ಇಮ್ಮಡಿ ಪುಲಕೇಶಿ
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
ಇಮ್ಮಡಿ ಪುಲಿಕೇಶಿ/೨ನೇ ಪುಲಿಕೇಶಿ | |
---|---|
ರಾಜ/ಅಧಿಪತಿ | |
ರಾಜ್ಯಭಾರ | ಸುಮಾರು ಕ್ರಿ.ಶ ೬೦೯ - ೬೪೨ |
ಪೂರ್ವಾಧಿಕಾರಿ | ಮಂಗಳೇಶ |
ಉತ್ತರಾಧಿಕಾರಿ | ೧ನೇ ವಿಕ್ರಮಾದಿತ್ಯ |
ವಂಶ | ಚಾಲುಕ್ಯ ಸಾಮ್ರಾಜ್ಯ |
ತಂದೆ | ೧ನೇ ಕೀರ್ತಿವರ್ಮ |
ಇಮ್ಮಡಿ ಪುಲಿಕೇಶಿಯ (ಕ್ರಿ.ಶ. ೬೧೦-೬೪೨) (ಪುಲಕೇಶಿ/ ಪುಲಿಕೇಶಿ) ಚಾಲುಕ್ಯ ವಂಶದ ಪ್ರಖ್ಯಾತ ರಾಜನಾಗಿದ್ದನು. ಚಾಲುಕ್ಯ ಅರಸರು ಜೈನ ಧರ್ಮದ ದಿಗಂಬರ ಜನಾಂಗದವರು. ಇವರು ಮೂಲತಃ ಬನವಾಸಿಯಿಂದ ವಲಸೆ ಬಂದವರು. ಇವರ ಕಾಲದಲ್ಲಿ ಬಾದಾಮಿ ಚಾಲುಕ್ಯರ ಸಾಮ್ರಾಜ್ಯವು ದಖ್ಖನ್ ಪ್ರಸ್ಥಭೂಮಿಯವರೆಗೆ ವಿಸ್ತಾರವಾಗಿತ್ತು.
ಮಹಾರಾಜ ಇಮ್ಮಡಿ ಪುಲಿಕೇಶಿಯ ಹೆಂಡತಿಯು ಅಳುಪ (ಆಳ್ವಾ) ವಂಶದವರು. ಪುಲಿಕೇಶಿಯು ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಮಧ್ಯಪ್ರದೇಶ, ಮಹಾರಾಷ್ಟ್ರ ಹಾಗೂ ಥೈಲ್ಯಾಂಡ್ ಮತ್ತು ಕಾಂಬೋಡಿಯಾ ದೇಶದ ನಡುವೆ ದೇವಾಲಯ ನಿರ್ಮಿಸಿದ್ದಾರೆ. ಬಾದಾಮಿಯ ಭೂತನಾಥ ದೇವಾಲಯ ಬನವಾಸಿ ಮಾದರಿಯಲ್ಲಿ ಕೆತ್ತಲಾಗಿದೆ. ಮೂರನೇ, ನಾಲ್ಕನೇ ಗುಹಾಂತರ ದೇವಾಲಯದಲ್ಲಿ ಜೈನ ಧರ್ಮದ ದೇವರುಗಳು, ನಾಲ್ಕನೇ ಗುಹಾಂತರ ದೇವಾಲಯ ಸಂಪೂರ್ಣ ಜಿನೇಂದ್ರ ದೇವಾಲಯವಿದೆ. ಚಾಲುಕ್ಯ ಅರಸರಿಗೆ ಕುದುರೆ ಮತ್ತು ಆನೆಗಳನ್ನು ಥೈಲ್ಯಾಂಡ್ ಮತ್ತು ಕಾಂಬೋಡಿಯಾ ಆಮದು ಮಾಡಿಕೊಳ್ಳುತ್ತಿದ್ದರು ಎನ್ನಲಾಗಿದೆ.
ಹೆಸರುಗಳು ಮತ್ತು ಬಿರುದುಗಳು
ಪುಲಕೇಶಿಯ ಹೆಸರಿನ ಎರಡು ರೂಪಾಂತರಗಳು ಚಾಲುಕ್ಯರ ದಾಖಲೆಗಳಲ್ಲಿ ಕಂಡುಬರುತ್ತವೆ: "ಪುಲಿಕೇಶಿನ್" ಮತ್ತು "ಪೊಲೆಕೇಶಿನ್"[೧] "ಎರೆಯ" ಎಂಬುದು ಅವನ ಇನ್ನೊಂದು ಹೆಸರು ಎಂದು ತೋರುತ್ತದೆ: ಪೆದ್ದವಡುಗೂರು ಶಾಸನವು ಅವನನ್ನು "ಎರೆಯಾತಿಯಾಡಿಗಳ್"[೨] (ಅಥವಾ "ಎರೆಯಿತಿಯಾದಿಗಳ್"[೩]) ಎಂದು ಸಂಬೋಧಿಸುತ್ತವೆ, ಮತ್ತು ಬಿಜಾಪುರ-ಮುಂಬೈ ಶಾಸನವು "ಎರಜ" ಎಂಬ ರೂಪಾಂತರವನ್ನು ಉಲ್ಲೇಖಿಸುತ್ತದೆ.[೪] ಎರೆಯ ಎಂಬುದು ಪುಲಕೇಶಿನ ಪಟ್ಟಾಭಿಷೇಕದ ಪೂರ್ವದ ಹೆಸರು ಎಂಬುದು ಇತಿಹಾಸಕಾರ ಕೆ.ವಿ.ರಮೇಶರ ಸಿದ್ಧಾಂತ.[೫]
ಸತ್ಯಾಶ್ರಯ, ಪುಲಕೇಶಿಯ ಆನುವಂಶಿಕ ಬಿರುದು, ಸಾಮಾನ್ಯವಾಗಿ ರಾಜವಂಶದ ದಾಖಲೆಗಳಲ್ಲಿ ಅವನ ಹೆಸರಿಗೆ ಪರ್ಯಾಯವಾಗಿ ಬಳಸಲಾಗುತ್ತಿತ್ತು.[೧] ಅವರು ರಾಜವಂಶದ ಅತ್ಯಂತ ಪ್ರಸಿದ್ಧ ಆಡಳಿತಗಾರರಾಗಿದ್ದರು, ಈ ಕಾರಣದಿಂದಾಗಿ ನಂತರದ ಆಡಳಿತಗಾರರು ತಮ್ಮ ರಾಜವಂಶವನ್ನು ಸತ್ಯಾಶ್ರಯ-ಕುಲ ಎಂದು ಕರೆದರು.[೬]
ಪುಲಕೇಶಿಯ ಸಾಮ್ರಾಜ್ಯಶಾಹಿ ಬಿರುದುಗಳಲ್ಲಿ "ಭಟ್ಟರಕ" ಮತ್ತು "ಮಹಾರಾಜಾಧಿರಾಜ" ಸೇರಿವೆ. ಜೊತೆಗೆ, ಅವರು ಶ್ರೀ-ಪೃಥ್ವಿ-ವಲ್ಲಭ, ವಲ್ಲಭ, ಮತ್ತು ಶ್ರೀ-ವಲ್ಲಭ ಎಂಬ ಕುಟುಂಬದ ವಿಶೇಷಣಗಳನ್ನು ಸಹ ಬಳಸಿದ್ದಾರೆ.[೧] ಹರ್ಷನನ್ನು ಸೋಲಿಸಿದ ನಂತರ ಪುಲಕೇಶಿಯು ಪರಮೇಶ್ವರ ಎಂಬ ಬಿರುದನ್ನು ಪಡೆದರು, ಇದು ಅವರ ಬಿಜಾಪುರ-ಮುಂಬೈ ಶಾಸನದಿಂದ ದೃಢೀಕರಿಸಲ್ಪಟ್ಟಿದೆ.[೪]
ಚೀನೀ ಪ್ರವಾಸಿ ಕ್ಸುವಾನ್‌ಜಾಂಗ್ ಅವನನ್ನು ಪು-ಲೋ-ಕಿ-ಶೆ ಎಂದು ಕರೆಯುತ್ತಾನೆ.[೪] ಪರ್ಷಿಯನ್ ಇತಿಹಾಸಕಾರ ಅಲ್-ತಬರಿ ಅವನನ್ನು "ಪರಮೇಸ" ಅಥವಾ "ಫಾರ್ಮಿಸ್" ಎಂದು ಕರೆಯುತ್ತಾನೆ, ಬಹುಶಃ ಅವನ ಬಿರುದು ಪರಮೇಶ್ವರನ ಪರ್ಷಿಯನ್ ಪ್ರತಿಲೇಖನ.[೧]
ಹರ್ಷವರ್ಧನನನ್ನು ಎದುರಿಸಿದ್ದು
ಇವನ ಕಾಲದಲ್ಲಿಯೇ ಸಕಲೋತ್ತರಾಪಥೇಶ್ವರನೆಂದು ಕರೆದು ಕೊಳ್ಳುತ್ತಿದ್ದ ಹರ್ಷವರ್ಧನನು ದಕ್ಷಿಣಾಪಥವನ್ನು ಜಯಿಸಬೇಕೆಂಬ ಮಹದಾಕಾಂಕ್ಷೆಯಿಂದ ವಿಂಧ್ಯಪರ್ವತದ ಸಮೀಪದಲ್ಲಿ ರೇವಾನದಿಯ ತೀರದಲ್ಲಿ ಬೀಡುಬಿಟ್ಟಿದ್ದನು. ಇದನ್ನು ಸಹಿಸಲಾರದೆ ಇಮ್ಮಡಿ ಪೊಲೆಕೇಶಿಯು ಹರ್ಷವರ್ಧನನನ್ನು ಎದುರಿಸಿ ಅವನ ಸೈನ್ಯವನ್ನು ಧ್ವಂಸಮಾಡಿ ಅವನನ್ನು ಹೊಡೆದಟ್ಟಿ ಪರಮೇಶ್ವರನೆಂಬ ಬಿರುದನ್ನು ಪಡೆದು, ದಕ್ಷಿಣಾಪಥಸ್ವಾಮಿ/ದಕ್ಷಿಣಾಪಥೇಶ್ವರ ಎಂಬ ಬಿರುದನ್ನು ಧರಿಸಿ, ಪಶ್ಚಿಮ ಸಮುದ್ರದಿಂದ ಬಂಗಾಳ ಕೊಲ್ಲಿಯವರೆಗೂ, ನರ್ಮದಾನದಿಯಿಂದ ದಕ್ಷಿಣ ಸಮುದ್ರದವರೆಗೂ ತನ್ನ ಸಾರ್ವಭೌಮತ್ವವನ್ನು ಸ್ಥಾಪಿಸಿ, ಬಾದಾಮಿ ರಾಜಧಾನಿಯಿಂದ ಈ ಸಾಮ್ರಾಜ್ಯವನ್ನು ಆಳುತ್ತಿದ್ದನೆಂದು ಇವನ ಸುಪ್ರಸಿದ್ಧ ಐಹೊಳೆ ಶಾಸನವು (ಕ್ರಿ.ಶ.೬೩೪) ತಿಳಿಸುತ್ತದೆ. ಇವನ ಖ್ಯಾತಿಯು ಭಾರತದಲ್ಲಿ ಮಾತ್ರವಲ್ಲದೆ ಪರದೇಶಗಳಲ್ಲಿಯೂ ಹಬ್ಬಿತ್ತು.
ಇವನ ಸಮಕಾಲೀನನಾಗಿ ಇರಾನ್ ದೇಶದ ದೊರೆಯಾಗಿದ್ದ ಎರಡನೆಯ ಖುಸ್ರುವು ತನ್ನ ರಾಯಭಾರಿಯ ಕೈಯಲ್ಲಿ ಅನೇಕ ಬೆಲೆಬಾಳುವ ಬಹುಮಾನಗಳನ್ನು ಪುಲಕೇಶಿಗೆ ಕಳುಹಿಸಿಕೊಟ್ಟನೆಂದೂ, ಇವರಿಬ್ಬರಿಗೂ ಆಗಿಂದಾಗ್ಗೆ ಪತ್ರವ್ಯವಹಾರವು ನಡೆಯುತ್ತಿದ್ದಿತೆಂದೂ ತಿಳಿದುಬಂದಿದೆ. ಪುಲಕೇಶಿಯ ಕಾಲದಲ್ಲಿ ಭಾರತದಲ್ಲಿ ಸಂಚಾರ ಮಾಡಿದ ಹ್ಯೂಯೆನ್‌ತ್ಸಾಂಗ್ ಎಂಬ ಚೀನಾ ದೇಶದ ಯಾತ್ರಿಕನು ಪುಲಕೇಶಿಯ ರಾಜ್ಯವನ್ನು ಅತಿವಿವರವಾಗಿ ವರ್ಣಿಸಿದ್ದಾನೆ.
ಹುಲಿಯ ಕೂದಲನ್ನು ಹೋಲುವ ಕೂದಲುಳ್ಳವ
ಇಂತಹ ಕೀರ್ತಿವಂತರಾದ ರಾಜರ ಹೆಸರಿನ ಅರ್ಥವನ್ನು ವಿದ್ವಾಂಸರು ಬೇರೆ ಬೇರೆ ವಿಧವಾಗಿ ಹೇಳಿದ್ದಾರೆ. ಮೊದಮೊದಲಿಗೆ ಹುಟ್ಟಿದ ಈ ವಂಶದ ಶಾಸನಗಳಲ್ಲಿ ಈ ಹೆಸರಿನ ರೂಪವು ಪೊಲೆಕೇಶಿ ಎಂದೇ ಕಾಣಬರುತ್ತಿದ್ದರೂ, ಪುಲಿಕೇಶಿ, ಪುಲಕೇಶಿ ಮೊದಲಾದ ರೂಪಾಂತರಗಳೂ ಶಾಸನಗಳಲ್ಲಿ ಸಿಕ್ಕುತ್ತವೆ. ಬಹುಮಂದಿ ವಿದ್ವಾಂಸರು ಈ ಹೆಸರಿನ ಪೂರ್ವಾರ್ಧವನ್ನು “ಪುಲಿ” ಎಂದರೆ ಹುಲಿ ಎಂದೂ, “ಕೇಶಿನ್” ಎಂದರೆ ಕೂದಲುಳ್ಳವ ನೆಂದೂ, ಈ ಎರಡು ಪದಗಳೂ ಸೇರಿ “ಹುಲಿಯ ಕೂದಲನ್ನು ಹೋಲುವ ಕೂದಲುಳ್ಳವ” ನೆಂದೂ ಅರ್ಥ ಮಾಡಿದ್ದಾರೆ. ಆದರೆ ಹನ್ನೊಂದನೆಯ ಶತಮಾನದ ಈ ಮನೆತನದ ಶಾಸನಗಳಲ್ಲಿ ಈ ರಾಜರ ವಂಶಾವಳಿಯನ್ನು ಕೊಡುವ ಪದ್ಯಗಳಲ್ಲೊಂದು ಇಮ್ಮಡಿ ಪುಲಕೇಶಿಯನ್ನು ಈ ರೀತಿ ವರ್ಣಿಸುತ್ತದೆ :
ವಯಮಪಿಪುಲಕೇಶಿಕ್ಷ್ಮಾಪತಿಂ ವರ್ಣಯಂತಃ
ಪುಲಕಕಲಿತದೇಹಾಃ ಪಶ್ಯತಾದ್ಯಾಪಿಸಂತಃ |
ಅಂದರೆ “ಪುಲಕೇಶಿ ರಾಜನನ್ನು ವರ್ಣಿಸುತ್ತಿದ್ದರೆ ನಮ್ಮ ಶರೀರವು ಸಂತೋಷದಿಂದ ಪುಲಕಾಂಕಿತವಾಗುತ್ತದೆ” ಎಂದಿರುವುದರಿಂದ, ಹನ್ನೊಂದನೇ ಶತಮಾನದಲ್ಲಿಯೇ ಆಸ್ಥಾನ ಕವಿಗಳು ಈ ಪುಲಕೇಶಿ ಎಂಬ ಪದವು “ಪುಲಕ” ಎಂಬ ಶಬ್ದದಿಂದ ಹುಟ್ಟಿರಬಹುದೆಂದು ಭಾವಿಸಿದ್ದರೆಂದು ತೋರುತ್ತದೆಯೆ ವಿನಾ ಪುಲಿ=ಹುಲಿ ಎಂಬ ಮಾತಿಗೂ ಈ ಪದಕ್ಕೂ ಸಂಬಂಧವನ್ನು ಅವರು ಕಲ್ಪಿಸಿದ್ದಂತೆ ಕಾಣುವುದಿಲ್ಲ. ಈ ಶ್ಲೋಕವು ಈ ಮನೆತನದ ಬೇರೆ ಬೇರೆ ಮೂವರು ರಾಜರ (ಐದನೆಯ ವಿಕ್ರಮಾದಿತ್ಯ ಕ್ರಿ.ಶ. ೧೦೯೯ ಇಮ್ಮಡಿ ಜಯಸಿಂಹ‑ ೧೦೨೪; ಆರನೆಯ ವಿಕ್ರಮಾದಿತ್ಯ ೧೦೭೭) ಶಾಸನಗಳಲ್ಲಿ ದೊರಕುವುದರಿಂದ, ಈ ಶ್ಲೋಕವನ್ನೊಳಗೊಂಡ ವಂಶಾವಳಿಯು ರಾಜರಿಂದ ಅನುಮೋದಿಸಲ್ಪಟ್ಟು ಅರಮನೆಯ ಕೋಷ್ಠಾಗಾರದಲ್ಲಿ ಇಟ್ಟಿದ್ದು ಅವಶ್ಯಕವಾದಾಗಲೆಲ್ಲಾ ಉಪಯೋಗಿಸಲ್ಪಡುತ್ತಿದ್ದಿತೆಂದು ತಿಳಿಯುತ್ತದೆ. ಕ್ರಿ.ಶ. ೧೦೭೭ರ ಆರನೆಯ ವಿಕ್ರಮಾದಿತ್ಯನ ಯೇವೂರು ಶಾಸನದಲ್ಲಿ ವಂಶಾವಳಿಯ ಕೊನೆಯಲ್ಲಿ “ಇದು ತಾಮ್ರ ಶಾಸನದೊಳಿಱ್ದ ಚಾಳುಕ್ಯ ಚಕ್ರವರ್ತಿಗಳ ವಂಶದ ರಾಜ್ಯಂಗೆಯ್ದರಸುಗಳ ರಾಜಾವಳಿ” ಎಂದು ಕೊಟ್ಟಿರುವ ವಾಕ್ಯವು ಈ ಅಂಶವನ್ನು ಸ್ಪಷ್ಟಗೊಳಿಸುತ್ತದೆ. ಪ್ರೊ. ನೀಲಕಂಠಶಾಸ್ತ್ರಿಗಳು ಮಾತ್ರ ಈ ಹೆಸರಿನ ಪೂರ್ವಾರ್ಧವು ಸಂಸ್ಕೃತ “ಪುಲ್” ಎಂದರೆ “ಅಭಿವೃದ್ದಿಗೊಳ್ಳು” ಅಥವಾ “ಹಿರಿಮೆಯನ್ನು ಪಡೆ” ಎಂಬ ಧಾತುವಿನಿಂದ ಹುಟ್ಟಿದ್ದೆಂದೂ ಉತ್ತರಾರ್ಧವಾದ “ಕೇಶಿನ್” ಅಂದರೆ “ಸಿಂಹ”ವೆಂದೂ ತೆಗೆದುಕೊಂಡು ಈ ಹೆಸರಿನ ಅರ್ಥವನ್ನು ಶ್ರೇಷ್ಠವಾದ ಸಿಂಹವೆಂದು ವಿವರಿಸಿದ್ದಾರೆ. ಅವರು ಈ ಹೆಸರಿಗೂ ಪುಲಿ =ಹುಲಿಗೂ ಸಂಬಂಧವಿದ್ದಿತೆಂಬುದನ್ನು ಒಪ್ಪುವುದಿಲ್ಲ.ಆದರೆ ಮೇಲೆಯೇ ಹೇಳಿರುವಂತೆ ಈ ವಂಶದ ಅತಿ ಪ್ರಾಚೀನವಾದ ಶಾಸನಗಳಲ್ಲಿರುವ ಈ ಹೆಸರಿನ ರೂಪವಾದ “ಪೊಲೆಕೇಶಿ”ಯೇ ಮೂಲರೂಪವಿರಬೇಕೆಂದು ಡಾ.ಫ್ಲೀಟ್ ಹೇಳಿದ್ದಾರೆ. ಈ ರೂಪವನ್ನೇ ಶಾಸನ ಪರಿಶೋಧಕರಲ್ಲಿ ಅಗ್ರಗಣ್ಯರಾದ ಡಾ.ಕೀಲ್‌ಹಾರ್ನ್ ಅವರೂ ಸಹ ಬಳಸಿದ್ದಾರೆ. ಮೊಟ್ಟಮೊದಲಿನ ಈ ಹೆಸರಿನ ರೂಪವಾದ “ಪೊಲೆಕೇಶಿ” ಎಂಬ ಪದವು ನನ್ನ ಅಭಿಪ್ರಾಯದಂತೆ ಪೊಲೆ ಮತ್ತು ಕೇಶಿ ಎಂಬ ಶುದ್ಧ ಕನ್ನಡ ಶಬ್ದಗಳ ಸಂಯೋಗದಿಂದ ಉಂಟಾದ ಪದ. ಇದರ ಪೂರ್ವಾರ್ಧವಾದ “ಪೊಲೆ” ಎಂಬುದಕ್ಕೆ “ಹೊಲೆಮನೆ” ಎಂದರ್ಥ. “ಕೇಶಿ” ಎಂಬುದು “ಕೇಶವ” ಎಂಬ ಹೆಸರಿನ ಸಂಕ್ಷಿಪ್ತರೂಪ. ಈ ರೂಪದಲ್ಲಿ ಈ ಪದವು ಕನ್ನಡ ಸಾಹಿತ್ಯದಲ್ಲಿಯೂ ಶಾಸನಗಳಲ್ಲಿಯೂ ಸಿಕ್ಕುತ್ತದೆ. “ಶಬ್ದಮಣಿದರ್ಪಣ”ವನ್ನು ರಚಿಸಿದ ಕೇಶಿರಾಜನು ತನ್ನ ಹೆಸರಿನ ಕೇಶಿ, ಕೇಶವ ಎಂಬ ಎರಡು ರೂಪಗಳನ್ನೂ ಈ ಗ್ರಂಥದಲ್ಲಿ ಕೊಟ್ಟಿದ್ದಾನೆಂಬುದು ಗಮನಾರ್ಹವಾಗಿದೆ. ಇದೇ ರೀತಿಯಲ್ಲಿ ಶಾಸನಗಳಲ್ಲಿ ಕೇಶವ ಎಂಬ ಹೆಸರುಳ್ಳ ಅನೇಕ ಸಾಮಂತಾದಿಗಳು ಕೇಶಿರಾಜ, ಕೇಶಿಗೌಂಡ, ಕೇಶಿಮಯ್ಯ ಎಂಬ ಹೆಸರುಗಳಿಂದಲೂ ತಮ್ಮನ್ನು ಕರೆದುಕೊಂಡಿದ್ದಾರೆ. ಆದುದರಿಂದ “ಪೊಲೆಕೇಶಿ” ಎಂದರೆ ಹೊಲೆಮನೆಯಲ್ಲಿದ್ದಾಗಿನಿಂದಲೇ ಕೇಶವ(ಶ್ರೀಕೃಷ್ಣ)ನಂತೆ ಅಪರಿಮಿತ ಪ್ರಭಾವಶಾಲಿ ಎಂದರ್ಥ. ಈ ಸಂದರ್ಭದಲ್ಲಿ ಮೇಲೆ ಉಲ್ಲೇಖಿಸಿರುವ ಹನ್ನೊಂದನೇ ಶತಮಾನದ ಚಾಲುಕ್ಯ ಶಾಸನವು ಇಮ್ಮಡಿ ಪುಲಕೇಶಿಯನ್ನು, “ಪುಲಕೇಶಿ ಕೇಶಿ ನಿಪೂದನಸಮೋ,” ಅಂದರೆ ಪುಲಕೇಶಿಯು ಕೇಶಿ ಎಂಬ ರಾಕ್ಷಸನನ್ನು ಸಂಹರಿಸಿದ ಶ್ರೀಕೃಷ್ಣನಿಗೆ ಸಮಾನನಾದವನು ಎಂದು ವರ್ಣಿಸುತ್ತದೆ ಎಂಬ ಅಂಶವನ್ನು ಗಮನಿಸಬಹುದು. ಹೊಲೆಮನೆಯಲ್ಲಿದ್ದಾಗಿನಿಂದಲೇ ಶ್ರೀಕೃಷ್ಣನು ಅದ್ಭುತವಾದ ಸಾಹಸಗಳನ್ನು ತೋರಿದನೆಂಬ ವಿಷಯವನ್ನು ಪುರಾಣಗಳು ವರ್ಣಿಸುತ್ತವೆ. ಆದುದರಿಂದ ಚಿಕ್ಕಂದಿನಿಂದಲೇ ಶ್ರೀಕೃಷ್ಣನಂತೆ ಅದ್ಭುತವಾದ ಕಾರ್ಯಗಳನ್ನು ಸಾಧಿಸಿದ ಪುರುಷನೆಂದು “ಪೊಲೆಕೇಶಿ” ಎಂಬ ಪದದ ಅರ್ಥ. ಇದು ಬಾಲ್ಯದಿಂದಲೇ ಮಹತ್ಕಾರ್ಯಗಳನ್ನು ಸಾಧಿಸಿದ ಪೊಲೆಕೇಶಿ ಎಂಬ ಹೆಸರಿನ ಇಬ್ಬರು ಚಾಲುಕ್ಯ ರಾಜರಿಗೆ (ಮುಖ್ಯವಾಗಿ ಇಮ್ಮಡಿ ಪೊಲೆಕೇಶಿಗೆ) ಅರ್ಥವತ್ತಾಗಿದ್ದು ಎಷ್ಟು ಚೆನ್ನಾಗಿ ಒಪ್ಪುತ್ತದೆ! ಹೆಸರಿಗೆ ತಕ್ಕ ಶೌರ್ಯ, ಪರಾಕ್ರಮ ಸಾಹಸ, ಕೀರ್ತಿ!
ಉಲ್ಲೇಖಗಳ ವಿವರ
- ↑ ೧.೦ ೧.೧ ೧.೨ ೧.೩ Durga Prasad Dikshit 1980, p. 68.
- ↑ K. V. Ramesh 1984, p. 77.
- ↑ Durga Prasad Dikshit 1980, p. 279.
- ↑ ೪.೦ ೪.೧ ೪.೨ P. S. Sohoni & S. L. Bapat 2017, p. 207.
- ↑ K. V. Ramesh 1984, p. 76.
- ↑ Durga Prasad Dikshit 1980, pp. 67–68.
ಉಲ್ಲೇಖಗಳು
- Rimjhim Sharma, Anish Kumar (2012). History: BA (Hons) Semester II Course Pack, University of Delhi. Pearson Education India. ISBN 978-93-325-1157-6.
- Abraham Eraly (2011). The First Spring: The Golden Age of India. Penguin Books India. ISBN 978-0-670-08478-4.
- B. Chaitanya Deva, ed. (1989). Musical instruments in sculpture in Karnataka. Delhi: Indian Institute of Advanced Study / Motilal Banarsidass. ISBN 978-81-208-0641-2.
- Durga Prasad Dikshit (1980). Political History of the Chālukyas of Badami. Abhinav. OCLC 8313041.
- G. H. Malandra (1993). Unfolding A Mandala: The Buddhist Cave Temples at Ellora. SUNY Press. ISBN 978-0-7914-1355-5.
- K. A. Nilakanta Sastri (1960). "The Chaḷukyās of Bādāmi". In Ghulam Yazdani (ed.). The Early History of the Deccan. Vol. I–VI. Oxford University Press. OCLC 174404606.
- K. V. Ramesh (1984). Chalukyas of Vātāpi. Agam Kala Prakashan. OCLC 567370037.
- Lal Mani Joshi (1987). Studies in the Buddhistic Culture of India During the Seventh and Eighth Centuries A.D. Motilal Banarsidass. ISBN 978-81-208-0281-0.
- Shreenand L. Bapat; Pradeep S. Sohoni (2017). S. S. Bahulkar; Shilpa Sumant (eds.). "The Bijapur-Mumbai copperplate grant of Călukya ruler Pulakeśin II, dated April 04, 619 CE, mentioning his triumph over emperor Harṣavardhana". Annals of the Bhandarkar Oriental Research Institute. XCIII: 205–209.
- Sally Wriggins (2008). The Silk Road Journey With Xuanzang. Basic Books. ISBN 978-0-7867-2544-1.
- Sandhya Jain (2011). The India They Saw. Vol. 1. Ocean Books. ISBN 978-81-8430-106-9.
- Suryanath U. Kamath (1980). A Concise History of Karnataka: From Pre-historic Times to the Present. Archana Prakashana.
- T. V. Mahalingam (1977). "Aditya and Vikramaditya". Readings in South Indian History. Indian Society for Prehistoric and Quaternary Studies / B.R.
- Tsai Chiashan (2006). Dust in the Wind: Retracing Dharma Master Xuanzang's Western Pilgrimage. Rhythms Monthly. ISBN 978-986-81419-8-8.
- Upinder Singh (2008). A History of Ancient and Early Medieval India: From the Stone Age to the 12th Century. Pearson Education India. ISBN 978-81-317-1677-9.
- Walter M. Spink (2005). "The Persian Embassy". Ajanta: The end of the Golden Age. BRILL. ISBN 90-04-14832-9.