ಶೈವ ಪಂಥ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

[೧]ಶೈವ ಪಂಥ -ಶೈವ ಸಿದ್ಧಾಂತಗಳು -ಶೈವ ದರ್ಶನ[ಬದಲಾಯಿಸಿ]

ಶೈವ ಪಂಥವು ಹಿಂದೂ ಧರ್ಮದ ನಾಲ್ಕು ಅತಿ ವ್ಯಾಪಕವಾಗಿ ಅನುಸರಿಸಲಾಗುವ ಪಂಥಗಳ ಪೈಕಿ ಒಂದು, ಮತ್ತು ಇದು ಶಿವನನ್ನು ಪರಮಾತ್ಮ ಹಾಗೂ ಪವಿತ್ರನೆಂದು ಭಾವಿಸುತ್ತದೆ. ಶೈವರು ಎಂದು ಕರೆಯಲ್ಪಡುವ ಶೈವ ಪಂಥದ ಅನುಯಾಯಿಗಳು ಶಿವನು ಎಲ್ಲವೂ ಮತ್ತು ಎಲ್ಲದರಲ್ಲೂ ಇದ್ದಾನೆ, ಎಲ್ಲದರ ಸೃಷ್ಟಿಕರ್ತ, ಸಂರಕ್ಷಕ, ವಿನಾಶಕ, ಬಹಿರಂಗಪಡಿಸುವವನು ಹಾಗೂ ಮರೆಮಾಡುವವನು ಎಂದು ನಂಬುತ್ತಾರೆ. ಶೈವ ಪಂಥವು ಭಾರತ, ನೇಪಾಳ ಹಾಗೂ ಶ್ರೀಲಂಕಾದ ಆದ್ಯಂತ ವ್ಯಾಪಕವಾಗಿದೆ.

ಶೈವ ಸಿದ್ಧಾಂತಗಳು[ಬದಲಾಯಿಸಿ]

ಶಿವ ಅಥವಾ ರುದ್ರನ ಉಪಾಸನೆಯು ತುಂಬಾ ಪ್ರಾಚೀನವಾದುದು. ಸಿಂಧೂ ಸಂಸ್ಸೃತಿಯ ಅವಶೇಷಗಳಲ್ಲಿ (ಕ್ರಿ.ಪೂ.೩೦೦೦-೪೦೦೦) ಶಿವೋಪಾಸನೆ ಇತ್ತೆಂಬ ಕುರುಹುಗಳಿವೆ. ಅದನ್ನು ಪಶುಪತಿ ಎಂದು ಗುರುತಿಸಿದ್ದಾರೆ. ಪಾಶುಪತ ಪಂಥ ಅಥವಾ ಪಾಶುಪತ ದರ್ಶನ ದ ಪ್ರವರ್ತಕರು ಯಾರೆಂದು ತಿಳಿಯದು .
ಪಾಶುಪತವು ದಾರ್ಶನಿಕ ವಿಚಾರಕ್ಕಿಂತ ಸಾಧನೆ ಮುಖ್ಯವೆಂದು ಹೇಳುತ್ತದೆ.

ಕಾರ್ಯ, ಕಾರಣ , ಯೋಗ , ವಿಧಿ , ಮತ್ತು ದುಃಖಾಂತ ಎಂಬ ಐದು ಅಂಶಗಳನ್ನು ಹೇಳುತ್ತಾರೆ. ಕಾರ್ಯವೆಂದರೆ ದೃಷ್ಟಿ ; ಕಾರಣ -ಶಿವ ನಿಮಿತ್ತ ಕಾರಣ ; ಜೀವನು ಪಶು ; ಶಿವಾನುಗ್ರಹದಿಂದ ದುಃಖದಿಂದ ಬಿಡುಗಡೆ ಪಡೆಯುತ್ತಾರೆ. ಯೋಗ ಮತ್ತು ವಿಧಿಗಳು ಸಾಧನಾ ಮಾರ್ಗ . ಅದರಲ್ಲಿ ಸ್ಮಶಾನ ವಾಸ , ನರ-ಕಪಾಲದಲ್ಲಿ ಆಹಾರ ಭಕ್ಷಣ, ಭಸ್ಮ ಭಕ್ಷಣ , ಮದ್ಯಪಾನ , ಮೊದಲಾದವೂ ಸೇರಿವೆ .

ಶೈವಾಗಮಗಳು ಕ್ರಿ.ಶ. ೮-೯ ನೇ ಶತಮಾನದವೆಂದು ಹೇಳುತ್ತಾರೆ. ಇವು ಶೈವ ಸಿದ್ಧ್ದಾಂತಕ್ಕೆ ಮೂಲವಾಗಿವೆ. ಅವು ೧೦೮ ಇವೆ ಎನ್ನುತ್ತಾರೆ. ಅವುಗಳಲ್ಲಿ ೨೮ ಆಗಮಗಳು ಮುಖ್ಯವಾದವು . ಆಗಮದಲ್ಲಿ ನಾಲ್ಕು ಭಾಗಗಳು ; ವಿದ್ಯಾ (ಜ್ಞಾನ) , ಯೋಗ , ಕ್ರಿಯಾ , ಮತ್ತು ಚರ್ಯಾ . ಕ್ರಿಯಾ ಮತ್ತು ಚರ್ಯಾ ಕಾಂಡಗಳು ದೇವಾಲಯ ನಿರ್ಮಾಣ , ಮೂರ್ತಿಪ್ರತಿಷ್ಠಾಪನೆ , ಪೂಜಾವಿಧಾನ , ಧಾರ್ಮಿಕ ವಿಧಿಗಳನ್ನು ತಿಳಿಸುತ್ತವೆ. ಜ್ಞಾನ ಯೋಗ ಕಾಂಡಗಳಲ್ಲಿ ಜೀವ - ಶಿವರ ಸಂಬಂಧ ಶಿವ ಸ್ವರೂಪ , ಇತ್ಯಾದಿ ದಾರ್ಶನಿಕ ವಿಚಾರ , ಯೋಗ ಮಾರ್ಗಗಳಿವೆ . ತಮಿಳು ಶೈವ ಸಿದ್ಧಾಂತ , ಕಾಶ್ಮೀರ ಶೈವ ಸಿದ್ದಾಂತ , ವೀರಶೈವ ಸಿದ್ಧಾಂತಗಳು ಪ್ರಮುಖವಾಗಿವೆ.

ಪಶು - ಪತಿ - ಪಾಶ[ಬದಲಾಯಿಸಿ]

ಶೈವ ಸಿದ್ಧಾಂತದ ಮೂರು ಮುಖ್ಯ ತತ್ವಗಳು, ಪಶು - ಪತಿ -ಪಾಶ. ಪಶುವೆಂದರೆ ಜೀವ ; ಪತಿ ಎಂದರೆ ಶಿವ , ಪಾಶ ಎಂದರೆ ಮಲತ್ರಯಗಳು. ಪತಿಯಾದ ಶಿವನು ಸರ್ವಜ್ಞ , ಸರ್ವಶಕ್ತ, ಕುಂಬಾರನು ಮತ್ತು ಮಡಕೆಗೆ ಮೂಲ ಕಾರಣ . ಪರಿಕರಗಳು ನಿಮಿತ್ತ ಕಾರಣ, ಮಣ್ಣು ಉಪಾಧಾನ ಕಾರಣ. ಹಾಗೆಯೇ ಶಿವನು ಜಗತ್ತಿಗೆ ಮೂಲ ಕಾರಣ. ಅವನ ಶಕ್ತಿ ನಿಮಿತ್ತ ಕಾರಣ. ಮಾಯೆ ಉಪಾದಾನ ಕಾರಣವಾಗಿದೆ. ಶಿವ-ಶಕ್ತಿಗಳು ತದಾತ್ಮ್ಯ ಹೊಂದಿವೆ.

ಮಾಯೆ[ಬದಲಾಯಿಸಿ]

ಮಾಯೆಯಲ್ಲಿ ಶುದ್ಧ ಮಾಯೆ ಮತ್ತು ಅಶುದ್ಧಮಾಯೆ ಎಂದು (ಎರಡು ವಿಧದ.) ಬೇಧವಿದೆ. . ಶುದ್ಧಮಾಯೆ ಮತ್ತು ಶಿವ ಸಂಬಂಧದಿಂದ , ನಾದ , ಬಿಂದು , ಸದಾಖ್ಯ , ಮಹೇಶ್ವರಿ ಮತ್ತು ಶುದ್ಧವಿದ್ಯಗಳೆಂಬ ಐದು ತತ್ವಗಳು ಹುಟ್ಟುತ್ತವೆ. ಇವು ಸೃಷ್ಟಿಯನ್ನು ಮುಂದುವರಿಸುತ್ತವೆ. ಅವುಗಳಿಂದ - ಮಾಯೆ ಕಾಲ, ನಿಯತಿ ,ಕಲಾ , ವಿದ್ಯಾ , ರಾಗ ಪುರುಷ , ಈ ಏಳು ತತ್ವಗಳು ಹುಟ್ಟುತ್ತವೆ. ಅನಂತರ , ಪ್ರಕೃತಿ ,ಅದರಿಂದ ಚಿತ್ತ, ಬುದ್ಧಿ , ತನ್ಮಾತ್ರ (೫) ; ಜ್ಞಾನೇಂದ್ರಿಯ (೫) ; ಕರ್ಮೇಂದ್ರಿಯ , ಪಂಚ ಭೂತಗಳು , ಕರ್ವ್ಮಂದ್ರಿಯ(೫) ; ಪಂಚ ಮಹಾಭೂತಗಳು - ಎಂಬ ೩೩ತತ್ವ ಗಳು ಹುಟ್ಟುತ್ತವೆ ಹೀಗೆ ಸೃಷ್ಟಿಯು ೩೬ ತತ್ವಗಳಿಂದ ಆಗಿವೆ.

ಜೀವ[ಬದಲಾಯಿಸಿ]

ಜೀವನು (ಪಶು) ಸರ್ವವ್ಯಾಪಿ, ನಿತ್ಯ, ಚೈತನ್ಯನಾಗಿದ್ದು , ಇಚ್ಛಾ, ಜ್ಞಾನ , ಕ್ರಿಯೆ ಯಿಂದ ಕೂಡಿದ್ದಾನೆ. ಅವಿದ್ಯೆ ಎಂಬ ಪಾಶ ದಿಂದ ಬಂಧಿತನಾಗಿದ್ದಾನೆ.

ಅವಿದ್ಯಾ[ಬದಲಾಯಿಸಿ]

ಜೀವನನ್ನು ಬಂಧಿಸಿರುವ ಪಾಶಗಳು ಮೂರು ; ಅವಿದ್ಯಾ, ಕರ್ಮ ,ಮಾಯಾ .
ಎಲ್ಲಾ ಜೀವಿಗಳನ್ನು ಆವರಿಸಿರುವ ಅವಿದ್ಯೆ -ಒಂದೇ. ಇದರಿಂದ ಜೀವನು , ತಾನು ಅಲ್ಪ , ಅಣು , ಶಾಂತ , ಶರೀರಿ , ಎಂಬ "ಆಣವ ಮಲ" ಎಂಬ ಭಾವನೆಗೆ ಒಳಗಾಗುತ್ತಾನೆ. ಜೀವನ ಸ್ವ-ಸರೂಪ ಮರೆಗೊಳಿಸಿರುವುದರಿಂದ ಅದಕ್ಕೆ ಅವಿದ್ಯೆ ಎಂದು ಹೆಸರು .
ಕರ್ಮವು ಸೂಕ್ಷ್ಮವಾಗಿದ್ದು ಅದೃಷ್ಟವಾಗಿದೆ. ಇದು ಜಡ ಮತ್ತು ಚೇತನಗಳ ಮಿಶ್ರಣಕ್ಕೆ ಕಾರಣ. ಈ ದೋಷಕ್ಕೆ ಕಾರ್ಮಣ (ಕಾರ್ಮಿಕ ಮಲ) ವೆಂದು ಹೆಸರು ಜಗತ್ತಿಗೆ ಕಾರಣವಾದ ಮಾಯೆಯಿಂದ (ಮಾಯಿಕ ಮಲ) ಮಾಯೀಯ ಉಂಟಾಗಿದೆ.
ಜೀವಿಗಳು ಮೂರು ಬಗೆ . ಉತ್ತಮ ಆಣವ ಮಲ ಮಾತ್ರವಿರುವವರು- ವಿಜ್ಞಾನಾಕಲರು ಆಣವ ಮತ್ತು ಕಾರ್ಮಣ ಮಲದವರು - ಪ್ರಳಯಾಕಲರು : ಮಲತ್ರಯದವರು -ಸಕಲರು ; ಮುಕ್ತಿ ಪಡೆಯಲು ಮಲತ್ರಯದಿಂದ ಬಿಡುಗಡೆಯಾಗಬೇಕು. ಅದು ಶಿವಾನುಗ್ರಹದಿಂದ ಮಾತ್ರಾ ಸಾಧ್ಯ.

ಶಿವ ಸಾಯುಜ್ಯ[ಬದಲಾಯಿಸಿ]

ಪಾಶಗಳಿಂದ ಬಿಡುಗಡೆಯಾದ ಮೇಲೆ ಜೀವನು ಶಿವನೊಂದಿಗೆ ಸೇರುತ್ತಾನೆ ಸೃಷ್ಟಿ, ಸ್ಥಿತಿ ಲಯ , ತಿರೋಧಾನ ಅನುಗ್ರಹವುಳ್ಳ ಶಿವನಲ್ಲಿ ಸೇರಿದರೂ ,ಅದೈತವಿಲ್ಲ. ಬಂಧಗಳಿಂದ ಬಿಡುಗಡೆಯಾಗಿ ಶಿವಾನುಭವಾಗುವುದು. ಜೀವಂತವಿರುವಾಗಲೂ , ಮುಕ್ತಿಯನ್ನು ಪಡೆಯಬಹುದು. ಶಿವನನ್ನು ಪ್ರೀತಿಸಿದಂತೆ ಈ ಲೋಕವನ್ನೂ ಪ್ರೀತಿಸುವುದು ಅಗತ್ಯ ಮತ್ತು ಅವಶ್ಯ. .

ಪ್ರತ್ಯಭಿಜ್ಞಾ ದರ್ಶನ ಅಥವಾ ಅಭಾಸ ವಾದ[ಬದಲಾಯಿಸಿ]

ಇದು ಕಾಶ್ಮೀರ ಶೈವ , ಶಿವಾದ್ವೈತ , ಎಂಬ ಹೆಸರುಗಳುಳ್ಳ, ಉತ್ತರದ ದರ್ಶನ .
ವಸುಗುಪ್ತನ ಶಿವ ಸೂತ್ರ (೮ನೇ ಶತಮಾನ) ಮೊದಲಾದ ಗ್ರಂಥಗಳು ಆಧಾರ . ಅದಕ್ಕೆ ಆಗಮವೇ ಆಧಾರವೆಂಬ ಮತ. ಇದು ಅದ್ವೈತವನ್ನು ಪ್ರತಿಪಾದಿಸುತ್ತದೆ. ಇಲ್ಲಿ ಪರಮ ತತ್ವ ಶಿವ . ಶಿವ -ಶಕ್ತಿಯರ ಸಾಮರಸ್ಯ. ಶಿವನನ್ನು ಹೊರತುಪಡಿಸಿ ಮತ್ತಾವ ತತ್ವವೂ ಇಲ್ಲ. ವಿಶ್ವ ಅವನ ಅಭಾಸ. ಅವನ ವಿಶ್ವಾತ್ಮಕ ರೂಪದಲ್ಲಿ ಸರ್ವಾಂತರ್ಯಾಮಿ . ವಿಶ್ರ್ವೇತ್ತೀರ್ಣ ರೂಪದಲ್ಲಿ ವಿಶ್ವವನ್ನು ಮೀರಿದ್ದಾನೆ. ಅವನೇ ವಿಶ್ವವಾಗಿ ಸ್ಪುರಿಸುತ್ತಾನೆ. ಅದು ತನ್ನ ಇಚ್ಛಾಶಕ್ತಿಯಿಂದ. ಅವನೇ ಕತೃ . ಶಂಕರರ ಅದ್ವೈತದಲ್ಲಿ ಬ್ರಹ್ಮನಿಗೆ ಕತೃತ್ವವಿಲ್ಲ - ನಿರ್ಗುಣ. ಶಿವಾದ್ವೈತದಲ್ಲಿ ಜಗತ್ತು ಸತ್ಯ - ಶಿವನ ಅವಿಭಾವ - ಆದರೆ ಕನ್ನಡಿಯಲ್ಲಿ ಬಿಂಬದಂತೆ ಶಿವನಲ್ಲಿ ಅಭಾಸದಿಂದ (ವಸ್ತುವಿಲ್ಲದಿದ್ದರೂ) ಜಗತ್ತು ಕಾಣಿಸಿಕೊಳ್ಳುವುದು. ಇದಕ್ಕೆ ಅಭಾಸವಾದ ವೆಂದೂ ಹೆಸರಿದೆ.

ಶಿವ -ಶಕ್ತಿ[ಬದಲಾಯಿಸಿ]

ಶಿವನಲ್ಲಿ ಇಚ್ಛೆಯಾದಾಗ ಸ್ಪಂದನವುಂಟಾಗುವುದು. ಅದೇ ಶಕ್ತಿ . ಹಾಗೆ ಶಿವ- ಶಕ್ತಿ ಎಂದು ಎರಡು ರೂಪ ಹೊಂದುವುದು. ಶಕ್ತಿ ವಿಮರ್ಶರೂಪದ್ದು - ಅಹಂ ಭಾವನೆಯದು ; ಸೃಷ್ಟಿಯಲ್ಲಿ ಅದು ವಿಶ್ವಾಕಾರ ; ಸ್ಥಿತಿಯಲ್ಲಿ ವಿಶ್ವಪ್ರಕಾರ ; ಸಂಹಾರದಲ್ಲಿ ವಿಶ್ವ ಸಂಹರಣ ರೂಪ ತಾಳುವುದು. ಈ ಶಕ್ತಿಯ ಸ್ಪುರಣವಿಲ್ಲದಿದ್ದರೆ , ಶಿವನಲ್ಲಿ ತನ್ನ ಪ್ರಕಾಶದ ಅರಿವಾಗದು ಅದು ಶಾಂತ ರೂಪ ತಾಳುವುದು. ಆದರೂ ಶಿವ ಶಕ್ತಿಯರು ಒಂದೇ -ಚಂದ್ರ -ಚಂದ್ರಿಕೆಯಂತೆ ;. ಶಿವ ಶಕ್ತಿಯರ ಅಂತರ ನಿವೇಶಕ್ಕೆ (ಒಂದುಗೂಡುವಿಕೆಗೆ ) ಸದಾಶಿವವೆಂದೂ, ಬಾಹ್ಯನಿವೇಶಕ್ಕೆ ಈಶ್ವರನೆಂದೂ ಹೆಸರು. ಇವರಿಂದ ಐದು ಶಕ್ತಿ ತತ್ವಗಳು ಉಂಟಾಗುತ್ತವೆ ; ಅವು ಚಿತ್ , ಆನಂದ , ಇಚ್ಛಾ , ಜ್ಞಾನ , ಕ್ರಿಯಾ . ಇದಕ್ಕೆ ತತ್ವಗಳು (ಹೆಸರು) ಶಿವ , ಶಕ್ತಿ , ಸದಾಶಿವ , ಈಶ್ವರ , ಶುದ್ಧವಿದ್ಯಾ (ಐದು) .

ಮಾಯೆ[ಬದಲಾಯಿಸಿ]

ಮಾಯೆಯು ಪರಮೇಶ್ವರನ ಶಕ್ತಿ . ಶರೀರೇಂದ್ರಿಯಗಳನ್ನು ನಾನು ಎಂದು ತಿಳಿಯುವುದು ಮಾಯೆಯಿಂದ. ಶಿವನ ಸರ್ವ ಕರ್ತೃತ್ವ , ಸರ್ವಜ್ಞತ್ವ , ಪ್ರರ್ಣತ್ವ , ನಿತ್ಯತ್ವ , ವ್ಯಾಪಕತ್ವ ; ಸಂಕೋಚಗೊಂಡು , ಕಲಾ, ವಿದ್ಯಾ , ರಾಗ, ಕಾಲ ಮತ್ತು ನಿಯತಿಗಳೆಂಬ ಪಂಚ ಕಂಚುಕಗಳಾಗಿ ಜೀವನನ್ನು ಆವರಿಸಿರುವುದು ಮಾಯೆಯ ಪ್ರಭಾವದಿಂದ.

ಹೀಗೆ ಮಾಯೆಯಿಂದಾವರಿಸಲ್ಪಟ್ಟವನೇ ಪುರುಷ . ತಾನು ಶಿವನೇ ಆಗಿದ್ದರೂ, ವಿಸ್ಮೃತಿಯಿಂದ ಜೀವನಾಗಿದ್ದಾನೆ. ಪುರುಷ ಹನ್ನೆರಡನೆಯ ತತ್ವ. ; ದೇಹೇಂದ್ರಿಯಗಳನ್ನು ಕೊಡುವ ಪ್ರಕೃತಿ ಹದಿಮೂರನೆಯ ತತ್ವ . ಅನಂತರ ಬುದ್ಧಿ ಅಹಂಕಾರ ಇತ್ಯಾದಿ ಸೇರಿ ಒಟ್ಟು ೨೩ ತತ್ವಗಳು .

ಪ್ರತ್ಯಭಿಜ್ಞಾ - ಉಪಸಂಹಾರ[ಬದಲಾಯಿಸಿ]

ಪರುಷನು (ಜೀವನು) ತಾನೇ ಶಿವನೆಂದು ಅರಿತುಕೊಳ್ಳುವುದು -ಪ್ರತ್ಯಭಿಜ್ಞೆ. . ಗುರೂಪದೇಶದಿಂದ ಅಹಂ ಮಹೇಶ್ವರ ಎಂಬ ಅರಿವಾದಾಗ - ಜ್ಞಾನ ದೊರಕಿತೆಂದು ಅರ್ಥ. ಅದೇ ಮೋಕ್ಷ. ಮುಕ್ತಿ ಪಡೆಯಲು ಜ್ಞಾನ -ಭಕ್ತಿಗಳೆರಡೂ ಅವಶ್ಯ.
ಜಗತ್ತು :
ಈ ಜಗತ್ತು ಶಿವ - ಶಕ್ತಿಯರ ಸ್ಪಂದನದಿಂದಾಗಿದೆ. (ಇದೊಂದು ಅದ್ಭುತ ಕಲ್ಪನೆ) . ಶಂಕರರ ಅದ್ವೈತಕ್ಕೆ ವಿರೋಧವಾಗಿ ಇದರಲ್ಲಿ ಶಿವನು ಮಾಯಾತೀತನೂ , ಮಾಯಾಸಹಿತನೂ ಸ್ವತಂತ್ರನೂ , ಆಗಿದ್ದು ಕರ್ತೃವಾಗಿದ್ದಾನೆ . ಮುಕ್ತಿಯ ನಂತರವೂ ಆನಂದದ ಅನುಭವ ಇರುವುದೆಂದು ಹೇಳಲು ಭಕ್ತಿಯನ್ನು ಹೇಳಿದೆ ( ?).
ಶಂಕರರ ಅದ್ವೈತಕ್ಕೂ ಶಿವಾದ್ವೈತಕ್ಕೂ ಸಾಕಷ್ಟು ಸಾಮ್ಯಗಳಿವೆ. ಅದ್ವೈತದ ಮಾಯಾವಾದವನ್ನು ಇದು ಒಪ್ಪುವುದಿಲ್ಲ. ಮಾಯೆ ಈಶ್ವರನ ಶಕ್ತಿ ಮತ್ತು ಸತ್ಯ. . ಆತ್ಮನಿಗೆ ಪಂಚ ಕರ್ತೃತ್ವವನ್ನು ಅದ್ವೈತ ಒಪ್ಪುವುದಿಲ್ಲ. [೧][೨]
ಶಕ್ತಿ ವಿಶಿಷ್ಟಾದ್ವೈತ -
ವೀರಶೈವ

ನೋಡಿ[ಬದಲಾಯಿಸಿ]

ಚಾರ್ವಾಕ ದರ್ಶನ ; ಜೈನ ಧರ್ಮ- ಜೈನ ದರ್ಶನ ; ಬೌದ್ಧ ಧರ್ಮ ; ಸಾಂಖ್ಯ-ಸಾಂಖ್ಯ ದರ್ಶನ ; (ಯೋಗ)->ರಾಜಯೋಗ ; ನ್ಯಾಯ ದರ್ಶನ ; ವೈಶೇಷಿಕ ದರ್ಶನ;; ಮೀಮಾಂಸ ದರ್ಶನ - ; ವೇದಾಂತ ದರ್ಶನ / ಉತ್ತರ ಮೀಮಾಂಸಾ ; ಅದ್ವೈತ ; ಆದಿ ಶಂಕರರು ಮತ್ತು ಅದ್ವೈತ ; ವಿಶಿಷ್ಟಾದ್ವೈತ ದರ್ಶನ ; ದ್ವೈತ ದರ್ಶನ - ಮಾಧ್ವ ಸಿದ್ಧಾಂತ ; ಪಂಚ ಕೋಶ ; ಶ್ರೀಮನ್ಮಹಾಭಾರತಮ್ ಮತ್ತು ದ್ವೈತ ದರ್ಶನ ;

ಉಲ್ಲೇಖ[ಬದಲಾಯಿಸಿ]

  1. ೧.೦ ೧.೧ ದರ್ಶನಶಾಸ್ತ್ರ ಆಧಾರ: ಭಾರತೀಯ ತತ್ವಶಾಸ್ತ್ರ ಪರಿಚಯ :- ಎಂ. ಪ್ರಭಾಕರ ಜೋಷಿ & ಪ್ರೊ.ಎಂ.ಎ.ಹೆಗಡೆ. (ಕಾಪಿ ರೈಟಿನಿಂದ ಮುಕ್ತವಾಗಿದೆ)
  2. ವೀರಶೈವ
"https://kn.wikipedia.org/w/index.php?title=ಶೈವ_ಪಂಥ&oldid=1197677" ಇಂದ ಪಡೆಯಲ್ಪಟ್ಟಿದೆ