ವಿಷಯಕ್ಕೆ ಹೋಗು

ಕಲ್ಲುಪ್ಪು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಲ್ಲುಪ್ಪು : ನೈಸರ್ಗಿಕವಾಗಿ ದೊರೆಯುವ ಸೋಡಿಯಂ ಕ್ಲೋರೈಡ್ , (ಅಡುಗೆ ಉಪ್ಪು). ರಾಕ್ಸಾಲ್ಟ್‌ ರೂಢಿಯ ಹೆಸರು, ಹ್ಯಾಲೈಟ್ ಶಾಸ್ತ್ರೀಯ ನಾಮ. ಇದಕ್ಕೆ ಖನಿಜಗಳಲ್ಲೆಲ್ಲ ಹೆಚ್ಚು ವ್ಯಾಪ್ತಿ ಇದೆ. ಇದು ಐಸೊಮೆಟ್ರಿಕ್ ಹರಳು ಗುಂಡಿನಲ್ಲಿ, ಅದರಲ್ಲಿಯೂ ಘನಾಕೃತಿಯಲ್ಲಿ, ಸ್ಫಟಿಕೀಕರಿಸುತ್ತದೆ. ಹರಳುಗಳಲ್ಲಿ ಉತ್ಕೃಷ್ಟ ಸೀಳುಗಳಿವೆ. ಇದರ ಕಾಠಿಣ್ಯ ೨.೫, ಸಾಪೇಕ್ಷ ಸಾಂದ್ರತೆ ೨.೧೬. ಬಣ್ಣದಲ್ಲಿ ನಿರ್ವರ್ಣ ಅಥವಾ ಬಿಳುಪೂ. ಕಲ್ಮಷಗಳಿಂದ ಕೂಡಿದಾಗ ಹಳದಿ, ಕೆಂಪು, ನೀಲಿ ಅಥವಾ ಊದಾ ಛಾಯೆಯನ್ನು ತೋರುವುದುಂಟು.

ಕಲ್ಲುಪ್ಪು ಪ್ರಪಂಚದ ನಾನಾ ಕಡೆ ಕೇಂಬ್ರಿಯನ್ ಕಾಲದಿಂದ ಇತ್ತೀಚಿನ ಕಾಲದವರೆಗಿನ ಎಲ್ಲ ಜಲಜಶಿಲೆಗಳಲ್ಲಿಯೂ ವಿಶಾಲವಾಗಿ ಹರಡಿದೆ. ಸಾಮಾನ್ಯವಾಗಿ ಇದು ಜಿಪ್ಸಮ್, ಅನ್ಹಿಡ್ರೈಟ್, ಜೇಡಿಮಣ್ಣು, ಸಿಲ್ವೈಟ್, ಕಾರ್ನಲೈಟ್ ಮತ್ತು ವಿಲೀನವಾಗದ ವಿವಿಧ ಉಪ್ಪುಗಳೊಡನೆ ಬೆರೆತಿರುತ್ತದೆ. ಜಲಜ ಶಿಲಾಸ್ತೋಮಗಳಲ್ಲಿ ಕಲ್ಲುಪ್ಪಿನ ಸ್ತರಗಳು ಕೆಲವು ಅಡಿಗಳಿಂದ ಹಿಡಿದು ಸಾವಿರ ಅಡಿಗಳವರೆಗೆ ಮಂದವಾಗಿರುತ್ತವೆ. ಆಳದಲ್ಲಿರುವ ಸ್ತರಸಂಚಯನೆಗಳು ಭೂಚಲನೆಗೊಳಗಾದಾಗ ವಿರೂಪ ಹೊಂದಿ ಅಲ್ಲಲ್ಲೆ ತಮ್ಮ ಮೇಲಿರುವ ಸ್ತರಗಳನ್ನು ಮೇಲೆತ್ತಿ ಬಾಗಿಸುತ್ತವೆ. ಆಕಾರದಲ್ಲಿ ಗೋಳ, ನಳಿಕೆ ಅಥವಾ ನಾಯಿಕೊಡೆಯಂತಿರುತ್ತವೆ. ಇವೇ ಲವಣ ಗುಮ್ಮಟಗಳು. ನಿಸರ್ಗದಲ್ಲಿ ಕಲ್ಲೆಣ್ಣೆಯ ಸಂಗ್ರಹಕ್ಕೆ ಇವು ಉತ್ತಮ ಅಡಚುಗಳು (ಆಯಿಲ್ ಟ್ರ್ಯಾಪ್ಸ್‌). ಸಾಗರ ಅಥವಾ ಸಮುದ್ರ ನೀರಿನಲ್ಲಿ ಸೋಡಿಯಂ ಕ್ಲೋರೈಡ್ ಸಾಕಷ್ಟು ಪ್ರಮಾಣದಲ್ಲಿರುತ್ತದೆ. ಈ ನೀರಿನ ಸತತ ಇಂಗುವಿಕೆಯಿಂದ ಕ್ರಮೇಣ ಕಲ್ಲುಪ್ಪಿನ ಸ್ತರಗಳಾಗುವುವು. ಮೂಲಸಾಗರದ ಸಂಪರ್ಕ ಕಳೆದುಕೊಂಡ ಭಾಗಗಳಲ್ಲಿ ಈ ತೆರನಾದ ಇಂಗುವಿಕೆ ಉಷ್ಣ ಮತ್ತು ಶುಷ್ಕ ವಾತಾವರಣದಿಂದ ತೀವ್ರಗತಿಯಲ್ಲಿ ನಡೆಯುವುದು.

ವಿಶಾಲವಾದ ಕಲ್ಲುಪ್ಪಿನ ನಿಕ್ಷೇಪಗಳು ಪ್ರಪಂಚದ ಹಲವಾರು ದೇಶಗಳಲ್ಲಿವೆ. ಇವುಗಳಲ್ಲಿ ಮುಖ್ಯವಾದವು ಆಸ್ಟ್ರಿಯ, ಪೋಲೆಂಡ್, ಚೆಕೋಸ್ಲೊವಾಕಿಯ, ಜರ್ಮನಿ, ಸ್ಪೇನ್, ಬ್ರಿಟನ್ ಮತ್ತು ಭಾರತದಲ್ಲಿವೆ. ಉತ್ತರ ಅಮೆರಿಕದ ಸಂಯುಕ್ತಸಂಸ್ಥಾನದಲ್ಲಿ ಕಾನ್ಸಾಸ್ ಮಿಚಿಗನ್, ನ್ಯೂಯಾರ್ಕ್ ಒಹಾಯೊ, ಓಕ್ಲಹೋಮ, ಪೆನ್ಸಿಲ್ವೇನಿಯ ಮತ್ತು ಟೆಕ್ಸಾಸ್ ಪ್ರದೇಶಗಳಲ್ಲಿ ವಿಶಾಲವಾದ ಉಪ್ಪಿನ ಸ್ತರಗಳಿವೆ. ಭಾರತದಲ್ಲಿ ಪಂಜಾಬಿನ ಸಾಲ್ಟ್‌ರೇಂಜ್ ಮತ್ತು ದರ ವಾಯವ್ಯಕ್ಕಿರುವ ಕೋಹಟ್ ಪ್ರದೇಶಗಳಲ್ಲಿ ಕಲ್ಲುಪ್ಪು ನಿಕ್ಷೇಪಗಳಿವೆ. ಇವುಗಳಿಗೆ ಲವಣ ಶಿಲಾಶ್ರೇಣಿ ಎಂದು ಹೆಸರು. ಸಾಲ್ಟ್‌ ರೇಂಜ್ ಪ್ರದೇಶದ ಕಲ್ಲುಪ್ಪು ಮುದ್ದೆಯಂತಿದೆ. ಅದರ ಬಣ್ಣ ಊದಾದಿಂದ ಬಿಳುಪಿನವರೆಗೆ ವಿವಿಧ ಛಾಯೆಗಳಿಂದ ಕೂಡಿದೆ. ಅದರ ಮೇಲೆ ಬೂದು ಮಚ್ಚೆಗಳು ಇವೆ. ಪ್ರತಿಯೊಂದು ಸ್ತರದ ಮಂದ ೩೦ ರಿಂದ ೬೦ ಮೀಟರ್. ಪ್ರಸ್ತರೀಕರಣ ಅವ್ಯವಸ್ಥಿತವಾಗಿದ್ದು ಹರಿವು ರಚನೆ, ತಿರುಚು ಮತ್ತು ಪದರು ರಚನೆಗಳನ್ನು ಗುರುತಿಸಬಹುದು. ಕೆಲವೆಡೆ ಮಸೂರದಾಕಾರದಲ್ಲಿದ್ದು ಹಲವಾರು ಮೀಟರುಗಳಷ್ಟು ಉದ್ದವಾಗಿರುತ್ತವೆ. ಕೋಹಟ್ ಪ್ರದೇಶದ ಉಪ್ಪು ಸಾಧಾರಣವಾಗಿ ಬೂದಿ ಬಣ್ಣದಿಂದಿದ್ದು ಇದರಲ್ಲಿ ವಿಲೀನವಾಗದ ವಸ್ತುಗಳ ಪ್ರಮಾಣ ಸಾಲ್ಟ್‌ರೇಂಜ್ ಉಪ್ಪಿನಲ್ಲಿರುವುದಕ್ಕಿಂತ ಹೆಚ್ಚಾಗಿರುತ್ತದೆ. ಉಪ್ಪಿನ ಗಣಿಗಳು ಸಾಲ್ಟ್‌ರೇಂಜ್ ಪ್ರದೇಶದ ಕರೆವಾ, ವಾರ್ಚ ಮತ್ತು ಕಲಬಾಗ್ ಮುಂತಾದ ಅನೇಕ ಸ್ಥಳಗಳಲ್ಲಿವೆ. ಲವಣಶ್ರೇಣಿಯ ಉತ್ಪತ್ತಿಯ ಬಗ್ಗೆ ವಿವಿಧ ಅಭಿಪ್ರಾಯಗಳಿದ್ದರೂ ಇದು ಸಾಧಾರಣವಾಗಿ ಜಲಜನಿತವಾದುದೆಂದು ಭಾವಿಸಲಾಗಿದೆ.

ಅನಾದಿಕಾಲದಿಂದಲೂ ಉಪ್ಪು ಬಳಕೆಯಲ್ಲಿದೆ. ಇದರ ಮೊದಲ ಉಪಯೋಗ ಆಹಾರದಲ್ಲಿ. ಪ್ರತಿವ್ಯಕ್ತಿಯೂ ವರ್ಷಕ್ಕೆ ೫೪.೫ ಕೆ.ಜಿ.ಯಷ್ಟು ಉಪ್ಪನ್ನು ಸೇವಿಸುತ್ತಾನೆ. ಪುರಾತನ ಕಾಲದಿಂದಲೂ ಉಪ್ಪು ವ್ಯಾಪಾರದ ಪ್ರಧಾನವಸ್ತು. ಇಂದು ಇದನ್ನು ರಾಸಾಯನಿಕ ಕಾರ್ಖಾನೆಗಳಲ್ಲಿ ನೂರಾರು ವಸ್ತುಗಳ ತಯಾರಿಕೆಗೆ ಬಳಸಲಾಗುತ್ತಿದೆ. ಜಾನುವಾರುಗಳ ಆಹಾರ, ಕೃತಕಗೊಬ್ಬರ, ಕೀಟನಾಶಕ, ಕಳೆನಾಶಕ, ಮಣ್ಣು ಸಾರವಸ್ತುಗಳು, ಔಷಧಗಳು, ಬಾಹ್ಯ ಮತ್ತು ಆಂತರಿಕ ನಿರ್ಮಲೀಕರಣಗಳು ಇತ್ಯಾದಿಗಳ ತಯಾರಿಕೆಯಲ್ಲಿ ಉಪ್ಪಿನ ಉಪಯೋಗ ಹೇರಳವಾಗಿದೆ. ಪ್ರತಿ ವರ್ಷ ೭೭ ರಾಷ್ಟ್ರಗಳು ಸುಮಾರು ೩೫,೫೬೦,೦೦೦ ಮೆಟ್ರಿಕ್ ಟನ್ನುಗಳಷ್ಟು ಉಪ್ಪನ್ನು ಉತ್ಪಾದಿಸುತ್ತವೆ. ಅಮೆರಿಕದ ಸಂಯುಕ್ತಸಂಸ್ಥಾನ, ಬ್ರಿಟನ್, ಚೀನ, ಜರ್ಮನಿ, ಫ್ರಾನ್ಸ್‌ ಮತ್ತು ಭಾರತ ದೇಶಗಳು ೧,೦೧೬,೦೦೦,೦೦೦ ಮೆಟ್ರಿಕ್ ಟನ್ನುಗಳಿಗೂ ಹೆಚ್ಚು ಉಪ್ಪನ್ನು ಉತ್ಪಾದಿಸುತ್ತವೆ. ಕಲ್ಲುಪ್ಪಿನ ಗಣಿಗಳಲ್ಲಿ ಸುರಂಗ ತೋಡಿ ಉಪ್ಪನ್ನು ಹೊರತೆಗೆಯುತ್ತಾರೆ. ಕೆಲವು ವೇಳೆ ಲವಣಸ್ತರಗಳಿಗೆ ನೀರನ್ನು ಹಾಯಿಸಿ ಉಪ್ಪು ಕರಗಿದ ನೀರನ್ನು (ಬ್ರೈನ್) ಭೂಮಿಯ ಮೇಲಕ್ಕೆ ಪಂಪಿನ ಸಹಾಯದಿಂದ ಹೊರತೆಗೆದು ಸಣ್ಣ ಮಡಿಗಳಲ್ಲಿ ಬಿಟ್ಟು ಇಂಗಿಸಿ ಉಪ್ಪನ್ನು ತಯಾರಿಸುವುದೂ ಉಂಟು. (ಎಂ.ಎನ್.ಎಂ.)