ಉಪಾಸನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಉಪಾಸನ: ಹತ್ತಿರ ಕೂಡುವುದು ಎಂದು ಪದಶಃ ಅರ್ಥ, ಅತಿಗೂಢವಾದ ವಿಷಯವನ್ನು ತಿಳಿಯಲು ತುಂಬ ಆಸಕ್ತಿಯಿಂದ ಗುರುವಿನ ಬಳಿ ಕುಳಿತುಕೊಳ್ಳುವುದಕ್ಕೆ ಉಪಾಸನ ಎಂಬ ಪದವನ್ನು ಉಪನಿಷತ್ತುಗಳು ಉಪಯೋಗಿಸುತ್ತವೆ. ಮುಖ್ಯವಾಗಿ ಇದು ಬ್ರಹ್ಮವಿದ್ಯೆಗೆ ಸಂಬಂಧಪಟ್ಟದ್ದು. ಆರಾಧಿಸುವುದು ಎಂಬುದು ಸಾಮಾನ್ಯ ಅರ್ಥ. ಆದರೆ ಉಪಾಸನ ಕೇವಲ ದೇವರ ಆರಾಧನೆ ಮಾತ್ರ ಆಗಬೇಕಾದ್ದಲ್ಲ. ಏಕೆಂದರೆ ದೇವರನ್ನು ಆರಾಧಿಸದ ಬೌದ್ಧರಲ್ಲೂ ಜೈನರಲ್ಲೂ ಉಪಾಸನ ಬಳಕೆಯಲ್ಲಿತ್ತು. ಉಪಾಸನ ಕೇವಲ ಸಾಮಾನ್ಯ ಆರಾಧನೆಯಲ್ಲ, ಪೂಜೆಯಲ್ಲ, ಉಪಾಸನಕ್ಕೆ ಅತಿಶಯ ವಾದ ತಾದಾತ್ಮ್ಯ ತದೇಕಭಾವ ಅತ್ಯಗತ್ಯ. ಪೂಜ್ಯವಾದ ವಸ್ತು ಯಾವುದೇ ಆಗಲಿ ಅದರಲ್ಲಿ ನಿತ್ಯ, ನಿರಂತರ ಮತ್ತು ಅತಿಶಯ ಆಸಕ್ತಿ, ತಲ್ಲೀನತೆ ಇರುವುದು ಉಪಾಸನದ ಹೆಗ್ಗುರುತು. ಉಪಾಸನ ಹಲವು ಬಗೆಯಾಗಿವೆ. ಆ ಬಗೆಗಳಿಗೆ ಉಪಾಸಕ ಆಯ್ದುಕೊಂಡ ಇಷ್ಟಾರ್ಥ ಬೌದ್ಧರ ನಿರ್ವಾಣವಾಗಬಹುದು. ಸುಖವತಿಯಲ್ಲಿ ಪುನರ್ಜನ್ಮ ಪಡೆಯುವುದಾಗಬಹುದು. ದೇವಿಯ ಅಥವಾ ಶಕ್ತಿಯ ಕೃಪೆ ಪಡೆಯುವುದಾಗಿರಬಹುದು. ಇಷ್ಟದೈವವಾದ ನರಸಿಂಹ ಅಥವಾ ಭೈರವನ ಕೃಪೆ ಪಡೆಯುವುದಾಗಿರಬಹುದು. ಇಷ್ಟಾರ್ಥ ಅಥವಾ ಇಷ್ಟದೇವತೆಗೆ ಅನುಗುಣವಾಗಿ ಉಪಾಸನ ವಿಧಾನಗಳು ಬೇರೆಬೇರೆಯಾಗಿವೆ. ಶೈವರಲ್ಲಿ ಶಂಕರಚಾರ್ಯರ ಅನುಯಾಯಿಗಳೂ ವೈಷ್ಣವರಲ್ಲಿ ರಾಮಾನುಜ ಮತ್ತು ಮಧ್ವರ ಅನುಯಾಯಿಗಳೂ ಸೌಮ್ಯ ಉಪಾಸಕರು. ರಾಮಾನುಜಜೀಯರಲ್ಲಿ ಉಪಾಸನೆಯ ಅಂಗಗಳು ಐದು: ಅಭಿಗಮನ (ಹತ್ತಿರಕ್ಕೆ ಬರುವುದು), ಉಪಾದಾನ (ಸಿದ್ಧತೆ), ಇಜ್ಯ(ಅಘರ್ಯ್‌), ಸ್ವಾಧ್ಯಾಯ (ಮಂತ್ರೋಚ್ಚಾರಣೆ) ಮತ್ತು ಯೋಗ (ತದೈಕ ಭಕ್ತಿ). ವೈಷ್ಣವರಲ್ಲೂ ಶೈವರಲ್ಲೂ ಬೌದ್ಧರಲ್ಲೂ ವಾಮ ಉಪಾಸನೆಯುಂಟು. ರಾಸಲೀಲೆ ವೈಷ್ಣವರ ವಾಮಚಾರ, ಪಂಚ ಮಕಾರಗಳು ಶಾಕ್ತರ ವಾಮಾಚಾರ. ಬೌದ್ಧ ತಾಂತ್ರಿಕರೂ ಶಾಕ್ತೇಯರಂತೆ ವಾಮಾಚಾರವನ್ನು ಅನುಸರಿಸುತ್ತಾರೆ. ಬೌದ್ಧರಲ್ಲಿ ಭಿಕ್ಷು ಮತ್ತು ಉಪಾಸಕ ಎಂಬ ಎರಡು ಭೇದಗಳಿವೆ. ಭಿಕ್ಷು ಸಂನ್ಯಾಸಿ, ಉಪಾಸಕ ಗೃಹಸ್ಥ, ಭಿಕ್ಷು ಬ್ರಹ್ಮಚರ್ಯವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಉಪಾಸಕ ಮದುವೆಯಾಗಬಹುದು. ಆದರೆ ಕಾಮಮಿಥ್ಯಾಚಾರವನ್ನು ವರ್ಜಿಸಬೇಕು. ಅವನು ಪ್ರತಿ ಪಕ್ಷಾಂತ್ಯದಲ್ಲೂ ಇಪ್ಪತ್ತನಾಲ್ಕು ಗಂಟೆಗಳ ಕಾಲ ಸನ್ಯಾಸಿಯಂತೆ ಸಂವೃತನಾಗಿರ ಬೇಕು. ಮಹಾಯಾನ ಬೌದ್ಧಮತ ಬೆಳೆದ ಮೇಲೆ ಭಿಕ್ಷುಗಳು ಮದುವೆಯಾಗಿ ಉಪಾಸಕರಂತೆ ವ್ಯವಹರಿಸುವುದು ರೂಢಿಗೆ ಬಂತು. ನೇಪಾಳದಲ್ಲಿ ವಜ್ರಾಚಾರ್ಯರೆಂಬ ಮದುವೆಯಾದ ಭಿಕ್ಷುಗಳ ಗುಂಪು ಇದೆ. (ಜಿ.ಎಚ್.)

"https://kn.wikipedia.org/w/index.php?title=ಉಪಾಸನ&oldid=715584" ಇಂದ ಪಡೆಯಲ್ಪಟ್ಟಿದೆ