ವ್ಯಾಸ

ವಿಕಿಪೀಡಿಯ ಇಂದ
Jump to navigation Jump to search

ಶ್ರೀಮನ್ನಾರಾಯಣನೇ ವ್ಯಾಸರಾಗಿ ಅವತರಿಸುತ್ತಾರೆಂಬ ಉಲ್ಲೇಖ ವಾಯುಪುರಾಣ, ಮತ್ಸ್ಯಪುರಾಣ, ಲಿಂಗಪುರಾಣ ಮತ್ತು ಮಹಾಭಾರತದಲ್ಲೂ ಇದೆ. ವೇದವ್ಯಾಸರ ವಂಶ ಪರಂಪರೆ ಹೀಗಿದೆ : ವ್ಯಾಸಂ ವಸಿಷ್ಠನಪ್ತಾರಂ ಶಕ್ತೇ: ಪೌತ್ರಮಕಲ್ಮಶಮ್ | ಪರಾಶರಾತ್ಮಜಂ ವಂದೇ ಶುಕತಾತಂ ತಪೋನಿಧಿಮ್ ||

ವೇದವ್ಯಾಸರು ಲೋಕ ಕಲ್ಯಾಣದಲ್ಲಿ ನಿರತರಾಗಿದ್ದವರೆಂದು ಶಾಸ್ತ್ರಗಳಲ್ಲಿ ಅವರನ್ನು ಕೃತಜ್ಞತೆಯಿಂದ ನೆನೆಯುತ್ತಾರೆ : ವ್ಯಾಸಾಯ ವಿಷ್ಣುರೂಪಾಯ ವ್ಯಾಸರೂಪಾಯ ವಿಷ್ಣುವೇ | ನಮೋ ವೈ ಬ್ರಹ್ಮ ನಿಧಯೇ ವಾಸಿಷ್ಠಾಯ ನಮೋ ನಮ: ||

ಪರಾಶರ ಹಾಗೂ ಸತ್ಯವತಿಯಲ್ಲಿ ಜನಿಸಿದವರು ವ್ಯಾಸರು. ಜನಿಸಿದಾಗ ಮಗುವು ನೀಲಮೇಘದಂತೆ ಇದ್ದಿತಂತೆ ಮತ್ತು ಯಮುನಾ ನದಿಯ ದ್ವೀಪದ ಮಧ್ಯೆ ಹುಟ್ಟಿದ್ದರಿಂದ 'ಕೃಷ್ಣ ದ್ವೈಪಾಯನ' ಎಂದೂ ಕರೆಯುತ್ತಾರೆ. ವ್ಯಾಸರೂಪಿಯಾದ ಹರಿಯೇ ಮಹಾಭಾರತ, ಪುರಾಣ, ಬ್ರಹ್ಮಸೂತ್ರಗಳನ್ನು ರಚಿಸಿದ್ದಾರೆ. ವ್ಯಾಸರ ಪುತ್ರರು ಬ್ರಹ್ಮ ಜ್ಞಾನಿಗಳಾದ ಶುಕಾಚಾರ್ಯರು. ವೇದವ್ಯಾಸರಿಗೆ "ವೇದಪೀಠ"ವೆಂಬ ಹೆಸರೂ ಸಲ್ಲುತ್ತದೆ. ವೇದ ಎಂದರೆ ಉಪಾಯ. ಉಪಾಯ ಎಂದರೆ ಯೋಗ. ಯೋಗವನ್ನೇ ಪೀಠವನ್ನಾಗಿ ಉಳ್ಳವರು ಎಂದರ್ಥವಾಗುತ್ತದೆ. ಶ್ರೀ ವೇದವ್ಯಾಸರು ಭಾರತ, ಭಾಗವತ, ಶ್ರುತಿ, ಸ್ಮೃತಿಗಳಿಗೆ ಆಧಾರ ರೂಪವಾಗಿದ್ದಾರೆಂದು ಅವರಿಗೆ ವೇದಪೀಠರೆಂದು ಹೆಸರು. ಇವತ್ತಿಗೂ ನಾವು ಓದಲು / ಬರೆಯಲು ಉಪಯೋಗಿಸುವ ಪೀಠವನ್ನು "ವ್ಯಾಸಪೀಠ"ವೆಂದು ಸ್ಮರಿಸುತ್ತೇವೆ. ಬದರಿಕಾಶ್ರಮದಲ್ಲಿ ತಪಸ್ಸು ನಡೆಸುತ್ತಿರುವುದರಿಂದ ಬದರೀನಾರಾಯಣನೆಂದೂ, ಬೋರೇ ವೃಕ್ಷಗಳ ವನ (ಬಾದರ ಎಂದು ಹೆಸರು)ದಲ್ಲಿ ಯೋಗಾಸನಾರೂಢರಾಗಿರುವುದರಿಂದ ಅವರಿಗೆ "ಬಾದರಾಯಣ" ಎಂದೂ ಹೆಸರು. "ಬಾದ" ಎಂದರೆ ವಾದ - ವ ಕಾರ ಬ ಕಾರವು ಅದಲಿಬದಲಿಸಿ ಪ್ರಯೋಗವಾಗುತ್ತದೆ, ವೇದ ಸಂಪ್ರದಾಯದಲ್ಲಿ. ಸದಾ ಶಾಸ್ತ್ರದ ಚರ್ಚೆ ಮಾಡುವವರು "ಬಾದರು". ಯಾರು ಜ್ಞಾನದ ಹಸಿವಿನಿಂದ ಚರ್ಚೆ ಮಾಡುತ್ತಾರೋ ಅವರಿಗೆ ಆಶ್ರಯ ಕೊಡುವವನು (ಅಪ್ರಾಕೃತ ಅರ್ಥ) - "ರಾಯಣ". "ಬದರ" ಎಂದರೆ ಸಂಸ್ಕೃತದಲ್ಲಿ ಪೂರ್ಣಚಂದ್ರ (ಮನೋದೇವತೆ). "ಬದ" - ನಮ್ಮ ಮನಸ್ಸನ್ನು ಗಟ್ಟಿ ಮಾಡುವವನು, "ರ" ಕೊಡುವವನು. ಬದರನನ್ನು ಉಪಾಸನೆ ಮಾಡುವವರು ಬಾದರರು. ಆಯಣ ಎಂದರೆ ಆಶ್ರಯ ಕೊಡುವವರು ಎಂದು ಅರ್ಥ.

"ವ್ಯಾಸ" ಎಂಬ ಹೆಸರು ವೇದಗಳ ವಿಭಾಗ ಮಾತ್ರದಿಂದ ಪಡೆದ ನಾಮಧೇಯ. ಯಾವ ರೂಪದಿಂದ ಒಂದಾಗಿದ್ದ ವೇದಗಳನ್ನು ವಿಭಾಗಿಸುವರೋ ಅದೇ ವೇದವ್ಯಾಸಾವತಾರ. "ವ್ಯಾಸೋಚ್ಛಿಷ್ಟಂ ಜಗತ್ಸರ್ವಂ" - ಆದ್ದರಿಂದ ಯಾವುದೇ ಜ್ಞಾನಕ್ಕೂ ವ್ಯಾಸರೇ ಮೂಲ. ವೇದವ್ಯಾಸರ ಅಭಿಪ್ರಾಯವೇ ವೇದಗಳ ಅಭಿಪ್ರಾಯ.

ವ್ಯಾಸಾವತಾರ ವೈವಸ್ವತ ಮನ್ವಂತರದ ಇಪ್ಪತ್ತೆಂಟು ದ್ವಾಪರಗಳಲ್ಲೂ ನಡೆಯುವುದು.

"https://kn.wikipedia.org/w/index.php?title=ವ್ಯಾಸ&oldid=668058" ಇಂದ ಪಡೆಯಲ್ಪಟ್ಟಿದೆ