ಶಕ್ತಿ ವಿಶಿಷ್ಟಾದ್ವೈತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಶಕ್ತಿ ವಿಶಿಷ್ಟಾದ್ವೈತ-ವೀರಶೈವ ಲಿಂಗಾಯತ

ಇತಿಹಾಸ[ಬದಲಾಯಿಸಿ]

ದಾರ್ಶನಿಕ ಪಂಥವಾಗಿ, ಸಾಮಾಜಿಕ ಚಳುವಳಿಯಾಗಿ, ಧರ್ಮವಾಗಿ ಶರಣ ಪಂಥವೆಂದು ಹೆಸರಾದ, ಜಾತಿಬೇಧ ಧಿಕ್ಕರಿಸಿದ ವೀರಶೈವ ಪಂಥ ದರ್ಶನವಾಗಿ ಶಕ್ತಿ ವಿಶಿಷ್ಟಾದ್ವೈತವೆನಿಸಿದೆ ಇದು ಪ್ರಾಚೀನವಾದದ್ದೆನ್ನುವರು . ಕಲಿಯುಗದಲ್ಲಿ ರೇವಣಸಿದ್ಧ, ಮರುಳು ಸಿದ್ಧ , ಏಕೋರಾಮ , ಪಂಡಿತಾರಾಧ್ಯ , ವಿಶ್ವಾರಾಧ್ಯ ಇದರ ಪ್ರವರ್ತಕ - ಪಂಚಾಚಾರ್ಯರು . ಪಾಶುಪತ , ಕಾಶ್ಮೀರ ಶೈವ , ತಮಿಳು ಶೈವ , ಶರಣ ಚಳುವಳಿಗಲಲ್ಲಿ ಸೇರಿಕೊಂಡು ವೀರಶೈವವು ರೂಪಿತವಾಗಿದೆ . ಇದರ ಅನುಯಾಯಿಗಳನ್ನು ವೀರಶೈವರು ಅಥವಾ ಲಿಂಗಾಯತರೆನ್ನುತ್ತಾರೆ. ಇದು ಪ್ರಾಚೀನವಾದರೂ, ೧೨ನೆಯ ಶತಮಾನದ ನಂತರ , ಅಲ್ಲಮ , ಬಸವಣ್ಣ , ಸಿದ್ದರಾಮ , ಚನ್ನಬಸವಣ್ಣ , ಅಕ್ಕ ಮಹಾದೇವಿ , ಮೊದಲಾದ ಶರಣರಿಂದ ಪ್ರಬಲವಾಗಿ ದಕ್ಷಿಣ ಭಾರತದಲ್ಲಿ ಹಬ್ಬಿತು. ಇದರಲ್ಲಿ ಎಲ್ಲಾ ಜಾತಿಯ ಜನರಿದ್ದರು. ಬಸವಣ್ಣ ಇದರ ನೇತಾರ , ಜನಿವಾರವನ್ನು ಕಿತ್ತೊಗೆದು ಶರಣನಾದರು.

ವೇದಾಂತದ ಸಮನ್ವಯ[ಬದಲಾಯಿಸಿ]

ವೀರಶೈವ ಧರ್ಮಕ್ಕೆ ಆಗಮವು ಮೂಲವಾದುದೆಂದು ಹೇಳುವರು. ಆಂಧ್ರದ ಶ್ರೀಪತಿ ಪಂಡಿತನ ಬ್ರಹ್ಮ ಸೂತ್ರದ ಶ್ರೀಕರ ಭಾಷ್ಯ -ಅದಕ್ಕೆ ವೀರಶೈವ ಪರ ವ್ಯಾಖ್ಯಾನ , ನೀಲಕಂಠ ಕ್ರಿಯಾಸಾರ , ಮಾಯಿದೇವನ ಅನುಭವ ಸೂತ್ರ , ಶಿವಯೋಗಿ ಶಿವಾಚಾರ್ಯನ ಸಿದ್ಧಾಂತ ಶಿಖಾಮಣಿ , ರೇಣುಕಾಚಾರ್ಯರ ಕೃತಿಗಳು , ಆಧಾರ. ಇದು ಕರ್ಮ ಪ್ರಧಾನವಾದುದರಿಂದ , ವೀರ ಮಾರ್ಗವೆನಿಸಿದೆ. ಇದನ್ನು ಶಿವಾದ್ವೈತ , ವಿಶೇಷಾದ್ವೈತ ಎನ್ನುವರು. ಕಲವರು ಶರಣ ವಚನಗಳೇ ಆಧಾರವೆನ್ನುವವರಿದ್ದಾರೆ. ಅವರು ವೀರಶೈವ ಲಿಂಗಾಯತ ಧರ್ಮವು ಹಿಂದೂ ಧರ್ಮದಿಂದ ಬೇರೆ ಯಾದುದೆಂದು ವಚನವೇ ಆಧಾರವೆಂದೂ ಹೇಳುತ್ತಾರೆ . ಕೇವಲ ವಚನಗಳಿಂದ ಒಂದು ಧರ್ಮ ಅಥವಾ ದರ್ಶನದ ಸ್ಪಷ್ಟ ಸಿದ್ಧಾಂತ ನಿರೂಪಿಸಲು ಆಗದು ಎಂಬುದು ಕೆಲವರ ಮತ.

ಅಲ್ಲಮ ಪ್ರಭು-ಬಸವಣ್ಣ[ಬದಲಾಯಿಸಿ]

೧೨ನೆಯ(12) ಶತಮಾನದ ಅಲ್ಲಮ ಮತ್ತು ಬಸವಣ್ಣನವರು ಇದಕ್ಕೆ ಅಸ್ತಿವಾರ ಹಾಕಿದ ಮಹಾಪುರುಷರು .ಅಲ್ಲಮ ಅನುಭಾವಿ ದಾರ್ಶನಿಕ . ಬಸವಣ್ಣ ಕ್ರಿಯಾಶೀಲ , ನ್ಭೆತಾರ ,ಚಿಂತಕ , ಮೇಧಾವಿ , ಕೇವಲ ೩೮ ವರ್ಷಗಳಲ್ಲಿ ಸಾಮಾಜಿಕ ಕ್ರಾಂತಿಯ ಕನಸಿಗಾಗಿ ಹೋರಾಡಿದನು.ಅನುಭವ ಮಂಟಪವೆಂಬ ಸಂಘಟನೆಯ ಮೂಲಕ ಮಾಡಿದ ಸಾಧನೆ ವಿಶಿಷ್ಟವಾದುದು. ಶರಣರ ವಚನಗಳು ಸಾಹಿತ್ಯ ಮತ್ತು ತಾತ್ವಿಕ ವಿಚಾರಗಳಲ್ಲಿಉತ್ತುಂಗ ರಚನೆಗಳಾಗಿದ್ದು ಕನ್ನಡದ ಉಪನಿಷತ್ತು ಎನಿಸಿದೆ. ಕಾಯಕವೇ ಕೈಲಾಸೆಂದು ಘೋಷಿಸಿ ಕರ್ಮಯೋಗವನ್ನೂ ದುಡಿಮೆಯನ್ನೂ ಎತ್ತಿಹಿಡಿದರು. ಇದು ದರ್ಶನ ಶಾಸ್ತ್ರದಲ್ಲಿ ಹೊಸದು.[೧]

ಶೂನ್ಯ ಸಂಪಾದನೆ[ಬದಲಾಯಿಸಿ]

  • ಶೂನ್ಯಸಂಪಾದನೆ ವೀರಶೈವ ತತ್ತ್ವ ನಿರೂಪಣೆಯಲ್ಲಿನ ಧಾರ್ಮಿಕ ಪರಿಭಾಷೆ. ವೀರಶೈವ ಪರಿಭಾಷೆಯಲ್ಲಿ ಶೂನ್ಯ ವೆಂದರೆ ಪರಿಪೂರ್ಣತೆ, ಪರಾತ್ಪರವಸ್ತು. ಅದನ್ನು ಸಂಪಾದಿಸಿಕೊಳ್ಳುವುದೆಂದರೆ ಸಾಧಕನು ಪರಾತ್ಪರ ವಸ್ತುವಿನ ಸ್ವರೂಪನಾಗುವುದು, ಪರಿಪೂರ್ಣನಾಗುವುದು ಎಂದರ್ಥ. ಶೂನ್ಯದ ಸಾಧನೆಗೆ ಸಾಧನವಾಗುವ ಬದುಕಿನ ಎಲ್ಲ ರಂಗಗಳ ಆವಶ್ಯಕ ವಿಚಾರ, ಅನುಭವಗಳನ್ನು, ಬಸವಾದಿ ಶಿವಶರಣರ ಮಹತ್ತರ ಅನುಭವಗಳ ಶಿವಾದ್ವೈತ ವಚನಗಳನ್ನು ಸಂವಾದ ಶೈಲಿಯಲ್ಲಿ ವಿನ್ಯಾಸಗೊಳಿಸಿ ಶಿವಗಣಪ್ರಸಾದಿ ಮಹಾದೇವಯ್ಯ ಶೂನ್ಯಸಂಪಾದನೆ ಎಂಬ ಶೀರ್ಷಿಕೆಯಲ್ಲಿ ಕೃತಿಯನ್ನು ರಚಿಸಿದ್ದಾನೆ. ಇವನ ಕೃತಿಯ ಅಂತಿಮ ಉದ್ದೇಶವೂ ಸಾಧಕನ ಆಧ್ಯಾತ್ಮಿಕ ಸಿದ್ಧಿಯೇ ಆಗಿದೆ.

ಅಲ್ಲಮಪ್ರಭುವಿನ ಪರವಸ್ತು ಶಿವ (ಶೂನ್ಯ)[ಬದಲಾಯಿಸಿ]

ಲಿಂಗಾಯತ ವೀರಶೈವದ ಪ್ರಕಾರ ಶಿವನೆಂದರೆ ಪರಬ್ರಹ್ಮ -ತ್ರಿಮೂರ್ತಿಗಳಲ್ಲಿ ಒಬ್ಬನಲ್ಲ. ಅದು ಪರವಸ್ತು "ಒಡಲಿಲ್ಲದ ಬಯಲು". ಇದಕ್ಕೊಂದು ವಚನ :
ಕಣ್ಗೆ ಕಾಂಬೊಡೆ ರೂಪಲ್ಲ , ಕೈಗೆ ಸಿಲುಕುವಡೆ ರೂಪಲ್ಲ .
ನೆಡೆದಡೆ ಗಮನಿಯಲ್ಲ ,ನುಡಿದಡೆ ವಾಚಾಳನಲ್ಲ ;
ನಿಂದಿಸಿದವರಿಗೆ ಹಗೆಇಲ್ಲ, ಪೊಗಳಿದವರಿಗೆ ಕೆಳೆಯಿಲ್ಲ .
ಗುಹಶ್ವರನ ನಿಲುವು ಮಾತಿನ ಮಾತಿಗೆ ಸಿಲುಕುವುದೇ
ಸಿದ್ದರಾಮಯ್ಯ ನೀ ಮರುಳಾದೆಯಲ್ಲ.
(ಅಲ್ಲಮ)
ಪರವಸ್ತು - ಸ್ವತಂತ್ರ , ಸ್ವಯಂಪ್ರಕಾಶ, ನಿತ್ಯ ನಿರಂಜನ , ನಿರಾಕಾರ ನಿಶ್ಚಲ , ಅದಕ್ಕೆ ನಾಮ ರೂಪ ಕ್ರಿಯಾದಿಗಳಿಲ್ಲ. ಇದು ಉಪನಿಷತ್ತಿನ ಪರಬ್ರಹ್ಮದ ವರ್ಣನೆಯಂತಿದೆ. ಆದರೆ ಶೈವರು ಪೌರಾಣಿಕ ಶಿವನನ್ನು ( ಸಗುಣ, ಸಾಕಾರ ಶಿವ)ನಿರಾಕರಿಸುವುದಿಲ್ಲ. ಜೀವನಿಗೆ ಆರಂಭಿಕ ಹಂತದಲ್ಲಿ ದ್ವೈತ ಬೇಕು -ನಂತರ ಅಂತಿಮವಾಗಿ ಅದ್ವೈತ ತತ್ವಕ್ಕೆ ಹೋಗಬೇಕು . ಪರವಸ್ತು ಅವರವರ ಭಾವಕ್ಕೆ ತಕ್ಕಂತೆ ವ್ಯತ್ಯಾಸಗೊಳ್ಳುತ್ತದೆ. ಅರ್ಚನೆಗೆ ವಿಹಿತವಾದುದು ಲಿಂಗರೂಪ ಮಾತ್ರ. ಬೇರೆ ಮೂರ್ತಿಪೂಜೆ ನಿಷಿದ್ಧ. ಲಿಂಗವೆಂದರೆ ಶಿವನೂ ಹೌದು -ಪ್ರತೀಕವೂ ಹೌದು. ಅಂಗವೆಂದರೆ ಜೀವ . ;ಲಿಂಗ - ಅಂಗ ಸಂಯೋಗವೇ ಮೋಕ್ಷ. ಇದು ಅಲ್ಲಮ ಪ್ರಭುವಿನ ನಿರಾಕಾರ ನಿರ್ಗುಣದ ಶಿವ- ಶೂನ್ಯ ಎಂಬಂತೆ - ಶಿವ ಎಂದರೆ 'ಶೂನ್ಯ' ಎಂಬುದು ಅಲ್ಲಮನ ಸಿದ್ದಾಂತ.

ಬಸವಣ್ಣನ ಶಿವ ಕಲ್ಪನೆ[ಬದಲಾಯಿಸಿ]

  • ಬಸವಣ್ಣನವರ ವಚನಗಳಲ್ಲಿ ವಿಶೇಷವಾಗಿ ಕಂಡುಬರುವ ಮತ್ತೊಂದು ಪ್ರಧಾನ ಅಂಶ ಭಕ್ತಿಪ್ರತಿಪಾದನೆ. `ಭಕ್ತಿಭಂಡಾರಿ' ಎಂಬ ವಿಶೇಷಣಕ್ಕೆ ಇವರ ವಚನಗಳು ಸಮರ್ಥವಾಗಿ ಪೋಷಣೆ ನೀಡುತ್ತವೆ. ನಾಮಸಂಕೀರ್ತನೆಯ ಹಿರಿಮೆ, ಸರ್ವಸಮರ್ಪಣೆಯ ಭಾವ, ಸತಿಪತಿ ಭಾವ--ಹೀಗೆ ಭಕ್ತಿಯ ಆಚರಣೆಯ ವಿವಿಧ ಮುಖಗಳನ್ನು ಅವುಗಳಲ್ಲಿ ಕಾಣುತ್ತೇವೆ. ಅವುಗಳಲ್ಲಿ ಭಾವದ ತೀವ್ರತೆಯಿದೆ, ಆಳವಾದ ಅನುಭವದ ಪ್ರತಿಫಲನವಿದೆ; ಆತ್ಮೀಯವಾದ ಧಾಟಿಯಿದೆ. `ಹೊನ್ನ ಹಾವಿಗೆಯ ಮೆಟ್ಟಿದವನ, ಮಿಡಿಯ ಮುಟ್ಟಿದ ಕೆಂಜೆಡೆಯವನ, ಮೈಯಲ್ಲಿ ವಿಭೂತಿಯ ಧರಿಸಿದವನ, ಕರದಲ್ಲಿ ಕಪಾಲವ ಹಿಡಿದವನ, ಅರ್ಧನಾರೀಶ್ವರನಾದವನ ಬಾಣದ ಮನೆಯ ಬಾಗಿಲ ಕಾಯ್ದವನ, ನಂಬಿಗೆ ಕುಂಟಿಣಿಯಾದವನ, ಚೋಳಂಗೆ ಹೊನ್ನ, ಮಳೆಯ ಕರೆದವನ, ಎನ್ನ ಮನಕ್ಕೆ ಬಂದವನ, ಸದ್ಭಕ್ತರ ಹೃದಯದಲ್ಲಿಪ್ಪವನ ಮಾಡುವ ಪೂಜೆಯಲೊಪ್ಪುವನ, ಕಂಡೆನೆಂದು ಪರಮಾತ್ಮನ ಗುಣ ಸ್ವರೂಪಗಳನ್ನು ವರ್ಣಿಸುತ್ತ ಅವನನ್ನು ಒಂದೆಡೆ ಸಾಕಾರವಾಗಿ ಕಾಣುತ್ತಾರೆ.
  • ಮತ್ತೊಂದೆಡೆ `ಉದಕದೊಳಗೆ ಬೈಚಿಟ್ಟ ಬಯಕೆಯ ಕಿಚ್ಚಿನಂತಿದ್ದಿತ್ತು? ಶಶಿಯೊಳಗಣ ರಸದ ರುಚಿಯಂತೆ ಇದ್ದಿತ್ತು ನೆನೆಯೊಳಗಣ ಪರಿಮಳದಂತೆ ಇದ್ದಿತ್ತು ಕೂಡಲಸಂಗಮ ದೇವರ ನಿಲವು ಕನ್ನೆಯ ಸ್ನೇಹದಂತಿದ್ದಿತ್ತು ಎಂದು ತಮ್ಮ ದರ್ಶನಾನುಭವವನ್ನು ವರ್ಣಿಸುತ್ತಾರೆ.[೨]

ಶಕ್ತಿ[ಬದಲಾಯಿಸಿ]

ಪರಶಿವನಲ್ಲಿರುವ , ಬೇರ್ಪಡಿಸಲಾಗದಿರುವ ಧರ್ಮಕ್ಕೆ ಶಕ್ತಿ ಎಂದು ಹೆಸರು . ಅದು ಜಗತ್ ಸೃಷ್ಟಿಯಲ್ಲಿ ಉಪಯುಕ್ತ, ಅದು ಶಿವನಲ್ಲಿ ಇಂಗಡದೊಳಿಂಪು - ಬೆಳದಿಂಗಳೊಳು ತಂಪು ಕುಸುಮಗಳೊಳು ಕಂಪು ಬೆರೆದಂತೆ ಇರುತ್ತದೆ. ಅದೇ ಮಾಯೆ -ಶಕ್ತಿ .
ಶಿವನು ಶಕ್ತಿಗೆ ಅಧೀನನಲ್ಲ , ಶಕ್ತಿಯ ನೆರವಿನಿಂದ , ಅವನು ಜಗತ್ತೇ ಮೊದಲಾಗಿ ಪರಿಣಮಿಸಿ ಕ್ರೀಡಿಸುತ್ತಿರುವನು. ಈ ಶಕ್ತಿಯ ತತ್ವದಿಂದಲೇ ವೀರ ಶೈವವು - ಶಕ್ತಿ- ವಿಶಿಷ್ಟಾವ್ಶೆತ ವಾಗಿದೆ/ ವೆನಿಸಿದೆ.

ಶಕ್ತಿವಿಶಿಷ್ಬನಾದ ಶಿವನೇ ಶಕ್ತಿ ವಿಶಿಷ್ಟನಾದ ಜೀವನಾಗಿದ್ದಾನೆ. ಶಿವನಲ್ಲಿರುವುದು ಸೂಕ್ಷ್ಮವಾದ ಚಿದ್ಚಿದ್ ಶಕ್ತಿ ; ಹಾಗಾಗಿ ಅವನು ಸರ್ವಜ್ಞ . ಸರ್ವಶಕ್ತ, ಜೀವನಲ್ಲಿರುವುದು , ಸ್ಥೂಲವಾದ ಚಿದ್ಚಿದ್ ಶಕ್ತಿ -ಇದುಕಾರ್ಯಶಕ್ತಿ -ಹಾಗಾಗಿ ಅದು ಅಲ್ಪಜ್ಞ -ಅಲ್ಪ ಶಕ್ತ . ಈ ಶಕ್ತಿಗಳಿಂದ ವಿಶಿಷ್ಟವಾದ ಶಿವ-ಜೀವರ ಅದ್ವೈತವೇ ಶಕ್ತಿವಿಶಿಷ್ಟಾದೈತ . (ಶಕ್ತಿಶ್ಚ ಶಕ್ತಿಶ್ಚ ಶಕ್ತೀ , ತಾಭ್ಯಾಂ ವಿಶಿಷ್ಟೌ , ಜೀವೇಶ ಶಕ್ತಿ ವಿಶಿಷ್ಟೌ , ತಯೋದದ್ವೈತಂ ,-ಶಕ್ತಿವಿಶಷಾದ್ವೈತಂ) ಮಗ್ಗೆಯ ಮಾಯಿದೇವನ ಪ್ರಕಾರ , ಶಕ್ತಿ- ಕಲಾಶಕ್ತಿ (ಶಿವನದು) , ಭಕ್ತಿ ಶಕ್ತಿ (ಜೀವನದು)ಎಂದು ಎರಡುಬಗೆ ; ಕಲಾಶಕ್ತಿಯು ಸೃಷ್ಟಿಗೆ ಕಾರಣ ; ಭಕ್ತಿ ಶಕ್ತಿ ಮೋಕ್ಷಕ್ಕೆ ಕಾರಣ. ಶಿವನ ಕಲಾಶಕ್ತಿ ಸೃಷ್ಟಿಗೆ ಕಾರಣವಾಗಿ -ಆರಾಗಿದೆ (೬) - ಅರುಚಿ , ಪರಾ , ಆದಿ ಇಚ್ಛಾ , ಕ್ರಿಯಾ , ಜ್ಞಾನ ಶಕ್ತಿಗಳು . ಭಕ್ತಿ ಶಕ್ತಿಯಲ್ಲಿ -ಸಮರಸ , ಆನಂದ , ಅನುಭಾವ , ಅವಧಾನ , ನೈಷ್ಟಿಕ , ಸದ್ಭಕ್ತಿಗಳ -ಇವು ಭಕ್ತನ ಷಟ್ ಸ್ಥಲ (ಷಟ್ಸ್ಥಲ) ಗಳಲ್ಲಿವೆ . ಕಲಾಶಕ್ತಿಯೇ - ಮಾಯೆ ಎಂದು ಶರಣರು ಗುರುತಿಸುತ್ತಾರೆ . ವಿಶ್ವ ವಿಕಾಸ : ಸೃಷ್ಟಿಯು ಶಿವನ ಲೀಲೆ . ಮೊದಲು ಇದ್ದದ್ದು ಪರವಸ್ತು ಒಂದೇ. ನಿರಾಲಂಬ ಬ್ರಹ್ಮ(ಶಿವ) ; ಲೀಲೆಗಾಗಿ ಸೃಷ್ಟಿ -ಸಾಕಾದರೆ ತನ್ನಲ್ಲೇ ಅಡಗಿಸಿಕೊಳ್ಳುತ್ತಾನೆ. ವಚನ :

ತನ್ನ ವಿನೋದಕ್ಕೆ ತಾನೇ ಸೃಷ್ಟಿಸಿದ ಸಕಲ ಪ್ರಪಂಚವನು ,
ತನ್ನ ವಿನೋದಕ್ಕೆ ತಾನೇ ತಿರುಗಿಸಿದ ಅನಂತ ದುಃಖಗಳಲ್ಲಿ ,
ಇಂತೆನ್ನ ಚನ್ನಮಲ್ಲಿಕಾರ್ಜುನ ನೆಂಬ ಪರಶಿವನು
ಜಗದ್ವಿಲಾಸ ಸಾಕಾದೊಡೆನೆ , ಪರಿವನು ಮಾಯಾ ಪಾಶವನು .
ತಮಿಳು ಮತ್ತು ಕಾಶ್ಮೀರೀ ಶೈವರು ಹೇಳುವ ೩೬ ತತ್ವಗಳನ್ನು ಇವರೂ ಒಪ್ಪಿದ್ದಾರೆ. ಆದರೆ ವ್ಯವಸ್ಥೆಯಲ್ಲಿ ವ್ಯತ್ಯಾಸವಿದೆ. ಚೆನ್ನಬಸವಣ್ನ ಹೇಳುವಹಾಗೆ ಅಥವಾ ಅವನ ಪ್ರಕಾರ , ತಿಳಿದುಪ್ಪವು -ಎರೆದುಪ್ಪವಾಗುವಹಾಗೆ ,ಬ್ರಹ್ಮವೇ ನಿರಂಜನವಾಯಿತು. ಅದರಲ್ಲುಂಟಾದ ನೆನಹು ಓಂ ಕಾರ ಶಕ್ತಿ -ಅದರಿಂದ ಶೂನ್ಯ ಲಿಂಗವಾಯಿತು. ಅದಕ್ಕೆ ಮಹಾ ಜ್ಞಾನ ಚಿತ್ ಎಂಬ ಲಿಂಗ. ಎಂದರೆ ಶೂನ್ಯ ಲಿಂಗದಿಂದ ಜ್ಞಾನ ಚಿತ್ ಎಂಬ ಲಿಂಗ (ನಿಷ್ಕಲ ಬ್ರಹ್ಮ ಲಿಂಗ -ಅದರಿಂದ -ಚಿನ್ನಾದ (ಚಿತ್ ನಾದ) ->ಚಿತ್ ಬಿಂದು ->ಚಿತ್ಕಲೆ ಉದಯವಾಯಿತು. ಇವು ಮೂಲ ಶಕ್ತಿಯೊಡನೆ ಸೇರಿ ಮಹಾಲಿಂಗ ಉದಯಿಸಿತು. ಅದಿರಿಂದ ಕರ್ಮ, ಸದಾಖ್ಯ -ಕರ್ತೃ ಮೂರ್ತಿ , ಅಮೂರ್ತಿ , ಶಿವಸಾದಾಖ್ಯಂಗಳಾದವು.
ಇದೇ ಸದ್ಯೋಜಾತ , ತತ್ಪುರುಷ , ವಾಮದೇವ , ಅಘೋರ , ಈಶಾನವೆಂಬ ಐದು ಶಿವನ ಮುಖಗಳು.
ಅವುಗಳಿಂದ ಪಂಚ ಭೂತಗಳದವು. ಕಣ್ಣು ಮನಸ್ಸುಗಳಿಂದ ಸೂರ್ಯ ಚಂದ್ರರು ; ಗೋಪ್ಯ ಮುಖದಿಂದ ಆತ್ಮವೂ ಪ್ರಕಟವಾದವು . ಹೀಗಾಗಿ ಪಂಚ ಭೂತ , ಸೂರ್ಯ , ಚಂದ್ರ , ಆತ್ಮ , ಇವುಸೇರಿ ಶಿವನ ಅಷ್ಟ ತನುಗಳು .
ಶಿವ ಭಕ್ತಿ , ಸಾದಾಖ್ಯ , ಈಶ್ವರ , ಶುದ್ಧವಿದ್ಯೆ , ಮಾಯೆ , ಕಲಾ, ಕಾಲ , ನಿಯತಿ , ವಿದ್ಯಾ , ರಾಗ , ಪುರುಷ , ಪ್ರಕೃತಿ , ಬುದ್ಧಿ ಅಹಂಕಾರ , ಮನಸ್ಸು , ಪಂಚ ಜ್ಞಾನೇಂದ್ರಿಯ , ಪಂಚ ಕರ್ಮೇಂದ್ರಿಯ , ಪಂಚ ತನ್ಮಾತ್ರ , ಪಂಚ ಮಹಾಭೂತಗಳು ಸೇರಿ ಮೂವತ್ತಾರು ತತ್ವಗಳು ..

ಜೀವಾತ್ಮ[ಬದಲಾಯಿಸಿ]

ಜೀವನು ಶಿವನ ಅಂಶ .ಅದೇ ಅವಿದ್ಯೆಯೊಡನಿದ್ದಾಗ ಜೀವ ಅಥವಾ ಅಂಗ' ವೆನಿಸುವುದು . ಅದು ಪರಮಾತ್ಮನ ಒಂದು ರೂಪವೇ ಆಗಿದೆ . ಸರ್ವ ಶೂನ್ಯದಿಂದ ಹೊರಹೊಮ್ಮಿದ ಕಿಡಿಯೇ ಆತ್ಮ . ಆ ಮಹಾ ಬೆಳಗಿನ , ಮೂರ್ತರೂಪವೇ ಆತ್ಮ . ಪರಬ್ರಹ್ಮ ಮತ್ತು ಆತ್ಮದಲ್ಲಿ , ಯಾವ ಬೇಧವೂ ಇಲ್ಲ . ಅವು ದೀಪ ಮತ್ತು ಬೆಳಕಿನಂತೆ -ಸೂರ್ಯ ಮತ್ತು ಅದರ ಪ್ರತಿಬಿಂಬದಂತೆ ಅವರಿದ್ದಾರೆ (ವಚನ ಶಾಸ್ತ್ರಸಾರ ) ಆದರೆ ಈ ಅಬೇಧವನ್ನು ಕೆಲವರು (ವೀರಶೈವರು) ಒಪ್ಪುವುದಿಲ್ಲ . ಅಗ್ನಿ ಮತ್ತು ಕಿಡಿಗಳಂತೆ ಬೇಧಾಬೇಧವೆನ್ನುತ್ತಾರೆ. ಅವಿದ್ಯೆಯಿಂದಾದ ಪಶುತ್ವ , (ಜೀವತ್ವ ) ವನ್ನು ಕಳೆದುಕೊಂಡು ಪಶುಪತಿಯೊಂದಿಗೆ ಐಕ್ಯವಾಗುವುದೇ , ಮೋಕ್ಷ . - ಲಿಂಗಾಂಗ ಸಾಮರಸ್ಯವೆಂದು ಇನ್ನೊಂದುಮತ.

ಷಟ್ ಸ್ಥಲ ಸಿದ್ಧಾಂತ[ಬದಲಾಯಿಸಿ]

ಇದೊಂದು ಸಿದ್ಧಾಂತ ದರ್ಶನ ಶಾಸ್ತ್ರಕ್ಕೆ ವೀರಶೈವದ ಕೊಡಿಗೆ . ಷಟ್ ಸ್ಥಲದರ್ಶನವೆಂದೂ ಕರೆಯುತ್ತಾರೆ. ದ್ವೈತ -ಅದ್ವೈತದ ಸಮನ್ವಯ ಇದರಲ್ಲಿದೆ.
ಸ್ಥಲ - ಎಂದರೆ ಪರವಸ್ತು ; ಸಚ್ಚಿದಾನಂದ ಪರತತ್ವ . ಅಲ್ಲಿ ಶಕ್ತಿ ಕ್ಷೋಭೆಯುಂಟಾದಾಗ ಜಗತ್ತಿನ ಉತ್ಪತ್ತಿ -ಆಗ ಶಿವತತ್ವವು ಲಿಂಗ - ಮತ್ತು ಅಂಗ ಎಂದು ಎರಡು ರೂಪ ತಳೆಯುತ್ತದೆ . ಲಿಂಗವು -ಇಷ್ಟಲಿಂಗ , ಪ್ರಾಣಲಿಂಗ , ಭಾವಲಿಂಗ ವೆಂದು ಮೂರುವಿಧ ..
ಇಷ್ಟಲಿಂಗವು ಆಚಾರಲಿಂಗ -ಗುರುಲಿಂಗವೆಂದು ಎರಡು ಬಗೆ.
ಪ್ರಾಣಲಿಂಗವು ಶಿವಲಿಂಗ ಮತ್ತು ಜಂಗಮಲಿಂಗವೆಂದು ಎರಡುವಿಧ .
ಭಾವಲಿಂಗದಲ್ಲಿ ಮಹಾಲಿಂಗ , ಪ್ರಸಾದ ಲಿಂಗ ವೆಂದು ಎರಡುವಿಧ
ಒಟ್ಟು ಲಿಂಗಗಳು ಆರು .ಶಕ್ತಿಗೆ ಲಿಂಗವು ಆಶ್ರಯ.
ಶಿವನ ಮತ್ತೊಂದು ಅಂಗವು (ಜೀವ) ಯೋಗಾಂಗ , ಭೋಗಾಂಗ ,ತ್ಯಾಗಾಂಗ , ಎಂದು ಮೂರುವಿಧ. ಇವುಗಳನ್ನುಸರಿಸಿ ಸ್ಥಲಗಳು ಹಂತಗಳಾಗುತ್ತವೆ . ಭಕ್ತ , ಮಾಹೇಶ್ವರ , ಪ್ರಸಾದಿ , ಪ್ರಾಣಲಿಂಗಿ , ಶರಣ , ಐಕ್ಯ ಇವು ಸಾಧಕನು ಏರುವ ಹಂತಗಳು. ಭಕ್ತನಲ್ಲಿ ಧೃಡ ವಿಶ್ವಾಸ , ನಂತರ ವೀರವ್ರತ , ಮಹೇಶ್ವರ ಸ್ಥಲ , ಸರ್ವವೂ ಶಿವನ ಪ್ರಸಾದವೆಂಬ ಭಾವ -ಪ್ರಸಾದಿ , ಅಂತರಂಗ ದ್ಯಾನ -ಪ್ರಾಣಲಿಂಗಿ , ಶಿವನನ್ನು ಪತಿ ಎಂದಾಗ ಶರಣ , ಶಿವನೊಂದಿಗೆ ಐಕ್ಯ ಒಂದಾಗುವ ಹಂತವು ಐಕ್ಯ ಸ್ಥಲ ; ಆಗ ಅವನು ಶಿವನೇ ಆಗುತ್ತಾನೆ. ಶರೀರವಿದ್ದರೂ ಮೋಹವಿಲ್ಲ. ಜೀವಂತವಿದ್ದರೂ ಐಕ್ಯವನ್ನು ಸಾಧಿಸಬಹುದು. ಹೀಗೆ ದ್ವೈತಿಯಾಗಿದ್ದ ಭಕ್ತನು -ಶಿವಾದ್ವೈತಿಯಾಗುತ್ತಾನೆ (ಶಿವ+ಅದ್ವೈತಿ)

ಶೈವ ವಿಶೇಷಾದ್ವೈತ[ಬದಲಾಯಿಸಿ]

(ವೀರಶೈವ ಧರ್ಮ)
ಶೈವ ವಿಶೇಷಾದ್ವೈತ ಪ್ರತಿಷ್ಟಾಪಕರು ಶ್ರೀಪತಿ ಪಂಡಿತಾರಾಧ್ಯರು . (ಕ್ರಿ. ಶ. ಸು.೧೧೦೦) ಇವರು ಬ್ರಹ್ಮ ಸೂತ್ರಗಳಿಗೆ ಭೇದಾಭೇದ ಪರವಾದ ಭಾಷ್ಯವನ್ನು ಬರೆದು ವೀರ ಶೈವ ಸಿದ್ಧಾಂತವನ್ನು ವಿಶೇಷಾದ್ವೈತವೆಂದು ಕರೆದರು .

ಪ್ರಾಚೀನವಾದ ದ್ವೈತಶೈವ ,ಲಕುಲಈಶ ಪಾಶುಪತ , ಶ್ರೀಕಂಠ ಶಿವಾಚಾರ್ಯರ ಶೈವ ವಿಶಿಷ್ಟಾದ್ವೈತ ಹಾಗೂ ಈಚಿನ-ನಂತರದ ಶ್ರೀ ರಾಮಾನುಜಾಚಾರ್ಯವೈಷ್ಣವ ವಿಶಿಷ್ಟಾದ್ವೈತಗಳ ಪ್ರಭಾವವು ಶ್ರೀಕರ ಭಾಷ್ಯದಲ್ಲಿ ಕಂಡುಬರುತ್ತದೆ.

ರಾಮಾನುಜಾಚಾರ್ಯರು ತಮ್ಮ ಭಾಷ್ಯವನ್ನು ಶ್ರೀಭಾಷ್ಯ ವೆಂದು ಕರೆದರೆ , ಶ್ರೀಪತಿ ಪಂಡಿತರು ತಮ್ಮ ಭಾಷ್ಯವನ್ನು ಶ್ರೀಕರ ಭಾಷ್ಯವೆಂದು ಕರೆದಿದ್ದಾರೆ .
'ಶ್ರೀಕರ' ಭಾಷ್ಯದಲ್ಲಿ 'ಶ್ರೀ ಭಾಷ್ಯದ' ಅನೇಕ ವಿಚಾರಗಳು ಸಮಾವೇಶಗೊಂಡಿದೆ.
ಶ್ರೀಪತಿ ಪಂಡಿತಾರಾಧ್ಯರು ಬ್ರಹ್ಮ ಸೂತ್ರದ ಬಗ್ಗೆ ,"--ಭಗವತಾ ವ್ಯಾಸೇನ ಮತತ್ರಯಸ್ಯೈವ ಭೇದಾಭೇದ ಕ್ರಮೇಣ ವ್ಯಪದೇಶಾತ್ ಜೈಮಿನ್ಯಾದಿ ವೈದಿಕರಪಿ ಪೂರ್ವಪಕ್ಷಸ್ಯಾಪ್ಯ ಯೋಗ್ಯತ್ವೇನ ವಿಶಷ್ಟ ಮತಸ್ಯ ಉಪೇಕ್ಷಣೀಯತ್ವಾತ್ --" ಎಂದು ತಮ್ಮ ಶ್ರೀಕರ ಭಾಷ್ಯದಲ್ಲಿ ಹೇಳಿದ್ದಾರೆ- ಶ್ರೀ ವ್ಯಾಸರ ಬಗ್ಗೆ ಭಗವತಾ ವ್ಯಾಸೇನ ಎಂದು ಕರೆದಿದ್ದಾರೆ .

ಅಲ್ಲದೆ ಅವರು ತಮ್ಮ ವ್ಯಾಸ ಮುನಿರಚಿತ ಬ್ರಹ್ಮ ಸೂತ್ರದ ಭಾಷ್ಯದಲ್ಲಿ ಶ್ರೀಕಂಠ ಶಿವಾಚಾರ್ಯರನ್ನು ಗೌರವದಿಂದ ಕಂಡರೂ ಅವರ ವಿಶಿಷ್ಟಾದ್ವೈತ ವಾದವನ್ನು ತಮ್ಮ ಶ್ರೀಕರ ಭಾಷ್ಯದಲ್ಲಿ ಖಂಡಿಸಿದ್ದಾರೆ.

ಶ್ರೀಪತಿ ಪಂಡಿತರು ತಮ್ಮ ಭಾಷ್ಯದ ಸ್ವರೂಪವನ್ನು :
ಶ್ರುತ್ಯೇಕದೇಶ ಪ್ರಾಮಾಣ್ಯಂ ದ್ವೈತಾದ್ವೈತ ಮತಾದಿಶು |
ದ್ವೈತಾದ್ವೈತ ಮತೇ ಶುದ್ಧೇ ವಿಶೇಷಾದ್ವೈತ ಸಂಜ್ಞಕೇ ||
ವೀರಶೈವೈಕ ಸಿದ್ಧಾಂತೇ ಸರ್ವಶ್ರತಿಸಮನ್ವಯಃ ||
ಎಂದು ದೃಢಪಡಿಸಿದ್ದಾರೆ. (ಸರ್ವ ಶ್ರುತಿ ಸಮನ್ವಯಃ =ಎಲ್ಲಾ ವೇದಗಳ ಸಮ್ಮತವಾದ )
ವೀಶಬ್ದೋನೋಚ್ಯತೇ ವಿದ್ಯಾ ಶಿವಜೀವೈಕ್ಯ ಬೋಧಿಕಾ |
ತಸ್ಯಾಂ ರಮಂತೇ ಯೇ ಶೈವಾ ವೀರಶೈವಾಃ ಪ್ರಕೀರ್ತಿತಃ ||(ಸಿಶಿ.ಪ.೫)
ತಾತ್ಪರ್ಯ : ಶ್ರುತಿ (ವೇದ ಸಮ್ಮತವಾದ)ಭೇದಾಭೇದ ದಲ್ಲಿ ಶಿವ ಮತ್ತು ಜೀವರ ಐಕ್ಯವನ್ನು ಹೇಳುವ ಶಿವಾದ್ವೈತ ವಿದ್ಯೆಯಲ್ಲಿ ರಮಿಸುವವರೇ ವೀರಶೈವರು. ಶ್ರೀಪತಿ ಪಂಡಿತರು ತಮ್ಮದು ಭೇದಾಭೇದ ಅಥವ ದ್ವೈತಾದ್ವೈತ ವಾದರೂ ಅದನ್ನು ವಿಶೇಷಾದ್ವೈತ ಎಂದಿದ್ದಾರೆ.
ವಿಶೇಷಾದ್ವೈತ
ವಿಶೇಷಾದ್ವೈತ ಎಂಬಲ್ಲಿ 'ವಿ' ಎಂದರೆ ಪರಮಾತ್ಮ ; 'ಶೇಷ' ಶಿವನ ಅಂಶರೂಪ 'ಜೀವ' ('ವಿ' ಶಬ್ದೇನ ಜಗತ್ಕಾರಣಂ , ಬ್ರಹ್ಮ ಲಕ್ಷಣಂ ಸೂಚಿತಂ , ಶೇಷ ಶಬ್ದೇನ ಜೀವೋ-ಆಭಿದೇಯತೇ ; ಶ್ರೀಕರ ಭಾಷ್ಯ ಬ್ರ.ಸೂ. ೧.೩.೧.೭) ಈ ಶಿವ-ಜೀವರಿಗೆ ಯಥಾನದ್ಯಃ ಎಂಬ ವೇದ ವಾಕ್ಯದಂತೆ ಅದ್ವೈತ ಅಥವಾ ಲಿಂಗಾಂಗ ಸಾಮರಸ್ಯಾತ್ಮಕವಾದ ಶಿವಯೋಗ.
ಇದನ್ನೇ ಶಿವಾದ್ವೈತ , ಶಕ್ತಿ ವಿಶಿಷ್ಟಾದ್ವೈತ ,ವಿಶಿಷ್ಟಾದ್ವೈತ , ಷಟ್ ಸ್ಥಲ ಸಿದ್ಧಾಂತ (ಲಿಂಗಾಯತ ಧರ್ಮ), ಮುಂತಾದ ಪದಗಳಿಂದ ಕರೆಯಲಾಗಿದೆ .
ವಿಶಿಷ್ಟಾದ್ವೈತಂ - ವಿಶಿಷ್ಟಂಚ ವಿಶಿಷ್ಟಂ ಚ ವಿಶಿಷ್ಟೇ > ಲಿಂಗಾಂಗೇ , ತಯೋರದ್ವೈತಂ.
"ವಿಶೇಷಾದ್ವೈತಂ. ಶಕ್ತಿ ವಿಶಿಷಾದ್ವೈತಂ - ತಂ ಶಕ್ತಿ ಶ್ಚ ಶಕ್ತಿಶ್ಚ ತಾಭ್ಯಾಂ ವಿಶಿಷ್ಟೌ ಜೀವೇಶೌ ತಯೋರದ್ವೈತಂ" -ಶಕ್ತಿ ವಿಶಿಶಷಾದ್ವೈತಂ
ಈ ಬಗೆಯ ಶಿವ ಮತ್ತು ಜೀವರಿಗೆ ಆಗುವ ಅದ್ವೈತ (ಸಾಮರಸ್ಯ) ವೇ ಶಕ್ತಿ ವಿಶಿಷ್ಟಾದ್ವೈತ.
ಇಲ್ಲಿಯ ಮೊದಲ ವಿಶಿಷ್ಟ ಪದಕ್ಕೆ ಚಿತ್ ಶಕ್ತಿ , ವಿಶಿಷ್ಟ -ಪರಶಿವ , ರುದ್ರಾದಿ ಸಂಜ್ಞೆಯುಳ್ಳ ಲಿಂಗ ಎಂದು ಅರ್ಥ. ಎರಡನೆಯ ವಿಶಿಷ್ಟ ಪದಕ್ಕೆ ಚಿತ್‌ಶಕ್ತಿ ವಿಶಿಷ್ಟ ಶಿವಾಂಶ ರೂಪ ಅಂಗ ಎಂಬ ಹೆಸರುಳ್ಳ ಜೀವ ಎಂದು ಅರ್ಥ, ಇಂತಹ ಲಿಂಗ ಅಂಗರಿಗೆ ಆಗುವ ಅದ್ವೈತವೇ ವಿಶಿಷ್ಟಾದ್ವೈತ.
ಶಿವ ಯೋಗ - ಶಿವೇ ಯೋಗಃ -> ಶಿವಯೋಗಃ ಎಂದರೆ ಸೂಕ್ಷ್ಮ ಚಿದಚಿತ್ ಶಕ್ತಿ ವಿಶಿಷ್ಟ ಶಿವನಲ್ಲಿ ಶಿವದೀಕ್ಷೆಯಿಂದ ನಷ್ಟಮಲವುಳ್ಳ ಶುದ್ಧಾತ್ಮನಿಗೆ ಆಗುವ ಯೋಗ > ಅದ್ವೈತವೆಂದು ತಿಳಿಯಬೇಕು.
ಶ್ರೀ ನೀಲಕಂಠ ಶಿವಾಚಾರ್ಯರು (ಕ್ರಿ,ಶ.೧೪೦೦) ಈ ಸಿದ್ಧಾಂತವನ್ನು ವಿಶಿಷ್ಠಾದ್ವೈತ ಅಥವಾ ಶಕ್ತಿ ವಿಶಿಷಾದ್ವೈತ ವೆ ದು ಹೆರಿಸಿದ್ದಾರೆ. ಇದು ರಾಮಾನುಜರು ಹೇಳುವ "ಜೀವಶರೀರಕಂ ಬ್ರಹ್ಮ" ಎಂಬ ಅರ್ಥದ "ವಿಶಿಷ್ಟಾದ್ವೈತ"ವಲ್ಲ. ಇಲ್ಲಿರುವ ವೈಶಿಷ್ಯ ಶಕ್ತಿಯದು .
ಅಂಶ-ಅಂಶಿ ರೂಪರಾದ ಜೀವ ಶಿವರಿಗೆ ಸಾಧಕಾವಸ್ಥೆಯಲ್ಲಿ ಭೇದವೂ ಸಿದ್ಧಾವಸ್ಥೆಯಲ್ಲಿ ಅಭೇದವೂ ಇರುವುದು -ಸ್ವತ ಸಿದ್ಧ.
ಅದ್ವೈತಿಗಳು ಹೇಳುವ ಮಾಯಾ ಪದವು ಯಾ ಮಾ ಸಾ ಮಾಯಾ (ಮಿಥ್ಯೆ) ಎಂಬ ಅರ್ಥದಲ್ಲಿದೆ . ಆದರೆ ಶಿವಾದ್ವೈತದಲ್ಲಿ ಮಾಯೆ ಶಿವಗತ ವಿಮರ್ಶಾ ಶಕ್ತಿಯೇ ಆಗಿದೆ. (ಇದಕ್ಕೆ ಅವರು ಶ್ವೇತಾಶ್ವೇತರ ಉಪನಿಷತ್ ೬-೮ ಪರಾಸ್ಯ ಶಕ್ತಿರ್‌ವಿಧೈವ ಶ್ರೂಯತೇ ಮತ್ತು ದೇವಾತ್ಮ ಶಕ್ತಿಂ ಸ್ವಗುಣೈರ್ನಿಗೂಢಾಂ || ಶ್ವೇ೧.೩ ಉದಾಹರಿಸಿದ್ದಾರೆ) ಆ ;ಶ್ರೀಮನ್ನೀಲಕಂಠಶಿವಾಚಾರ್ಯರು ವೇದೋಪನಿಷತ್ ಆಧಾರವನ್ನು ಕೊಟ್ಟು ಶಕ್ತಿ ವಿಶಿಷ್ಟಾದ್ವೈತ ಅಥವಾ ಷಟ್ಸ್ಥಲ ಸಿದ್ಧಾಂತವನ್ನು ಪ್ರತಿಪಾದಿಸಿದ್ದಾರೆ

.

ಬ್ರಹ್ಮವು ಶಕ್ತಿ ವಿಶಿಷ್ಟ[ಬದಲಾಯಿಸಿ]

ಅದ್ವೈತಿಗಳು ಬ್ರಹ್ಮವು ಕೇವಲ ಶುದ್ಧ ಎನ್ನುತ್ತಾರೆ . ಶೃತಿಯಲ್ಲಿರುವ ಸಚ್ಚಿದಾನಚಿದಂ ಬ್ರಹ್ಮ ಎಂಬ ಪದಕ್ಕೆ ಸತ್ ಚಿತ್ ಆನಂದಸ್ವರೂಪವೇ ಬ್ರಹ್ಮ ಎನ್ನುತ್ತಾರೆ . ಈ ಗುಣಗಳು ಜಡ ; ಆದ್ದರಿಂದ ಅದು ಬ್ರಹ್ಮವಾಗಲಾರದು ; ಆದ್ದರಿಂದ ಆವಾಕ್ಯವನ್ನು ಸಚ್ಚಿದಾನಂದ ವಿಶಿಷ್ಟ ಎಂದು ಅರ್ಥ ಮಾಡಬೇಕು. ಆಯಾ ಗಣವುಳ್ಳದ್ದು ಎಂದು ಅಚ್ ಪ್ರತ್ಯಯ ಸೇರಿಸಿ ಸಚ್ಚಿದಾನಂದ ವಿಶಿಷ್ಟ ಎಂದು ಅರ್ಥ ಮಾಡಬೇಕು. ಎಂದರೆ ಸತ್ತು ಚಿತ್ತು ಆನಂದ ವುಳ್ಳಚೇತನ ಎಂದಾಗುತ್ತದೆ. ಅಂದರೆ ಬ್ರಹ್ಮಕ್ಕೆ ಈಎಲ್ಲಾ ಅನುಭವವಿದೆ ಎಂದಾಗುತ್ತದೆ ; ಈದರ್ಶನದಲ್ಲಿ ಈ ಅನಭವವನ್ನೇ ವಿಮರ್ಶಾ ಶಕ್ತಿ ಎಂದಿದೆ. ಶಿವಾದ್ವೈತದಲ್ಲಿನ ಮಾಯೆ ಶವಗತ ವಿಮರ್ಶಾ ಶಕ್ತಿಯೇ ಆಗಿದೆ.

ಜೀವ ಸ್ವರೂಪ[ಬದಲಾಯಿಸಿ]

ಜೇವನು ಶಿವನ ಅಂಶ . ಜೀವು ಅನಂತ ಎಂದು ಶ್ರುತಿ (ವೇದ) ಪ್ರತಿಪಾದಿಸಿದೆ. ಉಜ್ವಲವಾಗಿ ಉರಿಯುವ ಬೆಂಕಿಯಿಂದ ಕಿಡಿಗಳು ಉದುರುವಂತೆ ವಿವಿಧ ವಾಸನಾ ವಿಶೀಷವುಳ್ಳ ಜೀವಿಗಳು ಅಭಿವ್ಯಕ್ತಗೊಳ್ಳುತ್ತಾರೆ .ಮಮೈವಾಂಶೋ ಜೀವಲೋಕೇ ಜೀಓವಭೂತಸ್ಸನಾತನಃ (ಭ.ಗೀ.)

ಜಗತ್ ಸೃಷ್ಟಿ -ಪರಿಣಾಮವಾದ[ಬದಲಾಯಿಸಿ]

ಜಗತ್ತು ಶಕ್ತಿವಿಶಿಷ್ಟದ ಪರಿಣಾಮ ಸುವರ್ಣವು ಆಭರಣವಾಗಿ ಪರಿಣಾಮ ಹೊಂದುವಂತೆ ಬ್ರಹ್ಮವೇ ಜಗತ್ತಾಗಿ ಪರಿಣಮಿಸಿತು. ಆತ್ಮ ಶಕ್ತಿಯ ವಿಕಾಸದಿಂದ ಶವನೇ ಜಗನ್ಮಯನಾದ. ಶಿವನಲ್ಲಿ ವಿಶ್ವವು ಬೀಜರೂಪವಗಿ ಅಡಗಿತ್ತು, ಪರಶಿವನ ಶಕ್ತಿವಿಸ್ತಾರವೇ ವಿಶ್ವ. ಲೋಕದಲ್ಲಿ ಶಕ್ತಿ ಮತ್ತು ಶಕ್ತಿಮಾನ್ ಎಂದು ಎರಡು ಶಕ್ತಿಗಳಿವೆ. ಶಕ್ತಿಯ ವಿಕಾಸವೇ ಜಗತ್ತು (ಬಹು ಸ್ಯಾಂ ಪ್ರಜಾಯೇಯ ಛಾಂ. ೬.೨.೩.). ಒಟ್ಟಿನಲ್ಲಿ ಶಕ್ತಿವಿಶಿಷ್ಟ ಶಿವನು ಜಗತ್ತಿಗೆ ಕಾರಣವೆಂದರೆ ಅವನು ತನ್ನ ಶಕ್ತ್ಯಂಶದಿಂದ ಉಪಾದಾನ ಕಾರಣನೂ , ಚೈತನ್ಯಾಂಶದಿಂದ ನಿಮಿತ್ತಕಾರಣನೂ ಆಗುವನು. ಆದ್ದರಿಂದ ಶಿವನು ಜಗತ್ತಿಗೆ ಅಭಿನ್ನನಿಮಿತ್ತೋಪದಾನ ಕಾರಣವೆನಿಸಿದ್ದಾನೆ.

ಶಕ್ತಿ ಭಕ್ತಿಗಳ ಸ್ವರೂಪ[ಬದಲಾಯಿಸಿ]

ಶಿವನು ತನ್ನಲೀಲೆಗಳಿಗಾಗಿ ಜಗತ್ತನ್ನು ಸೃಷ್ಟಿಸಿದ . ಶ್ರುತಿಯಲ್ಲಿ -ಸ ಏಕಾಕೀ ನ ರಮತೇ ಸ ದ್ವಿತೀಯಮೈಶ್ಚತ್ ಎಂಬಲ್ಲಿ ಇದನ್ನುಸಮರ್ಥಿಲಾಗಿದೆ.. ಆಗಮಗಳಲ್ಲಿ ಜಗತ್ತಿಗೆ ಕಾರಣವಾದ ಪರಬ್ರಹ್ಮವು ಸ್ಥಲ ಎಮದು ಕರೆಯಲ್ಪಟ್ಟಿದೆ. ಈ ಚರಚರಾತ್ಮಕವಾದ ಜಗತ್ತು ಯಾವುದರಿಂದ ಹೊರಹೊಮ್ಮಿ ಮತ್ತೆ ಎಲ್ಲಿ ಅಡಗುವುದೋ, ಅದೇ ಸ್ಥಲತತ್ವ ಎಂದು ಆಗಮದಲ್ಲಿ ಹೇಳಿದೆ . ಬ್ರಹ್ಮದಲ್ಲಿ ಕ್ಷೋಭೆ ಯಾದಾಗ ಪ್ರಜ್ಞಾ ಶಕ್ತಿ ಹುಟ್ಟಿತು . ಆಗ ಸ್ಥಲ vತ್ವವು ಎರಡು ಭಾಗವಾಯಿತು. ಒಂದು ಲಿಂಗಸ್ಥಲ -ಮತ್ತೊಂದು ಅಂಗಸ್ಥಲ ಚರಾಚರ ವಿಶ್ವವೆಲ್ಲವೂ ಪ್ರಳಚಿiದಲ್ಲಿ ಎಲ್ಲಿಅಡಗಿ ಸೃಷ್ಟಿಯಲ್ಲಿ ಯಾವುದರಿಂದ ಹೊರಹೊಮ್ಮುವುದೋ ಅದು ಲಿಂಗಸ್ಥಲ. ಅಂ ಎಂದರೆ ಪರಬ್ರಹ್ಮ , ಅದರಕಡೆ ಅಭಿಮುಖವಾದ ಜೀವತತ್ವವೇ ಅಂಗಸ್ಥಲ. ಹೀಗೆ ಲಿಂಗ ಸ್ಥಲವನ್ನು ಆಶ್ರಯಿಸಿದ ಶಕ್ತಿ ಕಲೆ ಎಂದು ಹೆಸರು ತಳೆಯಿತು. ಅದೇ ಅಂಗ ಸ್ಥಲವನ್ನು ಆಶ್ರಯಿಸಿದ ಶಕ್ತಿ ಭಕ್ತಿ ಎನಿಸಿತು. ಜಗನ್ನಿರ್ಮಾಣದಲ್ಲಿ (ಪ್ರವೃತ್ತಿ) ಶಿವನಿಗೆ ನೆರವಾದ ಮಾಹೇಶ್ವರೀ ಶಕ್ತಿಯೇ ನಿವೃತ್ತಿ ಮಾರ್ಗದಲ್ಲಿ ಜೀವಿಯನ್ನು ಮೇಲೆತ್ತಲು ಭಕ್ತಿ ಎನಿಸಿತು. ಶಕ್ತಿಯೇ ಭಕ್ತಿ ; ಭಕ್ತಿಯೇ ಶಕ್ತಿ ಅವರಡಲ್ಲಿ ಹೆಚ್ಚು ವ್ಯತ್ಯಾಸವಿಲ್ಲ. ಆದೃಊ ವ್ಯತ್ಯಾಸವೂ ಉಂಟು. ಶಕ್ತಿಯಿಂದ ಪ್ರಪಂಚ ಸೃಷ್ಟಿ - ಭಕ್ತಿಯಿಂದ ಪ್ರಪಂಚ ಲಯ.

ಶಕ್ತಿ ಅಧೋ ಮುಖಿ - ಭಕ್ತಿ ಊರ್ಧ್ವ ಮುಖಿ

ತತ್ವಗಳು[ಬದಲಾಯಿಸಿ]

ಪ್ರವೃತ್ತಿ (ಸೃಷ್ಟಿ) ಮಾರ್ಗದಲ್ಲಿ ಹಿಂದೆ ಹೇಳಿದ ೩೬ ತತ್ವಗಳಿವೆ
ಅದರಲ್ಲಿ ಶದ್ಧತತ್ವಗಳು : ೫ ಶಿವ -ಶಕ್ತಿ - ಸದಾಶಿವ- ಈಶ್ವರ- ಶದ್ಧವಿದ್ಯಾ
ಮಿಶ್ರ ತತ್ವ ಏಳು : ಮಾಯಾ - ಕಾಲ - ನಿಯತಿ - ಕಲಾ- ವಿದ್ಯಾ -ರಾಗ -ಪುರುಷ. ಆಶುದ್ಧ ತತ್ಗಳು ೨೪ ; ಪ್ರಕೃತಿ (ಸತ್ವ,ರಜ, ತಮಸ್ಸು ಗಳ ಸಮಸ್ಥಿತಿ
ಚಿತ್ತ ,ಬುದ್ದಿ , ಮನಸ್ಸು , ಅಹಂಕಾರ (ಅಂತಃಕರಣ ಚತುಷ್ಟಯ)
ಶ್ರೋತ ,ತ್ವಕ್ , ನೇತ್ರ, ಜಿಹ್ವಾ , ಪ್ರಾಣ. ಜ್ಞಾನೇಂದ್ರಿಯ ಪಂಚಕ )
ವಾಠಿ , ಪಾದ, ಪಾಣಿ, ಪಾಯು , ಉಪಸ್ಥಾ . (ಕರ್ಮಏಂದ್ರಯ ಪಂಚಕ .)
ಶಬ್ದ , ಸ್ಪರ್ಶ, ರೂಪ, ರಸ, ಗಂಧ. (ತನ್ಮಾತ್ರಾ ಪಂಚಕ )
ಆಕಾಶ, ವಾಯು, ವಹ್ನಿ , ಜಲ , ಭೂಮಿ . (ಭೂತ ಪಂಚಕ)
ಇದು ವೇದ ಸಮ್ಮತವಾದುದು. ಬ್ರಹ್ಮ ನಿಷ್ಟ ಇಚ್ಛಾಶಕ್ತಿಯೇ ಜಗದ್ರೂಪವಾಗಿ ಪರಿಣಮಿಸಿ ಹದಿನಾಲ್ಕು ಲೋಕ ಸೃಷ್ಟಿಚಿiiಯಿತು. (ಇಚ್ಛಾಶಕ್ತಿರ್ವಿನಿಷ್ಕ್ರಾಂತಾ ತತೋ ಜ್ಞಾನಂ ತತಃ ಕ್ರಿಯಾ || ತತ್ರೋತ್ಪನ್ನಾನಿ ಭೂತಾನಿ ಭುವನಾನಿ ಚತುರ್ದಶಾ ||ಶಿವಾಗಮ)

ನಿವೃತ್ತಿಮಾರ್ಗ[ಬದಲಾಯಿಸಿ]

ಜಗತ್ ಪ್ರವೃತ್ತಿಯಲ್ಲಿ ನೆರವಾದ ಶಕ್ತಿಯೇ ನಿವೃತ್ತಿಯಲ್ಲಿ ಭಕ್ತನನ್ನು ಉದ್ಧರಿಸಲು ಭಕ್ತಿಯಾಗಿ ಜೀವನನ್ನು (ಅಂಗ) ಆಶ್ರಯಿದುತ್ತದೆ. ಹೀಗೆ ಭಕ್ತಿಯನ್ನು ಹೊಂದಿದ ಜೀನನು ಪಿಂಡನೆನಿಸುತ್ತಾನೆ. ಭಕ್ತಿಯನ್ನು ಹೊಂದಿದ ಅವನ ಮೇಲೆ ಶಿವ ಕೃಪೆ ಆಗುತ್ತದೆ ಈ ಶಿವಕೃಪೆ ಅವ ನಮೇಲೆ ಬೀಳುವುದಕ್ಕೆ ಶಕ್ತಿ ಪಾತವೆಂದು ಹೆಸರು . ಆಗ ಅವನಲ್ಲಿ ಅನಾಸಕ್ತಿ ಲಕ್ಷಣಗಳು ಕಾಣಿಸುತ್ತವೆ . ಅದನ್ನು ಗುರುತಿಸಿ ಗುರುವು ಅವನಿಗೆ ಶಿವದೀಕ್ಷೆ ನೀಡುತ್ತಾನೆ. ಆಣವಾದಿ ಮಲಗಳು ಶಿವದೀಕ್ಷೆ ಪಡೆದ ಮೇಲೆ ನಾಶವಾಗುವುವು.

ಮಲಗಳ ಸ್ವರೂಪ[ಬದಲಾಯಿಸಿ]

ಜೀವನು ಬೆಂಕಿಯ ಕಿಡಿಯಂತೆ ಶಿವನಿಂದ ಬೇರ್ಪಟ್ಟಾಗ , ತಾನು ಅಪೂರ್ಣ ಎಂಬ ಭಾವ ಉಂಟಾಯಿತು . ಇದೇ ಆಣವಮಲ . ಸರ್ವಜ್ಞನಾದವನು ತಾನು ಕಿಂಚಿಜ್ಞ ನೆಂದು ತಿಳಿಯುವುದು ಮಾಯಾ ಮಲ . ಸರ್ವಶಕ್ತಿತ್ವ ಹೋಗಿ ತಾನು ಕಿಂಚತ್ಕತೃ ಎಂದು ತಿಳಿಯುವುದು ಕಾರ್ಮಮಲ. ಶಿವದೀಕ್ಷೆಯಿಂದ ಈ ಮೂರೂ ಮಲಗಳು ನಾಶಹೊಂದುತ್ತವೆ.

(ದೀಕ್ಷಯಾ ಮುಚ್ಯತೇ ದೇಹೀ ತ್ರಿವಿಧಾತ್ ಪಾಶ ಬಂಧನಾತ್|
ಶಿವತ್ವಂ ಯಾತಿ ಸತತಂ ನ ಪುನಃ ಪಶುತಾಂ ವ್ರಜೇತ್|| -(ವೀರಶೈವಾಚಾರ ಕೌಸ್ತುಭ )

ಮುಕ್ತಿ ಉಪಾಯ[ಬದಲಾಯಿಸಿ]

ಶಿವ ದೀಕ್ಷೆಯಿಂದ ಪಾಶ ಮುಕ್ತನಾದ ಜೀವನನ್ನು ಭಕ್ತಿ ಸೇರಿಕೊಳ್ಳುತ್ತದೆ. ಈ ಭಕ್ತಿಯು ಶ್ರದ್ಧಾ, ನಿಷ್ಠಾ , ಅವಧಾನ , ಅನುಭವ, ಆನಂದ , ಮತ್ತು ಸಮರಸ ಎಂಬಆರು ಹಂತಗಳಲ್ಲಿ ಭಕ್ತನನ್ನು ಮೇಲು ಮೇಲಿನ ಹಂತಕ್ಕೆ ಕೊಂಡೊಯ್ದು ಆವನಲ್ಲಿ ಸಮರಸಗೊಲಿಸುತ್ತದೆ. ಹೀಗೆ ಮೇಲೆ ಕೊಂಡೊಯುವ ಹಂತ-ಕ್ರಮಕ್ಕೆ ಷಟ್ಸ್ಥಲಸೋಪಾನವೆಂದು ಹೆಸರು .

ಷಟ್ಸ್ತಲ ಸೋಪಾನ[ಬದಲಾಯಿಸಿ]

೧.ಭಕ್ತ ಸ್ಥಲ
ಶಿವ ದೀಕ್ಷೆ ಪಡೆದು ಜೀವನಲ್ಲಿ ಭಕ್ತಿಯು ಶ್ರದ್ಧಾರೂಪವಾಗಿ ರುತ್ತದೆ . ಅವನಿಗೆ ದೇಹಾಭಿಮಾನ ಹೋಗಿ, > ಗುರು- ಲಿಂಗ- ಜಂಗಮ- ಭಸ್ಮ -ರುದ್ರಾಕ್ಷ- ಮಂತ್ರ -ಪಾದೋದಕ ಮತ್ತು ಪ್ರಸಾದವೆಂಬ ಅಷ್ಟಾವರಣಗಳಲ್ಲಿ , ಲಿಂಗಾಚಾರ , ಸದಾಚಾರ , ಶಿವಾಚಾರ, ಗಣಾಚಾರ, ಮತ್ತು ಭೃತ್ಯಾಚಾರ ಇತ್ಯಾದಿ ಪಂಚಾಚಾರ ದಲ್ಲಿ ಶ್ರದ್ಧೆಮೂಡಿ ಅದನ್ನು ಅನುಸರಿಸುತ್ತಾನೆ. ಇವುಗಳ ಅನಷ್ಠಾನದಿಂದ ಶಿವನೆಡೆಗೆ ಪ್ರೇಮದ ಮಂಥನವಾಗುವುದು. (ಸದಾಚಾರ ಶಿವೇ ಭಕ್ತಿರ್ಲಿಂಗೇ ಜಂಗಮಃ ಏಕಧೀಃ | ಲಾಂಚನೇ ಶರಣೇ ಭಕ್ತಿರ್ಭಕ್ತಸ್ಥಲಮನುತ್ತಮಮ್||)
೨.ಮಾಹೇಶ್ವರ ಸ್ಥಲ
ಇದು "ಸಲಿಲಮುಕ್ತನ್ಯಾಯಸ್ಥಲ" . ಕಡಲಚಿಪ್ಪಿನಲ್ಲಿ ರುವ ಹನಿ ಮುತ್ತು ಆಗುವಂತೆ , ಭಕ್ತಿಯು ನಿಷ್ಠೆಯಾಗುವುದು. ಈ ಸ್ಥಲದಲ್ಲಿ ಭಕ್ತಿಗೆ 'ನಿಷ್ಠಾಭಕ್ತಿ' ಎಂದು ಹೆಸರು. ಅವನು ದೃಢ ವ್ರತಿಯಾಗುವನು. (ಕೇವಲೇ ಸಹಜೇ ದಾನೇ, ನಿಷ್ೞಾತಃ ಶಿವತತ್ಪರಃ| ಬ್ರಹ್ಮಾದಿ ಸ್ಥಾನ ವಿಮುಖೋ ಭಕ್ತೋ ಮಹೇಶ್ವರಃ ಸ್ಮೃತಃ.||
ಅವನು ಶಿವವ್ರತಿಯಾಗುವನು. ತಾನು ,ತನ್ನದು ಎಂಬ ತನು,ಮನ,ಧನ, ವೆಂಬ ತ್ರಿವಿಧವನ್ನು ದಾಸೋಹಂ ಭಾವದಿದ ದಾನಮಾಡಿ ಬ್ರಹ್ಮ ಪದವಿಯನ್ನೂ ತಿರಸ್ಕರಿಸಿ ಮಾಹೇಶ್ವರನೆನಿಸುತ್ತಾನೆ.
೩.ಪ್ರಸಾದಿ ಸ್ಥಲ
ಇದನ್ನು ಅನಲಕಾಷ್ಠನ್ಯಾಯ ಸ್ಥಲ ಎನ್ನಬಹುದು . ಇಲ್ಲಿ ಭಕ್ತಿಯಿಂದ -ಚಿತ್ತ ಶುದ್ಧಿ ಹೊಂದಿ ಅವಧಾನ ಭಕ್ತಿ ಎನಿಸಿಕೊಳ್ಳುತ್ತದೆ. ಕಾಷ್ಠ (ಕಟ್ಟಿಗೆ)ಯನ್ನು ಬೆಂಕಿಯು ಸುಟ್ಟು ಬೂದಿ ಮಾಡುವಂತೆ ಭಕ್ತಿಯು ಅವಧಾನವೆನಿಸಿ ಅದು ಭಕ್ತನ ಮನಸ್ಸಿಗೆ ಅಂಟಿದ ಮಲವನ್ನೆಲ್ಲಾ ನಾಶಮಾಡಿ ಪ್ರಸಾದರೂಪವಾಗಿ ಪರಿವರ್ತಿದುತ್ತದೆ. ಅವನು ಶಿವಾಚಾರನೆನಿಸಿ ಪ್ರಸಾದಕಾಯ ನೆನಿಸುತ್ತಾನೆ.
ಮನಃ ಪ್ರಸಾದ ಸಿದ್ಯರ್ಥಂ ನಿರ್ಮಲ ಜ್ಞಾನಕಾರಣಂ |
ಶಿವ ಪ್ರಸಾದಂ ಸ್ವೀಕುರ್ವನ್ ಪ್ರಸಾದೀ ಹ್ಯೇಷಕಥ್ಯತೇ ||
ಪ್ರಾಣಲಿಂಗಿ ಸ್ಥಲ
ಇದು ಕೀಟ ಭ್ರಮರ ಯೋಗದ ರೂಪೆನ್ನಬಹುದು. ಕೀಟವು ತನ್ನನ್ನು ಕಚ್ಚಿದ ಛ್ರಮರವನ್ನು ನೆನೆದು ಭ್ರಮರವೇ ಆಗುವಂತೆ ನಿರಂತರ ಶಿವಧ್ಯಾನದಲ್ಲಿ ಶಿವನೇ ಆಗುತ್ತಾನೆ.
ಕೀಟೋ ಭ್ರಮರ ಯೋಗೆನ ಭ್ರಮರೋ ಭವತಿ ಧ್ರುವಂ |
ಶಿವ ಭಕ್ತ ಶಿವಯೋಗೇನ ಶಿವೋ ಭವತಿ ನಿಶ್ಚಿತಮ್ || ಭಕ್ತನು ಶಿವಾನುಭವವನ್ನು ಪಡೆಯುತ್ತಾನೆ. ಲಿಂಗಂ ಚಿದಾತ್ಮಕಂ ಬ್ರಹ್ಮ ತಚ್ಛಕ್ತಿಃ ಪ್ರಣರುಪಿಣೀ | ತದ್ರೂಪ ಲಿಂಗ ವಿಜ್ಞಾನೀ ಪ್ರಣಲಿಂಗೀತಿ ಕಥ್ಯತೇ ||
ಶರಣ ಸ್ಥಲ
ಇದನ್ನು ಸತೀ ಪತಿ ನ್ಯಾಯ ಸ್ಥಲವೆನ್ನುವರು. ಇದು ಆನಂದ ಭಕ್ತಿ ಸ್ಥಾನ . ಇಲ್ಲಿ ಸಾಧಕ ಶಿವಾನಂದಿ ಎನಿಸುವನು.
ಸತೀ ಚಾಹಂ ಪತಿರ್ಲಿಂಗ ಹೃದಿರ್ಯುಕ್ತ ಸ್ವಂ ಪ್ರಭುಃ |
ಪಾಪಂಚಿಕ ಸುಖಂ ನಾಸ್ತಿ ಶರಣಸ್ಥಲಮುತ್ತಮಮ್ ||
ಐಕ್ಯ ಸ್ಥಲ
ಕರ್ಮ-ಜ್ಞಾನ-ಭಕ್ತಿ
ಇದಕ್ಕೆ ಶಿಖಿಕರ್ಪೂರನ್ಯಾಯಸ್ಥಲ ವೆನ್ನುವರು . ಇಲ್ಲಿ ದ್ವೈತ ಮತು ಅದ್ವೈತಕ್ಕೆ ಸಮನ್ವಯವನ್ನು ಹೇಳಿದೆ. ಹಾಗೆಯೇ ಜ್ಞಾನ ಕರ್ಮಸಮುಚ್ಚಯವನ್ನೂ ಹೇಳಿದೆ ಅದ್ವೈತ ವೇದಾಂತದಲ್ಲಿ ಕರ್ಮದಿಂದ ಚಿತ್ತ ಶುದ್ಧಿಯಾಗಿ ಜ್ಞಾನದಿಂದ ಮೋಕ್ಷ ವೆಂದು ಹೇಳಿದೆ. ಅದರಲ್ಲಿ ಕರ್ಮದ ಫಲವಾಗಿ ಮೋಕ್ಷ ಬರುವುದಿಲ್ಲ. ಆದರೆ ಇಲ್ಲಿ ಕ್ರಮವಾಗಿ ಹೂ ಬಿಟ್ಟು ಹಣ್ಣು ಆಗುವಂತೆ ಕರ್ಮ ಮತ್ತು ಜ್ಞಾನವೆರಡೂ ಮೋಕ್ಷ ಸಾಧನವೆಂದು ಹೇಳುತ್ತದೆ.
ಇದಕ್ಕೆ ಅಂಧಪಂಗುನ್ಯಾಯ ವೆಂದು ಹೇಳುತ್ತಾರೆ . ಮೋಕ್ಷಕ್ಕೇ ಕರ್ಮ ಜ್ಞಾನಗಳೆರಡೂ ಅವಶ್ಯ ಹೇಗೆಂದರೆ : ಕುಂಟನು ಅಂಧನ ಹೆಗಲ ಮೇಲೆ ಕುಳಿತು ದಾರಿ ತೋರಿ ಗುರಿಯನ್ನು ತಲುಪುತ್ತಾನೆ. ಹಾಗೆ ಕರ್ಮದ ಸಹಾಯದಿಂದ ಮೇಲೆ-ಮೇಲಕ್ಕೇರಿ ಜ್ಞಾನ ಪಡೆದು ಶಿವಾನುಭವ ಪಡೆದು ಮೋಕ್ಷ ಪಡೆಯುತ್ತಾನೆ.

ಅಷ್ಟಾವರಣ[ಬದಲಾಯಿಸಿ]

ವೀರಶೈವರಲ್ಲಿ ಚಿತ್ತ ಶುದ್ಧಿಗೆ ಜ್ಞಾನ ಕ್ರಿಯೆಗಳೆರಡಕ್ಕೂ ಮಹತ್ವವಿದೆ. ಎಂಟು ಆವರಣಗಳು (ಕಕ್ಷೆಗಳು) ಇವೆ, :ಶ್ರದ್ಧಾಕೇಂದ್ರಗಳು : ಗುರು , ಲಿಂಗ , ಜಂಗಮ , ಪಾದೋದಕ , ಪ್ರಸಾದ , ವಿಭೂತಿ , ರುದ್ರಾಕ್ಷಿ , ಮತ್ತು ಮಂತ್ರ ಇವು ಸಾಧನೆಗೆ ಮುಖ್ಯ. ಶಿವ ಶರಣರ ಸೇವೆಯೇ ಶಿವ ಸೇವೆ ; ಮತಾಚಾರಕ್ಕಿಂತ ಮುಖ್ಯ . ಕಾಯಕವೇ ಕೈಲಾಸ ; ಅದೇ ಒಂದು ಮೌಲ್ಯ .

ಲಿಂಗ ಧಾರಣ ತತ್ವ[ಬದಲಾಯಿಸಿ]

ವೀರಶೈವರಲ್ಲಿ ಶಿವದೀಕ್ಷೆಯ ಅಂಗವಾಗಿ ಗುರುವು ಶಿಷ್ಯನಿಗೆ ಲಿಂಗ ಧಾರಣವನ್ನು ಮಾಡುತ್ತಾನೆ. ಈ ಲಿಂಗಕ್ಕೆ ಇಷ್ಟಲಿಂಗವೆಂದು ಹೆಸರು . ಇದು ಮಾನವ ಹೃದಯದಲ್ಲಿರುವ (ದಹರಾಕಾಶ) ಪ್ರಾಣದ ಸಂಕೇತ ಅಥವಾ ಪ್ರತೀಕ (ಈಶ್ವರಃ ಸರ್ವಭೂತಾನಾಂ ಹೃದ್ದೇಶೇನ ತಿಷ್ಠತಿ ಗೀ.೧೮-೧ ; ದಹ್ರಂ ವಿಪಾಪ್ಮಂ ಪರಮೇಶ್ಮ ಭೂತಂ ಹೃತ್ ಪುಂಡರೀಕಂ ಮಧ್ಯ ಸಂಸ್ಥಂ | -ತೈ.ಉಪ.) ಆ ವಸ್ತುವನ್ನು ಪ್ರಾಣಲಿಂಗವೆಂದು ಶ್ರೀ ರೇಣುಕಾಚಾರ್ಯರು ಅಪ್ಪಣೆಮಾಡಿದ್ದಾರೆ. ಆ ಪ್ರಾಣ ಲಿಂಗದ ಪ್ರತೀಕವೆನಿಸಿದ ಬಾಹ್ಯ ಲಿಂಗವನ್ನು ಪ್ರತಿಯೊಬ್ಬರೂ ಧರಿಸಲೇಬೇಕು. ಇದಕ್ಕೆ ಶ್ರುತಿಯಲ್ಲಿಯೂ ಆದಾರಗಳಿವೆ (ಅಯಂ ಮೇ ಹಸ್ತೋ ಭಗವಾನ್-ಋ.೮-೧-೨೫) ಗೌತಮ ಧರ್ಮಶ್ರುತಿಯಲ್ಲಿ- ಮುಖಂ ಮಂತ್ರೋ ಹೃದಿ ಧ್ಯಾನಂ, ಮಸ್ತಕೇ ಲಿಂಗಧಾರಣಂ | ಶಿಖಾ ರುದ್ರಾಕ್ಷ ಭಸ್ಮಾನಿ ಇತಿ ಬ್ರಾಹ್ಮಣ ಲಕ್ಷಣಂ || ಎಂದಿದೆ. ಇದರಿಂದ ಪ್ರಾಚೀನ ಕಾಲದಲ್ಲಿ ಬ್ರಾಹ್ಮಣರು ಲಿಂಗ ಮತ್ತು ಯಜ್ಞೋಪವೀತ ಧಾರಣೆ ಮಾಡುತ್ತಿದ್ದರೆಂದು ತಿಳಿದುಬರುತ್ತದೆ.
ಇಂದಿಗೂ ಲಿಂಗ ಮತ್ತು ಯಜ್ಞೋಪವೀತ ಧಾರಣೆ ಮಾಡುವ ಆರಾಧ್ಯ ಎಂಬ ಪಂಗಡವು ವೀರಶೈವರಲ್ಲಿ ಇದೆ. ವೀರಶೈವ ಮತಾಚಾರ್ಯರಲ್ಲಿ , ಶ್ರೀಪತಿ ಪಂಡಿತ, ಮಲ್ಲಿಕಾರ್ಜುನ ಪಂಡಿತ , ಬಸವೇಶ್ವರ ಇವರು ಲಿಂಗ- ಯಜ್ಞೋಪವೀತಿಗಳಾಗಿದ್ದು , ನಂತರ ವೀರಶೈವಾಚಾರ್ಯರಿಂದ ಶಿವದೀಕ್ಷೆ ಪಡೆದು ಯಜ್ಞೋಪವೀತವನ್ನು ತ್ಯಜಿಸಿ ವೀರಶೈವ ರಾದರೆಂದು ಇತಿಹಾಸದಿಂದ ತಿಳಿದು ಬರುತ್ತದೆ.

ಲಿಂಗ ಪೂಜೆಯ ಪ್ರಾಚೀನತೆ[ಬದಲಾಯಿಸಿ]

ಸಿಂಧೂ-ಹರಪ್ಪ -ಮಹೆಂಜೋದಾರೋ ಸಂಶೋದನೆಯಲ್ಲಿ ದೊರಕಿದ ಶಿವಲಿಂಗಗಳಲ್ಲಿ ಹತ್ತು ಚಿಕ್ಕ ಲಿಂಗಗಳು ಶರೀರದಮೇಲೆ ಧರಿಸಲು ಯೋಗ್ಯವಾದುದೆಂದು ಹೇಳಲಾಗಿದೆ. ಇದು ವೇದ ಕಾಲಕ್ಕಿಂತ ಹಿಂದಿನದು. ಶಿವನನ್ನು ಹೋಲುವ ದಕ್ಷಿಣಾಮೂರ್ತಿಯ ವಿಗ್ರಹವೂದೊರಕಿದೆ.( ಪಿ.ವಿ.ಕರ್ವ್ಮರ್‌ಕರ್-ರಿಲಿಜನ್ಸ ಆಫ್ ಇಂಡಿಯಾ ; ವೀರಶೈವರ ಉಗಮ ಮತ್ತು ಪ್ರಗತಿ -ಟಿ.ಎನ್.ಮಲ್ಲಪ್ಪನವರು ಹೈಕೋರ್ಟಜಡ್ಜ್ ಬೆಂ.). ಕೇವಲ ಭಾತದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಪುರಾತನ ಶಿವದೇವಾಲಯ ಶಿವಲಿಂಗ ಗಳಿರುವುದು ಕಂಡುಬಂದಿದೆ. ಈ ಬಗ್ಗೆ ಡಚ್ ದೇಶದ ಎನ.ಜೆ.ಕ್ರೋಮ್ ಒಂದು ಗ್ರಂಥವನ್ನೇ ಬರೆದಿದ್ದಾರೆ.

ಲಿಂಗವಂತ ಧರ್ಮದ ಐತಿಹಾಸಿಕತೆ[ಬದಲಾಯಿಸಿ]

ಹಿಂದೆ ಹೇಳಿದಂತೆ ಸಿಂಧೂ ಸಂಸ್ಸೃತಿಯಲ್ಲಿ ಈ ಧರ್ಮದ ಲಕ್ಷಣಗಳು ಕಂಡುಬಂದಿವೆ. ಲಿಂಗ ಧಾರಣ ಕ್ರಮವನ್ನು ಆರ್ಯ ಮತ್ತು ದ್ರಾವಿಡರು , ಆಸ್ಟ್ರೋಏಸ್ಯಾಟಿಕ್ ಜನಾಂಗದವರಿಂದ ಸ್ವೀಕರಿಸಿದ್ದಿರಬೇಕು ಎಂದು ಶ್ರೀ ಶಂ.ಬಾ.ಜೋಶಿಯವರು ತಮ್ಮ ಶಿವರಹಸ್ಯ ಗ್ರಂಥದಲ್ಲಿ (ಪು.೨೪-೨೫) ವ್ಯಕ್ತಪಡಿಸಿದ್ದಾರೆ. ಋಗ್ವೇದದಲ್ಲಿ ಬರುವ ಫಣಿಗಣ ಪಂಗಡವು ವಣಿಜ -ವ್ಯಾಪಾರಿಗಳಪಂಗಡವೆಂದು ಆಚಾರ್ಯ ಸಾಯಣರು ಅರ್ಥಮಾಡಿದ್ದಾರೆ. (ರಿಲಿಜಿಯನ್ ಆಫ್ ಇಂಡಿಯಾ ಪು.೭ ಎ.ಪಿ.ಕರಮರ ಕರ್) ಈಗಲೂ ಲಿಂಗಾಯತರಲ್ಲಿ ಬಣಜಿಗರ ವ್ಯಾಪಾರಿ ಪಂಗಡ ಇದೆ. ಆ ಕಾಲದಿಂದಲೂ ಆರ್ಯರಿಗೆ ಗೋವು ಧನವಾದರೆ ,ವಣಿಜ/ಬಣಜಿಗರಿಗೆ ಬಸವ /ವೃಷಭ ಧನ . ಸ್ಕಾಂದ ಪುರಾಣ -ಕಾಳಿಕಾ ಖಂಡ ಅ.೪ರಲ್ಲಿ ()ಶ್ಲೋ. ೨೪೦-೨೫೪)ಶಂಕರ , ಗೌರೀನಾಥ, ಅಗಸ್ತ್ಯ, ದೂರ್ವಾಸ ಮೊದಲಾದವರು ಲಿಂಗಧಾರಿಗಳೆಂದು ಹೇಳಿದೆ ; (ಸ್ಕಂದೋಭೃಂಗಿರಿತಿರ್ವೀರಭದ್ರಶ್ಚ ಪ್ರಮದಾದಯಃ | ದೇವಾಸುರ ಮನುಷ್ಯಾಶ್ಚ ಸರ್ವೇತೇ ಲಿಂಗಧಾರಕಾಃ ||೨೫೪||) ಕ್ರಿ. ಶ. ೫ನೇ ಶತಮಾನದ ಲ್ಲಿ ಪಲ್ಲವರ ರಾಜ ರಾಜಸಿಂಹನನ್ನು ಶಿವಚುಡಾಮಣಿ ಎಂದು ಕರೆದ ತಿರುಚನಾಪಳ್ಳಿ ಶಾಸನವಿದೆ. (ದಕ್ಷಿಣ ಭಾರತದ ಶಾಸನಗಳು ಭಾಗ ೮-೧೮೯೦) ; ಕ್ರಿ ಶ. ೧ ನೇ ಶತಮಾನದಲ್ಲಿ ಶ್ರೀಶೈಲದಲ್ಲಿ ಶೈವ ಮಠವಿತ್ತೆಂದು ಇತಿಹಾಸಕಾರರು ತರ್ಕಿಸಿದ್ದಾರೆ. ಫಾಹಿಯಾನನು (ಕ್ರಿ. ಶ. ೪೦೫) ಶ್ರೀ ಶೈಲದಲ್ಲಿ 'ಪಾರಾವತ'ವೆಂಬ ಶೈವ ಮಠವಿರುವುದಾಗಿ ಹೇಳಿದ್ದಾನೆ.
(ಸೂತ್ರ :ವಾಮೇರ್ಧಹಸ್ತೇ ವಿನ್ಯಸ್ತ ಶಿಖರಃ ಶಿವಲಿಂಗಕಃ) ಶಿವಲಿಂಗ ಹಸ್ತ ಎಂಬ ಲಿಂಗವಂತ ಸಂಸ್ಸೃತಿಯನ್ನು ಸೂಚಿಸಿದೆ.

ಕ್ರಿ ಶ. ೯೪೦ರಲ್ಲಿ ಶ್ರೀ ಶೈಲದಲ್ಲಿದ್ದ ಜಂಗಮ ಮಲ್ಲಿಕಾರ್ಜುನ ಶಿವಯೋಗಿ, ವಿರೂಪಾಕ್ಷ ದೇಶಿಕೇಂದ್ರ (ಕ್ರಿ.ಶ.೧೦೦೦) ಶ್ರೀಪತಿ ಪಂಡಿತಾರಾಧ್ಯ ಮೊದಲಾದವರು ವೀರಶೈವ ಧರ್ಮದ ಲಿಂಗಧಾರಣ ಸಿದ್ಧಾಂತವನ್ನು ಬರೆದಿರುವುದು ಪ್ರಸಿದ್ಧವಾಗಿದೆ. , ನಂತರ ಬಂದ ಅಲ್ಲಮ , ಬಸವಣ್ಣನವರು ಅದನ್ನು ಹೆಚ್ಚು ಪ್ರಚುರ ಪಡಿಸಿದರು.

ಆ ನಂತರ ಈ ಲಿಂಗಧಾರಣ ಮಾಡಿದವರು ಲಿಂಗಾಯತರು -ಲಿಂಗವಂತರು ಎಂದು ಪ್ರಸಿದ್ಧರಾದರು.

ಇಷ್ಟ ಲಿಂಗ[ಬದಲಾಯಿಸಿ]

ಇಷ್ಟ ಲಿಂಗ -ಲಿಂಗ ಧಾರಣೆ ದೀಕ್ಷೆ -ಪಂಚಾಚಾರ

ಲಿಂಗಾಯತರು ಇಷ್ಟಲಿಂಗವನ್ನು ಧರಿಸಿರುತ್ತಾರೆ. ಅಥವಾ ಸದಾ ಧರಿಸಿರಬೇಕೆಂಬ ನಿಯಮವಿದೆ. ಇಷ್ಟಲಿಂಗವನ್ನು ಸಾಮಾನ್ಯವಾಗಿ ಕಪ್ಪು ಪದರಶಿಲೆಯಿಂದ (ಸ್ಲೇಟ್ ಶಿಲೆ)ಮಾಡಲಾಗುವುದು. ಅದಕ್ಕೆ, ಗೋಮಯ ವಿಭೂತಿ ತೈಲ ಅಥವಾ ಬೆಣ್ಣೆ ಮತ್ತು ಅಂಟುಳ್ಳ ದಪ್ಪ ಕಪ್ಪು ತಿಳಿಯನ್ನು ಸವರಲಾಗುವುದು. ಇದಕ್ಕೆ ಕಾಂತಿಯನ್ನು ಕೊಡುವುದು ಎನ್ನುವರು . ಇಷ್ಟಲಿಂಗವು ಸ್ಥಾವರಲಿಂಗದ ಚಿಕ್ಕ ರೂಪವಾದರೂ ಅದು ಲಿಂಗಧಾರಣೆಮಾಡಿದವರಿಗೆ ಸ್ಥಾವರಲಿಂಗದಂತೆ ಕೇವಲ ಸಂಕೇತವಲ್ಲ ; ಅದು ಅವರಿಗೆ ಸಾಕ್ಷಾತ್ ಶಿವನೇ . ಅದರ ಪೂಜೆ ಅಹಂಗ್ರಹೋಪಾಸನೆ ಎನಿಸಿಕೊಳ್ಳುವುದು.
ಅದು ಲಿಂಗಾಯತರಿಗೆ ನಿರಾಕಾರ ಶಿವನ ಪ್ರತಿನಿಧಿ . ಇಷ್ಟ ಎಂದರೆ ಮೆಚ್ಚಿದ, ಅಪೇಕ್ಷೆಪಟ್ಟ ಎಂದು ಅರ್ಥ. ಅದ್ವೈತಿಗಳಿಗೆ ಲಿಂಗವು ಕೇವಲ ನಿರಾಕಾರ ಗುಣದ ಪರಬ್ರಹ್ಮದ ಪ್ರತೀಕ. ಈ ಲಿಂಗ ಧಾರಣೆಯನ್ನು ಇತಿಹಾಸಕಾರರ ಪ್ರಕಾರ ಬಸವಣ್ಣ ಹೊಸದಾಗಿ ಆರಂಭಿಸಿದ್ದಲ್ಲ , ಆದರೆ ಹೆಚ್ಚು ಬಳಕೆಗೆ ತಂದವನು . ಇಷ್ಟಲಿಂಗವು-ಧಾರಣೆಮಾಡುವ ಚಿಕ್ಕ ಲಿಂಗವು ಮೊದಲಿಂದ ,ನಿರಾಕಾರ, ಸರ್ವವ್ಯಾಪಿ, ಸರ್ವಗತ , ನಾಮರಹಿತ , ದೇವರು-ಶಿವ . ಶರಣ ತತ್ವವನ್ನು ಅನುಸರಿಸುವವರು ಎಲ್ಲರೂ ಇದನ್ನು ಧರಿಸಬೇಕು. ಬಸವಣ್ಣನವರು ಅನುಭವ ಮಂಟಪವನ್ನು ಸ್ಥಾಪಿಸಿ ಇದನ್ನು ಪ್ರಚುರ ಪಡಿಸಿದರು. ಇದನ್ನಾಧರಿಸಿ ಶರಣಪಥವನ್ನು ಅನುಸರಿಸಿದವರಿಗೆ ವೀರಶೈವ ಲಿಂಗಾಯತರೆನಿಸಿದರು

ಲಿಂಗ ಧಾರಣೆ-ದೀಕ್ಷೆ[ಬದಲಾಯಿಸಿ]

ಲಿಂಗಾಯತರಲ್ಲಿ ಲಿಂಗಧಾರಣೆಯ ದೀಕ್ಷಾ ಕಾರ್ಯಕ್ರಮವಿರುವುದು . ಈ ಲಿಂಗಧಾರಣೆ ಯನ್ನು ಯಾವುದೇ ವಯಸ್ಸಿನಲ್ಲಿ ಮಾಡಬಹುದು. ಸಾಮಾನ್ಯವಾಗಿ ಗರ್ಭವತಿಯಾದ ಮಹಿಳೆಗೆ ೭-೮ ತಿಂಗಳಾದಾಗ ಗುರುವು ಪೂಜೆ ಮಾಡಿ , ತಾಯಿಯಾಗುವವಳಿಗೆ ಇಷ್ಟಲಿಂಗವನ್ನು ಕೊಡುತ್ತಾನೆ. ಅವಳು ಅದನ್ನು ತನ್ನ ಮೊದಲೇಇದ್ದ ಇಷ್ಟ ಲಿಂಗಕ್ಕೆ ಜನನವಾಗುವ ವರೆಗೂ ಕಟ್ಟಿಕೊಳ್ಳುತ್ತಾಳೆ. ಜನನಾಚಿತರ ಆ ಹೊಸಲಿಂಗವನ್ನು ಮಗುವಿಗೆ ಕಟ್ಟುತ್ತಾಳೆ. ,
ಆ ಮಗು ೮-೧೧ ವರ್ಷವಾದಾಗ ಮಗುವು ಮನೆತನದ ಗುರುವಿನಿಂದ ಪೂಜೆಯ ಕ್ರಮವನ್ನು ತಿಳಿದುಕೊಂಡು ಗುರುವಿನಿಂದ ದೀಕ್ಷೆಯನ್ನು ಪಡೆಯುತ್ತಾನೆ . ಇದು ಗಂಡು ಹೆಣ್ಣಿನ ಬೇಧವಿಲ್ಲದೆ ಎಲ್ಲರಿಗೂ ಆ ಜೀವ ಪರ್ಯಂತ ಧರಸಬೇಕು ಮ್ತ್ತುದಿನ ನಿತ್ಯ ಪೂಜೆ ಮಾಡಬೇಕು. ಇದನ್ನು ಹೃದಯದಲ್ಲಿರುವ ಪರಶಿವನ ರೂಪವಾಗಿ ಎದೆಯಮೇಲೆ ಧರಿಸಬೇಕು. ಕೆಲವರು ಇದನ್ನು ದಾರದಲ್ಲಿ ಪೋಣಿಸಿಕೊಂಡು ಎದೆಯ/ಸೊಂಟದ ಸುತ್ತ ಬರುವಂತೆ ಧರಿಸುವರು. ಈ ಇಷ್ಟ ಲಿಂಗವನ್ನು ಚಿಕ್ಕ ಬಟ್ಟೆಯಲ್ಲಿ ಸುತ್ತಿ ಅಥವಾ ಒಂದು ಮರದ ಅಥವಾ ಬೆಳ್ಳಿಯ ಕರಂಡಿಕೆಯಲ್ಲಿ ಇಟ್ಟು ಕಟಟ್ಟಿಕೊಳ್ಳು ವರು .

ಪಂಚಾಚಾರ[ಬದಲಾಯಿಸಿ]

೧. ಲಿಂಗಾರ್ಚನೆ : ದಿನವೂ ಇಷ್ಟಲಿಂಗವನ್ನು ಮೂರು ಬಾರಿ ತ್ರಿಕಾಲದಲ್ಲಿ ಪೂಜಿಸಬೇಕು.ಬೆಳಿಗ್ಗೆ -ಮದ್ಯಾಹ್ನ,-ಸಂಜೆ
ಇಷ್ಟ ಲಿಂಗವನ್ನು ಎಡ ಅಂಗೈಯಲ್ಲಿಟ್ಟು ಪೂಜಿಸುವುದು
೨. ಸದಾಚಾರ : ತನ್ನ ಕಾಯಕ ಮತ್ತು ಕರ್ತವ್ಯಕ್ಕೆ ನಿಷ್ಟೆಯಿಂದಿರಬೇಕು. ಅಲ್ಲದೆ ಏಳು ನಿಯಮಗಳಿಗೆ ಬದ್ಧನಾಗಿರಬೇಕು. ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ, ತನ್ನ ಬಣ್ಣಿಸಬೇಡ , ಇದಿರ ಹಳಿಯಲುಬೇಡ ಮುನಿಯ ಬೇಡ , ಅನ್ಯರಿಗೆ ಅಸಹ್ಯಪಡ ಬೇಡ ಇವೇ ಆ ಏಳು ನಿಯಮಗಳು.
೩. ಶಿವಾಚಾರ :ಶಿವನೇ ಪರಮ ದೇವನೆಂದು ತಿಳಿದು , ಎಲ್ಲರೂ (ಶರಣರು?) ಸಮಾನರೆಂದೂ ಅವರ ಎಲ್ಲರ ಹಿತ ಬಯಸುವುದು.
೪. ಭೃತ್ಯಾಚಾರ : ಎಲ್ಲಾ ಪ್ರಾಣಿಗಳ ಬಗ್ಗೆ ದಯೆಯನ್ನು ತೋರಿಸುವುದು.
೫. ಗಣಾಚಾರ : ಶರಣರ ರಕ್ಷಣೆಗೆ ಬದ್ಧನಾಗಿರುವುದು.
ವೀರಶೈವ ಲಿಂಗಾಯತರು ಶುದ್ಧ ಸಸ್ಯಾಹಾರಿಗಳು .

ಉಪಸಂಹಾರ ಮತ್ತು ಸಮೀಕ್ಷೆ[ಬದಲಾಯಿಸಿ]

ಭಕ್ತಿಯ ಪ್ರಾಧಾನ್ಯತೆ : ನಾನು ಕರ್ತೃ ವೂ ಅಲ್ಲ ಸಾಕ್ಷಿಯೂ ಅಲ್ಲ ಎಲ್ಲಕ್ಕೂ ಶಿವನೇ ಕರ್ತೃ ಹಾಗೂ ಸಾಕ್ಷಿ ಎಂದು ದಾಸೋಹಂ ಭಾವದಿಂದಿರುವುದೇ ಭಕ್ತಿ ಕಾಂಡದ ವೈಶಷ್ಟ್ಯ .
ನ ಕರ್ತಾ ನ ಸಾಕ್ಷೀ ಶಿವ ಏವ್ಭೆತಿ ಕರ್ಮಣೋ |
ದ್ವಯಾಭಿಮಾನ ರಾಹಿತ್ಯಂ ಭಕ್ತಿಕಾಂಡೋSಯಮುಚ್ಯತೇ ||
ಶರೀರಾದಿ ಪದಾರ್ಥಂಚ ದತ್ವಾ ದಾನ ಸಮರ್ಪಣಮ್|
ಸಮರ್ಪ್ಯ ಸೋSಹಮಸ್ಮೀತಿ , ದಾಸೋSಹಂ ಭಾವ ಉಚ್ಯತೇ ||.
ಸ್ತ್ರೀ ಪುರುಷ ಸಂಸ್ಕಾರ : ವೀರಶೈವದಲ್ಲಿ ಪ್ರಾಚೀನ ವೇದೋಪನಿಷತ್ ಕಾಲದಲ್ಲಿದ್ದಂತೆ ಸ್ತ್ರೀ ಪರುಷರಿಬ್ಬರಿಗೂ ಶಕ್ತಿಪಾತ ಲಕ್ಷಣಗಳಿಂದ ಕೂಡಿದ ಶಿವದೀಕ್ಷಾ ಸಂಸ್ಕಾರವನ್ನು ಎಲ್ಲ ಮಾನವರಿಗೂ ಲಿಂಗ ಭೇಧ ಜಾತಿ ವರ್ಣಭೇದವನ್ನು ಪರರಿಗಣಿಸದೆ ಶಿವದೀಕ್ಷಾ ಸಂಸ್ಕಾರವನ್ನು ನೀಡುವ ವಿಚಾರವನ್ನು ಹೊಂದಿದೆ.
ಕಾಯಕ : ವೀರಶೈವ ಅನುಭಾವಿಗಳು ಜಗತ್ತು ಶಿವಸ್ವರೂಪವೆಂದು ಭಾವಿಸಿ ಸತ್ಯಶುದ್ಧ ಕಾಯಕವನ್ನು ಕೈಕೊಂಡು ಇಲ್ಲಿ ಸಲ್ಲುವವರು ಅಲ್ಲಿಯೂ ಸಲ್ಲುವರು ಎಂಬ ನೀತಿಯನ್ನು ಅನುಸರಿಸಿ ಸಾಮಾಜಿಕ , ಆತ್ಮೋದ್ಧಾರ , ಲೋಕೋದ್ಧಾರ ಕಾರ್ಯದಲ್ಲಿ ತೊಡಗಲು ವೀರ ಶೈವ ಧರ್ಮವು ಹೇಳುತ್ತದೆ.
ತೇ ವೀರಶೈವಾ ಲೋಕಾನಾಂ ನಿತ್ಯಂ ಕ್ಷೇಮಾಭಿಲಾಷಿಣಃ ||
ಸಕಲ ಜೀವಾವಳಿಗೆ ಲೇಸನ್ನು ಬಯಸುವುದೇ ವೀರ ಶೈವ ಧರ್ಮದ ತಿರುಳೆಂದು ಬೋಧಿಸಿದ್ದಾರೆ. ಇದೇ ವಿಶೇಷಾದ್ವೈತ ಅಥವಾ ವೀರಶೈವ ಅಥವಾ ಲಿಂಗಾಯತಧರ್ಮ -ಸಿದ್ಧಾಂತ
ಈ ದರ್ಶನವು , ಧಾರ್ಮಿಕ ,ಅಧ್ಯಾತ್ಮಿಕ , ಸಾಮಾಜಿಕ , ಚಿಂತನೆಗಳನ್ನೊಳಗೊಂಡ ಸಾಮಾಜಿಕ ಬದುಕಿಗೆ ವಿಮುಖವಲ್ಲದ ಚಿಂತನೆಗಳಿಂದ ಕೂಡಿದೆ.

[೩][೪]

(ಓಂ ತತ್ಸತ್)
ಚರ್ಚೆ

ನೋಡಿ[ಬದಲಾಯಿಸಿ]

೩.https://en.wikipedia.org/wiki/Lingayatism

ಚಾರ್ವಾಕ ದರ್ಶನ ; ಜೈನ ಧರ್ಮ- ಜೈನ ದರ್ಶನ ; ಬೌದ್ಧ ಧರ್ಮ ; ಸಾಂಖ್ಯ-ಸಾಂಖ್ಯ ದರ್ಶನ ; (ಯೋಗ)->ರಾಜಯೋಗ ; ನ್ಯಾಯ ದರ್ಶನ ; ವೈಶೇಷಿಕ ದರ್ಶನ;; ಮೀಮಾಂಸ ದರ್ಶನ - ; ವೇದಾಂತ ದರ್ಶನ / ಉತ್ತರ ಮೀಮಾಂಸಾ ; ಅದ್ವೈತ ; ಆದಿ ಶಂಕರರು ಮತ್ತು ಅದ್ವೈತ ; ವಿಶಿಷ್ಟಾದ್ವೈತ ದರ್ಶನ ; ದ್ವೈತ ದರ್ಶನ - ಮಾಧ್ವ ಸಿದ್ಧಾಂತ ; ಪಂಚ ಕೋಶ ; ಶ್ರೀಮನ್ಮಹಾಭಾರತಮ್ ಮತ್ತು ದ್ವೈತ ದರ್ಶನ ; ವೀರಶೈವ ಬಸವಣ್ಣ

ಆಧಾರ[ಬದಲಾಯಿಸಿ]

  1. ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಶೂನ್ಯಸಂಪಾದನೆ
  2. ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬಸವಣ್ಣ
  3. ದರ್ಶನಶಾಸ್ತ್ರ -ಆಧಾರ: ಭಾರತೀಯ ತತ್ತ್ವ ಶಾಸ್ತ್ರ ಪರಿಚಯ :- ಎಂ. ಪ್ರಭಾಕರ ಜೋಷಿ & ಪ್ರೊ.ಎಂ.ಎ.ಹೆಗಡೆ.
  4. ಭೋಜದೇವನ ತತ್ತ್ವ ಪ್ರಕಾಶ : ಸಂಪಾದನೆ (೧೯೭೩) ಆಸ್ಥಾನ ವಿದ್ವಾನ್ ಶ್ರೀ ಎಂ.ಜಿ. ನಂಜುಂಡಾರಾಧ್ಯ