ವಿಷಯಕ್ಕೆ ಹೋಗು

ಬೆಕ್ಕು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬೆಕ್ಕು (ವೈಜ್ಞಾನಿಕ ಹೆಸರು ಫೆಲಿಸ್ ಕ್ಯಾಟಸ್) ಒಂದು ಚಿಕ್ಕ ಪರಭಕ್ಷಕ ಮತ್ತು ಮಾಂಸಾಹಾರಿ ಸಸ್ತನಿ ಕಾರ್ನಿವೊರ ಕುಟುಂಬಕ್ಕೆ ಸೇರಿದ ಸಾಕುಪ್ರಾಣಿ. ಇದು ಕ್ರಿಮಿ ಕೀಟಗಳು, ಹಾವುಗಳು, ಚೇಳು, ಇಲಿ ಮತ್ತು ಇನ್ನಿತರ ಕೀಟಗಳನ್ನು ಬೇಟೆಯಾಡುವುದರಿಂದ ಮನುಷ್ಯನ ಸಂಗಾತಿಯಾಗಿದೆ. ಇದು ಸುಮಾರು ೯೫೦೦ ವರ್ಷಗಳಿಂದ ಮಾನವನೊಂದಿಗೆ ಸಹಕರಿಸುತ್ತಿದೆ.[೧]

ಬೆಕ್ಕು
ಬೆಕ್ಕಿನ ಇತರ ಚಿತ್ರಗಳು
Conservation status
Domesticated
Scientific classification
ಸಾಮ್ರಾಜ್ಯ:
animalia
ಉಪಸಾಮ್ರಾಜ್ಯ:
ವಿಭಾಗ:
ಉಪವಿಭಾಗ:
ವರ್ಗ:
Subclass:
ಗಣ:
ಉಪಗಣ:
ಕುಟುಂಬ:
ಉಪಕುಟುಂಬ:
ಕುಲ:
ಪ್ರಜಾತಿ:
F. catus
Binomial name
Felis catus
(Linnaeus, 1758)
Synonyms

Felis catus domestica (invalid junior synonym)[೨]
Felis silvestris catus

ಹೊಸದಾಗಿ ಹುಟ್ಟಿದ ಮರಿ
A 19th century drawing of a tabby cat
Diagram of the general anatomy of a male
Cat skull
The hooked papillae on a cat's tongue act like a hairbrush to help clean and detangle fur.
Indicating aggression
The African wildcat, Felis silvestris lybica, is the ancestor of the domestic cat.
Eating a house sparrow
Play fight between kittens, age 14 weeks
Carrying a rabbit.
ಬೆಕ್ಕು

ಇತಿವೃತ್ತ[ಬದಲಾಯಿಸಿ]

ಈ ಗುಂಪಿನಲ್ಲಿ ಹಲವಾರು ಜಾತಿಗಳಿದ್ದು ಇವುಗಳ ಪೈಕಿ ಫೆಲಿಸ್ ಎಂಬ ಜಾತಿಗೆ ಸೇರುವ ಎಲ್ಲ ಪ್ರಭೇದಗಳನ್ನೂ ಬೆಕ್ಕುಗಳು ಎನ್ನುತ್ತಾರೆ. ಈ ಜಾತಿಗೆ ಹುಲಿ, ಸಿಂಹ, ಕಾಡುಬೆಕ್ಕು ಮುಂತಾದ ಪ್ರಾಣಿಗಳೂ ಸೇರಿವೆ. ಇವುಗಳಿಗೆ ಮುಂಗಾಲಿನಲ್ಲಿ ಐದು ಹಾಗೂ ಹಿಂಗಾಲಿನಲ್ಲಿ ನಾಲ್ಕು ಬೆರಳುಗಳಿರುವುವು. ಬೆರಳುಗಳ ತುದಿಯಲ್ಲಿ ಹರಿತ ಪಂಜುಗಳಿವೆ. ಬೆಕ್ಕು ಎಂದು ಪರಿಚಿತವಾಗಿರುವ ಮತ್ತು ಮನೆಗಳಲ್ಲಿ ಸಾಕುವ ಪ್ರಾಣಿ ಫೆಲಿಸ್ ಡೊಮೆಸ್ಟಿಕ ಎಂಬ ಪ್ರಭೇದಕ್ಕೆ ಸೇರುತ್ತದೆ. 

ಇದೇ ನಿಜವಾದ ಸಾಕು ಬೆಕ್ಕು.ಸಾಕು ಬೆಕ್ಕುಗಳೆಲ್ಲವೂ ಫೆಲಿಸ್ ಡೊಮೆಸ್ಟಿಕ ಪ್ರಭೇದಕ್ಕೆ ಸೇರುತ್ತವಾದರೂ ಇವುಗಳಲ್ಲಿ ಹಲವಾರು ತಳಿಗಳಿವೆ. ಸಾಮಾನ್ಯವಾಗಿ ಇವನ್ನು ಮೂರು ವಿಧಗಳಾಗಿ ವಿಂಗಡಿಸಬಹುದು: ನೀಳ (ಉದ್ದ) ಕೂದಲಿನವು, ಚಿಕ್ಕ ಕೂದಲಿನವು, ವಿದೇಶಿ ಚಿಕ್ಕ ಕೂದಲಿನವು. ಇವುಗಳ ಪೈಕಿ ನೀಳಕೂದಲಿನ ಬೆಕ್ಕುಗಳನ್ನು ಶ್ರೀಮಂತ ಬೆಕ್ಕುಗಳೆಂದು ಪರಿಗಣಿಸುವುದುಂಟು. 
ಇಂದಿನ ಬೆಕ್ಕು ಫೆಲಿಸ್ ಮ್ಯಾನ್ಯುಲ್ ಎಂಬ ಪ್ರಭೇದಕ್ಕೆ ಸೇರಿರುವ ಪಲ್ಲ ಎಂಬ ಬೆಕ್ಕಿನಿಂದ ಉದಯವಾಗಿ ಮಾರ್ಪಾಡಾಯಿತು ಎಂಬ ನಂಬಿಕೆಯಿತ್ತು. ಆದರೆ ಪಲ್ಲ ಬೆಕ್ಕಿಗೆ ಅತ್ಯಂತ ದಟ್ಟ ಕೂದಲಿನ ಬಾಲವಿದ್ದು ಅದರ ಶರೀರ ಮತ್ತು ಮುಖದ ಮೇಲೆ ಬೆಕ್ಕಿನಲ್ಲಿರದ ಗುರುತುಗಳಿರುವುವು. ಈ ಕಾರಣದಿಂದ ಸಾಕು ಬೆಕ್ಕು ಪಲ್ಲ ಬೆಕ್ಕಿನಿಂದ ವಿಕಸಿಸಿದವು ಎಂಬ ನಂಬಿಕೆಯನ್ನು ಕೈಬಿಡಲಾಯಿತು.

ಬೆಕ್ಕು ಮಾಂಸಾಹಾರಿ ಪ್ರಾಣಿ[ಬದಲಾಯಿಸಿ]

 • ಸಾಮಾನ್ಯವಾಗಿ ಬೆಕ್ಕು ಮಾಂಸಾಹಾರಿ ಪ್ರಾಣಿ. ಬ್ರೆಡ್ಡು ಅಥವಾ ಅನ್ನ ತಿನ್ನಬಲ್ಲುದಾದರೂ ವಾಸ್ತವವಾಗಿ ಇದರ ದವಡೆ ಹಾಗೂ ಹಲ್ಲು ಮಾಂಸಭಕ್ಷಣೆಗೆ ಅನುಕೂಲವಾಗುವಂತೆ ಮಾರ್ಪಾಡಾಗಿವೆ. ಇಲಿ, ಅಳಿಲು, ಕೀಟ, ಮೀನು, ಪಕ್ಷಿ ಮುಂತಾದವು ಬೆಕ್ಕಿನ ಸಾಮಾನ್ಯ ಆಹಾರ. ಹೊಟ್ಟೆ ತುಂಬಿದ ಬೆಕ್ಕು ಇಲಿ ಹಿಡಿಯುವುದಿಲ್ಲ ಎಂಬುದು ತಪ್ಪು ಕಲ್ಪನೆ.
 • ಇಲಿ ಹಿಡಿಯುವುದು ಬೆಕ್ಕಿಗೆ ಆನುವಂಶಿಕವಾಗಿ ಬಂದ ಗುಣ. ಬೆಕ್ಕು ಬೇರೆ ಬೇರೆ ಪ್ರಾಣಿಗಳನ್ನು ತಿನ್ನುವುದಾದರೂ ಇಲಿ ಅಳಿಲು ಅಥವಾ ಮೊಲಗಳನ್ನು ತಿನ್ನುವುದೇ ಹೆಚ್ಚು. ಏಕೆಂದರೆ ಮೀನು ಅಥವಾ ಪಕ್ಷಿಗಳನ್ನು ಇದು ಸುಲಭವಾಗಿ ಹಿಡಿಯಲಾರದು.

ಬೆಕ್ಕಿನ ಶರೀರ ರಚನೆ[ಬದಲಾಯಿಸಿ]

 • ಯೂರೋಪಿನ ಕಾಡುಬೆಕ್ಕು ಫೆಲಿಸ್ ಸಿಲ್ವೆಸ್ಟ್ರಿಸ್ ಎಂಬ ಪ್ರಭೇದಕ್ಕೆ ಸೇರಿದೆ. ಇದು ಕಪ್ಪು ಚುಕ್ಕಿಗಳಿರುವ ಟ್ಯಾಬಿ ಎಂಬ ಸಾಕುಬೆಕ್ಕನ್ನು ಹೋಲುತ್ತದೆ. ಆದರೆ ಈ ಕಾಡು ಬೆಕ್ಕು ಬಲಿಷ್ಠವಾಗಿದೆ. ಇದಕ್ಕೆ ಸಾಕುಬೆಕ್ಕಿಗಿಂತ ದೊಡ್ಡದಾದ ತಲೆ ಹಾಗೂ ಹಲ್ಲು ಇವೆ. ತಲೆ ಮತ್ತು ಶರೀರ 60 ಸೆಂಮೀನಷ್ಟು ಉದ್ದವಾಗಿದೆ. ಬಾಲದಉದ್ದ 30 ಸೆಂಮೀ, ಇದರಲ್ಲಿ ಅಲ್ಲಲ್ಲಿ ಕಪ್ಪು ಉಂಗುರಗಳಿದ್ದು ಇದರ ತುದಿ ಕಪ್ಪಗಿದೆ.
 • ಬುಡದಿಂದ ತುದಿಯವರೆಗೂ ಇದರ ಗಾತ್ರ ಒಂದೇ ರೀತಿ ಇದೆ. ತಲೆ ಅಗಲ, ಕುಡಿಮೀಸೆ ಉಂಟು. ತುಪ್ಪಳ ಸಾಕುಬೆಕ್ಕಿನದಕ್ಕಿಂತ ದಟ್ಟವಾಗಿದೆ. ಸಾಮಾನ್ಯವಾಗಿ ಇವು ಒಂಟಿಜೀವಿಗಳು. ಸಂಭೋಗಕಾಲದಲ್ಲಿ ಮಾತ್ರ ಗಂಡು-ಹೆಣ್ಣು ಜೊತೆಯಾಗುತ್ತವೆ. ಚಿಕ್ಕ ಸ್ತನಿಗಳು, ಕೀಟಗಳು ಮತ್ತು ಪಕ್ಷಿಗಳು ಇವುಗಳ ಆಹಾರ.
 • ಇಂಗ್ಲೆಂಡಿನಲ್ಲಿ ಈಗ ಫೆಲಿಸ್ ಸಿಲ್ವೆಸ್ಟ್ರಿಸ್ ಗ್ರಾಂಪಿಯ ಎಂಬ ಪ್ರಭೇದ ಮಾತ್ರ ಉಳಿದಿದೆ. ಈ ಬೆಕ್ಕುಗಳು ಎತ್ತರದ ಹಾಗೂ ಬಂಡೆಗಳಿಂದಾವೃತವಾದ ಪ್ರದೇಶಗಳಲ್ಲಿ ವಾಸಿಸುತ್ತವೆ. ಬೆಕ್ಕು ಸಾಮಾನ್ಯವಾಗಿ ಉಷ್ಣವಲಯ ಹಾಗೂ ಸಮಶೀತೋಷ್ಣವಲಯ ಪ್ರದೇಶಗಳಲ್ಲಿ ವಾಸಿಸುತ್ತದೆ. ಅತ್ಯಂತ ಚಳಿಯಿರುವ ಶೀತವಲಯ ಅಥವಾ ಧ್ರುವ ಪ್ರದೇಶಗಳಲ್ಲಿ ಬೆಕ್ಕುಗಳು ಇಲ್ಲ. ಆದರೆ ಈ ಪ್ರದೇಶಗಳಲ್ಲಿ ಹಾಗೂ ಟೆಬೆಟ್ಟಿನಲ್ಲಿ ಬೆಕ್ಕಿನ ಕುಟುಂಬದ ಹಿಮಕರಡಿಗಳು ಇವೆ.
 • ಬೆಕ್ಕುಗಳಿಗೆ ಮಾನವನಂತೆ ಎರಡು ರೀತಿಯ ಹಲ್ಲುಗಳಿವೆ. ಮರಿಗಳಿಗೆ ಆರು ತಿಂಗಳಾದಾಗ ಹಾಲು ಹಲ್ಲುಗಳು ಬಿದ್ದು ಎರಡನೆಯ ಜೊತೆ ಅಂದರೆ ಸ್ಥಿರ ಹಲ್ಲುಗಳು ಬರುತ್ತವೆ. ಮೇಲ್ದವಡೆಯವು ಮುಂಭಾಗದ ಮೂರು ಜೊತೆ ಹಲ್ಲುಗಳು ಚಿಕ್ಕದಾಗಿದ್ದು ಸಾಮಾನ್ಯ ಆಕಾರದ್ದಾಗಿವೆ. ಇವು ಬಾಚಿಹಲ್ಲುಗಳು, ಕೆಳದವಡೆಯಲ್ಲಿ ಕೂಡ ಆರು ಬಾಚಿಹಲ್ಲುಗಳಿವೆ. ಇವು ಮೇಲ್ದವಡೆಯವುಗಳಿಗಿಂತ ಚಿಕ್ಕವು.
 • ಬಾಚಿಹಲ್ಲುಗಳು ಪ್ರಾಣಿಗಳನ್ನು ಇರಿದು ಸಾಯಿಸಲು ಅನುಕೂಲವಾಗಿವೆ. ಮುಂದಿನ ಒಂದು ಜೊತೆ ಹಲ್ಲುಗಳು ಬಲಿಷ್ಠ ಮತ್ತು ದಪ್ಪವಾಗಿ ಮುಂಭಾಗದಲ್ಲಿ ಬಾಗಿಕೊಂಡಿದ್ದು ತುದಿಯಲ್ಲಿ ಚೂಪಾಗಿರುತ್ತದೆ. ಇವುಗಳಿಗೆ ಕೋರೆಹಲ್ಲು ಎಂದು ಹೆಸರು. ಇವು ಮಾಂಸವನ್ನು ಅಗಿದು ಕತ್ತರಿಸಲು ಸಹಾಯಕವಾಗಿವೆ.
 • ದವಡೆಯ ಹಾಗೂ ಮುಂದವಡೆಯ ಹಲ್ಲುಗಳು ಮಾಂಸವನ್ನು ಅಗಿಯಲು ಸಹಾಯಕವಲ್ಲವಾದರೂ ಮೇಲಿನದವಡೆಯ ಕೊನೆಯ ಹಲ್ಲು ಮತ್ತು ಕೆಳಗಿನ ದವಡೆಯ ಮೊದಲನೆಯ ಹಲ್ಲು ವಿಶೇಷವಾಗಿ ಮಾರ್ಪಾಡಾಗಿದ್ದು ಮಾಂಸ ಕತ್ತರಿಸಲು ಸಹಾಯಕ ವಾಗುತ್ತವೆ. ಇವುಗಳಿಗೆ ಕ್ಯಾರ್ನೆಸಿಯಲ್ ಹಲ್ಲು ಎಂದು ಹೆಸರು. ಮೇಲ್ಭಾಗದ ಕ್ಯಾರ್ನೆಸಿಯಲ್ ಹಲ್ಲಿನ ಹೊರಭಾಗದ ಏಣಿನಿಂದ ಇವುಗಳ ಬೆಳವಣಿಗೆಯಾಗಿದೆ. ಪ್ಯಾರಾಕೋನ್ ಎಂಬ ಏಣು ಮತ್ತು ಪ್ರೋಟೋಕೋನುಗಳು ಒಂದೇ ಅಲಗಿನಂತೆ ಇರುತ್ತವೆ. * ಪ್ರೋಟೊಕೋನ್ ಮಾತ್ರ ಹಲ್ಲಿನ ಮುಂಭಾಗದಲ್ಲಿ ಒಳಕ್ಕೆ ಬಾಗಿರುವ ಏಣಿನಂತೆ ಇರುವುದು. ಇದು ಇನ್ನೊಂದು ಅಲಗಿನಂತೆ ಇದೆ. ಕೆಳದವಡೆಯಲ್ಲಿ ಪ್ಯಾರಾಕೋನ್ ಮತ್ತು ಪ್ರೋಟೋಕೋನ್ ಉಂಟುಮಾಡಿರುವ ಅಲಗಿನ ಮೇಲೆ ಮೇಲಿನದು ತಡೆಯುತ್ತದೆ. ಇದರಿಂದ ಮಾಂಸಭಕ್ಷಣೆ ಸುಸೂತ್ರವಾಗುತ್ತದೆ.
 • ಮುಂದಗಡೆಯ ಹಾಗೂ ಇತರ ದವಡೆಯ ಹಲ್ಲುಗಳು ಸಾಮಾನ್ಯವಾಗಿ ಕ್ಷೀಣವಾಗಿವೆ. ಮುಂದವಡೆ ಹಲ್ಲುಗಳು ಅಸ್ತಿತ್ವದಲ್ಲಿದೆ. ದವಡೆ ಹಲ್ಲುಗಳಂತೂ ಬಲುಭಾಗ ನಶಿಸಿಯೇ ಹೋಗಿವೆ. ಬೆಕ್ಕಿನ ದಂತ ಸೂತ್ರ ಹೀಗಿದೆ :- 3 1 3 1 / 3 1 3 1

ಬೆಕ್ಕುಗಳ ದವಡೆಗಳು ಬಲಿಷ್ಠವಾಗಿವೆ. ಕೆಳದವಡೆಯಲ್ಲಿ ಒಂದೇ ಮೂಳೆ ಇದ್ದು ಮೂರು ಮಾಂಸ ಖಂಡಗಳು ಮತ್ತು ಅಸ್ಥಿಬಂಧಗಳು ಅದನ್ನು ಬಂಧಿಸಿವೆ.

 • ಮೇಲು ಮತ್ತು ಕೆಳದವಡೆಗಳು ಒಂದಕ್ಕೊಂದು ಕೀಲುಗಳಿಂದ ಸೇರಿಕೊಂಡು ಬಿಗಿಯಾಗಿ ಅಡ್ಡ ಹರಡಿದ ಚಿಲಕದಂತಿವೆ. ಇದರಿಂದ ಉಳಿದ ಸ್ಥನಿಗಳಲ್ಲಿ ಕಂಡುಬರುವಂತೆ ಬೆಕ್ಕುಗಳಲ್ಲಿ ದವಡೆಗಳ ಸುತ್ತು ಚಲನೆ ಕಂಡು ಬರುವುದಿಲ್ಲ. ದವಡೆಗಳಿಗೆ ಯುಕ್ತ ಚಲನೆ ಇಲ್ಲದಿರುವುದರಿಂದ ಟೆರಿಗಾಯಿಡ್ ಸ್ನಾಯುಗಳು ಮತ್ತು ಅವುಗಳ ಕುಳಿ ಕ್ಷೀಣವಾಗಿವೆ.
 • ಹಿಂಭಾಗದ ಅಸ್ಥಿಪಂಜರ ಬೆಕ್ಕಿನ ನೆಗೆಯುವ ಚಲನೆಗೆ ಅನುಗುಣವಾಗಿ ಉಳಿದ ಸ್ತನಿಗಳಿಗೆ ಹೊರತಾದ ಕೆಲವು ವಿಶೇಷತೆಗಳನ್ನು ಹೊಂದಿದೆ. ಕಶೇರು ಸ್ತಂಭದಲ್ಲಿ ಕಶೇರುಮಣಿಗಳು ಈ ಚಲನೆಗೆ ಅವಶ್ಯವಿರುವಂತೆ ಹೊಂದಿಕೊಂಡಿರುತ್ತದೆ. ಹೊರಭಾಗದ ನ್ಯೂರಲ್ ಮುಳ್ಳು ಎತ್ತರದಲ್ಲಿದೆ. ಬೆಕ್ಕು ನೆಗೆಯುವಾಗ ಸ್ಯಾಕ್ರೊಸ್ಟೈನಾಲಿಸ್ ಎಂಬ ಸ್ನಾಯುಗಳ ಒತ್ತಡ ಗ್ರಹಿಸುವಂತೆ ಕಶೇರು ಸ್ತಂಭವಿದೆ. ಲಂಬಾರ್ ಭಾಗದಲ್ಲಿ ಪಾಶ್ರ್ವ ಪ್ರವರ್ಧಗಳು ಅಗಲವಾಗಿವೆ.
 • ಕುತ್ತಿಗೆಯಲ್ಲಿಯೂ ಇವು ಚಲಿಸುವ ಸ್ನಾಯುಗಳಿಗಾಗಿ ಅಗಲವಾಗಿದೆ. ಕ್ಲಾವಿಕಲ್ ಕ್ಷೀಣವಾಗಿದೆ. ಕಾಡುಬೆಕ್ಕುಗಳಲ್ಲಿ ಬಾಲ ಬಲವಾಗಿ ಬೆಳೆದಿದೆ. ಇದಕ್ಕೆ ಹೋಲಿಸುವಾಗ ಸಾಕು ಬೆಕ್ಕಿನ ಬಾಲ ತೀರ ಕ್ಷೀಣವೆನಿಸುತ್ತದೆ. ಬೆಕ್ಕುಗಳಲ್ಲಿ ಅನ್ನನಾಳ ಮೊಟಕಾಗಿದೆ. ಜಠರದ ರಚನೆ ಜಟಿಲವಾಗಿಲ್ಲ. ಹಾಗೆಯೇ ಸೀಕಮ್ ಕೂಡ ಚಿಕ್ಕದಾಗಿಯೇ ಇದೆ.
 • ಉಳಿದ ಅಂಗಗಳು ಸಾಮಾನ್ಯ ರಚನೆಯಲ್ಲಿ ಸ್ತನಿಗಳ ಇತರ ಗುಂಪನ್ನು ಹೋಲುತ್ತವಾದರೂ ಕೆಲವು ಸಣ್ಣ ಪುಟ್ಟ ಮಾರ್ಪಾಡುಗಳನ್ನು ಹೊಂದಿವೆ. ಬೆಕ್ಕಿನ ಶ್ರವಣಾಂಗಗಳು ಉತ್ತಮವಾಗಿದ್ದು ಶ್ರವಣ ಶಕ್ತಿ ಚುರುಕಾಗಿದೆ. ಮಾನವನದಕ್ಕಿಂತ ಸುಮಾರು 30 ಪಾಲು ಉತ್ತಮ. ಮಾನವ ಕರ್ಣ ಸುಮಾರು 2000 ಚಕ್ರಗಳವರೆಗೆ ಗುರುತಿಸಬಲ್ಲದಾದರೆ ಬೆಕ್ಕು 60,000 ಚಕ್ರಗಳವರೆಗೆ ಗುರುತಿಸಬಲ್ಲದು.
 • ಇಷ್ಟು ಸೂಕ್ಷ್ಮ ಶ್ರವಣ ಶಕ್ತಿ ಪಡೆಯಲು ಬೆಕ್ಕಿನ ನಿಮಿರಿದ ಹೊರಕಿವಿಯೇ ಕಾರಣ. ಇದರ ಜೊತೆಗೆ ಕಿವಿಯಲ್ಲಿ 27 ಸ್ನಾಯುಗಳು ಕಿವಿಯನ್ನು ವಿವಿಧ ದಿಕ್ಕುಗಳಿಗೆ ತಿರುಗಿಸಿ ಶಬ್ದತರಂಗಗಳನ್ನು ಗ್ರಹಿಸುವಂತೆ ಸಹಾಯ ಮಾಡುತ್ತವೆ. ಕಿವಿಯಲ್ಲಿಯ ಅರ್ಧಚಂದ್ರಾಕಾರದ ಕಾಲುವೆಗಳು ಶರೀರದ ಸಮತೋಲನವನ್ನು ಕಾಯ್ದುಕೊಳ್ಳುತ್ತವೆ. ಇವುಗಳಿಂದಾಗಿ ಬೆಕ್ಕು ಜಿಗಿಯುವಾಗ ಅಥವಾ ಮರ ಏರುವಾಗ ತನ್ನ ಸಮತೋಲನವನ್ನು ಕಾಯ್ದುಕೊಳ್ಳುತ್ತದೆ.

ಚಟುವಟಿಕೆ[ಬದಲಾಯಿಸಿ]

 • ಸಾಕುಬೆಕ್ಕು ಕಾಡುಬೆಕ್ಕಿನಂತೆಯೇ ಬೆರಳುಗಳ ಮೇಲೆ ನಡೆಯಬಲ್ಲದು. ಕಾಲುಗಳಲ್ಲಿ ಮೆದು ಮೆತ್ತೆಗಳು ಇರುವುದರಿಂದ ಇದು ಚಲಿಸುವಾಗ ಶಬ್ದವಾಗುವುದಿಲ್ಲ. ಸುಲಭವಾಗಿ ಮರ ಹತ್ತಬಲ್ಲದು. ಹೀಗೆ ಎತ್ತರದ ಪ್ರದೇಶವನ್ನು ಮರವನ್ನು ಏರುವಾಗ ಉಗುರುಗಳು ತಳವನ್ನು ಭದ್ರವಾಗಿ ಹಿಡಿದು ಜಾರದಂತೆ ಸಹಾಯ ಮಾಡುತ್ತವೆ. ಅಪಾಯ ಎದುರಾದಾಗ ನಾಯಿ ಓಡಿಹೋದರೆ ಬೆಕ್ಕು ತನ್ನ ಬೆನ್ನನ್ನು ಬಿಲ್ಲಿನಂತೆ ಬಾಗಿಸಿ ಬೆನ್ನನ್ನು ಮೇಲಕ್ಕೆತ್ತುತ್ತದೆ.
 • ಹೀಗೆ ಮಾಡುವುದರಿಂದ ತನ್ನ ನಿಜ ಗಾತ್ರಕ್ಕಿಂತ ಹೆಚ್ಚು ಗಾತ್ರದ್ದಾಗಿ ಕಾಣುತ್ತದೆ. ವೈರಿಯ ಮೇಲಾಗಲೀ ತನ್ನ ಕೊಳ್ಳೆಯ ಮೇಲಾಗಲೀ ಒಮ್ಮೆಗೇ ಆಕ್ರಮಣ ಮಾಡುವುದಿಲ್ಲ. ಸಾಧ್ಯವಿದ್ದಷ್ಟು ಅದು ಅವಕಾಶ ಸಿಕ್ಕಾಗ ಮಾತ್ರ ವೈರಿಯ ಮೇಲೆ ಬಿದ್ದು ಹಲ್ಲುಗಳಿಂದ ಹಿಡಿಯುತ್ತದೆ. ಇದರಿಂದ ಬೆಕ್ಕಿನ ಬಾಯಿಗೆ ಒಮ್ಮೆ ಸಿಕ್ಕ ಕೊಳ್ಳೆ ತಪ್ಪಿಸಿಕೊಳ್ಳಲಾರದು.
 • ಬೆಕ್ಕಿಗೆ ಕತ್ತಲಿನಲ್ಲಿಯೂ ನೋಡುವ ಸಾಮಥ್ರ್ಯವಿದೆಯೆಂಬ ನಂಬಿಕೆ ಇದೆ. ವಾಸ್ತವವಾಗಿ ಪೂರ್ಣ ಕತ್ತಲಿನಲ್ಲಿ ಬೆಕ್ಕು ಕೂಡ ಕುರುಡೇ. ಸಂಪೂರ್ಣ ಕತ್ತಲಿನಲ್ಲಿ ಇದಕ್ಕೆ ದೃಷ್ಟಿ ಸಾಮಥ್ರ್ಯವಿಲ್ಲ. ಮಂದ ಬೆಳಕಿನಲ್ಲಿ ಮಾತ್ರ ಅದು ಉಳಿದ ಸಸ್ತನಿಗಳಿಗಿಂತ ಹೆಚ್ಚು ನಿರ್ದಿಷ್ಟವಾಗಿ ನೋಡಬಲ್ಲದು. ಬೆಕ್ಕಿಗೆ ಅದರ ಅಕ್ಷಿಪಟದ ಹಿಂಭಾಗದಲ್ಲಿ ಕಣ್ಣುಗುಡ್ಡೆಯ ಪೊರೆಯಲ್ಲಿ ಟಪೀಟಮ್ ಎಂಬ ಪ್ರತಿಫಲಿಸುವ ಪದರವೊಂದಿದೆ. ಇದರಿಂದ ಬೆಕ್ಕಿನ ಕಣ್ಣುಗಳು ಕತ್ತಲೆಯಲ್ಲಿ ಹೊಳೆಯುತ್ತಿರುತ್ತವೆ.
 • ಕಣ್ಣು ಪಾಪೆ ಅತಿಯಾಗಿ ಕುಗ್ಗಬಹುದು. ಮಂದ ಬೆಳಕಿನಲ್ಲಿ ಈ ಪಾಪೆ ಅಗಲವಾಗಿ ತೆರೆದಿದ್ದು ಬೆಳಕಿನ ತೀವ್ರತೆ ಜಾಸ್ತಿ ಆದಂತೆಲ್ಲ ಇದರ ವಿಸ್ತಾರ ಕಿರಿದಾಗುತ್ತದೆ. ಇದರಿಂದಲೇ ಬೆಕ್ಕುಗಳ ದೃಷ್ಟಿ ಸೂಕ್ಷ್ಮವಾಗಿರುವುದಾಗಿದೆ. ಬೆಕ್ಕಿನ ಕಣ್ಣುಗಳು ಚಲಿಸುವ ವಸ್ತುಗಳನ್ನು ಕೂಡ ನಿರ್ದಿಷ್ಟವಾಗಿ ಗುರುತಿಸಬಲ್ಲವು. ಆದರೆ ಇವುಗಳಿಗೆ ಬಿಳಿ ಮತ್ತು ಕಪ್ಪು ಬಣ್ಣಬಿಟ್ಟು ಉಳಿದವನ್ನು ಗುರುತಿಸುವ ಶಕ್ತಿ ಇಲ್ಲ.
 • ಬೆಕ್ಕು ಮಾಂಸಹಾರಿ ಪ್ರಾಣಿ ಆಗಿರುವುದರಿಂದ ಅದರ ಕಾಲುಗಳು ಒಂದೇ ಬಾರಿಗೆ ವೈರಿಯ ಮೇಲೆ ಜಿಗಿದು ಬೀಳಲು ಸಹಾಯವಾಗುವಂತೆ ಭಾರ ಹೊರಲು ಶಕ್ತವಾಗಿವೆ. ಬೆಕ್ಕಿನ ಶರೀರದಲ್ಲಿ 230 ವಿವಿಧ ಎಲುಬುಗಳಿವೆ. ಇವೆಲ್ಲವೂ ಶರೀರವನ್ನು ಎಷ್ಟಾದರೂ ಬಾಗಿಸಲು ಅನುಕೂಲವಾಗುವಂತೆ ಜೋಡಿಸಲ್ಪಟಿವೆ. ಶರೀರದ ಬಾಗುವಿಕೆಗೆ ಎರಡು ಕಾರಣಗಳಿವೆ.
 • ಮೊದಲನೆಯದಾಗಿ ಭುಜದ ಭಾಗ ಸ್ವತಂತ್ರವಾಗಿರುವುದರಿಂದ ಮುಂಗಾಲುಗಳನ್ನು ಅದು ಯಾವ ಕಡೆಗಾದರೂ ಬಾಗಿಸಬಲ್ಲದು ಎರಡನೆಯದಾಗಿ ಕೊರಳಪಟ್ಟಿಯ ಎಲುಬು ಅತಿ ಚಿಕ್ಕದಾಗಿರುವುದು. ಬಾಲದ ಭಾಗದ ಮೂಳೆಗಳು ಸಡಿಲವಾಗಿರುವುದರಿಂದ ಬಾಲವನ್ನು ಎತ್ತಕಡೆಗೆ ಬೇಕಾದರೂ ತಿರುಗಿಸಬಹುದು. ಈ ಎಲ್ಲ ಎಲುಬುಗಳೂ ಸಂಖ್ಯೆಯಲ್ಲಿ ಐನೂರಕ್ಕೂ ಹೆಚ್ಚಾಗಿರುವ ಸ್ನಾಯು ರಜ್ಜುಗಳಿಂದ ಬಿಗಿಯಲ್ಪಟ್ಟಿವೆ.

ಬೆಕ್ಕು ಚೊಕ್ಕಟ ಪ್ರಾಣಿ[ಬದಲಾಯಿಸಿ]

 • ಬೆಕ್ಕು ಚೊಕ್ಕಟ ಪ್ರಾಣಿ. ತನ್ನ ಶರೀರವನ್ನು ತಾನೇ ಚೊಕ್ಕಟಮಾಡಿ ಕೊಳ್ಳುತ್ತದೆ. ಜನಿಸಿದ ಮರಿಗಳು ತಮ್ಮ ಶರೀರವನ್ನು ಶುಚಿಗೊಳಿಸುವುದನ್ನು ತಾಯಿಯಿಂದ ಕಲಿಯುತ್ತದೆ. ಬೆಕ್ಕಿನ ತುಪ್ಪಳದಲ್ಲಿ ಕೂದಲುಗಳಿವೆ. ಮೂಗು, ಪಾದ, ಗುದದ್ವಾರ ಹಾಗೂ ಮೊಲೆಯ ತೊಟ್ಟುಗಳ ಹೊರತು ಇನ್ನುಳಿದ ಎಲ್ಲ ಭಾಗಗಳೂ ಕೂದಲಿನಿಂದಾವೃತವಾಗಿವೆ ಕಣ್ಣುಗಳ ಮೇಲ್ಭಾಗದಲ್ಲಿ, ಕಿವಿ ಹಾಗೂ ಮೂತಿಯ ಭಾಗಗಳಲ್ಲಿ ಕೂದಲು ಉದ್ದವಿದೆ.
 • ಇವುಗಳಲ್ಲಿ ಮೂತಿಯ ಭಾಗದ ಕೂದಲಿಗೆ ಕುಡಿಮೀಸೆ ಎಂದು ಹೆಸರು. ಇವು ಜ್ಞಾನವಾಹಿಗಳಂತೆ ಕೆಲಸ ಮಾಡುತ್ತವೆ.

ಲೈಂಗಿಕ ಆಸಕ್ತಿ[ಬದಲಾಯಿಸಿ]

 • ವರ್ಷದ ಎಲ್ಲ ಋತುಗಳಲ್ಲಿಯೂ ಬೆಕ್ಕಿಗೆ ಲೈಂಗಿಕ ಆಸಕ್ತಿ ಇರುತ್ತದೆ. ಹೆಣ್ಣು ಬೆಕ್ಕು ವರ್ಷದ ಯಾವ ತಿಂಗಳಲ್ಲಿಯೂ ಗರ್ಭಧಾರಣೆ ಮಾಡಬಹುದು. ಬೆಕ್ಕಿಗೆ ಐದು ತಿಂಗಳಾದಾಗ ಲೈಂಗಿಕ ಬೆಳವಣಿಗೆ ಹೊಂದಿರುತ್ತದೆ. ಹೆಣ್ಣು ಬೆಕ್ಕು ಹುಟ್ಟಿದ ಐದು ತಿಂಗಳ ತರುವಾಯ ಗರ್ಭ ಧರಿಸಬಲ್ಲದು ಇತರ ಸ್ತನಿಗಳಂತೆ ಬೆಕ್ಕಿಗೆ ಕೂಡ ಸಂಭೋಗ ಚಕ್ರ ಉಂಟು. ಪ್ರತಿಚಕ್ರದ ಮಧ್ಯೆ 3 ರಿಂದ 4 ದಿನ ಮಾತ್ರ ಹೆಣ್ಣು ಫಲವಂತವಾಗಿರುತ್ತದೆ.
 • ಈ ಸಂದರ್ಭದಲ್ಲಿ ಹೆಣ್ಣು ಗಂಡಿನ ಸಂಯೋಗವಾದರೆ ಮಾತ್ರ ಹೆಣ್ಣು ಗರ್ಭ ಧರಿಸಬಲ್ಲದು. ಹೆಣ್ಣು ಸಂಭೋಗಕ್ಕೆ ಯೋಗ್ಯವಾದಾಗ ಅತ್ತಿಂದಿತ್ತ ಅವಿಶ್ರಾಂತವಾಗಿ ಓಡಾಡುತ್ತ ವಿಚಿತ್ರವಾಗಿ ಕೂಗಲು ಪ್ರಾರಂಭಿಸುತ್ತದೆ. ಈ ಕೂಗುವಿಕೆಯೇ ಅದರ ಪ್ರಣಯ ಸಂಗೀತ. ಇದು ಸಾಮಾನ್ಯ ಕೂಗಿಗಿಂತ ಹೆಚ್ಚಿನ ದೂರದವರೆಗೆ ಪಸರಿಸುತ್ತದೆ. ಇದರಿಂದ ಆಕರ್ಷಿತವಾದ ಗಂಡು ಬೆಕ್ಕು ಹೆಣ್ಣಿನ ಸಮೀಪಕ್ಕೆ ಬರುತ್ತದೆ.
 • ಸಾಮಾನ್ಯವಾಗಿ ಗಂಡು ಬೆಕ್ಕು ಇಂಥ ಸಂದರ್ಭದಲ್ಲಿ ದೈನ್ಯವನ್ನು ವ್ಯಕ್ತ ಪಡಿಸುತ್ತದೆ. ಬಾಲವನ್ನು ಎರಡೂ ಹಿಂಗಾಲುಗಳ ಮಧ್ಯೆ ಸೇರಿಸಿಕೊಂಡು ಹೆಣ್ಣಿನ ಹಿಂಭಾಗದಲ್ಲಿ ಅಂಡಲೆಯುವುದು ಹಾಗೂ ಹೆಣ್ಣಿನ ಜನನೇಂದ್ರಿಯಗಳನ್ನು ಮೂಸುವುದು ಇವು ಗಂಡು ಬೆಕ್ಕು ತೋರಿಸುವ ಪ್ರತಿಕ್ರಿಯೆಗಳು. ಅನಂತರ ಸಂಭೋಗ ನಡೆಯುತ್ತದೆ. ಒಂದು ಋತುಚಕ್ರದಲ್ಲಿ ನಾಲ್ಕಾರು ಗಂಡು ಬೆಕ್ಕುಗಳು ಹೆಣ್ಣೊಂದನ್ನು ಸಂಭೋಗಿಸಬಹುದು.
 • ಹಾಗೆಯೇ ಒಂದೇ ಗರ್ಭದಿಂದ ಜನಿಸುವ ಮರಿಗಳು ಬೇರೆ ಬೇರೆ ತಂದೆಗಳನ್ನು ಹೊಂದುವ ಸಾಧ್ಯತೆ ಕೂಡ ಇದೆ. ಅಂದರೆ ಹೆಣ್ಣಿನ ಗರ್ಭಾಶಯದಲ್ಲಿರುವ ಅಂಡಾಣುಗಳು ಬೇರೆ ಬೇರೆ ಗಂಡಿನ ವೀರ್ಯಾಣುಗಳಿಂದ ನಿಷೇಚನಗೊಳ್ಳಬಹುದು. ಬೆಕ್ಕಿನ ಗರ್ಭದ ಅವಧಿ 59 ರಿಂದ 69 ದಿನಗಳು. ಮರಿ ಜನಿಸುವುದಕ್ಕೆ ಮೊದಲು ಬೆಕ್ಕು ಹೆಚ್ಚು ಹೆಚ್ಚು ಯಜಮಾನನನ್ನು ಆಶ್ರಯಿಸುತ್ತದೆ.
 • ಮರಿಗಳು ಗರ್ಭದಿಂದ ಹೊರಬರುವಾಗ ಚೀಲವೊಂದರಲ್ಲಿದ್ದು ತಾಯಿ ಅದನ್ನು ಛಿದ್ರಗೊಳಿಸಿ ಮರಿಗಳನ್ನು ಹೊರತೆಗೆದು ನಾಲಿಗೆಯಿಂದ ಸ್ವಚ್ಛಮಾಡುತ್ತದೆ. ಮರಿಗಳು ಜನಿಸಲು 2 ರಿಂದ 4 ಗಂಟೆ ಬೇಕು. ತಾಯಿ ಬೆಕ್ಕು ತನ್ನ ಜರಾಯು ತಿಂದಾಗ ಅದರ ಮೊಲೆಗಳಲ್ಲಿ ಹಾಲು ಸ್ವಾಭಾವಿಕವಾಗಿ ಹರಿಯುತ್ತದೆ. ಮರಿಗಳ ಕಣ್ಣುಗಳು ಎರಡು ದಿನಗಳ ತನಕ ಮುಚ್ಚಿಕೊಂಡಿರುತ್ತವೆ. ಒಂದು ಸೂಲಿನಲ್ಲಿ ಐದರಿಂದ ಆರು ಮರಿಗಳವರೆಗೆ ಜನಿಸಬಹುದು.

ಬೆಕ್ಕಿನ ಬಗೆಗಿರುವ ದಂತ ಕಥೆಗಳು[ಬದಲಾಯಿಸಿ]

 • ಬೆಕ್ಕಿನ ಇತಿಹಾಸದ ಬಗ್ಗೆ ಹಲವಾರು ದಂತಕಥೆಗಳಿವೆ. ಕ್ರಿ.ಪೂ.ಸು.3000 ವರ್ಷಗಳಷ್ಟು ಹಿಂದಿನತನಕ ಮಾಹಿತಿಗಳು ಸಿಗುತ್ತವೆ. ಈಜಿಪ್ಟಿನಲ್ಲಿ ಬೆಕ್ಕನ್ನು ಮೊತ್ತಮೊದಲಿಗೆ ಸಾಕುಪ್ರಾಣಿಯಾಗಿ ಬೆಳೆಸಲಾಯಿತು ಎಂದು ಹಲವರು ನಂಬುತ್ತಾರೆ. ಆದರೆ ಅದೇ ವೇಳೆಗೆ ಭಾರತದಲ್ಲಿ ಕೂಡ ಬೆಕ್ಕು ಸಾಕುಪ್ರಾಣಿ ಆಗಿತ್ತು ಎಂದು ಸಂಸ್ಕೃತದ ಬರಹಗಳಲ್ಲಿ ಹೇಳಲಾಗಿದೆ.
 • ಯೂರೊಪಿನಲ್ಲಿ ಬೆಕ್ಕು ಯಾವಾಗ ಸಾಕುಪ್ರಾಣಿಯಾಗಿ ಪರಿಗಣಿರವಾಯಿತು ಎಂಬುದರ ಬಗ್ಗೆ ಉಲ್ಲೇಖ ಇಲ್ಲವಾದರೂ ಫೀನೀಷಿಯನ್ನರು ಈಜಿಪ್ಟಿನಿಂದ ತಮ್ಮ ಹಡಗುಗಳಲ್ಲಿ ಬೆಕ್ಕನ್ನು ಯೂರೋಪಿಗೆ ಸಾಗಿಸಿದರು ಎಂಬ ದಾಖಲೆ ಸಿಗುತ್ತದೆ. ರೋಮನ್ನರ ಕಾಲಕ್ಕೆ ಬೆಕ್ಕು ಯೂರೋಪ್ ಖಂಡ ಪ್ರವೇಶಿಸಿರಲಿಲ್ಲ ಎಂದು ಇನ್ನು ಕೆಲವು ದಾಖಲೆಗಳಿಂದ ತಿಳಿದುಬರುತ್ತವೆ.

ಬೆಕ್ಕು ಮತ್ತು ಮಾನವ ಸಂಬಂಧ[ಬದಲಾಯಿಸಿ]

 • ಬೆಕ್ಕು ಮತ್ತು ಮಾನವ ಸಂಬಂಧ ಮಾನವನ ಸಾಂಘಿಕ ಜೀವನದ ಜೊತೆಗೆ ಬೆಳೆದಿರಬೇಕು ಹಾಗೂ ಇದು ಬೆಕ್ಕಿನಿಂದಲೇ ಆರಂಭವಾಗಿರಬೇಕು. ಪ್ರಾಚೀನ ಮಾನವನ ಶಿಬಿರಾಗ್ನಿಗಳು ಬೆಕ್ಕಿಗೆ ಬೆಚ್ಚನೆಯ ವಾತಾವರಣ ಕಲ್ಪಿಸಿ ಕೊಡುವುದರ ಜೊತೆಗೆ ಶಿಬಿರಾಗ್ನಿಗಳ ಎದುರು ಕುಳಿತು ಆತ ಸೇವಿಸುತ್ತಿದ್ದ. ಆಹಾರ ಬೆಕ್ಕಿಗೆ ಆಕರ್ಷಕವಾಗಿದ್ದು ಆ ಕಾರಣ ಆತನೊಂದಿಗೆ ಹೊಂದಿಕೊಂಡಿರಬೇಕು.
 • ಮಾನವ ಸಂಗ್ರಹಿಸಿಟ್ಟ ಪ್ರಾಣಿಗಳ ಮಾಂಸ ತಿಂದು ಹಾಳು ಮಾಡುತ್ತಿದ್ದ ಪ್ರಾಣಿಗಳನ್ನು ಬೆಕ್ಕು ನಾಶ ಮಾಡುತ್ತಿದ್ದುದರಿಂದ ಅದು ಮಾನವನಿಗೆ ಉಪಯುಕ್ತ ಸಂಗಾತಿ ಆಗಿರಬೇಕು. ಆತ ಅದನ್ನು ದೂರ ಮಾಡದೇ ಇದ್ದುದರಿಂದ ಬೆಕ್ಕು ಮಾನವ ಸಂಬಂಧ ಕುದುರಿರಬೇಕು. ಪ್ರಾಗೈತಿಹಾಸ ದೃಷ್ಟಿಯಿಂದಲೂ ಬೆಕ್ಕು ಮಾನವನಿಗೆ ಸರಿ ಸಮಾನವಾದುದು.
 • ಇದರ ಕುಟುಂಬದ ಪಳೆಯುಳಿಕೆಗಳು ಸುಮಾರು 35 ದಶಲಕ್ಷ ವರ್ಷಗಳಷ್ಟು ಹಿಂದಿನಿಂದಲೂ ದೊರೆಯುತ್ತದೆ. ಪುರಾತನ ಮಾಂಸಹಾರಿ ಪ್ರಾಣಿಯಿಂದ ವಿಕಾಸಗೊಂಡ ಬೆಕ್ಕಿನಿಂದ ಎರಡು ಕವಲೊಡೆದು ಒಂದು ಕವಲಿನಿಂದ ಇಂದಿನ ಹುಲಿ, ಸಿಂಹ, ಸಾಕುಬೆಕ್ಕು ಇತ್ಯಾದಿ ಪ್ರಾಣಿಗಳೂ ಇನ್ನೊಂದು ಕವಲಿನಿಂದ ಇಂದು ಕೇವಲ ಪಳೆಯುಳಿಕೆಗಳಾಗಿರುವ ಕತ್ತಿ ಅಲಗಿನಂತೆ ಹಲ್ಲು ಇರುವ (ಸೇಬರ್ ಹಲ್ಲುಗಳಿರುವ) ಬೆಕ್ಕುಗಳೂ ಉದಯವಾದುವು.
 • ಬೆಕ್ಕು, ಪುನುಗಿನ ಬೆಕ್ಕು ಹಾಗೂ ಮುಂಗುಸಿ ಒಂದೇ ಮೂಲದಿಂದ ವಿಕಾಸಹೊಂದಿವೆ. ಸಾಕುಬೆಕ್ಕು ಯೂರೊಪಿನ ಕಾಡುಬೆಕ್ಕನ್ನು ಹೋಲುವುದಾದರೂ ಆ ಕಾಡು ಬೆಕ್ಕಿನಿಂದ ಸಾಕುಬೆಕ್ಕು ಉದಯವಾಯಿತೇ ಎಂಬುದು ತಿಳಿಯುತ್ತಿಲ್ಲ. ರೋಮನ್ನರ ಕಾಲದಲ್ಲಿ ಇಂಗ್ಲೆಂಡಿನಲ್ಲಿ ಸಾಕುಬೆಕ್ಕುಗಳೂ ಕಡಿಮೆ ಸಂಖ್ಯೆಯಲ್ಲಿಯೂ ಕಾಡುಬೆಕ್ಕುಗಳು ಅಧಿಕ ಸಂಖ್ಯೆಯಲ್ಲಿಯೂ ಇದ್ದುವು. ಕಾಡು ನಾಶವಾಗುತ್ತ ಬಂದಂತೆ ಕಾಡುಬೆಕ್ಕುಗಳ ಸಂಖ್ಯೆ ಕಡಿಮೆಯಾಗಿ ಸಾಕುಬೆಕ್ಕುಗಳ ಸಂಖ್ಯೆ ಜಾಸ್ತಿಯಾಯಿತು ಎಂಬ ನಂಬಿಕೆ ಇದೆ.

ರೋಬೋಟ್ ಗೆ ಸ್ಪೂರ್ತಿ[ಬದಲಾಯಿಸಿ]

'ವೈಬ್ರಿಸ್ಸಾ' ಎಂಬ ತಾಂತ್ರಿಕ ಹೆಸರಿನಿಂದ ಕರೆಯಲ್ಪಡುವ 'ಇ- ವಿಸ್ಕರ್ಸ್' ಎಂಬ ಸೂಕ್ಷ್ಮ ಸಂವೇದಕವನ್ನು ವಿಜ್ಞಾನಿಗಳು ರೋಬೋಟ್ ಗಳಲ್ಲಿ ಅಳವಡಿಸಿದ್ದಾರೆ. ಇದರಿಂದಾಗಿ ರೋಬೋಟ್ ಗಳು ತಮ್ಮ ಸುತ್ತಮುತ್ತಲಿನ ಎಲ್ಲಾ ವಸ್ತುಗಳನ್ನು ಪತ್ತೆಹಚ್ಚಬಲ್ಲವೂ. ಈ ಸಂವೇದನದ ಮೂಲ ಬೆಕ್ಕಿನ ಮೀಸೆ ಎಂದು ಪರಿಗಣಿಸಲಾಗಿದೆ. ಅದರ ಸಾಮರ್ಥ್ಯವನ್ನು ಅನುಕರಿಸಿ 'ಇ -ವಿಸ್ಕರ್ಸ್' ನ್ನು ಕಂಡುಹಿಡಿಯಲಾಯಿತು. 

ಬೆಕ್ಕುಗಳು ದಿನವಿಡೀ ಆಲಸ್ಯಗಳಲ್ಲಿ ಮುಳುಗಿ ಹೋದರು, ರಾತ್ರಿಗಳಲ್ಲಿ ಚುರುಕುತನದಿಂದ ಎಲ್ಲವನ್ನು ಗ್ರಹಿಸುತ್ತದೆ. ನಮ್ಮ ಪ್ರಕಾರ ಅದರ ಗ್ರಹಿಕೆ ಕಣ್ಣಾಗಿರಬಹುದು, ಆದರೆ ನಿಜವಾಗಿ,ಅವುಗಳ ಮೀಸೆಗಳು ಕಣ್ಣಿನಂತೆ ಕೆಲಸ ಮಾಡುತ್ತದೆ. ಹೌದು. ಬೆಕ್ಕಿನ ಮೀಸೆಗಿರುವ ಅಂಗಾಂಶವು ಅನೇಕ ನರಗಳೊಂದಿಗೆ ಜೋಡಣೆಯಾಗಿದೆ. ಗಾಳಿಯಲ್ಲಿನ ಏರುಪೇರನ್ನು, ಸುತ್ತಮುತ್ತಲಿನ ಆಗು-ಹೋಗುಗಳನ್ನು ಕತ್ತಲಿನಲ್ಲಿಯೂ ಗ್ರಹಿಸುವ ಸಾಮರ್ಥ್ಯ ಬೆಕ್ಕಿನ ಮೀಸೆಗೆ ಇದೆ. 16 ರಿಂದ 24 ಮೀಸೆಗಳನ್ನು ಹೊಂದಿರುವ ಅವುಗಳು ತಮ್ಮ ಮೀಸೆಯನ್ನು ಕಳೆದುಕೊಂಡಾಗ ಒಮ್ಮೆಲೆ ದಿಗ್ಭ್ರಮೆಗೊಳ್ಳುತ್ತದೆ. ಶಬ್ದ ಮತ್ತು ವಾಸನೆಯ ಹೊರತಾಗಿ ಯಾವುದೇ ವಸ್ತುಗಳು ಕಣ್ಣಿಗೆ ಕಾಣದಿದ್ದರೂ ಗುರುತಿಸಬಲ್ಲದು. ಇದನ್ನು ಅವಲೋಕಿಸಿದ ವಿಜ್ಞಾನಿಗಳು ಅದರಂತೆ ಗ್ರಹಿಸುವ ಸಾಮರ್ಥ್ಯವನ್ನು ಉತ್ಕೃಷ್ಟ ರೋಬೋಟ್ ಗಳಿಗೆ ಅಳವಡಿಕೆ ಮಾಡಿದ್ದಾರೆ. ಜೀವ ವಿಜ್ಞಾನಕ್ಕೆ ಸಂಬಂಧಪಟ್ಟ ವಸ್ತುಗಳನ್ನು ತಯಾರಿಸುವಾಗ ಇ -ವಿಸ್ಕರ್ಸ್ ನ್ನು ಅಳವಡಿಸಿದರೆ ತುಂಬಾನೇ ಉಪಯುಕ್ತವಾಗಿರುತ್ತದೆ ಎಂದು ಬರ್ಕ್ಲಿ ಎಂಬಲ್ಲಿನ ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯದ ವಿಜ್ಞಾನಿ ಜಾವೇ ಹೇಳುತ್ತಾರೆ."ಬೆಕ್ಕುಗಳ ಮೀಸೆಯು ಹೇಗೆ ಕೆಲಸ ಮಾಡುತ್ತದೆ ಎಂದು ಪೂರ್ಣವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗಿಲ್ಲ, ಅವುಗಳ ಮೀಸೆಯನ್ನು ಕತ್ತರಿಸಿದರೆ ತಾತ್ಕಾಲಿಕವಾಗಿ ಬೆಕ್ಕುಗಳಿಗೆ ಕೈಕಾಲು ಕಟ್ಟಿದಂತಾಗುತ್ತದೆ"ಎಂದು ಎನ್ಸೈಕ್ಲೋಪಿಡಿಯ ಬ್ರಿಟಾನಿಕ್ ಹೇಳುತ್ತದೆ.ಯು ಎಸ್ ನ ಟೆಕ್ಸನ್ ನಲ್ಲಿರುವ ಸಂಶೋಧಕರು ಇ -ವಿಸ್ಕರ್ಸ್ ಎಂಬ ಕೃತಕ ಆವೃತ್ತಿಗಳನ್ನು ರಚಿಸಲು ಆಕಾರ-ಮೆಮೊರಿ ಪಾಲಿಮರ್ ಗಳನ್ನು ಬಳಸಿದರು. ಇದು ನೈಜ ವಸ್ತುವಿನ ಗುಣಲಕ್ಷಣಗಳನ್ನು ಅನುಕರಿಸುತ್ತದೆ. ನೀರಿನಲ್ಲಿನ ಮೀನಿನಿಂದ ಹಿಡಿದು,ಪ್ರಾಣಿಗಳ ಮೀಸೆಗಳು ಬಿಡುವಿಲ್ಲದೆ ಗ್ರಹಿಸುವ ಸಾಮರ್ಥ್ಯವನ್ನು ಒಳಗೊಂಡಿದೆ ಎಂಬುದು ಒಂದು ವಿಕಾಸವಾದರೆ ವಿಜ್ಞಾನಿಗಳು ರೋಬೋಟ್ ಗಳಲ್ಲಿ ಇ -ವಿಸ್ಕರ್ಸ್ ನ್ನ ಅಳವಡಿಕೆ ಮಾಡಿದ್ದು ಅತ್ಯದ್ಭುತ ವಿನ್ಯಾಸವಾಗಿದೆ.

ಸಾಹಿತ್ಯದಲ್ಲಿ ಬೆಕ್ಕಿನ ಬಗ್ಗೆ ಉಲ್ಲೇಖ[ಬದಲಾಯಿಸಿ]

 • ಸಾಹಿತ್ಯದಲ್ಲಿ ಬೆಕ್ಕಿನ ಬಗ್ಗೆ ಬಹಳ ಹಿಂದಿನಿಂದ ಉಲ್ಲೇಖವಿದೆ. ಪ್ರಾಚೀನ ಭಾರತದಲ್ಲಿ ಮಹಿಳೆಯರು ಧಾನ್ಯವನ್ನು ಇಲಿಗಳಿಂದ ಕಾಪಾಡಲು ಬೆಕ್ಕು ಸಾಕುತ್ತಿದ್ದರೆಂದು ತಿಳಿದಿದೆ. ಈಜಿಪ್ಟಿನ ಬರಹಗಳಿಂದ ಅಲ್ಲಿ ಮೊದಲಿಗೆ ಬೆಕ್ಕಿಗೆ ಮುಖ್ಯ ಸ್ಥಾನವಿತ್ತು ಎಂದು ತಿಳಿದುಬರುತ್ತದೆ. ಇದರ ರಫ್ತನ್ನು ಅಪರಾಧವೆಂದು ಅಲ್ಲಿ ಪರಿಗಣಿಸಲಾಗುತ್ತಿತ್ತು. ಇದರಿಂದ ಫೀನೀಷಿಯನ್ನರು ಬೆಕ್ಕನ್ನು ಕಳ್ಳಸಾಗಾಣಿಕೆ ಮೂಲಕ ಯೂರೊಪಿನ ವಿವಿಧ ಭಾಗಗಳಿಗೆ ಒಯ್ಯುತ್ತಿದ್ದರಂತೆ.
 • ಚೀನಾ ದೇಶದಲ್ಲಿ ರೇಷ್ಮೆಗೂಡುಗಳನ್ನು ಇಲಿಗಳಿಂದ ರಕ್ಷಿಸಲು ಕ್ರಿ.ಪೂ.100ಕ್ಕೆ ಮೊದಲೇ ಬೆಕ್ಕುಗಳನ್ನು ಉಪಯೋಗಿಸುತ್ತಿದ್ದುದರ ಬಗ್ಗೆ ಉಲ್ಲೇಖವಿದೆ. ಗ್ರೀಸ್‍ನಲ್ಲಿ ಕೂಡ ಬೆಕ್ಕು ಪ್ರಾಚೀನ ಕಾಲದಲ್ಲಿ ಇತ್ತು ಎಂದು ಪ್ರಸಿದ್ಧ ಬರಹಗಾರ ಹೆರೊಡೊಟಸ್ ಹೇಳಿದ್ದಾನೆ. ಬೆಕ್ಕನ್ನು ಕೊಲ್ಲುವವರಿಗೆ ಅಲ್ಲಿ ಮರಣದಂಡನೆ ವಿಧಿಸಲಾಗುತ್ತಿತ್ತು. ಫ್ರಾನಿನಲ್ಲಿ ಮಾತ್ರ ಸಾಕು ಬೆಕ್ಕುಗಳು ಕ್ರಿ.ಶ. 13ನೆಯ ಶತಮಾನದ ಅನಂತರ ಕಂಡುಬಂದುವು.
 • ಬೆಕ್ಕುಗಳನ್ನು ಅವುಗಳಿಂದಾಗುವ ಉಪಯೋಗಕ್ಕೋಸ್ಕರ ಕೆಲವರು ಸಾಕುತ್ತಾರೆ. ಕೆಲವರು ಹವ್ಯಾಸಕ್ಕಾಗಿಯೂ ಸಾಕುತ್ತಾರೆ. ಹೀಗೆ ಸಾಕಿದ ಬೆಕ್ಕುಗಳನ್ನು ಪ್ರದರ್ಶಿಸುವವರು ಇದ್ದಾರೆ. ಈ ಪ್ರದರ್ಶನಗಳಲ್ಲಿ ಆಯ್ಕೆಯಾದ ಬೆಕ್ಕುಗಳಿಗೆ ಬಹುಮಾನಗಳನ್ನು ಪದಕರೂಪದಲ್ಲಿ ನೀಡಲಾಗುತ್ತದೆ.
 • ಕೆಲವು ದೇಶಗಳಲ್ಲಿ ಕಾನೂನಿನ ಮೂಲಕ ಬೆಕ್ಕನ್ನು ಕೊಲ್ಲವುದನ್ನು ನಿಷೇಧಿಸಲಾಗಿದ್ದರೆ ಇನ್ನು ಕೆಲವು ದೇಶಗಳಲ್ಲಿ ಬೆಕ್ಕನ್ನು ಕೊಲ್ಲುವುದು ಮಹಾಪರಾಧವೆಂದು ಪರಿಗಣಿಸಲಾಗಿದೆ. ಇತರ ಕೆಲವು ದೇಶಗಳಲ್ಲಿ ಬೆಕ್ಕನ್ನು ಕೊಲ್ಲುವುದು ಅಪರಾಧವೆನ್ನಿಸುವುದಿಲ್ಲ. ಅಮೇರಿಕದಲ್ಲಿ ಬೆಕ್ಕು ವನ್ಯಜೀವಿ ಸಂರಕ್ಷಣಾ ಕಾನೂನಿಗೆ ಒಳಪಡುತ್ತದೆ. ಭಾರತದಲ್ಲಿ ಇಂಥ ಕಾನೂನು ಏನೂ ಇಲ್ಲ.

ಹೆಚ್ಚಿನ ಮಾಹಿತಿ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

 1. "Oldest Known Pet Cat? 9500-Year-Old Burial Found on Cyprus". National Geographic News. 2004-04-08. Retrieved 2007-03-06.
 2. ITIS. "ITIS Standard Report Page: Felis catus domestica".
Wikiquote
Wikiquote
ವಿಕಿಕೋಟ್ ತಾಣದಲ್ಲಿ ಈ ವಿಷಯಕ್ಕೆ ಸಂಭಂಧಪಟ್ಟ ನುಡಿಗಳು ಇವೆ:
[[wikiquote:kn:{{{1}}}|ಬೆಕ್ಕು]]
"https://kn.wikipedia.org/w/index.php?title=ಬೆಕ್ಕು&oldid=1211666" ಇಂದ ಪಡೆಯಲ್ಪಟ್ಟಿದೆ