ರಾಜವಿದ್ಯಾರಾಜಗುಹ್ಯಯೋಗಃ
ಗೋಚರ
ಅಧ್ಯಾಯಗಳು
|
ಶ್ರೀಭಗವಾನುವಾಚ: ಇದಂ ತು ತೇ ಗುಹ್ಯತಮಂ ಪ್ರವಕ್ಷ್ಯಾಮ್ಯನಸೂಯವೇ । ಜ್ಞಾನಂ ವಿಜ್ಞಾನಸಹಿತಂ ಯಜ್ಞಾತ್ವಾ ಮೋಕ್ಷ್ಯಸೇಶುಭಾತ್ ।।೧।।
ಭಗವಂತನು ಇಂತೆಂದನು - ಅರ್ಜುನ, ನೀನು ಅಸೂಯಾರಹಿತನಾಗಿ ಇರುವುದರಿಂದ ಗುಹ್ಯದಲ್ಲಿ ಗುಹ್ಯವಾದ ಈ ವಿಜ್ಞಾನಸಹಿತ ಜ್ಞಾನವನ್ನು ನಿನಗೆ ಹೇಳುವೆನು. ಇದನ್ನು ತಿಳಿದುಕೊಂಡರೆ ಅಶುಭವಾದ ಸಂಸಾರಬಂಧನದಿಂದ ಬಿಡುಗಡೆ ಹೊಂದುವೆ.
ರಾಜವಿದ್ಯಾ ರಾಜಗುಹ್ಯಂ ಪವಿತ್ರಮಿದಮುತ್ತಮಮ್ । ಪ್ರತ್ಯಕಾವಗಮಂ ಧರ್ಮ್ಯಂ ಸುಸುಖಂ ಕರ್ತುಮವ್ಯಯಮ್ ।।೨।।
ಈ ಬ್ರಹ್ಮವಿದ್ಯೆಯು ಎಲ್ಲ ವಿದ್ಯೆಗಳ ರಾಜ. ಗೋಪ್ಯವಸ್ತುಗಳಿಗೆ ರಾಜ. ಪರಮಪಾವನ. ಅಲ್ಲದೆ ಪ್ರತ್ಯಕ್ಷವಾಗಿ ಅನುಭವಕ್ಕೆ ಬರುವಂತಹದ್ದು. ಧರ್ಮಪೂರ್ವಕವೇ ಲಭ್ಯವಾದದ್ದು. ಮಾಡುವುದು ಸುಲಭ. ಅಲ್ಲದೆ ಈ ಜ್ಞಾನವು ಶಾಶ್ವತವಾದ ಫಲವನ್ನು ನೀಡತಕ್ಕದ್ದಾಗಿದೆ.
ಅಶ್ರದ್ಧಧಾನಾಃ ಪುರುಷಾ ಧರ್ಮಸ್ಯಾಸ್ಯ ಪರಂತಪ । ಅಪ್ರಾಪ್ಯ ಮಾಂ ನಿವರ್ತಂತೇ ಮೃತ್ಯುಸಂಸಾರವರ್ತ್ಮನಿ ।।೩।।
ಪರಂತಪ - ಅರ್ಜುನ, ಆತ್ಮಜ್ಞಾನವೆಂಬ ಈ ಧರ್ಮದಲ್ಲಿ ಯಾರಿಗೆ ಶ್ರದ್ಧೆಯಿಲ್ಲವೋ ಅವರು ನನ್ನನ್ನು ಪಡೆಯದೆ - ನನ್ನನ್ನು ಪಡೆಯುವ ಸಂಕೆಯೇ ಇಲ್ಲವಾದ್ದರಿಂದ ಜ್ಞಾನಸಾಧನವಾದ ಭಕ್ತಿಯನ್ನು ಕೂಡ ಪಡೆಯದೆ - ಮೃತ್ಯುವೇ ಕಾದು ನಿಂತಿರುವ ಸಂಸಾರಮಾರ್ಗಕ್ಕೆ ಹಿಂದಿರುಗೆ ಬರುತ್ತಾರೆ.
ಮಯಾ ತತಮಿದಂ ಸರ್ವಂ ಜಗದವ್ಯಕ್ತಮೂರ್ತಿನಾ । ಮತ್ ಸ್ಥಾನಿ ಸರ್ವಭೂತಾನಿ ನ ಚಾಹಂ ತೇಷ್ವವಸ್ಥಿತಃ ।।೪।।
ಅವ್ಯಕ್ತಸ್ವರೂಪನಾದ ನಾನು ಈ ಸಮಸ್ತ ಜಗತ್ತನ್ನು ವ್ಯಾಪಿಸಿಕೊಂಡಿರುವೆನು. ಬ್ರಹ್ಮಾದಿಸ್ತಂಬಪರ್ಯಂತವಾದ ಸಮಸ್ತ ಭೂತಗಳು ನನ್ನಲ್ಲಿವೆ. ಆದರೆ ನಾನು ಆ ಭೂತವಸ್ತುಗಳಲ್ಲಿಲ್ಲ.