ಲವಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಉಪ್ಪು ಇಂದ ಪುನರ್ನಿರ್ದೇಶಿತ)
ಸೂಕ್ಷ್ಮದರ್ಶಕದಲ್ಲಿ ಅಡುಗೆ ಉಪ್ಪಿನ ಒಂದು ಕಣ
ಮೃತ ಸಮುದ್ರ(ಡೆಡ್ ಸೀ) ಯಲ್ಲಿ ಸಂಗ್ರಹವಾಗಿರುವ ಉಪ್ಪು
ಪಾಕಿಸ್ಥಾನದ ಕೇವ್ರಾ ಗಣಿಯಲ್ಲಿ ಸಂಗ್ರಹಿಸಿರುವ ಕೆಂಪು ಉಪ್ಪು

ಸಾಮಾನ್ಯ ಲವಣ, ಸೋಡಿಯಂ ಕ್ಲೋರೈಡ್,ಟೇಬಲ್ ಸಾಲ್ಟ್ , ಹೆಲೈಟ್ ಎಂದು ಕರೆಯಲ್ಪಡುವ ಸಾಮಾನ್ಯ ಮನುಷ್ಯನ ದಿನನಿತ್ಯದ ಗೆಳೆಯ ಉಪ್ಪು , ಇದರ ಕುರಿತು ತಿಳಿಯುವುದು ಒಂದು ರೋಚಕವಾದ ಕತೆ. ಕನ್ನಡದ ನಾನ್ನುಡಿ ಉಪ್ಪಿಗಿಂತ ರುಚಿಯಿಲ್ಲ, ತಾಯಿಗಿಂತ ಬಂಧುವಿಲ್ಲ. ಗಾಂಧೀಜಿಯವರು ಬ್ರಿಟಿಷ್ ಸಾಮಾಜ್ಯದ ವಿರುದ್ಧ ಸಮರ ಸಾರಿದ್ದ ಉಪ್ಪಿನ ಸತ್ಯಾಗ್ರಹ (ದಂಢೀ ಯಾತ್ರೆ) ಇವುಗಳು ಉಪ್ಪಿನ ಕುರಿತ ಸಾಮಾಜಿಕ ವಿಷಯಗಳು. ವೈಜ್ಞಾನಿಕವಾಗಿ ಉಪ್ಪು ಎಂಬುದು ಒಂದು ಅಯಾನಿಕ್ ಮಿಶ್ರಣ. ಇದರಲ್ಲಿ ಸೋಡಿಯಂ ಹಾಗೂ ಕ್ಲೋರಿನ್ ತಲಾ ಒಂದು ಅಣುಗಳು ೧:೧ ಅನುಪಾತದಲ್ಲಿ ಸೇರಿರುತ್ತವೆ ಅದುದರಿಂದಲೇ ಇದರ ರಾಸಾಯನಿಕ ಸಂಕೇತ (NaCl),ಸೋಡಿಯಂ ಕ್ಲೋರೈಡ್ ಎಂದಾಗಿದೆ. ಸಾಮಾನ್ಯವಾಗಿ ಸಮುದ್ರದ ನೀರು ಲವಣಯುಕ್ತವಾಗಿರುವ ಪ್ರಮುಖ ಕಾರಣ ಸೋಡಿಯಂ ಕ್ಲೋರೈಡ್ ಆಗಿದೆ. ಹಲವಾರು ಬಹುಕೋಶೀಯ ಜೀವಿಗಳಲ್ಲಿ ಇರುವ ಸಹಕೋಶೀಯ ದ್ರಾವಣವಾಗಿದೆ. ಇದನ್ನು ಸಾಮಾನ್ಯವಾಗಿ ಆಹಾರ ಸಾಮಗ್ರಿಗಳನ್ನು ಸುರಕ್ಷಿತವಾಗಿ ಸಂಗ್ರಹಿಸುವ ಕಾರ್ಯಕ್ಕಾಗಿ ಹಾಗೂ ಬೇಕರಿ ಉತ್ಪನ್ನಗಳ ತಯಾರಿಕೆಯಲ್ಲಿ ಬಳಸುತ್ತಾರೆ.[೧] ಹಲವಾರು ಕೈಗಾರಿಕೆಗಳ ಪ್ರಕ್ರಿಯೆಗಳಲ್ಲಿ ಸೋಡಿಯಂ ಕ್ಲೋರೈಡ್ ನ್ನು ಅತ್ಯಂತ ವ್ಯಾಪಕವಾಗಿ ಬಳಸಲಾಗುತ್ತದೆ. ರಾಸಾಯನಿಕ ವಿಶ್ಲೇಷಣೆಗೆ ಪೂರಕವಾಗಿ ಸೋಡಿಯಂ ಕ್ಲೋರೈಡ್ ನ್ನು ಬಳಸಲಾಗುತ್ತದೆ. ಹಿಮಚ್ಛಾದಿತ ಪ್ರದೇಶಗಳಲ್ಲಿ ರಸ್ತೆಯಲ್ಲಿ ಜಮೆಯಾಗಿರುವ ಮಂಜನ್ನು ಕರಗಿಸಲು ಉಪ್ಪನ್ನು ಪ್ರಮುಖವಾಗಿ ಬಳಸುತ್ತಾರೆ.[೨]

ಸಾಮಾನ್ಯ ಉಪ್ಪು (Common Salt)[ಬದಲಾಯಿಸಿ]

ಸಾಮಾನ್ಯ ಉಪ್ಪು ಇದೊಂದು ಖನಿಜ, ಪ್ರಾಥಮಿಕವಾಗಿ ಇದನ್ನು ಸೋಡಿಯಂ ಕ್ಲೋರೈಡ್ (NaCl)ಎಂದು ಕರೆಯಲಾಗುತ್ತದೆ. ರಾಸಾಯನಿಕ ಸಂಯುಕ್ತವೆಂಬ ದೊಡ್ಡದಾದ ಗುಂಪಿನಲ್ಲಿ ಇದು ಲವಣವೆಂದೇ ಪ್ರಸಿದ್ಧಿ ಪಡೆದಿದೆ ;ನೈಸರ್ಗಿಕವಾಗಿ ಉಪ್ಪು ಸ್ಪಟಿಕ ರೂಪದಲ್ಲಿರುತ್ತದೆ. (crystalline) ಈ ಖನಿಜವನ್ನು ರೋಕ್ ಸಾಲ್ಟ್ (ಘನ ಲವಣ) ಅಥವಾ ಹೆಲೈಟ್ ಎಂದು ಹೆಸರಿಸಲಾಗಿದೆ.. ಸಮುದ್ರದ ನೀರಿನಲ್ಲಿ ಉಪ್ಪು ಅಗಾಧವಾದ ಪ್ರಮಾಣದಲ್ಲಿದೆ ಮತ್ತು ಇದೇ ಪ್ರಮುಖವಾದ ಭಾಗವಾಗಿರುತ್ತದೆ; ಮುಕ್ತ ಸಾಗರದಲ್ಲಿ ಸುಮಾರು ೩೫ ಗ್ರಾಂ ಪ್ರತಿ ಲೀಟರ್ ಇರುತ್ತದೆ. ಜೀವಶಾಸ್ತ್ರದಲ್ಲಿ ಸೋಡಿಯಂನ ಪಾತ್ರವಿದ್ದು ಪ್ರತಿ ಪ್ರಾಣಿಯ ಜೀವಕ್ಕೆ ಈ ಲವಣ ಅಗತ್ಯವಿದೆ, ಮತ್ತು ಉಪ್ಪುತನವು ಒಂದು ಮುಖ್ಯವಾದ ರುಚಿ ಕಣವಾಗಿದೆ

ಘನ ಸೋಡಿಯಂ ಕ್ಲೋರೈಡ್[ಬದಲಾಯಿಸಿ]

ಇದನ್ನೂ ಗಮನಿಸಿ: ಕ್ಯೂಬಿಕ್ ಕ್ರಿಸ್ಟಲ್ ಸಿಸ್ಟಮ್

ಘನ ಸೋಡಿಯಂ ಕ್ಲೋರೈಡ್ ಗಳಲ್ಲಿ ಪ್ರತಿಯೊಂದು ಅಯಾನುಗಳು ಆರು ವಿಲೋಮ ಅಯಾನುಗಳಿಂದ ಬಂಧಿತವಾಗಿರುತ್ತದೆ. ಸಮ ಅಷ್ಟಮುಖಿ ಮಾದರಿಯ ಶೃಂಗಗಳಲ್ಲಿ ಈ ಅಯಾನುಗಳು ಹತ್ತಿರ ಹತ್ತಿರ ಸೇರಿರುತ್ತವೆ. ಈ ವಿನ್ಯಾಸವನ್ನು ರೋಕ್ ಸಾಲ್ಟ್ ಕ್ರಿಸ್ಟಲ್ ಸ್ಟ್ರಕ್ಚರ್ (rock-salt crystal structure) ಎಂದು ಕರೆಯಲಾಗಿದೆ.

ಘನ ಸೋಡಿಯಂ ಕ್ಲೋರೈಡ್ ನ ದ್ರವನ ಬಿಂದು ೮೦೧ °ಸೆ. ಆಗಿರುತ್ತದೆ.

ಲವಣದ ದ್ರಾವಣ[ಬದಲಾಯಿಸಿ]

ಸೋಡಿಯಂ(Na+) ಮತ್ತು ಕ್ಲೋರಿನ್(Cl−) ಈ ಅಯಾನುಗಳ ನಡುವಿನ ಆಕರ್ಷಣೆಯಯು ಘನಸ್ಥಿತಿಯಲ್ಲಿ ಗರಿಷ್ಟವಾಗಿದ್ದು, ನೀರಿನಂತಹ ಧ್ರುವೀಯ ದ್ರಾವಣಗಳು ಮಾತ್ರ ಕರಗುವಂತೆ ಮಾಡಬಲ್ಲವು. ವಿವಿಧ ದ್ರಾವಣಗಳಲ್ಲಿ ಸೋಡಿಯಂ ಕ್ಲೋರೈಡ್ ನ ಕರಗುವಿಕೆಯು ಈ ಕೆಳಗಿನಂತಿದೆ. 25° ಸೆಂಟಿಗ್ರೇಡ್ ವಾತಾವರಣದಲ್ಲಿ ಒಂದು ಲೀಟರ್ ನೀರು ಪ್ರತಿ ೧ ಗ್ರಾಂ NaCl ಆಗಿರುತ್ತದೆ.

ದ್ರಾವಣದ ಹೆಸರು ಕರಗುವಿಕೆಯ ಪ್ರಮಾಣ
ನೀರು ೩೬೦
ಗ್ಲೀಸರಿನ್ ೮೩
ಅಮೋನಿಯಾ ದ್ರಾವಣ ೩೦.೨
ಪಾರ್ಮಿಕ್ ಎಸಿಡ್ ೫೨
ಅಸಿಟೋನ್ ೦೦೦೦೪೨
ಪೋರ್ಮಾಮೈಡ್ ೯೪
ಮೆಥನಾಲ್ ೧೪
ಎಥನಾಲ್ ೦.೬೫
ಡೈಮಿಥೈಲ್ ಪಾರ್ಮಾಮೈಡ್ ೦.೪

ಸೋಡಿಯಂ ಕ್ಲೋರೈಡ್ ನೀರಿನಲ್ಲಿ ಕರಗಿದಾಗ Na+ ಮತ್ತುCl− ಅಯಾನುಗಳಾಗಿ ವಿಘಟನೆ ಹೊಂದುತ್ತದೆ. ಈ ಅಯಾನುಗಳು ಧ್ರುವೀಯ ಅಯಾನುಗಳೊಂದಿಗೆ ಸುತ್ತುವರೆಯುತ್ತವೆ. ಈ ದ್ರಾವಣವು ಲೋಹದ ಧಾತುವನ್ನೊಳಗೊಂಡ ಸಂಕೀರ್ಣ [Na(H2O)8]+ ಆಗಿರುತ್ತದೆ. ಪ್ರತಿಯೊಂದು ಕ್ಲೋರೀನ್ ಅಯಾನ್ ಗಳು ೬ ನೀರಿನ ಕಣಗಳೊಂದಿಗೆ ಸುತ್ತುವರಿದಂತೆ ಕಂಡುಬರುತ್ತವೆ. ಸೋಡಿಯಂ ಕ್ಲೋರೈಡ್ ದ್ರಾವಣದ ಗುಣಲಕ್ಷಣಗಳು ಶುದ್ಧ ನೀರಿನ ದ್ರಾವಣಕ್ಕಿಂತ ಭಿನ್ನವಾಗಿರುತ್ತದೆ. ಇದರ ಘನೀಭವನ ಬಿಂದು ೨೩.೩೧ ಆಗಿದೆ. ಪರ್ಯಾಪ್ತ ದ್ರಾವಣದ ಕುದಿಯುವ ಬಿಂದು 108.7 °C (227.7 °F).[೩]

ಉಪ್ಪಿನ ಉತ್ಪಾದನೆ[ಬದಲಾಯಿಸಿ]

ಸುಮಾರು ೮೦೦೦ ವರ್ಷಗಳ ಹಿಂದೆ ಉಪ್ಪು ತಯಾರಿಸುತ್ತಿದ್ದ ಉಲ್ಲೇಖಗಳು ಲಭ್ಯ ಇವೆ. ರೋಮಾನಿಯಾ ದಲ್ಲಿ ಖನಿಜಯುಕ್ತ ಕೆರೆಗಳ ನೀರನ್ನು ಕುದಿಸಿ ಉಪ್ಪು ಪಡೆಯುತ್ತಿದ್ದ ಉಲ್ಲೇಖಗಳಿವೆ. ಪ್ರಾಚೀನ ಚೀನಾದಲ್ಲಿ, ಗ್ರೀಕರು, ರೋಮನ್ನರು, ಈಜಿಪ್ಟ್ ನ ಇತಿಹಾಸದಲ್ಲಿ ಕೂಡಾ ಉಪ್ಪು ತಯಾರಿಕೆಯ ಉಲ್ಲೇಖಗಳಿವೆ. ಮೇಡಿಟರೇನಿಯನ್ನ ಸಾಗರದಲ್ಲಿ ದೋಣಿಗಳಲ್ಲಿ ಉಪ್ಪನ್ನು ಸಾಗಿಸಿರುವುದು, ಸಹಾರಾ ಮರುಭೂಮಿಗಳಲ್ಲಿ ಒಂಟೆಗಳ ಮೇಲೆ ಉಪ್ಪನ್ನು ಸಾಗಿಸಿರುವುದು ಹಾಗೂ ಉಪ್ಪು ಸಾಗಿಸುವ ಮಾರ್ಗಗಳೇ ರೂಪುಗೊಂಡಿರುವ ಉಲ್ಲೇಖಗಳು ಇತಿಹಾಸದ ಪುಟದಲ್ಲಿವೆ. ಉಪ್ಪಿಗಾಗಿ ಯುದ್ಧಗಳು ಸಂಭವಿಸಿದೆ. ಸಾಂಸ್ಕೃತಿಕ ಹಾಗೂ ಧಾರ್ಮಿಕ ಆಚರಣೆಗಳಲ್ಲಿ ಉಪ್ಪು ವಿಶೇಷವಾದ ಸ್ಥಾನವನ್ನು ಪಡೆದಿದೆ.

ಉಪ್ಪಿನ ಗಣಿಗಳಿಂದ ಉಪ್ಪನ್ನು ಉತ್ಪಾದಿಸುವುದು, ಸಮುದ್ರದ ನೀರನ್ನು ಭಾಷ್ಪೀಕರಿಸಿ ಉಪ್ಪನ್ನು ಪಡೆಯುವುದು ಖನಿಜಯುಕ್ತ ಕೆರೆಗಳಲ್ಲಿನ ನೀರಿನ ಮೂಲಕ ಉಪ್ಪು ಉತ್ಪಾಧಿಸುವುದು ಪ್ರಮುಖವಾದ ವಿಧಾನಗಳಾಗಿವೆ. ಇದರ ಪ್ರಮುಖವಾದ ಕೈಗಾರಿಕಾ ಉತ್ಪನ್ನಗಳೆಂದರೆ ಕಾಸ್ಟಿಕ್ ಸೋಡಾ ಹಾಗೂ ಕ್ಲೋರಿನ್. ಪಾಲಿವಿನೈಲ್ ಕ್ಲೋರೈಡ್, ಪ್ಲಾಸ್ಟಿಕ್, ಪೇಪರ್ ಪಲ್ಪ್ ಮುಂತಾದವುಗಳ ಉತ್ಪಾದನೆಯಲ್ಲಿಯೂ ಉಪ್ಪಿನ ಬಹಳವಾದ ಬಳಕೆಯಿದೆ. ಸುಮಾರು ೨೦೦ ಮಿಲಿಯನ್ ಟನ್ ಪ್ರತಿವರ್ಷ ಉತ್ಪಾದನೆಯಾಗುತ್ತಿದ್ದು ಅದರಲ್ಲಿ ಕೇಲವ ೬ ಶೇಕಡಾದಷ್ಟು ಉಪ್ಪು ಮನುಷ್ಯನ ಬಳಕೆಗಾಗಿ ವಿನಿಯೋಗವಾಗುತ್ತದೆ. ಉಳಿದಂತೆ ರಸ್ತೆಗಳಲ್ಲಿ ಮಂಜು ಕರಗಿಸುವುದು, ಕೃಷಿ ಕ್ಷೇತ್ರ, ಮತ್ಸ್ಯ ಕ್ಷೇತ್ರದಲ್ಲಿ ಬಳಕೆಯಾಗುತ್ತದೆ. ಮನುಷ್ಯನ ಆಹಾರದಲ್ಲಿ ಬಳಕೆಯಾಗುವ ಉಪ್ಪು ಟೇಬಲ್ ಸಾಲ್ಟ್, ಹರಳು ಉಪ್ಪು ರೂಪದಲ್ಲಿರುತ್ತದೆ. ಇತ್ತ್ತೀಚೆಗೆ ಅಯೋಡಿನ್ ಕೊರತೆಯನ್ನು ಹೋಗಲಾಡಿಸಲು ಅಯೋಡೈಸ್ಡ್ ಉಪ್ಪಿನ ಬಳಕೆ ಜನಪ್ರಿಯವಾಗುತ್ತಿದೆ. ಉಪ್ಪು ಹಲವಾರು ಸಂಸ್ಕರಿತ ಆಹಾರದಲ್ಲಿ ಪ್ರಮುಖವಾಗಿ ಬಳಸಲ್ಪಡುತ್ತಿದೆ.

ಉಪ್ಪಿನ ಚರಿತ್ರೆ[ಬದಲಾಯಿಸಿ]

ಹಾಲೆ ಎಂಬ ಪ್ರದೇಶದಲ್ಲಿ ಉಪ್ಪಿನ ಉತ್ಪಾದನೆ (1670)

ಮಾನವನು ಯಾವಾಗಲೂ ಉಪ್ಪಿನ ಆಕರಗಳ ಸುತ್ತ ಸಮುದಾಯವಾಗಿ ಬದುಕಲು ಪ್ರಯತ್ನಿಸಿದ ಅಥವಾ ಉಪ್ಪಿನ ವ್ಯಾಪಾರ ಕೇಂದ್ರದ ಬಳಿ ತಮ್ಮ ಸಾಮುದಾಯಿಕ ಬದುಕನ್ನು ಕಟ್ಟಿಕೊಂಡ.

ಸಾಲರಿ (ಸಂಬಳ) ಎಂಬ ಪದವು ಲ್ಯಾಟಿನ್ ಭಾಷೆಯ ಉಪ್ಪು ಎಂಬರ್ಥದ ಪದದಿಂದ ನಿಷ್ಪತ್ತಿಯಾಗಿದೆ(ಉಪ್ಪನ್ನು ಕೆಲಸಕ್ಕೆ ಪ್ರತಿಫಲವಾಗಿ ನೀಡಲಾಗುತ್ತಿತ್ತು)ಎಂದರೆ ಉಪ್ಪಿನ ಮಹತ್ವವನ್ನು ಅರಿಯಬಹುದಾಗಿದೆ. ಸಾಂಡ್ ವಿಚ್ ಎಂಬಲ್ಲಿ ವಿಚ್ ಎಂಬುದು ಇಂಗ್ಲಿಷ್ ಭಾಷೆಯಲ್ಲಿ ಉಪ್ಪಿನ ಕುರಿತ ಮೂಲದಿಂದಲೇ ನಿಷ್ಪತ್ತಿಗೊಂಡ ಪದವಾಗಿದೆ.

ಕೃತಕವಾಗಿ ಶೈತೀಕರಣಕ್ಕಾಗಿ, ಆಹಾರವನ್ನು ಸಂರಕ್ಷಿಸಲು -ವಿಶೇಷವಾಗಿ ಮಾಂಸವನ್ನು ಸಂರಕ್ಷಿಸಲು, ಸಾವಿರಾರು ವರ್ಷಗಳಿಂದ ಉಪ್ಪನ್ನು ಬಳಸಲಾಗುತ್ತಿದೆ. ಕ್ರಿಸ್ತಪೂರ್ವ ೬೦೫೦ಕ್ಕೂ ಮುಂಚೆ ನವಶಿಲಾಯುಗದ ಮಾನವನು ಉಪ್ಪನ್ನು ಉತ್ಪಾದಿಸುತ್ತಿದ್ದ ಕುರಿತು ರೋಮಾನಿಯಾ ದೇಶದಲ್ಲಿನ ಉತ್ಖನನದಲ್ಲಿ ತಿಳಿದುಬಂದಿದೆ. ಚೀನಾ ದೇಶದ ಶಾಂಘೈ ಬಳಿಯ ಕ್ಷೇಚೀ ಸರೋವರ(Xiechi Lake) ಕ್ರ.ಪೂ ೬೦೦೦ ವರ್ಷಗಳ ಹಿಂದೆ ಉಪ್ಪಿನ ಉತ್ಪಾದನೆ ಇದ್ದ ಕುರಿತ ಸಾಕ್ಷ್ಯಗಳು ದೊರೆತಿವೆ.

ಸಸ್ಯ ಜನ್ಯವಾದುದಕ್ಕಿಂತ ಪ್ರಾಣಿಜನ್ಯವಾದ ಮಾಂಸ, ರಕ್ತ ಹಾಗೂ ಹಾಲಿನಲ್ಲಿ ಉಪ್ಪಿನ ಅಂಶವು ಹೆಚ್ಚಾಗಿರುತ್ತದೆ. ಆದುದರಿಂದ ಧಾನ್ಯಗಳು ಮತ್ತು ತರಕಾರಿಗಳನ್ನು ಬಳಸುವವರು ಉಪ್ಪನ್ನು ಹೆಚ್ಚುವರಿಯಾಗಿ ಬಳಸಲೇಬೇಕಾಗುತ್ತದೆ.[೪]

ಉಲ್ಲೇಖಗಳು[ಬದಲಾಯಿಸಿ]

"https://kn.wikipedia.org/w/index.php?title=ಲವಣ&oldid=1047283" ಇಂದ ಪಡೆಯಲ್ಪಟ್ಟಿದೆ