ವಿಷಯಕ್ಕೆ ಹೋಗು

ಕರ್ಮ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಂತ್ಯವಿಲ್ಲದ ಗಂಟುಗಳು
ನೇಪಾಳದ ಒಂದು ದೇವಾಲಯದಲ್ಲಿರುವ ಧ್ಯಾನ ಚಕ್ರ. ಇದರ ಮಧ್ಯೆ ಅಂತ್ಯವಿಲ್ಲದ ಗಂಟುಗಳು ಚಿತ್ರಿತವಾಗಿದೆ.
ಏಷಿಯಾದ ಸಾಂಸ್ಕೃತಿಕ ಪರಿಸರದಲ್ಲಿ ಸಾಮಾನ್ಯವಾಗಿ ಕಂಡುಬರುವ ಅಂತ್ಯವಿಲ್ಲದ ಗಂಟುಗಳ ಚಿತ್ರ.ಅಂತ್ಯವಿಲ್ಲದ ಗಂಟುಗಳು ಅಂತರ್ ಸಂಬಂಧವುಳ್ಳ ಕಾರ್ಯ-ಕಾರಣ ಸಂಬಂಧವನ್ನು ಸಂಕೇತಿಸುತ್ತದೆ.ಕರ್ಮದ ಚಕ್ರದಲ್ಲಿ ಹುಟ್ಟು-ಸಾವುಗಳ ನಿರಂತರತೆಯಲ್ಲಿ ಕರ್ಮದ ಮಹತ್ವವನ್ನು ಸಾರುತ್ತದೆ.


ಕರ್ಮ: ಭಾರತೀಯ ದರ್ಶನಗಳೆಲ್ಲವೂ ಒಮ್ಮತದಿಂದ ಅಂಗೀಕರಿಸಿರುವ ಸಿದ್ಧಾಂತ. ದರ್ಶನದಲ್ಲಿ ಮಾತ್ರವಲ್ಲ, ನಿತ್ಯಜೀವನದಲ್ಲೂ ಕರ್ಮದ ಕಲ್ಪನೆ ಬಹುವಾಗಿ ವಿಸ್ತಾರವಾಗಿದೆ. ಕರ್ಮವೆಂದರೆ ಕೆಲಸ (ಕೃ ಧಾತು), ಮಾಡಿದುದು, ಆದರೆ ಕರ್ಮವೆಂಬ ಪದದಲ್ಲಿ ಹಿಂದೆ ಮಾಡಿದುದರಿಂದ ಮುಂದೆ ಬಂದೇ ಬರುವ, ಬರಲಿರುವ ಅಥವಾ ಬಂದ, ಫಲ ಅಥವಾ ವಿಪಾಕದ ಅರ್ಥವೂ ಸೇರಿದೆ. ಮಾಡಿದುದನ್ನು ಉಣ್ಣಲೇಬೇಕೆಂಬ ನಿಲವಿಗೆ ಕರ್ಮಸಿದ್ಧಾಂತವೆಂದು ಹೆಸರು. ಕರ್ಮಸಿದ್ಧಾಂತಕ್ಕೆ ಮೂಲವಾಗಿ ಪುನರ್ಜನ್ಮದ ನಂಬಿಕೆಯೂ ಪ್ರಸಕ್ತವಾಗುತ್ತದೆ. ಹಿಂದಿನ ಜನ್ಮದಲ್ಲಿ ಮಾಡಿದ ಕರ್ಮಗಳಿಗೆ ಅನುಸಾರವಾಗಿ, ಆ ಕರ್ಮಗಳ ಫಲವಾಗಿ, ಈ ಜನ್ಮ ಸಿದ್ಧವಾಗಿದೆಯೆಂದೂ ಈ ಜನ್ಮದಲ್ಲಿ ಮಾಡುವ ಕರ್ಮಗಳಿಂದ ಮುಂದಿನ ಜನ್ಮ ನಿರ್ದಿಷ್ಟವಾಗುವುದೆಂದೂ ನಮ್ಮಲ್ಲಿನ ನಂಬಿಕೆ. ಎಂದರೆ ನಾವು ಅನುಭವಿಸುವ ಸುಖದುಃಖಗಳಿಗೆ ನಾವು ಮಾಡಿದ ಕೆಲಸಗಳೇ ಕಾರಣವೆಂದು ತಾತ್ಪರ್ಯ. ಮಾಡಿದ ಮೇಲೆ ಅದಕ್ಕೆ ನಿಯತವಾದ ಫಲವನ್ನು ಅನುಭವಿಸಲೇಬೇಕೆಂಬ ಶ್ರದ್ಧೆ ಎಲ್ಲ ಹಿಂದೂ ಜನರ ಸಂಸ್ಕಾರದಲ್ಲಿಯೂ ಸೇರಿಬಂದಿದೆ. ಪಾಪಭೀತಿಗೆ ಬಲವಾದ ಕಾರಣವೆಂದರೆ ಕರ್ಮಸಿದ್ಧಾಂತವೇ. ಬಡವರು, ರೋಗಿಗಳು, ಆರ್ತರು ತಮ್ಮ ತಮ್ಮ ಸ್ಥಿತಿಯಲ್ಲಿ ಸಮಾಧಾನಚಿತ್ತರಾಗಿದ್ದರೆ, ಶ್ರೀಮಂತರನ್ನು, ಸುಖಿಗಳನ್ನು ಕಂಡು ಕರುಬದಿದ್ದರೆ, ಕರ್ಮಸಿದ್ಧಾಂತದಲ್ಲಿನ ವಿಶ್ವಾಸ ಅದಕ್ಕೆ ಕಾರಣ. ಜನಜೀವನದಲ್ಲಿ ಅವಶ್ಯವಾದ ಎಳೆಯಂತೆ ಒದಗಿ ಬಂದಿರುವ ಕರ್ಮ ಸಿದ್ಧಾಂತಕ್ಕೆ ತಾತ್ತ್ವಿಕ ಸಮರ್ಥನೆಯಿದೆ.

ವಿಭಾಗಗಳು

[ಬದಲಾಯಿಸಿ]

ಮಾಡಿದ ಪ್ರತಿಯೊಂದು ಕರ್ಮದಿಂದಲೂ ಸಂಸ್ಕಾರ ಸಿದ್ಧವಾಗುತ್ತದೆ. ಸಂಸ್ಕಾರವೆಂದರೆ ವ್ಯಕ್ತಿಯ ಚಿತ್ತದಲ್ಲಿ ಅಥವಾ ಸ್ವಭಾವದಲ್ಲಿ ಒದಗಿಬಂದ ವಾಸನಾವಿಶೇಷ. ಕರ್ಮ ತಾತ್ಕಾಲಿಕ ವಾಗಿದ್ದು ಅದರ ಕ್ರಿಯೆ ಪ್ರಣಷ್ಟವಾದರೂ ಅದರಿಂದ ಹುಟ್ಟಿದ ಸಂಸ್ಕಾರ ಉಳಿಯುತ್ತದೆ. ಹೀಗೆ ಕರ್ಮಜನಿತ ಸಂಸ್ಕಾರಗಳ ಸಮಷ್ಟಿವ್ಯಾಪಾರವೇ ಸಂಸ್ಕಾರವೆನಿಸಿಕೊಳ್ಳುತ್ತದೆ. ಸಂಸ್ಕಾರಗಳ ಪ್ರವಾಹ ಅವಿರತವಾಗಿ, ಸ್ವರಸವಾಹಿನಿಯಾಗಿ ಸಾಗುತ್ತಿರುವುದರಿಂದಲೇ ನಮ್ಮ ಪ್ರವೃತಿಗಳೂ ಸುಖದುಃಖಾದಿ ಸಂಗತಿಗಳೂ ನಡೆಯುತ್ತಿವೆ. ಸಂಸ್ಕಾರ ಕಾರ್ಯಗತವಾಗಿ ಬಂದರೆ ವೃತ್ತಿಯೆನಿಸಿಕೊಳ್ಳುತ್ತದೆ. ಕರ್ಮದಿಂದ ಉತ್ಪನ್ನವಾದ ಸಂಸ್ಕಾರ ಪ್ರಕಟವಾಗಲೇ ಬೇಕೆಂಬ ನಿಯಮವಿಲ್ಲ; ಅದು ಪ್ರಸುಪ್ತಾವಸ್ಥೆಯಲ್ಲಿರುಬಹುದು. ಕಾಲ ಪಕ್ವವಾದಾಗ ಲಬ್ಧವೃತ್ತಿಯಾಗುತ್ತದೆ. ಇದಕ್ಕೆ ಕರ್ಮವಿಪಾಕವೆನ್ನುತ್ತಾರೆ. ಕರ್ಮಕ್ಕೂ ವಿಪಾಕಕ್ಕೂ ಮಧ್ಯೆ ಕಾಲಾವಕಾಶವಿರಬಹುದು. ಈ ದೃಷ್ಟಿಯಿಂದ ಕರ್ಮವನ್ನು ಪ್ರಾರಬ್ಧ, ಸಂಚಿತ, ಆಗಾಮೀ, ಕ್ರಿಯಮಾಣ ಕರ್ಮಗಳೆಂದು ವಿಭಾಗ ಮಾಡುವುದುಂಟು.

ಮೀಮಾಂಸಕರು ಕರ್ಮವೆಂದರೆ ವಿಹಿತ ವಿಧಿಗಳೆಂದೂ ಪ್ರವೃತ್ತಿಜನಕವಾದ ಪ್ರಸಂಗಗಳೆಂದೂ ಅರ್ಥಮಾಡುತ್ತಾರೆ. ವಿಹಿತಕರ್ಮಗಳು ಅಥವಾ ವಿಧಿಗಳು ನಿತ್ಯನೈಮಿತ್ತಿಕ, ಕಾಮ್ಯ, ಪ್ರತಿಷಿದ್ಧ ಎಂದು ಮೂರು ಬಗೆ, ವಿಧಿಯೆಂದರೆ ಶ್ರುತಿಯಿಂದ ನಿರ್ದಿಷ್ಟವಾದವು. ಕರ್ಮಕ್ಕೂ ಕಾರಣಕ್ಕೂ ಭಾವನಾಸಂಬಂಧವನ್ನು ಏರ್ಪಡಿಸುವುದು ವಿಧಿಯ ಕೆಲಸ. ನಿತ್ಯವೆಂದರೆ ದಿನವೂ ಮಾಡುವ ಸಂಧ್ಯಾವಂದನ, ವೈಶ್ವದೇವ ಮುಂತಾದ ವಿಧಿಗಳು. ನೈಮಿತ್ತಿಕವೆಂದರೆ ಆಗಾಗ, ಸಂದರ್ಭಕ್ಕೆ ಉಚಿತವಾಗಿ, ಮಾಡುವ ಶ್ರುತಿವಿಹಿತ ಕರ್ಮಗಳು. ಇಂಥ ಕರ್ಮಗಳು ನಿಮಿತ್ತನಿಶ್ಚಯಾಧೀನವಾದವು. ಕಾಮ್ಯವೆಂದರೆ ಯಾವುದಾದರೂ ಕಾಮನೆಯಿಂದ ಮಾಡುವ ವಿಧಿವಿವಿಹಿತ ಕರ್ಮ. ಸ್ವರ್ಗಕಾಮೋ ಯಜೇತ, ಅಹರಹಃ ಸಂಧ್ಯಾಮುಪಾಸೀತ-ಮುಂತಾದುವೆಲ್ಲ ವಿಧಿಗಳು, ಮಾಡಬೇಕಾದ ಕರ್ಮಗಳಲ್ಲಿ ಪ್ರವೃತ್ತಿ ಯನ್ನುಂಟುಮಾಡುವ ಆದೇಶಗಳು. ಮಾಡಬಾರದುದನ್ನು ಬೇಡವೆಂದು ಹೇಳುವುದು ನಿಷೇಧ (ನ ಕಲಂಜಂ ಭಕ್ಷಯೇತ್ ಇತ್ಯಾದಿ) ಅಥವಾ ಪ್ರತಿಷಿದ್ಧಕರ್ಮ. ವಿಧಿಗೆ ಪ್ರವರ್ತನೆ ಪ್ರಯೋಜನವೆಂದೂ ನಿಷೇಧಕ್ಕೆ ನಿವರ್ತನೆ ಪ್ರಯೋಜನವೆಂದೂ ಮೀಮಾಂಸಕರ ವಾದ. ಹೀಗೆ ಶ್ರುತಿ ಚೋದನಾರೂಪವಾದುದೆಂದು ಪರಿಗಣಿಸಿದ ಮೀಮಾಂಸಕರು ಕರ್ಮಕಾಂಡವೇ ಪ್ರಮುಖವೆನ್ನುತ್ತಾರೆ.

ಈ ರೀತಿ ಪ್ರವೃತ್ತಿ-ನಿವೃತ್ತಿಗೆ ಕಾರಣವಾದ ಕರ್ಮದಿಂದಲೇ ಸಂಸಾರ ಸಿದ್ಧವಾಗಿದೆಯೆಂದೂ ಸಂಸಾರದಿಂದ ಪಾರಾಗಲು ಈ ಎರಡೂ ಕರ್ಮಗಳನ್ನು ಬಿಟ್ಟುಬಿಡಬೇಕೆಂದೂ ವೇದಾಂತಿಗಳ ವಾದ. ಉಪನಿಷತ್ತಿನಲ್ಲಿ ಚಿತ್ತಶುದ್ಧಿಗೆ ಕರ್ಮ, ಉಪಾಸನಾ, ಯೋಗ ಎಂಬ ಮೂರು ಸಂವಿಧಾನಗಳನ್ನು ಹೇಳಿದೆ. ಈ ಮೂರೂ ಸೇರಿ ಜ್ಞಾನ ಉತ್ಪನ್ನವಾಗವು ದೆಂದು ಶಂಕರಾಚಾರ್ಯರು ಅಭಿಪ್ರಾಯಪಡುತ್ತಾರೆ. ನಿಃಶ್ರೇಯಸಕ್ಕೆ ಕರ್ಮಸಂನ್ಯಾಸ ಕಾರಣವಾಗುವುದೆಂದು ಅವರ ವಾದ. ಭಗವದ್ಗೀತೆಯಲ್ಲಿ ಬರುವ ಕರ್ಮವಿಚಾರವಾದ ಪ್ರಸ್ತಾಪಕ್ಕೆ ಅವರು ಇದೇ ಅರ್ಥ ಮಾಡಿದ್ದಾರೆ.

ಭಗವದ್ಗೀತೆಯಲ್ಲಿ ಕರ್ಮ ಸಿದ್ಧಾಂತ

[ಬದಲಾಯಿಸಿ]

ಭಗವದ್ಗೀತೆಯಲ್ಲಿ ಕರ್ಮವನ್ನು ಯೋಗದ ನೆಲೆಯಲ್ಲಿ ನಿಲ್ಲಿಸಲಾಗಿದೆ. ಜ್ಞಾನಯೋಗ, ಭಕ್ತಿಯೋಗಗಳೊಂದಿಗೆ ಕರ್ಮಯೋಗವೂ ಸೇರಿ ಮೂರು ದಾರಿಗಳೆಂದು ಹಿಂದೂದರ್ಶನದಲ್ಲಿ ಪ್ರಸಿದ್ಧವಾಗಿದೆ. ಭಗವದ್ಗೀತೆಯಲ್ಲಿ ಕರ್ಮವೆಂದರೆ ವರ್ಣಾಶ್ರಮವಿಹಿತವಾದ ಕರ್ಮ. ಕ್ಷತ್ರಿಯನಿಗೆ ಯುದ್ಧ ಮಾಡುವುದು ಅವಶ್ಯವಾದ ಕರ್ಮ. ಇದನ್ನು ಧರ್ಮವೆಂಬ ಅರ್ಥದಲ್ಲಿ ಹೇಳಿದ್ದಾರೆ. ಸ್ವಧರ್ಮೇ ನಿಧನಂಶ್ರೇಯಃ ಎನ್ನುವಾಗ ತಮ್ಮ ತಮ್ಮ ವರ್ಣಾಶ್ರಮಕರ್ಮಗಳನ್ನು ಮಾಡಬೇಕೆಂಬುದೇ ಆಶಯ. ಇಲ್ಲಿಯೂ ಪೂರ್ವಮೀಮಾಂಸಕರ ಪ್ರವೃತ್ತಿ ಪ್ರಚೋದಕವಾದ ಬರುತ್ತದೆ. ಪ್ರಕೃತಿಂ ಯಾಂತಿ ಭೂತಾನಿ ನಿಗ್ರಹಃ ಕಿಂ ಕರಿಷ್ಯತಿ, ಅನಿಚ್ಛನ್ ಅಪಿವಾಷ್ಣೆರ್ೕಯ ಬಲಾದಿವ ನಿಯೋಜಿತಃ ಇತ್ಯಾದಿ ಮಾತುಗಳಲ್ಲಿ ಈ ಅರ್ಥ ಅಡಗಿದೆ. ಕರ್ಮ ಮಾಡದೆ ಒಂದು ಕ್ಷಣವಾಗಲೀ ಇರುವುದು ಸಾಧ್ಯವಿಲ್ಲವೆಂದು ಕೃಷ್ಣ ಹೇಳುವಾಗ ಸಾಮಾನ್ಯ ಕರ್ಮಸಿದ್ಧಾಂತವೇ ನಿರೂಪಿತವಾಗಿದೆ. ಆದರೆ ಫಲಾಪೇಕ್ಷೆಯನ್ನು ಬಿಟ್ಟು ನಿಃಸಂಗನಾಗಿ ಮಾಡುವ ಕರ್ಮ ಕರ್ಮಯೋಗ ವೆನಿಸಿಕೊಳ್ಳುತ್ತದೆ. ಕುರುಕರ್ಮೈವ ತ್ವಂ, ಕರ್ಮಜ್ಯಾಯೋsಹ್ಯಕರ್ಮಣಃ ಎಂದು ಮುಂತಾಗಿ ಕರ್ಮದ ಅಗತ್ಯವನ್ನು ಹೇಳಿ ಮಾ ಫಲೇಷು ಕದಾಚನ ಎಂಬ ಪಕ್ಷವನ್ನೂ ಸೇರಿಸಿದಾಗ ಕರ್ಮಸಿದ್ಧಾಂತ ಕರ್ಮಯೋಗವಾಗಿ ಪರಿಣಮಿಸುತ್ತದೆ. ಜ್ಞಾನದ ಹೆಚ್ಚಳವನ್ನು ಹೇಳುವ ಉಪನಿಷತ್ತೂ ಕರ್ಮದ ಅಗತ್ಯವನ್ನು ಹೇಳುತ್ತದೆ. ಕರ್ಮನ್ನೇವೇಹ ಕರ್ಮಾಣಿ ಎಂಬ ಈಶಾವಾಸ್ಯ ಉಪನಿಷತ್ತಿನ ಮಾತು ಪ್ರಸಿದ್ಧವಾದುದು. ಬ್ರಹ್ಮನ ದರ್ಶನವಾಗುವಾಗ ಎಲ್ಲ ಕರ್ಮಗಳೂ ಕ್ಷಯಿಸುತ್ತವೆ. (ಕ್ಷೀಯಂತೇ ಚಾಸ್ಯ ಕರ್ಮಾಣಿ ತಸ್ಮಿನ್ ದೃಷ್ಟೇ ಪರಾವರೇ) ಎಂದು ಹೇಳಿದರೂ ನಿತ್ಯಜೀವನದಲ್ಲಿ ಮಾಡಬೇಕಾದ ಸತ್ಯ. ಧರ್ಮ, ಕರ್ಮಗಳನ್ನು ಅಲ್ಲಗಳೆಯುವುದಿಲ್ಲ.

ಅದ್ವೈತ ಮತದಲ್ಲಿ ಕರ್ಮ ಸಿದ್ಧಾಂತ

[ಬದಲಾಯಿಸಿ]

ಜ್ಞಾನೈಕನಿಷ್ಠರಾದ ಅದ್ವೈತಿಗಳೂ ಕರ್ಮದ ಅಗತ್ಯವನ್ನು ಅಂಗೀಕರಿಸುತ್ತಾರೆ. ಶಂಕರಾಚಾರ್ಯರೂ ವೇದೋ ನಿತ್ಯಂ ಅಧೀಯತಾಂ, ತದುದಿತಂ ಕರ್ಮ ಸ್ವನುಷ್ಠೀಯತಾಂ ಎಂಬ ಆದೇಶವನ್ನು ಕೊಟ್ಟಿದ್ದಾರೆ. ಕರ್ಮಸಿದ್ಧಾಂತದಲ್ಲಿ ಪ್ರಮುಖವಾದ ವಿಚಾರವೆಂದರೆ ಅದರಿಂದ ಒದಗುವ ಲೇಪ; ಇದರಿಂದಾಗಿ ಅಭ್ಯುದಯ, ನಿಃಶ್ರೇಯಸಗಳಿಗೆ ಒದಗುವ ಅಡ್ಡಿ. ಕರ್ಮ ಮಾಡುವುದು ಅನಿವಾರ್ಯವಾದಾಗ ನಿಷ್ಕಾಮಕರ್ಮ ಮಾಡಿದರೆ ಕರ್ಮಮಾಡಿದರೂ ಮಾಡದಂತೆಯೇ ಎಂಬ ನಿಲವು ವೇದಾಂತದಲ್ಲಿ ಕಂಡುಬರುತ್ತದೆ.

ಜೈನ ಮತ್ತು ಬೌದ್ಧಧರ್ಮದಲ್ಲಿ ಕರ್ಮ ಸಿದ್ಧಾಂತ

[ಬದಲಾಯಿಸಿ]
ಭಾರತದ ದೇವಾಲಯಗಳಲ್ಲಿ ಕಂಡುಬರುವ ಮುದ್ರೆ( motif)ಗಳು ಹೆಚ್ಚಾಗಿ ಒಂದಕ್ಕೊಂದು ಸೇರಿಕೊಂಡಿರುವ ಆಕೃತಿಗಳನ್ನು/ಗಂಟುಗಳನ್ನು ಹೊಂದಿರುತ್ತವೆ. ಇದು ಕರ್ಮದ ಮತ್ತು ಜೀವಿಗಳ ನಡುವಿನ ಸಂಬಂಧಗಳ ಪ್ರತೀಕವಾಗಿದೆ.ಈ ಚಿತ್ರವು ಒಂದು ಜೈನ ಮಂದಿರದಲ್ಲಿರುವ ಮುದ್ರೆ (motif).

ಇದೇ ದೃಷ್ಟಿ ಜೈನ, ಬೌದ್ಧದರ್ಶನಗಳಲ್ಲಿಯೂ ಇದೆ. ಜೀವದಲ್ಲಿ ಕರ್ಮ ಪ್ರಸಕ್ತವಾಗಿ ಹರಿಯತೊಡಗಿದರೆ ಅದು ಆಸ್ರವವೆಂದು ಜೈನರ ವಾದ, ಕಾಲುವೆಯಲ್ಲಿ ನೀರು ಹರಿದು ಬರುವಂತೆ ಕರ್ಮಪುದ್ಗಲ ಜೀವದಲ್ಲಿ ಒದಗಿ ಬಂದು ಜೀವವನ್ನು ಆವರಿಸುತ್ತದೆ. ಜೀವ, ಕರ್ಮ ಇವೆರಡರ ಅನ್ಯೋನ್ಯ ಸಂಬಂಧವೇ ಬಂಧನವೆನಿಸಿಕೊಳ್ಳುತ್ತದೆ. ಬಂಧನಕ್ಕೆ ವಿರುದ್ಧವಾಗಿ ಆಶ್ರವ ಒದಗಿಬರದಂತೆ ಸಂವರ ಕರ್ಮವನ್ನು ತಡೆಗಟ್ಟುವುದು. ಆಸ್ರವದಿಂದ ಎಂದರೆ ಕರ್ಮದ ಪ್ರಸಕ್ತಿಯಿಂದ, ಸಂಸಾರ ಸಿದ್ಧವಾಗುತ್ತದೆ. ಅದರ ನಿರೋಧದಿಂದ, ಎಂದರೆ ಸಂವರದಿಂದ, ಮೋಕ್ಷ ಲಭಿಸುತ್ತದೆ. ಜೈನರೂ ಜನ್ಮಾಂತರಗಳಲ್ಲಿ ಸಂಚಿತವಾದ ಕರ್ಮವನ್ನು ಒಪ್ಪಿಕೊಳ್ಳುತ್ತಾರೆ. ಇಂಥ ಕರ್ಮಗಳ ಕ್ಷಯಕ್ಕಾಗಿ ಯೋಗಮಾರ್ಗವನ್ನು ತೀರ್ಥಂಕರರು ಬೋಧಿಸಿದ್ದಾರೆ. ಸಂಚಿತ ಕರ್ಮಗಳ ಕ್ಷಯವೇ ನಿರ್ಜರವೆನಿಸಿಕೊಳ್ಳುತ್ತದೆ. ಹೀಗೆ ಜೈನರು ಹೇಳುವ ಜೀವ, ಅಜೀವ, ಆಸ್ರವ ಬಂಧ, ಸಂವರ, ನಿರ್ಜರ, ಮೋಕ್ಷ ಎಂಬ ಸಪ್ತಪದಾರ್ಥಗಳು ಕರ್ಮವನ್ನು ಪ್ರತ್ಯೇಕವಾಗಿ ಒಳಗೊಳ್ಳದಿದ್ದರೂ ಏಳರಲ್ಲೂ ಕರ್ಮದ ಪ್ರಸಕ್ತಿಯಿದೆ. ಮೋಕ್ಷಮಾರ್ಗಗಳೆಂದು ಅವರು ಹೇಳುವ ಸಮ್ಯಕ್ದರ್ಶನ, ಸಮ್ಯಕ್ಜ್ಞಾನ ಮತ್ತು ಸಮ್ಯಕ್ಚಾರಿತ್ರಗಳಲ್ಲಿ ಸಮ್ಯಕ್ ಚಾರಿತ್ರವೆಂಬುದು ಕರ್ಮಕ್ಕೆ ನೇರವಾಗಿ ಸಂಬಂಧಿಸಿದುದೇ. ಅಹಿಂಸಾ, ಸತ್ಯ, ಅಸ್ತೇಯ, ಬ್ರಹ್ಮಚರ್ಯ, ಅಪರಿಗ್ರಹ ಈ ಪಂಚಮಹಾವ್ರತಗಳು ಕರ್ಮಸಿದ್ಧಾಂತವನ್ನನುಸರಿಸಿ ಒದಗಿದುವೇ. ಜೈನರ ಲೇಶ್ಯಕಲ್ಪನೆಗೂ ಕರ್ಮಸಿದ್ಧಾಂತವೇ ಆಧಾರ.

ಬೌದ್ಧದರ್ಶನದಲ್ಲಿಯೂ ಕರ್ಮಸಿದ್ಧಾಂತವನ್ನು ಅವಶ್ಯವೆಂದು ಅಂಗೀಕರಿಸಿದ್ದಾರೆ. ಮಾಡುವಾಗ ಪರಿಜ್ಞಾನವಿಲ್ಲದೆ ಮಾಡಿ, ಅದರ ಫಲ ಒದಗಿದಾಗ ಅಳುಮುಖದಿಂದ ಅನುಭವಿಸುವ ಪ್ರಸ್ತಾಪ ಧಮ್ಮಪದದಲ್ಲಿ ಹಲವೆಡೆ ಬರುತ್ತದೆ. ರಾಗ, ದ್ವೇಷ, ಮೋಹಗಳಿಂದ ಕರ್ಮಬಂಧ ಒದಗುವುದೆಂದೂ ಪಂಚಕಾಮಗುಣಿಕ ರಾಗದಿಂದಲೇ ಎಂದರೆ ವಸ್ತುಕಾಮ ಮತ್ತು ಕ್ಲೇಶಕಾಮಗಳಿಂದಲೇ ಆತ್ಮಪ್ರತ್ಯಯ ಉತ್ಪನ್ನವಾಗಿ ಆತ್ಮಕ್ಕೆ ಸಂಬಂಧಪಟ್ಟ ವ್ಯಾಪಾರಗಳು, ಎಂದರೆ ಕರ್ಮಗಳು, ಪ್ರಸಕ್ತವಾಗುವುವೆಂದೂ ಬೌದ್ಧರ ವಾದ. ಸಂಸಾರದಲ್ಲಿ ಐದು ಸ್ಕಂಧಗಳ ಅವಿರತ. ಅನುಸ್ಯೂತ ವ್ಯಾಪಾರದಿಂದ ಆಯತನಗಳು (ಚಕ್ಷು ಶ್ರೋತ್ರ, ಮುಂತಾದ ಆರು ಅಜ್ಜಿಂತಿಕಾಯತನಗಳು, ರೂಪ, ಶಬ್ದ ಮುಂತಾದ ಆರು ಬಹಿರಾಯತನಗಳೂ ಸೇರಿ ಹನ್ನೆರಡು ಆಯತನಗಳು) ಉತ್ಪನ್ನವಾಗುತ್ತವೆ. ಈ ಆಯತನಗಳಿಂದಾಗಿ ಸ್ಕಂಧಗಳು ಉಪಾದಾನಸ್ಕಂಧಗಳಾಗಿ ಪರಿಣಮಿಸುತ್ತವೆ. ಇಂಥ ಸ್ಥಿತಿಯಲ್ಲಿ ಕರ್ಮದ ಅಗತ್ಯ ಬರುತ್ತದೆ. ಬೌದ್ಧರ ದೃಷ್ಟಿಯಲ್ಲಿ ಲೋಕಗಳು ಮೂರು-ಸತ್ತ್ವಲೋಕ (ಜೀವಿಗಳಿರುವ ಲೋಕ). ಅವಕಾಸಲೋಕ (ಭೂಮಿ ಮುಂತಾದ ಗ್ರಹಗಳು ಇರುವ ಲೋಕ) ಮತ್ತು ಸಂಸ್ಕಾರಲೋಕ (ಮನುಷ್ಯನ ದೇಹ ಮತ್ತು ಮನಸ್ಸಿನ ಎಲ್ಲ ಕ್ರಿಯೆಗಳೂ ಸೇರಿ ಆಗುವ ಲೋಕ). ಈ ಸಂಸ್ಕಾರಲೋಕದಲ್ಲೇ ಕರ್ಮನಿಯಮವಿರುವುದು. ಬೌದ್ಧರು ಪ್ರಮುಖವಾಗಿ ಮಾಸಕ್ರಿಯೆಗಳಿಗೇ ಕರ್ಮವೆನ್ನವುದು. ಚೇತನಾ„ಹಂ ಭಿಕ್ಖವೇ ಕಮ್ಮಂ ವದಾಮಿ ಎಂದು ಬುದ್ಧನೇ ಹೇಳಿದಂತೆ ಉಲ್ಲೇಖವಿದೆ.

ಚಿತ್ತ (ಸಂಕಲ್ಪ, ಇತ್ಯಾದಿ), ಋತು, ಆಹಾರ-ಇವುಗಳಿಂದ ಕರ್ಮ ನಿರ್ದಿಷ್ಟವಾಗುವು ದೆಂದು ಸ್ಥವಿರವಾದಿಗಳು ನಂಬುತ್ತಾರೆ. ಕರ್ಮಗಳಲ್ಲಿ ನಾಲ್ಕು ಬಗೆಗಳೆಂದು ಇವರ ವಾದ. ಪುನರ್ಜನ್ಮಕ್ಕೆ ಕಾರಣವಾಗುವ ಜನಕ ಕಮ್ಮ, ಇಂಥ ಕರ್ಮಗಳಿಗೆ ಆಸರೆಯಾಗಿ ಉಪಷ್ಟಂಭಕವಾಗಿರುವ ಉಪಷ್ಟಂಭಕ ಕಮ್ಮ-ಇವೆರಡೂ ಸಂಸಾರವನ್ನು ಸಿದ್ಧಮಾಡುವ ಕರ್ಮಗಳು. ಈ ಎರಡು ಕರ್ಮಗಳು ಪಕ್ವವಾಗದಂತೆ ಪ್ರತಿಬಂಧಕ ಮಾಡುವುದು ಉಪಪೀಲಕ ಕಮ್ಮ; ಈ ಎರಡು ಕರ್ಮಗಳ ಫಲ ನಾಸವಾಗುವಂತೆ ಮಾಡುವುದು ಉಪಘಾತ ಕಮ್ಮ. ಕರ್ಮಮಾಡುವವನ ದೃಷ್ಟಿಯಿಂದ ಕರ್ಮಗಳನ್ನು ಕಾಯಕರ್ಮ, ವಾಚಿಕರ್ಮ, ಮಾನಸಕರ್ಮವೆಂಬುದಾಗಿ ವಿಭಾಗಮಾಡುತ್ತಾರೆ. ಈ ವಿಭಾಗ ವೈದಿಕದರ್ಶನಗಳಲ್ಲೂ ಉಂಟು. ಫಲ ವಿಪಾಕಹೊಂದುವ ಬಗೆಯ ದೃಷ್ಟಿಯಿಂದ ಕರ್ಮದಲ್ಲಿ ನಾಲ್ಕು ವಿಧ; ಭಾರಿ ಫಲವನ್ನು ಒದಗಿಸುವ ಗುರುಕಕಮ್ಮ (ಇದರಲ್ಲಿ ತೀರ ಕೆಟ್ಟ ಕೆಲಸಗಳೂ ಧ್ಯಾನಗಳೂ ಸೇರುತ್ತವೆ), ಸಾಯುವ ಮುನ್ನ ಒದಗಿದ ಭಾವನೆಯಿಂದ ಮುಂದಿನ ಜನ್ಮವನ್ನು ನಿರ್ದೇಶನಮಾಡುವ ಆಸನ್ನಕಮ್ಮ, ಅಭ್ಯಾಸದ ಬಲದಿಂದ ಪ್ರವೃತ್ತವಾಗುವ ಆಚಿಣ್ಣ, ಮತ್ತು ಹಿಂದಿನ ಶೇಷ ಉಳಿದಿದ್ದರೆ ಕಟತ್ತಾ (ಕಟಸ್ಸ ಭಾವೋ, ಎಂದರೆ ಮಾಡಿರುವುದರ ಭವ ಅಥವಾ ಸಂಚಿತಕರ್ಮ). ಕರ್ಮ ಪಕ್ವವಾಗುವ ಕಾಲದ ದೃಷ್ಟಿಯಿಂದ ದಿಟ್ಟಧರ್ಮವೇದನೀಯ (ಇದೇ ಜನ್ಮದಲ್ಲಿ ಫಲಕೊಡುವ ಕರ್ಮಗಳು), ಉಪಪಜ್ಜವೇದನೀಯ (ಮುಂದಿನ ಜನ್ಮದಲ್ಲಿ ಫಲಕೊಡುವ ಕರ್ಮಗಳು), ಅಪರಾಪರಿಯ ವೇದನೀಯ (ಯಾವುದೋ ನಿರ್ದಿಷ್ಟವಲ್ಲದ ಮುಂದಿನ ಒಂದು ಜನ್ಮದಲ್ಲಿ ಫಲಕೊಡುವ ಕರ್ಮಗಳು), ಮತ್ತು ಅಹೋಸಿಕಮ್ಮ (ಶಕ್ತಿಯನ್ನು ಕಳೆದುಕೊಂಡ ಕರ್ಮಗಳು)-ಹೀಗೆ ವಿಭಾಗ ಮಾಡುತ್ತಾರೆ. ಪ್ರತಿಯೊಂದು ಚಿತ್ತವೃತ್ತಿಯೂ ಕರ್ಮವೆಂದೂ ಆದರಿಂದ ನಿಯತವಾದ ಫಲ ಸಿದ್ಧವಾಗುವುದೆಂದೂ ಹೇಳುವ ವಾದಕ್ಕೆ ಚಿತ್ತನಿಯಾಮವೆಂದು ಹೆಸರು.

ಬುದ್ಧ ಹೇಳಿದ ಅಷ್ಟಾಂಗಮಾರ್ಗದಲ್ಲಿಯೂ ನಾಲ್ಕನೆಯದು ಸಮ್ಯಕ್ಕರ್ಮಾಂತ (ಸಮ್ಮಾಕಮ್ಮಂತ) ಎನಿಸಿಕೊಳ್ಳುತ್ತದೆ. ಪ್ರಾಣಾತಿಪಾತ. ಅದತ್ತಾದಾನ ಮತ್ತು ಅಬ್ರಹ್ಮಚರ್ಯ-ಇವುಗಳಿಂದ ವಿರತಿಯೇ ಸಮ್ಮಾಕಮ್ಮಂತ, ಸಂಕಲ್ಪ, ವಾಚಾ ಕರ್ಮಾಂತ, ಆಜೀವಗಳು ಸೇರಿ ಶೀಲಸ್ಕಂಧವೆನಿಸಿಕೊಳ್ಳುತ್ತವೆ. ಜೈನರು ಹೇಳುವ ಸಮ್ಯಕ್ಚಾರಿತ್ರದಂತೆ ಬೌದ್ಧರ ಸಮ್ಯಕ್ಕರ್ಮಾಂತ.

ಮಕ್ಖಲಿ ಗೋಸಾಲನೆಂಬ ಆಜೀವಿಕ ತೀರ್ಥಂಕರ ಕರ್ಮದ ವಿಚಾರವಾಗಿ ತುಂಬ ಗಾಢವಾದ ವಿವೇಚನೆ ನಡೆಸಿದ್ದನೆಂದು ತಿಳಿದುಬರುತ್ತದೆ. ಅವನ ಪ್ರಕಾರ ಜಗತ್ತಿನಲ್ಲಿ ನಡೆಯುವ ಎಲ್ಲ ಪ್ರಸಂಗಗಳಿಗೂ ಆಧಾರವಾಗಿ ನಿಯತಿ, ಸಂಗತಿ ಮತ್ತು ಭಾವಗಳಿವೆ. ನಿಯತಿಯೆಂದರೆ ಕರ್ಮದಿಂದ ನಿರ್ದಿಷ್ಟವಾದ ಫಲ ಬಂದೇ ಬರುವುದೆಂದರ್ಥ. ಸಂಗತಿಯೆಂದರೆ ಜೀವಜಾತಿಗಳು. ಭಾವ ಪ್ರಕೃತಿ ನಿರ್ದೇಶಕವಾದ ಫಲ. ನಿಯತಿಯ ಬಲದಿಂದ ಗೋಸಾಲ ಪರಿಣಾಮವಾದವನ್ನು ಹೂಡಿದ. ಪ್ರಾಣಿಗಳೂ ಪ್ರಸಂಗಗಳೂ ಪೂರ್ವಕರ್ಮವಶದಿಂದ ಪುನಃಪುನಃ ಪ್ರವೃತ್ತವಾಗುವುವೆಂದು ಇವನ ವಾದ (ಪವುಟ್ಟ ಪರಿಹಾರವಾದ). ಅವನ ಪ್ರಕಾರ ಕರ್ಮಗಳು ಎರಡೇ ವಿಧ-ವಾಚಿಕ ಮತ್ತು ಮಾನಸಿಕ. ಮಾನಸಿಕ ಕರ್ಮ ಅರ್ಧಕರ್ಮವೆಂದು ಅವನ ಎಣಿಕೆ. ಅವನ ಸಮಸಾಮಯಿಕರಲ್ಲಿ ಕೆಲವು ತೀರ್ಥಂಕರರು (ಕಕುದ ಕಜ್ಜಾಯನ ಇತ್ಯಾದಿ) ಅಕ್ರಿಯಾ ವಾದವನ್ನು ಹಿಡಿದಿದ್ದರು. ಕರ್ಮಕ್ಕೂ ಫಲಕ್ಕೂ ಸಂಬಂಧವಿಲ್ಲವೆಂದು ವಾದ ಇದು. ಯಾವ ಕರ್ಮವೂ ಫಲಕಾರಿಯಾಗದೆಂದೂ ನಡೆಯುವ ಪ್ರಸಂಗಗಳೆಲ್ಲ ಯದೃಚ್ಛೆಯಿಂದ ಆಗುವುದೆಂದೂ ಇನ್ನೊಂದು ವಾದವಿದೆ.

ಒಟ್ಟಿನಲ್ಲಿ ಕರ್ಮಸಿದ್ಧಾಂತಕ್ಕೂ ನೈತಿಕ ಜೀವನಕ್ಕೂ ನಿಕಟವಾದ ಸಂಬಂಧವುಂಟು. ಕರ್ಮದ ಕಲ್ಪನೆಯಿಲ್ಲದಿದ್ದರೆ ಜೀವನದಲ್ಲಿ ಸಮಾಧಾನವೊದಗುವುದು ದುಸ್ತರವಾಗುತ್ತದೆ. ಕರ್ಮದಲ್ಲಿ ಶ್ರದ್ಧೆಯಿಲ್ಲದಿದ್ದರೆ ಶೀಲವನ್ನು ಬೆಳೆಸಿಕೊಳ್ಳಲು ಮನಸ್ಸು ಒದಗದು. ಕರ್ಮದ ತಾತ್ತ್ವಿಕ ಸಮರ್ಥನೆಯಿಲ್ಲದೆ ಶೀಲಕ್ಕೆ ಆಧಾರವೇ ಇರದು. ಸಂಘಜೀವಿ ಕುಶಲಕರ್ಮಗಳನ್ನೇ ಮಾಡಬೇಕೆಂಬ ದೀಕ್ಷೆಗೆ ಕರ್ಮ ವಿಪಾಕ ಸಿದ್ಧಾಂತ ಅಡಿಪಾಯ. ಇದರ ಮೇಲೆ ಪರಮಪುರುಷಾರ್ಥವನ್ನು ಸಾಧಿಸಿಕೊಳ್ಳಲು ವ್ಯವಸ್ಥಿತವಾದ ಕರ್ಮಯೋಗ ಜಗದ್ವಿಖ್ಯಾತವಾಗಿದೆ. ರಾಷ್ಟ್ರಕ್ಕೆ ಇದು ಪ್ರಯೋಜನಕಾರಿಯೆಂಬುದನ್ನು ಲೋಕಮಾನ್ಯ ಬಾಲಗಂಗಾಧರ ತಿಲಕರೂ ಸ್ವಾಮಿ ವಿವೇಕಾನಂದರೂ ತೋರಿಸಿಕೊಟ್ಟಿದ್ದಾರೆ. ಹಿಂದಿನ ಕಾಲದಿಂದ ಪ್ರಚಲಿತವಾದ ಕ್ರಿಯಾಯೋಗವೆಂಬ ಸಂವಿಧಾನವನ್ನು ಈಚೆಗೆ ಯೋಗಾನಂದ ಪರಮಹಂಸರು ಅಮೆರಿಕ ದೇಶದಲ್ಲಿ ವಿಶೇಷವಾಗಿ ಪ್ರಚಾರ ಮಾಡಿದರು. ತಪಸ್ಸು, ಸ್ವಾಧ್ಯಾಯ ಮತ್ತು ಈಶ್ವರಪ್ರಣಿಧಾನ-ಇವು ಕ್ರಿಯಾಯೋಗದ ವಿವರಗಳು.

ಕರ್ಮತ್ರಯ

[ಬದಲಾಯಿಸಿ]
ಕಮಲ ಪುಷ್ಪವು ಹೆಚ್ಚಿನ ಏಷಿಯಾದ ದೇಶಗಳಲ್ಲಿ ಕರ್ಮದ ಸಂಕೇತವಾಗಿದೆ.ಅರಳಿದಾಗಲೇ ಬೀಜವನ್ನೂ ಹೊಂದಿರುವ ಕೆಲವೇ ಪುಷ್ಪಗಳಲ್ಲಿ ತಾವರೆಯೂ ಒಂದು.ಇಲ್ಲಿ ಬೀಜವು ಕಾರಣವಾದರೆ ಪುಷ್ಪವು ಕಾರ್ಯ.ತಾವರೆಯು ಉತ್ತಮ ಕರ್ಮವನ್ನು ಮಾಡಲು ಪ್ರೇರಣೆಯಾದಂತೆಯೇ ಉತ್ತಮಕರ್ಮದಿಂದ ಉಂಟಾಗುವ ಕಲ್ಮಶಗಳು ನಮ್ಮನ್ನು ಅಂಟಲಾರದು ಎಂಬುದನ್ನೂ ಸೂಚಿಸುತ್ತದೆ..[]

ಕರ್ಮವಿಚಾರವನ್ನು ಮೊದಲು ಹೇಳಹೊರಟವರು ಮೀಮಾಂಸಕರು. ಕರ್ಮ ಎಂದರೆ ಕ್ರಿಯೆ. ಅವರ ಮತದಂತೆ ಫಲಪ್ರಾಪ್ತಿಗಾಗಿ ಮಾಡುವ ಕ್ರಿಯಾಕಲಾಪವೇ ಕರ್ಮ. ಕರ್ಮಾಣಿ ಬೋಧನಾರ್ಥ ವಿದ್ಯಾ (ಶಾಬರ ಭಾಷ್ಯ)-ಎಂದರೆ ವಿದ್ಯೆ ಕರ್ಮದಲ್ಲಿ ಪರ್ಯವಸಾನಹೊಂದಬೇಕು. ಧರ್ಮ ಅನುಷ್ಠಾನವನ್ನು ಬಯಸುತ್ತದೆ. ಆದ್ದರಿಂದಲೇ ದಾರ್ಶನಿಕರು ವಿದ್ಯಾವಬೋಧಿತಧರ್ಮವಾಗಿರುವ ಸತ್ಕ್ರಿಯೆಗೆ ಮಾತ್ರ ಕರ್ಮವೆಂದರು. ಈ ಕರ್ಮ ಶಬ್ದವನ್ನು ಧರ್ಮ ಎಂಬ ಅರ್ಥದಲ್ಲಿ ಉಪಯೋಗಿಸುವುದುಂಟು. ಆದರೆ ಕರ್ಮವೇ ಧರ್ಮವಲ್ಲ. ಅದು ಧರ್ಮಗಳಲ್ಲಿ ಒಂದು. ಅರ್ಥ ಮತ್ತು ಕಾಮ ಸಂಪಾದನಕ್ಕಾಗಿ ಮಾಡುವ ಕಾರ್ಯಕಲಾಪಗಳಲ್ಲಿ ವೇದ ಸಮ್ಮತವಾದುದೆಲ್ಲ ಕರ್ಮವೇ. ಈ ಕಾರಣದಿಂದ ಯಾಜನಾದಿಗಳು ವಿಪ್ರರಿಗೂ ಶಿಷ್ಟಪರಿಪಾಲನ, ದುಷ್ಟನಿಗ್ರಹಾದಿಗಳು ಕ್ಷತ್ರಿಯರಿಗೂ ಕೃಷಿವಾಣಿಜ್ಯಾದಿಗಳು ವೈಶ್ಯಾದಿಗಳಿಗೂ ಅರ್ಥಸಂಪಾದನೆಗಾಗಿ ವಿಹಿತವಾಗಿರುವ ಕರ್ಮಗಳು. ಕರ್ಮವಿಭಾಗಗಳು: ಕರ್ಮ ಶ್ರೌತ ಮತ್ತು ಸ್ಮಾರ್ತ ಎಂದು ಎರಡು ವಿಧ. ಕಲ್ಪಸೂತ್ರಾದಿ ಗಳಲ್ಲಿ ಹೇಳುವ ಕರ್ಮಗಳು ಶ್ರೌತ ಧರ್ಮಶಾಸ್ತ್ರವೆಂದು ಪರಿಗಣಿತವಾಗಿರುವ ಆಪಸ್ತಂಭ, ಗೌತಮ ಮತ್ತು ಆಶ್ವಲಾಯನಾದಿ ಮಹರ್ಷಿ ಪ್ರಣೀತವಾದ ಸ್ಮೃತಿಗಳಲ್ಲಿ ಹೇಳಿರುವ ಕರ್ಮಗಳು ಸ್ಮಾರ್ತ. ಇವುಗಳಲ್ಲಿ ವಿಹಿತಕರ್ಮ ಮತ್ತು ನಿಷಿದ್ಧಕರ್ಮ ಎಂದು ಎರಡು ಬಗೆ. ಮಾಡಬೇಕು ಎಂದು ವಿಧಿರೂಪವಾಗಿ ಶ್ರುತಿ ಸ್ಮೃತಿಗಳಲ್ಲಿ ಹೇಳಿರುವುದು ವಿಹಿತಕರ್ಮ. ಸತ್ಯಂ ವದ, ಧರ್ಮಂ ಚರ-ಮುಂತಾದದ್ದು. ಮಾಡಬಾರದು ಎಂದು ಹೇಳಿರುವುದು ನಿಷಿದ್ಧ ಕರ್ಮ. ಉದಾ: ನ ಸುರಾಂಪಿಬೇತ್, ನಾನೃತಂ ವದೇತ್-ಮುಂತಾದ್ದು.

ಕರ್ಮತ್ರಯ ಸ್ವರೂಪ

[ಬದಲಾಯಿಸಿ]

ಮೀಮಾಂಸಕರು ಕರ್ಮವನ್ನು ನಿತ್ಯ, ನೈಮಿತ್ತಿಕ ಮತ್ತು ಕಾಮ್ಯ ಎಂದು ಮೂರು ಬಗೆಯಾಗಿ ವಿಂಗಡಿಸಿದ್ದಾರೆ. ಅವಶ್ಯ ಮಾಡಲೇ ಬೇಕಾದ ಕರ್ಮಗಳು. ನಿತ್ಯ. ಉದಾ: ಸಂಧ್ಯಾವಂದನ, ಶಿವಾರ್ಚನ, ಅಷ್ಟಕಾಶ್ರಾದ್ಧ, ಸಾಂವತ್ಸರಿಕ ಪಿತೃಶ್ರಾದ್ಧ, ಮುಂತಾದುವು. ಅನಿಯತವಾಗಿ ಮಾಡುವ ಕರ್ಮಗಳು ನೈಮಿತ್ತಿಕ, ಉದಾ: ಮಗ ಹುಟ್ಟಿದರೆ ಒಂದು ಇಷ್ಟಿಯನ್ನು (ಯಾಗ) ಮಾಡಬೇಕು. ನಿತ್ಯ ಮತ್ತು ನೈಮಿತ್ತಿಕ ಕರ್ಮಗಳನ್ನು ಮಾಡದಿದ್ದರೆ ಪ್ರತ್ಯವಾಯ (ಪಾಪ). ಮಾಡಿದರೆ ಕರ್ತವ್ಯವನ್ನು ಮಾಡಿದಂತಾಯಿತೆ ಹೊರತು ಅದಕ್ಕೆ ಬೇರೆ ಫಲವಿಲ್ಲ. ಯಾವುದಾದರೊಂದು ಕಾಮನೆ ಎಂದರೆ ಫಲೋದ್ದೇಶದಿಂದ ಮಾಡುವ ಕರ್ಮ ಕಾಮ್ಯ. ಉದಾ: ಪುತ್ರಕಾಮೇಷ್ಟಿ ಮುಂತಾದವುಗಳು. ಮಾಡಿದರೆ ಫಲವುಂಟು. ಮಾಡದಿದ್ದರೆ ದೋಷವಿಲ್ಲ. ಮತ್ತೊಂದು ವಿಶೇಷವೆಂದರೆ ನಿತ್ಯಕರ್ಮದಲ್ಲಿ ಪ್ರಧಾನ ಕರ್ಮವನ್ನು ಮಾಡಿ ಅಶಕ್ತಿಯಿಂದ ಅದರ ಅಂಗಕರ್ಮಗಳಿಗೆ ಅಕಸ್ಮಾತ್ ಲೋಪಬಂದರೂ ದೋಷವಿಲ್ಲ. ಕಾಮ್ಯ ಮಾತ್ರ ಹಾಗಲ್ಲ. ಇಲ್ಲಿ ಅದರ ಪ್ರತಿಯೊಂದು ಅಂಗವನ್ನೂ ಆಯಾ ಕಲ್ಪೋಕ್ತಕ್ರಮದಿಂದ ಮಾಡಲೇಬೇಕು. ಇಲ್ಲದಿದ್ದರೆ ಫಲ ದೊರೆಯುವುದಿಲ್ಲ.

ವೇದಾಂತದಲ್ಲಿ ಪುಣ್ಯಕರ್ಮ, ಪಾಪಕರ್ಮ ಮತ್ತು ಮಿಶ್ರಕರ್ಮ ಎಂದು ಕರ್ಮ ಮೂರು ಬಗೆಯಾಗಿದೆ. ಮನಸ್ಸು. ಮಾತು ಮತ್ತು ಮೈಗಳಿಂದ ಪರರಿಗೆ ಉಪಕಾರ ಮಾಡುವುದು ಪುಣ್ಯಕರ್ಮ. ದುಃಖವನ್ನು ಉಂಟುಮಾಡುವುದು ಪಾಪಕರ್ಮ. ಎರಡೂ ಬೆರಕೆಯಾಗಿದ್ದರೆ ಮಿಶ್ರವೆನಿಸುತ್ತದೆ. ಪರೋಪಕಾರಃ ಪುಣ್ಯಾಯ ಪಾಪಾಯ ಪರಪೀಡನಂ (ಮಹಾಭಾರತ) ಎಂಬ ಉಕ್ತಿ ಇದನ್ನು ಸಮರ್ಥಿಸುತ್ತದೆ. ಕರ್ಮಮಾಡುವಲ್ಲಿ ಅಭಿಮಾನವಿರಬಾರದು, ಗೀತೆಯು ಫಲೋದ್ದೇಶದಿಂದ ಕರ್ಮ ಮಾಡಬಾರದೆಂದಿದೆ. ಮಾಡಿದೆನೆಂಬುದು ಮನದಲ್ಲಿ ಉಳಿದರೆ ಶಿವನ ಮಾಯೆ ಏಡಿಸಿ ಕಾಡುವುದು ಎಂದು ಶರಣರು ಹೇಳಿದ್ದಾರೆ. ನಿಷ್ಕಾಮಕರ್ಮ ಎಂದರೆ ಸ್ವಾರ್ಥಕ್ಕಾಗಿ ಅಲ್ಲದೆ ಪರಹಿತಕ್ಕಾಗಿ ಅಥವಾ ಕರ್ತವ್ಯದೃಷ್ಟಿಯಿಂದ ಮಾಡುವ ಕರ್ಮ. ಆಗ ಅದು ಕರ್ಮಯೋಗ ಎನಿಸುತ್ತದೆ. ಈ ಪುಣ್ಯಪಾಪಕರ್ಮಗಳು ಮಾನವನ ಸಂಚಿತ. ಪ್ರಾರಬ್ಧ ಮತ್ತು ಆಗಾಮಿ ಕರ್ಮಗಳಿಗೆ ಮೂಲ. ಮತ್ತೊಂದು ದೃಷ್ಟಿಯಿಂದ ಸಂಚಿತ, ಪ್ರಾರಬ್ಧ, ಅತೀತ ಮತ್ತು ಆಗಾಮಿ ಎಂದು ಕರ್ಮವನ್ನು ನಾಲ್ಕು ವಿಧವಾಗಿಯೂ ವಿಭಾಗಿಸುತ್ತಾರೆ.

ಮುಂದಿನ ಜನ್ಮಕ್ಕೆ ಕಾರಣವಾದ ಸ್ವರ್ಗ ಮೊದಲಾದ ಫಲದ ಉದ್ದೇಶದಿಂದ ಹಿಂದಿನ ಜನ್ಮದಲ್ಲಿ ಮಾಡಿದ ಕರ್ಮಗಳು ಸಂಚಿತ. ಬಹುಪ್ರಯಾಸದಿಂದ ಎಸಗಿದ ಶ್ರವಣ, ಕೀರ್ತನ, ಮನನ, ಪೂಜಾ-ಮೊದಲಾದುವುಗಳಿಂದ ಮೋಕ್ಷಸಾಧಕವೂ ವರ್ತಮಾನ ಶರೀರಕ್ಕೆ ಕಾರಣವೂ ಆದ. ಪೂರ್ವಜನ್ಮದಲ್ಲಿನ ಸುಕೃತ ಕರ್ಮಗಳು ಪ್ರಾರಬ್ಧಕರ್ಮಗಳು. ಬ್ರಹ್ಮಸಾಕ್ಷಾತ್ಕಾರವಾಗುವುದಕ್ಕೆ ಮೊದಲು ಪೂರ್ವಜನ್ಮದಲ್ಲಿ ಅಥವಾ ಜನ್ಮಾಂತರದಲ್ಲೂ ಬ್ರಹ್ಮಸಾಕ್ಷಾತ್ಕಾರದ ಉದ್ದೇಶದಿಂದ ಮಾಡಿದ ಕರ್ಮಗಳು ಅತೀತ ಕರ್ಮಗಳು. ಬ್ರಹ್ಮಸಾಕ್ಷಾತ್ಕಾರದ ತರುವಾಯ ಈ ಜನ್ಮದಲ್ಲಿ ಮಾಡಿದ ಕರ್ಮಗಳು ಆಗಾಮಿ ಕರ್ಮಗಳು. ಬಾದರಾಯಣರು ತಮ್ಮ ಬ್ರಹ್ಮಶಾಸ್ತ್ರದ ಕೃತಾತ್ಯಯಾಧಿಕರಣದಲ್ಲಿ ಪುಣ್ಯಪಾಪ ಕರ್ಮಗಳು ಮಾನವನ ಜನ್ಮಧಾರಣೆಗೆ ಹೇಗೆ ಕಾರಣವೆಂಬುದನ್ನು ಚರ್ಚಿಸಿದ್ದಾರೆ. ಶ್ರುತಿಯಲ್ಲಿ ಪುಣ್ಯಕರ್ಮಿಗಳು ಸ್ವರ್ಗಸುಖವನ್ನು ಅನುಭವಿಸಿ ಉಳಿದ ಸಂಚಿತ ಕರ್ಮದ ಫಲವಾಗಿ ಉತ್ತಮ ಜನ್ಮಗಳನ್ನೂ ಪಾಪಕರ್ಮಿಗಳು ನರಕವಾಸದ ತರುವಾಯ ಉಳಿದ ಸಂಚಿತಕರ್ಮದಿಂದ ನೀಚ ಜನ್ಮಗಳನ್ನೂ ಧರಿಸುವರು ಎಂದು ಹೇಳಿದೆ. ಹೀಗೆ ಭೂಲೋಕದಲ್ಲಿ ಜನಿಸಿದ ಜೀವಿಗಳು ಪ್ರಾರಬ್ಧಕರ್ಮದ ಫಲವಾಗಿ ಹೊಂದಿದ ಈ ಶರೀರದಲ್ಲಿ ಅದರ ಸುಖದುಃಖಗಳನ್ನು ಅನುಭವಿಸಿಯೇ ಕಳೆಯಬೇಕು. ಉಳಿದ ಸಂಚಿತ ಮತ್ತು ಆಗಾಮಿ ಕರ್ಮಗಳು ಬ್ರಹ್ಮಜ್ಞಾನದಿಂದ ನಾಶಹೊಂದುತ್ತವೆ.

ಬ್ರಹ್ಮಜ್ಞಾನವಾದೊಡನೆಯೇ ಅದರ ಮಹಿಮೆಯಿಂದ ಮುಂದೆ ಬರುವ ಆಗಾಮಿ ಪಾಪಗಳು ಅವನನ್ನು ಮುಟ್ಟುವುದಿಲ್ಲ. ಹಿಂದೆ ಮಾಡಿದ ಸಂಚಿತ ಕರ್ಮ ನಾಶವಾಗುತ್ತದೆ. ಶ್ರುತಿ, ಸ್ಮೃತಿ ವಾಕ್ಯಗಳು ಈ ವಿಷಯವನ್ನು ಸಮರ್ಥಿಸುತ್ತವೆ. ಕೆಲವರು ಪ್ರಾರಬ್ಧಕರ್ಮವೂ ತತ್ತ್ವ (ಬ್ರಹ್ಮ)ಜ್ಞಾನದಿಂದ ನಷ್ಟವಾಗುತ್ತದೆ. ಅದೇ ಬ್ರಹ್ಮಜ್ಞಾನದ ಹಿರಿಮೆ-ಎಂದು ಹೇಳುತ್ತಾರೆ.

ವ್ಯಾಖ್ಯಾನ

[ಬದಲಾಯಿಸಿ]

ಮಂತ್ರ ೨

[ಬದಲಾಯಿಸಿ]

ಕುರ್ವನ್ನೇವೇಹ ಕರ್ಮಾಣಿ|
  ಜಿಜೀವಿಷೇಚ್ಛತಂ ಸಮಾಃ |
     ಏವಂ ತ್ವಯಿ ನಾನ್ಯಥೇತೋಸ್ತಿ|
ನ ಕರ್ಮ ಲಿಪ್ಯತೇ ನರೇ ||
     ಪದ್ಯ ೨
ಕಾಯಕವು ಈ ಲೋಕದಲಿ ನಿಯಮ ;
ಜಯಿಸು ನೀ ಬಾಳಿ ನೂರು ವರುಷ |
  ಆಯುವಿಕೆಗನ್ಯ ಮಾರ್ಗವೆ ಇಲ್ಲ ;
ಬಯಕೆ ಇಲ್ಲದಗೆ ಕರ್ಮದಂಟಿಲ್ಲ ||
   

  • (ಕಾಯಕ= ದುಡಿಮೆ; ಆಯುವಿಕೆಗೆ + ಅನ್ಯ ಮಾರ್ಗವೇ ಇಲ್ಲ; ಆಯುವಿಕೆಗೆ=ಆರಿಸಿಕೊಳ್ಳಲು;

ಬಯಕೆ ಇಲ್ಲದಗೆ=ಇಲ್ಲದವನಿಗೆ ಕರ್ಮದ ಅಂಟು ಇಲ್ಲ ; ಕರ್ಮ ಕೆಲಸ ಅಥವಾ ದುಡಿಮೆಯು
ಈಲೋಕದಲ್ಲಿ ಮಾಡಲೇಬೇಕಾದ ನಿಯಮ - ಕರ್ತವ್ಯ; ಜಯಿಸು ನೀನು ಬಾಳಿ ನೂರು ವರ್ಷ;
ಬಯಕೆ ಇಲ್ಲದವನಿಗೆ ಕರ್ಮದ ಅಂಟು ಇಲ್ಲ)
  

  • ಭಗವದ್ಗೀತೆಕರ್ಮಯೋಗ ದ ಸಾರವನ್ನು ಒಂದೇ ಶ್ಲೋಕದಲ್ಲಿ ಹೇಳಿದೆ. ಪರಮಾತ್ಮನ ಸರ್ವವ್ಯಾಪಕತ್ವದ ಅರಿವನ್ನು ಅಂತರಂಗದಲ್ಲಿ

ಹೊಂದಿ, ಅತಿಯಾಸೆ ಪಡದೆ ಕರ್ತವ್ಯ ದೃಷ್ಠಿಯಿಂದ ಮಾಡಿದ ಕರ್ಮವು, ಮನುಷ್ಯನಿಗೆ ಅಂಟದು. ಕಾಯಕವನ್ನು ಬಿಟ್ಟು ಆಯ್ಕೆ ಮಾಡಿಕೊಳ್ಳಲು
ಅನ್ಯ ಅಥವಾ ಬೇರೆ ಮಾರ್ಗವೇ ಇಲ್ಲ. (ಏಕೆಂದರೆ ಬದುಕಿರುವವನು ಕೆಲಸಮಾಡದೆ ಒಂದು ಕ್ಷಣವೂ ಬದುಕಿರಲು ಆಗುವುದಿಲ್ಲ. - ಭಗವದ್ಗೀತೆ.)
ಆದ್ದರಿಂದ ಆಶಾವಾದಿಯಾಗಿ, ಕರ್ತವ್ಯ ಮಾಡುತ್ತಾ ಪರೋಪಕಾರಿಯಾಗಿ (ತ್ಯಕ್ತೇನ)ನೂರು ವರುಷ ಆರೋಗ್ಯವಂತನಾಗಿ
ಬಾಳುವ ಪ್ರಯತ್ನ ಮಾಡಬೇಕು. ಈ ಬಾಳಿಗೆ ಅರ್ಥವಿಲ್ಲವೆಂದುನಿರಾಶೆ ಸಲ್ಲದು.
  

  • ಸಂಪ್ರದಾಯಿಕ ಅರ್ಥ:

ಕಾಯಕ ಅಥವಾ ಕರ್ಮ ಎಂದರೆ ಯಜ್ಞ , ಧಾರ್ಮಿಕ ಕ್ರಿಯೆ.

  • ಆದರೆ ಸಂಸಾರಿಕರಿಗೆ-ಗೃಹಸ್ತರಿಗೆ, ಜೀವನ ನಿರ್ವಹಣೆಗೆ ಅಗತ್ಯವಾದ ಎಲ್ಲಾ ಕರ್ಮಗಳನ್ನೂ ಎಂದು

ಕರ್ಮ ಎಂಬ ಪದಕ್ಕೆ ಈ ಅರ್ಥ ಮಾಡುವುದೇ ಸರಿ. ಭಗವದ್ಗೀತೆ ಯಲ್ಲಿ ಎಲ್ಲಾ ಕ್ರಿಯೆಗಳೂ ಕರ್ಮ ಎಂದೂ ಇದೆ.
(ಮೂಲದಲ್ಲಿ, ಇಹ ಕರ್ಮಾಣಿ ಈ ಲೋಕದ ಕರ್ಮಗಳನ್ನು ಎಂದು ಹೇಳಿದೆ. ಈ ಜಗತ್ತಿನಲ್ಲಿ
ಬದುಕಿರಲು ಬೇಕಾದ ಎಲ್ಲಾ ಕರ್ಮಗಳು ಎಂದರೆ ದುಡಿಮೆ ಮತ್ತು ಇತರೆ ಕಾರ್ಯಗಳು ) ನೋಡಿ- ಭಗವದ್ಗೀತಾ ತಾತ್ಪರ್ಯ -ಕರ್ಮಯೋಗ

ಭಗವದ್ಗೀತೆ

[ಬದಲಾಯಿಸಿ]

ಅಥಕೇನ ಪ್ರಯುಕ್ತೊಯಂ ಪಾಪಮಚರತಿ ಪೂರುಷಃ
ಅನಿಶ್ಚನ್ನಪಿ ವಾರ್ಷ್ಣೇಯ ಬಲಾದಿವ ನಿಯೋಜಿತಃ||

[] []

ಮಂತ್ರ ೩:

[ಬದಲಾಯಿಸಿ]

  • ಅಸುರ್ಯಾ ನಾಮ ತೇ ಲೋಕಾ|
  • ಅಂಧೇನ ತಮಸಾSSವೃತಾಃ |
  • ತಾಂಸ್ತೇ ಪ್ರೇತ್ಯಾಭಿಗಚ್ಛಂತಿ|
  • ಯೇ ಕೇ ಆತ್ಮ ಹನೋ ಜನಾಃ ||
  • ಪದ್ಯ ೩:
  • ಅಜ್ಞಾನ ತುಂಬಿರುವ |
  • ಕತ್ತಲೆಯ ಲೋಕಕ್ಕೆ |
  • ತಿರುತಿರುಗಿ ಬರುತಿಹರು|
  • ಅರಿವಿರದ ಆತ್ಮ ಹನರು ||
  • (ಅಜ್ಞಾನವು ತುಂಬಿರುವ ಕತ್ತಲೆಯ ಲೋಕಕ್ಕೆ ತರುತಿರುಗಿ - ಪುನಃ ಪನಃ ಬರುತ ಇಹರು ; ಬರುತ್ತಿರುವರು
  • ಅರಿವು+ಇರದ ಆತ್ಮ ಹನರು - ಕೊಂದವರು)
  • ಮೇಲೆ ಹೇಳಿದ ಕರ್ಮಯೋಗದ ರಹಸ್ಯವನ್ನು ಅರಿಯದವರು ಪನಃ ಪನಃ ಜನ್ಮವೆತ್ತಿ ಈ

ಲೋಕಕ್ಕೆ ಮರಳುತ್ತಾರೆ. ಆತ್ಮ ವಿಚಾರ ಮಾಡಿ ಪರಮಾತ್ಮ ತತ್ವವನ್ನು ಅರಿಯದಿರುವುದು ಆತ್ಮ ಹತ್ಯೆಯನ್ನು ಮಾಡಿಕೊಂಡಂತೆ ಎನ್ನುವುದು ಅಭಿಪ್ರಾಯ. ಆತ್ಮವನ್ನು ಯಾರೂ ಕೊಲ್ಲಲು ಸಾಧ್ಯವಿಲ್ಲ.

  • ಈ ಎರಡು ಮಂತ್ರಗಳಲ್ಲಿ ಜೀವನ ದರ್ಶನದ ಸಾರಾಂಶವನ್ನು ಹೇಳಿದೆ.

ನಂತರ ಆತ್ಮ ತತ್ವದ ವಿಚಾರ ಹೇಳಿದೆ.

ಉಲ್ಲೇಖಗಳು

[ಬದಲಾಯಿಸಿ]
  1. Maria I. Macioti, The Buddha Within Ourselves: Blossoms of the Lotus Sutra, Translator: Richard Maurice Capozzi, ISBN 978-0761821892, pp 69-70
  2. ಈಶಾವಾಸ್ಯೋಪನಿಷತ್ತು
  3. ಭಗವದ್ಗೀತೆ: ಕರ್ಮ ಯೋಗ; ಪದ್ಯ- ೩೬



ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಕರ್ಮ&oldid=1163296" ಇಂದ ಪಡೆಯಲ್ಪಟ್ಟಿದೆ