ವಿಷಯಕ್ಕೆ ಹೋಗು

ಕಲ್ಹಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಲ್ಹಣ ಪ್ರಾಚೀನ ಭಾರತೀಯರಿಗೆ ಐತಿಹಾಸಿಕ ದೃಷ್ಟಿ ಇರಲಿಲ್ಲವೆಂಬ ಆಕ್ಷೇಪಣೆಗೆ ಅಪವಾದ ಪ್ರಾಯವಾದ ಸಂಸ್ಕೃತ ಲೇಖಕ. ಕಾಶ್ಮೀರದ ಪಂಡಿತ ಕವಿ, ಲಾಕ್ಷಣಿಕ, ಭಾರತೀಯ ಕಾವ್ಯಮೀಮಾಂಸಕ. "ರಾಜತರಂಗಿಣಿ" ಈತನ ಪ್ರಸಿದ್ಧ ಕೃತಿ.

ಬದುಕು

[ಬದಲಾಯಿಸಿ]
  • ಇವನ ತಂದೆ ಚಂಪಕ, ಕಾಶ್ಮೀರದ ಹರ್ಷರಾಜನ (೧೦೮೯-೧೧೦೧) ಅಮಾತ್ಯನಾಗಿದ್ದ. ರಾಜಕಾರಣಿಯ ಮಗನಾಗಿದ್ದುದರಿಂದ ಕಲ್ಹಣನಿಗೆ ಇತಿಹಾಸ ರಚನೆಗೆ ಅಗತ್ಯವಾದ ಶಿಕ್ಷಣ ದೊರೆತಂತೆ ಕಾಣುತ್ತದೆ. ೧೧೪೮ರಲ್ಲಿ ರಾಜಾಶ್ರಯ ತಪ್ಪಿ ನಿರಾಶನಾಗಿದ್ದ ಕಲ್ಹಣ, ಒಂದು ವರ್ಷದ ಅವಧಿಯಲ್ಲಿ ಕಾಶ್ಮೀರದ ಬೃಹತ್ ಇತಿಹಾಸ ಗ್ರಂಥವಾದ 'ರಾಜತರಂಗಿಣಿ'ಯನ್ನು ಕಾವ್ಯರೂಪದಲ್ಲಿ ಬರೆದ.
  • ಐತಿಹಾಸಿಕ ವಿಷಯಗಳ ಆಗರವಾಗಿರುವುದಲ್ಲದೆ ಈ ಕಾವ್ಯ ಐಸಿರಿಯ ನಶ್ವರತೆ, ರಾಜವೈಭವದ ಹಿಂದಿರುವ ಹೊಲಸುಗಳು, ಜೀವನದಲ್ಲಿ ವಿರಕ್ತಿ ಶಾಂತಿಗಳ ಆವಶ್ಯಕತೆ - ಇವನ್ನು ವಿವರಿಸುತ್ತದೆ. ಕಾಲಾನಂತರದಲ್ಲಿ ಕಲ್ಹಣನಿಗೆ ರಾಜ ಜಯಸಿಂಹನ ಸನ್ಮಾನ ಲಭ್ಯವಾಯಿತು. ಆಗ ಈತ 'ಜಯಸಿಂಹಾಭ್ಯುದಯ'ವೆಂಬ ಕಾವ್ಯ ರಚಿಸಿದ. ಕಲ್ಹಣ ರಾಜತರಂಗಿಣಿಯನ್ನು ರಚಿಸುವ ಮುನ್ನ ಮಹಾಕಾವ್ಯ, ಹರ್ಷಚರಿತಾದಿ ಗದ್ಯಕೃತಿಗಳು, ಬಿಲ್ಹಣ ಮುಂತಾದವರ ರಚನೆಗಳು, ಜ್ಯೋತಿಷಶಾಸ್ತ್ರ ಇವನ್ನು ಅಭ್ಯಾಸ ಮಾಡಿದುದಾಗಿ ತಾನೇ ಹೇಳಿ ಕೊಂಡಿದ್ದಾನೆ.

ಇತಿವೃತ್ತ

[ಬದಲಾಯಿಸಿ]
  • ಕಾಶ್ಮೀರದಲ್ಲಿ ಮೂಲೆ ಮೂಲೆಗಳಲ್ಲಿದ್ದ ಉತ್ಕೀರ್ಣ ಶಿಲಾ ಶಾಸನಗಳು, ತಾಮ್ರ ಪಟಗಳು, ದಾನ ಪತ್ರಗಳು, ತಾಳೆಯೋಲೆಗಳು ಮುಂತಾದವನ್ನು ಈತ ಬಹು ಶ್ರಮದಿಂದ ಶೇಖರಿಸಿದ. ಪ್ರಾಚೀನ ರಾಜಾವಳೀಕಥೆಗಳು, ಪುರಾಣೇತಿಹಾಸಗಳು ಮುಂತಾದವನ್ನು ಸಂಗ್ರಹಿಸಿದ್ದ ನೀಲಮತ, ಸುವ್ರತ, ಕ್ಷೇಮೇಂದ್ರ, ಹಾಲರಾಜ, ಪದ್ಮಮಿಹಿರ, ಮುಂತಾದವರ ಕೃತಿಗಳನ್ನೆಲ್ಲ ಆಮೂಲಾಗ್ರವಾಗಿ ಪರಿಶೀಲಿಸಿದ. ಅನಂತರ ಪುರ್ವಾಗ್ರಹದೋಷ ಬಾರದಂತೆ ನಿಷ್ಪಕ್ಷಪಾತ ದೃಷ್ಟಿಯಿಂದ ರಾಜರ ವ್ಯಕ್ತಿತ್ವ ಹಾಗೂ ಕೃತಿಗಳನ್ನು ತೂಗಿ ನೋಡಿದುದಾಗಿ ನಿಸ್ಸಂಧಿಗ್ಧವಾಗಿ ಹೇಳಿದ್ದಾನೆ.
  • ಜನ ಜೀವನದಲ್ಲಾಗುತ್ತಿದ್ದ ಏರು-ಪೇರುಗಳನ್ನು ಕೂಲಂಕಷವಾಗಿ ಚಿತ್ರಿಸಲು ಯತ್ನಿಸಿದ್ದಾನೆ. ಪುರಾಣಕಾಲದಿಂದ ತನ್ನ ಜೀವಿತಕಾಲದ ವರೆಗಿನ ಕಾಶ್ಮೀರದ ಸಮಗ್ರ ಇತಿಹಾಸವನ್ನು ಬರೆಯುವುದು ಕಲ್ಹಣನ ಗುರಿ; ಮೊದಲ ಭಾಗದಲ್ಲಿ ಗೋನಂದ, ಕರ್ಕೋಟ, ಉತ್ಪಲ, ಲೋಹರ, ಮುಂತಾದ ರಾಜವಂಶಗಳ ಚರಿತ್ರೆ ಬರುತ್ತದೆ. ಈ ಭಾಗದಲ್ಲಿ ಪೌರಾಣಿಕಾಂಶಗಳೇ ಹೆಚ್ಚು; ಖಚಿತವಾದ ಕಾಲದೇಶಾದಿ ವಿವರಗಳು ಕಡಿಮೆ. ಆದರೆ ತನ್ನ ಕಾಲದ ಹತ್ತಿರ ಹತ್ತಿರಕ್ಕೆ ಬಂದಂತೆಲ್ಲ ಕಲ್ಹಣನ ನಿರೂಪಣೆ ಐತಿಹಾಸಿಕ ದೃಷ್ಟಿಯಿಂದ ಹೆಚ್ಚು ಖಚಿತಗೊಳ್ಳುತ್ತದೆ.

ರಾಜತರಂಗಿಣಿ ಒಳನೋಟ

[ಬದಲಾಯಿಸಿ]
  • ರಾಜತರಂಗಿಣಿ ಕೇವಲ ರಾಜರ ಪಟ್ಟಿಯಲ್ಲ; ರಾಜಕೀಯ, ಸಾಮಾಜಿಕ, ಆರ್ಥಿಕ ವಿಷಯಗಳ ಆಕರ. ರಾಜಾಸ್ಥಾನದವರ ದೃಷ್ಟಿಕೋನದಿಂದ ಬರೆದ ರಚನೆಯಾದರೂ ಮಧ್ಯಯುಗದಲ್ಲಿ ಭಾರತ ಜನತೆಯ ಜೀವನಸ್ವರೂಪವನ್ನು ಅರಿಯಲು ಇದು ಹೆಚ್ಚು ಸಹಾಯಕವಾಗಿದೆ. ಅರಮನೆಯ ಆವರಣದವರ, ಅಂತಃಪುರದವರ ಸೋಗುಗಳ ಹಿಂದಿನ ನಿಜಾಂಶವನ್ನೂ ಕಲ್ಹಣ ಹೊರಗೆಡಹುತ್ತಾನೆ. ಆರ್ಯಸಂಸ್ಕೃತಿಯ ಸಾರವಾದ ಧರ್ಮದ ಹೆಸರಿನಲ್ಲಿ ಕಡೆ ಕಡೆಗೆ ನಡೆಯತೊಡಗಿದ ಅತ್ಯಾಚಾರವನ್ನು ಕನ್ನಡಿ ಹಿಡಿದು ತೋರಿಸುತ್ತಾನೆ.
  • ಪ್ರಜಾ ಕ್ಷೇಮಕ್ಕಾಗಿ ಜೀವನವನ್ನೇ ಮುಡಿಪಾಗಿಡುತ್ತಿದ್ದ ರಾಜರ್ಷಿಗಳದೇ ಅಲ್ಲದೆ ನೀಚರೂ ಧೂರ್ತರೂ ಆದವರ ಸ್ಪಷ್ಟ ಚಿತ್ರಗಳೂ, ಪ್ರಜಾಕ್ಷೇಮಕ್ಕಾಗಿ ಕೆರೆ ಬಾವಿಗಳನ್ನು ದೇವಾಗಾರಗಳನ್ನೂ ಕಟ್ಟಿಸಿದ ದಾನಿಗಳ ವರ್ಣನೆಯೂ ಇಲ್ಲಿ ಬರುತ್ತವೆ. ಭಾರತೀಯ ದೃಷ್ಟಿಯಿಂದ ಭಾರತದ ಇತಿಹಾಸ ರಚನೆಯ ಈ ಪ್ರಪ್ರಥಮ ಪ್ರಯತ್ನ ಭಾರತೀಯ ಹಾಗೂ ವಿದೇಶೀ ವಿದ್ವಾಂಸರ ಪ್ರಶಂಸೆ ಗಳಿಸಿದೆ.
  • ೧೮೩೫ರಲ್ಲಿ ರಾಜತರಂಗಿಣಿಯ ಕೆಲವು ಭಾಗಗಳ ಮುದ್ರಣವನ್ನು ಇಂಗ್ಲಿಷ್ ವಿದ್ವಾಂಸರು ಕೈಗೊಂಡರು; ಅನಂತರ ಫ್ರಾನ್ಸಿನಲ್ಲೂ ಇದರ ಪ್ರಕಟಣೆ ಮತ್ತು ಭಾಷಾಂತರಗಳು ಆದವು. ೧೮೯೨ರಲ್ಲಿ ಸ್ಟೇಯ್ಸ್‌ ಇಡೀ ಗ್ರಂಥವನ್ನು (ಇದರಲ್ಲಿ ೨,೪೪೯ ಪದ್ಯಗಳಿವೆ) ಪರಿಷ್ಕರಿಸಿ ಅಚ್ಚು ಮಾಡಿಸಿದ. ಅನಂತರ ೧೯೩೫ರಲ್ಲಿ ದಿವಂಗತ ಆರ್.ಎಸ್. ಪಂಡಿತ್ (ಜವಾಹರಲಾಲ ನೆಹರೂ ಅವರ ಭಾವ) ಜೈಲಿನಲ್ಲಿ ಇದನ್ನು ಇಂಗ್ಲಿಷಿಗೆ ಭಾಷಾಂತರಿಸಿದರು. ಇದು ನೆಹರೂ ಅವರ ಮುನ್ನುಡಿಯೊಂದಿಗೆ ಅಚ್ಚಾಗಿದೆ.
  • ರಾಜತರಂಗಿಣಿ ಕಾವ್ಯ ದೃಷ್ಟಿಯಿಂದಲೂ ಅತ್ಯಂತ ಹೃದಯಂಗಮವಾದದ್ದು. ಇಲ್ಲಿಯ ಪದ್ಯಗಳಲ್ಲಿ ಮಾಧುರ್ಯ, ಕಾಂತಿಗುಣಗಳು ಮನೆ ಮಾಡಿ ಕೊಂಡಿರುವಂತೆ, ಉತ್ಪ್ರೇಕ್ಷಾದಿ ಅಲಂಕಾರಗಳು ಸಾಲ್ಗೊಂಡು ಸಂದಣಿಸುತ್ತವೆ. ಶಾಂತರಸವಂತೂ ಉಕ್ಕಿಹರಿಯುತ್ತದೆ. ಹೀಗೆ ಕಾವ್ಯ-ಇತಿಹಾಸ ಎರಡನ್ನೂ ಏಕಕಾಲದಲ್ಲಿ ಸವ್ಯಸಾಚಿಯಂತೆ ಸಾಧಿಸಿದ ಕಲ್ಹಣನ ಸಿದ್ಧಿ ಅದ್ಭುತ.
  • ಕಲ್ಹಣನ ಜೀವಿತ ಕಾಲದಲ್ಲಿದ್ದ ಕಾಶ್ಮೀರದ ಸ್ಥಿತಿ ಹೃದಯ ವಿದ್ರಾವಕವಾಗಿ ವರ್ಣಿತವಾಗಿದೆ. ಸೈನಿಕರಲ್ಲಾಗಲಿ, ಅಧಿಕಾರಿಗಳಲ್ಲಾಗಲೀ ಶಿಸ್ತು ಶೂನ್ಯವಾಗಿತ್ತು. ಸ್ವಾರ್ಥಿಗಳಾದ ಮಂತ್ರಿಗಳು, ದ್ರೋಹಿಗಳಾದ ಅಧಿಕಾರಿಗಳು, ಕಪಟಿ ಪುರೋಹಿತರು, ಸುಖಲೋಲುಪ ಜನತೆ ಇವರಿಂದ ದೇಶ ತುಂಬಿತ್ತು. ಅದರ ಪರಿಣಾಮವಾಗಿ ಮೋಸ, ಪಿತೂರಿ, ಕೊಲೆ, ಜಗಳ, ಸುಲಿಗೆಗಳು ದೇಶದಲ್ಲೆಲ್ಲ ಹಾ ಹಾ ಕಾರವನ್ನೆಬ್ಬಿಸಿದ್ದುವು.
  • ತತ್ಕಾಲದಲ್ಲಿ ಇದು ಸ್ವಲ್ಪ ಮಟ್ಟಿಗೆ ಕಡಿಮೆಯಾದರೂ ಮುಂದಿನ ೨೦೦ ವರ್ಷಗಳೊಳಗೆ ಇಡಿಯ ದೇಶವೇ ಮುಸಲ್ಮಾನರ ಕೈವಶವಾಗಲು ಕಾರಣವಾದುದನ್ನು ಇತಿಹಾಸ ಹೇಳುತ್ತದೆ. ಕಲ್ಹಣನ ಚರಿತ್ರೆಯನ್ನು ಮುಂದುವರಿಸಿರುವ ಕಾಶ್ಮೀರದ ಲೇಖಕರೆಂದರೆ ಜೋನರಾಜ, ಶ್ರೀವರ, ಪ್ರಾಜ್ಯ ಭಟ್ಟ ಮತ್ತು ಶುಕ.
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]
"https://kn.wikipedia.org/w/index.php?title=ಕಲ್ಹಣ&oldid=806602" ಇಂದ ಪಡೆಯಲ್ಪಟ್ಟಿದೆ