ವಿಷಯಕ್ಕೆ ಹೋಗು

ಹಾವು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

Snakes
Temporal range:
Late CretaceousHolocene,
Western terrestrial garter snake, a species of snake from western North America.
Scientific classification e
ಕ್ಷೇತ್ರ: ಯೂಕ್ಯಾರ್ಯೋಟಾ
ಸಾಮ್ರಾಜ್ಯ: ಅನಿಮೇಲಿಯ
ವಿಭಾಗ: ಕಾರ್ಡೇಟಾ
ವರ್ಗ: ರೆಪ್ಟೀಲಿಯಾ
ಗಣ: ಸ್ಕ್ವಾಮೇಟಾ
ಏಕಮೂಲ ವರ್ಗ: ಒಫಿಡಿಯಾ
ಉಪಗಣ: ಸರ್ಪೆಂಟೀಸ್
Linnaeus, 1758
Infraorders
Approximate world distribution of snakes, all species

ಹಾವು ಒಂದು ಪ್ರಾಣಿ. ಇದು ವರ್ಟಿಬ್ರೇಟಾ ವಿಭಾಗ (ಕಶೇರುಕ - ಬೆನ್ನು ಹುರಿ ಮೂಳೆ), ರೆಪ್ಟಿಲಿಯಾ (ಸರೀಸೃಪ) ವರ್ಗ, ಸ್ಕ್ವೊಮೇಟ್ ಗಣ, ಓಫಿಡಿಯ ಉಪಗಣಕ್ಕೆ ಸೇರಿರುವ ಪ್ರಾಣಿ (ಸ್ನೇಕ್). ಹಲ್ಲಿ, ಆಮೆ, ಉಡ, ಮೊಸಳೆಗಳೂ ಇದೇ ವರ್ಗಕ್ಕೆ ಸೇರುತ್ತವೆ. ಉರಗ ಪರ್ಯಾಯನಾಮ. ನೆಲದ ಮೇಲೆ ಹರಿದಾಡುತ್ತ, ಹೊರಳುತ್ತ ಅಂಕುಡೊಂಕಾಗಿ  ಚಲಿಸುವ, ಬಿಲವಾಸೀ ಜೀವನಕ್ಕೆ ಮಾರ್ಪಾಡುಗೊಂಡು ವಿಕಾಸವಾಗಿರುವ ಕಶೇರುಕಗಳ ಒಂದು ಗುಂಪು (ಸ್ನೇಕ್). ಮರಗಳ ಮೇಲೂ ನೀರಿನಲ್ಲೂ ವಾಸಿಸುವ ಹಾವುಗಳು ಇವೆ. ಇವಕ್ಕೆ ಕಾಲು, ಭುಜಾಸ್ಥಿ, ಎದೆಮೂಳೆ ಮತ್ತು ಮೂತ್ರ ಕೋಶಗಳಿಲ್ಲ. ಹೆಚ್ಚಿನ ಸಂಖ್ಯೆಯಲ್ಲಿ ಬೆನ್ನು ಮೂಳೆ ಹಾಗೂ ಪಕ್ಕೆಲುಬುಗಳಿವೆ. ಎದೆ ಮೂಳೆ ಇಲ್ಲದ ಕಾರಣ ಪಕ್ಕೆಲುಬು ಸಡಿಲವಾಗಿದೆ. ತಲೆ ಬುರುಡೆಯ ಮೂಳೆಗಳು ಅಳ್ಳಕವಾಗಿವೆ. ಹಾಗಾಗಿ ಅವು ತಲೆಯನ್ನು ಸುಲಭವಾಗಿ ಆಡಿಸಬಹುದು. ಈ ಪ್ರಾಣಿಗಳು ಮಾಂಸಾಹಾರಿಗಳು.[]

ವೈಜ್ಞಾನಿಕ ವರ್ಗೀಕರಣ

[ಬದಲಾಯಿಸಿ]

ಸಾಮ್ರಾಜ್ಯ (ಕಿಂಗ್‍ಡಮ್): ಪ್ರಾಣಿಗಳು

ವಿಭಾಗ (ಫಾಯ್ ಲಮ್):ಕಾರ್ಡೇಟ

ಉಪ ವಿಭಾಗ: ಕಶೇರುಕ

ವರ್ಗ (ಕ್ಲಾಸ್): ಸರೀಸೃಪಗಳು

ಗಣ (Order): ಸ್ಕ್ವಾಮಾಟ

ಹಾವು

ಹಾವುಗಳ ಪಳೆಯುಳಿಕೆಗಳು ದೊರೆಯುವುದು ಅಪರೂಪ. ದೊರೆತ ಪಳೆಯುಳಿಕೆಗಳಲ್ಲಿ ಅತ್ಯಂತ ಹಳೆಯದು ಎಂದರೆ ಸುಮಾರು ೧೧೨ ರಿಂದ ೯೪ ಮಿಲಿಯ ವರ್ಷಗಳಷ್ಟು ಪ್ರಾಚೀನವಾದುದು.[] ಶರೀರಶಾಸ್ತ್ರದ ಅಧ್ಯಯನದಿಂದ ಹಾವುಗಳು ಹಲ್ಲಿಗಳ ಜಾತಿಯಿಂದ ಉಗಮವಾಗಿರುತ್ತವೆ.[]: 11 [] ಸುಮಾರು ೧೫ ಕುಟುಂಬಕ್ಕೆ ಸೇರಿದ ೨೯೦೦ಕ್ಕೂ ಹೆಚ್ಚು ಜಾತಿಯ ಹಾವುಗಳು ಪ್ರಪಂಚದಾದ್ಯಂತ ಕಾಣಸಿಗುತ್ತವೆ. ಅಂಟಾರ್ಟಿಕವನ್ನು ಹೊರತುಪಡಿಸಿ ಉಳಿದ ಎಲ್ಲಾ ಖಂಡಗಳಲ್ಲಿಯೂ, ಸಮುದ್ರ ಹಾಗೂ ಸುಮಾರು ೧೬೦೦೦ ಅಡಿ ಎತ್ತರದಲ್ಲಿ ಹಿಮಾಲಯ ಪರ್ವತಶ್ರೇಣಿಯಲ್ಲಿ ಕೂಡ ಹಾವುಗಳು ಕಾಣಸಿಗುತ್ತವೆ.[][]

ಜೀವಶಾಸ್ತ್ರ

[ಬದಲಾಯಿಸಿ]

ಹಾವಿನ ಶರೀರ ಉರುಳೆ ಆಕಾರದಲ್ಲಿದೆ. ಉದ್ದ 12 ಸೆಂಮೀ-10ಮೀ ವರೆಗೂ ಇರುವುದು. ಮಣ್ಣುಹಾವು, ಇಮ್ಮಡಿಗನ ಹಾವು ಕೇವಲ 12-15 ಸೆಂಮೀ ಉದ್ದವಿದ್ದರೆ ನಾಗರ ಹಾವು 160-175 ಸೆಂಮೀ ವರೆಗೂ ಬೆಳೆಯುತ್ತದೆ. ಹೆಬ್ಬಾವಂತೂ 6-7 ಮೀ ಉದ್ದ ಬೆಳೆಯಬಲ್ಲದು.[] ದಕ್ಷಿಣ ಅಮೇರಿಕದಲ್ಲಿ ವಾಸಿಸುವ ಅನಕೊಂಡಾಗಳು 10 ಮೀಟರಿಗಿಂತಲೂ ಹೆಚ್ಚು ಉದ್ದವಿರುತ್ತವೆ.

ಆವಾಸಸ್ಥಾನ

[ಬದಲಾಯಿಸಿ]

ಧ್ರುವ ಪ್ರದೇಶಗಳನ್ನು ಹೊರತುಪಡಿಸಿ ಇನ್ನುಳಿದ ಭೂಭಾಗದ ಎಲ್ಲ ಪ್ರದೇಶಗಳಲ್ಲೂ ಹಾವುಗಳಿವೆ. ಆದರೆ ನಿರ್ದಿಷ್ಟ ಪ್ರಭೇದಗಳು ನಿರ್ದಿಷ್ಟ ಪ್ರದೇಶಗಳಲ್ಲಿ ಮಾತ್ರ ವಾಸಿಸುತ್ತವೆ. ಉಷ್ಣವಲಯದಲ್ಲಿ  ಹಾವುಗಳ ಸಂಖ್ಯೆ ಹೆಚ್ಚು. ವಿವಿಧ ಜಾತಿಯ ಹಾವುಗಳು ಇಲ್ಲಿ ಕಾಣಸಿಗುತ್ತವೆ. ಸಮಭಾಜಕವೃತ್ತದಿಂದ ದಕ್ಷಿಣ ಅಥವಾ ಉತ್ತರಕ್ಕೆ ದೂರ ಸರಿದಂತೆ ಉರಗ ಪ್ರಭೇದಗಳ ಸಂಖ್ಯೆ ಕಡಿಮೆಯಾಗುತ್ತದೆ. ಇಡೀ ಭೂಮಂಡಲದ ಮೇಲೆ 3000ಕ್ಕೂ ಹೆಚ್ಚು ಪ್ರಭೇದಗಳಿವೆ ಎಂದು ಅಂದಾಜಿದೆ. ಆದರೂ ನ್ಯೂಜಿಲ್ಯಾಂಡ್ ಮತ್ತು ಹವಾಯಿ ದ್ವೀಪಗಳಲ್ಲಿ ಹಾವುಗಳಿಲ್ಲವೆಂಬುದು ಗಮನಾರ್ಹ.

ದಟ್ಟಕಾಡು, ಹುಲ್ಲುಗಾವಲು, ಮರಳುಗಾಡುಗಳಲ್ಲಿ ಬಿಲ, ಪೊಟರೆ, ತರಗೆಲೆಗಳ ರಾಶಿ, ಹುಲ್ಲುಗಾವಲು, ಮರಗಳ ಪೊದರು, ಸಿಹಿನೀರಿನ ಕೊಳ, ಕೆರೆ, ನದಿ ಮುಂತಾದೆಡೆ ವಾಸಿಸುವ ವಿವಿಧ ಪ್ರಭೇದದ ಹಾವುಗಳನ್ನು ಕಾಣಬಹುದು. ಸಿಹಿನೀರಿನಲ್ಲಿ ವಾಸಿಸುವ ಹಾವುಗಳೆಲ್ಲವೂ ವಿಷರಹಿತ ನಿರುಪದ್ರವಿ ಪ್ರಾಣಿಗಳು. ಸಮುದ್ರ ಮಹಾಸಾಗರಗಳಲ್ಲಿ ವಾಸಿಸುವ ಹಾವುಗಳು ಬಲು ವಿಷಯುಕ್ತ.

ಹಾವುಗಳ ಬಣ್ಣ ವರ್ಣರಂಜಿತ ಮತ್ತು ವೈವಿಧ್ಯಮಯ. ಮೇಲ್ಭಾಗದಲ್ಲಿ ಕಪ್ಪು, ಕಂದು, ಹಳದಿ ಅಥವಾ ಗೋದಿ ಬಣ್ಣ, ಕೆಳಭಾಗದಲ್ಲಿ ಬಿಳಿ ಇಲ್ಲವೆ ತಿಳಿಹಳದಿ ಬಣ್ಣ. ಕೆಲ ಹಾವುಗಳ ಬಣ್ಣ ಅವು ವಾಸಿಸುವ ಪರಿಸರದ ಬಣ್ಣವನ್ನೇ ಹೋಲುತ್ತದೆ. ಗಿಡಗಳ ಪೊದೆಯಲ್ಲಿ ವಾಸಿಸುವ ಹಸುರುಹಾವು, ಕುಳಿಮಂಡಲ ಹಾವುಗಳ ಬಣ್ಣ ಹಸುರು;  ಮರಳಿನ ಇಲ್ಲವೆ ಒಣಗಿದ ತರಗೆಲೆಗಳ ಬಣ್ಣದ ಹಾವುಗಳೂ ಇವೆ. ಕಪ್ಪು, ಕೆಂಪು, ಹಳದಿ ಅಥವಾ ಬಿಳಿ ಪಟ್ಟಿಗಳು, ಅಥವಾ ವಿವಿದ ವರ್ಣದ ಉಂಗುರಗಳು ಶರೀರದ ತುಂಬೆಲ್ಲ ಆವರಿಸಿ ನೋಡುಗರನ್ನು ರಂಜಿಸುವ ಬಣ್ಣದ ಹಾವುಗಳೂ ಇವೆ.

ಶರೀರರಚನೆ

[ಬದಲಾಯಿಸಿ]

ಹಾವಿನ ಶರೀರದ ಹೊರಭಾಗದಲ್ಲಿ ಕೈ, ಕಾಲುಗಳಂಥ ಯಾವುದೇ ಅಂಗಗಳಿರುವುದಿಲ್ಲ. ಆದ್ದರಿಂದ ಅದು ನೆಲದಮೇಲೆ ಉದರ ಅಥವಾ ಕೆಳಭಾಗದಿಂದ ತೆವಳುತ್ತ ಮುಂದೆ ಸಾಗುತ್ತದೆ. ಕೈಕಾಲುಗಳಿಲ್ಲದಿದ್ದರೂ ಬೆನ್ನುಮೂಳೆ, ಪಕ್ಕೆಲುಬುಗಳು ವಿಭಿನ್ನವಾಗಿ ಮಾರ್ಪಾಡಾಗಿರುವುದರಿಂದ, ಶರೀರದ ಮುಂದಿನ ಆರ್ಧಭಾಗವನ್ನು ನೆಲದಿಂದ ಮೇಲಕ್ಕೆ ಎತ್ತಬಲ್ಲವು. ದೂರದಿಂದ ನೋಡಲು ನುಣುಪಾದ ಮಿರಿಮಿರಿ ಮಿಂಚುವ ಶರೀರವಿದ್ದಂತೆ ಕಂಡರೂ ಶರೀರದ ತುಂಬೆಲ್ಲ ಹೊರಚರ್ಮದಿಂದ ಬೆಳೆದ ವಿವಿಧ ಆಕಾರದ ಹೊರಪುಗಳಿರುತ್ತವೆ. ಬೆಳೆವಣಿಗೆಯಿಲ್ಲದ ಹೊರಚರ್ಮದ ಭಾಗವನ್ನು ಆಗಾಗ್ಗೆ ಹಾವು ಕಳಚಿ ಹೊಸ ಚರ್ಮವನ್ನು ಪಡೆಯುತ್ತದೆ. ಇದನ್ನು ಪೊರೆ ಕಳಚುವುದು ಅಥವಾ ಉರ್ಚುವುದು ಎನ್ನುತ್ತಾರೆ. ಹಾವು ಬೆಳೆಯುವ ವರ್ಷಗಳಲ್ಲಿ ಹೆಚ್ಚು ಬಾರಿಯೂ, ವೃದ್ಧಾಪ್ಯಕ್ಕೆ ಕಾಲಿರುಸುತಿದ್ದಂತೆ ಕಡಿಮೆಬಾರಿಯೂ ಪೊರೆ ಉರ್ಚುತ್ತದೆ.[] ಪೊರೆ ಉರ್ಚಿದ ಬಳಿಕ ಬೆಳೆಯುವ ಚರ್ಮದ ಮೇಲ್ಮೈ ಹಳೆಯ ಚರ್ಮಕ್ಕಿಂತ ತುಸು ವಿಸ್ತಾರವಿರುವುದರಿಂದ ಮತ್ತೆ ಶರೀರದ ಒಳಭಾಗದ ಅಂಗಗಳು ಬೆಳೆಯಲು ಅವಕಾಶವಾಗುತ್ತದೆ.

ಹಾವಿನ ರೆಪ್ಪೆಗಳು ಒಂದಕ್ಕೊಂದು ಕೂಡಿಕೊಂಡಿರುತ್ತವೆ. ಅವು ಅಲುಗಾಡುವುದಿಲ್ಲ. ಕಣ್ಣಿನ ಹೊರಭಾಗದಲ್ಲಿ ಪಾರದರ್ಶಕ ತೊಪ್ಪಿಯಂತಿರುವ ವಸ್ತು ಆವರಿಸಿರುತ್ತದೆ. ಎಂದೇ ಹಾವು ಸದಾ ಕಣ್ಣು ತೆರೆದಿರುವಂತೆ ಭಾಸವಾಗುತ್ತದೆ. ಹೀಗಾಗಿ ಹಾವು ನಿದ್ರಿಸುತ್ತಿದೆಯೇ ಎಚ್ಚರದಿಂದಿದೆಯೇ ಎಂಬುದು ತಿಳಿಯುವುದಿಲ್ಲ. ಹಾವುಗಳ ದೃಷ್ಟಿ ಮಂದ. ಮುಂದಿರುವ ವಸ್ತುಗಳನ್ನು ಸರಿಯಾಗಿ ಗುರುತಿಸಲಾರವು ಮತ್ತು ಬಣ್ಣಗಳು ಕಾಣುವುದಿಲ್ಲ (ವರ್ಣಾಂಧತೆ ಇದೆ). ಹೊರಕಿವಿಗಳಿಲ್ಲ. ಕಿವಿತಮಟೆಯೂ ಇಲ್ಲ. ಕೇವಲ ಒಳಕಿವಿ ಮಾತ್ರ ಇರುತ್ತದೆ. ಆದ್ದರಿಂದ ಹಾವುಗಳಿಗೆ ಗಾಳಿಯ ಮೂಲಕ ಪ್ರಸಾರವಾಗುವ ಯಾವ ಶಬ್ದವೂ ಕೇಳಿಸಲಾರದು. ಭೂಮಿಯ ಮೇಲುಂಟಾಗುವ ಕಂಪನಗಳನ್ನು ಅವು ಗ್ರಹಿಸಬಲ್ಲವು.

ಹಾವಿನ ಶರೀರ ಉರುಳೆ ಆಕೃತಿಯಲ್ಲಿದೆ. ಅದನ್ನು ತಲೆ, ಮುಂಡ ಹಾಗೂ ಬಾಲ ಎಂದು ಮೂರು ಭಾಗಗಳಾಗಿ ವಿಂಗಡಿಸಬಹುದು. ಸಾಮಾನ್ಯವಾಗಿ ತಲೆ ತ್ರಿಕೋಣಾಕಾರವಾಗಿದ್ದು ಅದರ ಮುಂಭಾಗ ಚೂಪಾಗಿರುತ್ತದೆ. ಹಲವು ಪ್ರಭೇದಗಳಲ್ಲಿ ಮುಂಭಾಗ ಅರ್ಧವೃತ್ತಾಕಾರದಲ್ಲಿ ಬಾಗಿದೆ. ಸಾಮಾನ್ಯವಾಗಿ ಸಣ್ಣ ಗಾತ್ರದ ಹಾವುಗಳಲ್ಲಿ ತಲೆಯ ಭಾಗ ಶರೀರದ ಉಳಿದ ಭಾಗಕ್ಕಿಂತ ಸ್ವಲ್ಪ ದಪ್ಪ. ರುಂಡ ಮತ್ತು ಬಾಲದ ಭಾಗಗಳನ್ನು ಪ್ರತ್ಯೇಕವಾಗಿ ಗುರುತಿಸಲು ಸಾಧ್ಯವಿಲ್ಲ. ಆದರೆ ಗುದದ್ವಾರದ ಹಿಂಭಾಗವನ್ನು ಬಾಲವೆಂದು ಹೇಳುತ್ತೇವೆ. ಶರೀರದ ಹಿಂಭಾಗಕ್ಕೆ ಸರಿದಂತೆ ಬಹುತೇಕ ಹಾವುಗಳ ಬಾಲದ ಗಾತ್ರ ಕಡಿಮೆಯಾಗುತ್ತ ತುದಿ ಚಿಕ್ಕದಾಗಿರುತ್ತದೆ. ಇಮ್ಮಡಿಗನ ಹಾವಿನ ಬಾಲ ಮೊಂಡು. ಸಾಗರವಾಸೀ ಹಾವುಗಳ ಬಾಲದ ತುದಿ ಮೇಲಿನಿಂದ ಕೆಳಭಾಗಕ್ಕೆ ಚಪ್ಪಟೆಯಾಗಿರುತ್ತದೆ.

ಹಾವಿನ ಮೇಲ್ದವಡೆಯ ಮೂಳೆಗಳು ಕೆಳದವಡೆಯ ಮೂಳೆಗಳೊಂದಿಗೆ ಸ್ವತಂತ್ರವಾಗಿ ಚಲಿಸುವಂತೆ ಕೂಡಿಕೊಂಡಿರುತ್ತವೆ. ಇದರೊಂದಿಗೆ ದವಡೆಯ ಮಾಂಸಖಂಡಗಳು ಸಂಪೂರ್ಣ ಹಿಗ್ಗಿ ಮತ್ತು ಕುಗ್ಗಬಲ್ಲವಾದ್ದರಿಂದ ಹಾವುಗಳು ಅಗಲವಾಗಿ ಬಾಯಿ ತೆರೆಯಬಲ್ಲವು. ದವಡೆಗಳು ಸಂಪೂರ್ಣ ತೆರೆದಾಗ ಅವುಗಳ ನಡುವೆ 1500-1800 ಕೋನ ಏರ್ಪಡುತ್ತದೆ. ಹೀಗಾಗಿ ತನ್ನ ಶರೀರದ ವ್ಯಾಸಕ್ಕಿಂತ ಹೆಚ್ಚು ಗಾತ್ರವುಳ್ಳ ಆಹಾರವನ್ನು ನುಂಗಬಲ್ಲದು.

ಹಾವಿನ ನಾಲಗೆ ಉದ್ದವಿದ್ದು ಮುಂಭಾಗದಲ್ಲಿ ಸೀಳುಗಳಿವೆ. ಮೇಲ್ದುಟಿ ಪುಟ್ಟ ಕಮಾನಿನಾಕಾರದಲ್ಲಿದ್ದು ಬಾಯಿ ಮುಚ್ಚಿಕೊಂಡಾಗ ಚಿಕ್ಕ ರಂಧ್ರವೇರ್ಪಡುತ್ತದೆ. ಈ ರಂಧ್ರದ ಮೂಲಕ ಹಾವು ಆಗಾಗ ನಾಲಗೆಯನ್ನು ಹೊರಚಾಚುತ್ತಿರುತ್ತದೆ. ಎರಡು ಸೀಳುಗಳು ಪ್ರತ್ಯೇಕವಾಗಿರುವಂತೆ ಕಾಣುವುದರಿಂದ ಹಾವಿಗೆ ಎರಡು ನಾಲಗೆಗಳಿವೆ ಎಂದು ತಪ್ಪಾಗಿ ಭಾವಿಸಲಾಗುತ್ತದೆ. ನಾಲಗೆ ನಾಲಗೆಯಾಗಿ ಊಪಯೋಗವಾಗುವುದಕ್ಕಿಂತಲೂ ಇವು ಇದನ್ನು ವಾಸನೆಗಾಗಿ ಬಳಸುತ್ತವೆ. ಬಾಯಿಯ ಒಳಭಾಗದಲ್ಲಿರುವ ನಾಲಗೆಯ ಸುತ್ತ ಚರ್ಮದ ಹೊದಿಕೆಯುಂಟು. ಮೇಲ್ದವಡೆಯಲ್ಲಿ ಎರಡು ಪುಟ್ಟ ಕುಳಿಗಳಿವೆ: ಜಾಕೊಬ್ಸನ್‌ನ ಅಂಗ ಎಂದು ಅದರ ಹೆಸರು. ನಾಲಗೆಯು ಈ ಅಂಗಕ್ಕೆ ಗಾಳಿಯಲ್ಲಿರುವ ರಾಸಾಯಾನಿಕಗಳನ್ನು ತಲಪಿಸುತ್ತದೆ. ಆಗ ಇದು ವಾಸನೆಯನ್ನು ಗ್ರಹಿಸುತ್ತದೆ. ಹೀಗೆ ಹಾವಿನ ನಾಲಗೆ ವಾಸನೆಯನ್ನು ಗ್ರಹಿಸುವುದರ ಮೂಲಕ ಜ್ಞಾನೇಂದ್ರಿಯದಂತೆ ಕೆಲಸ ನಿರ್ವಹಿಸುತ್ತದೆ. ವಾತಾವರಣದಲ್ಲಿನ ಅನೇಕ ಏರಿಳಿತವನ್ನು ಕೂಡ ನಾಲಗೆ ಗ್ರಹಿಸಬಲ್ಲದು.

ಬಾಯಿಯ ಹೊರತಾಗಿ ಹಾವಿನ ಶರೀರದ ಮೇಲಿರುವ ರಂಧ್ರಗಳೆಂದರೆ, ಬಾಯಿಯ ಮೇಲ್ಭಾಗದಲ್ಲಿರುವ ಒಂದು ಜೊತೆ ನೊಸಲು (ನಾಸ್ಟ್ರಿಲ್) ಮತ್ತು ಒಡಲಿನ ಕೆಳಭಾಗದಲ್ಲಿ ಬಾಲ ಭಾಗದ ಮುಂದಕ್ಕೆ ಅಡ್ಡವಾಗಿರುವ ಗುದದ್ವಾರ. ಶ್ವಾಸೋಚ್ಛಾಸ ನೊಸಲಿನ ಮೂಲಕ ನಡೆಯುತ್ತದೆ. ಅನ್ನನಾಳ, ವಿಸರ್ಜನನಾಳ ಲಿಂಗನಾಳಗಳೆಲ್ಲವೂ ದೊಡ್ಡಕರುಳಿನ ಹಿಂಭಾಗದಲ್ಲಿ ಅಂದರೆ ಗುದದ್ವಾರದ ಜೊತೆಯಲ್ಲಿಯೇ ಹೊರಕ್ಕೆ ತೆರೆದಿರುತ್ತವೆ.

ಹಾವಿಗೆ ಸುಮಾರು 300 ಬೆನ್ನುಮೂಳೆಗಳಿವೆ. ಇವುಗಳ ರಚನೆ ಆಧರಿಸಿ ಕುತ್ತಿಗೆ, ಶರೀರ ಹಾಗೂ ಬಾಲ ಭಾಗದ ಮೂಳೆಗಳೆಂದು ಗುರುತಿಸಲಾಗುತ್ತದೆ. ಶರೀರದ ಕೆಳಭಾಗದಲ್ಲಿರುವ ಅಗಲ ಹೊರಪುಗಳನ್ನು (ತಟ್ಟೆ) ಎಣಿಸಿ ಬೆನ್ನೆಲುಬಿನ ಮೂಳೆಗಳ ಸಂಖ್ಯೆಯನ್ನು ಅಂದಾಜು ಮಾಡಬಹುದು. ಏಕೆಂದರೆ ಹೊರಗಿನ ಒಂದು ತಟ್ಟೆಗೆ ಸಮವಾಗಿ ಬೆನ್ನೆಲುಬಿನಲ್ಲಿ ಒಂದು ಎಲುಬು ಇರುವುದು. ಈ ಎಲುಬುಗಳು ಒಂದಕ್ಕೊಂದು ನಯವಾಗಿ ಕೂಡಿಕೊಂಡಿರುವುದರಿಂದ ಹಾವು ಚಲಿಸುವಾಗ ಬೆನ್ನಲುಬು ಸುಲಭವಾಗಿ ಬಾಗಬಲ್ಲುದು. ಬೆನ್ನೆಲುಬಿನ ಮೂಳೆಯ ಎರಡೂ ಪಕ್ಕಗಳಲ್ಲಿ ಪಕ್ಕೆಲುಬುಗಳಿವೆ. ಆದರೆ ಮಾನವನನ್ನೊಳಗೊಂಡಂತೆ ಸ್ತನಿಗಳಲ್ಲಿ ಕಂಡುಬರುವ ಎದೆಮೂಳೆ (ಸ್ಟರ್ನಮ್) ಇರುವುದಿಲ್ಲ. ಇಲಾಪಡೇ ಎಂಬ ಕುಟುಂಬಕ್ಕೆ ಸೇರುವ ನಾಗರಹಾವು, ಕಾಳಿಂಗಸರ್ಪ ಹಾಗೂ ಹವಳಸರ್ಪ ಮುಂತಾದವು ತಲೆಭಾಗದ ಪಕ್ಕೆಲುಬುಗಳನ್ನು ವಿಶಾಲವಾಗಿ ಹೊರಚಾಚುವುದರಿಂದ ಹೆಡೆ ಅಗಲವಾಗಿ ತೆರೆದುಕೊಳ್ಳುತ್ತದೆ.

ಪಕ್ಕೆಲುಬುಗಳು ಎಡಬಲಗಳಲ್ಲಿ ಚರ್ಮಕ್ಕೆ ತೀರ ನಿಕಟವಾಗಿ ಮಾಂಸಖಂಡಗಳೊಂದಿಗೆ ಬಂಧಿಸಿಕೊಂಡಿರುತ್ತವೆ. ಹಾವು ಚಲಿಸುವಾಗ ಪಕ್ಕೆಲುಬುಗಳ ತುದಿಗಳು ನೆಲಕ್ಕೆ ಒತ್ತುವುದರಿಂದ ಚಲನೆಗೆ ಆಸರೆ ಸಿಕ್ಕಂತಾಗುತ್ತದೆ. ಆದ್ದರಿಂದ ‘ಹಾವು ಪಕ್ಕೆಲುಬುಗಳಿಂದ ತೆವಳುತ್ತದೆ’ ಎಂಬ ಹೇಳಿಕೆ ಪ್ರಚಲಿತವಾಗಿದೆ.

ಹಾವಿನ ಮೇಲ್ದವಡೆಯ ಮುಂಭಾಗದಲ್ಲಿ ಹಲ್ಲುಗಳಿಲ್ಲ. ಅಲ್ಲಿಯ ಎರಡೂ ಕಡೆ ಮತ್ತು ಕೆಳದವಡೆಯಲ್ಲಿ ಸಾಲಾಗಿ ಶಂಕುವಿನಾಕಾರದ ಚೂಪಾದ ಹಲ್ಲುಗಳಿವೆ. ರಚನೆಯಲ್ಲಿ ಎಲ್ಲ ಹಲ್ಲುಗಳೂ ಒಂದೇ ರೀತಿಯಲ್ಲಿವೆ. ಇವು ಎರೆಪ್ರಾಣಿ ತಪ್ಪಿಸಿಕೊಳ್ಳದಂತೆ ಹಿಡಿಯಲು ಸಹಾಯಕವಾಗುತ್ತವೆ. ಆದರೆ ಎರೆಯನ್ನು ಅಗಿಯುವುದಕ್ಕೆ ಅಥವಾ ಜೀರ್ಣಿಸಿಕೊಳ್ಳುವುದಕ್ಕೆ ಇವು ನೆರವಾಗುವುದಿಲ್ಲ. ವಿಷಯುಕ್ತ ಹಾವುಗಳಲ್ಲಿ ಮೇಲ್ದವಡೆಯ ಮುಂಭಾಗದ ಎರಡು ಹಲ್ಲುಗಳೂ ಮಾರ್ಪಾಡಾಗಿ ವಿಷದ ಹಲ್ಲುಗಳಾಗುತ್ತವೆ.

ಶ್ವಾಸನಾಳದ ದ್ವಾರ ನಾಲಗೆಯ ಹಿಂಭಾಗದಲ್ಲಿದೆ. ಹಾವು ಆಹಾರವನ್ನು ನುಂಗಿದೊಡನೆ ಈ ದ್ವಾರ ಮುಂದಕ್ಕೆ ಚಾಚಿಕೊಳ್ಳುವುದರಿಂದ ಬಾಯಿ ತುಂಬ ಆಹಾರ ನುಂಗಿದರೂ ಉಸಿರಾಟಕ್ಕೆ ತೊಂದರೆಯಾಗದು. ಶ್ವಾಸನಾಳ ಉದ್ದವಾಗಿದೆ. ಇದರ ಹಿಂಭಾಗದಲ್ಲಿ ಎರಡು ಅಸಮಾನ ಗಾತ್ರದ ಶ್ವಾಸಕೋಶಗಳಿವೆ. ಎಡಭಾಗದ ಶ್ವಾಸಕೋಶ ಅಪೂರ್ಣವಾಗಿ ಬೆಳೆದಿದ್ದು ಚಿಕ್ಕದಾಗಿರುತ್ತದೆ. ಉದ್ದ ಉರುಳೆ ಆಕಾರದ, ಯಾವುದೇ ಹೊರ ಅಂಗಗಳಿಲ್ಲದ ಶರೀರಕ್ಕೆ ತಕ್ಕಂತೆ ಶರೀರದ ಒಳ ಅಂಗಗಳೂ ಮಾರ್ಪಾಡಾಗಿರುತ್ತವೆ. ಉಳಿದ ಕಶೇರುಕಗಳಲ್ಲಿಯಂತೆ ಕೈಕಾಲುಗಳ ಮೂಳೆಯಾಗಲೀ ಮಾಂಸಖಂಡಗಳಾಗಲೀ ಬೆಳೆದಿರುವುದಿಲ್ಲ. ಈ ಭಾಗಕ್ಕೆ ಸಂಬಂಧಿಸಿದ ರಕ್ತನಾಳಗಳೂ ಇರುವುದಿಲ್ಲ. ಆದರೆ ಹಾವು ದ್ವಿಪಾದಿಗಳಿಂದ ಉದ್ಭವಿಸಿದವು ಎನ್ನುವುದಕ್ಕೆ ಕೆಲವು ಪುರಾವೆಗಳು ದೊರೆಯುತ್ತವೆ. ಚರ್ಮದ ಹೊರಪುಗಳು, ಅಂಗರಚನೆಯ ಜೊತೆ, ಹೆಬ್ಬಾವು, ಬೋವಾ ಮುಂತಾದ ಪ್ರಭೇದಗಳಲ್ಲಿ ಸೊಂಟದ ಮೂಳೆಯಂಥ ಮೂಳೆಗಳಿವೆ. ಇವು ಹಾವು ಚತುಷ್ಪಾದಿಗಳಿಂದ ವಿಕಾಸಗೊಂಡವು ಎಂಬುದಕ್ಕೆ ದಾಖಲೆ ಒದಗಿಸುತ್ತವೆ.

ಹಾವಿನ ಹೃದಯ ಎಡಹೃತ್ಕರಣ, ಬಲಹೃತ್ಕರಣ, ಎಡಹೃತ್ಕುಕ್ಷಿ ಮತ್ತು ಬಲಹೃತ್ಕುಕ್ಷಿಗಳೆಂಬ ನಾಲ್ಕು ಕೋಣೆಗಳಾಗಿ ಬೇರ್ಪಟ್ಟಿದೆ. ಆದರೆ ಎಡಹೃತ್ಕುಕ್ಷಿ ಮತ್ತು ಬಲಹೃತ್ಕುಕ್ಷಿಗಳ ನಡುವಿನ ಪದರ ಅಪೂರ್ಣವಾಗಿ ಬೆಳೆವಣಿಗೆಯಾಗುವುದರಿಂದ ಶುದ್ಧ ಮತ್ತು ಅಶುದ್ಧ ರಕ್ತಗಳೂ ಮಿಶ್ರವಾಗುತ್ತಿರುತ್ತವೆ. ಮೂತ್ರಪಿಂಡಗಳು ಲಿಂಗಾಂಗಗಳ ಬಲಭಾಗದಲ್ಲಿ ಮಾತ್ರ ಪೂರ್ಣ ಬೆಳೆದಿದ್ದು ಎಡಭಾಗದಲ್ಲಿ ಮಾತ್ರ ಅಪೂರ್ಣ ಬೆಳೆವಣಿಗೆಗೊಂಡಿವೆ.

ರಚನೆಯಲ್ಲಿ ಹಾವಿನ ಮಿದುಳಿನ ರಚನೆ ಸರಳವಾಗಿದ್ದು ಇನ್ನಿತರ ಸರೀಸೃಪಗಳ ಮಿದುಳನ್ನೇ ಹೋಲುತ್ತದೆ. ವಿಕಾಸದ ಹಾದಿಯಲ್ಲಿ ಇನ್ನೂ ಪ್ರಾಥಮಿಕ ಹಂತದಲ್ಲಿದೆ. ಎಂದೇ ಹಾವಿಗೆ ವಿವೇಚನೆಯಾಗಲೀ ಸ್ಮರಣಶಕ್ತಿಯಾಗಲೀ ಇಲ್ಲ. “ಹಾವಿನ ದ್ವೇಷ ಹನ್ನೆರಡು ವರ್ಷ” ಎಂಬ ನುಡಿ ಸತ್ಯವಲ್ಲ. ಕೇವಲ ಕಾಕತಾಳೀಯ. ಹಾವು ಘಟನೆಗಳನ್ನು ನೆನಪಿನಲ್ಲಿಟ್ಟುಕೊಳ್ಳಲಾಗುವುದಿಲ್ಲ.

ಜೀವನಕ್ರಮ

[ಬದಲಾಯಿಸಿ]

ಹಾವು ಚಲಿಸುವಾಗ ಸಾಮಾನ್ಯವಾಗಿ ಶರೀರದ ಕೆಳಭಾಗದಲ್ಲಿರುವ ಅಗಲವಾದ ತಟ್ಟೆಗಳು ಮುಂಭಾಗಕ್ಕೆ ಚಲಿಸಿ ಹಿಂಭಾಗ ನೆಲಕ್ಕೆ ಒತ್ತುತ್ತವೆ. ಒಂದಾದ ನಂತರ ಇನ್ನೊಂದು ತಟ್ಟೆ ಈ ರೀತಿ ಚಲಿಸಿದಾಗ ಹಾವು ಮುಂದಕ್ಕೆ ಸರಿಯುತ್ತದೆ. ಚಲನವೇಗ ಹೆಚ್ಚಾದಂತೆ ಶರೀರ ಎರಡೂ ಕಡೆ ಬಾಗುತ್ತದೆ. ಜೊತೆಗೆ ತಟ್ಟೆಗಳ ವೇಗವೂ ಏರುತ್ತದೆ. ಒಡಲು ಬಾಗುವುದರಿಂದ ಪಕ್ಕೆಲುಬುಗಳೂ ನೆಲಕ್ಕೆ ತಾಗಿ  ಚಲನೆಗೆ ಇನ್ನಷ್ಟು ವೇಗ ದೊರೆಯುತ್ತದೆ. ಹಾವು ಅಂಕುಡೊಂಕಾಗಿ ವೇಗವಾಗಿ ಮುಂದೆ ಚಲಿಸುತ್ತದೆ. ಆದರೆ ನುಣುಪಾದ ಸ್ಥಳಗಳಲ್ಲಿ ಸುಲಭವಾಗಿ ಚಲಿಸಲಾರದು.

ಬೋವಾ ಮತ್ತು ಹೆಬ್ಬಾವುಗಳು ಚಲಸುವ ವಿಧಾನವೇ ಬೇರೆ. ಇವು ಇತರ ಹಾವುಗಳಂತಲ್ಲದೇ ನೇರವಾಗಿ ಚಲಿಸುತ್ತವೆ. ಶರೀರದ ಕೆಳಭಾಗದಲ್ಲಿರುವ ಅಗಲ ತಟ್ಟೆಗಳ ಹಿಂಭಾಗವನ್ನು ನೆಲಕ್ಕೆ ಬಿಗಿಯಾಗಿ ಒತ್ತುತ್ತವೆ. ಮುಂಭಾಗವನ್ನು ಮುಂದಕ್ಕೆ ಚಾಚುತ್ತವೆ. ಬಳಿಕ ಹಿಂಭಾಗದ ಹಿಡಿತವನ್ನು ಸಡಿಲಗೊಳಿಸಿ ಮುಂದಕ್ಕೆಳೆದುಕೊಳ್ಳುತ್ತವೆ. ಎಲ್ಲ ತಟ್ಟೆಗಳಲ್ಲೂ ಒಂದಾದ ನಂತರ ಒಂದರಂತೆ ಕ್ರಮವಾಗಿ ಈ ಕ್ರಿಯೆ ನಡೆಯುವುದರಿಂದ ಹಾವು ಮುಂದಕ್ಕೆ ಹರಿಯುತ್ತದೆ. ಪಕ್ಕೆಲುಬುಗಳ ಅಥವಾ ಮಾಂಸಖಂಡಗಳ ಪಾತ್ರ ಏನೂ ಇಲ್ಲ.

ಹಾವು ನೀರಿನಲ್ಲಿ ಈಸಬಲ್ಲದು. ಸಿಹಿನೀರುವಾಸೀ ಹಾವಿಗೆ ಈಸಲು ಯಾವುದೇ ವಿಶೇಷ ಅಂಗ ಇಲ್ಲವಾದರೂ ಮಾಂಸಖಂಡಗಳ ಚಲನೆಯಿಂದ ಲೀಲಾಜಾಲವಾಗಿ ಈಸುತ್ತದೆ. ಸಾಗರವಾಸೀ ಹಾವಿನ  ಬಾಲ ಚಪ್ಪಟೆ. ಈ ಹಾವು ಮೀನುಗಾರ ದೋಣಿ ನಡೆಸುವ ಹುಟ್ಟಿನಂತೆ ನೀರನ್ನು ಹಿಂದಕ್ಕೆ ತಳ್ಳುವುದರಿಂದ ಮುಂದಕ್ಕೆ ಚಲಿಸುತ್ತದೆ.

ಕೆಲವು ಹಾವುಗಳು ಮರಏರಿ ಹಕ್ಕಿಗಳ ಗೂಡು ಹುಡುಕಿ, ಅಲ್ಲಿರುವ ಮೊಟ್ಟೆ ಹಾಗೂ ಮರಿಗಳನ್ನು ತಿಂದು ಬದುಕುತ್ತವೆ. ಕೆಲವು ಪ್ರಭೇದಗಳು ಮರದಲ್ಲಿಯ ಪೊಟರೆಗಳಲ್ಲಿ ಅಥವಾ ಮರದ ಕೊಂಬೆಗಳಿಗೆ ಸುತ್ತಿಕೊಂಡು ತಮ್ಮ ಬದುಕು ಸಾಗಿಸುತ್ತವೆ. ಇನ್ನು ಕೆಲವು ಬಾಲದಿಂದ ಕೊಂಬೆಯನ್ನು ಸುತ್ತಿ ಬಿಗಿಯಾಗಿ ಹಿಡಿದು ಸುತ್ತಮುತ್ತ ಹಾರಾಡುವ ಪಕ್ಷಿಗಳನ್ನು ಒಮ್ಮೆಲೆ ಜಿಗಿದು ಹಿಡಿದು ತಿನ್ನುತ್ತವೆ. ಕೆಲವು ಪ್ರಭೇದಗಳು ಸುಲಭವಾಗಿ ಮರವನ್ನೇರಿ, ಮತ್ತೆ ಮರದಿಂದ ಲೀಲಾಜಾಲವಾಗಿ ಕೆಳಗೆ ಜಿಗಿಯಬಲ್ಲವು.

ಇಲಿ, ಹೆಗ್ಗಣಗಳಂಥ ಪುಟ್ಟ ಸ್ತನಿಗಳು, ಪಕ್ಷಿಗಳು, ಸರೀಸೃಪಗಳು, ಕಪ್ಪೆ, ಮೀನುಗಳು, ಕೀಟಗಳು ಇತ್ಯಾದಿ ಹಾವಿನ ಆಹಾರ. ಕೆಲವು ಹಾವುಗಳು ವಿವಿಧ ಪ್ರಾಣಿ, ಪಕ್ಷಿಗಳ ಮೊಟ್ಟೆಗಳನ್ನು ತಿನ್ನುತ್ತವೆ. ಸಸ್ಯಾಹಾರೀ ಹಾವು ಇಲ್ಲವೇ ಇಲ್ಲ. ಹಾವಿನ ಹಲ್ಲುಗಳು ಮೊನಚಾಗಿದ್ದು ಸ್ವಲ್ಪ ಹಿಂದಕ್ಕೆ ಬಾಗಿರುತ್ತವೆ. ಎರೆ ಜಂತುವನ್ನು ವೇಗವಾಗಿ ಅಟ್ಟಿಸಿಕೊಂಡು ಹೋಗಿ ಬಾಯಲ್ಲಿ ಕಚ್ಚಿ ಹಿಡಿಯುತ್ತವೆ. ವಿಷಯುಕ್ತ ಹಾವುಗಳಾದರೆ, ವಿಷವನ್ನು ಚುಚ್ಚಿ ಎರೆಯನ್ನು ನಿಷ್ಕ್ರಿಯಗೊಳಿಸಿ ತರುವಾಯ ನುಂಗುತ್ತದೆ.[][] ಮೊನಚಾದ ಹಲ್ಲುಗಳ ನಡುವೆ ಪ್ರಾಣಿ ಸಿಕ್ಕಿಕೊಂಡರೆ ಅದು ತಪ್ಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಹಲ್ಲುಗಳು ಆಹಾರವನ್ನು ಅಗಿಯಲು ಯಾವುದೇ ರೀತಿ ಸಹಾಯಕವಾಗಿಲ್ಲ. ಇಡೀ ಪ್ರಾಣಿಯನ್ನೇ ನುಂಗಿ ನಿಧಾನವಾಗಿ ಗಂಟಲಿನ ಮೂಲಕ ಅನ್ನನಾಳಕ್ಕೆ ಸಾಗಿಸುತ್ತದೆ. ಶರೀರದ ಮುಂಭಾಗದ ಮಾಂಸಖಂಡಗಳು ವ್ಯಾಕೋಚಿಸಿ ಮತ್ತು ಸಂಕೋಚಿಸಿ ಆಹಾರವನ್ನು ಒಳಗೆ ತಳ್ಳುತ್ತವೆ. ಹೆಬ್ಬಾವು ಬೋವಾಗಳಂಥ ಹಾವುಗಳು ವೈರಿಯ ಸುತ್ತ ಬಿಗಿಯಾಗಿ ಸುತ್ತಿಕೊಂಡು ಅವನ್ನು ನಜ್ಜುಗುಜ್ಜಾಗಿಸಿ ಉಸಿರುಕಟ್ಟಿಸಿ ಸಾಯಿಸಿ ಮತ್ತೆ ನುಂಗುತ್ತವೆ. ಹಾವುಗಳ ಜಠರ ಗ್ರಂಥಿಗಳು ಸ್ರವಿಸುವ ಜಠರದ್ರವಗಳು ತೀಕ್ಷ್ಣವಾಗಿದ್ದು ಕೂದಲು, ಉಗುರು ಮತ್ತು ಪಕ್ಷಿಗಳ ಪುಕ್ಕಗಳನ್ನು ಹೊರತುಪಡಿಸಿ ಇನ್ನೆಲ್ಲ ವಸ್ತುಗಳನ್ನು ಜೀರ್ಣಿಸಬಲ್ಲವು.

ಬಹುತೇಕ ಹಾವುಗಳು ಸದ್ದುಮಾಡುವುದಿಲ್ಲ. ನಿಶ್ಶಬ್ದವಾಗಿ ಮಲಗಿರುತ್ತವೆ ಅಥವಾ ಹರಿದಾಡುತ್ತಿರುತ್ತವೆ. ತರಗೆಲೆಗಳ ನಡುವೆ ಸರಿಯುವಾಗ ಕೆಲವೊಮ್ಮೆ ಸದ್ದು ಹೊರಡುತ್ತದೆ. ನಾಗರಹಾವು, ಕಾಳಿಂಗಸರ್ಪದಂಥ ಕೆಲವು ಹಾವುಗಳು ಶ್ವಾಸನಾಳದ ದ್ವಾರವನ್ನು ಕುಗ್ಗಿಸಿ ಉಸಿರು ಬಿಟ್ಟಾಗ ಬುಸ್ ಎಂಬ ಶಬ್ದ ಕೇಳಿಸುತ್ತದೆ. ಉತ್ತರ ಅಮೆರಿಕದಲ್ಲಿ ಕಂಡುಬರುವ ಬುಡುಬುಡಿಕೆ ಹಾವುಗಳ ಬಾಲದ ತುದಿಯನ್ನು ಅಲ್ಲಾಡಿಸಿದಾಗ ಬುಡಬುಡಿಕೆಯ ಶಬ್ದದಂಥ ಶಬ್ದ ಹೊರಡುತ್ತದೆ.

ಸಂತಾನೋತ್ಪತ್ತಿ

[ಬದಲಾಯಿಸಿ]

ಹಾವುಗಳ ಪ್ರಣಯಕೇಳಿ ಮನಮೋಹಕವಾಗಿರುತ್ತದೆ. ಗಂಡು ಹೆಣ್ಣುಗಳು ಒಂದುಗೂಡಿ ಒಂದಕ್ಕೊಂದು ಹೆಣೆದುಕೊಳ್ಳುತ್ತ, ನೆಲಕ್ಕೆ ಹೊಸೆಯುತ್ತ, ತಲೆಎತ್ತಿ ಒಂದಕ್ಕೊಂದು ತಲೆಯ ಮೇಲೆ ತಲೆಯಿಟ್ಟು ಪ್ರಣಯನೃತ್ಯವಾಡುತ್ತವೆ. ಮುಂದೆ ಗಂಡುಹೆಣ್ಣುಗಳ ಮಿಲನವಾಗುತ್ತದೆ. ನಾಗರಹಾವು-ಕೇರೆಹಾವು ಒಂದುಗೂಡಿ ಪ್ರಣಯಕೇಳಿಯಾಡುತ್ತವೆ, ಆ ಮೈಥುನ ಕ್ರಿಯೆಯನ್ನು ನೋಡಬಾರದು ಎಂಬ ನಂಬಿಕೆ ಇದೆ. ನಿಜಸಂಗತಿ ಎಂದರೆ ನಾಗರಹಾವು (ಕೋಬ್ರ) ಮತ್ತು ಕೇರೆಹಾವು (ರ‍್ಯಾಟ್ ಸ್ನೇಕ್) ಬೇರೆಬೇರೆ ಪ್ರಭೇದದ ಹಾವುಗಳು. ಯಾವುದೇ ಜೀವಿಯಲ್ಲಿ ಭಿನ್ನ ಪ್ರಭೇದದ ಪ್ರಾಣಿಗಳ ನಡುವೆ ಪ್ರಣಯ ಕ್ರಿಯೆ ನಡೆಯುವುದಿಲ್ಲ. ಪ್ರಣಯಕೇಳಿಯಾಡುವಾಗ ಹಾವುಗಳು ಅತ್ಯಂತ ಚುರುಕಾಗಿದ್ದು ಅಡೆತಡೆಯನ್ನು ಸಹಿಸಲಾರವು. ಇಂಥ ವೇಳೆ ಆ ಬಳಿ ಸುಳಿಯುವುದು ಅಪಾಯಕ್ಕೆ ಆಹ್ವಾನ.

ಹಾವುಗಳು ಸಾಮಾನ್ಯವಾಗಿ ಮೊಟ್ಟೆಯಿಡುವ ಪ್ರಾಣಿಗಳು. ಕೆಲವು ಪ್ರಭೇದಗಳು ಒಣ ಎಲೆಗಳ ನಡುವೆ ಮೊಟ್ಟೆಯಿಡುತ್ತವೆ. ಅಲ್ಲಿಯ ಶಾಖದಿಂದ ಮೊಟ್ಟೆಗಳು ಬೆಳೆದು ಮರಿಗಳು ಹೊರಬರುತ್ತವೆ. ಇನ್ನು ಕೆಲ ಹಾವುಗಳು ಕಲ್ಲು ಪೊಟರೆಗಳ ನಡುವೆ ಮೊಟ್ಟೆಯಿಟ್ಟು ಅವು ಬೆಳೆದು ಮರಿ ಹೊರಬರುವ ತನಕ ಕಾಯುತ್ತವೆ. ಹೆಬ್ಬಾವುಗಳಂಥ ಕೆಲವು ಹಾವುಗಳು ಸುರುಳಿಸುತ್ತಿಕೊಂಡು ಅದರ ನಡುವೆ ಮೊಟ್ಟೆಯಿಟ್ಟು ಮರಿಮಾಡುತ್ತವೆ.[] ಕೆಲವು ಪ್ರಭೇದಗಳಲ್ಲಿ ಮೊಟ್ಟೆ ತಾಯಿಯ ಶರೀರದಿಂದ ಹೊರಬೀಳುವ ಹೊತ್ತಿಗೆ ಸಾಕಷ್ಟು ಬೆಳೆವಣಿಗೆಯಾಗಿರುವುದರಿಂದ ಮೊಟ್ಟೆಯಿಟ್ಟ ಕೆಲವೇ ಗಂಟೆಗಳಲ್ಲಿ ಮರಿಗಳು ಹೊರಬರುತ್ತವೆ. ನಾಗರಹಾವುಗಳು ಮೊಟ್ಟೆಯಿಟ್ಟ ತರುವಾಯ ಗಂಡು ಹೆಣ್ಣುಗಳು ಸರದಿಯಲ್ಲಿ ಮೊಟ್ಟೆಗಳನ್ನು ಕಾಯ್ದು ಕಾವುಕೊಟ್ಟು ಮರಿಮಾಡುತ್ತವೆ. ಕೆಲವು ಸರಿಸೃಪಗಳಂತೆ ಕೆಲವು ಹಾವುಗಳು ಸಹ ಮೊಟ್ಟೆಗಳನ್ನು ದೇಹದೊಳಗೆ ಇಟ್ಟು ಕಾವುಕೊಟ್ಟು ಮರಿಗಳನ್ನು ಪ್ರಸವಿಸುತ್ತದೆ (ಒವೊವಿಪಿಪಾರಿಟಿ).[೧೦][೧೧] ಮತ್ತೆ ಕೆಲವು ಸರಿಸೃಪಗಳಲ್ಲಿ ಬೆಳೆಯುತ್ತಿರುವ ಭ್ರೂಣದೊಂದಿಗೆ ಮಾಸಿನ ಸಂಬಂಧವೂ ಇರುತ್ತದೆ (ವಿವಿಪಾರಿಟಿ) ಇದರಿಂದ ಜನ ಕೆಲವು ಹಾವುಗಳು ನೇರವಾಗಿ ಮರಿಹಾಕುತ್ತದೆ ಎಂದು ತಪ್ಪಾಗಿ ಭಾವಿಸುತ್ತಾರೆ.

ಮೊಟ್ಟೆಯಿಂದ ಬೆಳೆದು ಹೊರಬರುತ್ತಿದ್ದಂತೆ ಮರಿಗಳು ಸ್ವತಂತ್ರವಾಗಿ ಬದುಕಬಲ್ಲವು. ತಾವೇ ಸ್ವತಃ ಆಹಾರ ಹುಡುಕಿ ನುಂಗಬಲ್ಲವು. ಆದ್ದರಿಂದ ಮೊಟ್ಟೆಯಿಂದ ಮರಿ ಹೊರಬಿದ್ದ ಕೆಲವೇ ಸಮಯದಲ್ಲಿ ತಂದೆ ತಾಯಿಯರು ಪ್ರತ್ಯೇಕವಾಗಿ ಮರಿಗಳನ್ನು ಬಿಟ್ಟು ಹೊರಡುತ್ತವೆ. ಮರಿಗಳೂ ಎರಡು ವರ್ಷಗಳ ತನಕ ಬೆಳೆದು ಪ್ರಬುದ್ಧವಾಗುತ್ತವೆ. ಹಾವುಗಳ ಆಯಸ್ಸು, 20ರಿಂದ 30 ವರ್ಷಗಳೆಂದು ಅಂದಾಜು.

ವಾಸ: ಹಾವು ಸಾಧಾರಣವಾಗಿ ಬಿಲವಾಸಿ. ಆದರೆ ಸ್ವತಃ ಅದೇ ಬಿಲ ಕೊರೆಯಲಾರದು. ಇತರ ಪ್ರಾಣಿಗಳು ಕೊರೆದ ಬಿಲದಲ್ಲಿ ಅಥವಾ ನೈಸರ್ಗಿಕ ಪೊಟರೆ, ಸಂದುಗಳಲ್ಲಿ ವಾಸಿಸುತ್ತದೆ. ಕೆಲವು ಹಾವುಗಳು ಒಡೊನಂಟೋಟರ‍್ಮಿಸ್ ವಲ್ಲೊನೆನ್ನಸಿಸ್ ಪ್ರಭೇದದ ಗೆದ್ದಲಿನ ಹುತ್ತವನ್ನು ಆಕ್ರಮಿಸಿ, ಹುತ್ತದೊಳಗಿರುವ ಗೆದ್ದಲುಗಳನ್ನು ತಿನ್ನುತ್ತವೆ. ಇತರೆ ಪ್ರಭೇಧದ ಹುತ್ತಗಳನ್ನು ಪ್ರವೇಶಿಸಲು ಪ್ರವೇಶದ್ವಾರ ಇರುವುದಿಲ್ಲ.

ಕಪ್ಪೆ, ಮೀನು, ಹಾಗೂ ಸರೀಸೃಪಗಳಂತೆ ಹಾವು ಕೂಡ ಅನಿಯತತಾಪಿ (ಕೋಲ್ಡ್ ಬ್ಲಡೆಡ್) ಪ್ರಾಣಿ. ವಾತಾವರಣದ ಉಷ್ಣತೆಯಲ್ಲಿ ಏರಿಳಿತವಾದಂತೆ ಅವುಗಳ ದೇಹೋಷ್ಣತೆಯಲ್ಲೂ ಏರಿಳಿತವಾಗುತ್ತದೆ. ಅತಿ ಚಳಿ ಅಥವಾ ಅತಿ ಉಷ್ಣವನ್ನು ಹಾವು ತಡೆದುಕೊಳ್ಳಲಾರದು. ಆದ್ದರಿಂದ ಚಳಿಗಾಲದ ಎಳೆಬಿಸಿಲಿಗೆ ಆಗಾಗ್ಗೆ ಮೈಯೊಡ್ಡಿ ಮಲಗಿರುವುದುಂಟು. ಅಂತೆಯೇ ಬೇಸಗೆಯಲ್ಲಿ ಹಗಲುವೇಳೆ ಬಿಲಗಳಲ್ಲಿದ್ದು ರಾತ್ರಿ ಬಿಲದಿಂದ ಹೊರಬರುತ್ತದೆ.

ಕೆಲವು ಹಾವುಗಳು ವಿಷಯುಕ್ತವಾಗಿರುವುದರಿಂದ ಸರ್ಪಾಸ್ತ್ರದಂಥ ಬಾಣವನ್ನು ಕಲ್ಪಿಸಲಾಗಿದೆ. ಹಾವಿನ ನೀಳಶರೀರವನ್ನು ಬಾಣವಾಗಿ ಕಲ್ಪಿಸಿ ಅದರ ವಿಷದ ಹಲ್ಲನ್ನು ಬಾಣದ ಚೂಪಾದ ಅಲುಗಿನಂತೆ ಹೋಲಿಕೆ ನೀಡಲಾಗುತ್ತದೆ.

ವಿಷಗ್ರಂಥಿ

[ಬದಲಾಯಿಸಿ]

ವಿಷದ ಹಾವುಗಳ ತಲೆಯ ಎರಡೂ ಪಕ್ಕದಲ್ಲಿ ಒಂದೊಂದರಂತೆ ವಿಷ ಸ್ರವಿಸುವ ಒಂದು ಜೊತೆ ಗ್ರಂಥಿ ಇದೆ. ಕಣ್ಣಿನ ಕೆಳಭಾಗ ಹಾಗೂ ಮೇಲ್ದವಡೆಗಳ ನಡುಭಾಗದಲ್ಲಿ ಇವುಗಳ ನೆಲೆ. ಗ್ರಂಥಿಯ ಮುಂಭಾಗದಲ್ಲಿ ನಾಳವಿದ್ದು ಬಾಯಿಯ ಭಾಗದಲ್ಲಿ ವಿಷದ ಹಲ್ಲಿಗೆ ಜೋಡಿಕೊಂಡಿರುತ್ತದೆ.[೧೨] ವಿಷದ ಹಲ್ಲುಗಳು ಉಳಿದ ಹಲ್ಲುಗಳಿಗಿಂತ ದೊಡ್ಡವು ಮತ್ತು ಚೂಪು. ಕೆಲವು ಹಾವುಗಳಲ್ಲಿ ವಿಷದ ಹಲ್ಲುಗಳು ಕೊಳವೆಯಂತಿರಬಹುದು, ಇನ್ನು ಕೆಲವು ಹಾವುಗಳಲ್ಲಿ ಒಂದು ಕಡೆ ತೆರೆದಿದ್ದು ಕಮಾನಿನಂತಿರಬಹುದು. ಆದ್ದರಿಂದ ಕೆಲವು ಪರಿಣತರು ಕಡಿತದ ಗಾಯ ನೋಡಿಯೇ ಕಚ್ಚಿದ ಹಾವಿನ ಪ್ರಭೇದ ಊಹಿಸಬಲ್ಲರು.

ಹಾವಿನ ವಿಷದ ಗ್ರಂಥಿಗಳೆಂದರೆ ಮಾರ್ಪಾಡಾಗಿರುವ ಎಂಜಲು ಗ್ರಂಥಿಗಳು.[೧೩]: 243  ವಿಷರಹಿತ ಹಾವುಗಳಲ್ಲಿ ಇವುಗಳ ಬೆಳೆವಣಿಗೆ ಅಪೂರ್ಣ ಅಥವಾ ಬೆಳೆವಣಿಗೆಯೇ ಇಲ್ಲ.

ಕೆಲವು ಹಾವುಗಳಲ್ಲಿ ವಿಷಗ್ರಂಥಿ ಹಲ್ಲಿಗೆ ಜೋಡಿಸಿಕೊಂಡಿರುವುದಿಲ್ಲ. ಗ್ರಂಥಿ ಸ್ರವಿಸಿದ ವಿಷ ಬಾಯಿಯಲ್ಲಿಯೇ ಸೋರಿ ಎಂಜಲು ದ್ರವದೊಡನೆ ಸೇರಿ ತೀಕ್ಷ್ಣತೆಯನ್ನು ಕಳೆದುಕೊಳ್ಳುತ್ತದೆ. ಈ ಹಾವು ಕಚ್ಚಿದರೂ ವಿಷ ವೈರಿಯ ಶರೀರ ಸೇರುವುದಿಲ್ಲ. ಇನ್ನು ಕೆಲವು ಪ್ರಭೇದದ ಹಾವುಗಳಲ್ಲಿ ವಿಷದ ಹಲ್ಲು ಮೇಲಿನ ವಸಡಿಗಿಂತ ಹಿಂಭಾಗದಲ್ಲಿರುತ್ತವೆ. ಹಲ್ಲಿನ ಸುತ್ತ ಒಂದು ಹೊದಿಕೆಯಿದ್ದು ವಿಷನಾಳ ಈ ಹೊದಿಕೆಯಲ್ಲಿ ತೆರೆದಿರುತ್ತದೆ. ವಿಷಗ್ರಂಥಿ ಸ್ರವಿಸಿ ವಿಷ ಎಂಜಲು ದ್ರವದೊಡನೆ ಮಿಶ್ರವಾಗುವುದಿಲ್ಲ. ಹೀಗಾಗಿ ಈ ಹಾವು ಕಚ್ಚಿದಾಗ ವಿಷ ವೈರಿಯ ಶರೀರದೊಳಗೆ ಸೇರಲಾರದು. ಇಂಥ ಹಾವುಗಳಿಂದಲೂ ಅಪಾಯವಾಗಲಾರದು.

ಮೂರನೆಯ ವರ್ಗದ ಹಾವುಗಳಲ್ಲಿ ವಿಷದ ಹಲ್ಲುಗಳು ಮೇಲ್ದವಡೆಯ ಮುಂಭಾಗದಲ್ಲಿಯೇ ಇರುತ್ತವೆ. ವಿಷಗ್ರಂಥಿಯ ನಾಳ ಈ ಹಲ್ಲಿನ ಕೆಳಭಾಗದಲ್ಲಿ ಜೋಡಿಕೊಂಡಿರುತ್ತದೆ. ಈ ಹಲ್ಲುಗಳನ್ನು ಕಿತ್ತರೆ, ಕೆಲವೇ ದಿನಗಳಲ್ಲಿ ಅವುಗಳ ಪಕ್ಕದ ಹಲ್ಲುಗಳೂ ವಿಷದ ಹಲ್ಲುಗಳಾಗಿ ಮಾರ್ಪಡುತ್ತವೆ. ಈ ಹಾವುಗಳು ಕಡಿದಾಗ ಹಲ್ಲು ನೇರವಾಗಿ ವೈರಿಯ ಶರೀರಕ್ಕೆ ಚುಚ್ಚಿಕೊಳ್ಳುತ್ತವೆ. ತಲೆಯ ಭಾಗದ ಮಾಂಸಖಂಡಗಳು ಸಂಕೋಚಿಸಿದಾಗ ವಿಷ ವೈರಿಯ ಶರೀರದೊಳಗೆ ಇಳಿಯುತ್ತದೆ. ಕೆಲವು ಹಾವುಗಳಲ್ಲಿಯಂತೂ ವಿಷದ ಹಲ್ಲುಗಳು ಸಿರಿಂಜಿನ ಸೂಜಿಯಂತೆ ಮೊನಚಾಗಿರುತ್ತವೆ. ಹಾವು ಕಚ್ಚುವಾಗ ಅಗಲವಾಗಿ ಬಾಯಿತೆರೆಯುತ್ತದೆ. ಆಗ ವಿಷದ ಹಲ್ಲುಗಳು ಮುಂದಕ್ಕೆ ಬಾಗುತ್ತವೆ. ತಲೆಯನ್ನು ಮುಂದಕ್ಕೆ ಬಾಗಿಸಿ ಹಾವು ವೈರಿಯ ಶರೀರದೊಳಗೆ ಹಲ್ಲನ್ನು ಚುಚ್ಚುತ್ತದೆ. ಅನಂತರ 900 ಕೋನದಲ್ಲಿ ತಲೆಯನ್ನು ಬಗ್ಗಿಸುತ್ತದೆ. ಆಗ ದವಡೆಯ ಹಿಂಭಾಗದ ಮಾಂಸಖಂಡಗಳು ಸಂಕೋಚಿಸುತ್ತವೆ. ಜೊತೆಗೆ ಮೂಳೆಯೂ ಒತ್ತುವುದರಿಂದ ವಿಷ ವೈರಿಯ ಶರೀರದೊಳಕ್ಕಿಳಿಯುತ್ತದೆ.

ವಿಷದ ಹಾವುಗಳನ್ನು ಅವುಗಳ ಕೆಲವು ಶಾರೀರಿಕ ಗುಣಗಳನ್ನು ಪರೀಕ್ಷಿಸಿ ಗುರುತಿಸಬಹುದು. ಭಾರತದಲ್ಲಿ ವಾಸಿಸುವ ಹಾವುಗಳ ಪೈಕಿ ನಾಗರಹಾವು, ಕಟ್ಟುಹಾವು, ಕಾಳಿಂಗಸರ್ಪ, ಕುಳಿಮಂಡಲ, ಕುಬ್ಜಮಂಡಲ, ರಸಲ್ಲನ ಮಂಡಲ (ರಸ್ಸೆಲ್ಸ್ ವೈಪರ್) ಹಾಗೂ ಸಾಗರವಾಸೀ ಹಾವುಗಳು ವಿಷದ ಹಾವುಗಳು. ಬುಡುಬುಡುಕೆ ಹಾವು, ಕನ್ನಡಿ ಹಾವು, ಹವಳದ ಹಾವು ಮುಂತಾದವು ಯೂರೊಪ್, ಅಮೆರಿಕ ಖಂಡಗಳಲ್ಲಿರುವ ವಿಷದ ಹಾವುಗಳು.

ಹಾವುಗಳ ಉಪಯೋಗಗಳು

[ಬದಲಾಯಿಸಿ]

ಪ್ರಕೃತಿಯಲ್ಲಿ ಯಾವುದೂ ಅನಾವಶ್ಯಕವಾಗಿ ವಿಕಾಸವಾಗುವುದಿಲ್ಲ. ಪರಿಸರದ ಸಮತೋಲ ಸಾಧಿಸುವಲ್ಲಿ ಹಾವುಗಳ ಪಾತ್ರ ಬಲು ಮುಖ್ಯ. ಇಲಿ, ಹೆಗ್ಗಣ, ಕೀಟ, ಪಕ್ಷಿ ಮುಂತಾದವನ್ನು ಹಾವುಗಳು ಆಹಾರವಾಗಿ ಸೇವಿಸುವುದರಿಂದ ಇವುಗಳ ಸಂಖ್ಯೆಯನ್ನು ನಿಯಂತ್ರಣದಲ್ಲಿಡುತ್ತದೆ (ಇದು ನಮ್ಮ ದವಸ ಧಾನ್ಯಗಳಿಗೆ ಉಂಟಾಗುವ ಹಾನಿಯನ್ನು ಕಡಿಮೆಗೊಳಿಸುತ್ತವೆ). ಅಲ್ಲದೆ, ಈ ಹಾವುಗಳೇ ಇತರೆ ಕೆಲವು ಜೀವಿಗಳಿಗೆ (ಉದಾಹರಣೆಗೆ: ಕೆಲವು ಪಕ್ಷಿಗಳಿಗೆ) ಆಹಾರವಾಗುವುದರಿಂದ ನಿಸರ್ಗದ ಆಹಾರ ಸರಪಳಿಯಲ್ಲಿ ಒಂದು ಕೊಂಡಿಯೂ ಆಗಿದೆ. ಹೀಗೆ ಪರಿಸರವ್ಯೂಹದಲ್ಲಿ ಹಾವುಗಳು ಮಹತ್ವದ ಸ್ಥಾನ ವಹಿಸುತ್ತವೆ. ಹಾವಿನ ವಿಷದಲ್ಲಿ ಫಾಸ್ಫೊಡೈಯೆಸ್ಟಿರೇಸ್ ಎಂಬ ಕಿಣ್ವವಿದೆ. ಇದನ್ನು ಕೆಲವು ಸರಳ ರಾಸಾಯನಿಕ ಕ್ರಿಯೆಗಳಿಂದ ಬೇರ್ಪಡಿಸಬಹುದು. ಈ ಕಿಣ್ವ ಜೀವಿಗಳ ಅನುವಂಶೀಯತೆಗೆ ಕಾರಣವಾಗುವ ಜೈವಿಕ ವಸ್ತು ಡಿಎನ್‌ಎಯ ತಂತುಗಳನ್ನು ಬೇರ್ಪಡಿಸುತ್ತದೆ. ಇದನ್ನು ಬಳಸಿ ಡಿಎನ್‌ಎಯ ರಚನೆ ಹಾಗೂ ಕಾರ್ಯವಿಧಾನಗಳನ್ನು ಅರಿಯಲು ಸಾಧ್ಯವಾಗಿದೆ. ನರಕೋಶಗಳನ್ನು ನಿಷ್ಕ್ರಿಯಗೊಳಿಸುವ ವಿಷವನ್ನು ಬಳಸಿ ಪಾರ್ಶ್ವವಾಯು ಅಥವಾ ನರಮಂಡಲ ಸಂಬಂಧೀ ರೋಗಗಳಿಗೆ ಔಷಧಿ ತಯಾರಿಸಲಾಗುತ್ತದೆ. ವೈಜ್ಞಾನಿಕವಾಗಿ ಈ ಪ್ರಯತ್ನ ಇನ್ನೂ ಸಫಲವಾಗಿಲ್ಲದಿದ್ದರೂ ಕೆಲವು ಸ್ಥಳೀಯ ವೈದ್ಯಪದ್ಧತಿಯಲ್ಲಿ ಈ ತಂತ್ರ ಬಳಕೆಯಲ್ಲಿದೆ. ವಿಷದ ಘಟಕವಾದ ಆ್ಯಂಕ್ರೊಡ್ ಎಂಬ ವಸ್ತುವನ್ನು ಬೇರ್ಪಡಿಸಿ ಅದನ್ನು ನರರೋಗ ಚಿಕಿತ್ಸೆಗೆ ಬಳಸುವ ಪ್ರಯತ್ನವೂ ನಡೆಯುತ್ತಿದೆ. ಕ್ರೀಡಾಪಟುಗಳ ಕಾಲಿನ ಅಥವಾ ಶರೀರದ ಕೆಲವು ಮಾಂಸಖಂಡಗಳು ಆಟದ ಒತ್ತಡದಿಂದ ಕ್ರಿಯಾಹೀನವಾಗುತ್ತವೆ. ಆಫ್ರಿಕದೇಶದ ಕೆಲವು ಹಾವುಗಳ ವಿಷದಿಂದ ಇಂಥ ರೋಗಗಳಿಗೆ ಚಿಕಿತ್ಸೆ ನಡೆಸಲಾಗುತ್ತದೆ. ಕೆಲವು ಹಾವುಗಳು ವಿಷಯುಕ್ತ ಪ್ರಾಣಿಗಳೇನೋ ನಿಜ. ಇವು ಕಚ್ಚಿದರೆ ಮಾನವನನಿಗಷ್ಟೇ ಅಲ್ಲದೆ ಉಳಿದ ಪ್ರಾಣಿಗಳಿಗೂ ಜೀವಹಾನಿಯಾಗುತ್ತದೆ. ಸಾಕುಪ್ರಾಣಿಗಳಾದ ಹಸು, ಕುರಿ ಮುಂತಾದವೂ ಹಾವಿನ ಕಡಿತದಿಂದ ಸಾಯುತ್ತವೆ. ಆದರೂ ಇದಿಷ್ಟೇ ಕಾರಣದಿಂದ ಹಾವುಗಳೆಲ್ಲವೂ ಹಾನಿಕಾರಕ ಎಂದು ಪರಿಗಣಿಸಬಾರದು. ವಿಷರಹಿತ ಹಾಗೂ ವಿಷಯುಕ್ತ ಹಾವು ಎಲ್ಲವುಗಳಿಂದಲೂ ಸಾಕಷ್ಟು ಉಪಯೋಗಗಳಿವೆ. ಹಾವಿನ ಚರ್ಮದಿಂದ ನಾವು ಧರಿಸುವ ಸೊಂಟದ ಪಟ್ಟಿ (ಬೆಲ್ಟ್) ಹಾಗೂ ಸ್ತ್ರೀಯರು ಬಳಸುವ ಚೀಲ (ವ್ಯಾನಿಟಿ ಬ್ಯಾಗ್) ಮುಂತಾದವನ್ನು ತಯಾರಿಸುತ್ತಾರೆ. ಆಫ್ರಿಕ, ಚೀನದಂಥ ರಾಷ್ಟ್ರಗಳಲ್ಲಿ ಕೆಲವು ಪ್ರಭೇದದ ಹಾವುಗಳ ಮಾಂಸವನ್ನು ತಿನ್ನುತ್ತಾರೆ. ಆದರೆ ಇದೇ ಕಾರಣಕ್ಕಾಗಿ ಆಹಾರ ಸರಪಳಿಯ ಒಂದು ಕೊಂಡಿಯಾದ ಸರಿಸೃಪಗಳು ಇಂದು ಅಳಿವಿನಂಚಿಗೆ ಬಂದು ನಿಂತಿದೆ. ಹಲವಾರು ಪ್ರಭೇದದ ಹಾವುಗಳನ್ನು ಕಳೆದ ನೂರು ವರ್ಷಗಳಿಂದ ಜೀವಂತವಾಗಿ ಯಾರೂ ಕಂಡಿಲ್ಲವೆಂದರೆ ಪರಿಸ್ಥಿಯ ಅರಿವಾಗುತ್ತದೆ. ಈ ಬಗ್ಗೆ ಮೊತ್ತಮೊದಲಿಗೆ ನಮ್ಮ ಗಮನ ಸೆಳೆದ ವಿಜ್ಞಾನಿ ಮಾಲ್ಕಮ್ ಸ್ಮಿತ್. ಇವನ್ನು ಉಳಿಸಲು ಇವುಗಳ ಆವಾಸ ಸ್ಥಾನವಾದ ಕಾಡುಗಳನ್ನು ಉಳಿಸುವುದು ಅತಿ ಮುಖ್ಯ. ಹಾವುಗಳ ಬಗ್ಗೆ ಜನರಲ್ಲಿ ಇರುವ ಮೂಢನಂಬಿಕೆಗಳನ್ನು ತೊಲಗಿಸಿ ಪರಿಸರದ ಬಗ್ಗೆ ಜಾಗೃತಿ ಮೂಡಿಸುವುದರ ಮೂಲಕ ಇವನ್ನು ಉಳಿಸಬೇಕಾಗಿದೆ.

ಹಾವುಗಳ ವರ್ಗೀಕರಣ

[ಬದಲಾಯಿಸಿ]

ಹಾವುಗಳ ಶರೀರದ ಹೊರರಚನೆ, ತಲೆ-ಬಾಲಗಳ ರಚನೆ, ಹೊರಪು-ತಟ್ಟೆ-ಕವಚಗಳ ಸ್ಥಿತಿ, ವಿಷದ ಹಲ್ಲುಗಳು ಮುಂತಾದವುಗಳ  ಆಧಾರದ ಮೇಲೆ ಇವುಗಳನ್ನು ಹಲವು ಕುಟುಂಬಗಳಾಗಿ ವಿಂಗಡಿಸಿದೆ:

1. ಟಿಫ್ಲೊಪಡೀ: ಈ ಕುಟುಂಬಕ್ಕೆ ಸೇರಿದ ಹಾವುಗಳನ್ನು ಕುರುಡುಹಾವು ಅಥವಾ ಹುಳುಹಾವುಗಳೆನ್ನುತ್ತಾರೆ. ಇವು ಉದ್ದವಾಗಿ ಎರೆಹುಳುವಿನಾಕಾರದಲ್ಲಿದ್ದು ಶರೀರದ ತುಂಬೆಲ್ಲ ಒಂದೇ ಮಾದರಿಯ ಹೊರಪುಗಳಿವೆ. ತಲೆ ಹಾಗೂ ಬಾಲಗಳೆರಡೂ ಮೊಂಡು. ಗಾತ್ರ ಚಿಕ್ಕದಾಗಿದ್ದರೂ ತಲೆಬುರುಡೆ ಮಾತ್ರ ಗಟ್ಟಿ. ಎಂದೇ ಇವು ಸುಲಭವಾಗಿ ನೆಲ ಕೊರೆದು ಕುಳಿ ನಿರ್ಮಿಸಬಲ್ಲವು. ಹಲ್ಲುಗಳು ಮೇಲ್ದವಡೆಗೆ ಮಾತ್ರ ಸೀಮಿತವಾಗಿದ್ದು ಕೆಳದವಡೆಯಲ್ಲಿ ವಸಡು ಮಾತ್ರ ಇರುವುದು. ಶರೀರದ ಒಳಭಾಗದಲ್ಲಿ ಸೊಂಟದ ಮೂಳೆಗಳೂ ಹಿಂಗಾಲಿನ ತೊಡೆಯ ಭಾಗದ ಮೂಳೆಗಳೂ ಇವೆ. ಆದ್ದರಿಂದ ಹಾವುಗಳಲ್ಲೆಲ್ಲ ಇವೇ ಮೊದಲು ವಿಕಾಸವಾದವು ಎಂದು ನಂಬಲಾಗಿದೆ. ಇವುಗಳ ಆಹಾರ ಗೆದ್ದಲು, ನೆಲದೊಳಗೆ ವಾಸಿಸುವ ಕೀಟಗಳು, ಎರೆಹುಳುಗಳು ಮುಂತಾದವು. ವಿಷರಹಿತವಾದ ಈ ಹಾವುಗಳು ಉಷ್ಣವಲಯದಲ್ಲಿ ಮಾತ್ರ ಬದುಕುತ್ತವೆ. ಟಿಫ್ಲೊಪ್ಸ್ ಬ್ರಾಮಿನಿಸ್ ಎಂಬುದು ಇದರ ಮುಖ್ಯ ಪ್ರಭೇದ.

2. ಗ್ಲಾಕೋನಿಡೀ: ಈ ಕುಟುಂಬದ ಹಾವುಗಳು ಶರೀರ ರಚನೆಯಲ್ಲಿ ಟಿಫ್ಲೊಪಡೀಯನ್ನೇ ಹೋಲುತ್ತವೆ. ಆದರೆ ಎರಡೂ ದವಡೆಗಳಲ್ಲಿ ಹಲ್ಲುಗಳಿರುತ್ತವೆ. ಇವೂ ವಿಷರಹಿತ ಹಾವುಗಳು. ಲೆಪ್ಟೊಫ್ಲ್ಯಾಪ್ಸ್ ಎಂಬುದು ಈ ಕುಟುಂಬದ ಮುಖ್ಯ ಪ್ರಭೇದ.

3. ಯೂರೊಪೆಲ್ಟಿಡೀ: ಇವು ನೆಲವನ್ನು ಕೊರೆಯಬಲ್ಲ ಹಾವುಗಳು. ಬಾಲ ಗಿಡ್ಡ ಮತ್ತು ಮೊಂಡಾಗಿರುತ್ತದೆ. ಶರೀರದ ಸುತ್ತ ವಿಭಿನ್ನ ಹೊರಪುಗಳಿವೆ. ಮೇಲ್ದವಡೆ ಕೆಳದವೆಡೆಗಳೆರಡರಲ್ಲೂ ಹಲ್ಲುಗಳುಂಟು. ಬೆಟ್ಟಗುಡ್ಡಗಳಲ್ಲಿ ಹಾಗೂ ಎತ್ತರ ಪ್ರದೇಶಗಳಲ್ಲಿ ಇವುಗಳ ವಾಸ. ಇವು ವಿಷಜಂತುಗಳು. ಯೂರೊಪೆಲ್ಟಿಸ್, ರೈನೊಪೆಲ್ಟಿಸ್ ಮುಂತಾದವು ಈ ಕುಟುಂಬಕ್ಕೆ ಸೇರುವ ಮುಖ್ಯ ಪ್ರಭೇದಗಳು.

4. ಬೋವಿಡೀ: ಇವು ಆಹಾರ ಪ್ರಾಣಿಯನ್ನು ಹಿಡಿದು ಅದನ್ನು ಬಿಗಿಯಾಗಿ ಸುತ್ತಿ ನಜ್ಜುಗುಜ್ಜಾಗಿಸಿ ಅನಂತರ ನುಂಗುತ್ತವೆ. ಮೊಟ್ಟೆಯಿಟ್ಟ ಕೆಲವೇ ಮಿನಿಟುಗಳಲ್ಲಿ ಮರಿಗಳು ಹೊರಬರುತ್ತವೆ. ಮೊಟ್ಟೆಯಿಂದ ಆಗತಾನೇ ಹೊರಬಂದ ಮರಿಯ ಉದ್ದ 30 ಸೆಂಮೀ. ಗುದದ್ವಾರದ ಎರಡೂ ಕಡೆ ಪುಟ್ಟ ಉಂಗುರದಾಕಾರದ ಎರಡು ಅಂಗಗಳಿವೆ. ಶರೀರದ ಒಳಭಾಗದಲ್ಲಿಯೇ ಇರುವ ಕಾಲಿನ ಭಾಗದ ಮೂಳೆಗಳೊಡನೆ ಕೂಡಿಕೊಂಡಿರುತ್ತವೆ. ದಕ್ಷಿಣ ಅಮೆರಿಕದ ಅಮೆಜಾನ್ ನದಿಯ ಕೊಳ್ಳಗಳಲ್ಲಿ ವಾಸಿಸುವ ಅನಕೊಂಡಾಗಳು ದಕ್ಷಿಣ ಆಫ್ರಿಕ, ಅಮೆರಿಕ ಮುಂತಾದ ಉಷ್ಣವಲಯದ ಕಾಡುಗಳಲ್ಲಿ ವಾಸಿಸುವ ಬೋವಾಗಳು ಮುಖ್ಯ ಪ್ರಭೇದಗಳು.

5. ಪೈತೊನಿಡೀ: ಹೆಬ್ಬಾವುಗಳೆಲ್ಲವೂ ಈ ಕುಟುಂಬಕ್ಕೆ ಸೇರಿವೆ. ಅಮೆರಿಕದ ಕಾಡುಗಳಲ್ಲಿ ಅನಕೊಂಡಾಗಳಿರುವಂತೆ ಆಫ್ರಿಕ ಮತ್ತು ಏಷ್ಯ ಖಂಡದ ಕಾಡುಗಳಲ್ಲಿ ಹೆಬ್ಬಾವುಗಳಿರುತ್ತವೆ. ಇದುವರೆಗೆ ದಾಖಲಾದ ಅತಿದೊಡ್ಡ ಹೆಬ್ಬಾವೆಂದರೆ ದಕ್ಷಿಣ ಆಫ್ರಿಕದಲ್ಲಿ ಗುರುತಿಸಲಾದ 9 ಮೀ ಉದ್ದದ ಹೆಬ್ಬಾವು. ಹೆಬ್ಬಾವುಗಳು ರಚನೆಯಲ್ಲಿ ಬೋವಾಗಳಂತೆಯೇ ಇರುತ್ತವೆ. ಆದರೆ ಇವು ಮೊಟ್ಟೆಯಿಟ್ಟು ಕೆಲಕಾಲ ಕಾವು ಕೊಟ್ಟಾಗ ಮರಿಗಳು ಹೊರಬರುತ್ತವೆ. ಇವು ಕೂಡ ವಿಷರಹಿತ ಹಾವುಗಳು. ಪೈತಾನ್ ಮಾಲೂರಸ್ ಎಂಬುದು ಭಾರತದಲ್ಲಿ ವಾಸಿಸುವ ಪ್ರಭೇದ. ಇದು 4.5ರಿಂದ 6 ಮೀ ಉದ್ದ ಬೆಳೆಯುತ್ತದೆ. ಸುಮಾತ್ರ, ಬೋರ್ನಿಯೋ, ಜಾವಾಗಳಲ್ಲಿರುವ ಹೆಬ್ಬಾವುಗಳು ಆಹಾರ ನುಂಗಿ ದಟ್ಟ ಅರಣ್ಯಗಳಲ್ಲಿ ಮರದ ಕೊರಡಿನಂತೆ ಹಲವಾರು ದಿನ ಪರ್ಯಂತ ಬಿದ್ದುಕೊಂಡಿರುತ್ತವೆ.

6. ಕೋಲುಬ್ರಡೀ: ಇದು ಹಾವುಗಳ ಅತಿದೊಡ್ಡ ಕುಟುಂಬ. ಈ ಕುಟುಂಬದಲ್ಲಿ 300 ಗಣಗಳೂ 2500 ಪ್ರಭೇದಗಳೂ ಇವೆ. ಇವುಗಳ ಹಲ್ಲುಗಳು ಚೂಪಾಗಿವೆ. ಎಲ್ಲ ಹಲ್ಲುಗಳೂ ಒಂದೇ ಅಳತೆಯವು. ವಿಷಗ್ರಂಥಿ ಹಾಗೂ ನಾಳಗಳಿರುತ್ತವೆ. ನಾಳ ಹಲ್ಲುಗಳ ಹಿಂಭಾಗದಲ್ಲಿಯೇ ತೆರೆದಿರುವುದರಿಂದ ಇವುಗಳ ಕಡಿತ ಮಾರಕವಲ್ಲ. ಇವು ಸಾಕಷ್ಟು ಗಾತ್ರ ಬೆಳೆಯುತ್ತವೆ. ಬರ್ಮಾ (ಮಾಯನ್ಮಾರ್), ಮಲಯಗಳಲ್ಲಿ ವಾಸಿಸುವ ಪ್ರಭೇದಗಳು 3.5ರಿಂದ 4 ಮೀ ಉದ್ದ ಬೆಳೆಯುತ್ತವೆ. ಭಾರತದಲ್ಲಿರುವ ಕೇರೆಹಾವು ಪ್ಟೈಯಾಸ್ ಎಂಬ ಪ್ರಭೇದಕ್ಕೆ ಸೇರುತ್ತದೆ. ಇದು ಬಲು ಚುರುಕು ಹಾಗೂ ಬಲು ವೇಗವಾಗಿ ಓಡಬಲ್ಲದು. ಇದರ ಶರೀರದ ಮೇಲ್ಭಾಗ ಕಪ್ಪು. ಸುಲಭವಾಗಿ ಮರವನ್ನೇರಿ ಅಲ್ಲಿ ಪಕ್ಷಿಗಳ ಗೂಡುಗಳಲ್ಲಿರುವ ಮೊಟ್ಟೆ, ಮರಿಗಳನ್ನು ತಿನ್ನುತ್ತದೆ. ಹಳ್ಳಿಗಳಲ್ಲಿ  ಮನೆಯ ಒಳಹೊಕ್ಕು ಕೋಳಿಮರಿಗಳನ್ನು ಕದ್ದು ತಿನ್ನುತ್ತವೆ. ಕೇರೆಹಾವು ಇಲಿ ಹೆಗ್ಗಣಗಳ ಬಿಲ ಹೊಕ್ಕು ಅವನ್ನು ಹಿಡಿದು ನುಂಗುತ್ತದೆ. ಇವೇ ಅದರ ಮುಖ್ಯ ಆಹಾರ.

7. ಇಲಾಪಿಡೀ: ಈ ಕುಟುಂಬಕ್ಕೆ ಸೇರುವ ಎಲ್ಲ ಹಾವುಗಳೂ ವಿಷಯುಕ್ತ. ಇದರಲ್ಲಿ ಸು. 180 ಪ್ರಭೇದಗಳಿವೆ. ಈ ಪೈಕಿ ಕೆಲವು ಪ್ರಭೇದಗಳ ವಿಷ ಅತಿ ತೀಕ್ಷ್ಣ. ಇವು ತೀವ್ರ ಅಪಾಯಕಾರಿ. ನಾಗರಹಾವು (ಸರ್ಪ), ಕಾಳಿಂಗಸರ್ಪ, ಕಟ್ಟುಹಾವು ಈ ಕುಟುಂಬದ ಮುಖ್ಯ ಜಾತಿಗಳು. ಈ ಮೂರೂ ಜಾತಿಯ ಹಾವುಗಳೂ ಭಾರತದಲ್ಲಿ ಕಂಡುಬರುತ್ತವೆ.

8. ಹೈಡ್ರೊಫಿನೀ: ಮಹಾಸಾಗರಗಳಲ್ಲಿ ಹಾಗೂ ಸಮುದ್ರಗಳಲ್ಲಿ ವಾಸಿಸುವ ಎಲ್ಲ ಹಾವುಗಳನ್ನೂ ಈ ಕುಟುಂಬಕ್ಕೆ ಸೇರಿಸಿದೆ. ಇವು ಸಾಮಾನ್ಯ ಗಾತ್ರದವು. ಬಾಲ ಮೇಲಿನಿಂದ ಕೆಳಭಾಗದ ಕಡೆಗೆ ಚಪ್ಪಟೆಯಾಗಿದೆ. ಇವು ತಮ್ಮ ನೊಸಲನ್ನು ಅದರ ಸುತ್ತ ಇರುವ ಚರ್ಮದ ಕವಾಟದಿಂದ (ಮುಚ್ಚಳ) ಮುಚ್ಚಿಕೊಂಡು ನೀರಿನ ಒಳಭಾಗದಲ್ಲಿ ಈಸಬಲ್ಲವು. ಮೇಲ್ಭಾಗದಿಂದ ನೀರಿನೊಳಗೆ ಜಿಗಿಯಬಲ್ಲವು. ಸಾಗರವಾಸೀ ಮೀನುಗಳು ಇವುಗಳ ಆಹಾರ. ಅತ್ಯಂತ ತೀಕ್ಷ್ಣ ವಿಷವುಳ್ಳ ಹಾವುಗಳಾದರೂ ಇವು ಮನುಷ್ಯರನ್ನು ಕಚ್ಚುವ ಸಾಧ್ಯತೆ ಕಡಿಮೆ.

9. ಪೈಪರಿಡೀ: ಮಂಡಲದ ಹಾವುಗಳು ಈ ಕುಟಂಬಕ್ಕೆ ಸೇರುತ್ತವೆ. ಇವುಗಳ ಗಾತ್ರದಲ್ಲಿ  ಸಾಕಷ್ಟು ವ್ಯತ್ಯಾಸವಿದೆ. ಕೆಲವು ಪ್ರಭೇದಗಳು ಕೇವಲ 40-45 ಸೆಂಮೀ ಉದ್ದವಿದ್ದರೆ ಇನ್ನು ಕೆಲವು 7 ಅಡಿ ಗಿಂತಲೂ ಉದ್ದವಾಗಿರುವುವು. ಗಾತ್ರ ಉಳಿದ ಹಾವುಗಳಿಗಿಂತ ದೊಡ್ಡದು. ಬಾಲ ತುಂಬ ಚಿಕ್ಕದು. ಇವೂ ವಿಷಯುಕ್ತವಾದವು. ಆಕ್ರಮಣಕಾರಿಗಳಲ್ಲದ ಹಾಗೂ ಸೋಮಾರಿಯಾದ ಇವುಗಳಿಂದ ಕಚ್ಚಿಸಿಕೊಂಡು ಸಾಯುವ ಪ್ರಮೇಯ ಕಡಿಮೆ. ಸಾಮಾನ್ಯವಾಗಿ ಒಣ ಪ್ರದೇಶಗಳಲ್ಲಿ ವಾಸಿಸುತ್ತವೆ. ಆದರೆ ಕಡುಚಳಿ ಅಥವಾ ಅತಿಸೆಕೆ ತಡೆಯಲಾರವು. ಚಳಿಗಾಲದಲ್ಲಿ ಕಲ್ಲುಬಂಡೆಗಳ ಕೆಳಗೆ ಅಥವಾ ಪೊಟರೆಗಳಲ್ಲಿ ತೆರಳಿ ಶಿಶಿರ ನಿದ್ರಾಮಗ್ನವಾಗುತ್ತವೆ. ಇದು ಚಳಿಯನ್ನು ತಡೆಯಲು ಪ್ರಾಣಿಗಳು ಅನುಸರಿಸುವ ಒಂದು ಹೊಂದಾಣಿಕೆ. ಈ ವೇಳೆ ಹಲವಾರು ದಿನಪರ್ಯಂತ ಆಹಾರ ಅಥವಾ ಚಲನೆ ನಿಲ್ಲಿಸಿ ಸುಮ್ಮನೆ ಬಿದ್ದುಕೊಂಡಿರುತ್ತವೆ. ಶರೀರದಲ್ಲಿ ಸಂಗ್ರಹವಾಗಿರುವ ಕೊಬ್ಬನ್ನು ಉಪಯೋಗಿಸಿಕೊಂಡು ಬದುಕುತ್ತವೆ. ಚಳಿ ಕಡಿಮೆಯಾದಾಗ ನಿಧಾನವಾಗಿ ಹೊರಬಂದು ಎಳೆಬಿಸಿಲಿಗೆ ಮೈಯೊಡ್ಡಿ ಸ್ವಲ್ಪ ಕಾಲಾನಂತರ ಪುನಃ ಕ್ರಿಯಾಶೀಲವಾಗುತ್ತವೆ. ಬೇಸಗೆಯ ಬೇಗೆ ಹೆಚ್ಚಾಯಿತೆಂದರೆ ಅವು ಜವುಗು ಪ್ರದೇಶಗಳೆಡೆಗೆ ತೆರಳುತ್ತವೆ. ಮಂಡಲದ ಹಾವುಗಳು ಭೂಭಾಗದ ಎಲ್ಲ ಕಡೆಗಳಲ್ಲೂ ಇವೆ. ಭಾರತದಲ್ಲಿ ರಸೆಲ್ಲನ ಮಂಡಲ, ಕುಳಿಮಂಡಲ, ಕುಬ್ಜಮಂಡಲ  ಎಂಬ ಮೂರು ವಿಧ ಮುಖ್ಯವಾದವು.

10. ಕ್ರೊಟಲಿನೀ: ಬುಡುಬುಡಿಕೆ ಹಾವುಗಳು ಈ ಕುಟುಂಬಕ್ಕೆ ಸೇರಿದವು. ದಕ್ಷಿಣ ಮತ್ತು ಉತ್ತರ ಅಮೆರಿಕಗಳಲ್ಲಿ ಹೆಚ್ಚಾಗಿ ಕಂಡುಬರುವ ಇವನ್ನು ಕೆಲವು ತಜ್ಞರು ಮಂಡಲದ ಹಾವುಗಳೆಂದೇ ಪರಿಗಣಿಸುತ್ತಾರೆ. ಮಂಡಲದ ಹಾವುಗಳಲ್ಲಿರುವಂತೆ ಕಣ್ಣು ಮತ್ತು ನೊಸಲಿನ ನಡುವೆ ಜ್ಞಾನವಾಹಿ ಕುಳಿಗಳಿವೆ. ಬಾಲದ ಭಾಗದಲ್ಲಿ ಕೆಲವು ಹೊರಪುಗಳು ಉಂಗುರದಂತೆ ಮಾರ್ಪಾಡಾಗಿದ್ದು ಒಂದರ ಹಿಂದೆ ಒಂದರಂತೆ ಜೋಡಿಕೊಂಡಿರುತ್ತವೆ. ಒಳಭಾಗದಲ್ಲಿ ಇವು ಚರ್ಮಕ್ಕೆ ಅಂಟಿಕೊಂಡಿದ್ದು ಆ ಭಾಗದ ಮಾಂಸಖಂಡಗಳ ಅದಿರಿಕೆಯಿಂದ ಇವು ಒಂದಕ್ಕೊಂದು ತಗಲುತ್ತವೆ. ಕೊನೆಯ ಹೊರಪು ಗೋಪುರದ ಆಕಾರದಲ್ಲಿದೆ. ಉಂಗುರಗಳು ಉಜ್ಜಿದಾಗ ಅಥವಾ ಯಾವುದಾದರೂ ಭಾಗಕ್ಕೆ ತಗಲಿದಾಗ ಬುಡುಬಡಿಕೆಯ ಶಬ್ದ ಹೊರಡುತ್ತದೆ. ಆದ್ದರಿಂದ ಇವನ್ನು ಬುಡುಬಡಿಕೆ ಹಾವುಗಳೆಂದೇ (ರ‍್ಯಾಟಲ್ ಸ್ನೇಕ್) ಕರೆಯುತ್ತಾರೆ. ಭಾರತದಲ್ಲಿ ಬುಡುಬುಡಿಕೆ ಹಾವುಗಳಿಲ್ಲ. ಅಮೆರಿಕದ ಹೊರತಾಗಿ ಸೈಬೀರಿಯ ಹಾಗೂ ಮಲೇಶಿಯಗಳಲ್ಲಿ ಕೆಲವು ಪ್ರಭೇದಗಳಿವೆ.

ಉಲ್ಲೇಖಗಳು

[ಬದಲಾಯಿಸಿ]
  1. ೧.೦ ೧.೧ Behler & King 1979, p. 581.
  2. Vidal, N., Rage, J.-C., Couloux, A. and Hedges, S.B. (2009). "Snakes (Serpentes)". Pp. 390-397 in Hedges, S. B. and Kumar, S. (eds.), The Timetree of Life. Oxford University Press.
  3. Mehrtens JM. 1987. Living Snakes of the World in Color. New York: Sterling Publishers. 480 pp. ISBN 0-8069-6460-X.
  4. ೪.೦ ೪.೧ Sanchez, Alejandro. "Diapsids III: Snakes". Father Sanchez's Web Site of West Indian Natural History. Retrieved 2007-11-26.
  5. Conant R, Collins JT. 1991. A Field Guide to Reptiles and Amphibians: Eastern and Central North America. Houghton Mifflin, Boston. 450 pp. 48 plates. ISBN 0-395-37022-1.: 143 
  6. Fredriksson, G. M. (2005). "Predation on Sun Bears by Reticulated Python in East Kalimantan, Indonesian Borneo". Raffles Bulletin of Zoology. 53 (1): 165–168. Archived from the original on July 9, 2014.
  7. "General Snake Information". sdgfp.info. Archived from the original on November 25, 2007.
  8. Freiberg & Walls 1984, pp. 125–127.
  9. Cogger & Zweifel 1992, p. 186.
  10. Capula (1989), p. 118.
  11. Cogger & Zweifel 1992, p. 182.
  12. ಉಲ್ಲೇಖ ದೋಷ: Invalid <ref> tag; no text was provided for refs named Meh872
  13. Oliveira, Ana L.; Viegas, Matilde F.; da Silva, Saulo L.; Soares, Andreimar M.; Ramos, Maria J.; Fernandes, Pedro A. (July 2022). "The chemistry of snake venom and its medicinal potential". Nature Reviews Chemistry (in ಇಂಗ್ಲಿಷ್). 6 (7): 451–469. doi:10.1038/s41570-022-00393-7. ISSN 2397-3358. PMC 9185726. PMID 35702592.

ಹೆಚ್ಚಿನ ಓದಿಗೆ

[ಬದಲಾಯಿಸಿ]

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಹಾವು&oldid=1226509" ಇಂದ ಪಡೆಯಲ್ಪಟ್ಟಿದೆ