ವಿಷಯಕ್ಕೆ ಹೋಗು

ಜಠರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜಠರವು ಉದರದ ಮೇಲುಭಾಗದಲ್ಲಿ ದೇಹಮಧ್ಯಗೆರೆಯ ಎಡ ಬಲಗಳಲ್ಲಿ ಪ್ರಸರಿಸಿರುವ ಚೀಲರೂಪದ ಒಂದು ಅಂಗ (ಸ್ಟೊಮಕ್). ಅನ್ನಾಶಯ ಪರ್ಯಾಯ ನಾಮ. ಇದು ಜೀರ್ಣನಾಳದ ಅತ್ಯಂತ ಹಿಗ್ಗಿದ ಭಾಗ. ಮುಂದುವರಿದ ಅನ್ನನಾಳವು (ಈಸೋಫೇಗಸ್) ಜಠರವೂ ಮುಂದುವರಿದ ಜಠರವು ಸಣ್ಣ ಕರುಳೂ ಆಗುತ್ತವೆ. ಜಠರವೂ ಉದರದ ಹೊಟ್ಟೆ ಕುಳಿ, ಹೊಕ್ಕಳು ಮತ್ತು ಎಡಮೆಲ್ಲೆಲುವಡಿ ಪ್ರದೇಶಗಳಲ್ಲಿ ಪಸರಿಸಿದೆ. ಇದು ಯಕೃತ್ತಿನ ಎಡ ಹಿಂಭಾಗದಲ್ಲಿ ಉಂಟು. ಜಠರದ ಲಂಬಾಕ್ಷ ಕೋಚಾಗಿ ಎಡಭಾಗದಲ್ಲಿ ಬೆನ್ನಕಡೆ ಪ್ರಾರಂಭವಾಗಿ ಕೆಳಮುಖವಾಗಿ ಬಲಕ್ಕೂ ಮುಂದಕ್ಕೂ ಮುಂದುವರಿದು ಅನಂತರ ತಟ್ಟನೆ ಹಿಂದಕ್ಕೆ ತಿರುಗಿ ಅಂತ್ಯಗೊಳ್ಳುವುದು. ಈ ಅಕ್ಷದ ಪ್ರಾರಂಭದ ಭಾಗ ಎಡಮೆಲ್ಲೆಲುವಡಿ ಪ್ರದೇಶದಲ್ಲಿರುವ ಜಠರದ ಗೋಳಾಕೃತಿಯ, ಎಡ ಹಾಗೂ ಊಧ್ರ್ವತುದಿಯಾದ ಫಂಡಸ್ ಅಂತ್ಯಭಾಗ ಪೈಲೋರಿಕ್‍ನಾಲೆ. ಇದು ಡುಯೋಡೀನಮ್ (ಮುಂಗರುಳು) ಎಂಬ ಚಿಕ್ಕಕರುಳಿನ ಪ್ರಥಮ ಭಾಗವಾಗಿ ಮುಂದುವರಿಯುತ್ತದೆ. ಜಠರದ ಮೇಲ್ಮೈನಲ್ಲಿ ಈ ಸಂಧಿಸ್ಥಳ ಒಂದು ಸಣ್ಣ ಆದರೆ ನಿಖರವಾಗಿ ಗುರುತಿಸಬಹುದಾದ ಇಳಿಗೆರೆಯಾಗಿ ಕಂಡುಬರುತ್ತದೆ. ಜಠರ ಕೊಂಕಾಗಿ ತನ್ನ ಮೇಲೇ ಮಡಚಿಕೊಂಡಿರುವುದರಿಂದ ಅಕ್ಷದ ಪ್ರಾರಂಭ ಅಂತ್ಯಗಳೆರಡೂ ಹಿಮ್ಮುಖವಾಗಿವೆ. ಮೇಲಂಚಿನ ಬಲತುದಿಯ ಹತ್ತಿರ ಈ ಮಡಿಕೆ ಒಂದು ಕಚ್ಚನ್ನು ಉಂಟು ಮಾಡುತ್ತದೆ. ಇದಕ್ಕೆ ಕೋನಕಚ್ಚು ಎಂದು ಹೆಸರು. ಇದರಿಂದ ಒಂದು ಲಂಬವನ್ನು ಎಳೆದು ಈ ಗೆರೆಗೆ ಎಡಬಲಭಾಗಗಳಲ್ಲಿರುವ ಜಠರದ ಭಾಗಗಳನ್ನು ಪ್ರತ್ಯೇಕವಾಗಿ ಪರಿಗಣಿಸಲಾಗಿದೆ. ಎಡಭಾಗಕ್ಕೆ ಕಾರ್ಡಿಯಕ್ ಭಾಗವೆಂದೂ ಬಲಭಾಗಕ್ಕೆ ಪೈಲೋರಸ್ ಭಾಗವೆಂದೂ ಹೆಸರು. ಅಪರೂಪವಾಗಿ ಇವೆರಡೂ ಭಾಗಗಳನ್ನೂ ಜಠರದಲ್ಲಿ ಒಂದು ಕಂಠದಿಂದ ಬೇರೆ ಮಾಡಲ್ಪಟ್ಟ ಎರಡು ಚೀಲಗಳಂತೆ, ಗುರುತಿಸಬಹುದು. ಕಾರ್ಡಿಯಕ್ ಭಾಗಕ್ಕೆ ಮೇಲೆ ಹೇಳಿದ ಫಂಡಸ್ ಸೇರಿದೆ. ಅನ್ನನಾಳ ಜಠರಕ್ಕೆ ತೆರೆದುಕೊಳ್ಳುವ ದ್ವಾರದ ಎಡಕ್ಕೂ ಆ ನೇರದಿಂದ ಸುಮಾರು 2" ಮೇಲಕ್ಕೂ ಉಬ್ಬಿದಂತೆ ಇರುವುದೇ ಫಂಡಸ್, ಕಾರ್ಡಿಯಕ್ ಭಾಗದ ಉಳಿದ ಭಾಗವೇ ಜಠರದ ಕಾಯ(ಬಾಡಿ). ಜಠರದ ಕೆಳ ಅಂಚಿನಲ್ಲಿ ಅದರ ಬಲತುದಿಯ ಹತ್ತಿರ ಒಂದು ಗೆರೆ ಇದೆ. ಆದರೆ ಎಡಕ್ಕೆ ಇರುವುದು ತೆಳುಭಿತ್ತಿಯ ಪೈಲೋರಿಕ್ ನಡುವೆ (ಆಂಟ್ರಮ್), ಬಲಕ್ಕೆ ಇರುವುದು ಸುಮಾರು 1"-1 1/4" ಉದ್ದದ ದಪ್ಪಭಿತ್ತಿಯ ಪೈಲೋರಿಕ್ ನಾಲೆ. ಇವು ಪೈಲೋರಿಕ್ ಭಾಗದ ಎರಡು ವಿಭಾಗಗಳು. ಜೀರ್ಣವಾಗುವ ಕಾಲದಲ್ಲಿ ಜಠರದ ನೀಚಭಾಗ ಸಂಕುಚಿಸಿ ನಾಳದ ಆಕಾರವನ್ನು ತಳೆದು ಸರ್ಪಗತಿ ಚಲನವನ್ನು ಪ್ರದರ್ಶಿಸುತ್ತದೆ. ಆಗ ಒಳಗಿರುವ ಆಹಾರ ಚೆನ್ನಾಗಿ ಮರ್ದನಗೊಂಡು ಜಠರರಸದೊಡನೆ ಮಿಶ್ರವಾಗಿ ದ್ರವೀಕರಿಸಲ್ಪಡುತ್ತದೆ.

ಅನ್ನನಾಳವು ಜಠರಕ್ಕೆ ತೆರೆದುಕೊಳ್ಳುವ ದ್ವಾರಕ್ಕೆ ಕಾರ್ಡಿಯಕ್ ದ್ವಾರವೆಂದು ಹೆಸರು. ದೇಹಮಧ್ಯಗೆರೆಗೆ ಸುಮಾರು 1" ಎಡಕ್ಕೆ, ಎದೆಮೂಳೆಯ ಕೆಳತುದಿಯ ಕೆಳಗೆ ಉದರದ ಮುಂದಿನ ಭಿತ್ತಿಗೆ ಸುಮಾರು 4" ಹಿಂಭಾಗದಲ್ಲಿ ಬಾಚಿಹಲ್ಲುಗಳಿಂದ ಸುಮಾರು 16" ಅಂತರದಲ್ಲಿ ಯಕೃತ್ತಿನ ಹಿಂದೆ ಇದೆ. ಈ ಸಂಧಿಸ್ಥಳದ ಎಡಬಲ ಭಾಗಗಳಿಂದ ಮುಂದಕ್ಕೆ ಪೈಲೋರಿಕ್ ತುದಿಯ ಪರ್ಯಂತ ಗಮನಿಸುವ ಜಠರದ ಎರಡು ಅಂಚುಗಳನ್ನು ಗುರುತಿಸಬಹುದು. ಕಾರ್ಡಿಯಕ್ ದ್ವಾರದ ಬಲಗಡೆಯಿಂದ ಮುಂದುವರಿಯುವ ಜಠರದ ಮೇಲಂಚು ಅದರ ಸಣ್ಣ ಅಂಚೂ ಬಲ ಅಂಚೂ ಆಗಿದೆ. ಕೆಲವು ಸಮಯ ಇದು ಜಠರದ ಹಿಂದಿನ ಅಂಚಿನಂತೆ ಕಾಣಿಸುತ್ತದೆ. ಇದು ಬಲಕ್ಕೆ ನಿಮ್ನ ಮೃದುವಾಗಿ ನೆರೆಯ ಯಕೃತ್ತು ಮೇದೋಜೀರಕಾಂಗಗಳ ಭಾಗಗಳನ್ನು ಬಳಸಿ ಸಾಫಾಗಿ ಸಾಗುವ ಡೊಂಕುರೇಖೆಯಂತೆ ಇರುವುದರಿಂದ ಇದಕ್ಕೆ ಜಠರದ ಕಿರಿಡೊಂಕು (ಲೆಸ್ಸರ್ ಕರ್ವೇಚರ್) ಎಂಬ ಹೆಸರುಂಟು. ಇದರ ಅತ್ಯಂತ ಕೆಳಭಾಗದಲ್ಲಿ ಕೋನಕಚ್ಚು ಇದೆ. ಜಠರದ ಕಿರಿಡೊಂಕು ಯಕೃತ್ತಿಗೆ ಕಿರಿ ಒಮೆನ್‍ಟಮ್ ಎಂಬ ಎರಡು ಪದರಗಳ ಒಂದು ಹಾಳೆಯಿಂದ ಸೇರಿಸಲ್ಪಟ್ಟಿದೆ. ಈ ಹಾಳೆಯ ಪದರಗಳ ನಡುವೆ ಕಿರಿಡೊಂಕಿನ ಎಡಬಲತುದಿಗಳಿಂದ ರಕ್ತನಾಳಗಳು ಹಾಯ್ದು ಜಠರವನ್ನು ತಲುಪುತ್ತವೆ. ಜಠರದ ಎಡ ಅಂಚು ದೊಡ್ಡ ಅಂಚು ಸಣ್ಣ ಅಂಚಿಗಿಂತ 4-5 ಪಟ್ಟು ದೊಡ್ಡದು, ಇದು ಕಾರ್ಡಿಯಕ್ ದ್ವಾರದ ಎಡಗಡೆಗಳಿಂದ ಮುಂದುವರಿದು ಪ್ರಾರಂಭದಲ್ಲಿ ಎಡಕ್ಕೂ ಊಧ್ರ್ವಮುಖವಾಗಿಯೂ ಕಮಾನಿನಂತೆ ಬಾಗಿ ಫಂಡಸ್ಸಿನ ಅಂಚಾಗುತ್ತದೆ. ಅಲ್ಲಿಂದ ಮುಂದೆ ಕೆಳಮುಖವಾಗಿಯೂ ಮುಮ್ಮುಖವಾಗಿಯೂ ಗಮನಿಸುವ ಹಾಗೂ ಎಡಕ್ಕೆ ಉಬ್ಬಿಕೊಂಡು ಇರುವ ಬಾಗಿದ ರೇಖೆಯಾಗುವುದು. ಇನ್ನೂ ಮುಂದಕ್ಕೆ ಅದು ಬಲಕ್ಕೂ ಹಿಂಬಾಗಕ್ಕೂ ತಿರುಗುವ ಕೆಳಉಬ್ಬಿನ ರೇಖೆಯಾಗುತ್ತದೆ. ಈ ಸ್ಥಳದಲ್ಲಿ ಕಿರಿಡೊಂಕಿನಲ್ಲಿರುವ ಕೋನಕಚ್ಚಿನ ನೇರದಲ್ಲಿ ಒಂದು ಸಣ್ಣ ಉಬ್ಬು ಸಾಮಾನ್ಯವಾಗಿ ಇದ್ದು ಅದರ ಸಹಾಯದಿಂದ ಜಠರದ ಎಡಬಲ ಭಾಗಗಳನ್ನು ವಿಂಗಡಿಸಬಹುದು. ಜಠರದ ದೊಡ್ಡ ಅಂಚು ಅದರ ಎಡ ಅಂಚು ಮಾತ್ರವೇ ಅಲ್ಲದೆ ಕೆಳಅಂಚೂ ಹೌದು. ಕೆಲವು ಸಮಯ ಅದು ಜಠರದ ಮುಂದಿನ ಅಂಚಿನಂತೆ ಕಾಣಿಸುತ್ತದೆ. ಉದ್ದಕ್ಕೂ ಈ ಅಂಚು ಕೂಡ ಡೊಂಕಾಗಿರುವುದರಿಂದ ಇದಕ್ಕೆ ಜಠರದ ಹಿರಿಡೊಂಕು (ಗ್ರೇಟರ್ ಕರ್ವೇಚರ್) ಎಂಬ ಹೆಸರುಂಟು. ಪ್ರಾರಂಭದಲ್ಲಿ ಈ ಅಂಚು ಫಂಡಸ್ಸಿಗೂ ಅನ್ನನಾಳಕ್ಕೂ ನಡುವೆ ಇರುವ ಕಾರ್ಡಿಯಕ್ ಕಚ್ಚನ್ನು ಉಂಟುಮಾಡಿದೆ. ಫಂಡಸ್ಸಿನಲ್ಲಿ ಅತ್ಯಂತ ಉನ್ನತಭಾಗದಲ್ಲಿ ಈ ಅಂಚು ಎಡಸ್ತನಾಗ್ರದ ಕೆಳಗಿನ ನೇರದಲ್ಲಿದೆ. ಜಠರದ ಅತ್ಯಂತ ಕೆಳಭಾಗದಲ್ಲಿ ಈ ಅಂಚುವ್ಯಕ್ತಿ ಶಯನಭಂಗಿಯಲ್ಲಿದ್ದಾಗ 10ನೆಯ ಪಕ್ಕೆಲುಬಿನ ಮೃದ್ವಸ್ತಿಗಳ ನೇರದಲ್ಲಿ ಉಂಟು. ಆದರೆ ವ್ಯಕ್ತಿಯ ಊಧ್ರ್ವಭಂಗಿಯಲ್ಲಿ ಇದು ಜಠರದ ಅತ್ಯಂತ ಕೆಳಭಾಗವಾಗಿರುವುದು. ಆಹಾರದಿಂದ ತುಂಬಿದ್ದಾಗಲಂತೂ ಅದು ಹೊಕ್ಕಳಿನ ನೇರದಲ್ಲಿ ಅಥವಾ ಇನ್ನೂ ಕೆಳಗೆ ಇರಬಹುದು. ಜಠರದ ಹಿರಿಡೊಂಕು ವಪೆಗೆ ಜಠರ ವಪೆಬಂಧನದಿಂದಲೂ ಗುಲ್ಮಕ್ಕೆ ಜಠರಗುಲ್ಮಬಂಧನದಿಂದಲೂ ಅಡ್ಡ ದೊಡ್ಡಕರುಳಿಗೆ ಹಿರಿ ಒಮೆನ್‍ಟಮ್ಮಿನಿಂದಲೂ ಸೇರಿಸಲ್ಪಟ್ಟಿದೆ. ಹಿರಿ ಒಮೆನ್‍ಟಮ್ಮಿನ ಎರಡು ಪದರಗಳ ನಡುವೆ ಹಿರಿ ಡೊಂಕಿನ ಎಡ ಬಲ ಭಾಗಗಳಿಂದ ರಕ್ತನಾಳಗಳು ಹಾಯ್ದು ಜಠರವನ್ನು ತಲುಪುತ್ತವೆ.

ಜಠರದ ಇನ್ನೊಂದು ದ್ವಾರ ಪೈಲೋರಿಕ್ ದ್ವಾರ. ಜಠರದ ಮೇಲ್ಮೈಯಲ್ಲಿ ಸುತ್ತಲೂ ಇರುವ ಒಂದು ಸಂದುಗೆರೆಯೂ ಪ್ರಿಪೈಲೋರಿಕ್ ಅಭಿಧಮನಿಯೂ ಇದರ ಸ್ಥಾನವನ್ನು ತೋರಿಸುತ್ತವೆ. ಪೈಲೋರಿಕ್ ದ್ವಾರ ದೇಹಮಧ್ಯಗೆರೆಯಿಂದ ಸುಮಾರು 1/2" ಬಲಕ್ಕೂ ಸೊಂಟದ ಮೊದಲ ಕಶೇರುಮಣಿಯ ತಳಭಾಗದ ನೇರದಲ್ಲೂ ಇದೆ. ಈ ನೇರ ಎದೆಮೂಳೆಯ ಮೇಲಂಚಿಗೂ ಕಿಬ್ಬೊಟ್ಟೆ ಮೂಳೆಯ ಮೇಲಂಚಿಗೂ ಸಮಾಂತರದಲ್ಲಿದೆ. ಜಠರ ಖಾಲಿಯಾಗಿದ್ದಾಗ ಅಲ್ಲದೆ ವ್ಯಕ್ತಿ ಶಯನಭಂಗಿಯಲ್ಲಿದ್ದಾಗ ಪೈಲೋರಿಕ್‍ದ್ವಾರ ಈ ನೇರದಲ್ಲಿ ಇರುವುದೆಂದು ವಿವರಿಸಿದರೂ ಜಠರದ ತುಂಬಿದ ಸ್ಥಿತಿ, ವ್ಯಕ್ತಿಯ ಭಂಗಿ-ಇವು ಅಷ್ಟಾಗಿ ಪೈಲೋರಿಕ್ ದ್ವಾರದ ಸ್ಥಳಪಲ್ಲಟಮಾಡುವುದಿಲ್ಲವೆಂಬುದು ತಿಳಿದಿದೆ.

ಜಠರದ ಎರಡು ಅಂಚುಗಳೂ ಜಠರದ ಊಧ್ರ್ವತಲ ನೀಚತಲಗಳು ಸಂಧಿಸುವ ಸ್ಥಳಗಳು. ಊಧ್ರ್ವತಲ ಊಧ್ರ್ವಮುಖವಾಗಿಯೂ ಮುಮ್ಮುಖವಾಗಿಯೂ ಉಂಟು. ಜಠರ ತುಂಬಿದ್ದಾಗ ಹೆಚ್ಚು ಮುಮ್ಮುಖವಾಗಿಯೂ ಖಾಲಿ ಇದ್ದಾಗ ಹೆಚ್ಚು ಊಧ್ರ್ವಮುಖವಾಗಿಯೂ ಇರುವುದು ಸಾಮಾನ್ಯ. ಜಠರದ ಈ ಮೈ ಇನ್ನೊಂದು ಮೈಗಿಂತ ಹೆಚ್ಚು ಉಬ್ಬಿದ್ದು ಪೂರ್ಣವಾಗಿ ಕಿರಿಹಿರಿ ಒಮೆನ್‍ಟಮ್‍ಗಳನ್ನು ಸೇರಿಸುವ ಪೆರಿಟೋನಿಯಮ್ ಪದರದಿಂದ ಹೊದಿಸಲ್ಪಟ್ಟಿದೆ. ಇದರ ಎಡ ಮತ್ತು ಮೇಲುಭಾಗ ವಪೆಗೂ ಬಲ ಮತ್ತು ಮೇಲುಭಾಗ ಯಕೃತ್ತಿಗೂ ಕೆಳಭಾಗ ಉದರಭಿತ್ತಿಗೂ ತಾಕಿದೆ. ಜಠರದ ನೀಚತಲ ಜಠರತಲ್ಪದ ಮೇಲಿರುವ ಮೈ. ಇದು ಊಧ್ರ್ವತಲಕ್ಕಿಂತ ಚಪ್ಪಟೆಯಾಗಿದೆ. ಜಠರತಲ್ಪ ಬೆನ್ನಿನಿಂದ ಉದರದ ಮುಂಭಾಗದ ತನಕ ಕೆಳಮುಖವಾಗಿ ಇಳಿಜಾರಾಗಿ ಹರಡಿರುವ ಅನೇಕ ಅಂಗಗಳ ಸಂಪರ್ಕದಿಂದಾದ ಫಲಕ ಅಥವಾ ನಾಗೊಂದಿಗೆ. ವಪೆ, ಗುಲ್ಮ, ಎಡ ಅಡ್ರೀನಲ್ ಗ್ರಂಥಿ, ಎಡಮೂತ್ರಪಿಂಡದ ಊಧ್ರ್ವಭಾಗ, ಮೇದೋಜೀರಕಾಂಗ, ಅಡ್ಡ ದೊಡ್ಡ ಕರುಳಿನ ಹಾಳೆ ಮತ್ತು ಸ್ವಯಂ ಅಡ್ಡಕರುಳು-ಇವೆಲ್ಲವೂ ಜಠರತಲವೇರ್ಪಡಲು ಪಾಲ್ಗೊಳ್ಳುತ್ತವೆ.

ಜಠರದ ಈ ಮೇಲಿನ ವಿವರಣೆ ಕರಾರುವಾಕ್ಕೆಂದು ತಿಳಿಯಲಾಗದು. ಬೇರೆ ಬೇರೆವ್ಯಕ್ತಿಗಳಲ್ಲಿ ಬೇರೆ ಬೇರೆ ಸಂದರ್ಭಗಳಲ್ಲಿ ಜಠರದ ಆಕಾರ, ವಿಸ್ತಾರ, ಸ್ಥಾನಗಳು ಬೇರೆ ಬೇರೆಯಾಗಿರುತ್ತವೆ. ಗಮನಿಸಬೇಕಾದ ವಿಷಯವೆಂದರೆ ಕಾರ್ಡಿಯಕ್ ದ್ವಾರವೂ ಫಂಡಸ್ಸಿನ ಸ್ತಾನವೂ ಪಲ್ಲಟವಾಗುದಿರುವಿಕೆ ಮತ್ತು ಪೈಲೋರಿಕ್ ತುದಿಯ ಸ್ಥಾನ ಹೆಚ್ಚುಪಲ್ಲಟವಾಗದೇ ಇರುವುದು. ಜಠರದ ಲಂಬಾಕ್ಷದ ಎರಡು ತುದಿಗಳೂ ಹೀಗೆ ನಿರ್ದಿಷ್ಟ ಸ್ಥಾನದಲ್ಲಿದ್ದರೂ ಅವುಗಳ ನಡುವಿರುವ ಜಠರದ ಕಾಯ ಬಿಗಿತುಕೊಂಡು ಇಲ್ಲವೆ ಸಡಿಲವಾಗಿ ಇರಬಹುದು. ಕಾಯದ ಎರಡು ತಲಗಳು ಹಿಮ್ಮುಖ ಮುಮ್ಮುಖವಾಗಿ ಇಲ್ಲವೆ ಊಧ್ರ್ವನೀಚಮುಖವಾಗಿ ಇರಬಹುದು. ಅಂಚುಗಳು ಮೇಲಿನ ಕೆಳಗಿನ ಅಂಚುಗಳಾಗಿರದೆ ಮುಂದಿನ ಹಿಂದಿನ ಅಂಚುಗಳಾಗಿ ಕಾಣಬಹುದು. ಒಟ್ಟು ಜಠರದ ಆಕಾರ ಕುಡುಗೋಲಿನಂತಿರುವುದು ಸಾಮಾನ್ಯ. ಶವದ ಅಂಗಛೇದನಾ ವ್ಯಾಸಂಗದಲ್ಲಿ ಕಾಣಬರುವ ಜಠರದ ಆಕಾರ ವಿಸ್ತಾರ ಸ್ಥಾನಗಳೇ ಜೀವಂತಸ್ಥಿತಿಯಲ್ಲೂ ಇರುತ್ತವೆಯೆಂದು ತಿಳಿಯುವುದು ತಪ್ಪು. ಜೀವಂತಸ್ಥಿತಿಯಲ್ಲಿ ಖಾಲಿಜಠರ ಹೇಗಿರುತ್ತದೆಂದು ಹೇಳುವುದು ಕಷ್ಟ. ಬೇರಿಯಮ್ ದ್ರಾವಣವನ್ನು ಕುದಿಸಿ ಅದನ್ನು ತುಂಬಿಸಿ ಎಕ್ಸ್‍ಕಿರಣ ಪರೀಕ್ಷೆಗೆ ಈಡುಮಾಡಿ ಬೇರೆ ಬೇರೆಯವರಲ್ಲಿ ಊಧ್ರ್ವಭಂಗಿಯಲ್ಲಿ ತುಂಬಿದ ಜಠರ ಹೇಗಿರುತ್ತದೆಂಬುದನ್ನೂ ರೋಗಸ್ಥಿತಿಯಲ್ಲಿ ಹೇಗಿರುತ್ತದೆ ಎಂಬುದನ್ನೂ ನೋಡಲಾಗಿದೆ. ಇಂಥ ಎಕ್ಸ್‍ಕಿರಣ ಪರೀಕ್ಷೆಯಿಂದ ತುಂಬಿದ ಜಠರ ವಿಲಾಯತಿ ಗೂಳಿಯ ಕೊಂಬಿನಂತೆ ಇಲ್ಲವೇ 'ಐ' ಅಕ್ಷರದ ಕನ್ನಡಿ ಬಿಂಬದಂತೆ ಇಲ್ಲವೆ 'ಎ' ಅಕ್ಷರದಂತೆ ಸಾಮಾನ್ಯವಾಗಿ ಇರುವುದು. ಎ ಮಾದರಿ ಜಠರದಲ್ಲಿ ಜಠರದ ಅತ್ಯಂತ ತಳಭಾಗ ಕೆಲವರಲ್ಲಿ ಹೊಕ್ಕಳಿನ ಇಲ್ಲವೆ ಅದಕ್ಕಿಂತ ಕೆಳಗಿನ ನೇರದಲ್ಲಿ ಇರುತ್ತದೆ. ಇನ್ನೂ ಬೇರೆ ರೂಪಗಳೂ ಇರಬಹುದು. ಅಲ್ಲದೆ ಪ್ರತಿ ಜಠರದಲ್ಲೂ ದೊಡ್ಡ ಹಿಗ್ಗಲ್ಪಟ್ಟ ಎಡಭಾಗವೂ ಕಿರಿದಾಗಿ ಸಂಕುಚಿತವಾದ ನಾಳಾಕಾರದ ಬಲಭಾಗವೂ ಇದ್ದು ಕ್ರಮೇಣ ಎಡಭಾಗದ ಸ್ಥಿತಿ ಬಲಭಾಗಕ್ಕೂ ಹಬ್ಬುವುದು ಕಾಣಬರುತ್ತದೆ; ಮತ್ತು ಫಂಡಸ್ ಭಾಗ ಯಾವಾಗಲೂ ಅನಿಲದಿಂದ ತುಂಬಿ ಉಬ್ಬಿರುವುದು ಕಾಣಿಸುತ್ತದೆ. ಖಾಲಿ ಜಠರ ತುದಿಯಿಂದ ತುದಿಯವರೆಗೆ ಆಯಾ ರೂಪದಲ್ಲೆ ಬಿಗಿತಗೊಂಡು ಕಿರಿದಾಗಿ ಕೊಳವೆ ಆಕಾರದಲ್ಲಿ ಇರುತ್ತದೆ ಎಂದುಕೊಳ್ಳಬಹುದು. ತುಂಬಿದ ಜಠರದ ಶಯನ ಭಂಗಿಯಲ್ಲಿ ಎಡದಿಂದ ಬಲಕ್ಕೆ ಒಂದೇ ಸಮವಾಗಿ ಇಳಿಜಾರಾಗಿ ಅಡ್ಡಡ್ಡವಾಗಿ ಪಸರಿಸಿರುತ್ತದೆ. ಊಧ್ರ್ವಭಂಗಿಯಲ್ಲಿ ಜಠರ ಹೆಚ್ಚು ಹೆಚ್ಚು ತುಂಬಿದಂತೆ ಕೆಳಮುಖವಾಗಿ ಹಾಗೂ ಮುಮ್ಮುಖವಾಗಿ ಹಿಗ್ಗುತ್ತದೆ. ಹೀಗೆ ಹಿಗ್ಗುವುದು ನೆರೆ ಅಂಗಗಳ ಪರಿಸ್ಥಿತಿಯಿಂದ ಸಾಧ್ಯವಾಗದೇ ಹೋದರೆ ಜಠರ ಮೇಲ್ಮುಖವಾಗಿಯೇ ಹಿಗ್ಗುವಂತಾಗಿ ವಪೆ ಮತ್ತು ಯಕೃತ್ತುಗಳ ಮೇಲೆ ಒತ್ತಡ ಉಂಟಾಗಿ ಉಬ್ಬರದಿಂದ ಹಿಂಸೆಯಾಗಿ ಕೆಲವು ಸಂದರ್ಭಗಳಲ್ಲಿ ಗುಂಡಿಗೆ ಡವಡವ ಎಂದು ಹೊಡೆದುಕೊಳ್ಳುವುದೂ ಉಂಟು. ಹಿಗ್ಗಿದಾಗ ಜಠರದ ಒಳಗಿನ ಸ್ಥಳದ ಘನಗಾತ್ರ ಸ್ವಾಭಾವಿಕವಾಗಿಯೇ ಅನಿರ್ದಿಷ್ಟವಾದರೂ ಸರಾಸರಿ ಪ್ರಮಾಣ ಜನನಕಾಲದಿಂದ ವಯಸ್ಕರಾಗುವವರೆಗೂ ಹೆಚ್ಚುತ್ತ ಹೋಗುತ್ತದೆ. ಹುಟ್ಟಿದ ಮಕ್ಕಳಲ್ಲಿ ಸುಮಾರು 30-35 ಮಿಲಿಲೀಟರುಗಳಷ್ಟು (miಟ) ಎರಡು ವಾರಗಳ ಕೂಸಿನಲ್ಲಿ 75 miಟಗಳಷ್ಟು 3 ತಿಂಗಳ ಶಿಶುವಿನಲ್ಲಿ 200 miಟಗಳಷ್ಟು, 2 ವರ್ಷಗಳ ಮಗುವಿನಲ್ಲಿ 1/2 ಲೀಟರಿನಷ್ಟು, ಬಾಲ್ಯಾಂತ್ಯದಲ್ಲಿ ಒಂದು ಲೀಟರಿನಷ್ಟು ಮತ್ತು ವಯಸ್ಕರಲ್ಲಿ ಸುಮರು 1 1/2 ಲೀಟರುಗಳಷ್ಟು ಇರುತ್ತದೆಂದು ಪ್ರಯೋಗಗಳಿಂದ ಗೊತ್ತಾಗಿದೆ.

ಜಠರದ ಒಳನೋಟ

[ಬದಲಾಯಿಸಿ]

ಜಠರವನ್ನು ಅದರ ಲಂಬಾಕ್ಷದಲ್ಲಿ ಅಂಚುಗಳ ನೇರದಲ್ಲಿ ಕೊಯ್ದು ನೋಡಿದರೆ ಜಠರದ ಒಳಗೂ ಎರಡು ಭಾಗಗಳನ್ನು ಬೇರೆಯಾಗಿ ಗುರುತಿಸಬಹುದಾಗಿದೆ. ಕಿರಿಡೊಂಕಿನಲ್ಲಿರುವ ಕೋನಕಚ್ಚಿಗೆ ಅನುರೂಪವಾಗಿ ಒಳಗೆ ಒಂದು ಉಬ್ಬು ಇದ್ದು ಅದರ ಎಡಬಲಭಾಗಗಳು ಕ್ರಮವಾಗಿ ಹಿರಿದಾದ ಗೋಳಾಕಾರದ ಕಾರ್ಡಿಯಕ್ ಮತ್ತು ಕಿರಿದಾದ ನಾಳಾಕಾರದ ಪೈಲೋರಿಕ್ ಭಾಗಗಳೆಂದು ವ್ಯವಹರಿತವಾಗಿವೆ. ಅನ್ನನಾಳಕ್ಕೂ ಜಠರದ ಫಂಡಸ್ಸಿಗೂ ನಡುವೆ ಇರುವ ಕಾರ್ಡಿಯಕ್ ಕಚ್ಚಿಗೆ ಅನುರೂಪವಾಗಿ ಒಳಗಿರುವ ಚಾಚು ಕವಾಟದಂತೆ ವರ್ತಿಸುತ್ತ ಜಠರ ಸಂಕುಂಚನವಾದಾಗ ವಸ್ತು ಅನ್ನನಾಳಕ್ಕೆ ವಾಪಸಾಗುವುದನ್ನು ತಪ್ಪಿಸುತ್ತದೆ ಎಂದು ನಂಬಲಾಗಿದೆ. ಭ್ರೂಣಾವಸ್ಥೆಯಲ್ಲಿ ಜಠರದ ಒಳಗಡೆ ಕಿರಿಡೊಂಕಿನುದ್ದಕ್ಕೂ ಒಂದು ತೋಡು ಇರುತ್ತದೆ. ಇದಕ್ಕೆ ಜಠರಾಂತರಪಥ (ಗ್ಯಾಸ್ಟ್ರಿಕ್ ಪಾತ್‍ವೇ) ಎಂದು ಹೆಸರು. ಬೇರಿಯಮ್ ದ್ರಾವಣ ಕುಡಿಸಿ ಎಕ್ಸ್‍ಕಿರಣ ಪರೀಕ್ಷೆ ಮಾಡಿದಾಗ ಹುಟ್ಟಿದ ಮೇಲೂ ವಯಸ್ಕರಲ್ಲೂ ಈ ತೋಡು ಇರಬಹುದೆಂದೂ ನುಂಗಿದಾಗ ಜಠರದಲ್ಲಿ ಅನ್ನಸಾಗುವುದು ಈ ಮಾರ್ಗವಾಗಿಯೇ ಎಂದು ವ್ಯಕ್ತವಾಗಿದೆ. ಜಠರದ ಒಳಮೈ ಶೈಶವದಲ್ಲಿ ಕೆಂಪುಗುಲಾಬಿ ಬಣ್ಣದ್ದಾಗಿಯೂ ವಯಸ್ಸಾದಂತೆ ಬಣ್ಣದುಂದಿ ವಾರ್ಧಿಕ್ಯದಲ್ಲಿ ಕಪಿಲವರ್ಣದ್ದಾಗಿಯೂ ಇರುವುದು. ಜಠರ ಖಾಲಿ ಆಗಿದ್ದಾಗ ಅದರ ಒಳಮೈ ಅಲ್ಲಲ್ಲಿ ಮಡಚಿಕೊಂಡಿರುವುದು. ಈ ಮಡಿಕೆಗಳು ಸಾಮಾನ್ಯವಾಗಿ ಜಠರದ ಲಂಬಾಕ್ಷದಲ್ಲೇ ಇರುವುವು. ಜಠರದ ಒಳಮೈಯನ್ನು ವೀಕ್ಷಿಸುವಾಗ ಪೈಲೋರಿಕ್ ನಾಲೆ ಮುಂಗರುಳಿನೊಳಕ್ಕೆ (ಡುಯೋಡೀನಮ್) ಟೆಲಿಸ್ಕೋಪಿನಂತೆ ಚಾಚಿಕೊಂಡಿರುವ ಬುಗುಟೂ ಅದರ ತುದಿಯಲ್ಲಿ ಇರುವ ಪೈಲೋರಿಕ್ ದ್ವಾರವೂ ಚೆನ್ನಾಗಿ ವ್ಯಕ್ತವಾಗುತ್ತದೆ. ಅಲ್ಲದೆ ಪೈಲೋರಿಕ್ ನಾಲಾಪ್ರದೇಶದಲ್ಲಿ ಜಠರಭಿತ್ತಿಯ ಸ್ನಾಯುಗಳು ದಪ್ಪವಾಗಿರುವುದೂ ಪೈಲೋರಿಕ್ ದ್ವಾರಪ್ರದೇಶದಲ್ಲಿ ಸುತ್ತುವರಿದ ಸ್ನಾಯು ಇನ್ನೂ ದಪ್ಪವಾಗಿ ಪೈಲೋರಿಕ್ ಸ್ಫಿಂಕ್ಟರ್ (ಗತಿನಿರೋಧಕ) ಆಗುವುದೂ ವ್ಯಕ್ತವಾಗುವುದು. ಈ ಪ್ರದೇಶದಲ್ಲಿರುವ ಲಂಬಗತಿಸ್ನಾಯು ಪೈಲೋರಿಕ್ ದ್ವಾರವನ್ನು ಹಿಗ್ಗಿಸುವುದಕ್ಕೆ ಸಹಾಯಕವಾಗಿದೆ. ಜಠರದ ಒಳಮೈ ಮೇಲೆಲ್ಲ ಸಣ್ಣ ಕುಳಿಗಳಿರುವುದೂ ಅವುಗಳ ನಡುವಿನ ಉಬ್ಬಿನಿಂದ ಒಳಮೈ ಜೇನುಗೂಡಿನಂತೆ ಇರುವುದೂ ಜಠರದ ಒಳಮೈಯನ್ನು ಭೂತಗನ್ನಡಿಯಿಂದ ನೋಡಿದರೆ ತಿಳಿಯುವುದು. ಈ ನೋಟ ಜಠರದ ಪೈಲೋರಿಕ್ ಭಾಗದಲ್ಲಿ ಹೆಚ್ಚು ಸ್ಫುಟವಾಗಿದೆ. ವ್ಯಕ್ತಿ ಜೀವಂತವಾಗಿರುವಾಗ ಜಠರದ ಒಳಮೈ ಪರೀಕ್ಷೆ ಜಠರದರ್ಶಿ (ಗ್ಯಾಸ್ಟ್ರಾಸ್ಕೋಪ್) ಎಂಬ ಉಪಕರಣದಿಂದ ಸಾಧ್ಯ. ಇದು ಡೊಂಕಿಸಬಲ್ಲ ಮತ್ತು ತುದಿಯಲ್ಲಿ ವಿದ್ಯುದ್ದೀಪವೂ ಸಣ್ಣಳತೆಯ ದೂರದರ್ಶಕವೂ ಇರುವ ಒಂದು ಉಪಕರಣ. ಇದನ್ನು ಗಂಟಲಿನ ಮೂಲಕ ಜಠರದೊಳಗೆ ಹುಗಿಸಿ ಒಳಮೈ ಪರೀಕ್ಷೆ ಮಾಡಲಾಗುತ್ತದೆ. ಹೀಗೆ ಪರೀಕ್ಷಿಸಿದಾಗ ಜೀವಂತ ಆರೋಗ್ಯಸ್ಥಿತಿಯಲ್ಲಿ ಜಠರ ಫಳಫಳನೆ ಹೊಳೆಯುತ್ತ ಕಿತ್ತಳೆ ಹಣ್ಣಿನ ಬಣ್ಣಕ್ಕಿರುವುದೂ ಮೃತವಾದ ಮೇಲೆ ಬಣ್ಣ ಕುಂದುವುದೂ ವ್ಯಕ್ತವಾಗುತ್ತದೆ.

ಜಠರಭಿತ್ತಿಯ ಸೂಕ್ಷ್ಮರಚನೆ

[ಬದಲಾಯಿಸಿ]

ಜೀರ್ಣನಾಳದ ಎಲ್ಲ ಕಡೆಯಲ್ಲಿಯಂತೆಯೇ ಜಠರ ಭಿತ್ತಿಯೂ ನಾಲ್ಕು ವರಸೆಗಳಾಗಿ ಏರ್ಪಟ್ಟಿರುವ ಅಂಗಾಂಶಗಳಿಂದಾಗಿದೆ. ಅತ್ಯಂತ ಹೊರವರಸೆ ಪೆರಿಟೋನಿಯಮ್ಮಿನಿಂದಾದುದು. ಇದು ಬಹುತೆಳುವಾದ ಪೊರೆ. ಅಲ್ಲದೆ ಅಳ್ಳಕವಾಗಿ ಹೊದಿಸಲ್ಪಟ್ಟೂ ಇದೆ. ಹೀಗಾಗಿ ಇದನ್ನು ಮೇಲ್ಮೈಯಿಂದ ಬೆರಳುಗಳಿಂದಲೇ ಸುಲಿದು ಬಿಡಬಹುದು. ಇದರ ಅಡಿ ಅನೈಚ್ಛಿಕ ಸ್ನಾಯುಗಳಿಂದಾದ ಒಂದು ವರಸೆ ಉಂಟು. ಇಲ್ಲಿ ಸ್ನಾಯುಗಳು ಮೂರು ಪರದರಗಳಾಗಿ ಏರ್ಪಟ್ಟಿವೆ. ಹೊರಪದರ ಲಂಬಗತಿ ಸ್ನಾಯುತಂತುಗಳಿಂದಾದುದು. ಜಠರದ ತುದಿಯಲ್ಲಿ ಇದು ಅನ್ನನಾಳದ ಮತ್ತು ಮುಂಗರುಳಿನ ಸಮಾನಸ್ನಾಯುವಿನೊಡನೆ ಮಿಳಿತವಾಗುತ್ತದೆ. ಕಿರಿಡೊಂಕಿನಲ್ಲಿ ಮತ್ತು ಪೈಲೋರಸ್ ವಿಭಾಗದಲ್ಲಿ ದಪ್ಪವಾಗಿಯೂ ಬೇರೆಕಡೆ ತೆಳ್ಳಗೂ ಉಂಟು. ತೆಳ್ಳಗಿದ್ದರೂ ಜಠರಭಿತ್ತಿಯಲ್ಲಿ ಪೂರ್ಣ ವ್ಯಾಪಕವಾಗಿರುವುದು ಲಂಬಗತಿಸ್ನಾಯುವೇ. ಚಕ್ರಗತಿಯ ಸ್ನಾಯುತಂತುಗಳು ಇದರ ಒಳಗಿನದು. ಇವು ಅಪೂರ್ಣ ಚಕ್ರಗಳಂತೆ U ಆಕಾರವಾಗಿ ಕಿರಿಡೊಂಕಿನ ಇಕ್ಕೆಲಗಳಲ್ಲೂ ವ್ಯಾಪಿಸಿರುತ್ತವೆ. ಫಂಡಸ್ ಭಾಗದಲ್ಲಿ ಈ ಸ್ನಾಯುವಿಲ್ಲ. ಪೈಲೋರಿಕ್ ಭಾಗದಲ್ಲಿ ದಪ್ಪವಾಗಿಯೂ ಪೂರ್ಣ ಚಕ್ರಾಕಾರವಾಗಿಯೂ ಪೈಲೋರಿಕ್ ದ್ವಾರಪ್ರಾಂತ್ಯದಲ್ಲಿ ಪೈಲೋರಿಕ್ ಗತಿನಿರೋಧಕವಾಗಿಯೂ ಏರ್ಪಟ್ಟಿದೆ. ಮುಂಗರುಳಿನ ಸಮಾನ ಚಕ್ರಗತಿಸ್ನಾಯುವಿನಿಂದ ಇದು ಒಂದು ಬಂಧನಾಂಗಾಂಶಪಟ್ಟಿಯಿಂದ ಬೇರ್ಪಟ್ಟಿದೆ. ಕಾರ್ಡಿಯಕ್ ದ್ವಾರದಲ್ಲಿ ಈ ಸ್ನಾಯು ಅನ್ನನಾಳದ ಚಕ್ರಗತಿಸ್ನಾಯುವಿನೊಡನೆ ಮಿಲನವಾಗುತ್ತದೆ. ಅತ್ಯಂತ ಒಳಗಿನ ಸ್ನಾಯುಪದರ ಓರೆಗತಿಯ ತಂತುಗಳಿಂದಾದುದು. ಇದೂ ಅನ್ನನಾಳದ ಚಕ್ರಗತಿ ಸ್ನಾಯುವಿನೊಡನೆ ಮಿಲನವಾಗುತ್ತದೆ. ಕಿರಿಡೊಂಕುಪ್ರದೇಶದಲ್ಲೂ ಪೈಲೋರಿಕ್ ವಿಭಾಗದಲ್ಲೂ ಈ ಸ್ನಾಯುಪದರ ಇಲ್ಲ. ಆದರೆ ಫಂಡಸ್ ಭಾಗ ಇದರಿಂದ ಪೂರ್ಣವಾಗಿ ಆವರಿಸಲ್ಪಟ್ಟು ಇಲ್ಲಿ ಅದರ ತಂತುಗಳು ಚಕ್ರಗತಿಯಾಗಿರುತ್ತವೆ. ಜಠರದ ಕಾಯದಲ್ಲಿ ಈ ಸ್ನಾಯು ಅಲ್ಲಲ್ಲಿ ಪಟ್ಟಿಗಳಂತೆ ಇರುವುದು ಕಾಣಬರುವುದು. ಸ್ನಾಯುವರಸೆಯ ಬಳಗಿರುವುದು ಲೋಳೆಪೊರೆ ಅಡಿಯ ಊತಕ. ಇದು ಬಂಧನಾಂಗಾಂಶದಿಂದಲೇ ಆದುದು. ಇಲ್ಲಿ ರಕ್ತನಾಳಗಳೂ ನರಗಳೂ ಕವಲೊಡೆದು ಸೇರಿ ಬಲೆಯಂತಾಗಿ ಆ ಬಲೆಗಳಿಂದ ಲೋಳೆಪೊರೆಗೆ ರಕ್ತಪೂರೈಕೆಯೂ ನರಪೂರೈಕೆಯೂ ಆಗುತ್ತವೆ. ಸ್ನಾಯುಗಳಿಗೂ ಲೋಳೆಪೊರೆಗೂ ನಡುವೆ ಈ ಊತಕ ಇರುವುದರಿಂದ ಸ್ನಾಯುಗಳ ಸಂಕುಂಚನ ಆಕುಂಚನಗಳು ಲೋಳೆಪೊರೆಯನ್ನು ಕಿತ್ತಾಡಲಾರವು.

ಜಠರಭಿತ್ತಿಯ ಅತ್ಯಂತ ಒಳಗಿನ ವರಸೆ ಲೋಳೆಪೊರೆಯಿಂದಾದುದು. ಇದು ಮೃದುವಾಗಿಯೂ ದಪ್ಪವಾಗಿಯೂ ಸ್ಪಂಜಿನಂತಿರುವ ಪದರ. ಹಿಗ್ಗಿಕುಗ್ಗಬಲ್ಲ ಪುಟಿತ ಬಂಧನಾಂಗಾಂಶತಂತುಗಳು ಇದರಲ್ಲಿ ಲೋಪವಾಗಿರುವುದರಿಂದ ಖಾಲಿ ಜಠರದಲ್ಲಿ ಈ ಪದರ ಮಡಿಕೆ ಮಡಿಕೆಯಾಗಿರುತ್ತದೆ. ಮಡಿಕೆಗಳು ಹಿರಿಡೊಂಕಿನಲ್ಲಿ ಮತ್ತು ಪೈಲೋರಸ್ ಭಾಗದಲ್ಲಿ ಹೆಚ್ಚಾಗಿವೆ. ಕಿರಿಡೊಂಕಿನಲ್ಲಿ ಕೇವಲ 3-4 ಮಡಿಕೆಗಳು ಇರಬಹುದು. ಮಡಿಕೆಗಳು ಪೂರ್ಣವಾಗಿ ಲೋಳೆಪೊರೆಯವೇ. ಜಠರಭಿತ್ತಿಯ ಬೇರೆ ಮರಸೆಗಳು ಮಡಿಕೆಗಳಲ್ಲಿ ಭಾಗವಹಿಸುವುದಿಲ್ಲ. ವಸ್ತುಶೇಖರಣೆಯಿಂದ ಜಠರ ಹಿಗ್ಗಿಸಲ್ಪಟ್ಟಾಗ ಲೋಳೆಪೊರೆಯ ಮಡಿಕೆಗಳು ಬಿಚ್ಚಿಕೊಂಡು ಜಠರ ವಿಸ್ತಾರಗೊಳ್ಳುವ ಸೌಲಭ್ಯ ಉಂಟು. ಕಾರ್ಡಿಯಕ್ ದ್ವಾರದ ನೆರೆಯಲ್ಲಿ ಲೋಳೆಪೊರೆ ಅತ್ಯಂತ ತೆಳುವಾಗಿಯೂ ಪೈಲೋರಿಸ್ಸಿನಲ್ಲಿ ಅತ್ಯಂತ ದಪ್ಪವಾಗಿಯೂ ಇದೆ. ಜಠರದ ಒಳಮೈಯಲ್ಲಿ ಎಲ್ಲೆಲ್ಲೂ ಕಾಣಬರುವ ಜಠರ ಕುಳಿಗಳೂ ಲೋಳೆಪೊರೆಗೆ ಸೀಮಿತವಾದವೇ. ಸುಮಾರು 1/8ರಿಂದ ¼mm. ವ್ಯಾಸವುಳ್ಳ ಈ ಕುಳಿಗಳು ವಾಸ್ತವವಾಗಿ ಜಠರಗ್ರಂಥಿಗಳ ನಾಳಭಾಗಗಳೇ ಆಗಿವೆ. ಒಂದೊಂದು ಕುಳಿಗೂ 2-4 ಸ್ರವಿಸುವ ಭಾಗಗಳು ಸೇರಿಕೊಂಡು ಜಠರಕುಳಿಯ ಮೂಲಕ ತಮ್ಮ ಸ್ರಾವವನ್ನು ಜಠರ ಕುಹರಕ್ಕೆ ಸುರಿಯುತ್ತವೆ.

ಜಠರ ಗ್ರಂಥಿಗಳು ಸೂಕ್ಷ್ಮದರ್ಶಕದಲ್ಲಿ ಮಾತ್ರ ಗೋಚರವಾಗುವ ಪ್ರಯೋಗ ನಳಿಕೆಯಂತಿರುತ್ತವೆ. ಇವು ಲೋಳೆಪೊರೆಯ ದಪ್ಪದಲ್ಲಿ ಅಡಕವಾಗಿವೆ. ಇವುಗಳಲ್ಲಿ ಮೂರು ವಿಧ. ಕಾರ್ಡಿಯಕ್ ದ್ವಾರದ ನೆರೆಗೆ ಸೀಮಿತವಾದವು ಕಾರ್ಡಿಯಕ್ ಗ್ರಂಥಿಗಳು. ಇವು ಲೋಳೆಯನ್ನು ಸ್ರವಿಸುತ್ತವೆ. ಪೈಲೋರಿಕ್ ವಿಭಾಗದಲ್ಲಿರುವವು ಪೈಲೋರಿಕ್ ಗ್ರಂಥಿಗಳು. ಇವುಗಳ ಸ್ರವಿಸುವ ಭಾಗ ಸುರುಳಿ ಸುತ್ತಿಕೊಂಡು ಲೋಳೆಪೊರೆಯ ಆಳಕ್ಕೆ ಸೀಮಿತವಾಗಿ ಬಹು ಆಳವಾಗಿರುವ ಜಠರ ಕುಳಿಗಳನ್ನು ಸೇರುತ್ತವೆ. ಸ್ರಾವಭಾಗದಿಂದ, ಬಹುಶಃ ನಾಳಭಾಗದಿಂದಲೂ ಲೋಳೆ ಸ್ರವಿಸಲ್ಪಡುತ್ತದೆ. ಜಠರದ ಫಂಡಸ್ಸಿನಲ್ಲಿ ಹಾಗೂ ಕಾಯದಲ್ಲಿ ಇರುವ ಗ್ರಂಥಿಗಳು ಫಂಡಲ್ ಗ್ರಂಥಿಗಳು. ಸಹಜವಾಗಿ ಬಹುಸಂಖ್ಯೆಯಲ್ಲಿರುವ ಇವೇ ಜಠರದ ಪ್ರಧಾನ ಗ್ರಂಥಿಗಳು. ಇವುಗಳ ಸ್ರಾವಭಾಗ ಉದ್ದವಾದ ಪ್ರಯೋಗ ನಳಿಕೆಯಂತಿದೆ. ಇದು ಆಳವಿಲ್ಲದ ಜಠರಕುಳಿ ಅರ್ಥಾತ್ ನಾಳಭಾಗಕ್ಕೆ ತೆರೆದುಕೊಳ್ಳುತ್ತದೆ. ಸ್ರಾವಭಾಗದಲ್ಲಿ ಮೂರುಬಗೆಯ ಜೀವಕೋಶಗಳನ್ನು ಗುರುತಿಸಬಹುದು. ಅವು ಹೈಡ್ರೊಕ್ಲೋರಿಕ್ ಆಮ್ಲ, ಪೆಪ್ಸಿನ್ ಎಂಬ ಕಿಣ್ವ ಮತ್ತು ಲೋಳೆಯನ್ನು ಸ್ರವಿಸುತ್ತವೆ. ಜಠರರಸ ಈ ಎಲ್ಲ ಗ್ರಂಥಿ ಜೀವಕೋಶಗಳ ಸ್ರಾವದ ಮಿಶ್ರಣವಾದ್ದರಿಂದ ಜಠರರಸದಲ್ಲಿ ಪೆಪ್ಸಿನ್, ಹೈಡ್ರೊಕ್ಲೋರಿಕ್ ಆಮ್ಲ, ಲೋಳೆ-ಇವು ಪ್ರಧಾನವಾಗಿ ಇರುವ ವಸ್ತುಗಳು. ಇವಲ್ಲದೆ ಜಠರರಸದಲ್ಲಿ ಇತರ ವಸ್ತುಗಳು ಅಲ್ಪ ಪ್ರಮಾಣದಲ್ಲಿರುತ್ತವೆ. ಅವು ಜಠರದ ಲೋಳೆಪೊರೆಯಲ್ಲಿರುವ ಅನಿರ್ದಿಷ್ಟ ಜೀವಕೋಶಗಳ ಸ್ರಾವಗಳು.

ಜಠರಕ್ಕೆ ರಕ್ತಪೂರೈಕೆ ಪ್ರಧಾನವಾಗಿ ನಾಲ್ಕು ಅಪಧಮನಿಗಳಿಂದ ಆಗುತ್ತದೆ. ಕಿರಿ ಮತ್ತು ಹಿರಿಡೊಂಕಿನ ಎಡಬಲ ಭಾಗಗಳಿಂದ ಬರುವ ಇವಕ್ಕೆ ಗ್ಯಾಸ್ಟ್ರಿಕ್ ಮತ್ತು ಗ್ಯಾಸ್ಟ್ರೊ ಎಪಿಪ್ಲೋಯಿಕ್ ಧಮನಿಗಳೆಂದು ಹೆಸರು. ಮೇಲೆ ಹೇಳಿರುವಂತೆ ಇವು ಅನುಕ್ರಮವಾಗಿ ಕಿರಿ ಮತ್ತು ಹಿರಿ ಒಮೆನ್‍ಟಮುಗಳ ಎರಡು ಪದರಗಳ ನಡುವೆ ಹಾಯುತ್ತವೆ. ಇವುಗಳಿಂದಲ್ಲದೆ ಜಠರಕ್ಕೆ ರಕ್ತ ಚಿಕ್ಕ ಗ್ಯಾಸ್ಟ್ರಿಕ್ ಅಪಧಮನಿಗಳಿಂದಲೂ ಪೂರೈಕೆ ಆಗುತ್ತದೆ. ಅನುರೂಪವಾದ ಅಭಿಧಮನಿಗಳ ಮೂಲಕ ಜಠರದಿಂದ ವಾಪಸಾದ ರಕ್ತ ಅಂತಿಮವಾಗಿ ಪೋರ್ಟಲ್ ಅಭಿಧಮನಿಯನ್ನು ಸೇರಿ ಯಕೃತ್ತಿಗೆ ಪೂರೈಕೆಯಾಗುತ್ತದೆ.

ಜಠರಕ್ಕೆ ನರಪೂರೈಕೆ ಅನುವೇದಕ (ಸಿಂಪಥೆಟಿಕ್) ಮತ್ತು ಪ್ಯಾರಾನುವೇದಕ (ಪ್ಯಾರಾ ಸಿಂಪಥೆಟಿಕ್) ಎಂಬ ಎರಡು ರೀತಿಯ ನಿರಂಕುಳ ಕಾರ್ಯನಿಯಂತ್ರಣ ನರಗಳಿಂದಲೂ ಆಗುತ್ತದೆ. ಅನುವೇದಕ ನರಗಳು ಅಪಧಮನಿಗಳ ಜೊತೆಯೇ ಗಮಿಸುತ್ತವೆ. ಪ್ಯಾರಾನುವೇದಕ ನರಗಳು ಎಡಬಲ ವೇಗಸ್ ನರಗಳೇ ಆಗಿವೆ. ಎರಡು ಬಗೆಯ ನರಗಳೂ ಜಠರಭಿತ್ತಿಯನ್ನು ಹೊಕ್ಕು ಅದರ ಸ್ನಾಯು ವರಸೆಯ ಪದರಗಳ ನಡುವೆ ಕವಲೊಡೆದು ಸೇರಿ ಬಲೆಯಂತೆ ಆಗಿ ಲೋಳೆಪೊರೆಯ ಅಡಿಯಲ್ಲಿ ಊತಕವನ್ನು ಹೊಕ್ಕು ಅಲ್ಲೂ ಒಂದು ಬಲೆಯಾಗಿ ಅನಂತರ ಲೋಳೆಪೊರೆಗೆ ಪೂರೈಕೆಯಾಗುತ್ತವೆ. ಈ ನರಗಳು ಜೀರ್ಣಕಾಲದಲ್ಲಿ ಜಠರದ ಚಲನವನ್ನೂ ಜಠರಗ್ರಂಥಿಗಳ ಸ್ರಾವವನ್ನೂ ನಿಯಂತ್ರಿಸುತ್ತವೆ.

ಭ್ರೂಣದಲ್ಲಿ ಜಠರದ ಬೆಳೆವಣಿಗೆ

[ಬದಲಾಯಿಸಿ]

ಭ್ರೂಣದ ಪ್ರಾರಂಭಿಕ ಜೀರ್ಣನಾಳದ ಒಂದು ಭಾಗವಾಗಿ ಜಠರವು ಬೆಳೆದು ಬರುತ್ತದೆ. ಭ್ರೂಣಕ್ಕೆ ನಾಲ್ಕರಿಂದ ಐದು ವಾರವಾಗುವ ವೇಳೆಗೆ ಪ್ರಾರಂಭಿಕ ಜೀರ್ಣನಾಳದಲ್ಲಿ ಅದು ಭ್ರೂಣದ ಲೋಳೆಕೋಶದೊಡನೆ ಸಂಪರ್ಕಗೊಳ್ಳುವ ಸ್ಥಳಕ್ಕೆ ಸ್ವಲ್ಪ ಮೇಲಿನ ಭಾಗ ಹಿಗ್ಗಿ ಉಬ್ಬಿದಂತಾಗುತ್ತದೆ. ಇದೇ ಜಠರದ ಅಂಕುರ. ಇದು ಭ್ರೂಣದ ಬೆನ್ನುಭಾಗಕ್ಕೆ ಒಂದು ಪೊರೆಯಿಂದ ನೇತುಹಾಕಲ್ಪಟ್ಟು ಈ ಕಾಲದಲ್ಲಿ ಭ್ರೂಣ ದೇಹದ ಮಧ್ಯ ಗೆರೆಯಲ್ಲಿಯೇ ಇರುತ್ತದೆ. ಭ್ರೂಣ ಬೆಳೆದು 10 mm. ಉದ್ದವಾದಾಗ ಜಠರದ ಎರಡು ಅಂಚುಗಳನ್ನೂ ಗುರುತಿಸಬಹುದು. ಬೆನ್ನುದಿಕ್ಕಿನ ಅಂಚು ಹೊರ ಉಬ್ಬಾಗಿ ತೀವ್ರವಾಗಿ ಬೆಳೆಯುತ್ತದೆ. ಇದರ ಪ್ರಾರಂಭ ಸ್ಥಳದಲ್ಲಿ ಫಂಡಸ್ಸಿನ ಉಬ್ಬು ಉಂಟಾಗುವುದಲ್ಲದೆ ಜಠರದ ಅಂತ್ಯ ಸ್ಥಳವಾದ ಪೈಲೋರಿಕ್ ಭಾಗ ಮುಮ್ಮುಖವಾಗುತ್ತದೆ. ಈ ಕಾರಣದಿಂದ ಚಿಕ್ಕ ಅಂಚು ನಿಮ್ನ ಮಧ್ಯಮ ಅಂಚಾಗಿ ಮಾರ್ಪಡುವುದು ಅನಿವಾರ್ಯವಾಗುವುದು. ಜಠರವನ್ನು ಬೆನ್ನಿಗೆ ನೇತಾಡಿಸುವಂತೆ ಸೇರಿಸುವ ಪೊರೆ (ಡಾರ್ಸಲ್ ಮೀಸೋಗ್ಯಾಸ್ಟ್ರಿಯಮ್) ಬೆಳೆಯುವುದರಿಂದಲೂ ಯಕೃತ್ತು ಬೆಳೆದು ಜಠರವನ್ನು ಎಡಕ್ಕೆ ತಳ್ಳುವುದರಿಂದಲೂ ಜಠರ ತಿರುಚಿಕೊಳ್ಳುತ್ತದೆ. ಈ ತಿರುಚಿನಿಂದ ಬಲಮುಖವಾಗಿದ್ದ ಜಠರದ ಮೈ ಬೆನ್ನುಕಡೆಗೂ ಎಡಮುಖವಾಗಿದ್ದ ಮೈ ಮುಮ್ಮುಖವಾಗಿಯೂ ಬದಲುಗೊಳ್ಳುತ್ತವೆ. ಅಂತೆಯೇ ಬಲವೇಗಸ್ ನರ ಎಡವೇಗಸ್ ನರಗಳೂ ಆಯಾ ಜಠರಮೈಗಳಿಗೆ ಪೂರೈಕೆಯಾಗುತ್ತವೆ. ಜಠರದ ತಿರುಚುವಿಕೆಯಿಂದ ಮುಂಗರುಳು ಬಲಕ್ಕೂ ಬೆನ್ನುಕಡೆಗೂ ಸ್ಥಳಾಂತರಗೊಳ್ಳುತ್ತದೆ.

ಜಠರದ ಕ್ರಿಯೆ

[ಬದಲಾಯಿಸಿ]

ಆಹಾರ ಸೇವನೆಯ ಕಾಲದಲ್ಲಿ ನುಂಗಿದ ಆಹಾರದ ಜಮಾವಣೆ ಅನಂತರ ಅದರ ದ್ರವೀಕರಣ ಇವು ಜಠರದ ಪ್ರಧಾನ ಕ್ರಿಯೆಗಳು. ಸ್ನಾಯುಗಳ ಅನುರೂಪವಾದ ಹಿಗ್ಗುವಿಕೆಯಿಂದ ಮತ್ತು ಲೋಳೆಪೊರೆಯ ಮಡಿಕೆಗಳು ಬಿಚ್ಚಿಕೊಳ್ಳುವುದರಿಂದ ಜಠರದ ಒಳಾವಕಾಶ ಎಷ್ಟು ಬೇಕೋ ಅಷ್ಟು ದೊಡ್ಡದಾಗಿ ನುಂಗಿದ ಆಹಾರದ ಶೇಖರಣೆ ಆಗುತ್ತದೆ. ಆಹಾರಸೇವನೆ ಮುಗಿದ ಸ್ವಲ್ಪ ಹೊತ್ತಿನಲ್ಲೆ ದ್ರವೀಕರಣ ಪ್ರಾರಂಭವಾಗುತ್ತದೆ. ಈ ದ್ರವೀಕರಣ ಯಾಂತ್ರಿಕವಾದ ಮಂಥನ ಕ್ರಿಯೆಯಿಂದಲೂ ಜಠರರಸದ ರಾಸಾಯನಿಕ ಕ್ರಿಯೆಯಿಂದಲೂ ಆಗುವುದು ಘನಪದಾರ್ಥಗಳ ಪ್ರಮಾಣಕ್ಕೆ ಅನುಗುಣವಾಗಿ ಸೇವಿಸಿದ ಆಹಾರ ಸುಮಾರು 5-6 ಗಂಟೆಗಳ ಕಾಲ ಜಠರದಲ್ಲಿ ತಂಗುತ್ತದೆ. ಈ ಕಾಲದಲ್ಲಿ ಜಠರರಸದ ರಾಸಾಯನಿಕ ಕ್ರಿಯೆಯಿಂದಲೂ ಜಠರದ ಚಲನದಿಂದಲೂ ಆಹಾರ ಭಾಗಶಃ ಪಚನಗೊಂಡು ದ್ರವವಾಗಿ ಆದಂತೆಲ್ಲ ಸ್ವಲ್ಪಸ್ವಲ್ಪವಾಗಿ ಕರುಳಿಗೆ ದೂಡಲ್ಪಡುತ್ತದೆ. ಜಠರದಂಥ ಸಂಗ್ರಹಣಸಾಧ್ಯ ಅವಯವವಿರುವುದರಿಂದ ಆಹಾರಸೇವನೆ ಅವಿರತವಾಗಿರಬೇಕಾಗಿಲ್ಲ; ಕೆಲವು ಗಂಟೆಗಳಿಗೊಮ್ಮೆ ಆದರೂ ತಡೆಯುತ್ತದೆ ಅವಿರತವಾಗಿರಬೇಕಾಗಿಲ್ಲ; ಮತ್ತು ಈ ಬಿಡುವಿನ ಅಂತರದಲ್ಲಿ ಬೇರೆ ಜೀವನ ಕಾರ್ಯಗಳಿಗೆ ವ್ಯಕ್ತಿ ಗಮನ ಕೊಡಲು ಸಾಧ್ಯವಾಗುವ ಸೌಲಭ್ಯ ಒದಗಿದೆ.

ಜಠರದ ಸಕಾಲಿಕ ಸ್ರಾವಚಲಗಳು ಸಾಧ್ಯವಾಗುವುದು ನರಗಳ ಮತ್ತು ಹಾರ್ಮೋನುಗಳ ಪ್ರಭಾವದಿಂದ ಎಂಬುದು ಸ್ಥಿರಪಟ್ಟಿದೆ. ಆಹಾರಸೇವನೆ ತೀರಿದ ಕೆಲವು ನಿಮಿಷಗಳ ಬಳಿಕ ಜಠರದ ಚಲನೆ ಪ್ರಾರಂಭವಾಗುತ್ತದೆ. ಬಹುಶಃ ಜಠರ ಇನ್ನೂ ಹೆಚ್ಚು ಹಿಗ್ಗಿಸಲ್ಪಡದೆ ಒಂದೇ ಸಮನಾದ ಹಿಗ್ಗಿರುವ ಸ್ಥಿತಿ ಜಠರದ ಚಲನವನ್ನು ಪ್ರಚೋದಿಸುತ್ತದೆ. ಈ ಸಕಾಲಿಕ ಚಲನೆ ನರಗಳ ಚಟುವಟಿಕೆಯಿಂದ ಏರ್ಪಡುವುದು. ತುಂಬಿದ ಜಠರದ ಚಲನೆ ವಿಶೇಷವಾಗಿ ಸರ್ಪಗತಿ ಚಲನೆ (ಪೆರಿಸ್ಟಾಲ್‍ಸಿಸ್). ಇಂಥ ಚಲನೆಯಲ್ಲಿ ಅಂಗದ ಒಂದು ಭಾಗ ಹಿಗ್ಗಿಸಲ್ಪಟ್ಟರೆ ಅದರ ಹಿಂದಿನ ಭಾಗ ಸಂಕುಚಿಸಿ, ಅದರ ಮುಂದಿನಭಾಗ ಸಡಿಲವಾಗುವುದು. ಇದರಿಂದ ಹಿಗ್ಗಿಸಲ್ಪಟ್ಟು ಸ್ಥಳದಲ್ಲಿದ್ದ ವಸ್ತು ಸಡಿಲವಾದ ಸ್ಥಳಕ್ಕೆ ಮುನ್ನೂಕಲ್ಪಡುತ್ತದೆ. ಆ ಸ್ಥಳ ಈಗ ಹಿಗ್ಗಿ ಅದರ ಹಿಂದಿನ ಸ್ಥಳ ಸಂಕುಂಚಿಸಿ ಮುಂದಿನ ಸ್ಥಳ ಸಡಿಲಾಗಿ ವಸ್ತು ಇನ್ನೂ ಮುಂದಕ್ಕೆ ನೂಕಲ್ಪಡುತ್ತದೆ. ಇದೇ ಸರ್ಪಗತಿ ಚಲನೆ. ಇದರಲ್ಲಿ ಸಂಕುಚನವು ಅಂಗದ ಮೇಲಿನಿಂದ ಕೆಳದಿಕ್ಕಿನಲ್ಲಿ ಸ್ಥಳದಿಂದ ಸ್ಥಳಕ್ಕೆ ಚಲಿಸುವ ರೀತಿಯದಾಗಿದ್ದು ಅನುರೂಪವಾದ ಚಲಿಸುವ ಸ್ಥಳೀಯ ಸಡಿಲತೆಯನ್ನು ಹಿಂಬಾಲಿಸುವುದು. ಇಂಥ ಸರ್ಪಗತಿ ಚಲನೆಯಿಂದ ಆಹಾರ ಜಠರದಲ್ಲಿ ಪೈಲೋರಿಕ್ ದ್ವಾರದೆಡೆಗೆ ನೂಕಲ್ಪಡುತ್ತದೆ. ಸಾಮಾನ್ಯವಾಗಿ ಈ ಸಮಯದಲ್ಲಿ ಪೈಲೋರಿಕ್ ದ್ವಾರ ಅಲ್ಲಿಯ ಗತಿನಿರೋಧಕ ಸಂಕುಚನೆಯಿಂದ ಮುಚ್ಚಲ್ಪಟ್ಟಿರುವುದರಿಂದ ನೂಕಲ್ಪಟ್ಟ ಆಹಾರ ಮುಂದುವರಿಯಲಾಗದೆ ಮಂತಿನಿಂದ ಕಡೆದಂತೆ ಚಿರ್ರೆಂದು ವಾಪಸ್ಸು ಜಠರದ ಕಾಯಕ್ಕೆ ಬರುತ್ತದೆ. ಪದೇಪದೇ ಹೀಗಾಗುವುದರಿಂದ ಆಹಾರ ಅರೆದಂತಾಗಿ ಜಠರರಸದೊಡನೆ ಮಿಶ್ರಿತವಾಗಿ ಕೊನೆಗೆ ಹಾಲಿನಂಥ ದ್ರವವಾಗುತ್ತದೆ. ಪೈಲೋರಿಕ್ ಗತಿನಿರೋಧಕ ಆಗಾಗ್ಗೆ ಸ್ವಲ್ಪ ಸಡಿಲವಾಗುವುದರಿಂದ ಹೀಗೆ ಪೂರ್ಣವಾಗಿ ದ್ರವವಾದ ಆಹಾರಭಾಗ ಪೈಲೋರಿಕ್ ದ್ವಾರದ ಮೂಲಕ ಮುಂಗರುಳಿಗೆ ತಲುಪುತ್ತದೆ. ಸ್ವಲ್ಪಸ್ವಲ್ಪವಾಗಿ ಜಠರ ಹೀಗೆ ಖಾಲಿ ಮಾಡಲ್ಪಟ್ಟು ಸೇವಿಸಿದ ಆಹಾರವೆಲ್ಲ ಮುಂಗರುಳನ್ನು ತಲುಪಲು ವಯಸ್ಕರಲ್ಲಿ ಸುಮಾರು 5-5 1/2 ಗಂಟೆ ಕಾಲ ಬೇಕಾಗುತ್ತದೆ. ಆಹಾರ ಪ್ರಧಾನವಾಗಿ ದ್ರವವಾಗಿದ್ದರೆ ಸ್ವಲ್ಪಹೊತ್ತಿನಲ್ಲಿ ಜಠರ ಖಾಲಿ ಆಗುತ್ತದೆ. ಆದರೆ ಹಾಲು ಜಠರದಲ್ಲಿರುವ ಆಮ್ಲ ಕಿಣ್ವಗಳಿಂದಾಗಿ ಗರಣೆಗೊಳ್ಳುವುದರಿಂದ ಸಾವಕಾಶವಾಗಿಯೇ ಜಠರದಿಂದ ಮುಂದಕ್ಕೆ ಸಾಗುತ್ತದೆ. ಖಾಲಿಯಾದ ಮೇಲೆ ಸ್ವಲ್ಪಕಾಲ ಅದು ಯಾವ ವಿಶೇಷ ಚಲನೆಯನ್ನೂ ತೋರುವುದಿಲ್ಲ. ಅಂಗ ಸಂಕುಚಿತವಾಗಿ ಅದರ ಎದುರುಬದರು ಭಿತ್ತಿಗಳು ಒಂದಕ್ಕೊಂದು ತಾಕಿಕೊಂಡು ಒಳಗೆ ಅವಕಾಶ ಗಮನೀಯವಾಗಿ ಇರುವುದಿಲ್ಲ. ಖಾಲಿ ಜಠರದಲ್ಲಿ ಜಠರ ಸ್ರಾವವಾಗುವುದೂ ಈ ಸ್ರಾವ ಗಣನೀಯ ಪ್ರಮಾಣದಲ್ಲಿ ಸಂಗ್ರಹವಾಗುವುದೂ ಅಪರೂಪ. ಕೆಲಗಂಟೆಗಳಾದ ಬಳಿಕ ಖಾಲಿ ಜಠರರ ಆಗಾಗ್ಗೆ ಸರ್ಪಗತಿ ಚಲನೆಯನ್ನು ತೋರಿಸಬಹುದು. ಇದು ತಕ್ಕಷ್ಟು ಶಕ್ತಿಯುತವಾಗಿದ್ದರೆ ಹೊಟ್ಟೆಹಸಿವಿನ ಅನುಭವ ಉಂಟಾಗುತ್ತದೆ. ಬಹುಶಃ ಎದುರು ಬದರು ಭಿತ್ತಿಗಳು ಒಂದಕ್ಕೊಂದು ಉಜ್ಜಿ ಹೊಟ್ಟೆ ತಾಳ ಹಾಕುವುದರಿಂದ ಹಸಿವಿನ ಅನುಭವವಾಗಬಹುದು.

ಜಠರದಲ್ಲಿ ಆಹಾರ ಭಾಗಶಃ ಅರೆಯಲ್ಪಟ್ಟು ಜಠರರಸದೊಡನೆ ಮಿಶ್ರವಾದಾಗ ರಸದಲ್ಲಿರುವ ಪೆಪ್ಸಿನ್ ಹೈಡ್ರೊಕ್ಲೋರಿಕ್ ಆಮ್ಲದ ಸನ್ನಿಧಿಯಲ್ಲಿ ಆಹಾರದ ಪ್ರೋಟೀನ್ ಅಂಶವನ್ನು ಭಾಗಶಃ ಪಚನಗೊಳಿಸಿ, ಅದು ನೀರಿನಲ್ಲಿ ಕರಗುವಂತೆ ಮಾಡುತ್ತದೆ. ಜಠರವನ್ನು ಆಹಾರ ಸೇರುವ ಮೊದಲೇ ಆಹಾರಸೇವನೆಯ ಸುಖದ ಕಲ್ಪನೆಯಿಂದ ಜಠರರಸ ಉತ್ಪತ್ತಿಯಾಗುವುದಕ್ಕೆ ಪ್ರಾರಂಭಿಸುತ್ತದೆ. ಆಹಾರ ಕಲ್ಪನೆಯಿಂದ ಜಠರರಸ ಉತ್ಪತ್ತಿಯಾಗುವುದಕ್ಕೆ ಪ್ರಾರಂಭಿಸುತ್ತದೆ. ಆಹಾರ ಚರ್ವಣವಾಗುವಾಗ ಅದರ ರುಚಿವಾಸನೆಗಳು ಈ ಉತ್ಪತ್ತಿಯನ್ನು ಮುಂದುವರಿಸುತ್ತದೆ. ಜಠರವನ್ನು ಆಹಾರ ಸೇರಿ ಅದನ್ನು ಹಿಗ್ಗಿಸುವುದರಿಂದಲೂ ಜಠರರಸ ಉತ್ಪತ್ತಿಯಾಗುತ್ತದೆ. ಇವು ಮೂರೂ ನರಪ್ರೇರಣೆಯಿಂದ ಪ್ರಚೋದಿತವಾದವು. ಆಹಾರ (ಹಾಲು ಮಾಂಸಾದಿಗಳು) ಮತ್ತು ಜಠರದಲ್ಲಿ ಭಾಗಶಃ ಪಚನವಾದ ಇತರ ಆಹಾರ ಸಾಮಗ್ರಿಗಳು ಜಠರದ ಲೋಳೆಪೊರೆಯ ಸಂಪರ್ಕಮಾತ್ರದಿಂದಲೇ ಅದರಿಂದ ಗ್ಯಾಸ್ಟ್ರಿನ್ ಎಂಬ ಹಾರ್ಮೋನು ಉತ್ಪತ್ತಿಯಾಗುವಂತೆ ಮಾಡುತ್ತವೆ. ಇದು ಬಹು ಅಲ್ಪ ಪ್ರಮಾಣದಲ್ಲಿ ಉತ್ಪತ್ತಿಯಾಗಿ ಜಠರರಸಕ್ಕೆ ಸೇರಿಸಲ್ಪಡದೆ ನೇರವಾಗಿ ಜಠರದಲ್ಲೇ ರಕ್ತಗತವಾಗುತ್ತದೆ. ರಕ್ತಪರಿಚಲನೆಯಿಂದ ಇದು ದೇಹದ ಎಲ್ಲೆಡೆಗೂ ಒಯ್ಯಲ್ಪಡುವಂತೆ ಜಠರದ ಧಮನಿಗಳ ಮೂಲಕ ಪುನಃ ಜಠರಕ್ಕೂ ತಲುಪುತ್ತದೆ. ಹೀಗೆ ತಲುಪಿದಾಗ ಜಠರ ಗ್ರಂಥಿಗಳು ಉದ್ರೇಕಗೊಂಡು ಬಹಳವಾಗಿ ಜಠರರಸವನ್ನು ಸ್ರವಿಸುತ್ತವೆ. ಜಠರದಲ್ಲಿ ಆಹಾರ ಇದ್ದು ಪಚನವಾಗುತ್ತಿರುವ ಪರ್ಯಂತ ಈ ಕ್ರಮದಿಂದ ಜಠರರಸ ಉತ್ಪತ್ತಿ ಆಗುತ್ತಲೇ ಇರುತ್ತದೆ.

ಪೆಪ್ಸಿನ್ನಿನ ಕಾರ್ಯಾನಂತರ ಪ್ರೋಟೀನುಗಳಿಂದ ಲಭಿಸುವ ವಸ್ತುಗಳ ಮಿಶ್ರಣಕ್ಕೆ ಪೆಪ್ಟೋನ್ ಎಂದು ಹೆಸರು. ಜಠರರಸ ಪ್ರೋಟೀನನ್ನು ಪೆಪ್ಟೋನಾಗಿ ಪರಿವರ್ತಿಸಿ ಅದು ದ್ರವೀಕರಣವಾಗಲು ಸಹಾಯಮಾಡುವುದು ಹೀಗೆ. ಜಠರದಲ್ಲಿ ಇಷ್ಟು ಮಾತ್ರ ಪಚನಕ್ರಿಯೆ ಆಗುತ್ತದೆ. ಆಹಾರದ ಇತರ ಅಂಶಗಳು ಜಠರರಸದಿಂದ ಜೀರ್ಣವಾಗುವುದಿಲ್ಲ. ಪೆಪ್ಸಿನ್ ಪ್ರೋಟೀನ್ ಪಚನಕಾರ್ಯ ಮಾತ್ರವಲ್ಲದೆ ಹಾಲನ್ನು ಗರಣೀಕರಿಸುವ ಸಾಮಥ್ರ್ಯವುಳ್ಳದ್ದಾಗಿಯೂ ಇದೆ. ಶೈಶವದಲ್ಲಿ ಬಹುಶಃ ಹಾಲೇ ಪ್ರಧಾನ ಆಹಾರವಾಗಿರುವ ವಯಸ್ಕರಲ್ಲಿ ಹಾಲನ್ನು ಗರಣೀಕರಿಸುವ ಸಲುವಾಗಿಯೇ ಜಠರರಸದಲ್ಲಿ ರೆನ್ನಿನ್ ಎಂಬ ಇನ್ನೊಂದು ಕಿಣ್ವ ಇರುವುದೆಂದು ಹೇಳಲಾಗಿದೆ. ಹೈಡ್ರೊಕ್ಲೋರಿಕ್ ಆಮ್ಲ ಪೆಪ್ಸಿನ್ನಿನ ಕಾರ್ಯಕ್ಕೆ ಅಗತ್ಯವಾದುದೇ ಅಲ್ಲದೆ ಆಹಾರದಲ್ಲಿರುವ ಕಬ್ಬಿನ ಸಕ್ಕರೆಯನ್ನು (ಸುಕ್ರೋಸ್) ಭಾಗಶಃ ಸರಳಸಕ್ಕರೆಗಳಾದ ಗ್ಲೂಕೋಸ್ ಮತ್ತು ಫ್ರಕ್ಟೋಸ್ ಆಗಿ ಪರಿವರ್ತಿಸುವುದು; ಮತ್ತು ವ್ಯಕ್ತಿ ಸೇವಿಸಿದ ಪದಾರ್ಥಗಳಲ್ಲಿರುವ ವಿಷಾಣುಗಳನ್ನು ನಾಶಮಾಡುತ್ತದೆ. ಜಠರರಸದಲ್ಲಿ ನೈಜಘಟಕ (ಇನ್‍ಟ್ರಿನ್‍ಸಿಕ್ ಫ್ಯಾಕ್ಟರ್) ಎಂಬ ರಕ್ತಕಣಗಳ ಉತ್ಪತ್ತಿಗೆ ಅಗತ್ಯವಾದ ವಸ್ತು ಉಂಟು. ಇದು ಆಹಾರದಲ್ಲಿರುವ ಜೀವಸತ್ತ್ವ ಃ 12 ಕರುಳಿನಲ್ಲಿ ರಕ್ತಗತವಾಗಲು ಆವಶ್ಯಕ. ನೈಜಘಟಕ ಲೋಪವಾದಾಗ ಜೀವಸತ್ತ್ವ ಃ 12 ರಕ್ತಗತವಾಗಲಾರದೆ ದೇಹದಲ್ಲಿ ಅದರ ಕೊರತೆಯುಂಟಾಗಿ ಸತ್ಫಲವಾಗಿ ರಕ್ತಕಣಗಳ ಉತ್ಪತ್ತಿಗೆ ತಡೆಯಾಗಿ ರಕ್ತಹೀನತೆ ರೋಗ ಉಂಟಾಗುತ್ತದೆ. ಜಠರದಲ್ಲಿ ನೈಜ ಘಟಕವನ್ನು ಉತ್ಪಾದಿಸುವ ಕ್ರಿಯೆ ಜಠರದ ಆಹಾರ ಸಂಗ್ರಹಣೆ ಪಚನ ಕಾರ್ಯಗಳಿಗಿಂತ ಮುಖ್ಯವಾದ್ದರಿಂದ ಕಾರಣಾಂತರದಿಂದ ಜಠರವನ್ನು ಶಸ್ತ್ರಕ್ರಿಯೆಯಿಂದ ತೆಗೆದು ಹಾಕಬೇಕಾದಾಗ ಅದನ್ನು ಪೂರ್ಣವಾಗಿ ತೆಗೆದುಹಾಕದೆ ಸ್ವಲ್ಪಭಾಗವನ್ನು ದೇಹದಲ್ಲಿ ಬಿಟ್ಟಿದ್ದು ಅದರ ಸ್ರಾವ ಕರುಳಿಗೆ ಸೇರುವಂತೆ ಏರ್ಪಡಿಸಿರುತ್ತದೆ.

ಜಠರ ಪರೀಕ್ಷೆಗಳು

[ಬದಲಾಯಿಸಿ]

ಜಠರ ಕ್ರಿಯೆ ಜಠರ ರೋಗಗಳಲ್ಲಿ ಸ್ವಾಭಾವಿಕವಾಗಿಯೇ ವ್ಯತ್ಯಾಸಗೊಂಡಿರುತ್ತದೆ. ಅದರ ಆಕಾರ ಚಲನಗಳು, ಅದರ ಕೆಲವು ಬದಲಾವಣೆಗಳು ಕೆಲವು ಜಠರ ರೋಗಗಳ ವೈಶಿಷ್ಟ್ಯವಾದ್ದರಿಂದ ಜಠರ ರೋಗದಲ್ಲಿ ಜಠರದ ಪರೀಕ್ಷೆ ಅಗತ್ಯ. ಬೇರಿಯಮ್ ಕದಡನ್ನು ಕುಡಿಸಿ ಜಠರವನ್ನು ತುಂಬಿ ತತ್‍ಕ್ಷಣ ಎಕ್ಸ್‍ಕಿರಣ ಪರೀಕ್ಷೆ ಮಾಡುವುದಲ್ಲದೆ 5 1/2 ಗಂಟೆಗಳು ಕಳೆದ ಬಳಿಕ ಪುನಃ ಪರೀಕ್ಷೆ ಮಾಡಲಾಗುತ್ತದೆ. ಇದರಿಂದ ಜಠರ ವ್ರಣ, ಏಡಿಗಂತಿ ರೋಗ, ಜಠರದ ಅಳತೆ, ಆಕಾರ ಮುಂತಾದವುಗಳ ಪತ್ತೆ ಆಗುವುದು. ಜಠರವನ್ನು ಜಠರ ದರ್ಶಕದಲ್ಲಿ ಪರೀಕ್ಷಿಸಿಯೂ ಈ ವಿಷಯಗಳ ಮಾಹಿತಿ ಪಡೆಯಬಹುದು. ಜಠರದ ಸ್ರಾವಸಾಮಥ್ರ್ಯವನ್ನು ಅದರಲ್ಲಿರುವ ರಾಸಾಯನಿಕಗಳ ಪ್ರಮಾಣವನ್ನೂ ಅಂದಾಜು ಮಾಡಲು ಜಠರದೊಳಕ್ಕೆ ರ್ಹೀಫಸ್ಸನ ನಳಿಕೆ ಎಂಬ ಸುಮಾರು 1 m. ಉದ್ದ 3 mm. ದಪ್ಪವಾದ ರಬ್ಬರ್ ನಳಿಕೆಯನ್ನು ಗಂಟಲಿನ ಮೂಲಕ ಹುಗಿಸಿ ಪಿಚಕಾರಿಯಿಂದ ಸ್ವಲ್ಪ ಜಠರರಸವನ್ನು ಹೀರಿ ಎಳೆದು ಅದನ್ನು ರಾಸಾಯನಿಕ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಜಠರ ಸ್ರವಿಸುವಂತೆ ಅದನ್ನು ಪ್ರಚೋದಿಸಲು ನಿರ್ದಿಷ್ಟವಸ್ತುಗಳನ್ನು ಬಳಸಲಾಗುತ್ತದೆ. ಇವನ್ನು ನಳಿಕೆಯ ಮೂಲಕ ಜಠರಕ್ಕೆ ಹೊಗಿಸಬೇಕಾಗುತ್ತದೆ. ಇಲ್ಲವೆ ಸೂಜಿಮದ್ದಿನ ರೀತಿ ಕೊಡಬೇಕಾಗುತ್ತದೆ. ನಳಿಕೆಯ ಮೂಲಕ ಓಟ್ ಹಿಟ್ಟಿನ ಗಂಜಿ, ಮದ್ಯಸಾರ ಅಥವಾ ಸಕ್ಕರೆಯಲ್ಲಿ ಟೀಯನ್ನೂ ಸೂಜಿಮದ್ದಿನ ಮೂಲಕ ಇನ್ಸುಲಿನ್, ಹಿಸ್ಟಮಿನ್ ಇವನ್ನೂ ಸಾಮಾನ್ಯವಾಗಿ ಉಪಯೋಗಿಸುತ್ತದೆ.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಜಠರ&oldid=1261916" ಇಂದ ಪಡೆಯಲ್ಪಟ್ಟಿದೆ