕಥೆಯ ಶಿಲ್ಪಗಳು, ಈಶ್ವರ, ದುರ್ಗ, ಗಣೇಶ, ವಿಷ್ಣು, ಬ್ರಹ್ಮ ಮುಂತಾದ ದೇವತೆಗಳ ಶಿಲ್ಪಗಳೂ ದೊರಕಿವೆ. ಪ್ರಂಬಾನನ್ ಎಂಬಲ್ಲಿ ದೊರಕಿರುವ ಶಿಲ್ಪಗಳು ಗಮನಾರ್ಹವಾದುವು. ಚಂದಿಕಲಶನ್, ಚಂಡಿಸರಿ, ಚಂಡಿಸೇವು ದೇವಾಲಯಗಳು ಪ್ರಂಬಾನನ್ ಪ್ರದೇಶದ ಮುಖ್ಯದೇವಾಲಯಗಳು. ಕೆಡು ಪ್ರದೇಶದ ದೇವಾಲಯಗಳಲ್ಲಿ ಚಂಡಿವೆಂದುತ್ ಮತ್ತು ಚಂಡಿಪವನ್ ಮುಖ್ಯವಾದುವು. ಇಲ್ಲಿ ಶೈವ, ವೈಷ್ಣವ ಮತ್ತು ಬೌದ್ಧಧರ್ಮದ ಶಿಲ್ಪಗಳನ್ನು ಕಾಣಬಹುದು. ಜಾವದ ಅತ್ಯಂತ ಮಹತ್ತರವಾದ ಕಲಾಕೃತಿಯೆಂದರೆ ಬೊರಬೊದೂರ್ ದೇವಾಲಯ. ಒಂದು ಸಣ್ಣ ಬೆಟ್ಟದ ಮೇಲಿದೆ. ಈ ಸೌಧದಲ್ಲಿ ಒಂಬತ್ತು ಅಂತಸ್ತುಗಳಿದ್ದು ಅತ್ಯಂತ ಎತ್ತರದ ಅಂತಸ್ತಿನ ಮೇಲೆ ಘಂಟಾಕೃತಿಯ ಸ್ತೂಪವಿದೆ. ಮೊದಲಿನ ಆರು ಅಂತಸ್ತುಗಳು ಚೌಕಾಕಾರದಲ್ಲೂ ಮೇಲಿನ ಮೂರು ಅಂತಸ್ತುಗಳು ವರ್ತುಲಾಕಾರದಲ್ಲೂ ಇವೆ. ವರ್ತುಲಾಕಾರದ ಅಂತಸ್ತುಗಳಲ್ಲಿ ಸುತ್ತಲೂ ಇರುವ ಸಣ್ಣಸ್ತೂಪಗಳಲ್ಲಿ 432 ಬುದ್ಧನ ವಿಗ್ರಹಗಳಿವೆ. ಮೇಲೆ ಹತ್ತಿಹೋಗಲು ನಾಲ್ಕು ದಿಕ್ಕುಗಳಲ್ಲೂ ಮೆಟ್ಟಲುಗಳಿವೆ. ವಾಸ್ತುಶಾಸ್ತ್ರದೃಷ್ಟಿಯಿಂದ ಮಾತ್ರವಲ್ಲದೇ ಶಿಲ್ಪಕಲೆಯ ದೃಷ್ಟಿಯಿಂದಲೂ ಬೊರಬೊದೂರ್ ಮಹತ್ತರವಾದುದು. ಇಲ್ಲಿ ಕೊನೆಯಪಕ್ಷ 1,500 ಶಿಲ್ಪಫಲಕಗಳಿವೆ. ಅವುಗಳಲ್ಲಿ ಬುದ್ಧನ ಜೀವನಕ್ಕೆ ಸಂಬಂಧಪಟ್ಟ ಕಥೆಗಳನ್ನು ಕಾಣಬಹುದು. ಶಿಲ್ಪಕಲಾ ದೃಷ್ಟಿಯಿಂದ ಅತ್ಯಂತ ನಯನ ಮನೋಹರವಾದ ಕಲಾಕೃತಿಗಳಿವು. ಇವನ್ನು ಬಿಟ್ಟರೆ ಜಾವದಲ್ಲಿ ಲಾರಜಾಂಗ್ರಂಗ್ ಎಂಬಲ್ಲಿ ದೊರಕಿರುವ ದೇವಾಲಯಗಳು ಮುಖ್ಯವಾದುವು. ಇವು ಬೊರಬೊದೂರಿನಷ್ಟು ಗಾತ್ರದಲ್ಲಿ ದೊಡ್ಡವಲ್ಲದಿದ್ದರೂ ನಿಜ ಜೀವನಕ್ಕೆ ಅತ್ಯಂತ ಸಮೀಪವಾಗಿವೆ. ಪೂರ್ವ ಜಾವದಲ್ಲಿ ಚಂಡಿಸಿಂಘಸಾರಿ, ಚಂಡಿಕಿಡಲ್, ಚಂಡಿಜಾಗೋ, ಪನರತನ್ ದೇವಾಲಯಗಳು ಮುಖ್ಯವಾದುವು. ಸಿಂಘಸಾರಿಯ ಪ್ರಜ್ಞಾಪಾರಿಮಿತ, ಬೆಲಹನ್‍ನ ಏರ್ಲಂಗ ಮಹಾರಾಜನ ಶಿಲ್ಪ, ಸಿಂಪಿಂಗ್‍ನ ಹರಿಹರನ ವಿಗ್ರಹ ಪ್ರಮುಖ ಶಿಲ್ಪಗಳು. ಚಂಪಾ ರಾಜ್ಯದ ವಾಸ್ತುಶಿಲ್ಪವನ್ನು ಮುಖ್ಯವಾಗಿ ಮೈಸನ್, ಡಾಂಗ್‍ಡುವಾಂಗ್, ಮತ್ತು ಪೋ ನಗರಗಳಲ್ಲಿ ಕಾಣಬಹುದು. ಮೈಸನ್ ಮತ್ತು ಪೋ ನಗರ್‍ನ ದೇವಾಲಯಗಳು ಶೈವಧರ್ಮಕ್ಕೆ ಸೇರಿದುವು. ಡಾಂಗ್‍ಡುವಾಂಗ್‍ನಲ್ಲಿ ಬೌದ್ಧಧರ್ಮದ ಕಟ್ಟಡಗಳೇ ಹೆಚ್ಚು. ಚಂಪಾ ರಾಜ್ಯದ ದೇವಾಲಯಗಳು ಸಣ್ಣಗಿದ್ದು ಇಟ್ಟಿಗೆಯಿಂದ ಮಾಡಿದುವು. ಶಿಖರಗಳು ಮಹಾಬಲಿಪುರದ ರಥದ ಶಿಖರಗಳನ್ನು ಬಹುವಾಗಿ ಹೋಲುತ್ತವೆ. ಮೈಸನ್ನಿನ ಶಿವ, ಗಣೇಶ, ಸ್ಕಂದ ಮುಂತಾದ ದೇವರ ಶಿಲ್ಪಗಳೂ ಡಾಂಗ್‍ಡುವಾಂಗ್‍ನ ಲೋಕೇಶ್ವರನ ಶಿಲ್ಪವೂ ಬಹಳ ಉತ್ತಮ ವರ್ಗಕ್ಕೆ ಸೇರಿದುವು. ಬರ್ಮ ದೇಶಕ್ಕೂ ಮತ್ತು ಭಾರತಕ್ಕೂ ಹೆಚ್ಚು ಸಂಪರ್ಕಗಳಿದ್ದುದರಿಂದ, ಅಲ್ಲಿನ ವಾಸ್ತುಶಿಲ್ಪಕಲೆಯಲ್ಲಿ ಭಾರತೀಯ ಸಂಪ್ರದಾಯದ ಪೂರ್ಣಪ್ರಭಾವವನ್ನು ಕಾಣುತ್ತೇವೆ. ಬರ್ಮದಲ್ಲಿ ಅತ್ಯಂತ ಮುಖ್ಯವಾದುದು ಆನಂದ ದೇವಾಲಯ. ಇದು ಕ್ಯಾನಜಿತ್ಥ ಎಂಬ ರಾಜನಿಂದ ನಿರ್ಮಿತವಾಯಿತು. ಇದು ಇಟ್ಟಿಗೆಯಿಂದ ಕಟ್ಟಲ್ಪಟ್ಟು ಸುಮಾರು 560 ಚ. ಅ. ವಿಶಾಲವಾಗಿದೆ. ಮಧ್ಯದಲ್ಲಿ ಎತ್ತರವಾದ ಬುದ್ಧನ ವಿಗ್ರಹವಿದೆ. ಷ್ವೇಜಗಾನ್ ದೇವಾಲಯ, ಮಿಂಗಲಜೇದಿ ದೇವಾಲಯ, ಮಹಾಬೋಧಿ ಮುಂತಾದ ದೇವಾಲಯಗಳೂ ಬರ್ಮದಲ್ಲಿ ಮುಖ್ಯವಾದವು. ಇವಿಷ್ಟೇ ಅಲ್ಲದೆ ಬೋರ್ನಿಯೋದಲ್ಲಿ ದೊರಕಿರುವ ಬುದ್ಧವಿಗ್ರಹಗಳು, ಮಲಯದಲ್ಲಿ ಸಿಕ್ಕಿರುವ ಬುದ್ಧನ ಶಿಲ್ಪಗಳು ಮತ್ತು ಕಂಚಿನ ಪ್ರತಿಮೆಗಳು, ಸೆಲಿಬೆಸ್‍ನಲ್ಲಿ ದೊರಕಿರುವ ಕಂಚಿನ ಬುದ್ಧಪ್ರತಿಮೆ ಮತ್ತು ಬಲಿದ್ವೀಪದ ದೇವಾಲಯಗಳು, ಸುಖೋಥೈ ಜನಗಳಿಂದ ನಿರ್ಮಿತವಾದ ದೇವಾಲಯಗಳು ಆಗ್ನೇಯ ಏಷ್ಯದಲ್ಲಿನ ವಾಸ್ತುಶಿಲ್ಪಕ್ಕೆ ಮುಖ್ಯವಾದುವು. ಇವೆಲ್ಲದರಲ್ಲಿಯೂ ಭಾರತೀಯ ಸಂಸ್ಕ್ರತಿಯ ಮತ್ತು ವಾಸ್ತುಶಿಲ್ಪದ ಪ್ರಭಾವಗಳನ್ನು ಕಾಣಬಹುದು.
ನೃತ್ಯಸಂಪ್ರದಾಯಗಳು
[ಬದಲಾಯಿಸಿ]ಇಲ್ಲಿನ ಎಲ್ಲ ಭಾಗಗಳ ನೃತ್ಯ ಮತ್ತು ನಾಟಕಗಳೆಲ್ಲಕ್ಕೂ ಕಥೆ ಮತ್ತು ತಂತ್ರದ ವಿಷಯದಲ್ಲಿ ಸಾಧಾರಣವಾದ ಮೂಲವೊಂದುಂಟು. ತಂತ್ರ ಭಾರತೀಯ ನಾಟ್ಯಶಾಸ್ತ್ರವನ್ನವಲಂಬಿಸಿದೆ. ಕಥಾವಸ್ತುಗಳು ರಾಮಾಯಣ ಮತ್ತು ಮಹಾಭಾರತಗಳವು. ವಿಶದವಾಗಿ, ಅವಿನಾಶಿಯಾದ ಸಾಮಥ್ರ್ಯವನ್ನು ಪ್ರದರ್ಶಿಸುತ್ತ, ಈ ಕಲಾಭಿವ್ಯಂಜನೆಯ ಬಾಂಧವ್ಯ ಎಂಥ ರಾಜಕೀಯ ಉಪಪ್ಲವಗಳಲ್ಲೂ ನಾಶಹೊಂದದೆ ಇಲ್ಲಿ ಜೀವಂತವಾಗಿ ವಿಜೃಂಭಿಸುತ್ತಿದೆ. ಬರ್ಮ, ಮಲಯ, ಇಂಡೋನೇಷ್ಯ, ಕಾಂಬೋಡಿಯ, ಲಾವೋಸ್ ಮತ್ತು ಥಾಯ್‍ಲ್ಯಾಂಡಿನ ನೃತ್ಯಸಂಪ್ರದಾಯಗಳಲ್ಲೆಲ್ಲ ಭಾರತೀಯ ಸಂಸ್ಕೃತಿಯ ಮಾದರಿ ಕಂಡುಬರುತ್ತದೆ. ಬೌದ್ಧಮತವನ್ನು ಮುಖ್ಯವಾಗಿ ಅವಲಂಬಿಸಿರುವ ಬರ್ಮ ದೇಶದಲ್ಲಿ ಪ್ರತಿವರ್ಷವೂ ರಾಮಾಯಣವನ್ನು ಬೌದ್ಧಮಂದಿರದಲ್ಲಿ ಆಡುತ್ತಾರೆ. ನಟರು ಆಯಾಪಾತ್ರಗಳಿಗೆ ತಕ್ಕಂತೆಯೋ ಮೊಗವಾಡಗಳನ್ನು ಧರಿಸಿಯೋ ಕಥೆಯಲ್ಲಿ ಯಾವ ವ್ಯತ್ಯಾಸವನ್ನೂ ಮಾಡದೆ ಆಡಿ ತೋರಿಸುತ್ತಾರೆ. ಮುಸ್ಲಿಮರು ಹೆಚ್ಚಾಗಿರುವ ಮಲಯ ದೇಶದಲ್ಲಿ ಆವೇಶದ ಕುಣಿತವೆಲ್ಲ ಹಿಂದೂ ರೀತಿಯದು. ಆ ಸಮಯಗಳಲ್ಲಿ ಹಿಂದೂ ದೇವತೆ ನಟರ ಮೈಮೇಲೆ ಬರುತ್ತದೆ. ಭಾರತದಿಂದ ಆಗ್ನೇಯ ಏಷ್ಯಕ್ಕೆ ನೃತ್ಯ ಹೊರಟಾಗ ಅಲ್ಲಿ ಅದು ಕೆಲವು ಮಾರ್ಪಾಡುಗಳನ್ನು ಹೊಂದುವುದು ಅನಿವಾರ್ಯವಾಯಿತು. ಈ ಬದಲಾವಣೆಗಳು ಕೌತುಕಾಸ್ಪದವಾಗಿವೆ. ಏಕೆಂದರೆ ಮಹಾಭಾರತ ರಾಮಾಯಣಗಳಿಂದ ಈ ಕಥೆಗಳೆಲ್ಲವನ್ನೂ ಸಂಪೂರ್ಣವಾಗಿ ತೆಗೆದುಕೊಂಡಿದ್ದರೂ ಅವಕ್ಕೆ ಕೆಲವು ಪ್ರಸಂಗಗಳನ್ನೂ ಸೇರಿಸಲಾಗಿದೆ, ಮತ್ತು ಮುಖ್ಯ ಪಾತ್ರಗಳ ವ್ಯಕ್ತಿತ್ವದಲ್ಲಿ ಬದಲಾವಣೆ ಮಾಡಲಾಗಿದೆ. ಈ ದೇಶಗಳ ನೃತ್ಯ ಸಂಪ್ರದಾಯಗಳಲ್ಲಿ ಕಥಕ್ಕಳಿ ತಂತ್ರದ ಪ್ರಭಾವ ಎದ್ದು ಕಾಣುತ್ತದೆ. ಹಸ್ತಗಳ ಮುಖ್ಯ ಭಾಷೆ ಹಾಗೆಯೇ ಉಳಿದಿದೆ. ಈ ನೃತ್ಯೋಪಹಾರ ದೇವರಿಗೇ ಹೊರತು ಮನುಷ್ಯನಿಗಲ್ಲ. ನೃತ್ಯಾಧಿದೇವತೆ ಶಿವ; ನೃತ್ಯಗಳು, ಮುಖ್ಯವಾಗಿ ಬಾಲಿದ್ವೀಪದಲ್ಲಿ, ಸಂಪೂರ್ಣವಾಗಿ ಪೂಜಾಂಗಗಳು. ಇವುಗಳನ್ನು ಸ್ತೋತ್ರರೂಪವಾಗಿಯೂ ದೇವತೆಗಳನ್ನು ಉಪಶಮನಗೊಳಿಸಲೂ ನಡೆಸುತ್ತಾರೆ. ಥಾಯ್‍ಲ್ಯಾಂಡಿನಲ್ಲಿ ನೃತ್ಯವನ್ನು ಒಂದು ವಿಚಿತ್ರರೀತಿಯಲ್ಲಿ ಹೇಳಿಕೊಡುತ್ತಾರೆ. ಹಸ್ತಗಳನ್ನು ಪ್ರತ್ಯೇಕವಾಗಿ ಹೇಳಿಕೊಡುವ ಬದಲು, ಸಂಪೂರ್ಣ ವಾಕ್ಯವನ್ನೇ ಕುಣಿಯುತ್ತಾರೆ. ಅಭ್ಯಸ್ತವಾದ ಈ ವಾಕ್ಯಗಳಿಂದ ಒಂದು ನೃತ್ಯರೂಪುಗೊಳ್ಳುತ್ತದೆ. ಮಣಿಮೇಖಲೈ ಎಂಬುದು ಥಾಯ್‍ಲ್ಯಾಂಡಿನ ಅತ್ಯಂತ ಜನಪ್ರಿಯ ನೃತ್ಯ ನಾಟಕ. ಬಾಲಿಯಲ್ಲಿ ನೃತ್ಯ ಜನಜೀವನದಲ್ಲಿ ಹಾಸುಹೊಕ್ಕಾಗಿ ಬೆರೆದಿದೆ. ಪ್ರತಿ ಹಬ್ಬದಲ್ಲೂ ಇದು ಮುಖ್ಯಾಂಶ. ಮುಖದಲ್ಲಿ ಯಾವ ಅಭಿನಯವೂ ತೋರದಿದ್ದರೂ ನರ್ತಕರು ತಮ್ಮ ಸಮಸ್ತ ಭಾವಗಳನ್ನೂ ಮೈಯ್ಯಲ್ಲಿ ತೋರುತ್ತಾರೆ. ಗಂಡಸರು ಗಡುಸಾಗಿ ಕುಣಿದರೆ ಹೆಂಗಸರು ಮೆದುವಾಗಿಯೂ ಮಧುರವಾಗಿಯೂ ಚಲಿಸುತ್ತಾರೆ. ಬಾಲಿನಿವಾಸಿಗಳು ತಮ್ಮದೇ ಆದ ವಿಶಿಷ್ಟಶೈಲಿಯನ್ನು ನಿರ್ಮಾಣ ಮಾಡುವುದರಲ್ಲಿ ಜಯಶಾಲಿಗಳಾಗಿದ್ದಾರೆ. ಬಾರಿಸ್ ಎಂಬುದು ಸಮರ್ಥವಾದ ಯುದ್ಧ ನೃತ್ಯ, ವಾಯೊಂಗ್ ವೊಂಗ್ ಎಂಬುದು ಇಲ್ಲಿಯ ಬಹಳ ಹಳೆಯ ಮಾದರಿಯ ನೃತ್ಯ. ರಾಮಾಯಣವನ್ನು ಅವಲಂಬಿಸಿದ ಕತೆಗಳಲ್ಲಿ ಹಾವುಗಳು; ಹುಲಿಗಳು ಮತ್ತು ಆನೆ ಮೊದಲಾದ ನಗುವುಕ್ಕಿಸುವ ಪ್ರಾಣಿಗಳ ಪಾತ್ರಗಳು ಬರುತ್ತವೆ. ಸಂಸ್ಕೃತದ ಸೂತ್ರಧಾರನ (ವಿದೂಷಕ) ಹಾಗೆ, ಕಥಾನಾಯಕನ ಮಿತ್ರರೂ ಹಾಸ್ಯರಸಕ್ಕೆ ಆಕರರಾಗಿದ್ದಾರೆ. ಪೌರಾಣಿಕ ಕಥೆಗಳಲ್ಲಿ ಅರ್ಜುನನೇ ಅತ್ಯಂತ ಜನಪ್ರಿಯನಾದ ಶೂರ. ಭಾರತೀಯ ಪುರಾಣಗಳಲ್ಲಿನ ಕೃಷ್ಣನಂಥ ಪಾತ್ರವನ್ನು ಆತ ಅಲ್ಲಿ ವಹಿಸುತ್ತಾನೆ. ಟೋಪಂಗ್ ಕುಣಿತ ಒಂದು ಐತಿಹಾಸಿಕ ನಾಟಕ. ಅದು ಸಂಪೂರ್ಣವಾಗಿ ಬಾಲಿದ್ವೀಪ ನಿವಾಸಿಗಳಿಂದ ಕಲ್ಪಿತವಾದದ್ದು. ಬಾಲಿ ಜಾವದ ಭಾಗವಾಗಿದ್ದ ಕಾಲದ ಮಡ್‍ಜಪಿತ್ ವಂಶದ ಚರಿತ್ರೆ ಅದರ ಕಥಾವಸ್ತು. ಲೇಗಾಂಗ್ ಎಂಬ ಮಕ್ಕಳಾಡುವ ಕುಣಿತ ಮೊದಲು ದೇವಸ್ಥಾನಗಳಲ್ಲಿ ಕುಣಿಯುತ್ತಿದ್ದ ನೃತ್ಯವಾಗಿತ್ತೆಂದು ಹೇಳಲಾಗಿದೆ. ಲೇಗಾಂಗ್ ನೃತ್ಯ ಪ್ರಾರಂಭವಾಗುವುದು ಬೀಸಣಿಗೆ ಹಿಡಿದ ಇಬ್ಬರು ನರ್ತಕಿಯರ ಕುಣಿತದಿಂದ. ಅನಂತರ ರಾಣಿಯರ ದರ್ಶನಾಕಾಂಕ್ಷಿಯಾದ ರಾಜನಿಗೆ ಸ್ವಾಗತವಾಗುತ್ತದೆ. ಮಧ್ಯದಲ್ಲಿ ಅಪಶಕುನದ ಹಕ್ಕಿ ಕಾಣಿಸಿಕೊಳ್ಳುತ್ತದೆ. ಆಮೇಲೆ ಯುದ್ಧದಲ್ಲಿ ರಾಜ ಸಾಯುತ್ತಾನೆ. ಕೊನೆಯಲ್ಲಿ ಕಥೆ ಮರೆತು ಹೋಗಿ ನೃತ್ಯವೇ ಪ್ರಧಾನವಾಗುತ್ತದೆ.
- Khim audio Archived 2009-03-11 ವೇಬ್ಯಾಕ್ ಮೆಷಿನ್ ನಲ್ಲಿ.
ಜಾವದಲ್ಲಿ ನೃತ್ಯಕ್ಕೆ ಮುಖ್ಯ ಕೇಂದ್ರಗಳಾವುದೆಂದರೆ ಸುರಕರ್ತ ಮತ್ತು ಜೋಗ್‍ಜಕಾರ್ತಾ. ಇಲ್ಲಿ ರಾಜಪುತ್ರರು ನರ್ತನ ಶಾಲೆಗಳನ್ನು ನಡೆಸಿಕೊಂಡು ಬರುತ್ತಿದ್ದರು. ಈ ಕಲೆ ಆಳುವ ಪಂಗಡಗಳಿಗೆ ಮಾತ್ರ ಮೀಸಲಾಗಿತ್ತು. ಸುಲ್ತಾನರೇ ನಾಜೂಕಾದ ಉಡುಗೆಗಳ ಮಾದರಿಗಳನ್ನು ಹಾಕಿಕೊಡುತ್ತಿದ್ದರು. ರಾಜುಕುಮಾರರು, ಅವರಲ್ಲಿ ಮುಖ್ಯವಾಗಿ ಗತಿಸಿದ ಸುಲ್ತಾನರ ತಮ್ಮನಾದ ಪಂಗೆರಾನ್ ಚೆಡ್‍ಜೊಕುಸುವೋ ಎಂಬುವರು, ನೃತ್ಯವನ್ನು ಕಲಿಸುವ ಗುರುಗಳಾಗಿದ್ದರು. ಶೈಲಿ ಅಷ್ಟು ಠೀಕಾಗಿಲ್ಲದಿದ್ದರೂ ಪ್ರತಿಚಲನವೂ ಹೇಳಲಸಾಧ್ಯವೆನ್ನುವಷ್ಟು ನವಿರಾಗಿದೆ. ಇವುಗಳಲ್ಲಿ ಅತ್ಯಂತ ಸುಂದರವಾದುದು ನಾಲ್ಕು ಹೆಣ್ಣು ಹುಡುಗಿಯರು ಕುಣಿಯುವ ಸೆರಿಂಪಿ ಎಂಬ ನೃತ್ಯ. ಇದಕ್ಕೆ ವಿಶಿಷ್ಟವಾದ ಅರ್ಥವೇನೂ ಇಲ್ಲ. ಆದರೆ ಮೆಲುಗಾಳಿಯಲ್ಲಿ ಹೂಗಳು ಬಳುಕಾಡುತ್ತ ಸೂರ್ಯನ ಹೊಳಪಿನ ಕಿರಣಗಳಿಗೆ ತಮ್ಮ ದಳಗಳನ್ನು ತೆಗೆಯುವುದನ್ನು ಈ ನೃತ್ಯ ಅನುಕರಣೆಮಾಡುವಂತಿದೆ. ಸೆರಿಂಪಿ ನರ್ತಕಿಯರನ್ನು ಬ್ರಹ್ಮನೇ ನಿರ್ಮಿಸಿದನೆಂದು ಹೇಳುವ ವಾಡಿಕೆ ಇದೆ. ವಾಯೋಂಗ್ ಎಂಬ ಸಾಂಪ್ರದಾಯಿಕ ನೃತ್ಯನಾಟಕ ಬಹಳ ವಿಸ್ತಾರವಾಗಿದೆ. ಇದು ಸಾಮಾನ್ಯವಾಗಿ ಪಾಂಡವ ಕೌರವರ ಯುದ್ಧದ ಪ್ರಸಂಗಗಳನ್ನು ಚಿತ್ರಿಸುತ್ತದೆ. ವಾದ್ಯಮೇಳಕ್ಕೆ ಗಮೇಲನ್ ಎಂದು ಹೆಸರು. ಇದು ತುಂಬ ಕೌತುಕ ಪೂರ್ಣವಾಗಿದೆ. ಇದರಲ್ಲಿ ಮರ ಮತ್ತು ಲೋಹದ ಸೈಲೋಫೋನ್‍ಗಳು, ಜಾಗಟೆಗಳು, ಮದ್ದಲೆಗಳು ಮತ್ತು ತಾಳಗಳು ಇವೆ. ಇವುಗಳನ್ನು ನರ್ತಕರ ಗತಿಗೆ ಸರಿಯಾಗಿ ಬಾರಿಸುತ್ತಾರೆ. ಜನಪ್ರಿಯವಾದ ಕೆಬ್‍ಯಾರ್ ಎಂಬುದು ಒಬ್ಬನೇ ಕುಣಿಯುವ ಕುಣಿತ. ಇದನ್ನು ರಚಿಸಿದವನು ಹೆಸರಾಂತ ಮೇರಿಯೊ ಎಂಬ ನರ್ತಕ. ಈ ಸುಂದರನೃತ್ಯದಲ್ಲಿ ನರ್ತಿಸುವವ ಸಂಗೀತವನ್ನು ಮುಂದೊಡ್ಡಿ ಕುಣಿತದ ಪೂರ್ತಿ ಕುಳಿತಿರುತ್ತಾನೆ. ಚೀನದಲ್ಲಿ ಜೀವನದ ಸಮಸ್ಯೆಗಳನ್ನೆಲ್ಲ ರಂಗಮಂದಿರ ರಾಗಮಯವಾಗಿ ಮಾಡುತ್ತದೆ. ಮತ್ತು ಕಥಕ್ಕಳಿಯಲ್ಲಿರುವಂತೆ ಒಳ್ಳೆಯದು ಮತ್ತು ಕೆಡುಕೆಂಬ ಭೇದಗಳು ನಾಟಕೀಯವಾಗಿ ಪ್ರದರ್ಶಿತವಾಗುತ್ತವೆ. ಸಂಗೀತ, ನರ್ತನ ಮತ್ತು ಮೂಕಾಭಿನಯ ಇವುಗಳೇ ರಂಗಸ್ಥಳದ ಮೂಲಾಧಾರ. ಇವುಗಳಲ್ಲಿ ಅಭಿನಯಕ್ಕೆ ಪ್ರಾಮುಖ್ಯ ಹೆಚ್ಚು. ಬಹುಶ: ಪೆಕಿನ್ ಗೇಯರೂಪಕಗಳು ಸರಳವಾದ ಜಾನಪದ ಗೀತೆಗಳಿಂದಲೂ ಹಳ್ಳಿಗಳಲ್ಲಿ ಹಾಡುತ್ತಿದ್ದ ಕಥೆಗಳಿಂದಲೂ ಮೂಡಿ ಬಂದಂಥವು. ಬಳಿಕ ಪ್ರಸಂಗಗಳು ಬಂದುವು, ಕೊನೆಗೆ ಹೇರಳವಾದ ಉಡಿಗೆ ತೊಡಿಗೆಗಳು ಮತ್ತು ತುಂಬ ನಿಯಮಾನುಸಾರವಾದ ಅಭಿನಯ ಬಂದವು. ಇದು ದೀರ್ಘವಾದ ವಿಸ್ತೃತವಾದ ಸಂಸ್ಕರಣ ಕ್ರಮ. ಮಾನವರು ಹಾಡಿಕುಣಿಯಲು ಅಭಿನಯಗಳನ್ನು ಮುದ್ರೆಗಳನ್ನು ಚಲನೆಗಳನ್ನು ಕಲಿಯುತ್ತಾರೆ. ನಾಟಕಗಳೆಲ್ಲ ಐತಿಹಾಸಿಕ ಪ್ರಸಂಗಗಳೇ ಹೊರತು ಬೇರೆಯಲ್ಲ. ಈಗೀಗ ಪ್ರೌಢನಾಟಕಶಾಲೆಗಳನ್ನು ಆಧುನಿಕತೆಗೆ ತಿರುಗಿಸಲು ಪ್ರಯತ್ನಗಳು ನಡೆಯುತ್ತವೆ. ಆಗ್ನೇಯ ಏಷ್ಯ ಮತ್ತು ಚೀನ ದೇಶಗಳಲ್ಲಿ ದೇಗುಲಗಳಲ್ಲೂ ನಾಟ್ಯಮಂದಿರಗಳಲ್ಲೂ ನೃತ್ಯದ ಉತ್ಸಾಹ ಪೂರ್ಣವಾಗಿದೆ; ಜೀವಕಳೆಯಿಂದ ಕೂಡಿದೆ, ಭಾರತೀಯ ಕಲೆಯಿಂದ ಪ್ರಭಾವಿತವಾಗಿದ್ದರೂ ಈ ದೇಶಗಳಲ್ಲಿ ಪ್ರತಿಯೊಂದು ದೇಶವೂ ತನ್ನದೇ ಆದ ಸಂದೇಶವನ್ನು ಜಗತ್ತಿಗೆ ಕೊಡಲೂ ಮತ್ತು ತನ್ನ ಭಾವಪ್ರತೀಕಗಳನ್ನು ನೃತ್ಯ ಮತ್ತು ನಾಟಕ ಕಲೆಗಳ ಮೂಲಕ ಲೋಕದ ಕಣ್ಣೆದುರು ನಿಲ್ಲಿಸಲೂ ಹವಣಿಸುತ್ತಿದೆ.
ಭೌಗೋಳಿಕ ನಿವೇಶನ
[ಬದಲಾಯಿಸಿ]ದಕ್ಷಿಣ ಏಷ್ಯಾ | ಪೂರ್ವ ಏಷ್ಯಾ | ಪೆಸಿಫಿಕ್ ಮಹಾಸಾಗರ | ||
ದಕ್ಷಿಣ ಏಷ್ಯಾ | ಫೆಸಿಫಿಕ್ ಮಹಾಸಾಗರ ಓಷಿಯಾನಿಯಾ | |||
ಆಗ್ನೇಯ ಏಷ್ಯಾ | ||||
ಹಿಂದೂ ಮಹಾಸಾಗರ | ಹಿಂದೂ ಮಹಾಸಾಗರ | ಟಿಮೋರ್ ಸಾಗರ |
ಉಲ್ಲೇಖಗಳು
[ಬದಲಾಯಿಸಿ]- ↑ ೧.೦ ೧.೧ ೧.೨ ೧.೩ "SEA GDP". IMF.
- ↑ "2014 Human Development Report Summary" (PDF). United Nations Development Programme. 2014. pp. 21–25. Retrieved 13 April 2015.
- ↑ http://data.worldbank.org/country/timor-leste?display=graph
- ↑ ೪.೦ ೪.೧ http://www.imf.org/external/pubs/ft/weo/2015/01/weodata/weorept.aspx?pr.x=70&pr.y=2&sy=2015&ey=2015&scsm=1&ssd=1&sort=country&ds=.&br=1&c=536&s=NGDPD%2CNGDPDPC%2CPPPGDP%2CPPPPC&grp=0&a=
- ↑ http://www.imf.org/external/pubs/ft/weo/2014/02/weodata/weorept.aspx?sy=2012&ey=2019&scsm=1&ssd=1&sort=country&ds=.&br=1&pr1.x=15&pr1.y=5&c=548&s=NGDPD%2CNGDPDPC%2CPPPGDP%2CPPPPC&grp=0&a=
- ↑ ೬.೦ ೬.೧ http://www.imf.org/external/pubs/ft/weo/2015/02/weodata/weorept.aspx?pr.x=58&pr.y=4&sy=2013&ey=2020&scsm=1&ssd=1&sort=country&ds=.&br=1&c=578&s=NGDPD%2CNGDPDPC%2CPPPGDP%2CPPPPC&grp=0&a=
- ↑ ೭.೦ ೭.೧ http://www.imf.org/external/pubs/ft/weo/2014/02/weodata/weorept.aspx?pr.x=54&pr.y=9&sy=2012&ey=2019&scsm=1&ssd=1&sort=country&ds=.&br=1&c=566&s=NGDPD%2CNGDPDPC%2CPPPGDP%2CPPPPC&grp=0&a=
- ↑ http://www.imf.org/external/pubs/ft/weo/2014/02/weodata/weorept.aspx?pr.x=73&pr.y=7&sy=2014&ey=2018&scsm=1&ssd=1&sort=country&ds=.&br=1&c=582&s=NGDPD%2CNGDPDPC%2CPPPGDP%2CPPPPC%2CLP&grp=0&a=
- ↑ "United Nations Statistics Division- Standard Country and Area Codes Classifications (M49)". United Nations Statistics Division. 6 May 2015. Retrieved 2010-07-24.
- ↑ ೧೦.೦ ೧೦.೧ "Christmas Islands". CIA World Factbook. Archived from the original on 25 ಡಿಸೆಂಬರ್ 2018. Retrieved 12 September 2009.
- ↑ ೧೧.೦ ೧೧.೧ "Cocos (Keeling) Islands". CIA World Factbook. Archived from the original on 10 ಜನವರಿ 2019. Retrieved 12 September 2009.
- ↑ Population data as per the Indian Census.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- Topography of Southeast Asia in detail Archived 2015-06-23 ವೇಬ್ಯಾಕ್ ಮೆಷಿನ್ ನಲ್ಲಿ. (PDF) (previous version)
- CityMayors.com article
- Southeast Asian Archive Archived 2012-12-12 at Archive.is at the University of California, Irvine
- Southeast Asia Digital Library at Northern Illinois University
- "Documenting the Southeast Asian Refugee Experience" Archived 2003-02-25 at Archive.is, exhibit at the University of California, Irvine, Library
- Southeast Asia Visions, a collection of historical travel narratives Cornell University Library Digital Collection
- www
.southeastasia .org Official website of the ASEAN Tourism Association - Southeast Asia Time Lapse Video Southeast Asia Time Lapse Video
- Southeast Asia eCommerce Southeast Asia eCommerce
- Art of Island Southeast Asia, a full text exhibition catalogue from The Metropolitan Museum of Art
- List of Southeast Asia eCommerce Archived 2016-03-07 ವೇಬ್ಯಾಕ್ ಮೆಷಿನ್ ನಲ್ಲಿ.