ಭಾರತೀಯ ತತ್ತ್ವಶಾಸ್ತ್ರದಲ್ಲಿ ಜೀವಾತ್ಮ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪೀಠಿಕೆ[ಬದಲಾಯಿಸಿ]

ಜೀವ
ಹಿಂದೂ ಧರ್ಮ ಮತ್ತು ಜೈನ ಧರ್ಮದಲ್ಲಿ, ಜೀವವು ಒಂದು ಬದುಕಿರುವ ವ್ಯಕ್ತಿ ಅಥವಾ ಪ್ರಾಣಿ, ಅಥವಾ ಹೆಚ್ಚು ನಿರ್ದಿಷ್ಟವಾಗಿ, ಒಂದು ಬದುಕಿರುವ ಜೀವಿಯ (ಮಾನವ, ಪ್ರಾಣಿ, ಮೀನು ಅಥವಾ ಸಸ್ಯ ಇತ್ಯಾದಿ) ಭೌತಿಕ ಸಾವನ್ನು ಪಾರಾಗುವ ಅಮರ ಸತ್ವ ಅಥವಾ ಚೇತನ. ಅದು ಆತ್ಮಕ್ಕೆ ಬಹಳ ಹೋಲುವ ಬಳಕೆಯನ್ನು ಹೊಂದಿದೆ, ಆದರೆ ಆತ್ಮವು ವಿಶ್ವಾತ್ಮವನ್ನು ಸೂಚಿಸಿದರೆ, ಜೀವ ಶಬ್ದವನ್ನು ನಿರ್ದಿಷ್ಟವಾಗಿ ಒಂದು ಪ್ರತ್ಯೇಕ ಬದುಕಿರುವ ವಸ್ತು ಅಥವಾ ಬದುಕಿರುವ ವ್ಯಕ್ತಿ ಅಥವಾ ಪ್ರಾಣಿಯನ್ನು ಸೂಚಿಸಲು ಬಳಸಲಾಗುತ್ತದೆ. ಗೊಂದಲ ತಪ್ಪಿಸಲು ಪರಮಾತ್ಮ ಮತ್ತು ಜೀವಾತ್ಮ ಪದಗಳನ್ನು ಬಳಸಲಾಗುತ್ತದೆ.

ಭಾರತದ ದರ್ಶನಗಳಲ್ಲಿ ಜೀವ ಮತ್ತು ಆತ್ಮ[ಬದಲಾಯಿಸಿ]

ನಾನು ಎಂಬ ತಿಳುವಳಿಕೆಗೆ ಸಿಗುವ /ಗೋಚರವಾಗುವುದೇ ಆತ್ಮ ಅಥವಾ ಜೀವ ಎನ್ನಬಹುದು. ಈ ಬಗ್ಗೆ ದಾರ್ಶನಿಕರಲ್ಲಿ ಮತಬೇಧವಿದೆ .
‘ನಾನು‘ ಎಂಬ ತಿಳುವಳಿಕೆಗೆ ಗೋಚರವಾಗುವುದೇ 'ಆತ್ಮ' -ಅಥವಾಜೀವ ಎನ್ನಬಹುದು. ಈ ಬಗ್ಗೆ ದಾರ್ಶನಿಕರಲ್ಲಿ ಮತಬೇಧವಿದೆ.
ಚರ್ವಾಕರು /ನಾಸ್ತಿಕರು/ ಲೋಕಾಯತರು/ ವಿಚಾರವಾದಿಗಳು
ಚರ್ವಾಕರ ಪ್ರಕಾರ ಚೈತನ್ಯವು ದೇಹದ ಗುಣ . ದೇಹದೊಂದಿಗೆ ಹುಟ್ಟಿ ದೇಹದೊಂದಿಗೆ ನಾಶವಾಗುವುದು. ಪ್ಲಥ್ವಿ,, ಅಪ್,ತೇಜಸ್ಸು , ವಾಯು ಇವುಗಳ ನಿರ್ದಿಷ್ಟ ಪ್ರಮಾಣದ ಮಿಶ್ರಣದ ಫಲ ಜೀವ. ದೇಹವನ್ನು ಹೊರತುಪಡಿಸಿದ ಪ್ರತ್ಯೇಕ ಆತ್ಮವೆಂಬುದಿಲ್ಲ. ದೇಹ ನಾಶವಾದಾಗ ಸೇರಿದ್ದ ತತ್ವಗಳೆಲ್ಲಾ ಮೂಲಕ್ಕೆ ಸೇರಿಕೊಳ್ಳುತ್ತವೆ . ಸಾವಿನ ಆಚೆಗಿನದೆಲ್ಲಾ ಕಲ್ಪನೆ.
ಜೈನ ಧರ್ಮ
ಜೈನರು ಆತ್ಮವನ್ನು ಚೈತನ್ಯವೆಂದು ಒಪ್ಪುತ್ತಾರೆ .ಪ್ರತಿ ಜೀವವೂ ಅನಂತ ಜ್ಞಾನ , ಅನಂತ ದರ್ಶನ , ಅನಂತ ಸಾಮರ್ಥ್ಯಗಳಿಂದ ಕೂಡಿದೆ. ಆದರೆ ಅದನ್ನು ಆವರಿಸಿದ ಕರ್ಮಗಳು ಅವುಗಳನ್ನು ಮರೆ ಮಾಡಿವೆ . ಆ ಗುಣಗಳ ತಾರತಮ್ಯದಿಂದ ಜೀವಿಗಳಲ್ಲಿ ಅನಂತ ಬೇಧಗಳಾಗುತ್ತವೆ. ಜೀವವು ಕರ್ತೃವೂ ಹೌದು ಭೋಕ್ತೃವೂ ಹೌದು. ಜೀವವು ನಿತ್ಯ ಬದಲಾವಣೆ ಹೊಂದುವಂತಹುದು. ಅದು ಶರೀರಕ್ಕಿಂತ ಬೇರೆಯಾದುದು. ಆದರೆ ಅದು ಯಾವ ಶರೀರವನ್ನು ಹೊಂದುವುದೋ , ಅದೇ ಗಾತ್ರ ಹೊಂದುತ್ತದೆ. ಜೀವಿಗಳಲ್ಲಿ ಬದ್ಧ ಜೀವ, ಮುಕ್ತ ಜೀವ ಎಂದು ಎರಡು ಬಗೆ. ಈ ಜಗತ್ತಿನಲ್ಲಿ ಬದುಕಿರುವ ಜೀವಿಗಳು ಬದ್ಧಜೀವಿಗಳು -ಅವುಗಳಿಗೆ ಹುಟ್ಟು-ಸಾವುಗಳುಂಟು. ಇಂದ್ರಿಯಗಳ ಸಂಖ್ಯೆಗನುಸಾರವಾಗಿ ಜೀವಿಗಳನ್ನು ವರ್ಗೀಕರಿಸಲಾಗಿದೆ. ಉದಾಹರಣೆಗೆ ವನಸ್ಪತಿಗಳಿಗೆ ಸ್ಪರ್ಶೇಂದ್ರಿಯ ಮಾತ್ರಾ ಇದೆ. ಮಾನವರೂ ದೇವತೆಗಳೂ ಉತ್ತಮ ಜೀವಿಗಳು.
ಬೌದ್ಧಧರ್ಮ
ಭಗವಾನ್ ಬುದ್ಧನು ಆತ್ಮನೆಂಬ ಪ್ರತ್ಯೇಕ ಪದಾರ್ಥ(ತತ್ವ) ವನ್ನು ಅಂಗೀಕರಿಸಿಲ್ಲ. ಆತ್ಮವು -ಇಂದ್ರಿಯಗಳ, ಅನುಭವಗಳ ಸಂಘಾತಥವಾ ಸಮೂಹವೆಂದು ಹೇಳುತ್ತಾನೆ. ಅವುಗಳನ್ನು ವಿವರಿಸುವಾಗ ,'ನಾಮ ರೂಪ',ಎಂಬ ಪದಗಳು ಬರುವವು . ಅವು ಶರೀರ ಮನಸ್ಸು ಮತ್ತು ಅವುಗಳ ಕ್ರಿಯೆ, ಅದೇ (ಅವೇ) ಆತ್ಮ. ಅವು ಪಂಚ ಸ್ಕಂದಗಳಾದ ರೂಪ , ವಿಜ್ಞಾನ , ವೇದನಾ, ಸಂಜ್ಞಾ , ಮತ್ತು ಸಂಸ್ಕಾರಗಳಿಂದ ಕೂಡಿದೆ. ಈ ಪಂಚ ಸ್ಕಂದಗಳು ಕೂಡಾ ಕ್ಷಣಿಕವಾದವು. ಹಾಗೆಯೇ ಜಗತ್ತುಕೂಡಾ ಕ್ಷಣಿಕ ; ಎರಡು ಕ್ಷಣಗಳು ಕೂಡಾ ಸಮಾನ ರೂಪದಿಂದ ಇರಲಾರವು -ಪರಿಣಾಮ ಶಾಲಿಯಾಗಿವೆ. ಈ ಸಿದ್ಧಾಂತಕ್ಕೆ ನ್ಶೆರಾತ್ಮವಾದವೆನ್ನುತ್ತಾರೆ.
ಬೌದ್ಧಧರ್ಮ ಮಾಧ್ಯಮಿಕರು ಅಥವಾ ಶೂನ್ಯವಾದಿಗಳು
ಬೌದ್ಧರು -ಮಾಧ್ಯಮಿಕರು ಅಥವಾ ಶೂನ್ಯವಾದಿಗಳು , ಅವಿದ್ಯೆ ಅಥವಾ ಸಂವೃತಿಯಿಂದಲೇ 'ನಾನು' ಮುಂತಾದ ಅನುಭವಗಳು ಉಂಟಾಗುತ್ತವೆ ಎನ್ನುತ್ತಾರೆ. ಇದು ನಿರ್ಮೂಲವಾದಾಗ ‘ಪುರುಷಾರ್ಥಸಿದ್ದಿ‘, ಎನ್ನುತ್ತಾರೆ. ಯೋಗಾಚಾರದಲ್ಲಿ (ವಿಜ್ಞಾನವಾದಿಗಳಲ್ಲಿ) ಕ್ಷಣಿಕವಾದ ಬಾಹ್ಯ ಪ್ರಪಂಚವನ್ನು ಅಲ್ಲಗಳೆದು , ಜ್ಞಾನವೊಂದೇ ಸತ್ಯವೆನ್ನುತ್ತಾರೆ. ಈ ಜಗತ್ತು -ಕ್ಷಣಿಕವಾದ ಜ್ಞಾನಗಳ ಪರಂಪರೆ. ಈ ವಿಜ್ಞಾನ ಧಾತುವೇ ಜೀವಾತ್ಮ ; ಆತ್ಮವು ಶುದ್ಧ ಚೈತನ್ಯ ; 'ನಾನು', ಎಂಬುದು ಅನುಭವಗಳ ಸಂವೃತಿ . ಕ್ಷಣಿಕ ವಿಜ್ಞಾನದ ಸಂತಾನವು ಅನೇಕ . ಅಂತೆಯೇ ಜೀವಾತ್ಮರೂ ಅನೇಕ . ಇವರ ನಿತ್ಯತೆ ನದಿಯ ನೀರಿನಂತೆ (ನದಿಯ ನೀರು ನೋಡುವಾಗ ಒಂದೇ ಆಗಿ ಕಾಣುವುದು-ಆದರೆ ಪ್ರತಿ ಕ್ಷಣದಲ್ಲೂ ಬದಲಾವಣೆ ಆಗುತ್ತಿರುವುದು) ಸ್ವರೂಪ ನಿತ್ಯತೆಯಲ್ಲ ; ಈ ಅಭಿಪ್ರಾಯವನ್ನು ಸೌತ್ರಾಂತಿಕರೂ , ವೈಭಾಷಿಕರೂ ಒಪ್ಪುತ್ತಾರೆ.

ಷಡ್ ದರ್ಶನಗಳಲ್ಲಿ ಜೀವಾತ್ಮ[ಬದಲಾಯಿಸಿ]

ಸಾಂಖ್ಯ ಮತ್ತು ಯೋಗ ದರ್ಶನ =(“ಜೀವ”)
ಸಾಂಖ್ಯ ದರ್ಶನದಲ್ಲಿ ಆತ್ಮವನ್ನು (ಜೀವ) ಪುರುಷನೆಂದು ಕರೆಯಲಾಗಿದೆ .ಅವನು ಶುದ್ಧ ಚೈತನ್ಯ. . ಅವನಿಗೆ ಸುಖ ದುಃಖಗಳಿಲ್ಲ. ಆದರೆ ಪ್ರಕೃತಿಯ ಕಾರಣದಿಂದ , ಸುಖ-ದುಃಖ ಗಳನ್ನು ತನ್ನದೆಂದು ತಿಳಿಯುತ್ತಾನೆ . ಅವನು ನಿಷ್‌ಕ್ರಿಯ . ಅವನ/ಳ ಭೋಗ ಅಪವರ್ಗಗಳ ಸಲುವಾಗಿಯೇ ಪ್ರಕೃತಿಯು ಸೃಷ್ಟಿಯನ್ನು ನಡೆಸುತ್ತದೆ.ಪುರುಷರು ಅನೇಕರು. ಮಧ್ಯಮ ಗಾತ್ರದವರು.
“ಯೋಗ ದರ್ಶನದಲ್ಲಿ” ಈ ಮೇಲಿನ ತತ್ವವನ್ನು ಒಪ್ಪಿದ್ದಾರಾದರೂ ಈಶ್ವರನನ್ನೂ ಒಪ್ಪಿದ್ದಾರೆ. ಈಶ್ವರನು ಗುರುವಿನಂತೆ ಪುರುಷನ/ರ ಅಜ್ಞಾನವನ್ನು ತೊಲಗಿಸಿ ಅವನ ಮುಕ್ತಿಗೆ ಕಾರಣನಾಗುತ್ತಾನೆ.
ನ್ಯಾಯ ವೈಶೇಷಿಕರು ಆತ್ಮವನ್ನು ನವದ್ರವ್ಯ ಗಳಲ್ರ್ಲೆಂದೆನ್ನುತ್ತಾರೆ. ಜ್ಞಾನವು ಅವನ ಗುಣ . ಅವನು ಜ್ಞಾನ ಸ್ವರೂಪಿಯಲ್ಲ. ಆತ್ಮನು ವಿಭು ,ಸರ್ವವ್ಯಾಪಿ , ಪ್ರತಿ ಶರೀರದಲ್ಲೂ ಬೇರೆ ಬೇರೆ ಎಂಬುದು ಅವರ ಮತ.
ಮೀಮಾಂಸಕರು.
ಮೀಮಾಂಸಕರಲ್ಲಿ ಕುಮಾರಿಲರು , ಆತ್ಮವು ಜ್ಞಾನವೂ ಜ್ಞೇಯವೂ ಆಗಿದೆ , ವಸ್ತು ಜ್ಞಾನದಲ್ಲಿಯೂ , ಅಹಂ , ಪ್ರತ್ಯಯದಿಂದಲೂ ಇದನ್ನು ತಿಳಿಯಬಹುದು. ಆತ್ಮನು ನಿತ್ಯ ; ಆದರೆ ಪರಿಣಾಮೀ ನಿತ್ಯತ್ವ. ಅವನು ಚಿದಂಶದಿಂದ ಜ್ಞಾನವನ್ನು ಪಡೆದರೆ, ಅಚಿದಂಶದಿಂದ ಪರಿಣಾಮ ಹೊಂದುತ್ತಾನೆ.
ಪ್ರಭಾಕರ ಮತದಂತೆ ಪುರುಷನು (ಜೀವ) ಜ್ಞಾತೃ ಮಾತ್ರ ;ಅವನು ಜಡ , ವಿಷಯ ಸಂಯೋಗದಿಂದ ಚೈತನ್ಯ ರೂಪಿಯಾಗುತ್ತಾನೆ. ಅವನು ಕರ್ತೃವೂ ಹೌದು ಬೋಕ್ತೃವೂ ಹೌದು.ಅವನು ಸರ್ವವ್ಯಾಪಿ ಆದರೆ ಪ್ರತಿಯೊಬ್ಬರ ಶರೀರದಲ್ಲಿಯೂ ಬೇರೆ ಬೇರೆ . ಆತ್ಮವು ಬದಲಾವಣೆ ಹೊಂದುವುದಿಲ್ಲ. ಸಂವಿತ್ , ಎಂಬ ಜ್ಞಾನದಿಂದ ಮಾತ್ರಾ ಪ್ರಕಾಶಗೊಳ್ಳವುದು . ಸಂವಿತ್ ಮಾತ್ರಾ ತೋರಿ ಮಾಯವಾಗುವುದು. ಅದು ವಸ್ತು ಮತ್ತು ಆತ್ಮ ಎರಡನ್ನೂ ಪ್ರಕಾಶಿಸುತ್ತದೆ.
ಅದ್ವೈತ
ಅದ್ವೈತ ಸಿದ್ಧಾಂತದಲ್ಲಿ ಆತ್ಮಕ್ಕೆ ಕರ್ತೃತ್ವ -ಭೋಕ್ತೃತ್ವವಿಲ್ಲ. ಅದು ಕೂಟಸ್ಥ -ನಿತ್ಯ ; ಯಾವ ಬದಲಾವಣೆಗೂ ಒಳಗಾಗದು ಅದು ವಿಷಯಿ (ನೋಡುವ ಕ್ರಿಯೆಯುಳ್ಳದ್ದು) , ವಿಷಯವಲ್ಲ (ನೋಡಲ್ಪಡುವ ವಸ್ತುವಾಗಲಾರದು -ಕಾಣುವುದಿಲ್ಲ.) . ವಾಸ್ತವವಾಗಿ ಅದು ಬ್ರಹ್ಮ ಕ್ಕಿಂತ ಬೇರೆಯಲ್ಲ ; ಅವಿದ್ಯೆಯ (ಮಾಯೆ) ಕಾರಣದಿಂದ ಶರೀರ ಇತ್ಯಾದಿಗಳಲ್ಲಿ ತನ್ನತನದ (ತನ್ನನ್ನು ) ಆರೋಪ ಮಾಡಿಕೊಳ್ಳುತ್ತದೆ, ಆತ್ಮವು ಮುಕ್ತರೂಪದ ಚೈತನ್ಯವೇ ಆಗಿದ್ದರೂ ವಿಷಯ ಸಂಸರ್ಗದಿಂದ ಅಹಂ ಪಡೆದು , ಜೀವಾತ್ಮ ವೆನ್ನಿಸಿದೆ.

ಭಕ್ತಿಪಂಥ[ಬದಲಾಯಿಸಿ]

ವಿಶಿಷ್ಟಾದ್ವೈತ
ರಾಮಾನುಜರ ಪ್ರಕಾರ, ಆತ್ಮಗಳು ಅನೇಕ ; ಬೇರೆ ಬೇರೆ ರೀತಿಯವು. ದೇಹೇಂದ್ರಿಯಗಳಿಂದ ಬೇರೆ ; ಅಣುರೂಪಿ ; ಚೈತನ್ಯ ; ಸ್ವಯಂ ಪ್ರಕಾಶ ರೂಪಿ ; ಆನಂದ ರೂಪಿ ; ಅವನು ಪರಮಾತ್ಮನಿಗೆ ಅಧೀನ . ಅವನಲ್ಲಿರುವುದು ಶೇಷತ್ವ ವೆಂಬ ಗುಣ. ಜೀ -ಜಗತ್ತುಗಳು ಪರಮಾತ್ಮನಿಂದ ಬೇರೆ. ಅವನ ವಿಶೇಷಣಗಳು ಅಧೀನವಾದವು . ಜೀವನಿಗೂ - ಪರಮಾತ್ಮನಿಗೂ , ಶರೀರ -ಆತ್ಮ ಸಂಬಂಧ . ಜೀವಾತ್ಮರಲ್ಲಿ ಬದ್ಧರು , ಮುಕ್ತರು , ನಿತ್ಯರು ಎಂಬ ಬೇಧಗಳುಂಟು. ಆತ್ಮ ಅಚಲ- ಆದರೂ ಸಂಕೋಚ ವಿಕೋಚಗಳಿವೆ. ಜೀವಿಗಳಿಗೆ ಈಶ್ವರಾನುಗ್ರದಿಂದ ಮುಕ್ತಿದೊರೆಯುವುದು..
ದ್ವೈತ
ಮಧ್ವರ ಮತದಲ್ಲಿ ಮೇಲಿನ ರಾಮಾನುಜರ ಕೆಲವು ವಿಚಾರಗಳನ್ನು ಅಂಗೀಕರಿಸಿದರೂ , ಜೀವ -ಪರಮಾತ್ಮರಲ್ಲಿ ಶರೀರ- ಆತ್ಮದ ಸಂಬಂಧವನ್ನು ಒಪ್ಪುವುದಿಲ್ಲ. ಜೀವರಲ್ಲಿ - ಮುಕ್ತಿ ಯೋಗ್ಯರು , ನಿತ್ಯ ಸಂಸಾರಿಗಳು , ತಮೋ ಯೋಗ್ಯರು , ಎಂದು ಮೂರು ಬೇಧಗಳನ್ನು ಹೇಳುತ್ತಾರೆ. ದೇವ , ಋಷಿ, ಪಿತೃ, ಚಕ್ರವರ್ತಿ , ಮತ್ತು ಉತ್ತಮ ಪುರುಷರು ಮುಕ್ತಿ ಯೋಗ್ಯರು , ಸಂಸಾರದಲ್ಲಿ ಸದಾಇರುವವರು -ನಿತ್ಯ ಸಂಸಾರಿಗಳು, ದೈತ್ಯ ,ರಾಕ್ಷಸ, ಪಿಶಾಚಿ ಮತ್ತು ಅಧಮ ಮನುಷ್ಯರು ತಮೋಯೋಗ್ಯರು -ಅಥವಾ ನಿತ್ಯ ನಾರಕಿಗಳು (ಇವರಲ್ಲಿ ವಿಷ್ಣುಭಕ್ತರಲ್ಲದವರೆಲ್ಲರೂ ಬರುತ್ತಾರೆ) ಜೀವನು ಪರಮಾತ್ಮನ ಅಧೀನ , -ಮುಕ್ತಿಗೆ ಅವನ ಅನುಗ್ರಹಬೇಕು.
ನಿಂಬಾರ್ಕರು .
ನಿಂಬಾರ್ಕರು ರಾಮಾನುಜರನ್ನು ಬಹುಮಟ್ಟಿಗೆ ಅನುಸರಿಸುತ್ತಾರೆ. ಅಲ್ಲಿಯೂಜೀವನು ಜ್ಞಾನ ಸ್ವರೂಪಿ ; ಕರ್ತೃತ್ವಭೋಕ್ತೃತ್ವ ಉಳ್ಳವನು. ಆದರೆ ಜ್ಞಾನ ಭೋಗಗಳನ್ನು ಹೊಂದಲು ಸ್ವತಂತ್ರನಲ್ಲ. ಈಶ್ವರನ ಅಧೀನ. ಜೀವನು ಸಂಪೂರ್ಣ ಪರತಂತ್ರ. ಪರಿಣಾಮದಲ್ಲಿ ಅಣುರೂಪ. ಪ್ರತಿಶರೀರಕ್ಕೂ ಬೇರೆ ಬೇರೆ ಜೀವರು ; ಅವು ಬಧ್ಧರು , ಮುಕ್ತರು ಮುಂತಾದ ಬೇಧಗಳು ಜೀವರಲ್ಲಿದೆ. ಭಕ್ತಿಯೇ ಮುಕ್ತಿಗೆ ಸಾಧನ. ಬದ್ಧ ಮತ್ತು ಮುಕ್ತ ದೆಸೆಗಳಲ್ಲಿ ಜೀವನು ಬ್ರಹ್ಮನಿಂದ ಬೇಧ- ಅಬೇಧಗಳನ್ನು ಹೊಂದುತ್ತಾನೆ. ಮುಕ್ತನಾದಾಗ ಬ್ರಹ್ಮನಲ್ಲಿ ಏಕಾಕಾರವನ್ನು ಹೊಂದಿದ್ದಾಗಲೂ , ತನ್ನ ವ್ಯಕ್ತಿತ್ವವನ್ನು ಕಳೆದುಕೊಳ್ಳವುದಿಲ್ಲ.
ವಲ್ಲಭರು

ವಲ್ಲಭಾಚಾರ್ಯರ ಮತದಲ್ಲಿ (ಶುದ್ಧಾದ್ವೈತ) ಜೀವನು ಪರಮಾತ್ಮನ ಪರಿಣಾಮ (ಆಂಶಿಕ ಬದಲಾವಣೆ) . ಪರಮಾತ್ಮನು ವಿಹರಿಸಲು ಬಯಕೆಯಾದಾಗ ಜೀವರೂಪ ತಳೆಯುತ್ತಾನೆ. ಆಗ ಪರಮಾತ್ಮನ ವಿಶೇಷಗಣಗಳು ಮರೆಯಾಗುತ್ತವೆ. ದೀನತೆ ಅಜ್ಞಾನ ಮುಂತಾದವು ಉಂಟಾಗುತ್ತವೆ. ಜೀವನು/ರು ಜ್ಞಾತೃ , ಜ್ಞಾನ ರೂಪಿ ; ಅಣುರೂಪಿ ; ಮುಕ್ತವಾದಾಗ ಅವು ಬ್ರಹ್ಮನಲ್ಲಿ ಸೇರಿಹೋಗುತ್ತವೆ - ಅಭಿನ್ನವಾಗುತ್ತವೆ. ಭಕ್ತಿಯಿಂದ ಮೋಕ್ಷ ದೊರಕುವುದು .

ಚೈತನ್ಯರು
ಚೈತನ್ಯರ ಅಚಿಂತ್ಯ ಬ್ಭೆಧಾಬೇಧ ಸಿದ್ಧಾಂತದ ಪ್ರಕಾರ ಜೀವಾತ್ಮ ಬ್ತಹ್ಮದ ಒಂದು ಜೀವಶಕ್ತಿ- ಚೈತನ್ಯ ಸ್ವರೂಪಿದ್ದರಿಂದ ಅವನು ಬ್ರಹ್ಮದ ಒಂದು ಅಂಶವಾಗುತ್ತಾನೆ. ಅವನು ಜ್ಞಾತೃವೂ , ಕರ್ತೃವೂ ಆಗಿದ್ದಾನೆ ಆದರೆ ಕರ್ತೃತ್ವವು ಬ್ರಹ್ಮನ ಅನುಗ್ರಹದಿಂದ ಬಂದುದು. ಜೀವನು ಪ್ರತ್ಯೇಕವಾದ ಅಸ್ತಿತ್ವವುಳ್ಳವನು ; ಪರಮಾತ್ಮನ ಸೇವೆ ಅವನ ನ್ಶೆಜ ಗುಣ. ಅವನು ಬ್ರಹ್ಮನಿಗೆ ಕೃಷ್ಣನಿಗೆ -ಯಾ-ಚೈತನ್ಯರಿಗೆ) ಪ್ರಿಯ ಸೇವಕ . ಜೀವಾತ್ಮರಲ್ಲಿ ಎರಡು ಬಗೆ ; ನಿತ್ಯ ಮುಕ್ತರು ಮತ್ತು ಬದ್ಧರು ಎಂದು . ಆದರೆ ಭಕ್ತಿ ಮಾರ್ಗ ಅನುಸರಿಸಿದರೆ . ಬದ್ಧರಿಗೂ ಬಿಡುಗಡೆ ಉಂಟು.

ಶೈವ ಪಂಥಗಳು[ಬದಲಾಯಿಸಿ]

ಪಾಶುಪತ ಆಗಮ
ಪಾಶುಪತ ಆಗಮಗಳ ಪ್ರಕಾರ, ಜೀವಾತ್ಮರಿಗೆ ಪಶು ಎಂಬ ಹೆಸರು . ಇವನು ಕಾರ್ಯ -ಕಾರಣ ಸಂಬಂಧಕ್ಕೆ ಅರ್ಥಾತ್ ಪಾಶಕ್ಕೆ ಒಳಪಟ್ಟವನು . ಕಾರ್ಯ -ಕಾರಣ ಸಂಬಂಧಕ್ಕೆ ಕಲಾ ಎಂದು ಇನ್ನೊಂದು ಹೆಸರು. ಆತ್ಮನು ಚೈತನ್ಯ ರೂಪಿಯಾಗಿದ್ದರೂ ತನ್ನ ನಿಜವನ್ನು ಅರಿತಿಲ್ಲ. ಶರೀರವೇ ತಾನೆಂದು ತಿಳಿದಿರುತ್ತಾನೆ. ಹಾಗಿದ್ದರೂ ಅವನು ನಿತ್ಯ , ವಿಭು ,ದೃಕ್ , ಅವನಲ್ಲಿ ಕ್ರಿಯಾಶಕ್ತಿ ಇದೆ. ಜೀವರುಗಳಲ್ಲಿ ಸಾಂಜನ , ನಿರಂಜನ ಎಂದು ಎರಡು ಬಗೆ. ಶರೀರ ಸಂಬಂಧ ಭಾವನೆ ಉಳ್ಳವನು ಸಾಂಜನ ; ಅದಿಲ್ಲದವನು ನಿರಂಜನ . ಮಲಗಳು(ಮಲ=ಮಾಯೆ) ಅವನ ನಿಜ ಶಕ್ತಿಯನ್ನು ಮರೆಮಾಡುತ್ತವೆ . ಈ ದರ್ಶನದಲ್ಲಿ ಮಾಯೆಯ ವಿವರಣೆ ಇಲ್ಲ.
ಶೈವ ದರ್ಶನ
ಶೈವ ದರ್ಶನದಲ್ಲಿ ಜೀವಾತ್ಮನು ವ್ಯಾಪಕ, ಪ್ರಕಾಶ ರೂಪ ;ಅನೇಕ . ಅವನು ಕರ್ತೃವೂ ಹೌದು .ಇವರಲ್ಲಿ ಮೂರು ವಿಧ . ವಿಜ್ಞಾನ ಕಾಲ ; ಪ್ರಳಯ ಕಾಲ ; ಸಕಲ . ಈ ವಿಭಾಗಕ್ಕೆ ಪಾಶಗಳ ತಾರತಮ್ಯ ಕಾರಣ.ಪ್ರಥಮಕ್ಕೆ ಆಣವ ಮಲ ಶೇಷ ; ದ್ವಿತೀಯದಲ್ಲಿ ಕಾರ್ಮಣ , ಕೊನೆಯವರಲ್ಲಿ ಮೂರೂ ವಿಧದ ಮಲಗಳೂ ಉಂಟು.
ಪ್ರತ್ಯಭಿಜ್ಞಾ -ಕಾಶ್ಮೀರೀ ಶೈವ

ಈ ದರ್ಶನದಲ್ಲಿ ಆತ್ಮನು ಶುದ್ಧ ಚೈತನ್ಯ. ಅವನು ಅಪರಿಮಿತ ಜ್ಞಾನ ಶಕ್ತಿಯುಳ್ಳವನು . ಶಿವ ಸ್ವರೂಪಿ ; ಅವ್ಯಕ್ತ ; ಮಲಗಳ ಸಂಯೋಗ ಕಾರಣದಿಂದ ಅವನ ಶಕ್ತಿ ಸಂಕೋಚ ವಾಗಿದೆ . ಜೀವನು ಸಹಜ ಸ್ವರೂಪ ಪಡೆದನೆಂದರೆ ಮುಕ್ತಿ .

ಶಕ್ತಿವಿಶಿಷ್ಟಾದ್ವೈತ -ವೀರಶೈವ-ಲಿಂಗಾಯತ
ಶಕ್ತಿವಿಶಿಷಾದ್ವೈತದಲ್ಲಿ ಜೀವನು ಪರಮಾತ್ಮನ ಅಂಶ . ಜೀವ ಪರಮಾತ್ಮರಿಗೆ ಬೇಧವೂ ಇದೆ - ಅಬೇಧವೂ ಇದೆ. ಸಂಸಾರ ದೆಶೆಯಲ್ಲಿ ಭಿನ್ನರು (ಬೇಧವಿದೆ) .
ಓಂ ತತ್ ಸತ್.

[೧][೨]

ಆಧಾರ[ಬದಲಾಯಿಸಿ]

೧. ವಿಕಿಪೀಡಿಯಾ ತತ್ವ ಶಾಸ್ತ್ರದ ಇಂಗ್ಲಿಷ್ ಫೈಲುಗಳು
೨. ಭಾರತೀಯ ತತ್ವ ಶಾಸ್ತ್ರ ಪರಿಚಯ :- ಎಂ. ಪ್ರಭಾಕರ ಜೋಷಿ & ಪ್ರೊ.ಎಂ.ಎ.ಹೆಗಡೆ ಎಚ್.ಒ.ಡಿ ಸಂಸ್ಕೃತ -ಎಂ.ಜಿ.ಸಿ. ಕಾಲೇಜು ಸಿದ್ದಾಪುರ ಕಾರವಾರ ಜಿಲ್ಲೆ. (ಕಾಪಿ ರೈಟಿನಿಂದ ಮುಕ್ತವಾಗಿದೆ)ಪ್ರಕಾಶಕರು :ದಿಗಂತ ಸಾಹಿತ್ಯ ಯೆಯ್ಯಾಡಿ ಮಂಗಳೂರು.]]

ನೋಡಿ[ಬದಲಾಯಿಸಿ]

ಭಾರತೀಯ ದರ್ಶನಶಾಸ್ತ್ರ ಅಥವಾ ಭಾರತೀಯ ತತ್ತ್ವಶಾಸ್ತ್ರ
ಚಾರ್ವಾಕ ದರ್ಶನ ಜೈನ ದರ್ಶನ ಬೌದ್ಧ ದರ್ಶನ ಸಾಂಖ್ಯ ದರ್ಶನ
ರಾಜಯೋಗ ನ್ಯಾಯ ವೈಶೇಷಿಕ ದರ್ಶನ ಮೀಮಾಂಸ ದರ್ಶನ
ಆದಿ ಶಂಕರರು ಮತ್ತು ಅದ್ವೈತ ಅದ್ವೈತ- ಜ್ಞಾನ-ಕರ್ಮ ವಿವಾದ ವಿಶಿಷ್ಟಾದ್ವೈತ ದರ್ಶನ ದ್ವೈತ ದರ್ಶನ
ಮಾಧ್ವ ಸಿದ್ಧಾಂತ ಶ್ರೀಮನ್ಮಹಾಭಾರತಮ್ ಮತ್ತು ದ್ವೈತ ದರ್ಶನ ಭಾರತೀಯ ತತ್ವಶಾಸ್ತ್ರ ಸಮೀಕ್ಷೆ ಭಗವದ್ಗೀತಾ ತಾತ್ಪರ್ಯ
ಕರ್ಮ ಸಿದ್ಧಾಂತ ವೀರಶೈವ ತತ್ತ್ವ ಭಾರತೀಯ ತತ್ತ್ವಶಾಸ್ತ್ರದಲ್ಲಿ ದೇವರು - ಭಾರತೀಯ ತತ್ತ್ವಶಾಸ್ತ್ರದಲ್ಲಿ ಜಗತ್ತು
ಭಾರತೀಯ ತತ್ತ್ವಶಾಸ್ತ್ರದಲ್ಲಿ ಜೀವಾತ್ಮ ಮೋಕ್ಷ ಗೀತೆ ಬ್ರಹ್ಮಸೂತ್ರ

ಚಾರ್ವಾಕ ದರ್ಶನ ; ಜೈನ ಧರ್ಮ - ಜೈನ ದರ್ಶನ ; ಬೌದ್ಧ ಧರ್ಮ ; ಸಾಂಖ್ಯ-ಸಾಂಖ್ಯ ದರ್ಶನ ; (ಯೋಗ)->ರಾಜಯೋಗ ; ನ್ಯಾಯ ದರ್ಶನ ; ವೈಶೇಷಿಕ ದರ್ಶನ;; ಮೀಮಾಂಸ ದರ್ಶನ - ; ವೇದಾಂತ ದರ್ಶನ / ಉತ್ತರ ಮೀಮಾಂಸಾ ; ಅದ್ವೈತ ; ಆದಿ ಶಂಕರರು ಮತ್ತು ಅದ್ವೈತ ; ವಿಶಿಷ್ಟಾದ್ವೈತ ದರ್ಶನ ; ದ್ವೈತ ದರ್ಶನ - ಮಾಧ್ವ ಸಿದ್ಧಾಂತ ; ಪಂಚ ಕೋಶ ; ಶ್ರೀಮನ್ಮಹಾಭಾರತಮ್ ಮತ್ತು ದ್ವೈತ ದರ್ಶನ ; ವೀರಶೈವ; ಬಸವಣ್ಣ; ಭಾರತೀಯ ತತ್ವಶಾಸ್ತ್ರ ಸಮೀಕ್ಷೆ; ಭಗವದ್ಗೀತಾ ತಾತ್ಪರ್ಯ ; ಕರ್ಮ ಸಿದ್ಧಾಂತ ; ವೇದ--ಭಾರತೀಯ ತತ್ತ್ವಶಾಸ್ತ್ರದಲ್ಲಿ ದೇವರುಭಾರತೀಯ ತತ್ತ್ವಶಾಸ್ತ್ರದಲ್ಲಿ ಜಗತ್ತು-ಅಸ್ತಿತ್ವ-ಸತ್ಯವೇ-ಮಿಥ್ಯವೇ -;ಭಾರತೀಯ ತತ್ತ್ವಶಾಸ್ತ್ರದಲ್ಲಿ ಜೀವಾತ್ಮ --ಮೋಕ್ಷ- ಭಾರತೀಯ ತತ್ತ್ವಶಾಸ್ತ್ರದಲ್ಲಿ ಮೋಕ್ಷ

ಉಲ್ಲೇಖ[ಬದಲಾಯಿಸಿ]

  1. ಹಿಂದೂಧರ್ಮದ ಪರಿಚಯ: ಏದುರ್ಕಳ ಶಂಕರನಾರಾಯಣ ಭಟ್
  2. ಭಾರತೀಯ ತತ್ವ ಶಾಸ್ತ್ರ ಪರಿಚಯ :- ಎಂ. ಪ್ರಭಾಕರ ಜೋಷಿ & (ಪ್ರೊ.ಎಂ.ಎ.ಹೆಗಡೆ) ಪ್ರೊ.ಎಂ.ಎ.ಹೆಗಡೆ ಎಚ್.ಒ.ಡಿ ಸಂಸ್ಕೃತ -ಎಂ.ಜಿ.ಸಿ. ಕಾಲೇಜು ಸಿದ್ದಾಪುರ ಕಾರವಾರ ಜಿಲ್ಲೆ. (ಕಾಪಿ ರೈಟಿನಿಂದ ಮುಕ್ತವಾಗಿದೆ)ಪ್ರಕಾಶಕರು :ದಿಗಂತ ಸಾಹಿತ್ಯ ಯೆಯ್ಯಾಡಿ ಮಂಗಳೂರು