ಚರ್ಚೆಪುಟ:ಭಗವದ್ಗೀತಾ ತಾತ್ಪರ್ಯ
ಭಗವದ್ಗೀತಾ ತಾತ್ಪರ್ಯ ಆರಂಭಿಸಿದ್ದೇನೆ. ನೋಡಿ. ಸಲಹೆಗಳಿದ್ದರೆ ಕೊಡಿ ; ಬಿ ಎಸ್ ಚಂದ್ರಶೇಖರ ಸಾಗರ. : Bschandrasgr ೧೭:೪೪, ೧೦ ಜೂನ್ ೨೦೧೨ (UTC)
- ಧನ್ಯವಾದಗಳು; Bschandrasgr ೧೦:೩೧, ೨೩ ಜೂನ್ ೨೦೧೨ (UTC); ಬಿ.ಎಸ್ ಚಂದ್ರಶೇಖರ ಸಾಗರ.
೭-೭-೨೦೧೨.
ಭಗವದ್ಗೀತಾ ತಾತ್ಪರ್ಯ
[ಬದಲಾಯಿಸಿ]ಭಗವದ್ಗೀತಾ ತಾತ್ಪರ್ಯ'ಲೇಖನ ಮುಕ್ತಾಯವಾಗಿದೆ . ೧೮ ನೆಯ ಅಧ್ಯಾಯ ಉದ್ದವಾಯಿತು. ಅನಿವಾರ್ಯ ೭೮ ಶ್ಲೋಕಗಳು. ಸಲಹೆಗಳಿದ್ದರೆ ಕೊಡಿ. :Bschandrasgr ೨೦:೨೯, ೫ ಜುಲೈ ೨೦೧೨ (UTC) ಬಿ.ಎಸ್.ಚಂದ್ರಶೇಖರ , ಸದಸ್ಯ:Bschandrasgr/ಪರಿಚಯ ಸಾಗರ ಶಿವಮೊಗ್ಗ ಜಿಲ್ಲೆ .
*ಪ್ರಾಪಂಚಿಕ ಧರ್ಮ
[ಬದಲಾಯಿಸಿ]- ಕೃಷ್ಣನು ಯುದ್ಧವನ್ನು ಮಾಡಲು ಪ್ರೇರಿಪಿಸುವುದು ನ್ಯಾಯವೇ? ಎಂಬ ಪ್ರಶ್ನೆ ಇದೆ :-
- ಕೃಷ್ಣನು ಸಂಧಾನಕ್ಕೆ ಕೌರವರ ಸಭೆಗೆ ಬಂದಾಗ ಯುದ್ಧದಿಂದ ಆಗುವ ಪರಿಣಾಮಗಳನ್ನು ವಿವರಿಸಿದ್ದಾನೆ. ಆದರೆ ಕೌರವನು ಶಾಂತಿ ಸಂಧಾನಕ್ಕೆ ಒಪ್ಪಲಿಲ್ಲ. ಯುದ್ಧವನ್ನು ಕೌರವನೇ ಆಯ್ಕೆ ಮಾಡಿಕೊಂಡಿದ್ದು.
- ೧.ಧರ್ಮ ಮತ್ತು ನ್ಯಾಯವನ್ನು ಎತ್ತಿ ಹಿಡಿಯಲು ತೀರಾ ಅಗತ್ಯವಾದರೆ ಯುದ್ಧ ಮಾಡುವುದು ಕ್ಷತ್ರಿಯರಿಗೆ ಕರ್ತವ್ಯ ಮತ್ತು ಧರ್ಮ; ಪಾಂಡವರು ರಾಜ್ಯಕ್ಕಿಂತ ನ್ಯಾಯಕ್ಕಾಗಿ ಯುದ್ಧ ಮಾಡುತ್ತಿದ್ದಾರೆ. ಐದು ಗ್ರಾಮವನ್ನಾದರೂ ಕೊಡು ಎಂದು ಕೇಳಿದರೂ ಕೊಡಲು ಕೌರವನು ಒಪ್ಪಲಿಲ್ಲ. ಹಾಗಾಗಿ ಯುದ್ಧ ಅನಿವಾರ್ಯವಾಯಿತು.- ಇದನ್ನು ಸೇರಿಸಿದೆ ; Bschandrasgr ೦೮:೫೧, ೨೮ ಜನವರಿ ೨೦೧೩ (UTC) ಬಿ.ಎಸ್ ಚಂದ್ರಶೇಖರ.ಸಾಗರ.-ಸದಸ್ಯ:Bschandrasgr/ಪರಿಚಯಹೆಚ್ಚಿನ ವಿವರಕ್ಕೆ.
ಜಾತಿ ವ್ಯವಸ್ಥೆ ಪ್ರತಿಪಾದಿಸುವ ಭಗವದ್ಗೀತೆ
[ಬದಲಾಯಿಸಿ]- (ಪ್ರೊ.ಕೆ.ಎಸ್. ಭಗವಾನ್,ಮೈಸೂರು)
- (Wed, 24/12/2014 ಪ್ರಜಾವಾಣಿ)
- ಕೇಂದ್ರ ಸರ್ಕಾರದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ‘ಭಗವದ್ಗೀತೆ’ ಭಾರತದ ರಾಷ್ಟ್ರೀಯ ಧರ್ಮಗ್ರಂಥವಾಗಬೇಕು ಎಂದು ಹೇಳಿದ್ದರಿಂದ ಚರ್ಚೆ ಶುರುವಾಗಿದೆ. ಸಂಸತ್ತಿನಲ್ಲಿ ಆಡಳಿತೇತರ ಪಕ್ಷಗಳಿಗೆ ಸೇರಿದ ಕೆಲವು ಸಂಸದರು ಈ ಹೇಳಿಕೆಯನ್ನು ಖಂಡಿಸಿದ್ದಾರೆ. ಮಾಧ್ಯಮಗಳಲ್ಲಿ ಚರ್ಚೆ ನಡೆಯುತ್ತಿದೆ. ಆದರೆ ಗೀತೆಯಲ್ಲಿ ಏನಿದೆ? ಅದು ಇರುವುದು ಯಾರ ಪರ ಅಥವಾ ವಿರುದ್ಧ? ಎಂಬುದರ ಕಡೆ ಯಾರೂ ಗಮನ ಹರಿಸಿಲ್ಲ.
- ಕ್ರಾಂತಿಕಾರಕ ಬುದ್ಧಧಮ್ಮ ಉಚ್ಛ್ರಾಯ ಸ್ಥಿತಿಗೇರಿ ಆ ಹೊತ್ತಿಗೆ ಇಳಿಮುಖವಾಗುತ್ತಿತ್ತು. ಬುದ್ಧ ಸೈದ್ಧಾಂತಿಕವಾಗಿ ಜಾತಿ ವ್ಯವಸ್ಥೆಯನ್ನು ಸಂಪೂರ್ಣವಾಗಿ ತಿರಸ್ಕರಿಸಿದ. ಇದನ್ನು ಸಹಿಸದ ವೈದಿಕ ಮತಾಂಧತೆ ಸಂಘವನ್ನು ನಾಶ ಮಾಡಲು ಸನ್ನಾಹ ನಡೆಸುತ್ತಿತ್ತು. ಪ್ರತಿ ಕ್ರಾಂತಿಗೆ ಪ್ರಣಾಳಿಕೆಯಾಗಿ ಭಗವದ್ಗೀತೆ ಸೃಷ್ಟಿಯಾಯಿತು. ಇದಕ್ಕೆ ಪುರಾವೆಯಾಗಿ ನಿರ್ವಾಣ ಪದ ಗೀತೆಯಲ್ಲಿ ಪದೇ ಪದೇ (೨.೭೨ ಮತ್ತು ೫.೨೪–-೨೬.) ಬಳಕೆಯಾಗಿರುವುದನ್ನು ಕಾಣಬಹುದು. ಗೀತೆಗಿಂತ ಹಿಂದಿನ ಬ್ರಾಹ್ಮಣ ಮತ ಗ್ರಂಥಗಳಲ್ಲಿ ನಿರ್ವಾಣ ಶಬ್ದ ಪ್ರಯೋಗವಾಗಿರುವುದು ಕಾಣುವುದಿಲ್ಲ. (ಈ ವಿಷಯವಾಗಿ ಬಲ್ಲವರು ತಿಳಿಸಿದರೆ ಕೃತಜ್ಞತೆಯಿಂದ ಈ ಅಭಿಪ್ರಾಯ ತಿದ್ದಿಕೊಳ್ಳುತ್ತೇನೆ.) ಬುದ್ಧಧಮ್ಮದಲ್ಲಿ ‘ನಿರ್ವಾಣ’, ಆಧ್ಯಾತ್ಮಿಕ ಅನುಭವದ ಅತ್ಯುನ್ನತ ಸ್ಥಿತಿ ಎಂಬುದು ಗೊತ್ತಿರುವ ವಿಚಾರ.
- ಭಗವದ್ಗೀತೆ ಹೇಳುವವನು ಕೃಷ್ಣ, ಕೇಳುವವನು ಅರ್ಜುನ, ಬರೆಯುವವನು ವ್ಯಾಸ. - ಮೂವರೂ ಅಬ್ರಾಹ್ಮಣರು. ಕೃಷ್ಣ ಗೊಲ್ಲ (ಯಾದವ), ಅರ್ಜುನ ಕ್ಷತ್ರಿಯ, ವ್ಯಾಸ ಬೆಸ್ತ (ಮೀನುಗಾರ್ತಿಯ ಮಗ).
- ಮೇಲುನೋಟಕ್ಕೆ ಗೀತೆ ವೈದಿಕರ ಕೃತಿಯಲ್ಲ ಎಂಬ ಭ್ರಮೆ ಉಂಟಾಗುವುದು ಸಹಜ. ಆದರೆ ಗೀತೆಯಲ್ಲಿ ತುಂಬಿರುವುದೆಲ್ಲ ಬ್ರಾಹ್ಮಣ ಮತವೇ ಹೊರತು ಬೇರಾವುದೂ ಅಲ್ಲ. ಭಗವದ್ಗೀತೆ ಜಾತಿ ವ್ಯವಸ್ಥೆಯನ್ನು ಏಕೆ ಪ್ರಬಲವಾಗಿ ಪ್ರತಿಪಾದಿಸುತ್ತದೆ ಎಂದರೆ ಅದಕ್ಕೆ ಐತಿಹಾಸಿಕ ಮತ್ತು ಸಾಮಾಜಿಕ ಕಾರಣಗಳಿವೆ. ಭಗವದ್ಗೀತೆ ಪ್ರಾರಂಭವಾಗುವುದೇ ಕುಲಕ್ಷಯ (೧.೩೮–-೪೦ ಜಾತಿ ನಾಶ), ವರ್ಣಸಂಕರ (೧.೪೧–-೪೪ ಜಾತಿ ಬೆರಕೆ)ಗಳನ್ನು ತಡೆಗಟ್ಟುವುದಕ್ಕಾಗಿ. ಕುಲಕ್ಷಯ ಮತ್ತು ವರ್ಣಸಂಕರಗಳನ್ನು ತಡೆಯಬೇಕೆಂದು ಅರ್ಜುನ ‘ನಾನು ಯುದ್ಧ ಮಾಡುವುದಿಲ್ಲ’ ಎಂದು ಕೃಷ್ಣನಿಗೆ ಹೇಳಿ ಬಿಲ್ಲುಬಾಣಗಳನ್ನು ರಥದಲ್ಲಿ ಹಾಕಿ ಕುಳಿತುಕೊಳ್ಳುತ್ತಾನೆ.
- ಗೀತೆ ಬಹಳ ಪ್ರಖ್ಯಾತವಾಗಲು ಮಹಾತ್ಮ ಗಾಂಧೀಜಿ ಅವರ ಪ್ರಚಾರ ಕಾರಣ ಎನ್ನಬೇಕು. ‘ಕರ್ಮ ಮಾಡುವುದಕ್ಕೆ ನಿನಗೆ ಅಧಿಕಾರ, ಫಲಾಪೇಕ್ಷೆ ಇಲ್ಲದೆ ಕೆಲಸ ಮಾಡು ’ಎಂದು ಕೃಷ್ಣ ಹೇಳುತ್ತಾನೆ. ಆಳು ಜೀತ ಮಾಡುತ್ತಾನೆ, ಲಾಭವೆಲ್ಲ ಯಜಮಾನನಿಗೇ ಹೋಗುತ್ತದೆ. ದುಡಿಮೆಗಾರನಿಗೆ ದುಡಿದದ್ದೇ ಲಾಭ! ಹೀಗಾಗಿ ಕೃಷ್ಣನದು ಜೀತಗಾರಿಕೆ ಮುಂದುವರಿಸುವ ಮಾತು. ಗೀತೆ ಶ್ರಮಜೀವಿಗಳನ್ನು ತುಳಿಯುವ ಸಂದೇಶ ಸಾರುತ್ತಿದೆ.
- ಲೋಕದಲ್ಲಿರುವ ಅನ್ಯಾಯ, ಅಸಮಾನತೆ, ಸುಲಿಗೆ, ಶೋಷಣೆ, ದಾಸ್ಯ, ಪಾರತಂತ್ರ್ಯ, ದಬ್ಬಾಳಿಕೆ, ಬಡತನ, ಮೋಸ, ಮೇಲು ಕೀಳು, ಜಾತಿ ವ್ಯವಸ್ಥೆ, ಅಸ್ಪೃಶ್ಯತೆ ಮುಂತಾದವುಗಳನ್ನೆಲ್ಲ ಹೋಗಲಾಡಿಸುವುದು ಹೇಗೆ? ಇದಕ್ಕೆ ಗೀತೆಯಲ್ಲಿ ಉತ್ತರವಿಲ್ಲ.
- ‘ಮನುಸ್ಮೃತಿ’ಗಿಂತ (ಕ್ರಿ.ಪೂ.೧೮೫) ಭಗವದ್ಗೀತೆ (ಕ್ರಿ.ಶ. ಮೂರನೆಯ ಶತಮಾನ) ಹೆಚ್ಚು ಭಯಂಕರವಾದ ಗ್ರಂಥ. ಮನುಸ್ಮೃತಿ ಒರಟಾಯಿತು ಎಂದೇನೋ ಮೃದು ಮಧುರವಾದ ಸಂಗೀತಮಯ ಕಾವ್ಯಭಾಷೆಯಲ್ಲಿ ಭಗವದ್ಗೀತೆಯನ್ನು ಬರೆಯಲಾಗಿದೆ. ಓದುಗರನ್ನು ಆಕರ್ಷಿಸಲು ಮಾಡಿರುವ ಉಪಾಯ ಇದು. ಗೀತೆಯದು ಬಹಳ ಸುಂದರವಾದ ಭಾಷೆ. ಆದರೆ ಅದೆಲ್ಲ ಅಪಾಯಕಾರಿಯಾಗಿರುವುದನ್ನು ಅರಿಯಬೇಕಾಗಿದೆ.
- ಭಗವದ್ಗೀತೆಯಲ್ಲಿರುವ ‘ವಿಶ್ವರೂಪ ದರ್ಶನ’ದಲ್ಲಿ ನೀಡಿರುವ ವಿವರಗಳು ಭಾರತಕ್ಕೆ ಸೀಮಿತಗೊಂಡಿವೆ. ವಿದೇಶಗಳ ಹೆಸರುಗಳು ಇಲ್ಲಿ ಬಂದಿಲ್ಲ. ಆದ್ದರಿಂದ ಇದನ್ನು ವಿಶ್ವರೂಪ ದರ್ಶನ ಎನ್ನದೆ ‘ಸಂಕ್ಷಿಪ್ತ ಭಾರತ ದರ್ಶನ’ ಎಂದು ಕರೆಯುವುದು ಸೂಕ್ತ. ಗೀತಕಾರನ ಭೌಗೋಳಿಕ ಜ್ಞಾನವೆಲ್ಲ ಕೇವಲ ಭರತಖಂಡಕ್ಕೆ ಸೀಮಿತವಾಗಿದೆ. ಗೀತೆ ರಚನೆಯಾಗುವುದಕ್ಕಿಂತ ಮುನ್ನವೇ ಚಾಲ್ತಿಯಲ್ಲಿ ಇದ್ದ ಎಲ್ಲಾ ತತ್ವಶಾಖೆಗಳ ಪುನರುಚ್ಚಾರ ಗೀತೆಯಲ್ಲಿ ಬಂದಿದೆ. ಗೀತೆಯ ಒಂದೊಂದು ಅಧ್ಯಾಯದಲ್ಲಿ ಒಂದೊಂದು ತತ್ವವನ್ನು ಹೇಳಲಾಗಿದೆ. ಒಂದು ಅಧ್ಯಾಯಕ್ಕೂ ಇನ್ನೊಂದು ಅಧ್ಯಾಯಕ್ಕೂ ಸಂಬಂಧವಿಲ್ಲ. ಭಗವದ್ಗೀತೆಯಲ್ಲಿ ಹೊಸ ಬೆಳಕಿಲ್ಲ. ಅದರಲ್ಲಿ ಜಾತಿವ್ಯವಸ್ಥೆಯ ಸಮರ್ಥನೆ ತುಂಬಿದೆ. ಗೀತೆ ಹಿಂದೂ ದರ್ಶನಗಳ ಒಂದು ಕೋಷ್ಟಕ ಅಥವಾ ಅಡಕ ಅಷ್ಟೆ.
- ಕೃಷ್ಣ ತಪಸ್ಸು ಮಾಡಿ ನಿಜವಾದ ಆಧ್ಯಾತ್ಮ ಜ್ಞಾನ ಗಳಿಸಿದ್ದ ಎಂಬುದಕ್ಕೆ ಗೀತೆಯಲ್ಲಿ ವಿವರಗಳಿಲ್ಲ. ಬುದ್ಧ ತನ್ನ ‘ಸುತ್ತ’ಗಳಲ್ಲಿ, ಪರಮಹಂಸರ ‘ಶ್ರೀರಾಮಕೃಷ್ಣ ವಚನವೇದ’ದಲ್ಲಿ, ವಿವೇಕಾನಂದರು ತಮ್ಮ ಬರಹಗಳಲ್ಲಿ ಸಾಕ್ಷಾತ್ಕಾರ ಪಡೆಯಲು ನಡೆಸಿದ ಶ್ರಮಗಳನ್ನು ವಿವರಿಸಿದ್ದಾರೆ. ಕೃಷ್ಣನಿಗೆ ಇಂಥ ಅನುಭವ ಆಗಿಲ್ಲ. ಅವನು ಕಿರಿಯವನಾಗಿದ್ದಾಗ ಗೋಪಿಕೆಯರ ಸಂಗಡದಲ್ಲಿದ್ದ. ತಾರುಣ್ಯದಲ್ಲಿ ಅಷ್ಟ ಮಹಿಷಿಯರು ಮತ್ತು ಹದಿನಾರು ಸಾವಿರ ಹೆಂಡತಿಯರ ಜೊತೆಗಿದ್ದ. ಕೊನೆಗೆ ಕುರುಕ್ಷೇತ್ರದಲ್ಲಿ ಅರ್ಜುನನ ಸಾರಥಿಯಾಗಿ ರಥ ನಡೆಸಿದ. ಇಂಥವನು ಹೇಗೆ ಅಧ್ಯಾತ್ಮ ಜೀವಿಯಾಗುತ್ತಾನೆ? ಅಧ್ಯಾತ್ಮ ಜೀವನಕ್ಕೆ ಪರಿಶುದ್ಧತೆ, ಕಾಮನಿಗ್ರಹ ಅತ್ಯಂತ ಅವಶ್ಯಕ. ಇದಾವುದೂ ಇಲ್ಲದ ಕೃಷ್ಣ ಜ್ಞಾನಿ ಅಲ್ಲ. ದೇವರಾಗಲು ಕೃಷ್ಣನಿಗೆ ಯಾವ ಅರ್ಹತೆಯೂ ಇಲ್ಲ. ಏಕೆಂದರೆ ಕೃಷ್ಣನಿಗೆ ಪಾವಿತ್ರ್ಯವಿಲ್ಲ, ಇಂದ್ರಿಯ ನಿಗ್ರಹ ಇಲ್ಲ, ಪರಮ ಜ್ಞಾನವಿಲ್ಲ.
- ಸ್ವಧರ್ಮವನ್ನು ವ್ಯಾಖ್ಯಾನಕಾರರು ಮನಸೋ ಇಚ್ಛೆ ವಿವರಿಸಿದ್ದಾರೆ. ಈ ಪದವನ್ನು ಗೀತೆಯ ಸಂದರ್ಭದಲ್ಲೇ ಅರ್ಥ ಮಾಡಿಕೊಳ್ಳುವುದು ಒಳ್ಳೆಯದು. ಗೀತೆಯ ಚೌಕಟ್ಟಿನಲ್ಲಿ ಸ್ವಧರ್ಮ ಎಂದರೆ ಜಾತಿ ಎಂದೇ ಅರ್ಥ ನಿರ್ಣಯವಾಗುತ್ತದೆ.
- ‘ಯುದ್ಧವು ಕ್ಷತ್ರಿಯನಿಗೆ ಸ್ವಧರ್ಮ ಎಂದು ತಿಳಿದ ನಂತರವೂ ನೀನು ಯುದ್ಧ ಮಾಡದಿದ್ದರೆ ಸ್ವಧರ್ಮವನ್ನೂ ಕೀರ್ತಿಯನ್ನೂ ಹಾಳು ಮಾಡಿಕೊಂಡು ಪಾಪವನ್ನು ಪಡೆಯುತ್ತೀಯೆ. ಆದ್ದರಿಂದ ನೀನು ಯುದ್ಧ ಮಾಡು ’ಎಂದು ಅರ್ಜುನನಿಗೆ ಕೃಷ್ಣ ಪುಸಲಾಯಿಸುತ್ತಾನೆ. ಹಾಗಾಗಿ ಸ್ವಧರ್ಮ ಎಂದರೆ ಕ್ಷತ್ರಿಯ ಜಾತಿ, ಮತ್ತು ಪ್ರತಿಯೊಬ್ಬನ ಜಾತಿ ಎಂದು ಅರ್ಥ ಬರುತ್ತದೆ. ಕ್ಷತ್ರಿಯ ಧರ್ಮದ ಪ್ರಕಾರ ಕೊಲ್ಲಲು ಪ್ರೇರೇಪಿಸುವ ಕೃಷ್ಣನನ್ನು ದೇವರು ಮಾಡಲಾಗಿದೆ. ಅಪರಾಧ ಕಾನೂನು ಸಂಹಿತೆ ದೃಷ್ಟಿಯಲ್ಲಿ ದುಷ್ಟ ಕೃತ್ಯ ಪ್ರೇರಕ ಕೃಷ್ಣ ತಪ್ಪಿತಸ್ಥ, ಅಪರಾಧಿ. ಇಂಥ ‘ಭಗವದ್ಗೀತೆ’ಯನ್ನು ರಾಷ್ಟ್ರದ ಧರ್ಮ ಗ್ರಂಥ ಎಂದು ಕೇಂದ್ರ ಸರ್ಕಾರ ಘೋಷಿಸಿದರೆ ಹತ್ಯೆ ಮಾಡುವ ಮನಸ್ಸುಳ್ಳ ಪಕ್ಷ ಮತ್ತು ಸಂಘಟನೆಗಳಿಗೆ ಹಾಗೂ ಜನರಿಗೆ ರಾಜ ರಹದಾರಿ ನೀಡಿದಂತಾಗುತ್ತದೆ. ಯಾವ ದೃಷ್ಟಿಯಿಂದ ನೋಡಿದರೂ ಭಗವದ್ಗೀತೆ ರಾಷ್ಟ್ರೀಯ ಧರ್ಮ ಗ್ರಂಥವಾಗಲು ಲಾಯಕ್ಕಾಗಿಲ್ಲ.
- ವಿಜ್ಞಾನ ಚಂದ್ರಲೋಕ, ಮಂಗಳ ಲೋಕಗಳಿಗೆ ಹೋಗಿ ಬಂದಿದೆ. ಧರ್ಮ ಗ್ರಂಥಗಳು ಹೇಳುವ ಸ್ವರ್ಗ, ಕೈಲಾಸ, ವೈಕುಂಠ ಅಲ್ಲಿ ಕಂಡು ಬಂದಿಲ್ಲ. ಮುಕ್ತಿ, ಸದ್ಗತಿ ಮುಂತಾದ ಮಾತುಗಳನ್ನು ಎಲ್ಲಾ ಮತಗ್ರಂಥಗಳು ಹೇಳುತ್ತವೆ. ಗೀತೆಯೂ ಅದನ್ನೇ ಉಚ್ಚರಿಸುತ್ತದೆ. ವಾಸ್ತವವಾಗಿ ಇರುವುದು ಇದೊಂದೇ ಲೋಕ; ಇಲ್ಲಿ ನಾವೆಲ್ಲರೂ ಸುಖ, ಶಾಂತಿ, ಸಾಮರಸ್ಯದಿಂದ ಬದುಕುವುದನ್ನು ರೂಢಿಸಿಕೊಳ್ಳಬೇಕು ಎಂದು ಭಾವಿಸುವುದು ವಿವೇಕಯುತ.
- ಕೃಷ್ಣ ಚಾತುರ್ವರ್ಣ ವ್ಯವಸ್ಥೆಯನ್ನು ಒಪ್ಪಿಕೊಂಡಿದ್ದರಿಂದ ಅವನನ್ನು ದೇವರನ್ನಾಗಿ ಮಾಡಲಾಗಿದೆ. ಇಲ್ಲದಿದ್ದರೆ ಅವನನ್ನೂ ಜಾತಿಯನ್ನು ನಿರಾಕರಿಸಿದ ಬುದ್ಧನನ್ನು ತಿರಸ್ಕರಿಸಿದಂತೆ ತಿರಸ್ಕರಿಸುತ್ತಿದ್ದರು. ಮನುಷ್ಯರೆಲ್ಲ ಒಂದೇ ಎಂದು ಬೋಧಿಸುವ ಧರ್ಮಗ್ರಂಥ ‘ಧಮ್ಮಪದ ’ ಒಂದೇ.
- ಭಗವದ್ಗೀತೆ ಪರಿಪೂರ್ಣ ಗ್ರಂಥ ಅಲ್ಲ. ಭಗವದ್ಗೀತೆ ಸಂಪ್ರದಾಯವನ್ನು ಸ್ಥಿರೀಕರಿಸುವ ಪ್ರಗತಿ ವಿರೋಧಿ ಗ್ರಂಥ. ಭಗವದ್ಗೀತೆ ಶೇ. ೯೮ ಮಂದಿಗೆ ಸಂಪೂರ್ಣ ಆಘಾತಕಾರಿಯಾಗಿದೆ. ಉಳಿದ ಶೇ. ೨ರಷ್ಟು ಜನರಿಗೆ ಮಾತ್ರ ಅನುಕೂಲವಾಗಿ-ರುವುದು. ಇವರು ಪುಣ್ಯಯೋನಿಜರಾದುದರಿಂದ ಏನು ಕೇಡು ಮಾಡಿದರೂ ಅದು ತಪ್ಪಲ್ಲ! ಪಾಪಯೋನಿಜರು ಎಷ್ಟೇ ಒಳ್ಳೆಯ ಕೆಲಸ ಮಾಡಿದರೂ ಅವರಿಗೆ ಏಳಿಗೆ ಇಲ್ಲ! ಎಂಥ ಭಯಂಕರ ತತ್ವಜ್ಞಾನ ಕೃಷ್ಣನದು! ಇಂಥ ಭಗವದ್ಗೀತೆ ಹೇಗೆ ಪವಿತ್ರ?
ಜಾತಿ ವ್ಯವಸ್ಥೆ- ಶ್ರೀಕೃಷ್ಣ
[ಬದಲಾಯಿಸಿ]ಕೆ.ಎಸ್. ಭಗವಾನರ ಭಗವದ್ಗೀತೆಯ ಬಗೆಗಿನ ವ್ಯಾಖ್ಯಾನ (ಸಂಗತ, ಡಿ. 24) ಓದಿ ಬೇಸರವಾಯಿತು. ಜಾತಿ ವ್ಯವಸ್ಥೆಗೂ ಶ್ರೀಕೃಷ್ಣನಿಗೂ ಎಲ್ಲಿಯ ಸಂಬಂಧ? ಜಗದ್‌ಯಂತ್ರ ನಡೆಯಬೇಕಾದರೆ ಪ್ರತಿ ಜೀವಿಯೂ ತನ್ನ ತನ್ನ ಪಾಲಿನ ಕೆಲಸಗಳನ್ನು ನಿರ್ವಹಿಸಬೇಕು. ಈ ಜ್ಞಾನವೇ ಭಗವದ್ಗೀತೆಯಲ್ಲಿರುವುದು. ಕೃಷ್ಣ, ರಥ ನಡೆಸುವುದೂ, ಗೊಲ್ಲನಾಗಿರುವುದೂ, ಅದರ ಹಿಂದಿನ ಸಾರ, ಅವರ ಜೀವನದ ದರ್ಶನವೇ ಭಗವಾನರಿಗೆ ಆಗಿಲ್ಲ ಎಂದು ವಿನಮ್ರವಾಗಿ ಹೇಳಬಯಸುತ್ತೇನೆ.
ಪೂರ್ವಗ್ರಹವಿಲ್ಲದೇ ಭಗವದ್ಗೀತೆಯನ್ನು ಅಧ್ಯಯನ ಮಾಡಿದರೆ, ಈ ರೀತಿಯ ಅನಿಸಿಕೆಗಳನ್ನು ಮೀರಿದ ವಿಶಾಲ ಅರ್ಥಗಳನ್ನೂ, ಅರಿವನ್ನೂ ಪಡೆಯಬಹುದು. ಸ್ವಾಮಿ ಚಿನ್ಮಯಾನಂದರು ಗೀತಾಜ್ಞಾನ ಯಜ್ಞಗಳನ್ನು ಮಾಡಿ, ಅದರೊಳಗಿನ ಅಮೃತವನ್ನು ಎಲ್ಲೆಡೆ ಹರಡಿದ್ದಾರೆ. ಶ್ರೀಕೃಷ್ಣ ಬೋಧಿಸಿದ ಗೀತೆಗೆ ಜಾತೀಯತೆ, ದಾಸ್ಯ ಹೀಗೆ ಏನೇನೋ ಸಲ್ಲದ ಸಂಗತಿಗಳ ಬಣ್ಣ ಮೆತ್ತಬೇಡಿ. ಬುದ್ಧನ ‘ದಮ್ಮಪದ’ವೂ ನಮಗೆ ಪವಿತ್ರ. ಕ್ರಿಸ್ತನ ಪ್ರೇಮವಾಣಿಯೂ ಪವಿತ್ರ. ಯಾವುದೇ ಧರ್ಮದ ಒಳ್ಳೆಯ ಮಾತುಗಳು ನಮಗೆ ಪ್ರಿಯ.(ಲಕ್ಷ್ಮೀ ಚಂದ್ರಮೋಹನ್‌ಬೆಂಗಳೂರು-Fri, 09/01/2015 ಪ್ರಜಾವಾಣಿ)-
ಸಮತ್ವ ಸಂಬಂಧ ಸಾರುವ ಗೀತೆ
[ಬದಲಾಯಿಸಿ]- ಸಿ.ಪಿ.ಕೆ.ಮೈಸೂರು
- (Tue,20/01/2015-ಪ್ರಜಾವಾಣಿ)
- ಭಗವದ್ಗೀತೆ ಭರತಖಂಡದ (ಏಕೈಕ) ಧರ್ಮಗ್ರಂಥವಾಗಬೇಕೆಂಬ ಹೇಳಿಕೆಯಲ್ಲಿ ತಪ್ಪೇನಿದೆ? ಹಾಗೆಂದರೆ, ಕುರಾನ್, ಬೈಬಲ್ ಮುಂತಾದವುಗಳಿಗೂ ಆ ಸ್ಥಾನ ಸಿಗಬೇಕೆಂಬ ವಾದ ಏಳಬಹುದು, ನಿಜ. ಆದರೆ ನಾವು ನೆನಪಿಡಬೇಕು: ಅವುಗಳಿಗೆ ಬೇರೆ ಬೇರೆ ದೇಶಗಳಿವೆ, ಗೀತೆಗಿಲ್ಲ! (ಅನ್ಯದೇಶಗಳಿಗೂ ಗೀತಾ ವಿಚಾರಗಳು ಅನುಸರಣೀಯ).
- ಆದ್ದರಿಂದ, ಗೀತೆ ಭಾರತಕ್ಕೆ ಅತ್ಯಗತ್ಯವಾದ, ಶ್ರೇಯಸ್ಕರವಾದ ಗ್ರಂಥ; ಹಿಂದೂಧರ್ಮದ–ವೈದಿಕ ಧರ್ಮವಲ್ಲ– ಪ್ರಮಾಣಗ್ರಂಥ. ‘ಸಮಸ್ತ ವೇದಾರ್ಥ ಸಾರಸಂಗ್ರಹಭೂತಂ’ ಎಂಬುದು ಗೀತೆಯನ್ನು ಕುರಿತ ಶಂಕರಭಗವತ್ಪಾದರ ಉಕ್ತಿ; ಅದಕ್ಕೇ ಪೂರಕವಾಗಿ ಸ್ವಾಮಿ ವಿವೇಕಾನಂದರು ಹೇಳುತ್ತಾರೆ: ‘ಉಪನಿಷತ್ತುಗಳ ವ್ಯಾಖ್ಯಾನ ಗೀತೆ; ಉಪನಿಷತ್ತುಗಳು ಭಾರತದ ಬೈಬಲ್’.
- ಗೀತೆಯ ಬಗೆಗಿನ ಕೆಲವು ಆರೋಪಗಳನ್ನು ಗಮನಿಸಬಹುದು: ಅದು ಯುದ್ಧವನ್ನು– ಹಿಂಸೆಯನ್ನು– ಬೋಧಿಸುತ್ತದೆ ಎಂಬುದೊಂದು. ವಾಸ್ತವವಾಗಿ, ಯುದ್ಧ ವಿರೋಧಿ ನೆಲೆಯಲ್ಲೆ ಗೀತೆಯ ಅಸ್ತಿತ್ವ; ಪ್ರಥಮಾಧ್ಯಾಯವನ್ನು ಬಿಟ್ಟರೆ ಗೀತೆಯಲ್ಲಿ ಮತ್ತೆಲ್ಲಿಯೂ ಯುದ್ಧ ಪ್ರಸಕ್ತಿಯಿಲ್ಲ! ಗೀತಾ ಪ್ರಾರಂಭವೆ ಕುತೂಹಲಕರ: ‘ಧರ್ಮಕ್ಷೇತ್ರೇ ಕುರುಕ್ಷೇತ್ರೇ...’ ಮಹಾಭಾರತ ಮಧ್ಯದಲ್ಲಿ, ‘ಧರ್ಮಕ್ಷೇತ್ರ’ವೂ ಆದ ‘ಕುರು’ಕ್ಷೇತ್ರದಲ್ಲಿ ಕರ್ತವ್ಯಬೋಧೆ ಮಾಡುವುದು ಗೀತೆಯ ಮುಖ್ಯೋದ್ದೇಶ (‘ಗೀತಾ ಸುಗೀತಾ ಕರ್ತವ್ಯಾ’). ಕುರುಕ್ಷೇತ್ರವೊಂದು ಪ್ರತಿಮೆ; ಯುದ್ಧ, ಜೀವನಸಂಗ್ರಾಮದ ಸಂಕೇತ.
- ರಣರಂಗ ಹೊರಗಿನದು ಮಾತ್ರವಲ್ಲ, ಒಳಗಿನದೂ ಹೌದು: ಅಂತರಂಗ ವೈರಿಗಳನ್ನು ಇಂದ್ರಿಯಗಳನ್ನು ನಿರ್ದಯವಾಗಿ ದಮನ ಮಾಡಬೇಕು ಎಂತಲೇ, ‘ಯುದ್ಧಾಯ ಯುಜ್ಯಸ್ವ’ (ಯುದ್ಧಕ್ಕೆ ಸಿದ್ಧನಾಗು), ‘ಜಹಿಶತ್ರುಂ’ (ಶತ್ರುವನ್ನು ಕೊಲ್ಲು) ಎನ್ನುತ್ತಾನೆ ಕೃಷ್ಣ, ಅರ್ಜುನನಿಗೆ. ಮತ್ತೊಂದು ಮುಖ್ಯಾಂಶ: ‘ಕೌರವರನ್ನು ನಾನಾಗಲೆ ಕೊಂದಿದ್ದೇನೆ; ನೀನು ನೆಪ ಮಾತ್ರವಾಗಿರು’ (ನಿಮಿತ್ತ ಮಾತ್ರಂ ಭವ ಸವ್ಯಸಾಚಿನ್) ಎಂಬುದೂ ಕೃಷ್ಣನ ಮಾತು. ಎಂದಮೇಲೆ, ಕೊಲೆಯ ಪ್ರಶ್ನೆ ಎಲ್ಲಿ ಬಂತು?
- ತನಗೆ ಪ್ರಿಯರಾದವರ ಬಗೆಗೆ ಹೇಳುವಾಗ ಕೃಷ್ಣನ ಬಾಯಲ್ಲಿ ಬರುತ್ತದೆ, ಈ ಕಲ್ಯಾಣ ಗುಣಗಳ ಪಟ್ಟಿ:
- ಅದ್ವೇಷ್ಟಾ ಸರ್ವಭೂತಾನಾಂ ಮೈತ್ರಃ ಕರುಣ ಏವ ಚ
- ನಿರ್ಮಮೋ ನಿರಹಂಕಾರಃ ಸಮದುಃಖ ಸುಖಃ ಕ್ಷಮೀ...(12
- 13)
- (ಯಾವ ಜೀವಿಗಳನ್ನೂ ದ್ವೇಷಿಸದವನು, ಮಿತ್ರಭಾವದಿಂದ ಕೂಡಿರುವವನು, ಕರುಣೆಯುಳ್ಳವನು, ಮಮಕಾರ ಅಹಂಕಾರಗಳಿಲ್ಲದವನು, ಸುಖದುಃಖಗಳಲ್ಲಿ ಸಮಾನನಾಗಿರುವವನು, ಕ್ಷಮಾಶೀಲನು....). ಈ ಗುಣಗಳು ಯಾರಿಗೆ ಬೇಡ? ಎಲ್ಲ ಧರ್ಮಗಳ ತಿರುಳೂ ಇದೇ ತಾನೆ?
- ಇನ್ನು, ವರ್ಣವ್ಯವಸ್ಥೆಯನ್ನು ಕುರಿತ ಗೀತೆಯ ವಿಚಾರಗಳು ಬಹುಮುಖ್ಯ. ಗೀತೆ ಜಾತಿ ವ್ಯವಸ್ಥೆಯನ್ನು ಸಮರ್ಥಿಸುತ್ತದೆ ಎಂಬುದು ದೊಡ್ಡ ಆರೋಪ.
- ನಿಜವೆ? ‘ವರ್ಣ’ ಬೇರೆ, ಈಗ ಹುಟ್ಟಿನಿಂದ ನಿರ್ಧರಿತವಾಗುವ ‘ಜಾತಿ’ ಬೇರೆ ಎಂಬುದನ್ನು ಲಕ್ಷಿಸಬೇಕು. ಗೀತೆಯ ಈ ಉಕ್ತಿ ಪ್ರಸಿದ್ಧ ಮತ್ತು ಬಹುಚರ್ಚಿತ: ‘ಚಾತುರ್ವರ್ಣ್ಯಂ ಮಯಾ ಸೃಷ್ಟಂ ಗುಣಕರ್ಮ ವಿಭಾಗಶಃ’ (ಗುಣ, ಕರ್ಮ–ವೃತ್ತಿ–ಗಳಿಗೆ ಅನುಗುಣವಾಗಿ ನಾನು ನಾಲ್ಕು ವರ್ಣಗಳನ್ನು ಸೃಜಿಸಿದೆ). ‘ಜಗದ್ಗುರು’ ಕೃಷ್ಣನ ‘ವರ್ಣ’ ವ್ಯವಸ್ಥೆ ಇಡೀ ಜಗತ್ತಿಗೆ ಅನ್ವಯಿಸುವಂಥದು; ಕೇವಲ ಭಾರತಕ್ಕಲ್ಲ ಎಂಬುದನ್ನು ಗಮನಿಸಬೇಕು.
- ಇಲ್ಲಿನ ನಾಲ್ಕು ‘ವರ್ಣ’ಗಳಿಗೆ ಸಂವಾದಿಯಾದ ನಾಲ್ಕು ಸಮುದಾಯಗಳು ಪ್ರಪಂಚದಲ್ಲಿ ಎಲ್ಲೆಡೆ ಉಂಟಲ್ಲವೆ? (ಹಾಗೆ ಕೃಷ್ಣನ ಏರ್ಪಾಟು ಭಾರತಕ್ಕೆ ಸೀಮಿತವಾಗಿದ್ದಲ್ಲಿ, ಅವನು, ಕುವೆಂಪು ಒಮ್ಮೆ ನನ್ನೊಡನೆ ಮಾತನಾಡುತ್ತ ಹೇಳಿದಂತೆ, ವಿಶ್ವಮಾನವನಾಗದೆ ಒಬ್ಬ ಕ್ಷುದ್ರ ಜಾತಿ ಮಾನವನಾಗುತ್ತಾನೆ. ವಸ್ತುತಃ ಅವನದು ‘ವಿಶ್ವರೂಪ!’ ಅಂತೂ ಜನ್ಮ ಮೂಲವಾದ ಜಾತಿಪದ್ಧತಿ ಗೀತೆಯ ಆಶಯಕ್ಕೆ ಹೊರಗು!
- ‘ಸ್ವಧರ್ಮೇ ನಿಧನಂ ಶ್ರೇಯಃ....’ ಎಂಬ ಗೀತೋಕ್ತಿಯಲ್ಲಿ ಬರುವ ‘ಸ್ವಧರ್ಮ’ ಎಂಬುದನ್ನು ‘ಜಾತಿ’ ಎಂದು ಹಲವರು ಅರ್ಥೈಸಿರುವುದು ಅನುಚಿತ. ‘ಸ್ವಧರ್ಮ’ ಎಂಬುದು ಆಯಾ ವ್ಯಕ್ತಿಯ ಮನೋಧರ್ಮಕ್ಕೆ, ಸಹಜ ಪ್ರವೃತ್ತಿಗೆ ಸಂಬಂಧಿಸಿದ್ದು. (ನಿದರ್ಶನಕ್ಕೆ, ಬರವಣಿಗೆ ಸಾಹಿತಿಯ ಸ್ವಧರ್ಮ. ಅದನ್ನವನು ಬಿಟ್ಟು, ತರಕಾರಿ ಮಾರಾಟಕ್ಕೆ ಹೊರಟರೆ, ಇತ್ತ ಬರವಣಿಗೆಯೂ ಹಾಳು, ಅತ್ತ ಮಾರಾಟವೂ ಅಧ್ವಾನ!).
- ‘ಕರ್ಮಣ್ಯೇವಾಧಿಕಾರಸ್ತೆ, ಮಾಫಲೇಷು ಕದಾಚನ’ (ಕರ್ಮದಲ್ಲಿ ನಿನಗೆ ಅಧಿಕಾರ ಎಂದರೆ ಕರ್ತವ್ಯ, ಫಲದಲ್ಲಲ್ಲ) ಎಂಬ ಗೀತಾಬೋಧೆಗೂ ವಿಪರೀತಾರ್ಥ ಕಲ್ಪಿಸಲಾಗಿದೆ. ವ್ಯಕ್ತಿ ನಿರ್ಲಿಪ್ತವಾಗಿ, ಸಮರ್ಪಕವಾಗಿ ಕರ್ಮವೆಸಗಿದರೆ ಫಲ ಸಿಕ್ಕಿಯೇ ಸಿಗುತ್ತದೆ; ಫಲವನ್ನು ದೃಷ್ಟಿಯಲ್ಲಿಟ್ಟುಕೊಂಡೆ ಕೆಲಸ ಮಾಡಿದರೆ, ಕೆಲಸವೂ ಕೆಡಬಹುದು, ಫಲವೂ ಸಿಗದಿರಬಹುದು! ‘ಸಮದರ್ಶನ’ (ಸಮರ ದರ್ಶನವಲ್ಲ!) ಗೀತೋಪದೇಶದ ಒಂದು ಮಹಾವೈಶಿಷ್ಟ್ಯ; ಪ್ರಜಾಪ್ರಭುತ್ವದ ಒಂದು ಪ್ರಶಸ್ತ ತತ್ತ್ವವಾದ ಸಮಾನತೆ ಇಲ್ಲಿ ಉಕ್ತವಾಗಿರುವುದು ಬಹು ಗಮನಾರ್ಹ:
- ವಿದ್ಯಾ ವಿನಯ ಸಂಪನ್ನೇ ಬ್ರಾಹ್ಮಣೇ ಗವಿ ಹಸ್ತಿನೀ,
- ಶುನಿ ಚೈವ ಶ್ವಪಾಕೇ ಚ ಪಂಡಿತಾಸ್ಸಮದರ್ಶಿನಃ (5
- 18)
- (ವಿದ್ಯಾ ವಿನಯಗಳಿಂದ ಕೂಡಿದವನು, ಬ್ರಾಹ್ಮಣ, ಗೋವು, ಆನೆ, ನಾಯಿ ಮತ್ತು ನಾಯಿಮಾಂಸವನ್ನು ತಿನ್ನುವ ಚಂಡಾಲ– ಇವರೆಲ್ಲರಲ್ಲಿಯೂ ಜ್ಞಾನಿಗಳು ಸಮದರ್ಶಿಗಳಾಗಿರುವರು) ಇಲ್ಲಿ ಅದ್ವೈತದ ನಿಲುವಿದೆ ಮಾತ್ರವಲ್ಲ, ವರ್ಣತಾರತಮ್ಯರಹಿತವಾದ ಸಾಮಾಜಿಕ ಸಮಾನತೆಯ ಪ್ರತಿಪಾದನೆಯೂ ಇದೆ.
- ‘ಸಮ್ಮೋಹಂ ಸರ್ವಭೂತೇಷು’ (ಎಲ್ಲ ಜೀವಿಗಳಲ್ಲೂ ನಾನು ಸಮದೃಷ್ಟಿಯುಳ್ಳವನು) ಎಂದೂ ಹೇಳುತ್ತಾನೆ, ಗೀತಾಚಾರ್ಯ. ಸಮತ್ವಸಂಬಂಧವಾದ ಇನ್ನೂ ಅನೇಕ ಶ್ಲೋಕಗಳಿವೆ, ಗೀತೆಯಲ್ಲಿ. ಕೃಷ್ಣ ಸ್ತ್ರೀಯರ ಬಗೆಗೆ ಗೀತೆಯಲ್ಲಿ ನೇರವಾಗಿ ಏನನ್ನೂ ಹೇಳದಿದ್ದರೂ, ವೈಯಕ್ತಿಕ ಜೀವನದಲ್ಲಿ ಅವನೊಬ್ಬ ಸ್ತ್ರೀವಾದಿ (ಸ್ತ್ರೀಲೋಲ ಎಂಬುದು ಅಪಪ್ರಥೆ!). ಅವನು ದ್ರೌಪದಿಯ ಮಾನ ಕಾಪಾಡಿದವನು; ನರಕಾಸುರನನ್ನು ವಧಿಸಿ, ಅವನ ಸೆರೆಯಿಂದ ಸಾವಿರಾರು ಸ್ತ್ರೀಯರನ್ನು ಪಾರುಮಾಡಿದವನು.
- ಆಧುನಿಕ ಯುಗದಲ್ಲಿ ವಿದ್ಯೆ, ಜ್ಞಾನಗಳು ಎಲ್ಲರಿಗೂ ಅಮೂಲ್ಯ, ಅನಿವಾರ್ಯ. ಅದನ್ನು ಕುರಿತ ಗೀತೋಕ್ತಿ ಸುಪರಿಚಿತ: ‘ನ ಹಿ ಜ್ಞಾನೇನ ಸದೃಶಂ ಪವಿತ್ರಮಿಹ ವಿದ್ಯತೇ’ (ಜ್ಞಾನದಷ್ಟು ಪವಿತ್ರವಾದುದು ಲೋಕದಲ್ಲಿ ಯಾವುದೂ ಇಲ್ಲ). ಪ್ರಣಿಪಾತ (ನಮಸ್ಕಾರ), ಸೇವೆಗಳ ಜೊತೆಗೆ ‘ಪರಿಪ್ರಶ್ನೆ’ಯನ್ನೂ ವಿಧಿಸಿದೆ, ಗೀತೆ. ಪರಿಪ್ರಶ್ನೆಯಿಂದ ಜ್ಞಾನ ಲಭಿಸುತ್ತದೆ ಮತ್ತು ಬೆಳೆಯುತ್ತದೆ. ಇಲ್ಲಿ ವೈಚಾರಿಕತೆಗೆ, ‘ನಿರಂಕುಶಮತಿ’ಗೆ ಗೀತೆ ಕೊಟ್ಟಿರುವ ಪ್ರಾಧಾನ್ಯ ಸುಸ್ಪಷ್ಟ.
- ವಿಚಾರ ಸ್ವಾತಂತ್ರ್ಯ, ಕಾರ್ಯಸ್ವಾತಂತ್ರ್ಯಗಳು ಪ್ರಜಾಪ್ರಭುತ್ವದ ಪ್ರಮುಖ ಲಕ್ಷಣಗಳು; ಅವು ಕೃಷ್ಣನ ಈ ಕಡೆಯ ಮಾತಿನಲ್ಲಿ ಸುವಿದಿತ: ‘ಇದನ್ನು ಸಂಪೂರ್ಣವಾಗಿ ವಿಮರ್ಶೆಮಾಡಿ, ಹೇಗೆ ಇಚ್ಛಿಸುವೆಯೋ ಹಾಗೆ ಮಾಡು’. (ನಾವಿಂದು ಗೌರವಿಸುವ ಕುವೆಂಪು ಕೂಡ ಒಂದೆಡೆ ಹೇಳುವುದು ಇದಕ್ಕೇ ಪೂರಕವಾಗಿದೆ: ‘ತಾಳ್ಮೆಯಿಂದ ಆಲಿಸಿ, ವಿವೇಕದಿಂದ ಭಾವಿಸಿ, ವಿಮರ್ಶ ಬುದ್ಧಿಯಿಂದ ಪರೀಕ್ಷಿಸಿ, ಒಪ್ಪಿಗೆಯಾದನ್ನು ಸ್ವೀಕರಿಸಿ...’). ಇದನ್ನೆಲ್ಲ ‘ವಿಚಾರವಾದಿ’ ಗಳೆನಿಸಿದ ‘ಸಂಶಯಾತ್ಮ’ರು ಮನಗಾಣ ಬೇಕಲ್ಲವೆ?
- ಪ್ರಪಂಚದ ಮತ್ತಾವ ಧರ್ಮಗ್ರಂಥದಲ್ಲೂ ವಿಚಾರ ಸ್ವಾತಂತ್ರ್ಯಕ್ಕೆ ಅವಕಾಶವಿಲ್ಲ. ಎಲ್ಲಿಯೂ ಬಲಾತ್ಕಾರ ಸಲ್ಲದು; ಅದು ಭಯೋತ್ಪಾದನೆಯ ಚಿಹ್ನೆ! ಕೃಷ್ಣ ‘ಭಯಂಕರ’ನಲ್ಲ; ದಯಾಕರ. ಹೀಗೆ ಗೀತೋಪದೇಶ ಅನೇಕ ಮುಖಗಳಲ್ಲಿ ಈ ಹೊತ್ತಿಗೂ ಅತ್ಯಂತ ಪ್ರಸ್ತುತವಾಗಿದೆ; ಗ್ರಾಹ್ಯ ಮತ್ತು ತಾರಕವಾಗಿದೆ. ಕಣ್ತೆರೆದುನೋಡಬೇಕು; ಕೂದಲು ಸೀಳುವುದು ನಿರರ್ಥಕ. ಗೀತಾ ಸಂದೇಶವನ್ನು ಒಪ್ಪುವುದು ಅಥವಾ ಹಟ ಹಿಡಿದು, ಬಿಡುವುದು ಅವರವರಿಗೆ ಸೇರಿದ್ದು: ಕೃಷ್ಣನ ಆಕ್ಷೇಪವಿಲ್ಲ! ‘ನ ಮೇ ಭಕ್ತಃ ಪ್ರಣಶ್ಯತಿ’ (ನನ್ನ ಭಕ್ತನಿಗೆ ನಾಶವಿಲ್ಲ) ಎಂಬುದು ಭಗವದ್ಗೀತೆಯ ಭರವಸೆ; ಯುಗಯಾತ್ರಿಯಾಗಿ ಮೊಳಗಿರತಕ್ಕದ್ದು.
- ‘ಕೃಷ್ಣಂ ವಂದೇ ಜಗದ್ಗುರುಂ’.
(Bschandrasgr ೧೫:೩೮, ೨೦ ಜನವರಿ ೨೦೧೫ (UTC)/ಸದಸ್ಯ:Bschandrasgrಚರ್ಚೆ