ಅಭಿಮನ್ಯು

ವಿಕಿಪೀಡಿಯ ಇಂದ
Jump to navigation Jump to search
ಉತ್ತರೆ ಮತ್ತು ಅಭಿಮನ್ಯು
ಹಳೇಬೀಡು ದೇವಸ್ಥಾನದಲ್ಲಿ ಅಭಿಮನ್ಯು ಚಕ್ರವ್ಯೂಹವನ್ನು ಭೇದಿಸುತ್ತಿರುವ ಕೆತ್ತನೆ.

ಅಭಿಮನ್ಯು ಮಹಾಭಾರತದಲ್ಲಿ ಅರ್ಜುನ ಮತ್ತು ಸುಭದ್ರೆಯರ ಮಗ. ಮಹಾಭಾರತ ಯುದ್ಧದಲ್ಲಿ ದ್ರೋಣಾಚಾರ್ಯರು ರಚಿಸಿದ ಚಕ್ರವ್ಯೂಹವನ್ನು ಭೇದಿಸಿ (ಅದರಿಂದ ಹೊರಗೆ ಬರುವುದು ಗೊತ್ತಿರದಿದ್ದರೂ), ಒಳಗೆ ನುಗ್ಗಿ ಅನೇಕ ವೀರಾಧಿ-ವೀರರನ್ನು ಕೊಂದು, ದ್ರೋಣ, ಕರ್ಣ, ದುರ್ಯೋಧನ, ದುಃಶಾಸನ ಮುಂತಾದ ಅತಿರಥ-ಮಹಾರಥರಿಗೆ ಸಮನಾಗಿ ಹೋರಾಡಿ ನಂತರ, ವಂಚನೆಗೊಳಗಾಗಿ ಚಕ್ರವ್ಯೂಹದಿಂದ ಹೊರಬರಲಾಗದೆ ವೀರಮರಣವನ್ನು ಹೊಂದಿದನು.

ಮಹಾಭಾರತದ ಕಥೆ[ಬದಲಾಯಿಸಿ]

ಅರ್ಜುನ ಸುಭದ್ರೆಯರ ಮಗ. ಶ್ರೀಕೃಷ್ಣನ ಸೋದರಳಿಯ. ವಿರಾಟರಾಜನ ಮಗಳಾದ ಉತ್ತರೆಯನ್ನು ಮದುವೆಯಾದ. ಗರ್ಭದಲ್ಲಿರುವಾಗಲೇ, ಶ್ರೀಕೃಷ್ಣ ತನ್ನ ತಂಗಿ ಸುಭದ್ರೆಗೆ ಯುದ್ಧದಲ್ಲಿನ ಅಭೇದ್ಯವ್ಯೂಹಗಳ ಭೇದನೆಯನ್ನು ಕಥೆಯಾಗಿ ಹೇಳುವಾಗ ಕೇಳಿ ತಿಳಿದಿದ್ದ. ಧನುರ್ವಿದ್ಯಾಪಾರಂಗತನಾದ ಅಭಿಮನ್ಯುವಿನ ವೀರನೈಪುಣ್ಯ ಸ್ಪಷ್ಠವಾಗಿ ತೋರುವುದು ಪದ್ಮವ್ಯೂಹವೆಂಬ ಸೈನ್ಯರಚನೆಯನ್ನು ಭೇದಿಸುವಲ್ಲಿ, ಭಾರತಯುದ್ಧದಲ್ಲಿ ದ್ರೋಣಾಚಾರ್ಯರು ರಚಿಸಿದ ಪದ್ಮವ್ಯೂಹವನ್ನು ಭೇದಿಸುವಲ್ಲಿ. ಭಾರತ ಯುದ್ಧದಲ್ಲಿ ದ್ರೋಣಾಚಾರ್ಯರು ರಚಿಸಿದ ಪದ್ಮವ್ಯೂಹವನ್ನು ಭೇದಿಸುವ ರಹಸ್ಯ ತಂತ್ರ ಕೃಷ್ಣ, ಅರ್ಜುನ, ಪ್ರದ್ಯುಮ್ನ ಮತ್ತು ಅಭಿಮನ್ಯುವಿಗಲ್ಲದೆ ಮತ್ಯಾರಿಗೂ ಗೊತ್ತಿರಲಿಲ್ಲ. ಶ್ರೀಕೃಷ್ಣ ಅರ್ಜುನರು ಸಂಶಪ್ತಕರೊಡನೆ ಯುದ್ಧದಲ್ಲಿ ತೊಡಗಿದಾಗ ಧರ್ಮರಾಜನ ಅಪ್ಪಣೆಯಂತೆ ಅಭಿಮನ್ಯುವೇ ರಥವನ್ನೇರಿ ಎದುರಾದ ವೀರಯೋಧರನ್ನು ರಾಶಿರಾಶಿಯಾಗಿ ಸಂಹರಿಸಿ ಪದ್ಮವ್ಯೂಹವನ್ನು ತಾಂತ್ರಿಕಯುಕ್ತಿಸಾಹಸದಿಂದ ಭೇದಿಸಿ ಒಳನುಗ್ಗಿದ. ತನಗೆ ಬೆಂಬಲವಾಗಿದ್ದ ಪಾಂಡವ ಸೈನ್ಯವನ್ನು ಸೈಂಧವ ತಡೆಹಿಡಿದರೂ ಅಭಿಮನ್ಯು ಏಕೈಕವೀರನಾಗಿ ದುರ್ಯೋಧನನ ಮಗ ಲಕ್ಷ್ಮಣ ಮತ್ತು ಬೃಹದ್ಬಲ ಮುಂತಾದ ನೂರಾರು ರಾಜ, ರಾಜಕುಮಾರರನ್ನು ಸಂಹರಿಸಿದ. ದುರ್ಯೋಧನನ ರಕ್ಷಣೆಗೆ ಬಂದ ದ್ರೋಣ, ಅಶ್ವತ್ಥಾಮ, ಕರ್ಣ, ಶಲ್ಯ, ಕೃಪ, ಶಕುನಿ ಮುಂತಾದ ವಿರಾಧಿವೀರರನ್ನು ತನ್ನ ಚಾಪವಿದ್ಯಾಬಲದಿಂದ ಮೂರ್ಛೆಗೊಳಿಸಿದ. ಈತನ ಕವಚ ಅಭೇದ್ಯವೆಂದರಿತ ದ್ರೋಣಾಚಾರ್ಯರ ಸೂಚನೆಯಂತೆ ಕರ್ಣ ಹಿಂದಿನಿಂದ ಬಂದು ಅಭಿಮನ್ಯುವಿನ ಸಾರಥಿ ಸುಮಿತ್ರನನ್ನು ಕೊಂದು ಬಿಲ್ಲನ್ನು ಕತ್ತರಿಸಿದ. ಮುಂದಿನಿಂದ ದ್ರೋಣ ಈತನ ರಥ ಮತ್ತು ಕುದುರೆಗಳನ್ನು ತುಂಡರಿಸಿದ. ವೈರಿಗಳು ಬಾಣದ ಮಳೆಗರೆದರು. ಆಗಲೂ ಅಭಿಮನ್ಯು ಅಪ್ರತಿಭನಾಗಲಿಲ್ಲ. ರಥದಿಂದಿಳಿದು ಗದೆಯಿಂದ ಯುದ್ಧಮಾಡಿ ಕೊನೆಗೆ ವೀರಸ್ವರ್ಗವನ್ನು ಪಡೆದ.

ನೋಡಿ[ಬದಲಾಯಿಸಿ]

ಪರಿವಿಡಿ[ಬದಲಾಯಿಸಿ]

ಉಲ್ಲೇಖ[ಬದಲಾಯಿಸಿ]

???