ಕೃಪಾಚಾರ್ಯ
| ಕೃಪಾಚಾರ್ಯ | |
|---|---|
| Mahabharata character | |
A manuscript painting of Kripa during Kurukshetra war | |
| Information | |
| ಲಿಂಗ | Male |
| ಸಂಬಂಧಿಕರು |
|
ಕೃಪಾಚಾರ್ಯ ಮಹಾಭಾರತದಲ್ಲಿ ಒಂದು ಪ್ರಮುಖ ಪಾತ್ರ. ಇವನು ಹಸ್ತಿನಾಪುರದಲ್ಲಿ ರಾಜಕುವರರಿಗೆ ವಿದ್ಯೆ ಕಲಿಸುತ್ತಿದ್ದನು. ಆಸ್ಥಾನಪುರೋಹಿತನೂ ಆಗಿದ್ದನು. ಇವನ ತಂಗಿ ಕೃಪಿಯನ್ನು ದ್ರೋಣಾಚಾರ್ಯರು ಮದುವೆಯಾಗುತ್ತಾರೆ.ಇವನು ಏಳು ಜನ ಚಿರಂಜೀವಿಗಳಲ್ಲಿ ಒಬ್ಬನು. ಕೃಪ, ಕೃಪೆಯರೂ ಅವನ ತಂದೆ ಶರಧನ್ವನು ಅಪ್ಸರೆಯನ್ನು ನೋಡಿದಾಗ, ಅವನ ವೀರ್ಯವು ಹುಲ್ಲಿನ ಮೇಲೆ ಬಿದ್ದಾಗ ಅದರಿಂದ ತಕ್ಷಣ ಹುಟ್ಟಿದರು[೧] [೨][೨][೩]

ಗೌತಮವಂಶದ ಶರದ್ವಂತನೆಂಬ ಬ್ರಾಹ್ಮಣ ಮುನಿಯ ಮಗ. ಶರದ್ವಂತನ ತಪಸ್ಸನ್ನು ಕೆಡಿಸಲು ಇಂದ್ರ ಕಳಿಸಿದ ಜಾಲವತಿ (ಜಾನಪದಿ) ಎಂಬ ಅಪ್ಸರೆಯಲ್ಲಿ ಹುಟ್ಟಿದವ; ರುದ್ರಗಣಾಂಶಸಂಭೂತ, ಜೊತೆಗೇ ಹುಟ್ಟಿದವಳು ಕೃಪಿ. ಈಕೆ ದ್ರೋಣರ ಹೆಂಡತಿ. ಆಶ್ವತ್ಥಾಮನ ತಾಯಿ. ಇವರನ್ನು ಶಂತನು ಸಾಕಿ ಆ ಹೆಸರುಗಳನ್ನಿಟ್ಟ. ಆಮೇಲೆ ಶರದ್ವಂತ ಅವರು ತನ್ನ ಮಕ್ಕಳೆಂಬುದನ್ನು ಶಂತನುವಿಗೆ ತಿಳಿಸಿ ಕೃಪನಿಗೆ ಉಪನಯನಾದಿ ಸಂಸ್ಕಾರಗಳನ್ನು ಮಾಡಿಸಿ, ಧನುರ್ವಿದ್ಯೆಯನ್ನು ಕಲಿಸಿದ. ಅನಂತರ ಪಾಂಡವ ಕೌರವರಿಗೆ ಕೃಪಾಚಾರ್ಯ ಧನುರ್ವಿದ್ಯೆಯ ಗುರುವಾಗಿದ್ದ. ಪಾಂಡವ ಪಕ್ಷಪಾತಿಯಾದರೂ ಮಹಾಭಾರತ ಯುದ್ಧದಲ್ಲಿ ಈತ ಕೌರವಪಕ್ಷದಲ್ಲಿದ್ದ. ಗೋಹರಣ ಪ್ರಸಂಗದಲ್ಲೂ ಕರ್ಣನಿಗೆ ಸೇನಾಪತ್ಯ ಬಂದ ಪ್ರಸಂಗದಲ್ಲೂ ಕರ್ಣನನ್ನು ನಿಂದಿಸಿದ. ಭಾರತಯುದ್ಧದಲ್ಲಿ ಅರ್ಜುನನಿಂದ ಸೋತು ಅವನನ್ನು ಪ್ರಶಂಸಿಸಿದ. ಪಾಂಡವ ಸೇನಾಪತಿಯಾದ ಧೃಷ್ಟದ್ಯುಮ್ನನನ್ನು ಯುದ್ಧದಲ್ಲಿ ಸೋಲಿಸಿದ. ಭಾರತಯುದ್ಧದ 18ನೆಯ ದಿನದ ರಾತ್ರಿಯಲ್ಲಿ ಕೌರವ ಮಡಿದಮೇಲೆ ಅಶ್ವತ್ಥಾಮ ಪಾಂಡವ ಶಿಬಿರವನ್ನು ಹೊಕ್ಕು ಪಾಂಡವೀಯರನ್ನು ಕೊಲ್ಲಹೋದಾಗ ಕೃಪ ಅವನಿಗೆ ವಿಶೇಷವಾಗಿ ಬುದ್ಧಿ ಹೇಳಿ ವಿಫಲನಾದ. ಯುದ್ಧಾನಂತರ ಕೌರವಪಕ್ಷೀಯರಲ್ಲಿ ಉಳಿದ ಮೂವರಲ್ಲಿ ಕೃಪನೊಬ್ಬ, ಯುಧಿಷ್ಠಿರನಿಗೆ ಪಟ್ಟಾಭಿಷೇಕವಾದಮೇಲೆ ಪಾಂಡವರ ಆಶ್ರಯದಲ್ಲಿದ್ದ, ಶರದ್ವಂತನ ಮಗನಾದುದರಿಂದ ಶಾರದ್ವತನೆಂದೂ ಗೌತಮವಂಶದವನಾದುದರಿಂದ ಗೌತಮನೆಂದೂ ಕೃಪನಿಗೆ ಇನ್ನೆರಡು ಹೆಸರುಗಳಿವೆ. ಈತ ಅಶ್ವತ್ಥಾಮ, ಬಲಿ, ವ್ಯಾಸ, ಹನುಮಂತ, ವಿಭೀಷಣ, ಪರಶುರಾಮರಂತೆ ಚಿರಂಜೀವಿ, ಪರೀಕ್ಷಿತನಿಗೆ ಕೃಪ ಧನುರ್ವಿದ್ಯೆಯನ್ನು ಕಲಿಸಿದನೆಂದು ಹೇಳಲಾಗಿದೆ.
ಉಲ್ಲೇಖಗಳು
[ಬದಲಾಯಿಸಿ]- ↑ ಮಹಾಭಾರತ ಆದಿ ಪರ್ವ.
- ↑ ೨.೦ ೨.೧ Varkey, C.P. (2001). A Pilgrimage ~ Through the Mahabharata. St Pauls BYB. pp. 22–. ISBN 978-81-7109-497-4.
- ↑ Sharma, Mahesh; Chaturvedi, B.K. (2006). Tales From the Mahabharat. Diamond Pocket Books (P) Ltd. pp. 42–. ISBN 978-81-288-1228-6.
