ಉಪ್ಪು (ಖಾದ್ಯ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚೀನಾದಲ್ಲಿ ಲವಣಶಿಲೆಯ ರಸವನ್ನು ಕುದಿಸಿ ಶುದ್ಧ ಉಪ್ಪಿನ ತಯಾರಿಕೆ.

ಉಪ್ಪು ಪ್ರಾಣಿಜೀವನಕ್ಕೆ ಅವಶ್ಯಕವಾದ ಒಂದು ಖನಿಜ. ಖಾದ್ಯ ಉಪ್ಪು ಮುಖ್ಯವಾಗಿ ಸೋಡಿಯಮ್ ಕ್ಲೋರೈಡ್ ಅನ್ನು ಒಳಗೊಂಡಿರುತ್ತದೆ. ಮಾನವನು ಆಹಾರದಲ್ಲಿ ಬಳಸುವ ಉಪ್ಪು ಹಲವು ಬಗೆಯಲ್ಲಿ ತಯಾರಾಗುತ್ತವೆ. ಇವುಗಳಲ್ಲಿ ಶುದ್ಧೀಕರಣಗೊಳ್ಳದ ಸಮುದ್ರದ ಉಪ್ಪು (ಕಲ್ಲುಪ್ಪು), ಶುದ್ಧೀಕೃತ ಪುಡಿ ಉಪ್ಪು (ಟೇಬಲ್ ಸಾಲ್ಟ್)ಮತ್ತು ಅಯೊಡಿನ್ ಒಳಗೊಂಡಿರುವ ಉಪ್ಪು ಪ್ರಮುಖವಾದವು. ಉಪ್ಪು ಬಿಳಿ, ತೆಳು ಗುಲಾಬಿ ಅಥವಾ ತೆಳುಗಪ್ಪು ಬಣ್ಣದ ಹರಳು. ಉಪ್ಪನ್ನು ಸಾಮಾನ್ಯವಾಗಿ ಸಮುದ್ರದ ನೀರು ಅಥವಾ ಭೂಮಿಯಲ್ಲಿನ ಉಪ್ಪಿನ ಬಂಡೆಗಳಿಂದ (ಲವಣಶಿಲೆ) ಪಡೆಯಲಾಗುತ್ತದೆ. ಬಂಡೆಗಳಿಂದ ಪಡೆಯುವ ಉಪ್ಪು ತನ್ನಲ್ಲಿರುವ ಇತರ ಖನಿಜಗಳ ಕಾರಣದಿಂದಾಗಿ ಮಾಸಲು ಕಪ್ಪು ಬಣ್ಣ ಹೊಂದಿರಬಹುದು. ಉಪ್ಪಿನ ಮೂಲ ಧಾತುಗಳಾದ ಸೋಡಿಯಮ್ ಮತ್ತು ಕ್ಲೋರಿನ್‍ಗಳೆರಡೂ ಮಾನವನೂ ಸೇರಿದಂತೆ ಎಲ್ಲ ಜೀವಿಗಳ ಉಳಿವಿಗೆ ಅವಶ್ಯವಾಗಿವೆ. ಉಪ್ಪು ಶರೀರದ ಜಲಪ್ರಮಾಣವನ್ನು ನಿಯಂತ್ರಿಸುವಲ್ಲಿ ಸಹಕಾರಿಯಾಗಿದೆ. ಆದರೆ ಈ ಎರಡು ಧಾತುಗಳನ್ನು ಉಪ್ಪಿನ ರೂಪದಲ್ಲಿಯೇ ಸೇವಿಸಬೇಕಾಗ ಪ್ರಮೇಯವೇನಿಲ್ಲ. ಇತರ ಆಹಾರ ಪದಾರ್ಥಗಳ ಮೂಲಕ ಸಹ ಇವೆರಡು ಧಾತುಗಳನ್ನು ಮಾನವನು ಪಡೆಯಬಹುದಾಗಿದೆ. ವಿಶ್ವದ ಕೆಲವೆಡೆ ಹಲವು ಮೂಲನಿವಾಸಿಗಳು ಉಪ್ಪನ್ನು ಬಲು ಕಡಿಮೆ ಪ್ರಮಾಣದಲ್ಲಿ ಬಳಸುವುದು ಕಂಡು ಬಂದಿದೆ. ಉಪ್ಪು ಆಹಾರದ ಮೂಲ ರುಚಿಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿದೆ. ಹಲವು ಬಾರಿ ಸಿದ್ಧ ಆಹಾರವನ್ನು ಕೆಡದಂತೆ ರಕ್ಷಿಸುವಲ್ಲಿ ಉಪ್ಪನ್ನು ಬಳಸಲಾಗುತ್ತದೆ. ಆದರೆ ಉಪ್ಪಿನ ಅತಿಯಾದ ಸೇವನೆ ಶರೀರಕ್ಕೆ ಹಾನಿಯುಂಟುಮಾಡಬಲ್ಲುದು. ಅತಿ ರಕ್ತದೊತ್ತಡದಂತಹ ಆರೋಗ್ಯದ ಸಮಸ್ಯೆಗಳನ್ನು ಉಪ್ಪು ಉಂಟುಮಾಡುತ್ತದೆ.

ಇತಿಹಾಸ[ಬದಲಾಯಿಸಿ]

ಆಹಾರವನ್ನು ಕೆಡದಂತೆ ಕಾಪಾಡುವ ಉಪ್ಪಿನ ಗುಣವು ಮಾನವ ನಾಗರಿಕತೆಯ ಪ್ರಾರಂಭದಲ್ಲಿಯೇ ಕಂಡುಕೊಳ್ಳಲ್ಪಟ್ಟಿತು. ಇದರಿಂದಾಗಿ ಆಯಾ ಋತುಗಳಲ್ಲಿ ದೊರೆಯುವ ಆಹಾರವನ್ನು ಮಾತ್ರ ಸೇವಿಸಬೇಕಾದ ಅಸಹಾಯಕತೆಯನ್ನು ನಿವಾರಿಸಲಾಯಿತು. ಜೊತೆಗೆ ದೀರ್ಘಪ್ರಯಾಣವನ್ನು ಕೈಗೊಳ್ಳುವಾಗ ಉಂಟಾಗುತ್ತಿದ್ದ ಆಹಾರದ ಸಮಸ್ಯೆ ಸಹ ಇಲ್ಲವಾಯಿತು. ಅಂದಿನ ಕಾಲದಲ್ಲಿ ಉಪ್ಪು ಬಲು ವಿರಳವಾಗಿ ದೊರೆಯುತ್ತಿದ್ದ ವಸ್ತುವಾದ್ದರಿಂದ ಬಹುಮೂಲ್ಯ ವಸ್ತುವಾಗಿದ್ದಿತು. ಇತಿಹಾಸದುದ್ದಕ್ಕೂ ಉಪ್ಪು ಪ್ರಮುಖ ಮತ್ತು ಬೆಲೆಬಾಳುವ ವ್ಯಾಪಾರಿ ಸರಕಾಗಿತ್ತು. ೧೯ನೆ ಶತಮಾನದವರೆಗೆ ಉಪ್ಪು ರಾಷ್ಟ್ರಗಳ ಆರ್ಥಿಕ ಸ್ಥಿತಿಯನ್ನು ನಿಯಂತ್ರಿಸುವ ಮತ್ತು ಯುದ್ಧಗಳನ್ನು ಸಹ ಹುಟ್ಟುಹಾಕುವ ವಸ್ತುವಾಗಿದ್ದಿತು. ಅಂದಿನ ಕಾಲದಲ್ಲಿ ಉಪ್ಪಿನ ಮೇಲೆ ತೆರಿಗೆಗಳನ್ನು ವಿಧಿಸಲಾಗುತ್ತಿತ್ತು. ಕ್ರಿ. ಪೂ. ೪೦೦೦ದ ಸುಮಾರಿಗೆ ಉಪ್ಪಿನ ಬಳಕೆ ಚಾಲ್ತಿಯಲ್ಲಿತ್ತೆಂದು ತಿಳಿದುಬಂದಿದೆ. ಪ್ರಾಚೀನ ರೋಮ್ ಸಾಮ್ರಾಜ್ಯದಲ್ಲಿ ಉಪ್ಪನ್ನು ಹಣವಾಗಿ ಬಳಸಲ್ಪಡುತ್ತಿತ್ತು. "ಸಂಬಳ" ಎನ್ನುವುದರ ಆಂಗ್ಲ ರೂಪವಾದ "ಸ್ಯಾಲರಿ" ಪದದ ಮೂಲವು ಉಪ್ಪಿನ ಮೂಲಕ ನೀಡಲಾದದ್ದು ಎಂಬರ್ಥ ಕೊಡುವ "ಸಲಾರಿಯಮ್" ಎಂಬ ಲ್ಯಾಟಿನ್ ಭಾಷೆಯ ಶಬ್ದ. ರೋಮ್‍ನ ಸೈನಿಕರು ಮತ್ತು ಕೆಲಸಗಾರರಿಗೆ ಸಂಬಳವನ್ನು ಉಪ್ಪಿನ ರೂಪದಲ್ಲಿ ನೀಡಲಾಗುತ್ತಿತ್ತು. ಆದರೆ ಈ ರೀತಿ ಪಡೆದ ಉಪ್ಪನ್ನು ಕಾಪಾಡಿಕೊಳ್ಳುವುದು ಮಾತ್ರ ಸಾಕಷ್ಟು ತ್ರಾಸದಾಯಕವಾಗಿದ್ದಿತು. ಅಂದಿನ ಕಾಲದಲ್ಲಿ ವರದಕ್ಷಿಣೆಯ ರೂಪದಲ್ಲಿ ಸಹ ಉಪ್ಪನ್ನು ನೀಡಲಾಗುತ್ತಿತ್ತು. ಪ್ರಾಚೀನ ಮಾಲಿ ಸಾಮ್ರಾಜ್ಯದಲ್ಲಿ ೧೨ನೆಯ ಶತಮಾನದ ಕಾಲದಲ್ಲಿ ವ್ಯಾಪಾರಿಗಳು ಚಿನ್ನವನ್ನು ನೀಡಿ ಉಪ್ಪನ್ನು ಕೊಳ್ಳುತ್ತಿದ್ದರು. ನಂತರ ಈ ಉಪ್ಪನ್ನು ಹೇರಳ ಬೆಲೆಗೆ ಯುರೋಪಿಗೆ ರಫ್ತು ಮಾಡಿ ಅಗಾಧ ಸಂಪತ್ತನ್ನು ಗಳಿಸುತ್ತಿದ್ದರು. ಈ ವಾಣಿಜ್ಯ ಕ್ರಮದಿಂದಾಗಿ ಮಾಲಿಯ ಟಿಂಬಕ್ಟು ಜಗತ್ತಿನ ಅತಿ ಸಿರಿವಂತ ನಗರವಾಗಿ ಮೆರೆಯಿತು. ಫಿನೀಷಿಯನ್ ಕಾಲದಿಂದಲೂ ಸಮುದ್ರದ ನೀರಿನಿಂದ ಉಪ್ಪನ್ನು ತಯಾರಿಸುತ್ತಿದ್ದ ಬಗ್ಗೆ ಪುರಾವೆಗಳು ದೊರೆತಿವೆ. ಇವರು ಉಪ್ಪನ್ನು ಇತರ ನಾಗರಿಕ ಸಮಾಜಗಳಿಗೆ ರಫ್ತು ಸಹ ಮಾಡುತ್ತಿದ್ದರು. ಕ್ರಮೇಣ ಸಮುದ್ರದಿಂದ ಉಪ್ಪಿನ ತಯಾರಿಕೆ ವ್ಯಾಪಕವಾಗುತ್ತಿದ್ದಂತೆ ಉಪ್ಪಿನ ಲಭ್ಯತೆ ಹೆಚ್ಚತೊಡಗಿ ಅದರ ಬೆಲೆ ಮತ್ತು ಪ್ರಾಮುಖ್ಯ ಕುಸಿಯತೊಡಗಿತು. ಅಂದು ಸಮುದ್ರದ ನೀರನ್ನು ಭೂಪ್ರದೇಶಕ್ಕೆ ಹಾಯಿಸಿ ಒಣಗಲು ಬಿಡುತ್ತಿದ್ದರು. ನೀರು ಒಣಗಿದ ನಂತರ ಉಳಿಯುತ್ತಿದ್ದ ಉಪ್ಪಿನ ಹರಳುಗಳನ್ನು ಸಂಗ್ರಹಿಸಿ ಉಪಯೋಗಿಸುತ್ತಿದ್ದರು. ಭಾರತದಲ್ಲಿ ಗಾಂಧೀಜಿಯವರು ಉಪ್ಪಿನ ಸತ್ಯಾಗ್ರಹವೊಂದನ್ನು ನಡೆಸಿದರು. ಇದು ದಂಡಿ ಯಾತ್ರೆಯೆಂಬ ಹೆಸರಿನಿಂದ ಪ್ರಸಿದ್ಧವಾಗಿದೆ.

ಉಪ್ಪಿನ ರೂಪಗಳು[ಬದಲಾಯಿಸಿ]

ಸೆನೆಗಾಲ್ ನ ರೆಬ್ಟಾ ಸರೋವರದಿಂದ ಉಪ್ಪಿನ ಸಂಗ್ರಹಣೆ.

ನೈಸರ್ಗಿಕ ಉಪ್ಪು ಹಲವು ಬಗೆಯಲ್ಲಿದ್ದು ವಿಭಿನ್ನ ರುಚಿಗಳನ್ನು ಸಹ ಹೊಂದಿರುತ್ತದೆ. ಇದಕ್ಕೆ ಉಪ್ಪಿನಲ್ಲಿ ಸೋಡಿಯಮ್ ಕ್ಲೋರೈಡಿನ ಜೊತೆಗೆ ಮಿಶ್ರವಾಗಿರುವ ಇತರ ಖನಿಜಗಳು ಕಾರಣ. ಸಮುದ್ರದ ನೀರಿನಿಂದ ತಯಾರಾಗುವ ಉಪ್ಪು ಸಹ ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗಿರುತ್ತದೆ. ಸಮುದ್ರದ ನೀರಿನಿಂದ ಪಡೆಯುವ ಪೂರ್ಣ ಕಚ್ಚಾ ಉಪ್ಪು ಗಣನೀಯ ಪ್ರಮಾಣದಲ್ಲಿ ಮ್ಯಾಗ್ನೀಸಿಯಮ್ ಮತ್ತು ಕ್ಯಾಲ್ಸಿಯಮ್ ಸಂಯುಕ್ತಗಳನ್ನು ಹೊಂದಿದ್ದು ಇವು ಉಪ್ಪಿಗೆ ಕೊಂಚಮಟ್ಟದ ಕಟುವಾದ ರುಚಿಯನ್ನು ನೀಡುತ್ತವೆ. ಇಂದು ಇಂತಹ ಪೂರ್ಣ ಕಚ್ಚಾ ಉಪ್ಪನ್ನು ನೇರವಾಗಿ ಆಹಾರದಲ್ಲಿ ಬಳಸುವುದು ಬಲು ಕಡಿಮೆ. ಆದರೆ ಕೆಲ ತಜ್ಞರು ಇಂತಹ ಉಪ್ಪಿನಲ್ಲಿರುವ ಇತರ ಖನಿಜ ವಸ್ತುಗಳು ಆರೋಗ್ಯಕ್ಕೆ ಪೂರಕವೆಂದು ವಾದಿಸಿದರೆ ಇನ್ನು ಕೆಲವರು ಇಂತಹ ಉಪ್ಪಿನಲ್ಲಿ ಅಯೊಡಿನ್ ಸಂಯುಕ್ತಗಳು ಬಲು ವಿರಳವಾಗಿರುವುದರಿಂದ ಇದು ಶರೀರಕ್ಕೆ ಬೇಕಾದಷ್ಟು ಪ್ರಮಾಣದಲ್ಲಿ ಅಯೊಡಿನ್ ಪೂರೈಸಲಾರದೆಂದು ವಾದಿಸುತ್ತಾರೆ.

ಶುದ್ಧೀಕೃತ ಉಪ್ಪು[ಬದಲಾಯಿಸಿ]

ಬೊಲಿವಿಯದಲ್ಲಿ ಉಪ್ಪಿನ ಗುಡ್ಡೆಗಳು.

ಇಂದು ಆಹಾರದಲ್ಲಿ ವ್ಯಾಪಕವಾಗಿ ಬಳಸಲ್ಪಡುವ ಶುದ್ಧೀಕೃತ ಉಪ್ಪು ಮುಖ್ಯವಾಗಿ ಸೋಡಿಯಮ್ ಕ್ಲೋರೈಡ್ ಆಗಿದೆ. ಇಂತಹ ಉಪ್ಪನ್ನು ಸಮುದ್ರದ ನೀರಿನಿಂದ ಪಡೆಯುವುದಿಲ್ಲ. ಬದಲಾಗಿ ಇದು ಕಾರ್ಖಾನೆಗಳಲ್ಲಿ ತಯಾರಿಸಲ್ಪಡುತ್ತದೆ. ಹೀಗೆ ಉತ್ಪಾದಿಸಲಾಗುವ ಉಪ್ಪಿನ ಸಣ್ಣ ಪಾಲು ಮಾತ್ರವೇ ಆಹಾರಪದಾರ್ಥವಾಗಿ ಮಾರುಕಟ್ಟೆಗೆ ಬರುತ್ತದೆ. ಹೆಚ್ಚಿನಂಶವು ಇತರ ಕೈಗಾರಿಕೆಗಳಲ್ಲಿ ಬಳಸಲ್ಪಡುವುದು. ಈ ಉಪ್ಪು ಅನೇಕ ಕೈಗಾರಿಕೋದ್ಯಮಗಳಲ್ಲಿ ಒಂದು ಪ್ರಮುಖ ಕಚ್ಚಾ ವಸ್ತುವಾಗಿದ್ದು ಕಾಗದ ಮತ್ತು ಕಾಗದದ ತಿರುಳಿನ ತಯಾರಿಕೆಯಲ್ಲಿ, ಬಟ್ಟೆಗಳ ಮೇಲೆ ಬಣ್ಣ ಕೂರಿಸುವಲ್ಲಿ ಮತ್ತು ಸಾಬೂನುಗಳ ತಯಾರಿಕೆಯಲ್ಲಿ ಬಳಸಲ್ಪಡುತ್ತದೆ. ಇಂದು ಹೆಚ್ಚಿನ ರಿಫೈನ್ಡ್ ಉಪ್ಪನ್ನು ಉಪ್ಪಿನ ಬಂಡೆ (ಲವಣಶಿಲೆ) ಗಳಿಂದ ತಯಾರಿಸಲಾಗುತ್ತದೆ. ಈ ಲವಣಶಿಲೆಗಳು ಪ್ರಾಚೀನಕಾಲದಲ್ಲಿದ್ದ ಉಪ್ಪಿನ ಸರೋವರಗಳು ಬತ್ತಿ ಒಣಗಿಹೋದಾಗ ರೂಪುಗೊಂಡಿವೆ. ಈ ಶಿಲೆಗಳನ್ನು ಅಗೆದು ಪುಡಿಮಾಡಿ ಉಪ್ಪನ್ನು ತೆಗೆದು ಶುದ್ಧಮಾಡಲಾಗುತ್ತದೆ. ಅಥವಾ ಈ ಶಿಲೆಗಳೊಳಗೆ ನೀರು ಹಾಯಿಸಿ ಕರಗಿ ಹರಿಯುವ ಮಂದ ದ್ರವವನ್ನು ಒಣಗಿಸಿ ಶುದ್ಧಗೊಳಿಸಿ ಉಪ್ಪನ್ನು ಪಡೆಯಲಾಗುತ್ತದೆ.

ಯು.ಎಸ್.ಎ.ದ ಮೃತ್ಯುಕಣಿವೆಯಲ್ಲಿನ ನೈಸರ್ಗಿಕ ಉಪ್ಪಿನ ಕೊಂಬುಗಳು.

ಹೀಗೆ ಕಚ್ಚಾ ಉಪ್ಪನ್ನು ಶಿಲೆಗಳಿಂದ ಪಡೆದ ಮೇಲೆ ಅದನ್ನು ಸಂಸ್ಕರಿಸಿ ಶುದ್ಧಗೊಳಿಸಲಾಗುತ್ತದೆ. ಸಾಮಾನ್ಯವಾಗಿ ಈ ಪ್ರಕ್ರಿಯಯಲ್ಲಿ ಉಪ್ಪನ್ನು ಮತ್ತೊಮ್ಮೆ ಹರಳುಗಟ್ಟಿಸಲಾಗುವುದು. ಕರಗಿಸಿದ ಕಚ್ಚಾ ಉಪ್ಪಿನ ದ್ರಾವಣಕ್ಕೆ ಸೂಕ್ತ ರಾಸಾಯನಿಕ ಸಂಯುಕ್ತಗಳನ್ನು ಬೆರೆಸಿ ಸೋಡಿಯಮ್ ಕ್ಲೋರೈಡ್ ಹೊರತಾಗಿ ಉಪ್ಪಿನಲ್ಲಿರುವ ಇತರ ಲವಣಗಳನ್ನು ಬೇರ್ಪಡಿಸಲಾಗುತ್ತದೆ. ಈ ಕ್ರಿಯೆಯನ್ನು ಹಲವು ಘಟ್ಟಗಳಲ್ಲಿ ಸಾಗಿಸಿ ಕೊನೆಯಲ್ಲಿ ಉಳಿಯುವ ಶುದ್ಧ ಸೋಡಿಯಮ್ ಕ್ಲೋರೈಡ್‍ನ ಹರಳುಗಳನ್ನು ಒಣಗಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತದೆ. ಲವಣಶಿಲೆಗಳಿಂದ ಮೇಲ್ಕಾಣಿಸಿದ ರೀತಿಯಲ್ಲಿ ಪಡೆಯಲಾದ ಉಪ್ಪು ಮುದ್ದೆಯಾಗದಂತೆ ಮತ್ತು ಹರಳುಗಳು ಒಂದೇ ರೀತಿಯಾಗಿರುವಂತೆ ಮಾಡಲು ಟ್ರೈಕ್ಯಾಲ್ಸಿಯಮ್ ಫಾಸ್ಫೇಟ್, ಸೋಡಿಯಮ್ ಹೆಕ್ಸಸ್ಯಾನೋಫೆರ್ರೇಟ್‌ನಂತಹ ಸಂಯುಕ್ತಗಳನ್ನು ಬಳಸಲಾಗುತ್ತದೆ.

ಟೇಬಲ್ ಸಾಲ್ಟ್ ಮತ್ತು ಅಯೊಡೈಸ್ಡ್ ಉಪ್ಪು[ಬದಲಾಯಿಸಿ]

ಟಿಂಬಕ್ಟುವಿನ ಉಪ್ಪಿನ ಹಲಗೆಗಳು

ಟೇಬಲ್ ಸಾಲ್ಟ್ ೯೯% ಶುದ್ಧ ಸೋಡಿಯಮ್ ಕ್ಲೋರೈಡ್. ಇದರ ಜೊತೆಗೆ ಹರಳುಗಳು ಒಂದಕ್ಕೊಂದು ಅಂಟಿ ಮುದ್ದೆಯಾಗದಂತೆ ತಡೆಯುವ ಸೋಡಿಯಮ್ ಸಿಲಿಕೋಅಲ್ಯುಮಿನೇಟ್ ಯಾ ಮ್ಯಾಗ್ನೀಸಿಯಮ್ ಕಾರ್ಬೊನೇಟ್ ಸಹ ಕೊಂಚ ಪ್ರಮಾಣದಲ್ಲಿರುತ್ತದೆ. ಟೇಬಲ್ ಸಾಲ್ಟ್‌ಗೆ ಅತ್ಯಲ್ಪ ಪ್ರಮಾಣದಲ್ಲಿ ಪೊಟ್ಯಾಸಿಯಮ್ ಅಯೊಡೈಡ್ ಅಥವಾ ಸೋಡಿಯಮ್ ಅಯೊಡೈಡ್ ಅನ್ನು ಬೆರೆಸಿ ಅಯೊಡೈಸ್ಡ್ ಉಪ್ಪನ್ನು ತಯಾರಿಸಲಾಗುತ್ತದೆ. ದೇಹದಲ್ಲಿ ಅಯೊಡಿನ್‌ನ ಕೊರತೆಯನ್ನು ನೀಗಿಸಲು ಈ ಅಯೊಡೈಸ್ಡ್ ಉಪ್ಪನ್ನು ಬಳಸಲಾಗುವುದು. ಅಯೊಡಿನ್‌ನ ಕೊರತೆ ಮಾನವನಲ್ಲಿ ಗಳಗಂಡದಂತಹ ಹಲವು ರೋಗಗಳನ್ನುಂಟುಮಾಡುತ್ತದೆ. ಅಯೊಡೈಸ್ಡ್ ಉಪ್ಪು ಇವನ್ನು ತಡೆಯುವಲ್ಲಿ ಬಲು ಪರಿಣಾಮಕಾರಿಯಾಗಿದೆ. ಇಂದು ಹಲವು ರಾಷ್ಟ್ರಗಳಲ್ಲಿ ಅಯೊಡೈಸ್ಡ್ ಉಪ್ಪನ್ನು ತಯಾರಿಸುವುದು ಕಡ್ಡಾಯ ಮಾಡಲಾಗಿದೆ.

ಆರೋಗ್ಯ ಮತ್ತು ಉಪ್ಪು[ಬದಲಾಯಿಸಿ]

ಸೋಡಿಯಮ್ ಶರೀರದ ಮೂಲಭೂತ ಎಲೆಕ್ಟ್ರೊಲೈಟ್‌ಗಳಲ್ಲಿ ಒಂದು. ಶರೀರದಲ್ಲಿನ ಎಲ್ಲ ನಾಲ್ಕು ಋಣಾತ್ಮಕ (ಕ್ಯಾಟಯಾನಿಕ್) ಎಲೆಕ್ಟ್ರೊಲೈಟ್‌ಗಳಾದ ಸೋಡಿಯಮ್, ಪೊಟ್ಯಾಸಿಯಮ್, ಮ್ಯಾಗ್ನೀಸಿಯಮ್ ಮತ್ತು ಕ್ಯಾಲ್ಸಿಯಮ್‌ಗಳೆಲ್ಲವೂ ಕಚ್ಚಾ ಉಪ್ಪಿನಲ್ಲಿವೆ. ಉಪ್ಪಿನ ಅತಿಯಾದ ಸೇವನೆ ಅಥವಾ ಅತಿ ಕಡಿಮೆಯಾದ ಸೇವನೆಗಳು ದೇಹದ ಆರೋಗ್ಯದ ಮೇಲೆ ತೀವ್ರ ಪ್ರತಿಕೂಲ ಪರಿಣಾಮ ಬೀರುವುವು. ಸ್ನಾಯುಗಳ ಸೆಳೆತ, ತಲೆಸುತ್ತುವಿಕೆ ಮತ್ತು ನರಸಂಬಂಧಿ ಖಾಯಿಲೆಗಳು ತೋರುವ ಸಾಧ್ಯತೆಗಳಿವೆ. ಉಪ್ಪಿನ ಅತಿಯಾದ ಸೇವನೆ ಕೆಳಕಂಡ ದೈಹಿಕ ತೊಂದರೆಗಳನ್ನುಂಟುಮಾಡಬಹುದಾಗಿದೆ. ಆದರೆ ಎಲ್ಲರಲ್ಲೂ ಇವು ಕಾಣಿಸುವುದು ನಿಶ್ಚಿತವಲ್ಲ.

ನಮ್ಮ ದೇಹಕ್ಕೆಷ್ಟು ಉಪ್ಪು ಬೇಕು?[ಬದಲಾಯಿಸಿ]

ನಾನಾ ದೇಶಗಳ ಆರೋಗ್ಯ ಸಂಸ್ಥೆಗಳು ಮಾನವನಿಗೆ ದಿನವಹಿ ಬೇಕಾದ ಉಪ್ಪಿನ ಪ್ರಮಾಣವನ್ನು ಅಂದಾಜು ಮಾಡಿ ಆ ಬಗ್ಗೆ ಶಿಫಾರಸುಗಳನ್ನು ಹೊರತಂದಿವೆ. ಸಾಮಾನ್ಯವಾಗಿ ೧ ಗ್ರಾಂ ಸೋಡಿಯಮ್‌ಅನ್ನು ಪಡೆಯಲು ೨.೫ ಗ್ರಾಮ್ ಉಪ್ಪನ್ನು ಸೇವಿಸಬೇಕಾಗುತ್ತದೆ. ಯು.ಕೆ. ಯಲ್ಲಿ ಪ್ರತಿ ಪ್ರೌಢನು ದಿನಕ್ಕೆ ೪ ರಿಂದ ೬ ಗ್ರಾಮ್ ಉಪ್ಪನ್ನು ಸೇವಿಸಬಹುದೆಂದು ಶಿಫಾರಸು ಮಾಡಿದ್ದರೂ ಇದರ ೩ ರಷ್ಟನ್ನು ಸೇವಿಸಲಾಗುತ್ತಿದೆ. ವಯೋಮಾನಕ್ಕನುಗುಣವಾಗಿ ಮಕ್ಕಳ ಶರೀರಕ್ಕೆ ದಿನವಹಿ ಬೇಕಾದ ಉಪ್ಪಿನ ಪ್ರಮಾಣ ಕೆಳಕಂಡಂತಿದೆ.

  • ೦-೬ ತಿಂಗಳು : ದಿನಕ್ಕೆ ೧ ಗ್ರಾಮ್‌ಗಿಂತ ಕಡಿಮೆ
  • ೭-೧೨ ತಿಂಗಳು : ದಿನಕ್ಕೆ ೧ ಗ್ರಾಮ್
  • ೧-೩ ವರ್ಷಗಳು : ದಿನಕ್ಕೆ ೨ ಗ್ರಾಮ್
  • ೪-೬ ವರ್ಷಗಳು : ದಿನಕ್ಕೆ ೩ ಗ್ರಾಮ್
  • ೭-೧೦ ವರ್ಷಗಳು : ದಿನಕ್ಕೆ ೫ ಗ್ರಾಮ್
  • ೧೧-೧೪ ವರ್ಷಗಳು : ದಿನಕ್ಕೆ ೬ ಗ್ರಾಮ್

ಬಾಹ್ಯ ಸಂಪರ್ಕಗಳು[ಬದಲಾಯಿಸಿ]