ವಿಷಯಕ್ಕೆ ಹೋಗು

ಎರಡನೇ ಮಹಾಯುದ್ಧ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಎರಡನೆಯ ಮಹಾಯುದ್ಧ ಇಂದ ಪುನರ್ನಿರ್ದೇಶಿತ)
ಎರಡನೆಯ ಮಹಾಯುದ್ಧ
ಕಾಲ: ಸೆಪ್ಟಂಬರ್ ೧,೧೯೩೯ಸೆಪ್ಟಂಬರ್ ೨, ೧೯೪೫
ಸ್ಥಳ: ಯುರೋಪ್, ಪೆಸಿಫಿಕ್ ಮಹಾಸಾಗರ, ಆಗ್ನೇಯ ಏಷ್ಯಾ, ಮಧ್ಯ ಏಷ್ಯಾ, ಮೆಡಿಟೆರೇನಿಯ ಮತ್ತು ಆಫ್ರಿಕ
ಪರಿಣಾಮ: ಮಿತ್ರರಾಷ್ಟ್ರಗಳ ವಿಜಯ. ಪ್ರಪಂಚದ ಅತಿ ಬಲಾಡ್ಯ ಶಕ್ತಿಗಳಾಗಿ ಅಮೇರಿಕ ಸಂಯುಕ್ತ ಸಂಸ್ಥಾನ ಮತ್ತು ಸೋವಿಯಟ್ ಒಕ್ಕೂಟಗಳ ಉದ್ಭವ. ಮೊದಲನೇ ಹಾಗೂ ಎರಡನೇ ಮಹಾಯುದ್ಧದ ಪ್ರಭಾವಾಗಳಿಂದ ಶೀತಲ ಸಮರದ ಪ್ರಾರಂಭ.
ಕಾರಣ(ಗಳು): ಜರ್ಮನಿಯಿಂದ ಪೊಲೆಂಡ್ನ ಆಕ್ರಮಣ, ಪರ್ಲ್ ಹಾರ್ಬರ್ ಮೇಲೆ ಜಪಾನಿನ ದಾಳಿ.
ಕದನಕಾರರು
ಮಿತ್ರರಾಷ್ಟ್ರಗಳು:
ಸೊವಿಯೆಟ್ ಒಕ್ಕೂಟ
ಕೆನಡ

ಅಮೇರಿಕ ದೇಶ
ಯುನೈಟೆಡ್ ಕಿಂಗ್‍ಡಮ್
ಮತ್ತಿತರರು

ಅಕ್ಷದ ಶಕ್ತಿಗಳು:
ಜರ್ಮನಿ
ಜಪಾನ್
ಇಟಲಿ
ಮತ್ತಿತರರು
ಸೇನಾಧಿಪತಿಗಳು
ಜೋಸೆಫ್ ಸ್ಟಾಲಿನ್
ಫ್ರಾಂಕ್ಲಿನ್ ರೂಸ್ವೆಲ್ಟ್
ವಿಲಿಯಮ್ ಲ್ಯೋನ್ ಮೆಕೆನ್ಜಿ ಕಿಂಗ್
ವಿನ್ಸ್ಟನ್ ಚರ್ಚಿಲ್
ಅಡೋಲ್ಫ್ ಹಿಟ್ಲರ್
ಹಿದೇಕಿ ತೊಜೊ
ಬೆನಿಟೊ ಮುಸ್ಸೊಲಿನಿ
ಮೃತರು ಮತ್ತು ಗಾಯಾಳುಗಳು
ಮೃತ ಸೈನಿಕರು:
17,000,000
ಮೃತ ನಾಗರೀಕರು:
33,000,000
ಒಟ್ಟು ಸಾವು:
50,000,000
ಮೃತ ಸೈನಿಕರು:
8,000,000
ಮೃತ ನಾಗರೀಕರು:
4,000,000
ಒಟ್ಟು ಸಾವು:
12,000,000

ಎರಡನೆಯ ಮಹಾಯುದ್ಧ ೧೯೩೯ರಿಂದ ೧೯೪೫ರವರೆಗೆ ನಡೆದ, ಜಗತ್ತಿನ ಅನೇಕ ದೇಶಗಳನ್ನೊಳಗೊಂಡ ಯುದ್ಧ. ಪ್ರಧಾನವಾಗಿ ಯೂರೋಪ್ ಮತ್ತು ಏಷಿಯಾ ಖಂಡದಲ್ಲಿ ನಡೆಯಲ್ಪಟ್ಟ ಈ ಯುದ್ಧದಲ್ಲಿ ಮಿತ್ರ ರಾಷ್ಟ್ರ ( ಫ್ರಾನ್ಸ್, ರಶಿಯಾ, ಇಂಗ್ಲೆಂಡ್ ಮತ್ತು ಅಮೆರಿಕಾ) ಮತ್ತು ಅಕ್ಷ ರಾಷ್ಟ್ರ (ಜರ್ಮನಿ, ಇಟಲಿ ಮತ್ತು ಜಪಾನ್) ಎಂಬ ಎರಡು ಬಣಗಳಿದ್ದವು. ಒಟ್ಟಿನಲ್ಲಿ ೭೦ ರಾಷ್ಟ್ರಗಳ ಸೈನ್ಯಗಳು ಭಾಗವಹಿಸಿದ ಈ ಯುದ್ಧದಲ್ಲಿ ಆರು ಕೋಟಿಗೂ ಹೆಚ್ಚು ಜನ ಪ್ರಾಣ ಕಳೆದುಕೊಂಡಿರಬಹುದು ಎಂದು ಅಂದಾಜಿಸಲಾಗಿದೆ. ಮನುಷ್ಯನ ಇತಿಹಾಸದಲ್ಲಿಯೇ ಇದು ಅತಿ ಹೆಚ್ಚು. ಕೊನೆಯಲ್ಲಿ ಮಿತ್ರ ರಾಷ್ಟ್ರಗಳ ಮೇಲುಗೈಯಾಯಿತು. ಎಲ್ಲ ಅಂತಾರಾಷ್ಟ್ರೀಯ ವ್ಯಾಜ್ಯಗಳನ್ನೂ ಶಾಂತಿಯುತ ಮಾರ್ಗದಿಂದಲೇ ಪರಿಹರಿಸಿಕೊಳ್ಳಬೇಕೆಂದು ಒಂದನೆಯ ಮಹಾಯುದ್ಧಾನಂತರದಲ್ಲಿ ಆಗಿದ್ದ ವರ್ಸೇಲ್ಸ್‌ ಒಪ್ಪಂದದ ಆಶಯವನ್ನು ಉಲ್ಲಂಘಿಸಿ ಬಲಪ್ರಯೋಗದಿಂದ ರಾಜ್ಯ ವಿಸ್ತರಣೆಯ ಕಾರ್ಯದಲ್ಲಿ ತೊಡಗಿದ್ದ ಜರ್ಮನಿ, ಇಟಲಿ, ಜಪಾನುಗಳನ್ನೆದುರಿಸಿ ಬ್ರಿಟನ್, ಫ್ರಾನ್ಸ್‌, ಸೋವಿಯತ್ ಒಕ್ಕೂಟ ಅಮೆರಿಕ ಸಂಯುಕ್ತ ಸಂಸ್ಥಾನಗಳೇ ಮೊದಲಾದ ರಾಷ್ಟ್ರಗಳು ನಡೆಸಿದ ಯುದ್ಧ. ಸುಮಾರು 6 ವರ್ಷ ಕಾಲ ನಡೆದ ಈ ಯುದ್ಧ ವಿಶ್ವವ್ಯಾಪಿಯಾಗಿ ಪರಿಣಮಿಸಿ ಅಗಾಧ ಸಾವು ನೋವು ಕಷ್ಟ ನಷ್ಟಗಳಲ್ಲಿ ಪರ್ಯಾವಸಾನವಾಯಿತಲ್ಲದೆ ವಿಶ್ವದ ಆರ್ಥಿಕ ರಾಜಕೀಯ ಸಾಮಾಜಿಕ ವೈಜ್ಞಾನಿಕ ಕ್ಷೇತ್ರಗಳಲ್ಲಿ ಅಗಾಧ ಪರಿವರ್ತನೆಗಳಿಗೂ ಕಾರಣವಾಯಿತು

ಎನ್ನಬಹುದು.

ಎರಡನೆಯ ಮಹಾಯುದ್ಧದ ಕಾರಣಗಳನ್ನು ತಿಳಿಯಬೇಕಾದರೆ 1918ರ ವರ್ಸೇಲ್ಸ್‌ ಒಪ್ಪಂದದ ಅನಂತರದ ಪರಿಸ್ಥಿತಿಯನ್ನು ವಿವೇಚಿಸಬೇಕಾಗುತ್ತದೆ. ವರ್ಸೇಲ್ಸ್‌ ಒಪ್ಪಂದದ ನಿಬಂಧನೆಗಳು, ಅದರ ಮಹತ್ತ್ವ, ನ್ಯೂನತೆ, ಒಂದನೆಯ ಮಹಾಯುದ್ಧದ ವಿಜಯೀ ರಾಷ್ಟ್ರಗಳು ಸೋತ ಜರ್ಮನಿಯ ಬಗ್ಗೆ ತಳೆದ ಧೋರಣೆ, ಅವು ತಮ್ಮ ಹಿತಾಸಕ್ತಿಗಳನ್ನು ರಕ್ಷಿಸಿ ಕೊಂಡ ರೀತಿ, ನೂತನ ಯುರೋಪಿನ ನಿರ್ಮಾಣ, ಪ್ರಪಂಚದಲ್ಲಿ ಶಾಂತಿಸ್ಥಾಪನೆಯ ಪ್ರಯತ್ನ ವಿಫಲವಾದ ಬಗೆ, ಮತ್ತು ಹಿಟ್ಲರನ ಆಕ್ರಮಣಕ್ಕೆ ಅನುವಾಗಿ ಒದಗಿಬಂದ ಅವಕಾಶ-ಇವೆಲ್ಲವನ್ನೂ ಪರಿಶೀಲಿಸುವುದು ಅಗತ್ಯ. ಎರಡನೆಯ ಮಹಾಯುದ್ಧಕ್ಕೆ ಮುಂಚಿನ ವಿಶ್ವದ ಇತಿಹಾಸದಲ್ಲಿ ಒಂದನೆಯ ಮಹಾಯುದ್ಧವೇ(1914-18) ಅತ್ಯಂತ ಭೀಕರವಾದ ಯುದ್ಧವೆನಿಸಿತ್ತು. ಅದರಲ್ಲಿ ಉಂಟಾದ ಅಪಾರ ಸಾವುನೋವುಗಳನ್ನು ಮನಗಂಡ ರಾಷ್ಟ್ರಗಳು ಯುದ್ಧವನ್ನು ಕೊನೆಗಾಣಿಸಿ, ಜಗತ್ತಿನಲ್ಲಿ ಸ್ಥಿರವಾದ ಶಾಂತಿ ಸ್ಥಾಪಿಸಲು ಉದ್ಯುಕ್ತವಾಗಿದ್ದುವು. ಯುರೋಪಿನ ನಾಯಕರೂ ರಾಜಕಾರಣಿಗಳೂ ದಾರ್ಶನಿಕರೂ ಕಲೆತು ಸುಭದ್ರತೆ ಶಾಂತಿಗಳ ತಳಹದಿಯ ಮೇಲೆ ನೂತನ ಸಮಾಜವನ್ನು ರೂಪಿಸಲು ಪ್ರಯತ್ನಪಟ್ಟರು. ಈ ಕಾರ್ಯದಲ್ಲಿ ವಿಶ್ವದ ಎಲ್ಲ ರಾಷ್ಟ್ರಗಳೂ ಮಗ್ನವಾಗಿದ್ದುವು. ಆದರೆ ಈ ಧ್ಯೇಯಸಾಧನೆಯಲ್ಲಿ ಏಕಮುಖತೆ ಕಂಡುಬರಲಿಲ್ಲ. ಯುರೋಪಿನ ರಾಷ್ಟ್ರಗಳ ನಾಯಕರು ಸಂಕುಚಿತ ಮನೋಭಾವ ತಳೆದು ತಂತಮ್ಮ ದೇಶಗಳ ಹಿತಗಳನ್ನೇ ಪ್ರಧಾನ ಮಾಡಿಕೊಂಡು ಅವುಗಳ ಪ್ರತಿಷ್ಠೆಗಳನ್ನು ಹೆಚ್ಚಿಸುವ ಯೋಜನೆಗಳಲ್ಲಿ ವಿಶೇಷ ಆಸಕ್ತಿ ವಹಿಸಿದ್ದರೇ ವಿನಾ ಸುಭದ್ರ ಶಾಂತಿಯುತ ಸಮಾಜದ ರಚನೆಯಲ್ಲಿ ಯಾವ ಬಗೆಯ ಆಸಕ್ತಿಯನ್ನಾಗಲಿ ಉತ್ಸಾಹವನ್ನಾಗಲಿ ತೋರಿಸಲಿಲ್ಲ. ಈ ಸಂಕುಚಿತ ಮನೋಭಾವದ ಪ್ರದರ್ಶನದಿಂದಲೇ ಆ ನಾಯಕರು ಕೈಗೊಂಡ ಯೋಜನೆಗಳಾವುವೂ ಫಲಕಾರಿಯಾಗದೆ ಎರಡನೆಯ ಮಹಾಯುದ್ಧ ಅನಿವಾರ್ಯವಾಯಿತು. ಒಂದನೆಯ ಮಹಾಯುದ್ಧಾನಂತರ ನಾನಾ ಸಮಸ್ಯೆಗಳು ತಲೆದೋರಿದುವು. ವಿಶ್ವಶಾಂತಿಸ್ಥಾಪನೆ ಮತ್ತು ಸುಭದ್ರ ಸಮಾಜ ನಿರ್ಮಾಣದ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವುದರಲ್ಲಿ ಆಗ ಉದ್ಭವಿಸಿದ ಈ ಸಮಸ್ಯೆಗಳು ಅಡಚಣೆಯನ್ನುಂಟು ಮಾಡಿದವು. ಈ ರಾಷ್ಟ್ರಗಳು ತಮ್ಮ ಪರಸ್ಪರ ಸಂಬಂಧದ ವಿಚಾರದಲ್ಲಿ ಹಳೆಯ ವಿಧಾನಗಳನ್ನೇ ಮುಂದುವರಿಸಿಕೊಂಡು ಬಂದವೇ ಹೊರತು, ಅವುಗಳ ಬದಲು ಹೊಸ ರೀತಿ ನೀತಿಗಳನ್ನು ರೂಪಿಸುವ ಗೋಜಿಗೇ ಹೋಗಲಿಲ್ಲ. ಮುಖ್ಯವಾಗಿ ರಾಷ್ಟ್ರಗಳ ವೈಯಕ್ತಿಕ ಭದ್ರತೆಯ ಪರಿಕಲ್ಪನೆಗೂ, ಒಂದನೆಯ ಮಹಾಯುದ್ಧಾನಂತರ ಅಮೆರಿಕಾಧ್ಯಕ್ಷ ವಿಲ್ಸನರು ಪ್ರತಿಪಾದಿಸಿದ ಸಾಮೂಹಿಕ ಭದ್ರತೆಯ ಪರಿಕಲ್ಪನೆಗೂ ಅಂದರೆ ಈ ಎರಡು ಸಿದ್ಧಾಂತಗಳ ನಡುವಿನ ತಿಕ್ಕಾಟವೇ ಈ ಸಮಸ್ಯೆಯ ಮೂಲ. ಒಂದನೆಯ ಮತ್ತು ಎರಡನೆಯ ಮಹಾಯುದ್ಧಗಳ ನಡುವಣ ಕಾಲದಲ್ಲಿ ಈ ಎರಡು ತತ್ತ್ವಗಳ ಘರ್ಷಣೆಯ ಪರಿಣಾಮವಾಗಿ ಯುರೋಪಿನ ರಾಷ್ಟ್ರಗಳು ಆಕ್ರಮಣಕಾರಿ ಧೋರಣೆಯನ್ನು ಮುಂದುವರಿಸಿ ತಾವೇ ಸ್ಥಾಪಿಸಿದ ರಾಷ್ಟ್ರಕೂಟವನ್ನು (ಲೀಗ್ ಆಫ್ ನೇಷನ್ಸ್‌) ಧಿಕ್ಕರಿಸಿದುವು. ಇಂಥ ಪರಿಸ್ಥಿತಿಯಲ್ಲಿ ಪಾಶ್ಚಾತ್ಯ ಪ್ರಜಾಪ್ರಭುತ್ವ ರಾಷ್ಟ್ರಗಳು ಆಕ್ರಮಣಕಾರಿ ರಾಷ್ಟ್ರಗಳನ್ನು ಎದುರಿಸಲು ವಿಫಲವಾದುವು. ವರ್ಸೇಲ್ಸ್‌ ಒಪ್ಪಂದದ ಪ್ರಕಾರ ಹುಟ್ಟಿಕೊಂಡಿದ್ದ ಅನೇಕ ಸಣ್ಣ ರಾಷ್ಟ್ರಗಳೂ, ಅವುಗಳಿಂದ ಉದ್ಭವಿಸಿದ ಗಡಿ ಸಮಸ್ಯೆಗಳು, ವಿಜಯೀರಾಷ್ಟ್ರಗಳೇ ಒಪ್ಪಂದದ ಪ್ರಣಾಳಿಕೆಯನ್ನು ಪಾಲಿಸದಿದ್ದುದು-ಇವೇ ಜರ್ಮನಿ ಮತ್ತೆ ತಲೆ ಎತ್ತಿ ಪ್ರಬಲವಾಗಲು ಕಾರಣಗಳಾದವು. ಅಲ್ಲದೆ ಆ ರಾಷ್ಟ್ರದ ನಾಯಕರು ಆಗಿನ ಯುರೋಪಿನ ಪರಿಸ್ಥಿತಿಯನ್ನು ತಮಗೆ ಬೇಕಾದ ರೀತಿಯಲ್ಲಿ ಅಳವಡಿಸಿಕೊಳ್ಳಲು ಸಾಧ್ಯವಾಯಿತು.

ವರ್ಸೇಲ್ಸ್ ಒಪ್ಪಂದ

[ಬದಲಾಯಿಸಿ]

ಇಂಥ ಸನ್ನಿವೇಶವನ್ನು ಉಂಟುಮಾಡಲು ರಷ್ಯ ಮತ್ತು ಮಿತ್ರ ರಾಷ್ಟ್ರಗಳು ಸಾಮೂಹಿಕ ಭದ್ರತೆಯ ವಿಷಯದಲ್ಲಿ ತೋರಿದ ಉದಾಸೀನ ಮನೋಭಾವ, ಅನಾದರಣೆ ಮತ್ತು ಅನಿಶ್ಚಿತತೆಗಳೇ ಕಾರಣವೆನ್ನಬಹುದು. ಯುದ್ಧ ಸನ್ನಿಹಿತವಾದಾಗ, ಪರಿಸ್ಥಿತಿ ಉಲ್ಬಣವಾದಾಗ ಮಾತ್ರವೇ ಆ ರಾಷ್ಟ್ರಗಳು ಒಂದಾಗಲು, ಒಗ್ಗಟ್ಟಿನಿಂದ ಕ್ರಮ ಕೈಗೊಳ್ಳಲು ಪ್ರಯತ್ನಿಸಿದುವು. ವರ್ಸೇಲ್ಸ್‌ ಒಪ್ಪಂದದಲ್ಲಿ ಆಕ್ರಮಣಕಾರರಿಗೆ ಉತ್ತೇಜನಕಾರಿಯಾದ ಅಂಶಗಳೇನಾದರೂ ಇದ್ದುವೆ ಎಂಬುದನ್ನು ಈ ಸಂದರ್ಭದಲ್ಲಿ ವಿವೇಚಿಸಬೇಕಾಗಿದೆ. ವರ್ಸೇಲ್ಸ್‌ ಒಪ್ಪಂದವನ್ನು ರೂಪಿಸಿದ ವಿಜಯೀ ರಾಷ್ಟ್ರಗಳ ನಾಯಕರು ತಮ್ಮ ತಮ್ಮ ರಾಷ್ಟ್ರಗಳ ಸ್ಥಾನಮಾನ, ಪ್ರತಿಷ್ಠೆಗಳನ್ನು ಹೆಚ್ಚಿಸಿಕೊಳ್ಳುವುದರಲ್ಲಿ ಮಗ್ನರಾಗಿ, ಸೋತ ಜರ್ಮನಿಯ ವಿಚಾರದಲ್ಲಿ ಕಠಿಣ ರೀತಿಯಲ್ಲಿ ವರ್ತಿಸಿದ್ದರಿಂದ ಎರಡನೆಯ ಮಹಾಯುದ್ಧದ ಬೀಜವನ್ನು ಅದರಲ್ಲೇ ಬಿತ್ತಿದಂತಾಯಿತೆಂದು ಹೇಳುವವರುಂಟು. ಆದರೆ ಆ ಒಪ್ಪಂದವನ್ನು ಕೂಲಂಕಷವಾಗಿ ವಿಮರ್ಶಿಸಿದರೆ, ವರ್ಸೇಲ್ಸ್‌ ಒಪ್ಪಂದ ಎರಡನೆಯ ಮಹಾಯುದ್ಧಕ್ಕೆ ನಾಂದಿಯಾಯಿತೆಂದು ಹೇಳುವುದು ಸತ್ಯಕ್ಕೆ ದೂರ ಎಂದು ಹೇಳಬಹುದಾಗಿದೆ. ಬಲಿಷ್ಠ ರಾಷ್ಟ್ರಗಳ ಮಹತ್ವಾಕಾಂಕ್ಷೆ, ತಮ್ಮನ್ನು ತಾವು ಕಾಯ್ದುಕೊಳ್ಳಲಾರದ ಸಣ್ಣ ರಾಷ್ಟ್ರಗಳಿಗೆ ಸಾಮೂಹಿಕ ಬೆಂಬಲದ ಅಭಾವ-ಇವೆಲ್ಲವೂ ಪರಿಸ್ಥಿತಿ ಹದಗೆಡಲು ಕಾರಣ. ಒಂದನೆಯ ಮಹಾಯುದ್ಧದಲ್ಲಿ ಹೆಚ್ಚಿನ ಹಾನಿ ಹೊಂದಿದ ದೇಶವೆಂದರೆ ಫ್ರಾನ್ಸ್‌. ಆ ರಾಷ್ಟ್ರ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡು, ಜರ್ಮನಿಯನ್ನೂ ಬಲಹೀನವನ್ನಾಗಿ ಮಾಡಿ, ಅದು ಯುರೋಪಿನಲ್ಲಿ ಪುನಃ ಪ್ರಬಲವಾಗದಂತೆ ನೋಡಿಕೊಳ್ಳುವ ಉದ್ದೇಶ ಹೊಂದಿತ್ತು. ಆ ಉದ್ದೇಶದ ಪುರೈಕೆಗೆ ಬ್ರಿಟನ್ನೂ ಸಹಕರಿಸಲು ಸಿದ್ಧವಿತ್ತು. ಆದರೆ ಜರ್ಮನಿಯ ಬಗ್ಗೆ ಅದು ಉದಾರಭಾವ ತಳೆದಿತ್ತು. ಹೀಗಾಗಿ ಅಮೆರಿಕ ಮತ್ತು ಬ್ರಿಟನ್ನುಗಳಿಂದ ತನ್ನ ಭದ್ರತೆಯ ಬಗ್ಗೆ ಭರವಸೆಗಳು ಬಂದ ಅನಂತರವೇ ಫ್ರಾನ್ಸ್‌ ಜರ್ಮನಿಯನ್ನು ನಿರ್ಮೂಲಗೊಳಿಸುವ ಪ್ರಯತ್ನವನ್ನು ಕೈ ಬಿಟ್ಟಿತು. ಆದರೆ ಆ ರಾಷ್ಟ್ರಗಳು ತಾವು ಕೊಟ್ಟ ಮಾತಿನಂತೆ ನಡೆದುಕೊಳ್ಳದಿದ್ದಾಗ ಫ್ರಾನ್ಸ್‌ಗೆ ರಾಷ್ಟ್ರ ಕೂಟದಲ್ಲಿದ್ದ ನಂಬಿಕೆಯೂ ವಿಶ್ವಾಸವು ಮಾಸಿಹೋಯಿತು. ಫ್ರಾನ್ಸ್‌ಗೆ ಸೈನಿಕ ರಕ್ಷಣೆ ದೊರೆಯದಿದ್ದಾಗ, ಮಿಲಿಟರಿ ಒಪಂದಕ್ಕೆ ಸಂಯುಕ್ತ ಸಂಸ್ಥಾನ ನಕಾರ ಸೂಚಿಸಿದಾಗ, ವರ್ಸೇಲ್ಸ್‌, ಒಪ್ಪಂದದ ತಳಹದಿಯೇ ಕುಸಿಯಿತೆನ್ನಬಹುದು. ಅಮೆರಿಕದ ಸೆನೆಟ್ ಸಭೆ ವರ್ಸೇಲ್ಸ್‌ ಒಪ್ಪಂದವನ್ನು ಅಂಗೀಕರಿಸದಿದ್ದುದು ಮತ್ತೊಂದು ಪೆಟ್ಟಾಯಿತು. ಕೊನೆಗೆ ಯುರೋಪಿನಲ್ಲಿ ಶಾಂತಿ ಕಾಪಾಡಿಕೊಂಡು ಬರಲು ಒಂದು ಅಂತಾರಾಷ್ಟ್ರೀಯ ಸೇನೆಯನ್ನು ರೂಪಿಸಬೇಕೆಂಬ ಫ್ರಾನ್ಸಿನ ಸೂಚನೆಗೂ ಆ ರಾಷ್ಟ್ರಗಳ ಒಪ್ಪಿಗೆ ದೊರೆಯಲಿಲ್ಲ. ಆದ್ದರಿಂದ ವರ್ಸೇಲ್ಸ್‌ ಒಪ್ಪಂದದ ವಿಚಾರದಲ್ಲಿ ಫ್ರಾನ್ಸ್‌ ಹೆಚ್ಚಿನ ಆಸಕ್ತಿ ತೋರಿಸಲಿಲ್ಲ. ಹೆಚ್ಚಿನ ನಷ್ಟ ಹೊಂದದ ಬ್ರಿಟನ್ ಮತ್ತು ಅಮೆರಿಕ ಸಂಯುಕ್ತ ಸಂಸ್ಥಾನಗಳು ಶಾಂತಿ ಸ್ಥಾಪಿಸುವ ವಿಷಯದಲ್ಲಿ ಮತ್ತು ಅದನ್ನು ಕಾರ್ಯರೂಪಕ್ಕೆ ತರುವ ಅಂತಾರಾಷ್ಟ್ರೀಯ ಸಂಸ್ಥೆಯ ಸ್ಥಾಪನೆಯ ಯೋಜನೆಯಲ್ಲಿ ಆಸಕ್ತಿ ತೋರಿಸಿದರೂ ಆ ಸಂಸ್ಥೆ ಪರಿಣಾಮಕಾರಿಯಾದ ಕಾರ್ಯಕ್ರಮ ಹೊಂದುವುದಕ್ಕೆ ಯಾವ ಮಾರ್ಗವನ್ನೂ ಸೂಚಿಸಲಿಲ್ಲ. ಅಲ್ಲದೆ ಸಂಯುಕ್ತಸಂಸ್ಥಾನ ರಾಷ್ಟ್ರಕೂಟದ ಸದಸ್ಯತ್ವವನ್ನೂ ಪಡೆಯದಿದ್ದುದರಿಂದ ಆ ರಾಷ್ಟ್ರದ ಬಗೆಗೆ ಸಂಶಯ ಇನ್ನೂ ಹೆಚ್ಚಾಯಿತು. ಇದರಿಂದ ಬ್ರಿಟನ್ ಕೂಡ ಸಂಪ್ರದಾಯವಾದಿ ಧೋರಣೆಯನ್ನೇ ಅನುಸರಿಸಿ ಯುರೋಪಿನ ರಾಜಕೀಯದಲ್ಲಿ ಆಸಕ್ತಿ ಕಡಿಮೆ ಮಾಡಿಕೊಂಡಿತು. ಆ ವೇಳೆಗಾಗಲೇ ಮತ್ತೆ ತಲೆಯೆತ್ತಿ ಪ್ರಬಲವಾಗುವ ಚಿಹ್ನೆ ತೋರುತ್ತಿದ್ದ ಜರ್ಮನಿಯನ್ನು ಹದ್ದುಬಸ್ತಿನಲ್ಲಿಡಬೇಕೆಂಬ ಫ್ರಾನ್ಸಿನ ಆಶಯಕ್ಕೆ ಬ್ರಿಟನ್ ಅಮೆರಿಕಗಳು ಬೆಂಬಲ ನೀಡಲಿಲ್ಲ. ಫ್ರಾನ್ಸ್‌ ಬ್ರಿಟನ್‍ಗಳು ಒಂದಾಗಿ ನಡೆಯುವ ಬದಲು ತಾವೇ ಪರಸ್ಪರವಾಗಿ ಸ್ಪರ್ಧಿಸಿದುವು. ಇದರ ಪರಿಣಾಮವಾಗಿ ಬ್ರಿಟನ್ ಫ್ರಾನ್ಸ್‌ಗಳ ನಡುವೆ ಘರ್ಷಣೆ ಉಂಟಾಯಿತು. ಫ್ರಾನ್ಸ್‌ ಯಾರನ್ನೂ ಲೆಕ್ಕಿಸಿದೆ ರೂರ್ ಪ್ರದೇಶವನ್ನು ತನ್ನದನ್ನಾಗಿ ಮಾಡಿಕೊಂಡಿತು. ಇದನ್ನು ಗಮನಿಸಿದ ಜರ್ಮನಿಗೆ ವರ್ಸೇಲ್ಸ್‌ ಒಪ್ಪಂದವನ್ನು ಉಲ್ಲಂಘಿಸುವ ಧ್ಯೆರ್ಯ ಬಂದಿತು. ವರ್ಸೇಲ್ಸ್‌ ಒಪ್ಪಂದ ಕರಾಳ ಒಪ್ಪಂದವೆಂದು ಹೇಳಿದವನು ಹಿಟ್ಲರ್. ಆದರೆ ಅದೇ ಮುಂದೆ ಸಂಭವಿಸಿದ ಎಲ್ಲ ಅನರ್ಥಗಳಿಗೂ ಮೂಲವೆಂದು ಹೇಳುವುದು ತಪ್ಪಾಗುತ್ತದೆ. ಏಕೆಂದರೆ ಆ ಒಪ್ಪಂದದ ಅನಂತರವೂ ಜರ್ಮನಿ ಪ್ರಬಲ ರಾಷ್ಟ್ರವಾಗಿಯೇ ಉಳಿಯಿತು. ಅಲ್ಲದೆ ಆ ದೇಶದ ಆರ್ಥಿಕ ಸ್ಥಿತಿಯನ್ನು ಉತ್ತಮಪಡಿಸುವ ಅವಕಾಶ ಅದರಲ್ಲಿತ್ತು. ಹೊಸ ರಾಷ್ಟ್ರಗಳ ನಿರ್ಮಾಣ ಮತ್ತು ಅವುಗಳ ಭದ್ರತೆಯ ವಿಚಾರದಲ್ಲೂ ವರ್ಸೇಲ್ಸ್‌ ಒಪ್ಪಂದ ಸರಿಯಾದ ನಿರ್ಧಾರಗಳನ್ನೊಳಗೊಂಡಿತ್ತು. ಆದ್ದರಿಂದ ವರ್ಸೇಲ್ಸ್‌ ಒಪ್ಪಂದವನ್ನು ವೈರ ಪ್ರಚೋದಕ ಅನ್ಯಾಯಕಾರಿ ಒಪ್ಪಂದವೆಂದು ಹೇಳುವುದರಲ್ಲಿ ಸತ್ಯಾಂಶವಿಲ್ಲ. ಆದರೆ ಸೋತ ರಾಷ್ಟ್ರಗಳು ಗೆದ್ದ ರಾಷ್ಟ್ರಗಳಿಗೆ ಯುದ್ಧದ ನಷ್ಟವನ್ನು ಭರ್ತಿಮಾಡಿಕೊಡಬೇಕೆಂಬ ಬಗ್ಗೆ ರಚಿತವಾಗಿದ್ದ ನಿಬಂಧನೆಗಳು ಮಾತ್ರ ವಾಸ್ತವಿಕ ಪರಿಸ್ಥಿತಿಗೆ ಅನುಗುಣವಾಗಿ ಇರಲಿಲ್ಲವೆಂದು ಹೇಳಲೇಬೇಕು. ಈ ಅಂಶವೂ ಜರ್ಮನಿಯಲ್ಲೇ ಉದ್ಭವಿಸಿದ ಪರಿಸ್ಥಿತಿಗಳೂ ಆ ದೇಶದ ಹಣದುಬ್ಬರಕ್ಕೆ ಕಾರಣವಾದುವು. ಈ ಆರ್ಥಿಕ ಬಿಕ್ಕಟ್ಟೇ ಯುದ್ಧಾನಂತರ ಜರ್ಮನಿಯಲ್ಲಿ ಸ್ಥಾಪಿತವಾಗಿದ್ದ ಗಣರಾಜ್ಯದ ಪತನಕ್ಕೂ ಕಾರಣವಾಯಿತು. ಈ ಪರಿಸ್ಥಿತಿಯಿಂದ ರೊಚ್ಚಿಗೆದ್ದ ಜರ್ಮನಿಯ ಮಧ್ಯಮವರ್ಗ ಗಣರಾಜ್ಯ ಸರ್ಕಾರವನ್ನು ಉರುಳಿಸಿ, ಜರ್ಮನಿಯ ರಾಜಕೀಯದಲ್ಲಿ ಹಿಟ್ಲರ್ ಪ್ರವೇಶಿಸುವುದಕ್ಕೂ ಅವಕಾಶಮಾಡಿಕೊಟ್ಟಿತು. ವರ್ಸೇಲ್ಸ್‌ ಒಪ್ಪಂದದ ಆರ್ಥಿಕ ನಿಬಂಧನೆಗಳು ಯುರೋಪಿನಲ್ಲಿ ತೀವ್ರ ಪರಿಣಾಮವನ್ನುಂಟುಮಾಡಿದುವು. ಮಿತ್ರರಾಷ್ಟ್ರಗಳಲ್ಲಿ ಹೊಂದಾಣಿಕೆಯಿಲ್ಲದ್ದೂ ಆ ಒಪ್ಪಂದದ ವಿಧಿಗಳನ್ನು ಪಾಲಿಸದಿದ್ದದ್ದೂ ಅವುಗಳ ಆಚರಣೆಗೆ ಒತ್ತಾಯ ತರದಿದ್ದದ್ದೂ ಈ ಪರಿಣಾಮವನ್ನು ತೀವ್ರತರಗೊಳಿಸಿದುವು. ವರ್ಸೇಲ್ಸ್‌ ಒಪ್ಪಂದದ ಲೋಪದೋಷಗಳನ್ನು ಹಿಟ್ಲರ್ ಉತ್ಪ್ರೇಕ್ಷೆ ಮಾಡಿ ತೋರಿಸಿ, ಜರ್ಮನಿಯ ಜನತೆಯಲ್ಲಿ ಮಿತ್ರರಾಷ್ಟ್ರಗಳ ಬಗೆಗೆ ವೈರ ಮೂಡಿಸಿ ಅಧಿಕಾರ ಗಳಿಸಿದ. ತನ್ನ ಅಧಿಕಾರವನ್ನು ಭದ್ರಗೊಳಿಸುವ ದೃಷ್ಟಿಯಿಂದ ತನ್ನ ಸದುದ್ದೇಶಗಳ ಬಗೆಗೆ ಹೊರಗಡೆ ಪ್ರಚಾರದಲ್ಲಿ ತೊಡಗಿದ. ಕೊನೆಗೆ ಪರಿಸ್ಥಿತಿ ವಿಷಮಿಸಿ, ವರ್ಸೇಲ್ಸ್‌ ಒಪ್ಪಂದದ ಮಾರ್ಪಾಡಿನಿಂದಲೂ ಪರಿಹಾರವಾಗದ ಗಾಢ ಸಮಸ್ಯೆಗಳು ತಮ್ಮನ್ನು ಯುದ್ಧದ ಅಂಚಿಗೆ ತಳ್ಳುತ್ತಿವೆಯೆಂಬುದನ್ನು ಮಿತ್ರ ರಾಷ್ಟ್ರಗಳು ಅರಿತುಕೊಂಡದ್ದು ಯುದ್ಧ ಸನ್ನಿಹಿತವಾದಾಗಲೇ. ಆದರೆ ಆ ವೇಳೆಗೆ ಪರಿಸ್ಥಿತಿ ಕೈ ಮೀರಿತ್ತು. ಸಕಾಲಿಕವಾಗಿ ಎಚ್ಚೆತ್ತುಕೊಂಡು ಒಂದಾಗಿ ವರ್ತಿಸದ ತಪ್ಪಿಗಾಗಿ ಈ ರಾಷ್ಟ್ರಗಳು ಭಾರಿಯ ದಂಡತೆತ್ತವು.

ಹಿಟ್ಲರನ ನಾಯಕತ್ವ

[ಬದಲಾಯಿಸಿ]

ಎರಡನೆಯ ಮಹಾಯುದ್ಧದ ಪ್ರಾರಂಭಕ್ಕೆ ಮೊದಲು ಜರ್ಮನ್ ಜನತೆಯ ಜೀವನಮಟ್ಟ ಬಹಳಮಟ್ಟಿಗೆ ಸುಧಾರಿಸಿತ್ತು. ಹಿಟ್ಲರನ ಆಕ್ರಮಣಕ್ಕೆ ತುತ್ತಾದ ರಾಷ್ಟ್ರಗಳ ಸ್ಥಿತಿಗಿಂತ ಇದು ಉತ್ತಮವಾಗಿತ್ತು. ಆದಾಗ್ಯೂ ಹಿಟ್ಲರ್ ತನ್ನ ಅಪಪ್ರಚಾರಕ್ಕೆ ಈ ವಿಷಯವನ್ನೇ ಆರಿಸಿಕೊಂಡು ಇತರ ರಾಷ್ಟ್ರಗಳನ್ನೂ ಟೀಕಿಸತೊಡಗಿದ. ಮೈನ್ ಕಾಂಪ್ಫ್‌ (ನನ್ನ ಹೋರಾಟ) ಆತ್ಮ ಕಥೆಯಲ್ಲಿ ಹಿಟ್ಲರ್ ತನ್ನ ಅನುಭವಗಳನ್ನೂ ಜರ್ಮನಿಯ ದುಃಸ್ಥಿತಿಯನ್ನೂ ಅದರ ನಿವಾರಣೋಪಾಯಗಳನ್ನೂ ವಿವರಿಸಿ, ಜರ್ಮನ್ನರು ಆರ್ಯರೆಂದೂ ಆರ್ಯತ್ವವನ್ನು ಅವರು ಉಳಿಸಿಕೊಂಡು ಅನಾರ್ಯರನ್ನು ನಾಶಗೊಳಿಸಬೇಕೆಂದೂ ಹೇಳಿದ್ದಲ್ಲದೆ ಇದಕ್ಕೆ ವಿಧಾನಗಳನ್ನೂ ಸೂಚಿಸಿದ. ಇದಲ್ಲದೆ ಜರ್ಮನಿಯ ಗತವೈಭವವನ್ನೂ ಸಮಕಾಲೀನ ಅವನತ ಸ್ಥಿತಿಯನ್ನೂ ವರ್ಣಿಸಿ ಇವೆರಡರ ವ್ಯತ್ಯಾಸವನ್ನು ಜನ ಮನಗಾಣುವಂತೆ ಮಾಡಿದ. ತಾನೊಬ್ಬನೇ ಪ್ರಾಮಾಣಿಕ ನಾಯಕನೆಂಬ, ಜರ್ಮನ್ನರ ಆಶೆ ಆಕಾಂಕ್ಷೆಗಳನ್ನು ಈಡೇರಿಸುವ ಶಕ್ತಿ ಇರುವುದು ತನಗೊಬ್ಬನಿಗೆ ಮಾತ್ರ ಎಂಬ ನಂಬಿಕೆಯನ್ನು ಜನರಲ್ಲಿ ಮೂಡಿಸಿದ. ಜರ್ಮನಿ ಆಕ್ರಮಣ ನಡೆಸಿ ಯುದ್ಧ ಆರಂಭಿಸುವುದಕ್ಕೆ ಸೈನಿಕ, ರಾಜಕೀಯ ಅಥವಾ ಆರ್ಥಿಕ ಕಾರಣಗಳಾವುವೂ ಇರಲಿಲ್ಲ. ಹಿಟ್ಲರನ ಹಠಮಾರಿತನ, ಆತನಿಗೆ ಜರ್ಮನ್ನರ ಸಂಪುರ್ಣ ಬೆಂಬಲ, ಜೊತೆಗೆ ಮಿತ್ರರಾಷ್ಟ್ರಗಳ ದೌರ್ಬಲ್ಯ ಮತ್ತು ಉದಾಸೀನ ಮನೋಭಾವ-ಇವು ಯುದ್ಧಕ್ಕೆ ಪೋಷಕವಾದ ಸನ್ನಿವೇಶವನ್ನುಂಟು ಮಾಡಿದವು. ಜರ್ಮನಿ, ಜಪಾನ್ ಮತ್ತು ಇಟಲಿಗಳು ಎರಡನೆಯ ಮಹಾಯುದ್ಧಕ್ಕೆ ಮೂಲಭೂತವಾಗಿ ಕಾರಣವೆಂಬುದನ್ನು ಯಾರೂ ಮರೆಯುವಂತಿಲ್ಲ. ಎರಡು ಯುದ್ಧಗಳ ನಡುಗಾಲದಲ್ಲಿ ಪಾಶ್ಚಾತ್ಯ ಪ್ರಜಾಪ್ರಭುತ್ವ ರಾಷ್ಟ್ರಗಳು ನಿಶ್ಯಸ್ತ್ರೀಕರಣದ ಮೂಲಕ ಶಾಂತಿ ಸ್ಥಾಪಿಸುವ ನಂಬಿಕೆ ಹೊಂದಿದ್ದವು. ನಿಶ್ಯಸ್ತ್ರೀಕರಣ ಸಭೆಗಳು ನಡೆಯುತ್ತಿದ್ದ ಸಮಯದಲ್ಲೇ ಆಕ್ರಮಣಗಳೂ ನಡೆಯುತ್ತಿದ್ದವು. ಆಕ್ರಮಣಕಾರೀ ರಾಷ್ಟ್ರಗಳು ತಮ್ಮ ಸೇನೆಗಳನ್ನು ಜಮಾಯಿಸಿ, ಶಸ್ತ್ರಾಸ್ತ್ರಗಳನ್ನು ಇಮ್ಮಡಿಗೊಳಿಸಿ ಹೆಚ್ಚಿಸಿಕೊಳ್ಳುತ್ತಿದ್ದ ಕಾಲದಲ್ಲೇ ಪ್ರಜಾಪ್ರಭುತ್ವ ರಾಷ್ಟ್ರಗಳು ನಿಶ್ಯಸ್ತ್ರೀಕರಣದಲ್ಲಿ ನಂಬಿಕೆ ಇಟ್ಟಿದ್ದು ಹಾಸ್ಯಾಸ್ಪದ ಸಂಗತಿಯಾಯಿತು. ವರ್ಸೇಲ್ಸ್‌ ಒಪ್ಪಂದ ಮತ್ತು ಅದರ ಅನಂತರದ ಒಪ್ಪಂದಗಳೆಲ್ಲವನ್ನೂ ಉಲ್ಲಂಘಿಸುವುದು ಹಿಟ್ಲರನಿಗೆ ಅತಿ ಸುಲಭವಾಯಿತು. 1933ರಲ್ಲಿ ಅಧಿಕಾರ ಬಂದಾಗಿನಿಂದ ಆತ ತನ್ನ ಯೋಚನೆಗಳನ್ನು ಕಾರ್ಯರೂಪಕ್ಕೆ ತರುವುದರಲ್ಲಿ ತೊಡಗಿ, 1936ರಲ್ಲಿ ಒಪ್ಪಂದಗಳನ್ನು ಮುರಿಯಲು ಪ್ರಾರಂಭಿಸಿದ. ಪ್ರಜಾಪ್ರಭುತ್ವ ರಾಷ್ಟ್ರಗಳ ದುರ್ಬಲತೆ, ಅವು ಸರಿಯಾದ ಕಾಲದಲ್ಲಿ ಕಾರ್ಯೋನ್ಮುಖವಾಗದೆ ಇದ್ದದ್ದು ಮತ್ತು ಹಿಟ್ಲರನ ರಾಜತಂತ್ರ-ಇವು ಎರಡನೆಯ ಮಹಾಯುದ್ಧಕ್ಕೆ ಕಾರಣಗಳೆಂದು ಹೇಳಬಹುದಾಗಿದೆ. ಇದರ ಆರಂಭಕ್ಕೆ ಮುಂಚಿನ ಕೆಲವು ಘಟನೆಗಳನ್ನು ಸ್ಥೂಲವಾಗಿ ಪರಿಶೀಲಿಸಬೇಕು.

ಜಪಾನ್‍ನ ರಾಜ್ಯದಾಹ(ರಾಜ್ಯ ವಿಸ್ತರಣೆ ಮೋಹ)

[ಬದಲಾಯಿಸಿ]

ಯುರೋಪಿನಲ್ಲಿ ಹಿಟ್ಲರ್ ಆಕ್ರಮಣ ನೀತಿಯನ್ನನುಸರಿಸುವುದಕ್ಕೆ ಮುಂಚಿನಿಂದಲೇ ಪೂರ್ವದಲ್ಲಿ ಜಪಾನ್ ಕೂಡ ಇದೇ ಬಗೆಯ ಹಾದಿ ತುಳಿಯಲಾರಂಭಿಸಿತ್ತು. ವಿಶ್ವಶಾಂತಿ ನೆಲಸಬೇಕೆಂದು ಬಾಯಲ್ಲಿ ಹೇಳುತ್ತಿದ್ದರೂ ಶಾಂತಿ ಸಮ್ಮೇಳನಗಳಲ್ಲಿ ಭಾಗವಹಿಸುತ್ತಿದ್ದರೂ ಅದಕ್ಕೆ ರಾಜ್ಯದಾಹ ಹೆಚ್ಚಾಗಿ 1931ರಲ್ಲಿ ಚೀನದ ಮಂಚೂರಿಯದ ಮೇಲೆ ಆಕ್ರಮಣ ನಡೆಸಿತು. ಈ ಆಕ್ರಮಣವೇ ಒಂದು ರೀತಿಯಲ್ಲಿ ಎರಡನೆಯ ಮಹಾಯುದ್ಧದ ಮೊದಲನೆಯ ಗುಂಡೆನ್ನಬಹುದು. ಆದ್ದರಿಂದ ದೂರಪ್ರಾಚ್ಯದಲ್ಲಿನ ವಿದ್ಯಮಾನಗಳನ್ನೂ ಪರಿಶೀಲಿಸುವುದು ಅನಿವಾರ್ಯ, ಆ ಕ್ಷೇತ್ರದಲ್ಲಿ ಜಪಾನ್ ವಹಿಸಿದ ಪಾತ್ರದ ವಿವೇಚನೆಯನ್ನೂ ನಡೆಸಬೇಕಾಗುತ್ತದೆ. ಯುರೋಪಿನಲ್ಲಿ ವಿನಾಶಕಾರಕ ಧೋರಣೆ ಅನುಸರಿಸಿದ ಜರ್ಮನ್ ಇಟಲಿಗಳಿಗೆ ಜಪಾನ್ ಯಾವರೀತಿಯಲ್ಲೂ ಕಡಿಮೆಯಾಗಿರಲಿಲ್ಲ. ಹಿಂದುಳಿದ ರಾಷ್ಟ್ರವಾಗಿದ್ದ ಜಪಾನ್ 20ನೆಯ ಶತಮಾನದ ಆದಿಭಾಗದಲ್ಲಿ ಪ್ರಬಲವಾಗಿ, ಅಂತಾರಾಷ್ಟ್ರೀಯ ಕ್ಷೇತ್ರದಲ್ಲಿ ಪ್ರಮುಖ ಪಾತ್ರವಹಿಸಿ ಸೈನಿಕ ಸಂಪ್ರದಾಯ ಬೆಳೆಸಿಕೊಂಡು, ಸಾಮ್ರಾಜ್ಯ ದಾಹಕ್ಕೊಳಗಾಗಿತ್ತು. 1894ರಲ್ಲಿ ಚೀನದ ಮೇಲೂ 1904ರಲ್ಲಿ ರಷ್ಯದ ವಿರುದ್ಧವಾಗಿಯೂ ಜಯಪ್ರದವಾಗಿ ಯುದ್ಧಮಾಡಿ ತನ್ನ ಪ್ರತಿಷ್ಠೆ ಹೆಚ್ಚಿಸಿಕೊಂಡಿತ್ತು. ಅಲ್ಲದೆ ಮೊದಲನೆಯ ಮಹಾಯುದ್ಧದಲ್ಲಿ ಮುಖ್ಯ ಪಾತ್ರವಹಿಸಿ ಜರ್ಮನ್ ವಸಾಹತುಗಳ ಮೇಲೆ ಬಲ ಪ್ರಯೋಗಿಸಿ ಮಿತ್ರರಾಷ್ಟ್ರಗಳ ಮೆಚ್ಚುಗೆಗೆ ಪಾತ್ರವಾಗಿ ವರ್ಸೇಲ್ಸ್‌ ಒಪ್ಪಂದದಲ್ಲಿ ತನಗೆ ಬೇಕಾದ ಸೌಲಭ್ಯಗಳನ್ನು ಪಡೆದುಕೊಂಡಿತ್ತು. ಇದರಿಂದ ಉತ್ತೇಜಿತವಾದ ಜಪಾನ್ ಇಡೀ ಏಷ್ಯವನ್ನೇ ತನ್ನದಾಗಿ ಮಾಡಿಕೊಳ್ಳುವ ದುರುದ್ದೇಶ ಹೊಂದಿತ್ತು. ಮಂಚೂರಿಯ ಪ್ರಕರಣದಲ್ಲಿ ರಾಷ್ಟ್ರ ಸಂಸ್ಥೆಯ ದುರ್ಬಲತೆಯನ್ನು ಮನಗಂಡ ಜಪಾನ್ ತನ್ನ ನೀತಿಯನ್ನು ಮುಂದುವರಿಸಿತು. ಅದಕ್ಕೆ ಯಾವ ಆತಂಕವೂ ಇರಲಿಲ್ಲ. ಆ ಸಂಸ್ಥೆ ಮಧ್ಯಸ್ಥಿಕೆ ವಹಿಸಲು ಯತ್ನಿಸಿದಾಗ ಜಪಾನ್ ಅದರ ಸದಸ್ಯತ್ವನ್ನು ತ್ಯಜಿಸಿ, ಮಂಚೂರಿಯವನ್ನು ಪುರ್ಣವಾಗಿ ಕಬಳಿಸಿತು. ಬ್ರಿಟನ್, ಅಮೆರಿಕಗಳು ಸಂಯುಕ್ತವಾಗಿ ಕಾರ್ಯಾಚರಣೆಗೆ ತೊಡಗಬೇಕೆಂಬ ಸಲಹೆ ಕಾರ್ಯರೂಪಕ್ಕೆ ಬರಲಿಲ್ಲ. ಆಗ ಆ ರಾಷ್ಟ್ರಗಳು ತೋರ್ಪಡಿಸಿದ ದೌರ್ಬಲ್ಯ ಅಕ್ಷಮ್ಯವೆನ್ನಬಹುದು.

ಇಟಲಿಗೆ ಉತ್ತೇಜನ

[ಬದಲಾಯಿಸಿ]

ಮಂಚೂರಿಯ ಪ್ರಕರಣದಲ್ಲಿ ರಾಷ್ಟ್ರಕೂಟ ತೋರಿಸಿದ ಅಸಹಾಯಕತೆಯನ್ನು ಕಂಡು ಸ್ಫೂರ್ತಿಗೊಂಡ ಇಟಲಿಯ ಮುಸೋಲಿನಿ 1935ರ ಅಕ್ಟೋಬರ್ ತಿಂಗಳಲ್ಲಿ ಆಫ್ರಿಕಅಬಿಸೀನಿಯ ರಾಜ್ಯವನ್ನು ಆಕ್ರಮಿಸಿಕೊಂಡ. ರಾಷ್ಟ್ರಕೂಟದಲ್ಲಿ ಈ ಆಕ್ರಮಣದ ಚರ್ಚೆ ನಡೆಯುತ್ತಿದ್ದಾಗಲೇ ಹಿಟ್ಲರ್ ರೈನ್ಲೆಂಡನ್ನು ಆಕ್ರಮಿಸಿಕೊಂಡ. ಈ ಆಕ್ರಮಣ ಪ್ರಕರಣಗಳಲ್ಲಿ ಬ್ರಿಟನ್ನಾಗಲಿ ಫ್ರಾನ್ಸಾಗಲಿ ಯಾವ ಅಡ್ಡಿಯನ್ನುಂಟುಮಾಡುವ ಗೋಜಿಗೂ ಹೋಗಲಿಲ್ಲ. ಕೌಲು ಕರಾರುಗಳ ಪಾವಿತ್ರ್ಯವನ್ನು ಧಿಕ್ಕರಿಸಿ ಮುಂದೆ ಹಿಟ್ಲರ್ ನಡೆಸಲಿದ್ದ ದುರಾಕ್ರಮಣಗಳಿಗೆ ಇದು ಪೀಠಿಕೆಯಾಯಿತು. ಇದಾದ ಮೇಲೆ 1936ರ ಜುಲೈ ತಿಂಗಳಲ್ಲಿ ಸ್ಪೇನ್ ದೇಶದಲ್ಲಿ ದಂಗೆ ನಡೆದು ಅಂತರ್ಯುದ್ಧ ಪ್ರಾರಂಭವಾದಾಗ, ಯುರೋಪಿನ ಪ್ರಜಾಪ್ರಭುತ್ವ ರಾಷ್ಟ್ರಗಳ ಸಹಾನುಭೂತಿ ರಿಪಬ್ಲಿಕನ್ ಸರ್ಕಾರದ ಕಡೆ ಇದ್ದಿತಾದರೂ ಅವು ಯಾವುವೂ ಪ್ರತ್ಯಕ್ಷ ಸಹಾಯ ನೀಡಲಿಲ್ಲ. ಇದರಿಂದ ನಿರಂಕುಶ ಪ್ರಭುತ್ವದ ಶಕ್ತಿ ಹೆಚ್ಚಾಗಿ ಪ್ರಜಾಪ್ರಭುತ್ವದ ಶಕ್ತಿ ಕುಗ್ಗಿತು. ಜರ್ಮನಿ ಮತ್ತು ಇಟಲಿಗಳ ಜೊತೆಗೆ ಮತ್ತೊಂದು ರಾಷ್ಟ್ರವನ್ನು ಫ್ರಾನ್ಸ್‌ ಎದುರಿಸಬೇಕಾಯಿತು. ಹಿಟ್ಲರನಿಗೆ ತನ್ನ ಧ್ಯೇಯ ಸಾಧಿಸಲು ಅನುಕೂಲ ವಾತಾವರಣ ಉಂಟಾಯಿತು. ಅನಂತರ ಚೀನದಲ್ಲಿ ಜಪಾನೀ ಆಕ್ರಮಣ ನಡೆಯಿತು. ಇದು ಚೀನದ ಸರಹದ್ದುಗಳನ್ನು ದಾಟಿ ಅಮೆರಿಕನ್ ಹಿತಾಸಕ್ತಿಗಳಿಗೆ ಧಕ್ಕೆ ತಂದಾಗ ಅಮೆರಿಕ ಸಂಯುಕ್ತಸಂಸ್ಥಾನ ಬರೀ ಪ್ರತಿಭಟನಾಪತ್ರವನ್ನು ಕಳುಹಿಸಿತೇ ವಿನಾ ಯಾವ ಉಗ್ರ ಕಾರ್ಯಕ್ರಮವನ್ನೂ ಕ್ಯೆಗೊಳ್ಳಲಿಲ್ಲ. ಈ ಪ್ರಕರಣಗಳಲ್ಲಿ ಅಮೆರಿಕ ತಾಟಸ್ಥ್ಯ ನೀತಿ ಅನುಸರಿಸಿದ್ದು ಆಕ್ರಮಣಕಾರಿ ರಾಷ್ಟ್ರಗಳಿಗೆ ಇನ್ನಷ್ಟು ಪ್ರೋತ್ಸಾಹಿಸಿದಂತಾಯಿತು.

ಮಹಾಯುದ್ಧದ ಪ್ರಾರಂಭ

[ಬದಲಾಯಿಸಿ]

ಯುರೋಪಿನಲ್ಲಿ ಈ ಆಕ್ರಮಣಕಾರರಿಗೆ ಮೊದಲು ಆಹುತಿಯಾದ ದೇಶವೇ ಆಸ್ಟ್ರಿಯ. 1938ರ ಮಾರ್ಚ್ 11ರಂದು ಹಿಟ್ಲರನ ಸೇನೆಗಳು ಆಸ್ಟ್ರಿಯವನ್ನು ಪ್ರವೇಶಿಸಿದವು. ಅನಂತರ ಹಿಟ್ಲರನ ಕಣ್ಣು ಚೆಕೊಸ್ಲೊವಾಕಿಯದ ಮೇಲೆ ಬಿತ್ತು. ಆಸ್ಟ್ರಿಯದ ಕಡೆಯಿಂದ ಚೆಕೊಸ್ಲೊವಾಕಿಯವನ್ನು ಆಕ್ರಮಿಸಿಕೊಳ್ಳುವುದು ಸುಲಭವಾಗಿತ್ತು. ಈ ಸಣ್ಣ ರಾಷ್ಟ್ರವನ್ನು ರಕ್ಷಿಸುವ ಹೊಣೆ ಹೊತ್ತಿದ್ದ ದೇಶಗಳೆಂದರೆ ಫ್ರಾನ್ಸ್‌ ಮತ್ತು ಸೋವಿಯತ್ ಒಕ್ಕೂಟ, ಬ್ರಿಟನ್ ಕೂಡ ರಕ್ಷಣೆಯ ಜವಾಬ್ದಾರಿಯಲ್ಲಿ ಪಾಲುಗೊಂಡಿತು. ಆದರೆ ಈ ರಾಷ್ಟ್ರಗಳಾವುವೂ ಚೆಕೊಸ್ಲೊವಾಕಿಯದ ಅಧ್ಯಕ್ಷ ಬೆನೆಷ್ ಮಾಡಿದ ಪ್ರಾರ್ಥನೆಗೆ ಯಾವ ಮನ್ನಣೆಯನ್ನೂ ಕೊಡಲಿಲ್ಲ. ಆಂಗ್ಲೊ-ಫ್ರೆಂಚ್ ಯೋಜನೆಯಂತೆ ಸುಡೇಟನ್ ಪ್ರದೇಶವನ್ನು ಜರ್ಮನಿಗೆ ಒಪ್ಪಿಸಬೇಕೆಂದು ಫ್ರಾನ್ಸ್‌ ಸಲಹೆಮಾಡಿತು. ಇದರಿಂದ ಆಕ್ರಮಣವನ್ನು ನಿಲ್ಲಿಸಿ, ಶಾಂತಿ ಕಾಪಾಡುವ ಮತ್ತೊಂದು ಸುವರ್ಣಾವಕಾಶವನ್ನು ಮಿತ್ರರಾಷ್ಟ್ರಗಳು ಕಳೆದುಕೊಂಡವು. ಸ್ವತಃ ಶಾಂತಿಪ್ರಿಯನಾಗಿದ್ದ ಬ್ರಿಟಿಷ್ ಪ್ರಧಾನಿ ಚೇಂಬರ್ಲಿನ್ ಹಿಟ್ಲರನನ್ನು ಮ್ಯೂನಿಕ್ನಲ್ಲಿ ಭೇಟಿ ಮಾಡಿ ಅವನ ನೀತಿಯನ್ನು ಖಂಡಿಸಿದ, ಆದರೆ ತನಗೆ ರಾಜ್ಯ ವಿಸ್ತರಣೆಯ ಆಸೆಯೇ ಇಲ್ಲವೆಂದು ಹಿಟ್ಲರ್ ಭರವಸೆ ಕೊಟ್ಟಾಗ ಚೇಂಬರ್ಲಿನ್ ಅವನೊಂದಿಗೆ ಒಂದು ಒಪ್ಪಂದ ಮಾಡಿಕೊಂಡ (ಸೆಪ್ಟೆಂಬರ್ 30). ಈ ಸಂಧಾನದಲ್ಲಿ ಸೋವಿಯತ್ ಒಕ್ಕೂಟವನ್ನು ಸೇರಿಸಿಕೊಳ್ಳಲಿಲ್ಲ. ಸುಡೇಟನ್ ಪ್ರದೇಶವನ್ನು ಹಿಟ್ಲರನಿಗೆ ಚೆಕೊಸ್ಲೊವಾಕಿಯ ಒಪ್ಪಿಸಬೇಕೆಂಬ ತೀರ್ಮಾನದಿಂದ ಅವನ ಆಕ್ರಮಣಶೀಲ ಪ್ರವೃತ್ತಿಗೆ ಬಹುಮಾನ ದೊರಕಿದಂತಾಯಿತೆಂಬುದು ನಿಸ್ಸಂದೇಹ. ಮುಂದೆ ಮ್ಯೂನಿಕ್ ಒಪ್ಪಂದ ತೀವ್ರವಾದ ಟೀಕೆಗೆ ಗುರಿಯಾದರೂ ಚೇಂಬರ್ಲಿನ್ ಬ್ರಿಟಿನ್ನಿಗೆ ಹಿಂತಿರುಗಿದಾಗ ಜನತೆಯಿಂದ ಅವನಿಗೆ ದೊರಕಿದ ಸ್ವಾಗತ ಅಭೂತಪೂರ್ವ. ಆಗ ಹರಡುತ್ತಿದ್ದ ಯುದ್ಧದ ಭೀತಿಯನ್ನು ನಿವಾರಿಸಿ ಶಾಂತಿ ನೆಲೆಗೊಳಿಸಲು ಚೇಂಬರ್ಲಿನ್ ಯಾವ ಕ್ರಮವನ್ನಾದರೂ ಕೈಗೊಳ್ಳಲು ತಯಾರಿದ್ದ. ಫ್ರಾನ್ಸ್‌ ಸಹ ಅದೇ ಧೋರಣೆ ತಳೆಯಿತು. ಅನಿವಾರ್ಯವಾದರೆ ಮಾತ್ರ ಹಿಟ್ಲರನೊಡನೆ ಯುದ್ಧಮಾಡಬೇಕೇ ಹೊರತು ಅಲ್ಪ ವಿಷಯಗಳಿಗೆ ಕೈಯೆತ್ತಬಾರದೆಂಬುದು ಚೇಂಬರ್ಲಿನನ ಅಭಿಪ್ರಾಯವಾಗಿತ್ತು. ಅಲ್ಲದೆ ತಮ್ಮ ದೇಶದ ಹಿತಕ್ಕೆ ಸಂಬಂಧಪಡದ ದೂರ ಪ್ರದೇಶದ ಕಲಹಗಳಲ್ಲಿ ಕೈಹಾಕುವುದು ಕೇವಲ ಹುಚ್ಚುತನವೆಂದು ಆತ ನಂಬಿದ್ದ. ಆದರೆ ಈ ಶಮನ ನೀತಿಯಿಂದ ಯುರೋಪಿಗೆ ಶಾಂತಿ ಲಭಿಸಲಿಲ್ಲ. ಇದರ ರುಚಿ ಕಂಡ ಹಿಟ್ಲರ್ ಮ್ಯೂನಿಕ್ ಒಪ್ಪಂದಕ್ಕೆ ಸಹಿಹಾಕಿದ ಆರೇ ತಿಂಗಳೊಳಗಾಗಿ ಚೆಕೊಸ್ಲೊವಾಕಿಯವನ್ನು ಕಬಳಿಸಿದ. ಈ ಆಕ್ರಮಣದಿಂದ ಬ್ರಿಟನ್, ಫ್ರಾನ್ಸ್‌ಗಳ ನಾಯಕರಲ್ಲಿ ಭೀತಿ ಹುಟ್ಟಿತು.ಪೋಲೆಂಡನ್ನು ಆಕ್ರಮಿಸುವುದೇ ಹಿಟ್ಲರನ ಮುಂದಿನ ಗುರಿಯೆಂದು ಅವರಿಗೆ ಮನವರಿಕೆಯಾಗದೆ ಇರಲಿಲ್ಲ. ಆದ್ದರಿಂದ ತಾವು ಅನುಸರಿಸುತ್ತಿದ್ದ ತಾಟಸ್ಥ್ಯನೀತಿ ತ್ಯಜಿಸಿ, ಪೋಲೆಂಡಿಗೆ ರಕ್ಷಣೆಯ ಭರವಸೆ ನೀಡಿದರು.ಪೂರ್ವದ ಪ್ರಷ್ಯ ಪ್ರದೇಶವನ್ನು ತನ್ನ ಅಧೀನದಲ್ಲಿಟ್ಟುಕೊಳ್ಳಲು ಡ್ಯಾನ್ಜಿಗಳನ್ನೂ ಅದರ ಸುತ್ತಮುತ್ತಲಿನ ಪ್ರದೇಶವನ್ನೂ ತನಗೆ ಬಿಟ್ಟುಕೊಡಬೇಕೆಂದು ಹಿಟ್ಲರ್ ಪೋಲೆಂಡಿಗೆ ತಿಳಿಸಿದ. ಬಲಿಷ್ಠವಾದ ಜರ್ಮನಿಯೊಂದಿಗೆ ಸೆಣೆಸಿ ನಿಲ್ಲಲು ಸಾಮರ್ಥ್ಯವಿಲ್ಲದಿದ್ದರೂ ಬ್ರಿಟನ್ ಫ್ರಾನ್ಸ್‌ಗಳ ಭರವಸೆಯಿಂದ ಪೋಲೆಂಡ್ ಅವನ ಬೇಡಿಕೆಯನ್ನು ತಿರಸ್ಕರಿಸಿತು. ಈ ಮಧ್ಯೆ 1939 ಮೇ ತಿಂಗಳಿನಲ್ಲಿ ಜರ್ಮನಿ ಮತ್ತು ಇಟಲಿ ಪರಸ್ಪರ ರಕ್ಷಣಾ ಒಪ್ಪಂದ ಮಾಡಿಕೊಂಡವು. ಜರ್ಮನಿಯ ವಿರುದ್ಧ ಸಂಯುಕ್ತ ಕಾರ್ಯಾಚರಣೆಯಲ್ಲಿ ತೊಡಗಬೇಕೆಂದು ವಾದಿಸುತ್ತಿದ್ದ ಸೋವಿಯತ್ ವಿದೇಶಾಂಗ ಮಂತ್ರಿ ಲಿಟ್ವೀನಫ್ ರಾಜೀನಾಮೆ ಕೊಟ್ಟದ್ದರಿಂದ ಸೋವಿಯತ್ ಒಕ್ಕೂಟದ ಸಾಮೂಹಿಕ ಕಾರ್ಯಕ್ರಮಕ್ಕೆ ತಿಲಾಂಜಲಿ ಕೊಟ್ಟಂತಾಯಿತು. ಅಲ್ಲದೆ ಮ್ಯೂನಿಕ್ ಒಪ್ಪಂದದ ಸಮಯದಲ್ಲಿ ಬ್ರಿಟನ್ ತನ್ನನ್ನು ನಿರ್ಲಕ್ಷಿಸಿದ್ದನ್ನು ಸೋವಿಯತ್ ಒಕ್ಕೂಟ ಮರೆತಿರಲಿಲ್ಲ. ಆದ್ದರಿಂದ ಯುದ್ಧ ಸನ್ನಿಹಿತವಾದ ಸಮಯದಲ್ಲಿ, 1939 ಆಗಸ್ಟ್‌ 11ರಂದು, ಅದು ಜರ್ಮನಿಯೊಡನೆ ಪರಸ್ಪರ ಅನಾಕ್ರಮಣ ಕರಾರು ಮಾಡಿಕೊಂಡಿತು. ಸೋವಿಯತ್ ಒಕ್ಕೂಟದ ಈ ವರ್ತನೆ ವಿವಾದಾಸ್ಪದ ವಿಚಾರವಾಗಿದೆ. ಅದರ ಸತ್ಯವನ್ನು ಇತಿಹಾಸವೇ ಗುರುತಿಸಬೇಕಾಗಿದೆ. 1917ರ ಕ್ರಾಂತಿಯ ದಿನಗಳಿಂದ ಸೋವಿಯತ್ ಒಕ್ಕೂಟ ಹೊಸ ಸಮಾಜ ಸೃಷ್ಟಿಸುವ ಕಾರ್ಯದಲ್ಲಿ ತೊಡಗಿತ್ತು. ಆದ್ದರಿಂದಲೇ ಅದು ಒಂದನೆಯ ಮಹಾಯುದ್ಧ ದಿಂದ ನಿರ್ಗಮಿಸಿದ್ದು. ರಷ್ಯದಲ್ಲಿ ಮಾತ್ರವಲ್ಲದೆ ಯುರೋಪಿನ ಇತರ ರಾಷ್ಟ್ರಗಳಲ್ಲೂ ಈ ಕ್ರಾಂತಿ ಹರಡುವುದೆಂಬ ನಂಬಿಕೆ ಆ ದೇಶದ ನಾಯಕರಿಗಿತ್ತು. ಆದರೆ ಲೆನಿನ್ನ ಈ ಕನಸು ನನಸಾಗಲಿಲ್ಲ. ಅದಕ್ಕಾಗಿ ಒಂದನೆಯ ಮತ್ತು ಎರಡನೆಯ ಯುದ್ಧಗಳ ನಡುವಿನ ಕಾಲದಲ್ಲಿ ಇತರ ರಾಷ್ಟ್ರಗಳಲ್ಲಿ ಕ್ರಾಂತಿಯ ವಾತಾವರಣ ಮೂಡಿಸುವ ಕಾರ್ಯದಲ್ಲಿ ಅವರು ಮಗ್ನರಾಗಿದ್ದರು. ಆದರೆ ಕ್ರಾಂತಿಯ ತತ್ತ್ವ ಸಾಮೂಹಿಕ ಕಾರ್ಯಾಚರಣೆಗೆ ಅಡ್ಡಿಯುಂಟುಮಾಡಿತು. ಅಲ್ಲದೆ ಪಾಶ್ಚಾತ್ಯ ಪ್ರಜಾಪ್ರಭುತ್ವದ ರಾಷ್ಟ್ರಗಳಲ್ಲಿ ಸಾಮ್ರಾಜ್ಯದಾಹ ಹೆಚ್ಚಾಗಿದೆಯೆಂದು ಸೋವಿಯತ್ ನಾಯಕರು ಹೇಳತೊಡಗಿ, ಜರ್ಮನಿಯ ನಾಜಿûಸಂ ಮತ್ತು ಇಟಲಿಯ ಫ್ಯಾಸಿಸಂ ಹಾವಳಿಗಿಂತ ಸಾಮ್ರಾಜ್ಯಷಾಹಿಯೇ ಹೆಚ್ಚು ಹಾನಿಕರವೆಂದು ಪ್ರಚಾರ ಮಾಡಿದರು. ಸ್ಟಾಲಿನ್ ಒಂದು ಹೆಜ್ಜೆ ಮುಂದೆ ಹೋಗಿ, ಹಿಟ್ಲರ್ ತನ್ನ ಮಿತ್ರನೆಂಬಂತೆ ವ್ಯವಹರಿಸಿದ. ಆ ಸಮಯದಲ್ಲಿ ಜರ್ಮನಿಯನ್ನು ಎದುರು ಹಾಕಿಕೊಳ್ಳಲು ಆತ ಸಿದ್ಧವಿರಲಿಲ್ಲ. ಹಿಟ್ಲರನ ಸೇನೆಗಳು ರಷ್ಯದ ಕಡೆಗೆ ನುಗ್ಗಿದರೆ ಅದರಿಂದ ತಮಗೆ ಕ್ಷೇಮವೆಂದು ಪಶ್ಚಿಮದ ರಾಷ್ಟ್ರಗಳು ಬಗೆಯುವುವೆಂದೂ ಅವು ತನ್ನ ನೆರವಿಗೆ ಬರಲಾರವೆಂದೂ ಸೋವಿಯತ್ ಒಕ್ಕೂಟ ಭಾವಿಸಿತ್ತು. ಹೀಗಾಗಿ ಸೋವಿಯತ್ ಒಕ್ಕೂಟ ಮತ್ತು ಇತರ ರಾಷ್ಟ್ರಗಳು ಯುರೋಪಿನ ಸಮಸ್ಯೆಗಳ ನಿವಾರಣೆಯಲ್ಲಿ ಒಂದುಗೂಡಲಿಲ್ಲ. ಅವು ತಾಟಸ್ಥ್ಯನೀತಿ ಅನುಸರಿಸಿದವು. ಆದರೂ ಕೊನೆಯಲ್ಲಿ ಹಾನಿಯುಂಟಾಯಿತು. ಫ್ರಾನ್ಸಿನ ಪತನವಾಯಿತು. ಬ್ರಿಟನ್ ಮತ್ತು ಇಡೀ ನಾಗರಿಕ ಪ್ರಪಂಚವೇ ತೊಂದರೆಗೊಳಗಾಗಬೇಕಾಯಿತು. ಹಿಟ್ಲರ್ ಈ ವೇಳೆಗೆ ಬಲಶಾಲಿಯಾಗಿದ್ದ. ಜರ್ಮನಿಯ ಗಡಿಗಳು ಹಿಗ್ಗಿ ಸ್ಥಿರಗೊಂಡಿದ್ದುವು. ಆಗ ಆತನ ಮುಂದಿನ ಗುರಿ ಪೋಲೆಂಡಿನ ಆಕ್ರಮಣವೇ ಆಗಿತ್ತು. 1939 ಸೆಪ್ಟೆಂಬರ್ 1ರಂದು ಮುಂಜಾವಿನಲ್ಲಿ ಆತ ಅನೇಕ ಕಡೆಗಳಿಂದ ಜರ್ಮನ್ ಸೇನೆಗಳನ್ನು ಆ ರಾಷ್ಟ್ರದೊಳಗೆ ನುಗ್ಗಿಸಿದ. ಆಕ್ರಮಣದ ಎರಡು ದಿನಗಳ ಅನಂತರ ಇಂಗ್ಲೆಂಡ್ ಫ್ರಾನ್ಸ್‌ಗಳು ಜರ್ಮನಿಯ ಮೇಲೆ ಯುದ್ಧ ಘೋಷಿಸಿದುವು. ಆದರೂ ಪ್ರಯೋಜನವಾಗಲಿಲ್ಲ.

ಯುರೋಪ್‍ನಲ್ಲಿ ಯುದ್ಧ

[ಬದಲಾಯಿಸಿ]

ಸೆಪ್ಟೆಂಬರ್ 3ರಂದು ಬ್ರಿಟನ್ ಯುದ್ಧ ಘೋಷಿಸಿದಾಗ ಪ್ರಧಾನ ಮಂತ್ರಿ ಚೇಂಬರ್ಲಿನ್ ಭಾಷಣಮಾಡುತ್ತಾ, ದೂರದ ಒಂದು ನಗರಕ್ಕಾಗಿ ನಾವೀಗ ಹೋರಾಟ ನಡೆಸುತ್ತಿಲ್ಲ. ನ್ಯಾಯಕ್ಕೆ ಮತ್ತು ಪ್ರಜಾಸತ್ತೆಯ ಕ್ಷೇಮಕ್ಕೆ ಹೋರಾಡುತ್ತಿದ್ದೇವೆ. ಯುರೋಪಿನಲ್ಲಿ ಹಿಟ್ಲರಿಸಂ ನಾಶವಾಗುವ ತನಕ ಹೋರಾಡುತ್ತೇವೆ ಎಂದು ಹೇಳಿದ. ಬ್ರಿಟನ್ನ ಸೇನೆ ಫ್ರೆಂಚ್ ಸೇನೆಯೊಡಗೂಡಿ ವ್ಯೂಹವೊಂದನ್ನು ರಚಿಸಿಕೊಂಡಿತು. ಆದರೆ ಪೋಲೆಂಡಿನೊಂದಿಗೆ ಭೂಸಂಪರ್ಕವಿಲ್ಲದಿದ್ದುದರಿಂದ ಅದಕ್ಕೆ ಮಿತ್ರರಾಷ್ಟ್ರಗಳು ಯಾವ ವಿಧದಿಂದಲೂ ಸಹಾಯ ನೀಡಲು ಸಾಧ್ಯವಾಗಲಿಲ್ಲ. ಪೋಲೆಂಡಿನಲ್ಲಿ ಬಲಯುತ ಸೈನ್ಯವೇನೋ ಇತ್ತು. ಆದರೆ ಅಲ್ಲಿನ ಕೈಗಾರಿಕಾ ಉತ್ಪನ್ನ ಕಡಿಮೆಯಾಗಿದ್ದು ಸೇನೆಗೆ ಹೆಚ್ಚಿನ ಸಾಮಗ್ರಿಗಳನ್ನು ಸರಬರಾಜು ಮಾಡುವ ಸ್ಥಿತಿಯಲ್ಲಿರಲಿಲ್ಲ. ಅಲ್ಲದೆ ಆಧುನಿಕ ಶಸ್ತ್ರಾಸ್ತ್ರ್ರಗಳ ಕೊರತೆಯಿತ್ತು. ಆದರೂ ಪೋಲೆಂಡಿನ ನಾಯಕರು ದೇಶದ ಅಶ್ವಸೇನೆಯ ಶಕ್ತಿಯಲ್ಲಿ ನಂಬಿಕೆಯಿಟ್ಟು, ಅದರ ಮೂಲಕ ಜರ್ಮನ್ನರ ಸುಸಜ್ಜಿತ ಸೇನೆಯನ್ನು ಎದುರಿಸಿ ಸೋಲಿಸಬಹುದೆಂಬ ಭಾವನೆ ಹೊಂದಿದ್ದರು. ಅಲ್ಲದೆ ಅವರು ಜರ್ಮನಿಯ ವಾಯುಬಲವನ್ನು ಕಡೆಗಣಿಸಿದ್ದರು. ಪೋಲಿಷ್ ಸೈನ್ಯವೇನೋ ಯುದ್ಧರಂಗದಲ್ಲಿ ಮಹಾ ಪರಾಕ್ರಮದಿಂದ ಹೋರಾಡಿತು. ಆದರೆ ಪೋಲೆಂಡನ್ನು ರಕ್ಷಿಸುವ ಕಾರ್ಯದಲ್ಲಿ ಸರಿಯಾದ ಕ್ರಮಗಳನ್ನು ಅದರ ದಳಪತಿಗಳು ಕೈಗೊಂಡಿರಲಿಲ್ಲ. ಆದ್ದರಿಂದ ಜರ್ಮನ್ನರನ್ನು ತಡೆಗಟ್ಟಬಹುದಾದ ಅನೇಕ ಅವಕಾಶಗಳನ್ನು ಪೋಲೆಂಡ್ ಕಳೆದುಕೊಂಡಿತು. ಸೆಪ್ಟೆಂಬರ್ 3ರ ವೇಳೆಗೆ ಜರ್ಮನ್ನರು ಪೋಲೆಂಡಿನ ಮುಖ್ಯ ಪಟ್ಟಣಗಳನ್ನು ವಶಪಡಿಸಿಕೊಂಡಿದ್ದರೂ ಹತ್ತು ದಿನಗಳ ಯುದ್ದದ ಅನಂತರ ವಾರ್ಸಾನಗರ ಜರ್ಮನರ ವಶವಾಯಿತು. ಅದೇ ಸಮಯದಲ್ಲಿ ಪುರ್ವದಿಂದ ಸೋವಿಯತ್ ಸೇನೆಗಳು ನುಗ್ಗಿ ಪುರ್ವ ಪೋಲೆಂಡಿನ ಪೂರ್ವ ಭಾಗವನ್ನು ಆಕ್ರಮಿಸಿಕೊಂಡುವು. ಪೋಲೆಂಡ್ ರಾಷ್ಟ್ರ ಒಂದುಕಡೆ ಜರ್ಮನಿ ಮತ್ತೊಂದು ಕಡೆ ಸೋವಿಯತ್ ಒಕ್ಕೂಟ ಇವೆರಡರ ನಡುವೆ ಹಂಚಿಹೋಯಿತು. ಪೋಲೆಂಡಿನ ವಿಭಜನೆಯ ಅನಂತರ ಸೋವಿಯತ್ ದೇಶ ಬಾಲ್ಟಿಕ್ ದೇಶಗಳಾದ ಲಿಥುವೇನಿಯ, ಲಾಟ್ವಿಯ, ಎಸ್ಟೋನಿಯಗಳನ್ನು ತನ್ನ ರಕ್ಷಣಾ ವ್ಯವಸ್ಥೆಯಲ್ಲಿ ಸೇರಿಸಿಕೊಂಡು ತನ್ನ ರಕ್ಷಣೆಗೆ ಅಗತ್ಯವಾದ ಭಾಗಗಳನ್ನು ಬಿಟ್ಟುಕೊಡಬೇಕೆಂದು ಫಿನ್ಲೆಂಡನ್ನು ಕೇಳಿತು. ಅದಕ್ಕೆ ಫಿನ್ಲೆಂಡ್ ಒಪ್ಪಲಿಲ್ಲ. ಆದ್ದರಿಂದ ಸೋವಿಯತ್ ಸೇನೆ ಫಿನ್ಲೆಂಡಿಗೆ ನುಗ್ಗಿತು. ಇಂಗ್ಲೆಂಡ್ ಮತ್ತು ಫ್ರಾನ್ಸ್‌ಗಳ ಸಹಾನುಭೂತಿ ಫಿನ್ಲೆಂಡ್ ಕಡೆಗಿತ್ತು. ಫಿನ್ನರು ಶೌರ್ಯದಿಂದ ಹೋರಾಡಿದರೂ ಗೆಲ್ಲಲಾಗಲಿಲ್ಲ. 1940 ಮಾರ್ಚ್ 13ರಂದು ಫಿನ್ನರು ಶರಣಾಗತರಾಗಿ ಸೋವಿಯತ್ ಷರತ್ತುಗಳನ್ನೆಲ್ಲ ಒಪ್ಪಿದರು ದೀರ್ಘಕಾಲದ ಪುರ್ವಯೋಜನೆಯಿಲ್ಲದೆಯೇ ಹಿಟ್ಲರ್ ನಡೆಸಿದ ಆಕ್ರಮಣವೆಂದರೆ ನಾರ್ವೆ-ಡೆನ್ಮಾರ್ಕ್‍ಗಳ ಮೇಲಿನದು. ಆಗ ನಾರ್ವೆ ತಟಸ್ಥ ರಾಷ್ಟ್ರವಾಗಿತ್ತು. ಜರ್ಮನ್ ಹಡಗುಗಳು ನಾರ್ವೆ ತೀರದಲ್ಲಿ ಸುರಕ್ಷಿತವಾಗಿರಬಹುದೆಂದು ಭಾವಿಸಲಾಗಿತ್ತು. ಆದರೆ ಅದು ವಿದ್ಯಮಾನಗಳ ಮೇಲೆ ಕಣ್ಣಿಟ್ಟಿತ್ತು. ಹಿಟ್ಲರನ ಕೆಲವರು ಸಲಹೆಗಾರರು ನಾರ್ವೆಯ ಆಕ್ರಮಣ ಮಾಡಿಕೊಳ್ಳಬೇಕೆಂದು ಸಲಹೆ ಮಾಡಿದ್ದರು. ಜರ್ಮನಿಯ ಯುದ್ಧಕಾರ್ಯಾಚರಣೆಗೆ ನಾರ್ವೆಯ ನೆರೆಯ ರಾಜ್ಯವಾದ ಸ್ಪೀಡನ್ನಿನ ಉಕ್ಕು ಅಗತ್ಯವಾಗಿತ್ತು. ನಾರ್ವೆ ಬ್ರಿಟನ್ನ ವಶಕ್ಕೇನಾದರೂ ಹೋದರೆ ಈ ಸರಬರಾಜು ತಪ್ಪುವುದೆಂಬ ಅಂಜಿಕೆ ಜರ್ಮನಿಗೆ. ಬ್ರಿಟನ್ ನಾರ್ವೆ ತೀರದಲ್ಲಿದ್ದ ಜರ್ಮನ್ ಯುದ್ಧ ನೌಕೆಯೊಂದರ ಮೇಲೆರಗಿ ಅದರಲ್ಲಿದ್ದ ಯುದ್ಧ ಖೈದಿಗಳನ್ನು ಬಲವಂತದಿಂದ ವಶಪಡಿಸಿಕೊಂಡಾಗ ನಾರ್ವೆ ತನ್ನ ತಾಟಸ್ಥ್ಯ ನೀತಿಗೆ ಅನುಗುಣವಾಗಿ ಸುಮ್ಮನಿತ್ತು. ಬ್ರಿಟನ್ನಿನ ಕಾರ್ಯಾಚರಣೆಯಿಂದ ರೊಚ್ಚಿಗೆದ್ದ ಹಿಟ್ಲರ್ ನಾರ್ವೆ ಡೆನ್ಮಾರ್ಕುಗಳನ್ನು ಆಕ್ರಮಿಸಬೇಕೆಂದು ತತ್ಕ್ಷಣವೇ ತೀರ್ಮಾನಿಸಿದ. ಯಾವ ಸುಳಿವನ್ನೂ ಕೊಡದೆ ಜರ್ಮನ್ ಸೇನೆಗಳು ಈ ದೇಶಗಳನ್ನು ಮುತ್ತಿದವು. ಯುದ್ಧ ಮಾಡಲಾರದೆ ಡೆನ್ಮಾರ್ಕ್ ಅಧೀನವಾಯಿತು. ನಾರ್ವೆಯ ಅನೇಕ ನಗರಗಳಲ್ಲಿ ಜರ್ಮನ್ ಸೈನಿಕರು ಸೇರಿ ಪಿತೂರಿಗಾರರೊಡನೆ ಕಲೆತು ನಾರ್ವೆಯ ರಕ್ಷಣಾಕ್ರಮವನ್ನು ನಾಶಪಡಿಸಿದರು. ದೇಶಾಭಿಮಾನಿಗಳಾದ ನಾರ್ವೀಜಿಯನರು ಹೋರಾಟ ನಡೆಸಿದರೂ ಪ್ರಯೋಜನವೇನೂ ಆಗಲಿಲ್ಲ. ಮಿತ್ರಪಡೆಗಳ ಸಹಾಯ ಸಮಯಕ್ಕೆ ಸರಿಯಾಗಿ ಒದಗಲಿಲ್ಲ. ಹಿಟ್ಲರ್ ನಾರ್ವೆಯಲ್ಲಿ ಒಂದು ಕೈಗೊಂಬೆ ಸರ್ಕಾರ ರಚಿಸಿ ಮೇಜರ್ ಕ್ವಿಸ್ಲಿಂಗನನ್ನು ಅದರ ಮುಖ್ಯಸ್ಥನ್ನಾಗಿ ನೇಮಿಸಿದ. ರಾಷ್ಟ್ರದ್ರೋಹಿ ಕೈಗೊಂಬೆಗಳಿಗೆ ಕ್ವಿಸ್ಲಿಂಗ್ಗಳೆಂಬ ಹೆಸರು ಬಂದದ್ದು ಈ ಕ್ವಿಸ್ಲಿಂಗನ ನಡೆವಳಿಕೆಯಿಂದಲೇ. ಜರ್ಮನ್ನರು ಹೆಚ್ಚಿನ ಪುರ್ವಸಿದ್ದತೆಯಿಲ್ಲದೆ ಆತುರದ ಕ್ರಮವಾಗಿ ನಾರ್ವೆಯನ್ನು ಮುತ್ತದಿದ್ದರೆ ಬಹುಶಃ ಈ ಯುದ್ಧದ ಗತಿಯೇ ಬದಲಾಗುತ್ತಿತ್ತೇನೋ. ತಟಸ್ಥ ರಾಷ್ಟ್ರವೊಂದರ ಆಕ್ರಮಣ ನಡೆಸಿದ ಅಪವಾದವೂ ಅವರ ಅಪರಾಧಗಳ ಪಟ್ಟಿಗೆ ಸೇರಿಕೊಂಡಿದ್ದಷ್ಟೇ ಅಲ್ಲ : ಜರ್ಮನಿ ಸುಮ್ಮನಿದ್ದು ಮಿತ್ರ ರಾಷ್ಟ್ರಗಳೇ ನಾರ್ವೆಯನ್ನಾಕ್ರಮಿಸಿಕೊಳ್ಳಲು ಅವಕಾಶ ಕೊಟ್ಟಿದ್ದರೆ ಆಗ ಅದು ತನ್ನ ವಿಮಾನಪಡೆಯ ಸಾಮರ್ಥ್ಯವನ್ನು ಬಳಸಿಕೊಂಡು ಬ್ರಿಟನ್ನಿನ ನೌಕಾಪಡೆಯ ಮೇಲೆ ಎರಗಬಹುದಾಗಿತ್ತು. ನಾರ್ವೆಯಲ್ಲಿ ತಮ್ಮ ಆತ್ಮಗೌರವವನ್ನೂ ಕಳೆದುಕೊಳ್ಳಲೊಲ್ಲದ ಮಿತ್ರರಾಷ್ಟ್ರಗಳು ಅದಕ್ಕಾಗಿ ಬಲು ಹೆಚ್ಚಿನ ಬೆಲೆ ತೆರಬೇಕಾಗುತ್ತಿತ್ತು. ಜರ್ಮನ್ನರು ಡೆನ್ಮಾರ್ಕ್ ಹಾಗೂ ದಕ್ಷಿಣ ಸ್ಪೀಡನಿನ ಮೂಲಕ ಪ್ರತೀಕಾರಕ್ರಮ ಕೈಕೊಳ್ಳುವುದು ಅಸಾಧ್ಯವೇನೂ ಆಗುತ್ತಿರಲಿಲ್ಲ. ನಾರ್ವೆಗೆ ಯುದ್ಧ ಸರಬರಾಜನ್ನು ಕಡಿದುಹಾಕಿ ಮಿತ್ರರಾಷ್ಟ್ರಗಳನ್ನು ಪೇಚಿನಲ್ಲಿ ಸಿಕ್ಕಿಸುವ ಅವಕಾಶವನ್ನು ಜರ್ಮನಿ ಕಳೆದುಕೊಂಡಿತೆನ್ನಬಹುದು. ನಾರ್ವೆಯಲ್ಲಾದ ಪರಾಭವ ಇಂಗ್ಲೆಂಡಿನಲ್ಲಿ ಬಹಳ ಕೋಲಾಹಲವನ್ನುಂಟು ಮಾಡಿತು, ಪಾರ್ಲಿಮೆಂಟಿನ ಒತ್ತಾಯದ ಫಲವಾಗಿ ಚೇಂಬರ್ಲಿನ್ ಚರ್ಚಿಲನಿಗೆ ಬ್ರಿಟನ್ನಿನ ಪ್ರಧಾನಿಯ ಪದವಿ ಒಪ್ಪಿಸಿದ. ಪಾರ್ಲಿಮೆಂಟಿನ ಮೂರು ಪಕ್ಷಗಳ ಸಮ್ಮಿಶ್ರ ಸರ್ಕಾರ ರಚಿಸಿ, ಯುದ್ಧವನ್ನು ಯಶಸ್ವಿಯಾಗಿ ಕೊನೆಗೊಳಿಸಬೇಕೆಂದು ಚರ್ಚಿಲ್ ಫೋಷಿಸಿದ ದಿನವೇ (10 ಮೇ 1940) ಹಿಟ್ಲರನೂ ಪಶ್ಚಿಮ ಯುರೋಪ್ ದಂಡಯಾತ್ರೆ ಪ್ರಾರಂಭಿಸಿದ. ಜರ್ಮನಿಯ ಮಿತ್ರತ್ವದಲ್ಲಿ ನಂಬಿಕೆ ಇಟ್ಟಿದ್ದ ಸಣ್ಣ ರಾಷ್ಟ್ರಗಳಾದ ಹಾಲೆಂಡ್ ಮತ್ತು ಬೆಲ್ಜಿಯಂಗಳ ಮೇಲೆ ವಿಮಾನ ಪಡೆಯ ಮೂಲಕ ಮತ್ತು ಭೂಮಾರ್ಗವಾಗಿ ಆಕ್ರಮಣ ನಡೆಸಿದ. ಆಕ್ರಮಣವೆಲ್ಲವೂ ವಿದ್ಯುದ್ವೇಗದಲ್ಲಿ ಸಂಭವಿಸಿದವು. ಬೆಲ್ಜಿಯಂ ಮತ್ತು ಹಾಲೆಂಡಿನ ಸೈನ್ಯಗಳು ಒಂದುಗೂಡಬೇಕೆಂಬ, ಫ್ರೆಂಚ್ ಮತ್ತು ಬ್ರಿಟಿಷ್ ಪಡೆಗಳು ಅವುಗಳ ನೆರವಿಗೆ ಹೋಗಬೇಕೆಂಬ ಯೋಜನೆಯನ್ನು ರೂಪಿಸುವ ಮೊದಲೇ ಜರ್ಮನ್ನರು ಮುನ್ನುಗ್ಗಿ ಅಧಿಕ ಪ್ರಮಾಣದಲ್ಲಿ ತಮ್ಮ ಸೈನ್ಯವನ್ನು ಇಳಿಸಿ ಅಲ್ಲಿನ ಮುಖ್ಯಪಟ್ಟಣಗಳನ್ನು ನಾಶಮಾಡಿದರು; ಹಾಲೆಂಡಿನ ಮಧ್ಯಭಾಗವನ್ನಾಕ್ರಮಿಸಿ ಉತ್ತರ ದಕ್ಷಿಣಭಾಗಗಳನ್ನು ಪ್ರತ್ಯೇಕಿಸಿದರು. ಆಕ್ರಮಣ ನಡೆದ ಕೆಲವು ದಿನಗಳಲ್ಲಿ ಡಚ್ಚರು ಶರಣಾಗತರಾದರು. ಹಾಲೆಂಡ್‍ನ ಪತನಾನಂತರ ಬೆಲ್ಜಿಯಂ ಕಡೆ ಹಿಟ್ಲರನ ಸೇನೆಗಳು ನುಗ್ಗಿದವು. ಆ ಸೇನೆಗಳನ್ನು ತಡೆಯಲು ಬೆಲ್ಜಿಯಂಗೆ ಸಾಧ್ಯವಾಗಲಿಲ್ಲ. ಫ್ರಾನ್ಸ್‌ನ ಮ್ಯಾಜಿನೊ ರಕ್ಷಣಾ ಸಾಲು ಜರ್ಮನ್ ಗಡಿಯ ಉದ್ದಕ್ಕೂ ಹಬ್ಬಿತ್ತೇ ವಿನಾ ಬೆಲ್ಜಿಯಂ ಗಡಿಯತನಕ ಹಬ್ಬಿರಲಿಲ್ಲ. ಜರ್ಮನ್ನರು ತಮ್ಮ ವಿಮಾನ ಪಡೆಯಿಂದ ಬೆಲ್ಜಿಯಂ ರಕ್ಷಣಾ ವ್ಯೂಹವನ್ನು ಭೇದಿಸಿ, ಮಿತ್ರರಾಷ್ಟ್ರಗಳ ಪ್ರಯತ್ನವನ್ನು ವಿಫಲಗೊಳಿಸಿದರು. ಅವುಗಳ ಸೇನೆಗಳು ಅಲ್ಲಿಂದ ತಪ್ಪಿಸಿಕೊಳ್ಳುವುದೇ ಅಸಾಧ್ಯದ ಕೆಲಸವಾಯಿತು. ಬೆಲ್ಜಿಯಂ ಸೇನೆ ಸಾಮರ್ಥ್ಯದಿಂದ ಹೋರಾಡಿದರೂ ನಿರ್ನಾಮವಾಗುವ ಸ್ಥಿತಿಗೆ ಬಂದು ಮೇ 27ರಂದು ಜರ್ಮನಿಗೆ ಶರಣಾಗತವಾಗದೆ ಅನ್ಯಥಾ ಮಾರ್ಗವಿರಲಿಲ್ಲ. ಮಿತ್ರಸೇನೆಗಳು ಮುಂದಿನ ದಾರಿ ಕಾಣದೆ ಹಿಮ್ಮೆಟ್ಟಿ ಡನ್ಕರ್ಕ್ ರೇವುಪಟ್ಟಣವನ್ನು ಸೇರಿದವು. ಆಗ ಬ್ರಿಟಿಷ್ ನೌಕೆ ತನಗೆ ಸಾಧ್ಯವಾದ ಹಡಗು ದೋಣಿ ತೆಪ್ಪಗಳನ್ನೆಲ್ಲ ಉಪಯೋಗಿಸಿ, ಯುದ್ಧದಲ್ಲಿ ಸೋತು ಬಳಲಿ ಆಹಾರವಿಲ್ಲದೆ ಕಂಗೆಟ್ಟ ಬ್ರಿಟಿಷ್, ಫ್ರೆಂಚ್ ಮತ್ತು ಇತರ ಸೈನಿಕರನ್ನು ರಕ್ಷಿಸಿ ಬ್ರಿಟನ್‍ಗೆ ಕೊಂಡೊಯ್ದಿತು. ಯುದ್ಧದ ಇತಿಹಾಸದಲ್ಲಿ ಇದೊಂದು ಸಾಹಸದ ಸಾಧನೆ. ಈ ಕಾರ್ಯದಲ್ಲಿ ಸೈನಿಕರನ್ನು ಉಳಿಸಲು ಸಾಧ್ಯವಾಯಿತೇ ವಿನಾ ಯುದ್ಧಸಾಮಗ್ರಿಗಳನ್ನು ತರಲು ಸಾಧ್ಯವಾಗಲಿಲ್ಲ. 700 ಟ್ಯಾಂಕುಗಳನ್ನೂ 2400 ಫಿರಂಗಿಗಳನ್ನೂ 50,000 ಮೋಟಾರು ವಾಹನಗಳನ್ನೂ ಬ್ರಿಟನ್ ಕಳೆದುಕೊಂಡಿದ್ದರಿಂದ ಆದ ನಷ್ಟ ಅಪಾರ. ಈ ಪ್ರಕರಣದಲ್ಲಿ 13,000 ಸೈನಿಕರು ಪ್ರಾಣ ತೆತ್ತರು; ಮತ್ತೆ 40,000 ಜನ ಶತ್ರುವಿನ ಕೈಗೆ ಸಿಕ್ಕಿಬಿದ್ದರು. ಬೆಲ್ಜಿಯಂ ಜರ್ಮನಿಯ ವಶವಾಗುವ ವೇಳೆಗೆ ಫ್ರಾನ್ಸಿನ ಕಡೆ ಜರ್ಮನ್ನರು ನುಗ್ಗಿದರು. ಅಷ್ಟರೊಳಗಾಗಲೇ ಫ್ರಾನ್ಸ್‌ ತನ್ನ 30 ಸೈನಿಕ ಪಡೆಗಳನ್ನು ಯುದ್ಧದಲ್ಲಿ ಕಳೆದುಕೊಂಡಿತ್ತು. ಬ್ರಿಟಿಷ್ ಸೈನಿಕರು ಫ್ರಾನ್ಸ್‌ನಲ್ಲಿ ಹೆಚ್ಚಿನ ಪ್ರಮಾಣದಲ್ಲಿರಲಿಲ್ಲ. ಇಂಥ ಸಂದಿಗ್ಧ ಸನ್ನಿವೇಶದಲ್ಲಿ ಫ್ರೆಂಚರ ಸೇನಾಪತಿ ಜನರಲ್ ವೇಗಾನ್ ದೇಶದ ಸೈನಿಕ ಬಲವನ್ನು ಕ್ರೋಡೀಕರಿಸಿ, ಅದರ ಸ್ವಲ್ಪ ಭಾಗವನ್ನು ಮ್ಯಾಜಿನೊ ಸಾಲಿನ ರಕ್ಷಣೆಗೆ ಕಾದಿರಿಸಿದ. ಜನರಲ್ ವೇಗಾನ್ ರಣತಂತ್ರದಲ್ಲಿ ನಿಪುಣನೆಂದು ಕೀರ್ತಿ ಪಡೆದಿದ್ದರೂ ಆತನ ವ್ಯೂಹರಚನೆಯಾಗುವ ಮೊದಲೇ ಜರ್ಮನ್ ವಾಹನ ಪಡೆಗಳು ಸೋಮ್ ನದಿಯನ್ನೂ ರೂವಾನ್ ನಗರವನ್ನೂ ತಲುಪಿದ್ದವು. ಸೇನ್ ನದಿಯನ್ನು ದಾಟಿದ್ದು ಜೂನ್ 10 ರಂದು. ಆ ಸಮಭೂಮಿಯಲ್ಲಿ ಶತ್ರು ಸೇನೆಯನ್ನು ತಡೆಯುವುದು ಅಸಾಧ್ಯವಾಯಿತು. ರಾಜಧಾನಿಯಾದ ಪ್ಯಾರಿಸ್ ಕಡೆ ಧಾವಿಸಲು ಶತ್ರು ಸೇನೆಗಳಿಗೆ ಕಷ್ಟವಾಗಲಿಲ್ಲ. ಅಂದೇ ಮುಸೋಲಿನಿ ಫ್ರಾನ್ಸ್‌ ಮತ್ತು ಇಂಗ್ಲೆಂಡಿನ ಮೇಲೆ ಯುದ್ಧ ಘೋಷಿಸಿ ದಕ್ಷಿಣದ ಮಾರ್ಗವಾಗಿ ಫ್ರಾನ್ಸನ್ನು ಮುತ್ತಿದ. ಜೂನ್ 13ರಂದು ಪ್ಯಾರಿಸ್ಸನ್ನು ಅರಕ್ಷಿತ ನಗರವೆಂದು ಘೋಷಿಸಲಾಯಿತು. 14 ರಂದು ಜರ್ಮನ್ನರು ಪ್ಯಾರಿಸ್ ನಗರವನ್ನು ಪ್ರವೇಶಿಸಲು ಏನೂ ತೊಂದರೆಯಾಗಲಿಲ್ಲ. ಫ್ರಾನ್ಸಿನ ಕೀರ್ತಿಪ್ರತಿಷ್ಠೆಗಳು 15 ದಿನಗಳ ಯುದ್ಧದಲ್ಲಿಯೇ ಉಡುಗಿಹೋದವು. ಈ ಸಮಯದಲ್ಲಿ ಸೈನಿಕ ದಳಪತಿಗಳ ಬೆಂಬಲ ಪಡೆದ ವೇಗಾನ್ ಜರ್ಮನ್ನರೊಡನೆ ಹೋರಾಡಿ ನಾಶವಾಗುವ ಮೊದಲೇ ಶಾಂತಿ ಸಂಧಾನ ಮಾಡುವುದು ಉತ್ತಮ ಮಾರ್ಗವೆಂದು ಮಂತ್ರಿಮಂಡಲಕ್ಕೆ ಒತ್ತಾಯ ಮಾಡಿದ. ಇದಕ್ಕೊಪ್ಪದ ಫ್ರಾನ್ಸಿನ ಪ್ರಧಾನಿ ರೇನೋ ರಾಜಿನಾಮೆಯಿತ್ತ. ಅವನ ಸ್ಥಾನದಲ್ಲಿ ಪೇಟನ್ ಪ್ರಧಾನಿಯಾದ. ವೇಗಾನನ ಸಲಹೆಯನ್ನು ಒಪ್ಪಿ ತಾನು ಸಂಧಾನಕ್ಕಾಗಿ ಸಿದ್ಧವಿರುವುದಾಗಿ ಜೂನ್ 16ರಂದು ಪೇಟನ್ ಸರ್ಕಾರ ತಿಳಿಸಿತು. ಹಿಟ್ಲರನ ಷರತ್ತುಗಳೆಲ್ಲವನ್ನೂ ಪೇಟನನ ಸರ್ಕಾರ ಜೂನ್ 22ರಂದು ಒಪ್ಪಿತು. ಸೋತ ಜರ್ಮನ್ ಪ್ರತಿನಿಧಿಗಳು 1918ರಲ್ಲಿ ಯಾವ ಸ್ಥಳದಲ್ಲಿ ಶರಣಾಗತಿ ಪತ್ರಕ್ಕೆ ಸಹಿ ಹಾಕಿದ್ದರೋ ಅಲ್ಲೇ ಈಗ ಫ್ರೆಂಚ್ ಪ್ರತಿನಿಧಿಗಳು ಶರಣಾಗತಿಯ ಪತ್ರಕ್ಕೆ ರುಜು ಹಾಕಬೇಕಾಯಿತು. ಫ್ರಾನ್ಸ್‌ನ ಪತನದ ಅನಂತರ ಜರ್ಮನ್ನರ ಮುಂದಿನ ಗುರಿ ಬ್ರಿಟನ್ ಎಂದು ಎಲ್ಲರೂ ತಿಳಿದಿದ್ದರು. ಆದರೆ ಆಗ ಹಿಟ್ಲರ್ ಬ್ರಿಟನ್‍ನನ್ನು ವಶಪಡಿಸಿಕೊಳ್ಳುವ ಯಾವ ಯೋಜನೆಯನ್ನೂ ಹೊಂದಿರಲಿಲ್ಲ. ಏಕೆಂದರೆ, ಬ್ರಿಟನ್ನಿನ ರಕ್ಷಣಾ ವ್ಯವಸ್ಥೆ ಕುಸಿದಿದ್ದು, ಅದು ಯುದ್ಧ ಮುಂದುವರಿಸುವ ಸ್ಥಿತಿಯಲ್ಲಿರಲಿಲ್ಲವೆಂದೂ ಅಲ್ಲಿನ ಸರ್ಕಾರ ಆದಷ್ಟು ಬೇಗ ಜರ್ಮನ್ನರೊಂದಿಗೆ ಒಪ್ಪಂದ ಮಾಡಿಕೊಳ್ಳುವ ಆತುರದಲ್ಲಿದೆಯೆಂದೂ ಹಿಟ್ಲರ್ ತರ್ಕಿಸಿದ್ದ. ಆದ್ದರಿಂದಲೇ ಜರ್ಮನ್ ವಾಯುಪಡೆ ಅತ್ತ ಕಡೆ ಕಣ್ಣು ಹಾಯಿಸಬಾರದೆಂದು ಆಜ್ಞೆ ಮಾಡಿದ್ದ. ಯುದ್ಧ ಮುಂದುವರಿಸುವುದೇ ತನ್ನ ಧ್ಯೇಯವೆಂದು ಬ್ರಿಟಿಷ್ ಪ್ರಧಾನಿ ಚರ್ಚಿಲ್ ಘೋಷಿಸಿದಾಗಲೂ ಹಿಟ್ಲರ್ ಅದನ್ನು ಕೇವಲ ಬೆದರಿಕೆಯ ಕೂಗಾಟವೆಂದೂ ಬ್ರಿಟನ್ನಿನ ಅಶಕ್ತತೆಯ ಬಗ್ಗೆ ತನ್ನ ಅಭಿಪ್ರಾಯ ಸರಿಯೆಂದೂ ಸಾರಿದ. ಆದರೆ ಸ್ವಲ್ಪ ಕಾಲದಲ್ಲೇ ಆ ನಂಬಿಕೆ ನಂದಿಹೋಯಿತು. ಸುಮಾರು ಒಂದು ತಿಂಗಳ ಕಾಲ ಹಿಟ್ಲರ್ ಸುಮ್ಮನಿದ್ದ. ಆಮೇಲೆ ನಿಜಸ್ಥಿತಿ ಅರಿವಾಗಿ 1940 ಜುಲೈ 2ರಂದು ಬ್ರಿಟನ್ನ ಮೇಲೆ ಆಕ್ರಮಣ ನಡೆಸುವ ಕ್ರಮದ ವಿವರವನ್ನು ಮೊದಲ ಬಾರಿಗೆ ತನ್ನ ದಂಡನಾಯಕರೊಡನೆ ಹಿಟ್ಲರ್ ಚರ್ಚಿಸಿದ. ಆಗಸ್ಟ್‌ ಮಧ್ಯಭಾಗದ ವೇಳೆಗೆ ಸೈನ್ಯ ಸಿದ್ಧವಾಗಿರಬೇಕೆಂದು ಆಜ್ಞೆ ನೀಡಲಾಯಿತು. ಜರ್ಮನ್ ಸೇನೆ ಈ ಕಾರ್ಯಾಚರಣೆಯ ಬಗ್ಗೆ ವಿಶೇಷ ತರಬೇತಿ ಪಡೆಯದಿದ್ದರೂ ಬ್ರಿಟನ್ ವಿಸ್ತಾರವಾದ ಸಾಗರ ತೀರವನ್ನು ಹೊಂದಿದ್ದರಿಂದ ಅದನ್ನು ಘಾತಿಸಲು ಉತ್ತಮ ಅವಕಾಶವಿತ್ತು. ಆಕ್ರಮಣಕ್ಕೆ ಮೊದಲು ವಿಮಾನದಾಳಿ ನಡೆಸುವುದು ಜರ್ಮನಿಯ ಉದ್ದೇಶ. ಅದರಂತೆ ಎಡೆಬಿಡದೆ ಜರ್ಮನ್ ವಿಮಾನಗಳು ಇಂಗ್ಲೆಂಡಿನ ಮೇಲೆ ದಾಳಿ ನಡೆಸಿದವು. 1940 ಆಗಸ್ಟ್‌ 8ರಂದು ಆರಂಭವಾದ ದಾಳಿ ಅಕ್ಟೋಬರ್ ಕೊನೆಯತನಕ ನಿಲ್ಲಲಿಲ್ಲ. ಈ ವಿಮಾನ ಕದನಗಳಲ್ಲಿ ಜರ್ಮನಿಯ ವಿಮಾನಗಳು ವಿಶೇಷ ಸಂಖ್ಯೆಯಲ್ಲಿ ನಾಶವಾದವು. ಇಂಗ್ಲೆಂಡಿನ ಕಡೆ ಹತರಾದ ವಿಮಾನಚಾಲಕರ ಸಂಖ್ಯೆ 375. ಈ ಕದನದಲ್ಲಿ ಜರ್ಮನಿ ಮತ್ತು ಬ್ರಿಟನ್‍ಗಳ ಬಲಾಬಲಗಳ ಸತ್ತ್ವಪರೀಕ್ಷೆಯಾಗಿ ಇಂಗ್ಲೆಂಡ್ ಉಳಿದುಕೊಂಡಿತು. ಜರ್ಮನ್ ಬಾಂಬಿನ ಮಳೆ ಸುರಿಸಿದಾಗ ಇಂಗ್ಲಿಷರು ತಮ್ಮ ಅಮೂಲ್ಯವಸ್ತುಗಳನ್ನೂ ಹೆಂಗಸರು ಮಕ್ಕಳನ್ನೂ ಸುರಕ್ಷಿತ ಪ್ರದೇಶಗಳಿಗೆ ಸಾಗಿಸಿ ಸತತವಾಗಿ ಬೀಳುತ್ತಿದ್ದ ಬೆಂಕಿಯನ್ನು ಧೈರ್ಯದಿಂದ ಎದುರಿಸಿದರು. ಕಾರ್ಖಾನೆಗಳಲ್ಲಿ ಹರಿಕೇನ್, ಸ್ಪಿಟ್ಫೈರ್ ಎಂಬ ಯುದ್ಧವಿಮಾನಗಳನ್ನು ಅವು ತಯಾರಾಗಿ ಸಿದ್ದವಾಗುತ್ತಿದ್ದಂತೆಯೇ ಹಾರಿಸಿ ಶತ್ರುವಿನ ಉಪದ್ರವವನ್ನು ತಡೆಗಟ್ಟಲಾಯಿತು. ಬ್ರಿಟಿಷರ ಸಂಕಟವೇನೂ ಕಡಿಮೆಯಿರಲಿಲ್ಲ. ಅಪಾರ ನಷ್ಟ, ಆಹಾರದ ಅಭಾವ, ನಿರಂತರ ಸಾವುನೋವು ಈ ಯಾವುದಕ್ಕೂ ಎದೆಗೆಡದೆ ತಮ್ಮ ಒಳಗುದಿಗಳನ್ನು ಬದಿಗೊತ್ತಿ ಐಕಮತ್ಯದಿಂದ ಸೆಣಸಿ ನಿಂತು, ಅಮೆರಿಕ ಸಂಯುಕ್ತ ಸಂಸ್ಥಾನದಿಂದ ವಿಮಾನ, ಶಸ್ತ್ರಾಸ್ತ್ರ ಮತ್ತು ಆಹಾರ ಪದಾರ್ಥಗಳ ಸಹಾಯ ಪಡೆದು ಜಯಪ್ರದರಾದರು. ಆ 4 ತಿಂಗಳ ವಿಮಾನದಾಳಿಯಲ್ಲಿ ಬ್ರಿಟನ್ನಿನ ಜನತೆಗೆ ನರಕದ ಅನುಭವವಾಯಿತು. ಸು. 50,000 ಜನ ಸತ್ತರು; ಲಂಡನ್ ನಗರದಲ್ಲಿ ಸು. 11 ಲಕ್ಷ ಮನೆಗಳು ನೆಲಸಮವಾದವು. ಇಷ್ಟು ನಷ್ಟವಾದರೂ ಜರ್ಮನ್ ವಿಮಾನಗಳು ಬ್ರಿಟನ್ನ ಕೈಗಾರಿಕಾ ಕೇಂದ್ರಗಳನ್ನು ನಾಶಪಡಿಸುವುದರಲ್ಲಾಗಲಿ ಅದರ ವಾಯು ಬಲವನ್ನು ಕುಂಠಿತಗೊಳಿಸುವುದರಲ್ಲಾಗಲಿ ಗಣನೀಯ ಯಶಸ್ಸು ಪಡೆಯಲಿಲ್ಲ. ಬ್ರಿಟನ್ನ ಕದನ ವಿಶ್ವದ ಇತಿಹಾಸದಲ್ಲೆ ಚಿರಸ್ಮರಣೀಯ ಘಟನೆ. ಏಕೆಂದರೆ ಆ ಕದನದಲ್ಲಿ ಜಯಪ್ರದವಾಗಲು ಹಿಟ್ಲರ್ ಅನುಸರಿಸದ ತಂತ್ರವಿಲ್ಲ, ಉಪಯೋಗಿಸದ ಅಸ್ತ್ರವಿಲ್ಲ. ಇಷ್ಟಾದರೂ ಬ್ರಿಟನ್ನಿನ ಜನತೆ ಧೃತಿಗೆಡಲಿಲ್ಲ; ಅಪಾರ ಕಷ್ಟ ನಷ್ಟಗಳನ್ನು ಅನುಭವಿಸಿದ್ದರೂ ಶರಣಾಗತವಾಗಲಿಲ್ಲ. ಯುದ್ಧದ ಮೊದಲನೆಯ ಘಟ್ಟ ಮುಗಿದರೂ ಇಂಗ್ಲಿಷರನ್ನು ಸೋಲಿಸುವ ಭರವಸೆ ಹಿಟ್ಲರನಿಗೆ ಉಳಿಯಲಿಲ್ಲ.

ಆಫ್ರಿಕದಲ್ಲಿ ಕದನ

[ಬದಲಾಯಿಸಿ]

ಬ್ರಿಟನ್ ತನ್ನ ದ್ವೀಪದ ರಕ್ಷಣೆಗೆ ತೊಡಗಿದ್ದಾಗ ಉತ್ತರ ಆಫ್ರಿಕದಲ್ಲಿ ಅದರ ಸ್ವಾಸ್ಥ್ಯಗಳನ್ನು ಕಬಳಿಸಿಬೇಕೆಂದಿದ್ದ ಮುಸೋಲಿನಿ ತನ್ನ ಸೇನೆಯನ್ನು ಈಜಿಪ್ಟಿನ ಕಡೆಗೆ ನುಗ್ಗಿಸಿದ. ಬ್ರಿಟಿಷ್ ಸೋಮಾಲಿ ಲ್ಯಾಂಡ್ ಇಟಲಿಯ ವಶವಾಯಿತು. ಯುರೋಪಿನಲ್ಲಿ ಆಲ್ಬೇನಿಯವನ್ನು ಆಕ್ರಮಿಸಿ ಗ್ರೀಸ್ ದೇಶದ ಕಡೆಗೆ ನುಗ್ಗಿದಾಗ ಗ್ರೀಸ್‍ನ ಜನತೆ ಶೌರ್ಯದಿಂದ ಹೋರಾಡಿ ಶತ್ರುವನ್ನು ತಡೆದದ್ದೇ ಅಲ್ಲದೆ ಆಲ್ಬೇನಿಯ ಗಡಿ ದಾಟಿಸಿ ಹಿಮ್ಮೆಟ್ಟಿಸಿದರು. ಈಜಿಪ್ಟಿನಲ್ಲಿ ಮಧ್ಯಪ್ರಾಚ್ಯದ ಮಹಾಸೇನಾನಿ ಜನರಲ್ ವೇವಲ್ ಇಟಾಲಿಯನರನ್ನು ಎದುರಿಸಲು ತನ್ನ ಸೈನ್ಯವನ್ನು ಸಜ್ಜುಗೊಳಿಸಿದ. ಸು. 60 ದಿನಗಳ ಕಾಲ ಸತತವಾಗಿ ನಡೆದ ಕಾರ್ಯಾಚರಣೆಯಲ್ಲಿ ಇಟಲಿಯನ್ನರು ಸೋತು ಈಜಿಪ್ಟಿನ ಗಡಿ ತ್ಯಜಿಸಿದರು. ಜರ್ಮನ್ ಸೇನಾನಿಗಳೇ ವೇವಲ್ನನ್ನು ಬ್ರಿಟನ್‍ನ ಶ್ರೇಷ್ಠ ದಳಪತಿಯೆಂದು ಹೊಗಳಿದರು. ಅಲ್ಲಿನ ಕಾರ್ಯಾಚರಣೆಯಲ್ಲಿ ಭಾರತೀಯ ಸೈನಿಕರು ಶೌರ್ಯದಿಂದ ಹೋರಾಡಿ ಯಶಸ್ಸುಗಳಿಸಿದ ಕೀರ್ತಿ ಭಾರತೀಯ ಸೈನಿಕರಿಗೂ ಸಲ್ಲುತ್ತದೆ. ಅತ್ತ ಕಡೆ ಗ್ರೀಸ್ನಿಂದಲೂ ಇತ್ತಕಡೆ ಬ್ರಿಟಿಷ್ ಸೈನ್ಯದಿಂದಲೂ ಪರಾಭವಗೊಂಡ ಮುಸೋಲಿನಿಯ ನೆರವಿಗೆ ಜರ್ಮನಿ ಬಂತು. ಬಲ್ಗೇರಿಯ ಮತ್ತು ರೂಮೇನಿಯ ಆಕ್ರಮಣ ನಡೆಸಿ, ಯೂಗೊಸ್ಲಾವಿಯದ ಮೇಲೆ ಬಿದ್ದು ಅದರ ರಾಜಧಾನಿ ಬೆಲ್ಗ್ರೇಡಿನ ಮೇಲೆ ದಾಳಿ ನಡೆಸಿತು. ಆಲ್ಬೇನಿಯದಲ್ಲಿ ಯುದ್ಧ ಮಾಡುತ್ತಿದ್ದ ಗ್ರೀಕರನ್ನು ಎದುರಿಸಿ ಜರ್ಮನ್ನರು ಆ ಕಾರ್ಯಾಚರಣೆಯಲ್ಲಿ ಜಯಪ್ರದರಾದರು. ಶೂರ ಗ್ರೀಕ್ ಸೈನ್ಯ ಶರಣಾಗತವಾಯಿತು. ಗ್ರೀಕರ ನೆರವಿಗೆ ಹೋದ ಬ್ರಿಟಿಷ್ ಸೇನೆಯ ಸ್ಥಿತಿ ಶೋಚನೀಯವಾಯಿತು. ಉತ್ತರ ಆಫ್ರಿಕದಲ್ಲಿ ವೇವೆಲ್ ಜಯಶೀಲನಾಗಿದ್ದರೂ ಅವನಿದ್ದ ಪ್ರದೇಶಗಳ ಹಿಂಭಾಗದಲ್ಲಿ ಇಟಾಲಿಯನ್ ಸೇನೆಗಳು ಇದ್ದೇ ಇದ್ದವು. ವೇವಲ್ನ ಒಂದು ಪಡೆ ಎರಿಟ್ರಿಯದ ಮೇಲೂ ಇನ್ನೊಂದು ದಕ್ಷಿಣ ಸೋಮಾಲಿ ಲ್ಯಾಂಡಿನ ಮೇಲೂ ನುಗ್ಗಿ ಇಟಾಲಿಯನ್ ಸೇನೆಗಳಿಗೆ ನಷ್ಟವುಂಟುಮಾಡಿದುವು. ಮುಸೋಲಿನಿಯ ಆಕ್ರಮಣಕ್ಕೆ ತುತ್ತಾಗಿದ್ದ ಇಥಿಯೋಪಿಯ 5 ವರ್ಷಗಳ ಅನಂತರ ವೇವೆಲ್ನ ಕಾರ್ಯಾಚರಣೆಯಿಂದ ವಿಮೋಚನೆ ಹೊಂದಿತು. ಉತ್ತರ ಆಫ್ರಿಕದಲ್ಲಿ ಬ್ರಿಟಿಷ್ ಸೇನೆಯ ಸಂಖ್ಯೆ ಕಡಿಮೆಯಾಗಿದ್ದ ಆ ಸಮಯದಲ್ಲಿ ಜರ್ಮನ್ನರು ಲಿಬಿಯದಲ್ಲಿ ದೊಡ್ಡ ಟ್ಯಾಂಕುಗಳ ಸೇನೆ ಇಳಿಸಿ, ಸಿಸಿಲಿಯಲ್ಲಿ ದೊಡ್ಡ ವಿಮಾನ ಪಡೆಯನ್ನು ಕೂಡಿಸಿ ದಾಳಿ ನಡೆಸಿದರು. ಈ ಕಾರ್ಯಾಚರಣೆಯಿಂದ ವೇವಲ್ನ ಸೇನೆ ಕರಗಿತು. ಬ್ರಿಟಿಷರ ಶ್ರೇಷ್ಠ ದಳಪತಿಗಳು ಜರ್ಮನ್ನರ ಸೆರೆಯಾಳುಗಳಾದರು. ಸಿಸಿಲಿಯಿಂದ ಜರ್ಮನ್ ವಿಮಾನಗಳು ದಾಳಿ ನಡೆಸಿದ್ದರಿಂದ ಬ್ರಿಟಿಷ್ ನೌಕೆಗಳು ಆ ಭಾಗದಲ್ಲಿ ಚಲಿಸುವುದೇ ದುಸ್ತರವಾಯಿತು. ಇಷ್ಟಾದರೂ ಮಿತ್ರಪಕ್ಷ ಆಫ್ರಿಕದಲ್ಲಿ ಪಡೆದುಕೊಂಡಿದ್ದ ಪ್ರದೇಶಗಳನ್ನು ಜರ್ಮನಿ ಕಸಿದುಕೊಳ್ಳಲು ಸಾಧ್ಯವಾಗಲಿಲ್ಲ. ಈ ಮಧ್ಯೆ ಹಿಟ್ಲರ್ ತನ್ನ ಯುದ್ಧನೀತಿಯನ್ನು ಬದಲಾಯಿಸಿದ, ಇಂಗ್ಲೆಂಡನ್ನು ಸೋಲಿಸಲಾರದೆ, ಯುರೋಪಿನ ಪುರ್ವ ರಾಷ್ಟ್ರಗಳ ಕಡೆ ತಿರುಗಿ ಸಣ್ಣ ರಾಷ್ಟ್ರಗಳನ್ನು ವಶಪಡಿಸಿಕೊಂಡು ಹಠಾತ್ತನೆ 1941 ಜೂನ್ 22ರಂದು ತನ್ನ ಸುಸಜ್ಜಿತ ಸೇನೆಯನ್ನು ಸೋವಿಯತ್ ಒಕ್ಕೂಟದ ಕಡೆಗೆ ತಿರುಗಿಸಿದ. ಅಂದೇ ಚರ್ಚಿಲ್ ಘೋಷಣೆಯೊಂದರಲ್ಲಿ ರಷ್ಯದ ನೆರವಿಗೆ ಬ್ರಿಟನ್ ಸಿದ್ಧವಿರುವುದಾಗಿ ತಿಳಿಸಿ, ಅಮೆರಿಕ ಸಂಯುಕ್ತ ಸಂಸ್ಥಾನವು ಅದರ ಬೆಂಬಲಕ್ಕೆ ಬರುವಂತೆ ಮಾಡಿದ. ಹಿಟ್ಲರ್ ಸೋವಿಯತ್ ಒಕ್ಕೂಟದ ಮೇಲೆ ಅನಿರೀಕ್ಷಿತ ದಾಳಿ ನಡೆಸಿದಾಗ ಇತಿಹಾಸದ ಪಥವೇ ಬದಲಾಯಿತೆನ್ನಬಹುದು. ಹಿಂದೆ ನೆಪೋಲಿಯನ್ ಅನುಭವಿಸಿದ ತೇಜೋವಧೆಯಂತೆ ಹಿಟ್ಲರನಿಗೂ ಅದೇ ರೀತಿಯ ಅನುಭವ ಉಂಟಾಯಿತು. ಹಿಟ್ಲರ್ ತನ್ನ ಸೈನ್ಯವನ್ನು ಪುರ್ವದ ಕಡೆ ತಿರುಗಿಸಿದಾಗ ಬ್ರಿಟನ್ನಿನ ಸ್ಥಿತಿ ಸುಧಾರಿಸಿತೆನ್ನಬಹುದು. ಹಿಟ್ಲರನಾದರೋ ಸೋವಿಯತ್ ದೇಶವನ್ನು ಸೋಲಿಸುವ ಧ್ಯೇಯವನ್ನು ಮೊದಲಿಂದಲೇ ಹೊಂದಿದ್ದ. 1939ರಲ್ಲಿ ಸೋವಿಯತ್ ಒಕ್ಕೂಟದೊಡನೆ ಯುದ್ಧ ವಿರುದ್ಧ ಒಪ್ಪಂದ ಮಾಡಿಕೊಂಡಿದ್ದು ಕೇವಲ ತಾತ್ಕಾಲಿಕವೆಂದು ಹಿಟ್ಲರ್ ಭಾವಿಸಿದ್ದ. ಏಕೆಂದರೆ ಆತ ಮೊದಲಿಂದಲೂ ಬಾಲ್ಷೆವಿ¸óïಂನ ವಿರೋಧಿಯಾಗಿದ್ದು 1939ರ ಅನಂತರದ ಸ್ಟಾಲಿನನ ನಡೆವಳಿಕೆಯ ಬಗ್ಗೆ ಸಂಶಯ ಹೊಂದೇ ಇದ್ದ. ಸೋವಿಯತ್ ಒಕ್ಕೂಟದ ಮೇಲೆ ಯುದ್ಧ ಮಾಡುವ ನಿರ್ಧಾರ ಮಾಡಿ ಸರಿಯಾದ ಸಮಯಕ್ಕಾಗಿ ಕಾಯುತ್ತಿದ್ದ. ಅಂಥ ಸಮಯ 1941 ಜೂನ್ 22ರಂದು ಒದಗಿದಾಗ ಹಿಟ್ಲರ್ ಅದರ ಮೇಲೆ ತನ್ನ ಸೇನೆಗಳನ್ನು ನುಗ್ಗಿಸಿದ. ಸೋವಿಯತ್-ಜರ್ಮನ್ ಯುದ್ಧವನ್ನು ಮಹಾಬಲರ ಯುದ್ಧವೆಂದು ಕರೆಯಲಾಗಿದೆ. ಯುದ್ಧತಂತ್ರದಲ್ಲಿ ನೈಪುಣ್ಯ ಪಡೆದಿದ್ದ, ಅದುವರೆಗೆ ನಡೆದ ಕದನಗಳಲ್ಲಿ ಜಯಶೀಲರಾಗಿದ್ದ ಜರ್ಮನ್ ಸೈನಿಕರಿಗೆ ಸೋವಿಯತ್ ಒಕ್ಕೂಟವನ್ನು ಸೋಲಿಸುವ ಕಾರ್ಯ ಕಷ್ಟವೆನಿಸಲಿಲ್ಲ. ಯುದ್ಧದ ಪ್ರಾರಂಭದಲ್ಲಿ ಅವರ ಕೈಯೇ ಮೇಲಾಗಿತ್ತು. ಹೊರವಲಯದ ಬಾಲ್ಟಿಕ್ ರಾಷ್ಷ್ರಗಳಲ್ಲಿ, ಪುರ್ವ ಪೋಲೆಂಡ್ ಮತ್ತು ಬೆಸ್ಸರೇಬಿಯಗಳಲ್ಲಿ ಸೋವಿಯತ್ ಒಕ್ಕೂಟ ನಿರ್ಮಿಸಿಕೊಂಡಿದ್ದ ರಕ್ಷಣಾ ಪಂಕ್ತಿಗಳು ಅಲ್ಲೆಲ್ಲ ನಡೆದ ಘೋರ ಕಾಳಗಗಳಲ್ಲಿ ಕುಸಿದುಬಿದ್ದುವು. ಜರ್ಮನ್ ಸೈನಿಕರು ಬಯಲು ಪ್ರದೇಶವಾದ ರಷ್ಯದ ಒಳಪ್ರಾಂತ್ಯಗಳಲ್ಲಿ ಪ್ರಸರಿಸಿ ಕೀಯೆಫ್, ಕಾರ್ಕೋಫ್ ನಗರಗಳನ್ನು ವಶಪಡಿಸಿಕೊಂಡು ಲೆನಿನ್‍ಗ್ರಾಡ್‍ನ್ನೂ ರಾಜಧಾನಿಯಾದ ಮಾಸ್ಕೋ ನಗರವನ್ನೂ ಸುತ್ತುಗಟ್ಟಿ ದಕ್ಷಿಣದಲ್ಲಿ ಡೊನೆಡ್ಸ್‌ ನದೀಪಾತ್ರವನ್ನು ವಶಪಡಿಸಿಕೊಂಡು ಡಾನ್ ನದೀತೀರದ ರಾಸ್ಟಾವ್ ನಗರ ಪ್ರವೇಶಿಸಿದರು. ಆದರೆ ಸೋವಿಯತ್‍ರು ಎದೆಗುಂದಲಿಲ್ಲ. ಶೌರ್ಯದಿಂದ ಕಾದಾಡಿ ರಾಸ್ಟಾವನ್ನು ಮತ್ತೆ ಸ್ವಾಧೀನ ಪಡಿಸಿಕೊಂಡರು. ಆದರೆ ಆ ವೇಳೆಗೆ ಅನೇಕ ಲಕ್ಷ ಚದರ ಕಿಮೀಗಳ ರಷ್ಯನ್ ಭೂಮಿ ಜರ್ಮನ್ನರ ವಶವಾಗಿತ್ತು. ಜರ್ಮನ್ನರು ಅಗಾಧ ಸಂಖ್ಯೆಯಲ್ಲಿ ಟ್ಯಾಂಕುಗಳನ್ನೂ ವಿಮಾನ ಬಲವನ್ನೂ ಉಪಯೋಗಿಸಿ ಉಕ್ರೇನ್ ಪ್ರದೇಶದತ್ತ ನುಗ್ಗಿದರು. ಕೈಗಾರಿಕಾ ಕೇಂದ್ರವಾದ ಉಕ್ರೇನ್ ಶತ್ರುವಶವಾದದ್ದು ಸೋವಿಯತ್ ಒಕ್ಕೂಟಕ್ಕೊದಗಿದ ದೊಡ್ಡ ವಿಪತ್ತು. ಆ ಪ್ರದೇಶ ಕೈಬಿಟ್ಟಿದ್ದರಿಂದ ಸೋವಿಯತ್‍ರು ಯೂರಲ್ ಪ್ರಾಂತ್ಯದ ಕೈಗಾರಿಕೆಗಳನ್ನೂ ಬ್ರಿಟನ್ ಮತ್ತು ಅಮೆರಿಕ ಸಂಯುಕ್ತ ಸಂಸ್ಥಾನ ಕಳುಹಿಸುತ್ತಿದ್ದ ಯುದ್ಧ ಸಾಮಗ್ರಿಗಳನ್ನೂ ಅವಲಂಬಿಸಬೇಕಾಯಿತು. ಸೋವಿಯತ್-ಜರ್ಮನ್ ಯುದ್ಧ ಇನ್ನೂ ವಿಸ್ತಾರಗೊಂಡಿತು. ಅತ್ತಕಡೆ ಜಪಾನ್ ಜರ್ಮನ್ ದಿಗ್ವಿಜಯದಿಂದ ಉತ್ಸಾಹಗೊಂಡು 1941 ಡಿಸೆಂಬರ್ 7ರಂದು ಹವಾಯಿ ದ್ವೀಪದಲ್ಲಿನ ಪರ್ಲ್ ಹಾರ್ಬರಿನಲ್ಲಿ ಅಮೆರಿಕದ ದೊಡ್ಡ ನೌಕಾಪಡೆಯ ಮೇಲೆ ಹಠಾತ್ತನೆ ದಾಳಿ ನಡೆಸಿದಾಗ ಅವರ ಅನೇಕ ಹಡಗುಗಳು ನಾಶಗೊಂಡುವು. ಇದರಿಂದ ಅಮೆರಿಕ ಸಂಯುಕ್ತ ಸಂಸ್ಥಾನದ ನೌಕಾಬಲ ಕುಂಠಿತವಾಯಿತೆನ್ನಬಹುದು. ಇದಾದ ಮೂರು ದಿನಗಳ ಅನಂತರ ಬ್ರಿಟಿಷರ ಪ್ರಸಿದ್ಧ ಯುದ್ಧ ನೌಕೆಗಳಾದ ಪ್ರಿನ್ಸ್‌ ಆಫ್ ವೇಲ್ಸ್‌ ಮತ್ತು ರಿಪಲ್ಸ್‌ ಜಪಾನೀಯರ ಬಾಂಬುಗಳಿಗೀಡಾಗಿ ಮುಳುಗಿ ಹೋದವು. ಇದರಿಂದ ಪೆಸಿಫಿಕ್ ಮತ್ತು ಆಗ್ನೇಯ ಪ್ರದೇಶಗಳಲ್ಲಿ ಜಪಾನ್ ತನ್ನ ಆಕ್ರಮಣ ನಡೆಸಲು ಸುಲಭವಾಯಿತು. ಹಾಂಗ್ಕಾಂಗ್, ಮಲಯ ಮತ್ತು ಸಿಂಗಪುರಗಳು ಒಂದರ ಮೇಲೊಂದರಂತೆ ಜಪಾನೀಯರ ವಶವಾದವು. ಅಮೆರಿಕ ಸಂಯುಕ್ತ ಸಂಸ್ಥಾನಕ್ಕೆ ಸೇರಿದ್ದ ಫಿಲಿಪೀನ್ ದ್ವೀಪಸಮುದಾಯದಲ್ಲಿ ಜನರಲ್ ಮೆಕಾರ್ಥರನ ನಾಯಕತ್ವದಲ್ಲಿ ಹೋರಾಟ ನಡೆಸಿದರೂ ಅದಕ್ಕೆ ಹೊಸ ಸೇನೆಯ ಬೆಂಬಲ ಬಾರದೆ ಹೋದ ಪ್ರಯುಕ್ತ ಆ ಸೇನೆಯೂ ಶತ್ರುವಿನ ವಶವಾಯಿತು. ಬಂಗಾಲದ ಗಡಿ ತನಕ ಮಯನ್ಮಾರ್ನ್ನಾಕ್ರಮಿಸಿ ಮಯನ್ಮಾರ್ ರಸ್ತೆ ಹಿಡಿದುಕೊಂಡು ಚೀನವನ್ನು ಬೇರ್ಪಡಿಸಿ, ಅದಕ್ಕೆ ಹೊರಗಿನ ಸಂಪರ್ಕವೇ ಇಲ್ಲದಂತೆ ಮಾಡಿದ ಜಪಾನೀಯರು ತತ್ಕಾಲದಲ್ಲಿ ಅಜೇಯರೆನಿಸಿಕೊಂಡಿದ್ದರು. ಪರ್ಲ್ ಹಾರ್ಬರ್ ಪ್ರಕರಣದ ಅನಂತರ ಅಮೆರಿಕ ಸಂಯುಕ್ತ ಸಂಸ್ಥಾನ ಯುದ್ಧ ಘೋಷಣೆ ಮಾಡಿದಾಗ, ಜರ್ಮನ್ನರ ಜಲಾಂತರ್ಗಾಮಿ ನೌಕೆಗಳ ಹಾವಳಿ ಅಷ್ಟಿಷ್ಟಲ್ಲ. ಅನೇಕ ಜಲಾಂತರ್ಗಾಮಿಗಳು ದೂರದ ಅಮೆರಿಕ ತೀರದವರೆಗೂ ಪೂರ್ವದಲ್ಲಿ ಭಾರತದವರೆಗೂ ಸಂಚರಿಸಿ ಅನೇಕ ಹಡಗುಗಳನ್ನು ಮುಳುಗಿಸಿದವು. ಅತ್ತಕಡೆ ಜರ್ಮನ್-ಸೋವಿಯತ್ ಯದ್ಧದಲ್ಲಿ ಸೋವಿಯತ್‍ರು ಚಳಿಗಾಲದ ಅವಕಾಶವನ್ನು ಉಪಯೋಗಿಸಿಕೊಂಡು ಜರ್ಮನ್ನರ ಮೇಲೂ ಅವರ ಸಂಚಾರ ವ್ಯವಸ್ಥೆಗಳ ಮೇಲೂ ದಾಳಿ ನಡೆಸಿ ಅಪಾರ ಹಾನಿಯನ್ನುಂಟುಮಾಡಿದರು. ಜರ್ಮನ್ನರ ಸೇನೆ ಬಹಳ ಇಕ್ಕಟ್ಟಿನ ಪರಿಸ್ಥಿತಿಯಲ್ಲಿದ್ದಾಗ, ಹಿಟ್ಲರನೇ ಸಮಸ್ತ ಸೇನಾ ನಾಯಕತ್ವವನ್ನು ವಹಿಸಿಕೊಂಡಿದ್ದರಿಂದ ಅವರಿಗೆ ಸ್ಫೂರ್ತಿ ಬಂದಂತಾಗಿತ್ತು. ಲೆನಿನ್‍ಗ್ರಾಡ್ ಅನ್ನು ವಶಪಡಿಸಿ ಕೊಳ್ಳುವುದೇ ಜರ್ಮನ್ ಸೇನೆಯ ಗುರಿ, ಭೂಭಾಗದಿಂದ ಎಲ್ಲ ಕಡೆಗಳಿಂದಲೂ ಆ ಪಟ್ಟಣವನ್ನು ಮುತ್ತಿದ್ದರು. ಆಹಾರವಿಲ್ಲದೆ, ಯುದ್ಧ ಸಾಮಗ್ರಿಗಳಿಲ್ಲದೆ ಸತತವಾಗಿ ಜರ್ಮನ್ನರ ಫಿರಂಗಿ ಏಟಿಗೆ ತುತ್ತಾಗಿದ್ದ ಲೆನಿನ್ಗ್ರಾಡಿನೊಂದಿಗೆ ಸರ್ಕಾರ ನೇರ ಸಂಪರ್ಕ ಬೆಳೆಸಿ, ಆಹಾರ ಮತ್ತು ಯುದ್ಧ ಸಾಮಗ್ರಿಗಳನ್ನು ಸರಬರಾಜುಮಾಡಿದರು. ಹಿಮಗಾಲ ಕಳೆದಾಗ ಸೋವಿಯತ್ ಸೇನೆಗಳು ಅಪಜಯ ಅನುಭವಿಸ ಬೇಕಾಯಿತು. 1942 ಮೇ ತಿಂಗಳಲ್ಲಿ ಕಾರ್ಕೊಫ್ ನಗರವನ್ನು ಮರಳಿ ಹಿಡಿಯುವ ಪ್ರಯತ್ನವೂ ಫಲಿಸಲಿಲ್ಲ. ದಕ್ಷಿಣದಲ್ಲಿ ಜರ್ಮನ್ನರು ಸೆವಾಸ್ಟೊಪೋಲ್ ಕ್ರಿಮಿಯಗಳನ್ನು ವಶಪಡಿಸಿಕೊಂಡು, ತಮ್ಮ ಸ್ಥಾನ ಭದ್ರಗೊಳಿಸಿ, ಡೊನೆಟ್ಸ್‌ ಮತ್ತು ಡಾನ್ ನದಿಗಳ ಮಧ್ಯ ಪ್ರದೇಶದಲ್ಲಿ ಮುನ್ನುಗ್ಗಿದರು. ಅಲ್ಲಿ ಸೇನೆ ಇಬ್ಭಾಗವಾಯಿತು. ಒಂದು ಭಾಗದ ಗುರಿ ದಕ್ಷಿಣ ಕಾಕಸಸ್ ಆದರೆ ಮತ್ತೊಂದಕ್ಕೆ ವೋಲ್ಗಾತೀರದ ಕೈಗಾರಿಕಾನಗರ ಸ್ಟಾಲಿನ್‍ಗ್ರಾಡ್ ಗುರಿ. ಇಲ್ಲಿ ಭಯಂಕರ ಯುದ್ಧವಾಗಿ ಒಂದೊಂದು ಹೆಜ್ಜೆ ಮುಂದುವರಿಯಲೂ ಉಭಯ ಪಕ್ಷಗಳಲ್ಲೂ ಸಾವಿರಾರು ಜನ ಸತ್ತರು. ಎರಡನೆಯ ಮಹಾಯುದ್ಧದಲ್ಲಿ ಸ್ಟಾಲಿನ್ಗ್ರಾಡ್ ಯುದ್ಧವೇ ಎರಡನೆಯ ಮಹಾ ಘಟ್ಟ. ಆ ನಗರ ಹಿಟ್ಲರನ ವಶವಾಗಿದ್ದರೆ ಮುಂದೆ ಜರ್ಮನ್ನರನ್ನು ತಡೆಯಲು ಸಾಧ್ಯವಾಗುತ್ತಿರಲಿಲ್ಲ. ಸೋವಿಯತರು ಯುದ್ಧ ಮುಂದುವರಿಸಲಾಗುತ್ತಿರಲಿಲ್ಲ. ಜರ್ಮನ್ನರು ನಿರಂತರವಾಗಿ ಮುನ್ನುಗ್ಗಿ ಸೂಯೆಜ್ ಕಾಲುವೆಯನ್ನು ವಶಪಡಿಸಿಕೊಂಡು ಭಾರತಕ್ಕೆ ಕೂಡ ಬರಬಹುದಾಗಿತ್ತು. ಯೂರಲ್ ಪರ್ವತಪ್ರದೇಶದ ಕೈಗಾರಿಕೆಗಳೆಲ್ಲ ಅವರ ವಶವಾಗುತ್ತಿದ್ದುವು. ಆದರೆ ಇದೊಂದೂ ಸಾಧ್ಯವಾಗಲಿಲ್ಲ. ಏಕೆಂದರೆ ಸುಸಜ್ಜಿತ ಸೋವಿಯತ್ ಸೇನೆ 5 ತಿಂಗಳ ಸತತ ಕದನದ ಅನಂತರ, ಶತ್ರುವಿಗೆ ಏನೊಂದೂ ಸುಳಿವು ಕೊಡದೆ ವೋಲ್ಗಾ ನದಿ ದಾಟಿ, ಶತ್ರು ಸೇನೆಯನ್ನು ಸುತ್ತುಗಟ್ಟಿ ಹಠಾತ್ತನೆ ಅದರ ಮೇಲೆ ಬಿತ್ತು. ಈ ಆಕ್ರಮಣವನ್ನು ಜರ್ಮನ್ನರು ನಿರೀಕ್ಷಿಸಿರಲಿಲ್ಲ. 1943ರ ಜನವರಿ 31ರಂದು ಜರ್ಮನ್ನರು ಅಧಿಕ ಸಂಖ್ಯೆಯಲ್ಲಿ ಶರಣಾಗತರಾದರು. ಉಳಿದ ರಂಗಗಳಲ್ಲೂ ಸೋವಿಯತ್‍ರು ಜಯ ಗಳಿಸಿದರು, ಕಾಕಸಸ್ ಕಡೆಗೆ ನುಗ್ಗಿದ್ದ ಜರ್ಮನ್ ಸೇನೆ ವಿಪತ್ತನ್ನು ಎದುರಿಸಬೇಕಾಯಿತು. ಹೀಗಾಗಿ ಡಾನ್ ಪ್ರದೇಶ, ವೋಲ್ಗಾ ತೀರ ಮತ್ತು ಕಾಕಸಸ್ ಪರ್ವತ ಪ್ರದೇಶಗಳು ಶತ್ರುವಿನಿಂದ ವಿಮೋಚನೆ ಹೊಂದಿದುವು. ದಕ್ಷಿಣದಲ್ಲಿ ವಿಜಯಿಗಳಾದ ಸೋವಿಯತ್‍ರು ಉತ್ತರ ಮತ್ತು ಮಧ್ಯ ಪ್ರದೇಶಗಳಲ್ಲೂ ಜಯ ಗಳಿಸಿದರು. ಲೆನಿನ್ಗ್ರಾಡ್ ಮತ್ತು ಮಾಸ್ಕೋಗಳಿಗೆ ಸನ್ನಿಹಿತವಾಗಿದ್ದ ಆಕ್ರಮಣ ನಿವಾರಣೆಯಾಯಿತು. ಸ್ಟಾಲಿನ್‍ಗ್ರಾಡ್‍ಗೆ ಒದಗಿದ್ದ ವಿಪತ್ತನ್ನು ನಿವಾರಿಸಿದ ಸೋವಿಯತ್ ಸೇನೆ ಉತ್ತರಕ್ಕೆ ಸರಿದು ಡೊನೆಟ್ಸ್‌ ನದೀಪಾತ್ರವನ್ನು ಜರ್ಮನ್ನರಿಂದ ಕಸಿದುಕೊಂಡಿತು. ಉತ್ತರ ಆಫ್ರಿಕದಲ್ಲೂ ಜರ್ಮನ್ನರ ಪ್ರಬಲ ಸೇನಾನಿ ರಾಮೆಲ್ ಮೊದಮೊದಲು ಮಿತ್ರಸೇನೆಗಳನ್ನು ಹಿಮ್ಮೆಟ್ಟಿಸಿ ಇಟಲಿ ಕಳೆದುಕೊಂಡಿದ್ದ ಭೂಭಾಗಗಳನ್ನು ವಶಪಡಿಸಿಕೊಂಡಿದ್ದ. ಆದರೆ 1942 ನವೆಂಬರ್ ತಿಂಗಳ ಆದಿಭಾಗದಲ್ಲಿ ನಡೆದ ಎಲ್ ಆಲಮೇನ್ ರಣರಂಗದಲ್ಲಿ ಸೋತು ಹಿಮ್ಮೆಟ್ಟಬೇಕಾಯಿತು. 1943 ಜನವರಿ 23ರಂದು ರಾಮೆಲ್‍ನನ್ನು ಬೆನ್ನಟ್ಟಿದ್ದ ಬ್ರಿಟಿಷ್ ಸೇನೆಗಳು ಟ್ರಿಪೋಲಿ ನಗರ ಹಿಡಿದುವು. ಅತ್ತ ಮೊರಾಕ್ಕೊ ಆಲ್ಜೀರಿಯಗಳಿಂದ ಒಳನುಗ್ಗಿದ ಮಿತ್ರ ಸೇನೆಗಳು ಕ್ಯಾಸಬ್ಲಾಂಕ, ರಬಾತ್, ಬರಾನ್, ಆಲ್ಜಿಯರ್ಸ್‌ಗಳನ್ನು ವಶಪಡಿಸಿಕೊಂಡುವು. ಉತ್ತರ ಆಫ್ರಿಕದಲ್ಲಿದ್ದ ಫ್ರೆಂಚ್ ಸೇನೆ ಮಿತ್ರಪಕ್ಷಕ್ಕೆ ಸೇರಿತು. ಮಿತ್ರರಾಷ್ಟ್ರ ಪಡೆಗಳ ದಂಡನಾಯಕ ಐಸನ್‍ಹೋವರ್ ನೇತೃತ್ವದಲ್ಲಿ ಟ್ಯುನೀಷಿಯವನ್ನು ವಶಪಡಿಸಿಕೊಳ್ಳುವುದೇ ಅವರಿಗಿದ್ದ ಧ್ಯೇಯ. ದೊಡ್ಡ ಪ್ರಮಾಣದಲ್ಲಿ ಹಿಟ್ಲರ್ ಭಾರೀ ಸೇನೆಯನ್ನು ಅದರ ರಕ್ಷಣೆಗೆ ಕಳುಹಿಸಿಕೊಟ್ಟ. ಟ್ಯುನೀಷಿಯದಲ್ಲಿ ಜರ್ಮನ್ನರಿಗೆ ಅನೇಕ ಸೌಲಭ್ಯಗಳು ದೊರೆತಿದ್ದವು. ರಾಮೆಲ್ ಆ ಪ್ರದೇಶದ ರಕ್ಷಣೆಗಾಗಿ ಹೊಸ ವ್ಯೂಹವೊಂದನ್ನು ಕಟ್ಟಿದ್ದ. ಆದರೆ ರಾಮೆಲ್ ಜರ್ಮನಿಗೆ ಹಿಂತಿರುಗಿದಾಗ ಯುದ್ಧದ ಬಣ್ಣವೇ ಬದಲಾಯಿತು. ಜರ್ಮನ್ ವ್ಯೂಹ ಛಿದ್ರಗೊಂಡು ಎರಡು ಕಡೆಗಳಿಂದ ಮಿತ್ರಸೇನೆಗಳು ಮುನ್ನುಗ್ಗಿ ಬಂದಾಗ, ಮೇ ತಿಂಗಳ 6ನೆಯ ತಾರೀಕು ಜರ್ಮನ್ ಸೈನ್ಯಪಂಕ್ತಿ ಸಂಪುರ್ಣವಾಗಿ ಮುರಿದು ಮಾರನೆಯ ದಿನ ಟ್ಯುನೀಷಿಯ ಮಿತ್ರಪಡೆಗಳ ಕೈವಶವಾಯಿತು. ಅದಾದ ಒಂದು ವಾರದೊಳಗೆ ಉತ್ತರ ಆಫ್ರಿಕದಲ್ಲಿದ್ದ ಸಮಸ್ತ ಶತ್ರು ಸೇನೆ ಕೈಸೆರೆಯಾಯಿತು. ಈ ದಂಡಯಾತ್ರೆಯಲ್ಲಿ ಭಾರತೀಯ ಯೋಧರು ವಹಿಸಿದ ಪಾತ್ರ ಮುಖ್ಯವಾದದ್ದು. ಅವರು ಜಗತ್ತಿನ ಗೌರವಕ್ಕೆ ಪಾತ್ರರಾದರು. ಟ್ಯುನೀಷಿಯ ಕದನದಲ್ಲಿ ಜಯಗಳಿಸಿದ್ದರಿಂದ ಉತ್ತರ ಆಫ್ರಿಕನ್ ತೀರಪ್ರದೇಶವೆಲ್ಲ ಶತ್ರುಗಳಿಂದ ವಿಮೋಚನೆ ಹೊಂದಿತು. ಮಿತ್ರ ರಾಷ್ಟ್ರಗಳ ನೌಕಾಪಡೆ ಮೆಡಿಟರೇನಿಯನ್ ಸಮುದ್ರದಲ್ಲಿ ಸಾಗಲು ಮುಂದೆ ಯಾವ ತೊಂದರೆಯೂ ಇರಲಿಲ್ಲ. 1943 ಜನವರಿ ತಿಂಗಳಲ್ಲಿ ಕ್ಯಾಸಬ್ಲಾಂಕದಲ್ಲಿ ಸೇರಿದ್ದ ಸಮ್ಮೇಳನದಲ್ಲಿ ಚರ್ಚಿಲ್-ರೂಸ್ವೆಲ್ಟರು ಒಂದು ಘೋಷಣೆ ಹೊರಡಿಸಿ ಶತ್ರುರಾಷ್ಟ್ರಗಳ ನಾಯಕರು ಮಾತ್ರವಲ್ಲದೆ ಆ ರಾಷ್ಟ್ರಗಳೂ ಯಾವ ಷರತ್ತೂ ಇಲ್ಲದೆ ಶರಣಾಗತವಾಗಬೇಕೆಂದು ಹೇಳಿದ್ದರು. ಮೊದಲು ಜರ್ಮನಿಯನ್ನು ಗೆದ್ದು ಅನಂತರ ಜಪಾನ್‍ನ ಮೇಲೆ ದಂಡಯಾತ್ರೆ ನಡೆಸಬೇಕೆಂಬುದು ಮಿತ್ರನಾಯಕರ ತೀರ್ಮಾನ ಆದರೂ ಜಪಾನ್‍ನ ಮೇಲೆ ಉಸ್ತುವಾರಿ ಸಡಿಲಿಸಲಿಲ್ಲ. ಉತ್ತರ ಆಫ್ರಿಕ ಮತ್ತು ಸೋವಿಯತ್ ಕ್ಷೇತ್ರಗಳಲ್ಲಿ ಹೆಚ್ಚಿನ ಚಟುವಟಿಕೆ ಇರಲಿಲ್ಲ. ಯುದ್ಧದಲ್ಲಿ ಮುಂದಿನ ಪ್ರಕರಣವೆಂದರೆ ಸಿಸಿಲಿಯ ಆಕ್ರಮಣ. 1943 ಜುಲೈ 10ರಂದು ಸಿಸಿಲಿಯ ಆಕ್ರಮಣದಲ್ಲಿ ನೌಕೆಗಳೂ ವಿಮಾನಗಳೂ ಭಾಗವಹಿಸಿದ್ದುವು. ಜರ್ಮನ್ನರು ಬಹು ಬುದ್ಧಿವಂತಿಕೆಯಿಂದ ಹೋರಾಡಿ ಬ್ರಿಟಿಷರು ಮುಂದುವರಿಯುವುದನ್ನು ತಡೆದರಾದರೂ ಅಮೆರಿಕನ್ನರು ದ್ವೀಪದ ಪಶ್ಚಿಮಭಾಗವನ್ನು ಆಕ್ರಮಿಸಿ ಸುಮಾರು ಏಳು ಸಹಸ್ರ ಜರ್ಮನ್ನರನ್ನು ಸೆರೆಹಿಡಿದರು. ಆ ದ್ವೀಪದಲ್ಲಿದ್ದ ಎಲ್ಲ ಇಟಾಲಿಯನ್ ಸೈನ್ಯವೂ ಮಿತ್ರ ಸೇನೆಗಳ ಕೈಸೆರೆಯಾಯಿತು. ಸು. 38 ದಿನಗಳ ಆಕ್ರಮಣದ ಅನಂತರ ಸಿಸಿಲಿ ಸಂಪುರ್ಣವಾಗಿ ವಶವಾಯಿತು. ಸಿಸಿಲಿಯಲ್ಲಿ ಪಡೆದ ವಿಜಯದಿಂದ ಮಿತ್ರರಾಷ್ಟ್ರ ಪಡೆಗಳು ಇಟಲಿಯ ಕಡೆ ಮುನ್ನುಗ್ಗುವುದಕ್ಕೆ ಯಾವ ತಡೆಯೂ ಇರಲಿಲ್ಲ. ಇಟಲಿಯ ಫ್ಯಾಸಿಸ್ಟ್‌ ಆಡಳಿತ ಕುಸಿದು ಮುಸೋಲಿನಿಯ ಸರ್ವಾಧಿಕಾರ ಕೊನೆಗೊಂಡಿದ್ದು ಆಗ. ಇಟಲಿಯ ಮಾರ್ಷಲ್ ಬಾಡಾಲ್ಕೊ ಯುದ್ಧವನ್ನು ಮುಂದುವರಿಸುವೆನೆಂದು ಬಹಿರಂಗವಾಗಿ ಘೋಷಿಸಿದರೂ ಗುಪ್ತವಾಗಿ ಮಿತ್ರ ರಾಷ್ಟ್ರಗಳೊಡನೆ ಸಂಧಾನ ನಡೆಸಿದ. ಇಟಾಲಿಯನ್ನರು ಯಾವ ಷರತ್ತೂ ಇಲ್ಲದೆ ಸಂಪುರ್ಣವಾಗಿ ಶರಣಾಗತರಾದರು. ಮುಸೋಲಿನಿಯ ಪತನದಿಂದ ಜರ್ಮನಿಗೆ ಪೆಟ್ಟು ಬಿದ್ದಂತಾಯಿತು. ಆದರೆ ಅದರ ಪರಿಣಾಮ ಜರ್ಮನಿಗೆ ಹೆಚ್ಚೇನೂ ಹಾನಿಕರವಾಗಿರಲಿಲ್ಲ. ಆದರೆ ಪುರ್ವದಲ್ಲಿ ಸೋವಿಯತ್‍ರು ತಮ್ಮ ಮುನ್ನುಗ್ಗುವಿಕೆಯನ್ನು ಮುಂದುವರಿಸಿದಾಗ, ಜರ್ಮನ್ನರು ತಾವು ವಶಪಡಿಸಿಕೊಂಡಿದ್ದ ಪಟ್ಟಣಗಳನ್ನು ಬಿಡಬೇಕಾಯಿತು. ಖರ್ಸ್‌್ಕ ನಗರದಲ್ಲಿ ಒಂದು ವಾರ ಕದನ ನಡೆದು ಜರ್ಮನ್ನರು ಸಂಪುರ್ಣ ಸೋತರು. 1944ರ ಆದಿ ಭಾಗದ ಹೊತ್ತಿಗೆ ಸೋವಿಯತ್‍ರು ಜರ್ಮನ್ನರನ್ನು ಲೆನಿನ್ಗ್ರಾಡ್ ಪ್ರಾಂತ್ಯದಿಂದ ಓಡಿಸಿದರು. ಉತ್ತರ ರಂಗದಲ್ಲಿ ಜರ್ಮನ್ ಸೇನಾ ಕೇಂದ್ರವಾದ ನಾವ್ಗೊರಾಡ್ ನಗರವೂ ಜರ್ಮನ್ನರ ಕೈಬಿಟ್ಟಿತು. ದಕ್ಷಿಣದಲ್ಲಿ ಸೋವಿಯತ್‍ರು ಪುರ್ವ ಪೋಲೆಂಡ್ ಗಡಿ ದಾಟಿ ಲುಕ್ ನಗರವನ್ನು ವಶಪಡಿಸಿಕೊಂಡರು. ಕ್ರಿಮಿಯ ಸೋವಿಯತರ ಕೈಸೇರಿದ್ದು ಏಪ್ರಿಲ್ನಲ್ಲಿ. ಹೀಗಾಗಿ ಸೋವಿಯತ್ ಸೇನೆ ಎಲ್ಲ ಕ್ಷೇತ್ರಗಳಲ್ಲೂ ಮುಂದುವರಿಯಿತು. ದಕ್ಷಿಣದಲ್ಲಿ ರೂಮೇನಿಯ ಮತ್ತು ಪೋಲೆಂಡ್ ಗಡಿ ದಾಟಿದರಲ್ಲದೆ ಉತ್ತರದಲ್ಲಿ ಎಸ್ಟೋನಿಯ ಗಡಿಗೆ ಸಮೀಪದಲ್ಲಿದ್ದರು. ಜರ್ಮನ್ನರನ್ನು ಹಿಮ್ಮೆಟ್ಟಸಿದರೂ ಸೋವಿಯತ್‍ರು ಬಿಡಲಿಲ್ಲ, ಅವರನ್ನು ಹಿಂಬಾಲಿಸಿ ರೂಮೇನಿಯ, ಹಂಗರಿ ಮೊದಲಾದ ದೇಶಗಳನ್ನು ಜರ್ಮನ್ನರ ಅಧೀನದಿಂದ ತಪ್ಪಿಸಿ ತಮ್ಮ ಕಡೆಗೆ ಸೇರಿಸಿಕೊಂಡರು. 1944ರ ಜೂನ್ನಲ್ಲಿ ಬ್ರಿಟಿಷರೂ ಅಮೆರಿಕನ್ನರೂ ಯುರೋಪಿಗೆ ನುಗ್ಗಿ ಪ್ಯಾರಿಸ್‍ನ್ನು ವಶಪಡಿಸಿಕೊಂಡು ಸೆಪ್ಟೆಂಬರ್ ವೇಳೆಗೆ ಜರ್ಮನಿಯ ಗಡಿ ಮುಟ್ಟಿದರು. 1944 ಅಂತ್ಯವಾಗುವ ಹೊತ್ತಿಗೆ ಜರ್ಮನಿಯ ಸ್ಥಿತಿ ಸಂಪುರ್ಣ ಕೆಟ್ಟಿತ್ತು. ಅದು ಯುರೋಪಿನ ಯಾವ ಪ್ರದೇಶದಲ್ಲೂ ನಿಂತು ಹೋರಾಡುವ ಸ್ಥಿತಿಯಲ್ಲಿರಲಿಲ್ಲ. ಸೋವಿಯತ್ ಸೇನೆ ವಾರ್ಸಾ ನಗರವನ್ನು ಹಿಡಿದದ್ದು 1945 ಜನವರಿ 17ರಂದು. ಆ ತಿಂಗಳ ಅಂತ್ಯಕ್ಕೆ ಲಿಥುವೇನಿಯ ಜರ್ಮನ್‍ರಿಂದ ಬಿಡುಗಡೆ ಹೊಂದಿತು. ವಿಮೋಚನೆಗೊಂಡ ಪೋಲೆಂಡಿನಲ್ಲಿ ಸೋವಿಯತ್‍ರಿಂದ ಒಂದು ಸ್ವತಂತ್ರ್ಯ ಸರ್ಕಾರ ಸ್ಥಾಪಿತವಾಯಿತು. ಪಶ್ಚಿಮ ದಿಕ್ಕಿನಿಂದ ಮಿತ್ರಸೇನೆಗಳು ಬೆಲ್ಜಿಯಂ ಆಕ್ರಮಿಸಿ ಜರ್ಮನಿಯ ಒಳಹೊಕ್ಕುವು. 1945ರ ಆರಂಭದಲ್ಲಿ ಸೋವಿಯತ್‍ರು ಜರ್ಮನಿಯೊಳಗೆ ನುಗ್ಗಿದರು. ಕೈಗಾರಿಕಾ ಕೇಂದ್ರ ರೂರ್ ಅವರ ವಶವಾದದ್ದು ಏಪ್ರಿಲ್ನಲ್ಲಿ. ಏಪ್ರಿಲ್ 13ರಂದು ಅವರು ವಿಯನ್ನವನ್ನು ಹಿಡಿದು ವೇಗದಿಂದ ಮುನ್ನುಗ್ಗಿ 28ರಂದು ಬರ್ಲಿನ್ ಅನ್ನು ಮುತ್ತಿದರು. ಶತ್ರುಗಳ ಕೈಯಲ್ಲಿ ಸಿಕ್ಕಿಬೀಳುವುದು ಖಂಡಿತವೆಂಬುದನ್ನರಿತ ಹಿಟ್ಲರ್ ಏಪ್ರಿಲ್ 30ರಂದು ಆತ್ಮಹತ್ಯೆ ಮಾಡಿಕೊಂಡ. ಜರ್ಮನಿಯ ಯುದ್ಧನಾಯಕರು ಶರಣಾಗತರಾಗಲಾಗಿ ಯುದ್ಧಕೊನೆಗೊಂಡಿತು. ಸ್ವತಂತ್ರ ಫ್ರಾನ್ಸಿನ ಸರ್ಕಾರದ ಮುಖ್ಯಾಧಿಕಾರಿ ಜನರಲ್ ಡ ಗಾಲನ ನೇತೃತ್ವದಲ್ಲಿ ಜರ್ಮನ್ನರೊಡನೆ ಹೋರಾಡಲು ಪಣ ತೊಟ್ಟು ಫ್ರೆಂಚ್ ಜನತೆಯೂ ಯೂಗೊಸ್ಲಾವಿಯದ ಮಾರ್ಷಲ್ ಟೀಟೋ ಮತ್ತು ಅವನ ಅನುಯಾಯಿಗಳೂ ಗುಪ್ತ ಸಂಘಗಳೂ ಗೆರಿಲ್ಲಾ ಯೋಧರೂ ಹಿಟ್ಲರನ ಸೋಲಿಗೆ ಕಾರಣರೆಂಬುವುದನ್ನು ಮರೆಯುವಂತಿಲ್ಲ. ಜರ್ಮನಿಯ ಆಕ್ರಮಣಕ್ಕೊಳಗಾದ ಮೇಲೆ ಯುರೋಪಿನ ಯಾವ ಪ್ರದೇಶದಲ್ಲೂ ಜರ್ಮನ್ ಅಧಿಕಾರಿಗಳಿಗೆ ನೆಮ್ಮದಿ ಇರಲಿಲ್ಲ. ತಾವು ಆಕ್ರಮಿಸಿದ ರಾಷ್ಟ್ರಗಳಲ್ಲಿ ಜನತೆಯ ಸಹಕಾರ ಸಹಾಯಗಳನ್ನು ಪಡೆಯಲು ಜರ್ಮನ್ನರು ಎಷ್ಟು ಹೆಣಗಾಡಿದರೂ ಅವರಿಗೆ ಯಾವ, ಯಾರ ಬೆಂಬಲವೂ ಸಿಗಲಿಲ್ಲ. ಈ ಜನತೆಯ ಚಳವಳಿ ಮಿತ್ರ ಸೇನೆಗಳಿಗೆ ಉತ್ತೇಜನಕಾರಿಯಾದ್ದರಿಂದಲೇ ಅವು ಜರ್ಮನಿಯನ್ನು ಸೋಲಿಸಲು ಸಾಧ್ಯವಾಯಿತು.

ಯೂರೋಪು

[ಬದಲಾಯಿಸಿ]

೧೯೩೯ರ ಸೆಪ್ಟೆಂಬರ್‍ ೧ರಂದು ಜರ್ಮನಿಯು ಪೋಲೆಂಡಿನ ಮೇಲೆ ಆಕ್ರಮಣ ಮಾಡಿತು. ಜರ್ಮನಿಯ ಮುಖಂಡ ಅಡಾಲ್ಫ್ ಹಿಟ್ಲರನು ಸೊವಿಯೆಟ್ ಒಕ್ಕೂಟದೊಂದಿಗೆ ಮಾಡಿಕೊಂಡಿದ್ದ ಒಪ್ಪಂದದಂತೆ, ಅದೇ ದಿನ ಸೊವಿಯೆಟ್ ಒಕ್ಕೂಟವು ಪೋಲೆಂಡನ್ನು ಪೂರ್ವದಿಂದ ಆಕ್ರಮಣ ಮಾಡಿತು. ಇದಕ್ಕೆ ಪ್ರತ್ಯುತ್ತರವಾಗಿ ಸೆಪ್ಟೆಂಬರ್‍ ಮೂರರಂದು ಯುನೈಟೆಡ್ ಕಿಂಗ್ಡಮ್ ಮತ್ತು ಫ್ರಾನ್ಸ್, ಜರ್ಮನಿಯ ವಿರುದ್ಧ ಯುದ್ಧ ಸಾರಿದವು.

  • ಕೆಲವು ತಿಂಗಳುಗಳಲ್ಲಿ ಜರ್ಮನಿ ಪೋಲೆಂಡನ್ನು ಪೂರ್ಣವಾಗಿ ಆಕ್ರಮಿಸಿಕೊಂಡಿತು. ೧೯೪೦ರಲ್ಲಿ ಜರ್ಮನಿಯು ನಾರ್ವೆ, ನೆದರ್ಲೆಂಡ್, ಬೆಲ್ಜಿಯಮ್ ಮತ್ತು ಫ್ರಾನ್ಸುಗಳ ಮೇಲೆ ಏರಿ ಹೋಯಿತು. ೧೯೪೧ರಲ್ಲಿ ಯುಗೋಸ್ಲಾವಿಯಾ ಮತ್ತು ಗ್ರೀಸ್ ಕೂಡಾ ಜರ್ಮನಿಯ ದಾಳಿಗೀಡಾದವು. ಇಟಲಿಯು ಉತ್ತರ ಆಫ್ರಿಕಾದ ಬ್ರಿಟಿಷ್ ವಸಾಹತುಗಳ ಮೇಲೆ ಆಕ್ರಮಣ ಮಾಡಿತು. ಕೆಲವೇ ತಿಂಗಳುಗಳಲ್ಲಿ ಜರ್ಮನಿ ಇಟಲಿಗೆ ಬೆಂಬಲ ಘೋಷಿಸಿತು.
  • ೧೯೪೧ರ ಮಧ್ಯದ ಸುಮಾರಿಗೆ ಪಶ್ಚಿಮ ಯೂರೋಪಿನ ಬಹುತೇಕ ರಾಷ್ಟ್ರಗಳು ಜರ್ಮನಿಯ ಅಧೀನಕ್ಕೆ ಸೇರಿಹೋಗಿದ್ದವು. ಆದರೆ ಯುನೈಟೆಡ್ ಕಿಂಗ್ಡಮ್ ಅನ್ನು ಗೆಲ್ಲಲು ಜರ್ಮನಿಗೆ ಸಾಧ್ಯವಾಗಲಿಲ್ಲ. ಇದಕ್ಕೆ ಮುಖ್ಯ ಕಾರಣ ಬ್ರಿಟನ್ನಿನ ರಾಯಲ್ ವಾಯುಪಡೆ ಮತ್ತು ನೌಕಾದಳ ಗಳು ನೀಡಿದ ಉಗ್ರ ಪ್ರತಿಭಟನೆ. ಈಗ ಹಿಟ್ಲರ್‍ ಸೋವಿಯತ್ ಒಕ್ಕೂಟದ ಮೇಲೆ ತಿರುಗಿಬಿದ್ದನು. ೧೯೪೧ರ ಜೂನ್ ೨೨ರಂದು ಏಕಾಏಕಿ ಜರ್ಮನಿಯು ಸೋವಿಯತ್ ಒಕ್ಕೂಟಕ್ಕೆ ನುಗ್ಗಿತು.
  • ಆಪರೇಷನ್ ಬಾರ್ಬಾರೋಸಾ ಎಂಬ ಸಂಕೇತ ನಾಮದ ಈ ದಾಳಿಯಲ್ಲಿ ಜರ್ಮನಿಗೆ ಮೊದಮೊದಲು ಅಪಾರ ಯಶಸ್ಸು ಸಿಕ್ಕಿತು. ೧೯೪೧ರ ಕೊನೆ ಯಷ್ಟರಲ್ಲಿ ಜರ್ಮನ್ ಸೈನ್ಯ ಮಾಸ್ಕೋನಗರದ ಹತ್ತಿರಹತ್ತಿರದ ವರೆಗೂ ಮುನ್ನಡೆದಿದ್ದರು. ಆದರೆ ಅಲ್ಲಿಂದ ಮುಂದೆ ಜರ್ಮನಿ ಮುನ್ನಡೆಯಲಾಗಲಿಲ್ಲ. ಸೋವಿಯತ್ ಸೈನ್ಯ ಭೀಕರ ಪ್ರತೀಕಾರ ಕೈಗೊಂಡು ಜರ್ಮನ್ ಸೈನ್ಯದ ಮಗ್ಗುಲು ಮುರಿದರು.
  • ಮುಂದೆ ಸೋವಿಯತ್ ಸೈನ್ಯವು ಸ್ಟಾಲಿನ್ ಗ್ರಾಡ್ ನಗರಕ್ಕೆ ದಿಗ್ಬಂಧನ ಹಾಕಿ ಕುಳಿತಿದ್ದ ಜರ್ಮನಿಯ ಆರನೆಯ ತುಕಡಿಯನ್ನು ಮುತ್ತುವರೆದು ಪ್ರತಿದಿಗ್ಬಂಧನ ಹಾಕಿದರು. ಮುಂದೆ ಕುರ್ಸ್ಕ್ ಎಂಬಲ್ಲಿ ನಡೆದ ಯುದ್ಧದಲ್ಲಿ ಸೋವಿಯತ್ ಸೈನ್ಯ ಜರ್ಮನಿಯನ್ನು ಸೋಲಿಸಿ, ಲೆನಿನ್ ಗ್ರಾಡ್ ನಗರದ ದಿಗ್ಬಂಧನವನ್ನೂ ಮುರಿದರು. ಈ ನಂತರ ಜರ್ಮನ್ ಸೈನ್ಯ ಹಿಮ್ಮೆಟ್ಟಿತು. ಸೋವಿಯತ್ತರ ಕೆಂಪು ಸೈನ್ಯವು ಅವರನ್ನು ಬರ್ಲಿನ್ ನಗರದವರೆಗೂ ಬೆನ್ನಟ್ಟಿ ಹೋಯಿತು.
  • ಬರ್ಲಿನ್ ನಲ್ಲಿ ಜರ್ಮನ್ ಸೈನ್ಯಕ್ಕೆ ಮನೆಮನೆಯ ನಾಗರೀಕರು ಕುಮ್ಮಕ್ಕು ಕೊಟ್ಟರೂ, ಪ್ರಚಂಡ ಪ್ರಮಾಣದಲ್ಲಿದ್ದ ಕೆಂಪು ಸೈನ್ಯವು ಬರ್ಲಿನ್ ನಗರವನ್ನು ಗೆದ್ದಿತು. ಇದೇ ಸುಮಾರಿಗೆ ( ಏಪ್ರಿಲ್ ೩೦, ೧೯೪೫ರ ಮುಂಜಾನೆ) ಹಿಟ್ಲರನು ತನ್ನ ನೆಲಮಾಳಿಗೆಯ ಬಂಕರಿನಲ್ಲಿ ಆತ್ಮಹತ್ಯೆ ಮಾಡಿಕೊಂಡನು. ಇತ್ತ ಪಾಶ್ಚಿಮಾತ್ಯ ಮಿತ್ರ ರಾಷ್ಟ್ರ ಪಡೆ ೧೯೪೩ರಲ್ಲಿ ಇಟಲಿಯತ್ತ ನುಗ್ಗಿತು. ೧೯೪೪ರಲ್ಲಿ ಫ್ರಾನ್ಸಿನ ನಾರ್ಮಂಡಿಯ ತೀರದಿಂದ ಒಳನುಗ್ಗಿ ಫ್ರಾನ್ಸನ್ನು ಜರ್ಮನಿಯ ಮುಷ್ಠಿಯಿಂದ ಬಿಡುಗಡೆಮಾಡಿದರು.
  • ಜರ್ಮನಿಯ ಪ್ರತಿದಾಳಿಗೆ ರೈನ್ ನದಿಯ ದಡದ ಮೇಲೆ ಮಿತ್ರ ರಾಷ್ಟ್ರಗಳು ಬ್ಯಾಟಲ್ ಆಫ್ ದ ಬಲ್ಜ್ ಎಂದೇ ಪ್ರಸಿದ್ಧವಾದ ಯುದ್ಧದಲ್ಲಿ ಜರ್ಮನಿಯನ್ನು ಹಿಮ್ಮೆಟ್ಟಿಸಿ, ಮುನ್ನಡೆದು ಎಲ್ಬ್ ನದಿಯ ದಂಡೆಯ ಮೇಲೆ ಪೂರ್ವ ದಿಕ್ಕಿನಿಂದ ಬಂದು ಮುಟ್ಟಿದ್ದ ಸೋವಿಯತ್ ಸೈನ್ಯವನ್ನು ಮುಟ್ಟಿ ಸಂಧಾನ ಸಾಧಿಸಿದರು. ಅಳಿದುಳಿದ ಜರ್ಮನ್ ಸೈನ್ಯವು ಶರಣಾಯಿತು. ಈ ಯುದ್ಧದ ಕಾಲದಲ್ಲಿಯೇ ಜರ್ಮನಿಯಲ್ಲಿ ೬೦,೦೦,೦೦೦ ಯಹೂದಿಗಳನ್ನು ಸೆರೆವಾಸದಲ್ಲಿಟ್ಟು ಕೊಲ್ಲಲಾಯಿತು. ಇದನ್ನು ಹಾಲೋಕಾಸ್ಟ್ ಎಂಬ ಹೆಸರಿನಿಂದ ಕರೆಯಲಾಗಿದೆ.

ಏಷಿಯಾ ಮತ್ತು ಶಾಂತ ಸಾಗರ

[ಬದಲಾಯಿಸಿ]
  • ಯೂರೋಪಿನಲ್ಲಿ ಯುದ್ಧ ಶುರುವಾಗುವ ಮೊದಲೇ ೧೯೩೯ರ ಜುಲೈ ೭ರಂದು ಜಪಾನ್ ಚೀನಾದ ಮೇಲೆ ದಾಳಿ ಮಾಡಿತು. ಚೀನಾ ಮೊದಲಾಗಿ ಪೂರ್ವ ಮತ್ತು ಆಗ್ನೇಯ ಏಷಿಯಾದ ಒಂದೊಂದೇ ರಾಷ್ಟ್ರವನ್ನು ಗೆಲ್ಲುತ್ತಾ ಹೋಗುವುದು ಜಪಾನಿನ ಉದ್ದೇಶವಾಗಿತ್ತು. ಚೀನಾದ ಮೇಲಿನ ದಾಳಿಯಲ್ಲಿ ಯಶ ಸಿಕ್ಕಿದ ನಂತರ ಜಪಾನು ೧೯೪೧ರ ಡಿಸೆಂಬರ್‍ ೭ರಂದು ಅನೇಕ ರಾಷ್ಟ್ರಗಳ ಮೇಲೆ ಏಕಾಏಕಿ ದಾಳಿ ಮಾಡಿತು. ಅದೇ ದಿನ ಪರ್ಲ್ ಹಾರ್ಬರ್‍ ಎಂಬಲ್ಲಿ ಅಮೇರಿಕಾದ ನೌಕಾದಳದ ಮೇಲೆ ಬಾಂಬ್ ದಾಳಿ ಮಾಡಿತು.
  • ಇದಕ್ಕೆ ಪ್ರತ್ಯುತ್ತರವಾಗಿ ಅಮೇರಿಕಾವು ಯುದ್ಧದಲ್ಲಿ ಧುಮುಕಲು ನಿರ್ಧರಿಸಿತು. ಮುಂದಿನ ಆರು ತಿಂಗಳು ಜಪಾನಿಗೆ ಒಂದಾದಮೇಲೆ ಒಂದರಂತೆ ಯಶಸ್ಸು ಸಿಕ್ಕಿದರೂ, ಕೋರಲ್ ಸಮುದ್ರದ ಯುದ್ಧದಲ್ಲಿ ಅಮೆರಿಕನ್ ನೌಕಾದಳವು ಜಪಾನಿನ ಮೇಲೆ ಸೇಡು ತೀರಿಸಿಕೊಂಡದ್ದಲ್ಲದೆ, ಮಿಡ್ ವೇ ಯುದ್ಧದಲ್ಲಿಯೂ ಜಪಾನನ್ನು ಸೋಲಿಸಿತು. ಈ ಯುದ್ಧದಲ್ಲಿ ಜಪಾನಿನ ನಾಲ್ಕು ವಿಮಾನವಾಹಕ ದಡಗುಗಳನ್ನು ಮುಳುಗಿಸಿ ಅಮೆರಿಕಾ, ಜಪಾನಿನ ನೌಸೇನೆಗೆ ದೊಡ್ಡ ನಷ್ಟ ಉಂಟುಮಾಡಿತು.
  • ಇಲ್ಲಿಂದ ಮುಂದೆ ಮಿತ್ರ ರಾಷ್ಟ್ರಗಳು ಜಪಾನಿನ ಮೇಲೆ ಪ್ರತಿ ಹಲ್ಲೆ ಮುಂದುವರಿಸಿ ಮಿಲ್ನೆ ಬೇ ಮತ್ತು ಗ್ವಾದಾಲ್ ಕನಾಲ್ ಯುದ್ಧಗಳಲ್ಲಿ ವಿಜಯ ಸಾಧಿಸಿದವು. ಶಾಂತ ಸಾಗರದ ನೈರುತ್ಯ ದಿಕ್ಕಿನಲ್ಲಿ ವಿಜಯ ಸಾಧಿಸಿದ ಮಿತ್ರ ರಾಷ್ಟ್ರಗಳು ಅದೇ ಸಾಗರದ ಮಧ್ಯ ಭಾಗದಲ್ಲಿ ನಿಯಂತ್ರಣ ಪಡೆದುಕೊಳ್ಳಲು ಹೊಸ ಮುನ್ನಡೆ ಪ್ರಾರಂಭಿಸಿದವು. ಆದೆ ಈ ಯುದ್ಧದಲ್ಲಿ ಜಪಾನಿ ಸೈನ್ಯವು ತಕ್ಕ ಉತ್ತರ ಕೊಟ್ಟಿತು.
  • ಈ ಯುದ್ಧ ಭಾಗವಾಗಿ ಫಿಲಿಪೈನ್ ಸಮುದ್ರದ ಯುದ್ಧ, ಲೆಯಟೆ ಕೊಲ್ಲಿಯ ಯುದ್ಧ, ಇವೋ ಜಿಮಾ ಮತ್ತು ಓಕಿನಾವಾದ ಯುದ್ಧ ಮೊದಲಾದ ಭೀಕರ ಹೋರಾಟಗಳು ನಡೆದವು. ಇದೇ ವೇಳೆಗೆ ಅಮೇರಿಕದ ಸಬ್ ಮೆರೀನುಗಳು ಜಪಾನಿನ ಕಡೆಗೆ ಸರಕು ಸಾಗಣೆಯನ್ನು ಭಗ್ನಗೊಳಿಸುವುದರಲ್ಲಿ ಯಶಸ್ವಿಯಾದವು. ಇದರಿಂದ ಜಪಾನಿನ ಆರ್ಥಿಕಪರಿಸ್ಥಿತಿ ಬಿಗಡಾಯಿಸತೊಡಗಿತು. ೧೯೪೫ರಲ್ಲಿ ಮಿತ್ರ ರಾಷ್ಟ್ರಗಳು ಜಪಾನಿನಗ ಮೇಲೆ ಅನೇಕ ವಾಯುದಾಳಿಯನ್ನು ಕೈಗೊಂಡವು.
  • ಜಪಾನಿನ ನಗರಗಳು ಮತ್ತು ಕಾರಖಾನೆಗಳ ಮೇಲೆ ಮುಖ್ಯವಾಗಿ ನಡೆದ ಈ ಹಲ್ಲೆಗಳಿಂದ ಜಪಾನಿನ ಜನಜೀವನ ಅಸ್ಥವ್ಯಸ್ಥವಾಗಿ , ಯುದ್ಧ ಮುಂದುವರಿಸುವ ಶಕ್ತಿ ಕುಂಠಿತವಾಯಿತು. ಕೊನೆಗೆ ೧೯೪೫ರ ಆಗಸ್ಟ್ ೬ರಂದು ಅಮೆರಿಕವು ಜಪಾನಿನ ಹಿರೋಶಿಮಾ ನಗರದ ಮೇಲೆ ಪರಮಾಣು ಬಾಂಬ್ ಹಾಕಿತು. ಆಗಸ್ಟ್ ೯ರಂದು ನಾಗಸಾಕಿ ಎಂಬ ನಗರದ ಮೇಲೆ ಮತ್ತೊಂದು ಪರಮಾಣು ಬಾಂಬ್ ಹಾಕಲಾಯಿತು.
  • ಅಷ್ಟೇ ಅಲ್ಲ ಎಲ್ಲಯವರೆಗೆ ಜಪಾನ್ ಶರಣಾಗುವುದಿಲ್ಲವೋ ಅಲ್ಲಿಯವರೆಗೂ ಒಂದೊಂದು ಹೊಸ ಹೊಸ ನಗರಗಳ ಮೇಲೆ ಬಾಂಬ್ ಹಾಕುವುದಾಗಿ ಬೆದರಿಕೆ ಹಾಕಲಾಯಿತು. ೧೯೪೫ರ ಆಗಸ್ಟ್ ೧೫ರ ಮುಂಜಾನೆ ಜಪಾನ್ ಬೇಶರತ್ ಶರಣಾಗತಿ ಘೋಷಿಸುವುದರೊಂದಿಗೆ ಎರಡನೆಯ ಮಹಾಯುದ್ಧ ಮುಕ್ತಾಯವಾಯಿತು.

ಪರ್ಯವಸಾನ

[ಬದಲಾಯಿಸಿ]
  • ಈ ಅತಿಭಯಂಕರ ಯುದ್ಧದಲ್ಲಿ ೬,೨೦,೦೦,೦೦೦ ಜನರು ಸತ್ತಿರಬಹುದು ಎಂದು ಅಂದಾಜಿದೆ. ಇದು ಆವೇಳೆಯ ಜಗತ್ತಿನ ಜನಸಂಖ್ಯೆಯ ೨.೫% ಆಗಿತ್ತು. ಪ್ರತಿಯೊಂದು ರಾಷ್ಟ್ರದ ಮೃತರ ಸಂಖ್ಯೆಯ ಅಂದಾಜಿನಂತೆ ಈ ಒಟ್ಟು ಮೊತ್ತವೂ ಕೂಡಾ ಒಂದು ಅಂದಾಜು. ಯೂರೋಪ್ ಮತ್ತು ಏಶಿಯಾದ ಅನೇಕ ದೇಶಕ್ಕೆ ದೇಶವೇ ವಿನಾಶದ ಪರಿಸ್ಥಿತಿಗೆ ತಲುಪಿದವು.
  • ಅದರಿಂದ ಚೇತರಿಸಿಕೊಳ್ಳಲು ಅನೇಕ ದಶಕಗಳೇ ಬೇಕಾದವು. ಎರಡನೆಯ ಮಹಾಯುದ್ಧದ ರಾಜಕೀಯ, ಸಾಮಾಜಿಕ, ಆರ್ಥಿಕ ಮತ್ತು ತಂತ್ರಜ್ಞಾನದ ದೃಷ್ಟಿಯಿಂದ ಜಗತ್ತಿನ ಮೇಲಾದ ಮಹತ್ತರ ಪರಿಣಾಮದ ಕುರುಹುಗಳನ್ನು ಇಂದಿನವರೆಗೂ ಕಾಣಬಹುದು.

ಕಾರಣಗಳು

[ಬದಲಾಯಿಸಿ]
  • ಪೋಲೆಂಡಿನ ಮೇಲೆ ಜರ್ಮನಿಯ ಆಕ್ರಮಣ ಹಾಗೂ ಚೀನಾ, ಅಮೆರಿಕಾ ಮತ್ತು ಬ್ರಿಟಿಷ್ ಮತ್ತು ಡಚ್ ವಸಾಹುತುಗಳ ಮೇಲೆ ಜಪಾನಿನ ಆಕ್ರಮಣ ಇವು ಎರಡನೆಯ ಮಹಾಯುದ್ಧ ಪ್ರಾರಂಭವಾಗಲಿಕ್ಕೆ ಕಾರಣಗಳೆಂದು ತಿಳಿಯಲಾಗುತ್ತದೆ. ಜಗತ್ತಿನ ಎರಡೂ ಮಗ್ಗಲುಗಳಲ್ಲಿ ಪ್ರಾರಂಭವಾದ ಈ ಘಟನೆಗಳಿಗೆ ಮುಖ್ಯ ಕಾರಣವೆಂದರೆ ಜರ್ಮನಿ ಮತ್ತು ಜಪಾನಿನಲ್ಲಿ ಸರ್ವಾಧಿಕಾರೀ ಆಡಳಿತವಿದ್ದುದು ಹಾಗೂ ಅವರಿಬ್ಬರ ಜಗತ್ತನ್ನೆ ಗೆಲ್ಲುವ ಮಹತ್ವಾಕಾಂಕ್ಷೆ.
  • ಇವೆರಡು ರಾಷ್ಟ್ರಗಳು ತಮ್ಮ ರಾಜ್ಯ ವಿಸ್ತಾರ ಕಾರ್ಯಕ್ರಮವನ್ನು ಮೊದಲೇ ಪ್ರಾರಂಭಿಸಿದ್ದರೂ, ಮಹಾಯುದ್ಧದ ಅಧಿಕೃತ ಶುರುವಾತು ಅವಕ್ಕೆ ಸಶಸ್ತ್ರ ಪ್ರತಿಭಟನೆ ಬಂದಾಗಲೇ ಆಯಿತು. ಜರ್ಮನಿಯಲ್ಲಿ ಪ್ರಜಾಸತ್ತಾತ್ಮಕ ವಿಧಾನದಿಂದಲೇ ನಾಝೀ ಪಕ್ಷವು ಅಧಿಕಾರಕ್ಕೆ ಬಂದರೂ, ಒಮ್ಮೆ ಅಧಿಕಾರಕ್ಕೆ ಬಂದಮೇಲೆ ಪ್ರಜಾಸತ್ತಾತ್ಮಕ ವಿಧಾನಗಳನ್ನು ಮೂಲೆಗೆ ತಳ್ಳಲಾಯಿತು.
  • ಪ್ರಥಮ ಮಹಾಯುದ್ಧದಲ್ಲಿ ಸೋತ ಮೇಲೆ ಕಳೆದುಕೊಂಡ ಜರ್ಮನ್ ಸ್ವಾಭಿಮಾನವನ್ನು ಮರಳಿ ದೊರಕಿಸುವ ಆಶ್ವಾಸನೆ ಕೊಟ್ಟ ಮೊದಲ ಪಕ್ಷ ಅದಾದ್ದರಿಂದ ಜರ್ಮನ್ ಜನತೆ ಆ ಪಕ್ಷಕ್ಕೆ ತನ್ನ ಬೆಂಬಲ ನೀಡಿತು. ಮೊದಲನೆಯ ಮಹಾಯುದ್ಧ ಕೊನೆಗೊಂಡ ವರ್ಸಾಯಿಯ ಒಪ್ಪಂದ ದ ೨೩೧ನೆಯ ನಿಯಮ ಜರ್ಮನ್ ಜನತೆಗೆ ಸಹಿಸಲಸಾದ್ಯವಾಗಿತ್ತು. ನಾಝೀ ನಾಯಕ ಅಡೋಲ್ಫ್ ಹಿಟ್ಲರ್‍ ಜರ್ಮನಿ ತಮ್ಮ ಹಕ್ಕು ಎಂದು ತಿಳಿದುಕೊಂಡಿರುವ ಪ್ರತಿಯೊಂದು ರಾಷ್ಟ್ರದ ವಿರುದ್ಧವೂ ಹೋರಾಡುವುದಾಗಿ ಆಶ್ವಾಸನೆ ಕೊಟ್ಟದ್ದಲ್ಲದೇ ಆಬಗ್ಯೆ ಮೊದಲ ಹೆಜ್ಜೆಗಳನ್ನೂ ಇಟ್ಟನು.
  • ಇತ್ತ ಜಪಾನಿನಲ್ಲಿ ಹೆಸರಿಗೆ ಕ್ರೈಸಾಂತಿಮಮ್ ( ಸೇವಂತಿಗೆ) ವಂಶದ ರಾಜಸತ್ತೆಯಿದ್ದರೂ, ನಿಜವಾದ ಅಧಿಕಾರ ಸೇನಾ ವರಿಷ್ಠರ ಸಣ್ಣ ಗುಂಪೊಂದರ ಕೈಯಲ್ಲಿತ್ತು. ಅವರ ಮಹತ್ವಾಕಾಂಕ್ಷೆ ಜಪಾನನ್ನು ದೊಡ್ಡ ಸಾಮ್ರಾಜ್ಯವನ್ನು ಮಾಡುವದಾಗಿತ್ತು. ಈ ಗುಂಪಿನ ನೇತೃತ್ವದಲ್ಲಿ ಜಪಾನ್ ೧೯೩೧ರಲ್ಲಿ ಮಂಚೂರಿಯಾದ ಮೇಲೂ, ೧೯೩೭ರಲ್ಲಿ ಚೀನಾದ ಮೇಲೂ ಆಕ್ರಮಣ ಮಾಡಿತ್ತು. ಚೀನಾ ಮತ್ತು ಮಂಚೂರಿಯಾದ ನೈಸರ್ಗಿಕ ಸಂಪತ್ತನ್ನು ಕೈವಶ ಮಾಡಿಕೊಂಡು , ಅದರ ಮೂಲಕ ತಮ್ಮ ಪ್ರಭಾವ ಹೆಚ್ಚಿಸಿಕೊಳ್ಳುವುದು ಇದರ ಉದ್ದೇಶವಾಗಿತ್ತು. ಅಮೆರಿಕಾ ಅಥವಾ ಯುನೈಟೆಡ್ ಕಿಂಗ್ ಡಮ್ ನೇರವಾಗಿ ಈ ಯುದ್ಧದಲ್ಲಿ ಭಾಗವಹಿಸದಿದ್ದರೂ ಚೀನಾಕ್ಕೆ ಆರ್ಥಿಕ ಮತ್ತು ಸೈನಿಕ ನೆರವು ನೀಡಿದವು.

[] []

ಉಲ್ಲೇಖ

[ಬದಲಾಯಿಸಿ]
  1. Chorological history
  2. War II Facts, information and articles about World War II, 1939-1945[ಶಾಶ್ವತವಾಗಿ ಮಡಿದ ಕೊಂಡಿ]
  3. "ಸುಧೀಂದ್ರ ಬುಧ್ಯ;ಕಡಲ ತಡಿಯ ಕದನದ ಕತೆಗೀಗ ಎಪ್ಪತ್ತೈದು;2 Dec, 2016". Archived from the original on 2016-12-02. Retrieved 2016-12-02.