ವಿಷಯಕ್ಕೆ ಹೋಗು

ಅಪಧಮನಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಪಧಮನಿಗಳು ಹೃದಯದಿಂದ ಬೇರೆಡೆ ರಕ್ತ ಸಾಗಿಸುವ ರಕ್ತನಾಳಗಳು. ಬಹುತೇಕ ಅಪಧಮನಿಗಳು ಆಮ್ಲಜನಕಯುಕ್ತ ರಕ್ತವನ್ನು ಸಾಗಿಸುತ್ತವೆ, ಆದರೆ ಇದಕ್ಕೆ ಎರಡು ಅಪವಾದಗಳಿವೆ, ಶ್ವಾಸಕೋಶದ ಅಪಧಮನಿ ಮತ್ತು ನಾಭಿ ಅಪಧಮನಿಗಳು. ವಾಸ್ತವಿಕ ಅಪಧಮನೀಯ ರಕ್ತ ಪರಿಮಾಣವು ಅಪಧಮನೀಯ ವ್ಯವಸ್ಥೆಯನ್ನು ತುಂಬುವ ಬಾಹ್ಯಕೋಶ ದ್ರವ.

ಅಪಧಮನಿಗಳು ರಕ್ತಪರಿಚಲನೆಯ ವ್ಯವಸ್ಥೆ / (ಮಾನವನಲ್ಲಿ ರಕ್ತ ಪರಿಚಲನೆ)ಯ ಭಾಗವಾಗಿವೆ. ರಕ್ತಪರಿಚಲನಾ ವ್ಯವಸ್ಥೆಯು ಎಲ್ಲ ಜೀವಕೋಶಗಳಿಗೆ ಆಮ್ಲಜನಕ ಮತ್ತು ಪೌಷ್ಟಿಕಾಂಶಗಳ ವಿತರಣೆ, ಜೊತೆಗೆ ಇಂಗಾಲದ ಡೈಆಕ್ಸೈಡ್ ಹಾಗೂ ತ್ಯಾಜ್ಯ ಉತ್ಪನ್ನಗಳ ತೆಗೆಯುವಿಕೆ, ಅನುಕೂಲತಮ ಪಿಎಚ್ ಅನ್ನು ಕಾಪಾಡುವುದು, ಮತ್ತು ಪ್ರೋಟೀನುಗಳು ಹಾಗೂ ಪ್ರತಿರಕ್ಷಾ ವ್ಯವಸ್ಥೆಯ ಜೀವಕೋಶಗಳ ಪರಿಚಲನೆಗೆ ಜವಾಬ್ದಾರವಾಗಿದೆ. ಅಭಿವೃದ್ಧಿಹೊಂದಿದ ದೇಶಗಳಲ್ಲಿ, ಮರಣದ ಎರಡು ಪ್ರಮುಖ ಕಾರಣಗಳಾದ ಹೃದಯಾಘಾತ, ಮತ್ತು ಮಿದುಳಾಘಾತ, ಎರಡೂ ನೇರವಾಗಿ ಅಪಧಮನೀಯ ವ್ಯವಸ್ಥೆಯು ವರ್ಷಾನುಗಟ್ಟಲೆಯ ಹಾಳಾಗುವಿಕೆಯಿಂದ ನಿಧಾನವಾಗಿ ಹಾಗೂ ಕ್ರಮೇಣ ದುರ್ಬಲಗೊಳ್ಳುವುದರಿಂದ ಸಂಭವಿಸಬಹುದು.

ಮಾನವ ಶರೀರದ ಅಪಧಮನೀಯ ವ್ಯವಸ್ಥೆಯನ್ನು ಹೃದಯದಿಂದ ಇಡೀ ಶರೀರಕ್ಕೆ ರಕ್ತವನ್ನು ಸಾಗಿಸುವ ಸಿಸ್ಟೆಮಿಕ್ ಅಪಧಮನಿಗಳು, ಮತ್ತು ಹೃದಯದಿಂದ ಶ್ವಾಸಕೋಶಗಳಿಗೆ ಆಮ್ಲಜನಕರಹಿತ ರಕ್ತವನ್ನು ಸಾಗಿಸುವ ಶ್ವಾಸಕೋಶದ ಅಪಧಮನಿಗಳು ಎಂದು ವಿಭಜಿಸಲಾಗುತ್ತದೆ.[೧]

ಅಪಧಮನಿಯ ಬಾಹ್ಯತಮ ಪದರದ ಹೆಸರು ಟ್ಯೂನಿಕಾ ಎಕ್ಸ್‌ಟರ್ನಾ. ಇದು ಸಂಯೋಜಕ ಅಂಗಾಂಶದಿಂದ ರಚಿತವಾಗಿದೆ. ಈ ಪದರದ ಒಳಗೆ ಟ್ಯೂನಿಕಾ ಮೀಡಿಯಾ ಇದೆ. ಇದು ನಯ ಸ್ನಾಯು ಜೀವಕೋಶಗಳು ಮತ್ತು ಸ್ಥಿತಿಸ್ಥಾಪಕ ಅಂಗಾಂಶದಿಂದ ರಚನೆಗೊಂಡಿದೆ. ಟ್ಯೂನಿಕಾ ಇಂಟಿಮಾ ಅಂತರತಮ ಪದರವಾಗಿದೆ. ಇದು ರಕ್ತದ ಹರಿವಿನೊಂದಿಗೆ ನೇರ ಸಂಪರ್ಕದಲ್ಲಿರುತ್ತದೆ. ಈ ಪದರ ಮುಖ್ಯವಾಗಿ ಆಂತರಿಕ ಅಂಗಾಂಶ ಜೀವಕೋಶಗಳಿಂದ ರಚನೆಗೊಂಡಿದೆ. ರಕ್ತ ಹರಿಯುವ ಒಳಗಿನ ಟೊಳ್ಳು ಕುಳಿಯನ್ನು ಕುಹರವೆಂದು ಕರೆಯಲಾಗುತ್ತದೆ.

ಅಪಧಮನಿಗಳು ಪರಿಚಲನಾ ವ್ಯವಸ್ಥೆಯ ಇತರ ಭಾಗಗಳಿಗಿಂತ ಹೆಚ್ಚಿನ ರಕ್ತದೊತ್ತಡವನ್ನು ಹೊಂದಿರುತ್ತವೆ. ಅಪಧಮನಿಗಳಲ್ಲಿನ ಒತ್ತಡವು ಹೃದಯ ಚಕ್ರದ ಅವಧಿಯಲ್ಲಿ ಬದಲಾಗುತ್ತದೆ. ಅದು ಹೃದಯ ಸಂಕುಚಿಸಿದಾಗ ಅತ್ಯಂತ ಹೆಚ್ಚಿರುತ್ತದೆ ಮತ್ತು ಹೃದಯ ಸಡಿಲಿಸಿದಾಗ ಅತ್ಯಂತ ಕಡಿಮೆಯಿರುತ್ತದೆ. ಒತ್ತಡದಲ್ಲಿನ ಬದಲಾವಣೆ ನಾಡಿಯನ್ನು ಉತ್ಪತ್ತಿ ಮಾಡುತ್ತದೆ, ಮತ್ತು ಇದನ್ನು ಶರೀರದ ವಿಭಿನ್ನ ಪ್ರದೇಶಗಳಲ್ಲಿ ಅನುಭವಿಸಬಹುದು.

ಉಲ್ಲೇಖಗಳು[ಬದಲಾಯಿಸಿ]

  1. Maton, Anthea; Jean Hopkins; Charles William McLaughlin; Susan Johnson; Maryanna Quon Warner; David LaHart; Jill D. Wright (1999). Human Biology and Health. Englewood Cliffs, New Jersey: Prentice Hall. ISBN 0-13-981176-1.
"https://kn.wikipedia.org/w/index.php?title=ಅಪಧಮನಿ&oldid=1158753" ಇಂದ ಪಡೆಯಲ್ಪಟ್ಟಿದೆ