ಮಧ್ವಾಚಾರ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಶ್ರೀ ಮಧ್ವಾಚಾರ್ಯರು ಇಂದ ಪುನರ್ನಿರ್ದೇಶಿತ)
ಮಧ್ವಾಚಾರ್ಯ
ಶ್ರೀ ಮಧ್ವಾಚಾರ್ಯರು
ಜನನ೧೨೩೮-೧೩೧೭ಕ್ರಿಸ್ತಶಕ[೧]
ಪಾಜಕ, ಉಡುಪಿ
ಜನ್ಮ ನಾಮವಾಸುದೇವ
ಸಂಸ್ಥಾಪಕರುದ್ವೈತಮತ
ಗುರುಅಚ್ಯುತ ಪ್ರೇಕ್ಷಾಚಾರ್ಯರು

ಶ್ರೀ ಮಧ್ವಾಚಾರ್ಯರು (೧೨೩೮-೧೩೧೭) ದ್ವೈತಮತದ ಸ್ಥಾಪಕರು ಮತ್ತು ತತ್ವಜ್ಞಾನಿಗಳು.

ಮಧ್ವಾಚಾರ್ಯರ ಜೀವನ[ಬದಲಾಯಿಸಿ]

ಶ್ರೀ ಮಧ್ವಾಚಾರ್ಯರು ಉಡುಪಿಯ ಹತ್ತಿರದಲ್ಲಿರುವ ಪಾಜಕ ಗ್ರಾಮದಲ್ಲಿ ತಂದೆ ಮಧ್ಯಗೇಹ ಭಟ್ಟ ಮತ್ತು ತಾಯಿ ವೇದವತಿಗೆ ಜನಿಸಿದರು. ತಂದೆ ತಾಯಿ ವಾಸುದೇವನೆಂದು ಹೆಸರಿಟ್ಟಿದ್ದರು. ಬಾಲ್ಯದಲ್ಲೆ ಅಸಾಧಾರಣ ಪ್ರತಿಭೆ ತೋರಿದ ವಾಸುದೇವ, ತನ್ನ ಹನ್ನೆರಡೆನೆಯ ವಯಸ್ಸಿನಲ್ಲಿ ವಿಧ್ಯಾಭ್ಯಾಸ ಮತ್ತು ವೇದಾಭ್ಯಾಸಗಳೆರಡನ್ನು ಮುಗಿಸಿ ಗುರು ಅಚ್ಯುತ ಪ್ರಜ್ಞ ಸನ್ಯಾಸವನ್ನು ಪಡೆದು ಪೂರ್ಣಪ್ರಜ್ಞರೆಂಬ ಹೆಸರು ಪಡೆದರು. ಅವರ ಅನುಯಾಯಿ ಭಕ್ತರು, ಸರ್ವೊತ್ತಮನಾದ ಶ್ರೀಪತಿಯಾದ ಪರಮಾತ್ಮನ ಅದೇಶವನ್ನು ಪಾಲಿಸಲು ಜೀವೋತ್ತಮನಾದ ಪವಮಾನನು ಶ್ರೀಮದಾನಂದತೀರ್ಥರಾಗಿ ಜನಿಸಿದರು ಎಂದು ಭಾವಿಸುತ್ತಾರೆ. ಶ್ರೀಮದಾಚಾರ್ಯರಿಗೆ ಗುರುಗಳು ವೈದಿಕ ಕ್ರಮದಲ್ಲಿ ಪಟ್ಟಾಭಿಶೇಕ ನೆರವೆರಿಸಿ ಇಟ್ಟ ನಾಮ 'ಆನಂದತೀರ್ಥ'.

ವೇದಾಂತ ದರ್ಶನದಲ್ಲಿ, ಮಧ್ವಚಾರ್ಯರು ದ್ವೈತ ಸಿದ್ಧಾಂತದ ಉಗ್ರ ಪ್ರತಿಪಾದಕರು. ಅವರು ಹದಿಮೂರು ಹದಿನಾಲ್ಕನೇ [೧೨೩೮-೧೩೧೭] ಶತಮಾನದಲ್ಲಿ ಇದ್ದವರು. ಅವರು ಭಕ್ತಿ ಮಾರ್ಗದ ಪ್ರವರ್ತಕರಲ್ಲಿ ಪ್ರಮುಖರು. ಅವರು ವಾಯುವಿನ ಅವತಾರದಲ್ಲಿ ಮೂರನೆಯವರಾದ ಮಾರುತಿ ಭೀಮರ ನಂತರ ಬಂದ ಅವತಾರವೆಂದು ಹೇಳುತ್ತಾರೆ(ಮಹಾಭಾರತ ತಾತ್ಪರ್ಯನಿರ್ಣಯದಲ್ಲಿ ಅವರೇ ಹೇಳಿಕೊಂಡಿದ್ದಾರೆ).

ಮಧ್ವರು ಉಡುಪಿಯ ಹತ್ತಿರ ಪಾಜಕದಲ್ಲಿ ವಿಜಯ ದಶಮಿಯಂದು ಕ್ರಿ.ಶ.೧೨೩೮ ರಲ್ಲಿ ಒಂದು ಚಿಕ್ಕ ಕುಟೀರದಲ್ಲಿ ಜನಿಸಿದರು. ಅವರ ತಂದೆ ನಡ್ಡಿಲ್ಲಾಯ ನಾರಾಯಣ ಭಟ್ಟ.(ಇಂಗ್ಲಿಷ್ ವಿಕಿಪೀಡಿಯಾ), ತಾಯಿ ವೇದಾವತಿ. ಅವರು ಆ ಮಗುವಿಗೆ ವಾಸುದೇವನೆಂದು ನಾಮಕರಣ ಮಾಡಿದರು. ನಂತರ ಮಧ್ವರು ಪೂರ್ಣಪ್ರಜ್ಞ, ಪೂರ್ಣ ಬೋಧ, ಆನಂದ ತೀರ್ಥ, ಅನುಮಾನ ತೀರ್ಥ,ಮಧ್ವಾಚಾರ್ಯ ಎಂಬ ಹೆಸರುಗಳಿಂದ ಪ್ರಸಿದ್ಧರಾದರು. ಅವರ ಜನನಕ್ಕೆ ಮುಂಚೆ ಅವರ ತಾಯಿ ತಂದೆ ಉಡುಪಿ ಪೇಟೆಗೆ ಹೋಗಿದ್ದಾಗ ಒಬ್ಬ ಭಿಕ್ಷುಕ ಶ್ರೀ ಅನಂತೇಶ್ವರ ದೇವಸ್ಥಾನದ ಸ್ಥಂಬ ವನ್ನು ಏರಿ, 'ಈ ಊರಿನಲ್ಲಿ ವಾಯು ದೇವನು ಅವತರಿಸುವನು' ಎಂದು ಕೂಗಿ ಹೇಳಿದನೆಂದು ಪ್ರತೀತಿ.

ವಾಸುದೇವನು ಚಿಕ್ಕ ಬಾಲಕನಾಗಿದ್ದಾಗಲೇ ಅಸಾಧಾರಣ ಪ್ರತಿಭೆಯನ್ನು ತೋರಿದನು. ಅವನು ಹನ್ನೊಂದನೇ ವರ್ಷದಲ್ಲಿ ಉಡುಪಿಯಲ್ಲಿದ್ದ ಅಚ್ಯುತ ಪ್ರೇಕ್ಷರಿಂದ ಸಂನ್ಯಾಸ ದೀಕ್ಷೆಯನ್ನು ಸ್ವೀಕರಿಸಿದನು. ಅವರು ಅವನಿಗೆ ಸಂನ್ಯಾಸ ದೀಕ್ಷೆ ಕೊಡುವಾಗ ಪೂರ್ಣಪ್ರಜ್ಞರೆಂದು ನಾಮಕರಣ ಮಾಡಿದರು. ಅವರು ಸಂನ್ಯಾಸ ದೀಕ್ಷೆಯನ್ನು ತೆಗೆದುಕೊಂಡ ಒಂದು ತಿಂಗಳ ನಂತರ ಪಂಡಿತೋತ್ತಮರನ್ನು ವೇದಾಂತ ತರ್ಕದಲ್ಲಿ ಸೋಲಿಸಿದರು. ಅದನ್ನು ನೋಡಿ ಅಚ್ಯುತಪ್ರೇಕ್ಷರು ಅವರಿಗೆ ವೇದಾಂತ ಸಾಮ್ರಾಜ್ಯದ ಚಕ್ರವರ್ತಿಯೆಂದು ಹೇಳಿ ಆನಂದತೀರ್ಥ ರೆಂಬ ಬಿರುದನ್ನು ಕೊಟ್ಟರು. ನಂತರ ಅವರು ವೇದದ ಬಲಿಷ್ಟ ಸೂಕ್ತದಲ್ಲಿ ಇರುವ ಮಧ್ವ ಹೆಸರನ್ನು ಆಯ್ದುಕೊಂಡು ಆ ಹೆಸರಿನಲ್ಲಿ ಗ್ರಂಥ ರಚಿಸಿ, ಮಧ್ವಾಚಾರ್ಯರೆಂದು ಪ್ರಸಿದ್ಧರಾದರು. ಅವರು ಪ್ರಚುರಪಡಿಸಿದ ದ್ವೈತ ಸಿದ್ಧಾಂತ ತತ್ವವಾದ ಅಥವಾ ದ್ವೈತ ಮತವೆಂದು ಪ್ರಸಿದ್ಧವಾಗಿದೆ.

ದಕ್ಷಿಣ ಭಾರತ ಪ್ರವಾಸ[ಬದಲಾಯಿಸಿ]

ಅವರು ದಕ್ಷಿಣ ಭಾರತ ಪ್ರವಾಸ ಕೈಕೊಂಡು ಅನಂತಶಯನ, ಶ್ರೀರಂಗಂ ಮೊದಲಾದ ಕಡೆ ತಮ್ಮ ತತ್ವವಾದ ವನ್ನು ಪ್ರಚಾರ ಮಾಡಿದರು. ಸಂಪ್ರದಾಯವಾದಿಗಳಿಂದ ಇದಕ್ಕೆ ಪ್ರಬಲ ವಿರೋಧ ಕಂಡುಬಂದಿತು. ಮಧ್ವರು ಅದಕ್ಕೆ ಜಗ್ಗದೆ ತಮ್ಮ ವಾದವನ್ನು ಸಮರ್ಥಿಸಿ ಕೊಂಡರು. ನಂತರ ಉಡುಪಿಗೆ ಹಿಂತಿರುಗಿದರು. ಅಲ್ಲಿ ಅವರು ಗೀತೆಗೆ ಭಾಷ್ಯವನ್ನು ಬರೆದರು. ತತ್ವವಾದ ಸಿದ್ಧಾಂತದ ಆಧಾರದಮೇಲೆ ೩೭ ಗ್ರಂಥಗಳನ್ನು ಬರೆದರು. ಅವನ್ನು ಸರ್ವ ಮೂಲಗ್ರಂಥ ಗಳೆಂದು ಕರೆಯುತ್ತಾರೆ. ಈ ಗ್ರಂಥಗಳ ಬಗೆಗೆ ಮತ್ತು ತತ್ವವಾದದ ಬಗೆಗೆ ಭಾರತಾದ್ಯಂತ ತೀವ್ರ ಚರ್ಚೆ ನೆಡೆಯಿತು. ಮಧ್ವರು ತಮ್ಮ ವಾದಕ್ಕೆ ಮೂರು ಬಗೆಯ ಪ್ರಮಾಣಗಳನ್ನು ಆಧಾರವಾಗಿ ತೆಗೆದುಕೊಂಡಿದ್ದಾರೆ. ಅವು ಪ್ರತ್ಯಕ್ಷ, ಅನುಮಾನ [ತಾರ್ಕಿಕ], ಮತ್ತು ಆಗಮ.

ಉತ್ತರ ಭಾರತದ ಯಾತ್ರೆ[ಬದಲಾಯಿಸಿ]

ಅವರು ಕೆಲವು ಕಾಲದ ನಂತರ ತಮ್ಮ ತತ್ವವಾದ ಪ್ರಚಾರಕ್ಕಾಗಿ ಉತ್ತರ ಭಾರತದ ಯಾತ್ರೆ ಕೈಗೊಂಡರು. ಅವರು ಬದರಿಕಾಶ್ರಮಕ್ಕೆ ಹೋಗಿ ಅಲ್ಲಿ ವೇದ ವ್ಯಾಸರ ಆಶ್ರಮದಲ್ಲಿ ವ್ಯಾಸಮಹರ್ಷಿಗಳನ್ನು ಕಂಡು ಅವರಿಗೆ ತಮ್ಮ ಗೀತೆಯ ಭಾಷ್ಯವನ್ನು ತೋರಿಸಿ ಅವರ ಮೆಚ್ಚುಗೆಯನ್ನು ಪಡೆದುದಾಗಿ ಹೇಳುತ್ತಾರೆ. ಅವರು ಗೀತಾ ಪೀಠಿಕೆಯಲ್ಲಿ ಒಂದುವಾಕ್ಯವನ್ನು ಮಾತ್ರಾ ಬದಲಾಯಿಸಿದುದಾಗಿ ಹೇಳುತ್ತಾರೆ. ನಾನು ಅವನ (ದೇವನ) ಪೂರ್ಣ ಸಾಮರ್ಥ್ಯ ಉಪಯೋಗಿಸಿ ಬರೆದಿದ್ದೇನೆ ಎಂಬುದನ್ನು, ನಾನು ಅವನ ಅಲ್ಪವೇ ಸಾಮರ್ಥ್ಯವನ್ನು ಉಪಯೋಗಿಸಿ ಬರೆದಿದ್ದೇನೆ ಎಂದು ಬದಲಾಯಿಸಿರುವುದಾಗಿ ಹೇಳಿದ್ದಾರೆ. ಅವರು ಬದರಿಯಿಂದ ಹಿಂತಿರುಗಿದ ಮೇಲೆ ಬ್ರಹ್ಮ ಸೂತ್ರ ಭಾಷ್ಯವನ್ನು ಬರೆದರು. ಅವರು ಆನಂತರ ಅನೇಕ ಗ್ರಂಥಗಳನ್ನು ರಚಿಸಿದರೂ, ಅದನ್ನು ಓಲೆಗರಿಯ ಗ್ರಂಥದಲ್ಲಿ ಲಿಪಿಕಾರರಾಗಿ ಬರೆದವರು ಅವರ ಶಿಷ್ಯರಾದ ಸತ್ಯ ತೀರ್ಥರು. ಆನಂತರ ಅವರ ಕೀರ್ತಿ ದೇಶಾದ್ಯಂತ ಹರಡಿ ಅನೇಕರು ಅವರ ಶಿಷ್ಯರಾದರು. ಅನೇಕರು ಅವರಿಂದ ಸಂನ್ಯಾಸ ಸ್ವೀಕಾರ ಮಾಡಿದರು. ಅವರ ಶಿಷ್ಯ ಅಚ್ಯುತ ಪ್ರೇಕ್ಷ್ಯರಿಗೆ ಅವರ ವಾದದ ಬಗೆಗೆ ಇದ್ದ ಅಲ್ಪ ಸ್ವಲ್ಪ ಸಂಶಯವೂ ಹೋಗಿ ಪೂರ್ಣ ಮನಸ್ಸಿನ ಶಿಷ್ಯರಾದರು.

ಉಡುಪಿಯಲ್ಲಿ[ಬದಲಾಯಿಸಿ]

ಬದರಿಯಿಂದ ಬಂದ ಅವರು ಉಡುಪಿಯಲ್ಲಿ ನೆಲೆಸಿ ದಶ ಉಪನಿಷತ್ತುಗಳಿಗೆ ಭಾಷ್ಯವನ್ನು ಬರೆದರು. ಋಗ್ವೇದದ ೪೦ ಸೂಕ್ತಗಳಿಗೆ ಟೀಕೆಯನ್ನು ಬರೆದರು. ಭಾಗವತ (ಮಹಾಭಾರತ ?) ತಾತ್ಪರ್ಯ ನಿರ್ಣಯವನ್ನು ಬರೆದರು. ಪಶ್ಚಿಮ ಸಮುದ್ರ ತೀರದಲ್ಲಿ ಸಿಕ್ಕಿದ ಶ್ರೀ ಕೃಷ್ಣನ ಮೂರ್ತಿಯನ್ನು ಇದೇ ಸಮಯದಲ್ಲಿ ಪ್ರತಿಷ್ಟಾಪಿಸಿದರು. ಫುನಃ ಎರಡನೇ ಬಾರಿ ಬದರಿಗೆ ಪ್ರಯಾಣ ಮಾಡಿದರು.

ಬದರಿಯ ಎರಡನೇ ಯಾತ್ರೆ[ಬದಲಾಯಿಸಿ]

ಬದರಿಯ ಎರಡನೇ ಯಾತ್ರೆಯಲ್ಲಿ ಅವರು ಗಂಗಾನದಿಯನ್ನು ದಾಟಿ ಮುಸ್ಲಿಮರ ದೊರೆ ಇದ್ದ ರಾಜ್ಯದ ಮೂಲಕ ಹೋಗಬೇಕಿತ್ತು. ಹಾಗೆ ಗಂಗೆಯನ್ನು ದಾಟಿದಾಗ ರಾಜ ಭಟರು ಅವರನ್ನು ಮುಸ್ಲಿಮರ ದೊರೆಯ ಎದುರಿಗೆ ಎಳದೊಯಿದರು. ಆದರೂ ಇವರು ಸ್ವಲ್ಪವೂ ಭಯ ಪಡಲಿಲ್ಲ. ಆಗ ಆ ದೊರೆಯು ಇವರ ಧೈರ್ಯವನ್ನು ಕಂಡು ಬೆರಗಾದಾಗ , ಇವರು ವಿಶ್ವವನ್ನು ಬೆಳಗುವ ಆ ದೇವನಾದ ತಂದೆಯನ್ನು ನೀನೂ ಪೂಜಿಸುತ್ತೀಯೆ ಹಾಗೇ ನಾನೂ ಪೂಜಿಸುತ್ತೇನೆ, ನನಗೆ ಭಯವೇಕೆ ಎಂದರು, ಅವನು ಇವರ ಮಾತಿಗೆ ಮೆಚ್ಚಿ ಅನೇಕ ಕೊಡುಗೆಗಳನ್ನು ನೀಡಿದನು. ಆದರೆ ಅವರು ಅದನ್ನೆಲ್ಲಾ ನಿರಾಕರಿಸಿ ಬದರಿಗೆ ಪ್ರಯಾಣ ಬೆಳಸಿದರು. ಅಲ್ಲಿ ಅವರು ಪುನಃ ವ್ಯಾಸರನ್ನೂ ನಾರಾಯಣನನ್ನೂ ದರ್ಶನ ಮಾಡಿ ಹಿಂತಿರುಗಿದರು. ಧರಿಯಲ್ಲಿ ಕಾಶಿಗೆ ಹೋಗಿ ಅಲ್ಲಿ ಅಮರೇಂದ್ರ ಪುರಿ ಎಂಬ ಅದ್ವೈತಿಯನ್ನು ವಾದದಲ್ಲಿ ಸೋಲಿಸಿದರು. ಅಲ್ಲಿಂದ ಕುರುಕ್ಷೇತ್ರಕ್ಕೆ ಬಂದರು. ಅಲ್ಲಿ ನಡೆದ ಒಂದು ಕಥೆ ಇದೆ. ಅವರು ಒಂದು ಸ್ಥಳದಲ್ಲಿ ತಮ್ಮ ಶಿಷ್ಯರಿಗೆ ಅಗೆಯಲು ಹೇಳಿದರು. ಅವರು ಅಲ್ಲಿ ಅಗೆದಾಗ ಅವರಿಗೆ ಅಲ್ಲಿ ಒಂದು ದೊಡ್ಡ ಗದೆ ಕಂಡಿತು. ಅದು ದ್ವಾಪರದಲ್ಲಿ ಭೀಮನು ಉಪಯೋಗಿಸಿದ ಗದೆಯೆಂದು ತಿಳಿಸಿ ಅದನ್ನು ಪುನಃ ಹಾಗೆಯೇ ಮಣ್ಣಿನಲ್ಲಿ ಮುಚ್ಚಿಸಿದರು. ನಂತರ ಗೋವಾಕ್ಕೆ ಬಂದು ಉಡುಪಿಗೆ ಹಿಂತಿರುಗಿದರು. ಆಗ ಅವರು ತಮ್ಮ ವಿದ್ವತ್ಪೂರ್ಣ ಸಂಗೀತದಿಂದ ಜನರನ್ನು ರಂಜಿಸಿದುದಾಗಿ ಹೇಳುತ್ತಾರೆ.

ದಕ್ಷಿಣ ಯಾತ್ರೆ[ಬದಲಾಯಿಸಿ]

ಅವರು ನಂತರ ದಕ್ಷಿಣ ಯಾತ್ರೆಯನ್ನು ಮಾಡಿ ಕಾಸರಗೊಡಿನ ಪದ್ಮ ತೀರ್ಥರನ್ನೂ ಪುಂಡರೀಕ ಪುರಿಗಳನ್ನೂ ವಾದದಲ್ಲಿ ಸೋಲಿಸಿದರು. ಪದ್ಮತೀರ್ಥರು ಪೇಜತ್ತಾಯ ಶಂಕರ ಪಂಡಿತರ ಮೂಲಕ ಮಧ್ವರ ಗ್ರಂಥಗಳನ್ನು ಅಪಹರಿಸಿದ್ದರೆಂದೂ ಮಧ್ವರೊಡನೆ ವಾದವಾದ ನಂತರ ಆ ಗ್ರಂಥಗಳನ್ನು ಹಿಂತಿರುಗಿಸಿದರೆಂದೂ ಹೇಳುತ್ತಾರೆ. ಅವರಿಬ್ಬರ ವಾದ ಸಾರಾಂಶವನ್ನು ವಾದ ಅಥವಾ ತತ್ವೋದ್ಯೋತ ಗ್ರಂಥವಾಗಿ ರಚಿಸಿರುವುದಾಗಿ ಹೇಳುತ್ತಾರೆ. ಅವರು ಆನಂತರ ಆಸ್ಥಾನ ಪಂಡಿತರಾದ ತ್ರಿವಿಕ್ರಮ ಪಂಡಿತರನ್ನು ೧೫ ದಿನಗಳಕಾಲ ವಾದ ಮಾಡಿ ಸೋಲಿಸಿದರೆಂದು ಹೇಳುತ್ತಾರೆ. ಅವರು ನಂತರ ಮಧ್ವರ ಬ್ರಹ್ಮ ಸೂತ್ರಕ್ಕೆ ಟೀಕೆಯನ್ನು ಬರೆದರು. ನಾಲ್ಕು ಭಾಗಗಳಲ್ಲಿರುವ ಇದನ್ನು ನಾಲ್ಕು ಶಿಷ್ಯರಿಗೆ ಏಕ ಕಾಲದಲ್ಲಿ ಬಿಡುವಿಲ್ಲದೆ ಹೇಳಿ ಬರೆಸಿದರೆಂದು ಹೇಳುತ್ತಾರೆ. ಅದೇ ಸಮಯದಲ್ಲಿ ನ್ಯಾಯವಿವಾರ್ಣವ ವೆಂಬ ಗ್ರಂಥವನ್ನೂ ರಚಿಸಿದ್ದಾಗಿ ಹೇಳುತ್ತಾರೆ. ಸುಮಾರು ೭೦ ವರ್ಷ ವಯಸ್ಸಾದ ಮಧ್ವರು ತಮ್ಮ ಸೋದರನಿಗೆ ಸನ್ಯಾಸ ದೀಕ್ಷೆ ಕೊಟ್ಟು ಅವರನ್ನು ಸೋದೆ ಮಠ ಮತ್ತು ಸುಬ್ರಹ್ಮಣ್ಯ ಮಠಕ್ಕೆ ಅಧಿಪತಿಗಳನ್ನಾಗಿಮಾಡಿದರು.

ಉಡುಪಿಯ ಅಷ್ಟ ಮಠಗಳು[ಬದಲಾಯಿಸಿ]

ಇದೇ ಸಮಯದಲ್ಲಿ ಉಡುಪಿಯ ಅಷ್ಟ ಮಠಗಳಿಗೆ ತಮ್ಮ ಶಿಷ್ಯರಿಗೆ ದೀಕ್ಷೆ ಕೊಟ್ಟು ಮಠಾಧಿಪತಿಗಳಾಗಿ ನೇಮಿಸಿದರು.

  • ೧. ಹೃಷೀಕೇಶ ತೀರ್ಥ (ಫಲಿಮಾರು ಮಠ)
  • ೨. ನರಸಿಂಹ(ನರಹರಿ)ತೀರ್ಥ (ಆದಮಾರು ಮಠ)
  • ೩. ಜನಾರ್ಧನ ತೀರ್ಥ (ಕೃಷ್ಣಾಪುರ ಮಠ)
  • ೪. ಉಪೇಂದ್ರ ತೀರ್ಥ (ಪುತ್ತಿಗೆ ಮಠ)
  • ೫. ವಾಮನ ತೀರ್ಥ (ಶಿರೂರು ಮಠ)
  • ೬. ವಿಷ್ಣು ತೀರ್ಥ (ಸೋದೆ ಮಠ, ಸುಬ್ರಹ್ಮಣ್ಯ ಮಠ)
  • ೭. ಶ್ರೀರಾಮ ತೀರ್ಥ (ಕಾಣಿಯೂರು ಮಠ)
  • ೮. ಅಧೋಕ್ಷಜ(ಅಕ್ಷೋಭ್ಯ) ತೀರ್ಥ (ಪೇಜಾವರಮಠ)

ಮಧ್ವರ ಪ್ರಸಿದ್ಧ ಶಿಷ್ಯರು - ೯. ಪದ್ಮನಾಭ ತೀರ್ಥ; ೧೦. ಮಾಧವ ತೀರ್ಥ;
ನಂತರ ಉಡುಪಿಯ ಸುತ್ತ ಮುತ್ತ ಸಂಚರಿಸಿ ಉಜಿರೆಯ ಬ್ರಾಹ್ಮಣರೊಡನೆ ಚರ್ಚಿಸಿ ಪೂಜಾವಿಧಿಗೆ ಸಂಬಂಧಪಟ್ಟಂತೆ ಕರ್ಮನಿಯಮ ರಚಿಸಿದರು ಇದು ಖಂಡಾರ್ಥ ನಿರ್ಣಯವೆಂದು ಹೆಸರು ಪಡೆದಿದೆ. ನಂತರ ಪರಂತಿಯಲ್ಲಿರುವ ಪಂಚಲಿಂಗೇಶ್ವರ ದೇವಾಲಯವನ್ನು ಜೀರ್ಣೋದ್ಧಾರ ಮಾಡಿದರು.

ಮಧ್ವ ನವಮಿ[ಬದಲಾಯಿಸಿ]

ತಮ್ಮ ೭೯ನೇ ವಯಸ್ಸಿನಲ್ಲಿ ಕಲಿ ೪೪೧೮ [ಕ್ರಿ.ಶ.೧೩೧೭]ರಲ್ಲಿ ಒಬ್ಬರೇ ಬದರಿಕಾಶ್ರಮಕ್ಕೆ ಪ್ರಯಾಣ ಬೆಳಸಿದರು . ಈ ದಿನವನ್ನು ಮಧ್ವ ನವಮಿ ಎಂದು ಇಂದಿಗೂ ಆಚರಿಸುತ್ತಾರೆ. ಕಾಲಕ್ರಮೇಣ ಇವರ ತತ್ವವಾದವು ಭಕ್ತಿ ಪಂಥಕ್ಕೂ, ಹರಿದಾಸ ಪಂಥಕ್ಕೂ ದಾರಿಮಾಡಿ ಕೊಟ್ಟಿತು. ಸಂಗೀತದ ಪ್ರೋತ್ಸಾಹಕ್ಕೂ, ಕನ್ನಡದಲ್ಲಿ ದಾಸ ಪಂಥದ ಮಾರ್ಗ ಬೆಳೆಯಲೂ ಇವರ ದರ್ಶನ ಸ್ಪೂರ್ತಿನೀಡಿತು. ಇವರ ಶಿಷ್ಯರಾದ ನರಹರಿ ತೀರ್ಥರು ಯಕ್ಷಗಾನ ಹಾಗೂ ಕೂಚುಪುಡಿ ನೃತ್ಯ ಪ್ರಾಕಾರಗಳ ಪುನರುತ್ಥಾನಕ್ಕೂ , ಬೆಳವಣಿಗೆಗೂ ಪ್ರೋತ್ಸಾಹಿಸಿದರು.

ಪ್ರಚಾರ[ಬದಲಾಯಿಸಿ]

ಭಾರತದಲ್ಲೆಡೆ ದ್ವೈತಮತವನ್ನು ಪ್ರಚಾರಿಸಿದರು. ಎರಡು ಬಾರಿ ಬದರಿ ಯಾತ್ರೆ ಮಾಡಿ ವೇದವ್ಯಾಸ ರೂಪಿಯಾದ ಪರಮಾತ್ಮನನ್ನು ಕಂಡು,ಪರಮಾತ್ಮನಿಂದ ವೇದಗಳನ್ನು ಕಲಿತು ಉಡುಪಿಗೆ ಹಿಂದಿರುಗಿದರು. ಮಧ್ವಾಚಾರ್ಯರು ಒಂಬತ್ತು ಜನರಿಗೆ ಸನ್ಯಾಸಿ ದೀಕ್ಷೆಯನ್ನು ನೀಡಿದರು, ವೃಷ್ಣ ಮಠದಲ್ಲಿ ಶ್ರೀ ವೃಷ್ಣನ ವಿಗ್ರಹವನ್ನು ಸ್ಥಾಪಿಸಿದರು. ಶ್ರೀ ವೃಷ್ಣನು ತನ್ನ ಮಾವನ ಮನೆಯಾದ ಸಮುದ್ರ ದಿಂದ ಅಚಾರ್ಯರಿಗಾಗಿ ಗೊಪಿಯ ಉಂಡೇಯೊಳಗೆ ಕೂತು ದೊರಕಿದನು

ಕೃತಿಗಳು[ಬದಲಾಯಿಸಿ]

ಶ್ರೀ ಮಧ್ವಾಚಾರ್ಯರು ಅನೇಕ ಕೃತಿಗಳನ್ನು ಸಂಸ್ಕೃತದಲ್ಲಿ ಬರೆದಿದ್ದಾರೆ. ಅವರ ಗ್ರಂಥಗಳನ್ನು ಸರ್ವಮೂಲಗ್ರಂಥಗಳು ಎಂದು ಕರೆಯಲಾಗುತ್ತದೆ. ಅವುಗಳಲ್ಲಿ ಇಂದು ಉಪಲಬ್ಧವಾದವುಗಳು ಹೀಗಿವೆ:

  • ಗೀತಾಭಾಷ್ಯ
  • ಗೀತಾತಾತ್ಪರ್ಯ
  • ಬ್ರಹ್ಮಸೂತ್ರ ಭಾಷ್ಯ
  • ಅನುವ್ಯಾಖ್ಯಾನ
  • ನ್ಯಾಯವಿವರಣ
  • ಅಣುಭಾಷ್ಯ
  • ದಶೋಪನಿಷದ್ಭಾಷ್ಯಗಳು
  • ಮಹಾಭಾರತತಾತ್ಪರ್ಯನಿರ್ಣಯ
  • ಯಮಕಭಾರತ
  • ದಶ ಪ್ರಕರಣಗಳು
  • ತಂತ್ರಸಾರ ಸಂಗ್ರಹ
  • ದ್ವಾದಶ ಸ್ತೋತ್ರ
  • ಕೃಷ್ಣಾಮೃತಮಹಾರ್ಣವ
  • ಸದಾಚಾರ ಸ್ಮೃತಿ
  • ಜಯಂತೀ ನಿರ್ಣಯ
  • ಪ್ರಣವ ಕಲ್ಪ
  • ನ್ಯಾಸಪದ್ಧತಿ
  • ತಿಥಿನಿರ್ಣಯ
  • ಕಂದುಕಸ್ತುತಿ

ಶಿಷ್ಯರು[ಬದಲಾಯಿಸಿ]

ಶ್ರೀ ಮಧ್ವಾಚಾರ್ಯರ ಶಿಷ್ಯವರ್ಗ ಅಪಾರವಾದುದಾಗಿತ್ತು. ಅವರಲ್ಲಿ ಪ್ರಮುಖರಾದ ಕೆಲವರನ್ನು ಹೀಗೆ ಗುರುತಿಸಬಹುದು

  • ಶ್ರೀ ಪದ್ಮನಾಭ ತೀರ್ಥರು
  • ಶ್ರೀ ಸತ್ಯತೀರ್ಥರು
  • ಉಡುಪಿಯ ಅಷ್ಟಮಠಗಳ ಮೂಲಯತಿಗಳು
  • ಶಂಕರ ಪಂಡಿತಾಚಾರ್ಯರು
  • ತ್ರಿವಿಕ್ರಮ ಪಂಡಿತಾಚಾರ್ಯರು
  • ಕಲ್ಯಾಣಿ ದೇವಿ (ತ್ರಿವಿಕ್ರಮ ಪಂಡಿತಾಚಾರ್ಯರ ಸಹೋದರಿ)
  • ಕಲ್ಯಾಣಿ ದೇವಿ (ಆಚಾರ್ಯ ಮಧ್ವರ ಸಹೋದರಿ)
  • ಜಯಸಿಂಹ ರಾಜ
  • ನಾರಾಯಣ ಪಂಡಿತಾಚಾರ್ಯರು
  • ವಾಮನ ಪಂಡಿತಾಚಾರ್ಯರು(ತ್ರೈವಿಕ್ರಮಾರ್ಯರು)
  • ಮಾಧವ ತೀರ್ಥರು
  • ಅಕ್ಷೋಭ್ಯ ತೀರ್ಥರು

ಈ ಲೇಖನಗಳನ್ನೂ ನೋಡಿ[ಬದಲಾಯಿಸಿ]

ಹೊರಗಿನ ಸಂಪರ್ಕಗಳು[ಬದಲಾಯಿಸಿ]

ಉಲ್ಲೇಖ[ಬದಲಾಯಿಸಿ]

  1. Sharma 1962, p. vi.