ಚಾಣಕ್ಯ
ಚಾಣಕ್ಯ | |
|---|---|
ಚಾಣಕ್ಯ, ಕಲಾವಿದನೊಬ್ಬ ಅನಿಸಿಕೆ | |
| ಇತರ ಹೆಸರುಗಳು | ಕೌಟಿಲ್ಯ, ವಿಷ್ಣುಗುಪ್ತಾ |
| ವೃತ್ತಿಗಳು | ಪ್ರಾಧ್ಯಾಪಕ, ಸಲಹೆಗಾರ ಚಂದ್ರಗುಪ್ತ ಮೌರ್ಯ |
| ಪ್ರಸಿದ್ಧರಾಗಿರುವುದು | ಅಡಿಪಾಯ ಮೌರ್ಯ ಸಾಮ್ರಾಜ್ಯ |
| ಗಮನಾರ್ಹ ಕೃತಿ | ಅರ್ಥಶಾಸ್ತ್ರ (ಶಾಸ್ತ್ರಗ್ರಂಥ), ಚಾಣಕ್ಯ ನೀತಿ |
ಕೌಟಿಲ್ಯ ಎಂದೇ ಪ್ರಸಿದ್ಧನಾದ ಚಾಣಕ್ಯ (ಸು. ಕ್ರಿ.ಪೂ. ೩೫೦ - ೨೮೩), ಪ್ರಾಚೀನ ಭಾರತದ ಅದ್ವಿತೀಯ ಅರ್ಥಶಾಸ್ತ್ರಜ್ಞ. ಮೌರ್ಯ ಸಾಮ್ರಾಜ್ಯ ಸ್ಥಾಪನೆಯಲ್ಲಿ ಚಾಣಕ್ಯನ ಪಾತ್ರ ಮಹತ್ವದ್ದು.[೧]."ವಿಷ್ಣುಗುಪ್ತ" ಎಂಬುದು ಚಾಣಕ್ಯನ ನಿಜವಾದ ಹೆಸರು. ಚಣಕನ ಮಗನಾದ್ದರಿಂದ ಚಾಣಕ್ಯನೆಂದು ಹೆಸರು ಬಂದಿತೆಂದು ಹೇಳಲಾಗುತ್ತದೆ. ವಿಷ್ಣುಗುಪ್ತ ತಕ್ಷಶಿಲೆಯ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ಪ್ರಾಧ್ಯಾಪಕನಾಗಿದ್ದನು. ತಕ್ಷಶಿಲೆ ಗಾಂಧಾರದಲ್ಲಿತ್ತು. ಗಾಂಧಾರದ ರಾಜ ಅಂಬಿ, ಯವನ ಚಕ್ರವರ್ತಿಯಾದ ಅಲೆಕ್ಸಾಂಡರನ ಜೊತೆ ಒಪ್ಪಂದ ಮಾಡಿಕೊಂಡು ಇಡೀ ಭಾರತವನ್ನು ಯವನರ ಕೈಗೊಪ್ಪಿಸಲು ಹೊಂಚು ಹಾಕುತ್ತಾನೆ. ಆಗ ತನ್ನ ವಿದ್ಯಾರ್ಥಿಗಳ ಬೆಂಬಲದಿಂದ ಅಚಾರ್ಯ ವಿಷ್ಣುಗುಪ್ತನು ಬಂಡೇಳುತ್ತಾನೆ. ಈತನ ಶಿಷ್ಯನೆ ಚಂದ್ರಗುಪ್ತ ಮೌರ್ಯ.
ರಾಜನೀತಿಜ್ಞ
[ಬದಲಾಯಿಸಿ]ಕೌಟಿಲ್ಯ ಭಾರತದ ಪ್ರಸಿದ್ಧ ರಾಜನೀತಿಜ್ಞ. ವಿಷ್ಣುಗುಪ್ತ, ಚಾಣಕ್ಯ ಎಂಬ ಅಭಿಧಾನಗಳೂ ಇವನಿಗುಂಟು. ಈತ ಕುಟಲನೆಂಬ ಗೋತ್ರಪ್ರವರ್ತಕನ ವಂಶದಲ್ಲಿ ಹುಟ್ಟಿದ್ದರಿಂದ ಇವನ ಹೆಸರು ಕೌಟಿಲ್ಯನೆಂದೂ ಚಣಕ ದೇಶದಲ್ಲಿ ಜನಿಸಿದವನಾದ್ದರಿಂದ ಚಾಣಕ್ಯನೆಂದೂ ಇವನಿಗೆ ತಂದೆತಾಯಿಗಳಿಟ್ಟ ಹೆಸರು ವಿಷ್ಣುಗುಪ್ತನೆಂದೂ ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ.[೨] ತಕ್ಷಶಿಲೆಯ ಬ್ರಾಹ್ಮಣ ಮನೆತನಕ್ಕೆ ಸೇರಿದ ಈತ ನಂದವಂಶದ ಕೊನೆಯ ರಾಜನನ್ನು ಸಿಂಹಾಸನದಿಂದ ಉರುಳಿಸಿ, ಚಂದ್ರಗುಪ್ತ ಮೌರ್ಯನಿಂದ ರಾಜ್ಯಸ್ಥಾಪನೆ ಮಾಡಿಸಿದನೆಂದು ಪ್ರತೀತಿ ಇದೆ. ಸಾಮ್ರಾಜ್ಯಸ್ಥಾಪನೆಯ ಅನಂತರ ಇವನು ಚಂದ್ರಗುಪ್ತ ಮೌರ್ಯನ ಪ್ರಧಾನಮಂತ್ರಿಯಾಗಿದ್ದ ರಾಜ್ಯಭಾರವನ್ನು ವ್ಯವಸ್ಥಿತಗೊಳಿಸಲು ಬಹುಮಟ್ಟಿಗೆ ಕಾರಣನಾದ. ಚಂದ್ರಗುಪ್ತನ ತರುವಾಯ ಸಿಂಹಾಸನವನ್ನೇರಿದ ಬಿಂದುಸಾರನ ಕಾಲದಲ್ಲೂ ಸ್ವಲ್ಪಕಾಲ ಪ್ರಧಾನಿಯಾಗಿದ್ದನೆಂದು ಕಾಣುತ್ತದೆ.[೩]
ಅರ್ಥಶಾಸ್ತ್ರ
[ಬದಲಾಯಿಸಿ]ಇವನ ಅರ್ಥಶಾಸ್ತ್ರವೆಂಬ ರಾಜನೀತಿಗ್ರಂಥ ಕ್ರಿ.ಪೂ. 325-296 ಸುಮಾರಿನಲ್ಲಿ ರಚಿತವಾದ್ದೆಂದು ಹೇಳಲಾಗಿದೆ.[೨] ಕ್ರಿ.ಶ. 3ನೆಯ ಶತಮಾನದಲ್ಲಿ ಈ ಗ್ರಂಥ ರಚಿತವಾಗಿರಬಹುದೆಂಬ ಅಭಿಪ್ರಾಯವೂ ಉಂಟು. ಮೈಸೂರಿನ ಪ್ರಾಚ್ಯ ಸಂಶೋಧನಾಲಯದಲ್ಲಿ ಗ್ರಂಥಪಾಲಕರಾಗಿದ್ದ ಆರ್.ಶಾಮಶಾಸ್ತ್ರಿಗಳು 1909ರಲ್ಲಿ ಈ ಗ್ರಂಥವನ್ನು ಪ್ರಕಟಿಸಿದರು.[೪] ಅನಂತರ ತಿರುವನಂತಪುರದ ಟಿ.ಗಣಪತಿಶಾಸ್ತ್ರಿಯವರೂ ಈ ಗ್ರಂಥವನ್ನು ಸಂಪಾದಿಸಿ ಪ್ರಕಟಿಸಿದರು. ಈ ಗ್ರಂಥದ ಮೇಲೆ ಅನೇಕ ಟೀಕೆ ಟಿಪ್ಪಣಿಗಳು ಬಂದಿವೆ. ಇದು ಇಂಗ್ಲಿಷ್, ಫ್ರೆಂಚ್, ಜರ್ಮನ್ ಮುಂತಾದ ಅನೇಕ ಆಧುನಿಕ ಭಾಷೆಗಳಿಗೆ ಭಾಷಾಂತರವಾಗಿದೆ. ಪ್ರಾಚೀನ ಭಾರತದ ರಾಜನೀತಿ, ಧರ್ಮ ಮತ್ತು ಸಾಮಾಜಿಕ ಜೀವನಗಳನ್ನು ರೂಪಿಸುವ ಕಾರ್ಯದಲ್ಲೂ ಈ ಸಂಬಂಧವಾಗಿ ಅನಂತರಕಾಲದಲ್ಲಿ ರಚಿತವಾದ ಗ್ರಂಥಗಳ ಮೇಲೂ ಕೌಟಿಲ್ಯನ ಅರ್ಥಶಾಸ್ತ್ರ ತುಂಬ ಪ್ರಭಾವ ಬೀರಿತು. ಕೆಲವು ಆಧುನಿಕ ವಿದ್ವಾಂಸರು ಈ ಗ್ರಂಥವನ್ನು ಇಟಲಿಯ ಮಧ್ಯಕಾಲೀನ ರಾಜನೀತಿಜ್ಞ ಮ್ಯಾಕಿಯವೆಲಿಯ ಇಲ್ ಪ್ರಿನ್ಸಿಪೆ (ದಿ ಪ್ರನ್ಸ್) ಎಂಬ ಗ್ರಂಥದೊಂದಿಗೆ ಹೋಲಿಸಿ ಕೌಟಿಲ್ಯನನ್ನು ಭಾರತದ ಮ್ಯಾಕಿಯವೆಲಿ ಎಂದು ಕರೆದಿರುವುದು ಅಷ್ಟು ಸಮಂಜಸವಲ್ಲ. ಕೌಟಿಲ್ಯನನ್ನು ಗ್ರೀಸಿನ ಅರಿಸ್ಟಾಟಲಿಗೆ ಹೋಲಿಸಬಹುದೆಂದು ಮತ್ತೆ ಕೆಲವರು ವಾದಿಸಿರುವುದೇ ಸೂಕ್ತವೆಂದು ಕಾಣುತ್ತದೆ.
ಗ್ರಂಥಸಾರ
[ಬದಲಾಯಿಸಿ]ಈ ಗ್ರಂಥದಲ್ಲಿ ಸರ್ಕಾರದ ಆಡಳಿತ ರೀತಿನೀತಿ, ರಾಜಧರ್ಮ, ಮಂತ್ರಿಗಳೇ ಮುಂತಾದ ಆಡಳಿತಾಧಿಕಾರಿಗಳ ನಡೆವಳಿಕೆ, ಅಂತರರಾಷ್ಟ್ರೀಯ ವ್ಯವಹಾರ ನಿರ್ವಹಣೆ ಮುಂತಾದ ವಿಷಯಗಳ ಬಗ್ಗೆ ಭಾರತೀಯ ದೃಷ್ಟಿಕೋನವನ್ನು ಕೌಟಿಲ್ಯ ಹೊರಗೆಡಹಿದ್ದಾನೆ. ತನ್ನ ಗ್ರಂಥದಲ್ಲಿ ರಾಜ್ಯಾಡಳಿತ, ನ್ಯಾಯಾಂಗ ವಿಧಿನಿಯಮಗಳು, ಯುದ್ಧನೀತಿ ಮತ್ತು ತಂತ್ರಗಳು, ಆಸ್ತಿಯ ವಿನಿಮಯದ ಬಗ್ಗೆ ಅನುಸರಿಸಬೇಕಾದ ನಿಯಮಗಳು, ಸಾಮಾಜಿಕ ಜೀವನದ ಕಟ್ಟುಪಾಡುಗಳು-ಇವೆಲ್ಲವನ್ನೂ ಪರಿಶೀಲಿಸಿದ್ದಾನೆ. ಧಾರ್ಮಿಕ ದೃಷ್ಟಿ ಪ್ರಧಾನವಾಗಿದ್ದರೂ ತನ್ನ ಗ್ರಂಥದಲ್ಲಿ ಲೌಕಿಕ ಉಪಯುಕ್ತತೆಗೆ ಪ್ರಾಧಾನ್ಯ ನೀಡಿದ್ದಾನೆ. ಒಟ್ಟಿನಲ್ಲಿ ಕೌಟಿಲ್ಯನ ಅರ್ಥಶಾಸ್ತ್ರ ಕೇವಲ ಆದರ್ಶನೀತಿನಿಯಮಗಳ ಸಂಗ್ರಹಗ್ರಂಥವಾಗಿರದೆ ಪ್ರಜಾಹಿತೈಷಿಯಾದ ರಾಜ ನಿತ್ಯವೂ ಅನುಸರಿಸಬೇಕಾದ ಮಾರ್ಗಗಳನ್ನು ತಿಳಿಸುವ ಉತ್ತಮ ಮಾರ್ಗದರ್ಶಿ ಗ್ರಂಥವಾಗಿದೆ. ಶಾಸ್ತ್ರಗಳನ್ನು ತ್ರಯೀ, ಆನ್ವೀಕ್ಷಿಕೀ, ವಾರ್ತಾ ಮತ್ತು ದಂಡನೀತಿ ಎಂದು ನಾಲ್ಕಾಗಿ ವಿಭಾಗ ಮಾಡುವ ಪ್ರಾಚೀನ ಸಂಪ್ರದಾಯವನ್ನೇ ಕೌಟಿಲ್ಯನೂ ಅನುಸರಿಸಿದ್ದಾನೆ. ವೇದ ಮತ್ತು ಅದಕ್ಕೆ ಸಂಬಂಧಿಸಿದ ಶಾಸ್ತ್ರಗಳು ತ್ರಯೀ, ಅದು ಧರ್ಮಾಧರ್ಮಗಳ ತಿಳಿವಳಿಕೆಯನ್ನುಂಟುಮಾಡಿ, ವರ್ಣಾಶ್ರಮಧರ್ಮಗಳಿಗನುಗುಣವಾಗಿ ನಡೆಯುವುದರಿಂದ ಉಂಟಾಗುವ ಪ್ರಯೋಜನ, ಅವನ್ನು ಮೀರಿದರೆ ಒದಗುವ ಆಪತ್ತು, ಇವನ್ನು ತಿಳಿಸಿದೆ. ಅನ್ವೀಕ್ಷಿಕೀ ತತ್ತ್ವಶಾಸ್ತ್ರ ಕಾರ್ಯಕಾರಣಗಳ ತಿಳಿವನ್ನು ಬಲಪಡಿಸಿ, ಮನಸ್ಸನ್ನು ಕ್ಲೇಶಗಳಿಗೀಡಾಗದಂತೆ ಹದಗೊಳಿಸುತ್ತದೆ. ಕೃಷಿ, ಪಶುಪಾಲನೆ, ಕೈಗಾರಿಕೆಗಳನ್ನು ತಿಳಿಸುವುದು ವಾರ್ತಾ, ಆಡಳಿತದ ರೀತಿನೀತಿಗಳನ್ನು ತಿಳಿಸುವುದು ದಂಡನೀತಿ-ಅಥವಾ ಅರ್ಥಶಾಸ್ತ್ರ. ಕೌಟಿಲ್ಯನ ಅರ್ಥಶಾಸ್ತ್ರವನ್ನು 15 ಅಧಿಕರಣಗಳಾಗಿ ವಿಭಾಗಿಸಿದೆ. ಒಂದನೆಯ ಅಧಿಕರಣದಲ್ಲಿ ರಾಜಕುಮಾರನ ಪೋಷಣೆ ಮತ್ತು ವಿದ್ಯಾಭ್ಯಾಸಗಳಿಗೆ ಸಂಬಂಧಪಟ್ಟ ವಿಚಾರ ತಿಳಿಸಲಾಗಿದೆ. ರಾಜಕುಮಾರ ವೇದವೇದಾಂಗಗಳಿಂದ ಕೂಡಿದ ಧರ್ಮವನ್ನೂ ಅರ್ಥಶಾಸ್ತ್ರ, ಕೃಷಿ, ಪಶುಪಾಲನೆ, ವಾಣಿಜ್ಯ, ಕೈಗಾರಿಕೆ, ರಾಜನೀತಿ ಮತ್ತು ದಂಡನೀತಿಗಳನ್ನೂ ಅಭ್ಯಸಿಸಬೇಕು. ಅವನ ಮಂತ್ರಿಗಳ ಮತ್ತು ಆಸ್ಥಾನಿಕರ ಬಗ್ಗೆಯೂ ವಿವರಗಳನ್ನು ಕೊಟ್ಟಿದೆ. ಇವುಗಳಲ್ಲದೆ, ಅವನನ್ನು ಕೊಲ್ಲಲೆಳಸುವ, ಅವನ ವಂಶದ ರಾಜಕುಮಾರರಿಂದ ಆರಂಭಿಸಿ ಸಾಮಾನ್ಯ ಪ್ರಜೆಯವರೆಗೆ ಅವನ ರಾಜ್ಯದ ಎಲ್ಲ ಉಚ್ಚ ನೀಚ ವರ್ಗಗಳ ಜನರ ಮೇಲೆ ಭದ್ರವಾದ ಹಿಡಿತವನ್ನಿರಿಸಲು ಸಹಕರಿಸುವ ಗೂಢಚಾರರ ಬಗ್ಗೆಯೂ ತಿಳಿಸಲಾಗಿದೆ. ಪರರಾಷ್ಟ್ರಗಳಲ್ಲಿರುವ ರಾಯಭಾರಿಗಳು ಅವನ ಪ್ರತಿನಿಧಿಗಳಾಗಿಯೂ ಗೂಢಚಾರರಾಗಿಯೂ ಇರಬೇಕು. ಗೂಢಚಾರರು ದೇಶದಲ್ಲಿ ಏನೆಲ್ಲ ಆಗುತ್ತದೋ ಅದನ್ನೆಲ್ಲ ರಾಜನಿಗೆ ತಿಳಿಸುತ್ತಿರಬೇಕು. ರಾಜನ ಅಂತಃಪುರಕ್ಕೆ ವಿಶೇಷ ಗಮನವೀಯಲಾಗಿದೆ. ಅಲ್ಲಿ ಇವನಿಗೆ ಒದಗಬಹುದಾದ ಅಪಾಯಗಳನ್ನು ಕುರಿತ ಹೆಚ್ಚಿನ ವಿವೇಚನೆಯಿದೆ. ಅಂತಃಪುರದಲ್ಲಿ ಕೊಲೆ ಮಾಡಲ್ಪಟ್ಟ ಪ್ರಸಿದ್ಧ ಅರಸರನ್ನು ಉದಾಹರಣೆಗಾಗಿ ಹೇಳಿದೆ. ಅರಮನೆಯಲ್ಲಿ ಮಾತ್ರವಲ್ಲದೆ, ಬೀದಿ ಮತ್ತು ಇತರ ಸಾರ್ವಜನಿಕ ಸ್ಥಳಗಳಲ್ಲಿಯೂ ರಾಜ ಕೊಲೆಗೆ ಗುರಿಯಾಗದಂತೆ ಕೈಗೊಳ್ಳಬೇಕಾದ ರಕ್ಷಣೆಯ ಅಗತ್ಯವನ್ನು ವಿವರಿಸಿದೆ. ರಾಜ್ಯದಲ್ಲಿ ಆಡಳಿತದ ಮೇಲೆ ಸಂಪೂರ್ಣ ಹಿಡಿತವನ್ನು ಪರಿಣಾಮಗೊಳಿಸುವ ದೊಡ್ಡ ಪರಿವೀಕ್ಷಕ ದಳದ ಕರ್ತವ್ಯವನ್ನು ಎರಡನೆಯ ಅಧಿಕರಣದಲ್ಲಿ ತಿಳಿಸಿದೆ. ಮೂರನೆಯ ಅಧಿಕರಣದಲ್ಲಿ ಕಾನೂನಿನ ವಿವರಣೆಯುಂಟು. ಪೋಲೀಸ್ ಕಾರ್ಯ ಮತ್ತು ಕಠಿಣಶಿಕ್ಷೆಗಳಿಂದ ದುಷ್ಟರನ್ನು ಅಡಗಿಸುವ ವಿಧಾನ, ವಂಚಕ ವ್ಯಾಪಾರಿಗಳ ಮೋಸದ ತೂಕ ಅಳತೆಗಳ ಮತ್ತು ಕೃತಕವಾಗಿ ವಸ್ತುಗಳ ಬೆಲೆಯನ್ನು ಏರಿಸುವುದರ ವಿರುದ್ಧವಾಗಿ ತೆಗೆದುಕೊಳ್ಳಬೇಕಾದ ಜಾಗ್ರತಾ ಕ್ರಮಗಳು-ಇವನ್ನು ನಾಲ್ಕನೆಯ ಅಧಿಕರಣದಲ್ಲಿ ವಿವರಿಸಿದೆ. ರಾಜ ಮೋಸಗಾರನಾದ ಮಂತ್ರಿಯನ್ನು ನಾಶಮಾಡುವ ಕ್ರಮ, ತೆರಿಗೆಗಳನ್ನು ವಸೂಲು ಮಾಡುವ ಕ್ರಮ, ಕೃಷಿಕರಿಂದ ಮತ್ತು ಕೈಕಸಬುದಾರರಿಂದ ಸಾಮಗ್ರಿಗಳನ್ನು ವಸೂಲು ಮಾಡಿ ಸಂಗ್ರಹಿಸುವುದು, ಗೂಢಚಾರರು ಶ್ರೀಮಂತರನ್ನು ದಾನ ಮಾಡುವಂತೆ ಪ್ರಚೋದಿಸುವುದು ಮತ್ತು ಕೆಟ್ಟ ಶ್ರೀಮಂತರ ಸ್ವತ್ತನ್ನು ರಾಜ್ಯಭಂಡಾರಕ್ಕೆ ಸೇರಿಸುವುದು, ರಾಜಸೇವಕರ ವಾರ್ಷಿಕ ವೇತನಕ್ರಮ-ಮುಂತಾದವನ್ನು ಐದನೆಯ ಅಧಿಕರಣದಲ್ಲಿ ವಿವರಿಸಿದೆ. ಆರನೆಯ ಅಧಿಕರಣದಲ್ಲಿ ರಾಜ, ಮಂತ್ರಿ, ಭೂಮಿ, ಕೋಟೆ, ಕೋಶ, ಸೇನೆ ಮತ್ತು ಮಿತ್ರರ ಬಗ್ಗೆ ವಿವರಗಳೂ ರಾಷ್ಟ್ರಾಂತರ ಸಂಬಂಧದ ವಿವರಣೆಯೂ ಇವೆ. ಶಾಂತಿ, ಯುದ್ಧ ತಾಟಸ್ಥ್ಯ ವಿಜಯಯಾತ್ರೆಗೆ ಸನ್ನಾಹ, ಒಪ್ಪಂದ, ಅನಿಶ್ಚಿತ ವರ್ತನೆಗಳು ಎಂಬ ಆರು ರಾಜಕಾರ್ಯಗಳ ವಿವೇಚನೆಗೆ ಏಳನೆಯ ಅಧಿಕರಣ ಮೀಸಲು, ಜೂಜು, ಬೇಟೆ, ಸ್ತ್ರೀ ಮತ್ತು ಮದ್ಯಗಳಿಗೆ ರಾಜ ಬಲಿ ಬೀಳುವುದರಿಂದ ಉಂಟಾಗಬಹುದಾದ ಅಪಾಯಗಳನ್ನು ಮತ್ತು ಬೆಂಕಿ, ನೀರು ಮತ್ತು ಇತರ ವಿಷಯಗಳು ತರಬಹುದಾದ ತೊಂದರೆಗಳನ್ನು ಎಂಟನೆಯ ಅಧಿಕರಣದಲ್ಲಿ ಕೌಟಿಲ್ಯ ವಿವರಿಸಿದ್ದಾನೆ. ಒಂಬತ್ತು ಮತ್ತು ಹತ್ತನೆಯ ಅಧಿಕರಣಗಳಲ್ಲಿ ಯುದ್ಧದ ವಿಚಾರವಿದೆ. ನೇರವಾದ ಯುದ್ಧವನ್ನು ತಪ್ಪಿಸಲು ಬೇಕಾದಷ್ಟು ಸಂದರ್ಭವನ್ನು ರಾಜನಿಗೊದಗಿಸಲಾಗಿದೆ. ನೇರ ಹೋರಾಟ ನಡೆಯಬೇಕಾದ ಸಂದರ್ಭದಲ್ಲಿ ಸೈನಿಕರನ್ನು ಹುರಿದುಂಬಿಸುವ ರೀತಿಯನ್ನು ಹೇಳಲಾಗಿದೆ. ಜ್ಯೋತಿಷ್ಕರು, ಪುರೋಹಿತರು ಮತ್ತು ಇತರ ರಾಜನಿಷ್ಠರು ಈ ಕೆಲಸದಲ್ಲಿ ರಾಜನಿಗೆ ಸಹಾಯ ಮಾಡಬೇಕು. ಯುದ್ಧದಲ್ಲಿ ಕುಹಕೋಪಾಯವೇ ಮುಖ್ಯ ಎಂದು ವಿವರಿಸಿದೆ. ಹನ್ನೊಂದನೆಯ ಅಧಿಕರಣದಲ್ಲಿ ಶತ್ರುಸೈನ್ಯದ ಅಧಿಕಾರವರ್ಗದಲ್ಲಿರುವ ಒಗ್ಗಟ್ಟನ್ನು ನಾಶಪಡಿಸಲು ಕಲಹದ ಬೀಜವನ್ನು ರಾಜ ಬಿತ್ತಬೇಕಾದ ವಿಧಾನ ಮತ್ತು ಈ ಕಾರ್ಯಕ್ಕೆ ಸ್ತ್ರೀಯರ ನೆರವು-ಇವನ್ನು ವಿವರಿಸಿದೆ. ಹನ್ನೆರಡನೆಯ ಅಧಿಕರಣದಲ್ಲಿ ಗೂಢಚಾರ, ಗುಪ್ತಸಹಾಯಕ, ಕೊಲೆಗಡುಕ, ಸೆರೆಯಾಳು ಮತ್ತು ಸ್ತ್ರೀಯರ ನೆರವಿನಿಂದ ಒಬ್ಬ ದುರ್ಬಲರಾಜ ತನ್ನ ಬಲವನ್ನು ಹೆಚ್ಚಿಸಿಕೊಳ್ಳಬಹುದಾದ ರೀತಿಯನ್ನೂ ಶತ್ರುರಾಜನನ್ನು ಮೋಸದಿಂದ ಕೊಲ್ಲುವ ವಿಧಾನಗಳನ್ನೂ ವಿವರಿಸಿದೆ. ಹದಿಮೂರನೆಯ ಅಧಿಕರಣದಲ್ಲಿ ರಾಜನ ಪಾಂಡಿತ್ಯ ಮತ್ತು ಅವನ ಗುಣಾತಿಶಯಗಳನ್ನು ಮತ್ತು ದೈವದೊಲುಮೆಯನ್ನು ಪ್ರಚಾರ ಮಾಡಿ, ಶತ್ರುಗಳನ್ನು ಹೆದರಿಸಿಡುವ ಕ್ರಮವನ್ನೂ ಇದಕ್ಕೆ ಗೂಢಚಾರರಿಂದ ಮತ್ತು ಇತರರಿಂದ ಸಹಾಯ ಪಡೆದು ತಮ್ಮ ನೆರವಿಗೆ ಉಪಯೋಗಿಸಿಕೊಳ್ಳುವುದನ್ನೂ ಜನರ ಮೂಢ ನಂಬಿಕೆಗಳು ಮತ್ತು ವಿಶ್ವಾಸವನ್ನು ಬಳಸಿಕೊಳ್ಳುವ ಬಗೆಯನ್ನೂ ವಿವರಿಸಿದೆ. ಒಬ್ಬನನ್ನು ಕೊಲ್ಲಲು, ಕುರುಡು ಮಾಡಲು, ಇಲ್ಲವೆ ಬುದ್ಧಿಭ್ರಮಣೆಗೊಳಿಸಲು ಔಷಧ ಮತ್ತು ಮಂತ್ರಗಳ ಬಳಕೆ, ಬಣ್ಣ ಬದಲಾಯಿಸುವುದು, ಮನುಷ್ಯರು ಮತ್ತು ಪ್ರಾಣಿಗಳು ನಿದ್ದೆಮಾಡುವಂತೆ ಮಾಡುವ ಕ್ರಮ, ಕತ್ತಲೆಯಲ್ಲಿ ನೋಡುವುದು, ಬೆಂಕಿಯಲ್ಲಿ ಅಪಾಯವಾಗದಂತೆ ರಕ್ಷಣೆ-ಇವು ಹದಿನಾಲ್ಕನೆಯ ಅಧಿಕರಣದ ವಿಷಯಗಳು. ಕೊನೆಯದಾದ ಹದಿನೈದನೆಯ ಅಧಿಕರಣದಲ್ಲಿ ಗ್ರಂಥದ ಯೋಜನೆಯನ್ನೂ ವಾದದಲ್ಲಿ ಅನುಸರಿಸಬೇಕಾದ ಮೂವತ್ತೆರಡು ಸೂತ್ರಗಳನ್ನೂ ಉದಾಹರಣೆಗಳೊಡನೆ ವಿವರಿಸಲಾಗಿದೆ.
ವ್ಯಕ್ತಿತ್ವ
[ಬದಲಾಯಿಸಿ]ಅಸಾಧಾರಣ ಪ್ರತಿಭಾವಂತ. ಹಿಡಿದ ಕೆಲಸವನ್ನು ಪಟ್ಟು ಹಿಡಿದು, ಸಾಧಿಸುವ ಸ್ವಭಾವದವನು. ಸಕಲ ಶಾಸ್ತ್ರ ಪಾರಂಗತ, ಅರ್ಥಶಾಸ್ತ್ರ ಪ್ರವೀಣ. ರಾಜನೀತಿ ವಿಶಾರದ. ಸಾಮ, ದಾನ, ಭೇದ, ದಂಡ ಎಂಬ ಚತರೋಪಾಯ ಚತುರದ್ಯೆಯಲ್ಲಿ ತುಂಬಾ ಅನುಭವಿ, ಸೂಕ್ಷ್ಮಮತಿ. ಆತನ ಮನಸ್ಸಿನ ಅಭಿಪ್ರಾಯವನ್ನು ಹೀಗೆಂದು ತಿಳಿಯಲು ಯಾರಿಗೂ ಸಾಧ್ಯವಿಲ್ಲ. ಬಹಳ ರಹಸ್ಯವಾಗಿ ಕೆಲಸ ಮಾಡುವವನು. ಬಹುದೂರದ ಅಲೋಚನೆ, ಯಾವ ಕೆಲಸದಲ್ಲಿಯೇ ಆಗಲಿ ಆತ ಇಟ್ಟ ಗುರಿ, ಮಾಡಿದ ಅಂದಾಜು ಎಂದೂ ತಪ್ಪುತ್ತಿರಲಿಲ್ಲ. ಮಹಾತ್ಯಾಗಿ, ಮಹಾ ತಪಸ್ವಿ. ಹೊರನೋಟಕ್ಕೆ ತುಂಬ ಕಠಿಣ ಸ್ವಭಾವದವನು. ಅಪಾರ ಲೋಕಾನುಭವವಿದ್ದವನು. ಶತ್ರುಗಳನ್ನು ಸಂಹಾರ ಮಾಡುವುದರಲ್ಲಿ ಬಗೆಬಗೆಯ ತಂತ್ರಗಳನ್ನು ಸಮಯವರಿತು ಎಚ್ಚರಿಕೆಯಿಂದ ಮಾಡುವಾತ. ಆತನಿಗೆ ತಿಳಿಯದ ಶಾಸ್ತ್ರವಿಲ್ಲ. ಗೊತ್ತಿಲ್ಲದ ವಿಚಾರವಿಲ್ಲ. ಅದೊಂದು ಪ್ರತಿಭಾಪುಂಜ. “ಚಾಣಕ್ಯ ತಂತ್ರ” ಎಂಬ ಮಾತು ಈಗಲೂ ಗಾದೆಯಾಗಿದೆ. ನಂದವಂಶವನ್ನು ಸರ್ವನಾಶಮಾಡಿ, ಚಂದ್ರಗುಪ್ತನಿಗೆ ರಾಜ್ಯವನ್ನು ಕೊಡಿಸಿ, ಮೌರ್ಯ ಸಾಮ್ರಾಜ್ಯ ಸ್ಥಾಪಕನಾಗಿ ಮೆರೆದ ಪುಣ್ಯ ಪುರುಷ ಚಾಣಕ್ಯ. ಚಾಣಕ್ಯನಿಗೆ ಕೌಟಿಲ್ಯ ಎಂದು ಇನ್ನೊಂದು ಹೆಸರು. ಈತನ ಪ್ರತಿಭೆಯನ್ನು ತೋರಿಸುವ ಒಂದು ಪುಸ್ತಕ ಇಂದೂ ಉಳಿದಿದೆ. “ಅರ್ಥಶಾಸ್ತ್ರ” ಎಂದು ಅದರ ಹೆಸರು. ಅದು ಇಂಗ್ಲೀಷ್, ಫ್ರೆಂಚ್, ಜರ್ಮನ್- ಹೀಗೆ ಹಲವು ಭಾಷೆಗಳಿಗೆ ಅನುವಾದವಾಗಿದೆ. ದುರದೃಷ್ಟವೆಂದರೆ ಈತನ ವಿಷಯ ಖಚಿತವಾಗಿ ತಿಳಿದಿರುವುದು ಬಹು ಸ್ವಲ್ಪ. ಬೇರೆ ಬೇರೆ ಪುಸ್ತಕಗಳಲ್ಲಿ ದೊರೆಯುವ ಅಷ್ಟಿಷ್ಟು ಸಾಮಗ್ರಿಗಳನ್ನೆಲ್ಲ ಸೇರಿಸಿ ನಾವು, “ಪ್ರಾಯಶ: ಇದು ಇವನ ಜೀವನ ಚರಿತ್ರೆ” ಎಂದು ಹೇಳಬಹುದು.
ಚಾಣಕ್ಯನ ವಿದ್ಯಾಭ್ಯಾಸ ತಕ್ಷಶಿಲೆ ಎಂಬ ಊರಿನ ಪ್ರಸಿದ್ಧ ಶಾಲೆಯಲ್ಲಿ ಆಯಿತು. ತಕ್ಷಶಿಲೆಯ ಅಧ್ಯಾಪಕರು ಜಗತ್ಪ್ರಸಿದ್ಧ ವಿದ್ವಾಂಸರು. ಭಾರತದ ಎಲ್ಲಾ ಭಾಗಗಳಿಂದ ವಿದ್ಯಾಭ್ಯಾಸಕ್ಕಾಗಿ ಅಲ್ಲಿಗೆ ವಿದ್ಯಾರ್ಥಿಗಳು ಬರುತ್ತಿದ್ದರು. ರಾಜರು ಸಹ ತಮ್ಮ ಮಕ್ಕಳನ್ನು ವಿದ್ಯಾಭ್ಯಾಸಕ್ಕಾಗಿ ಅಲ್ಲಿಗೆ ಕಳುಹಿಸುತ್ತಿದ್ದರು. ಇಲ್ಲಿ ಒಬ್ಬ ಉಪಾಧ್ಯಾಯನ ಬಳಿ ಒಂದು ನೂರು ಒಂದು ಮಂದಿ ವಿದ್ಯಾರ್ಥಿಗಳು ಇದ್ದರಂತೆ. ಅಷ್ಟು ಮಂದಿಯೂ ರಾಜಕುಮಾರರಂತೆ! ಸಾಮಾನ್ಯವಾಗಿ ಹದಿನಾರನೆಯ ವರ್ಷಕ್ಕೆ ವಿದ್ಯಾರ್ಥಿ ಈ ವಿಶ್ವವಿದ್ಯಾನಿಲಯಕ್ಕೆ ಸೇರುತ್ತಿದ್ದ. ವೇದಗಳನ್ನೂ ಧನುರ್ವಿದ್ಯೆ, ಬೇಟೆ, ಆನೆಗಳನ್ನು ನೋಡಿಕೊಳ್ಳುವುದು ಹೇಗೆ ಎಂಬುವುದನ್ನೂ ಹದಿನೆಂಟು ಕಲೆಗಳನ್ನೂ ಕಲಿಸುತ್ತಿದ್ದರು. ನ್ಯಾಯಶಾಸ್ತ್ರ, ವೈದ್ಯಶಾಸ್ತ್ರ, ಸಮರಶಾಸ್ತ್ರ, ಇವುಗಳಿಗಾಗಿ ಇಲ್ಲಿದ್ದ ವಿದ್ಯಾ ಸಂಸ್ಥೆಗಳು ಭಾರತದಲ್ಲಿ ಮಾತ್ರವಲ್ಲ, ಆಚೆಯೂ ಸಹ ಪ್ರಖ್ಯಾತವಾಗಿದ್ದವು. ಇಂತಹ ಕೇಂದ್ರದಲ್ಲಿ ವಿದ್ಯಾಭ್ಯಾಸವಾಯಿತು.
ಸಾಹಿತ್ಯ ಕೃತಿಗಳು
[ಬದಲಾಯಿಸಿ]ಅರ್ಥಶಾಸ್ತ್ರ ಮತ್ತು ಚಾಣಕ್ಯ ನೀತಿ ಸಾರ(ಚಾಣಕ್ಯ ನೀತಿ ಶಾಸ್ತ್ರ)ಚಾಣಕ್ಯನ ಎರಡು ಮುಖ್ಯ ಪುಸ್ತಕಗಳಾಗಿವೆ.
೧) ಬೇರೆಯವರ ತಪ್ಪುಗಳಿಂದ ಕಲಿಯಿರಿ ಎಲ್ಲಾ ತಪ್ಪುಗಳನ್ನು ಮಾಡುವಷ್ಟು ಆಯಸ್ಸು ನಿಮಗಿಲ್ಲಾ
೨) ನೀವು ಹುಟ್ಟುವಾಗ ಏನು ಇರಲಿಲ್ಲ ಆದರೆ ಸಾಯುವಾಗ ನಿಮ್ಮ ಹೆಸರಿನೊಂದಿಗೆ ಸಾಯುತ್ತೀರಿ ನಿಮ್ಮ ಹೆಸರು ಬರಿ ಅಕ್ಷರಗಳಿಂದ ಕೂಡಿದ್ದರೆ ಸಾಲದು ಅದರಲ್ಲಿ ಒಂದು ಇತಿಹಾಸ ಇರಬೇಕು.
೩)ಸತ್ಯವಿದ್ದರು ನಂಬಲಾರದ್ದನ್ನು ಹೇಳಬಾರದು
೪) ಶತ್ರುವನ್ನು ಅವನ ಮರ್ಮದಲ್ಲಿ ಹೊಡೆಯಬೇಕು
೫) ಬುದ್ಧಿವಂತನಿಗೆ ಜೀವನದ ಭಯವಿಲ್ಲ
೬)ಅತಿ ಪ್ರಾಮಾಣಿಕರಾಗಬೇಡಿ ಏಕೆಂದರೆ ನೇರವಾಗಿರುವ ಮರಗಳು ಮೊದಲು ನೆಲಕ್ಕುರುಳುತ್ತವೆ ಆನಂತರ ಡೊಂಕು ಮರದ ಸರದಿ
೭) ನಿಮ್ಮ ರಹಸ್ಯವನ್ನು ಯಾರಿಗೂ ಹೇಳಬೇಡಿ ಅವೇ ನಿಮಗೆ ಮುಳುವಾಗುತ್ತವೆ.
೮) ಪ್ರತಿ ಸ್ನೇಹದ ಹಿಂದೆ ಒಂದು ಸ್ವಾರ್ಥ ಇದ್ದೆ ಇರುತ್ತದೆ ಸ್ವಾರ್ಥ ರಹಿತ ಸ್ನೇಹವೇ ಇಲ್ಲಾ ಇದೊಂದು ಕಹಿಸತ್ಯ
೯) ಓರ್ವ ವ್ಯಕ್ತಿ ತನ್ನ ಕರ್ಮಗಳಿಂದಲೇ ದೊಡ್ಡ ವ್ಯಕ್ತಿ ಆಗುತ್ತಾನೆಯೇ ವಿನಃ ಹುಟ್ಟಿನಿಂದಲ್ಲಾ
೧೦) ದೇವರು ವಿಗ್ರಹದೊಳಗಿಲ್ಲಾ ನಿಮ್ಮ ಭಾವನೆಗಳೇ ದೇವರು ನಿಮ್ಮ ಆತ್ಮವೇ ದೇವಸ್ಥಾನ
೧೧) ವಿಶ್ವದ ಅತ್ಯಂತ ದೊಡ್ಡ ಶಕ್ತಿ ಎಂದರೆ ಒಂದು ಯುವ ಶಕ್ತಿ ಮತ್ತೊಂದು ಯುವತಿಯ ಸೌಂದರ್ಯ.
ಬಾಹ್ಯ ಕೊಂಡಿಗಳು
[ಬದಲಾಯಿಸಿ]- Chanakya Nitishastra: English translation by Miles Davis.
- Chanakya Nitishastra: Sanskrit, Hindi and English versions.
- Kautilya Arthashastra English translation by R. Shamasastry 1956 (revised edition with IAST diacritics and interwoven glossary)
- Chanakya Nitishastra: English translation by Miles Davis.
ಉಲ್ಲೇಖಗಳು
[ಬದಲಾಯಿಸಿ]- ↑ "ಚಾಣಕ್ಯ ಅಸಾಧಾರಣ ಪುರುಷ". Archived from the original on 2017-04-13. Retrieved 2016-12-04.
- 1 2 Mabbett, I. W. (1964). "The Date of the Arthaśāstra". Journal of the American Oriental Society. 84 (2). American Oriental Society: 162–169. doi:10.2307/597102. ISSN 0003-0279. JSTOR 597102.
- ↑ "Mauryan Empire". National Geographic Society (in ಇಂಗ್ಲಿಷ್). 2020-08-20. Retrieved 2022-01-20.
- ↑ Srinivasaraju, Sugata (27 July 2009). "Year of the Guru". Outlook India. Retrieved 17 March 2018.
-
