ವಿಷಯಕ್ಕೆ ಹೋಗು

ಸಿಂಹ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸಿಂಹ
Temporal range: Pleistocene–Present
ಒಕೊಂಜಿಮಾ, ನಮೀಬಿಯಾದಲ್ಲಿ ಗಂಡು
ಒಕೊಂಜಿಮಾದಲ್ಲಿ ಹೆಣ್ಣು
Conservation status
CITES Appendix II (CITES)[೨]
Scientific classification e
ಕ್ಷೇತ್ರ: ಯೂಕ್ಯಾರ್ಯೋಟಾ
ಸಾಮ್ರಾಜ್ಯ: ಅನಿಮೇಲಿಯ
ವಿಭಾಗ: ಕಾರ್ಡೇಟಾ
ವರ್ಗ: ಮ್ಯಾಮೇಲಿಯಾ
ಗಣ: ಕಾರ್ನಿವೋರಾ
ಉಪಗಣ: ಫ಼ೆಲಿಫ಼ಾರ್ಮಿಯಾ
ಕುಟುಂಬ: ಫ಼ೆಲಿಡೀ
ಉಪಕುಟುಂಬ: ಪ್ಯಾಂಥರಿನೀ
ಕುಲ: ಪ್ಯಾಂಥೆರಾ
ಪ್ರಜಾತಿ:
ಪ. ಲಿಯೊ[೧]
Binomial name
ಪ್ಯಾಂಥೆರಾ ಲಿಯೊ[೧]
ಉಪಪ್ರಭೇದಗಳು
ಪ. ಲ. ಲಿಯೊ
ಪ. ಲ. ಮೆಲನೋಚಾಯ್ಟಾ
daggerಪ. ಲ. ಸಿನ್ಹಲೆಯಸ್
ಆಫ಼್ರಿಕಾ, ಏಷ್ಯಾ ಮತ್ತು ಯುರೋಪ್‍ನಲ್ಲಿ ಸಿಂಹದ ಐತಿಹಾಸಿಕ ಮತ್ತು ವರ್ತಮಾನದ ವಿತರಣೆ

ಸಿಂಹ ಭಾರತದಲ್ಲಿ ಉತ್ತರ ಭಾರತ, ಮಧ್ಯ ಭಾರತದಲ್ಲಿ ಕಂಡುಬರುತ್ತಿತ್ತು. ಈಗ ಗುಜರಾತ್ಗಿರ್ ಅರಣ್ಯ ಪ್ರದೇಶಕ್ಕೆ ಸೀಮಿತವಾಗಿದೆ. ಸಿಂಹವು ಬೆಕ್ಕಿನ ಕುಟುಂಬಕ್ಕೆ ಸೇರಿದ ಪ್ರಾಣಿ. ಪ್ರಪಂಚದಲ್ಲಿ ಸಿಂಹಗಳು ಮುಖ್ಯವಾಗಿ ಆಫ್ರಿಕಾದ ಪೂರ್ವ ಹಾಗೂ ದಕ್ಷಿಣ ಭಾಗದಲ್ಲಿ, ಏಷಿಯಾದ ಕೆಲವು ಭಾಗಗಳಲ್ಲಷ್ಟೇ ಕಂಡುಬರುತ್ತದೆ.

ಇದು ಸಸ್ತನಿ ವರ್ಗದ ಐದು ‘ಗರ್ಜಿಸುವ ಬೆಕ್ಕು’ಗಳ ಪೈಕಿ ಒಂದು ಪ್ರಮುಖ ಪ್ರಾಣಿ. ಹುಲಿ, ಚಿರತೆ, ಹಿಮಚಿರತೆ ಹಾಗೂ ಅಮೆರಿಕದಲ್ಲಿ ಕಂಡುಬರುವ ಮಚ್ಚೆಯುಳ್ಳ ಜ್ಯಾಗ್ವಾರ್ ಉಳಿದ ನಾಲ್ಕು. ಸಿಂಹವನ್ನು ವನರಾಜ, ವನ್ಯಪ್ರಾಣಿಗಳ ರಾಜ ಎಂದು ಮುಂತಾಗಿ ಹೇಳುವುದುಂಟು.[೪] ಅನಾದಿಕಾಲದಿಂದಲೂ ಇದನ್ನು ವನ್ಯಜೀವಿಯೆಂದೇ ಪರಿಗಣಿಸಲಾಗಿದೆ. ಹಿಂದೆ ಆಫ್ರಿಕ, ಯುರೋಪ್ ಹಾಗೂ ಏಷ್ಯಖಂಡಗಳ ಹಲವಾರು ಕಡೆ ಸಿಂಹಗಳು ವಾಸಿಸುತ್ತಿದ್ದರೂ ಇಂದು ಕೆಲವೇ ಪ್ರದೇಶಗಳಲ್ಲಿ ಮಾತ್ರ ಕಂಡುಬರುತ್ತವೆ. ಇಂದು ಉಷ್ಣವಲಯದಲ್ಲಿ ಕಂಡುಬಂದರೂ ಇವುಗಳ ಉಗಮ ಸಮಶೀತೋಷ್ಣವಲಯದಲ್ಲಿ ಆಗಿತ್ತೆಂದು ದಾಖಲೆಗಳು ತಿಳಿಸುತ್ತವೆ.

ವೈಜ್ಞಾನಿಕ ವರ್ಗೀಕರಣ[ಬದಲಾಯಿಸಿ]

ಸಿಂಹವು ಪ್ಯಾಂಥೆರಾ (panthera) ಕುಟುಂಬಕ್ಕೆ ಸೇರಿದ್ದು, ಪ್ಯಾಂಥೆರಾ ಲಿಯೋ (panthera leo) ಇದರ ಪ್ರಾಣಿಶಾಸ್ತ್ರೀಯ ಹೆಸರು.

ಗುಣಲಕ್ಷಣಗಳು[ಬದಲಾಯಿಸಿ]

ಸಿಂಹವು ಸಾಧಾರಣವಾಗಿ ೧.೫ ರಿಂದ ೨.೫ ಮೀ. ಉದ್ದವಿದ್ದು,[೫] ತೂಕ ಸಾದಾರಣ ೨೦೦ ಕೆ.ಜಿ ಗಳಿಗೂ ಮೇಲ್ಪಟ್ಟು ಇರುತ್ತದೆ. ಸಿಂಹದ ವೈಶಿಷ್ಟ್ಯವೆಂದರೆ ಅದರ ಕೇಸರ.[೬] ಗಂಡು ಸಿಂಹಕ್ಕೆ ಕುತ್ತಿಗೆಯ ಮೇಲೆ ಉದ್ದವಾದ ಕೇಸರ, ಬಾಲದ ತುದಿಯಲ್ಲಿ ಕಪ್ಪನೆಯ ದಪ್ಪ ಕೇಶಗುಚ್ಛವಿರುತ್ತದೆ.

ಸಿಂಹದ ದೇಹ ಬಲಿಷ್ಠ ಮತ್ತು ದಷ್ಟಪುಷ್ಟ. ನೀಳಕಾಯವಾಗಿರುವುದರಿಂದ, ಕಾಡಿನಲ್ಲಿ ನಿಶ್ಶಬ್ದವಾಗಿ ಒಂದೆಡೆಯಿಂದ ಇನ್ನೊಂದೆಡೆಗೆ ಸಾಗಬಲ್ಲದು. ಪ್ರೌಢಾವಸ್ಥೆಯಲ್ಲಿ ಇದರ ತೂಕ ಸು. 210 ಕಿ.ಗ್ರಾಮ್. 90 ಸೆಂಮೀ ಎತ್ತರ ಬೆಳೆಯುತ್ತದೆ. ಸಾಮಾನ್ಯವಾಗಿ ಹೆಣ್ಣು ಸಿಂಹ ಗಾತ್ರದಲ್ಲಿ ಗಂಡಿಗಿಂತ ಸ್ವಲ್ಪ ಚಿಕ್ಕದಾಗಿರುತ್ತದೆ (ಸು. 75 ಸೆಂಮೀ ಎತ್ತರ, 180 ಕಿ.ಗ್ರಾಮ್ ತೂಕ). ಗಂಡು ಸಿಂಹ ಭಯಾನಕವಾಗಿ ಕಾಣುತ್ತದೆ. ಅಲ್ಲದೇ ಹುಲಿಗಿಂತ ದೊಡ್ಡ ಗಾತ್ರದ್ದಾಗಿ ಭಾಸವಾಗುತ್ತದೆ. ಸಿಂಹದ ಮೈಯ ಬಣ್ಣ ಮರಳಿನಂತೆ ತಿಳಿಹಳದಿಯಿಂದ ಗಾಢ ಕಂದಿನವರೆಗೆ ಇದೆ. ಕಿವಿಗಳು ಕಪ್ಪಾಗಿದ್ದು, ತೆಳ್ಳನೆಯ ತುಪ್ಪಳ ಮೈಯನ್ನು ಆವರಿಸಿವೆ. ಬಾಲ ಉದ್ದವಿದೆ. ಮುಂಗಾಲುಗಳು ಬಲಿಷ್ಠ. ಹುಲಿಯ ಕಾಲುಗಳಿಗೆ ಹೋಲಿಸಬಹುದು. ಸಿಂಹ ಜ಼ೀಬ್ರಾದಂಥ ಪ್ರಾಣಿಯನ್ನು ತನ್ನ ಪಂಜದ ಒಂದೇ ಹೊಡೆತದಿಂದ ಕೊಲ್ಲಬಲ್ಲದು. ಸಿಂಹವೂ ಬೆಕ್ಕಿನಂತೆ ತನ್ನ ಅಂಗಾಲಿನ ಉಗುರುಗಳನ್ನು ಹೊರಕ್ಕೆ ಚಾಚಬಲ್ಲದು. ಹುಲಿಯಂತೆ ಜಿಗಿಯುವುದು. ಸಿಂಹ ಸು. 3 ಮೀ ಎತ್ತರ ಮತ್ತು 11 ಮೀ ಉದ್ದ ಜಿಗಿದ ದಾಖಲೆ ಉಂಟು. ಬಾಲ್ಯಾವಸ್ಥೆಯಲ್ಲಿ ಸಿಂಹ ಮರ ಏರಬಲ್ಲದು. ಪ್ರಾಯಸ್ಥ ಸಿಂಹದ ಜಗ್ಗು (ಎಳೆತದ) ಬಲ ಸು. 10 ವ್ಯಕ್ತಿಗಳ ಒಟ್ಟು ಜಗ್ಗುಬಲಕ್ಕೆ ಸಮಾನ.

ಸಿಂಹಗಳಲ್ಲಿಯ ಕೇಸರದ ವಿನ್ಯಾಸವೂ ವಿಭಿನ್ನ. ಕೆಲವೊಂದರಲ್ಲಿ ಅದು ಕೇವಲ ಮುಖದ ಅಂಚಿನಲ್ಲಷ್ಟೆ ಕಂಡುಬರಬಹುದು, ಮುಖವನ್ನು ಸಂಪೂರ್ಣವಾಗಿ ಆವರಿಸಿರಬಹುದು ಅಥವಾ ಕೇಸರವೇ ಇಲ್ಲದಿರಬಹುದು. ಅಲ್ಲದೇ ಕೆಲವೊಮ್ಮೆ ಈ ಕೇಸರ ತಲೆಯ ಮೇಲುಭಾಗ, ಕುತ್ತಿಗೆಯ ಕೆಳಭಾಗವನ್ನು ಆವರಿಸಬಹುದು. ಕೆಲವು ಸಿಂಹಗಳಲ್ಲಿ ಕೇಸರದ ಹೊರತುದಿ ಗಾಢ ಬಣ್ಣದ್ದಾಗಿದ್ದು, ಸಿಂಹಕ್ಕೆ ಗಾಂಭೀರ್ಯ ನೀಡುತ್ತದೆ. ಪ್ರಾಣಿಸಂಗ್ರಹಾಲಯದ ಪರಿಸರದಲ್ಲಿಯ ಸಿಂಹಕ್ಕೆ ನೈಸರ್ಗಿಕ ಸಿಂಹದಂತೆ ಮುಳ್ಳು, ಪೊದೆ, ಕುರುಚಲು ಪ್ರದೇಶಗಳಲ್ಲಿ ದೂರ ಸಾಗಬೇಕಿಲ್ಲವಾದ್ದರಿಂದಲೂ, ತನ್ನ ಆಶ್ರಯ ಸ್ಥಾನದಲ್ಲಿ ಸಂಗಾತಿಯನ್ನೂ ಪಡೆಯನ್ನೂ ರಕ್ಷಿಸಲು ಇತರ ಸಿಂಹಗಳೊಡನೆ ಕಾದಾಡಬೇಕಾದ ಪರಿಸ್ಥಿತಿ ಇಲ್ಲದ್ದರಿಂದಲೂ ಅದರ ಕೇಸರ ಉದ್ದವಾಗಿರುವುದು.

ಸಿಂಹದ ಅಸ್ಥಿಪಂಜರ ‘ಬೆಕ್ಕು’ಗಳಂತೆಯೇ ಇದೆ. ತಲೆಬುರುಡೆ ಮಾತ್ರ ಹುಲಿಯದಕ್ಕಿಂತಲೂ ದೊಡ್ಡದು. ಕಣ್ಣುಗಳ ಬಣ್ಣ ಹಳದಿ, ದುಂಡಗಿನ ಕಣ್ಣುಗೊಂಬೆ. ಆದರೆ ಇತರ ಬೆಕ್ಕಿನ ಜಾತಿಯ ಪ್ರಾಣಿಗಳಲ್ಲಿ, ಈ ಕಣ್ಣುಗೊಂಬೆಯಲ್ಲಿ ಒಂದು ಸೀಳಿನಂತೆ ಬಿಂಬವಿರುವುದು. ಸಿಂಹದ ದವಡೆ ಮೂಳೆಗಳು ಬಲಿಷ್ಠ, ದೃಢವಾಗಿವೆ. ನಾಲಗೆಯ ಮೇಲೆ ಚಿಕ್ಕಚಿಕ್ಕ ಗುಳ್ಳೆಯ ಆಕಾರಗಳಿವೆ. ಮಾಂಸ ಅಥವಾ ರಕ್ತ ನೆಕ್ಕಲು ಇವು ಸಹಕಾರಿ.

ಸಂತಾನೋತ್ಪತ್ತಿ[ಬದಲಾಯಿಸಿ]

ಸಿಂಹಕ್ಕೆ ಯಾವುದೇ ನಿರ್ದಿಷ್ಟ ಪ್ರಜನನ ಪ್ರಾಯವಿಲ್ಲ. ಆದ್ದರಿಂದ ಅದು ವರ್ಷ ಪೂರ್ತಿ ಸಂತಾನಾಭಿವೃದ್ಧಿ ಮಾಡಬಲ್ಲದು. ಗರ್ಭ ಧರಿಸಿರುವ ಕಾಲ ಸುಮಾರು ೧೦೫-೧೧೬ ದಿನಗಳು. ಒಮ್ಮೆಗೆ ೨ ರಿಂದ ೫ ರವರೆಗೆ ಮರಿಗಳು ಹುಟ್ಟುವುದಿದೆ. ಕೆಲವೊಮ್ಮೆ 6 ಮರಿಗಳೂ ಹುಟ್ಟುವುದುಂಟು. ನೈಸರ್ಗಿಕವಾಗಿ ಸಿಂಹ 2 ವರ್ಷಗಳಿಗೊಮ್ಮೆ ಗರ್ಭಧರಿಸುತ್ತದೆ, ಪ್ರಾಣಿಸಂಗ್ರಹಾಲಯದಲ್ಲಿ ಪ್ರತಿವರ್ಷವೂ ಗರ್ಭ ಧರಿಸಬಲ್ಲದು.

ಮರಿ ಹುಟ್ಟುವಾಗ ಅದರ ಉದ್ದ ಸು. 30 ಸೆಂಮೀ, ತೂಕ 500 ಗ್ರಾಮ್. ಪೂರ್ಣ ತುಪ್ಪಳವಿರುವುದು, ಮೈಮೇಲೆ ಬೂದು ಬಣ್ಣದ ಚುಕ್ಕೆಗಳಿರುವುವು. ಬಾಲ ದಪ್ಪವಿದ್ದರೂ ಅದರ ತುದಿಯಲ್ಲಿ ರೋಮಗುಚ್ಛ ಇರುವುದಿಲ್ಲ. ಹುಟ್ಟಿ ಸು. 2 ವಾರ ಪರ್ಯಂತ ಪೂರ್ಣಪ್ರಮಾಣದ ದೃಷ್ಟಿ ಬೆಳೆದಿರುವುದಿಲ್ಲ. ಹುಟ್ಟುವಾಗ ಮರಿಯ ಕಣ್ಣುಗಳು ಬೆಕ್ಕಿನಂತೆ ಮುಚ್ಚಿರುತ್ತವೆಯೇ ಇಲ್ಲವೇ ಎಂಬುದು ಸಂಶಯಾಸ್ಪದ. ಸು. 3 ವಾರಗಳಲ್ಲಿ ಹಲ್ಲು ಮೊಳೆತು ಬೆಳೆಯಲಾರಂಭಿಸುತ್ತದೆ. ಸು. 6 ತಿಂಗಳ ತನಕ ತಾಯಿಯ ರಕ್ಷಣೆಯಲ್ಲೇ ಬೆಳೆದು, ತರುವಾಯ ತಾಯಿಯೊಂದಿಗೆ ಮರಿಗಳೂ ಬೇಟೆಯಾಡಲು ಪ್ರಾರಂಭಿಸುವುವು. ಸು. 1 1/2 - 2 ವರ್ಷ ವಯಸ್ಸಿನ ಸಿಂಹಗಳು ಸ್ವತಂತ್ರವಾಗಿ ಜೀವಿಸಬಲ್ಲವು. 3-4 ವರ್ಷ ಪ್ರಾಯದವು ಪ್ರೌಢಾವಸ್ಥೆಗೆ ಬಂದು ಸಂತಾನೋತ್ಪತ್ತಿಗೆ ಅಣಿಯಾಗುತ್ತವೆ. ನೈಸರ್ಗಿಕವಾಗಿ ಕಾಡಿನಲ್ಲಿ ಸಿಂಹಗಳು 10 ವರ್ಷ ಕಾಲ ಬಾಳುತ್ತವೆ. ಪ್ರಾಣಿಸಂಗ್ರಹಾಲಯದಲ್ಲಿ ಈ ಅವಧಿ 25 ವರ್ಷಗಳ ತನಕವೂ ವ್ಯಾಪಿಸಬಹುದು.

ಆಹಾರ[ಬದಲಾಯಿಸಿ]

ಯಾವುದೇ ಪ್ರಾಣಿಯನ್ನು ಕೊಂದೊಡನೆ ಸಿಂಹ ಮೊದಲಿಗೆ ಅದರ ಕರುಳನ್ನು ತಿನ್ನತೊಡಗುವುದು. ಕರುಳಿನಲ್ಲಿ ಅರೆಜೀರ್ಣವಾದ ಸಸ್ಯಾಹಾರವಿರುವುದರಿಂದ ಸಿಂಹಕ್ಕೆ ಅವಶ್ಯವಾದ ಜೀವಸತ್ತ್ವ ಒದಗುವುದೆಂಬುದು ಗಮನಾರ್ಹ. ಕರುಳನ್ನು ಕಬಳಿಸಿದ ಬಳಿಕ, ಸಿಂಹ ತನ್ನ ಬೇಟೆಯ ಪೃಷ್ಠಭಾಗದ ಮಾಂಸಯುಕ್ತ ಭಾಗವನ್ನು ಮುಕ್ಕುತ್ತದೆ. ಬೇಟೆಯಾಡುವಾಗ ಸಿಂಹ ಮುಖ್ಯವಾಗಿ ತನ್ನ ಮುಂಗಾಲಿನ ಪಂಜದಿಂದ ಹೊಡೆದು ಅಥವಾ ಮುಂಗಾಲಿನಲ್ಲಿರುವ ಮೊನಚು ಉಗುರುಗಳಿಂದ ಬೇಟೆಯ ಮೂಗಿನ ಹೊಳ್ಳೆಗಳನ್ನು ಸೀಳಿ, ಕತ್ತು ಕೊಯ್ದು ಅದನ್ನು ಸಾಯಿಸುತ್ತದೆ. ಸಿಂಹ ಸದಾ ತನ್ನ ಬೇಟೆಯನ್ನು ನೆಲಕ್ಕೆ ಕೆಡವಿ ಕೊಲ್ಲುವ ವಿಧಾನವನ್ನೇ ಅನುಸರಿಸುತ್ತದೆ. ಇದಕ್ಕಾಗಿ ಅದು ಬೇಟೆಯ ಬೆನ್ನಟ್ಟಿ ಅದರ ಹಿಂಭಾಗ ಹಿಡಿದು, ನೆಲಕ್ಕೆ ಬೀಳಿಸಿ ಮುಂದಿನ ಕಾರ್ಯಕ್ಕೆ ಸಿದ್ಧವಾಗುತ್ತದೆ. ಕಿರಿಯ ಸಿಂಹಗಳು ಈ ಎಲ್ಲ ತಂತ್ರಗಳಲ್ಲಿಯೂ ನೆರವಾಗುತ್ತವೆ. ಬೇಟೆಯಲ್ಲಿ ಪ್ರಮುಖ ಪಾತ್ರವಹಿಸುವುದು ಸಾಮಾನ್ಯವಾಗಿ ಹೆಣ್ಣು ಸಿಂಹಗಳೇ. ಜ಼ೀಬ್ರಾ, ಜಿಂಕೆ, ಜಿರಾಫೆ, ಕಾಡುಕೋಣಗಳನ್ನು ಸಿಂಹ ಇಷ್ಟಪಡುತ್ತದೆ.[೭][೮] ಇವು ದೊರಕದ ಸಮಯದಲ್ಲಿ ಕೀಟಗಳನ್ನೂ ಮೀನುಗಳನ್ನೂ ತಿನ್ನಬಲ್ಲದು.

ನಡವಳಿಕೆ[ಬದಲಾಯಿಸಿ]

ಜಗತ್ತಿನ ಎಲ್ಲ ಮಾರ್ಜಾಲಗಳಲ್ಲಿ ಸಿಂಹವೇ ಸಹವಾಸಪ್ರಿಯ. ಸಿಂಹ ಒಂದು ಸಂಘ ಜೀವಿ. ಸಾಮಾನ್ಯವಾಗಿ, ಒಂದು ಗುಂಪಿನಲ್ಲಿ ಒಂದು ಗಂಡು, ಒಂದು ಅಥವಾ ಎರಡು ಹೆಣ್ಣುಸಿಂಹಗಳು ಹಾಗೂ ಮರಿಗಳಿರುತ್ತವೆ. ಕೆಲವೊಮ್ಮೆ ಎರಡು ಗುಂಪುಗಳು ಒಂದಾಗಿ ಬಾಳುವುದೂ ಉಂಟು. ಗುಂಪಿನ ನಾಯಕಪಟ್ಟ ದೈಹಿಕ ತ್ರಾಣದಿಂದಲೇ ಲಭಿಸುವುದಾಗಿದೆ. ಯಾವುದೇ ಒಂದು ಗುಂಪಿನ ನಾಯಕ ಮುದಿಯಾದರೆ ಅಥವಾ ಗುಂಪಿಗೆ ಬೇಡವಾದರೆ ಆ ಸಿಂಹ ಬೇರೆ ಎಳೆ ಸಿಂಹಗಳ ಜೊತೆ ಸೇರಿಕೊಳ್ಳುವುದು.

ಇದು ಮಾಂಸಾಹಾರಿ ಪ್ರಾಣಿ. ಆದರೆ ಸಿಂಹಿಣಿಗಳೇ ಬೇಟೆಯಾಡುವುದು, ಸಿಂಹವಲ್ಲ. ವಯಸ್ಕ ಸಿಂಹಗಳು ದಿನಕ್ಕೆ ಹದಿನಾಲಕ್ಕು ಘಂಟೆಯವರೆಗೆ ನಿದ್ದೆಯನ್ನು ಮಾಡುವುದು ಸಾಮಾನ್ಯ. ಸಿಂಹಗಳ ಗುಂಪಿಗೆ ಹೊಸ ಪುರುಷ ಸಿಂಹ ನಾಯಕನಾದರೆ ಅದರ ಹಿಂದಿನ ನಾಯಕನ ಮರಿಗಳನ್ನೆಲ್ಲ ಸಾಯಿಸುವುದು ಸಹಜ ಸ್ಥಿತಿ. ಇಂತಹ ಶಿಶು ಹತ್ಯೆ ಪ್ರಾಣಿ ಸಾಮ್ರಾಜ್ಯದಲ್ಲಿ ವಿಲಕ್ಷಣವಾದ ಸಂಭವ ಎಂದು ಪ್ರಾಣಿಶಾಸ್ತ್ರಜ್ಞರ ಅಭಿಪ್ರಾಯವಾಗಿತ್ತು.

ಸಿಂಹದ ಬಗೆಗಿನ ಬಹಳಷ್ಟು ಮಾಹಿತಿ ವಿಚಾರಗಳು ಊಹಾಪೋಹಗಳು. ಅದನ್ನು ಮರುಭೂಮಿಯ ಪಳಗಿದ ನಿವಾಸಿ, ಕಾಡಿನ ರಾಜನೆಂದು ಕರೆದರೂ ನಿಜವಾಗಿ ಅದು ದಟ್ಟ ಕಾಡಿನಲ್ಲಿ ವಾಸಿಸುವುದಿಲ್ಲ, ಕುರುಚಲು ಮತ್ತು ಪೊದೆಗಳಿಂದ ತುಂಬಿರುವ ಪ್ರದೇಶಗಳಲ್ಲಿ ಕಂಡುಬರುತ್ತದೆ. ಅದೇ ರೀತಿ ಬೇಟೆಯಾಡುವ ಮುನ್ನ ಸಿಂಹ ಗರ್ಜಿಸಿ ಎದುರಾಳಿಗೆ ತನ್ನ ಬರುವಿಕೆಯನ್ನು ತಿಳಿಸುತ್ತದೆಂದು ಹೇಳಿದರೂ ಇದು ವಾಸ್ತವ ಸಂಗತಿ ಅಲ್ಲ.

ಇತರ ‘ಗರ್ಜಿಸುವ ಬೆಕ್ಕು’ಗಳಿಗಿಂತ ಅಧಿಕವಾಗಿ ಸಿಂಹ ಗರ್ಜಿಸಿದರೂ ಇದು ತನ್ನ ಆಡಳಿತ ಪ್ರದೇಶವನ್ನು ಇತರ ಪ್ರಾಣಿಗಳಿಗೆ ತಿಳಿಯಲೋಸುಗ ಊದುವ ಕಹಳೆ ಮಾತ್ರ! ನಾಯಕ ಸಿಂಹ ತನ್ನ ಪರಿವಾರದೊಂದಿಗೆ ಒಂದೆಡೆಯಿಂದ ಇನ್ನೊಂದೆಡೆಗೆ ತೆರಳುವಾಗ, ಸಂಗಾತಿಯನ್ನು ಮೆಚ್ಚಿಸಲು ಬಯಸಿದಾಗ, ಮರಿಗಳೊಂದಿಗೆ ಆಡುತ್ತಿರುವಾಗ, ಇಲ್ಲವೇ ಜಗಳಕ್ಕೆ ಅಣಿಗೊಳ್ಳುತ್ತಿರುವಾಗ ಬೇರೆ ಬೇರೆ ತೆರನಾಗಿ ಗರ್ಜಿಸುತ್ತದೆ. ಸಿಂಹ ಸ್ವಂತ ವಲಯದೊಳಗೆ ದಿನಕ್ಕೆ ಸು. 5ಕಿಮೀ ನಡೆದಾಡುತ್ತದೆ. ಅಗತ್ಯವಾದರೆ ಒಂದೇ ರಾತ್ರಿ 48 ಕಿಮೀ ದೂರವನ್ನೂ ಕ್ರಮಿಸುವುದುಂಟು. ಓಡುತ್ತಿರುವಾಗಲೇ ದಿಕ್ಕನ್ನು ಬದಲಾಯಿಸುವುದರಲ್ಲಿ ಸಿಂಹ ಬಲು ನಿಸ್ಸೀಮ.

ತಳಿವಿಜ್ಞಾನಿಗಳು ಚಿರತೆ ಮತ್ತು ಸಿಂಹಗಳನ್ನು ಒಂದುಗೂಡಿಸಿ ‘ಲೆಪೋನ್’ ಎಂಬ ಮಿಶ್ರ ತಳಿ ಸೃಷ್ಟಿಸಿದ್ದಾರೆ.[೯]

ಹೈಬ್ರಿಡ್‍ಗಳು[ಬದಲಾಯಿಸಿ]

ಸಿಂಹಗಳನ್ನು ಹುಲಿಯೊಡನೆ ಸಂಕರ ಮಾಡುವುದು ಸಾಧ್ಯ. ಇಂತಹ ಜಾತಿಯ ಆಚೆಗಿನ ಸಂತಾನೋತ್ಪತ್ತಿಯನ್ನು "ಹೈಬ್ರಿಡೈಜೇಶನ್" ಎಂದು ಕರೆಯುತ್ತಾರೆ. ಹೀಗೆ ಜನಿಸುವ ಮರಿಗಳನ್ನು "ಲೈಗರ್" ಎಂದು ಕರೆಯುತ್ತಾರೆ. ಇವು ಕಾಡುಗಳಲ್ಲಿ ಜನಿಸುವುದು ಅಸಾಮಾನ್ಯವಾಗಿದ್ದರೂ ಪ್ರಾಣಿ ಸಂಗ್ರಹಾಲಯಗಳಲ್ಲಿ ಹುಟ್ಟಿಸುವುದು ಅಸಾಮಾನ್ಯವಲ್ಲ.

ಲೈಗರ್‌ಗಳ ತೂಕ ಅದರ ತಂದೆತಾಯಿಯರಿಗಿಂತ ಬಹಳ ಹೆಚ್ಚು. ಇವು ೩೦೦ ಕೆ.ಜಿ. ಯವರೆಗೆ ಮತ್ತು ಮೂರು ಮೀಟರ್ ವರೆಗೆ ಉದ್ಧವಾಗಿ ಬೆಳೆಯುತ್ತವೆ. ಇದರಿಂದ ಇವು ಜಗತ್ತಿನ ಅತ್ಯಂತ ದೊಡ್ಡ ಬೆಕ್ಕುಗಳು, ಸೈಬೀರಿಯನ್ ಹುಲಿಗಳಿಗಿಂತಲೂ. ಇಂತಹ ದೊಡ್ಡ ಗಾತ್ರಕ್ಕೆ ಕಾರಣ "ಇಂಪ್ರಿಂಟಡ್ ಅನುವಂಶಿಕ ಧಾತುಗಳು". ಅದರ ಸಿಂಹ ತಂದೆಯ ಅನುವಂಶಿಕ ಧಾತುಗಳು ಅದರ ಗಾತ್ರವನ್ನು ಹೆಚ್ಚಿಸುತ್ತದೆ, ಆದರೆ ಅದಕ್ಕೆ ಸಿಂಹಿಣಿ ತಾಯಿ ಇಲ್ಲದಿರುವ ಕಾರಣದಿಂದ ಅದರ ಬೆಳವಣಿಗೆಯನ್ನು ತಡೆಯಲು ಅನುವಂಶಿಕ ಧಾತುಗಳಿಲ್ಲ.

ಜನಪ್ರಿಯ ಸಂಸ್ಕೃತಿ[ಬದಲಾಯಿಸಿ]

೧೯೯೪ ರಲ್ಲಿ ಡಿಸ್ನಿ ಸ್ಟೂಡಿಯೋಸ್ ರಚಿಸಿದ "ದ ಲಾಯನ್ ಕಿಂಗ್" ಚಲನಚಿತ್ರದಲ್ಲಿ ಸಿಂಹಗಳು ಪ್ರಮುಖ ಪಾತ್ರಗಳು. ಇದು ಷೇಕ್‍ಸ್ಪಿಯರ್ ಮಹೋದಯರ ಹ್ಯಾಮ್ಲೆಟ್ ಕಥೆಯಿಂದ ಆಧಾರಿತವಾಗಿದೆ.

ಇಂದಿನ ಪರಿಸರ ಮಾಲಿನ್ಯ, ಕಾನನದ ಸತತ ನಿರ್ಮೂಲನೆ, ಮಾನವನ ನೀತಿರಹಿತ ತಪ್ಪು ನಡವಳಿಕೆ, ಸಿಂಹದ ಬಗೆಗಿನ ಮಿಥ್ಯಾರೋಪಗಳಿಂದ ಸಿಂಹಗಳ ಪರಿಸರ ನಾಶವಾಗತೊಡಗಿದೆ. ಇದಲ್ಲದೇ ಸಿಂಹಗಳನ್ನು ಸರ್ಕಸ್, ಪ್ರಾಣಿಸಂಗ್ರಹಾಲಯಗಳಲ್ಲಿ ಬಳಸುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಅವನ್ನು ಸೆರೆಹಿಡಿಯುತ್ತಿದ್ದಾರೆ. ಹೀಗಾಗಿ ಅವುಗಳ ಸಂಖ್ಯೆ ಗಣನೀಯವಾಗಿ ಇಳಿಮೊಗವಾಗಿದೆ. ಇದರಿಂದಾಗಿ ಕೇಪ್ ಸಿಂಹ, ಬಾರ್ಬರಿ ಸಿಂಹಗಳ ತಳಿ ಸಂಪೂರ್ಣ ನಿರ್ನಾಮವಾಗಿದೆ. ಆದರೂ ಇಂದಿನ ಅಭಯಾರಣ್ಯಗಳಲ್ಲಿ ಅವು ಸ್ವಲ್ಪಮಟ್ಟಿಗೆ ಸುರಕ್ಷಿತವಾಗಿವೆ.

ಉಲ್ಲೇಖಗಳು[ಬದಲಾಯಿಸಿ]

  1. Wozencraft, W. C. (2005). "Species Panthera leo". In Wilson, D. E.; Reeder, D. M (eds.). Mammal Species of the World (3rd ed.). Johns Hopkins University Press. p. 546. ISBN 978-0-8018-8221-0. OCLC 62265494. {{cite book}}: Invalid |ref=harv (help)
  2. ೨.೦ ೨.೧ Bauer, H.; Packer, C.; Funston, P. F.; Henschel, P. & Nowell, K. (2017) [errata version of 2016 assessment]. "Panthera leo". IUCN Red List of Threatened Species. 2016: e.T15951A115130419. doi:10.2305/IUCN.UK.2016-3.RLTS.T15951A107265605.en. Retrieved 15 January 2022.
  3. Linnaeus, C. (1758). "Felis leo". Caroli Linnæi Systema naturæ per regna tria naturæ, secundum classes, ordines, genera, species, cum characteribus, differentiis, synonymis, locis. Vol. Tomus I (decima, reformata ed.). Holmiae: Laurentius Salvius. p. 41. (in Latin)
  4. Garai, J. (1973). The Book of Symbols. New York: Simon & Schuster. ISBN 978-0-671-21773-0.
  5. West, P. M.; Packer, C. (2013). "Panthera leo Lion". In Kingdon, J.; Happold, D.; Butynski, T.; Hoffmann, M.; Happold, M.; Kalina, J. (eds.). Mammals of Africa. London: Bloomsbury Publishing. pp. 150–159. ISBN 978-1-4081-8996-2.
  6. Hemmer, H. (1974). "Untersuchungen zur Stammesgeschichte der Pantherkatzen (Pantherinae) Teil 3. Zur Artgeschichte des Löwen Panthera (Panthera) leo (Linnaeus, 1758)". Veröffentlichungen der Zoologischen Staatssammlung. 17: 167–280.
  7. Hayward, M. W.; Kerley, G. I. H. (2005). "Prey preferences of the lion (Panthera leo)" (PDF). Journal of Zoology. 267 (3): 309–322. CiteSeerX 10.1.1.611.8271. doi:10.1017/S0952836905007508. Archived (PDF) from the original on 2015-06-27.
  8. Mukherjee, S.; Goyal, S. P.; Chellam, R. (1994). "Refined techniques for the analysis of Asiatic lion Panthera leo persica scats". Acta Theriologica. 39 (4): 425–430. doi:10.4098/AT.arch.94-50.
  9. Zhang, Z.; Chen, J.; Li, L.; Tao, M.; Zhang, C.; Qin, Q.; Xiao, J.; Liu, Y.; Liu, S. (2014). "Research advances in animal distant hybridization" (PDF). Science China Life Sciences. 57 (9): 889–902. doi:10.1007/s11427-014-4707-1. PMID 25091377. S2CID 18179301. Archived (PDF) from the original on 2018-10-30.

ಆಧಾರ ಗ್ರಂಥಗಳು[ಬದಲಾಯಿಸಿ]

  • ವನಸಿರಿ:ಅಜ್ಜಂಪುರ ಕೃಷ್ಣಸ್ವಾಮಿ.

ಹೊರಗಿನ ಕೊಂಡಿಗಳು[ಬದಲಾಯಿಸಿ]

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಸಿಂಹ&oldid=1197990" ಇಂದ ಪಡೆಯಲ್ಪಟ್ಟಿದೆ