ಕುಂತಿ

ವಿಕಿಪೀಡಿಯ ಇಂದ
Jump to navigation Jump to search
ಕುಂತಿಯೊಂದಿಗೆ ಪಾಂಡು
Boon of Indra to Kunti

ಕುಂತಿ (ಸಂಸ್ಕೃತ: कुंती) ಮಹಾಭಾರತದಲ್ಲಿ ಪಾಂಡುವಿನ ಹೆಂಡತಿ. ವಿವಾಹ ಪೂರ್ವದಲ್ಲಿ ಈಕೆ ಸೂರ್ಯನಿಂದ ಕರ್ಣನನ್ನು ಪಡೆದಳು. ಈಕೆ ಯುಧಿಷ್ಠಿರ, ಭೀಮ ಮತ್ತು ಅರ್ಜುನರ ತಾಯಿ. ಈಕೆಯ ಕಥೆಯು ಭಾಗವತ ಪುರಾಣದಲ್ಲಿ ಕೂಡ ಬರುತ್ತದೆ.

ಪೀಠಿಕೆ[ಬದಲಾಯಿಸಿ]

 • ಸತ್ಯ, ಸಹನೆ, ಶೀಲ, ತ್ಯಾಗ, ಸೇವೆ ಮುಂತಾದ ಸದ್ಗುಣಗಳ ಗಣಿ ಭಾರತೀಯ ನಾರಿ. ಇಂದಿನ ದೋಷಪೂರ್ಣ ವಿದ್ಯಾಭ್ಯಾಸ, ಚಿತ್ತವನ್ನು ಕಲಕುವ, ಕುಸಂಸ್ಕಾರವನ್ನು ಬಿತ್ತುವ ಸಿನೆಮಾ, ದೂರದರ್ಶನ, ಜಾಹೀರಾತುಗಳು, ಪಾಶ್ಚಾತ್ಯಸಂಸ್ಕ್ರತಿಯ ಚಂಡಮಾರುತದಿಂದ ಧೂಳಿನಲ್ಲಿ ಕಣ್ಮರೆಯಾಗಿ ಹೋಗುತ್ತಿರುವ ಭಾರತೀಯ ಸಂಸ್ಕ್ರತಿಯ ಹಿರಿಮೆ-ಗರಿಮೆಗಳ ಮಧ್ಯದಲ್ಲೂ ನಾರಿಯ ಆದರ್ಶಗುಣಗಳು ಸಂಪೂರ್ಣ ನಶಿಸಿ ಹೋಗಿಲ್ಲ.
 • ಈಗಲೂ ಭಾರತೀಯ ನಾರಿಯ ಜೀವನಾದರ್ಶಗಳನ್ನು ಎತ್ತಿಹಿಡಿಯುವುದಾಗಿದೆ. ಆದ್ದರಿಂದಲೇ ಭಾರತೀಯ ಸಂಸ್ಕ್ರತಿ ಶತಶತಮಾನಗಳ ಆಕ್ರಮಣವನ್ನು ಎದುರಿಸಿಯೂ ಜೀವಂತವಿದೆ. ಭಾರತದಲ್ಲಿ ಇಂದಿಗೂ ಆದರ್ಶದಾಂಪತ್ಯ ಹಾಗೂ ಕೌಟುಂಬಿಕ ಜೀವನವನ್ನು ಕಾಣಬಹುದಾಗಿದೆ. ನಮ್ಮ ನಾಡಿನ ಇತಿಹಾಸವೆಂದು ಭಾವಿಸಲಾಗಿರುವ ರಾಮಾಯಣ- ಮಹಾಭರಾತಗಳಲ್ಲಿ ನಾರಿಯರ ಯಾವ ಆದರ್ಶಗುಣಗಳನ್ನು ವರ್ಣಿಸಿರುವರೋ ಆ ಗುಣಗಳು ಕಾಲ್ಪನಿಕವಲ್ಲ!
 • ಜೀವನಾದರ್ಶಗಳು- ಎಂದು ಪ್ರಮಾಣೀಕರಿಸುವ ನಾರೀಮಣಿಯರ ಬೀಡು ಇಂದೂ ಭಾರತವೇ. ಮಹಾಭಾರತದಲ್ಲಿ ಇಂಥ ಆದರ್ಶಮಹಿಳೆಯರ ವಿವಿಧ ಮುಖಗಳನ್ನು ತೋರುವ ಕುಂತಿ, ಮಾದ್ರೀ, ದ್ರೌಪದೀ, ಗಾಂಧಾರೀ ಮುಂತಾದ ಅನೇಕ ಪಾತ್ರಗಳ ವರ್ಣನೆ ಇದೆ. ಇವರಲ್ಲಿ ಕುಂತಿದೇವಿಯ ಪರಿಚಯವನ್ನು ಮಾಡಿಕೊಡುವುದು ಈ ಕಿರುಹೊತ್ತಿಗೆಯ ಉದ್ದೇಶವಾಗಿದೆ.

ಪರಿಚಯ[ಬದಲಾಯಿಸಿ]

 • ಕುಂತಿದೇವಿ ಮಹಾಭಾರತದ ಸೂತ್ರಧಾರನಾದ ಭಗವಾನ್ ಶ್ರೀ ಕೃಷ್ಣನ ಸೋದರತ್ತೆ, ವಸುದೇವನ ಸಹೋದರಿ. ಶೂರರಾಜನ ಮಗಳು. ಯದುವಂಶದ ಲಲನೆ, ಪೃಥೆ ಎಂದು ಇವಳನ್ನು ಕರೆಯುತ್ತಿದ್ದುದೂ ಉಂಟು. ಕುಂತೀಭೋಜ ಶೂರರಾಜನ ಸೋದರತ್ತೆಯ ಮಗ. ಇವನಿಗೆ ಸಂತಾನವಿರಲಿಲ್ಲ. ಇವನು ಪೃಥೆಯನ್ನು ತನ್ನ ಮಗಳೆಂದು ಸ್ವೀಕರಿಸಿ ಸಾಕಿ ಸಲಹಿದ. ಆ ಕಾರಣದಿಂದಾಗಿ ಪೃಥೆ ಕುಂತಿಯೂ ಆದಳು, ಇವಳ ಮಕ್ಕಳಾದ ಪಾಂಡವರಲ್ಲಿ ಮಧ್ಯಮನಾದ ಅರ್ಜುನನಿಗಿರುವ ’ಪಾರ್ಥ’ ಎಂಬ ಹೆಸರು ಇವಳ ಪೃಥೆ ಎಂಬ ಹೆಸರನ್ನು ನೆನಪಿಗೆ ತಂದುಕೊಡುತ್ತದೆ.

ಕನ್ಯಾಮಣಿ ಕುಂತಿ[ಬದಲಾಯಿಸಿ]

 • ಕುಂತೀಭೋಜನ ಅರಮನೆಗೆ ಒಮ್ಮೆ ದುರ್ವಾಸರು ಬಂದರು. ಒಂದು ವರ್ಷಕಾಲ ಅಲ್ಲಿರುವುದಾಗಿ ಸೂಚಿಸಿದರು. ಅವರ ಮುಂಗೋಪ ಸ್ವಾಭಾವದ ಅರಿವು ರಾಜನಿಗಿತ್ತು. ಸಣ್ಣಪುಟ್ಟ ದೋಷಗಳನ್ನು ಕಂಡರೂ ಸಹಿಸದೆ ಶಪಿಸುವ ಸ್ವಭಾವ ಅವರದೆಂದು ತಿಳಿದಿದ್ದ ಕುಂತೀಭೋಜನ ಪಾಲಿಗೆ ಇವರ ಸೇವಾಶುಶ್ರೂಷೆ ಒಂದು ಸವಾಲಾಯಿತು. ಆಗ ರಾಜನು ಈ ರೀತಿ ಯೋಚಿಸಿದನು.
 • ‘ಕುಂತಿಯು ಹುಡುಗಿ. ಆದ್ಯಾಗ್ಯೂ ಹಿರಿಯರ ಸೇವೆಯನ್ನು ಉತ್ಸಾಹದಿಂದ ಮಾಡುವುದು ಅವಳ ಸ್ವಭಾವ. ಅವಳನ್ನೆ ದುರ್ವಾಸರ ಸೇವೆಗೆ ನೇಮಿಸುವುದು ಒಳಿತು. ಏನಾದರೂ ಸೇವೆಯಲ್ಲಿ ತೊಂದರೆ ತೊಡಕುಗಳುಂಟಾದರೂ ಅವಳು ಹೆಣ್ಣು, ಹುಡುಗುತನ ಎಂದು ಮುನಿಗಳು ಸಹನೆಯನ್ನು ತಂದುಕೊಳ್ಳುತ್ತಾರೆ’ ಎಂದು ಬಗೆದ. ಅಂತೆಯೇ ಅವಳನ್ನು ಮುನಿಯ ಸೇವೆಗೆ ನೇಮಿಸಿದ.
 • ದುರ್ವಾಸರ ವರ್ತನೆ ಅತಿ ವಿಚಿತ್ರವಾಗಿತ್ತು. ಅವರು ಮನಸ್ವೀ ಸ್ವಭಾವದವರು. ಬರುವ ಹೋಗುವ ಸಮಯ ಯಾರಿಗೂ ತಿಳಿಯುತ್ತಿರಲ್ಲಿಲ್ಲ. ಅವರು ಒಮ್ಮೊಮ್ಮೆ ಬರುತ್ತಲೇ ಇರಲ್ಲಿಲ್ಲ. ಅಕಾಲದಲ್ಲಿ ಬಂದು ಅತ್ಯಂತ ಕಸ್ಟಸಾಧ್ಯವಾದ ತಿನಿಸುಗಳನ್ನು ಅಪೇಕ್ಷಿಸುತ್ತಿದ್ದರು. ಅಂಥ ವೇಳೆಯಲ್ಲೂ ಸಹ ಪೃಥೆ ಶುದ್ಧ ಸೇವಾಭಾವದಿಂದ ಅವರ ಅಪೇಕ್ಷೆಯ ತಿನಿಸನ್ನು ಮೊದಲೇ ಮಾಡಿಟ್ಟುಕೊಂಡಳೋ ಎಂಬಂತೆ ಶೀಘ್ರವಾಗಿ ಸಿದ್ಧಪಡಿಸಿ ತಂದುಕೊಡುತ್ತಿದ್ದಳು.

ದುರ್ವಾಸರ ಮೆಚ್ಚುಗೆ[ಬದಲಾಯಿಸಿ]

 • ಒಂದು ವರ್ಷ ಅವಳು ಬಹು ತಾಳ್ಮೆಯಿಂದ ಹಸನ್ಮುಖಳಾಗಿ, ಎಂಥ ವಿಷಮ ಸಂದರ್ಭದಲ್ಲೂ ಧೃತಿಗೆಡದೆ ಸೇವೆಗೈದಳು. ಹುಡುಕಿದರೂ ಅವಳ ಸೇವೆಯಲ್ಲಿ ಯಾವ ಕೊರತೆಯೂ ಕಂಡುಬರುವಂತಿರಲ್ಲಿಲ್ಲ. ದುರ್ವಾಸರು ಅವಳ ಸೇವೆಗೆ ಮೆಚ್ಚಿ - " ಮಗಳೇ! ನಿನಗೆ ನಾನು ವರ ಕೊಡಬೇಕೆಂದಿದ್ದೇನೆ. ಏನು ಬೇಕು? ನಿಸ್ಸಂಕೋಚವಾಗಿ ಕೇಳು" - ಎಂದು ಪ್ರಸನ್ನರಾಗಿ ನುಡಿದರು.
 • ಕುಂತಿ ಹೇಳಿದಳು: "ಮಹಾತ್ಮರೇ! ತಾವು ಪ್ರಸನ್ನರಾದಿರಿ ಎಂದು ತಿಳಿದರೆ ನಮ್ಮ ತಂದೆ ಸಂತೋಷ ಪಡುತ್ತಾರೆ. ತಮ್ಮ ಹಾಗೂ ನಮ್ಮ ತಂದೆಯವರ ಪ್ರಸನ್ನತೆಗಿಂತ ಹೆಚ್ಚಿನದೇನು ಬೇಕು? ನಾನು ಅಜ್ಞೆ. ಏನೂ ಕೇಳಬೇಕೆಂದು ನನಗೆ ಹೊಳೆಯುತ್ತಿಲ್ಲ. ನನಗೆ ಯಾವ ಆಸೆಯೂ ಇಲ್ಲ. ನನ್ನ ನಡೆನುಡಿ ಹಾಗೂ ಸೇವೆಯಲ್ಲಿ ಏನಾದರೂ ಕೊರತೆ ಇದ್ದರೆ ಕ್ಷಮಿಸಿಬಿಡಿ. ಅಷ್ಟೇ ಸಾಕು."
 • ದುರ್ವಾಸರಿಗೆ ಈ ಮುಗ್ದೆಯ ವಿವೇಕಪೂರ್ಣ ಮಾತುಗಳು ಬಹು ಪ್ರಿಯವೆನಿಸಿದವು. ಸೇವಾಧರ್ಮ ಎಷ್ಟು ಕಠಿಣ! ಅದನ್ನು ಭಾರವೆಂದು ಬಗೆಯದೆ ಸಂತೋಷದಿಂದ ಮಾಡುವುದು ಮತ್ತುಅದಕ್ಕೆಪ್ರತಿಯಾಗಿ ಸ್ವಸಂತೋಷದಿಂದ ಫಲವನ್ನು ಕೊಡುತೇನೆಂದರೂ ವಿನಯಪೂರ್ವಕ ನಿರಾಕರಿಸು ವುದು ಏನು ಸಾಧಾರಣ ಸ್ವಭಾವವೇ? ಅವಳಲ್ಲಿ ಈ ಗುಣ ಎಷ್ಟು ಸಹಜವಾಗಿ ಬಂದಿದೆ ಎಂದು ಯೋಚಿಸಿ, ಹರ್ಷಚಿತ್ತರಾಗಿ ಅವಳಿಗೆ ಮಂತ್ರೋಪದೇಶವನ್ನಾದರೂ ಮಾಡಬೇಕೆಂದು ಸಂಕಲ್ಪಿಸಿದರು ದುರ್ವಾಸರು.
 • ಆ ಮಹಾಬ್ರಾಹ್ಮಣರನ್ನು ಸಂತೋಷಗೊಳಿಸಲು, ಅವರ ಮಾತನ್ನು ತಿರಸ್ಕರಿಸಲಾರದೆ ಕುಂತಿ ಅದಕ್ಕೆ ಒಪ್ಪಿಕೊಂಡಳು. ದುರ್ವಾಸ ಮಹರ್ಷಿಗಳು ಅವಳಿಗೆ ಅತರ್ವವೇದದ ಶಿರೋಭಾಗದಲ್ಲಿ ಬಂದಿರುವ ಮಂತ್ರವನ್ನು ಉಪದೇಶಿಸಿದರು ಮತ್ತು - " ಮಗು! ಇದನ್ನು ಉಚ್ಚರಿಸಿ ನೀನು ಯಾವ ದೇವ-ದೇವತೆಯನ್ನಾದರೂ ಆವಾಹನೆ ಮಾಡಬಹುದು. ಅವರು ಬಂದು ನಿನ್ನ ಇಷ್ಟಾರ್ಥವನ್ನು ಸಲ್ಲಿಸುವರು" - ಎಂದು ನುಡಿದು ಅಲ್ಲಿಂದ ಕಣ್ಮರೆಯಾದರು.
 • ಕುಂತಿಯ ಈ ಆದರ್ಶ ನಿಶ್ಕಾಮಸೇವಭಾವ ಇಂದಿಗೂ ಪ್ರಸ್ಥುತ. ಇದನ್ನು ನಮ್ಮ ನಾಡಿನ ಬಾಲಕಿಯರಲ್ಲಿ ರೂಡಿಸುವ ಶಿಕ್ಷಣವನ್ನು ವಾತಾವರಣವನ್ನು ನಿರ್ಮಿಸಬೇಕಾಗಿದೆ. ಭಾರತೀಯ ಸಂಸ್ಕೃತಿಯ ’ಅತಿಥಿ ಸೇವಾ’ ಎಂಬ ಅಂಶ ಬೇರಾವ ಸಂಸ್ಕೃತಿಯಲ್ಲೂ ಕಂಡುಕೇಳಿ ಅರಿಯದ ವಿಶಿಷ್ಟಧರ್ಮವಾಗಿದೆ. ಇದನ್ನು ನಾವು ಬಹು ಎಚ್ಚರದಿಂದ ಉಳಿಸಿಕೊಂಡು ಬರಬೇಕು.
"https://kn.wikipedia.org/w/index.php?title=ಕುಂತಿ&oldid=853848" ಇಂದ ಪಡೆಯಲ್ಪಟ್ಟಿದೆ