ವಿಚಿತ್ರವೀರ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವಿಚಿತ್ರವೀರ್ಯ ಮಹಾಭಾರತದಲ್ಲಿ ಶಂತನು ಮತ್ತು ಸತ್ಯವತಿಯ ಮಗ.ಇವನ ಅಣ್ಣ ಚಿತ್ರಾಂಗದ ಶಂತನುವಿನ ನಂತರ ಹಸ್ತಿನಾಪುರದ ಪಟ್ಟವೇರಿದ.ಚಿತ್ರಾಂಗದ ಸಂತಾನವಿಲ್ಲದೆ ನಿಧನ ಹೊಂದಿದುದರಿಂದ ಅವನ ತಮ್ಮನಾದ ವಿಚಿತ್ರವೀರ್ಯ ಸಿಂಹಾಸನವನ್ನೇರಿದ.ಇವನು ಪಟ್ಟವೇರಿದ ಸಮಯದಲ್ಲಿ ಇನ್ನೂ ಬಾಲಕನಾಗಿದ್ದುದರಿಂದ ಸತ್ಯವತಿಯ ಇನ್ನೊಬ್ಬ ಮಗನಾದ ಭೀಷ್ಮನು ಇವನ ಪರವಾಗಿ ರಾಜ್ಯಭಾರ ನಿಭಾಯಿಸಿದ.ಇವನು ಪ್ರಾಯ ಪ್ರಬುದ್ಧನಾದ ಸಮಯದಲ್ಲಿ ಇವನಿಗಾಗಿ ಭೀಷ್ಮನು ಕನ್ಯೆಯನ್ನು ಅರಸುತ್ತಿರುವಾಗ ಕಾಶಿಯ ರಾಜ ಸ್ವಯಂವರವನ್ನು ಏರ್ಪಡಿಸಿದ ವಿಷಯ ತಿಳಿದು ಅಲ್ಲಿಗೆ ಧಾವಿಸಿದ.ಅಲ್ಲಿ ಸ್ವಯಂವರವನ್ನು ವಿಚಿತ್ರವೀರ್ಯನ ಪರವಾಗಿ ಗೆದ್ದು ಕಾಶಿ ರಾಜನ ಮೂವರು ಕುವರಿಯರಾದ ಅಂಬಾ,ಅಂಬಿಕ ಮತ್ತು ಅಂಬಾಲಿಕರನ್ನು ಕರೆತರಲು ಪ್ರಯತ್ನಿಸಿದ. ಆದರೆ ಅಂಬಾ ಮೊದಲೇ ಸಾಳ್ವನನ್ನು ಪ್ರೀತಿಸುತ್ತಿದ್ದುದರಿಂದ ಅಂಬಿಕ ಮತ್ತು ಅಂಬಾಲಿಕೆಯರನ್ನು ಒತ್ತಾಯ ಪೂರ್ವಕ ವಿಚಿತ್ರವೀರ್ಯನಿಗೆ ಮದುವೆ ಮಾಡಿಸಿದ. ಮುಂದೆ ವಿಚಿತ್ರವೀರ್ಯನಿಗೆ ಮಕ್ಕಳಾಗುವ ಮೊದಲೇ ಕ್ಷಯ ರೋಗದಿಂದ ತೀರಿಕೊಂಡುದುದರಿಂದ ತಾಯಿ ಸತ್ಯವತಿ ಭೀಷ್ಮನಿಗೆ ಅಂಬಿಕ ಮತ್ತು ಅಂಬಾಲಿಕೆಯರನ್ನು ಮದುವೆಯಾಗುವಂತೆ ತಿಳಿಸುತ್ತಾಳೆ. ಆದರೆ ಭೀಷ್ಮನು ಮೊದಲೇ ಆಜನ್ಮ ಬ್ರಹ್ಮಚಾರಿಯಾಗಿರುವುದಾಗಿ ಶಪಥ ಮಾಡಿದ್ದುದರಿಂದ ಸತ್ಯವತಿಯ ಇನ್ನೊಬ್ಬ ಮಗನಾದ ವ್ಯಾಸನನ್ನು ಕರೆದು ಅಂಬಿಕೆ ಮತ್ತು ಅಂಬಾಲಿಕೆಯರಿಗೆ ಮಕ್ಕಳನ್ನು ಕರುಣಿಸುವಂತೆ ಹೇಳಲು ಹೇಳುತ್ತಾನೆ. ಅದರಂತೆ ವ್ಯಾಸನ ಮೂಲಕ ಸತ್ಯವತಿಯು ಅಂಬಿಕೆ ಮಾತು ಅಂಬಾಲಿಕೆಯರಿಗೆ ಮಕ್ಕಳಾಗುವಂತೆ ಮಾಡುತ್ತಾಳೆ. ಇವರೇ ಅಂಬಿಕೆಯ ಮಗ ಧೃತರಾಷ್ಟ್ರ ಮತ್ತು ಅಂಬಾಲಿಕೆಯ ಮಗ ಪಾಂಡುವಾಗಿ ಮಹಾಭಾರತ ಕಥೆಯಲ್ಲಿ ಪ್ರಸಿದ್ಧರಾದವರು.