ಬ್ರಹ್ಮರ್ಷಿ

ವಿಕಿಪೀಡಿಯ ಇಂದ
Jump to navigation Jump to search

ಹಿಂದೂ ಧರ್ಮದಲ್ಲಿ, ಬ್ರಹ್ಮರ್ಷಿಯು ಋಷಿಗಳ ಅತ್ಯುನ್ನತ ವರ್ಗದ ಸದಸ್ಯ, ವಿಶೇಷವಾಗಿ ಋಗ್ವೇದದಲ್ಲಿ ಸಂಗ್ರಹಿಸಲಾದ ಋಕ್ಕುಗಳ ರಚನೆ ಮಾಡಿದರು ಎಂದು ನಂಬಲಾದವರು. ಬ್ರಹ್ಮರ್ಷಿಯು ಜ್ಞಾನೋದಯವನ್ನು (ಕೈವಲ್ಯ) ಪಡೆದುಕೊಂಡು ಬ್ರಹ್ಮನ್‍ನ ಅರ್ಥವನ್ನು ಸಂಪೂರ್ಣವಾಗಿ ತಿಳಿದುಕೊಂಡು ಜೀವನ್ಮುಕ್ತನಾದ ಋಷಿ ಅಥವಾ ಅತ್ಯುನ್ನತ ದೈವಿಕ, ಅನಂತ (ಸರ್ವಜ್ಞತೆ) ಮತ್ತು ಆತ್ಮಜ್ಞಾನವಾದ ಬ್ರಹ್ಮಜ್ಞಾನವನ್ನು ಪಡೆದುಕೊಂಡಿರುವ ಋಷಿ. ಬ್ರಹ್ಮರ್ಷಿಯು ತೀರಿಕೊಂಡಾಗ ಅವನು ಪರಮುಕ್ತಿಯನ್ನು ಹೊಂದುತ್ತಾನೆ ಮತ್ತು ಜನನ ಹಾಗೂ ಮರಣದ ಚಕ್ರವಾದ ಸಂಸಾರದಿಂದ ಮುಕ್ತವಾಗುತ್ತಾನೆ.

ಅತ್ಯುತ್ಕೃಷ್ಟ ಶಿರೋನಾಮೆಯಾದ ಬ್ರಹ್ಮರ್ಷಿಯನ್ನು ಸ್ವತಃ ವೇದಗಳಲ್ಲೇ ಪ್ರಮಾಣಿಸಲಾಗಿಲ್ಲ ಮತ್ತು ಮೊದಲ ಬಾರಿ ಸಂಸ್ಕೃತ ಮಹಾಕಾವ್ಯಗಳಲ್ಲಿ ಕಾಣಿಸಿಕೊಳ್ಳುತ್ತದೆ. ಈ ವರ್ಗೀಕರಣದ ಪ್ರಕಾರ, ಬ್ರಹ್ಮರ್ಷಿಯು ಧರ್ಮ ಹಾಗೂ 'ಬ್ರಹ್ಮಜ್ಞಾನ'ವೆಂದು ಪರಿಚಿತವಾಗಿರುವ ಆಧ್ಯಾತ್ಮಿಕ ಜ್ಞಾನದ ಅಂತಿಮ ತಜ್ಞನಾಗಿರುತ್ತಾನೆ. ಅವನ ಕೆಳಗೆ ಮಹರ್ಷಿಗಳಿರುತ್ತಾರೆ. ಬ್ರಹ್ಮನ ಯೋಚನೆಗಳಿಂದ ಸೃಷ್ಟಿಗೊಂಡ ಸಪ್ತರ್ಷಿಗಳು ಪರಿಪೂರ್ಣ ಬ್ರಹ್ಮರ್ಷಿಗಳಾಗಿದ್ದಾರೆ. ಅವರು ಶಕ್ತಿ ಮತ್ತು ಧರ್ಮನಿಷ್ಠೆಯಲ್ಲಿ ದೇವರಿಗೆ ಸಮಾನರು ಎಂದು ಹಲವುವೇಳೆ ಪುರಾಣಗಳಲ್ಲಿ ಉಲ್ಲೇಖಿಸಲಾಗುತ್ತದೆ.

ಭೃಗು, ಆಂಗೀರಸ, ಅತ್ರಿ, ವಿಶ್ವಾಮಿತ್ರ, ಕಶ್ಯಪ, ವಶಿಷ್ಠ ಮತ್ತು ಶಾಂಡಿಲ್ಯ ಇವರು ಏಳು ಬ್ರಹ್ಮರ್ಷಿಗಳು. ಆದರೆ ಗೋತ್ರ ಪ್ರವರ್ತಕರೂ (ಬ್ರಾಹ್ಮಣೀಯ ಕುಲಗಳ ಸಂಸ್ಥಾಪಕರು) ಆಗಿರುವ ಸಪ್ತರ್ಷಿಗಳ ಮತ್ತೊಂದು ಪಟ್ಟಿಯಿದೆ. ಈ ಎರಡನೇ ಪಟ್ಟಿಯು ಸ್ವಲ್ಪಮಟ್ಟಿಗೆ ಆಮೇಲಿನ ಕಾಲದಲ್ಲಿ ಕಾಣಿಸಿಕೊಂಡಿತು, ಆದರೆ ಪ್ರಾಚೀನ ಕಾಲಕ್ಕೆ ಸೇರಿದೆ. ಗಾಯತ್ರಿ ಮಂತ್ರ ಸೇರಿದಂತೆ ಋಗ್ವೇದದ ಮೂರನೇ ಮಂಡಲದ ಎಲ್ಲ ಋಕ್ಕುಗಳ ಕರ್ತೃವು ವಿಶ್ವಾಮಿತ್ರನೆಂದು ಹೊಣೆಮಾಡಲಾಗಿದೆ. ಇವನು ಗಾಧಿಯ ಮಗನೆಂದು ಉಲ್ಲೇಖಿಸಲಾಗಿದೆ. ಪೌರಾಣಿಕ ಕಥೆಗಳ ಪ್ರಕಾರ, ವಿಶ್ವಾಮಿತ್ರನು ಶುದ್ಧ ತಪಸ್ಸಿನಿಂದ ಬ್ರಹ್ಮರ್ಷಿಯ ಸ್ಥಾನಕ್ಕೆ ಏರಿದ ಏಕೈಕ ಬ್ರಹ್ಮರ್ಷಿಯಾಗಿದ್ದನು. ಮೂಲತಃ ಕ್ಷತ್ರಿಯ ಕುಲಕ್ಕೆ ಸೇರಿದವನಾದರೂ, ಅವನು ಪರಿಶುದ್ಧ ಯೋಗ್ಯತೆಯಿಂದ ಬ್ರಹ್ಮರ್ಷಿ ಮಟ್ಟಕ್ಕೆ ಏರಿದನು. ವಿಶ್ವಾಮಿತ್ರನನ್ನು ಕೌಶಿಕನೆಂದೂ ಸೂಚಿಸಲಾಗುತ್ತದೆ, ಏಕೆಂದರೆ ಅವನು ಕೋಸಿ ನದಿಯ ದಡದ ಮೇಲೆ ಬ್ರಹ್ಮಜ್ಞಾನವನ್ನು ಪಡೆದನು. ಮಹಾಭಾರತದಲ್ಲಿ ಭೀಷ್ಮನು ಪರಶುರಾಮನಿಗೂ ಬ್ರಹ್ಮರ್ಷಿ ಎಂಬ ಪದವಿಯನ್ನು ಹೊರಿಸಿದನು.

ಬ್ರಹ್ಮರ್ಷಿ ದೇಶವು ಕುರು ರಾಜ್ಯ, ಮತ್ಸ್ಯ ರಾಜ್ಯ, ಪಾಂಚಾಲ ಮತ್ತು ಶೂರಸೇನ ರಾಜ್ಯದ ಪ್ರಾಂತಗಳನ್ನು ಒಳಗೊಳ್ಳುತ್ತದೆ (ಅಂದರೆ ಪಟಿಯಾಲಾ ರಾಜ್ಯದ ಪೂರ್ವಾರ್ಧ ಮತ್ತು ಪಂಜಾಬ್‍ನ ದೆಹಲಿ ವಿಭಾಗದ ಪೂರ್ವಾರ್ಧ, ರಾಜ್‍ಪುತಾನಾದಲ್ಲ್ ಅಲ್ವರ್ ರಾಜ್ಯ ಮತ್ತು ಪಕ್ಕದ ಪ್ರಾಂತ್ಯ, ಗಂಗಾ ಮತ್ತು ಜಮುನಾ ನಡುವೆ ಇರುವ ಪ್ರದೇಶ ಮತ್ತು ಮುತ್ತ್ರ ಜಿಲ್ಲೆ).