ವಿಷಯಕ್ಕೆ ಹೋಗು

ತೆಲುಗು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ತೆಲುಗು
ಬಳಕೆಯಲ್ಲಿರುವ 
ಪ್ರದೇಶಗಳು:
ಆಂಧ್ರಪ್ರದೇಶ, ಭಾರತ, ತೆಲಂಗಾಣ
ಒಟ್ಟು 
ಮಾತನಾಡುವವರು:
೭.೬ ಕೋಟಿ(ಮಾತೃಭಾಷೆ), ೮.೬೧ ಕೋಟಿ ಬೃಹತ್ ಮೊತ್ತ (ದ್ವಿತೀಯ ಭಾಷೆಯಾಗಿ ಉಪಯೋಗಿಸುವವರ ಸಂಖ್ಯೆ ಒಳಗೊಂಡಿದೆ) 
ಶ್ರೇಯಾಂಕ: ೧೩
ಭಾಷಾ ಕುಟುಂಬ: ದ್ರಾವಿಡ ಭಾಷೆಗಳು
 ತೆಲುಗು
 
ಅಧಿಕೃತ ಸ್ಥಾನಮಾನ
ಅಧಿಕೃತ ಭಾಷೆ: ಆಂಧ್ರಪ್ರದೇಶ, ಪುದುಚೇರಿ, ಭಾರತ ,ತೆಲಂಗಾಣ
ನಿಯಂತ್ರಿಸುವ
ಪ್ರಾಧಿಕಾರ:
ನಿಯಂತ್ರಣವಿಲ್ಲ
ಭಾಷೆಯ ಸಂಕೇತಗಳು
ISO 639-1: te
ISO 639-2: tel
ISO/FDIS 639-3: tel


ದ್ರಾವಿಡ ಭಾಷೆ

[ಬದಲಾಯಿಸಿ]
ತೆಲುಗು ಭಾಷಾ ಪ್ರಾಂತ್ಯಗಳು: ತಿಳಿನೀಲಿ (ವಲಸಿಗರು), ಗಾಢನೀಲಿ (ಮೂಲಜನ)

ದ್ರಾವಿಡಭಾಷಾವರ್ಗಕ್ಕೆ ಸೇರಿದ ತೆಲುಗನ್ನು ಆಂಧ್ರಭಾಷೆಯೆಂದು ಕರೆಯುವುದು ಅಷ್ಟು ಸರಿಯಲ್ಲದಿದ್ದರೂ ರೂಢಿಯಲ್ಲಿ ಆ ಹೆಸರೂ ನಿಂತು ಬಿಟ್ಟಿದೆ. ಇದಕ್ಕೇನು ಕಾರಣವೆಂದರೆ ಆಂಧ್ರ ಚಕ್ರಾಧಿಪತ್ಯವೂ ತೆಲುಗು ದೇಶವೂ ಸಮಾನವ್ಯಾಪ್ತಿಯುಳ್ಳವಲ್ಲ. ಚಕ್ರಾಧಿಪತ್ಯದ ಒಂದು ಭಾಗವಾದ ಮಹಾರಾಷ್ಟ್ರ ಎಂದಿಗೂ ತೆಲುಗು ದೇಶದ ಒಂದು ಭಾಗವಾಗಲಿಲ್ಲ. ತೆಲುಗು ದೇಶದ ಭಾಗಗಳಾದ ಕಳಿಂಗದ ಮಧ್ಯ ಮತ್ತು ದಕ್ಷಿಣ ಭಾಗಗಳು ಆಂಧ್ರ ಚಕ್ರಾಧಿಪತ್ಯಕ್ಕೆ ಎಂದೂ ಸೇರಿರಲಿಲ್ಲ. ತೆಲುಗು ದೇಶದಲ್ಲಿ ನೂರಾರು ಸಂಸ್ಕೃತ ಮತ್ತು ಪ್ರಾಕೃತ ಪದಗಳು ಬಳಕೆಯಲ್ಲಿವೆ ಮತ್ತು ಇನ್ನೂ ಹೆಚ್ಚಿನ ಪದಗಳು ತೆಲುಗು ಸಾಹಿತ್ಯದಲ್ಲಿ ಪ್ರಯುಕ್ತವಾಗಿವೆ. ಆದರೆ ಈ ಸಾಲ ತೆಗೆದುಕೊಂಡ ಶಬ್ದಗಳಿಂದ, ಇವು ಎಷ್ಟೇ ಇರಲಿ, ನಾಡಿನಲ್ಲಿ ಎಷ್ಟೇ ಹರಡಲಿ, ಭಾಷಾ ಬಾಂಧವ್ಯವನ್ನು ನಿರ್ಧರಿಸಲಾಗದು. ತೆಲುಗು ತೆಲಂಗಾಣದ (ತ್ರಿಲಿಂಗ) ಭಾಷೆ. ಅದು ಈಗಿನ ಆಂಧ್ರ ಪ್ರದೇಶದ ಭಾಷೆಯಾಗಿರುವುದರಿಂದ ಅದರ ಸ್ಥೂಲ ಪರಿಚಯವನ್ನಿಲ್ಲಿ ಮಾಡಿಕೊಡಲಾಗಿದೆ.

ಬೆಳವಣಿಗೆ

[ಬದಲಾಯಿಸಿ]

ರಾಜಮಹೇಂದ್ರಿಯಲ್ಲಿದ್ದ ಪೂರ್ವ ಚಾಲುಕ್ಯ ವಂಶದ ರಾಜರಾಜ ನರೇಂದ್ರನ (1033-43) ಆಸ್ಥಾನದಲ್ಲಿದ್ದ ನನ್ನಯನ ಕಾಲಕ್ಕೆ ಹಿಂದೆ ತೆಲುಗು ಭಾಷೆ ಹೇಗೆ ಬೆಳೆಯಿತು ಎಂಬ ವಿಷಯವನ್ನು ನಿರೂಪಿಸಲು ನಮಗೆ ತಕ್ಕಷ್ಟು ಆಧಾರಗಳು ದೊರೆತಿಲ್ಲ. ಬೆಜವಾಡದಲ್ಲಿರುವ (ವಿಜಯವಾಡ) ಒಂದು ಕಂಬದಲ್ಲಿ ಕೊರೆದಿರುವ "ಯುದ್ಧಮಲ್ಲ ಶಾಸನಮು" ಎಂಬ ಶಾಸನ ಮತ್ತು ನನ್ನಯನಿಗೆ ಹಿಂದಿನ ಇತರ ಶಾಸನಗಳಲ್ಲಿ ಪದ್ಯಗಳಿವೆ; ಅವುಗಳ ಭಾಷೆ ನನ್ನಯ ಬಳಸಿರುವ ಭಾಷೆಯ ಹಾಗೆಯೇ ಇದೆ. ತೆಲುಗು ಭಾಷೆ ಅಥವಾ ಸಾಹಿತ್ಯ ಯಾವಾಗ ಹುಟ್ಟಿತ್ತೆಂಬುದನ್ನು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಆದರೆ ಅದು ಕ್ರಿ.ಶ 600ರ ಹೊತ್ತಿಗೆ ದ್ರಾವಿಡ ಭಾಷೆಯ ಒಂದು ಪ್ರತ್ಯೇಕ ಶಾಖೆಯಾಗಿ ಇದ್ದಿತ್ತೆಂಬುದನ್ನು ಆ ಕಾಲದ ಚೋಳ ಮಹಾರಾಜರ ತೆಲುಗು ಶಾಸನವೊಂದರಿಂದ ನಿರ್ದಿಷ್ಟವಾಗಿ ಹೇಳಬಹುದು.

ನನ್ನಯ್ಯನ ಕಾಲದಿಂದಾಚೆಗೆ ತೆಲುಗು ಭಾಷೆ ಹೇಗೆ ಬೆಳೆಯಿತು ಎಂಬುದಕ್ಕೆ ತಕ್ಕಷ್ಟು ಸಾಕ್ಷ್ಯಗಳಿವೆ. ತಮಿಳಿನಲ್ಲಿ ದ್ರಾವಿಡಾಂಶ ಹೇರಳವಾಗಿ ನಿಂತುಬಿಟ್ಟಿದೆ. ಸಂಸ್ಕೃತ ಅಥವಾ ಪ್ರಾಕೃತದ ಪ್ರಭಾವಕ್ಕೆ ಅದು ಅಷ್ಟಾಗಿ ಈಡಾಗಲಿಲ್ಲ; ಆದರೆ ಇತರ ಮೂರು ದ್ರಾವಿಡ ಭಾಷೆಗಳು ಸಂಸ್ಕೃತ ಮತ್ತು ಪ್ರಾಕೃತ ಶಬ್ದಗಳನ್ನು ಹೇರಳವಾಗಿ ತೆಗೆದುಕೊಂಡಿದೆ.ಮಲೆಯಾಳ ತನ್ನ ದ್ರಾವಿಡಾಂಶದಲ್ಲಿ ಕನ್ನಡ ತೆಲುಗುಗಳಿಗಿಂತಲೂ ತಮಿಳಿಗೆ ಹೆಚ್ಚು ಸಮೀಪವಾಗಿದೆ. ತೆಲುಗಿಗೂ ಕನ್ನಡಕ್ಕೂ ಸಮಾನಾಂಶಗಳು ಹೆಚ್ಚಾಗಿದ್ದರೂ ತೆಲುಗಿಗಿಂತಲೂ ಕನ್ನಡದಲ್ಲಿ ದ್ರಾವಿಡಾಂಶ ಹೆಚ್ಚು. ಈ ಬಾಂಧವ್ಯಗಳು ಮತ್ತು ವ್ಯತ್ಯಾಸಗಳನ್ನು ಈ ಭಾಷೆಗಳು ಬೆಳೆದ ಕ್ಷೇತ್ರಗಳ ಭೌಗೋಳಿಕ ವೈಲಕ್ಷಣಗಳಿಂದಲೂ ಪ್ರಾಚೀನ ಹಾಗೂ ಮಧ್ಯಕಾಲದ ಭಿನ್ನಭಿನ್ನ ರಾಜಕೀಯ ಪರಿಸ್ಥಿತಿಗಳಿಂದಲೂ ಸುಲಭವಾಗಿ ತರ್ಕಿಸಬಹುದು. ತೆಲುಗು ದೇಶ ದಖನ್ನಿನ ಮಧ್ಯಭಾಗದಲ್ಲಿದೆ. ಓಂಡ್ರ ದೇಶದವರು ಈಶಾನ್ಯದಲ್ಲೂ ಮಧ್ಯಪ್ರದೇಶಹಿಂದಿ ಭಾಷೆಯ ಜನರು ಉತ್ತರದಲ್ಲೂ ಮಹಾರಾಷ್ಟ್ರರು ವಾಯುವ್ಯದಲ್ಲೂ ಕನ್ನಡಿಗರು ಪಶ್ಚಿಮದಲ್ಲೂ ತಮಿಳರು ದಕ್ಷಿಣದಲ್ಲೂ ಅದನ್ನು ಸುತ್ತುವರಿದಿದ್ದಾರೆ. ದಕ್ಷಿಣಕ್ಕೆ ಪ್ರಸರಿಸುವಾಗ ಆರ್ಯಸಂಸ್ಕೃತಿ ಅನಿವಾರ್ಯವಾಗಿ ಮೊದಲು ತೆಲುಗು ದೇಶವನ್ನು ಹಾಯ್ದೇ ದಕ್ಷಿಣ ತುದಿಯನ್ನು ಮುಟ್ಟಬೇಕು. ಆದುದರಿಂದ ತೆಲುಗುಭಾಷೆ ಮತ್ತು ಸಂಸ್ಕೃತಿಗಳು ಆರ್ಯಭಾಷೆ ಮತ್ತು ಸಂಸ್ಕೃತಿಗಳಿಂದ ದಕ್ಷಿಣದ ಇತರ ಪ್ರದೇಶಗಳಿಗಿಂತ ಹೆಚ್ಚಾಗಿ ಪ್ರಭಾವಿತವಾದವು. ತೆಲುಗಿಗಿರುವ ಮತ್ತೊಂದು ಲಾಭಾಂಶವೇನೆಂದರೆ ಮಿಕ್ಕೆಲ್ಲ ದ್ರಾವಿಡ ಭಾಷೆಗಳಿಗಿಂತಲೂ ತೆಲುಗನ್ನು ಆಡುವ ಜನರೇ ಹೆಚ್ಚು ಮಂದಿ (ಸುಮಾರು ಮೂರು ಕೋಟಿ ಅರವತ್ತು ಲಕ್ಷ ಜನ) ಇದ್ದಾರೆ. ತನ್ನ ಮೃದು ಮಧುರ ಧ್ವನಿಗೆ ಅದು ಹೆಸರಾಗಿದೆ. ಪಾಶ್ಚಾತ್ಯ ಪ್ರವಾಸಿಗರು ಇದನ್ನು ಪೂರ್ವದ ಇಟಾಲಿಯನ್ ಎಂದು ಕರೆದಿದ್ದಾರೆ.

ತೆಲುಗು ಭಾಷೆ ಪ್ರಾಚೀನ ಕಾಲದಲ್ಲಿ ಹೇಗೆ ಬೆಳೆಯಿತು ಎಂಬುದನ್ನು ನಿರೂಪಿಸುವಾಗ ನನ್ನಯನಿಗಿಂತ ಹಿಂದಿನ ಕಾಲದ ಒಂದು ವಿಶಿಷ್ಟ ಲಕ್ಷಣವನ್ನು ಗಮನಕ್ಕೆ ತೆಗೆದುಕೊಳ್ಳುವುದು ಆವಶ್ಯಕ. ಇತರ ಭಾಷೆಗಳಲ್ಲಿ ಇನ್ನೂ ಉಳಿದುಕೊಂಡಿರುವ ಗಳ್(ಕಳ್) ಎಂಬ ಬಹುವಚನ ಪ್ರತ್ಯಯದ ಸ್ಥಾನವನ್ನು ನನ್ನಯನಿಗೆ ಬಹು ಹಿಂದೆಯೇ - ಲು ಎಂಬುದು ಆಕ್ರಮಿಸಿಕೊಂಡಿತು. ಅದು ಬಹುಕಾಲದಿಂದಲೂ ತೆಲುಗಿನಲ್ಲಿತ್ತೆಂಬುದನ್ನು ತೋರಿಸಲು -ಮ್ರಾ (ನ್) ಕುಲು (ಮರಗಳು) ; ಕೊಲ (ನ್) ಕುಲು (ಕೊಳಗಳು); ಈಗಲು (ನೊಣಗಳು); ಏನುಗಲು (ಆನೆಗಳು) ಎಲುಕಲು (ಇಲಿಗಳು) ಇತ್ಯಾದಿ ಬಹುವಚನ ರೂಪಗಳು ನಿದರ್ಶನವಾಗಿ ಉಳಿದು ಬಂದಿವೆ. ಮುಂದೆ ಬಹುವಚನ ಪ್ರತ್ಯಯ ಲ (ಉ) ಎಂದು ತೆಲುಗರು ಕಂಡುಕೊಂಡಾಗ ಏಕವಚನ ರೂಪಗಳನ್ನು ರಚಿಸಲು ಲು ವನ್ನು ಕಳೆದಿಟ್ಟರು. ಉದಾಹರಣೆಗೆ, ಈಗ, ಏನುಗ, ಏಲುಕ; ತಮಿಳಿನ ಈ ಯಾನೈ, ಮುಂತಾದುವನ್ನು ನೋಡಬಹುದು.

ವ್ಯಾಕರಣ

[ಬದಲಾಯಿಸಿ]

ತಮಿಳು ಮತ್ತು ಇತರ ದ್ರಾವಿಡ ಭಾಷೆಗಳಲ್ಲಿರುವಂತೆ ತೆಲುಗು ಸಹ ಬಹುವಚನ ದ್ವಿಲಿಂಗ ಪ್ರತ್ಯಯ [ರ(ಉ)] ವನ್ನು ಉಳಿಸಿಕೊಂಡಿದೆ. ಉದಾರಣೆಗೆ, ವಾರು (ಅವರು), ವೀರು (ಇವರು), ಎವರು (ಯಾರು?), ಮೀರು (ನೀವು), ಆದರೆ ಸರ್ವತ್ರ ಹರಡಿರುವ ಲು ವಿನ ಪ್ರಭಾವ ಎಷ್ಟೆಂದರೆ, ಅದಿಲ್ಲದಿದ್ದರೆ ಬಹುವಚನದ ಭಾವ ಸಮಗ್ರವಾಗಿ ಮನಸ್ಸಿಗೆ ತಟ್ಟುವುದಿಲ್ಲ. ಆದುದರಿಂದ ಕಾಲಕ್ರಮದಲ್ಲಿ ವಾರಲು, ವೀರಲು, ಮೀರಲು, ಮುಂತಾದವುಗಳು ಬೆಳೆದವು. ಇವು ಇಂಗ್ಲೀಷಿನಲ್ಲಿ ಚಿಲ್ರನ್ಸ್, ಮೆನ್ಸ್, ಡೇಟಾಸ್, ಎಂಬ ಹಾಗಿವೆ. ಕೆಲವು ಸಂದರ್ಭಗಳಲ್ಲಿ ದ್ವಿಲಿಂಗೀ ಬಹುವಚನ ಪ್ರತ್ಯಯದ ಸ್ಥಾನವನ್ನು ಸಹ ಲು ಆಕ್ರಮಿಸುತ್ತದೆ. ಉದಾಹರಣೆಗೆ, ವಾಂಡ್ಲು; ವಾಳ್ಳು (ಅವರು); ಕೂತುಂಡ್ಳು, ಕೂತುಳ್ಳು, (ಹೆಣ್ಣು ಮಕ್ಕಳು) ಇತ್ಯಾದಿ. ಅನೇಕಾಕ್ಷರ ರೂಪಗಳನ್ನು ಮೊಟಕುಗೊಳಿಸಿದ ರೂಪಗಳು ನನ್ನಯನ ಕಾಲದಷ್ಟು ಮುಂಚಿನಿಂದಲೇ ತಲೆದೋರುತ್ತದೆ. ಉದಾಹರಣೆಗೆ ಪೂಜಿಂಚಿತೇ? ಎಂಬ ನನ್ನಯ್ಯನ ಪ್ರಯೋಗ ಪೂಜಿಂಚಿತಿವೇ? (ಪೂಜಿಸಿದೆಯಾ) ಎಂಬುದರಿಂದ ಹುಟ್ಟಿದೆ. ಪೂಜಿಂಚಿತಿವೇನಿನ್ (ಪೂಜಿಸಿದ್ದೇ ಆದರೆ) ಎಂಬ ದೀರ್ಘರೂಪ ಕ್ರಮೇಣ ಪೂಜಿಂಚಿತಿವೇನಿ ಎಂದಾಗಿ, ಬಳಿಕ ವೇನ್-ವೇ; ತೇನ್-ತೇ ಮುಂತಾದ್ದಾಗಿ ಈಗಿನ ಪೂಜಿಸ್ತೇ ಎಂಬ ರೂಪಕ್ಕಿಳಿದಿದೆ. ಪೂಜಿಂಚಿತೇನ್ ಎಂಬುದಕ್ಕಿಂತ ಹಿಂದಿನ ಶಬ್ದರೂಪಗಳಲ್ಲಿ `ವಿ ಎಂಬುದಿದ್ದು ಮಧ್ಯಮ ಪುರುಷದ ಏಕವಚನವನ್ನು ನಿರ್ದೇಶಿಸುತ್ತಿತ್ತು. ಆದರೆ ಆ ತರುವಾಯದ ರೂಪಗಳಲ್ಲಿ ವಿ ಅಳಿದುಹೋಗಿ ಆ ರೂಪ ಎಲ್ಲ ಜನಕ್ಕೂ ಏಕವಚನ ಬಹುವಚನಗಳೆರಡಲ್ಲೂ ಪ್ರಯುಕ್ತವಾಗತೊಡಗಿತು. ಹೀಗೆ ಮಟ್ಟ ಸಮ ಮಾಡುವ ಪ್ರವೃತ್ತಿ ಈ ಮಾತುಗಳಲ್ಲಿ ಕಂಡು ಬರುತ್ತದೆ. ಅಂಟಿವೇನಿನ್ ಎಂಬುದರಿಂದ ಅನ್‍ಟೆ (ನೀನು ಹೇಳಿದರೆ); ಐತಿವೇನಿನ್ ಎಂಬುದರಿಂದ ಐತೆ (ನೀನು ಹೀಗಾಗುವುದಾದರೆ) ಇತ್ಯಾದಿ. ಕವಿಗಳು ಈ ಎಲ್ಲ ರೂಪಗಳನ್ನೂ ಛಂದಸ್ಸಿನ ಸೌಕರ್ಯಕ್ಕಾಗಿ ಉಪಯೋಗಿಸುತ್ತಾರೆ. ಕಾವ್ಯಗಳಲ್ಲೂ ಅವುಗಳನ್ನು ಅನುಸರಿಸಿ ಬರೆದ ವ್ಯಾಕರಣಗಳಲ್ಲೂ ಜನರಾಡುವ ಮಾತಿನಲ್ಲಿ ತೋರಿಬರುವ ಬದಲಾವಣೆಗಳು ಕಂಡುಬರುವುದಿಲ್ಲ. ಏಕೆಂದರೆ ಬಹು ಹಿಂದಣ ಕವಿಗಳು ಅನಿವಾರ್ಯವಾಗಿ ತಾವಾಡುತ್ತಿದ್ದ ಭಾಷೆಯನ್ನೇ ತಮ್ಮ ಕಾವ್ಯಗಳಲ್ಲಿ ಬಳಸುತ್ತಿದ್ದರೂ ಮುಂದೆ ಬಂದ ಕವಿಗಳು ಹಿಂದಿನ ಕವಿಗಳ ಭಾಷೆಗೆ ತಮ್ಮ ಕಾಲದ ಆಡುಮಾತಿಗಿಂತಲೂ ಹೆಚ್ಚಿನ ಗಮನವನ್ನು ಕೊಡುತ್ತಿದ್ದರು; ವೈಯಾಕರಣರು ಭಾಷೆ ಒಂದೇ ಸಲಕ್ಕೆ ಸ್ಥಿರರೂಪವನ್ನು ಪಡೆದುಬಿಟ್ಟಿರುವಂತೆ ಭಾವಿಸಿ ಪ್ರಾಚೀನ ಕವಿಗಳ ಪ್ರಯೋಗಗಳನ್ನೇ ಅವಲಂಬಿಸಿ ವ್ಯಾಕರಣ ಸೂತ್ರಗಳನ್ನು ರಚಿಸಿದರು. ಆದರೆ ಕವಿಗಳು ತಿಳಿದೋ ತಿಳಿಯದೆಯೋ ವ್ಯಾಕರಣ ಸೂತ್ರಗಳನ್ನು ಮುರಿಯುತ್ತಿದ್ದರು. ಎಷ್ಟು ಪ್ರಾಚೀನವಾದರೆ ಅಷ್ಟು ಶ್ರೇಷ್ಠ ಎಂಬ ಸೂತ್ರವನ್ನು ಸಂಪ್ರದಾಯ ನಿಷ್ಠ ಕವಿಗಳೂ ವೈಯಾಕರಣರೂ ಭಾಷಾಕ್ಷೇತ್ರದಲ್ಲೂ ಎತ್ತಿ ಹಿಡಿದಿದ್ದರು. ಆದರೆ ಕವಿಗಳು ಹಳೆಯ ವ್ಯಾಕರಣಸೂತ್ರಗಳನ್ನು ಬದಿಗೊತ್ತಿ ಜೀವಂತವಾಗಿರುವ ಆಡುಮಾತನ್ನೇ ಬಳಸಲು ಹಿಂಜರಿಯಲಿಲ್ಲ. ಏಕೆಂದರೆ ಅವು ಅವರ ಭಾವಗಳನ್ನು ಪ್ರಕಟಿಸಲು ಹೆಚ್ಚು ಪರಿಣಾಮಕಾರಿಯಾಗಿದ್ದುವಲ್ಲದೆ ಪ್ರಾಚೀನ ಶಬ್ದಗಳಿಗಿಂತಲೂ ಸುಲಭವಾಗಿ ಅರ್ಥವಾಗುತ್ತಿದ್ದವು. ಆದರೆ ಇಂಥ ಕವಿಗಳು ಬಹು ವಿರಳ. ಅವರು ಆಡುಮಾತುಗಳನ್ನು ಎಚ್ಚರದಿಂದಲೂ ಅಂಜಿಕೆಯಿಂದಲೂ ಪ್ರಯೋಗಿಸುತ್ತಿದ್ದರು. ಶಾಸನಗಳು, ಹಾಡುಗಳು, ಶತಕಗಳು ಮತ್ತು ತಮ್ಮ ತತ್ತ್ವಗಳು ಜನಕ್ಕೆ ತಿಳಿದು ಅವು ಅವರಲ್ಲಿ ಹರಡಬೇಕೆಂಬ ಆಸೆಯುಳ್ಳ ಶೈವ ಕವಿಗಳ ದ್ವೀಪದ ಕಾವ್ಯಗಳು ಆಡುಮಾತುಗಳನ್ನು ಅವುಗಳ ರೂಢಿಯ ಅರ್ಥದಲ್ಲೇ ಹೆಚ್ಚಾಗಿ ಬಳಸುತ್ತಿದ್ದರು. 1700-1850 ರಲ್ಲಿ ಬೆಳೆದ ಗದ್ಯ ಪ್ರಕಾರ ಕಥೆ, ಪ್ರಬಂಧ, ವ್ಯಾಖ್ಯಾನ, ಕಾಗದಗಳು ಮುಂತಾದ ಎಲ್ಲ ಪ್ರಕಾರಗಳ ಲೇಖನಗಳಿಗೂ ಒದಗಿ ಬಂತು. ಈ ಗದ್ಯ ಲೇಖನಗಳ ಬಹುಭಾಗವನ್ನು ಪ್ರಚಲಿತ ಭಾಷೆಯಲ್ಲೇ ಬರೆಯಲಾಗುತ್ತಿತ್ತು; ಅದು ತೆಲುಗು ಭಾಷಾ ಚರಿತ್ರೆಯನ್ನು ವ್ಯಾಸಂಗ ಮಾಡಲು ಬಯಸುವವರಿಗೆ ಆ ಭಾಷೆಯ ಬೆಳವಣಿಗೆಗಳನ್ನು ಗುರುತಿಸಲು ಕಾವ್ಯಗಳ ಭಾಷೆಗಿಂತ ಹೆಚ್ಚು ಸಹಕಾರಿಯಾಗಿದೆ. ಈ ಸಂಪ್ರದಾಯವನ್ನು ಸಿ. ಪಿ. ಬ್ರೌನ್ ಪ್ರೋತ್ಸಾಹಿಸಿದ. ತನ್ನ ಇಂಗ್ಲಿಷ್ ಶಬ್ದಕೋಶಗಳಲ್ಲಿ ಆತ ಪದಗಳ ಅರ್ಥವನ್ನು ವಿವರಿಸಲು ಪ್ರಚಲಿತ ಭಾಷೆಯನ್ನೇ ಉಪಯೋಗಿಸಿದ. ಆದರೆ ಕಾವ್ಯಭಾಷೆಯಲ್ಲಿ ನೀತಿ ಚಂದ್ರಿಕೆ ಎಂಬುದನ್ನು ಬಾಲ ವ್ಯಾಕರಣ ಎಂಬ ವ್ಯಾಕರಣ ಗ್ರಂಥವನ್ನು ಬರೆದ ಪರವಸ್ತು ಚಿನ್ನಯ್ಯಸೂರಿ ಈ ಸಂಪ್ರದಾಯಕ್ಕೆ ತಡೆಹಾಕಿದ. ಆತನ ನೀತಿ ಚಂದ್ರಿಕೆ ಕೃತಕವಾದ ಭಾಷೆಯಲ್ಲಿ ರಚಿತವಾಗಿದೆ. ಬಳಕೆಯಲ್ಲಿಲ್ಲದ ಆಡಂಬರದ ಪದಗಳು, ಅಲಂಕಾರ ನಿಬಿಡದ ಶೈಲಿ, ನಯವಾದ ಬಳಸು ಮಾತಿನ ಸಂಸ್ಕೃತ ಪದಗಳ ಸಮಾಸ ಜಾಲಗಳು- ಇವು ಆ ಭಾಷೆಯ ಲಕ್ಷಣ. ಆತನ ವ್ಯಾಕರಣ ಅಸಮಗ್ರವಾಗಿ ಅಸಂಗತವಾಗಿ ಇದ್ದರೂ ಕಾವ್ಯಗಳ ಭಾಷೆಯನ್ನು ಅವಲಂಬಿಸಿ ರಚಿತವಾಗಿತ್ತು. ಆತನ ಕೃತಿಗಳ ಪರಿಣಾಮವಾಗಿ ತೆಲುಗಿನಲ್ಲಿ ಆರೋಗ್ಯಕರವಾದ ಗದ್ಯದ ಮುನ್ನಡೆ ನಿಂತುಹೋಯಿತು. ಸುಮಾರು ಅರುವತ್ತು ವರ್ಷಗಳವರೆಗೆ ಆತನ ಸಮಕಾಲೀನ ಮತ್ತು ತರುವಾಯ ಬಂದ ತೆಲುಗು ಗದ್ಯ ಲೇಖಕರು ಯಾರೂ ಆತನ ಕೃತಿಗಳ ಮಾದರಿಗೆ ಎದುರು ಮಾತನ್ನೆತ್ತದೆ ಅನುಸರಿಸಿದರು. ಹೀಗೆ ಈತನ ಶೈಲಿಯನ್ನು ಅನುಕರಿಸುವ ಉತ್ಸಾಹದಲ್ಲಿ ಇವರು ಸಾಮಾನ್ಯ ಪದಗಳನ್ನು ಬಿಟ್ಟು ಹಳೆಯ ಶಬ್ದಗಳನ್ನು ಸಂಸ್ಕೃತ ಸಮಾಸಗಳಿಂದ ತುಂಬಿರುವ ಪದಗಳನ್ನೂ ಉಪಯೋಗಿಸತೊಡಗಿದರು. ಚಿನ್ನಯ್ಯಸೂರಿಯ ನೀತಿಚಂದ್ರಿಕೆ ಅಥವಾ ಅಂಥ ಶೈಲಿಯಲ್ಲಿ ಬರೆದ ಇತರ ಗ್ರಂಥಗಳನ್ನು ಶಾಲಾ ಕೊಠಡಿಗಳಲ್ಲಿ ಮಾತ್ರ ಛಾಸರನ ಭಾಷೆಯಲ್ಲಿರುವ ಛಾಸರನ ಪದ್ಯಗಳನ್ನು ಹೇಗೋ ಹಾಗೆ, ಓದಲು ಏರ್ಪಡಿಸಿದ್ದರೆ, ತೆಲುಗು ವಿದ್ಯಾರ್ಥಿಗಳಿಗಾಗಲಿ ತೆಲುಗು ಬರಹಗಾರರಿಗಾಗಲಿ ಯಾವ ಕೆಡುಕೂ ಆಗುತ್ತಿರಲಿಲ್ಲ. ಆದರೆ ಪಂಡಿತರೂ ವಿದ್ಯಾ ಇಲಾಖೆ ಹಾಗೂ ವಿಶ್ವವಿದ್ಯಾನಿಲಯಗಳ ಅಧಿಕಾರಿಗಳೂ ಒಂದು ಹೆಜ್ಜೆ ಮುಂದೆ ಹೋದರು. ಶಾಲೆಗಳಲ್ಲೂ ಆಡುಮಾತನ್ನು ನಿಷೇಧಿಸಿದರು. ಆಡುಮಾತಿನಲ್ಲಿ ತಮ್ಮ ಮನೆಮಾತಿನಲ್ಲಿ ಪ್ರಬಂಧಗಳನ್ನು ಬರೆಯಲು ಮತ್ತು ಪರೀಕ್ಷೆಯ ಪ್ರಶ್ನೆಪತ್ರಿಕೆಗಳಿಗೆ ಉತ್ತರ ಬರೆಯಲು ಅವಕಾಶ ಕೊಡಲಿಲ್ಲ. ಸಾಮಾಜಿಕ ಬದಲಾವಣೆಗಳನ್ನೂ ದಲಿತರ ಉದ್ಧಾರವನ್ನು ಪ್ರತಿಪಾದಿಸುತ್ತಿದ್ದ ವೀರೇಶಲಿಂಗಂ ಪಂತುಲು ಕೂಡ ಮೊದಲು ಚಿನ್ನಯ್ಯಸೂರಿ ಹಾಕಿಕೊಟ್ಟ ಮೇಲು ಪಂಕ್ತಿಯನ್ನೇ ಅನುಸರಿಸಿದರು. ಆದರೆ ಇಂಥ ಮಾದರಿಯ ನಿರುಪಯೋಗಿತೆಯನ್ನು ಬೇಗನೆ ಅರಿತುಕೊಂಡು ವಿದ್ಯಾರ್ಥಿಗಳಿಗೂ ಸಾಮಾನ್ಯ ಓದುಗನಿಗೂ ತಿಳಿಯುವಂತೆ ತನ್ನ ಭಾಷೆಯನ್ನು ಸರಳ ಮಾಡಿಕೊಂಡ. ಜೀವಂತ ಭಾಷೆಯ ಸಾಮರ್ಥ್ಯವನ್ನು ಆತ ಗಮನಕ್ಕೆ ತಂದುಕೊಳ್ಳದಿರಲಿಲ್ಲ; ತನ್ನ ಬರೆಹಗಳು ಸ್ಕೂಲು ಕಾಲೇಜುಗಳಿಗಲ್ಲ ಎಂದುಕೊಂಡು ಆತ ತನ್ನ ಸಾಮಾಜಿಕ ನಾಟಕಗಳಲ್ಲೂ ಪ್ರಹಸನಗಳಲ್ಲೂ ಅದನ್ನು ಬಳಸಿದ. ಆದರೆ ಎರಡು ಅಂಶಗಳು ಆತನ ತಿಳಿವಳಿಕೆಗೆ ಬರಲಿಲ್ಲ; ಒಂದು-ಆಗ ಇದ್ದ ವ್ಯಾಕರಣಗಳು ಕಾವ್ಯದ ಭಾಷೆಗೆ ಮಾತ್ರ ಉಪಯುಕ್ತವಾದುವು ಮತ್ತು ಕಾಲಕಾಲಕ್ಕೆ ಮುಂದಿನ ಕವಿಗಳ ಪ್ರಯೋಗಗಳ ದೃಷ್ಟಿಯಿಂದ ಅವನ್ನು ತಿದ್ದಬೇಕು ಎಂಬಂಶ. ಎರಡು-ಜೀವಂತ ಭಾಷೆಗಳು ಯಾವಾಗಲೂ ಚಲಿಸುತ್ತಲೇ ಇವೆ, ಮುಂಬರಿಯುತ್ತಿವೆ, ಬದಲಾಯಿಸುತ್ತಿವೆ, ಅವನ್ನು ವ್ಯಾಕರಣದಿಂದ ಕಟ್ಟಿ ಹಾಕಲಾಗುವುದಿಲ್ಲ. ವ್ಯಾಕರಣಗಳೆಲ್ಲ ಅವನ್ನು ಹಿಂಬಾಲಿಸಬೇಕು ಎಂಬುದು ಮತ್ತೊಂದಂಶ. ತನ್ನ ಆತ್ಮಚರಿತ್ರೆಯಲ್ಲಿ ಹೇಳಿಕೊಳ್ಳುವಂತೆ ಆಧುನಿಕ ತೆಲುಗು ಚಳವಳಿ ಸಾಧುವೆಂಬುದನ್ನು ವೀರೇಶಲಿಂಗಂ ತುಂಬ ತಡವಾಗಿ ಅರಿತುಕೊಂಡ. ಗಿಡುಗು ರಾಮಮೂರ್ತಿ ಮತ್ತು ಗುರುಜಾಡ ಅಪ್ಪಾರಾವ್ ಎಂಬವರಿಂದ 1910ರಲ್ಲಿ ಪ್ರೇರಿತವಾದ ಈ ಚಳವಳಿ, ಚಿನ್ನಯ್ಯಸೂರಿ ತಡೆ ಹಾಕುವವರೆಗೂ ನಡೆದು ಬಂದಿದ್ದ ಆಡುಮಾತಿನಲ್ಲೇ ತೆಲುಗು ಗದ್ಯವನ್ನು ಬರೆಯಬೇಕೆಂಬ ಪಂಥದವರೊಡನೆ ರಾಮಮೂರ್ತಿ ಹಲವು ವರ್ಷಗಳ ಕಾಲ ಹೋರಾಡಬೇಕಾಯಿತು. 1920ರ ಹೊತ್ತಿಗೆ ಆತ ಜಯಶಾಲಿಯಾದ. ಪತ್ರಿಕಾಕರ್ತರು ಕ್ರಮೇಣ ಜೀವಂತ ಭಾಷೆಯನ್ನೇ ತಮ್ಮ ಸಂಪಾದಕೀಯಗಳಿಗೂ ಇತರ ಲೇಖನಗಳಿಗೂ ಬಳಸತೊಡಗಿದರು. ಸಾವಿರಗಟ್ಟಲೆ ಗ್ರಂಥಗಳು ಜೀವಂತಭಾಷೆಯಲ್ಲೇ 1930-60ರ ಅವಧಿಯಲ್ಲಿ ಪ್ರಕಟವಾಗಿವೆ. ಪದ್ಯದ ಬರವಣಿಗೆಯಲ್ಲಿ ಸಹ, ಆಧುನಿಕ ಕವಿಗಳು ಉಪಯೋಗಿಸುವ ಭಾಷೆಯಲ್ಲಿ ನಿರುಪಯುಕ್ತವಾದ ಹಳೆಯ ಶಬ್ದಗಳಿರುವುದಿಲ್ಲ ಮತ್ತು ಆಧುನಿಕ ಪದಪ್ರಯೋಗಗಳನ್ನೇ ಬಳಸುತ್ತಾರೆ. ಆದರೆ ಹಳೆಯ ಸಂಪ್ರದಾಯವನ್ನೂ ಅನುಸರಿಸುವ ಕವಿಗಳೂ ಇದ್ದಾರೆ. ಅವರು ಹಳೆಯ ವ್ಯಾಕರಣಗಳ ನಿಯಮಗಳಿಗೆ ಅನುಸಾರವಾಗಿ ಬರೆಯಲೂ ಯತ್ನಿಸುತ್ತಿದ್ದಾರೆ. ಆದರೆ ಹೀಗೆ ಬರೆಯುವುದರಲ್ಲಿ ಅವರು ದೋಷಗಳಿಗೆಡೆಗೊಡುವುದೂ ಅನಿವಾರ್ಯವಾಗಿಯೇ ಆಗುತ್ತಿದೆ. ಜಾಗವಿಲ್ಲದ್ದರಿಂದ, ನನ್ನಯನ ಕಾಲದಿಂದಲೂ ಭಾಷೆ ಹೇಗೆ ಬದಲಾಯಿಸುತ್ತ ಬಂದಿದೆ ಎಂಬುದಕ್ಕೆ ಕೆಲವು ಉದಾಹರಣೆಗಳನ್ನು ಮಾತ್ರ ಇಲ್ಲಿ ಕೊಡಲಾಗಿದೆ.

ತೆಲುಗಿನಲ್ಲಿ ಕೆಲವು ಸಂಸ್ಕೃತ ಶಬ್ದಗಳಿಗೆ ಬೇರೆ ಅರ್ಥಗಳು ಬಂದಿವೆ. ಉದಾಹರಣೆಗೆ, ಅಭ್ಯಂತರಂ ಎಂಬುದಕ್ಕೆ ಸಂಸ್ಕೃತದಲ್ಲಿ ಒಳಕೋಣೆ ಎಂದು ಅರ್ಥ; ತೆಲುಗಿನಲ್ಲಿ ಇದಕ್ಕೆ ಆಕ್ಷೇಪಣೆ ಎಂಬ ಅರ್ಥ ಬಂದಿದೆ. ಈ ಅರ್ಥದ ಬದಲಾವಣೆ ಹೇಗಾಯಿತೆಂದು ಈಗ ನೋಡೋಣ. ಯಾವನಾದರೊಬ್ಬ ಆಗಂತುಕ ರಹಸ್ಯವಾಗಿ ಮಾತಾಡಲು ಅಪೇಕ್ಷಿಸಿದಾಗ, ಮನೆಯ ಯಜಮಾನ ಆತನನ್ನು ಒಳಕೋಣೆಗೆ ಕರೆದುಕೊಂಡು ಹೋಗುತ್ತಾನೆ. ಮಾತಾಡಲು ಬಂದಾಗ ಯಜಮಾನ ಒಳಕೋಣೆಗೆ ಹೋಗೋಣವೇ ಎಂದು ಕೇಳುತ್ತಾನೆ. ಬಂದವನು, "ಏಕೆ, ಬೇಡ ಬೇಡ ಅದು ಅವಶ್ಯಕವಲ್ಲ ಈ ಮೊಗಸಾಲೆಯಲ್ಲೇ ಹೇಳಬೇಕಾದುದನ್ನು ಹೇಳುತ್ತೇನೆ." ಎನ್ನುತ್ತಾನೆ. ಮುಂದೆ ಇದು ಇಲ್ಲಿಯೇ ಹೇಳಲು ನನ್ನ ಆಕ್ಷೇಪಣೆಯೇನೂ ಇಲ್ಲ ಎಂಬರ್ಥಕ್ಕೆ ತಿರುಗಿತು. ಪ್ರಾಚೀನತಮ ಕವಿಗಳು ಪ್ರಯೋಗಿಸಿರುವ ಕೆಲವು ತೆಲುಗು ಶಬ್ದಗಳನ್ನು ಈಗಲೂ ಉಪಯೋಗಿಸುತ್ತಾರೆ. ಆದರೆ ಬೇರೆ ಅರ್ಥದಲ್ಲಿ. ಉದಾಹರಣೆಗೆ, ಕಂಪು ಎಂಬುದಕ್ಕೆ ಹಿಂದೆ ಯಾವ ಬಗೆಯ ವಾಸನೆಗಾದರೂ ಪ್ರಯುಕ್ತವಾಗುತ್ತಿತ್ತು, ಮುಂದೆ ಅದಕ್ಕೆ 'ನಾತ' ಎಂಬ ಅರ್ಥ ಬಂದಿದೆ.

ಚೀರೆಲು ಎಂಬುದನ್ನು ಹದಿಮೂರನೆಯ ಶತಮಾನದ ತಿಕ್ಕನ ರುಮಾಲಿನ ಬಟ್ಟೆ ಎಂಬರ್ಥದಲ್ಲಿ ಪ್ರಯೋಗಿಸಿದ್ದ. ಈಗದಕ್ಕೆ ಹೆಂಗಸರ ಸೀರೆ ಎಂಬರ್ಥ ಬಂದಿದೆ. ರೇಪು ಎಂಬುದಕ್ಕೆ ಮೊದಲು ಪ್ರಾತಃಕಾಲ ಎಂಬರ್ಥವಿದ್ದು ಈಗ ನಾಳೆ ಎಂಬರ್ಥ ಬಂದಿದೆ. ನಡುವಣ ಸ್ವರಗಳನ್ನೋ ಅಕ್ಷರಗಳನ್ನೋ ಬಿಟ್ಟು ಶಬ್ದಗಳನ್ನು ಸಂಕ್ಷೇಪಗೊಳಿಸಲಾಗಿದೆ.

ಉದಾಹರಣೆಗೆ, ಚಿಲುಕ>ಚಿಲ್ಕ [ಗಿಳಿ]; ಮೊಲಕ>ಮೊಲ್ಕ [ಚಿಗುರು]; ಕೊಲಂದಿ>ಕೊಲ (ಒ) ದಿ>ಕೊಲ್ಡ>ಕೊದ್ದಿ (ಕೆಲವು, ಸ್ವಲ್ಪ); ಚೇಸಿನದಿ>ಚೇಸಿಂದಿ (ಮಾಡಿದುದು); ಮೂಡ್-ಆಗು-ನಾಡು>ಮೂಡ್-ಅವು-ನಾಡು> ಮೂಡೋನಾಡು [ಮೂರನೆಯದಿನ]; ಇರುವಡಿ>ಇರುವೈ>ಇರವೈ [ಇಪ್ಪತ್ತು] ಅಂತಯುನು>ಅಂತಾನು>ಅಂತಾ(ಎಲ್ಲ); ಅಂತದನಿಕ [ಅಲ್ಲಿಯವರೆಗೆ]> ಅಂತದಾಕ>ಅಂದಾಕ; ವಲುವರು>ವಲುವದು>ವಲದು>ವಲ್‍ದು>ವದುಕ [ಬೇಕಾಗಿಲ್ಲ, ಬೇಡ] ವಚ್ಚುಚು>ವಸ್ತು[ಬರುವುದು].

ಕ್ರಿಯಾಪದಗಳಲ್ಲಿ ಕೆಲವು ಸಂಕ್ಷಿಪ್ತರೂಪಗಳನ್ನು ಹೊಂದಿರುವುದು ಕುತೂಹಲಜನಕವಾಗಿವೆ. ಉದಾಹರಣೆಗೆ, ಚೇಯು (ಮಾಡು); ಚೇಯು ಚುಂಡುಡುನು (ಮಾಡುತ್ತಾ ನಾನಿದ್ದೇನೆ) ಎಂಬುದನ್ನು ನನ್ನಯ್ಯ ಬಳಸಿದ್ದಾನೆ. ತರುವಾಯ ಅದು ಚೇಯು-ಚ-ಉಂಡುನು ಎಂದಾಯಿತು. ಕೊನೆಗೆ ಅದರ ಆಧುನಿಕ ರೂಪ ಚೇಸ್ತು ಉಂಡುನು ಎಂದಾಗಿದೆ ಮತ್ತು ಉಂಡುನು ಎಂಬುದು ಉಂದಟಾನು ಎಂದಾಗಿದೆ. ಇದೇ ರೀತಿಯಲ್ಲಿ ಚೇಯು-ಚ್-ಉಂಡುದುರು ಮತ್ತು ಚೇಯುಚುಂದ್ರು (ಅವರು ಮಾಡುತ್ತಿದ್ದಾರೆ) ಎಂಬ ರೂಪಗಳನ್ನು ಪ್ರಾಚೀನತಮ ಕವಿಗಳು ಬಳಸುತ್ತಿದ್ದರು. ಇವು ಈ ಚೇಸ್ತೂ ಉಂಟುರು ಎಂದು ತೀರದ ಜಿಲ್ಲೆಗಳಲ್ಲೂ ಚೇಸ್ತುಂಡ್ರು ಎಂದು ತೆಲಂಗಾಣದಲ್ಲೂ ಆಗಿದೆ.

ಚೇಸಿತಿನಿ (ನಾನು ಮಾಡಿದೆ)>ಚೇಸ್ತಿನಿ>ಚೇಸ್ತಿ ಎಂಬುದು ಸೀಡೆಡ್ (ಬಿಟ್ಟು ಕೊಟ್ಟ) ಜಿಲ್ಲೆಗಳಲ್ಲೂ ತೆಲಂಗಾಣದಲ್ಲೂ ಬಳಕೆಯಲ್ಲಿದೆ. ಆದರೆ ತೀರದ ಜಿಲ್ಲೆಗಳಲ್ಲಿ ಕಣ್ಮರೆಯಾಗಿದೆ. ಅದರ ಜಾಗದಲ್ಲಿ ಚೇಸಿ-ನ-ವಾಡನು ಎಂಬುದು ಪುಲ್ಲಿಂಗದಲ್ಲೂ ಚೇಸಿ-ನ-ದಾನನು ಎಂಬುದು ಸ್ತ್ರೀಲಿಂಗದಲ್ಲೂ ಪ್ರಯುಕ್ತವಾಗುತ್ತಿದೆ. ಇವುಗಳು ಕ್ರಮವಾಗಿ ಅಖ್ಯಾತ ಪ್ರತ್ಯಯಗಳನ್ನು ಹಚ್ಚುವುದರಿಂದ ಆದುವಲ್ಲ. ಮಾಡಿದ್ದನ್ನು ಹೇಳಲು ಉಪಯೋಗಿಸುವ ರೂಪಗಳು ಮೊದಲನೆಯದರ ಪದಶಃ ಅರ್ಥ ಏನೆಂದರೆ ಅದನ್ನು ಮಾಡಿದವನು ನಾನು ಎಂದು. ಎರಡನೆಯದಕ್ಕೆ ಅದನ್ನು ಮಾಡಿದವಳು ನಾನು ಎಂದು. ಇವೆರಡರಲ್ಲಿ ಪ್ರತಿಯೊಂದು ಕಾಲಕ್ರಮೇಣ ಬದಲಾಯಿಸಿದೆ. ಚೇಸಿನವಾಡನು>ಚೇಸಿನಾಡನು>ಚೇಸಿನ್‍ಡ ಅಥವಾ ಚೇಸಿನಾನು>ಚೇಶಾನು; ಚೇಸಿನದಾನನು. ಚೇಸಿನದಾನ ಅಥವಾ ಚೇಸಿನಾನು>ಚೇಶಾನು. ಇವೆರಡು ಸಂದರ್ಭಗಳಲ್ಲೂ ಕೊನೆಯ ರೂಪಗಳು ಚೇಸಿನನು ಮತ್ತು ಚೇಶಾನು ಎಂದಾಗಿ ಲಿಂಗಸೂಚಕವಾದ ಯಾವ ಪ್ರತ್ಯಯಗಳನ್ನೂ ಹೊಂದದೆ ಇವೆ. ಹೀಗೆಮಟ್ಟಸಮಾಡುವ ಪ್ರಕ್ರಿಯೆಯನ್ನು ಆಧುನಿಕರು ಸಮೀಚೀನವಾದ ವಿಕಾಸವೆಂದೂ ಶುದ್ಧಪದ ಪ್ರಿಯರು ಹಸೆಗೆಟ್ಟ ಬದಲಾವಣೆಯೆಂದೂ ಭಾವಿಸುತ್ತಾರೆ. ಪ್ರಾಚೀನತಮ ಲೇಖಕರು ತಪ್ಪದೆ ಬಳಸುತ್ತಿದ್ದ ಅರ್ಧಾನುಸ್ವಾರ (0) ಮತ್ತು ಶಕಟರೇಫ (¾) ಗಳನ್ನು ಆಧುನಿಕರು ಕೈಬಿಟ್ಟಿದ್ದಾರೆ. ಅದನ್ನು ಎಲ್ಲಿ ಉಪಯೋಗಿಸಬೇಕೆಂಬುದನ್ನು ಬರೆಹಗಾರರು ಅರಿತಿದ್ದ ಕಾಲವೊಂದಿತ್ತು. ಏಕೆಂದರೆ ಜನ ಅವನ್ನು ಉಚ್ಚರಿಸುತ್ತಿದ್ದರು. ಕಾಲಕ್ರಮೇಣ ಜನರ ಮಾತಿನ ರೂಢಿ ತೆಲುಗು ದೇಶದ ಅನೇಕ ಭಾಗಗಳಲ್ಲಿ ಅಷ್ಟೋ ಇಷ್ಟೋ ಬದಲಾಯಿಸುತ್ತ ಬಂತು. ನಾಗರಿಕತೆಯಲ್ಲೂ ಮುಂದುವರಿದಿದ್ದ ಮಧ್ಯಭಾಗದ ಜನರಲ್ಲಿ ಮಾತಿನ ಉಚ್ಚಾರಗಳಲ್ಲಿ ವ್ಯತ್ಯಾಸಗಳು ಬೇಗನೆಯೂ ವಿಸ್ತಾರವಾಗಿಯೂ ಹರಡಿದುವು. ದೇಶದ ಕೊನೆ ಮೂಲೆಗಳಲ್ಲಿ ಮಾತ್ರ ಈ ವ್ಯತ್ಯಾಸಗಳು ನಿಧಾನವಾಗಿ ವ್ಯಾಪಿಸಿದವು, ಏಕೆಂದರೆ ಭೌಗೋಳಿಕವಾದ ಅಡಚಣೆಗಳಿಂದ ಆ ಭಾಗದ ಜನರು ಭಾಷೆಯ ಮುಖ್ಯ ಪ್ರವಾಹದ ಸಂಸರ್ಗದಿಂದ ದೂರ ಉಳಿದರು. ನದಿಯಲ್ಲಿ ನೆರೆಯುಕ್ಕಿದಾಗ ನೀರು ಅಕ್ಕಪಕ್ಕದ ಹಳ್ಳ ಕೊಳ್ಳಗಳಿಗೆ ಹರಿದು ಹಿಂಗಿ ಹೋಗುವವರೆಗೂ ಅಥವಾ ಮತ್ತೊಂದು ನೆರೆ ಬಂದಾಗ ಅದರೊಡನೆ ಬೆರೆಯುವವರೆಗೂ ಕೆಲವು ವರ್ಷಗಳ ಕಾಲ ಅಲ್ಲೆ ತಂಗಿರುತ್ತದೆ. ಆದರೆ ನದಿಯ ನೀರು ಮಾತ್ರ ಸತತವಾಗಿ ಬದಲಾಯಿಸುತ್ತಲೇ ಇರುತ್ತದೆ. ಜೀವಂತವಾಗಿರುವ ಭಾಷೆಯ ವಿಚಾರದಲ್ಲೂ ಹೀಗೆಯೇ ಪೂರ್ವದ ಕವಿಗಳು ಉಪಯೋಗಿಸಿರುವ ಹಲವು ಪದಗಳು ನಾಡಿನ ಮಧ್ಯಭಾಗದಲ್ಲಿ ಬಳಕೆಯಲ್ಲಿಲ್ಲದೆ ಹಿಂದೆ ಸರಿದಿವೆ. ಆದರೆ ಕೊನೆ ಮೂಲೆಗಳಲ್ಲಿ ಅವನ್ನು ಜನ ಇನ್ನೂ ಬಳಸುತ್ತಿದ್ದಾರೆ. ಉದಾಹರಣೆಗೆ: ಕುರು (ಸ್ವಲ್ಪ; ಕೊಂಚ); ಕುರು ಮಾಪು ಪುಟ್ಟಂ (ಸ್ವಲ್ಪ ಕೊಳೆಯಾಗಿರುವ ಬಟ್ಟೆ) ಎಂಬುದನ್ನು ನನ್ನಯ್ಯನ ಪ್ರಯೋಗ; ಅದು ತೆಲುಗು ದೇಶದ ಮಧ್ಯಭಾಗದಲ್ಲಿ ಕಣ್ಮರೆಯಾಯಿತು; ಆದರೆ ದೇಶದ ಉತ್ತರ ಭಾಗದ ಕೊನೆಯ ಜಿಲ್ಲೆಯ ಹಳ್ಳಿಗಳ ಜನ ಬಳಸುತ್ತಾರೆ.

ಶಬ್ದಕೋಶ

[ಬದಲಾಯಿಸಿ]

ಮಿಕ್ಕೆಲ್ಲ ಭಾಷೆಗಳಂತೆಯೇ ತೆಲುಗು ಸಹ ಸ್ವಂತವಾಗೂ ಪರಭಾಷೆಯಿಂದ ಎರವಲು ಪಡೆದೂ ಶಬ್ದಸಂಪತ್ತನ್ನು ಬೆಳೆಸಿಕೊಂಡಿದೆ. ಕೆಲವು ಶಬ್ದಗಳಿಗೆ ಹೊಸ ಅರ್ಥಗಳು ಬಂದಿವೆ. ಕೆಲವಕ್ಕೆ ಮೂಲ ಅರ್ಥದಿಂದ ಉದ್ಭವವಾದ ಮತ್ತೊಂದು ಅರ್ಥ ಪ್ರಾಪ್ತವಾಗುತ್ತದೆ. ಉದಾಹರಣೆಗೆ, ಮಾಟ (ಮಾತು) ಎಂಬುದನ್ನು ಮೂಲದ ಅರ್ಥಕ್ಕೆ ಸಮೀಪವಾಗಿಯೋ ಅಥವಾ ದೂರವಾಗಿಯೋ ಇರುವ ಅನೇಕ ಭಾವಗಳನ್ನು ಹೇಳಲು ಉಪಯೋಗಿಸುತ್ತಾರೆ. ಸಿ.ಪಿ. ಬ್ರೌನ್ ಈ ಪದಕ್ಕೆ ಮಾತು,(ಪದ) ಮಾತುಗೊಡುವದು, ಸುದ್ದಿ ಎಂಬ ಅರ್ಥ ಕೊಟ್ಟಿದ್ದಾನೆ. ಅಲ್ಲದೆ ಗಮನಾರ್ಹವಾದ ಉದಾಹರಣೆಗಳನ್ನು ಕೊಟ್ಟಿದ್ದಾನೆ; ಮಾಟಾಡು, ಮಾಟಕಾರಿ (ವಾಚಾಳಿ), ಮಾಟಲಕು ಪಟ್ಟುಕೊಂಟೆ ವಿಡವದು (ಮಾತನಾಡಲು ಮೊದಲು ಮಾಡಿದರೆ ಮುಗಿಸಲೇ ಒಲ್ಲೆ), ಮಂಚಿ ಮಾಟ (ಒಳ್ಳೆಯದು), ನಾಕು ತುರುಕ ಮಾಟಲು ರಾವು (ನನಗೆ ತುರುಕು ಮಾತು ತಿಳಿಯದು), ವಾಡಿಕಿ ನಾಕು ಮಾಟಲು ಲೇವು (ನನಗೂ ಅವನಿಗೂ ಮಾತಿಲ್ಲ), ಅತನು ಮಾಟ ತಪ್ಪಲೇದು (ಆತ ಕೊಟ್ಟ ಭಾಷೆಯನ್ನು ತಪ್ಪುವುದಿಲ್ಲ), ನಾ ಮಾಟ ವೇರು, ನೀ ಮಾಟ ವೇರು (ನಾನೊಂದು ಹೇಳುತ್ತೇನೆ, ನೀನೊಂದು ಹೇಳುತೀಯ) ಆಯನ ಮಾಟಕು ಎದುರುಲೇದು (ಆತನ ಮಾತಿಗೆ ಎದುರಿಲ್ಲ), ವೊಕ ಮಾಟ ಯಿಚ್ಚಿಪದಿಮಾಟಲು ತೀಸುಕೊನ್ನಾಡು (ಒಂದು ಮಾತಿಗೆ ಹತ್ತು ಮಾತು ಪಡೆದ), ಆ ಮಾಟ ವಿಂಟೇ ಆಯನ ಯೇಮನುನು? (ಈ ಮಾತು ಕೇಳಿದರೆ ಆತ ಏನೆಂದಾನು?) ಕೆಲವು ಶಬ್ದಗುಚ್ಚಗಳಲ್ಲಿ ಮಾಟ ಎಂಬುದನ್ನು ಭಾಷಾಂತರಿಸುವ ಅವಶ್ಯವಿಲ್ಲ. ಉದಾಹರಣೆಗೆ, ಆಮೆ ತಿರುಗವಸ್ತುವಲ್ಲದೆ ಮಾಟ ತೆಲಿಸಿ (ಅವಳು ಹಿಂದಿರುಗುತ್ತಾಳೆಂದು ತಿಳಿದು); ಆ ಮಾಟೇಯೆರುಗನು (ಆ ವಿಷಯವೇ ತಿಳಿಯದು); ಇಪ್ಪಟ್ಲೋ ವಾನಿ ಮಾಟ ಸಾಗದು (ಈಗ ಅವನ ಮಾತು ನಡೆಯದು); ಯೆಂತ ಮಾಟ! (ಎಂಥ ಮಾತು!) ಮಾಟ ಎಂಬುದನ್ನು ಇನ್ನೂ ಹಲವಾರು ಬಗೆಗಳಲ್ಲಿ ಉಪಯೋಗಿಸುತ್ತಾರೆ. ದೇಸೀ ಪ್ರಯೋಗಗಳನ್ನು ಬೆಳೆಸಿರುವ ಇಂಥ ಹಲವಾರು ಪದಗಳಿವೆ. ಶಬ್ದಾರ್ಥ ನಿರ್ವಚನ ಶಾಸ್ತ್ರಕ್ಕೆ ತೆಲುಗು ಭಾಷೆಯಲ್ಲಿ ಒಳ್ಳೆಯ ಅವಕಾಶವಿದೆ.

-ತನಂ (ಸಂಸ್ಕೃತದ ತ್ವಂ ಎಂಬುದರಿಂದ ಪ್ರಾಕೃತದ ಟಣಂ ಎಂಬುದರ ಮೂಲಕ) ಎಂಬ ಪದ ಭಾಷೆಯನ್ನು ಹತ್ತು ಪಡಿ ಸಿರಿವಂತವಾಗಿ ಮಾಡಿದೆ. ಭಾವಾರ್ಥ ಸೂಚಕ ಪ್ರತ್ಯಯವಾಗಿ ಅದನ್ನು ಶಬ್ದಗಳಿಗೆ ಹಚ್ಚುತ್ತಾರೆ. ಉದಾಹರಣೆಗೆ, ಮಂಚಿತನಂ (ಒಳ್ಳೆಯತನ), ಪೆಂಕೆತನಂ (ದುಷ್ಟತನ), ಪೆದ್ದತನಂ (ದೊಡ್ಡತನ), ಪೆತ್ತನಂ (ಮೇಲುಸ್ತುವಾರಿಕೆ), ಪಿರಿಕಿತನಂ (ಹೇಡಿತನ) ಮುಂತಾದುವು.

-ಅರಿಕಮು ಎಂಬುದು ಮತ್ತೊಂದು ಪ್ರತ್ಯಯ. ಇದನ್ನು ಯಾವ ಶಬ್ದಕ್ಕೆ ಹಚ್ಚುತ್ತಾರೋ ಅದರ ಭಾವವನ್ನು ಇದು ದ್ಯೋತಿಸುತ್ತದೆ. ಉದಾಹರಣೆಗೆ, ಇಲ್ಲರಿಕಮು (ಮಾವನ ಮನೆಯಲ್ಲಿ ವಾಸವಿರುವದು), ಪೇದರಿಕಮು (ಪಾಪರುತನ / (ಕಡು)ಬಡತನ), ಮೇನರಿಕಮು (ಹೆಂಗಸೊಬ್ಬಳ ಮಗನಿಗೂ ಆಕೆಯ ಅಣ್ಣನ ಮಗಳಿಗೂ ಇರುವ ಬಾಂಧವ್ಯ (ಉದ್ದೇಶವೇನೆಂದರೆ ಇವರಿಬ್ಬರೂ ಮದುವೆ ಮಾಡಿಕೊಳ್ಳಬಹುದು ಎಂಬುದನ್ನು ಸೂಚಿಸುವುದು) ಇತ್ಯಾದಿ.

ಇತರ ಭಾಷೆಗಳಿಂದ ತೆಲುಗು ನೂರಾರು ಶಬ್ದಗಳನ್ನು ತೆಗೆದುಕೊಂಡಿದೆ. ಮೊದಲು ಅದು ಸಂಸ್ಕೃತದಿಂದ ನೇರವಾಗಿಯೂ ಪ್ರಾಕೃತದ ಮೂಲಕವೂ ಅನೇಕ ಶಬ್ದಗಳನ್ನು ತೆಗೆದುಕೊಂಡಿತು; ಸಂಸ್ಕೃತದ ತದ್ಭವಗಳನ್ನು ರೂಪಿಸಿಕೊಂಡಿತು. ಉದಾಹರಣೆಗೆ, ಸಂಸ್ಕೃತದ `ಮುಖ'ದಿಂದ ಮೊಗಮುಲು, ಮುಗ್ಧಾ ಎಂಬುದರಿಂದ ಮುದ್ದ-(ರಾಲು), ಯುವತಿಯಿಂದ ಉವಿದ; ಅಗ್ನಿಯಿಂದ ಅಗ್ಗಿ ಮುಂತಾದವು.

ಅದು ಸಾಮಾನ್ಯವಾಗಿ ಪ್ರತ್ಯಯರಹಿತ ಶಬ್ದಗಳನ್ನು ತೆಗೆದುಕೊಂಡು ತನ್ನದೇ ಆದ ವಿಭಕ್ತಿ ಮತ್ತು ಅಖ್ಯಾತ ಪ್ರತ್ಯಯಗಳನ್ನು ಸೇರಿಸಿಕೊಳ್ಳುತ್ತದೆ. ಉದಾಹರಣೆಗೆ, ಪುರುಷುಡು, ಪುಷ್ಪಂ, ಗುರುವು, ಸುರಲು, ಜನಿಸ್ತು (ಜನಿಸುವದು), ರಕ್ಷಿಸ್ತು ಇದಕ್ಕೆ ಕೆಲವು ಅಪವಾದಗಳಿವೆ; ಉದಾಹರಣೆಗೆ, ಮನಸಾ, ಕ್ರಮಶಃ ಅಥವಾ ಕ್ರಮೇಣ ಇತ್ಯಾದಿ.

ಎರವು ತೆಗೆದುಕೊಂಡ ಪದಗಳನ್ನು ಜೀರ್ಣಿಸಿಕೊಳ್ಳುವ ವಿಧಾನದಲ್ಲಿ ಒಂದು ವಿಶೇಷಾಂಶ ಗೋಚರಿಸುತ್ತದೆ. ಇಂಗ್ಲಿಷಿನ ರೂಲ್ ಎಂಬ ಶಬ್ದಕ್ಕೆ ಅದರ ಬಹುವಚನ ಪ್ರತ್ಯಯವನ್ನು ಸೇರಿಸಿ ಹೇಳುತ್ತಾರೆ. ನೀಕು ರೂಲ್ಸು ತೆಲುಸನಾ? (ನಿನಗೆ ರೂಲ್ಸು ಗೊತ್ತೇ?) ನೀವು ರೂಳ್ಳು ಗೀಯಗವಲಾ? (ನೀನು ಗೆರೆಗಳನ್ನು ಎಳೆಯ ಬಲ್ಲೆಯಾ). ಮನ್ಸ ಮುಂತಾದ ಶಬ್ದಗಳಲ್ಲಿ ಅಂತ್ಯದಲ್ಲಿರುವ `ಸ್ ಎಂಬ ಅಕ್ಷರವನ್ನು ಬಹುವಚನ ಪ್ರತ್ಯಯವಾಗಿ ತೆಲುಗ ನಾಕು ಸಮನು ವಚ್ಚಿಂದಿ ಎನ್ನುತ್ತಾನೆ. ಇದನ್ನು ಬಹುವಚನದಲ್ಲಿ ಉಪಯೋಗಿಸುವಾಗ ಸಮನ್‍ಲು ಎಂದು ಪ್ರಯೋಗಿಸುತ್ತಾನೆ. ಇದು ಅರಗಿಸಿಕೊಳ್ಳುವ ವಿಧಾನವನ್ನು ಸೂಚಿಸುತ್ತದೆ.

ಕೆಲವು ಪರಕೀಯ ಶಬ್ದಗಳು ಜನಕ್ಕೆ ಎಷ್ಟು ಪರಿಚಿತವಾಗಿವೆಯೆಂದರೆ ಅವು ತೆಲುಗು ಶಬ್ದಗಳಲ್ಲ ಎಂದು ಅವರಿಗೆ ಹೇಳಿದಾಗ ಅವರು ಅಚ್ಚರಿಗೊಳ್ಳುತ್ತಾರೆ. ಉದಾಹರಣೆಗೆ: ರೈಲು ಬಂಡಿ, ಕಾನಿಸ್ತೇಬಲು, ಪೋಸ್ಟ್ ಆಫೀಸು, ಕವರು, ಇಸ್ಕೂಲು, ಕಾಲೇಜಿ, ಇಸ್ಪೇಟು, ಕಳಾವರು, ಕೋರ್ಟು, ವೋಟು, ಟಿಕೆಟ್ಟು, ಲಾಯರು, ಅಸುಪತ್ರಿ -ಮುಂತಾದುವು. ತೆಲುಗಿನಲ್ಲಿ ಒಗಟುಗಳೂ ಗಾದೆಗಳೂ ತುಂಬ ಇವೆ. ಇವುಗಳಲ್ಲಿ ತಮ್ಮದೇ ಆದ ಅಂತರಪ್ರಾಸ, ಅಂತ್ಯಪ್ರಾಸ, ಛಂದೋಲಯಗಳು ಮುಂತಾದ ಲಕ್ಷಣಗಳು ಇವೆ. ಪೋರಾನಿ ಚೋಟುಲಕುಪೋತೆ, ರಾರಾನಿ ನಿಂದಲು ರಾಕ ಮಾನವು (ಹೋಗಬಾರದ ಜಾಗಕ್ಕೆ ಹೋದರೆ ನೀನು ನಿಂದೆಗೂ ಅವಮಾನಕ್ಕೂ ಪಾತ್ರನಾಗಬೇಕಾಗುತ್ತದೆ); ಮಾಟಲು ಕೋಟಲು ದಾಟುತಾಯ್; ಕಾನಿ ಕಾಳ್ಳು ಗಡಪ ದಾಟಲೇವು (ಮಾತುಗಳು ಕೋಟೆಗಳನ್ನು ದಾಟುತ್ತವೆ; ಕಾಲುಗಳು ಹೊಸಿಲನ್ನು ದಾಟವು- ಬರಿ ಬಾಯಿ ಮಾತಿನವನ್ನು ಕುರಿತು ಹೀಯಾಳಿಕೆ), ಒಕನಾಡು ವಿಂದು ಒಕನಾಡು ಮಂದು (ಒಂದು ದಿನ ಹಬ್ಬ, ಒಂದು ದಿನ ಮದ್ದು), ತಾನು ವಲಚಿಂದಿ ರಂಭ; ತಾನು ಮುನಿಗಿಂದಿ ಗಂಗ (ತಾನೊಲಿದವಳು ರಂಭೆ; ತಾನು ಮಿಂದುದು ಗಂಗೆ); ತಾಡುಲೇನಿ ಕಟ್ಟು; ಕೋಲಲೇನಿ ಪೆಟ್ಟು (ಹಗ್ಗವಿಲ್ಲದ ಕಟ್ಟು, ಬಾಣವಿಲ್ಲದ ಗುರಿ); ಶುಲ್ಕ ಪ್ರಿಯಾಲು, ಶೂನ್ಯ ಹಸ್ತಾಲು (ಶುಲ್ಕ ಹೊಗಳಿಕೆ, ಶೂನ್ಯ ಹಸ್ತ) ಇತ್ಯಾದಿ.

ಒಗಟುಗಳೂ ಅಂತಃಪ್ರಾಸ, ಅಂತ್ಯಪ್ರಾಸ ಮತ್ತು ಛಂದಸ್ಸುಗಳಿಂದ ನಿಬದ್ಧವಾಗಿವೆ. ಉದಾಹರಣೆಗೆ ತೆಲ್ಲನಿಮಡಿಲೋ ನಲ್ಲನಿವಿತ್ತುಲು; ಚೇತಿತೊಚಲ್ಲಿನಾಮ್, ನೋಟಿತೋ ಏರಿನಾಂ (ಬಿಳಿ ಹೊಲದಲ್ಲಿ ಕಪ್ಪು ಬೀಜಗಳನ್ನು ನಮ್ಮ ಕೈಯಿಂದ ಬಿತ್ತಿದೆವು, ಬಾಯಿಂದ ಎತ್ತಿದೆವು)- ಬಿಳಿಯ ಕಾಗದದ ಮೇಲೆ ಕಪ್ಪು ಶಾಯಿಯಿಂದ ಬರೆದು ಆಮೇಲೆ ಅದನ್ನು ಓದುವದನ್ನು ಕುರಿತ ಒಗಟೆಯಿದು. ದಾನಿ ಭೋಗಂ ರಾಜ ಭೋಗಂ, ದಾನಿ ಪಾಲು ಪೆಂಟಪಾಲು (ಅದರ ಭೋಗ ರಾಜಭೋಗ, ಅದರ ಪಾಲು ತಿಪ್ಪೆ)- ರಾಜನು ಊಟ ಮಾಡಿದ ಬಾಳೆ ಎಲೆಯ ವರ್ಣನೆ ಇದು.

 
 
 
 
ಮೂಲ-ದ್ರಾವಿಡ
 
 
 
 
 
 
 
 
 
 
 
 
 
 
 
 
 
 
 
 
 
 
 
 
ಮೂಲ-ದಕ್ಷಿಣ-ದ್ರಾವಿಡ
 
ಮೂಲ-ದಕ್ಷಿಣ-ಮಧ್ಯ ದ್ರಾವಿಡ
 
 
 
 
 
 
 
 
 
 
 
 
 
ಮೂಲ-ತಮಿಳು-ಕನ್ನಡ
 
 
 
ಮೂಲ-ತೆಲುಗು
 
 
 
 
 
 
 
 
 
 
 
 
 
 
 
 
 
 
 
 
 
 
ಮೂಲ-ತಮಿಳು-ತೋಡ
 
ಮೂಲ-ಕನ್ನಡ
 
ಮೂಲ-ತೆಲುಗು
 
 
 
 
 
 
 
 
 
 
 
 
 
 
 
 
ಮೂಲ-ತಮಿಳು-ಕೊಡವ
 
ಕನ್ನಡ
 
ತೆಲುಗು
 
 
 
 
 
 
ಮೂಲ-ತಮಿಳು-ಮಲೆಯಾಳ
 
 
 
 
 
 
 
 
 
 
 
 
 
ಮೂಲ-ತಮಿಳು
 
ಮಲೆಯಾಳ
 
 
 
 
 
ತಮಿಳು
ಈ ರೇಖಾಚಿತ್ರ ದಕ್ಷಿಣ ಭಾರತದಲ್ಲಿ ಪ್ರಚಲಿತವಾಗಿರುವ ಪ್ರಮುಖ ದ್ರಾವಿಡ ಭಾಷೆಗಳ ವಂಶಾವಳಿಯನ್ನು
ನಿರೂಪಿಸುತ್ತದೆ.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]

ತೆಲುಗು ಸಾಹಿತ್ಯ

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ತೆಲುಗು&oldid=1230157" ಇಂದ ಪಡೆಯಲ್ಪಟ್ಟಿದೆ