ಕಿವಿ

ಕಿವಿಯು ಶಬ್ದವನ್ನು ಕಂಡುಹಿಡಿಯುವ ಅಂಗ. ಅದು ಕೇವಲ ಶಬ್ದವನ್ನು ಸ್ವೀಕರಿಸುವುದಿಲ್ಲ, ಜೊತೆಗೆ ಸಮತೋಲನ ಮತ್ತು ಶಾರೀರಿಕ ನಿಲುವಿನಲ್ಲೂ ನೆರವಾಗುತ್ತದೆ. ಕಿವಿಯು ಶ್ರವಣ ವ್ಯವಸ್ಥೆಯ ಭಾಗವಾಗಿದೆ. ಪಂಚೇಂದ್ರಿಯಗಳಲ್ಲಿ ಒಂದು. ಶ್ರವಣೇಂದ್ರಿಯವೆಂದು ಹೆಸರು. ಇದರಲ್ಲಿ ಮೂರು ಪ್ರಧಾನ ವಿಭಾಗಗಳಿವೆ : ಹೊರಗಿವಿ. ನಡುಗಿವಿ. ಒಳಗಿವಿ.
ಹೊರಗಿವಿ
[ಬದಲಾಯಿಸಿ]ಇದರಲ್ಲಿ ಕರ್ಣ ಮತ್ತು ಕರ್ಣಕುಹರ ಎಂದು ಎರಡು ವಿಭಾಗಗಳಿವೆ. ಕರ್ಣ ತಲೆಯ ಪಕ್ಕದಲ್ಲಿ ಹೊರಕ್ಕೆ ಚಾಚಿದೆ ಮತ್ತು ಪ್ರಶ್ನಾರ್ಥಕ ಚಿಹ್ನೆಯಂತಿದೆ. ಇದರ ಆಕಾರಕ್ಕೆ ಆಧಾರ ಒಳಗಿರುವ ಸ್ಥಿತಿಸ್ಥಾಪಕ ಶಕ್ತಿಯಿರುವ ಮೆಲ್ಲೆಲುಬು. ಮೇಲೆ ಚರ್ಮದ ಹೊದಿಕೆಯಿದೆ. ಆಚೆ ಕಡೆ ಹಳ್ಳವಾಗಿದ್ದು ಕಬ್ಬೆ ಕಾಲುಗಳಿದ್ದಂತಿವೆ. ಇದರ ಅಂಚಿನ ಮೇಲಿನ ಮುಕ್ಕಾಲು ಭಾಗ ಮಡಚಿದೆ. ಸುರುಳಿಕೊಂಡ ಈ ಅಂಚು ಹೆಲಿಕ್ಸ್. ಇದು ಹಿಂದೆ ಕೆಳಕ್ಕೆ ತಿರುಗುವ ಸ್ಥಳದಲ್ಲಿ ಬಹುಜನರಲ್ಲಿ ಡಾರ್ವಿನ್ ಗುಳ್ಳೆಯಿರುತ್ತದೆ. ಮಾನವನ ಪೂರ್ವಜರಲ್ಲಿ ಉದ್ದ ಕಿವಿಯಿದ್ದಿರಬಹುದೆಂಬುದಕ್ಕೆ ಈ ಗುಳ್ಳೆ ಸೂಚಕ. ಹೆಲಿಕ್ಸ್‍ನ ಒಳಗಡೆ ಪ್ರತಿಹೆಲಿಕ್ಸ್ (ಆಂಟಿಹೆಲಿಕ್ಸ್) ಎಂಬುದು ಉಂಟು. ಇದು ಕಿವಿತೂತಿನ ಮೇಲೆ ಕವಲೊಡೆಯುತ್ತದೆ. ಪ್ರತಿಹೆಲಿಕ್ಸ್ ಒಳಗಡೆ ಕಾಂಕ ಎಂಬ ಹಳ್ಳವೂ ಅದರ ಮುಂಭಾಗದಲ್ಲಿ ಕರ್ಣಕುಹರದ ಹೊರಬಾಯಿಯೂ ಇವೆ. ಕುಹರದ ಮುಂದೆ ತ್ರಿಕೊಣದಂತಿರುವ ಟ್ರೇಗಸ್ ಉಂಟು. ಕರ್ಣದ ಅತಿಕೆಳಭಾಗವಾದ ಹಾಲೆ ಮೆಲ್ಲೆಲುಬಿಲ್ಲದೆ ಮೆತ್ತಗಿದೆ. ಇದೇ ಕಿವಿ ಚುಚ್ಚುವ ಭಾಗ. ಮುಂದಿನ, ಮೇಲಿನ ಮತ್ತು ಹಿಂದಿನ ಚಿಕ್ಕ ಕರ್ಣಪೇಶಿಗಳು ಕರ್ಣವನ್ನು ಸ್ವಲ್ಪ ಅಲುಗಾಡಿಸಬಲ್ಲುವು. ಕರ್ಣಕುಹರದ ಉದ್ದ 2.5 ಸೆಂಮೀ. ಇದರ ಹೊರ 1/3 ಭಾಗದಲ್ಲಿ ಮೆಲ್ಲೆಲುಬಿದೆ. ಒಳ 2/3 ಭಾಗದಲ್ಲಿ ಎಲುಬಿದೆ. ಕಿವಿಯಲ್ಲಿ ಬೆರಳಿಟ್ಟುದವಡೆ ಆಡಿಸಿದರೆ ಮೆಲ್ಲೆಲುಬಿನ ಭಾಗದಲ್ಲಿ ದವಡೆ ಮೂಳೆ ಆಡುವುದು ಗೊತ್ತಾಗುವುದೆ. ಗಲ್ಲದ ಮೇಲಿನ ಬಲವಾದ ಏಟು ಕಿವಿಗೆ ಅಪಾಯವಾಗಬಹುದು. ಕುಹರಕ್ಕೆ ಚರ್ಮ ಒಳಹೊದಿಕೆ. ಈ ಚರ್ಮದ ವಿಶೇಷ ಸ್ವೇದಗ್ರಂಥಿಗಳು ಗುಗ್ಗೆಯನ್ನು ಸುರಿಸುತ್ತವೆ. ಚರ್ಮ ಬಿಗಿಯಾಗಿ ಅಂಟಿರುವುದರಿಂದ ಇದರ ಕುರುಗುಳ್ಳೆಗಳು ಬಹಳ ನೋವುಂಟು ಮಾಡುತ್ತವೆ. ಕುಹರದ ಒಳ ಕೊನೆಯಲ್ಲಿ ಕಿವಿದಮಟೆಯಿದೆ. ಕುಹರ S ಆಕಾರದಲ್ಲಿದೆ. ಹೊರಭಾಗ ಒಳಕ್ಕೆ ಮುಂದಕ್ಕೆ ಮತ್ತು ಸ್ವಲ್ಪ ಮೇಲಕ್ಕೆ. ಮಧ್ಯಭಾಗ ಹಿಂದಕ್ಕೆ ಮೇಲಕ್ಕೆ ಮತ್ತು ಒಳಭಾಗ ಮುಂದಕ್ಕೆ ಕೆಳಕ್ಕೆ ತಿರುಗಿವೆ. ಕರ್ಣವನ್ನು ಮೇಲಕ್ಕೆ ಹಿಂದಕ್ಕೆ ಎಳೆದರೆ ಕುಹರ ಸ್ವಲ್ಪ ನೆಟ್ಟಗಾಗುತ್ತದೆ. ಆಗ ವೈದ್ಯ ತುತ್ತೂರಿಯಂಥ ಏÀಣಿಯನ್ನಿಟ್ಟು ಒಳಕ್ಕೆ ಬೆಳಕು ಬಟ್ಟು ಕಿವಿದಮಟೆಯನ್ನು ನೋಡಬಹುದು. ಮಕ್ಕಳಲ್ಲಿ ಕುಹರ ಕುರುಚಾಗಿದೆ; ಕಿವಿದಮಟೆ ಆಳದಲ್ಲಿಲ್ಲ; ಆದ್ದರಿಂದ ಮಕ್ಕಳ ಕಿವಿಗೆ ಕಡ್ಡಿ ಹಾಕುವುದರಿಂದ ಕಿವಿದಮಟೆಗೆ ಅಪಾಯವುಂಟು. ದೊಡ್ಡವರ ಕಿವಿದಮಟೆಗೆ ಮುತ್ತಿನ ಹೊಳಪಿದೆ. ಇದು ಹೊರಮೈ ಸ್ವಲ್ಪ ಕೆಳಗಾಗುವಂತೆ ವಾಲಿದೆ. ಕೂಸಿನಲ್ಲಿ ಇದರ ಹೊರಮೈ ಪಾದಗಳ ಕಡೆ ತಿರುಗಿದೆ. ಹೊರಮೈಯ ಕೇಂದ್ರದಿಂದ ಮೇಲಕ್ಕೆ ಹೋಗುವ ಕೆಂಪು ಹಳದಿ ಗೀರು ಕಾಣುತ್ತದೆ. ಇದು ಸುತ್ತಿಗೆ ಮೂಳೆಯ ಹಿಡಿಯಿಂದಾದ ಉಬ್ಬು. ಸುತ್ತಿಗೆಯ ಒಳಸೆಳೆತದಿಂದ ಕೇಂದ್ರದಲ್ಲಿ ಅಂಬೊ ಎಂಬ ಮಧ್ಯಗುಳಿ ಕಾಣುತ್ತದೆ. ಹೊರಗಿವಿಯ ಮೂಲಕ ತೂರಿದ ಶಬ್ದತರಂಗಗಳು ಕಿವಿದಮಟೆಯನ್ನು ಅದಿರಿಸುತ್ತವೆ. ವಿಕಲಕರ್ಣ (ಸೀಳ್ಗಿವಿಯೂ ಇರಬಹುದು), ಎರಡನೆಯ ಕರ್ಣ, ತೂತಿಲ್ಲದಿರುವಿಕೆ ಕರ್ಣದ ಮುಂದೆ ತೂತುಗಳು ಮತ್ತು ಬುಡ್ಡೆಗಳು ಇವು ಹೊರಗಿವಿಯ ವಿಕಲತೆಗಳು. ಕೆಳದವಡೆ ಮೂಳೆಯಿಲ್ಲದಿರುವಾಗ ಎರಡು ಕಿವಿಗಳೂ ಸೇರಿ ಕತ್ತಿನಲ್ಲಿರಬುಹುದು.
ನಡುಗಿವಿ
[ಬದಲಾಯಿಸಿ]
ಕಿವಿ ಇದು ಮೂಳೆಯಲ್ಲಿರುವ ಸಣ್ಣ ಪೊಳ್ಳು. ಕಿವಿದಮಟೆಯ ಕಂಪನವನ್ನು ಒಳಗಿವಿಗೆ ಮುಟ್ಟಿಸುವ ಮೂರು ಸಣ್ಣ ಮೂಳೆಗಳ ಸರಣಿ ಇದರಲ್ಲಿದೆ : ಲೋಳ್ಪೊರೆಯ ಒಳಹೊದಿಕೆಯಿದೆ, ಪೊಳ್ಳಿನಲ್ಲಿ ಗಾಳಿಯಿದೆ. ಗುಂಟಲಿಗೆ ಸೇರಿದ ಕಿವಿಗಂಟಲು ನಾಳದಿಂದ ಹೊರಗಾಳಿಯ ಒತ್ತಡವೂ ಪೊಳ್ಳಿನ ಗಾಳಿಯ ಒತ್ತಡವೂ ಒಂದೇ ಆಗುತ್ತದೆ. ಕಿವಿದಮಟೆಯ ಹೊರಗಡೆ ಕುಹರದಲ್ಲಿಯೂ ಒಳಗಡೆ ಪೊಳ್ಳಿನಲ್ಲಿಯೂ ಇರುವುದರಿಂದ ಅದು ಶಬ್ದಕ್ಕೆ ಸರಿಯಾಗಿ ಅದಿರಲು ಸಾಧ್ಯವಾಗುತ್ತದೆ. ಒಳಗಾಳಿಯಿಲ್ಲದಿದ್ದರೆ ತಮಟೆ ಕಂಪಿಸಲಾಗದೆ ಕಿವುಡುಂಟಾಗುತ್ತದೆ. ನಡುಗಿವಿಯ ಮೇಲಿನ ಕೆಳಗಿನ ಮತ್ತು ಹಿಂದುಮುಂದಿನ ವ್ಯಾಸಗಳು ಸುಮಾರು 15 ಮಿಮೀ. ಪಕ್ಕದಿಂದ ಪಕ್ಕಕ್ಕೆ ಮೇಲುಗಡೆ 6 ಮಿಮೀ. ಮಧ್ಯೆ (ಅಂಬೊ ಇರುವಲ್ಲಿ) 2 ಮಿಮೀ. ಮತ್ತು ಕೆಳಗೆ 4 ಮಿಮೀ. ಈ ಪೊಳ್ಳಿನ ಹೊರಭಿತ್ತಿಯಲ್ಲಿ ಕಿವಿದಮಟೆ ಉಂಟು. ಒಳಭಿತ್ತಿಯಲ್ಲಿ ಮಧ್ಯೆ ಚಿಕ್ಕ ಉಬ್ಬು (ಪ್ರೊಮೊಂಟರಿ) ಇವೆ. ಇದು ಒಳಗಿವಿಯ ಶಂಖದ ಮೊದಲ ಸುರುಳಿಯಿಂದಾದುದು. ಈ ಉಬ್ಬಿನ ಮೇಲುಗಡೆ ಹಿಂದು ಮುಂದು ಉದ್ದವಾಗಿರುವ ಅಲಸಂದೆ ಕಾಳಿನಾಕಾರದ ವೆಸ್ಟಿ ಬ್ಯೂಲ್ ರಂಧ್ರವಿದೆ. ಇದರ ಮೂಲಕ ಚಿಕ್ಕ ಮೂಳೆಗಳ ಸರಣಿ ಶಬ್ದಕಂಪನವನ್ನು ಒಳಕ್ಕೆ ಸಾಗುತ್ತದೆ. ಉಬ್ಬಿನ ಕೆಳಗಡೆ ಒಂದು ಚಿಕ್ಕ ಗುಂಡು ರಂಧ್ರವಿದ್ದು ಅದು ಪೊರೆಯಿಂದ (ಚಿಕ್ಕ ತಮಟೆ) ಮುಚ್ಚಿಕೊಂಡಿದೆ. ಶಂಖದಲ್ಲಿ ಒಳಒತ್ತಡ ಹೆಚ್ಚಾದಾಗ ಈ ಪೊರೆ ಉಬ್ಬುತ್ತದೆ. ಕಡಿಮೆಯಾದಾಗ ಒಳಹೋಗುತ್ತದೆ. ಒಳ ಭಿತ್ತಿಯ ಮೇಲ್ಭಾಗದಲ್ಲಿ ಮುಖದ ಪೇಶಿಗಳಿಗೆ ಹೋಗುವ ತಲೆಯ 7ನೆಯ ನರ ಹಿಂದಕ್ಕೆ ಹೋಗುತ್ತದೆ. ಪೊಳ್ಳಿನ ಹಿಂದಿನ ಗೋಡೆಯಲ್ಲಿ ಮೇಲುಗಡೆ ಒಂದು ಚಿಕ್ಕ ತೂತು ಇದೆ. ಇದರ ಮೂಲಕ ಗಾಳಿ ಕಿವಿಯ ಹಿಂದಿರುವ ಮೂಳೆಗಾಗಿ ಗೂಡುಗಳಲ್ಲಿ ಒತ್ತಡವನ್ನು ಸಮಮಾಡುತ್ತದೆ. ಈ ತೂತಿನ ಕೆಳಗೆ ಒಂದು ಚಿಕ್ಕ ಮುಳ್ಳಿದೆ. ಇದು ಸ್ಟೆಪೀಡಿಯಸ್ ಎಂಬ ಪೇಶಿಯ ಆಧಾರ. ಹೊರ ಮತ್ತು ಒಳಗೋಡೆಗಳು ಮುಂದುಗಡೆ ಬಹಳ ಹತ್ತಿರವಿರುವುದರಿಂದ ಮುಂದಿನ ಗೋಡೆ ಬಹಳ ಇಕ್ಕಟ್ಟು ಆದರೂ ಇದರ ಮೇಲ್ಭಾಗದಲ್ಲಿ ಟೆನ್ಸಾರ್ ಟಿಂಪನಿ ಎಂಬ ಚಿಕ್ಕ ಪೇಶಿಗೆ ಒಂದು ಚಿಕ್ಕ ಗೂಡಿದೆ. ಶಬ್ದ ಹೆಚ್ಚಾದಂತೆ ಇದು ಕಿವಿದಮಟೆಗೆ ಅಂಟಿರುವ ಸುತ್ತಿಗೆ ಮೂಳೆಯನ್ನು ಒಳಕ್ಕೆ ಎಳೆದು ತಮಟೆಯ ಅತಿ ಕಂಪನದಿಂದ ಒಳಗಿವಿಗೆ ಆಗುವ ಅಪಾಯವನ್ನು ತಪ್ಪಿಸುತ್ತದೆ. ರಿಕಾಬುಮೂಳೆಗೆ ಅಂಟಿರುವ ಸ್ಟೆಪೀಡಿಯಸ್‍ನ ಕೆಲಸವೂ ಇದೇ ರೀತಿ. ಟೆನ್ಸಾರ್ ಟಿಂಪನಿ ಗೂಡಿನ ಕೆಳಗೆ ಕಿವಿ ಗಂಟಲುನಾಳದ ಹಿಂದಿನ ಬಾಯಿಯಿದೆ. ಈ ನಾಳದ ಉದ್ದ 36 ಮಿಮೀ. ಇದರ ಕಿವಿಕೊನೆಯ ಭಾಗದಲ್ಲಿ ಮೂಳೆಯಿದೆ; ಮುಂದಿನ ಭಾಗದಲ್ಲಿ ಮೆಲ್ಲೆಲುಬಿದೆ. ಇದರ ಮೂಲಕ ಗಂಟಲ ಲೋಳೆಪೊರೆಯೂ ನಡುಗಿವಿಯ ಲೋಳೆಪೊರೆಯೂ ಒಂದೇ ಆಗಿವೆ. ಇದರಿಂದ ಗಂಟಲ ಕ್ರಿಮಿಗಳು ನಡುಗಿವಿಯನ್ನು ಸೇರಿ ಉರಿತ ಉಂಟಾಗಬಹುದು ಮತ್ತು ಕಿವಿದಮಟೆ ತೂತುಬಿದ್ದು ಕಿವಿಯಲ್ಲಿ ಕೀವು ಸೋರಬಹುದು. ಕೂಸಿನಲ್ಲಿ ಈ ನಾಳದ ಉದ್ದ 18 ಮೀಮೀ. ಮತ್ತು ಇದು ಸಮಮಟ್ಟದಲ್ಲಿದೆ. ದೊಡ್ಡವರಲ್ಲಿ ಇದರ ಮುಂದಿನ ಬಾಯಿ ಹಿಂದಿನ ಬಾಯಿಗಿಂತ ಕೆಳಮಟ್ಟದಲ್ಲಿದೆ. ನಡುಗಿವಿಯ ಮಾಡಿನಲ್ಲಿ ಮಿದುಳುಪೊರೆಗಳನ್ನು ಬೇರ್ಪಡಿಸುವ ಮೂಳೆಯ ರೇಕಿದೆ; ನೆಲ ಇಕ್ಕಟ್ಟಾಗಿದೆ. ಕಿವಿದಮಟೆ ನಡುಗುವಿಯ ಹೊರ ಗೋಡೆಯ ಹೆಚ್ಚು ಭಾಗ. ಇದು ಹೊರ ಮತ್ತು ನಡುಗಿವಿಗಳ ನಡುವೆ ಇದೆ. ಇದರದು ಮೊಟ್ಟೆಯಾಕಾರ. ಮೇಲುಕೆಳಗಿನ ವ್ಯಾಸ 9-10 ಮಿಮೀ. ಅತಿಚಿಕ್ಕ ವ್ಯಾಸ 8-9 ಮಿಮೀ, ಇದು ವಾಲಿರುವುದರಿಂದ ಇದಕ್ಕೂ ಕರ್ಣಕುಹರದ ತಳಕ್ಕೂ ನಡುವೆ 45ಗಳಷ್ಟು ಬಾಗು ಉಂಟು. ಇದರ ಅಂಚು ಮೆಲ್ಲೆಲುಬಿನ ಉಂಗುರದಿಂದ ಸ್ವಲ್ಪ ದಪ್ಪವಾಗಿದೆ. ಇದರ ಹೊರಪದರ ಚರ್ಮ, ಒಳಪದರ ಲೋಳೆಪೊರೆ, ಇದಕ್ಕೆ ಮೇಲ್ಮಟ್ಟದಲ್ಲಿ ಮಧ್ಯಕಿವಿಯ ಅಟ್ಟವಿದೆ. ಇದರಲ್ಲಿ ಸುತ್ತಿಗೆ ಮತ್ತು ಅದ್ಗಣಿಯ (ಅಟೆಗಲ್ಲು) ಹೆಚ್ಚು ಭಾಗಗಳಿವೆ. ಸುತ್ತಿಗೆ (ಮ್ಯಾಲಿಯಸ್), ಅಡಿಗಲ್ಲು (ಇಂಕಸ್) ಮತ್ತು ರಿಕಾಬು (ಸ್ಟೇಪೀಸ್) ಎಂಬವು ನಡುಗಿವಿಯಲ್ಲಿರುವ ಚಿಕ್ಕ ಮೂಳೆಗಳು. ಇವುಗಳಲ್ಲಿ ಸುತ್ತಿಗೆ ದೊಡ್ಡದು. ಸುತ್ತಿಗೆಯ ಹಿಡಿ ತಮಟೆಯ ಹೊಕ್ಕುಳಿನ ವರೆಗೂ ಅಂಟಿದೆ. ಅದರ ತಲೆ ಅಟ್ಟದಲ್ಲಿದೆ. ಇದಕ್ಕೆ ಹಿಂದೆ ಅಡಿಗಲ್ಲಿನೊಡನೆ ಕೀಲಿದೆ. ಅಡಿಗಲ್ಲಿನ ಉದ್ದ ಚಾಚು ಕೆಳಕ್ಕೆ ತಿರುಗಿದೆ. ಇದರ ಕೆಳ ತುದಿಗೆ ಸಿಲ್ವಿಯಸ್‍ನ ಮಣಿಗಂಟು ಎಂದು ಹೆಸರು. ಈ ಗಂಟಿಗೂ ರಿಕಾಬಿಗೂ ನಡುವೆ ಕೀಲಿದೆ. ರಿಕಾಬಿನ ಒಂದು ಕಾಲು ಹಿಂದೆ, ಇನ್ನೊಂದು ಮುಂದು. ಅದರ ಪಾದ ಮಧ್ಯಕಿವಿ ಒಳಗೋಡೆಯ ವೆಸ್ಟಿಬ್ಯೂಲ್ ರಂಧ್ರದಲ್ಲಿ ಸಿಕ್ಕಿಕೊಂಡಿದೆ. ಸುತ್ತಿಗೆ ಮತ್ತು ಅಡಿಗಲ್ಲು ಒಂದೇ ಸನ್ನೆಯಾಗಿ ಅದಿರುತ್ತವೆ. ತಮಟೆ ಹೊರಕ್ಕೆ ಸರಿದಾಗ ರಿಕಾಬಿನ ಪಾದ ಹೊರಕ್ಕೆ ಬರುತ್ತದೆ.
ಒಳಗಿವಿ
[ಬದಲಾಯಿಸಿ]ಇದು ತೊಡಕಾಗಿದೆ. ಮೂಳೆಯ ಒಳಗಿವಿ ಮತ್ತು ಪೊರೆಯ ಒಳಗಿವಿ ಎಂದು ಎರವಿದೆ. ಮೂಳೆಯದರೊಳಗೆ ಪೊರೆಯ ಒಳಗಿವಿಯಿದೆ.
- ಮೂಳೆಯ ಒಳಗಿವಿ : ಇದರ ಭಾಗಗಳು ವೆಸ್ಟಿಬ್ಯೂಲ್, ಮೂರು ಅರ್ಧವೃತ್ತ ನಾಳಗಳು ಮತ್ತು ಶಂಖ, ನಡುಗಿವಿಯ ಒಳಪಕ್ಕದ ಹಿಂಭಾಗದಲ್ಲಿ ವೆಸ್ಟಿಬ್ಯೂಲ್ ಇದೆ. ಇವೆರಡಕ್ಕೂ ನಡುವೆ ಇರುವ ವೆಸ್ಟಿಬ್ಯೂಲ್ ರಂಧ್ರದಲ್ಲಿ ರಿಕಾಬಿನ ಪಾದವಿದೆ. ಮಿದುಳುಪೆಟ್ಟಿಗೆಯ ಹಿಂಭಾಗದಲ್ಲಿರುವ ಒಳಕರ್ಣಕುಹರಕ್ಕೂ ವೆಸ್ಟಿಬ್ಯೂಲಿಗೂ ನಡುವೆ ಸ್ಥಿತಿಶ್ರವಣನರದ (ತಲೆಯ 8ನೆಯ ನರ) ಶಾಖೆಗಳು ತೂರುವ ಸಣ್ಣ ತೂತುಗಳಿರುವ ತೆಳುಮೂಳೆಯಿದೆ. ವೆಸ್ಟಿಬ್ಯೂಲಿನ ಕೆಳಭಾಗದಲ್ಲಿ ಮಿದುಳು ಪೆಟ್ಟಿಗೆಯ ಹಿಂಭಾಗವನ್ನು ಸೇರುವ ವೆಸ್ಟಿಬ್ಯೂಲ್ ನೀರ್ಗೊಳವೆಯಿದೆ. ವೆಸ್ಟಿಬ್ಯೂಲಿನ ಹಿಂಭಾಗಕ್ಕೆ ಮೂರು ಅರ್ಧ ವೃತ್ತನಾಳಗಳೂ ಅಂಟಿಕೊಂಡಿವೆ ಇವುಗಳಲ್ಲಿ ಪಕ್ಕಕೊಳವೆಗೂ ವೆಸ್ಟಿಬ್ಯೂಲಿಗೂ ನಡುವೆ ಎರಡು ಪ್ರತ್ಯೇಕ ತೂತುಗಳಿವೆ. ಮೇಲ್ಗೊಳವೆಯ ಹೊರಕೊನೆ ಮತ್ತು ಹಿಂಗೊಳವೆಯ ಕೆಳಕೊನೆಗಳಲ್ಲಿ ಪ್ರತ್ಯೇಕ ತೂತುಗಳಿವೆ. ಮೇಲ್ಗೊಳವೆಯ ಹೊರ ಕೊನೆ ಮತ್ತು ಹಿಂಗೊಳವೆಯ ಕೆಳಕೊನೆಗಳಲ್ಲಿ ಪ್ರತ್ಯೇಕ ತೂತುಗಳಿವೆ. ಪ್ರತಿಯೊಂದು ಕೊಳವೆಯ ಒಂದು ಕೊನೆ ಉಬ್ಬಿದೆ. ಮೇಲ್ಗೋಳವೆ ನೆಟ್ಟಗಿದೆ ಮತ್ತು ಅದಕ್ಕೆ ಹೊರ ಮತ್ತು ಒಳಕಾಲುಗಳಿವೆ. ಪಕ್ಕಕೊಳವೆ ಸಮಮಟ್ಟದಲ್ಲಿದ್ದು ಅದರ ಕಾಲುಗಳು ಮೇಲು ಕೆಳಗಿವೆ. ವೆಸ್ಟಿಬ್ಯೂಲಿಗೆ ಮುಂದುಗಡೆ ಶಂಖ ಅಂಟಿದೆ. ಇದು ಬಸವನಹುಳದ ಗೂಡಿನಂತಿದೆ. ಇದರ ತುದಿಯೂ ಅಕ್ಷವೂ ಮುಂದಕ್ಕೆ ಪಕ್ಕಕ್ಕೆ ತಿರುಗಿವೆ. ಇದರ ಮಧ್ಯಗೂಟದ ಸುತ್ತ ಸುರುಳಿಯಿರುವ ಶಂಖಕೊಳವೆಯಿದೆ. ಶಂಖದ ಉದ್ದ 5 ಮಿಮೀ. ಶಂಖಕೊಳವೆಯ ಉದ್ದ 30 ಮಿಮೀ. ಇದು ಬುಡದ ಕಡೆ ಅಗಲವಾಗಿದ್ದು ಶಂಖದ ತುದಿಯ ಕಡೆ ಕ್ರಮೇಣ ಚಿಕ್ಕದಾಗುತ್ತದೆ. ಮಧ್ಯಗೂಡವನ್ನು ಬುಡದಿಂದ ತುದಿಯ ವರೆಗೆ ಬಳಸಿರುವ ಒಂದು ಸುರುಳಿ ಚಜ್ಜವಿದೆ. ಇದು ಶಂಖ ಕೊಳವೆಯೊಳಕ್ಕೆ ಅರ್ಧದಷ್ಟು ಚಾಚಿದೆ. ಶ್ರವಣ ನರಶಾಖೆಗಳು ಇದನ್ನು ತೂರುತ್ತವೆ.
- ಪೊರೆಯ ಒಳಗಿವಿ : ಇದು ಮೂಳೆಯ ಒಳಗಿವಿಯ ಒಳಗಿದ್ದರೂ ಅದರ ತುಂಬ ಇಲ್ಲ. ಪೊರೆಯ ಕಿವಿಗೂ ಮೂಳೆಕಿವಿಗೂ ನಡುವೆ ಹೊರನೀರಿದೆ. ಪೊರೆಯ ಕಿವಿಯೊಳಗೆ ಒಳನೀರಿದೆ. ಒಳನೀರೂ ಹೊರನೀರೂ ಬೆರೆಯುವಂತಿಲ್ಲ. ಈ ನೀರುಗಳಿಲ್ಲದಿದ್ದರೆ ಶ್ರವಣಪೊರೆ ಕಂಪಿಸಲಾರದು. ಪೊರೆಯ ಒಳಗಿವಿಯೆ ಭಾಗಗಳು ಯುಟ್ರಿಕ್ಲ್. ಮೂರು ಅರ್ಧವೃತ್ತನಾಳಗಳು, ಸ್ಯಾಕ್ಯೂಲ್, ಶ್ರವಣನಾಳ. ಮೂಳೆಯ ವೆಸ್ಟಿಬ್ಯೂಲ್‍ನೊಳಗೆ ಮುಂದೆ ಸ್ಯಾಕ್ಯೂಲ್, ಹಿಂದೆ ಯುಟ್ರಿಕ್ಲ್ ಇವೆ. ಇವುಗಳಲ್ಲಿ ಮ್ಯಾಕುಲ ಎಂಬ ವಿಶೇಷ ವೇದನವುಳ್ಳ ಕಣಗಳ ಗುಳ್ಳೆಯಿದೆ. ಈ ಗುಳ್ಳೆಯಲ್ಲಿ ವಿಶೇಷವೇದನ ರೋಮಕಣಗಳಿದ್ದು ಇವುಗಳ ಸುತ್ತ ಶ್ರವಣನರದ ಕೆಲವು ಕೊನೆಗಳಿವೆ.
ಮ್ಯಾಕುಲದಲ್ಲಿ ಸುಣ್ಣಕಲ್ಲಿನ ಸಣ್ಣಹರಳುಗಳಿವೆ. ಪೊರೆಯ ಅರ್ಧವೃತ್ತನಾಳಗಳು ಮೂಳೆಯ ಅರ್ಧವೃತ್ತನಾಳಗಳಿಗಿಂತ ಅತಿಸಣ್ಣವಾಗಿವೆ. ಇವುಗಳ ಪ್ರತಿಯೊಂದು ಬುಡ್ಡೆಯಲ್ಲೂ ವಿಶೇಷವೇದನ ರೋಮಕಣಗಳ ಬದುವಿದೆ. ಈ ನಾಳಗಳೆಲ್ಲ ಯುಟ್ರಿಕ್ಲ್‍ನೊಳಕ್ಕೆ ತೆರೆಯುತ್ತವೆ. ಸ್ಯಾಕ್ಯೂಲಿನ ಕೆಳಭಾಗದಿಂದ ಹಿಂದಕ್ಕೆ ಬಾಗಿರುವ ಒಳನೀರಿನ ಕೊಳವೆ ಯುಟ್ರಿಕ್ಲನ್ನು ಸೇರುತ್ತದೆ. ಸ್ಯಾಕ್ಯೂಲಿನ ಮುಂದೆ ಶಂಖಕೊಳವೆಯೊಳಗಿರುವ ಶ್ರವಣನಾಳವನ್ನು ಸೇರಿಸುವ ಕುರುಚುನಾಲವಿದೆ. ಶಂಖಕೊಳವೆಯನ್ನು ಅಡ್ಡಕತ್ತರಿಸಿದರೆ ಮಧ್ಯ ಗೂಟಕ್ಕೆ ಅಂಟಿರುವ ಸುರುಳಿ ಚಜ್ಜ ಮತ್ತು ಇದಕ್ಕೆ ಅಂಟಿರುವ ಶ್ರೂತಿಪೊರೆ ಶಂಖಕೊಳವೆಯನ್ನು ಇಬ್ಭಾಗಿಸುವುದು ಕಾಣುತ್ತದೆ. ಶ್ರುತಿಪೊರೆ ಶಂಖಕೊಳವೆಯ ಹೊರಗೋಡೆಗೆ ಬಲವಾದ ಸ್ನಾಯುವಿನಿಂದ ಅಂಟಿಕೊಂಡಿದೆ. ಸುರುಳಿ ಚಜ್ಜದ ಇನ್ನೊಂದು ತುಟಿಗೆ ರೇಸ್ನಂ ಪೊರೆ ಅಂಟಿಕೊಂಡಿದೆ. ಇದೂ ಶಂಖಕೊಳವೆಯ ಹೊರಗೋಡೆಗೆ ಅಂಟಿರುವುದರಿಂದ ಕೊಳವೆಯ ಮೇಲರ್ಧದಿಂದ ತ್ರಿಕೋಣಭಾಗ ಬೇರ್ಪಡುತ್ತದೆ. ಇದರಿಂದ ಶಂಖಕೊಳವೆಯ ಅಡ್ಡಕತ್ತರಿಕೆಯಲ್ಲಿ ಮೂರು ಭಾಗಗಳು ಕಾಣುತ್ತವೆ. ಮೇಲಿನದು ವೆಸ್ಟಿಬ್ಯೂಲ್‍ನಾಲೆ, ಮಧ್ಯದ್ದು ಶ್ರವಣನಾಳ, ಕೆಳಗಿನದು ನಡುಗಿವಿನಾಲೆ. ಶಂಖದ ತುದಿಯಲ್ಲಿ ವೆಸ್ಟಿಬ್ಯೂಲ್ ಮತ್ತು ನಡುಗಿವಿನಾಲೆಗಳ ಸಂಗಮವಿದೆ. ಇದರಿಂದ ಒಂದು ನಾಲೆಯ ನೀರು ಇನ್ನೊಂದರೊಳಕ್ಕೆ ಹೋಗಬಹುದು. ವೆಸ್ಟಿಬ್ಯೂಲ್ ರಂಧ್ರವನ್ನು ಮುಚ್ಚಿರುವ ರಿಕಾಬು ಪಾದದ ವರೆಗೂ ವಿಸ್ತರಿಸಿದೆ. ನಡುಗಿವಿನಾಲೆಯೊಳಗಿನ ಹೊರನೀರು ನಡುಗಿವಿಯ ಗುಂಡುರಂಧ್ರದ ಚಿಕ್ಕ ತಮಟೆಯ ವರೆಗೂ ಹರಡಿದೆ ಮತ್ತು ಶಂಖ ಕೊಳವೆಯ ಮೂಲಕ ಮಿದುಳು ಪೆಟ್ಟಿಗೆಯ ಹಿಂಭಾಗದ ಮಧ್ಯ ಮತ್ತು ಒಳ ಮಿದುಳ್ಪೊರೆಗಳ ನಡುವೆ ಇರುವ ಮಿದುಳು ಹುರಿನೀರಿನೊಡನೆ ಬೆರೆಯುತ್ತದೆ. ಇದರಿಂದ ಒಳಗಿವಿಯ ಕಶ್ಮಲಗಳು ಅಚೆಗೆ ಹೋಗಲು ಸಾಧ್ಯ. ಶ್ರವಣನಾಳ ಶಂಖದ ತುದಿಯ ಕಡೆ ಮುಚ್ಚಿಕೊಂಡಿದೆ. ಮತ್ತು ಅದರ ಒಳನೀರು ಹೆನ್ಸಸ್ ನಾಳದ ಮೂಲಕ ಸ್ಯಾಕ್ಯೂಲಿನ ನೀರಿನೊಡನೆ ಬೆರೆಯುತ್ತದೆ. ಶ್ರವಣನಾಳದಲ್ಲಿ ಕಾರ್ಟಿ ಅಂಗವೆಂಬ ನಿಜ ಶ್ರವಣೇಂದ್ರಿಯವಿದೆ. ಇದನ್ನು ಮಾರ್ಕಸ್ ಆಲ್ಘನ್ಸೊ ಕಾರ್ಟಿ (1822-1876) ಎಂಬ ಇಟಲಿಯ ಸೂಕ್ಷ್ಮ ಅಂಗರಚನಾ ಶಾಸ್ತ್ರಜ್ಞ ಕಂಡುಹಿಡಿದ. ಇದು ಶ್ರತಿಪೊರೆಯ ವೆಸ್ಟಿಬ್ಯೂಲ್‍ನಾಲೆಯ ಕಡೆ ಇದೆ. ಶ್ರುತಿಪೊರೆಯ ಅಗಲ ಶಂಖದ ಬುಡದ ಕಡೆ 0.21 ಮಿಮೀ., ತುದಿಯ ಕಡೆ 0.36 ಮಿಮೀ. ಇದರ ಮೇಲೆ ಕಾರ್ಟಿಸುರಂಗವಿದೆ. ಇದು 2 3/4 ಸುತ್ತಿನ ಸೂಕ್ಷ್ಮ ಸುರುಳಿ ನಾಳ ಇದರ ಗೋಡೆಗಳು 6,000 ಒಳ ಮತ್ತು 4,000 ಹೊರಕಾರ್ಟಿಕೋಲುಗಳೆಂಬ ಜೀವಕೋಶಗಳಿಂದಾಗಿವೆ. ಈ ಸಾಲುಗಳಿಗೆ ಅಚೆ ಮತ್ತು ಒಳಗಡೆ ಆಚೆಯ ಮತ್ತು ಒಳರೋಮ ಕಣಗಳಿವೆ. ಆಚೆ ರೂಮಕಣಗಳ ನಡುವೆ ಡೀಟರ್ಸ್‍ನ ಆಸರೆ ಕಣಗಳಿವೆ. ತೀರ ಆಚೆ ಹೆನ್ಸನ್‍ನ ದೊಡ್ಡ ಕಣಗಳಿವೆ. ಇವನ್ನು ಮುಚ್ಚಿದಂತೆ ಬಲೆಪೊರೆಯೆಂಬ ಸೂಕ್ಷ್ಮಪರೆಯಿದೆ. ರೋಮಕಣಗಳ ರೂಮಗಳು ಇದನ್ನು ತೂರುತ್ತವೆ. ಇದರ ಮೇಲೆ ಸಡಿಲಾದ, ಡೀಟರ್ಸ್ ಕಣಗಳಿಗೆ ಅಂಟಿರಬಹುದಾದ, ಟಿಕ್ಟೋರಿಯಲ್ ಪೊರೆಯಿದೆ. ಈ ಪೊರೆ ಸುರುಳಿಚಜ್ಜದ ಮೇಲ್ತುಟಿಗೆ ಅಂಟಿಕೊಂಡಿದೆ. ಶ್ರವಣನರತಂತುಗಳು ಮಧ್ಯಗೂಟದಲ್ಲಿರುವ ಸುರುಳಿ ನರಗಂಟಿನಿಂದ ಹೊರಟು ಸುರುಳಿಚಜ್ಜವನ್ನು ತೂರಿ ಒಳ ಮತ್ತು ಹೊರರೋಮ ಕಣಗಳಿಗೆ ಹೋಗುತ್ತದೆ.
ಕಿವಿಯ ಕಾರ್ಯವಿಧಾನ
[ಬದಲಾಯಿಸಿ]ಪ್ರಾಣಿಗಳ ವಿಕಾಸದಲ್ಲಿ (ಸರಳವಾದ ಬೆನ್ನು ಮೂಳೆ ಪ್ರಾಣಿಗಳಲ್ಲಿ) ಸರಿಯಾದ ದೇಹವಿನ್ಯಾಸವನ್ನು ನಿಯಂತ್ರಿಸುವುದು ಕಿವಿಯ ಮೊದಲ ವಿಕಾಸದ ಹೆಜ್ಜೆ ಮತ್ತು ಕೆಲಸ. ಮೀನು ಮುಂತಾದ ಕೆಳದರ್ಜೆ ಪ್ರಾಣಿಗಳಲ್ಲಿ ಇದೇ ಕಿವಿಯ ಕೆಲಸ; ಕೇಳುವುದಲ್ಲ. ಇದೇ ಒಳಗಿವಿಯ ವಿಕಾಸದ ಪ್ರಾರಂಭ. ದೇಹ ತಲೆ ಕೆಳಗಾಗದ, ಬೆನ್ನುಕೆಳಗಾಗದ, ಬೀಳದ ಅಥವಾ ವಾಲದ ಸಮಸ್ಥಿತಿಗೆ ಕಣ್ಣುಗಳ ಮತ್ತು ಇತರ ದೇಹಭಾಗಗಳ ಪೇಶಿಗಳ ಸಂತುಲಿತ ಕಾರ್ಯ ಅಗತ್ಯ. ಹೀಗೆ ಪೇಶಿಗಳನ್ನು ಶಿಸ್ತಿನಲ್ಲಿಡುವುದು ವೆಸ್ಟಿಬ್ಯೂಲ್‍ಆಂಗದ, ಅದರಲ್ಲೂ ಯುಟ್ರಿಕ್ಲ್ ಮತ್ತು ಅರ್ಧ ವೃತ್ತನಾಳಗಳ ಕೆಲಸ ಕೆಲವು ಮೀನು ಜಾತಿಗಳಲ್ಲಿರುವಂತೆ ಸ್ಯಾಕ್ಯೂಲಿನ ಕೆಲಸ ಶಬ್ದ ತರಂಗವೇದನೆ. ಸಂಚಾರೀ ಕಶೇರುಕಗಳಲ್ಲಿ ಶ್ರವಣಗ್ರಾಹಕಶಕ್ತಿ ಕ್ರಮವಾಗಿ ಹೆಚ್ಚುತ್ತ ಪಕ್ಷಿ ಮತ್ತು ಸ್ತನಿಗಳಲ್ಲಿ ಉಚ್ಚಸ್ಥಾನವನ್ನು ಹೊಂದಿದೆ. ಇದಕ್ಕೆ ಸಮವಾಗಿ ವೆಸ್ಟಿಬ್ಯೂಲ್ ಕೂಡ, ತನ್ನ ದಾರಿಯಲ್ಲಿ, ಸಂಚಾರಿಗಳಲ್ಲಿ ಹೆಚ್ಚು ಸಂಕೀರ್ಣವಾಗಿ ಹಿಂಗಾಲು ಮುಂಗಾಲುಗಳ ಚಲನೆಗಳಿಗೆ ಸರಿಯಾಗಿ ವಿವಿಧವಾಗುತ್ತದೆ ಮತ್ತು ವಿಶೇಷ ವಿಕಾಸವನ್ನು ಹೊಂದುತ್ತದೆ. ಸರಿಯಾದ ಶ್ರವಣವ್ಯವಸ್ಥೆಯೆಂದರೆ ಶಬ್ದವನ್ನು ಕೇಳುವ ಮತ್ತು ಶಬ್ದ ತರಂಗಗಳಿಗೆ ಸೂಕ್ತ ಪ್ರತಿಕ್ರಿಯೆ ತೋರಿಸುವ ಶಕ್ತಿಯಿರುವುದು. ಸಾಧಾರಣವಾಗಿ ಅಲುಗಾಡುವ ಹೊರಕಿವಿಗಳೇ ಶಬ್ದತರಂಗಗಳನ್ನು ಗ್ರಹಿಸುತ್ತವೆ. ತಲೆಬುರುಡೆಯಾಗಲಿ ಅಥವಾ ದೇಹದ ಇನ್ನು ಯಾವ ಭಾಗವೇ ಅಗಲಿ ಅಲ್ಲ. ಹೊರಗಿವಿಯಲ್ಲಿ ನುಗ್ಗಿದ ಶಬ್ದದ ಅಲೆಗಳು ಕುಹರದ ಮೂಲಕ ಕಿವಿದಮಟೆ ಮತ್ತು ನಡುಗಿವಿ ಸಣ್ಣಮೂಳೆಗಳ ಸರಣಿಯನ್ನು ಅದಿರಿಸುತ್ತದೆ. ಈ ಸರಣಿ ತೂಗುಸೇತುವೆಯಂತೆ ಅಡಿ ವೆಸ್ಟಿಬ್ಯೂಲ್ ರಂಧ್ರದಲ್ಲಿರುವ ರಿಕಾಬುಪಾದ ಅದಿರುತ್ತದೆ. ಮೂಳೆ ಒಳಗಿವಿ ಹಿಗ್ಗದೆ ಬಿಗಿಯಾಗಿರುವುದರಿಂದಲೂ ಅದರಲ್ಲಿರುವ ನೀರು ಒತ್ತಡದಿಂದ ಕುಗ್ಗದಿರುವುದರಿಂದಲೂ ರಿಕಾಬು ಪಾದ ಸ್ವಲ್ಪ ಒಳ ನುಗ್ಗಿದಾಗ ಗುಂಡುರಂಧ್ರವನ್ನು ಮುಚ್ಚಿರುವ ಚಿಕ್ಕ ತಮಟೆ ಹೊರಕ್ಕೆ ಉಬ್ಬುತ್ತದೆ ಹೀಗಾಗುವುದು ಶಬ್ದ ಕಂಪನಗಳಿಂದುಂಟಾದ ಅಲುಗಾಟದಿಂದ ಅಲೆಗಳು ವೆಸ್ಟಿಬ್ಯೂಲ್ ನಾಲೆ ನೀರಿನಿಂದ ನಡುಗಿವಿನಾಲೆ ನೀರಿಗೆ ಶ್ರುತಿಗೆ ಸರಿಯಾದ ಶ್ರುತಿಪೊರೆಯ ಭಾಗದ ಮೂಲಕ ಹಾಯುವುದರಿಂದ. ಶ್ರುತಿ ಪೊರೆಯ ಅಗಲ ಶಂಖದ ಬುಡದಿಂದ ತುದಿಯ ಕಡೆ ಹೆಚ್ಚುವುದರಿಂದ ಅದರ ಶ್ರುತಿಶಂಖದ ತುದಿಯಿಂದ ಬುಡದ ಕಡೆಗೆ ಕ್ರಮವಾಗಿ ಹೆಚ್ಚುತ್ತದೆ. ಅಂದರೆ ಮಂದ್ರಸ್ಥಾಯಿಯ ಶ್ರುತಿಗಳು ತುದಿಯ ಕಡೆಯಲ್ಲೂ ತಾರಸ್ಥಾಯಿಯ ಶ್ರುತಿಗಳು ಬುಡದ ಕಡೆಯಲ್ಲೂ ಮಧ್ಯಸ್ಥಾಯಿಯ ಶ್ರುತಿಗಳು ಇವೆರಡರ ಮಧ್ಯದಲ್ಲೂ ಅನುಕ್ರಮವಾಗಿ ಹಾಯುತ್ತವೆ. 2 3/4 ಕ್ಕಿಂತ ಹೆಚ್ಚು ಸುತ್ತುಗಳ ಶಂಖವಿರುವ ಪ್ರಾಣಿಗಳು ಮನುಷ್ಯ ಕೇಳಲಾರದ ಶಬ್ದಗಳನ್ನು ಕೇಳಬಲ್ಲುವು. ಡಾಲ್ಟನ್ ಪೀಪಿ ಮನುಷ್ಯನಿಗೆ ಕೇಳಿಸದೆ ನಾಯಿಗೆ ಕೇಳಿಸುವುದು ಈ ಕಾರಣದಿಂದ. ಎರಡೂ ಕಿವಿಗಳಿಗೆ ತಲಪುವ ಅಲೆಗಳು ಸ್ವಲ್ಪ ವ್ಯತ್ಯಾಸವಾಗಿರುವುದರಿಂದ ಶಬ್ದದ ದಿಕ್ಕನ್ನು ತಿಳಿಯಲು ಸಾಧ್ಯ ; ಸಂಗೀತದ ಇಂಪೂ ಹೆಚ್ಚು, ಶಬ್ದವೂ ಹೆಚ್ಚು ಕೇಳಿಸುತ್ತದೆ.
ಹೋಲಿಕೆ ಅಂಗರಚನೆ
[ಬದಲಾಯಿಸಿ]ಒಳಗಿವಿಯಾಗುವ ಭ್ರೂಣದ ಹೊರಚರ್ಮದ ಒಳ ಬುಡ್ಡೆಯ ಮೂಲವೂ ಮೀನಿನ ಪಾಶ್ರ್ವರೇಖಾಂಗಗಳ ಮೂಲವೂ ಬಹುಶಃ ಒಂದೇ. ಕೆಳಮಟ್ಟದ ಕಶೇರುಕ ಪ್ರಾಣಿಗಳಲ್ಲಿ ಒಳನೀರ್ಗೊಳವೆ (ಪೊರೆ ಒಳಗಿವಿಯಾಗುವ ಭಾಗ) ತಲೆಯ ಮೇಲಿನ ರಂಧ್ರದ ಮೂಲಕ ಹೊರಕ್ಕೆ ತೆರೆಯುತ್ತದೆ. ಕೆಲವು ಮೆಲ್ಲೆಲುಬು ಮೀನುಜಾತಿಗಳಲ್ಲಿ ಸ್ಯಾಕ್ಯೂಲಿನೊಳಕ್ಕೆ ಮರಳು ನುಗ್ಗುವಷ್ಟು ರಂಧ್ರ ದೊಡ್ಡದಾಗಿರುತ್ತದೆ. ಕೆಲವು ಎಲುಬು ಮೀನುಜಾತಿಗಳಲ್ಲಿ ಈಜುಬುಡ್ಡೆಗೂ ಒಳಗಿವಿಗೂ ನಡುವೆ ಸಣ್ಣ ಮೂಳೆಗಳ ಸರಪಣಿಯಿರುತ್ತದೆ. ದವಡೆಯಿಲ್ಲದ ಗುಂಡುಬಾಯಿ ಮೀನುಗಳಲ್ಲಿ ಪಕ್ಕ ಅರ್ಧವೃತ್ತನಾಳವಿಲ್ಲ. ಪೆಟ್ರೊಮೈಜಾನ್ ಮೀನಿನಲ್ಲಿ ಮೇಲಿನ ಮತ್ತು ಹಿಂದಿನ ಅರ್ಧವೃತ್ತನಾಳಗಳು ಮಾತ್ರ ಇದೆ. ಇವೆರಡೂ ಮೈಸೀನ್ ಮೀನಿನಲ್ಲಿ ಒಂದಾಗಿ ಕಾಣುತ್ತವೆ. ಇನ್ನೂ ಹೆಚ್ಚಿನ ದರ್ಜೆಯ ಮೀನುಜಾತಿಗಳಲ್ಲಿ ಮೂರು ಅರ್ಧವೃತ್ತನಾಳಗಳಿವೆ. ಬಹಳ ಕಶೇರುಕಪ್ರಾಣಿಗಳಲ್ಲಿ ಸುಣ್ಣಕಲ್ಲಿನ ಹರಳುಗಳು ಒಳಗಿವಿಯಲ್ಲಿರುತ್ತವೆ. ಇವು ಬಹು ಚಿಕ್ಕವಾಗಿರಬಹುದು. ಆದರೆ ಮೇಲ್ಜಾತಿಗಳ ಮೂಳೆ ಮೀನುಗಳಲ್ಲಿದ್ದಂತೆ ದೊಡ್ಡವಾಗಿದ್ದರೆ ಇವನ್ನು ಕಿವಿಗಲ್ಲುಗಳೆನ್ನುತ್ತಾರೆ. ಮೀನುಗಳಲ್ಲಿ ಯುಟ್ರಿಕ್ಲ್, ಸ್ಯಾಕ್ಯೂಲ್, ಮೂರು ಅರ್ಧ ವೃತ್ತನಾಳಗಳು, ಒಳನೀರ್ಗೊಳವೆ ಮತ್ತು ಒಂದು ಕುರುಚು ಲೆಗೀನ ಮಾತ್ರ ಒಳಗಿವಿಯೆ ಭಾಗಗಳು. ಜಲಸಾಂಚಾರಿಗಳಲ್ಲಿ ಲೆಗೀನ ಎಂಬ ನಾಳದ ಮೂಲದಲ್ಲಿ ಮುಖ್ಯ ವೇದನಸ್ಥಾನವಿದೆ. ಇದೇ ಬಹುಶಃ ಶ್ರವಣನಾಳದ ಮೂಲಸ್ವರೂಪ. ಒಳನೀರ್ಗೊಳವೆ ಚರ್ಮಸಂಬಂಧವನ್ನು ಕಡಿದುಕೊಂಡು ಅನೇಕ ಪ್ರಾಣಿಗಳಲ್ಲಿ ಬೆನ್ನು ಮೂಳೆ ನಳಿಗೆಯಲ್ಲಿ ಲಂಬಿಸಿ ಬೆನ್ನುಮಣಿಗಳ ನಡುವೆ ಇರುವ ತೂತುಗಳ ಮೂಲಕ ಹೊಟ್ಟೆಯೊಳಕ್ಕೆ ಚಾಚಿರುತ್ತದೆ ಸಾಮಾನ್ಯ ಕಪ್ಪೆಯಲ್ಲಿ ಈ ರೀತಿಯಿದೆ. ಮೊದಲು ಈ ಪ್ರಾಣಿವರ್ಗದಲ್ಲಿ ನಡುಗಿವಿ ಮತ್ತು ಕಿವಿ ಗಂಟಲು ನಾಲ ಕಾಣಿಸಿ ಕೊಳ್ಳುತ್ತವೆ. ಹೊರಗಿವಿಯಲ್ಲದೆ ಕಿವಿದಮಟೆ ಚರ್ಮಮಟ್ಟದಲ್ಲಿದ್ದು ಒಂದೇ ಸಣ್ಣ ಮೂಳೆಕಡ್ಡಿಯಿಂದ ಶಬ್ದಕಂಪನಗಳು ಒಳಗಿವಿಯನ್ನು ಮುಟ್ಟುತ್ತವೆ. ಸರೀಸೃಪಗಳಲ್ಲಿ ಒಳಗಿವಿ ಇನ್ನೂ ಹೆಚ್ಚು ಮುಂದುವರಿಯುತ್ತದೆ. ಆಮೆ, ಹಾವುಗಳಲ್ಲಿ ಜಲಸಂಚಾರಿಗಳಲ್ಲಿರುವಂತೆ ಶ್ರವಣನಾಳ ಕುರುಚಾಗಿ ಮೂಲಾವಸ್ಥೆಯಲ್ಲೇ ಇದೆ. ಮೊಸಳೆಗಳಂಥ ಉನ್ನತ ದರ್ಜೆ ಪ್ರಾಣಿಗಳಲ್ಲಿ ಶ್ರವಣನಾಲ ಉದ್ದವಾಗಿ ಸ್ವಲ್ಪ ತಿರುಚಿಕೊಂಡು ಕೊನೆಯಲ್ಲಿ ಸೂಕ್ಷ್ಮ ಲೆಗೀನಾವನ್ನು ಹೊಂದಿದೆ. ಇದರೊಡನೆ ವೆಸ್ಟಿಬ್ಯೂಲ್ ಮತ್ತು ನಡುಗಿವಿನಾಲೆಗಳು ಬೆಳೆಯಲು ಪ್ರಾರಂಭಿಸುತ್ತವೆ. ಒಳನೀರ್ಗೊಳವೆ ಕೆಲಪ್ರಾಣಿಗಳಲ್ಲಿ ಮಿದುಳುಪೆಟ್ಟಿಗೆ ಮತ್ತು ಇನ್ನಿತರ ದೇಹಭಾಗಗಳಿಗೆ ವಿಸ್ತರಿಸುತ್ತದೆ. ಹಾವುಗಳಲ್ಲಿ ಕಿವಿದಮಟೆಯೇ ಇಲ್ಲ; ಮತ್ತು ಶ್ರವಣನಾಳವೂ ಇಲ್ಲದಿರುವುದರಿಂದ ಹಾವುಗಳಿಗೆ ಶಬ್ದ ಕೇಳಿಸುವಂತಿಲ್ಲ; ಹಾವಾಡಿಗನ ಸಂಗೀತ ಕೇಳಿಸದೆ ಹಾವು ಅವನ ಚೇಷ್ಟೆಗಳಿಗೆ ಸರಿಯಾಗಿ ನೋಡಿಕೊಂಡು ಆಡುತ್ತದೆ. ಹಕ್ಕಿಗಳಲ್ಲಿ ಶ್ರವಣನಾಳ ಮೊಸಳೆಗಳಲ್ಲಿದ್ದಂತಿದೆ. ಆದರೆ ಮೇಲಿನ ಅರ್ಧವೃತ್ತನಾಳ ಕೂಡುವಡೆ ಈ ಹಿಂದಿನದು ಮೇಲ್ಮಟ್ಟದಲ್ಲಿದೆ. ಕೆಲವು ಹಲ್ಲಿಗಳಲ್ಲಿ ಮತ್ತು ಗೂಗೆಗಳಂಥ ಹಕ್ಕಿಗಳಲ್ಲಿ ಒಂದು ಚಿಕ್ಕ ಚರ್ಮದ ಮಡಿಕೆ ಕರ್ಣದಂತೆ ಕಾಣುವುದು. ಕಾಂಗರೂ ಜಾತಿಯಲ್ಲಿ ಶ್ರವಣನಾಳ ಸರೀಸೃಪಗಳಲ್ಲಿದ್ದಂತೆ ಕುರುಚಾಗಿ ನೇರವಾಗಿದೆ. ಇದಕ್ಕಿಂತ ಮೇಲಿನ ಜಾತಿಗಳ ಸ್ತನಿಗಳಲ್ಲಿ ಶ್ರವಣನಾಳ ಸುರುಳಿಯಾಗಿದೆ ; ಅತಿ ದೊಡ್ಡ ಜಂತುವಾದ ತಿಮಿಂಗಿಲದಲ್ಲಿ ಸುತ್ತಿದ್ದರೆ ಇಲಿ ಜಾತಿಯ ಸೀಲೊಗೊನಿಸ್‍ನಲ್ಲಿ 5 ಸುತ್ತುಗಳಿವೆ. ಸ್ತನಿಗಳಲ್ಲಿ ಲೆಗೀನ ಬಹಳ ಚಿಕ್ಕದಾಗಿದೆ. ಕಾರ್ಟಿಯ ಶ್ರವಣಾಂಗ ಸ್ತನಿಗಳಲ್ಲಿ ಮಾತ್ರ ಇದೆ. ಒಂದು ಕೋಲುಮೂಳೆಗೆ ಬದಲು ಮೂರು ಚಿಕ್ಕ ಮೂಳೆಗಳ ಸರಣಿಯಿದೆ. ಕೆಲವು ಸ್ತನಿಗಳಲ್ಲಿ, ಅದರಲ್ಲೂ ಮಾಂಸಾಹಾರಿಗಳಲ್ಲಿ, ನಡುಗಿವಿ ಉಬ್ಬಿ ಬುಡ್ಡೆಯಂತಿದೆ. ಕಿವಿಯ ಹಿಂದಿನ ಮೂಳೆಯಲ್ಲಿ ಸಣ್ಣ ಗಾಳಿಗೂಡುಗಳಲ್ಲಿ ಮನುಷ್ಯನಲ್ಲಿ ಮಾತ್ರ ಇವೆ. ಮನುಷ್ಯ ನೆಟ್ಟಗೆ ನಿಂತು ತಲೆಯನ್ನು ಮತ್ತು ದೇಹವನ್ನು ಎಲ್ಲಕಡೆಗೂ ಬೇಗ ಬೇಗ ತಿರುಗಿಸಬಲ್ಲವನಾದ್ದರಿಂದ ಅವನಿಗೆ ಅಲುಗಾಡುವ ಲಂಬಕರ್ಣಗಳ ಅಗತ್ಯವಿಲ್ಲ.
ಭ್ರೂಣದಲ್ಲಿ ಶ್ರವಣಾಂಗವೃದ್ಧಿ
[ಬದಲಾಯಿಸಿ]Inner ear
[ಬದಲಾಯಿಸಿ]

ಭ್ರೂಣದ ಮೊದಲನೆಯ ಮತ್ತು ಎರಡನೆಯ ಕಿವಿರುಗಳ ಮೇಲೆ ಕರ್ಣ ರೂಪುಗೊಳ್ಳುತ್ತದೆ. ಟ್ರೇಗಸ್ ಮತ್ತು ಹಲಿಕ್ಸ್‍ನ ಮುಂಭಾಗ ಮೊದಲು ಕಿವಿರಿನ ಮೇಲೆ ಮೊಳೆಯುವ ಇಗುಳ್ಳೆಗಳಿಂದಲೂ ಪ್ರತಿಟ್ರೇಗಸ್, ಪ್ರತಿಹೆಲಿಕ್ಸ್ ಮತ್ತು ಹಾಲೆಗಳು ಎರಡನೆಯ ಕಿವಿರಿನ 3 ಗುಳ್ಳೆಗಳಿಂದಲೂ ಆಗುತ್ತವೆ. ಡಾರ್ವಿನ್‍ಗುಳ್ಳೆ ಈ ಎರಡು ಕಿವಿರುಗಳು ಬೆನ್ನಕಡೆ ಸೇರುವುದಕ್ಕಿಂತ ಸ್ವಲ್ಪ ಮೇಲಿದೆ, ಇವೆರಡರ ಸಂದಿಯಲ್ಲಿ ಕರ್ಣಕುಹರದ ನಿರ್ಮಾಣವಾಗುತ್ತದೆ. ಭ್ರೂಣದ ಗಂಟಲಲ್ಲಿ ಒಳ ಮೊದಲ ಕಿವಿರು ಸಂದಿನಿಂದ ಕಿವಿಗಂಟಲು ಕೊಳವೆ ಮತ್ತು ಮಧ್ಯಕಿವಿಗಳ ವೃದ್ಧಿಯಾಗುತ್ತದೆ. ಕಿವಿದಮಟೆ ಮೊದಲ ಕಿವಿರು ಸಂದುಪಡೆಯಿಂದಾದುದು; ಅದರಿಂದಲೇ ಅದರ ಹೊರಪೊರೆಯು ಭ್ರೂಣದ ಹೊರಚರ್ಮದಿಂದಲೂ ಒಳಲೋಳೆಪೊರೆ ಒಳಚರ್ಮದಿಂದಲೂ ಮಧ್ಯಪೊರೆ ಮಧ್ಯಚರ್ಮದಿಂದಲೂ ಆದವು. ಮಧ್ಯಕಿವಿಯ ಚಿಕ್ಕ ಮೂಳೆಗಳು ಮೀನುಗಳಂಥ ಕೆಳದರ್ಜೆ ಪ್ರಾಣಿಗಳಲ್ಲಿರುವಂಥ ಕಿವಿರು ಪಂಜರದಿಂದ ರೂಪುಗೊಂಡವು. ಪೊರೆ ಒಳ ಕಿವಿ ಭ್ರೂಣದ ತಲೆಯ ಒಳಚರ್ಮದಲ್ಲಿ ಗುಳಿಯಂತೆ ಮೊದಲಾಗಿ. ಗುಳಿ ಮುಚ್ಚಿ ಬುಡ್ಡೆಯಾಗಿ, ಈ ಬುಡ್ಡೆಯ ಚರ್ಮದಿಂದ ಬೇರ್ಪಟ್ಟು ಸ್ತನಿಗಳಲ್ಲಿ ಅಂಜೂರದಾಕಾರದ ಕೋಶವಾಗುತ್ತದೆ. ಈ ಕೋಶದ ಕೆಳಭಾಗ ಚಿಗುರಿ ಶ್ರವಣನಾಳವಾಗುತ್ತದೆ. ಮೇಲ್ಭಾಗದಿಂದ ಮೂರು ಚಕ್ರಾಕಾರದ ಪೊಳ್ಳುತಟ್ಟೆಗಳು ಬೆಳೆದು ಇವುಗಳ ಮಧ್ಯಭಾಗಗಳು ಕರಗಿ ಅಂಚುಗಳು ಅರ್ಧವೃತ್ತನಾಳಗಳಾಗುತ್ತವೆ. ಅನಂತರ ಕೋಶದ ಮಧ್ಯಭಾಗ ಬೆಳೆಯದೆ ಸಣ್ಣಗಿದ್ದು ಸ್ಯಾಕ್ಯೂಲ್, ಯುಟ್ರಿಕ್ಲ್ ಆಗುತ್ತವೆ. ಕೋಶದ ಸುತ್ತಲಿರುವ ಮಧ್ಯಚರ್ಮ ಮೆಲ್ಲೆಲುಬಾಗಿ ಕ್ರಮೇಣ ಎಲುಬಾಗಿ ಮೂಳೆ ಒಳಗಿವಿಯಾಗಿ ಕಿವಿಮೂಳೆಯಲ್ಲಿ ಸೇರಿಹೋಗುತ್ತದೆ. ಎರಡೂ ಶ್ರವಣನಾಲಗಳಿಲ್ಲದವರು ಹುಟ್ಟುಕಿವುಡುಮೂಗರು.
ಕಿವಿಯ ಉಗಮ ಮತ್ತು ವಿಕಾಸ
[ಬದಲಾಯಿಸಿ]

The ears of vertebrates are placed somewhat symmetrically on either side of the head, an arrangement that aids sound localization.
ಕಿವಿಯ ಉಗಮವನ್ನು ಪ್ರಾಚೀನಕಾಲದ ಮೀನುಗಳಲ್ಲಿ ಕಾಣಬಹುದು. ಮೊದಲು ದೇಹದ ಮೇಲುಮೈಯಲ್ಲಿದ್ದ ಅಂಗವೊಂದು ದೇಹದೊಳಕ್ಕೆ ಇಳಿದು ಒಳಗಿವಿಯಾಗಿ ಮಾರ್ಪಟ್ಟಿರಬಹುದೆಂದು ಊಹಿಸಲಾಗಿದೆ. ಪ್ರಾಚೀನಕಾಲದ ಮೀನುಗಳಾದ ಆಸ್ಟ್ರಕೊಡರ್ಮಿ, ಪುಪ್ಪುಸ ಮೀನು ಮತ್ತು ಅಕ್ಯಾಂತೋಡಿಯ ಗುಂಪಿಗೆ ಸೇರಿದ ಕೆಲವು ಪ್ರಾಣಿಗಳಲ್ಲಿ ಕಾಣಬರುವ ರಂಧ್ರನಾಲಾಮಂಡಲದಿಂದ ಒಳಗಿವಿ ಉದ್ಭವಿರಬಹುದೆಂದು ಹೇಳುಲಾಗಿದೆ. ಇಂದಿನ ಕಶೇರುಕಗಳ ಒಳಗಿವಿಯಲ್ಲಿ ಕಾಣಬರುವ ಅರ್ಧವೃತ್ತನಾಳಗಳ ಇತ್ತೀಚಿನ ರಚನೆಗಳಲ್ಲ. ಅತ್ಯಂತ ಪ್ರಾಚೀನವಾದ ಸೈಲೂರಿಯನ್ ಕಾಲದ ಕಶೇರುಕಗಳಲ್ಲೂ ಇವು ಇದ್ದುವು. ಮೀನುಗಳಲ್ಲಿ ಪಾಶ್ರ್ವಪಂಕ್ತಿಮಂಡಲವೆಂಬ ಇಂದ್ರಿಯಾಂಗಸಂಗ್ರಹ ಉಂಟು. ಇದು ನೀರಿನ ಚಲನೆಗೆ ಪ್ರತಿಕ್ರಿಯೆಯನ್ನು ಸೂಚಿಸುತ್ತದೆ. ಒತ್ತಡಕ್ಕಾಗಿಲಿ ಅಥವಾ ಒತ್ತಡದ ಅಲೆಗಳಿಗಾಗಲಿ ಇದು ಸೂಕ್ಷ್ಮವಾಗಿಲ್ಲ. ಅಂದರೆ ಸಾಮಾನ್ಯಾರ್ಥದಲ್ಲಿ ಹೇಳುವುದಾದರೆ ಶಬ್ದವನ್ನು ಇದು ಗ್ರಹಿಸಲಾರದು. ಆದರೆ ನೀರಿನಲ್ಲಿ ಒಂದು ನಿಜವಾದ ಶಬ್ದಮೂಲ ನೀರಿನ ಚಲನೆಯನ್ನೂ ಸನಿಯದ ಕ್ಷೇತ್ರದಲ್ಲಿ ಒತ್ತಡದ ಅಲೆಗಳನ್ನೂ ಉತ್ಪತ್ತಿ ಮಾಡುತ್ತದೆ. ಈ ಸನಿಯಕ್ಷೇತ್ರದ ನೀರಿನ ಚಲನೆಗಳು ಪಾಶ್ರ್ಚಪಂಕ್ತಿಯನ್ನು ಪ್ರಚೋದಿಸುತ್ತವೆ. ಆದ್ದರಿಂದ ಪಾಶ್ರ್ವಪಂಕ್ತಿ ಸನಿಯ ಕ್ಷೇತ್ರದ ಶಬ್ದಕ್ಕೆ ಸಂವೇದನೆಯನ್ನು ತೋರುತ್ತದೆ ಎಂದು ಹೇಳಬಹುದು. ಒತ್ತಡದ ಅಲೆಗಳ ಗ್ರಹಿಕೆಯೇ ನಾವು ಸಾಮಾನ್ಯವಾಗಿ ಹೇಳುವ ಶ್ರವಣಕ್ರಿಯೆ. ಪಾಶ್ರ್ಚಪಂಕ್ತಿಗೆ ನೇರವಾಗಿ ಶಬ್ದಗಳನ್ನು ಗ್ರಹಿಸುವ ಸಾಮಥ್ರ್ಯ ಇಲ್ಲ. ತಲೆ ಬುರುಡೆಯ ಅಳದಲ್ಲಿರುವ ಒಳಗಿವಿ, ದೇಹದ ಬಾಹ್ಯ ಪರಿಸರದಲ್ಲಿ ಉಂಟಾಗುವ ಸನಿಯಕ್ಷೇತ್ರದ ಚಲನೆಗಳಿಗೆ ದೇಹದ ಹೊರಮೈಯಲ್ಲಿರುವ ಪಾಶ್ರ್ವಪಂಕ್ತಿಯಷ್ಟೇ ಸಮರ್ಥವಾಗಿ ಸಂವೇದನೀಯವಾಗಲಾರದು. ಆದ್ದರಿಂದ ಮೀನುಗಳಲ್ಲಿ ಕೇವಲ ಸಂತುಲನಾಂಗವಾಗಿ ಕಾಣಿಸಿಕೊಂಡ ವಾಯುಕೋಶ ಒತ್ತಡ ಭಿನ್ನತೆಗಳನ್ನು ನೀರಿನ ಚಲನೆಗಳಾಗಿ ಪರಿವರ್ತಿಸುವ ಕ್ರಿಯೆಯನ್ನು ವಹಿಸಿಕೊಂಡಿತು. ಇದರಿಂದಾಗಿ ಹೊಸದೊಂದು ಸಂವೇದನಾ ನಾಲೆ ರೂಪುಗೊಂಡಿತು ಮತ್ತು ಇದುವರೆಗೆ ಹೊರ ಜಗತ್ತಿನ ಸಂಪರ್ಕದಿಂದ ದೂರವಾಗಿದ್ದ ಒಳಗಿವಿ ಹೊರಜಗತ್ತಿನೊಡನೆ ಸಂಪರ್ಕ ಪಡೆಯಿತು. ಈಗ ಅದು ಒತ್ತಡದ ಅಲೆಗಳಿಗೆ ಸಂವೇದನೀಯವಾಯಿತು. ಹೀಗೆ ಸಂವೇದನೀಯ ಸುರಂಗವೊಂದು ಏರ್ಪಟ್ಟಿತು. ಕೆಲವು ಸಣ್ಣ ಮೂಳೆಗಳನ್ನು (ಆಸಿಕಲ್ಸ್) ಒಳಗೊಂಡ ಈ ವಾಯುಕೋಶವನ್ನು ಈಗ ಸ್ಪಷ್ಟವಾಗಿ ನಡುಗಿವಿ ಎಂದು ಕರೆಯಬಹುದು. ಈ ನಡುಗಿವಿಯ ಕ್ರಿಯಾವಿಧಾನ ನೆಲದ ಮೇಲಿನ ಕಶೇರುಗಳು ನಡುಗಿವಿಯನ್ನೇ ಹೆಚ್ಚಾಗಿ ಹೋಲುತ್ತದೆ. ಆದರೆ ನೆಲದ ಮೇಲೆ ವಾಸಿಸುವ ಕಶೇರುಕಗಳ ನಡುಗಿವಿ ಫ್ಯಾರಿಂಕ್ಸ್‍ನ ಮೊದಲನೆಯ ಅಥವಾ ಸ್ಟೈರಕಲ್ ಸಂಖ್ಯೆಯಿಂದ ಉದ್ಭವಿಸುತ್ತದೆ. ಫ್ಯಾರಿಂಕ್ಸ್‍ನಿಂದ ಉದ್ಭವಿಸಿದ ಈ ನಡುಗಿವಿ ವಾಯುಕೋಣೆ ನಡುಗಿವಿಗಿಂತಲೂ ಹೆಚ್ಚು ಸಮರ್ಥವಾದುದೆಂದು ತಿಳಿದಿದೆ. ಆದಿಮೀನುಗಳಲ್ಲಿ ಸ್ಪೈರಕಲ್ ಅಪಸರಣಾಂಗ ಅಗಲವಾದ, ಚಪ್ಪಟೆಯಾದ ಯಾವ ಭಾಗಕ್ಕೂ ಸಂಬಂಧವಿರದ ಸಂಚಿರೂಪದ ರಚನೆ. ಹೈಯೊಮ್ಯಾಂಡಿಬುಲಾರ್ ಮತ್ತು ಪ್ಯಾರೊಟಿಕ್ ದಂತಫಲಕ ಹಾಗು ಪ್ಯಾಲೆಟೊಕ್ವಾಡ್ರೇಟಗಳ ನಡುವೆ ಅಪ್ಪಚ್ಚಿಯಾಗಿತ್ತು. ವಿಕಾಸದ ಅನಂತರದ ಹಂತಗಳಲ್ಲಿ ಈ ಅಪಸರಣಾಂಗ ಹೈಯೊಮ್ಯಾಂಡಿಬುಲಾರನ್ನು ಇತರ ರಚನೆಗಳಿಗೆ ಬಂಧಿಸುವ ಅಸ್ತಿರಜ್ಜುವಿಗೆ ನಿಕಟವಾಗಿ ಹೊಂದಿಕೊಂಡು ಇಪ್ಪದರದ ಪಟಲವಾಯಿತು. ಈ ಊಹಾಪಟಲವೇ ಚತುಷ್ಪಾದಿಗಳ ಟಿಂಪಲಿಕ ಪಟಲದ ಸಾದೃಶ ರಚನೆ. ಆದ್ದರಿಂದ ಮೀನುಗಳ ಹಂತದಲ್ಲಿಯೇ ಕಿವಿದಮಟೆಯೊಂದು ರೂಪುಗೊಂಡಿತ್ತು. ಇದರ ಬಡಿತಗಳನ್ನು ಒಳಗಿವಿಗೆ ನಿವೇದಿಸುವ ಕ್ರಿಯೆಯನ್ನು ಹೈಯೊಮ್ಯಾಂಡಿಬುಲಾರ್ ಮೂಳೆ ವಹಿಸಿಕೊಂಡಿತು (ಇದನ್ನು ಕಪ್ಪೆಗಳಲ್ಲಿ ಕಾಣಬಹುದು). ಹೈಯೊಮ್ಯಾಂಡಿಬುಲಾರ್‍ನಿಂದಲೇ ಚತುಷ್ಪಾದಿಗಳ ಸ್ಟೇಪಿಸ್ ಅವತರಿಸಿದುದು. ಆದ್ದರಿಂದ ಪ್ರಾಚೀನ ಮೀನುಗಳಲ್ಲಿ ಕಿವಿದಮಟೆ ಮತ್ತು ಕಿವಿಯ ಸಣ್ಣ ಮೂಳೆಗಳು ಇದ್ದುವು ಎಂದು ಹೇಳಬಹುದು. ಶಬ್ದವನ್ನು ಒಳಗಿವಿಗೆ ಒಯ್ದು ಮುಟ್ಟಿಸುವ ಅಂಗಗಳ ರಚನೆ ಮತ್ತು ವರ್ತನೆಯಲ್ಲಿ ಮೀನುಗಳಿಗೂ ಚತುಷ್ಪಾದಿಗಳಿಗೂ ವ್ಯತ್ಯಾಸವಿದೆ. ಇದು ನೀರಿನ ಒಳಗೆ ಮತ್ತು ನೆಲದ ಮೇಲಿನ ಶಬ್ದಗ್ರಹಣದಲ್ಲಿ ಇರುವ ಮೂಲ ವ್ಯತ್ಯಾಸದಿಂದ ಉಂಟಾಗಿದೆ. ನೀರಿನ ಮಾಧ್ಯಮದ ಮೂಲಕ ಶಬ್ದದ ಅಲೆಗಳು ಸುಲಭವಾಗಿ ಹಾದುಹೋಗಬಲ್ಲವು. ಆದರೆ ನೆಲದ ಮೇಲೆ ಇದು ಸಾಧ್ಯವಿಲ್ಲ. ಆದ್ದರಿಂದ ಚತುಷ್ಪಾದಿಗಳ ಶಬ್ದಗ್ರಾಹಿ ಅಂಗದಲ್ಲಿ (ನಡುಗಿವಿ) ಒತ್ತಡದ ಕ್ಷೇತ್ರಕ್ಕೆ ಪ್ರತಿಫಲಿಸುವ ಸಾಮಥ್ರ್ಯವುಳ್ಳ ಪಟಲವೊಂದು (ಟಿಂಪೆನಮ್) ಮತ್ತು ಈ ಪಟಲದ ಆವೇಗಗಳನ್ನು ಒಳಗಿವಿಗೆ ಸಾಗಿಸಬಲ್ಲ ರಚನೆ (ಸ್ಟೇಪಿಸ್) ಅಥವಾ ರಚನೆಗಳು ಹಾಗೂ ಟಿಂಪೆನಮ್ ಮತ್ತು ಸ್ಟೇಪಿಸ್‍ಗಳು ಸರಾಗವಾಗಿ ಚಲಿಸಲು ಸಾಧ್ಯವಾಗುವಂತೆ ಗ್ರಾಹಿಪಟಲದ ಹಿಂಭಾಗದಲ್ಲಿ ವಿಶೇಷ ಕೋಟರವೊಂದು ಬೇಕೇ ಬೇಕಾದುವು. ನಡುಗಿವಿ ಕೋಟರ ಅಥವಾ ಟಿಂಪೆನಿಕ್ ಕೋಟರ ಇದ್ದ ಬಗೆಗೆ ಅನೇಕ ಪಳೆಯುಳಿಕೆಗಳಲ್ಲಿ ಸುಳಿವು ಸಿಕ್ಕದಿದ್ದರೂ ಅದು ಇದ್ದಿರಲೇ ಬೇಕು. ಇದೇ ಕ್ರಮೇಣ ಚತುಷ್ಪಾದಿಗಳ ನಡುಗಿವಿಯಾಗಿರಬೇಕು. ನೀರಿನ ವಾಸ್ತವ್ಯಕ್ಕೂ ನೆಲದ ವಾಸ್ತವ್ಯಕ್ಕೂ ಆಹಾರ ಸೇವನೆಯ ಕ್ರಮದಲ್ಲಿ ವ್ಯತ್ಯಾಸಗಳಿರುವುದರಿಂದ ತನ್ನ ಆಧಾರಕ್ರಿಯೆಯಿಂದ ಹೈಯೊಮ್ಯಾಂಡಿಬುಲಾರ್‍ಗೆ ಬಿಡುಗಡೆ ದೊರಕಿತು. ಅದು ಉಸಿರಾಟಕ್ಕೆ ಪುಪ್ಪುಸಗಳನ್ನೇ ಹೆಚ್ಚಾಗಿ ಅವಲಂಬಿಸಿದುದರಿಂದಾಗಿ ಕಿವಿರುಕವಚ, ಅಂಗಸಕಮಾನುಗಳ ಅಸ್ಥಿಪಂಜರ ಮತ್ತು ಅವುಗಳಿಗೆ ಸಂಬಂಧಿಸಿದ ಸ್ನಾಯುಗಳು ಈಗ ಅನಗತ್ಯವಾದವು. ಅವು ಕ್ರಮೇಣ ಕ್ಷೀಣಿಸಿ ಮಾರ್ಪಾಡುಗೊಂಡು ಅವನ್ನು ಅವಧರಿಸಿದ್ದ ಹೈಯೊಮ್ಯಾಂಡಿಬುಲಾರದಲ್ಲಿ ಕರ್ಣೇಂದ್ರಿಯದ ರೂಪರಚನೆಯ ಪುನರ್ನಿರ್ಮಾಣಕ್ಕೆ ಎಡೆಮಾಡಿಕೊಟ್ಟುವು.
-
African bush elephant
Loxodonta africana -
Fennec fox (desert regions)
Vulpes zerda -
Arctic fox
Vulpes lagopus -
ನಡುಗಿವಿಯ ಮಾರ್ಪಾಟುಗಳು ಹೊಂದಾಣಿಕೆಯ ಮುಖ್ಯ ಅಂಶಗಳು, ಶಬ್ದಗ್ರಹಣ ಮತ್ತು ಅದರ ಸಂವೇದನೆಗೆ ಸಂಬಂಧಿಸಿದಂತೆ ಇದು ಪ್ರಧಾನವಾದ ಹೆಜ್ಜೆ. ಸರೀಸೃಪಗಳು ಮತ್ತು ದ್ವಿಚರಿಗಳು ವಿವಿಧ ರೀತಿಯ ಮಾರ್ಪಾಡುಗಳನ್ನು ತೋರುತ್ತವೆ. ಇವೆಲ್ಲವೂ ಕ್ಷೀಣವಾದ ರಚನೆಗಳು ಎಂದು ಹೇಳುವೆವಾದರೂ ವಿವಿಧ ರೀತಿಯ ಜೀವನ ಕ್ರಮಗಳಿಗೆ ಹೊಂದಿಕೊಳ್ಳಲು ನಡೆಸಿದ ಮಾರ್ಪಾಡುಗಳು ಇವು ಎನ್ನುವುದನ್ನು ಮರೆಯಬಾರದು. ಒಂದು ವಾಕ್ಯದಲ್ಲಿ ಕಶೇರುಕಗಳ ಶ್ರವಣೇಂದ್ರಿಯ ವಿಕಾಸವನ್ನು ಹೇಳಬಹುದಾದರೆ ಉಸಿರಾಟದ ಸಹಾಯಕಾಂಗಗಳು ಆಹಾರಸೇವನೆಯ ಸಹಾಯಕಾಂಗಗಳಾಗಿ ಮಾರ್ಪಟ್ಟು ಅಂತಿಮವಾಗಿ ಕರ್ಣೆಂದ್ರಿಯ ಸಹಾಯಕಾಂಗಗಳಾಗಿ ಪರಿರ್ತಿತವಾಗಿವೆ. 19 ಮತ್ತು 20ನೆಯ ಶತಮಾನದ ತುಲನಾತ್ಮಕ ಅಂಗರಚನಾಶಾಸ್ತ್ರದ ಅಭ್ಯಾಸಗಳು ಸ್ತನಿಗಳ ನಡುಗಿವಿಯಲ್ಲಿನ ಮೂರು ಶಬ್ದವಾಹಕ ರಚನೆಗಳಲ್ಲಿ ಎರಡು ಸರೀಸೃಪಗಳ ತಲೆಬುರುಡೆ ಮತ್ತು ದವಡೆಗಳ ನಡುವಿನ ಕೀಲಿನ ಮೂಳೆಗಳು ಎಂದು ಗುರುತಿಸಬಹುದೆಂಬುದನ್ನು ತೋರಿಸಿಕೊಟ್ಟವು. ಈ ಮೂಳೆಗಳಿಗೆ ಶಬ್ದವಾಹಕ ಕ್ರಿಯೆಯಲ್ಲಿ ಯಾವ ಪಾತ್ರವೂ ಇರಲಿಲ್ಲ. ಜೀವಂತ ಸರೀಸೃಪಗಳ ಹಾಗೂ ಸ್ತನಿಗಳ ವಿವರವಾದ ಅಭ್ಯಾಸಗಳು ಕೂಡ ಈ ಮೂಳೆಗಳು ದವಡೆಗಳಿಂದ ಕಿವಿಗಳಿಗೆ ಏಕೆ ಮತ್ತು ಹೇಗೆ ವರ್ಗಾಯಿಸಲ್ಪಟ್ಟುವು ಎಂಬ ಪ್ರಶ್ನೆಗೆ ಉತ್ತರವನ್ನು ಕೊಡಲಾರದಾದವು. ಆದರೆ ಈಗ ಪಳೆಯುಳಿಕೆ ಶಾಸ್ತ್ರದ ಕೆಲವು ಸಾಕ್ಷ್ಯಗಳು ಈ ಪ್ರಶ್ನೆಯ ಮೇಲೆ ಹೊಸ ಬೆಳಕನ್ನು ಚೆಲ್ಲುತ್ತಿವೆ. ಬಹುಶಃ ಸ್ತನಿಗಳ ನಡುಗಿವಿ ರೂಪುಗೊಂಡ ವಿವಿಧ ಅವಸ್ಥೆಗಳ ಶ್ರೇಣಿಯನ್ನು ಇವು ಸೂಚಿಸಬಹುದು. ಸ್ತನಿಗಳಲ್ಲದ ಚತುಷ್ಪಾದಿಗಳಲ್ಲಿ ಮತ್ತು ಸರೀಸೃಪಗಳಲ್ಲಿ ಹೊರಮೈಯಲ್ಲಿರುವ ಟಿಂಪೆನಮ್ ಮತ್ತು ಕರ್ಣಕೋಟರದ ದ್ವಾರವಾದ ಫೆನಸ್ಟ್ರ ಓವಾಲಿಸ್‍ಗೆ ಅಂಟಿಕೊಂಡ ಸ್ಟೇಪಿಸ್ ಎಂಬ ಸರಳು ರೂಪದ ಮೂಳೆಗಳೇ ಶಬ್ದವಾಹಕ ತಂತ್ರಜಾಲವಾಗಿದ್ದವು. ಈ ವ್ಯೂಹ ಕೊಂತದಂತೆ ಕೆಲಸಮಾಡುತ್ತದೆ. ಗಾಳಿಯಲ್ಲಿ ಉತ್ಪತ್ತಿಯಾಗುವ ದುರ್ಬಲ ಒತ್ತಡದ ಬದಲಾವಣೆಗಳು ವಿಶಾಲವಾದ ಟಿಂಪೆನಮ್ ಮತ್ತು ಅದಕ್ಕಂಟಿಕೊಂಡ ಸ್ಟೇಪಿಸನ್ನು ಪಟುಗೊಳಿಸುತ್ತವೆ. ಮತ್ತು ಒಳಗಿವಿಯ ಫೆನಸ್ಟ್ರ ಓವಾಲಿಸ್ ಬಳಿ ಬಲವಾದ ಒತ್ತಡಗಳಾಗಿ ಪರಿವರ್ತನೆಯಾಗುತ್ತವೆ. ಸ್ತನಿಗಳ ಇತಿಹಾಸದಲ್ಲಿ ಕಿವಿಯ ಭಾಗದ ಪ್ರಧಾನ ಪುನಾರಚನೆಯೊಂದು ನಡೆಯಿತು. ಆಗ ನಡುಗಿವಿಯ ಪರಿವರ್ತನಾ ತಂತ್ರಜಾಲಕ್ಕೆ ಅನೇಕ ಹೊಸ ರಚನೆಗಳು ಸೇರಿದವು. ಪ್ರಾಚೀನ ಚತುಷ್ಪಾದಿಗಳ ವ್ಯೂಹಕ್ಕೆ ಸನ್ನೆಗೋಲು ವಿಧಾನವೊಂದು ಸೇರಿತು. ಈ ವಿಧಾನದಲ್ಲಿ ಟಿಂಪೆನಮ್ ಅನ್ನು ಆಧರಿಸುವ ಮ್ಯಾಲಿಯಸ್, ಇಂಕಸ್ ಮತ್ತು ಎಕ್ಟೊಟಿಂಪೆನಿಕ್ ಮುಖ್ಯವಾದವು. ಸ್ತನಿಯ ಭ್ರೂಣವೊಂದರ ಕೆಳದವಡೆ ಮತ್ತು ನೆರೆಯ ರಚನೆಗಳನ್ನು ಮುಂದುವರಿದ ಸ್ತನಿ ಆಕಾರದ ಸರೀಸೃಪಗಳೊಡನೆ ಹೋಲಿಸಿ ಸ್ತನಿಗಳ ನಡುಗಿವಿಯ ಮೂಳೆಗಳಿಗೂ ಸರೀಸೃಪಗಳ ದವಡೆಯ ಅಂಶಗಳಿಗೂ ಇರುವ ಸಾದೃಶ್ಯವನ್ನು ತೋರಿಸಬಹುದು. ಸರೀಸೃಪಗಳ ಆರ್ಟಿಕ್ಯುಲಾರ್ ಮೂಳೆ ಸ್ತನಿಗಳ ನಡುಗಿವಿಯ ಮ್ಯಾಲಿಯಸ್ ಸಣ್ಣಮೂಳೆಯಾಗಿದೆ. ಹಾಗೆಯೇ ಸರೀಸೃಪದ ಕ್ವಾಡ್ರೇಟ್ ಇಂಕಸ್ ಆಗಿಯೂ ಆಂಗ್ಯುಲಾರ್ ಎಕ್ಟೊಟಿಂಪೆನಿಕ್ ಅಗಿಯೂ ಆಗಿವೆ. ಈ ಸಾದೃಶ್ಯಗಳನ್ನು ಗುರುತಿಸಿ ಒಪ್ಪಿಕೊಂಡು 50ಕ್ಕೂ ಹೆಚ್ಚು ವರ್ಷಗಳು ಕಳೆದುಹೋಗಿವೆ. ಆದರೆ ಇಲ್ಲಿರುವ ಕೆಲವು ಪ್ರಶ್ನೆಗಳಿಗೆ ಇದುವರೆಗೂ ಉತ್ತರ ಸಿಕ್ಕಿಲ್ಲ. ಉತ್ತರಿಸಲು ಪ್ರಯತ್ನಿಸಿಲ್ಲ. ಮೊದಲನೆಯದಾಗಿ ಕೆಳದವಡೆಯ ಆಧಾರರಚನೆಗಳಾದ ಆರ್ಟಿಕ್ಯುಲಾರ್ ಮತ್ತು ಆಂಗ್ಯುಲಾರ್‍ಗಳು ತಮ್ಮ ಪ್ರಾಚೀನ ಕ್ರಿಯೆಯಿಂದ ಬಿಡುಗಡೆಯಾದುದು ಏಕೆ ? ಎರಡನೆಯದಾಗಿ ಈ ಬಿಡುಗಡೆ ದೊರಕಿದ ಮೇಲೆ ಅವು ಹೇಗೆ ಮತ್ತು ಎಕೆ ನಡುಗಿವಿಯ ತಂತ್ರಜಾಲದಲ್ಲಿ ಸೇರಿಹೋದುವು. ಅವಕ್ಕೆ ಕೆಲಸ ಇಲ್ಲದೆ ಹೋಗಿದ್ದರೆ ವರ್ಜಿತವಾಗಿ ಕಳೆದುಹೋಗಬಹುದಾಗಿತ್ತಲ್ಲ?
ಇತ್ತೀಚಿನ ಅಧ್ಯಯನ
[ಬದಲಾಯಿಸಿ]ಇತ್ತೀಚೆಗೆ ದೊರಕಿದ ಕೆಲವು ಪಳೆಯುಳಿಕೆಗಳು ಈ ಪ್ರಶ್ನೆಗಳ ಮೇಲೆ ಹೊಸ ಬೆಳಕು ಚೆಲ್ಲಲು ಸಹಾಯಕವಾಗಿವೆ. ಈ ಪ್ರಶ್ನೆಗಳಿಗೆ ಅವು ಆಧಾರಪೂರ್ವಕವಗಿ ಉತ್ತರ ಕೊಡಲಾರವು. ಆದರೂ ಏನು ನಡೆದಿರಬಹುದೆಂಬುದನ್ನು ಊಹಿಸಲು ನೆರವಾಗಿವೆ. ಆದಿಯ ಟ್ರೈಯಾಸಿಕ್ ಅವಧಿಯ ತ್ರೈನಾಕ್ಸೊಡಾನ್ ಮತ್ತು ಅಂತ್ಯಟ್ರೈಯಾಸಿಕ್‍ನ ಬೈನೊತೀರಿಯಮ್ ಎಂಬ ಸೈಯನೊಡಾಂಟ್‍ಗಳ ಪಳೆಯುಳಿಕೆಗಳು ಈ ದಿಸಿಯಲ್ಲಿ ಮಹತ್ತ್ವದ ಸಾಕ್ಷ್ಯಗಳನ್ನು ಒದಗಿಸುತ್ತವೆ. ಬೈನೊತೀರಿಯಮ್ ಸ್ತನಿಗಳನ್ನು ಬಹಳವಾಗಿ ಹೋಲುವ ಸರೀಸೃಪ. ಈ ಆಧಾರಗಳಿಂದ ಹಿಂದೆ ಹಾಕಿದ ಪ್ರಶ್ನೆಗಳಿಗೆ ಈಗ ಉತ್ತರವನ್ನು ಹೇಳುವ ಸಾಹಸ ಪ್ರಯತ್ನಕ್ಕೆ ತೊಡಗಬಹುದು. ಸರೀಸೃಪಗಳ ಮತ್ತು ಆದಿಸ್ತನಿ ವಿಕಾಸದಲ್ಲಿ ತಲೆಬುರುಡೆಯ ಎತ್ತರ ಕಡಿಮೆಯಾಗುವ ಪ್ರವೃತ್ತಿ ತಲೆದೋರಿತು. ಇದರಿಂದಾಗಿ ಮಾಂಸಗಳು ಮೂಳೆಗಳಿಗೆ ಅಂಟಿಕೊಳ್ಳುವ ಕ್ರಮದಲ್ಲಿ ಪುನಃ ಪರಿಶೀಲನೆ ನಡೆದು ಪುನರ್ ವ್ಯವಸ್ಥೆಯಾಯ್ತು. ಈ ಕಾರಣದಿಂದ ಕೆಳದವಡೆಯ ಡೆಂಟರಿ ಮೂಳೆಯ ಪಶ್ಚಭಾಗದ ಮೂಳೆಗಳು ಕ್ರಮೇಣ ಕ್ಷೀಣವಾದುವು. ಮಾಂಸಗಳು ಡೆಂಟರಿ ಮೂಳೆಗಳಿಗೆ ಅಂಟಿಕೊಂಡುದರಿಂದ ಅವುಗಳ ಗಾತ್ರ ದೊಡ್ಡದಾಯಿತು. ಟ್ರೈಯಾಸಿಕ್ ಅವಧಿಯ ಅಂತ್ಯದ ಹೊತ್ತಿಗೆ ಈ ಪ್ರವೃತ್ತಿಗಳು ಪರಾಕಾಷ್ಠೆಯನ್ನು ತಲುಪಿದವು ಹೀಗೆ ವಿಸ್ತಾರವಾಗಿ ಬೆಳೆದ ಡೆಂಟರಿ ಸ್ತನಿಗಳಲ್ಲಿರುವಂತೆ ನೇರವಾಗಿ ಸ್ಕ್ವಾಮೋಸಲ್‍ಗೆ ಅಂಟಿಕೊಂಡಿತು ಮತ್ತು ಕೆಳದವಡೆ ತಲೆ ಬುರುಡೆಯೊಂದಿಗೆ ಹೊಸ ರೀತಿಯಲ್ಲಿ ಕೀಲಿಕೊಂಡಿತು. ಈ ಕಾಲದಿಂದೀಚಿಗೆ ಡೆಂಟರಿ ಪಶ್ಚ ಮೂಳೆಗಳು ತಮ್ಮ ದವಡೆ ಆಧಾರ ಕ್ರಿಯೆಯಿಂದ ವಂಚಿತವಾಗಿ, ವರ್ಜಿತವಾಗಿ, ಡೆಂಟರಿ ವಿಸ್ತಾರವಾದಂತೆ ಸ್ಥಾನಪಲ್ಲಟವಾದುವು. ಈ ಅವಸ್ಥೆಯನ್ನು ಬೈನೊತೀರಿಯಮ್‍ನಲ್ಲಿ ಸ್ಪಷ್ಟವಾಗಿ ಕಾಣಬಹುದು. ಅದರ ಕಿವಿ ಸ್ತನಿಯ ಕಿವಿಯಾಗಲು ಆಗಲೇ ಪೂರ್ವಸಜ್ಜಿತವಾಗಿತ್ತು. ಆದ್ದರಿಂದ ಸ್ತನಿಯ ನಡುಗಿವಿ ತಂತ್ರಜಾಲದ ಉದ್ಭವ ತೀರಾಪ್ಸಿಡದ ಅಗಿಯುವ ಉಪಕರಣದ ಮೇಲೆ ಪ್ರಥಮವಾಗಿ ನಡೆದ ಆಯ್ಕೆಯ ಒತ್ತಡದ ಪರಿಣಾಮ. ಈ ಕ್ರಿಯಾಜಟಿಲತೆ ಉಂಟಾದ ಬಳಿಕ, ಸ್ತನಿಮಟ್ಟದ ರಚನಾ ವಿನ್ಯಾಸವನ್ನು ತಲುಪಿದ ಮೇಲೆ ಆಯ್ಕೆ ತನ್ನ ಪಾತ್ರವನ್ನು ವಹಿಸಿ, ಉಳಿಕೆಯ ರಚನೆಗಳನ್ನು ಫಲಕಾರಿಯಾದ ರೀತಿಯಲ್ಲಿ ಹೊಂದಿಸಿ ಶಬ್ದವನ್ನು ಸಾಗಿಸಲು ಮತ್ತು ಗ್ರಹಿಸಲು ಕಿವಿಯ ರಚನೆಯಲ್ಲಿ ಅಳವಡಿಸಿಕೊಂಡಿತು. ಡೆಂಟರಿ ಮೂಳೆಯ ಹಿಂದಿನ ತುದಿಯಲ್ಲಿ ಬೆಳೆದ ಗುಬುಟು ವಿಸ್ತರಿಸಿ ಡೆಂಟರಿ ಪಶ್ಚದವಡೆ ಮೂಳೆಗಳ ಕ್ರಿಯೆಯನ್ನು ವಹಿಸಿಕೊಂಡಿತು. ಆದ್ದರಿಂದ ಕೆಲಸವಿಲ್ಲದಂತಾದ ಈ ಅಂಶಗಳು ಕ್ರಮೇಣ ಗಾತ್ರದಲ್ಲಿ ಕಡಿಮೆಯಾದುವು. ಸರೀಸೃಪಗಳಲ್ಲಿ ದವಡೆಗಳನ್ನು ತೆರೆಯುವ ಕ್ರಿಯೆಯಲ್ಲಿ ಡಿಪ್ರೆಸರ್ ಮ್ಯಾಂಡಿಬುಲೆ ಸ್ವಾಯುಗಳಿವೆ. ಪರಿವರ್ತನಾಪರಂಪರೆಯ ಯಾವುದೇ ಹಂತದಲ್ಲಿ ಈ ಸ್ನಾಯುಗಳು ತಮ್ಮ ಕ್ರಿಯಾನಿರ್ವಹನ ಹೊಣೆಯನ್ನು ಕಳೆದುಕೊಂಡು ಇವುಗಳ ಸ್ಥಾನ ಮತ್ತು ಕ್ರಿಯೆಗಳನ್ನು ಸ್ತನಿಗಳ ಡೈಗ್ಯಾಸ್ಟ್ರಿಕ್ ಮ್ಯಾಂಡಿಬುಲೆ ಎಂಬ ಸ್ನಾಯುಗಳು ವಹಿಸಿಕೊಂಡಿರಬೇಕು. ಇದರಿಂದಾಗಿ ಡಿಪ್ರೆಸರ್ ಮ್ಯಾಂಡಿಬುಲೆ ಸ್ನಾಯುಗಳು ಕಣ್ಮರೆಯಾದುವು. ದವಡೆಯ ನಿರ್ವಹಣೆಯಲ್ಲಿ ಭಾಗವಹಿಸುತ್ತಿದ್ದ ಸ್ನಾಯುಗಳು ಡೆಂಟರಿ ಪಶ್ಚಮೂಳೆಗಳಿಗೆ ಅಂಟಿಕೊಂಡಿದ್ದುವು. ಈ ಮೂಳೆಗಳು ಈಗ ಕ್ಷೀಣವಾದ ದೆಸೆಯಿಂದಾಗಿ ಅವು (ಟೆರಿಗಾಯಿಡಿಯಸ್ ಸ್ನಾಯುಗಳು) ಈಗ ರೆಟ್ರೊಆರ್ಟಿಕ್ಯುಲಾರ್ ಪ್ರವರ್ದಕ್ಕೆ ಅಂಟಿಕೊಂಡುವು. ಸ್ತನಿಗಳ ವಿಕಾಸದಲ್ಲಿ ಇವುಗಳ ಗಾತ್ರದ ಕ್ಷೀಣತೆಯಾದರೂ ಟಿಂಪೆನಿಕ್‍ನ ಗಾತ್ರ ಕ್ರಮೇಣ ಹೆಚ್ಚಿತು. ಈ ಟಿಂಪೆನಮ್ ರೆಟ್ರೊಆರ್ಟಿಕ್ಯುಲಾರ್ ಪ್ರವರ್ಧವನ್ನು ಸುತ್ತುವರಿಯಿತು. ಈ ಮಾರ್ಪಾಡು ನಡೆದ ಮೇಲೆ ಸ್ತನಿಗಳ ಸಣ್ಣ ಮೂಳೆಗಳು ಕ್ರಿಯಾಸಮರ್ಥವಾದುವು. ಈಗ ಸರೀಸೃಪಗಳ ಒಂದು ಸಣ್ಣ ಮೂಳೆ ತಾಂತ್ರಿಕತೆಯಿದ್ದ ಕಡೆ ಮೂರು ಸಣ್ಣ ಮೂಳೆಗಳ ಮಂಡಲ ರೂಪುಗೊಂಡಿತು. ಸ್ತನಿಗಳ ನಡುಗಿವಿಯ ಉದ್ಭವದ ಬಗೆಗೆ ಎರಡು ಸಿದ್ಧಾಂತಗಳಿವೆ : 1 ಟಿ. ಎಸ್. ವೆಸ್ಟಾಲ್ ಸಿದ್ಧಾಂತ, 2 ಹಾಪ್‍ಸನ್ಸ್ ಸಿದ್ಧಾಂತ. ಸ್ತನಿಗಳ ಟಿಂಪೆನಿಕ್ ಪಟಲ (ಕಿವಿದಮಟೆ) ಹೊಸದಾಗಿ ಕಾಣಿಸಿಕೊಂಡ ರಚನೆ ಎಂಬುದು ವೆಸ್ಟಾಲ್ ಸಿದ್ಧಾಂತದ ಮೂಲಸೂತ್ರ. ಯಾವ ರೀತಿಯ ವಿಕಾಸವಾದರೂ ನಡೆದಿರಲಿ ಸ್ತನಿಗಳ ನಡುಗಿವಿ ಮುಖ್ಯವಾಗಿ ಯಾಂತ್ರಿಕ ರಚನೆ. ಗಾಳಿಯ ಬಡಿತಗಳನ್ನು ಒಳಗಿವಿಯ ದ್ರವಗಳನ್ನು ಚಲಿಸಬಲ್ಲ ಬಲವಾದ ಬಡಿತಗಳಾಗಿ ಪರಿವರ್ತಿಸುವುದು ಇದರ ಮುಖ್ಯ ಕ್ರಿಯೆ.
ಉಲ್ಲೇಖಗಳು
[ಬದಲಾಯಿಸಿ]