ವಿಶ್ವರೂಪದರ್ಶನಯೋಗಃ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಭಗವದ್ಗೀತೆ

Aum
ಅಧ್ಯಾಯಗಳು
  1. ಅರ್ಜುನ ವಿಷಾದ ಯೋಗ
  2. ಸಾಂಖ್ಯಯೋಗಃ
  3. ಕರ್ಮಯೋಗಃ
  4. ಜ್ಞಾನಯೋಗಃ
  5. ಸಂನ್ಯಾಸಯೋಗಃ
  6. ಧ್ಯಾನಯೋಗಃ
  7. ಜ್ಞಾನವಿಜ್ಞಾನಯೋಗಃ
  8. ಅಕ್ಷರಬ್ರಹ್ಮಯೋಗಃ
  9. ರಾಜವಿದ್ಯಾರಾಜಗುಹ್ಯಯೋಗಃ
  10. ವಿಭೂತಿಯೋಗಃ
  11. ವಿಶ್ವರೂಪದರ್ಶನಯೋಗಃ
  12. ಭಕ್ತಿಯೋಗಃ
  13. ಕ್ಷೇತ್ರಕ್ಷೇತ್ರಜ್ಞಯೋಗಃ
  14. ಗುಣತ್ರಯವಿಭಾಗಯೋಗಃ
  15. ಪುರುಷೋತ್ತಮಯೋಗಃ
  16. ದೈವಾಸುರಸಂಪದ್ವಿಭಾಗಯೋಗಃ
  17. ಶ್ರದ್ಧಾತ್ರಯವಿಭಾಗಯೋಗಃ
  18. ಮೋಕ್ಷಸಂನ್ಯಾಸಯೋಗಃ

ಅರ್ಜುನ ಉವಾಚ:
ಮದನುಗ್ರಹಾಯ ಪರಮಂ ಗುಹ್ಯಮಧ್ಯಾತ್ಮ ಸಂಜ್ಞಿತಮ್ ।
ಯತ್ತ್ವಯೋಕ್ತಂ ವಚಸ್ತೇನ ಮೋಹೋsಯಂ ವಿಗತೋ ಮಮ ।।೧।।

ಅರ್ಜುನನು ಹೀಗೆಂದನು: ನನ್ನನ್ನು ಅನುಗ್ರಹಿಸುವುದಕ್ಕಾಗಿ ನಿರತಿಶಯವಾದ, ಅತ್ಯಂತ ರಹಸ್ಯವಾದ(ಗುಹ್ಯಂ) ಅಧ್ಯಾತ್ಮವಿಷಯವನ್ನು ಹೇಳಿದೆಯಷ್ಟೆ. ಅದರಿಂದ ನನ್ನ ಮೋಹವು ತೊಲಗಿತು. ಇಲ್ಲಿರುವ ಅಧ್ಯಾತ್ಮಶಬ್ದದಲ್ಲಿ ಆತ್ಮನೆಂದರೆ ಚೈತನ್ಯರೂಪನಾದ ಆತ್ಮನೇ, ದೇಹವಲ್ಲ. ಆತ್ಮ-ಅನಾತ್ಮಗಳನ್ನು ವಿಂಗಡಿಸಿ ತಿಳಿದುಕೊಳ್ಳದ್ದರಿಂದ ಉಂಟಾದ ಆತ್ಮವಿಷಯಕ ಭ್ರಾಂತಿಯೇ ಮೋಹ.

ಭವಾಪ್ಯಯೌ ಹಿ ಭೂತಾನಾಂ ಶ್ರುತೌ ವಿಸ್ತರಶೋ ಮಯಾ ।
ತ್ವತ್ತಃ ಕಮಲಪತ್ರಾಕ್ಷ ಮಾಹಾತ್ಮ್ಯಮಪಿ ಚಾವ್ಯಯಮ್ ।।೨।।

ಹೇ ಕಮಲಪತ್ರಾಕ್ಷ, ಈ ಭೂತವಸ್ತುಗಳ ಹುಟ್ಟು-ನಾಶಗಳನ್ನು(ಭವಾಪ್ಯಯೌ) ವಿಸ್ತಾರವಾಗಿ ನಿನ್ನಿಂದ ಕೇಳಿದೆನು. ಶಾಶ್ವತವಾದ ನಿನ್ನ ಮಹಿಮೆಯನ್ನು ಕೇಳಿದ್ದಾಯಿತು.

ಏವಮೇತದ್ಯಥಾತ್ಥ ತ್ವಮಾತ್ಮಾನಂ ಪರಮೇಶ್ವರ ।
ದ್ರಷ್ಟುಮಿಚ್ಛಾಮಿ ತೇ ರೂಪಮೈಶ್ವರಂ ಪುರುಷೋತ್ತಮ ।।೩।।

ಪರಮೇಶ್ವರ, ನೀನು ಯಾವ ಪ್ರಕಾರ ಹೇಳುತ್ತಿದ್ದೀಯೋ ಅದೆಲ್ಲವೂ ಹಾಗೆಯೇ ಇದೆಯೆಂಬುದು ನಿಶ್ಚಯ. ಹೇ ಪುರುಷೋತ್ತಮ, ನಿನ್ನ ಈಶ್ವರೀಯರೂಪವನ್ನು ನೋಡಬೇಕೆಂದು ನನಗೆ ಬಯಕೆಯಾಗಿದೆ.

ಮನ್ಯಸೇ ಯದಿ ತಚ್ಛಕ್ಯಂ ಮಯಾ ದ್ರಷ್ಟುಮಿತಿ ಪ್ರಭೋ ।
ಯೋಗೇಶ್ವರ ತತೋ ಮೇ ತ್ವಂ ದರ್ಶಯಾತ್ಮಾನಮವ್ಯಯಮ್ ।।೪।।

ಹೇ ಸ್ವಾಮಿ, ಆ ರೂಪವನ್ನು ನೋಡಲು ನನಗೆ ಸಾಧ್ಯವೆಂದು ನೀನು ಭಾವಿಸುವುದಾದರೆ, ಯೋಗೇಶ್ವರ, ಅವ್ಯಯವಾದ ನಿನ್ನ ಈ ರೂಪವನ್ನು ನನಗೆ ತೋರಿಸು.

ಶ್ರೀ ಭಗವಾನುವಾಚ
ಪಶ್ಯ ಮೇ ಪಾರ್ಥ ರೂಪಾಣಿ ಶತಶೋsಥ ಸಹಸ್ರಶಃ ।
ನಾನಾವಿಧಾನಿ ದಿವ್ಯಾನಿ ನಾನಾವರ್ಣಾಕೃತೀನಿ ಚ ।।೫।।

ಭಗವಂತನು ಇಂತೆಂದನು - ಹಾಗಾದರೆ, ಅರ್ಜುನ, ನಾನಾ ಪ್ರಕಾರವಾಗಿಯೂ ನಾನಾವರ್ಣಗಳಿಂದಲೂ ಆಕಾರಗಳಿಂದಲೂ ಕೂಡಿದ, ನನ್ನ ನೂರಾರು ಸಾವಿರಾರು ದಿವ್ಯರೂಪಗಳನ್ನು ನೋಡು!

ಪಶ್ಯಾದಿತ್ಯಾನ್ವಸೂನ್ ರುದ್ರಾನಶ್ವಿನೌ ಮರುತಸ್ತಥಾ ।
ಬಹೂನ್ಯದೃಷ್ಟಪೂರ್ವಾಣಿ ಪಶ್ಯಾಶ್ಚರ್ಯಾಣಿ ಭಾರತ ।।೬।।

ಭರತಕುಲೋದ್ಭವ, ಆದಿತ್ಯರನ್ನೂ ವಸುಗಳನ್ನೂ ರುದ್ರರನ್ನೂ ಅಶ್ವಿನಿದೇವತೆಗಳನ್ನೂ ಮರುತಗಳನ್ನೂ ನೋಡು ಮತ್ತು ಯಾರೂ ಹಿಂದೆಂದೂ ಕಾಣದಿರುವ ವಿಪುಲವಾದ ಅದ್ಭುತಗಳನ್ನೂ ನೋಡು. ದ್ವಾದಶ ಆದಿತ್ಯರು, ಅಷ್ಟ ವಸುಗಳು, ಏಕಾದಶ ರುದ್ರರು, ಇಬ್ಬರು ಅಶ್ವಿನೀ ದೇವತೆಗಳು, ನಲವತ್ತೊಂಬತ್ತು ಮರುತ್ಗಳು.

ಇಹೈಕಸ್ಥಂ ಜಗತ್ ಕೃತ್ಸ್ನಂ ಪಶ್ಯಾದ್ಯ ಸಚರಾಚರಮ್ ।
ಮಮ ದೇಹೇ ಗುಡಾಕೇಶ ಯಚ್ಚಾನ್ಯದ್ದ್ರಷ್ಟುಮಿಚ್ಛಸಿ ।।೭।।

ಗುಡಾಕೇಶ - ಅರ್ಜುನ, ಚರಾಚರಾತ್ಮಕವಾದ ಸಕಲಪ್ರಪಂಚವೂ ಒಂದೇ ಕಡೆಯಲ್ಲಿರುವುದನ್ನು(ಏಕಸ್ಥಮ್) ನನ್ನ ದೇಹದಲ್ಲಿ ನೋಡು. ಅಲ್ಲದೆ ಇನ್ನೇನನ್ನು ನೋಡಬೇಕೆಂದು ಬಯಸುವೆಯೋ ಯುದ್ದದಲ್ಲಿ ನಾವು ಜಯಿಸಿತ್ತೇವೋ ಅಥವಾ ಅವರೇ ಜಯಿಸುತ್ತಾರೋ ಎಂಬ ಶಂಕೆಯನ್ನು ತೆಗೆದಿದ್ದೆಯಲ್ಲ, ಆ ಭವಷ್ಯತ್ತನ್ನೂ ನೋಡು!

ನ ತು ಮಾಂ ಶಕ್ಯಸೇ ದ್ರಷ್ಟುಮನೇನೈವ ಸ್ವಚಕ್ಷುಷಾ ।
ದಿವ್ಯಂ ದದಾಮಿ ತೇ ಚಕ್ಷುಃ ಪಶ್ಯ ಮೇ ಯೋಗಮೈಶ್ವರಮ್ ।।೮।।

ಆದರೆ ನಿನ್ನ ಈ ಪ್ರಾಕೃತ್ಯವಾದ ಕಣ್ಣಿನಿಂದಲೇ ನನ್ನನ್ನು ನೋಡಲು ಸಾಧ್ಯವಿಲ್ಲ. ಆದ್ದರಿಂದ ನಿನಗೆ ದಿವ್ಯಚಕ್ಷುಸ್ಸನ್ನು ಕೊಡುತ್ತೇನೆ. ಅದರಿಂದ ನನ್ನ ಈಶ್ವರೀಯ ಯೋಗಸಾಮರ್ಥ್ಯವನ್ನು ನೋಡು.

ಸಂಜಯ ಉವಾಚ:
ಏವಮುಕ್ತ್ವಾ ತತೋ ರಾಜನ್ ಮಹಾಯೋಗೇಶ್ವರೋ ಹರಿಃ ।
ದರ್ಶಯಾಮಾಸ ಪಾರ್ಥಾಯ ಪರಮಂ ರೂಪಮೈಶ್ವರಮ್ ।।೯।।

ಸಂಜಯನು ಹೀಗೆಂದನು - ಮಾಹಾರಾಜ, ಈ ಪ್ರಕಾರವಾಗಿ ನುಡಿದು ಮಹಾಯೋಗೇಶ್ವರನಾದ ಶ್ರೀಹರಿಯು ತನ್ನ ಈಶ್ವರೀಯವಾದ ಪರಮರೂಪವನ್ನು ಅರ್ಜುನನಿಗೆ ತೋರಿಸಿದನು.

ಅನೇಕವಕ್ತ್ರನಯನಮನೇಕಾದ್ಭುತದರ್ಶನಮ್ ।
ಅನೇಕದಿವ್ಯಾಭರಣಂ ದಿವ್ಯಾನೇಕೋದ್ಯತಾಯುಧಮ್ ।।೧೦।।

ವಿಶ್ವರೂಪವು ಅನೇಕ ಮುಖಗಳಿಂದಲೂ ನಯನಗಳಿಂದಲೂ ಯುಕ್ತವಾಗಿ ಆಶ್ಚರ್ಯಕರವಾದ ಅನೇಕ ನೋಟಗಳಿಂದ ಕೂಡಿತ್ತು. ಅನೇಕ ದಿವ್ಯಾಭರಣಗಳನ್ನು ತೊಟ್ಟು ನಾನಾಬಗೆಯ ದಿವ್ಯಾಯುಧಗಳನ್ನು ಎತ್ತಿ ಹಿಡಿದಿತ್ತು.

ದಿವ್ಯಮಾಲ್ಯಾಂಬರಧರಂ ದಿವ್ಯಗಂಧಾನುಲೇಪನಮ್ ।
ಸರ್ವಾಶ್ಚರ್ಯಮಯಂ ದೇವಮನಂತಂ ವಿಶ್ವತೋಮುಖಮ್ ।।೧೧।।

ಅನಂತನೂ ಸರ್ವತೋಮುಖನೂ ಆದ ಆ ವಿಶ್ವರೂಪಧಾರಿ ದೇವನು ದಿವ್ಯವಾದ ಹೂಗಳನ್ನೂ ವಸ್ತ್ರಗಳನ್ನೂ ಧರಿಸಿದ್ದನು. ದಿವ್ಯಗಂಧವನ್ನು ಲೇಪಿಸಿಕೊಂಡು ಸರ್ವಾಶ್ಚರ್ಯಗಳಿಗೆ ನೆಲೆಯಾಗಿದ್ದನು. ಅರ್ಜುನನು ಆ ದೇವನ್ನು ನೋಡಿದನು.

ದಿವಿ ಸೂರ್ಯಸಹಸ್ರಸ್ಯ ಭವೇದ್ಯುಗಪದುತ್ಥಿತಾ ।
ಯಧಿ ಭಾಃ ಸದೃಶೀ ಸಾ ಸ್ಯಾದ್ಭಾಸಸ್ತಸ್ಯ ಮಹಾತ್ಮನಃ ।।೧೨।।

ಒಂದು ವೇಳೆ ದ್ಯುಲೋಕದಲ್ಲಿ ಸಾವಿರಸೂರ್ಯರು ಒಮ್ಮೆಗೇ ಉದಿಸಿದರೆ ಎಷ್ಟು ಪ್ರಕಾಶ್ ಉಂಟಾದೀತೋ ಆ ಪ್ರಕಾಶವು ಮಹಾತ್ಮನಾದ ಆ ಭಗವಂತನ ಪ್ರಕಾಶಕ್ಕೆ ಸಮವಾದೀತೋ ಏನೋ!

ತತ್ರೈಕಸ್ಥಂ ಜಗತ್ಕೃತ್ಸ್ನಂ ಪ್ರವಿಭಕ್ತಮನೇಕಧಾ ।
ಅಪಶ್ಯದ್ದೇವದೇವಸ್ಯ ಶರೀರೇ ಪಾಂಡವಸ್ತದಾ ।।೧೩।।

ಆಗ ಆ ದೇವದೇವನ ದೇಹದಲ್ಲಿ ಸಮಸ್ತವಿಶ್ವವೂ ನಾನಾಪ್ರಕಾರವಾಗಿ ಒಂದೆಡೆಯಲ್ಲಿ ವಿಂಗಡವಾಗಿರುವುದನ್ನು ಅರ್ಜುನನು ಕಂಡನು.

ತತಃ ಸ ವಿಸ್ಮಯಾವಿಷ್ಟೋ ಹೃಷ್ಟರೋಮಾ ಧನಂಜಯಃ ।
ಪ್ರಣಮ್ಯ ಶಿರಸಾ ದೇವಂ ಕೃತಾಂಜಲಿರಭಾಷತ ।।೧೪।।

ಆ ವಿಶ್ವರೂಪವನ್ನು ನೋಡಿ ಅರ್ಜುನನು ಬೆರಗಾದನು. ಅವನ ರೋಮಗಳು ನಿಮಿರಿ ರೋಮಾಂಚಿತನಾದನು. ಅವನು ತಲೆಬಾಗಿ ಆ ದೇವನಿಗೆ ನಮಸ್ಕರಿಸಿ ಕೈಮುಗಿದುಕೊಂಡು ಹೀಗೆಂದನು:

ಅರ್ಜುನ ಉವಾಚ:
ಪಶ್ಯಾಮಿ ದೇವಾಂಸ್ತವ ದೇವ ದೇಹೇ ಸರ್ವಾಂಸ್ತಥಾ ಭೂತವಿಶೇಷಸಂಘಾನ್ ।
ಬ್ರಹ್ಮಾಣಮೀಶಂ ಕಮಲಾಸನಸ್ಥಮ್ ಋಷೀಂಶ್ಚ ಸರ್ವಾನುರಗಾಂಶ್ಚ ದಿವ್ಯಾನ್ ।।೧೫।।

ಅರ್ಜುನನು - ದೇವ, ನಿನ್ನ ದೇಹದಲ್ಲಿ ಎಲ್ಲ ದೇವತೆಗಳನ್ನೂ ಸ್ಥಾವರಜಂಗಾತ್ಮಕವಾದ ವಿವಿಧಾಕೃತಿಯ ಭೂತಸಂಘಗಳನ್ನೂ ನೋಡುತ್ತಿದ್ದೇನೆ. ಹಾಗೆಯೇ ಕಮಲಾಸನದಲ್ಲಿ ಕುಳಿತಿರುವ-ಎಂದರೆ-ಭೂಮಿಯೆಂಬ ಕಮಲದ ನಡುವೆ ಮೇರುವೆಂಬ ಕರ್ಣಿಕೆಯ ಮೇಲೆ ಕುಳಿತಿರುವ ಪ್ರಜೇಶ್ವರನಾದ ಬ್ರಹ್ಮದೇವನನ್ನು ನೋಡುತ್ತಿದ್ದೇನೆ. ಸರ್ವಋಷಿಗಳನ್ನೂ ದಿವ್ಯರಾದ ವಾಸುಕಿಯೇ ಮೊದಲಾದ ಉರಗರನ್ನೂ ಕಾಣುತ್ತಿದ್ದೇನೆ.

ಅನೇಕಬಾಹೂದರವಕ್ತ್ರನೇತ್ರಂ ಪಶ್ಯಾಮಿ ತ್ವಾಂ ಸರ್ವತೋsನಂತರೂಪಮ್ ।
ನಾಂತಂ ನ ಮಧ್ಯೇ ನ ಪುನಸ್ತವಾದಿಂ ಪಶ್ಯಾಮಿ ವಿಶ್ವೇಶ್ವರ ವಿಶ್ವರೂಪ ।।೧೬।।

ಅನೇಕ ಬಾಹುಗಳಿಂದಲೂ ಅನೇಕ ಉದರಗಳಿಂದಲೂ ಅನೇಕ ಮುಖನೇತ್ರಗಳಿಂದಲೂ ಯುಕ್ತನಾದ ನೀನು ಅನಂತರೂಪನಾಗಿ ಎತ್ತ ನೋಡಿದರೆ ಅತ್ತಇರುವುದನ್ನು ಕಾಣುತ್ತಿದ್ದೇನೆ. ಹೇ ವಿಶೇಶ್ವರ, ನಿನ್ನ ಕಡೆ ಅಂತ್ಯಯಾವುದೋ, ಮಧ್ಯಯಾವುದೋ, ಆದಿಯಾವುದೋ - ಎಂಬುದು ಕಾಣದೆ ಹೋಗಿದ್ದೇನೆ.

ಕಿರೀಟಿನಂ ಗದಿನಂ ಚಕ್ರಿಣಂ ಚ ತೇಜೋರಾಶಿಂ ಸರ್ವತೋ ದೀಪ್ತಿಮಂತಮ್ ।
ಪಶ್ಯಾಮಿ ತ್ವಾಂ ದುರ್ನಿರೀಕ್ಷ್ಯಂ ಸಮಂತಾತ್ ದೀಪ್ತಾನಲಾರ್ಕದ್ಯುತಿಮಪ್ರಮೇಯಮ್ ।।೧೭।।

ಕಿರೀಟಧಾರಿಯಾಗಿ ಗದಾಚಕ್ರಗಳನ್ನು ಹಿಡಿದು ಎಲ್ಲ ಕಡೆಗೂ ಪ್ರಭೆಯನ್ನು ಚೆಲ್ಲುತ್ತಿರುವ ತೇಜೋರಾಶಿಯಾದ ನಿನ್ನನ್ನು ವೀಕ್ಷಿಸುತ್ತಿದ್ದೇನೆ. ಧಗಧಗಿಸುವ ಬೆಂಕಿಯೊಂತೆಯೂ ಸೂರ್ಯನಂತೆಯೂ ಸರ್ವತ್ರ ಬೆಳಕನ್ನು ಬೀರುತ್ತಿರುವ ನೀನು ಬುದ್ಧಿಗೆ ನಿಲುಕದವನು. ಕಣ್ಣು ಕುಕ್ಕುವಂತೆ ದುರ್ನಿರೀಕ್ಷ್ಯನಾದ ನಿನ್ನನ್ನು ಹೇಗೋ ಕಷ್ಟದಿಂದ ನೋಡುತ್ತಿದ್ದೇನೆ.

ತ್ವಮಕ್ಷರಂ ಪರಮಂ ವೇದಿತವ್ಯಂ ತ್ವಮಸ್ಯ ವಿಶ್ವಸ್ಯ ಪರಂ ನಿಧಾನಮ್ ।
ತ್ವಮವ್ಯಯಃ ಶಾಶ್ವತಧರ್ಮಗೋಪ್ತಾ ಸನಾತನಸ್ತ್ವಂ ಪುರುಷೋ ಮತೋ ಮೇ ।।೧೮।।

ಮುಮುಕ್ಷಗಳು ತಿಳಿಯಬೇಕಾಗಿರುವ ಶಾಶ್ವತವಾದ ಪರಮವಸ್ತು ನೀನು. ಈ ವಿಶ್ವಕ್ಕೆ ನೀನೇ ಪರಮಾಧಾರನಾಗಿದ್ದೀಯೆ. ನೀನು ಅವ್ಯಯ. ಶಾಶ್ವತವಾದ ಧರ್ಮವನ್ನು ರಕ್ಷಿಸತಕ್ಕವನು ನೀನು. ಸನಾತನ ಪುರುಷ ನೀನೇ. ಇದು ನನ್ನ ನಿಶ್ಚಯ.

ಅನಾದಿಮಧ್ಯಾಂತಮನಂತವೀರ್ಯಂ ಅನಂತಬಾಹುಂ ಶಶಿಸೂರ್ಯನೇತ್ರಮ್ ।
ಪಶ್ಯಾಮಿ ತ್ವಾಂ ದೀಪ್ತಹುತಾಶವಕ್ತ್ರಂ ಸ್ವತೇಜಸಾ ವಿಶ್ವಮಿದಂ ತಪಂತಮ್ ।।೧೯।।

ಆದಿಮಧ್ಯಾಂತರಹಿತನೂ ಅನಂರವೀರ್ಯಶಾಲಿಯೂ ಆಗಿದ್ದೀಯೆ. ನಿನಗೆ ಲೆಕ್ಕವಿಲ್ಲದಷ್ಟು ತೋಳುಗಳಿವೆ. ಚಂದ್ರಸೂರ್ಯರೆ ನಿನ್ನ ಕಣ್ಣುಗಳಾಗಿದ್ದಾರೆ. ನಿನ್ನ ಬಾಯಿ ಉರಿಯುವ ಬೆಂಕಿಯಾಗಿದೆ. ನಿನ್ನ ತೇಜಸ್ಸಿನಿಂದ ಈ ವಿಶ್ವವೇ ಸುಡುತ್ತಿದ್ದೀಯೆ. ಇಂತಹ ನಿನ್ನನ್ನು ನಾನು ಕಾಣುತ್ತಿದ್ದೇನೆ.

ದ್ಯಾವಾಪೃಥಿವ್ಯೋರಿದಮಂತರಂ ಹಿ ವ್ಯಾಪ್ತಂ ತ್ವಯೈಕೇನ ದಿಶಶ್ಚ ಸರ್ವಾಃ ।
ದೃಷ್ಟ್ವಾsದ್ಭುತಂ ರೂಪಮುಗ್ರಂ ತವೇದಂ ಲೋಕತ್ರಯಂ ಪ್ರವ್ಯಥಿತಂ ಮಹಾತ್ಮನ್ ।।೨೦।।

ಸ್ವರ್ಗ-ಭೂಲೋಕಗಳ ನಾಡುವಣ ಭಾಗವನ್ನೂ ಸಮಸ್ತ ದಿಕ್ಕುಗಳನ್ನೂ ನಿನೊಬ್ಬನೇ ವ್ಯಾಪಿಸಿಬಿಟ್ಟಿದ್ದೀಯೆ. ಓ ಮಹಾತ್ಮ, ಅದ್ಭುತವೂ ಉಗ್ರವೂ ಆದ ನಿನ್ನ ಈ ರೂಪವನ್ನು ಕಂಡು ಮೂರು ಲೋಕವೂ ತಲ್ಲಣಿಸಿಹೋಗಿದೆ.

ಅಮೀ ಹಿ ತ್ವಾಂ ಸುರಸಂಘಾ ವಿಶಂತಿ ಕೇಚಿದ್ಭೀತಾಃ ಪ್ರಾಂಜಲಯೋ ಗೃಣಂತಿ ।
ಸ್ವಸ್ತೀತ್ಯುಕ್ತ್ವಾ ಮಹರ್ಷಿಸಿದ್ಧಸಂಘಾಃ ಸ್ತುವಂತಿ ತ್ವಾಂ ಸ್ತುತಿಭಿಃ ಪುಷ್ಕಲಾಭಿಃ ।।೨೧।।

ಇದೋ ಈ ದೇವತಾಸಮುದಾಯಗಳು ನಿನ್ನ ದೇಹದೊಳಗೆ ಸೇರಿ ಹೋಗುತ್ತಿದ್ದಾರೆ. ಕಲವರಿ ಅಂಜಿ ಕೈಮುಗಿದು ಸ್ತುತಿಸುತ್ತಿದ್ದಾರೆ.

ರುದ್ರಾದಿತ್ಯಾ ವಸವೋ ಯೇ ಚ ಸಾಧ್ಯಾಃ ವಿಶ್ವೇsಶ್ವಿನೌ ಮರುತಶ್ಚೋಷ್ಮಪಾಶ್ಚ ।
ಗಂಧರ್ವಯಕ್ಷಾಸುರ ಸಿದ್ಧಸಂಘಾಃ ವೀಕ್ಷಂತೇ ತ್ವಾಂ ವಿಸ್ಮಿತಾಶ್ಚೈವ ಸರ್ವೇ ।।೨೨।।

ಅಲ್ಲದೆ ರುದ್ರರು, ಆದಿತ್ಯರು, ವಸುಗಳು, ಸಾಧ್ಯರು, ವಿಶ್ವೇದೇವರು, ಅಶ್ವಿನೀ ದೇವತೆಗಳು, ಮರುತ್ತಗಳು, ಪಿತೃಗಳು, ಗಂಧರ್ವಯಕ್ಷಾಸುರಸಿದ್ಧಸಮುದಾಯಗಳು - ಎಲ್ಲರೂ ವಿಸ್ಮಿತರಾಗಿ ನಿನ್ನನ್ನೇ ನೋಡುತ್ತಿದ್ದಾರೆ.

ರೂಪಂ ಮಹತ್ತೇ ಬಹುವಕ್ತ್ರನೇತ್ರಂ ಮಹಾಬಾಹೋ ಬಹುಬಾಹೂರುಪಾದಮ್ ।
ಬಹೂದರಂ ಬಹುದಂಷ್ಟ್ರಾಕರಾಲಂ ದೃಷ್ಟ್ವಾ ಲೋಕಾಃ ಪ್ರವ್ಯಥಿತಾಸ್ತಥಾsಹಮ್ ।।೨೩।।

ಓ ಮಹಾಬಾಹು - ಪರಮಾತ್ಮ, ಅನೇಕ ಮುಖಗಳಿಂದಲೂ ಕೂಡಿರುವ, ಅಸಂಖ್ಯಾತವಾದ ತೋಳು, ತೊಡೆ, ಪಾದಗಳುಳ್ಳ, ಲೆಕ್ಕವಿಲ್ಲದಷ್ಟು ಉದರಗಳಿಂದ ಸಹಿತವಾದ, ಅಲ್ಲದೆ ಅಸಂಖ್ಯಾತ ಕೋರೆಹಲ್ಲುಗಳಿಂದ ಕರಾಳವಾದ ನಿನ್ನ ಅಳತೆಮೀರದ ರೂಪವನ್ನು ಕಂಡು ಲೋಕಗಳು ಹೆದರಿಹೋಗಿವೆ. ಹಾಗೆಯೇ ನಾನೂ ಹೆದರಿದ್ದೇನೆ.

ನಭಃಸ್ಪೃಶಂ ದೀಪ್ತಮನೇಕವರ್ಣಂ ವ್ಯಾತ್ತಾನನಂ ದೇಪ್ತವಿಶಾಲನೇತ್ರಮ್ ।
ದೃಷ್ಟ್ವಾ ಹಿ ತ್ವಾಂ ಪ್ರವ್ಯಥಿತಾಂತರಾತ್ಮಾ ಧೃತಿಂ ನ ವಿಂದಾಮಿ ಶಮಂ ಚ ವಿಷ್ಣೋ ।।೨೪।।

ಆಕಾಶಕ್ಕೆ ತಾಗುವಂತಹವನೂ ಜಗಜಗಿಸುವ ಕಾಂತಿಯುಳ್ಳವನೂ ನಾನಾ ಬಣ್ಣಗಳುಳ್ಳವನೂ ತೆರೆದ ಬಾಯಿಯುಳ್ಳವನಾಗಿ ಕೆಂಪಡರಿದ ಹೆಗ್ಗಣ್ಣುಗಳಿಂದ ಕೂಡಿದ ನಿನ್ನನ್ನು ನೋಡಿ, ಓ ಮಹಾವಿಷ್ಣುವೇ, ಒಳಗೊಳಗೆ ಬೆದರಿಹೋಗಿದ್ದೇನೆ. ನನಗೆ ಧೈರ್ಯವಿಲ್ಲ. ಮನಸ್ಸಿಗೆ ಶಾಂತಿಯಿಲ್ಲ.

ದಂಷ್ಟ್ರಾಕರಾಲಾನಿ ಚ ತೇ ಮುಖಾನಿ ದೃಷ್ಟ್ವೈವ ಕಾಲಾನಲಸನ್ನಿಭಾನಿ ।
ದಿಶೋ ನ ಜಾನೇ ನ ಲಭೇ ಚ ಶರ್ಮ ಪ್ರಸೀದ ದೇವೇಶ ಜಗನ್ನಿವಾಸ ।।೨೫।।

ಕೋರೆಹಲ್ಲುಗಳಿಂದ ವಿಕಾರವಾಗಿರುವ ಮತ್ತು ಪ್ರಳಯಕಾಲಾಗ್ನಿಯಂತೆ ಜಗಜಗಿಸುವ ನಿನ್ನ ಮುಖಗಳನ್ನು ಕಂದಮಾತ್ರದಿಂದಲೇ ನಾನು ದಿಕ್ಕೆಟ್ಟು ಹೋಗಿದ್ದೇನೆ. ಮನಸ್ಸಿಗೆ ನೆಮ್ಮದಿಯಾಗದು. ದೇವೇಶ್ವರ, ಜಗನ್ನಿವಾಸ, ಪ್ರಸನ್ನನಾಗು.

ಅಮೀ ಚ ತ್ವಾಂ ದೃತರಾಷ್ಟ್ರಸ್ಯ ಪುತ್ರಾಃ ಸರ್ವೇ ಸಹೈವಾವನಿಪಾಲಸಂಘೈಃ ।
ಭೀಷ್ಮೋ ದ್ರೋಣಃ ಸೂತಪುತ್ರಸ್ತಥಾsಸೌ ಸಹಾಸ್ಮದೀಯೈರಪಿ ಯೋಧಮುಖ್ಯೈಃ ।।೨೬।।
ವಕ್ತ್ರಾಣಿ ತೇ ತ್ವರಮಾಣಾ ವಿಶಂತಿ ದಂಷ್ಟ್ರಾಕರಾಲಾನಿ ಭಯಾನಕಾನಿ ।
ಕೇಚಿದ್ವಿಲಗ್ನಾ ದಶನಾಂತರೇಷು ಸಂದೃಶ್ಯಂತೇ ಚೂರ್ಣಿತೈರುತ್ತಮಾಂಗೈಃ ।।೨೭।।

ಕೋರೆಹಲ್ಲುಗಳಿಂದ ವಿಕಾರವಾಗಿಯೂ ಭೀಕರವಾಗಿಯೂ ಇರುವ ನಿನ್ನ ಬಾಯಿಗಳಲ್ಲಿ ತ್ವರೆಯಿಂದ ಬಂದು ಬಂದು ಬೀಳುತ್ತಲಿದ್ದಾರೆ. ಕೆಲವರು ನಿನ್ನ ಹಲ್ಲುಸಂದುಗಳಲ್ಲಿ ಸಿಕ್ಕಿಕೊಂಡು, ಅವರ ತಲೆಗಳು ಜಜ್ಜಿ ನುಚ್ಚುನೂರಾಗಿ ಕಾಣಿಸುತ್ತಾರೆ.

ಯಥಾ ನದೀನಾಂ ಬಹುವೋsಂಬುವೇಗಾಃ ಸಮುದ್ರಮೇವಾಭಿಮುಖಾ ದ್ರವಂತಿ ।
ತಥಾ ತವಾಮೀ ನರಲೋಕವೀರಾ ವಿಶಂತಿ ವಕ್ತ್ರಾಣ್ಯಭಿವಿಜ್ವಲಂತಿ ।।೨೮।।

ನದಿಗಳ ಅಸಂಖ್ಯಾತ ಜಲಪ್ರವಾಹಗಳು ಸಮುದ್ರದ ಕಡೆಗೆ ಅಭಿಮುಖವಾಗಿ ಹೇಗೆ ಧಾವಿಸುತ್ತವೆಯೋ, ಹಾಗೆ ಈ ನರಲೋಕವೀರರು ಉರಿಯುವ ನಿನ್ನ ಬಾಯಿಗಳೊಳಗೆ ಧಾವಿಸಿ ಬಂದು ಬೀಳುತ್ತಿದ್ದಾರೆ.

ಯಥಾ ಪ್ರದೀಪ್ತಂ ಜ್ವಲನಂ ಪತಂಗಾಃ ವಿಶಂತಿ ನಾಶಾಯ ಸಮೃದ್ಧವೇಗಾಃ ।
ತಥೈವ ನಾಶಾಯ ವಿಶಂತಿ ಲೋಕಾಃ ತವಾಪಿ ವಕ್ತ್ರಾಣಿ ಸಮೃದ್ಧವೇಗಾಃ ।।೨೯।।

ದೀಪದ ಹುಳುಗಳು ಉರಿಯುವ ಬೆಂಕಿಯಲ್ಲಿ ಸಾಯುವುದಕ್ಕಾಗಿ ವೇಗದಿಂದ ಬಂದು ಹೇಗೆ ನುಗ್ಗುತ್ತವೆಯೋ ಹಾಗೆ ಈ ಲೋಕಗಳು ವೇಗದಿಂದ ಬಂದು ನಾಶವಾಗುವುದಕ್ಕಾಗಿ ನಿನ್ನ ಮುಖಗಳಲ್ಲಿ ನುಗ್ಗಿಹೋಗುತ್ತಿವೆ.

ಲೇಲಿಹ್ಯಸೇ ಗ್ರಸಮಾನಃ ಸಮಂತಾತ್ ಲೋಕಾನ್ ಸಮಗ್ರಾನ್ ವದನೈರ್ಜ್ವಲದ್ಭಿಃ ।
ತೇಜೋಭಿರಾಪೂರ್ಯ ಜಗತ್ಸಮಗ್ರಂ ಭಾಸಸ್ತವೋಗ್ರಾಃ ಪ್ರತಪಂತಿ ವಿಷ್ಣೋ ।।೩೦।।

ಸುತ್ತಲೂ ಇರುವ ಸಮಸ್ತಲೋಕಗಳನ್ನೂ ನೀನು ನಿನ್ನ ಉರಿಯುವ ಬಾಯಿಗಳಿಂದ ನುಂಗುತ್ತಾ ಚಪ್ಪರಿಸುತ್ತಿದ್ದೀಯೆ! ಹೇ ವಿಷ್ಣುವೇ, ನಿನ್ನ ಉಗ್ರಕಿರಣಗಳು ಸಮಗ್ರಜಗತ್ತನ್ನೂ ತೇಜಸ್ಸುಗಳಿಂದ ವ್ಯಾಪಿಸಿ ಸುಡುತ್ತಿವೆ.

ಆಖ್ಯಾಹಿ ಮೇ ಕೋ ಭವಾನುಗ್ರರೂಪೋ ನಮೋsಸ್ತುತೇ ದೇವವರ ಪ್ರಸೀದ ।
ವಿಜ್ಞಾತುಮಿಚ್ಛಾಮಿ ಭವಂತಮಾದ್ಯಂ ನ ಹಿ ಪ್ರಜಾನಾಮಿ ತವ ಪ್ರವೃತ್ತಿಮ್ ।।೩೧।।

ಉಗ್ರರೂಪನಾದ ನೀನು ಯಾರೆಂದು ನನಗೆ ಹೇಳು, ಓ ದೇವೋತ್ತಮ! ನಿನಗೆ ನಮಸ್ಕಾರ! ಪ್ರಸನ್ನನಾಗು! ಸರ್ವಕ್ಕೂ ಆದಿಯಾದ ನಿನ್ನನ್ನು ತಿಳಿಯಲು ಬಯಸುತ್ತೇನೆ. ನಿನ್ನ ಉದ್ದೇಶವೇನೆಂಬುದನ್ನು ಅರಿಯದೆ ಹೋಗಿದ್ದೇನೆ.

ಶ್ರೀ ಭಗವಾನುವಾಚ 
ಕಾಲೋsಸ್ಮಿ ಲೋಕಕ್ಷಯಕೃತ್ ಪ್ರವೃದ್ಧೋ ಲೋಕಾನ್ ಸಮಾಹರ್ತುಮಿಹ ಪ್ರವೃತ್ತಃ ।
ಋತೇsಪಿ ತ್ವಾಂ ನ ಭವಿಷ್ಯಂತಿ ಸರ್ವೇ ಯೇsವಸ್ಥಿತಾಃ ಪ್ರತ್ಯನೀಕೇಷು ಯೋಧಾಃ ।।೩೨।।

ಭಗವಂತನು ಹೀಗೆಂದನು - ಲೋಕಕ್ಷಯಕಾರಿಯಾಗಿ ಬೆಳೆದು ನಿಂತಿರುವ ಕಾಲಪುರುಷ ನಾನು! ಈ ಲೋಕದಲ್ಲಿರುವ ಈ ಜನರನ್ನು ಕೊಲ್ಲುವುದಕ್ಕೆ ತೊಡಗಿದ್ದೇನೆ. ಎದುರುಪಕ್ಷದಲ್ಲಿರುವ ಸಮಸ್ತಯೋಧರೂ ನೀನಿಲ್ಲದಿದ್ದರೂ-ನೀನು ಯುದ್ಧಮಾಡದಿದ್ದರೂ ಯಾರೂ ಉಳಿಯುವುದಿಲ್ಲ!

ತಸ್ಮಾತ್ ತ್ವಮುತ್ತಿಷ್ಠ ಯಶೋ ಲಭಸ್ವ ಜತ್ವಾ ಶತ್ರೂನ್ ಭುಂಕ್ಷ್ವ ರಾಜ್ಯಂ ಸಮೃದ್ಧಮ್ ।
ಮಯೈವೈತೇ ನಿಹತಾಃ ಪೂರ್ವಮೇವ ನಿಮಿತ್ತಮಾತ್ರಂ ಭವ ಸವ್ಯಸಾಚಿನ್ ।।೩೩।।

ಆದ್ದರಿಂದ ನೀನು ಎದ್ದು ನಿಲ್ಲು. ಶತ್ರುವೀರರನ್ನು ಅರ್ಜುನನು ಗೆದ್ದನೆಂದು ಕೀರ್ತಿಯನ್ನು ಪಡೆ. ಸಕಲಸಮೃದ್ಧಿಯುಳ್ಳ ರಾಜ್ಯವನ್ನೂ ಉಪಭೋಗಿಸು. ಇವರೆಲ್ಲರನ್ನೂ ನಾನು ಮೋದಲೇ ಕೊಂದು ಬಿಟ್ಟಿದ್ದೇನೆ. ಸವ್ಯಸಾಚಿ - ಕೇವಲ ನೆವದ ಮಟ್ಟಿಗೆ ನೀನು ಇರು!

ದ್ರೋಣಂ ಚ ಭೀಷ್ಮಂ ಚ ಜಯದ್ರಥಂ ಚ ಕರ್ಣಂ ತಥಾನ್ಯಾನಪಿ ಯೋಧವೀರಾನ್ ।
ಮಯಾ ಹತಾಂಸ್ತ್ವಂ ಜಹಿ ಮಾ ವ್ಯಥಿಷ್ಠಾ ಯುಧ್ಯಸ್ವ ಜೇತಾಸಿ ರಣೇ ಸಪತ್ನಾನ್ ।।೩೪।।

ದ್ರೋಣನನ್ನೂ ಭೀಷ್ಮನನ್ನೂ ಜಯದ್ರಥನನ್ನೂ ಕರ್ಣನನ್ನೂ ಅಲ್ಲದೆ ಇತರ ವೀರಯೋಧರನ್ನೂ ನಾನು ಈಗಲೇ ಕೊಂದುಬಿಟ್ಟಿದ್ದೇನೆ! ಅವರನ್ನು ನೀನು ನಿಮಿತ್ತಮಾತ್ರನಾಗಿ ಕೊಲ್ಲು. ಸುಮ್ಮನೆ ವ್ಯಥೆಪಡಬೇಡ. ಯುದ್ಧಮಾಡು. ಯುದ್ದದಲ್ಲಿ ಶತ್ರುಗಳನ್ನು ನೀನು ಗೆಲ್ಲುವೆ.

ಸಂಜಯ ಉವಾಚ:
ಏತಚ್ಛ್ರುತ್ವಾ ವಚನಂ ಕೇಶವಸ್ಯ ಕೃತಾಂಜಲಿರ್ವೇಪಮಾನಃ ಕಿರೀಟೀ ।
ನಮಸ್ಕೃತ್ವಾ ಭೂಯ ಏವಾಹ ಕೃಷ್ಣಂ ಸಗದ್ಗದಂ ಭೀತಭೀತಃ ಪ್ರಣಮ್ಯ ।।೩೫।।

ಸಂಜಯನು ಹೇಳಿದನು - ಮಹಾರಾಜ, ವಿಸ್ವರೂಪಧಾರಿಯಾದ ಶ್ರೀಕೃಷ್ಣನ ಈ ಮಾತನ್ನು ಕೇಳಿದ ಅರ್ಜುನನು ಥರಥರನೆ ನಡುಗುತ್ತ ನಮಸ್ಕರಿಸಿ ಬೋಗಸೆಯೊಡ್ಡಿಕೊಂಡು ಹೆದಹೆದರುತ್ತಲೇ ತಲೆಬಾಗಿ ಗದ್ಗದಸ್ವರದಿಂದ ಶ್ರೀಕೃಷ್ಣನಿಗೆ ಮತ್ತೆ ಇಂತೆಂದನು.

ಅರ್ಜುನ ಉವಾಚ:
ಸ್ಥಾನೇ ಹೃಷೀಕೇಶ ತವ ಪ್ರಕೀರ್ತ್ಯಾ ಜಗತ್ ಪ್ರಹೃಷ್ಯತ್ಯನುರಜ್ಜತೇ ಚ ।
ರಕ್ಷಾಂಸಿ ಭೀತಾನಿ ದಿಶೋ ದ್ರವಂತಿ ಸರ್ವೇ ನಮಸ್ಯಂತಿ ಚ ಸಿದ್ಧಸಂಘಾಃ ।।೩೬।।

ಹೃಷೀಕೇಶ! ನಿನ್ನ ಮಹಿಮೆಯ ಕೀರ್ತನದಿಂದ ಜಗತ್ತು ಆನಂದಿಸುವುದೂ ಕೀರ್ತನದಲ್ಲಿ ಅನುರಾಗನನ್ನಿಡುವುದೂ ಯುಕ್ತವೇ ಸರಿ. ರಾಕ್ಷಸರು ಹೆದರಿ ದಿಕ್ಕುದಿಕ್ಕಿಗೆ ಓಡಿಹೋಗುವುದೂ ಸಮಸ್ತ ಸಿದ್ಧಪುರುಷರೂ ನಿನಗೆ ನಮಸ್ಕಾರಮಾಡುತ್ತಿರುವುದೂ ಯುಕ್ತವಾಗಿಯೇ ಇದೆ.

ಕಸ್ಮಾಚ್ಚ ತೇ ನ ನಮೇರನ್ ಮಹಾತ್ಮನ್ ಗರೀಯಸೇ ಬ್ರಹ್ಮಣೋsಪ್ಯಾದಿಕರ್ತ್ರೇ ।
ಅನಂತ ದೇವೇಶ ಜಗನ್ನಿವಾಸ ತ್ವಮಕ್ಷರಂ ಸದಸತ್ತತ್ಪರಂ ಯತ್ ।।೩೭।।

ಓ ಮಹಾತ್ಮ, ಹಿರಣ್ಯಗರ್ಭನಾದ ಬ್ರಹ್ಮದೇವನಿಗೂ ಮೂಲಕಾರಣನೂ(ಬ್ರಹ್ಮಣಃ ಅಪಿ ಆದಿಕರ್ತ್ರೇ) ಬಹುದೊಡ್ಡವನೂ ಆದ ನಿನಗೆ ಆ ಸಿದ್ಧಪುರುಷರು ಹೇಗೆ ತಾನೇ ಸಮಸ್ಕರಿಸದೆ ಇದ್ದಾರೆ? ಹೇ ಅನಂತ, ದೇವೇಶ, ಜಗತ್ತಿಗೆ ಆಧಾರಭೂತನೆ, ನೀನು ಸತ್ ಆಗಿದ್ದೇಯೆ, ಅಸತ್ ಆಗಿದ್ದೇಯೆ. ಪರಮಾರ್ಥದಲ್ಲಿ ಸದಸತ್ತುಗಳರಡನ್ನೂ ಮೀರಿದ ಶ್ರೇಷ್ಠವಾದ ಅಕ್ಷರವೇ ನೀನು.

ತ್ವಮಾದಿದೇವಃ ಪುರುಷಃ ಪುರಾಣಃ ತ್ವಮಸ್ಯ ವಿಶ್ವಸ್ಯ ಪರಂ ನಿಧಾನಮ್ ।
ವೇತ್ತಾಸಿ ವೇದ್ಯಂ ಚ ಪರಂ ಚ ಧಾಮ ತ್ವಯಾ ತತಂ ವಿಶ್ವಮನಂತರೂಪ ।।೩೮।।

ಆದಿದೇವನೇ ನೀನು. ಪುರಾತನ ಪುರುಷ ನೀನು. ಈ ವಿಶ್ವಕ್ಕೆ ಪ್ರಕೃಷ್ಟವಾದ ಆಶ್ರಯವೇ ನೀನು. ತಿಳಿಯತಕ್ಕವನು ತಿಳಿಯಬೇಕಾದದದ್ದು ಏನೇನಿದೆಯೋ ಅದೂ ನೀನೇ, ಉತ್ತಮವಾದ ಪರಂಧಾಮವೇ ನೀನು. ಹೇ ಅನಂತರೂಪ, ಈ ವಿಶ್ವವೆಲ್ಲವೂ ನಿನ್ನಿಂದ ವ್ಯಾಪ್ತವಾಗಿದೆ.

ವಾಯುರ್ಯಮೋsಗ್ನಿರ್ವರುಣಃ ಶಶಾಂಕಃ ಪ್ರಜಾಪತಿಸ್ತ್ವಂ ಪ್ರಪಿತಾಮಹಶ್ಚ ।
ನಮೋ ನಮಸ್ತೇsಸ್ತು ಸಹಸ್ರಕೃತ್ವಃ ಪುನಶ್ಚ ಭೂಯೋsಪಿ ನಮೋ ನಮಸ್ತೇ ।।೩೯।।

ವಾಯು, ಯಮ, ಅಗ್ನಿ, ವರುಣ, ಚಂದ್ರ - ಇವರೆಲ್ಲರೂ ನೀನೇ. ಪ್ರಜಾಪತಿಗಳ ರೂಪದಲ್ಲಿರುವವನೂ ನೀನೇ. ಪಿತಾಮಹನಾದ ಬ್ರಹ್ಮನಿಗೂ ತಂದೆ ನೀನು. ನಿನಗೆ ನಮಸ್ಕಾರ. ನಿನಗೆ ಸಾವಿರ ಬಾರಿ ನಮಸ್ಕಾರವಿರಲಿ ಮತ್ತು ಇನ್ನೊಮ್ಮೆ ನಮಸ್ಕಾರ! ನಮೋ ನಮಃ!

ನಮಃ ಪುರಸ್ತಾದಥ ಪೃಷ್ಠತಸ್ತೇ ನಮೋsಸ್ತು ತೇ ಸರ್ವತ ಏವ ಸರ್ವ ।
ಅನಂತವೀರ್ಯಾಮಿತ ವಿಕ್ರಮಸ್ತ್ವಂ ಸರ್ವಂ ಸಮಾಪ್ನೋಷಿ ತತೋsಸಿ ಸರ್ವಃ ।।೪೦।।

ಹೇ ಸರ್ವಸ್ವರೂಪನೆ, ನಿನಗೆ ಮುಂದೆ ನಮಸ್ಕಾರ, ಹಿಂದೆ ಸಮಸ್ಕಾರ ಎಲ್ಲ ಕಡೆಯಲ್ಲಿಯೂ ನಿನಗೆ ಸಮಸ್ಕಾರವಿರಲಿ. ನೀನು ಅನಂತವೀರ್ಯನು. ಅಮಿತಪರಾಕ್ರಮನು. ಸರ್ವವನ್ನೂ ವ್ಯಾಪಿಸಿಕೊಂಡಿದ್ದರಿಂದ ನೀನು ಸರ್ವನೆನಿಸುವೆ.

ಸಖೇತಿ ಮತ್ವಾ ಪ್ರಸಭಂ ಯದುಕ್ತಂ ಹೇ ಕೃಷ್ಣ ಹೇ ಯಾದವ ಹೇ ಸಖೇತಿ ।
ಅಜಾನತಾ ಮಹಿಮಾನಂ ತವೇದಂ ಮಯಾ ಪ್ರಮಾದಾತ್ ಪ್ರಣಯೇನ ವಾಪಿ ।।೪೧।।

ನಿನ್ನ ಮಹಿಮೆಯನ್ನೂ ಈ ವಿಶ್ವರೂಪವನ್ನೂ ಅರಿಯದೆ ಮೂಢನಾದ ನಾನು ನಿನ್ನನ್ನು ಮಿತ್ರನೆಂದು ಬಗೆದು, ಪ್ರಮಾದದಿಂದಲೋ ಸ್ನೇಹಸಲಿಗೆಯಿಂದಲೋ ಎಲೆ ಕೃಷ್ಣ, ಎಲೆ ಯಾದವ, ಎಲೆ ಗೆಳೆಯ ಎಂದು ದಿಟ್ಟತನದ ಮಾತನ್ನಾಡಿದ್ದೇನೆ. ಅದನ್ನೂ -

ಯಚ್ಚಾವಹಾಸಾರ್ಥಮಸತ್ಕೃತೋsಸಿ ವಿಹಾರಶಯ್ಯಾಸನಭೋಜನೇಷು ।
ಏಕೋsಥವ್ಯಾಪ್ಯಚ್ಯುತ ತತ್ಸಮಕ್ಷಂ ತತ್ ಕ್ಷಾಮಯೇ ತ್ವಾಮಹಮಪ್ರಮೇಯಮ್ ।।೪೨।।

ಮತ್ತು ತಿರುಗಾಡುವಾಗ, ಮಲಗುವಾಗ, ಕುಳಿತಾಗ, ಅಥವಾ ಭೋಜನ ಕಾದಲ್ಲಿ ನೀನೊಬ್ಬನೇ ಇದ್ದಾಗ ಎಂದರೆ ನಿನ್ನ ಪರೋಕ್ಷದಲ್ಲಿ ಮತ್ತು ಎದುರಿಗೆ ಹಾಸ್ಯಕ್ಕಾಗಿ ನಿನ್ನನ್ನು ನಾನು ಗೇಲಿಮಾಡಿದ್ದುಂಟು. ಹೇ ಅಚ್ಯುತ, ಅದೆಲ್ಲವನ್ನೂ ಕ್ಷಮಿಸಬೇಕೆಂದು ಊಹಾತೀತಮಹಿಮನಾದ ನಿನ್ನನ್ನು ಬೇಡಿಕೊಳ್ಳುತ್ತೇನೆ.

ಪಿತಾsಸಿ ಲೋಕಸ್ಯ ಚರಾಚರಸ್ಯ ತ್ವಮಸ್ಯ ಪೂಜ್ಯಸ್ಯ ಗುರುರ್ಗರೀಯಾನ್ ।
ನ ತ್ವತ್ಸಮೋsಸ್ತ್ಯಭ್ಯಧಿಕಃ ಕುತೋsನ್ಯೋ ಲೋಕತ್ರಯೇsಪ್ಯಪ್ರತಿಮಪ್ರಭಾವ ।।೪೩।।

ಈ ಚರಾಚರಲೋಕಕ್ಕೆ ನೀನು ತಂದೆಯಾಗಿದ್ದೀಯೆ. ಬಹಳ ದೊಡ್ಡ ಗುರುವಾದ್ದರಿಂದ ಪೂಜಾರ್ಹನಾಗಿದ್ದೀಯ. ಹೇ ಅಸದೃಶಪ್ರಭಾವಶಾಲಿಯೆ, ಮೂರುಲೋಕದಲ್ಲಿಯೂ ನಿನಗೆ ಸಮಾನನಾದವನೇ ಇಲ್ಲ. ಹೀಗೆರುವಾಗ ನಿನಿಗಿಂತ ಅಧಿಕನಾದವನು ಎಲ್ಲಿಂದ ಬಂದಾನು?

ತಸ್ಮಾತ್ ಪ್ರಣಮ್ಯ ಪ್ರಣಿಧಾಯ ಕಾಯಂ ಪ್ರಸಾದಯೇ ತ್ವಾಮಹಮೀಶಮೀಡ್ಯಮ್ ।
ಪಿತೇವ ಪುತ್ರಸ್ಯ ಸಖೇವ ಸಖ್ಯುಃ ಪ್ರಿಯಃ ಪ್ರಿಯಾಯಾರ್ಹಸಿದೇವ ಸೋಢುಮ್ ।।೪೪।।

ಆದ್ದರಿಂದ ದೇಹವನ್ನು ಬಗ್ಗಿಸಿ ಪ್ರಣಾಮಗಳನ್ನರ್ಪಿಸಿ, ಈಶ್ವರನೂ ಸ್ತುತ್ಯನೂ ಆದ ನಿನ್ನನ್ನು ಪ್ರಸನ್ನನಾಗೆಂದು ಬೇಡಿಕೊಳ್ಳುತ್ತೇನೆ. ಹೇ ದೇವ, ತಂದೆಯು ಮಗನ ತಪ್ಪನ್ನೂ, ಮಿತ್ರನು ಮಿತ್ರನ ಅಪರಾಧವನ್ನೂ, ಪ್ರಿಯನು ತನ್ನ ಪ್ರಿಯೆಯ ಅಪರಾಧವನ್ನು ಮನ್ನಿಸುವಂತೆ ನನ್ನ ತಪ್ಪನ್ನು ನೀನು ಸಹಿಸಿಕೊಳ್ಳಬೇಕು.

ಅದೃಷ್ಟಪೂರ್ವಂ ಹೃಷಿತೋsಸ್ಮಿ ದೃಷ್ಟ್ವಾ ಭಯೇನ ಚ ಪ್ರವ್ಯಥಿತಂ ಮನೋ ಮೇ ।
ತದೇವ ಮೇ ದರ್ಶಯ ದೇವರೂಪಂ ಪ್ರಸೀದ ದೇವೇಶ ಜಗನ್ನಿವಾಸ ।।೪೫।।

ಹಿಂದೆಂದೂ ಕಾಣದ ಈ ವಿಶ್ವರೂಪವನ್ನು ಕಂಡು ರೋಮಾಂಚಿತನಾಗಿದ್ದೇನೆ. ನನ್ನ ಮನಸ್ಸು ಭಯದಿಂದ ಕಂಗಾಲಾಗಿದೆ. ಸ್ವಾಮಿ, ಅದೇ ಹಿಂದಿನ ರೂಪವನ್ನು ನನಗೆ ತೋರಿಸು. ದೇವೇಶ್ವರ, ಜಗನ್ನಿವಾಸ, ಪ್ರಸನ್ನನಾಗು!

ಕಿರೀಟಿನಂ ಗದಿನಂ ಚಕ್ರಹಸ್ತಮಿಚ್ಛಾಮಿ ತ್ವಾಂ ದ್ರಷ್ಟುಮಹಂ ತಥೈವ ।
ತೇನೈವ ರೂಪೇಣ ಚತುರ್ಭುಜೇನ ಸಹಸ್ರ ಬಾಹೋ ಭವ ವಿಶ್ವಮೂರ್ತೇ ।।೪೬।।

ಮೊದಲಿನಂತೆಯೇ ಕಿರೀಟಿಯೂ ಗದಾಧಾರಿಯೂ ಚಕ್ರವನ್ನು ಕೈಯಲ್ಲಿ ಹಿಡಿದವನೂ ಆದ ನಿನ್ನನ್ನು ನೋಡಲು ಬಯಸುತ್ತೇನೆ. ಓ ಸಹಸ್ರಬಾಹು, ವಿಶ್ವರೂಪಧಾರಿಯೇ, ಚತುರ್ಬಾಹುವಾದ ಆ ಹಿಂದಿನ ರೂಪವುಳ್ಳವನಾಗು.

ಶ್ರೀ ಭಗವಾನುವಾಚ:
ಮಯಾ ಪ್ರಸನ್ನೇನ ತವಾರ್ಜುನೇದಂ ರೂಪಂ ಪರಂ ದರ್ಶಿತಮಾತ್ಮಯೋಗಾತ್ ।
ತೇಜೋsಮಯಂ ವಿಶ್ವಮನಂತಮಾದ್ಯಂ ಯನ್ಮೇ ತ್ವದನ್ಯೇನ ನ ದೃಷ್ಟಪೂರ್ವಮ್ ।।೪೭।।

ಭಗವಂತನು ಹೇಳಿದನು: ಅರ್ಜುನ! ನಿನ್ನನ್ನು ನಾನು ಪ್ರಸನ್ನನಾಗಿ ಶ್ರೇಷ್ಠವಾದ ಈ ರೂಪವನ್ನು ನನ್ನ ಯೋಗಸಾಮರ್ಥ್ಯದಿಂದ ನಿನಗೆ ತೋರಿಸಿದ್ದೇನೆ. ತೇಜೋಮಯವೂ ಅಂತರಹಿತವೂ ಆದ್ಯವೂ ಆದ ಈ ವಿಶ್ವರೂಪವನ್ನು ನಿನ್ನ ಹೊರತು ಮತ್ತೊಬ್ಬನು ಕಂಡಿದಲ್ಲ.

ನ ವೇದಯಜ್ಞಾಧ್ಯಯನೈರ್ನ ದಾನೈಃ ನ ಚ ಕ್ರಿಯಾಭಿರ್ನ ತಪೋಭಿರುಗ್ರೈಃ ।
ಏವಂರೂಪಃ ಶಕ್ಯ ಅಹಂ ನೃಲೋಕೇ ದ್ರಷ್ಟುಂ ತ್ವದನ್ಯೇನ ಕುರುಪ್ರವೀರ ।।೪೮।।

ಕುರುವೀರ - ಅರ್ಜುನ, ನಿನಗೆ ತೋರಿಸಿದಂತೆ ವಿಶ್ವರೂಪನಾದ ನನ್ನನ್ನು ಈ ಮನುಷ್ಯ ಲೋಕದಲ್ಲಿ ನಿನ್ನನ್ನುಳಿದು ಇನ್ನೊಬ್ಬನಿಂದ ನೋಡಲು ಶಕ್ಯವಿಲ್ಲ. ವೇದಗಳ ಅಧ್ಯಯನದಿಂದಲೂ ಯಜ್ಞವಿಚಾರಗಳನ್ನು ತಿಳಿದುಕೊಳ್ಳುವುದರಿಂದಲೂ ಸಾಧ್ಯವಿಲ್ಲ. ಮಹತ್ತರ ದಾನಗಳನ್ನು ಮಾಡಿದರೂ ಅಗ್ನಿಹೋತ್ರಾದಿ ಶ್ರೌತಕ್ರಿಯೆಗಳನ್ನು ಮಾಡಿದರೂ ಸಾಧ್ಯವಾಗದು. ಚಾಂದ್ರಾಯಣವೇ ಮುಂತಾದ ಉಗ್ರತಪಸ್ಸುಗಳನ್ನು ಆಚರಿಸಿದರೂ ಈ ವಿಶ್ವರೂಪವನ್ನು ಕಾಣಲು ಶಕ್ಯವಿಲ್ಲ.

ಮಾತೇ ವ್ಯಥಾ ಮಾ ಚ ವಿಮೂಢಭಾವೋ ದೃಷ್ಟ್ವಾ ರೂಪಂ ಘೋರಮೀದೃಙ್ಮಮೇದಮ್ ।
ವ್ಯಪೇತಭೀಃ ಪ್ರೀತಮನಾಃ ಪುನಸ್ತ್ವಂ ತದೇವ ಮೇ ರೂಪಮಿದಂ ಪ್ರಪಶ್ಯ ।।೪೯।।

ಈ ಪರಿಯ ನನ್ನ ಘೋರರೂಪವನ್ನು ಕಂಡು ತಲ್ಲಣಗೊಳ್ಳಬೇಡ. ದಿಙ್ಮೂಢನಾಗಬೇಡ. ಅಂಜಿಕೆಯನ್ನು ಬಿಟ್ಟು ಪ್ರಸನ್ನಚಿತ್ತನಾಗಿ ನನ್ನ ಆ ಹಿಂದಿನ ರೂಪವನ್ನು ಮತ್ತೆ ನೋಡು.

ಸಂಜಯ ಉವಾಚ
ಇತ್ಯರ್ಜುನಂ ವಾಸುದೇವಸ್ತಥೋಕ್ತ್ವಾ ಸ್ವಕಂ ರೂಪಂ ದರ್ಶಯಾಮಾಸ ಭೂಯಃ ।
ಆಶ್ವಾಸಯಾಮಾಸ ಚ ಭೀತಮೇನಂ ಭೂತ್ವಾ ಪುನಃ ಸೌಮ್ಯವಪುರ್ಮಹಾತ್ಮಾ ।।೫೦।।

ಸಂಜಯನು ಹೀಗೆಂದನು - ಧೃತರಾಷ್ಟ್ರ ಮಹಾರಾಜ, ವಾಸುದೇವನು ಈ ಪ್ರಕಾರವಾಗಿ ಅರ್ಜುನನಿಗೆ ಇಷ್ಟು ಹೇಳಿ, ಪುನಃ ತನ್ನ ಹಿಂದಿನ ನಿಜರೂಪವನ್ನು ತೋರಿಸಿದನು. ಆ ಮಹಾತ್ಮನು ಸೌಮ್ಯದೇಹವುಳ್ಳವನಾಗಿ, ಹೆದರಿಹೋಗಿದ್ದ ಅರ್ಜುನನ್ನು ಸಂತೈಸಿದನು.

ಅರ್ಜುನ ಉವಾಚ
ದೃಷ್ಟ್ವೇದಂ ಮಾನುಷಂ ರೂಪಂ ತವ ಸೌಮ್ಯಂ ಜನಾರ್ದನ ।
ಇದಾನೀಮಸ್ಮಿ ಸಂವೃತ್ತಃ ಸಚೇತಾಃ ಪ್ರಕೃತಿಂ ಗತಃ ।।೫೧।।

ಅರ್ಜುನನು ಹೀಗೆಂದನು - ಶ್ರೀಕೃಷ್ಣ, ಸೌಮ್ಯವಾದ ನಿನ್ನ ಈ ಮಾನುಷರೂಪವನ್ನು ನೋಡಿದಮೇಲೆ, ಈಗ ನಾನು ಸ್ವಸ್ಥಚಿತ್ತನಾದೆನು! ಮೊದಲಿನಂತೆ ನೆಮ್ಮದಿಯನ್ನು ಪಡೆದನು.

ಶ್ರೀಭಗವಾನುವಾಚ
ಸುದುರ್ದರ್ಶಮಿದಂ ರೂಪಂ ದೃಷ್ಟವಾನಸಿ ಯನ್ಮಮ ।
ದೇವಾ ಅಪ್ಯಸ್ಯ ರೂಪಸ್ಯ ನಿತ್ಯಂ ದರ್ಶನಕಾಂಕ್ಷಿಣಃ ।।೫೨।।

ಭಗವಂತನು ಹೀಗೆಂದನು - ಬಲುಕಷ್ಟದಿಂದ ಲಭ್ಯವಾಗಬಹುದಾದ ಈ ನನ್ನ ರೂಪವನ್ನು ನೋಡಿದೆಯಲ್ಲ, ಈ ರೂಪವನ್ನು ನೋಡಲು ದೇವತೆಗಳೂ ಸಹ ಯಾವಾಗಲೂ ಬಯಸುತ್ತಲೇ ಇದ್ದಾರೆ.

ನಾಹಂ ವೇದೈರ್ನ ತಪಸಾ ನ ದಾನೇನ ನ ಚೇಜ್ಯಯಾ ।
ಶಕ್ಯ ಏವಂವಿಧೋ ದ್ರಷ್ಟುಂ ದೃಷ್ಟವಾನಸಿ ಮಾಂ ಯಥಾ ।।೫೩।।

ನನ್ನನ್ನು ಈ ಪ್ರಕಾರವಾಗಿ ನೋಡಿದೆಯಲ್ಲ, ಹೀಗೆ ನೋಡುವುದಕ್ಕೆ ನಾನು ವೇದಗಳ ಅಧ್ಯಯನದಿಂದಾಗಲಿ, ತಪಸ್ಸಿನಿಂದಾಗಲಿ ಮಹತ್ತರದಾನದಿಂದಾಗಲಿ, ಯಜ್ಞಸಾಧನದಿಂದಾಗಲಿ ಎಂದಿಗೂ ಯಾರಿಗೂ ಶಕ್ಯನಲ್ಲ.

ಭಕ್ತ್ಯಾ ತ್ವನನ್ಯಯಾ ಶಕ್ಯ ಅಹಮೇವಂ ವಿಧೋರ್ಜುನ ।
ಜ್ಞಾತುಂ ದ್ರಷ್ಟುಂ ಚ ತತ್ತ್ವೇನ ಪ್ರವೇಷ್ಟುಂ ಚ ಪರಂತಪ ।।೫೪।।

ಆದರೆ, ಈ ಪ್ರಕಾರ ವಿಶ್ವರೂಪನಾದ ನನ್ನನ್ನು, ಅರ್ಜುನ, ಅನನ್ಯವಾದ ಭಕ್ತಿಯಿಂದ ಮಾತ್ರ ತಿಳಿಯುವುದಕ್ಕೂ ತತ್ತ್ವತಃ - ಇದ್ದದ್ದನ್ನು ಇದ್ದಹಾಗೆ - ಸಾಕ್ಷಾತ್ಕರಿಸಿಕೊಳ್ಳುವುದಕ್ಕೂ ಕಡೆಗೆ ನನ್ನಲ್ಲಿ ಸೇರಿಕೊಳ್ಳುವುದಕ್ಕೂ ಸಾಧ್ಯವಾಗುವುದು.

ಮತ್ಕರ್ಮಕೃನ್ಮತ್ ಪರಮೋ ಮದ್ಭಕ್ತಃ ಸಂಗವರ್ಜಿತಃ ।
ನಿರ್ವೈರಃ ಸರ್ವಭೂತೇಷು ಯಃ ಸ ಮಾಮೇತಿ ಪಾಂಡವ ।।೫೪।।

ಎಲೈ ಪಾಂಡವ, ಪರಮೇಶ್ವರನಾದ ನನ್ನ ಕರ್ಮಗಳಿವು ಎಂದು ಯಾವನು ಕರ್ಮಗಳನ್ನಾಚರಿಸುತ್ತ, ನಾನೇ ಪರಮಗತಿ ಎಂದು ನಂಬಿ, ನನ್ನ ಭಕ್ತನಾಗಿ ಧನಪುತ್ರಾದಿಗಳಲ್ಲಿ ಮಮತೆಯನ್ನು ತ್ಯಜಿಸಿ, ಸರ್ವಭೂತಗಳಲ್ಲಿಯೂ ವೈರವನ್ನು ತ್ಯಜಿಸುತ್ತಾನೋ ಅವನು ನನ್ನನ್ನು ಪಡೆಯುವನು.