ಮೊಸಳೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮೊಸಳೆಗಳು
Temporal range: EoceneHolocene, 46–0 Ma
ನೈಲ್ ಮೊಸಳೆ (ಕ್ರೊಕೊಡೈಲಸ್ ನಿಲೋಟಿಕಸ್)
ಉಪ್ಪುನೀರಿನ ಮೊಸಳೆ (ಕ್ರೋಕೊಡೈಲಸ್ ಪೋರಾಸಸ್)
Scientific classification e
ಕ್ಷೇತ್ರ: ಯೂಕ್ಯಾರ್ಯೋಟಾ
ಸಾಮ್ರಾಜ್ಯ: ಅನಿಮೇಲಿಯ
ವಿಭಾಗ: ಕಾರ್ಡೇಟಾ
ವರ್ಗ: ರೆಪ್ಟೀಲಿಯಾ
ಗಣ: ಕ್ರೊಕೊಡಿಲಿಯಾ
ಮೇಲ್ಕುಟುಂಬ: ಕ್ರೊಕೊಡೈಲಾಯ್ಡೀ
ಕುಟುಂಬ: ಕ್ರೊಕೊಡೈಲಿಡೀ
Cuvier, 1807
Type genus
ಕ್ರೋಕೊಡೈಲಸ್
Laurenti, 1768
ಉಪಕುಟುಂಬಗಳು
 • ಕ್ರೊಕೊಡೈಲಿನೀ
 • ಆಸ್ಟಿಯೊಲೀಮಿನೀ

ಮೊಸಳೆಗಳು (ಉಪಕುಟುಂಬ ಕ್ರೊಕೊಡೈಲಿನಿ) ಆಫ್ರಿಕಾ, ಏಷ್ಯಾ, ಅಮೆರಿಕ ಮತ್ತು ಆಸ್ಟ್ರೇಲಿಯಾದಲ್ಲಿನ ಉಷ್ಣವಲಯದಾದ್ಯಂತ ವಾಸಿಸುವ ದೊಡ್ಡ ಜಲ ಸರೀಸೃಪಗಳು. ಕ್ರೊಕೊಡೈಲಿನಿಯನ್ನು ಜೈವಿಕ ಉಪಕುಟುಂಬ ಎಂದು ವರ್ಗೀಕರಿಸಲಾಗಿದೆ. ಕೆಲವೊಮ್ಮೆ ಮೊಸಳೆ ಪದವನ್ನು ಸಡಿಲವಾಗಿ ಟೋಮಿಸ್ಟೋಮಾ, ಅಲಿಗೇಟರ್ ಹಾಗೂ ಕೇಯ್ಮನ್‍ಗಳು (ಕುಟುಂಬ ಅಲಿಗೇಟರಿಡೀ), ಘರಿಯಾಲ್‍ಗಳು (ಕುಟುಂಬ ಗೇವಿಯಾಲಿಡೀ) ಸೇರಿದಂತೆ ಕ್ರೊಕೊಡೈಲಿಯಾ ಗಣದಲ್ಲಿರುವ ಎಲ್ಲ ಅಸ್ತಿತ್ವದಲ್ಲಿರುವ ಸದಸ್ಯರನ್ನು, ಮತ್ತು ಎಲ್ಲ ಇತರ ಜೀವಂತ ಹಾಗೂ ಪಳೆಯುಳಿಕೆ ಕ್ರೊಕೊಡೈಲೋಮಾರ್ಫ಼ಾವನ್ನು ಒಳಗೊಳ್ಳುವಂತೆ ಬಳಸಲಾಗುತ್ತದೆ.

ಭಾರತದ ಮೊಸಳೆಗಳು

ಇವುಗಳು ಅನುಭವವಿಲ್ಲದ ಕಣ್ಣಿಗೆ ಹೋಲುವಂತೆ ಕಂಡುಬಂದರೂ, ಮೊಸಳೆಗಳು, ಅಲಿಗೇಟರ್‌ಗಳು ಮತ್ತು ಘರಿಯಾಲ್ ಪ್ರತ್ಯೇಕ ಜೈವಿಕ ಕುಟುಂಬಗಳಿಗೆ ಸೇರಿವೆ. ಕಿರಿದಾದ ಮೂತಿಯನ್ನು ಹೊಂದಿರುವ ಘರಿಯಾಲನ್ನು ವ್ಯತ್ಯಾಸ ಮಾಡುವುದು ಹೆಚ್ಚು ಸುಲಭ. ಆದರೆ ಮೊಸಳೆಗಳು ಮತ್ತು ಅಲಿಗೇಟರ್‌ಗಳಲ್ಲಿ ಆಕೃತಿ ವಿಜ್ಞಾನದ ವ್ಯತ್ಯಾಸಗಳನ್ನು ಗುರುತಿಸುವುದು ಹೆಚ್ಚು ಕಷ್ಟ. ಅತ್ಯಂತ ಸ್ಪಷ್ಟವಾದ ಬಾಹ್ಯ ಭಿನ್ನತೆಗಳು ತಲೆಯಲ್ಲಿ ಗೋಚರಿಸುತ್ತವೆ. ಮೊಸಳೆಗಳು ಹೆಚ್ಚು ಕಿರಿದಾದ ಹಾಗೂ ಉದ್ದವಾದ ತಲೆಯನ್ನು ಹೊಂದಿರುತ್ತವೆ, ಮತ್ತು ಅಲಿಗೇಟರ್‌ಗಳು ಹಾಗೂ ಕೇಯ್ಮನ್‍ಗಳಿಗೆ ಹೋಲಿಸಿದರೆ U-ಆಕಾರದ ಬದಲು V-ಆಕಾರದ ಮೂತಿಯನ್ನು ಹೊಂದಿರುತ್ತವೆ. ಮತ್ತೊಂದು ಸ್ಪಷ್ಟವಾದ ಲಕ್ಷಣವೆಂದರೆ ಮೊಸಳೆಗಳ ಮೇಲಿನ ಮತ್ತು ಕೆಳಗಿನ ದವಡೆಗಳು ಅಷ್ಟೇ ಅಗಲವಿರುತ್ತವೆ, ಮತ್ತು ಬಾಯಿಯನ್ನು ಮುಚ್ಚಿದಾಗ ಕೆಳದವಡೆಯಲ್ಲಿರುವ ಹಲ್ಲುಗಳು ಅಂಚಿನುದ್ದಕ್ಕೆ ಅಥವಾ ಮೇಲ್ದವಡೆಯ ಹೊರಗೆ ಬರುತ್ತವೆ; ಹಾಗಾಗಿ ಎಲ್ಲ ಹಲ್ಲುಗಳು ಕಾಣುತ್ತಿರುತ್ತವೆ. ಆದರೆ ಅಲಿಗೇಟರ್ ಮೇಲ್ದವಡೆಯಲ್ಲಿ ಸಣ್ಣ ತಗ್ಗುಗಳನ್ನು ಹೊಂದಿದ್ದು ಅವುಗಳಲ್ಲಿ ಕೆಳಗಿನ ಹಲ್ಲುಗಳು ಸರಿಕೂಡುತ್ತವೆ. ಜೊತೆಗೆ ಮೊಸಳೆಯು ಬಾಯಿ ಮುಚ್ಚಿದಾಗ, ಕೆಳದವಡೆಯಲ್ಲಿನ ದೊಡ್ಡ ನಾಲ್ಕನೇ ಹಲ್ಲು ಮೇಲ್ದವಡೆಯಲ್ಲಿನ ಒಂದು ಸಂಕೋಚನದಲ್ಲಿ ಸರಿಕೂಡುತ್ತದೆ. ವ್ಯತ್ಯಾಸ ಮಾಡಲು ಕಷ್ಟವಾದ ನಮೂನೆಗಳಿಗೆ, ಪ್ರಭೇದವು ಯಾವ ಕುಟುಂಬಕ್ಕೆ ಸೇರಿದೆ ಎಂದು ವ್ಯಾಖ್ಯಾನಿಸಲು ಚಾಚಿಕೊಂಡಿರುವ ಹಲ್ಲು ಅತ್ಯಂತ ವಿಶ್ವಾಸಾರ್ಹವಾದ ಲಕ್ಷಣವಾಗಿದೆ.[೧] ಮೊಸಳೆಗಳು ಹಿಂದಿನ ಪಾದಗಳ ಕಾಲ್ಬೆರಳುಗಳಲ್ಲಿ ಹೆಚ್ಚಿನ ಅಂಗಾಂಶ ಪೊರೆಯನ್ನು ಹೊಂದಿರುತ್ತವೆ ಮತ್ತು ಉಪ್ಪನ್ನು ಸೋಸಿ ಹೊರಹಾಕಲು ವಿಶೇಷೀಕೃತ ಲವಣ ಗ್ರಂಥಿಗಳಿರುವುದರಿಂದ ಉಪ್ಪು ನೀರನ್ನು ಹೆಚ್ಚು ಉತ್ತಮವಾಗಿ ಸಹಿಸಿಕೊಳ್ಳಬಲ್ಲವು. ಇವು ಅಲಿಗೇಟರ್‌ಗಳಲ್ಲಿ ಇದ್ದರೂ ಕೆಲಸ ಮಾಡುವುದಿಲ್ಲ. ಈ ಗಣದ ಇತರ ಪ್ರಾಣಿಗಳಿಗೆ ಹೋಲಿಸಿದರೆ ಮೊಸಳೆಗಳು ಹೆಚ್ಚಿನ ಮಟ್ಟದಲ್ಲಿ ಆಕ್ರಮಣಶೀಲವಾಗಿರುತ್ತವೆ.[೨]

ಅಲಿಗೇಟರ್

ಮುಖ್ಯ ಪ್ರಭೇದಗಳು[ಬದಲಾಯಿಸಿ]

ಪ್ರಧಾನವಾದವು ಇಂತಿವೆ:  ಓರಿನೋಕೊ ಮೊಸಳೆ (ಕ್ರಾ. ಇಂಟರ್‌ಮೀಡಿಯಸ್ - ದಕ್ಷಿಣ ಅಮೆರಿಕದ ಓರಿನೋಕೊ, ಅಮೆಜಾನ್ ನದಿಗಳು), ಅಮೆರಿಕದ ಮೊಸಳೆ (ಕ್ರಾ. ಅಕ್ಯೂಟಸ್ - ಉತ್ತರ ಅಮೆರಿಕದ ಫ್ಲಾರಿಡ ಮತ್ತು ಮಧ್ಯ ಅಮೆರಿಕ ಹಾಗೂ ವಾಯುವ್ಯ ದಕ್ಷಿಣ ಅಮೆರಿಕ), ಮೋರ್‌ಲೆಟ್ ಮೊಸಳೆ (ಕ್ರಾ. ಮೋರ್‌ಲೆಟೈ - ಮೆಕ್ಸಿಕೊ, ಹಾಂಡುರಾಸ್, ಗ್ವಾಟೆಮಾಲ), ಆಸ್ಟ್ರೇಲಿಯದ ಮೊಸಳೆ (ಕ್ರಾ. ಜಾನ್‌ಸ್ಟೋನೈ - ಆಸ್ಟ್ರೇಲಿಯ), ನ್ಯೂಗಿನಿ ಮೊಸಳೆ (ಕ್ರಾ. ನಿಲೋಟಿಕಸ್ - ಆಫ್ರಿಕದ ಕೆಲವು ಪ್ರದೇಶಗಳು), ಭಾರತದ ಮೊಸಳೆ (ಕ್ರಾ. ಪ್ಯಾಲಸ್ಟ್ರಿಸ್ - ಭಾರತ ಮತ್ತು ಶ್ರೀಲಂಕಾ), ಉಪ್ಪುನೀರಿನ ಮೊಸಳೆ (ಕ್ರಾ. ಪೋರೋಸಸ್ - ಭಾರತವೂ ಸೇರಿದಂತೆ, ಫಿಲಿಪೀನ್ಸ್, ನ್ಯೂ ಹೆಬ್ರಿಡೀಸ್ ದ್ವೀಪಗಳ ಕರಾವಳಿ ಪ್ರದೇಶಗಳು).

ಇವುಗಳ ಪೈಕಿ ಕೊನೆಯ ಪ್ರಭೇದವನ್ನು ಬಿಟ್ಟರೆ ಉಳಿದೆಲ್ಲ ಸಿಹಿನೀರಿನ ಮೊಸಳೆಗಳು. ನದಿಗಳಲ್ಲಿ ವಾಸಿಸುತ್ತವೆ.

ಭಾರತದ ಮೊಸಳೆಗಳು[ಬದಲಾಯಿಸಿ]

ಭಾರತದ ಮೊಸಳೆ ಸುಮಾರು 4 ಮೀ ಉದ್ದದ ಪ್ರಾಣಿ. ತೂಕ 200 ಕೆಜಿ ಅಥವಾ ಅದಕ್ಕೂ ಹೆಚ್ಚು. ದೇಹದ ಬಣ್ಣ ಹಸುರುಮಿಶ್ರಿತ ಕಪ್ಪು. ಹೊಟ್ಟೆಯ ಭಾಗ ಹಳದಿ ಇಲ್ಲವೆ ಬಿಳಿಬಣ್ಣದ್ದು. ಮೂತಿಯ ತುದಿ ಅಗಲವಾಗಿದೆ. ಕತ್ತು ಮತ್ತು ತಲೆ ಸೇರುವೆಡೆಯಲ್ಲಿ ಮೇಲ್ಭಾಗದಲ್ಲಿ ಉಬ್ಬಿಕೊಂಡಂತಿರುವ 4 ಹುರುಪೆಗಳಿವೆ. ಬೆನ್ನಿನ ಉದ್ದಕ್ಕೂ ಅಡ್ಡಡ್ಡಲಾಗಿ 16-17 ಉದ್ದುದ್ದವಾಗಿ 6 ಸಾಲುಗಳ ಎಲುಬಿನ ಫಲಕಗಳುಂಟು. ಬಾಲದುದ್ದಕ್ಕೂ 2 ಸಾಲುಗಳಲ್ಲಿ ಚಪ್ಪಟೆಯಾದ ಹಾಗೂ ಎದ್ದುಕೊಂಡಿರುವಂತಹ ಹುರುಪೆಗಳಿವೆ. ಕಾಲ್ಬೆರಳುಗಳು ಜಾಲದಿಂದ ಪರಸ್ಪರ ಕೂಡಿಕೊಂಡಿವೆ. ಬಾಯಿಯಲ್ಲಿ ದವಡೆಯುದ್ದಕ್ಕೂ ಹಲ್ಲುಗಳಿವೆ. ಕೆಳದವಡೆಯ ನಾಲ್ಕನೆಯ ಹಲ್ಲು ಮೇಲ್ದವಡೆಯ ಅಂಚಿನಲ್ಲಿರುವ ಒಂದು ಕುಳಿಯಲ್ಲಿ ಗುತ್ತವಾಗಿ ಅಳವಡಿಕೆಯಾಗುವಂತಿದ್ದು ಬಾಯಿ ಮುಚ್ಚಿದರೂ ಹಲ್ಲುಗಳು ಕಾಣುತ್ತವೆ. ಜೀವಮಾನವಿಡೀ ಹಲ್ಲುಗಳು ಬಿದ್ದು ಹುಟ್ಟುತ್ತಿರುತ್ತವೆ.

ಭಾರತದಲ್ಲಿ ಸಿಕ್ಕುವ ಇನ್ನೆರಡು ಬಗೆಯ ಮೊಸಳೆಗಳೆಂದರೆ ಕಡಲ ನೀರಿನ ಮೊಸಳೆ (ಕ್ರಾ. ಪೋರೋಸಸ್) ಮತ್ತು ಘರಿಯಾಲ್ (ಗೇವಿಯಾಲಿಸ್ ಗ್ಯಾಂಜೆಟಿಕಸ್). ಇವುಗಳಲ್ಲಿ ಮೊದಲನೆಯದು ನೋಡಲು ಹೆಚ್ಚುಕಡಿಮೆ ಪ್ಯಾಲಸ್ಟ್ರಿಸ್ ಪ್ರಭೇದದಂತೆಯೇ ಇದೆ. ಇದು ಭಾರತದ ಕೇರಳದಿಂದ ತೊಡಗಿ ಪಶ್ಚಿಮ ಬಂಗಾಲದವರೆಗೆ ಕರಾವಳಿಯುದ್ದಕ್ಕೂ ಅಳಿವೆ, ಮ್ಯಾಂಗ್ರೋವ್ ಕಾಡುಗಳಲ್ಲೂ ಕೆಲವು ಕರಾವಳಿಯ ಉಷ್ಣನೀರಿನ ಸರೋವರಗಳಲ್ಲೂ ಕಾಣದೊರೆಯುತ್ತದೆ. ಅಂಡಮಾನ್, ನಿಕೋಬಾರ್ ದ್ವೀಪಸಮೂಹಗಳಲ್ಲೂ ಉಂಟು.[೩][೪][೫][೬][೭]

ಘಾರಿಯಲ್ ಮೊಸಳೆ ಸಿಂಧೂ, ಗಂಗಾ, ಬ್ರಹ್ಮಪುತ್ರ, ಮಹಾನದಿಗಳಲ್ಲೂ, ಚಂಬಲ್, ಗಿರ್ವ, ರಪ್ತಿ, ನಾರಾಯಣಿ ಹೊಳೆಗಳಲ್ಲೂ ಸಿಕ್ಕುತ್ತದೆ.[೮][೯][೧೦][೧೧][೧೨] ಇದರ ಮೂತಿ ಉದ್ದವೂ ಕಿರಿಯಗಲದ್ದೂ ಆಗಿದ್ದು ಗಂಡು ಮುಸುಡಿಯ ತುದಿಯಲ್ಲಿ ಚೆಂಡಿನಗಾತ್ರದ ಗಂಟನ್ನು ಪಡೆದಿದೆ.[೧೩] ಈ ಲಕ್ಷಣದಿಂದ ಇದನ್ನು ಉಳಿದ ಮೊಸಳೆಗಳಿಂದ ಬೇರೆಯಾಗಿ ಗುರುತಿಸಬಹುದು.

ಜೀವಶಾಸ್ತ್ರ[ಬದಲಾಯಿಸಿ]

ಮೊಸಳೆಗಳಲ್ಲಿ ದೃಷ್ಟಿ, ಘ್ರಾಣ ಮತ್ತು ಶ್ರವಣೇಂದ್ರಿಯಗಳು ಚುರುಕಾಗಿವೆ. ದೇಹದ ಉಳಿದ ಭಾಗ ನೀರಿನಲ್ಲಿ ಮುಳುಗಿದ್ದರೂ ಉಸಿರಾಟಕ್ಕೆ ತೊಂದರೆಯಾಗದಂತೆ ಮುಸುಡಿನ ತುದಿಯಲ್ಲಿರುವ ಉಬ್ಬಿನಲ್ಲಿ ಮೂಗಿನ ಹೊಳ್ಳೆಗಳು ಸ್ಥಿತವಾಗಿವೆ. ಅಲ್ಲದೆ ಹೊಳ್ಳೆಗಳಿಗೂ ಕಿವಿಗಳಿಗೂ ಪಟಲದ ಹೊದಿಕೆಯಿದ್ದು ಮೊಸಳೆ ನೀರಿನಲ್ಲಿ ಮುಳುಗಿದರೂ ಒಳಕ್ಕೆ ನೀರು ಹೋಗದಂತೆ ತಡೆಯಾಗುತ್ತದೆ. ಜೊತೆಗೆ ಹೊಳ್ಳೆಗಳಿಗೂ ಗಂಟಲಿಗೂ ಸಂಪರ್ಕ ಕಲ್ಪಿಸುವ ಉದ್ದನೆಯ ಕೊಳವೆಗಳೂ, ಬಾಯಿಯಿಂದ ಪ್ರತ್ಯೇಕಿಸುವಂತೆ ತಡೆಯೂ ಇದ್ದು ಬಾಯಿಯಲ್ಲಿ ಎರೆಯನ್ನು ಕಚ್ಚಿಕೊಂಡಿರುವಾಗ ಉಸಿರಾಟಕ್ಕೆ ಯಾವುದೇ ತೊಂದರೆಯಾಗದು. ಮೊಸಳೆ ಬೇರೆ ಸರೀಸೃಪಗಳಂತೆ ನಾಲಗೆಯನ್ನು ಹೊರಚಾಚಲಾರದು.[೧೪] ನಾಲಿಗೆಯ ಮೇಲೂ ಅಂಗುಳದ ಮೇಲೂ ಹಲವಾರು ಮಡಿಕೆಗಳಿದ್ದು ನೀರಿನೊಳಗೆ ಮುಳುಗಿ ಬಾಯಿ ತೆರೆದರೂ ನೀರು ಒಳಹೋಗದಂತೆ ತಡೆಯಲು ಅನುಕೂಲವಾಗಿದೆ. ಕಣ್ಣುಗಳಲ್ಲಿ ಪಾರದರ್ಶಕವಾದ ಮೂರನೆಯ ರೆಪ್ಪೆಯುಂಟು.[೧೫] ಇವೆಲ್ಲ ಲಕ್ಷಣಗಳಿಂದಾಗಿ ಮೊಸಳೆ ಜಲವಾಸಕ್ಕೆ ಚೆನ್ನಾಗಿ ಹೊಂದಿಕೊಂಡಿದೆ.

ಗಂಟಲಲ್ಲಿ ಒಂದು ಜೊತೆ ಮತ್ತು ಗುದದ್ವಾರದ ಬಳಿ ಒಂದು ಜೊತೆ - ಹೀಗೆ ಒಟ್ಟು ಎರಡು ಜೊತೆ ವಾಸನಾಗ್ರಂಥಿಗಳಿವೆ.

ಹೃದಯ[ಬದಲಾಯಿಸಿ]

ಮೊಸಳೆಗಳಲ್ಲಿ ಹೃದಯದ ರಚನೆ ಹೆಚ್ಚು ಮುಂದುವರಿದಿರುವುದನ್ನು ಕಾಣಬಹುದು. ಇಲ್ಲಿ ಹೃತ್ಕರ್ಣ ಮತ್ತು ಹೃತ್ಕುಕ್ಷಿಗಳು ಪೂರ್ಣವಾಗಿ ಬಲ ಮತ್ತು ಎಡ ಭಾಗಗಳಾಗಿ ವಿಭಾಗವಾಗಿದೆ. ಎಡ ಸಿಸ್ಟಮಿಕ್ ಅಪಧಮನಿ ಬಲ ಹೃತ್ಕುಕ್ಷಿಯಿಂದ ಹೊರಡುವುದರಿಂದ ಮಲಿನ ರಕ್ತವನ್ನು ಒಯ್ಯುತ್ತದೆ. ಶುದ್ಧ ರಕ್ತವನ್ನು ಹೊತ್ತ ಬಲ ಸಿಸ್ಟಮಿಕ್ ಮಹಾಪಧಮನಿ ಎಡ ಹೃತ್ಕುಕ್ಷಿಯಿಂದ ಹೊರಡುತ್ತದೆ. ಈ ಎರಡು ಸಿಸ್ಟಮಿಕ್ ಅಪಧಮನಿಗಳಿಗುu ಅವುಗಳ ಬುಡದಲ್ಲಿರುವ ವೆನಿಸ್ಸ ರಂಧ್ರ ಸಂಬಂಧ ಕಲ್ಪಿಸುತ್ತದೆ. ಒತ್ತಡ ಹೆಚ್ಚಾಗಿರುವ ಎಡಹೃತ್ಕುಕ್ಷಿ ಸಂಕುಚಿಸಿದಾಗ ಎಡ ಸಿಸ್ಟಮಿಕ್ ಅಪಧಮನಿಗೆ ಸ್ವಲ್ಪ ಆಕ್ಸಿಜನೀಕೃತ ರಕ್ತ ಸೇರುವುದು. ಅದೂ ಅಲ್ಲದೆ ಮೊಸಳೆ ನೀರಿಗೆ ಧುಮುಕಿದಾಗ ಬಲ ಹೃತ್ಕುಕ್ಷಿಯಲ್ಲಿ ಒತ್ತಡ ಹೆಚ್ಚಾಗಿ ರಕ್ತ ವೆನಿಸ್ಸ ರಂಧ್ರದ ಮೂಲಕ ಬಲದಿಂದ ಎಡಭಾಗಕ್ಕೆ ಹರಿಯುವುದು.

ನಡವಳಿಕೆ[ಬದಲಾಯಿಸಿ]

ಮೊಸಳೆಗಳು ಈಜುವುದರಲ್ಲಿ ಬಲು ನಿಸ್ಸೀಮ. ಜಾಲಪಾದಗಳನ್ನು ಪಡೆದಿದ್ದರೂ ಈಜುವುದು ಬಾಲದ ಸಹಾಯದಿಂದ. ನೆಲದ ಮೇಲೆ ತೆವಳಿಕೊಂಡೋ, ನಡೆದುಕೊಂಡೋ, ಚಲಿಸಬಲ್ಲದು. ನಡೆಯುವುದು ಕೊಂಚ ವಿಚಿತ್ರ; ದೇಹವನ್ನು ನೆಲದಿಂದ ಎತ್ತರವಾಗಿ ಎತ್ತಿಕೊಂಡು ನಡೆಯುತ್ತವೆ. ಗಂಟೆಗೆ ಸು. 50 ಕಿ.ಮೀ. ವೇಗದ ನಾಗಾಲೋಟವೂ ಉಂಟು.

ಮೊಸಳೆಗಳು ವಾಸಿಸುವುದು ನೀರಿನಲ್ಲಿಯೇ ಆದರೂ ಹಗಲಿನಲ್ಲಿ ಯಾವುದಾದರೂ ಆಯಕಟ್ಟಿನ ಬಂಡೆಯ ಮೇಲೆ ಬಾಯಿ ತೆರೆದುಕೊಂಡು ನಿಶ್ಚಲವಾಗಿ ಮಲಗಿರುವುದು ಇವುಗಳ ಸ್ವಭಾವ. ದೇಹದಲ್ಲಿ ಸ್ವೇದಗ್ರಂಥಿಗಳಿಲ್ಲದಿರುವುರಿಂದ ಮೈಯಿಂದ ನೀರು ಆವಿಯಾಗಲೂ ಸಹಾಯವಾಗಲೂ ತನ್ಮೂಲಕ ದೇಹದ ತಾಪವನ್ನು ಕಾಯ್ದುಕೊಳ್ಳಲೂ ಇದರಿಂದ ಅನುಕೂಲ.[೧೬] ರಾತ್ರಿವೇಳೆ ಯಾವುದಾದರೂ ಆಯ್ಕೆಮಾಡಿದ ನೆರಳು ಇಲ್ಲವೆ ನದಿ ಅಂಚಿನ ಡೊಗರುಗಳಲ್ಲಿ ಅಡಗಿರುತ್ತವೆ. ವಾಸದ ನೆಲೆಗಳು 60-80 ಸೆಂ.ಮೀ ಅಗಲದ ಪ್ರವೇಶದ್ವಾರವನ್ನೂ 2.5-4.5 ಮೀ ಉದ್ದದ ದಾರಿಯನ್ನೂ 8-10 ಮೀ ವ್ಯಾಸದ ಕೋಣೆಯನ್ನೂ ಒಳಗೊಂಡಿರುತ್ತವೆ.

ಇವು ಸಾಮಾನ್ಯವಾಗಿ ಯಾವ ತೆರನ ಸದ್ದನ್ನೂ ಮಾಡುವುದಿಲ್ಲ. ಆದರೆ ಶತ್ರುವಿಗೆ ಎದುರಾದಾಗ ಬುಸುಗುಟ್ಟುತ್ತವೆ. ಕೆಲವೊಮ್ಮೆ ಆಕಳುಗಳ ಕೂಗಿನಂತೆ ಸದ್ದು ಮಾಡುವುದುಂಟು.

ಆಹಾರ[ಬದಲಾಯಿಸಿ]

ಮೊಸಳೆ ಮಾಂಸಾಹಾರಿ. ನೀರಿನಲ್ಲಿ ಸಿಕ್ಕುವ ಮೀನು ಪ್ರಧಾನ ಆಹಾರವಾದರೂ ನೀರಿಗೆಂದು ಬರುವ ಯಾವುದೇ ನೆಲವಾಸಿ ಪ್ರಾಣಿಗಳನ್ನೂ ಬೇಟೆಯಾಡುವುದು ಉಂಟು. ಉದಾಹರಣೆಗೆ: ಕೋತಿ, ನಾಯಿ, ಆಡು, ದನಕರು, ಜಿಂಕೆ, ಕಡವೆ, ಕತ್ತೆಕಿರುಬ, ಕಾಡುನಾಯಿ, ಹಂದಿ, ಬಾತು ಇತ್ಯಾದಿ. ಅಪರೂಪಕ್ಕೆ ಮನುಷ್ಯ ಕೂಡ ಇವುಗಳ ಬಾಯಿಗೆ ಬೀಳುವುದುಂಟು. ಇನ್ನಿತರ ಹಿಂಸ್ರಪ್ರಾಣಿಗಳಂತೆ ಮೊಸಳೆಗೆ ಬೇಟೆಯನ್ನು ಸಿಗಿದು ತಿನ್ನುವುದಕ್ಕಾಗಲಿ, ಅಗಿಯುವುದಕ್ಕಾಗಲಿ ಆಗದು. ಸಿಕ್ಕ ಸೆರೆಯನ್ನು ಬಲವಾಗಿ ಹಿಡಿದು, ನೀರಿನಲ್ಲಿ ಮುಳುಗಿಸಿ ಸಾಯಿಸಿ ನೀರಿನ ಅಡಿಯಲ್ಲಿರಬಹುದಾದ ಬಂಡೆಸಂದುಗಳಲ್ಲಿ ಸಿಕ್ಕಿಸಿ ಇಟ್ಟು ಅದು ಕೊಳೆತ ತರುವಾಯ ಬಿಡಿಸಿಬಿಡಿಸಿ ತಿನ್ನುತ್ತದೆ.

ಸಂತಾನವೃದ್ಧಿ[ಬದಲಾಯಿಸಿ]

ಸಂತಾನವೃದ್ಧಿಯ ಶ್ರಾಯ ಜನವರಿಯಿಂದ ಮಾರ್ಚ್. ಗಂಡು ಹೆಣ್ಣುಗಳ ಕೂಡುವಿಕೆ ನೀರಿನಲ್ಲಿ ನಡೆಯುತ್ತದೆ. ಗರ್ಭಧರಿಸಿದ ಹೆಣ್ಣು ಮರಳಿನಲ್ಲೋ, ನದಿ ಕೆರೆಗಳ ದಂಡೆಯ ನೆಲದಲ್ಲೊ, ನೀರಿನಿಂದ 2-500 ಮೀ ದೂರದಲ್ಲಿ ಗೂಡು ರಚಿಸಿ 10-40 ಮೊಟ್ಟೆಗಳನ್ನಿಡುತ್ತದೆ. ಮೊಟ್ಟೆಗಳಿಗೆ ಕಾವುಕೊಡುವ ಪರಿಪಾಠ ಇಲ್ಲವಾದರೂ, ಹೆಣ್ಣು ಗೂಡಿಗೆ ಆದಷ್ಟು ಹತ್ತಿರದಲ್ಲೇ ಕಾವಲು ಕಾಯುತ್ತಿದ್ದು ವೈರಿಗಳಿಂದ ರಕ್ಷಿಸಿ, ಮೊಟ್ಟೆಯೊಡೆದು ಮರಿಗಳು ಹೊರಬರಲು ಸಹಾಯ ಮಾಡುತ್ತದೆ. ಮೊಟ್ಟೆಗಳು ಬಿಳಿಬಣ್ಣದವು. ಮೊಟ್ಟೆಗಳು ಮರಿಯಾಗಿ ಹೊರಬರಲು ಹಿಡಿಯುವ ಅವಧಿ ಹೊರಗಿನ ಉಷ್ಣತೆಯನ್ನು ಅನುಸರಿಸಿ 2-3 ತಿಂಗಳು ಆಗುತ್ತದೆ.

ಮರಿಗಳ ಬೆಳೆವಣಿಗೆ ಶೀಘ್ರಗತಿಯದು. ತಿಂಗಳಿಗೆ 6 ಸೆಂ.ಮೀ ದರದಲ್ಲಿ ಮರಿಗಳು ಬೆಳೆಯುವುವು.

ಮಾನವನಿಂದ ಅಪಾಯ[ಬದಲಾಯಿಸಿ]

ಮೊಸಳೆ ಚರ್ಮಕ್ಕೆ ಹೆಚ್ಚು ಬೇಡಿಕೆಯೂ ಬೆಲೆಯೂ ಇರುವುದರಿಂದ ಇದನ್ನು ಬೇಟೆಯಾಡಲಾಗುತ್ತದೆ. ಇದರಿಂದಾಗಿ ಇವುಗಳ ಸಂಖ್ಯೆ ಗಣನೀಯವಾಗಿ ಇಳಿದು ಹೋಗಿ ಮೊಸಳೆ ಸಂತತಿ ಅಪಾಯದ ಅಂಚಿನಲ್ಲಿ ಇರುವಂತಾಗಿದೆ. ಇತ್ತೀಚಿನ ದಿನಗಳಲ್ಲಿ ಮೊಸಳೆ ಸಂತತಿಗೆ ಕಾನೂನಿನ ರಕ್ಷಣೆ ದೊರೆತಿದೆ.

ಮಾನವರೊಂದಿಗಿನ ಸಂಬಂಧ[ಬದಲಾಯಿಸಿ]

ಪ್ರಪಂಚದಾದ್ಯಂತ ಮೊಸಳೆಗಳ ಬಗ್ಗೆ ಮಾನವನ ಭಾವನೆ ಭಯ, ಅಸಹ್ಯಗಳಿಂದ ಹಿಡಿದು ಧಾರ್ಮಿಕ ಎಂಬುದರವರೆಗೆ ವ್ಯತ್ಯಾಸವಾಗುತ್ತದೆ. ಪಾಕಿಸ್ತಾನದ ಕರಾಚಿಯಲ್ಲಿ ಮೊಸಳೆಗಳಿಗೆಂದೇ ಮೀಸಲಾದ ಕೊಳವೊಂದಿದ್ದು ಇದರಲ್ಲಿ ವಾಸವಾಗಿರುವ ಮೊಸಳೆಗಳನ್ನು ಪೂಜ್ಯವೆಂದು ಗಣಿಸಲಾಗಿದೆ. ಪ್ರಾಚೀನ ಈಜಿಪ್ಟಿನಲ್ಲಿ ನದೀದೇವತೆಯನ್ನು ಪ್ರಸನ್ನಗೊಳಿಸಲು ಮೊಸಳೆಗಳಿರುವ ನದಿಗೆ ನರಬಲಿ ಕೊಡುವ ಪದ್ಧತಿ ಇತ್ತು. ಆಫ್ರಿಕದ ವಿಕ್ಟೋರಿಯ ಸರೋವರದ ಕೆಲವು ದ್ವೀಪಗಳಲ್ಲಿನ ಜನ ಮೊಸಳೆಯನ್ನು ಅವರ ದೇವರ ಪ್ರಧಾನ ಅರ್ಚಕ ಎಂದು ಭಾವಿಸಿದ್ದರು. ಮನುಷ್ಯರನ್ನು ಕತ್ತರಿಸಿ ಎಸೆದು ಬಲಿ ನೀಡುತ್ತಿದ್ದರು. ಭಾರತದಲ್ಲಿ ಮೊಸಳೆ ನೈಋತ್ಯದಿಕ್ಕಿನ ಅಧಿಪತಿಯಾದ ನಿರುತಿಯ ಹಾಗೂ ಗಂಗೆಯ ವಾಹನವೆಂದು ಪರಿಗಣಿತವಾಗಿದೆ.[೧೭][೧೮][೧೯]

ಉಲ್ಲೇಖಗಳು[ಬದಲಾಯಿಸಿ]

 1. "Crocodilian Biology Database - FAQ - What's the difference between a crocodile and an alligator". Flmnh.ufl.edu. Retrieved 5 April 2009.
 2. Guggisberg, C.A.W. (1972). Crocodiles: Their Natural History, Folklore, and Conservation. Newton Abbot: David & Charles. p. 195. ISBN 0-7153-5272-5.
 3. Andrews, H. V. & Whitaker, R. (1994). "Status of the saltwater crocodile (Crocodylus porosus Schneider, 1801) in North Andaman Island". Hamadryad. 19: 79–92.
 4. Whitaker, N. (2008). Survey of Human/Crocodile Conflict in the Union Territory of the Andaman Islands, Hut Bay, Little Andaman, January 2008 (PDF). Madras: Madras Crocodile Trust.
 5. Kumar, A.; Kumar, S.; Zaidi, Y. F. & Kanaujia, A. (2012). A review on status and conservation of salt water crocodile (Crocodylus porosus) in India (PDF). pp. 141–148.
 6. Das, C. S. & Jana, R. (2018). "Human–crocodile conflict in the Indian Sundarban: an analysis of spatio-temporal incidences in relation to people's livelihood". Oryx. 52 (4): 661–668. doi:10.1017/S0030605316001502.
 7. Aziz, M. A. & Islam, M. A. (2018). "Population status and spatial distribution of saltwater crocodile, Crocodylus porosus in the Sundarbans of Bangladesh". Bangladesh Journal of Zoology. 46 (1): 33–44. doi:10.3329/bjz.v46i1.37624.
 8. Yadav, S. K.; Nawab, A. & Afifullah Khan, A. (2013). "Conserving the Critically Endangered Gharial Gavialis gangeticus in Hastinapur Wildlife Sanctuary, Uttar Pradesh: Promoting better coexistence for conservation" (PDF). World Crocodile Conference. Proceedings of the 22nd Working Meeting of the IUCN-SSC Crocodile Specialist Group. Gland: IUCN Crocodile Specialist Group. pp. 78−82.
 9. "An endangered apex predator returns to the Ganga River". World Wildlife Fund (in ಇಂಗ್ಲಿಷ್). Retrieved 15 August 2023.
 10. Rao, R. J. & Choudhury, B. C. (1992). "Sympatric distribution of gharial and mugger in India". Journal of the Bombay Natural History Society. 89: 312–315.
 11. Khandal, D.; Sahu, Y. K.; Dhakad, M.; Shukla, A.; Katdare, S. & Lang, J. W. (2017). "Gharial and Mugger in upstream tributaries of the Chambal River, north India" (PDF). Crocodile Specialist Group Newsletter. 36 (4): 11–16.
 12. Bustard, H. R. (1983). "Movement of wild Gharial, Gavialis gangeticus (Gmelin) in the River Mahanadi, Orissa (India)". British Journal of Herpetology. 6: 287–291.
 13. Brazaitis, P. (1973). "Family Gavialidae Gavialis gangeticus Gmelin". Zoologica. 3: 80−81.
 14. Huchzermeyer, Fritz (2003). Crocodiles: Biology, Husbandry and Diseases. CABI Publishing. p. 13. ISBN 978-0-85199-656-1.
 15. Encyclopædia Britannica. "Crocodile". Retrieved 29 April 2013.
 16. Anitai, Stefan (3 November 2007). "14 Amazing Facts About Crocodiles – Living dinosaurs". Softpedia. Retrieved 1 April 2008.
 17. "Holy Rivers, Lakes, and Oceans". Heart of Hinduism. ISKCON Educational Services. 2004. Archived from the original on 14 October 2014. Retrieved 16 September 2014. Most rivers are considered female and are personified as goddesses. Ganga, who features in the Mahabharata, is usually shown riding on a crocodile (see right).
 18. Kumar, Nitin (August 2003). "Ganga The River Goddess - Tales in Art and Mythology". The second distinguishing aspect of Ganga's iconography is her animal mount, which is often shown serving as a pedestal for her. This is the makara, a hybrid creature having the body of a crocodile and the tail of a fish. The makara in Hindu thought corresponds to the star sign of Capricorn in western astrology. The crocodile is a unique animal in that it can live on both land and sea. It thus denotes the wisdom of both the earth and waters.
 19. "Hindu gods and their holy mounts". Sri.Venkateswara Zoological Park. Archived from the original on 23 June 2014. The river goddesses, Ganga and Yamuna, were appropriately mounted on a tortoise and a crocodile respectively.

ಹೊರಗಿನ ಕೊಂಡಿಗಳು[ಬದಲಾಯಿಸಿ]

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಮೊಸಳೆ&oldid=1203448" ಇಂದ ಪಡೆಯಲ್ಪಟ್ಟಿದೆ