ವಿಷಯಕ್ಕೆ ಹೋಗು

ಶಿವಾನಂದ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಸ್ವಾಮಿ ಶಿವಾನಂದ ಇಂದ ಪುನರ್ನಿರ್ದೇಶಿತ)

ಶ್ರೀ ರಾಮಕೃಷ್ಣ ಪರಮಹಂಸರ ನೇರ ಶಿಷ್ಯರಾಗಿದ್ದ ಸ್ವಾಮಿ ಶಿವಾನಂದರು(೧೮೫೪ - ೧೯೩೪), ರಾಮಕೃಷ್ಣ ಮಹಾಸಂಘದ ಎರಡನೇ ಅಧ್ಯಕ್ಷರಾಗಿದ್ದರು. ಇವರು ಮಹಾಪುರುಷ ಮಹಾರಾಜ್ ಎಂಬ ಹೆಸರಿನಿಂದ ಖ್ಯಾತರಾಗಿದ್ದರು.

೧೮೫೪ರಲ್ಲಿ ಜನಿಸಿದ ಸ್ವಾಮಿ ಶಿವಾನಂದರ ಮೊದಲ ಹೆಸರು ತಾರಕನಾಥ ಘೋಷಾಲ. ಇವರ ತಂದೆ ರಾಮಕನೈ ಘೋಷಾಲ ಪ್ರಖ್ಯಾತ ವಕೀಲರು ಮತ್ತು ತಾಂತ್ರಿಕ ಭಕ್ತರು. ಬಾಲ್ಯದಲ್ಲಿಯೇ ತಾಯಿಯನ್ನು ಕಳೆದುಕೊಂಡ ತಾರಕನು ಚಿಕ್ಕಂದಿನಿಂದಲೂ ಆಲೋಚನಾಪರ-ಅಂತರ್ಮುಖಿ. ತಾರಕನು ಒಳ್ಳೆಯ ಶಿಕ್ಷಣವನ್ನು ಪಡೆದು ಕಲಕತ್ತೆಯ ಬ್ರಿಟಿಷ ಸಂಸ್ಥೆಯೊಂದರಲ್ಲಿ ಕೆಲಸಕ್ಕೆ ಸೇರಿದನು. ಅಲ್ಲಿ ದಕ್ಷಿಣೇಶ್ವರದಲ್ಲಿ ಶ್ರೀರಾಮಕೃಷ್ಣರೆಂಬುವರು ವಾಸವಾಗಿದ್ದಾರೆಂಬುದನ್ನು ತಿಳಿದು ಅವರನ್ನು ಕಾಣಲು ಹೋದನು. ಶ್ರೀರಾಮಕೃಷ್ಣರಿಗೆ ರಾಮಕನೈ ಘೋಷಾಲರ ಪರಿಚಯವಿತ್ತು. ಹೀಗಾಗಿ ರಾಮಕೃಷ್ಣರ ಬಳಿ ಆಧ್ಯಾತ್ಮಿಕ ಜೀವನವನ್ನು ಪ್ರಾರಂಭಿಸಲು ತಾರಕನಿಗೆ ತಂದೆಯ ಸಂಪೂರ್ಣ ಸಹಕಾರ ದೊರಕಿತು.

ರಾಮಕೃಷ್ಣರ ಪ್ರೀತಿಪೂರ್ವಕ ನಿರ್ದೇಶನದಲ್ಲಿ ತಾರಕನು ಆಧ್ಯಾತ್ಮಿಕ ಸಾಧನೆಗಳಲ್ಲಿ ತೊಡಗಿದನು. ಇದೇ ಸಮಯದಲ್ಲಿ ರಾಮಕನೈ ಘೋಷಾಲನು ತಾರಕನ ತಂಗಿಗೆ ಮದುವೆ ಮಾಡಿ ಕೊಡುವುದಕ್ಕಾಗಿ ಯಾರ ಮನೆಗೆ ಮಗಳನ್ನು ಕೊಟ್ಟರೋ, ಅವರ ಮನೆಯಿಂದ ಒಂದು ಹೆಣ್ಣನ್ನು ತಾರಕನಿಗೆ ಮದುವೆ ಮಾಡಿ ಕೊಡುತ್ತೇನೆಂದು ಮಾತು ಕೊಟ್ಟರು. ತಾರಕನ ಇಚ್ಛಗೆ ವಿರುದ್ಧವಾಗಿ ಅವನ ಮದುವೆ ನಡೆಯಿತು. ಆದರೆ ರಾಮಕೃಷ್ಣರು ತಾರಕನಿಗೆ "ನಿನ್ನ ಆಧ್ಯಾತ್ಮಿಕ ಜೀವನಕ್ಕೆ ತೊಂದರೆಯಾಗುವುದಿಲ್ಲ. ಧ್ಯಾನವನ್ನು ಆವರಿಸು" ಎಂದು ಅಭಯ ನೀಡಿದರು. ವಿಧಿವಿಲಾಸದಂತೆ ತಾರಕನಾಥನ ಹೆಂಡತಿ ತೀರಿಹೋದಳು. ತಂದೆಯ ಅನುಮತಿ ಪಡೆದು ತಾರಕನು ಭಿಕ್ಷೆಯಿಂದ ಜೀವಿಸುತ್ತಾ ರಾಮಕೃಷ್ಣರ ಬಳಿ ಬಂದು ಹೋಗುತ್ತಿದ್ದ.

ರಾಮಕೃಷ್ಣರ ಸಮಾಧಿಯ ನಂತರ ವರಾಹನಗರದ ಮಠವನ್ನು ಸೇರಿದವರಲ್ಲಿ ತಾರಕನೇ ಮೊದಲಿಗ. ಸ್ವಾಮಿ ಶಿವಾನಂದ ಎಂಬ ಹೆಸರನ್ನು ತಾರಕನು ಸಂನ್ಯಾಸಾಶ್ರಮವನ್ನು ಸ್ವೀಕರಿಸಿದನಂತರ ಪಡೆದನು. ವಿವೇಕಾನಂದರು ಪಶ್ಚಿಮದೇಶಗಳಲ್ಲಿ ವೇದಾಂತವನ್ನು ಪ್ರಸಾರ ಮಾಡುತ್ತಿದ್ದಾಗ ಶಿವಾನಂದರು ವೇದಾಂತವನ್ನು ಶ್ರೀಲಂಕೆಯಲ್ಲಿ ಪ್ರಸಾರ ಮಾಡುತ್ತಿದ್ದರು. ಪ್ಲೇಗ ನಿರ್ಮೂಲನೆಗಾಗಿ ಕಲಕತ್ತೆಯಲ್ಲಿ ೧೮೯೯ ರಲ್ಲಿ ರಾಮಕೃಷ್ಣ ಮಠವು ಪ್ರಾರಂಭಿಸಿದ ಪರಿಹಾರ ಕಾರ್ಯದ ಮುಂಚೂಣಿಯಲ್ಲಿ ಶಿವಾನಂದರಿದ್ದರು. ವಾರಣಾಸಿಯಲ್ಲಿ ಆಶ್ರಮವನ್ನು ಶಿವಾನಂದರೇ ಪ್ರಾರಂಭಿಸಿದರು.

ಬ್ರಹ್ಮಾನಂದರ ಸಮಾಧಿಯ ನಂತರ ೧೯೨೨ ರಿಂದ ೧೯೩೪ರ ವರೆಗೆ ರಾಮಕೃಷ್ಣ ಸಂಘದ ಅಧ್ಯಕ್ಷರಾಗಿ ಶಿವಾನಂದರು ಕಾರ್ಯ ನಿರ್ವಹಿಸಿದರು. ಸಹಸ್ರಾರು ಜನರಿಗೆ ಮಂತ್ರದೀಕ್ಷೆಯನ್ನು ನೀಡಿದ್ದಲ್ಲದೇ, ಅನೇಕರಿಗೆ ಆಧ್ಯಾತ್ಮಿಕ ಜೀವನದಲ್ಲಿ ಇವರು ಮಾರ್ಗದರ್ಶನ ಮಾಡಿದರು. ಬಹುಕಾಲ ಕಾಯಿಲೆಯಿಂದ ಬಳಲಿ ಇವರು ೧೯೩೪ರ ಫೆಬ್ರುವರಿ ೨೦ರಂದು ಬ್ರಹ್ಮಲೀನರಾದರು.

ಬೋಧನೆಗಳು

[ಬದಲಾಯಿಸಿ]
  • ಹೋರಾಟ ಎಲ್ಲಿ ಇಲ್ಲವೋ, ಅಲ್ಲಿ ಜೀವನವಿಲ್ಲ.
  • ಯಾಂತ್ರಿಕ ಜಪದಿಂದ ಬಹಳವೇನೂ ಫಲವಿಲ್ಲ. ಭಗವಂತನ ಕುರಿತಾಗಿ ನಿನ್ನಲ್ಲಿ ಪ್ರೀತಿಯಿರಬೇಕು. ಆದರೂ ಭಗವಂತನ ನಾಮವನ್ನು ನೀನು ಪುನಃಸ್ಮರಣೆ ಮಾಡುತ್ತಿರುವದರಿಂದ ಯಾಂತ್ರಿಕ ಜಪವೂ ಸ್ವಲ್ಪ ಪರಿಣಾಮಕಾರಿಯಾಗಿರುವುದರಲ್ಲಿ ಸಂದೇಹವಿಲ್ಲ.
  • ಕೀಳು ವಿಚಾರಗಳು ಬರುತ್ತವೆ-ಹೋಗುತ್ತವೆ. ಅದಕ್ಕಾಗಿ ಚಿಂತಿಸದಿರು. ಭಗವಂತನ ದಯೆಯಿಂದ, ನಿರಂತರವಾದ ಪರಿಶ್ರಮದಿಂದ ನಿನಗೆ ಶಕ್ತಿಯುಂಟಾಗುವುದು. ಆ ಆ ಸಮಯಕ್ಕೆ ಯಾವ ಯಾವುದರಲ್ಲಿ ಆಸಕ್ತಿ ಉಂಟಾಗುವುದೋ ಹಾಗೆ ಹಾಗೆ, ಜಪ, ಧ್ಯಾನ, ಪೂಜೆ ಮತ್ತು ಶಾಸ್ತ್ರದ ಆಧ್ಯಯನದಲ್ಲಿ ನಿನ್ನ ಮನಸ್ಸನ್ನು ತೊಡಗಿಸಿಕೊ.
  • ಶಕ್ತಿ, ಜ್ಙಾನ ಮತ್ತು ವಿವೇಕಗಳಿಗಾಗಿ ಭಗವಂತನಲ್ಲಿ ಪ್ರಾರ್ಥಿಸಿಕೊ. ಹೃದಯಪೂರ್ವಕವಾಗಿ ಭಗವಂತನಲ್ಲಿ ಭಕ್ತಿ, ಶ್ರದ್ಧೆ ಮತ್ತು ಕೃಪೆಗಾಗಿ ಪ್ರಾರ್ಥಿಸಿಕೊ. ಕಠಿಣವಾದ ಆಧ್ಯಾತ್ಮಿಕ ಸಾಧನೆಗಳಲ್ಲಿ ತೊಡಗಿಕೊಳ್ಳುವದು ಎಲ್ಲರಿಗೂ ಸಾಧ್ಯವಾಗದು - ಆದರೆ ಪ್ರಾರ್ಥನೆಯಿಂದ ಆಧ್ಯಾತ್ಮಿಕ ಜೀವನದಲ್ಲಿ ಎಲ್ಲವನ್ನೂ ಪಡೆಯಬಹುದು.
"https://kn.wikipedia.org/w/index.php?title=ಶಿವಾನಂದ&oldid=597251" ಇಂದ ಪಡೆಯಲ್ಪಟ್ಟಿದೆ