ವಿಷಯಕ್ಕೆ ಹೋಗು

ಆಸ್ಟ್ರೇಲಿಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Commonwealth of Australia
Flag of ಆಸ್ಟ್ರೇಲಿಯ
Flag
ಲಾಂಛನ of ಆಸ್ಟ್ರೇಲಿಯ
ಲಾಂಛನ
Motto: None
Anthem: Advance Australia Fair
Royal anthem: God Save the Queen
Location of ಆಸ್ಟ್ರೇಲಿಯ
Capitalಕ್ಯಾನ್ಬೆರ
Largest cityಸಿಡ್ನಿ
Official languagesಆಂಗ್ಲ (de facto 1)
Governmentಸಾಂವಿಧಾನಿಕ ಸಾರ್ವಭೌಮತ್ವ (ಸಂಘಟಿತ)
ಮಹಾರಾಣಿ ಎರಡನೇ ಎಲಿಜಬೆತ್
ಕ್ವೆಂಟೀನ್ ಬ್ರೈಸ್
ಜೂಲಿಯಾ ಗಿಲಾರ್ಡ್
ಸ್ವಾತಂತ್ರ್ಯ 
ಜನವರಿ ೧ ೧೯೦೧
ಡಿಸೆಂಬರ್ ೧೧ ೧೯೩೧
ಮಾರ್ಚ್ ೩ ೧೯೮೬
• Water (%)
1
Population
• ೨೦೦೬ estimate
20,555,3002 (53rd)
• ೨೦೧೧ census
೨೧,೫೦೭,೭೧೭
GDP (PPP)2006 estimate
• Total
$674.9 billion (17th)
• Per capita
$32,220 (World Bank) (14th)
HDI (2006)0.957
very high · 3rd
Currencyಆಸ್ಟ್ರೇಲಿಯ ಡಾಲರ್ (AUD)
Time zoneUTC+8 to +10 (various3)
• Summer (DST)
UTC+8 to +11 (various3)
Calling code+61
Internet TLD.au
1 English does not have de jure official status (source)
2 mid-2006 population projection using Series B (medium variant) from [೧]
3 There are minor variations from these three time zones, see Time in Australia.

ಆಸ್ಟ್ರೇಲಿಯ ದಕ್ಷಿಣ ಭೂಗೋಳಾರ್ಧದಲ್ಲಿರುವ ಒಂದು ದೇಶಹಾಗೂ ಖಂಡ. ಸುತ್ತಲೂ ಸಾಗರಜಲದಿಂದ ಆವೃತವಾಗಿದ್ದು ಇಡೀ ಖಂಡವೇ ಒಂದು ಬೃಹತ್ ದ್ವೀಪದಂತಿದೆ. ಇದರ ಸ್ಥಳ ನಿರ್ದೇಶ ಹೀಗಿದೆ : 113º90-153º390, ಪು.ರೇ; 10º410-43º390, ದ.ಅ. ವಿಸ್ತೀರ್ಣ 76,86,850 ಚ.ಕಿಮೀ. ಜನಸಂಖ್ಯೆ 19,855,288 (2006). ರಾಜಧಾನಿ ಕ್ಯಾನ್ಬೆರ 353,149 (2001). ಹಿಂದೂ ಮಹಾಸಾಗರ ಮತ್ತು ಪೆಸಿಫಿಕ್ ಸಾಗರಗಳ ನಡುವೆ ಇದೆ. ಅಂದರೆ ಇದರ ವಿಸ್ತಾರ ಅಮೆರಿಕ ಸಂಯುಕ್ತ ಸಂಸ್ಥಾನದಷ್ಟಾಗುತ್ತದೆ. ಸಮುದ್ರತೀರ 19,536 ಕಿಮೀ ಉದ್ದವಾಗಿದೆ. ನಿಸ್ಸಂದೇಹವಾಗಿ ಇದೊಂದು ಅಡಕವಾದ ಭೂಭಾಗ. ಇದರ ಈ ವೈಶಿಷ್ಟ್ಯ, ಮೇಲ್ಮೈಲಕ್ಷಣ ಮತ್ತು ಅಕ್ಷಾಂಶರೀತ್ಯಾ ಇದರ ಸ್ಥಾನ, ಇವೆಲ್ಲ ಇದರ ವಾಯುಗುಣವನ್ನು ನಿಯಂತ್ರಿಸುತ್ತವೆ. ಈ ಖಂಡದ ಭೌಗೋಳಿಕ ಲಕ್ಷಣ ನಿರ್ಣಯವಾಗಿರುವುದು ಈ ಅಂಶಗಳಿಂದ. ಆಸ್ಟ್ರೇಲಿಯ ಎಂಬ ಹೆಸರು `ಆಸ್ಟ್ರಲ’ ಎಂಬ ಲ್ಯಾಟಿನ್ ಶಬ್ದದಿಂದ ಬಂದದ್ದು.

ಆಸ್ಟ್ರೇಲಿಯದ ಮುಖ್ಯ ರಾಜಕೀಯ ವಿಭಾಗಗಳು

[ಬದಲಾಯಿಸಿ]

ಈ ಖಂಡದ ಹೊರಗಡೆ ಇರುವ ಆಸ್ಟ್ರೇಲಿಯದ ವಿಭಾಗಗಳು ಪಾಪುಅ, ಪೆಸಿಫಿಕ್ ಮಹಾಸಾಗರದಲ್ಲಿರುವ ನಾರ್ಫೋಕ್ ದ್ವೀಪ, ಹಿಂದೂಮಹಾಸಾಗರದ 27 ಕೋಕೋಸ್ (ಕೀಲಿಂಗ್) ದ್ವೀಪಗಳು ಮತ್ತು ಕ್ರಿಸ್ಮಸ್ ದ್ವೀಪ ಮತ್ತು ಆಸ್ಟ್ರೇಲಿಯದ ಅಂಟಾರ್ಕ್ಟಿಕ್ ಭಾಗ.

ಪ್ರಾಕೃತಿಕ ಲಕ್ಷಣಗಳು

[ಬದಲಾಯಿಸಿ]

ಖಂಡದಲ್ಲಿ ಮೂರು ಪ್ರಾಕೃತಿಕ ಲಕ್ಷಣಗಳು ಕಾಣುತ್ತವೆ

  • ಪೂರ್ವದ ಎತ್ತರ ಪ್ರದೇಶಗಳು,
  • ಮಧ್ಯದ ತಗ್ಗು ಬಯಲುಗಳು,
  • ಪಶ್ಚಿಮದ ಪೀಠಭೂಮಿ.
  • ಪೂರ್ವದ ಎತ್ತರ ಪ್ರದೇಶಗಳು ಖಂಡದ ಪೂರ್ವದಲ್ಲಿ ಉತ್ತರದ ಯಾರ್ಕ್ ಭೂಶಿರದಿಂದ ದಕ್ಷಿಣದಲ್ಲಿನ ಮರೆ ನದಿಯ ಉಗಮಸ್ಥಾನದವರೆಗೂ ಹರಡಿವೆ. ಪರ್ವತ ಭಾಗವೇ ಗ್ರೇಟ್ ಡಿವೈಡಿಂಗ್ ರೇಂಜ್ ಎಂಬುದು. ಇದರಲ್ಲಿ ಕೊಸಿಯುಸ್ಕೊ (2,234ಮೀ) ಅತ್ಯಂತ ಎತ್ತರದ ಶಿಖರ. ಭೂವಿಜ್ಞಾನದ ದೃಷ್ಟಿಯಿಂದ ಈ ಪರ್ವತಗಳು ಪ್ರಿ-ಕೇಂಬ್ರಿಯನ್ನಿಂದ ಕಾರ್ಬೋನಿಫೆರಸ್ ವರೆಗಿನ ಕಾಲದ ವಿವಿಧ ಶಿಲೆಗಳಿಂದ ಉಂಟಾಗಿವೆ; ಅವುಗಳ ಪಕ್ಕದಲ್ಲಿ ಈಚಿನ ಭೂನಿಕ್ಷೇಪಗಳಿವೆ. ಕಾರ್ಬೋನಿಫೆರಸ್ ಕಾಲದಲ್ಲಿ ಟಾಸ್ಮನ್ ಭೂಸ್ತರಾವನತಗಳು ಅಲ್ಪ ಪ್ರಮಾಣದಲ್ಲಿ ಪಕ್ಷೀಕೃತ ರೂಪವನ್ನು ಹೊಂದಿದುವು. ಅನಂತರ ನದಿಗಳಿಂದಾದ ಸವೆತದಿಂದ ಇಕ್ಕಟ್ಟಾದ ತೀರಪ್ರದೇಶ ಪರ್ವತಗಳ ತುಂಡುಭಾಗಗಳು ಸಮಮಟ್ಟವಾದುವು. ಮರೆ-ಡಾರ್ಲಿಂಗ್ ನದಿಗಳ ಉಪನದಿಗಳ ಉಗಮ ಗ್ರೇಟ್ ಡಿವೈಡಿಂಗ್ ರೇಂಜ್ನಲ್ಲಿ ಅವು ಪ್ರಧಾನ ನದಿಯನ್ನು ಸಮಕೋನದಲ್ಲಿ ಸೇರಿಕೊಳ್ಳುತ್ತವೆ. ಮರೆ ನದಿ ಮೆಲ್ಬರ್ನ್ ತಗ್ಗು ಬಯಲಿನ ಮುಖಾಂತರ ಹರಿದು, ಟಾಸ್ಮೇನಿಯ ಜಲಸಂಧಿಯನ್ನು ತಲಪುತ್ತದೆ.
  • ಆಸ್ಟ್ರೇಲಿಯಾದ ಹವಳದ ದಿಬ್ಬಗಳು
  • ಪೂರ್ವದ ತೀರಪ್ರದೇಶದ ಆಚೆ ದಕ್ಷಿಣೋತ್ತರವಾಗಿ ಹಬ್ಬಿದ ಹವಳದ್ವೀಪ ಸಮುದಾಯಗಳಿವೆ. ಇವನ್ನು ದಿ ಗ್ರೇಟ್ ಬ್ಯಾರಿಯರ್ ರೀಫ್ ಎಂದು ಕರೆಯುತ್ತಾರೆ. ಇವು ಸಮುದ್ರತೀರಕ್ಕೆ 16 ಕಿಮೀಗಳಿಂದ 241 ಕಿಮೀಗಳ ಸಮಾನಾಂತರದಲ್ಲಿ 2.011 ಕಿಮೀ ಉದ್ದ ಹರಡಿವೆ. ಆಸ್ಟ್ರೇಲಿಯಾದ ಸಾಹಿತ್ಯಿಕ ಪರಂಪರೆಗೆ ಸ್ಫೂರ್ತಿ ಈ ಹವಳದ ದಿಬ್ಬಗಳು. ಜಗತ್ತಿನ ನೈಸರ್ಗಿಕ ಅದ್ಭುತಗಳಲ್ಲಿ ಕ್ವೀನ್ಸ್‌ಲ್ಯಾಂಡ್‌ ಕರಾವಳಿಯ ಹವಳದ ದಿಬ್ಬಗಳೂ ಸೇರಿವೆ. ವಿಶ್ವದ ಅತ್ಯಂತ ದೊಡ್ಡ ಹವಳ ದಿಬ್ಬದ ವ್ಯವಸ್ಥೆ ಇದು. ಅತಿ ವೈವಿಧ್ಯಮಯ ಜೀವಸಂಕುಲಕ್ಕೆ ಆಶ್ರಯ ನೀಡಿರುವ ಪ್ರಮುಖ ಭೌಗೋಳಿಕ ವಲಯವಿದು. ಮಾತ್ರವಲ್ಲ, ದೇಶದ ಸಾಂಸ್ಕೃತಿಕ, ಆರ್ಥಿಕ ಮತ್ತು ಸಾಮಾಜಿಕ ರಚನೆಯ ಮೇಲೂ ದಟ್ಟ ಪ್ರಭಾವ ಬೀರಿರುವಂಥಹವು. ಆಸ್ಟ್ರೇಲಿಯಾದ ಪ್ರಮುಖ ಪ್ರೇಕ್ಷಣೀಯ ಸ್ಥಳವಾಗಿರುವ ‘ದಿ ಗ್ರೇಟ್‌ ಬ್ಯಾರಿಯರ್‌ ರೀಫ್‌’ಗೆ ಇರುವುದು ಬರೋಬ್ಬರಿ ಎರಡು ಕೋಟಿ ಐವತ್ತು ಲಕ್ಷ ವರ್ಷಗಳ ಬೃಹತ್‌ ಇತಿಹಾಸ. 1,400 ಮೈಲು ದೂರದ 3.44 ಲಕ್ಷ ಚದರ ಕಿಮೀ ವ್ಯಾಪ್ತಿಯ ಪ್ರದೇಶದವರೆಗೆ ಲೆಕ್ಕವಿಲ್ಲದಷ್ಟು ಅಚ್ಚರಿಗಳನ್ನು ಸಲಹಿಕೊಂಡು ವ್ಯಾಪಿಸಿರುವ ಈ ಹವಳದ ದಿಬ್ಬಗಳ ಸಾವು ಸಮೀಪಿಸುತ್ತಿದೆಯೇ ಎಂಬ ಸಂಶಯ ಮೂಡಿದೆ.[]
  • ಮಧ್ಯದ ತಗ್ಗು ಬಯಲುಗಳು ಉತ್ತರದ ಕಾರ್ಪೆಂಟೇರಿಯ ಕೊಲ್ಲಿಯಿಂದ ದಕ್ಷಿಣದ ತೀರದವರೆಗೂ ಹರಡಿವೆ. ಇವು ಸಾಮಾನ್ಯವಾಗಿ ತಗ್ಗಾಗಿವೆ. ಉತ್ತರದ ಬರ್ಕ್ಲಿ ಡೌನ್ಸ್ (610ಮೀ), ಗ್ರೇ ಮತ್ತು ಫ್ಲ್ಯಾಂಡರ್ ಬೆಟ್ಟ ಸಾಲುಗಳ ವಿನಾ ಉಳಿದ ತಗ್ಗು ಬಯಲು ವರ್ಮಿಯನ್ ಶಿಲಾಸ್ತರಗಳಿಂದ ಕೂಡಿದೆ. ಈ ರೀತಿಯ ವೈವಿಧ್ಯಪೂರ್ಣ ಸಂಚಯನಗಳು ಗ್ರೇಟ್ ಡಿವೈಡಿಂಗ್ ರೇಂಜ್ನ ಪೂರ್ವ ಪಾಶರ್ವದಲ್ಲಿರುವ ಮರಳುಶಿಲೆ, ಜೇಡಿಪದರಶಿಲೆ ಮತ್ತು ಕಲ್ಲಿದ್ದಲಿನ ಸ್ತರಗಳನ್ನು ನಿರ್ಮಿಸಿವೆ. ಭೂರಚನಾಶಾಸ್ತ್ರ ದೃಷ್ಟಿಯಿಂದ ಇಲ್ಲಿನ ಭೂರಚನೆ ಏಕ ರೀತಿಯ ತರಂಗಿತ ಭೂಲಕ್ಷಣಗಳನ್ನು ಹೊಂದಿದೆ.

ಇಲ್ಲಿನ ಜಲವಹನ ರೀತಿ ಕೇಂದ್ರಾಭಿಗಾಮಿ. ಐರ್ ಸರೋವರದ ಕಡೆಗೆ ಈ ಬಯಲುಗಳ ಎಲ್ಲ ನದಿಗಳೂ ಹರಿಯುತ್ತವೆ. ಗೇರ್ಡ್ನರ್ ಸರೋವರ ದಕ್ಷಿಣದಲ್ಲಿದ್ದು ಮರುಭೂಮಿ ಪ್ರಧಾನ ಪ್ರದೇಶದಲ್ಲಿ ಜೌಗು ಭಾಗಗಳನ್ನು ನಿರ್ಮಿಸಿದೆ. ಈ ಭಾಗಗಳನ್ನು

  • ಮರೆ-ಡಾರ್ಲಿಂಗ್ ತಗ್ಗುಬಯಲುಗಳು;
  • ಐರ್ ಸರೋವರದ ಬಯಲು;
  • ಕಾರ್ಪೆಂಟೇರಿಯ ತಗ್ಗುಬಯಲುಗಳು ಎಂದು ಮೂರು ಭಾಗ ಮಾಡಬಹುದು.

ಮಧ್ಯ ಆಸ್ಟ್ರೇಲಿಯದಲ್ಲಿನ ಕಾರ್ಪೆಂಟೇರಿಯ ಕೊಲ್ಲಿಯಿಂದ ಆನ್ಸ್ಲೊ, ಪರ್ತ್ ಮತ್ತು ಆಲ್ಬೆನಿಗಳವರೆಗೆ ಹರಡಿರುವ ತಗ್ಗಿನ, ಇಕ್ಕಟ್ಟಾದ ತೀರಪ್ರದೇಶ ಪೂರ್ವಕ್ಕೆ ಪಶ್ಷಿಮ ಪೀಠಭೂಮಿ ಗ್ರೇಟ್ ಗಿಬ್ಸನ್ ಮತ್ತು ವಿಕ್ಟೋರಿಯ ಮರುಭೂಮಿಗಳನ್ನು ಹೊಂದಿದೆ. ಈ ಭೂಮಿ ಭಾರತ ಮತ್ತು ಆಫ್ರಿಕಗಳ ಪೀಠಭೂಮಿಗಳಷ್ಟೇ ಹಳೆಯದು. ಇದು ಮತ್ತು ಆಫ್ರಿಕದಲ್ಲಿನ ಸಹರಾ ಮರುಭೂಮಿ ಅವಳಿಜವಳಿಗಳಂತಿವೆ. ಕಾರ್ಬೋನಿಫೆರಸ್ ಯುಗಕ್ಕೆ ಹಿಂದೆ, ಆಸ್ಟ್ರೇಲಿಯದ ಭೂಭಾಗ ದಕ್ಷಿಣದ ಅಂಟಾರ್ಕ್ಟಿಕದ ಭೂಭಾಗದೊಂದಿಗೂ ವಾಯವ್ಯದಲ್ಲಿ ಭಾರತದ ದಖನ್ ಪೀಠಭೂಮಿಯೊಂದಿಗೂ ಭೂಸಂಪರ್ಕ ಹೊಂದಿತ್ತು. ಇಂಗಾಲಯುಗದ ಅಂತ್ಯಕಾಲದಲ್ಲಿ ಈ ಅಖಂಡಭೂಭಾಗ ಒಡೆದು ಬೇರ್ಪಟ್ಟಿತು. ಕೆಲವು ಭಾಗಗಳು ಸಮುದ್ರದಲ್ಲಿ ಮುಳುಗಿ ಈಗಿರುವಂತೆ ದ್ವೀಪಗಳು ನಿರ್ಮಿತವಾದುವು. ಮೊತ್ತಮೊದಲು ಆಸ್ಟ್ರೇಲಿಯ ಪ್ರತ್ಯೇಕ ದ್ವೀಪವಾಯಿತು. ಈ ಪ್ರತ್ಯೇಕತೆಯ ಪರಿಣಾಮವಾಗಿ ಆಸ್ಟ್ರೇಲಿಯದ ಪ್ರಾಣಿ ಮತ್ತು ಸಸ್ಯವರ್ಗಗಳು ತಮ್ಮವೇ ಆದ ವೈಶಿಷ್ಟ್ಯವನ್ನು ಹೊಂದಿವೆ. ತೃತೀಯ ಭೂಕಾಲಯುಗದಲ್ಲಿ ಆದ ಬದಲಾವಣೆಗಳನ್ನು ಯೂಕ್ಲ ಜಲಾನಯನ ಪ್ರದೇಶದಲ್ಲಿ ಕಾಣಬಹುದು. ಅಲ್ಲಿನ ನೆಲ ಸುಣ್ಣಶಿಲಾಮಯವಾಗಿರುವುದರಿಂದ ರಂಧ್ರವಾಗಿದೆ; ಮಳೆ ಬಿದ್ದ ಕೂಡಲೆ ನೀರನ್ನು ಹೀರಿಬಿಡುತ್ತದೆ. ತಗ್ಗುಪ್ರದೇಶಗಳಲ್ಲಿ ನೆಲದೊಳಗೆ ನೀರು ನಿಂತಿರುತ್ತದೆ. ಇಂಥ ಭೂಮ್ಯಂತರ್ಗತ ಜಲಪ್ರದೇಶಗಳನ್ನು ವಾಯವ್ಯದ ಮರುಭೂಮಿಯಲ್ಲೂ ದಕ್ಷಿಣದ ಯೂಕ್ಲ ತಗ್ಗುಭೂಭಾಗದಲ್ಲೂ ಕಾಣಬಹುದು.

ಸ್ವಾಭಾವಿಕ ಸಸ್ಯವರ್ಗ

[ಬದಲಾಯಿಸಿ]

ಆಸ್ಟ್ರೇಲಿಯದ ಶೇ. 1 ಭಾಗಕ್ಕಿಂತಲೂ ಕಡಿಮೆ ಪ್ರದೇಶದಲ್ಲಿ ಅದರಲ್ಲೂ ಮರುಭೂಮಿಯ ಅಂಚುಗಳಲ್ಲಿ ಎತ್ತರಕ್ಕೆ ಬೆಳೆಯುವ ಹುಲ್ಲುಗಾವಲುಗಳಿವೆ. ಈ ಹುಲ್ಲನ್ನು ಕಾಂಗರೂ ಹುಲ್ಲು ಎಂದು ಕರೆಯುತ್ತಾರೆ. ತೀರಪ್ರದೇಶಗಳಲ್ಲಿ ದಟ್ಟವಾದ ಕಾಡುಗಳಿವೆ. ಕ್ವೀನ್ಸ್ ಲೆಂಡ್ನ ಸದಾ ಹಸಿರಾಗಿರುವ ಮರಗಳು ಲಿಯಾನಾಸ್ ಮತ್ತು ಜರಿ ಮರಗಳನ್ನು ಒಳಗೊಂಡಿವೆ. ದಕ್ಷಿಣದ ಕಡೆಗೆ ಹೋದ ಹಾಗೆಲ್ಲ ಇವು ಸಮಶೀತೋಷ್ಣ ವಲಯದ ಕಾಡುಗಳಾಗಿ ಪರಿವರ್ತಿತವಾಗುತ್ತವೆ. ಈ ಕಾಡುಗಳಲ್ಲಿ ಮರಗಳ ಮಧ್ಯೆ ಬೆಳೆಯುವ ಕುರುಚಲು ಮುಂತಾದ ಸಸ್ಯಗಳಿಲ್ಲ. ಇಲ್ಲೆಲ್ಲ ನೀಲಗಿರಿ ಮರಗಳು ಭವ್ಯವಾದುವು. ಇವುಗಳಲ್ಲಿ 600 ವಿಧಗಳಿವೆ. ಕೆಲವು ಸ್ಥಳದಲ್ಲಿ ಇವು 90 ಮೀ ಎತ್ತರವಾಗಿ ಬೆಳೆದಿವೆ. ಇದಕ್ಕಿಂತಲೂ ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲಿ ಅಕೇಸಿಯ, ಮುಲ್ಫ, ಮಲ್ಲೀ ಎನ್ನುವ ಹೆಚ್ಚು ಬೆಳೆವಣಿಗೆಯಿಲ್ಲದ ನೀಲಗಿರಿ (ಯೂಕಲಿಪ್ಟಸ್) ಮರಗಳು ಕಾಣುತ್ತವೆ. ಮರುಭೂಮಿಯ ಅಂಚುಗಳಲ್ಲಿನ ಶುಷ್ಕಭೂಮಿಯಲ್ಲಿ ಬೆಳೆಯುವ ಸಸ್ಯಗಳು ಅಂತರ್ಜಲವನ್ನು ಹೀರಿ ಜೀವಿಸುತ್ತವೆ.

ಪ್ರಾಣಿವರ್ಗ

[ಬದಲಾಯಿಸಿ]

ಈ ಖಂಡದಲ್ಲಿ ಬೇರೆಲ್ಲೂ ಇಲ್ಲದ ವಿಚಿತ್ರ ಪ್ರಾಣಿಗಳನ್ನು ಕಾಣಬಹುದು. ಕೆಲವು ಮನುಷ್ಯ ಹುಟ್ಟುವುದಕ್ಕೆ ಮುಂಚೆ ಇಲ್ಲಿ ಇದ್ದುವು. ಸರೀಸೃಪಗಳು ಮತ್ತು ವಿಷಪೂರಿತ ಹಾವುಗಳು ಸಾಮಾನ್ಯವಾಗಿವೆ. ಪ್ಲಾಟಿಪಸ್ ಎನ್ನುವ ಸಸ್ತನಿ ಮೊಟ್ಟೆಗಳನ್ನಿಡುತ್ತದೆ ಮತ್ತು ಮರಿಗಳಿಗೆ ಮೊಲೆಯುಣಿಸುತ್ತದೆ. ಇದರ ಮೂತಿ ಬಾತಿನ ಕೊಕ್ಕಿನಂತಿದೆ. ಮೈತುಂಬ ತುಪ್ಪಳ ಚರ್ಮದ ಹೊದಿಕೆ ಇದೆ. ಮಾಸೂರ್ಯಪಿಯಲ್ ಎಂಬ ಇನ್ನೊಂದು ಸಸ್ತನಿ ಅರೆಬೆಳೆದ ಮರಿಗಳನ್ನು ಹಡೆದು ಅನಂತರ ಅವನ್ನು ತನ್ನ ಹೊಟ್ಟೆಯ ಹೊರ ಚೀಲದಲ್ಲಿಟ್ಟುಕೊಂಡು ಬೆಳೆಸುತ್ತದೆ. ಕಾಂಗರೂ, ಒಪ್ಪೋಸಂ ಇದೇ ರೀತಿಯ ಪ್ರಾಣಿಗಳು. ಕಾಂಗರೂ ಗಂಟೆಗೆ 32 ಕಿಮೀ ವೇಗದಲ್ಲಿ ಓಡುತ್ತದೆ. ಈಮೂ ಎಂಬುದು ಇಲ್ಲಿನ ಪಕ್ಷಿಗಳಲ್ಲೆಲ್ಲ ದೊಡ್ಡದಾದುದು. ಲೈರ್ ಎಂಬ ನವಿಲಿನಂತಿರುವ ಸೊಗಸಾದ ಪಕ್ಷಿ ಇತರ ಧ್ವನಿಗಳನ್ನು ಬಹಳ ಚೆನ್ನಾಗಿ ಅನುಕರಿಸುತ್ತದೆ. ಡಿಂಗೊ ಎಂಬ ಕಾಡು ನಾಯಿ ನೋಡಲು ತೋಳದಂತಿದೆ. ವಲ್ಲಬಿ, ನೊಣಗಳನ್ನು ತಿನ್ನುವ ಎಕಿಡ್ನ, ಮರ ಹತ್ತುವ ಸಣ್ಣ ಆಕಾರದ ಕರಡಿ ಕೋಆಲ-ಇತ್ಯಾದಿ ಪ್ರಾಣಿಗಳು ಆಸ್ಟ್ರೇಲಿಯದ ರಕ್ಷಿತ ಕಾಡುಗಳಲ್ಲಿ ವಾಸಿಸುತ್ತವೆ. ಗಿಣಿ, ಉಷ್ಟ್ರಪಕ್ಷಿ, ಕ್ಯಾಸ್ಸೋವರಿ ಮತ್ತು ಇತರ ಬಗೆಯ ಪಕ್ಷಿಗಳೂ ಇಲ್ಲಿವೆ.

ವ್ಯವಸಾಯ

[ಬದಲಾಯಿಸಿ]

ಆಸ್ಟ್ರೇಲಿಯದಲ್ಲಿ ವ್ಯವಸಾಯಕ್ಕೆ ಯೋಗ್ಯವಾದ ಭೂಮಿ ಬಹಳ ಕಡಿಮೆ. ಒಟ್ಟು ಭೌಗೋಳಿಕ ಪ್ರದೇಶದಲ್ಲಿ ಶೇ.15 ಭಾಗ ಮಾತ್ರ ಕೃಷಿಗೆ ಯೋಗ್ಯ. ಸಮುದ್ರತೀರ ಮತ್ತು ನದಿ ಮೈದಾನಗಳಲ್ಲಿ ಮಾತ್ರ ವ್ಯವಸಾಯವಿದೆ. ಖಂಡದಲ್ಲಿ ಬಿಳಿಯ ಜನ ಹೆಚ್ಚಾಗಿ ಇರುವುದರಿಂದ ಸಮಶೀತೋಷ್ಣವಲಯದ ಬೆಳೆಗಳು ಹೆಚ್ಚಾಗಿ ಅಭಿವೃದ್ಧಿ ಹೊಂದಿವೆ. ಮುಖ್ಯಬೆಳೆ ಗೋದಿ, ಓಟ್ಸ್, ಕಬ್ಬು, ಬಾರ್ಲಿ, ಜೋಳ, ಆಲೂಗೆಡ್ಡೆ ಹಾಗೂ ಪ್ರಮುಖ ಹಣ್ಣುಗಳಾದ ದ್ರಾಕ್ಷಿ,ಸೇಬು, ಏಪ್ರಿಕಾಟ್, ಬಾಳೆ, ಕಿತ್ತಳೆ, ಪೀಚ್, ಪೇರು ಮತ್ತು ಪ್ಲಮ್. ಬೆಟ್ಟಗುಡ್ಡಗಳ ಮೇಲೆ ಬಿದ್ದ ಮಳೆಯ ನೀರು ನೆಲದಲ್ಲಿ ಇಳಿದು ಭೂಮಿಯ ಪದರಗಳಲ್ಲಿ ಹರಿಯುತ್ತಿರುತ್ತದೆ. ಅಂಥ ಪ್ರದೇಶದಲ್ಲಿ ಬಾವಿಯನ್ನು ತೆಗೆದರೆ ನೀರು ಬುಗ್ಗೆಯಂತೆ ಚಿಮ್ಮುತ್ತದೆ. ಇದೇ ಆರ್ಟೀಸಿಯನ್ ಬಾವಿ. ಇವನ್ನು ಬೇರೆ ಬೇರೆ ಗುಂಪುಗಳಾಗಿ ವಿಭಾಗಿಸಿದ್ದಾರೆ. ಮಧ್ಯದ ತಗ್ಗುಬಯಲು ಗಳಲ್ಲಿರುವ ಗ್ರೇಟ್ ಆರ್ಟೀಸಿಯನ್ ಬಯಲು; ಮರೆ ಬಯಲು, ದಕ್ಷಿಣದಲ್ಲಿ ಯೂಕ್ಲ ಬಯಲು; ಪಶ್ಚಿಮದ ಪೀಠಭೂಮಿ

ಪಶುಪಾಲನೆ

[ಬದಲಾಯಿಸಿ]

ಆಸ್ಟ್ರೇಲಿಯದಲ್ಲಿ ಪಶುಪಾಲನೆಯೇ ಜನರ ಮುಖ್ಯ ಕಸಬು. ಸಾಮಾನ್ಯ ಮಳೆ, ಅತಿಯಲ್ಲದ ಉಷ್ಣಾಂಶ, ವಿಶಾಲವಾದ ಹುಲ್ಲುಗಾವಲು-ಇಲ್ಲಿನ ಪಶುಪಾಲನೆಗೆ ಸಹಾಯಕವಾದ ಮುಖ್ಯ ಅನುಕೂಲಗಳು. ಮುಖ್ಯವಾಗಿ ಕುರಿ, ದನಕರುಗಳನ್ನು ಸಾಕುತ್ತಾರೆ. ಕುರಿ ಸಾಕುವಿಕೆಗೆ ಈ ಖಂಡದಲ್ಲಿರುವಷ್ಟು ವಾಯುಗುಣದ ಅನುಕೂಲ ಮತ್ತೆಲ್ಲಿಯೂ ಇಲ್ಲ. ಗ್ರೇಟ್ ಡಿವೈಡಿಂಗ್ ಶ್ರೇಣಿಗಳ ಪಶ್ಚಿಮದುದ್ದಕ್ಕೂ ವಿಶಾಲ ಬಯಲುಗಳಲ್ಲಿ ಅಸಂಖ್ಯಾತ ಕುರಿಗಳನ್ನು ಉಣ್ಣೆ ಮತ್ತು ಮಾಂಸಕ್ಕಾಗಿ ಸಾಕುತ್ತಾರೆ. ಈ ಖಂಡದ ವಿಶಿಷ್ಟವಾದ ಉಣ್ಣೆ ಕೊಡುವ ಕುರಿ ಮೆರಿನೊ. ಉತ್ತರದ ಮಳೆ ಪ್ರದೇಶಗಳು, ಪೂರ್ವದ ತೀರಪ್ರದೇಶಗಳಲ್ಲಿ ದನಕರುಗಳನ್ನು ಹೆಚ್ಚಾಗಿ ಸಾಕುತ್ತಾರೆ. ಇವನ್ನು ಹೆಚ್ಚಾಗಿ ಮಾಂಸಕ್ಕಾಗಿ ಸಾಕಿದರೂ ಹೈನದ ಉತ್ಪನ್ನಗಳಾದ ಹಾಲು, ಬೆಣ್ಣೆ, ಗಿಣ್ಣನ್ನೂ ಪಡೆಯುತ್ತಾರೆ. ಪ್ರಮುಖ ಸಾಕುಪ್ರಾಣಿಗಳೆಂದರೆ ಕುದುರೆಗಳು (ಮಾಂಸವನ್ನು ರಫ್ತು ಮಾಡುವುದಕ್ಕಾಗಿ ಸಾಕುವರು); ದನಕರುಗಳು-ಕುರಿಗಳು ಮತ್ತು ಹಂದಿಗಳು. ಈ ಸಾಕುಪ್ರಾಣಿಗಳಿಂದ ದೊರಕುವ ಹಾಲಿನ ಮತ್ತಿತರ ವಸ್ತುಗಳು-ಬೆಣ್ಣೆ ಗಿಣ್ಣು: ಘನೀಕರಿಸಿದ ಹಾಲು, ಗಟ್ಟಿ ಹಾಲು, ಕಚ್ಚ ಎಣ್ಣೆ ಮತ್ತು ಮೊಟ್ಟೆಗಳು.

ಖನಿಜಸಂಪತ್ತು

[ಬದಲಾಯಿಸಿ]

ಆಸ್ಟ್ರೇಲಿಯದ ಭೂರಚನೆಗೂ ಅದರ ಖನಿಜ ಸಂಪತ್ತಿಗೂ ಬಹು ಹತ್ತಿರದ ಸಂಬಂಧವಿದೆ. ಲೋಹ ಖನಿಜಗಳು ಅಂತರಗ್ನಿ ಶಿಲೆಗಳೊಂದಿಗೆ ಸಂಯೋಜಿತವಾಗಿ ಘನಾಕೃತಿಯಲ್ಲಿವೆ-ತವರ, ಟಂಗ್ಸ್ಟನ್, ಚಿನ್ನ, ತಾಮ್ರ, ಸೀಸ, ಸತು, ಬೆಳ್ಳಿ, ಆಂಟಿಮೊನಿ ಮತ್ತು ಪಾದರಸ ಇವುಗಳಲ್ಲಿ ಮುಖ್ಯವಾದುವು. ಶಿಲಾಪದರಗಳು ಶಿಥಿಲೀಕರಣ ಪ್ರಕ್ರಿಯೆಯ ಸಮಯದಲ್ಲಿ ಸ್ಫಟಿಕಾಕೃತಿ ಶಿಲೆಗಳಾಗಿ ನಿರ್ಮಾಣವಾದಾಗ ಶಿಲಾಹಂಚಿಕೆಯ ವ್ಯವಸ್ಥೆ ಏರುಪೇರಾಯಿತು. ಇದರಿಂದ ಅದಿರುನಿಕ್ಷೇಪಗಳ ವ್ಯಾಪ್ತಿಯನ್ನು ನಿಷ್ಕರ್ಷಿಸುವುದು ಕಷ್ಟವಾಯಿತು. ಆದಾಗ್ಯೂ ಗ್ರೇಟ್ ಆಸ್ಟ್ರೇಲಿಯನ್ ಷೀಲ್ಡ್ (ಪೀಠಭೂಮಿ ಪ್ರದೇಶ)ಲೋಹದ ಖನಿಜಗಳಿಂದ ಕೂಡಿದ್ದು ಸಂಪದ್ಭರಿತವಾಗಿದೆ. ಗ್ರೇಟ್ ಡಿವೈಡಿಂಗ್ ಶ್ರೇಣಿಯ ಪ್ರದೇಶಕ್ಕೂ ಇದು ಅನ್ವಯಿಸುತ್ತದೆ. ಪಶ್ಚಿಮ ಆಸ್ಟ್ರೇಲಿಯದಲ್ಲಿ ಅನೇಕ ಖನಿಜಗಳು ದೊರೆಯುತ್ತವೆ. ಇಲ್ಲಿ 6 ಸಮಾನಾಂತರ ವಲಯಗಳನ್ನು ಸುಲಭವಾಗಿ ಕಾಣಬಹುದು

  • ಸಮುದ್ರತೀರದ ಬಳಿ ಇರುವ ಬೆಣಚುಕಲ್ಲಿನ ಪದರ ಶಿಲೆ, ನುಣುಪು ಶಿಲೆ, ಭಿನ್ನಸ್ತರ ಶಿಲೆಯ ವಲಯ.
  • ಗ್ರ್ಯಾಫೈಟ್, ಕಲ್ನಾರು ಮತ್ತು ತವರಗಳನ್ನು ಹೊಂದಿರುವ ನುಣುಪುಶಿಲೆ ಮತ್ತು ನೀಸ್ ಶಿಲೆಗಳ ವಲಯ.
  • ಶುಷ್ಕ ಸ್ಫಟಿಕಾಕೃತಿಗಳು.
  • ಹೇರಳವಾಗಿ ಚಿನ್ನ ದೊರೆಯುವ ಸ್ಫಟಿಕಾಕೃತಿ ಶಿಲೆಗಳು.
  • ಅದಿರಿನಿಂದ ಕೂಡಿರದ ಸ್ಫಟಿಕಾಕೃತಿ ಶಿಲೆಗಳ ನೀಸ್.
  • ಚಿನ್ನದ ಅದಿರುಗಳಿರುವ ಸ್ಫಟಿಕಾಕೃತಿ ಶಿಲೆಗಳು.

ಆರನೆಯ ವಲಯ ಎಸ್ಟೆರಾನ್ಸಿನ ದಕ್ಷಿಣ ತೀರದಲ್ಲಿ ಪ್ರಾರಂಭವಾಗಿ ನಾರ್ಸ್ಮನ್ ಮತ್ತು ಕಾಲ್ಗೂರ್ಲಿ ಮುಖಾಂತರ ಲಿಯೋನಾರವನ್ನು ಹಾಯ್ದು ಉತ್ತರ ತೀರದ ಪಿಲ್ಬರವನ್ನು ತಲಪುತ್ತದೆ. ರೈಲುಮಾರ್ಗ ಇದರ ಪ್ರಾಮುಖ್ಯವನ್ನು ಒತ್ತಿ ಹೇಳುತ್ತದೆ. ನಾಲ್ಕನೆಯ ಚಿನ್ನದ ವಲಯ ಫಿಲಿಪ್ಸ್ ನದಿಯ ಹತ್ತಿರ ಪ್ರಾರಂಭವಾಗಿ ಸದರ್ನ್ ಕ್ರಾಸ್ ಮತ್ತು ಆಸ್ಟಿನ್ ಸರೋವರ ಪ್ರದೇಶವನ್ನೊಳಗೊಂಡು 240 ಕಿಮೀ ದೂರದಲ್ಲಿರುವ ಗ್ಯಾಸ್ಕಾಯಿನ್ ಮತ್ತು ಆಷ್ಬರ್ಟನ್ ನದಿಗಳವರೆಗೂ ವ್ಯಾಪಿಸಿದೆ. ನ್ಯೂ ಸೌತ್ವೇಲ್ಸ್, ಕ್ವೀನ್ಸ್‍ಲೆಂಡ್ ತಾಮ್ರಕ್ಕೆ ಪ್ರಸಿದ್ಧಿ ಪಡೆದಿವೆ. ಈ ಪ್ರದೇಶದಲ್ಲಿ ಮರಳುದಿಣ್ಣೆಗಳಿಲ್ಲ; ಆದುದರಿಂದ ಗಣಿಗಳನ್ನು ಸುಲಭವಾಗಿ ತಲಪಬಹುದು. ಪೂರ್ವದ ಎತ್ತರ ಪ್ರದೇಶಗಳಲ್ಲಿ ತಾಮ್ರ ಮತ್ತು ತವರದ ನಿಕ್ಷೇಪಗಳು ಹೇರಳವಾಗಿವೆ. ಚಿಲ್ಲಾಂಗೊ, ಗೊಟಾಟ್, ಚಾರ್ಟರ್ಸ್ ಟವರ್ಸ್, ಮೌಂಟ್ ಮಾರ್ಗನ್ ಮತ್ತು ಜಿಂಪಿಕ್ ಇವೆಲ್ಲ ಕ್ವೀನ್ಸ್ ಲೆಂಡಿನಲ್ಲಿವೆ. ನ್ಯೂ ಸೌತ್ವೇಲ್ಸ್ ನಲ್ಲಿ ಗ್ರೇಟ್ ಡಿವೈಡಿಂಗ್ ಶ್ರೇಣಿಯ ಪಶ್ಚಿಮಕ್ಕೆ ಅನೇಕ ಕಡೆಗಳಲ್ಲಿ ಚಿನ್ನ ದೊರೆಯುತ್ತದೆ. ವಿಕ್ಟೋರಿಯದಲ್ಲಿ ಬೆಲ್ಲಾರಟ್ ಮತ್ತು ಬೆಂಡಿಗೊಗಳಲ್ಲಿ ಚಿನ್ನದ ಗಣಿಗಳಿವೆ. ಟಾಸ್ಮೇನಿಯದಲ್ಲಿ ತವರ, ತಾಮ್ರ ಮತ್ತು ಸತುವಿನ ಗಣಿಗಳಿವೆ. ಆಸ್ಟ್ರೇಲಿಯದಲ್ಲಿ ದೊರೆಯುವ ಖನಿಜಗಳು-ಕಲ್ಲಿದ್ದಲು (ಕಪ್ಪು ಮತ್ತು ಬೂದು) ಕಬ್ಬಿಣದ ಅದಿರು, ಸೀಸ, ಸತು, ತಾಮ್ರ, ಟೈಟೇನಿಯಂ, ತವರ, ಟಂಗ್ಸ್ಟನ್, ಚಿನ್ನ ಮತ್ತು ಬೆಳ್ಳಿ.

ಸಂಚಾರ ಮಾರ್ಗಗಳು

[ಬದಲಾಯಿಸಿ]

ಸಂಚಾರ ಮಾರ್ಗಗಳ ಹಂಚಿಕೆ ಖಂಡದ ಆಗ್ನೇಯ, ನೈಋತ್ಯ ಮತ್ತು ಈಶಾನ್ಯ ದಿಕ್ಕಿನಲ್ಲಿ ಒತ್ತಾಗಿರುವುದನ್ನು ಕಾಣಬಹುದು. ವಿಶಾಲ ಮರುಭೂಮಿ ಪ್ರದೇಶಗಳಲ್ಲಿ ಸಾಗಾಣಿಕೆ ಬಹಳ ಕಡಿಮೆ. ವಾಯುಸಂಚಾರ ಮಾತ್ರ ಹೆಚ್ಚಾಗಿದೆ. ಜನವಸತಿಗಳಿರುವ ವಿಭಾಗಗಳಲ್ಲಿ ಉತ್ತಮವಾದ ರಸ್ತೆ ಮತ್ತು ರೈಲು ಮಾರ್ಗಗಳ ವ್ಯವಸ್ಥೆಯಿದೆ. ದೇಶದ ಬಹಳಷ್ಟು ಸರಕು ಮತ್ತು ಪ್ರಯಾಣಿಕರನ್ನು ಸಾಗಿಸುತ್ತವೆ. ಅಷ್ಟೇ ಮುಖ್ಯವಾಗಿ ಬಂದರುಗಳ ಸೌಲಭ್ಯವೂ ಉಂಟು. ವ್ಯಾಪಾರ ಮತ್ತು ವಾಣಿಜ್ಯ ಈ ಕೆಳಗೆ ಕಂಡ ವಸ್ತುಗಳನ್ನು ಒಳಗೊಂಡಿದೆ.

ರಫ್ತು ಸರಕುಗಳು

[ಬದಲಾಯಿಸಿ]

ಹಾಲಿನ ವಸ್ತುಗಳು ಮುಖ್ಯವಾಗಿ ಬೆಣ್ಣೆ, ದನಕರುಗಳ ಮಾಂಸ, ಗೋದಿ, ಲೋಹ ಮತ್ತು ಅಲೋಹ ಕೈಗಾರಿಕಾ ವಸ್ತುಗಳು ಮತ್ತು ಕಚ್ಚಾ ಉಣ್ಣೆ. ಆಮದು ವಸ್ತುಗಳು ಮುಖ್ಯವಾಗಿ ವಿಮಾನಗಳು, ಹಡಗು ಮತ್ತು ರೈಲ್ವೇ ಉಪಕರಣಗಳು, ಮೋಟರು ವಾಹನಗಳು, ಗ್ರಾಮೀಣ ಕೈಗಾರಿಕಾ ಉಪಕರಣಗಳು ಮತ್ತು ಕಟ್ಟಡ ನಿರ್ಮಾಣ ಉಪಕರಣಗಳು. ಬ್ರಿಟನ್ ಆಸ್ಟ್ರೇಲಿಯದ ಮುಖ್ಯ ಗಿರಾಕಿ. ಅದು ಆಸ್ಟ್ರೇಲಿಯದ ಶೇ. 17 ಭಾಗ ರಫ್ತನ್ನು ಪಡೆದು, ಶೇ. 26 ಭಾಗ ಆಮದನ್ನು ಒದಗಿಸುತ್ತದೆ. ಸಾಮ್ರಾಜ್ಯಾಧಿಮಾನ ಆಯಾತನಿರ್ಯಾತ ಶುಲ್ಕ ಕ್ರಮದ ಆಶ್ರಯದಲ್ಲಿ ಆಸ್ಟ್ರೇಲಿಯ ಬ್ರಿಟನ್ನಿನ ರಫ್ತುಮಾಡುವ ವಸ್ತುಗಳು ಆಹಾರ ಪದಾರ್ಥ, ಉಣ್ಣೆ, ಖನಿಜಗಳನ್ನು ಒಳಗೊಂಡಿವೆ. ಲೋಹಗಳಿಗೆ ಬದಲಾಗಿ ಯಂತ್ರಗಳು ಮತ್ತು ಮರಮುಟ್ಟುಗಳನ್ನು ಆಮದು ಮಾಡಿಕೊಳ್ಳಲಾಗುತ್ತದೆ. ಅಮೆರಿಕ ಸಂಯುಕ್ತ ಸಂಸ್ಥಾನ, ಕೆನಡ, ಜಪಾನ್ ಮತ್ತು ಪಶ್ಚಿಮ ಜರ್ಮನಿಗಳೊಡನೆ ಆಸ್ಟ್ರೇಲಿಯದ ವ್ಯಾಪಾರ ಇತ್ತೀಚೆಗೆ ಹೆಚ್ಚಾಗುತ್ತಿದೆ. ಯುರೋಪ್ ವಾಣಿಜ್ಯ ಮಾರುಕಟ್ಟೆ ಆಸ್ಟ್ರೇಲಿಯವನ್ನು ದೂರವಿರಿಸಿದರೂ ಕಾಮನ್ವೆಲ್ತ್ ಸಂಬಂಧದಿಂದ ಅದರಲ್ಲೂ ಮುಖ್ಯವಾಗಿ ಸಾಮ್ರಾಜ್ಯಾಧಿಮಾನ ಆಯಾತನಿರ್ಯಾತ ಶುಲ್ಕಕ್ರಮದ ಆಶ್ರಯದಲ್ಲಿ ಹೆಚ್ಚಿನ ಅನುಕೂಲಗಳನ್ನು ಪಡೆದಿದೆ.

ಜನಸಂಖ್ಯೆ ಮತ್ತು ಜನವಸತಿ

[ಬದಲಾಯಿಸಿ]

ಆಸ್ಟ್ರೇಲಿಯವನ್ನು ಮೊದಲು ಆಕ್ರಮಿಸಿದ ಜನರು 12,000 ವರ್ಷಗಳ ಹಿಂದೆ ವಲಸೆ ಬಂದ ನೀಗ್ರೊ ಮೂಲನಿವಾಸಿಗಳು. ಜನ ಸಂಖ್ಯೆ 40,081 (1966). ಇದು ಆಸ್ಟ್ರೇಲಿಯದ ಜನಸಂಖ್ಯೆಯಲ್ಲಿ ಶೇ. 1 ಭಾಗಕ್ಕಿಂತಲೂ ಕಡಿಮೆ. ಯುರೋಪಿನ ನೆಲೆಸಿಗರು ಇವರ ಸಂಖ್ಯೆಯನ್ನು ಕಡಿಮೆ ಮಾಡಿದರು. ಕ್ಯಾಪ್ಟನ್ ಕುಕ್ 1688ರಲ್ಲಿ ಆಸ್ಟ್ರೇಲಿಯಕ್ಕೆ ಸಮುದ್ರಯಾನ ಮಾಡಿದಾಗಿನಿಂದ ಇಲ್ಲಿ ಯುರೋಪಿಯನ್ನರ ವಸತಿ ಪ್ರಾರಂಭವಾಯಿತು. 2001ರ ಜನಗಣತಿ ಪ್ರಕಾರ ಶೇ. 58 ರಷ್ಟು ಜನರು ದೊಡ್ಡನಗರಗಳಲ್ಲಿ ಶೇ. 85 ರಷ್ಟು ಜನರು ಸಣ್ಣ ನಗರಗಳಲ್ಲೂ ಶೇ. 15 ಹಳ್ಳಿಗಳಲ್ಲೂ ಇದ್ದಾರೆ. ಶೇ. 0.24 ವಲಸೆ ಹೋಗುವ ಜನಸಂಖ್ಯೆಯೂ ಇದೆ. ಜನಸಾಂದ್ರತೆ ಚ.ಕಿಮೀಗೆ 3 ಜನರಿಗಿಂತಲೂ ಕಡಿಮೆ. 2009ರ ಜನಗಣತಿಯಂತೆ ಆಸ್ಟ್ರೇಲಿಯದ ದೊಡ್ಡ ನಗರಗಳಲ್ಲಿ ಮುಖ್ಯವಾದುವು: ಕ್ಯಾನ್ಬೆರ (403,118). ಸಿಡ್ನಿ (4,504,469), ಮೆಲ್ಬರ್ನ್ (3,995,537), ಬ್ರಿಸ್ಬನ್ (2,004,262), ಅಡಿಲೇಡ್ (1,187,466), ಪರ್ತ್ (1,658,992), ನ್ಯೂಕ್ಯಾಸಲ್ (540,796), ವೊಲೋನ್ಗಾಂಗ್ (2,88,984), ಹೋಬರ್ಟ್ (2,12,019), ಗೀಲಾಂಗ್ (1,75,803). ಮೊಟ್ಟಮೊದಲ ಯುರೋಪಿನ ಸಂಪರ್ಕ 1606ರಲ್ಲಿ ಆಯಿತು. ಡೈಫ್ಕೆನ್ ಎಂಬ ಡಚ್ ಹಡಗಿನಲ್ಲಿನ ಜೇನ್ ಎಂಬಾತ 1616ರಲ್ಲಿ ಪಶ್ಚಿಮತೀರದಲ್ಲಿ ಕಾಲಿರಿಸಿದ. ಏಬಲ್ ಟಾಸ್ಮನ್ ಟಾಸ್ಮೇನಿಯ ಮತ್ತು ನ್ಯೂಜಿ಼ಲೆಂಡ್ಗಳನ್ನು 1642ರಲ್ಲಿ ತಲಪಿದ. 1688ರಲ್ಲಿ ಪಶ್ಚಿಮ ತೀರದಲ್ಲಿ ಡ್ಯಾಂಪಿಯರ್ ಎಂಬ ಬ್ರಿಟಿಷ್ ಪ್ರಜೆ ಇಳಿದ. 1770ರಲ್ಲಿ ಜೇಮ್ಸ್ ಕುಕ್ ಪೂರ್ವತೀರವನ್ನು ಮೋಜಣಿಮಾಡಿ, ಬ್ರಿಟನ್ನಿನ ಹೆಸರಿನಲ್ಲಿ ಆ ಪ್ರದೇಶವನ್ನು ಸ್ವಾಧೀನಪಡಿಸಿಕೊಂಡ. 19ನೆಯ ಶತಮಾನದ ಪ್ರಾರಂಭದಲ್ಲಿ ಮ್ಯಾಥ್ಯೂ ಫ್ರಿಂಡರ್ಸ್ ಎಂಬ ಆಂಗ್ಲ ನಾವಿಕ ಆಸ್ಟ್ರೇಲಿಯ ಎಂಬ ಹೆಸರನ್ನು ಮೊದಲು ಉಪಯೋಗಿಸಿದ. ಅದುವರೆವಿಗೂ ಈ ಖಂಡವನ್ನು ನ್ಯೂ ಹಾಲೆಂಡ್ ಎಂದೂ ನ್ಯೂ ಸೌತ್ವೇಲ್ಸ್ ಅಥವಾ ಬಾಟನಿ ಬೇ ಎಂದೂ ಕರೆಯಲಾಗುತ್ತಿತ್ತು. 1788ರಲ್ಲಿ ಮೊಟ್ಟಮೊದಲು ಯುರೋಪಿಯನ್ನರು ನೆಲೆಸಲಾರಂಭಿಸಿದರು. ಕ್ಯಾಪ್ಟನ್ ಆರ್ಥರ್ ಫಿಲಿಪ್ ಎಂಬಾತ 206 ಸೈನಿಕರು ಮತ್ತು 759 ಕೈದಿಗಳೊಂದಿಗೆ ಸಿಡ್ನಿ ಬಳಿಯಲ್ಲಿ ಅದೇ ವರ್ಷದ ಜನವರಿ 26ರಂದು ಇಳಿದ. ಇದರ ನೆನಪಿಗಾಗಿ ಆ ದಿನವನ್ನು ಆಸ್ಟ್ರೇಲಿಯ ದಿನಾಚರಣೆ ಎಂಬುದಾಗಿ ಆಚರಿಸುತ್ತಾರೆ. 1813ರಲ್ಲಿ ಬ್ಲ್ಯಾಕ್ಲೆಂಡ್, ವೆಂಟ್ವರ್ತ್ ಮತ್ತು ಲಾಸನ್ರವರು ಬ್ಲೂಮೌಂಟನ್ಸ್ ದಾಟಿ, ಅದರಾಚೆ ಇರುವ ಮೈದಾನ ಪ್ರದೇಶಗಳನ್ನು ತಲಪಿದರು. ಎಡ್ವರ್ಡ್ ಹಾರ್ಗ್ರೇವ್ಸ್ ನಿಗೆ 1851ರಲ್ಲಿ ಬ್ಯಾಥಸ್ರ್ಟ್ ನಲ್ಲಿ ಚಿನ್ನ ಕಂಡುಬಂತು; ಅನಂತರ ಬೆಲ್ಲಾರಟ್, ಬೆಂಡಿಗೂ ಮುಂತಾದ ಇತರ ಕಡೆಗಳಲ್ಲೂ ದೊರಕಿತು. ಇದು ತಿಳಿದ ಕೂಡಲೆ ಒಂದೇ ದಶಕದಲ್ಲಿ ಜನಸಂಖ್ಯೆಯನ್ನು ಮುಮ್ಮಡಿಗೊಳಿಸುವಷ್ಟು ಹೊಸ ವಲಸೆಗಾರರು ಬಂದರು. ಇವರಲ್ಲಿ ಯೆಹೂದ್ಯರು ಮತ್ತು ಯುರೋಪಿಯನ್ನರು ಖಂಡದ ತುಂಬ ಹರಡಿದರು. ನಿಗದಿಯಾದಷ್ಟು ಮಾತ್ರ ನೆಲೆಸಬೇಕೆಂಬ ನಿಯಮದಂತೆ ಆಫ್ರಿಕನ್ನರು ಮತ್ತು ಏಷ್ಯನ್ನರು ಖಂಡದೊಳಗಡೆ ನೆಲೆಸುವುದನ್ನು ನಿಯಂತ್ರಿಸಲು ವಲಸೆ ಕಾನೂನುಗಳನ್ನು ಮಾಡಿದ್ದರೂ ಜಪಾನೀಯರ ನೆಲೆಸುವಿಕೆ ಹೆಚ್ಚಾಗುತ್ತಿದೆ. ಇದು (1970ರ ಅಂದಾಜಿನಂತೆ) 120 ಲಕ್ಷ ಜನಸಂಖ್ಯೆಗೆ ಕಾರಣವಾಗಿದೆ. ಖಂಡದ ವಿಶಾಲತೆಗೆ ಇದು ಕಡಿಮೆ ಎನಿಸಿದರೂ ಸರ್ಕಾರಕ್ಕೆ ಇದೊಂದು ಸಮಸ್ಯೆಯಾಗಿದೆ. ಆರ್ಥಿಕವಾಗಿ 1939ರವರೆಗೂ ಆಸ್ಟ್ರೇಲಿಯ ಅದರ ಕುರಿಗಳಿಗೆ ಸಂಬಂಧಿಸಿದ ಕೈಗಾರಿಕೆಗಳಿಗೆ ಪ್ರಸಿದ್ಧವಾಗಿತ್ತು. ಆದರೆ 1951-61ರ ಮಧ್ಯೆ 20ಲಕ್ಷ ವಲಸೆಗಾರರು ತಮ್ಮ ಕುಶಲ ಕೈಗಾರಿಕಾ ಕಾರ್ಯದಕ್ಷತೆಯಿಂದ ನಗರ ಕೈಗಾರಿಕೆಗಳನ್ನು ಅತಿ ಶೀಘ್ರವಾಗಿ ಅಭಿವೃದ್ಧಿಪಡಿಸಿದರು. 1966ರ ಜೂನ್ ಹೊತ್ತಿಗೆ ಜನಸಂಖ್ಯೆಯ ಶೇ. 0.5 ಗಣಿಗಾರಿಕೆ ಮತ್ತು ಕಲ್ಲುಗಣಿಗಳಲ್ಲೂ ಶೇ. 13 ವಸ್ತುಗಳ ತಯಾರಿಕೆಯಲ್ಲೂ ಶೇ. 19 ಸರ್ಕಾರಿ ಕೆಲಸಗಳಲ್ಲೂ ಶೇ. 4 ಕಟ್ಟಡಗಳು ಮತ್ತದರ ನಿರ್ಮಾಣದಲ್ಲೂ ಶೇ. 5 ಸಾಗಾಣಿಕೆ. ವಸ್ತುಗಳ ಸಂಗ್ರಹಣೆ ಮತ್ತು ಸಾರಿಗೆ ಸಂಪರ್ಕಗಳಲ್ಲೂ ಶೇ. 10 ವಾಣಿಜ್ಯದಲ್ಲೂ ಉಳಿದವರು ಆರ್ಥಿಕವ್ಯವಸ್ಥೆ, ಸಾರ್ವಜನಿಕ ಚಟುವಟಿಕೆಗಳು, ಸಾಮೂಹಿಕ ಹಾಗೂ ವ್ಯಾಪಾರ ಸೇವೆಗಳು, ಮನರಂಜನೆ, ಹೊಟೇಲ್ ಮತ್ತು ವ್ಯಕ್ತಿಗತ ಸೇವೆಗಳಲ್ಲೂ ನಿರತರಾಗಿದ್ದರು. ಆಸ್ಟ್ರೇಲಿಯದಲ್ಲಿ ಸು. 50 ವಿಶ್ವವಿದ್ಯಾಲಯಗಳಿವೆ. ಇವುಗಳಲ್ಲಿ ಅತ್ಯಂತ ದೊಡ್ಡದು ಸಿಡ್ನಿ ವಿಶ್ವವಿದ್ಯಾಲಯ.

ಭೂ ಇತಿಹಾಸ

[ಬದಲಾಯಿಸಿ]

ಈ ಖಂಡದ ಬಹುಭಾಗ ಆರ್ಷೇಯ ಮತ್ತು ಕೇಂಬ್ರಿಯನ್ ಯುಗಗಳ ಶಿಲೆಗಳಿಂದ ಆವೃತವಾಗಿದೆ. ಈ ಶಿಲಾಸಮುದಾಯ ಸಿಡ್ನಿ ಪಶ್ಚಿಮ ಮತ್ತು ದಕ್ಷಿಣ ಆಸ್ಟ್ರೇಲಿಯಗಳಲ್ಲೂ ಉತ್ತರ ಪ್ರಾಂತ್ಯಗಳು, ಸೌತ್ವೇಲ್ಸ್ ನ ಬ್ರೋಕನ್ಹಿಲ್ ಮತ್ತು ಪಶ್ಚಿಮ ಟಾಸ್ಮೇನಿಯಗಳಲ್ಲೂ ನೋಡಬಹುದು. ಖಂಡದಲ್ಲೇ ಅತಿ ವಿಸ್ತಾರವಾದ ಪ್ರಸ್ಥಭೂಮಿಯಲ್ಲೂ ಈ ಶಿಲೆಗಳನ್ನು ಕಾಣಬಹುದು. ಈ ಭಾಗವನ್ನು ಷೀಲ್ಡ್ ಅಥವಾ ಪೀಠಭೂಮಿ ಎಂದು ಕರೆಯಲಾಗಿದೆ. ಇದರ ಸುತ್ತಮುತ್ತ ಇದಕ್ಕಿಂತಲೂ ವಯಸ್ಸಿನಲ್ಲಿ ಕಿರಿಯ ಶಿಲಾಪ್ರಸ್ತರಗಳೂ ಹಬ್ಬಿವೆ. ಇಡೀ ಖಂಡದ ಭೂಚರಿತ್ರೆಯಲ್ಲಿ ನ್ಯೂನತೆ ಎಂದರೆ ಟರ್ಷಿಯರಿ ಕಲ್ಪದ ಶಿಲಾಶ್ರೇಣಿಗಳಿಂದಾದ ಪರ್ವತಗಳಿಲ್ಲದಿರುವುದು, ಗತಕಾಲದಲ್ಲಿ ಪರ್ವತಗಳು ಖಂಡದೊಂದಿಗಿದ್ದು ಕ್ರಮೇಣ ಬೇರ್ಪಟ್ಟು ಈಗಿನ ನ್ಯೂಗಿನಿ ಪ್ರಾಂತ್ಯದಲ್ಲಿ ಕಂಡುಬರುತ್ತವೆ. ಬಹುಶಃ ಪೂರ್ವದಿಕ್ಕಿಗೆ ನ್ಯೂಜಿಲೆಂಡ್ಗೂ ಹಬ್ಬಿದ್ದು ಕೈನೋಜೋಯಿಕ್ ಯುಗದಲ್ಲಿ ಇವೆರಡರ ಮಧ್ಯೆ ಭೂಭಾಗದಿಂದ ಈಗಿನ ಟಾಸ್ಮೇನಿಯ ಸಮುದ್ರ ಉಂಟಾಯಿತೆಂದು ಭೂವಿಜ್ಞಾನಿಗಳ ಅಭಿಪ್ರಾಯ. ಖಂಡದ ವಿವಿಧ ಭೂಕಾಲಯುಗಗಳ ಶಿಲಾಸಮೂಹಗಳನ್ನು ಸೂಕ್ಷ್ಮವಾಗಿ ಪರಿಶೀಲಿಸೋಣ.

ಪ್ರಿ-ಕೇಂಬ್ರಿಯನ್ ಶಿಲಾಸಮೂಹ: ಈ ಸಮೂಹದಲ್ಲಿ ಭೂಚರಿತ್ರೆಯಲ್ಲಿ ಅತಿ ಪುರಾತನವೆನಿಸಿದ ಆರ್ಷೇಯ ಕಲ್ಪದ ಕಾಲ್ಗೂರ್ಲಿ ಮತ್ತು ವಾರವೂಸ ಶಿಲಾಯುಗಗಳನ್ನು ಪರಿಗಣಿಸಬಹುದು. ಸಮುದಾಯದಲ್ಲಿ ವಿವಿಧ ಘಟ್ಟದ ರೂಪಾಂತರ ಹೊಂದಿರುವ (ಪಿಲ್ಲೊ) ದಿಂಬು ಲಾವಾ, ಟಫ್ ಮತ್ತು ಗ್ರೀನ್ಸ್ಟೋನ್ಗಳಿವೆ. ಖಂಡದ ಉತ್ತಮ ದರ್ಜೆಯ ಚಿನ್ನದ ಗಣಿಗಳಿಗೆ ಇವೇ ಆಗರ. ಕೆಲವು ಕಡೆ ಈ ಸಮುದಾಯದ ಇಕ್ಕೆಲಗಳಲ್ಲಿ ಇವುಗಳಿಗಿಂತ ಕಿರಿಯವೆನಿಸಿದ ಇಲ್ಗಾರ್ನ ಶ್ರೇಣಿಗೆ ರೂಪಾಂತರ ಜಲಜಶಿಲಾಸ್ತರಗಳಿವೆ. ಇವನ್ನೆಲ್ಲ ಹಿರಿಯ ಮತ್ತು ಕಿರಿಯ ಶಿಲಾಕೃತಿಗಳು ಭೇದಿಸಿಕೊಂಡು ಹೊರಚಾಚಿವೆ. ಶಿಲೆಗಳಲ್ಲಿ ಅಡಕವಾಗಿರುವ ಖನಿಜ ನಿಕ್ಷೇಪಗಳ ಉತ್ಪತ್ತಿಗೆ ಈ ಗ್ರ್ಯಾನೈಟ್ಗಳೇ ಕಾರಣವೆಂದು ಊಹಿಸಲಾಗಿದೆ. ಚಿನ್ನವೇ ಅಲ್ಲದೆ ಪಶ್ಚಿಮ ಮತ್ತು ದಕ್ಷಿಣ ಆಸ್ಟ್ರೇಲಿಯಗಳಲ್ಲಿ ಉತ್ತಮವಾದ ಅದಿರಿನ ನಿಕ್ಷೇಪಗಳೂ ಇವೆ. ಪಶ್ಚಿಮ ಕ್ವೀನ್ಸ್ ಲೆಂಡ್ನಲ್ಲಿ ಸ್ತರ ರಚನೆಯುಳ್ಳ ಸೀಸ ಮತ್ತು ತಾಮ್ರದ ಅದಿರಿನ ನಿಕ್ಷೇಪಗಳಿವೆ. ನ್ಯೂಸೌತ್ವೇಲ್ಸ್ ನ ಬ್ರೋಕನ್ ಹಿಲ್ನ ಸೀಸ ಮತ್ತು ಸತುವಿನ ಗಣಿಗಳು ಇಡೀ ವಿಶ್ವದಲ್ಲೇ ಬಹು ಹೆಸರುವಾಸಿಯಾಗಿವೆ. ಡಾರ್ವಿನ್ ಪ್ರಾಂತ್ಯದ ಪೈನ್ಕ್ರೀಕ್ ಜಿಲ್ಲೆಯ ಅಸಂಖ್ಯಾತ ಖನಿಜ ನಿಕ್ಷೇಪಗಳನ್ನು ಗಮನದಲ್ಲಿಡಬೇಕು. ಇವು ಸಹ ಇದೇ ಯುಗದ ಪದರುಶಿಲೆ, ಸ್ಲೇಟುಗಳು ಮತ್ತು ಆ್ಯಂಫಿಬೊಲೈಟ್ಗಳಲ್ಲಿ ಅಡಕವಾಗಿವೆ. ಮಧ್ಯ ಆಸ್ಟ್ರೇಲಿಯದಲ್ಲಿ ಕಾಗೆಬಂಗಾರ, ಅಭ್ರಕ, ಬೆರಿಲ್ ನಿಕ್ಷೇಪಗಳು ಪೆಗ್ಮಟೈಟ್ ಶಿಲಾ ಸಮುದಾಯದಲ್ಲಿ ದೊರೆಯುತ್ತವೆ. ಕಿರಿಯ ಆದಿಜೀವಿ ಕಲ್ಪ (ಪ್ರೊಟಿರೋಜೋಯಿರೆ) ಭೂಕಾಲದ ಕಂಗ್ಲಾಮರೇಟ್, ಜೇಡುಶಿಲೆ ಮತ್ತು ಡಾಲೊಮೈಟ್ ಸ್ತರಗಳು ಕೇಂಬ್ರಿಯನ್ ಶಿಲಾಸ್ತರಗಳಿಗೆ ಎಡೆಮಾಡಿಕೊಟ್ಟಿವೆ.


ಕೇಂಬ್ರಿಯನ್ ಯುಗ: ಈ ಯುಗದ ಶಿಲಾಸ್ತರಗಳು ವಿಶಾಲವಾಗಿ ಹರಡಿವೆ. ಇವುಗಳಲ್ಲಿ ಮುಖ್ಯವಾದುವು ಸುಣ್ಣಶಿಲೆ ಮತ್ತು ಜೇಡುಶಿಲೆ. ಇವುಗಳಲ್ಲಿ ಉತ್ತಮವಾದ ಟ್ರೈಲೊಬೈಟ್ನ ಜೀವಾವಶೇಷಗಳಿವೆ. ಮಧ್ಯ ಆಸ್ಟ್ರೇಲಿಯದ ಬಾಕಿರ್ಲ್ ಭೂಮಿ, ಕಿಂಬರ್ಲಿ ಜಿಲ್ಲೆ, ಮ್ಯಾಕ್ಡೊನಾಲ್ಡ್ ಪರ್ವತಶ್ರೇಣಿ-ಈ ಪ್ರದೇಶದಲ್ಲಿ ಕೇಂಬ್ರಿಯನ್ ಶಿಲಾಸ್ತರಗಳನ್ನು ನೋಡಬಹುದು. ಪಶ್ಚಿಮ ಆಸ್ಟ್ರೇಲಿಯದ ಆಂಟ್ರಿಂ ಪ್ರಸ್ಥಭೂಮಿ, ವಿಕ್ಟೋರಿಯ ಮತ್ತು ಟಾಸ್ಮೇನಿಯ ಪ್ರಾಂತ್ಯದ ಕೆಳ ಕೇಂಬ್ರಿಯನ್ ಯುಗದ ಬೆಸಾಲ್ಟ್ ಲಾವಾ ಸ್ತರಗಳಿವೆ. ಅದರಲ್ಲೂ ವಿಕ್ಟೋರಿಯ ಪ್ರಾಂತ್ಯದ ಈ ಶಿಲಾ ಸಮುದಾಯ ಸಹಸ್ರಾರು ಮೀಗಳಷ್ಟು ಮಂದವಾಗಿದ್ದು ಸಮುದ್ರಾಂತರ್ಗತ ಲಾವಾಗಳು, ಟಫ್ ಮತ್ತು ಅಗ್ನಿಶಿಲಾಛಿದ್ರಗಳಿಂದ ಹೀತ್ಕೋಟ್ ಡಯಬೇಸ್ ಶಿಲಾಸಮೂಹವೆನಿಸಿದೆ. ಇವುಗಳ ಮೇಲೆ ಮಧ್ಯ ಕೇಂಬ್ರಿಯನ್ ಯುಗದ ಜೀವಾವಶೇಷಗಳನ್ನು ಹೊಂದಿದ ಬೇಸಿಕ್ ಟಫ್ಗಳು, ಜೇಡುಶಿಲಾಸ್ತರಗಳು ಮತ್ತು ಚೆರ್ಟ್ ಶಿಲೆಗಳೂ ಮೇಲಿನ ಕೇಂಬ್ರಿಯನ್ ಯುಗದ ಗೋಲ್ಡೀ ಚೆರ್ಟ್ಶಿಲೆಗಳೂ ಇವೆ. ಕ್ರಮೇಣ ಇವು ಕೆಳ ಆರ್ಡೋವಿಷಿಯನ್ ಸ್ತರಗಳಿಗೆ ಅನುವು ಮಾಡಿಕೊಟ್ಟಿವೆ. ಅಡಿಲೇಡ್ ಮಹಾ ಅಭಿನತಿಗೆ (ಜಿಯೊಸಿಂಕ್ಲೈನ್) ಸಂಬಂಧಿಸಿದ ಸುಣ್ಣಶಿಲೆ ಮತ್ತು ಜೇಡುಶಿಲಾಸ್ತರಗಳಲ್ಲಿ ರೆಡ್ಲಿಕಿಯ ಪ್ರೊಟೊಲೆನಸ್ ಮತ್ತು ಇತರ ಬ್ರಾಕಿಯೋಪಾಡ್ಗಳ ಚಿಪ್ಪುಗಳಿವೆ.

ಆರ್ಡೊವೀಸಿಯನ್ ಯುಗ: ಇದರ ಶಿಲಾಸ್ತರಗಳು ಮುಖ್ಯವಾಗಿ ವಿಕ್ಟೋರಿಯ ಪ್ರಾಂತ್ಯ, ಟಾಸ್ಮೇನಿಯ ಮತ್ತು ಮಧ್ಯ ಆಸ್ಟ್ರೇಲಿಯಗಳಲ್ಲಿ ಪರಸ್ಪರ ವಿರುದ್ಧ ವರ್ಗದ ಶಿಲಾಸಮುದಾಯಗಳಲ್ಲಿ ಕಂಡುಬಂದಿವೆ. ವಿಕ್ಟೋರಿಯ ಪ್ರಾಂತ್ಯದಲ್ಲಿ ಗ್ರಾಪ್ಟೊಲೈಟ್ ಜೀವಾವಶೇಷಗಳಿಂದ ಕೂಡಿದ ಸ್ತರಗಳೂ ಟಾಸ್ಮೇನಿಯ ಮತ್ತು ಮಧ್ಯ ಆಸ್ಟ್ರೇಲಿಯಗಳಲ್ಲಿ ಬ್ರಾಕಿಯೋಪೊಡ ಮುಂತಾದ ಸಮುದ್ರಜೀವಿಗಳ ಚಿಪ್ಪುಗಳಿಂದ ಕೂಡಿದ ಶಿಲಾಸ್ತರಗಳೂ ಇವೆ. ಸುಣ್ಣಶಿಲೆಯಿಂದ ಕೂಡಿದ ಮಧ್ಯವರ್ತಿ ಶಿಲಾಸಮುದಾಯದ ಸ್ತರಗಳು ನ್ಯೂ ಸೌತ್ವೇಲ್ಸ್ ನ ಆರೆಂಜ್ಜಿಲ್ಲೆ ಮತ್ತು ಪಶ್ಚಿಮ ಆಸ್ಟ್ರೇಲಿಯದ ಕಿಂಬರ್ಲಿಯಲ್ಲಿ ಕಂಡುಬಂದಿವೆ. ವಿಕ್ಟೋರಿಯ ಪ್ರಾಂತ್ಯದಲ್ಲಿ ಗ್ರಾಪ್ಟೋಲೈಟ್ ಜೀವಾವಶೇಷಗಳನ್ನು ಹೊಂದಿರುವ ಸ್ಲೇಟುಗಳೂ ಮತ್ತು ಇವುಗಳೊಡನೆ ಮಿಳಿತವಾಗಿರುವ ಮರಳು ಶಿಲಾಸ್ತರಗಳೂ ಬಹು ಉತ್ತಮ ರೀತಿಯಲ್ಲಿದ್ದು ಕ್ರಮೇಣ ತಮಗಿಂತ ಕಿರಿಯವಾದ ಸೈಲೂರಿಯನ್ ಸ್ತರಗಳಿಗೆ ಎಡೆಮಾಡಿ ಕೊಟ್ಟಿವೆ. ಜೀವಾವಶೇಷ ಚಿಪ್ಪುಗಳಿಂದ ಕೂಡಿದ ಈ ಯುಗದ ಜಲಜಶಿಲಾಸ್ತರಗಳು ಮಧ್ಯ ಆಸ್ಟ್ರೇಲಿಯದಲ್ಲಿ ಲ್ಯಾರಪಿಂಟೈನ್ ಸಮೂಹವೆಂದು ಪ್ರಸಿದ್ಧಿ ಪಡೆದಿವೆ. ಇವುಗಳಲ್ಲಿ ಅರ್ಥಿಡ್, ಟ್ರೈಲೊಬೈಟ್ ಮತ್ತು ಶಿರಷಾದಿಗಳ (ಕೆಫಲೊಪೊಡ)ಗಳ ಅವಶೇಷಗಳು ತುಂಬಿವೆ.

ಸೈಲೂರಿಯನ್ ಯುಗ: ಉತ್ತಮ ದರ್ಜೆಯ ಶಿಲಾಸ್ತರಗಳು ಪೂರ್ವ ಆಸ್ಟ್ರೇಲಿಯದ ಟಾಸ್ಮನ್ ಮಹಾಅಭಿನತಿಯ ಶಿಲಾಸಮುದಾಯಕ್ಕೆ ಸೀಮಿತವಾಗಿವೆ. ಸುಣ್ಣಶಿಲಾ ದಿಬ್ಬಗಳು ನ್ಯೂಸೌತ್ವೇಲ್ಸ್ ನ ಚಿಲಾಗೊ, ಕ್ವೀನ್ಸ್ ಲೆಂಡ್ ಮತ್ತು ಜೆನೊಲಾನ್ ಗುಹಾಪ್ರದೇಶಗಳಲ್ಲಿವೆ. ವಿಕ್ಟೋರಿಯ ಪ್ರಾಂತ್ಯದಲ್ಲೂ ಇದೇ ಯುಗದ ಗ್ರಾಪ್ಟೊಲೈಟ್ ಮತ್ತು ಚಿಪ್ಪುಗಳುಳ್ಳ ಜೇಡು ಮತ್ತು ಮರಳು ಶಿಲಾಸ್ತರಗಳನ್ನು ನೋಡಬಹುದು. ಮೆಲ್ಬೋರ್ನಿಯನ್ ಸ್ತರಗಳಲ್ಲಿ ಅತಿಪುರಾತನ ಭೂಸಸ್ಯ (ವ್ಯಾಸ್ಕ್ಯುಲರ್ ಲ್ಯಾಂಡ್ ಪ್ಲಾಂಟ್ಸ್) ಬಾಗೊರ್ವ್ವನಾತಿಯ ಮತ್ತು ಗ್ರಾಪ್ಟೊಲೈಟ್ ಅವಶೇಷಗಳಿವೆ

ಡಿವೋನಿಯನ್ ಯುಗ: ವಿಕ್ಟೋರಿಯ ಪ್ರಾಂತ್ಯದಲ್ಲಿ ಕೆಳ ಡಿವೋನಿಯನ್ ಸ್ತರಗಳು ಎರಿಂಜಿಯನ್ ಶ್ರೇಣಿಯಲ್ಲಿ ಬಹು ಚೆನ್ನಾಗಿ ಕಂಡುಬರುತ್ತವೆ. ಅಡಿಯಲ್ಲಿ ಪೆಂಟೆ ಶಿಲೆ (ಕಂಗ್ಲಾಮರೇಟ್), ಕ್ರಮೇಣ ಅದರ ಮೇಲೆ ಸುಣ್ಣ ಶಿಲಾಸ್ತರ, ಸಹಸ್ರಾರು ಅಡಿ ಮಂದವಿರುವ ವಾಲ್ಹಲಾ ಶ್ರೇಣಿ ಎನಿಸಿದ ಜೇಡು ಶಿಲಾಸ್ತರಗಳು ಮತ್ತು ಮರಳು ಶಿಲಾಸ್ತರಗಳಿವೆ. ಮಧ್ಯ ಡಿವೋನಿಯನ್ ಸುಣ್ಣಶಿಲಾ ದಿಬ್ಬಗಳಲ್ಲಿ ಮತ್ತು ಸುಣ್ಣಯುಕ್ತ ಜೇಡುಶಿಲಾ ಸ್ತರಗಳಲ್ಲಿ ಅಸಂಖ್ಯಾತ ಅಕಶೇರುಕಗಳ ಮತ್ತು ಮೀನುಗಳ ಅವಶೇಷಗಳಿವೆ. ಬಹುಶಃ ಈ ಯುಗದಲ್ಲೇ ಪರ್ವತ ಜನ್ಯ ಶಕ್ತಿಗಳು ಉದ್ಭವಿಸಿ ಅವುಗಳ ಪ್ರಭಾವಕ್ಕೆ ಪೂರ್ವ ಆಸ್ಟ್ರೇಲಿಯದ ಶಿಲೆಗಳೂ ಒಳಗಾದುವು. ವಿಕ್ಟೋರಿಯ ಪ್ರಾಂತ್ಯದ ಭೂಖಂಡದ ಮರಳು ಶಿಲಾಸ್ತಂಭಗಳು ಜೇಡು ಶಿಲಾಸ್ತರಗಳು ಮತ್ತು ಟಫ಼್ ಗಳಲ್ಲಿ ಸಸ್ಯಗಳ ಮತ್ತು ಮೀನುಗಳ ಅವಶೇಷಗಳಿವೆ. ಇದೇ ಭೂಕಾಲದ ನ್ಯೂ ಸೌತ್ವೇಲ್ಸ್ ನ ಲ್ಯಾಂಬಿಯನ್ ಶಿಲಾಸಮೂಹ ಸಮುದ್ರ ಆಕ್ರಮಣಕ್ಕೆ ಸಂಬಂಧಿಸಿದುದೆಂದು ಊಹಿಸಲಾಗಿದೆ. ಇದೇ ಕಾಲದಲ್ಲಿ ಅಗ್ನಿಶಿಲಾ ಚಟುವಟಿಕೆಯೂ ತೀವ್ರಗತಿಯಲ್ಲಿತ್ತು. ವಿಕ್ಟೋರಿಯ ಪ್ರಾಂತ್ಯದಲ್ಲಿ ಅಧಿಕ ಸಿಲಿಕಾಂಶ ಲಾವಾ ಸ್ತರಗಳೂ ಲ್ಯಾಂಪ್ರೊಫೈರ್ ಮತ್ತು ಡಯೊರೈಟ್ ಡೈಕ್ ಶಿಲೆಗಳೂ ಕಂಡುಬಂದಿವೆ. ಅಲ್ಲದೆ ಯುಗದ ಅಂತ್ಯದಲ್ಲಿ ಉಂಟಾದ ಈ ಬಗೆಯ ಚಟುವಟಿಕೆಗಳಿಗೆ ಸಂಬಂಧಿಸಿದ ಡೇಸೈಟ್, ರಯೊಲೈಟ್ ಮುಂತಾದ ಅಗ್ನಿಶಿಲಾ (ಲಾವಾ) ಸ್ತರಗಳನ್ನು ನೋಡಬಹುದು. ಅಲ್ಲದೆ ಗ್ರಾನೊಡಯೊರೈಟ್ ಮತ್ತು ಅಡಮಲೈಟ್ ಡೈಕುಗಳನ್ನೂ ಸ್ಟಾಕ್ಗಳನ್ನೂ ಅನೇಕ ಕಡೆ ನೋಡಬಹುದು.

ಕಾರ್ಬಾನಿಫೆರಸ್ ಯುಗ: ಈ ಯುಗದ ಸ್ತರಗಳನ್ನು ನ್ಯೂ ಸೌತ್ವೇಲ್್ಸನ ಹಂಟರ್ ಕಣಿವೆ, ವಿಕ್ಟೋರಿಯ ಮತ್ತು ದಕ್ಷಿಣ ಕ್ವೀನ್್ಸಲೆಂಡ್ ಪ್ರಾಂತ್ಯಗಳಲ್ಲಿ ಅಧ್ಯಯನ ಮಾಡಬಹುದು. ಹಂಟರ್ ಕಣಿವೆಯ ಶಿಲಾಸಮುದಾಯ ಅಷ್ಟು ಆಳವಿಲ್ಲದ ಸಮುದ್ರ ಭಾಗಗಳಲ್ಲಿ ಮತ್ತು ಸಿಹಿನೀರಿನ ಜಲಾಶಯಗಳಲ್ಲಿ ಸಂಚಿತವಾಗುವ ಜಲಜ ಶಿಲಾಸ್ತರಗಳಿಂದ ಕೂಡಿದೆ. ಈ ಸಮುದಾಯದ ಮೇಲಿನ ಕುಟಿಂಗ್ ಸ್ತರಗಳಲ್ಲಿ ಹಿಮನದಿಯ ಪೆಂಟೆಶಿಲಾಸ್ತರಗಳು ಮತ್ತು (ವಾರ್ವ್) ವಾರ್ಷಿಕಪದರು ರಚನೆಗಳೂ ಕಂಡುಬಂದಿವೆ. ಖಂಡದಲ್ಲಿ ಈ ಕಾಲದಲ್ಲಿ ತಲೆದೋರಿದ ಹಿಮಯುಗದ ಮೊತ್ತಮೊದಲಿನ ಸಾಕ್ಷ್ಯವೇ ಇದು. ಹೀಗಾಗಿ ಭೂ ಅಧ್ಯಯನದಲ್ಲಿ ಇದಕ್ಕೆ ಪ್ರಾಶಸ್ತ್ಯ ಹೆಚ್ಚಿನದು. ವಿಕ್ಟೋರಿಯ ಪ್ರಾಂತ್ಯದಲ್ಲಿನ ಕೆಳ ಕಾರ್ಬಾನಿಫೆರಸ್ ಶಿಲಾಸ್ತರಗಳಲ್ಲಿ ಮೀನುಗಳ ಅವಶೇಷಗಳು ಮತ್ತು ಅಂಗ್ಯುಲಾ ಚಿಪ್ಪುಗಳು ಅಡಗಿವೆ. ಅಲ್ಲದೆ ಶಿಲೆಗಳು ಪ್ರವಾಹಸ್ತರ (ಕರೆಂಟ್ ಬೆಡಿಂಗ್) ರಚನೆಯನ್ನು ತೋರುತ್ತವೆ. ಸಮುದ್ರಭಾಗಗಳಲ್ಲಿ ಸಂಚಿತವಾದ ಈ ಯುಗದ ಶಿಲಾಸ್ತರಗಳನ್ನು ದಕ್ಷಿಣ ಕ್ವೀನ್ಸ್ ಲೆಂಡಿನಲ್ಲಿ ಕಾಣಬಹುದು. ರಾಕ್ಹ್ಯಾಂಪ್ಟನ್ ಶಿಲಾಶ್ರೇಣಿ 1828 ಮೀ ಮಂದವಾಗಿದ್ದು, ಜೇಡುಶಿಲೆ, ಸಮುದ್ರಗತ ಟಫ್, ಊಲಿಟಿಕ್ ಸುಣ್ಣ ಶಿಲಾಸ್ತರಗಳಿಂದ ಕೂಡಿದೆ. ಈಚೆಗೆ ಈ ಯುಗದ ಶಿಲಾಸ್ತರಗಳನ್ನು ಪಶ್ಚಿಮ ಆಸ್ಟ್ರೇಲಿಯದ ಬರ್ಟ್ ಶ್ರೇಣಿಯಲ್ಲೂ ವಾಯವ್ಯ ಇಳುಕಲಿನಲ್ಲೂ ಗುರುತಿಸಲಾಗಿದೆ. ಎಲ್ಲೆಡೆಯೂ ಬ್ರಾಕಿಯೊಪಾಡ್ ಮತ್ತು ಟ್ರೈಲೊಬೈಟ್ಗಳ ಅಸಂಖ್ಯಾತ ಅವಶೇಷಗಳೂ ಲೆಪಿಡೊಡೆಂಡ್ರಾನ್ ಮತ್ತು ರೇಕಾಪ್ಟೆರಿಸ್ ಮುಂತಾದ ಪ್ರಾಚೀನ ಸಸ್ಯಗಳ ಅವಶೇಷಗಳೂ ಕಂಡುಬಂದಿವೆ.

ಪರ್ಮಿಯನ್ ಯುಗ: ಈ ಯುಗದ ಶಿಲಾಶ್ರೇಣಿಗಳು ಆರ್ಥಿಕವಾಗಿ ಬಹುಮುಖ್ಯ. ಕಾರಣ ಕಲ್ಲಿದ್ದಿಲಿನ ನಿಕ್ಷೇಪಗಳಿಗೆ ಇವೇ ತೌರು. ಇವು ನ್ಯೂ ಸೌತ್ವೇಲ್ಸ್ ಮತ್ತು ಕ್ವೀನ್ಸ್ ಲೆಂಡ್ ಪ್ರಾಂತ್ಯದಲ್ಲಿ ಬಹು ಉತ್ತಮ ರೀತಿಯಲ್ಲಿ ಕಂಡುಬಂದು ಹಿಮನದಿಗಳ ಕಾರ್ಯಾಚರಣೆಗೆ ಸಂಬಂಧಿಸಿದ ಅನೇಕ ಕುರುಹುಗಳನ್ನೂ ಹೊಂದಿವೆ. ಇವುಗಳ ಆಧಾರದ ಮೇಲೆ ಖಂಡದ ಬಹುಭಾಗ ಪದೇ ಪದೇ ದೀರ್ಘಕಾಲದವರೆಗೆ ಹಿಮದ ಹಾಳೆಗಳಿಂದ ಆವೃತವಾಗಿತ್ತೆಂದು ಊಹಿಸಲಾಗಿದೆ. ನ್ಯೂ ಸೌತ್ವೇಲ್ಸ್ ನಲ್ಲಿ ಶಿಲಾಸ್ತರಗಳು 4575 ಮೀ ಮಂದವಾಗಿದ್ದು ಭೂಯುಗದ ವಿವಿಧ ಹಂತಗಳನ್ನು ಗುರುತಿಸಬಹುದು. ಇವೇ ಕ್ವೀನ್ಸ್ ಲೆಂಡಿನಲ್ಲಿ ಬವನ್ಶ್ರೇಣಿ ಎಂಬ ಹೆಸರಿನಿಂದ 5486 ಮೀ ಮಂದವಾಗಿವೆ. ಟಾಸ್ಮೇನಿಯದಲ್ಲಿ ಈ ಯುಗದ ಸಮುದ್ರಸಂಚಿತ ಶಿಲಾಸ್ತರಗಳೂ ವಿಕ್ಟೋರಿಯ ಮತ್ತು ದಕ್ಷಿಣ ಆಸ್ಟ್ರೇಲಿಯಗಳಲ್ಲಿ ಹಿಮನದಿಯ ಶಿಲಾಸ್ತರಗಳೂ ಪಶ್ಚಿಮ ಆಸ್ಟ್ರೇಲಿಯದಲ್ಲಿ ಅಸಂಖ್ಯಾತ ಜೀವಾವಶೇಷಗಳನ್ನು ಹೊಂದಿದ ಶಿಲಾಶ್ರೇಣಿಗಳೂ ಕಂಡುಬಂದಿವೆ. ಶಿಲೆಗಳಲ್ಲಿ ಅಧಿಕ ಪ್ರಮಾಣದಲ್ಲಿ ಗ್ಲಾಸಾಪ್ಟೆರಿಸ್ ಮತ್ತು ಗಂಗಮಾಪ್ಟೆರಿಸ್ ಸಸ್ಯಾವಶೇಷಗಳು ತುಂಬಿವೆ. ಯುಗದ ಅಂತ್ಯದಲ್ಲಿ ನ್ಯೂ ಇಂಗ್ಲೆಂಡ್ ಮತ್ತು ಪೂರ್ವ ಕ್ವೀನ್ಸ್ ಲೆಂಡ್ನಲ್ಲಿ ಪರ್ವತಜನ್ಯಶಕ್ತಿಗಳು ಆವಿರ್ಭವಿಸಿ ಹೊರಚಿಪ್ಪಿನ ರಚನೆಯಲ್ಲಿ ಅಧಿಕ ಸ್ತರಭಂಗಗಳೂ ಅಲ್ಲದೆ ಸರ್ಪೆಂಟೆನೈಟ್ ಮತ್ತು ಗ್ರ್ಯಾನೈಟ್ ಶಿಲಾಕೃತಿಗಳೂ ತೂರಿಬಂದುವು.

ಟ್ರೈಯಾಸಿಕ್ ಯುಗ: ಈ ಯುಗದ ಸಮುದ್ರಸಂಚಿತ ಸ್ತರಗಳು ಖಂಡದಲ್ಲಿ ಅಪರೂಪವೆನ್ನಬಹುದು. ಪೂರ್ವಭಾಗದಲ್ಲಿ ಸರೋವರ ನಿಕ್ಷೇಪಗಳಾದ ಜೇಡು ಮತ್ತು ಮರಳು ಶಿಲಾಸ್ತರಗಳಿವೆ. ಸಿಡ್ನಿ ಜಿಲ್ಲೆ ಮತ್ತು ಬ್ಲೂಮೌಂಟನ್ ಶ್ರೇಣಿಯಲ್ಲಿ ಅಗಾಧವಾಗಿ ಹರಡಿರುವ ಹಾಕ್ಸ್ ಬರಿ ಮರಳು ಶಿಲಾಸ್ತರಗಳು ವಿಶಿಷ್ಟರೀತಿಯ ಪ್ರಸ್ಥಭೂಮಿ ಮತ್ತು ಕಡಿದಾದ ಕಣಿವೆಗಳಿಗೆ ಎಡೆಮಾಡಿಕೊಟ್ಟಿವೆ. ಬ್ರಿಸ್ಬೇನ್ ಬಳಿ ಕಂಡುಬರುವ (ವೆಲ್ಡೆಡ್ ಟಫ್) ಬೆಸೆದ ಅಗ್ನಿಶಿಲಾಛಿದ್ರ ಸ್ತರ ಎಂಬ ಅಗ್ನಿಶಿಲಾಸ್ತರಗಳಲ್ಲಿ ಆಗಿನ ಕಾಲದ ವೃಕ್ಷಗಳ ದೊಡ್ಡ ದೊಡ್ಡ ಕಾಂಡಗಳನ್ನೂ ಗುರುತಿಸಬಹುದು. ದಕ್ಷಿಣ ಆಸ್ಟ್ರೇಲಿಯ, ವಿಕ್ಟೋರಿಯ ಮತ್ತು ಟಾಸ್ಮೇನಿಯಗಳಲ್ಲಿ ಈ ಯುಗದ ಸಣ್ಣ ಸಣ್ಣ ನಿಕ್ಷೇಪಗಳಿವೆ.

ಜುರಾಸಿಕ್ ಯುಗ: ಖಂಡದ ಅನೇಕ ಕಡೆ ಸಿಹಿನೀರಿನ ಸರೋವರಗಳಿದ್ದುವು. ಸಮುದ್ರ ನಿಕ್ಷೇಪಗಳು ಕೇವಲ ಪಶ್ಚಿಮ ಪ್ರಾಂತ್ಯಕ್ಕೆ ಸೀಮಿತವಾಗಿದ್ದುವು. ಈ ಯುಗದ ನಿಕ್ಷೇಪಗಳಿಗೆ ಕ್ವೀನ್ಸ್ ಲೆಂಡ್ನ ವಲ್ಲೊನ್ ಶ್ರೇಣಿಗಳೂ ನ್ಯೂ ಸೌತ್ವೇಲ್ಸ್ ನ ಕ್ಲಾರೆನ್ಸ್ ಸಮುದಾಯವೂ ಉತ್ತಮ ಉದಾಹರಣೆಗಳು. ಇವು ಬಹುಮಟ್ಟಿಗೆ ಮರಳುಶಿಲೆ ಮತ್ತು ಜೇಡುಶಿಲಾಸ್ತರಗಳಿಂದ ಕೂಡಿದ್ದು ಅಲ್ಲಲ್ಲೇ ಕಲ್ಲಿದ್ದಿಲಿನ ಸಣ್ಣಪುಟ್ಟ ನಿಕ್ಷೇಪಗಳೂ ಇವೆ. ರಚನೆಯೂ ವಿಶಿಷ್ಟ ರೀತಿಯದಾಗಿದ್ದು ಅಲ್ಲಲ್ಲೇ ತೋಡಲಾಗಿರುವ ಆರ್ಟೀಸಿಯನ್ ಬಾವಿಗಳಲ್ಲಿ ಅಧಿಕ ಅಂತರ್ಜಲ ದೊರೆಯುತ್ತದೆ. ಪಶ್ಚಿಮ ಆಸ್ಟ್ರೇಲಿಯದ ಸಮುದ್ರ ನಿಕ್ಷೇಪಗಳಲ್ಲಿ ಅಸಂಖ್ಯಾತ ಅಮೊನೈಟ್ಗಳು ಹುದುಗಿವೆ.

ಕ್ರಿಟೇಷಿಯಸ್ ಯುಗ: ಜುರಾಸಿಕ್ ಯುಗದ ಸರೋವರಗಳಿಗೆ ಕಾರಣಭೂತವಾದ ಭೂ ಚಟುವಟಿಕೆಗಳು ಈ ಯುಗದಲ್ಲೂ ಮುಂದುವರಿದು ಖಂಡದ ಬಹುಭಾಗ ಸಮುದ್ರದಿಂದ ಆವೃತವಾಗಿತ್ತು. ಯುಗದ ಮುಖ್ಯ ಶಿಲಾಶ್ರೇಣಿಗಳು ಬಹುಮಟ್ಟಿಗೆ ಜೇಡುಶಿಲೆಯಿಂದ ಕೂಡಿದ ರೋಮ (ಆಪ್ಟಿಯನ್) ಶ್ರೇಣಿ ಮತ್ತು ಟಾಂಬೋ (ಆಲ್ಬಿಯನ್) ಶ್ರೇಣಿ. ಇವುಗಳಲ್ಲಿ ಅಸಂಖ್ಯಾತ ಅಮೊನೈಟ್ಗಳು. ಹಲವು ಲೆಮೆಲಿಬ್ರಾಂಕ್ ಚಿಪ್ಪುಗಳು, ಪೊರಾಮಿನೆಫರ, ಇಕ್ತಿಯೊಸಾರ್, ಪ್ಲೀಸಿಯೊಸಾರ್ ಮತ್ತು ಕ್ರೋನೊಸಾರ್ ಮುಂತಾದ ಸರೀಸೃಪಗಳ ಅವಶೇಷಗಳಿವೆ. ಇವುಗಳಲ್ಲಿ ಕ್ರೋನೊಸಾರ್ ಗಾತ್ರದಲ್ಲಿ ಬಹುದೊಡ್ಡದು. ಸಿಹಿನೀರಿನಲ್ಲಿ ಜಲಜ ಶಿಲಾಸ್ತರಗಳ ಶ್ರೇಣಿಯೇ ವಿನ್ಟನ್ (ಸೆನೊಮೇನಿಯನ್) ಶಿಲಾಶ್ರೇಣಿ. ಇದು ಉತ್ತಮ ಜಲವಾಹಕವೂ ಹೌದು. ಕ್ವೀನ್್ಸಲೆಂಡ್ನ ತೀರಪ್ರದೇಶದಲ್ಲಿನ ಗ್ರಹಾಂಸ್ ಕ್ರೀಕ್ ಜ್ವಾಲಾಮುಖಿ ಶಿಲೆಗಳಾದ ಟ್ರ್ಯಾಕೈಟ್ ಮತ್ತು ಅಂಡಿಸಿಟಕ್ ಟಫ್ಗಳು ಈ ಭೂಯುಗದವು. ಬುರ್ರಂ ಮತ್ತು ಸ್ಪೈಕ್ ನದೀ ಪ್ರಾಂತ್ಯದ ಕಲ್ಲಿದ್ದಿಲಿನ ನಿಕ್ಷೇಪಗಳನ್ನು ಹೆಸರಿಸಬಹುದು. ಈ ಜಾಡಿನಲ್ಲಿರುವ ಶಿಲಾಪ್ರಸ್ತರಗಳು ಮಡಿಕೆ ಬಿದ್ದಿರುವುದೇ ಅಲ್ಲದೆ ಅಲ್ಲಲ್ಲೇ ಅವುಗಳನ್ನು ಗ್ರಾನೊಡಯೊರೈಟ್, ಸಯನೈಟ್ ಮತ್ತು ಡಯೊರೈಟ್ ಮುಂತಾದ ಅಗ್ನಿಶಿಲಾರೂಪಗಳು ಭೇದಿಸಿಕೊಂಡು ಬಂದಿವೆ. ಇವು ಯುಗದ ಅಂತ್ಯಕಾಲದವೆಂದು ಭಾವಿಸಲಾಗಿದೆ. ಪಾದರಸ, ಚಿನ್ನ ಮತ್ತು ಬಿಸ್ಕತ್ ಅದಿರು ನಿಕ್ಷೇಪಗಳಿಗೂ ಇವೇ ಮೂಲ. ಆದರೆ ಪಶ್ಚಿಮ ಆಸ್ಟ್ರೇಲಿಯದ ಕ್ರಿಟೇಷಸ್ ಶಿಲೆಗಳು ಬಹುಮಟ್ಟಿಗೆ ಸಾಗರಜನಿತ. ಇವು ಹಸಿರು ಮರಳುಶಿಲೆ ಮತ್ತು ಸೀಮೆಸುಣ್ಣದ ಪ್ರಸ್ತರಗಳಿಂದ ಕೂಡಿವೆ. ವಿಲ್ಕಿನ್ಸನ್, ವರ್ಜೀನಿಯ ಮತ್ತು ವಾರ್ಬರ್ಟನ್ ಶ್ರೇಣಿಗಳಲ್ಲಿ ಈ ಶಿಲಾಸಮೂಹ 610ಮೀ ಮೀರಿ ಮಂದವಾಗಿದೆ.

ಟರ್ಷಿಯರಿ ಯುಗ: ಈ ಭೂಯುಗದ ಸಾಗರಜನಿತ ಶಿಲಾಶ್ರೇಣಿಗಳು-ವಿಕ್ಟೋರಿಯ, ದಕ್ಷಿಣ ಮತ್ತು ಪಶ್ಚಿಮ ಆಸ್ಟ್ರೇಲಿಯಗಳಲ್ಲಿ ಬಹು ಉತ್ತಮ ರೀತಿಯಲ್ಲಿ ನಿಕ್ಷೇಪವಾಗಿವೆ. ಮರೆ ಕೊಲ್ಲಿಯ ಪ್ರದೇಶದಲ್ಲಿ ಈ ಶ್ರೇಣಿಯಲ್ಲಿ ಗ್ರಿಟ್, ಜೇಡುಶಿಲೆ ಮತ್ತು ಸುಣ್ಣಶಿಲಾಸ್ತರಗಳಿವೆ. ಅಲ್ಲದೆ ಈ ಯುಗದ ವಿವಿಧ ಹಂತಗಳಾದ ಇಯೊಸೀನ್, ಆಲಿಗೋಸೀನ್, ಮಯೊಸೀನ್ ಮತ್ತು ಪ್ಲಯೊಸೀನ್ ಸ್ತರಗಳನ್ನೂ ನೋಡಲು ಸಾಧ್ಯ. ಹಲವು ಕಡೆ ಲಿಗ್ನೈಟ್ ಸಹ ದೊರೆಯುತ್ತದೆ. ದಕ್ಷಿಣ ಆಸ್ಟ್ರೇಲಿಯದ ಮೂರ್ಲ್ಯಾಂಡ್ಸ್ಇದಕ್ಕೆ ಹೆಸರುವಾಸಿ. ಯುಗದುದ್ದಕ್ಕೂ ವಿವಿಧ ಘಟ್ಟಗಳಲ್ಲಿ ಜ್ವಾಲಾಮುಖಿಗಳ ಕಾರ್ಯಾಚರಣೆ ನಡೆಯುತ್ತಿತ್ತು. ಅಗಾಧ ಪ್ರಮಾಣದಲ್ಲಿ ಬೆಸಾಲ್ಬ್, ರಯೊಲೈಟ್, ಟ್ರಾಕೈಟ್ ಮುಂತಾದ ಲಾವಾಸ್ತರಗಳು ನಿಕ್ಷೇಪಗೊಂಡುವು. ಅಲ್ಲಲ್ಲೆ ವಿವಿಧ ಪ್ರಮಾಣದ ಸರೋವರ ಮತ್ತು ಸಿಹಿನೀರಿನ ಶಿಲಾನಿಕ್ಷೇಪಗಳನ್ನೂ ಗುರುತಿಸಬಹುದು. ಪ್ಲೀಸ್ಬೊಸೀನ್ ಯುಗ: ಸಮುದ್ರ ನೀರಿನ ಮಟ್ಟದಲ್ಲಿ ಆಗಾಗ ಏರುಪೇರು ಗಳಾಗುತ್ತಿತ್ತು. ಇದಕ್ಕೆ ಸಂಬಂಧಿಸಿದ ಶಿಲಾನಿಕ್ಷೇಪಗಳನ್ನು ಗುರುತಿಸಬಹುದು. ಹಿಮನದಿಗಳು ಮಧ್ಯ ಆಸ್ಟ್ರೇಲಿಯದ ಕೋಷಿಸ್ಕೊ ಪ್ರಸ್ಥಭೂಮಿಗೆ ಸೀಮಿತವಾಗಿದ್ದುವು. ಟಾಸ್ಮೇನಿಯದಲ್ಲೂ ಇವುಗಳ ಕಾರ್ಯಾಚರಣೆಯ ಗುರುತುಗಳಿವೆ. ಒಣಹವೆಯಿದ್ದ ಪ್ರದೇಶಗಳಲ್ಲಿ ದೊಡ್ಡ ಸರೋವರಗಳಿದ್ದುವು. ಇಲ್ಲಿ ನಿಕ್ಷೇಪಗೊಂಡ ಶಿಲಾಪ್ರಸ್ತರಗಳಲ್ಲಿ (ಡಿಪ್ರೊಟೊಡಾನ್) ನೀರುಕುದುರೆ, ಥೈಲಾಕೋಲಿಯೊ (ಮೂಲಸಿಂಹ), ಪಲೆರೊಚಸ್ಟಸ್ (ದೊಡ್ಡ ಕಾಂಗರೂ) ಮತ್ತು ಮೆಗಲೇನಿಯ (ದೊಡ್ಡ ಹಲ್ಲಿ)-ಇವುಗಳ ಅವಶೇಷಗಳಿವೆ.

ಇತಿಹಾಸ ಪೂರ್ವದ ಚರಿತ್ರೆ

[ಬದಲಾಯಿಸಿ]

ಆಸ್ಟ್ರೇಲಿಯದ ಇತಿಹಾಸಯುಗ ಪ್ರಾರಂಭವಾಗುವುದು 17-18ನೆಯ ಶತಮಾನದಲ್ಲಿ. ಯುರೋಪಿಯನ್ನರ ಆಗಮನದ ಅನಂತರ. ತತ್ಪೂರ್ವ ಅಲ್ಲಿದ್ದ ಮೂಲನಿವಾಸಿಗಳೆಲ್ಲರೂ ಶಿಲಾಯುಗದ ಸ್ಥಿತಿಯಲ್ಲೇ ಇದ್ದರು. ಈ ಜನ ಆಸ್ಟ್ರಲಾಯಿಡ್ ಬುಡಕಟ್ಟಿನವರಾಗಿದ್ದು, ಮಲಯ, ಇಂಡೊನೇಷ್ಯ, ಸಿಂಹಳ ಮತ್ತು ದಕ್ಷಿಣ ಭಾರತದಲ್ಲಿ ಹರಡಿರುವ ಹಲವು ಜನಾಂಗಗಳ ಗುಂಪಿಗೆ ಸೇರುತ್ತಾರೆ. ಆಸ್ಟ್ರೇಲಿಯ ಖಂಡಕ್ಕೆ ಎಂದು ಈ ಮೂಲನಿವಾಸಿಗಳು ವಲಸೆ ಬಂದರೆಂದು ನಿಷ್ಕರ್ಷಿಸಲು ಸಾಧ್ಯವಾಗಿಲ್ಲ. ಪ್ಲಿಸ್ಟೊಸೀನ್ (ಹಿಮಯುಗ) ಕಾಲಕ್ಕೆ ಸಂಬಂಧಿಸಿದ ಆದಿಮಾನವನ ಜೀವಾವಶೇಷಗಳಾವುವೂ ಇದುವರೆಗೆ ಈ ಖಂಡದಲ್ಲಿ ದೊರೆತಿಲ್ಲ. ಈ ದ್ವೀಪಖಂಡವನ್ನು ದೋಣಿಗಳಲ್ಲಿ ಮಾತ್ರವೇ ತಲಪಲು ಸಾಧ್ಯವಾದ್ದರಿಂದ, ಇತರೆಡೆಯ ಶಿಲಾಯುಗದ ಸಂಸ್ಕೃತಿಗಳಲ್ಲಿ ದೋಣಿಯ ಉಪಯೋಗ ಪ್ರಚಲಿತವಾದ ಮೇಲೆಯೇ ಅಂದರೆ ಹಿಮಯುಗಗಳು ಕಳೆದು ಹೊಸ ಉಷ್ಣಯುಗ ಬಂದ ಅನಂತರವೇ ಜನ ಇಲ್ಲಿಗೆ ಬಂದರೆಂದು ಊಹಿಸಬಹುದು. ಆಗ್ನೇಯ ಆಸ್ಟ್ರೇಲಿಯದ ಕೀಲೋಲ್ ಎಂಬ ಸ್ಥಳದಲ್ಲಿ ದೊರಕಿದ ಆಸ್ಟ್ರಲಾಯ್ಡ್ ಗುಂಪಿಗೆ ಸೇರಿದ ಒಂದು ತಲೆಬುರುಡೆ ಆಸ್ಟ್ರೇಲಿಯದ ಆದಿವಾಸಿಗಳ ಬಗ್ಗೆ ದೊರಕುವ ಅತ್ಯಂತ ಪ್ರಾಚೀನ ಕುರುಹು. ಇದರ ಕಾಲ ಸುಮಾರು ಪ್ರ.ಶ.ಪು. 6500. ಅದೇ ಪ್ರದೇಶದಲ್ಲೇ ಮರೆನದಿಯ ದಂಡೆಯಲ್ಲಿ ಡೆವಾನ್ ಡೇನ್ಸ್ ಎಂಬ ಸ್ಥಳದಲ್ಲಿ ನಡೆಸಿದ ಉತ್ಖನನದಲ್ಲಿ ಕೆಲವು ಪ್ರಾಚೀನ ಸಂಸ್ಕೃತಿಗಳು ಗುರುತಿಸಲ್ಪಟ್ಟಿವೆ. ಇವುಗಳಲ್ಲಿ ಅತ್ಯಂತ ಹಳೆಯದು ಪ್ರ.ಶ.ಪು. 2500ಕ್ಕಿಂತಲೂ ಹಿಂದಿನ ಕಾಲದ್ದು. ಅಂದಿನಿಂದ 17-18ನೆಯ ಶತಮಾನದವರೆಗೂ ಪ್ರಚಲಿತವಾಗಿದ್ದ ಆಸ್ಟ್ರೇಲಿಯದ ಸಂಸ್ಕೃತಿಗಳ ಪರಂಪರೆಯನ್ನು ಡೆವಾನ್ ಡೌನ್ಸ್ ನಲ್ಲಿ ಕಾಣಬಹುದು. ದಕ್ಷಿಣ ಆಸ್ಟ್ರೇಲಿಯದಲ್ಲಿ ಮರೆ ನದಿಯ ದಕ್ಷಿಣದಲ್ಲೂ ನ್ಯೂ ಸೌತ್ವೇಲ್ಸ್ ಪ್ರಾಂತ್ಯದಲ್ಲೂ ಹಲವು ತ್ರಿಕೋನ ಮತ್ತು ಚತುಷ್ಕೋನಾಕೃತಿಯ ಸಣ್ಣ ಶಿಲಾಯುಧಗಳನ್ನೊಳಗೊಂಡ ಸೂಕ್ಷ್ಮ ಶಿಲಾಯುಗದ ಸಂಸ್ಕೃತಿಗಳು ಹರಡಿದ್ದುವು. ಇವುಗಳಲ್ಲಿ ಕೆಲವು ಏಷ್ಯದ ಸೂಕ್ಷ್ಮ ಶಿಲಾಯುಗದವುಗಳನ್ನು ಹೋಲುತ್ತವೆ. ಯುರೋಪಿಯನ್ನರ ನಾಗರಿಕತೆಯ ಪ್ರಭಾವದಿಂದ, ಅಲ್ಲಿಯ ಮೂಲನಿವಾಸಿಗಳ ಸಂಸ್ಕೃತಿಗಳು ಶೀಘ್ರವಾಗಿ ನಶಿಸುತ್ತಿವೆ.

ಇತಿಹಾಸ

[ಬದಲಾಯಿಸಿ]

ಖಂಡ ಪ್ರಾಚೀನವಾದರೂ ಇತಿಹಾಸ ತೀರ ಇತ್ತೀಚಿನದು. 18ನೆಯ ಶತಮಾನದ ಅಂತ್ಯಭಾಗದಲ್ಲಿ ಐರೋಪ್ಯ (ಪಾಶ್ಚಾತ್ಯ) ರಾಷ್ಟ್ರಗಳ ಗಮನ ಇತ್ತ ಹರಿದಾಗಿನಿಂದ ಈ ಖಂಡದ ಇತಿಹಾಸ ಪ್ರಾರಂಭವಾಯಿತೆಂದು ಹೇಳಬಹುದು. ಯುರೋಪಿನವರು ಇಲ್ಲಿಗೆ ವಲಸೆ ಬರುವ ಮೊದಲು ಸಮಗ್ರ ಖಂಡ ಆದಿವಾಸಿಗಳ ನೆಲೆಬೀಡಾಗಿತ್ತು. ಅವರ ಸಂಖ್ಯೆ 1788ರಲ್ಲಿ 71/2 ಲಕ್ಷವಿತ್ತು. ಸಾಮಾಜಿಕ ಸ್ಥಿತಿ ಆಚಾರಗಳೂ ಪ್ರಚಲಿತವಿದ್ದುವು. ಈ ಜನ ಯುರೋಪಿನವರ ಅಕ್ರಮಣದ ಹೊಡೆತಕ್ಕೆ ಸಿಕ್ಕಿ ಬಹಳ ಹಿಂಸೆಗೊಳಗಾದರು. ಅವರ ಸಂಖ್ಯೆ ಕಡಿಮೆಯಾಗುತ್ತ ಬಂದು, ಈಗ ಅವರು ಮಧ್ಯ ಮತ್ತು ಉತ್ತರ ಆಸ್ಟ್ರೇಲಿಯದ ಬೆಂಗಾಡು ಪ್ರದೇಶದಲ್ಲಿ ಬಹು ಕಷ್ಟದಾಯಕ ಜೀವನವನ್ನು ನಡೆಸುತ್ತಿದ್ದಾರೆ. 12ನೆಯ ಶತಮಾನದವರೆಗೆ ಯುರೋಪಿಯನ್ನರಿಗೆ ಆಸ್ಟ್ರೇಲಿಯ ಖಂಡ ಇರುವುದೆಂಬುದೇ ತಿಳಿದಿರಲಿಲ್ಲ. ಮಾರ್ಕೊಪೋಲೊ ತನ್ನ ಏಷ್ಯ ಸಂಚಾರವನ್ನು ಮುಗಿಸಿ ಯುರೋಪಿಗೆ ಹಿಂದಿರುಗಿದಾಗ ವಿಷುವದ್ರೇಖೆಯ ದಕ್ಷಿಣಕ್ಕೆ ಸಂಬಾರ ಪದಾರ್ಥಗಳು ವಿಪುಲವಾಗಿ ಬೆಳೆಯುವ ದೇಶವೊಂದಿರುವುದಾಗಿ ವರದಿ ಮಾಡಿದ್ದ. 16ನೆಯ ಶತಮಾನದಲ್ಲಿ ಈ ದೇಶವನ್ನು ಕಂಡುಹಿಡಿಯುವ ಪ್ರಯತ್ನಗಳು ನಡೆದುವು. ಇಂಗ್ಲೆಂಡ್ ಸರ್ಕಾರ ಸರ್ ಫ್ರಾನ್ಸಿಸ್ ಡ್ರೇಕ್ನನ್ನು ಈ ಉದ್ದೇಶದಿಂದ ಸಕಲ ಸನ್ನಾಹದೊಡನೆ ಕಳಿಸಿತು. ಆದರೆ, ಈ ಯಾನ ಸಫಲವಾಗಲಿಲ್ಲ. ಡಚ್ಚರು ಪೆಸಿಫಿಕ್ ಸಾಗರಕ್ಕೆ ನುರಿತ ನಾವಿಕರನ್ನು ಕಳಿಸಿದರು. 1605-06 ರಲ್ಲಿ ಡಚ್ ನಾವಿಕನೊಬ್ಬ ಕ್ವೀನ್ಸ್ ಲೆಂಡಿನ ಸಮೀಪದಲ್ಲಿ ಹಾದುಹೋದ. 1642ರಲ್ಲಿ ಟಾಸ್ಮನ್ ಟಾಸ್ಮೇನಿಯದಲ್ಲಿ ಬಂದಿಳಿದ. 1688ರಲ್ಲಿ ವಿಲಿಯಂ ಡ್ಯಾಂಪೀರ್ನೆಂಬ ಕಡಲುಗಳ್ಳ ಪಶ್ಚಿಮ ಆಸ್ಟ್ರೇಲಿಯದಲ್ಲಿ ಇಳಿದಿದ್ದನೆಂಬ ಸುದ್ದಿ ಇಂಗ್ಲೆಂಡಿನಲ್ಲಿ ಒಂದು ಹೊಸ ಉತ್ಸಾಹವನ್ನು ಹುಟ್ಟಿಸಿತು.

ಕಡೆಗೆ ಇಂಗ್ಲೆಂಡ್ ಸರ್ಕಾರದ ಆದೇಶದ ಮೇರೆ ಕ್ಯಾಪ್ಟನ್ ಜೇಮ್ಸ್ ಕುಕ್ 1769ರಲ್ಲಿ ಕೆಲ ಹಡಗುಗಳೊಡನೆ ಹೊರಟು ಪೆಸಿಫಿಕ್ ಸಾಗರದ ಅನೇಕ ನಡುಗಡ್ಡೆಗಳನ್ನು ಶೋಧಮಾಡಿ ಪೂರ್ವ ಆಸ್ಟ್ರೇಲಿಯದ ತೀರವನ್ನು ತಲಪಿದನಲ್ಲದೆ (20 ಏಪ್ರಿಲ್ 1770), ಆ ತೀರಪ್ರದೇಶವನ್ನೆಲ್ಲ ಪರಿಶೀಲಿಸಿ ಅದನ್ನು ನ್ಯೂಸೌತ್ವೇಲ್ಸ್ ಎಂದು ಕರೆದ ಮತ್ತು ಅದನ್ನು ಬ್ರಿಟಿಷ್ ಸಾಮ್ರಾಜ್ಯಕ್ಕೆ ಸೇರಿಸಿಕೊಂಡಿರುವುದಾಗಿ ಸಾರಿದ. ಆಸ್ಟ್ರೇಲಿಯದ ಪೂರ್ವಕರಾವಳಿಯನ್ನು ಪ್ರವೇಶಿಸಿದ ಪ್ರಥಮ ಐರೋಪ್ಯನೆಂಬ ಹೆಗ್ಗಳಿಕೆ ಅವನದು. ಅವನ 1772 ಮತ್ತು 1776ರ ಪ್ರವಾಸಗಳ ಫಲವಾಗಿ ಆಸ್ಟ್ರೇಲಿಯದ ಬಗೆಗೆ ವಿಶೇಷ ಜ್ಞಾನ ಇಂಗ್ಲೆಂಡಿನಲ್ಲಿ ಬೆಳೆಯಿತು.

ಕ್ವೀನ್ಸ್ ಲೆಂಡನ್ನು 1823ರಲ್ಲಿ ಜಾನ್ ಆಕ್ಸ್ಲಿ ಗುರುತಿಸಿದ ಅನಂತರ ಈಗಿನ ಬ್ರಿಸ್ಬೇನ್ ನಗರದ ಬಳಿ ಪ್ರಥಮ ಕೈದಿಗಳ ಠಾಣ್ಯ ಏರ್ಪಟ್ಟಿತು. ದೇಶದ ಒಳಭಾಗ ಅಲೆನ್ ಕನಿಂಗ್ ಹ್ಯಾಮನಿಂದ 1827ರಲ್ಲಿ ಶೋಧಿಸಲ್ಪಟ್ಟು ಮತ್ತಷ್ಟು ನೆಲೆಗಳ ಸ್ಥಾಪನೆಗೆ ಸಹಾಯವಾಯಿತು. ಕ್ರಮೇಣ ಈ ವಸಾಹತು ಬೆಳೆಯಿತು. ಜನಸಂಖ್ಯೆ 23,520 ಇದ್ದಾಗ 1859ರಲ್ಲಿ ಇದು ಸ್ವತಂತ್ರ ಸರ್ಕಾರವನ್ನು ಪಡೆಯಿತು. ಉಣ್ಣೆ ಉದ್ಯೋಗಕ್ಕೆ ಸರ್ಕಾರದ ಉತ್ತೇಜನ ದೊರಕಿತು. ಆರ್ಟೀಸಿಯನ್ ಬಾವಿಗಳನ್ನು ತೋಡುವ ಕಾರ್ಯ ಭರದಿಂದ ಸಾಗಿತು. ರೈಲ್ವೆ ಮಾರ್ಗಗಳು ನಿರ್ಮಿಸಲ್ಪಟ್ಟುವು. ಕೃಷಿ ಕಾರ್ಯ ತ್ವರಿತವಾಗಿ ಹರಡಿತು. ಇದರ ಪರಿಣಾಮವಾಗಿ ಕಬ್ಬು ಇಲ್ಲಿಯ ಮುಖ್ಯ ಬೆಳೆಯಾಯಿತು. ಶತಮಾನದ ಅಂತ್ಯದ ವೇಳೆಗೆ ಸಮಾಜವಾದ ಪ್ರಸಾರವಾಗಿ 1899ರಲ್ಲಿ ಪ್ರಥಮ ಕೂಲಿಕಾರ ಸರ್ಕಾರ ಅಧಿಕಾರಕ್ಕೆ ಬಂತು.

ಸಿಡ್ನಿಯಿಂದ ಬಂದ ವಲಸೆಗಾರರಿಂದ ಪಶ್ಚಿಮ ಆಸ್ಟ್ರೇಲಿಯದಲ್ಲಿ ಪ್ರಥಮ ನೆಲೆ 1826ರಲ್ಲಿ ಸ್ಥಾಪಿತವಾಯಿತು. ಕ್ರಮೇಣ ಇತರ ನೆಲೆಗಳೂ ಸ್ಥಾಪಿಸಲ್ಪಟ್ಟು 1829ರಲ್ಲಿ ಪ್ರತ್ಯೇಕ ಸರ್ಕಾರ ಏರ್ಪಟ್ಟಿತು. ಸ್ವಾನ್ ನದಿಯ ಮೇಲಿರುವ ಪರ್ತ್ ಮತ್ತು ಫ್ರೀಮ್ಯಾಂಟಲ್ ಪಟ್ಟಣಗಳು ಬೆಳೆದುವು. ಒಳಭಾಗದ ಪ್ರದೇಶಗಳು ಶೋಧಿಸಲ್ಪಟ್ಟವು. ಆದರೆ, ಈ ಪ್ರದೇಶ ಅಷ್ಟು ಫಲವತ್ತಾಗಿಲ್ಲದ್ದರಿಂದ ಜನಬಾಹುಳ್ಯಕ್ಕೆ ಅವಕಾಶವಾಗಲಿಲ್ಲ. ಕಾಲ್ಗೂರ್ಲಿ ಮತ್ತು ಕೂಲ್ಗಾರ್ಡಿ ಪ್ರದೇಶಗಳಲ್ಲಿ ಬಂಗಾರ ಹೇರಳವಾಗಿ ಸಿಗತೊಡಗಿದ್ದರಿಂದ ಈ ವಸಾಹತಿನ ಬೆಳೆವಣಿಗೆಯಾಯಿತು. 1890ರಲ್ಲಿ ಸ್ವತಂತ್ರ ಸರ್ಕಾರ ಪ್ರಾರಂಭವಾಯಿತು. 1900ರವರೆಗೆ ಈ ಪ್ರದೇಶ ಆರ್ಥಿಕ ದೃಷ್ಟಿಯಿಂದ ಸಾಧಾರಣ ರೀತಿಯಲ್ಲಿತ್ತು. ಅನಂತರ ಆಸ್ಟ್ರೇಲಿಯ ಒಕ್ಕೂಟಕ್ಕೆ ಸೇರಿದರೂ ಆರ್ಥಿಕ ಪರಿಸ್ಥಿತಿಯಿಂದಾಗಿ 1922ರಲ್ಲಿ ಒಕ್ಕೂಟದಿಂದ ಬೇರೆಯಾಗಲು ನಿರ್ಧರಿಸಿತು. ಆದರೆ ಪರಿಸ್ಥಿತಿ ಉತ್ತಮವಾಗತೊಡಗಿದ್ದರಿಂದ ಮತ್ತು 2ನೆಯ ಮಹಾಯುದ್ಧ ಆರಂಭವಾದದ್ದರಿಂದ ಒಕ್ಕೂಟದಲ್ಲೇ ಉಳಿಯಿತು.

ಒಕ್ಕೂಟದ ಸ್ಥಾಪನೆ: ಹೀಗೆ ಪ್ರತ್ಯೇಕ ಸರ್ಕಾರಗಳನ್ನು ಹೊಂದಿ ವಸಾಹತುಗಳು ಅಭಿವೃದ್ಧಿ ಹೊಂದುತ್ತಿದ್ದಾಗ ಅವುಗಳ ಕಾರ್ಯಗಳ ಮೇಲ್ವಿಚಾರಣೆ ನಡೆಸಲು ಸಮಗ್ರ ಆಸ್ಟ್ರೇಲಿಯದಲ್ಲಿ ಅಧಿಕಾರ ನಡೆಸಬಲ್ಲ ಕೇಂದ್ರ ಸರ್ಕಾರದ ಆವಶ್ಯಕತೆಯ ಅರಿವು ರಾಜಕಾರಣಿಗಳಲ್ಲಿ ಉದಯಿಸಿತು. ಈ ಬಗ್ಗೆ ನ್ಯೂ ಸೌತ್ವೇಲ್್ಸ ಮತ್ತು ವಿಕ್ಟೋರಿಯಗಳಲ್ಲಿ ಚಳವಳಿಗಳು ಪ್ರಾರಂಭವಾದುವು. ಎಲ್ಲ ಸರ್ಕಾರಗಳೂ ಯಾವ ಯಾವ ವಿಷಯಗಳ ಮೇಲೆ ಒಂದೇ ತರಹದ ಕಾಯಿದೆಗಳನ್ನು ಮಾಡಬಹುದೆಂಬುದನ್ನು ಚರ್ಚಿಸಲು 1863ರಲ್ಲಿ ಮೆಲ್ಬರ್ನ್ನಲ್ಲಿ ಒಂದು ಪ್ರಾಂತೀಯ ಪ್ರತಿನಿಧಿಗಳ ಸಭೆ ನೆರೆಯಿತು. 1884ರಲ್ಲಿ ಐದು ವಸಾಹತುಗಳನ್ನೊಳ ಗೊಂಡ ಆಸ್ಟ್ರೇಲಿಯವನ್ನು ಒಕ್ಕೂಟ ರಾಷ್ಟ್ರವನ್ನಾಗಿ ಮಾಡಲು ನಿರ್ಣಯಿಸಿದರು. 1899ರಲ್ಲಿ ಅನುಕೂಲ ಜನಾಭಿಪ್ರಾಯ ದೊರೆತದ್ದರಿಂದ, 1901 ರಲ್ಲಿ ಆಸ್ಟ್ರೇಲಿಯ ಒಕ್ಕೂಟ ಜಾರಿಗೆ ಬಂತು. ನ್ಯೂ ಸೌತ್ ವೇಲ್್ಸನ ಪ್ರಧಾನಿಯಾಗಿ 5 ಬಾರಿ ಸೇವೆಸಲ್ಲಿಸಿದ್ದ ಸರ್ ಹೆನ್ರಿ ಪಾಕರ್್ಸನನ್ನು ಒಕ್ಕೂಟದ ಪಿತಾಮಹ ಎಂದು ಕರೆಯಲಾಗಿದೆ. ಕೆಲವು ನಿರ್ದಿಷ್ಟ ವಿಷಯಗಳು ಕೇಂದ್ರ ಸರ್ಕಾರಕ್ಕೆ ಮೀಸಲಾದುವು. ಶೇಷಾಧಿಕಾರ ರಾಜ್ಯಗಳಿಗೆ ಸೇರಿತ್ತು. 1927ರಲ್ಲಿ ಕ್ಯಾನ್ಬೆರ ಪಟ್ಟಣ ಒಕ್ಕೂಟದ ರಾಜಧಾನಿಯಾಗುವವರೆಗೆ ಸರ್ಕಾರದ ಮುಖ್ಯ ಕಚೇರಿಗಳು ಮೆಲ್ಬರ್ನ್ನಲ್ಲೇ ಇದ್ದುವು. ಒಕ್ಕೂಟದ ಮೊದಲ ವರ್ಷಗಳು ರಾಷ್ಟ್ರದ ಆರ್ಥಿಕ ಮತ್ತು ಸಾಮಾಜಿಕ ಸುಧಾರಣೆಗೆ ಮೀಸಲಾದುವು. ಚರ್ಚು ಮತ್ತಿತರ ಖಾಸಗಿ ಸಂಸ್ಥೆಗಳಿಂದ ನಡೆಸಲ್ಪಡುತ್ತಿದ್ದ ಶಿಕ್ಷಣ ಪ್ರಸಾರ ಕಾರ್ಯ ಈಗ ಸರ್ಕಾರದ ಕಾರ್ಯಕ್ಷೇತ್ರಕ್ಕೆ ಬಂತು. ಅನೇಕ ಸಾಮಾಜಿಕ ಮತ್ತು ಆರ್ಥಿಕ ಕಾಯಿದೆಗಳು ಜಾರಿಗೆ ಬಂದು ಆ ಕ್ಷೇತ್ರಗಳಲ್ಲಿ ಉದ್ಭವಿಸಿದ ಲೋಪದೋಷಗಳನ್ನು ನಿವಾರಿಸಿದುವು. ರಾಜಕೀಯ ರಂಗದಲ್ಲಿ ಕೂಲಿಗಾರ ಪಕ್ಷ ಅನೇಕ ರಾಜ್ಯಗಳಲ್ಲಿ ತನ್ನ ಶಕ್ತಿಯನ್ನು ಬೆಳೆಸಿಕೊಂಡಿತು. 1910ರಲ್ಲಿ ನ್ಯೂ ಸೌತ್ವೇಲ್ಸ್ ಸರ್ಕಾರ ಆ ಪಕ್ಷಕ್ಕೆ ಸೇರಿತು. 1910-12ರಲ್ಲಿ ಕೂಲಿಗಾರ ಪಕ್ಷ ಒಕ್ಕೂಟದ ಶಾಸನಸಭೆಗಳಲ್ಲಿ ಬಹುಮತ ಗಳಿಸಿತು. ಆ್ಯಂಡ್ರೂ ಫಿಷರ್ ಅದರ ನಾಯಕನಾದ. ಒಂದನೆಯ ಜಾಗತಿಕ ಯುದ್ಧ ಪ್ರಾರಂಭವಾದಾಗ ಆಸ್ಟ್ರೇಲಿಯದಲ್ಲಿ ಸಾರ್ವತ್ರಿಕ ಚುನಾವಣೆಗಳು ನಡೆಯುತ್ತಿದ್ದುವು. ಆದರೂ ಎಲ್ಲ ಪಕ್ಷಗಳೂ ಒಂದಾಗಿ ಫಿಷರನ್ನನ್ನು ಮುಂದಿಟ್ಟುಕೊಂಡು ಇಂಗ್ಲೆಂಡಿಗೆ ಸಂಪುರ್ಣ ನೆರವು ನೀಡಲು ನಿರ್ಧರಿಸಿದವು. ಯುದ್ಧದಲ್ಲಿ ಆಸ್ಟ್ರೇಲಿಯ 20,000 ಸೈನಿಕರನ್ನೂ 4 ಲಕ್ಷಕ್ಕೂ ಹೆಚ್ಚಾಗಿ ಸ್ವಯಂಸೇವಕರನ್ನೂ ಕಳಿಸಿತು. ಅಲ್ಲದೆ ಆಸ್ಟ್ರೇಲಿಯದ ಯುದ್ಧನೌಕೆಗಳನ್ನು ಬ್ರಿಟಿಷ್ ಸರ್ಕಾರಕ್ಕೆ ಒಪ್ಪಿಸಲಾಯಿತು. ನೌಕಾಪಡೆಯನ್ನು ಬ್ರಿಟಿಷರಿಗೆ ಒಪ್ಪಿಸಲಾಯಿತು. ಯುದ್ಧದಿಂದಾಗಿ 59,993 ಆ್ಯಸ್ಟ್ರೇಲಿಯನ್ನರು ಕೊಲ್ಲಲ್ಪಟ್ಟರು. ಯುದ್ಧಾನಂತರ ಆಸ್ಟ್ರೇಲಿಯ ರಾಷ್ಟ್ರಗಳು ಸಂಘವನ್ನು ಸೇರಿತು. ಯುದ್ಧಕಾಲದ ಉದ್ದಿಮೆಗಳು ಬೆಳೆದುವು.

ಯುದ್ಧಾನಂತರ ಆಸ್ಟ್ರೇಲಿಯದ ರಾಜಕಾರಣದಲ್ಲಿ ಮಹತ್ತ್ವದ ಬದಲಾವಣೆಗಳಾದುವು. ಕೂಲಿಗಾರ ಪಕ್ಷದ ಪ್ರಭಾವ ಕುಂದಿತು. ಹೊಸ ಒಳನಾಡು ಪಕ್ಷ (ಕಂಟ್ರಿ ಪಾರ್ಟಿ)ಮತ್ತು ರಾಷ್ಟ್ರೀಯ ಪಕ್ಷಗಳು ಮುಂದೆ ಬಂದು ಪರರಾಷ್ಟ್ರಗಳಿಂದ ವಲಸೆಗಾರರನ್ನೂ ಬಂಡವಾಳವನ್ನೂ ಆಹ್ವಾನಿಸಿದುವು. ಹೊಸ ಉದ್ದಿಮೆಗಳಿಗೆ ಪ್ರೋತ್ಸಾಹ ದೊರೆಯಿತು. 1929ರಿಂದ ಮುಂದೆ ಕೂಲಿಗಾರಪಕ್ಷದ ನೇತೃತ್ವದಲ್ಲಿ ಒಕ್ಕೂಟ ಮತ್ತು ರಾಜ್ಯ ಸರ್ಕಾರಗಳು ಒಂದುಗೂಡಿ ಅನೇಕ ಆರ್ಥಿಕ ಯೋಜನೆಗಳನ್ನು ಕೈಗೆತ್ತಿಕೊಂಡುವು. ಎರಡನೆಯ ಮಹಾಯುದ್ಧ ಪ್ರಾರಂಭವಾದ ತಕ್ಷಣ ಆಸ್ಟ್ರೇಲಿಯ 1939ರಲ್ಲಿ ಜರ್ಮನಿಯ ಮೇಲೆ ಯುದ್ಧ ಸಾರಿ ತನ್ನ ಉದ್ದಿಮೆಗಳನ್ನು ಯುದ್ಧಸಾಮಗ್ರಿಗಳ ತಯಾರಿಕೆಗೆ ಅಳವಡಿಸಿಕೊಂಡಿತು. 1941ರಲ್ಲಿ ರಾಬರ್ಟ್ ಮೆನ್ಸೀಸ್ನ ಸರ್ಕಾರ ಸೋತು ಜಾನ್ ಕರ್ಟಿನ್ನ ಮುಖಂಡತ್ವದಲ್ಲಿ ಕೂಲಿಗಾರ ಸರ್ಕಾರವೇರ್ಪಟ್ಟಿತು. ಜಪಾನ್ ಮತ್ತು ಅಮೆರಿಕಗಳು ಯುದ್ಧಪ್ರವೇಶ ಮಾಡಿದ ಅನಂತರ ಆಸ್ಟ್ರೇಲಿಯ ಮತ್ತು ಅಮೆರಿಕಗಳಲ್ಲಿ ಮಧುರ ಸಂಪರ್ಕವೇರ್ಪಟ್ಟಿತು. ಜನರಲ್ ಮ್ಯಾಕ್ ಆರ್ಥರ್ ತನ್ನ ಮುಖ್ಯ ಕಚೇರಿಯನ್ನು ಆಸ್ಟ್ರೇಲಿಯದಲ್ಲಿ ಸ್ಥಾಪಿಸಿದ.

ಯುದ್ಧ ಆಸ್ಟ್ರೇಲಿಯವನ್ನು ಸಂಪುರ್ಣ ಔದ್ಯೋಗಿಕ ರಾಷ್ಟ್ರವನ್ನಾಗಿ ಮಾಡಿತು. ಜಾಗತಿಕ ವ್ಯವಹಾರಗಳಲ್ಲಿ ಅದರ ಸ್ವಾತಂತ್ರ್ಯ ಮತ್ತು ಮಹತ್ತ್ವ ಬೆಳೆಯಿತು. ಯುದ್ಧಾನಂತರ ಯಾವ ತೊಂದರೆಯಿಲ್ಲದೆ ಆರ್ಥಿಕ ಪರಿಸ್ಥಿತಿ ಶಾಂತಿಕಾಲಕ್ಕೆ ಹೊಂದಿಕೊಂಡು ಪ್ರಗತಿ ಪಥದಲ್ಲಿ ಸಾಗಿತು. 1949ರ ಚುನಾವಣೆಯಲ್ಲಿ ಕೂಲಿಗಾರಪಕ್ಷ ಸೋತು ಲಿಬರಲ್ಕಂಟ್ರಿ ಪಕ್ಷ ಅಧಿಕಾರ ವಹಿಸಿತು. ಸಕಲ ನಿಯಂತ್ರಣಗಳನ್ನು ತೆಗೆಯುವುದು, ಸ್ವಾವಲಂಬನೆ ಮತ್ತು ಕಮ್ಯೂನಿಸ್ಟರನ್ನು ವಿರೋಧಿಸುವುದು-ಇವು ಈ ಪಕ್ಷದ ಧೋರಣೆಯ ಮುಖ್ಯ ಅಂಶಗಳು. ಯುದ್ಧಕಾಲದಲ್ಲಿ ಆಸ್ಟ್ರೇಲಿಯ ವಿಶ್ವಸಂಸ್ಥೆಯನ್ನು ಸ್ಥಾಪಿಸಲು ಉತ್ಸಾಹ ತೋರಿದರೂ ಯುದ್ಧಾನಂತರ ಅದರ ಕಾರ್ಯಕಲಾಪಗಳಲ್ಲಿ ಹೆಚ್ಚು ಆಸ್ಥೆ ವಹಿಸಲಿಲ್ಲ. ಆದರೆ ಅಮೆರಿಕ ಸಂಯುಕ್ತ ಸಂಸ್ಥಾನದೊಂದಿಗೆ ಆಸ್ಟ್ರೆಲಿಯದ ಸಂಬಂಧಗಳು ಬಲಗೊಂಡವು. ಅದು ಕೊರಿಯ ಯುದ್ಧದಲ್ಲಿ ಪಾಲ್ಗೊಂಡಿತು. ಏಷ್ಯದ ಕಮ್ಯೂನಿಸ್ಟ್ ವಿರೋಧಿ ಸರ್ಕಾರಗಳೊಂದಿಗೆ ನಿಕಟ ಸಂಪರ್ಕ ಸ್ಥಾಪಿಸಿಕೊಂಡಿತು ಮತ್ತು 1954ರಲ್ಲಿ ಸ್ಥಾಪನೆಯಾದ ಆಗ್ನೇಯ ಏಷ್ಯ ಒಪ್ಪಂದ ಸಂಸ್ಥೆಯ (ಸಿಯಾಟೊ) ಸದಸ್ಯ ದೇಶವಾಯಿತು. 1959ರ ವೇಳೆಗೆ ಆಸ್ಟ್ರೇಲಿಯದ ಜನಸಂಖ್ಯೆ ಒಂದು ಕೋಟಿಯ ಗಡಿಯನ್ನು ದಾಟಿತು. 2ನೆಯ ಮಹಾಯುದ್ಧಾನಂತರ ಅಪಾರ ಸಂಖ್ಯೆಯ ಜನರು ಇಲ್ಲಿಗೆ ವಲಸೆ ಬಂದುದು ಜನಸಂಖ್ಯೆಯ ಹೆಚ್ಚಳಕ್ಕೆ ಕಾರಣವಾಯಿತು. ವಿಯಟ್ನಾಂ ಯುದ್ಧದಲ್ಲಿ ಆಸ್ಟ್ರೇಲಿಯ ಅಮೆರಿಕಕ್ಕೆ ಸೈನಿಕ ಬೆಂಬಲ ನೀಡಿತು. 1960 ರ ಅನಂತರ ಸರ್ಕಾರ ಮೂಲನಿವಾಸಿಗಳನ್ನು ಉತ್ತಮವಾಗಿ ನಡೆಸಿಕೊಳ್ಳುತ್ತಿದೆ. ಆಸ್ಟ್ರೇಲಿಯದ ಆಡಳಿತದಲ್ಲಿ ಹಸ್ತಕ್ಷೇಪ ಮಾಡುವ ಬ್ರಿಟನ್ನಿನ ಅಧಿಕಾರವನ್ನು 1968ರಲ್ಲಿ ರದ್ದು ಪಡಿಸಲಾಯಿತು. ಬ್ರಿಟನ್ನಿನ ಸಂಬಂಧ ಕಡಿದುಕೊಂಡು ಆಸ್ಟ್ರೇಲಿಯವನ್ನು ಗಣರಾಜ್ಯವಾಗಿ ಪರಿವರ್ತಿಸುವ ಬಗ್ಗೆ 1990ರಲ್ಲಿ ತೀವ್ರ ಚರ್ಚೆ ನಡೆಯಿತು.

ಪರಿಶೋಧನೆ

[ಬದಲಾಯಿಸಿ]

ಆಸ್ಟ್ರೇಲಿಯದ ಭೂ ಪರಿಶೋಧನೆ ಪ್ರಾರಂಭವಾದದ್ದು 1788 ರಲ್ಲಿ, ನ್ಯೂ ಸೌತ್ವೇಲ್ಸ್ ವಸಾಹತು ಸ್ಥಾಪನೆಯಾದ ಅನಂತರ, ಬೇರೆ ದೇಶಗಳಲ್ಲಿ ನಡೆದಂತೆ ಪರಿಶೋಧನೆ ಕೆಲಸ ಉತ್ತರ ಮತ್ತು ಪಶ್ಚಿಮ ತೀರಪ್ರಾಂತ್ಯಗಳಿಂದ ಪ್ರಾರಂಭವಾಗಿ ಪೂರ್ವದ ಮತ್ತು ದಕ್ಷಿಣದ ಪ್ರದೇಶಗಳಿಗೆ ಹರಡುವುದರ ಬದಲು ಆಗ್ನೇಯ ಭಾಗದಿಂದ ಪಶ್ಚಿಮ ಮತ್ತು ಉತ್ತರದ ಪ್ರಾಂತ್ಯಗಳಿಗೆ ಹರಡಿದ್ದು ಆಸ್ಟ್ರೇಲಿಯದ ವೈಶಿಷ್ಟ್ಯ. ಇದಕ್ಕೆ ಕಾರಣ, ಈ ಆಗ್ನೇಯ ಭಾಗ ಹಿತಕರ ವಾಯುಗುಣವನ್ನು ಹೊಂದಿರುವುದು ಮತ್ತು ಪಶ್ಚಿಮ ಭಾಗಗಳು ಹೆಚ್ಚಾಗಿ ಮರಳುಗಾಡು ಪ್ರದೇಶವಾಗಿರುವುದು. 1788ಕ್ಕೆ ಮುಂಚೆಯೇ ಚಿನ್ನ ದೊರಕಬಹುದೆಂಬ ಆಸೆಯಿಂದ ಅನೇಕ ಸಾಹಸಿಗರು ಬಂದು ಹೋಗಿದ್ದರು. ವ್ಯವಸ್ಥಿತವಾದ ವಸಾಹತು ಸ್ಥಾಪನೆ ಆದದ್ದು 1788ರಲ್ಲಿ ಆರ್ಥರ್ ಫಿಲಿಪ್ ಎಂಬ ಬ್ರಿಟಿಷ್ ಅಧಿಕಾರಿ 759 ಕೈದಿಗಳೊಡನೆ ಪೋರ್ಟ್ ಜಾಕ್ಸನ್ ಎಂಬಲ್ಲಿ ಬಂದಿಳಿದಾಗ, ಇವರು ವ್ಯವಸಾಯಯೋಗ್ಯವಾದ ಭೂಮಿಯನ್ನು ಹುಡುಕುತ್ತ ತಿರುಗಿದರು. ಪಶ್ಚಿಮಕ್ಕೆ ಬ್ಲೂಮೌಂಟನ್ ತಲಪಿ ತಪ್ಪಲಿನಲ್ಲಿ ನೆಲಸುನಾಡನ್ನು ನಿರ್ಮಿಸಿಕೊಂಡರು. ಅಲ್ಲಿಯ ತನಕ ರಸ್ತೆಯೂ ನಿರ್ಮಿತವಾಯಿತು. ಈ ಪರ್ವತವನ್ನು ದಾಟಿ ಪಶ್ಚಿಮಕ್ಕೆ ಹರಡಿದ್ದ ನದೀಬಯಲು ಪ್ರದೇಶವನ್ನು ಕಂಡುಹಿಡಿಯಲು ಸ್ವಲ್ಪ ಕಾಲ ಬೇಕಾಯಿತು. ಮುಂದೆ ಪಶ್ಚಿಮದ ತಪ್ಪಲಿನಲ್ಲೂ ವಸತಿಗಳು ಸ್ಥಾಪಿತವಾದುವು. ಇನ್ನೂ ಪಶ್ಚಿಮಕ್ಕೆ ಜೌಗುಪ್ರದೇಶವಿರುವುದೆಂದು ಆಕ್ಸ್ಲಿ ಎಂಬಾತ ತಿಳಿಸಿದ ಮೇಲೆ, ತಮಗೆ ನೈರುತ್ಯಕ್ಕಿದ್ದ ಪ್ರಾಂತ್ಯದಲ್ಲಿ ಪರಿಶೋಧನೆ ನಡೆಸಿದರು. ಸ್ನೋಯಿ ಮೌಂಟನ್ಗಳವರೆಗೂ ಅವರ ಪರಿಶೋಧನೆ ಸಾಗಿತು. 1824ರಲ್ಲಿ ಮರೆನದಿಯನ್ನು ಗುರುತಿಸಿದರು. ದಕ್ಷಿಣ ತೀರದ ಪೋರ್ಟ್ ಫಿಲಿಪ್ಗೆ ಮಾರ್ಗವನ್ನು ಕಂಡುಹಿಡಿದರು. ಉತ್ತರದ ಬಯಲುಪ್ರದೇಶದ ಸಂಶೋಧನೆಯೂ ಸಾಗಿತ್ತು. 1827ರಲ್ಲಿ ಕನ್ನಿಂಗ್ಹ್ಯಾಂ ಎಂಬಾತ ಡಾರ್ಲಿಂಗ್ ನದಿಯ ವಿಶಾಲವಾದಬಯಲು ಮೇಡು ಪ್ರದೇಶವನ್ನು ಕಂಡುಹಿಡಿದ. ಹೀಗೆ ಆಸ್ಟ್ರೇಲಿಯದ ಆಗ್ನೇಯ ಭಾಗವೆಲ್ಲ ಪರಿಶೋಧಿಸಲ್ಪಟ್ಟಿತು, ಮೆಲ್ಬರ್ನ್ನಿಂದ ಬ್ರಿಸ್ಬೇನ್ವರೆಗು ಸಂಶೋಧಕರಿಗೆ ಈ ಕಾಲದಲ್ಲಿ ಪರಿಶೋಧನೆಯ ಹುಚ್ಚೇ ಹಿಡಿದಿತ್ತೆನ್ನ ಬಹುದು. ಮುಂದೆ ಖಂಡದ ಮಧ್ಯ ಮತ್ತು ಉತ್ತರದ ಪ್ರದೇಶಗಳು ಅವರ ಗಮನವನ್ನು ಸೆಳೆದುವು. ದಕ್ಷಿಣ ಮತ್ತು ಪಶ್ಚಿಮ ಆಸ್ಟ್ರೇಲಿಯಗಳಿಗೆ ಸಂಪರ್ಕವನ್ನುಂಟುಮಾಡುವ ಭೂಮಾರ್ಗವನ್ನು ಕಂಡುಹಿಡಿಯಲು ಹೊರಟ ಟಾರೆನ್ಸ್ ಎಂಬಾತ 2080 ಕಿಮೀ ದೂರ ನೀರೇ ಸಿಗದ ಮರಳುಗಾಡಿನಲ್ಲಿ ಅಲೆಯಬೇಕಾಯಿತು. ಲೀಚ್ಹಾರ್ಟ್ ಎಂಬಾತ ಉತ್ತರದಲ್ಲಿ ಕ್ವೀನ್ಸ್ ಲೆಂಡ್ನಿಂದ ಅರ್ನ್ಹೆಂಲ್ಯಾಂಡ್ವರೆಗೂ ಹೋಗಿ ಭೂಮಾರ್ಗವನ್ನು ಕಂಡುಹಿಡಿದಿದ್ದಲ್ಲದೆ ಕಾರ್ಪೆಂಟೇರಿಯ ಕೊಲ್ಲಿಗೆ ಹರಿಯುವ ನದಿಗಳನ್ನೂ ಗುರುತಿಸಿದ.

1859-70ರವರೆಗಿನ ಅವಧಿಯಲ್ಲಿ ಚಿನ್ನದ ನಿಕ್ಷೇಪಗಳು ಆಸ್ಟ್ರೇಲಿಯದಲ್ಲಿವೆಯೆಂದು ತಿಳಿದಮೇಲೆ, ಅನೇಕ ಪರಿಶೋಧಕರ ಗಮನ ಇವುಗಳ ಕಡೆ ತಿರುಗಿತು. 1853-56ರವರೆಗೆ ಯುರೋಪಿನಲ್ಲಿ ನಡೆದ ಕ್ರಿಮಿಯ ಯುದ್ಧವೂ ಅನೇಕರನ್ನು ಯುರೋಪಿಗೆ ಸೆಳೆಯಿತು. ಗಂಗಾನದಿಯಂಥ ದೊಡ್ಡ ನದಿಯೊಂದು ಆಸ್ಟ್ರೇಲಿಯದ ವಾಯವ್ಯ ಪ್ರಾಂತ್ಯದಲ್ಲಿದೆಯೆಂದು ಆಗ ಅನೇಕರ ಭಾವನೆಯಾಗಿತ್ತು. ಅದರ ಪರಿಶೋಧನೆಗಾಗಿ ಸರ್ಕಾರ ಅಪಾರ ಹಣ ವೆಚ್ಚಮಾಡಿತು. ಕೊನೆಗೆ ಆ ಪ್ರಾಂತ್ಯದಲ್ಲಿ ಅಂಥ ದೊಡ್ಡ ನದಿಯಿಲ್ಲವೆಂಬುದು ಖಚಿತವಾದರೂ ಅಲ್ಲಿ ಅತ್ಯಂತ ಉಪಯುಕ್ತವಾದ ಕಿಂಬರ್ಲಿ ಹುಲ್ಲುಗಾವಲುಗಳನ್ನು ಕಂಡುಹಿಡಿದಂತಾಯಿತು. 1861ರಲ್ಲಿ ಸ್ಟೂ ಆರ್ಟ್ ಎಂಬಾತ ಅತ್ಯಂತ ಪ್ರಯಾಸದಿಂದ ಅಡಿಲೇಡ್ನಿಂದ ಅರ್ನ್ಹೆಂಲ್ಯಾಂಡ್ಗೆ ಮಧ್ಯಭಾಗದ ಮೂಲಕ ಹೋಗುವ ಮಾರ್ಗವನ್ನು ಕಂಡುಹಿಡಿದ. 1871-1939ರ ಅವಧಿಯಲ್ಲಿ ಖಂಡದ ಪಶ್ಚಿಮ ಭಾಗದ ಮಧ್ಯದಲ್ಲಿರುವ ವಿಶಾಲ ಮರುಭೂಮಿಯ ಪರಿಶೋಧನೆ ನಡೆದು, ಅದರ ಮೂಲಕ ಟೆಲಿಗ್ರಾಫ್ ತಂತಿ ಮಾರ್ಗವನ್ನು ನಿರ್ಮಿಸಲನುಕೂಲವಾಯಿತು.

ವಸಾಹತುಗಳು

[ಬದಲಾಯಿಸಿ]

1788ರಲ್ಲಿ ಕೆಲವು ಬ್ರಿಟಿಷ್ ಕೈದಿಗಳನ್ನು ಪೋರ್ಟ್ ಜಾಕ್ಸನ್ಗೆ (ಇಂದಿನ ಸಿಡ್ನಿ) ಕರೆತಂದು ಶಿಕ್ಷೆಯನ್ನನುಭವಿಸಲು ಬಿಟ್ಟಾಗಿನಿಂದ ವಸಾಹತುಗಳ ಸ್ಥಾಪನೆಯ ಕೆಲಸ ಪ್ರಾರಂಭವಾಯಿತೆನ್ನಬಹುದು. ಈ ಕೈದಿಗಳೊಂದಿಗೆ, ಅವರನ್ನು ನೋಡಿಕೊಳ್ಳಲು ಅನೇಕ ಬ್ರಿಟಿಷ್ ಅಧಿಕಾರಿಗಳೂ ಸಿಬ್ಬಂದಿಯವರೂ ಬಂದು ನಿಲ್ಲಬೇಕಾಯಿತು. ಕೈದಿಗಳನ್ನು ಮತ್ತೆ ಮತ್ತೆ ಇಲ್ಲಿಗೆ ತರತೊಡಗಿದ ಮೇಲೆ ಇಲ್ಲಿನ ಜನಸಂಖ್ಯೆ ಬೆಳೆಯುತ್ತ ಬಂತು. ಈ ಪದ್ಧತಿಯನ್ನು ನಿಲ್ಲಿಸಿದ್ದು 50 ವರ್ಷಗಳ ಮೇಲೆ. ಅಷ್ಟುಹೊತ್ತಿಗೆ 1,61,000 ಕೈದಿಗಳನ್ನು ತಂದಿದ್ದರು. ಅವರೊಂದಿಗೆ ಸ್ವತಂತ್ರ ನೆಲೆಸಿಗರೂ ಅಧಿಕಸಂಖ್ಯೆಯಲ್ಲಿ ಬಂದರು; ಇವರು ಜೀವನಾನುಕೂಲಗಳನ್ನು ಕಲ್ಪಿಸಿಕೊಳ್ಳುವುದಕ್ಕಾಗಿ ಮಾಡಿದ ಪ್ರಯತ್ನಗಳಿಂದ ದೇಶದ ಆರ್ಥಿಕ ಬೆಳೆವಣಿಗೆಗೆ ಅವಕಾಶವಾಯಿತು. ಖಂಡದ ನಾನಾ ಕಡೆ ಪುನಃ ಪರಿಶೋಧನೆ ನಡೆಯಿತು; ಜನ ಅನುಕೂಲಸ್ಥಳಗಳಲ್ಲಿ ನೆಲೆನಿಂತರು. 6 ವಸಾಹತುಗಳು ನಿರ್ಮಿತವಾದುವು; ನ್ಯೂ ಸೌತ್ವೇಲ್ಸ್ (1766), ವಾನ್ ಡೀಮನ್ಸ್ ಲ್ಯಾಂಡ್ (1825) (1835ರಿಂದ ಟಾಸ್ಮೇನಿಯ), ವೆಸ್ಟರ್ನ್ ಆಸ್ಟ್ರೇಲಿಯ (1829), ಸೌತ್ ಆಸ್ಟ್ರೇಲಿಯ (1834), ವಿಕ್ಟೋರಿಯ (1851), ಕ್ವೀನ್ಸ್ ಲೆಂಡ್ (1859) ಉತ್ತರ ಪ್ರಾಂತ್ಯ (1961). ಜನಸಂಖ್ಯೆ 1820ರಲ್ಲಿ 34,000 ಇದ್ದದ್ದು 1850ರಲ್ಲಿ 4,05,000ಕ್ಕೆ ಏರಿತು. ಈ ಪ್ರಾಂತ್ಯಗಳು ತಮ್ಮದೇ ಆದ ಪ್ರತಿನಿಧಿ ಸರಕಾರವನ್ನು ಹೊಂದಿ ಸ್ವತಂತ್ರವಾಗಿದ್ದುವು. 1991ರಲ್ಲಿ ಅವೆಲ್ಲ ಒಟ್ಟುಗೂಡಿ ಕಾಮನ್ವೆಲ್ತ್ ವ್ಯವಸ್ಥೆಯನ್ನು ನಿರ್ಮಿಸಿಕೊಂಡುವು. ಆಸ್ಟ್ರೇಲಿಯಾ ಖಂಡ ಭೂಮಿಯಲ್ಲಿ 7 ಖಂಡದಲ್ಲಿ ಒಂದು

ರಾಜಕೀಯ

[ಬದಲಾಯಿಸಿ]

ಆಸ್ಟ್ರೇಲಿಯ ಸ್ವಯಮಾಡಳಿತವುಳ್ಳ ಸ್ವತಂತ್ರ ಪ್ರಜಾರಾಜ್ಯ. ಪ್ರಜಾಪ್ರತಿನಿಧಿಸಭೆಯನ್ನು ಹೊಂದಿದ ಸಂಯುಕ್ತ ಸಂಸ್ಥಾನ. 1901 ರಲ್ಲಿ ಇಲ್ಲಿ ನೆಲೆಸಿದ್ದ 6 ವಸಾಹತುಗಳ ಒಮ್ಮತದಿಂದ ಈ ರಾಜ್ಯಾಂಗ ವ್ಯವಸ್ಥೆಯಾಯಿತು. ಪ್ರತಿಯೊಂದು ವಸಾಹತೂ ಒಂದು ರಾಜ್ಯವಾಯಿತು. ಸಂಯುಕ್ತ ರಾಜ್ಯ ವ್ಯವಸ್ಥೆಯಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನದ ಮತ್ತು ಇಂಗ್ಲೆಂಡಿನ ರಾಜ್ಯಭಾರದ ಮೂಲತತ್ತ್ವಗಳನ್ನು ಕಾಣಬಹುದು. ಸಂಯುಕ್ತ ರಾಜ್ಯದ ಅಧಿಕಾರವನ್ನು ವಿಶದವಾಗಿ ತಿಳಿಸಿ ನಿಗದಿಮಾಡಲಾಗಿದೆ. ಬ್ರಿಟಿಷ್ ದೊರೆಯ ಪ್ರತಿನಿಧಿಯಾಗಿ ಒಬ್ಬ ಗವರ್ನರ್ ಜನರಲ್ ಇದ್ದಾನೆ; ರಾಷ್ಟ್ರದ ಪಾರ್ಲಿಮೆಂಟ್ ಅಥವಾ ಸಂಸತ್ತು ಎರಡು ಸದನಗಳನ್ನು ಹೊಂದಿದೆ. ಆಡಳಿತ ಹೆಸರಿಗೆ ಮಾತ್ರ ಕಾರ್ಯಕಾರಿ ಸಮಿತಿಯ ಸಹಾಯದಿಂದ ಕೆಲಸಮಾಡುವ ಗವರ್ನರ್ ಜನರಲ್ನ ಕೈಯಲ್ಲಿದೆ; ವಾಸ್ತವವಾಗಿ ಆಡಳಿತದ ಜವಾಬ್ದಾರಿಯೆಲ್ಲ ಕೆಳಮನೆಯಲ್ಲಿ ಅಭಿಮತಪರಮಾಧಿಕ್ಯ ಪಡೆದ ಪಕ್ಷ ಅಥವಾ ಸಂಯುಕ್ತ ಪಕ್ಷದ ಮುಖ್ಯಸ್ಥನಾಗಿ ಪ್ರಧಾನಮಂತ್ರಿಯಾಗಿರುವವ ಮತ್ತು ಅವನಿಂದ ನಿಯಮಿತರಾಗಿರುವವರಿಂದ ಕೂಡಿದ ಮಂತ್ರಿಮಂಡಲಕ್ಕೆ ಸೇರಿದೆ. ಕೆಳಮನೆ ಸದಸ್ಯರು ಮೂರು ವರ್ಷ ಕಾಲವಾದರೂ ಆಸ್ಟ್ರೇಲಿಯದ ನಿವಾಸಿಗಳಾಗಿರಬೇಕು ಮತ್ತು ಬ್ರಿಟಿಷರಾಗಿರಬೇಕು ಎಂಬ ನಿಬಂಧನೆಯಿದೆ.

ಶಾಸನರಚನೆ ಪಾರ್ಲಿಮೆಂಟಿಗೆ ಸೇರಿದ್ದು; ಈ ಪಾರ್ಲಿಮೆಂಟ್, 76 ಸದಸ್ಯರನ್ನುಳ್ಳ ಸೆನೆಟ್ ಅಥವಾ ಮೇಲ್ಮನೆ ಮತ್ತು 148 ಸದಸ್ಯರನ್ನುಳ್ಳ ಹೌಸ್ ಆಫ್ ರೆಪ್ರಸೆಂಟೆಟಿವ್ಸ್ ಅಥವಾ ಕೆಳಮನೆಗಳನ್ನೊಳಗೊಂಡಿದೆ. ಅನುಪಾತಿಪ್ರಾತಿನಿಧ್ಯ ಕ್ರಮದಲ್ಲಿ ಚುನಾಯಿತರಾದ ಹತ್ತು ಮಂದಿ ಸದಸ್ಯರನ್ನು ಪ್ರತಿರಾಜ್ಯವೂ ಮೇಲ್ಮನೆಗೆ ಕಳುಹಿಸುತ್ತದೆ. ಅವರ ಕಾಲಾವಧಿ ಆರು ವರ್ಷ. ಆದರೆ ಮೂರು ವರ್ಷ ಕಳೆದ ಕೂಡಲೇ ಅರ್ಧ ಸದಸ್ಯರು ಬಿಟ್ಟುಹೋಗುತ್ತಾರೆ. ಕೆಳಮನೆಯಲ್ಲಿ ಪ್ರತಿಯೊಂದು ರಾಜ್ಯದಲ್ಲೂ ಚುನಾಯಿತರಾದ ಐದು ಮಂದಿ ಸದಸ್ಯರಾದರೂ ಇರಲೇಬೇಕೆಂಬ ನಿಯಮವಿದೆ. ಕೆಳಮನೆ ವರ್ಷಕ್ಕೊಂದು ಸಲವಾದರೂ ಸೇರಲೇಬೇಕು. ತೆರಿಗೆ ವಿಧಿಸುವುದು, ವಿನಿಯೋಗ, ಕೆಳಮನೆಗೆ ಸೇರಿದ್ದು.

ಆದಿವಾಸಿಗಳು

[ಬದಲಾಯಿಸಿ]

ಇವರು ಆಸ್ಟ್ರೇಲಿಯದ ಮೂಲನಿವಾಸಿಗಳಲ್ಲ. ಅವರೆಲ್ಲರೂ ಆಗ್ನೇಯ ಏಷ್ಯದಿಂದ, ಮುಖ್ಯವಾಗಿ ಇಂಡೊನೇಷ್ಯದಿಂದ 50,000 ವರ್ಷಗಳ ಹಿಂದೆ ವಲಸೆ ಬಂದವರು. ಪುರಾತತ್ತ್ವಶಾಸ್ತ್ರಜ್ಞರು ಆದಿವಾಸಿಗಳ ನೂರೂರು ನೆಲೆಗಳನ್ನು ಉತ್ಪನನ ಮಾಡಿದ್ದಾರೆ. ಅವುಗಳಲ್ಲಿ ಸಿಡ್ನಿ ಸಮೀಪ ಪೆನ್ರಿತ್ ಎಂಬ ನೆಲೆ ಸು. 45,000 ವರ್ಷಗಳಷ್ಟು ಪ್ರಾಚೀನವಾದುದು. ಅಗ್ನೇಯ ಏಷ್ಯದವರಾಗಿದ್ದ ಅವರು ನೀರ್ಗಲ್ಲ ಯುಗ ಬಂದು ಭೂಮಿಯ ಉತ್ತರಭಾಗದ ನೀರೆಲ್ಲ ಘನೀಭವಿಸಿದ ಮೇಲೆ ದಕ್ಷಿಣ ಪ್ರದೇಶಗಳಿಗೆ ವಲಸೆ ಬಂದರು. ಆಗ ಏಷ್ಯದ ಆಗ್ನೇಯ ಭಾಗ ಆಸ್ಟ್ರೇಲಿಯದೊಂದಿಗೆ ಭೂಸಂಪರ್ಕ ಹೊಂದಿತ್ತು. ಈ ಯುಗ ಮುಗಿದ ಮೇಲೆ, ಭೂಮಿಯ ಮೇಲೆ ಹರಡಿದ್ದ ನೀರ್ಗಲ್ಲು ಕರಗಿ ಸಮುದ್ರಕ್ಕೆ ಹರಿಯಿತು; ತಗ್ಗು ಪ್ರದೇಶಗಳೆಲ್ಲ ನೀರಿನಿಂದಾವರಿಸಲ್ಪಟ್ಟು ಎತ್ತರ ಪ್ರದೇಶಗಳೆಲ್ಲ ದ್ವೀಪಗಳಾಗಿ ನಿಂತವು.

ಈ ಕಾಲದಲ್ಲೇ ಆಸ್ಟ್ರೇಲಿಯವು ಆಗ್ನೇಯ ಏಷ್ಯದ ಭೂ ಭಾಗದಿಂದ ಪ್ರತ್ಯೇಕಿಸಲ್ಪಟ್ಟು ಅಲ್ಲಿಗೆ ಬಂದು ನೆಲೆಸಿದ್ದ ಜನರು ಏಷ್ಯದ ಇತರ ಜನರೊಂದಿಗೆ ಸಂಪರ್ಕವನ್ನು ಕಳೆದುಕೊಂಡರು. ಇವರಲ್ಲಿ ಮುಖ್ಯ ಪಂಗಡಗಳೆಂದರೆ ಈಶಾನ್ಯದ ಒರೀನಿಯನ್ ನಗ್ರಿಟೊಗಳು, ಉತ್ತರದ ಕಾರ್ಪೆಂಟೇರಿಯನ್ ಜನ, ಪಶ್ಚಿಮದ ಮರಳು ಗಾಡಿನ ಬುಡಕಟ್ಟುಗಳು, ಆಗ್ನೇಯದ ಮರೆ ಬಯಲಿನ ಆದಿವಾಸಿಗಳು.

ಈ ಆದಿವಾಸಿಗಳಲ್ಲಿ ಮುಖ್ಯವಾಗಿ ಕಂಡುಬರುವ ಒಂದು ಅಂಶವೆಂದರೆ, ಅವರ ಜೀವನಕ್ರಮ, ಸಂಪ್ರದಾಯಗಳು, ಕೊಂಚಮಟ್ಟಿಗೆ ಭಾಷೆಯಲ್ಲೂ ಕಂಡುಬರುವ ಸಾಮ್ಯ. ಈ ಹೋಲಿಕೆ ಬೇರೆ ಯಾವ ದೇಶದಲ್ಲೂ ಕಂಡುಬಂದಿಲ್ಲ. ಆಸ್ಟ್ರೇಲಿಯ ಒಂದು ದೊಡ್ಡ ದ್ವೀಪವಾದ ಅನಂತರ ಅವರು ಆಗ್ನೇಯ ಏಷ್ಯದ ಇತರ ಜನರ ಸಂಪರ್ಕವನ್ನು ಕಳೆದುಕೊಂಡರು; ಅಲ್ಲದೆ ಅವರಲ್ಲನೇಕರು ಆಹಾರ ಸೌಕರ್ಯಕ್ಕಾಗಿ ಅಲೆಮಾರಿಜೀವನ ನಡೆಸಬೇಕಾಗಿದ್ದುದರಿಂದ ಅವರಲ್ಲೇ ಪರಸ್ಪರ ಸಂಪರ್ಕವೇರ್ಪಡುವಂತಾಗಿ ಅನೇಕರು ತಮ್ಮ ಪ್ರತ್ಯೇಕತೆಯನ್ನು ಕಾಲಕ್ರಮೇಣ ಕಳೆದುಕೊಂಡರು. ಎತ್ತರದಲ್ಲಿ ಅವರು ಮಧ್ಯಮ ಮಟ್ಟದವರೆನ್ನಬಹುದು; ಅವರ ಅಂಗಾಂಗಗಳಲ್ಲಿ ತಕ್ಕ ಮಟ್ಟಿನ ಹೊಂದಿಕೆಯಿದೆ. ಆದರೆ ಸರಿಯಾದ ಪೋಷಣೆಯಿಲ್ಲದ ಕೃಶಾಂಗರಾಗಿದ್ದಾರೆ. ಅವರದು ಕಂದು ಬಣ್ಣ, ಕೂದಲು ತೀರ ಕಪ್ಪು. 1788ರಲ್ಲಿ, ಅಂದರೆ ಬಿಳಿಯರು ಆಸ್ಟ್ರೇಲಿಯದಲ್ಲಿ ನೆಲೆಸಲು ಪ್ರಾರಂಭಿಸಿದಾಗ, ಅಲ್ಲಿನ ಆದಿವಾಸಿಗಳ ಸಂಖ್ಯೆ ಸು. 71/2 ಲಕ್ಷದಷ್ಟಿತ್ತೆಂದು ಕೆಲವರು ಲೆಕ್ಕಹಾಕಿದ್ದಾರೆ. ಆಸ್ಟ್ರೇಲಿಯದ ಉತ್ತರ ಪ್ರಾಂತ್ಯದಲ್ಲಿ ಮಾತ್ರ ಒಟ್ಟು ಜನಸಂಖ್ಯೆಯ ಶೇ.25 ಭಾಗದಷ್ಟು ಆದಿವಾಸಿಗಳಿದ್ದಾರೆ. ಬಿಳಿಯರಿಂದ ಗೊತ್ತುಗುರಿಯಿಲ್ಲದ ಸಾಮೂಹಿಕ ಕೊಲೆಯಲ್ಲದೆ ಕೆಲವು ಕಡೆ ವಿಷಪ್ರಯೋಗ, ಸಿಡುಬು, ಕ್ಷಯ ಮುಂತಾದ ಸಾಂಕ್ರಾಮಿಕ ರೋಗಗಳು ಇವುಗಳ ಪರಿಣಾಮವಾಗಿ ಆ ಸಂಖ್ಯೆ ಬಹುಬೇಗ ಕುಗ್ಗಿ, 1966ರಲ್ಲಿ ನಡೆಸಿದ ಗಣತಿಯ ಪ್ರಕಾರ 79,620ಕ್ಕೆ ಇಳಿದಿದೆ. ಟಾಸ್ಮೇನಿಯದ ಆದಿವಾಸಿಗಳು ಮಲಯ, ಪಾಲಿನೇಷ್ಯಗಳಿಂದ ವಲಸೆ ಬಂದ ಪುಟ್ಟ ನೀಗ್ರೊಕಲ್ಪ ಜಾತಿಯವರು. ಇವರು 1888ರ ಕಾಲಕ್ಕೆ ನಿರ್ನಾಮವಾದರು. ಈ ಆದಿವಾಸಿಗಳು ಹೀಗೆ ಅಳಿಯುವುದನ್ನು ತಡೆಗಟ್ಟುವುದಕ್ಕಾಗಿ ಆಸ್ಟ್ರೇಲಿಯ ಸರ್ಕಾರ ವ್ಯಾಪಕವಾದ ಕಾರ್ಯಕ್ರಮವನ್ನು ಕೈಗೊಂಡಿದೆ. ಇದು ಒಬ್ಬ ಸಚಿವನ ನೇತೃತ್ವದಲ್ಲಿ ನಡೆಯುತ್ತಿದೆ. 1967ರಲ್ಲಿ ಆಸ್ಟ್ರೇಲಿಯದ ಸಂವಿಧಾನಕ್ಕೆ ತಿದ್ದುಪಡಿ ಮಾಡಿ ಆದಿವಾಸಿಗಳನ್ನು ಅಧಿಕೃತ ಜನಗಣತಿಯಲ್ಲಿ ಸೇರಿಸಲು ಅವಕಾಶ ಕಲ್ಪಿಸಲಾಯಿತು. ಅಲ್ಲದೆ ಅವರಿಗೆ ಮತದಾನದ ಹಕ್ಕು ನೀಡಲಾಯಿತು. ಉತ್ತರ ಪ್ರಾಂತ್ಯದಲ್ಲಿ ಮೊದಲಿಗೆ 1976ರಲ್ಲಿ ಆದಿವಾಸಿಗಳಿಗೆ ಭೂ ಒಡೆತನದ ಹಕ್ಕು ನೀಡಲಾಯಿತು. ಇತರ ಕೆಲವು ಪ್ರಾಂತ್ಯಗಳಲ್ಲೂ ಈ ಕ್ರಮ ಕೈಗೊಳ್ಳಲಾಗಿದೆ. ಅವರಿಗೆ ಆಧುನಿಕ ಸೌಲಭ್ಯಗಳಿರುವ ಮನೆಗಳನ್ನು ನಿರ್ಮಿಸಿಕೊಡುವ ಹಾಗೂ ಇತರ ಸಾಮಾಜಿಕ ಸೌಲಭ್ಯಗಳನ್ನು ಕಲ್ಪಿಸುವ ಪ್ರಯತ್ನಗಳು ನಡೆಯುತ್ತಿವೆ. ಇದರಿಂದ ಆದಿವಾಸಿಗಳ ಜನಸಂಖ್ಯೆ ಈಚೆಗೆ ಇಳಿಮುಖವಾಗಿಲ್ಲ.

ಈ ಆದಿವಾಸಿಗಳು ಕೃಷಿಜೀವನ ನಡೆಸುವ ಮಟ್ಟಕ್ಕೆ ಏರಲೇ ಇಲ್ಲ; ಉತ್ತರ ಪ್ರಾಂತ್ಯದ ಕೆಲವೇ ಜನರ ಹೊರತು ಬೇಟೆಯಾಡುವುದು, ದೊರಕಿದ ಆಹಾರ ವಸ್ತುಗಳನ್ನು ಸಂಗ್ರಹಿಸುವುದು, ಇವೇ ಅವರ ಮುಖ್ಯ ಕಸಬುಗಳು. ತಾವು ನೆಲೆಸಿದ ಪ್ರದೇಶದ ಜೀವನೋಪಾಯ ಸಾಧನೆಗಳನ್ನು ಇವರು ಚೆನ್ನಾಗಿ ಅರಿತಿರುತ್ತಾರೆ. ಈ ಸಾಧನಗಳು ಕಡಿಮೆಯಾದಾಗಲೆಲ್ಲ ಬೇರೆ ಪ್ರಾಂತ್ಯಗಳಿಗೆ ವಲಸೆಹೋಗುತ್ತಾರೆ. ಅವರಿಗೆ ಜೀವನಾವಶ್ಯಕ ವಸ್ತುಗಳೇ ಅತ್ಯಲ್ಪ. ಬಹುಪಾಲು ಜನರು ನಗ್ನರಾಗಿಯೇ ಇರುತ್ತಾರೆ. ಅವರು ಧರಿಸುವುದು ಕೆಲವು ಆಭರಣಗಳನ್ನು ಮಾತ್ರ. ಮರಳುಗಾಡಿನಲ್ಲಿ ಚಳಿಗಾಲದ ಕೊರೆತದಿಂದ ತಪ್ಪಿಸಿಕೊಳ್ಳಲಾರರು. ಗಾಳಿಬರುವ ದಿಕ್ಕಿಗೆದುರಾಗಿ ಸಣ್ಣದಿಬ್ಬವನ್ನೇರ್ಪಡಿಸಿ ಕೊಳ್ಳುತ್ತಾರೆ. ಪಕ್ಕದಲ್ಲೇ ಬೆಂಕಿಯನ್ನುರಿಸುತ್ತಾರೆ. ಮನೆಗಳನ್ನು ಕಾಣರು. ಅವರಿಗಿರುವುದು, ಕಡ್ಡಿಗಳು, ಎಲೆಗಳಿಂದ ಮಾಡಿದ ಗೂಡಿನಂಥ ಗುಡಿಸಲು. ರಾತ್ರಿಯ ಚಳಿಯನ್ನು ತಡೆಯುವುದಕ್ಕಾಗಿ ಅನೇಕ ಪಂಗಡಗಳ ಜನರು ತಾವು ಆಹಾರಕ್ಕಾಗಿ ಕೊಂದ ಪ್ರಾಣಿಗಳ ಕೊಬ್ಬನ್ನು ಸಾಯಂಕಾಲವೇ ಮೈಗೆಲ್ಲ ಬಳಿದುಕೊಳ್ಳುತ್ತಾರೆ. ಹೆಚ್ಚು ಶಾಖಕ್ಕಾಗಿ ಅದರಮೇಲೆ ಬೂದಿಯನ್ನು ಸವರುತ್ತಾರೆ. ರಾತ್ರಿಯೆಲ್ಲ ಆಗಾಗ್ಗೆ ಎದ್ದು ಹಾಸಿನ ಬದಿಯ ಉರಿಯನ್ನು ಸರಿಮಾಡುತ್ತಾರೆ. ಅವರು ವಾಸಿಸುವ ಪ್ರದೇಶ ಬಹುಪಾಲು ಮರಳುಗಾಡಾದ್ದರಿಂದ ನೀರು ದೊರಕುವುದು ಬಹುಕಷ್ಟ. ಅದನ್ನು ದೊರಕಿಸಿಕೊಳ್ಳುವುದಕ್ಕಾಗಿ ಚಮತ್ಕಾರವಾದ ವಿಧಾನಗಳನ್ನು ತಿಳಿದುಕೊಂಡಿದ್ದಾರೆ. ಡಿಂಗೋ, ಕಾಂಗರೂ ಮುಂತಾದ ಪ್ರಾಣಿಗಳು ಒಂದೆರಡು ಅಡಿ ಆಳದಲ್ಲೇ ನೀರು ಇರುವ ಸ್ಥಳಗಳನ್ನು ವಾಸನೆಯಿಂದ ತಿಳಿದು ಅಲ್ಲಿ ಬಗೆದು ನೀರು ಕುಡಿಯುತ್ತವೆ. ಈ ಪ್ರಾಣಿಗಳನ್ನು ಹಿಂಬಾಲಿಸಿ ಹೋಗಿ ಈ ಜನರೂ ನೀರನ್ನು ದೊರಕಿಸಿಕೊಳ್ಳುತ್ತಾರೆ. ಕೆಲವು ಮರಗಳು ಕೊಳವಿಯಂತಿರುವ ತಮ್ಮ ಬೇರುಗಳಲ್ಲಿ ನೀರನ್ನು ಶೇಖರಿಸುತ್ತವೆ; ಇವುಗಳನ್ನು ಅಗೆದು ಆ ನೀರನ್ನು ಉಪಯೋಗಿಸುತ್ತಾರೆ. ಕೆಲವುವೇಳೆ ಕಪ್ಪೆಗಳು ತಮ್ಮ ಹೊಟ್ಟೆಯಲ್ಲಿ ಶೇಖರಿಸುವ ನೀರನ್ನೂ ತೆಗೆದು ಕುಡಿಯುತ್ತಾರೆ. ಕೆಲವು ಕಡೆ ಬೆಳಿಗ್ಗೆ ಮುಂಚೆಯೇ ಎದ್ದು ಗಿಡಗಳ ಎಲೆಗಳ ಮೇಲಿರುವ ಇಬ್ಬನಿಯನ್ನು ಶೇಖರಿಸುತ್ತಾರೆ.

ಪ್ರಾಣಿಗಳನ್ನು ಬೇಟೆಯಾಡಿಯೇ ಆಹಾರವನ್ನೊದಗಿಸಿಕೊಳ್ಳಬೇಕಾದ ಇವರು ಬೇಟೆಯಲ್ಲಿ ಬಲು ಚತುರರು; ಸುಳಿವು ಕೊಡದೆ ಬೇಟೆಯನ್ನು ಬೆನ್ನಟ್ಟಿ ಹೋಗುವ ನೈಪುಣ್ಯದಲ್ಲಿ ಇವರನ್ನು ಯಾರೂ ಮೀರಿಸಿಲ್ಲ. ಕಲ್ಲಿನ ಮತ್ತು ಮರದ ಆಯುಧಗಳು ಹೆಚ್ಚು ಕಡಿಮೆ ಇತರ ದೇಶಗಳ ಆದಿವಾಸಿಗಳ ಆಯುಧಗಳಂತೆಯೇ ಇದ್ದರೂ ಬೂಮರ್ಯಾಂಗ್ ಇವರ ವಿಶಿಷ್ಟ ಆಯುಧ. ಇದು ಗುರಿಗೆ ತಗಲಿದಮೇಲೆ ಎಸೆದವನ ಬಳಿಗೇ ಬಂದು ಬೀಳುತ್ತದೆ. ಇದನ್ನು ಪ್ರಾಚೀನ ಈಜಿಪ್ಟ್, ಭಾರತ ಮುಂತಾದ ಕೆಲವು ದೇಶಗಳಲ್ಲೂ ಉಪಯೋಗಿಸುತ್ತಿದ್ದರೆಂದು ತಿಳಿದುಬಂದಿದೆ. ಆದರೆ ಆಸ್ಟ್ರೇಲಿಯದ ಆದಿವಾಸಿಗಳು ಇದನ್ನು ಪ್ರಯೋಗಿಸಿದಷ್ಟು ಬೇರೆ ಯಾವ ದೇಶದವರೂ ಪ್ರಯೋಗಿಸಲಿಲ್ಲ. ಸದ್ದಿಲ್ಲದೆ ಬೇಟೆಯನ್ನು ಬೆನ್ನಟ್ಟುವುದನ್ನು ಇವರು ಮಕ್ಕಳಿಗೆ ಬಾಲ್ಯದಿಂದಲೂ ಕಲಿಸುತ್ತಾರೆ.

ಹಗಲೆಲ್ಲ ಬೇಟೆ, ಆಹಾರ ಶೇಖರಣೆಯಲ್ಲಿ ಕಾಲಕಳೆಯುತ್ತ ರಾತ್ರಿ ಬರಿಮೈಯಲ್ಲಿ ನೆಲದ ಮೇಲೆ ಮಲಗುವ ಈ ಆದಿವಾಸಿಗಳಿಗೆ, ಕಲಾಪ್ರಜ್ಞೆ ಅಥವಾ ಆಸಕ್ತಿ ಇದ್ದರೂ ಅದನ್ನು ಬೆಳೆಸಲು ಅವಕಾಶವೇ ಇಲ್ಲ. ಆದರೆ ನೀರು, ಆಹಾರ ಹೆಚ್ಚು ಕಷ್ಟವಿಲ್ಲದೆ ದೊರಕುವ ಕಡೆಗಳಲ್ಲಿ ಆದಿವಾಸಿಗಳ ಕಲಾಪ್ರಜ್ಞೆ ಕೊಂಚವಾದರೂ ವಿಕಸಿಸಿರುವುದನ್ನು ಕಾಣಬಹುದು. ಅಲಂಕರಣಕ್ಕಾಗಿ ಆಯುಧಗಳ ಮೇಲೆ ಚಿತ್ರಗಳನ್ನು ಕೊರೆಯುವುದು, ಬಂಡೆಗಳ ಮೇಲೆ ಕೆತ್ತಿ ಚಿತ್ರಗಳನ್ನು ಮಾಡುವುದು, ಗುಹೆಗಳಲ್ಲಿ ಬೇಟೆಯ ದೃಶ್ಯ ಮುಂತಾದುವುಗಳನ್ನು ಬಣ್ಣಗಳಲ್ಲಿ ತೋರಿಸುವುದು, ಇವೆಲ್ಲ ಆದಿಕಾಲದಿಂದಲೂ ಕಲಾಭಿರುಚಿ ಮಾನವನಲ್ಲಿ ಬೆಳೆದುಬಂದಿದೆ ಎಂಬುದಕ್ಕೆ ನಿದರ್ಶನಗಳು. ಇಲ್ಲಿನ ಜನ ತೀರ ಅನಾಗರಿಕ ರಾದ್ದರಿಂದ ಅವರ ಚಿತ್ರಗಳು ತುಂಬ ಒರಟಾಗಿವೆ, ಚಿಕ್ಕಮಕ್ಕಳು ಬರೆಯಲೆತ್ನಿಸುವ ಚಿತ್ರಗಳಂತೆ. ಆದರೆ ಮಾನವ ನಾಗರಿಕತೆಯ ವಿಕಾಸವನ್ನು ತಿಳಿಯಬೇಕೆನ್ನುವವರಿಗೆ ಈ ಚಿತ್ರಗಳು ಸ್ವಾರಸ್ಯಪುರ್ಣವೂ ಬೋಧಪ್ರದವೂ ಆಗಿವೆ.

ಜಾನಪದ

[ಬದಲಾಯಿಸಿ]

ಮಾನವಶಾಸ್ತ್ರ ಹಾಗೂ ಜಾನಪದ ಅಧ್ಯಯನಗಳಿಗೆ ಅಪಾರ ಸಾಮಗ್ರಿಯನ್ನು ಒದಗಿಸಿರುವ ರಾಷ್ಟ್ರಗಳಲ್ಲಿ ಆಸ್ಟ್ರೇಲಿಯವೂ ಒಂದು. ಅಮೆರಿಕ, ಆಫ್ರಿಕಗಳಂತೆ ಜಾನಪದ ಅಧ್ಯಯನಕ್ಕೆ ಅಲ್ಲಿನ ಮೂಲನಿವಾಸಿಗಳನ್ನು ದೃಷ್ಟಿಯಲ್ಲಿಟ್ಟುಕೊಳ್ಳಬೇಕಾದುದು ಅಗತ್ಯ. ಆಸ್ಟ್ರೇಲಿಯದ ಜಾನಪದವೆಂದರೆ ಆಸ್ಟ್ರೇಲಿಯದ ಮೂಲನಿವಾಸಿಗಳ ಜಾನಪದವೇ. ಏಕೆಂದರೆ 1788ರಲ್ಲಿ ಐರೋಪ್ಯರು ಆ ಖಂಡದಲ್ಲಿ ಪದಾರ್ಪಣ ಮಾಡಿ ಅವರೇ ಇಂದು ಬಹುಸಂಖ್ಯಾತ ರೆನಿಸಿದ್ದರೂ ಶೇ.90ರಷ್ಟು ಜನಸಂಖ್ಯೆ ಅವರದೇ ಆಗಿದ್ದರೂ ಅವರ ಜಾನಪದ ಹಿನ್ನೆಲೆಯನ್ನು ಅಭ್ಯಸಿಸಲು ಅವರ ಸ್ವರಾಷ್ಟ್ರಗಳತ್ತಲೇ ನಾವು ದೃಷ್ಟಿಯನ್ನು ಹರಿಸಬೇಕು. ಸಹಸ್ರಾರು ವರ್ಷಗಳ ಪರಂಪರೆಯ ಮುದ್ರೆಯನ್ನು ಪಡೆದ ಮೂಲನಿವಾಸಿಗಳ ಜಾನಪದವೇ ಬಹಳ ಮುಖ್ಯವಾದುದು. ಆಸ್ಟ್ರೇಲಿಯದ ನೆಲದ ಕಂಪು, ಕಸುವುಗಳನ್ನು ಪಡೆದ ದೇಶೀಯರ ಜಾನಪದದ ಸಂಗ್ರಹಣೆ ಅಭ್ಯಾಸಗಳು ಕಳೆದ ಶತಮಾನದಿಂದಲೇ ನಡೆದು ಅತ್ಯುತ್ತಮ ಸಂಕಲನಗಳು ಹೊರಬಂದಿವೆ.

ಆದಿವಾಸಿಗಳ ಬಗ್ಗೆ ಅನೇಕ ಸಂಶೋಧನ ಗ್ರಂಥಗಳು ಪ್ರಕಟವಾಗಿವೆ. ರೆವರೆಂಡ್ ರಿಡ್ಲೆ ಆದಿವಾಸಿಗಳ ಭಾಷೆಯನ್ನು ಅಭ್ಯಸಿಸಿ 1866ರಲ್ಲೇ ಒಂದು ಗ್ರಂಥವನ್ನು ಪ್ರಕಟಿಸಿದ. ಮ್ಯಾಥ್ಯು ಜಾನ್ನ ಆಸ್ಟ್ರೇಲಿಯದ ಮೂಲನಿವಾಸಿಗಳ ಒಂದು ಅಧ್ಯಯನ (1899), ಆಂಗ್ಲೋ ಸಾರ್ಕರ್ನ ಆಸ್ಟ್ರೇಲಿಯದ ಲೆಜೆಂಡರಿ ಟೇಲ್ಸ್ (1896), ಮೋರ್ ಆಸ್ಟ್ರೇಲಿಯನ್ ಲೆಜೆಂಡರಿ ಟೇಲ್ಸ್ (1898), ಆಸ್ಟ್ರೇಲಿಯ ಮೂಲನಿವಾಸಿ ಜೀವನದ ಒಂದು ಅಧ್ಯಯನ (1905), ಆಸ್ಟ್ರೇಲಿಯನ್ ಅಬಾರಿಜಿನಲ್ ಲೆಜೆಂಡ್ಸ್ (1930), ಇಲ್ಕಿನ್ನ ಆಸ್ಟ್ರೇಲಿಯದ ಮೂಲನಿವಾಸಿಗಳು-ಅವರನ್ನು ಅರ್ಥ ಮಾಡಿಕೊಳ್ಳುವ ಬಗೆ (1938) ಮುಂತಾದ ಕೃತಿಗಳು ಬಹಳ ಹಿಂದೆಯೇ ಪ್ರಕಟವಾಗಿ ಆಸ್ಟ್ರೇಲಿಯದ ಮೂಲನಿವಾಸಿಗಳ ಬಗ್ಗೆ ಜಾನಪದ ಸಂಬಂಧವಾಗಿ ಅನೇಕ ಅಮೂಲ್ಯ ವಿಷಯಗಳನ್ನು ದೊರಕಿಸುತ್ತವೆ. ರಾಬರ್ಟ್ ಎಚ್ ಲೂಯಿ ಮುಂತಾದ ಮಾನವಶಾಸ್ತ್ರಜ್ಞರಂತೂ ಆಸ್ಟ್ರೇಲಿಯನ್ನರ ಜಾನಪದವನ್ನು ತಮ್ಮ ಸಾಂಸ್ಕೃತಿಕ ಮಾನವಶಾಸ್ತ್ರ ಕೃತಿಗಳಲ್ಲಿ ಹೇರಳವಾಗಿ ಬಳಸಿಕೊಂಡಿದ್ದಾರೆ.

ಮೂಲನಿವಾಸಿಗಳಲ್ಲಿ ಟಾಸ್ಮೇನಿಯನ್ ಬುಡಕಟ್ಟಿಗೆ ಸೇರಿದ ಜನ ಸಹಸ್ರಾರು ವರ್ಷಗಳ ಹಿಂದೆಯೇ ಆ ನೆಲದ ಮಕ್ಕಳಾಗಿ ಬಾಳಿದವರು. 1876ರವರೆಗೂ ಅವರ ಬುಡಕಟ್ಟಿಗೆ ಸೇರಿದವರು ಇದ್ದರು ಎಂದು ಗುರುತಿಸಲಾಗಿದೆ. ಈ ಜನಾಂಗ ಆಸ್ಟ್ರೇಲಿಯಕ್ಕೆ ಕಾಲಿಟ್ಟ ಎಷ್ಟೋ ವರ್ಷಗಳ ತರುವಾಯ ಕಪ್ಪುಜನ ಆಗಮಿಸಿದರು. ಕಪ್ಪು ಮಿಶ್ರಿತ ಚಾಕೊಲೇಟ್ ಬಣ್ಣದ, ವಂಕಿವಂಕಿಯಾದ ಗುಂಗುರು ಗೂದಲಿನ ಈ ಜನರ ಸಂಖ್ಯೆ 1788ರಲ್ಲಿ 35,000 ಎಂದು ಅಂದಾಜು ಮಾಡಲಾಗಿತ್ತು. ಐರೋಪ್ಯರ ಪ್ರಾಬಲ್ಯದಿಂದ ಕ್ರಮೇಣ ಈ ಜನಸಂಖ್ಯೆ ಕುಗ್ಗುತ್ತಾ ಬಂತು. ಪಶ್ಚಿಮ ಆಸ್ಟ್ರೇಲಿಯ, ಉತ್ತರ ಪ್ರಾಂತ್ಯ, ಉತ್ತರ ಕ್ವೀನ್ಸ್ ಲೆಂಡ್, ದಕ್ಷಿಣ ಆಸ್ಟ್ರೇಲಿಯಗಳಲ್ಲಿ ವಿಶೇಷವಾಗಿ ನೆಲೆಸಿರುವ ಇವರಲ್ಲಿ ನೂರಾರು ಒಳಪಂಗಡಗಳು ಇವೆ. ಗೊತ್ತಾದ ಪ್ರದೇಶವೊಂದನ್ನು ತನ್ನದು ಎಂಬಂತೆ ಭಾವಿಸಿ ಬೇಟೆಯನ್ನೇ ಅವಲಂಬಿಸಿ ಜೀವಿಸುವ ಜನ ಇವರು. ಉಳುವುದನ್ನರಿಯರು. ಇವರಿಗೆ ಸಾಕುಪ್ರಾಣಿಗಳ ಅಗತ್ಯವಿಲ್ಲ. ಎಲ್ಲದಕ್ಕೂ ಪ್ರಕೃತಿಯನ್ನೇ ಅವಲಂಬಿಸಿ ನಿಂತವರು. ಜೀವಜಂತುಗಳನ್ನೂ ಗೆಡ್ಡೆಗೆಣಸುಗಳನ್ನೂ ಹಣ್ಣುಸೊಪ್ಪುಗಳನ್ನೂ ತಿಂದೇ ಕಾಲ ಹಾಕುವವರು. ಇವರು ಗಿಡದಿಂದ ಬಿಡಿಸಿಕೊಳ್ಳುವುದನ್ನು ಬಲ್ಲರೇ ಹೊರತು ನೆಲದಿಂದ ಏನನ್ನೂ ಬೆಳೆಯವ ಗೋಜಿಗೆ ಹೋದವರಲ್ಲ.

ಆಸ್ಟ್ರೇಲಿಯದ ಮೂಲನಿವಾಸಿಗಳ ಪೂರ್ವಿಕರು ನೀರಿನ ಅನುಕೂಲವಿರುವ ಸ್ಥಳಗಳಲ್ಲಿ ನೆಲೆಸಿದ್ದರು. ಆ ಎಡೆಗಳಲ್ಲೇ ಇವರಿಗೆ ಅತ್ಯಂತ ಪವಿತ್ರವಾದುವು. ಅವರ ಆತ್ಮಗಳು ಇಂದಿಗೂ ಆ ಎಡೆಗಳಲ್ಲೇ ಇವೆ-ಎಂಬ ನಂಬಿಕೆಯಿರುವುದರಿಂದ ತಮ್ಮ ಪ್ರದೇಶಗಳನ್ನು ಬಿಟ್ಟು ಇವರು ದೂರ ಹೋಗುವುದಿಲ್ಲ. ಒಳ್ಳೆಯ ನಡತೆಗೆ, ವಿನಯಕ್ಕೆ, ಪ್ರಾಮಾಣಿಕತೆಗೆ ಹೆಸರಾದ ಈ ಜನ ವಿನೋದಪ್ರಿಯರೂ ಹೌದು. ತುಂಬ ಉಲ್ಲಾಸದಿಂದ ತಮ್ಮ ಬದುಕನ್ನು ಹೊರೆಯುತ್ತಾರೆ. ಈ ಜನ ತಾಳ್ಮೆಗೆ ಹೆಸರಾದವರು. ನೈತಿಕತೆ ಇವರ ಬದುಕಿನ ಉಸಿರು. ಪ್ರಕೃತಿಯ ಮಡಿಲಲ್ಲಿ ಬೆಳೆಯುವ ಇವರು ಹೆಚ್ಚು ಸಾಹಸಿಗಳು. 5-6 ಅಡಿಗಳಷ್ಟು ಎತ್ತರವಾಗಿರುವ, ದೃಢಕಾಯರಾದ ಈ ಮೂಲನಿವಾಸಿಗಳು ನಡುವಿಗೆ ಸುತ್ತಿರುವ ಮಾನವ ಕೂದಲಿನ ಪಟ್ಟಿಗೆ ಅನೇಕ ಬಗೆಯ ಆಯುಧಗಳನ್ನು ಸಿಕ್ಕಿಸಿಕೊಂಡಿರುತ್ತಾರೆ. ಮುಖದ ಅಂಚಿನಲ್ಲಿ ಒಂದು ಬಗೆಯ ಬಣ್ಣವನ್ನು ಬಳಿದುಕೊಂಡಿರುತ್ತಾರೆ. ಆಹಾರವನ್ನು ಸೇವಿಸಿದ ಮೇಲೆ ಚೆನ್ನಾಗಿ ಬಾಯಿ ಮುಕ್ಕಳಿಸದೇ ಇರುವುದಿಲ್ಲ. ಇದ್ದಿಲಿನಿಂದ ಶುದ್ಧಿಗೊಳಿಸುವುದೂ ಉಂಟು. ಬಿಸಿಯಾದದ್ದೇನನ್ನೂ ಕುಡಿಯರು. ಹೀಗಾಗಿ ಇವರ ಹಲ್ಲುಗಳು ಹೆಚ್ಚು ಭದ್ರ, ಆಕರ್ಷಕ. ಇತ್ತೀಚೆಗೆ ಇಂಥ ಉತ್ತಮ ಅಭ್ಯಾಸಗಳು ಇವರಲ್ಲಿಯೂ ತಪ್ಪಿಹೋಗುತ್ತಿವೆ.

ಚುಂಬನವೇ ಬಿಳಿಯರ ಅವಿವೇಕ ಎಂದು ಈ ಜನ ಭಾವಿಸುತ್ತಾರೆ. ಹಸ್ತಲಾಘವವೂ ಅಷ್ಟೆ, ಇವರ ದೃಷ್ಟಿಯಲ್ಲಿ ಹಾಸ್ಯಾಸ್ಪದ. ಒಂದು ಕಾಲಕ್ಕೆ ಇವರು ಆಗಂತುಕರ ಮೈವಾಸನೆ ಸೋಕಿದರೂ ಅಪಾಯ ಎಂದು ಭಾವಿಸುತ್ತಿದ್ದರು.

ನ್ಯಾಯಕ್ಕೆ ತಲೆಬಾಗಿ ನಡೆಯುವ ಇವರು ಸತ್ಯಸಂಧರು. ನ್ಯಾಯ ಉಲ್ಲಂಘನೆ ಎಂದರೆ ಅದೊಂದು ಘೋರ ಅಪರಾಧ. ಒಂದೊಂದು ಬುಡಕಟ್ಟಿನಲ್ಲೂ ಅಸಂಖ್ಯಾತ ಕಟ್ಟುಕಟ್ಟಳೆಗಳು ಇವೆ. ತಪ್ಪು ಮಾಡಿದವನಿಗೆ ಶಿಕ್ಷೆ ಎಂದರೆ ಒಂದಲ್ಲ ಒಂದು ರೀತಿಯಲ್ಲಿ ಅವನಿಗೆ ಗಾಯಗಳನ್ನುಂಟುಮಾಡುವುದು ಇಲ್ಲವೇ ಮರಣ ದಂಡನೆಯನ್ನೇ ವಿಧಿಸುವುದು. ಪ್ರತಿಯೊಬ್ಬರೂ ತಮ್ಮ ವರ್ಗದ ಕಟ್ಟುಗಳಿಗೆ ವಿಧೇಯರಾಗಿ ನಡೆದುಕೊಳ್ಳುವರು. ಸರ್ಕಾರದ ಭಯಕ್ಕಿಂತ ತಮ್ಮ ಜನಗಳ ಕಟ್ಟಳೆಗಳೇ ಇವರಿಗೆ ಮುಖ್ಯ. ಮೂರು ಅಕ್ಷಮ್ಯ ಅಪರಾಧಗಳನ್ನು ಈ ಜನ ಸಹಿಸರು. ಯಾವ ವ್ಯಕ್ತಿಯೂ ಜನಾಂಗದ ಹಿರಿಯ ವ್ಯಕ್ತಿಗೆ ಸುಳ್ಳು ಹೇಳಕೂಡದು; ಅಪ್ರಚೋದಿತವಾಗಿ ಕೊಲೆ ಮಾಡಬಾರದು; ನಿಷೇಧಿಸಲ್ಪಟ್ಟ ವರ್ಗದಲ್ಲಿನ ಸ್ತ್ರೀಯರನ್ನು ಅಪಹರಿಸಕೂಡದು. ಇಂಥವರಿಗೆ ಜನಾಂಗದವರು ವಿಧಿಸುವ ಶಿಕ್ಷೆಯ ಜೊತೆಗೆ ಕೆಳಲೋಕದ ಕತ್ತಲು ಕವಿದ ಘೋರ ನರಕವೂ ಕಾದಿರುತ್ತದೆ.

ವಯಸ್ಸು ಮತ್ತು ಅನುಭವದ ಆಧಾರದ ಮೇಲೆ ಕುಟುಂಬದ ಯಜಮಾನನ ಆಯ್ಕೆಯಾಗುತ್ತದೆ. ಸಾಮಾನ್ಯವಾಗಿ ಒಂದು ವರ್ಗದ ಮುಖಂಡ ತನ್ನ ಧೈರ್ಯ, ಸಾಹಸ ಹಾಗೂ ಆದರ್ಶಗುಣಗಳಿಗೆ ಹೆಸರಾಗಿರುತ್ತಾನೆ. ಇವನು ಹಿರಿಯರ ಸಲಹೆಗಳ ಮೇರೆಗೆ ನ್ಯಾಯಪಾಲನೆ ಮಾಡುತ್ತಾನೆ. ತನ್ನ ವರ್ಗದವರ ಹಿತರಕ್ಷಣೆ ಮಾಡುತ್ತಾನೆ. ಸಾಂಪ್ರದಾಯಿಕ ಕಟ್ಟುಕಟ್ಟಳೆಗಳನ್ನು ಜನ ಮುರಿಯದಂತೆ ಎಚ್ಚರ ವಹಿಸುತ್ತಾನೆ. ಸಣ್ಣಪುಟ್ಟ ವಿವಾದಗಳನ್ನು ಒಳಜಗಳಗಳನ್ನು ಪರಿಹರಿಸುತ್ತಾನೆ. ಸಂಖ್ಯೆಗಳಿಗೆ ಆಸ್ಟ್ರೇಲಿಯದ ಮೂಲನಿವಾಸಿಗಳು ಹೆಚ್ಚು ಗಮನ ಕೊಟ್ಟಿಲ್ಲ; ಅದರ ಅಗತ್ಯವೂ ಅವರಿಗೆ ಹೆಚ್ಚಾಗಿ ಇದ್ದಂತಿಲ್ಲ. ಕೆಲವು ಪಕ್ಷಿಗಳ ಹೆಸರಿನಲ್ಲಿ ಸಂಖ್ಯೆಗಳನ್ನು ನೆನಪಿಟ್ಟುಕೊಳ್ಳುತ್ತಾರೆ. ಗುಂಡೋಯಿ ಎಂದರೆ ಒಂದು ಹಕ್ಕಿ, ಬೊಲೊವ್ಹ ಎಂದರೆ ಎರಡು ಹಕ್ಕಿ, ಊಗ್ಲೆ ಎಂದರೆ ನಾಲ್ಕು ಹಕ್ಕಿ, ಹೀಗೆಯೇ ಒಂದೊಂದು ಪಕ್ಷಿಯ ಹೆಸರಿನಲ್ಲಿ ಕೆಲವು ಆವಶ್ಯಕ ಸಂಖ್ಯೆಗಳನ್ನು ನೆನಪಿಟ್ಟುಕೊಳ್ಳುತ್ತಾರೆ. ಕುಲದೇವತೆಯ ಹಿನ್ನೆಲೆಯಲ್ಲಿ ವಿವಾಹಗಳು ನಡೆಯುತ್ತವೆ. ಸಾಮಾನ್ಯವಾಗಿ ಅತ್ಯಂತ ಕಡಿಮೆ ವೆಚ್ಚದಲ್ಲಿ ಸರಳವಾಗಿ ಮದುವೆಗಳಾಗಿಬಿಡುವ ಉತ್ತಮ ಉಪಾಯಗಳನ್ನೂ ಇವರು ಕಂಡುಕೊಂಡಿದ್ದಾರೆ. ಒಂದು ಕುಟುಂಬದಲ್ಲಿ ಒಂದು ಹೆಣ್ಣು, ಒಂದು ಗಂಡಿದ್ದರೆ ಅಂಥದೇ ಮತ್ತೊಂದು ಕುಟುಂಬವನ್ನು ಆರಿಸಿ ಸುಲಭವಾಗಿ ಹೆಣ್ಣುಗಂಡುಗಳನ್ನು ಅದಲು ಬದಲು ಮಾಡಿಕೊಳ್ಳುತ್ತಾರೆ.

ಆಸ್ಟ್ರೇಲಿಯದ ಮೂಲನಿವಾಸಿಗಳಲ್ಲಿ ಎರಡು ಬಗೆಯ ಪಂಡಿತರನ್ನು ಕಾಣಬಹುದು. ಮಾಟ, ಮಂತ್ರಗಳ ಮೂಲಕ ಇತರರಿಗೆ ತೊಂದರೆ ಮಾಡುವ ಮಂತ್ರಶಕ್ತಿಯನ್ನು ಪಡೆದ ಮೊದಲ ವರ್ಗದವರ ಬಗ್ಗೆ ಅವರಿಗೆ ತುಂಬ ಭಯ. ಅವರನ್ನು ತುಂಬ ಕೀಳಾಗಿ ಭಾವಿಸುತ್ತಾರೆ. ಕೆಲವು ವ್ಯಕ್ತಿಗಳು ತಮಗೆ ಮಂತ್ರ, ಮಾಟಗಳು ಗೊತ್ತೆಂದು ಹೆಮ್ಮೆಯಿಂದ ಹೇಳಿಕೊಳ್ಳುವುದೂ ಉಂಟು.

ಕೆಲವು ಸಾಮಾನ್ಯ ರೋಗಗಳಿಗೆ ಈ ಮೂಲನಿವಾಸಿಗಳು ತಾವೇ ಔಷಧಿಗಳನ್ನು, ಪರಿಹಾರಗಳನ್ನು ಕಂಡುಕೊಂಡಿದ್ದಾರೆ. ಆದರೆ ಮಂತ್ರ, ಮಾಟ ಸಂಬಂಧವಾದ ರೋಗಗಳಿಗೆ ಅನುಭವಿಯಾದ ಪಂಡಿತ ಬರಲೇಬೇಕು. ಈತನೇ ಎರಡನೆಯ ಬಗೆಯವ. ಈತ ಉತ್ತಮ ಔಷಧದಿಂದಲೇ ರೋಗಗಳನ್ನು ಗುಣಪಡಿಸಿದರೂ ಜನರ ನಂಬಿಕೆಗಾಗಿಯಾದರೂ ರೋಗಿಗಳ ಶರೀರವನ್ನು ಉಜ್ಜಿ, ಬಾಯಲ್ಲಿ ಕಚ್ಚಿ ಹೀರುವಂತೆ ನಟಿಸಿ ದುಷ್ಟಶಕ್ತಿಗಳ ರೂಪದಲ್ಲಿ ಸೇರಿಕೊಂಡಿದ್ದ ಮೂಳೆಗಳನ್ನೂ ಕಲ್ಲುಗಳನ್ನೂ ಹೊರತೆಗೆದಂತೆ ಮಾಡುತ್ತಾನೆ. ಆ ವಸ್ತುಗಳು ಹೊರಗೆ ಹೋದರೆ ಆ ರೋಗಿ ಗುಣಮುಖನಾಗುತ್ತಾನೆ. ಜನರಿಗೆ ಇವನ ಬಗ್ಗೆ ತುಂಬ ಗೌರವ. ಅನೇಕ ಶಕ್ತಿಗಳನ್ನು ಕೈವಶ ಮಾಡಿಕೊಂಡವನೀತ ಎಂಬ ನಂಬಿಕೆ ಅವರಿಗೆ. ಆದರೆ ಇವನೇ ಕಾಯಿಲೆ ಬಿದ್ದಾಗ ಇತರರ ನೆರವನ್ನು ಕೋರುತ್ತಾನೆ.

ಮೂಲನಿವಾಸಿಗಳು ಮಾನವನಿಗೆ ಸಂಬಂಧಿಸಿದಂತೆ ಮೂರು ಬಗೆಯ ಆತ್ಮಗಳಿವೆ ಎಂದು ಭಾವಿಸುತ್ತಾರೆ. ಯೋವಿ ಎನ್ನುವುದು ಹುಟ್ಟಿದೊಡನೆಯೇ ಮಾನವ ಶರೀರವನ್ನು ಪ್ರವೇಶಿಸಿ, ಶರೀರದ ಜೊತೆಯಲ್ಲಿಯೇ ಬೆಳೆದು, ಅದರ ಜೊತೆಯಲ್ಲಿಯೇ ನಾಶವಾಗುತ್ತದೆ; ಅಥವಾ ಇತರ ವಸ್ತುವಿನ ಸಂಪರ್ಕವನ್ನು ಪಡೆದು, ಶರೀರದಿಂದ ಪ್ರತ್ಯೇಕಗೊಂಡು ಗಾಳಿಯಾಗಿ ರೂಪಗೊಳ್ಳುತ್ತದೆ. ಎರಡನೆಯ ಆತ್ಮ ಡೋವಿ ಸ್ವಪ್ನಕ್ಕೆ ಸಂಬಂಧಪಟ್ಟುದು. ಶರೀರ ವಿಶ್ರಾಂತಿಯಲ್ಲಿರುವಾಗ ಸ್ವಚ್ಛಂದವಾಗಿ ಎಲ್ಲಿಬೇಕಾದರೂ ಅಡ್ಡಾಡಿಕೊಂಡು ಬರುವ ಸೌಲಭ್ಯ ಇದರದು. ಸಾಮಾನ್ಯ ಜನರಿಗೆ ಡೋವಿಯ ಮೇಲೆ ನಂಬಿಕೆ ಸಾಲದು. ನಿದ್ರಿಸುವಾಗ ಅದು ಶರೀರದಿಂದ ನುಣುಚಿಕೊಳ್ಳದಿರಲಿ ಎಂದು ಭದ್ರವಾಗಿ ಬಾಯಿಮುಚ್ಚಿಕೊಂಡು ಮಲಗುತ್ತಾರೆ. ಮೂರನೆಯ ಮುಲೋವಿ ಮನುಷ್ಯನ ನೆರಳಿಗೆ ಸಂಬಂಧಿಸಿದ ಆತ್ಮ. ಕೆಲವರು ಇದರ ಉಪಯೋಗವನ್ನು ಬಹಳ ಚೆನ್ನಾಗಿ ಪಡೆದುಕೊಳ್ಳುತ್ತಾರೆ. ಎಲ್ಲಿಗೆ ಬೇಕಾದರೂ ಯಾರಿಗೆ ಏನು ಮಾಡಬೇಕಾದರೂ ಇದನ್ನು ಕಳಿಸುವ ಶಕ್ತಿ ಪಡೆದಿರುತ್ತಾರೆ. ಮೋಬೀ ಎಂಬ ಪ್ರಾಣಿಸಂಬಂಧವಾದ ಮತ್ತೊಂದು ಆತ್ಮವಿದೆಯೆಂದೂ ಕೆಲವರು ನಂಬುತ್ತಾರೆ. ಮರ, ಅಣಬೆ, ದೆವ್ವದ ಆಹಾರ ಎಂಬ ನಂಬಿಕೆ ಜನರಲ್ಲಿದೆ. ತಮ್ಮ ಮಕ್ಕಳು ಅವನ್ನು ಮುಟ್ಟದಂತೆ ಅವರು ಅತ್ಯಂತ ಎಚ್ಚರದಿಂದ ನೋಡಿಕೊಳ್ಳುತ್ತಾರೆ. ತಲೆಗೂದಲ ಬಗ್ಗೆ ಹೆಂಗಸರಿಗೆ ತುಂಬ ಶ್ರದ್ಧೆ. ಅವರ ಕೂದಲನ್ನು ಗಂಡ ಅಪಹರಿಸಿ ಯಾವ ರೀತಿಯ ತೊಂದರೆಯನ್ನಾದರೂ ಅವರಿಗೆ ಕೊಡಬಹುದು. ತಮ್ಮ ತಲೆಗೂದಲು ಹೋದರೆ ಯಾವ ಗಳಿಗೆಯಲ್ಲಾದರೂ ಮರಣ ಬರಬಹುದೆಂದು ಅವರು ಹೆದರುತ್ತಾರೆ.

ಮೂಲನಿವಾಸಿಗಳ ಆಚಾರ ವಿಚಾರಗಳು ನಂಬಿಕೆಗಳು, ನಡೆವಳಿಗಳು, ವೈದ್ಯ, ಮಾಟ, ಮಂತ್ರಗಳಂತೆ ನೃತ್ಯ ಸಾಹಿತ್ಯಗಳೂ ಜಾನಪದ ಅಧ್ಯಯನದಲ್ಲಿ ಗಮನಾರ್ಹವಾದುವು. ನೃತ್ಯಗಳು ಜಾನಪದ ಕಲೆಗಳ ಒಂದು ಪ್ರಮುಖ ಅಂಗ. ಮೂಲನಿವಾಸಿಗಳ ನೃತ್ಯಗಳಲ್ಲಿ ಸಾಮೂಹಿಕ ನೃತ್ಯಗಳು ಮುಖ್ಯ. ಅವರ ಮನರಂಜನೆಯ ಮುಖ್ಯ ಸಾಧನಗಳೇ ಅವು. ಈ ನೃತ್ಯಗಳಿಗೆ, ಹಾಡುಗಳಿಗೆ, ಕುಣಿತ ಮಣಿತಗಳಿಗೆ ಅನೇಕ ಸಂದರ್ಭಗಳಲ್ಲಿ ಭೂತಗಳು ಪ್ರಚೋದನೆ ನೀಡುತ್ತವೆಯೆಂದು ಅವರು ಭಾವಿಸುತ್ತಾರೆ. ಆವೇಶದಿಂದ ಕುಣಿಯುವಾಗ, ಹಾಡುವಾಗ ಭೂತಗಳು ಶಕ್ತಿಯನ್ನು ತುಂಬಿದರೂ ಆಶ್ಚರ್ಯವಿಲ್ಲ. ಇವರ ನೃತ್ಯಗಳಲ್ಲಿ ಸ್ತ್ರೀಯರು ಬೂಮರ್ಯಾಂಗ್ ಎಂಬ ಬಿಲ್ಲಿನಂಥ ಸಾಧನಗಳೆರಡನ್ನು ಕುಟ್ಟುತ್ತ ಅಥವಾ ಕಂಬಳಿ ಸುತ್ತಿದ ವಾದ್ಯವೊಂದನ್ನು ಬಡಿಯುತ್ತ ಹಾಡುತ್ತಾರೆ. ಪುರುಷರು ಕುಣಿಯುತ್ತಾರೆ. ಈ ನೃತ್ಯದವರು ತಮ್ಮ ಮುಡಿಯನ್ನು ಹಕ್ಕಿಯ ಗರಿಗಳಿಂದ ಅಲಂಕರಿಸಿಕೊಳ್ಳುತ್ತಾರೆ. ಮೈಯನ್ನು ನಾನಾರೀತಿಯ ಬಣ್ಣಗಳಿಂದ ಚಿತ್ರಿಸಿಕೊಳ್ಳುತ್ತಾರೆ. ಹೀಗೆ ಸಿದ್ಧಮಾಡಿಕೊಂಡು ರಂಗವನ್ನು ಪ್ರವೇಶಿಸುವುದರಲ್ಲಿ ದೊಡ್ಡದಾಗಿ ಹಾಕಿದ ಬೆಂಕಿ ವಿಸ್ತಾರವಾದ ಬಯಲಿನಲ್ಲಿ ಬೆಳಕು ಚೆಲ್ಲುತ್ತದೆ. ಅನೇಕ ಕಷ್ಟಸಾಧ್ಯವಾದ ಕೌಶಲಮಯವಾದ ನೃತ್ಯವೈಖರಿಯನ್ನು ಮೆರೆಯುತ್ತ ಕುಣಿಯುವ ಪುರುಷರು ಹಕ್ಕಿಗಳ ಕೂಗನ್ನೂ ಚಲನೆಯನ್ನೂ ಅನುಕರಿಸುತ್ತಾರೆ.

ಜಾನಪದ ಸಾಹಿತ್ಯದ ಬಗೆಗಳಲ್ಲಿ ಐತಿಹ್ಯಗಳ ಪಾತ್ರವೂ ಬಹಳ ಪ್ರಮುಖವಾದುದು. ಆಸ್ಟ್ರೇಲಿಯದಲ್ಲಿ ಅಪಾರ ಸಂಖ್ಯೆಯ ಐತಿಹ್ಯಗಳು ಲಭ್ಯವಾಗುತ್ತವೆ. ನಿಸರ್ಗದ ಅನೇಕ ಅದ್ಭುತಗಳಿಗೆ ಸಂಬಂಧಿಸಿದಂತೆ ಉತ್ತಮ ಐತಿಹ್ಯಗಳು ಹುಟ್ಟಿಕೊಂಡಿವೆ. ಬ್ರಿವೇರಿನದ ಬಳಿ ಇರುವ ಪ್ರಸಿದ್ಧ ಗುರುತುಗಳು ಬ್ಯಾಮೀ ದೈವದ ಮತ್ತು ಆತನ ದೈತ್ಯಪುತ್ರರ ಕಾರ್ಯವೆನ್ನಲಾಗಿದೆ. ಬೂಗೀರಿಯದ ಸರೋವರದ ಬಳಿ ಕಲ್ಲಿನ ಮೇಲೆ ಇರುವ ಗುರುತುಗಳನ್ನು ಬ್ಯಾಮೀಯ ಹಸ್ತ ಮತ್ತು ಪಾದದ ಗುರುತುಗಳು ಎಂದು ಜನ ಭಾವಿಸುತ್ತಾರೆ. ತನ್ನ ಮಡದಿಯರನ್ನು ನುಂಗಿದ ಮೊಸಳೆಗಳನ್ನು ಬ್ಯಾಮೀ ದಡಕ್ಕೆ ಎಳೆತಂದು ಕೊಂದು ಪತ್ನಿಯರನ್ನು ಬದುಕಿಸಿದನೆಂದು ನಂಬುತ್ತಾರೆ. ಮಿಲ್ಡೊಲದ ಬಳಿ ವಿಶಿಷ್ಟ ಆಕಾರದ ಬಂಡೆಯೊಂದಿದೆ. ಬ್ಯಾಮೀ ನೀರನ್ನು ತುಂಬಿ ಹಿಡಿದುಕೊಳ್ಳುತ್ತಿದ್ದ ಪಾತ್ರೆ ಇದು ಎಂಬ ನಂಬಿಕೆ ಇದೆ. ಅದರ ಪಕ್ಕದ ಹೊಂಡ ಬ್ಯಾಮೀಯ ನಾಯಿ ನೀರು ಕುಡಿಯುತ್ತಿದ್ದ ನೆಲೆ. ನಾಯಿಗಳು ಆಸ್ಟ್ರೇಲಿಯದಲ್ಲಿ ಮಾನವನಷ್ಟೇ ಹಳೆಯ ಜೀವಿಗಳು ಎಂಬುದು ಇದರಿಂದ ವ್ಯಕ್ತವಾಗುತ್ತದೆ. ಹೀಗೆ ಅನೇಕ ಬಗೆಯ ಐತಿಹ್ಯಗಳು ದೆವ್ವಗಳಿಗೆ, ಇತರ ಅಂಶಗಳಿಗೆ ಸಂಬಂಧಿಸಿದಂತೆ ಲಭ್ಯವಾಗುತ್ತವೆ. ಇಲ್ಲಿನ ಐತಿಹ್ಯಗಳಲ್ಲಿ ವೈವಿಧ್ಯ ಹೆಚ್ಚು; ನಾಟಕೀಯತೆ, ಕಾವ್ಯಾಂಶಗಳೂ ಅಪಾರ. ಕಪ್ಪು ಜನರ ಕಲ್ಪನಾರಮ್ಯತೆ, ಸರಳ ಹಾಗೂ ಸಹಜ ಮಾನವಸ್ವಭಾವ ಚಿತ್ರಣಗಳಿಗೆ ಇವು ಉತ್ತಮ ನಿದರ್ಶನ. ಬದುಕು ಅಷ್ಟೇನೂ ಸುಖಪ್ರದವಲ್ಲವಾದರೂ ಅವರ ಜನಪದ ಸಾಹಿತ್ಯ ಸಂಪತ್ತು ಹೇರಳವಾದುದು. ಶ್ರೀಮತಿ ಪಾರ್ಕರ್ ಇಲ್ಲಿನ ಜಾನಪದ ಸಂಬಂಧಿ ಕೃತಿಗಳನ್ನು ಪ್ರಕಟಿಸಿದ ಮೇಲೆ ವಿಶ್ವವಿದ್ಯಾನಿಲಯಗಳಲ್ಲಿ ಜಾನಪದ ಅಧ್ಯಯನದ ಬಗ್ಗೆ ಮಾನವಶಾಸ್ತ್ರದ ಪ್ರತ್ಯೇಕ ಪೀಠಗಳು ಏರ್ಪಟ್ಟುವು. ಜಗತ್ತಿನ ಮಾನವಶಾಸ್ತ್ರಜ್ಞರ ದೃಷ್ಟಿ ಅತ್ತ ಹೊರಳಿತು. ಆ್ಯಂಡ್ರೂ ಲ್ಯಾಂಗ್ ಮೊದಲಾದ ಪ್ರಸಿದ್ಧ ಮಾನವಶಾಸ್ತ್ರಜ್ಞರು ಆ ಸಾಹಿತ್ಯಸಂಪತ್ತನ್ನು ಮುಕ್ತಕಂಠದಿಂದ ಕೊಂಡಾಡಿದರು. ಇಲ್ಲಿನ ಐತಿಹ್ಯಗಳ, ಪುರಾಣಗಳ, ಕಥೆಗಳ ಅಭ್ಯಾಸದಿಂದ ಆಸ್ಟ್ರೇಲಿಯದ ಮೂಲನಿವಾಸಿಗಳ ಜೀವನ ಕಣ್ಣಿಗೆ ಕಟ್ಟುತ್ತದೆ. ಆಂಡ್ರೂ ಲ್ಯಾಂಗ್ ಒಂದು ಕಡೆ ಬರೆಯುತ್ತಾನೆ; ಈ ಕಥೆಗಳು ಯಾವುದೋ ಗತಸಂಪ್ರದಾಯದ, ಕಣ್ಮರೆಯಾದ ವಸ್ತುಗಳಲ್ಲಿ ಬದುಕಿನ ಜೀವಂತಚಿತ್ರವನ್ನು, ಜನರ ಮನಸ್ಸಿನ ಸಹಜ ಪರಿಚಯವನ್ನು ಒದಗಿಸುವ ಸಾಧನಗಳು. ಆಹಾರ ಮತ್ತು ನೀರಿಗಾಗಿ ಅವರ ಹೋರಾಟ, ಉಳದೆ, ಬಿತ್ತದೆ ಯಾವ ಸಾಕುಪ್ರಾಣಿಯನ್ನೂ ಹೊಂದದೆ, ಒಣ ನೆಲದಲ್ಲಿ ಹೋರಾಟದ ಬದುಕನ್ನು ನಡೆಸುವ ರೀತಿ, ಅವರ ಬೇಟೆಯ ಕ್ರಮ, ಜೇನು, ನೊಣಗಳನ್ನು ಅಟ್ಟಿ ಹಟ್ಟಿಯನ್ನು ವಶಪಡಿಸಿಕೊಳ್ಳುವ ರೀತಿ-ಹೀಗೆ ಈ ಮೂಲನಿವಾಸಿಗಳಿಂದ ಆದಿಮಾನವರ ಜೀವನದ ಸಂಗತಿಗಳು ನಮಗೆ ಲಭ್ಯ. ಕೆಲವು ವರ್ಷಗಳ ಹಿಂದೆ ಕಪ್ಪು ಜನರಿಗೆ ಸಂಬಂಧಪಟ್ಟಂತೆ ಕಥೆಗಳಾಗಲಿ, ಗೀತೆಗಳಾಗಲಿ, ಇವೆಯೆಂಬುದೇ ಗೊತ್ತಿರಲಿಲ್ಲ. ಅವುಗಳ ಸಂಗ್ರಹ ನಡೆದ ಮೇಲೆ ಪ್ರಾಣಿಗಳ, ಪಕ್ಷಿಗಳ ಮರಗಿಡಗಳ, ಮಾನವರ ನಿಸರ್ಗದ ವೈಚಿತ್ರ್ಯಗಳ ಸುತ್ತ ಹೆಣೆದುಕೊಂಡ ಅದ್ಭುತ ಪ್ರಪಂಚವನ್ನು ನೋಡಿದ ಮೇಲೆ ಆಸ್ಟ್ರೇಲಿಯದ ಜಾನಪದ ರಚನೆಗಳ ಬಗ್ಗೆ ವಿದ್ವಾಂಸರು ಹೆಮ್ಮೆಪಟ್ಟರು. ಇವೆಲ್ಲ ಆಸ್ಟ್ರೇಲಿಯದ ಕಥೆಗಳು. ಆಸ್ಟ್ರೇಲಿಯಕ್ಕೆ ಸೇರಿದ, ಬಿಳಿಯರು, ಕರಿಯರು ಅಥವಾ ಹೊಸದಾಗಿ ಬಂದವರು ಎಂಬ ಭೇದವಿಲ್ಲದಂತೆ ಸಮಗ್ರ ಆಸ್ಟ್ರೇಲಿಯಕ್ಕೆ ಸೇರಿದುವು ಎಂದು ಅಭಿಮಾನಪಟ್ಟರು.

ಆಸ್ಟ್ರೇಲಿಯದ ಜಾನಪದದಲ್ಲಿ ವಿವರಣಾತ್ಮಕ ಕಥೆಗಳು ಹೆಚ್ಚು. ಪ್ರಾಣಿಗಳ ಮೈಮೇಲೆ ಈ ಗುರುತು ಏಕೆ ಉಳಿಯಿತು; ಬಾಲ ಏಕೆ ಮೊಟಕಾಯಿತು, ಈ ಹವ್ಯಾಸ ಏತಕ್ಕೆ ಬಂತು-ಇಂಥ ವಿವರಗಳು ಅಲ್ಲಿವೆ. ಕಥೆ ಹೇಳುವುದರಲ್ಲೂ ಸಾಕಷ್ಟು ತಾರತಮ್ಯ ಕಾಣುತ್ತದೆ. ಕೆಲವರು ಸ್ಥೂಲವಾಗಿ ಕಥಾರೇಖೆಯನ್ನು ಮಾತ್ರ ಹೇಳಿ ಬೇಗ ಮುಗಿಸಿಬಿಡುತ್ತಾರೆ. ಸ್ವಲ್ಪ ಒಗ್ಗಿಸಿಕೊಂಡರೆ ಅವರವರೇ ಹೇಳಿಕೊಳ್ಳುವಂತೆ ರಮ್ಯವಾಗಿ ನಿರೂಪಿಸುತ್ತಾರೆ. ಪುರಾಣಕಥೆಗಳು ಲಯಬದ್ಧವಾದ ಸಂಗೀತ ದೃಷ್ಟಿಯಿಂದ ಗಮನಾರ್ಹವಾದ ಕಾವ್ಯರೂಪದಲ್ಲಿ ಉಳಿದಿವೆ. ಪ್ರಾಣಿಗಳ ಪಾತ್ರ ವಿಶೇಷವಾಗಿ ಈ ಮೂಲನಿವಾಸಿಗಳ ಬದುಕನ್ನು ಆವರಿಸಿರುವುದರಿಂದ ಅಂಥ ಕಥೆಗಳು ಹೆಚ್ಚು. ಪವಿತ್ರ ಸಂಕೇತಗಳ ಮೇಲೆ, ಆಯುಧಗಳ ಮೇಲೆ, ಕಲ್ಲುಗಳ ಮೇಲೆ ಕೆಲವು ಕಡೆ ಮರದ ತೊಗಟೆಗಳ ಮೇಲೆ ಪುರಾಣಕಥೆಗಳನ್ನೂ ಐತಿಹ್ಯಗಳನ್ನೂ ಚಿತ್ರಿಸುವ ದೃಶ್ಯಗಳನ್ನೂ ಬಿಡಿಸಿ ಈ ಜನ ಅವನ್ನು ಪವಿತ್ರ ವಸ್ತುಗಳೆಂಬಂತೆ ಸಂರಕ್ಷಣೆ ಮಾಡಿಕೊಂಡು ಬರುತ್ತಾರೆ. ಆಸ್ಟ್ರೇಲಿಯದ ಜಾನಪದ ಆಧ್ಯಯನದಲ್ಲಿ ಐತಿಹ್ಯಗಳ ಬಗ್ಗೆ, ಕಥೆಗಳ ಬಗ್ಗೆ ಸಾಕಷ್ಟು ಕೆಲಸ ನಡೆದಿದ್ದರೂ ಗಾದೆ, ಒಗಟು ಮುಂತಾದುವುಗಳ ಬಗ್ಗೆ ಲಕ್ಷ್ಯ ಸಾಲದಾಯಿತೇನೋ ಎನಿಸುತ್ತದೆ. ಸಂಗ್ರಹಕಾರ್ಯ ಬೆಳೆದಷ್ಟೂ ಅಲ್ಲಿನ ಜನಪದದ ವೈವಿಧ್ಯ, ವಿಸ್ತಾರಗಳ ಸಮರ್ಪಕ ಪರಿಚಯ ಲಭ್ಯವಾದಂತಾಗುವುದಿಲ್ಲ. ಅಲ್ಲಿನ ಜಾನಪದ ಆಧ್ಯಯನದಲ್ಲಿ ಮಾನವನ ಶಾಸ್ತ್ರೀಯ ದೃಷ್ಟಿಯೇ ವಿಶೇಷವೆನಿಸಿ ಜಾನಪದ ಶಾಖೆಗಳು ಕೆಲವು ನಿರ್ಲಕ್ಷಿತವಾದುವು ಎನಿಸಿದರೆ ಆಶ್ಚರ್ಯಪಡಬೇಕಿಲ್ಲ.

2006ರ ಜನಗಣತಿಯಂತೆ ಶೇ.64 ಜನರು ಕ್ರೈಸ್ತರು ಶೇ.2 ಹೀಬ್ರೂಗಳೂ ಇದ್ದಾರೆಂದು ತಿಳಿಯುತ್ತದೆ. ಶೇ.19 ಜನರು ತಾವು ಯಾವುದೇ ಧರ್ಮಾವಲಂಬಿಗಳಲ್ಲವೆಂದು ಉತ್ತರ ನೀಡಿದರು. ಅಂದರೆ ಇವರು ಆದಿವಾಸಿಗಳು. ಇವರಿಗೆ ನಾಗರಿಕ ಜನಾಂಗಗಳ ಯಾವುದೇ ಮತಧರ್ಮವಿರದಿದ್ದರೂ ಇವರದೇ ಆದ ಧಾರ್ಮಿಕ ವ್ಯವಹಾರವಿದೆಯೆಂಬುದನ್ನು ಮರೆಯಲಾಗದು. ಕ್ರೈಸ್ತರಲ್ಲಿ ಶೇ.38 ಪ್ರಾಟೆಸ್ಟೆಂಟರು, ಶೇ.26 ರೋಮನ್ ಕ್ಯಾಥೊಲಿಕ್ರು, ಶೇ.19 ಆ್ಯಂಗ್ಲಿಕನ್ನರು. ಇದಲ್ಲದೇ ಹಲವಾರು ಇತರ ಧರ್ಮಾವಲಂಬಿಗಳೂ ಅಲ್ಪಸಂಖ್ಯಾತರಾಗಿದ್ದಾರೆ. ಬದ್ಧರು, ಶೇ.2.1 ಹಿಂದೂಗಳು, ಶೇ.0.8 ಜೂಡ, ಶೇ.0.5 ಆಸ್ಟ್ರೇಲಿಯದ ಧರ್ಮದ ಇತಿಹಾಸವನ್ನವಲೋಕಿಸಿದಾಗ, ಅವರ ಪರಮತ ಸಹಿಷ್ಣುತೆಯ ಅರಿವಾಗುತ್ತದೆ. ಸರ್ಕಾರ ಚರ್ಚಿನ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡಬಹುದೆಂಬ ಭಯವೂ ಜಾತ್ಯತೀತತೆಯ ಭಾವನೆಯೂ ಹೆಚ್ಚಿದುದರಿಂದ, ಒಕ್ಕೂಟ ರಚಿತವಾಗುವ ವೇಳೆಗೆ ಚರ್ಚ್ ಮತ್ತು ರಾಜ್ಯದ ವ್ಯವಹಾರಗಳು ಸಂಪುರ್ಣವಾಗಿ ಬೇರ್ಪಟ್ಟುವು. ಧರ್ಮದ ಆಧಾರದ ಮೇಲೆ ಸಾರ್ವಜನಿಕ ಹುದ್ದೆಗಳಿಗೆ ನೇಮಕ ಮಾಡುವುದನ್ನು ಸಂವಿಧಾನದ 116ನೆಯ ವಿಧಿ ನಿಷೇಧಿಸುತ್ತದೆ. ವಲಸೆಯ ಪರಿಣಾಮವಾಗಿ 1945ರಿಂದೀಚೆಗೆ ರೋಮನ್ ಕ್ಯಾಥೊಲಿಕ್ರ ಸಂಖ್ಯೆ ಹೆಚ್ಚಿದೆ. ಇವರಲ್ಲಿ ಹೆಚ್ಚಿನವರು ಬ್ರಿಟಿಷ್ ಮೂಲದವರು. ಕೆಲವೇ ಜನ ಆಸ್ಟ್ರೇಲಿಯನ್ನರ ಸ್ವಭಾವವನ್ನು ರೂಢಿಸಿಕೊಂಡಿದ್ದಾರೆ. 20ನೆಯ ಶತಮಾನದ ಅನಂತರ, ಜನರ ನಿತ್ಯದ ಜೀವನ ಮತ್ತು ಘಟನೆಗಳ ಮೇಲೆ ಚರ್ಚಿನ ಪ್ರಭಾವ ಇಳಿಮುಖ ವಾಗಿದೆ. ಆಸ್ಟ್ರೇಲಿಯದ ಚರ್ಚ್ಗಳೂ ಇದಕ್ಕೆ ಹೊರತಾಗಲಿಲ್ಲ. ಈಗ ಶಿಕ್ಷಣ, ಸಮಾಜಕಲ್ಯಾಣ ಮುಂತಾದ ಆಂತರಿಕ ಚಟುವಟಿಕೆಗಳಿಗೆ ಅವುಗಳ ಕಾರ್ಯ ಸೀಮಿತವಾಗಿದೆ.

ವಾಸ್ತುಶಿಲ್ಪ

[ಬದಲಾಯಿಸಿ]

ಮೂಲನಿವಾಸಿಗಳಲ್ಲಿ ಯಾವುದೇ ನಿಖರವಾದ ರಚನೆಯಾಗಲೀ ಕಟ್ಟಡ ನಿರ್ಮಾಣವಾಗಲೀ ಇಲ್ಲದಿದ್ದುದರಿಂದ ಆಸ್ಟ್ರೇಲಿಯದ್ದೇ ಎನ್ನಿಸಿಕೊಳ್ಳಬಲ್ಲ ವಾಸ್ತುಶಿಲ್ಪ ಇಲ್ಲವೆಂದೇ ಹೇಳಬಹುದು. ಮೊದಲಿಗೆ ಇವರಲ್ಲಿ ತರಬೇತಿ ಪಡೆದ ಕಟ್ಟಡ ನಿರ್ಮಾಪಕರೇ ಆಗಲೀ ಅಥವಾ ಅದಕ್ಕೆ ಬೇಕಾದ ಕುಶಲ ಸಲಕರಣೆಗಳೇ ಆಗಲೀ ಇರಲಿಲ್ಲ. ಮೊದಲಿನ ಐರೋಪ್ಯ ಕಟ್ಟಡಗಳ ರಚನೆಗಳು ಬಹಳ ಒರಟಾಗಿದ್ದುವು. ಮರದ ಅಥವಾ ಬೊಂಬುಗಳನ್ನು ಕಟ್ಟಿ ಮೇಲೆ ಮಣ್ಣಿನಿಂದ ಗಿಲಾವು ಮಾಡಿದ ಗೋಡೆಗಳನ್ನು ನಿರ್ಮಿಸಿ ಮೇಲ್ಛಾವಣಿಗೆ ಗರಿಗಳನ್ನು ಹೊದಿಸುತ್ತಿದ್ದರು. ಅನಂತರ ಇಟ್ಟಿಗೆಗಳಿಂದ ಮನೆಕಟ್ಟಲು ಆರಂಭಿಸಿದರು. 1794ರವರೆಗೂ ಯಾವ ಕುಶಲತೆಯೂ ಕಾಣದ ಒರಟೊರಟಾದ ಒಂದಂತಸ್ತಿನ ಮನೆಗಳೇ ಇದ್ದುವು. ಮನೆಯ ಮುಂದೆ ಬಿಡಲಾಗುತ್ತಿದ್ದ ಹೊರಾಂಗಣವು ಬೇಸಗೆಯ ಬಿಸಿಲಿನ ಝಳಕ್ಕೊಂದು ತಡೆಯಾಗುತ್ತಿತ್ತು. 1829ರ ಅನಂತರ ಇಡೀ ಆಸ್ಟ್ರೇಲಿಯ ಬ್ರಿಟಿಷ್ ಸಾಮ್ರಾಜ್ಯದ ಆಧಿಪತ್ಯಕ್ಕೆ ಬಂದ ಮೇಲೆ ಇಂಗ್ಲೆಂಡಿನ ವಾಸ್ತುಶಿಲ್ಪ ಮಾದರಿಯ ರಚನೆಯನ್ನು ಕಟ್ಟಡಗಳಲ್ಲಿ ಅಳವಡಿಸಲು ಅಂದಿನ ಗವರ್ನ್ರ್ ಕೆಲವು ಶಿಲ್ಪಿಗಳನ್ನು ನೇಮಿಸಿದ. ಅಲ್ಲಿನ ವಾಯುಗುಣಕ್ಕೆ ತಕ್ಕಂತೆ ಹಳೆಯ ಮಾದರಿಯ ಕಟ್ಟಡಗಳಲ್ಲೇ ಕೆಲವೊಂದು ಹೊಸ ಬದಲಾವಣೆಗಳನ್ನು ಮಾಡಿ ಮನೆಗಳನ್ನು ಕಟ್ಟಲು ಆರಂಭಿಸಿದರು. ಕ್ರಮೇಣ ಒಂದಂತಸ್ತಿನಿಂದ ಎರಡಂತಸ್ತಿನವರೆಗಿನ ಮನೆಗಳನ್ನು ಕಟ್ಟಲಾಯಿತು. 19ನೆಯ ಶತಮಾನದಲ್ಲಿ ಆಸ್ಟ್ರೇಲಿಯದ ವಾಸ್ತುಶಿಲ್ಪ ಇಂಗ್ಲೆಂಡಿನ ವಾಸ್ತುಶಿಲ್ಪದೊಂದಿಗೆ ಬೆರೆತು ತನ್ನದೇ ಆದ ಹೊಸ ಮಾದರಿಯನ್ನು ಸ್ಥಾಪಿಸಿತು. ಇಟ್ಟಿಗೆ ಗೋಡೆಗಳನ್ನು ಸಿಮೆಂಟ್ನಿಂದ ಕಟ್ಟಲು ಆರಂಭಿಸಿದರು. ಹಳೆಯ ವಿಧಾನದ ಮೇಲ್ಛಾವಣಿಯನ್ನು ನಿಲ್ಲಿಸಿ ಹೊಸ ವಿಧಾನದ ಸಿಮೆಂಟ್ ಮತ್ತು ಕಬ್ಬಿಣ ಸೇರಿಸಿದ ಮೇಲ್ಛಾವಣಿಯನ್ನು ಹಾಕಲಾಯಿತು.

1920ರಲ್ಲಿ ಅಮೆರಿಕ ಮಾದರಿಯ ಎರಡು ಕಟ್ಟಡಗಳು ನಿರ್ಮಿತವಾದುವು. ಬರೀ ಸಿಮೆಂಟ್ ಮತ್ತು ಕಬ್ಬಿಣಗಳಿಂದ ಕೂಡಿದ ಕಂಬಗಳಿಂದಲೇ ನಿರ್ಮಿತವಾದ ಮನೆಗಳವು. ಕಾಲಂ ರಚನೆ ಅವುಗಳಿಂದ ಪ್ರಾರಂಭವಾಯಿತೆನ್ನಬಹುದು. 1930ರ ಅನಂತರ ಆಸ್ಟ್ರೇಲಿಯದಲ್ಲಿ ಇಂಗ್ಲೆಂಡ್, ಅಮೆರಿಕ ಮುಂತಾದ ದೇಶಗಳ ಎಲ್ಲ ಬಗೆಯ ವಾಸ್ತುಶಿಲ್ಪಗಳೂ ಬೆರೆತ ಕಟ್ಟಡಗಳು ಕಾಣಿಸಲಾರಂಭಿಸಿದವು. 1934ರ ಅನಂತರ ಇಗರ್ಜಿ, ಶಾಲೆ, ಆಸ್ಪತ್ರೆ ಮುಂತಾದುವು ಹೊಸ ಹೊಸ ಮಾದರಿಯಲ್ಲಿ ನಿರ್ಮಿತವಾದುವು. ಅನಂತರ ಹೊಸ ಹೊಸ ರಸ್ತೆಗಳು ಏರ್ಪಟ್ಟವು. ಆದರೂ ಆಸ್ಟ್ರೇಲಿಯದಲ್ಲಿ ಹಳೆಯ ಮಾದರಿಯ, ನಾಲ್ಕು ಚದರಗಳ, ಹವಾಮಾನಕ್ಕೆ ಅನುಗುಣವಾಗಿ ಕಟ್ಟುತ್ತಿದ್ದ, ಮಧ್ಯೆ ಮೊಗಸಾಲೆಯುಳ್ಳ ಮನೆಗಳೇ ಇಂದಿಗೂ ಹೆಚ್ಚಾಗಿವೆ. ಎರಡನೆಯ ಮಹಾಯುದ್ಧದ ಅನಂತರ ಕಟ್ಟಡಗಳ ರಚನೆಯಲ್ಲಿ ಅನೇಕ ಬದಲಾವಣೆಗಳಾದುವು. ಹವಾಮಾನಕ್ಕೆ ಅನುಕೂಲವಾಗುವಂತೆ ಅನೇಕ ಅಂತಸ್ತುಗಳುಳ್ಳ ಸೌಧಗಳು ಎದ್ದುವು. ಬಿಸಿಲಿನ ತಾಪವನ್ನು ತಡೆಯಲು ಗಾಜುಗಳನ್ನು ಹೆಚ್ಚು ಹೆಚ್ಚಾಗಿ ಬಳಸಲಾಯಿತು.

1956ರಲ್ಲಿ ಬೆನ್ನೆಲಾಂಗ್ ಬಂದರಿನ ತಟದಲ್ಲಿ ಕಟ್ಟಲಾಗಿರುವ ಸಿಡ್ನಿ ಆಪೆರ ಹೌಸ್ ಇಡೀ ಪ್ರಪಂಚದ ಗಮನವನ್ನು ಸೆಳೆದಿದೆ. ಆ ಕಟ್ಟಡದ ರಚನಾಕಲೆ ಅದ್ಭುತವಾಗಿದೆ. ಡೇನಿಷ್ ಶಿಲ್ಪಜ್ಞ ಉಟ್ಜಾನ್ ಈ ಕಟ್ಟಡದ ರಚನೆಗೆ ಕಾರಣನಾಗಿದ್ದಾನೆ. ಹಣವನ್ನು ಲಾಟರಿಗಳನ್ನು ಎತ್ತಿ ಈ ಕಟ್ಟಡದ ಕೆಲಸಕ್ಕೆ ಬಂಡವಾಳ ಒದಗಿಸಲಾಗಿದೆ. ಇದಲ್ಲದೆ ಕ್ಯಾನ್ಬೆರದಲ್ಲಿ ಕಟ್ಟಲಾಗಿರುವ ದಿ ಅಕೆಡಮಿ ಆಫ್ ಸೈನ್ಸ್ ಎಂಬ ಗೋಳಾಕಾರದ ಕಟ್ಟಡ ಅತ್ಯಾಧುನಿಕವಾಗಿದೆ. ಅದರ ತಳಭಾಗದ ಸುತ್ತಳತೆ 47.54ಮೀ. ಆ ಗುಮ್ಮಟದ ಮೇಲು ಹೊದಿಕೆ ಪುರ್ತ ತಾಮ್ರದ ತಗಡಿನಿಂದ ಆವೃತವಾಗಿದೆ. ಸಿಡ್ನಿ ಬಂದರಿನ ಸೇತುವೆ ಅತಿ ದೊಡ್ಡದಾದ ಸೇತುವೆಯಾಗಿದ್ದು ಆಧುನಿಕ ವಾಸ್ತುತಂತ್ರಕ್ಕೆ ಒಳ್ಳೆಯ ಉದಾಹರಣೆಯಾಗಿದೆ. ಅದರ ಕಮಾನಿನ ಅಳತೆ 503 ಮೀ, ಎತ್ತರ 139 ಮೀ. ಉದ್ದ 1,149 ಮೀ.

ಸಾಹಿತ್ಯ

[ಬದಲಾಯಿಸಿ]

ಆಸ್ಟ್ರೇಲಿಯದ ಸಾಹಿತ್ಯ ಸೃಷ್ಟಿಯಾದುದು ಬ್ರಿಟಿಷರು ಆ ಸಾಮ್ರಾಜ್ಯಕ್ಕೆ ಕಾಲಿಟ್ಟ ಮೇಲೆಯೇ. ಆದರೆ ಅಲ್ಲಿಯ ಆದಿವಾಸಿಗಳಲ್ಲಿ ಯಾವುದೇ ವಿಧವಾದ ಬರೆವಣಿಗೆ ಇಲ್ಲದೆ ಹೋದರೂ ಬಾಯಿಂದ ಬಾಯಿಗೆ ಚಲಿಸುತ್ತಿದ್ದ ಅವರದೇ ಆದ ಒಂದು ಸಾಹಿತ್ಯವಿತ್ತು. ಅವರಲ್ಲಿ ಸಾಹಸ, ಅದ್ಭುತ, ಪ್ರೇಮ, ಈಷೆರ್ಯ, ಹಬ್ಬ ಹುಣ್ಣಿಮೆ, ಬೇಟೆ ಮುಂತಾದ ವಿವರಗಳನ್ನು ಒಳಗೊಂಡ ಕಥೆ, ವಿನೋದ ಕಥೆ, ಗೀತೆಗಳು, ಹಾಡುಹಬ್ಬಗಳು ಬಳಕೆಯಲ್ಲಿದ್ದುವು. ಬಾಯಿಂದ ಬಾಯಿಗೆ ಬಂದು ಬಾಯಲ್ಲೇ ನಿಂತ ಹಲವು ಕಥೆ ಮತ್ತು ಗೀತೆಗಳನ್ನು ಆಸ್ಟ್ರೇಲಿಯದಲ್ಲಿ ಸಂಗ್ರಹಿಸಲಾಗುತ್ತಿದೆ. ಅಲ್ಲಿನ ಜನಪದ ಸಾಹಿತ್ಯದಲ್ಲಿ ಮಂತ್ರವಾದಿ ಹಾಗೂ ಸಾಹಸ ಮತ್ತು ರೋಮಾಂಚಕ ಕಥೆಗಳು ಹೇರಳವಾಗಿವೆ. ಸೃಷ್ಟ್ಯಾತ್ಮಕ ಸಾಹಿತ್ಯ ಪ್ರಾರಂಭವಾದುದು 1788ರಿಂದ ಎನ್ನಬಹುದು. 1788ರಿಂದ ಇತ್ತೀಚಿನವರೆಗಿನ ಸಾಹಿತ್ಯಚರಿತ್ರೆಯನ್ನು 4 ಭಾಗಗಳಾಗಿ ವಿಂಗಡಿಸಬಹುದು. 1788-1850, 1850-1910, 1910-40, 1940 ರಿಂದ ಇತ್ತೀಚಿನದು. ಪ್ರಪಂಚದ ಇತರ ದೇಶದಲ್ಲಿ ಸಾಹಿತ್ಯವನ್ನು ನೋಡುವಂತೆ ಆಸ್ಟ್ರೇಲಿಯದ ಸಾಹಿತ್ಯವನ್ನೂ ಎರಡು ಹಂತಗಳಲ್ಲಿ ನೋಡಬಹುದು. ಮೊದಲನೆಯದು ರಾಷ್ಟ್ರೀಯ ಮಟ್ಟವನ್ನು ಮುಟ್ಟುವಂಥದು. ಎರಡನೆಯದು ಪ್ರಪಂಚದ ಇತರ ಸಾಹಿತ್ಯಪಂಕ್ತಿಯಲ್ಲಿ ನಿಲ್ಲುವಂಥದು. ಈ ಎರಡರಲ್ಲೂ ಆಸ್ಟ್ರೇಲಿಯದ ಕೊಡುಗೆ ಸಾಕಷ್ಟಿದೆ. ಹೆನ್ರಿ ಹ್ಯಾಂಡಲ್ ರಿಚರ್ಡ್ಸನ್, ಕ್ಯಾಥರೀನ್ ಸುಸನ್ನ ಪ್ರಿಚರ್ಡ್, ಪ್ರೆಟ್ರಿಕ್ ವೈಟ್ ಮೊದಲಾದವರು ಪ್ರಖ್ಯಾತ ಗದ್ಯ ಲೇಖಕರು. ಪದ್ಯಲೇಖಕರಲ್ಲಿ ಮುಖ್ಯವಾದವರು ಕ್ರಿಸ್ಟೋಫರ್ ಬ್ರೆನಾವ್, ಜೇಮ್ಸ್ ಮೆಕಾಲೆ, ನೀತ್ ಸ್ಲೆಸ್ಸಾರ್ ಮತ್ತು ಆರ್. ಫಿಟ್ಜೆರಲ್ಡ್ ಮೊದಲಾದವರು. ಆರಂಭದ ಸಾಹಿತ್ಯವೆಲ್ಲ ಬೋಧನೆ, ಸಾಹಸ, ಅದ್ಭುತಗಳ ವೈವಿಧ್ಯಮಯ ವರ್ಣನೆಗಳಿಂದ ಕೂಡಿದ ಸಾಹಸದ ಕಥೆಗಳೇ ಆಗಿದೆ. ಅಲ್ಲಿಯ ಜನರನ್ನು ಹುರಿದುಂಬಿಸಲು ಈ ತೆರನಾದ ಸಾಹಿತ್ಯದ ಅಗತ್ಯವಿತ್ತು. ಅನಂತರ ಗೀತೆಗಳು ಹುಟ್ಟಿದುವು. 1819ರಲ್ಲಿ ಆಸ್ಟ್ರೇಲಿಯ ಗೀತೆಗಳ ಮೊದಲ ಸಂಕಲನ ಪ್ರಕಟವಾಯಿತು. ಮೊದಲ ಕಾದಂಬರಿ ಆಸ್ಟ್ರೇಲಿಯದ ಜನಜೀವನದ ಚಿತ್ರಣವೇ ಆಗಿದೆ.

19ನೆಯ ಶತಮಾನದ ಮಧ್ಯಭಾಗದಲ್ಲಿ ಬ್ರಿಟಿಷರು ಅಲ್ಲಿಯ ಚಿನ್ನದ ಗಣಿಗಳನ್ನು ಪತ್ತೆ ಹಚ್ಚಲು ತೊಡಗಿದಾಗ ಅನೇಕ ಸಾಹಸಮಯ ಕಥೆಗಳು ಸೃಷ್ಟಿಯಾದುವು. ಅನಂತರ ಸಾಹಿತ್ಯ ಒಂದು ನಿರ್ದಿಷ್ಟ ದಾರಿಯನ್ನು ಹಿಡಿದು ನಡೆಯಿತು. ಹೆಚ್ಚು ಹೆಚ್ಚು ಕಥೆ ಕಾದಂಬರಿಗಳು ಬರತೊಡಗಿದುವು. ಜೊತೆಜೊತೆಗೆ ವಿಜ್ಞಾನ, ತತ್ತ್ವಚರಿತ್ರೆ, ಅರ್ಥಶಾಸ್ತ್ರ ಮುಂತಾದವುಗಳ ಮೇಲೂ ಸಾಹಿತ್ಯ ನಿರ್ಮಾಣವಾಯಿತು. 1920ರಲ್ಲಿ ಸಿಡ್ನಿ ಲೇಖಕರ ಒಂದು ತಂಡವೇ ಸೃಷ್ಟಿಯಾಯಿತು. ಅವರ ದೃಷ್ಟಿ ಹಾಗೂ ಸಾಹಿತ್ಯಸೃಷ್ಟಿ ಸುಖಜೀವನದ ನಾನಾ ಮುಖಗಳನ್ನು ಚಿತ್ರಿಸುವುದೇ ಆಯಿತು. ಅನಂತರ ಸಾಕಷ್ಟು ನವ್ಯಸಾಹಿತ್ಯ ಸೃಷ್ಟಿಯಾಯಿತು. 1967ರಲ್ಲಿ ಆಸ್ಟ್ರೇಲಿಯದ ಪ್ರಾತಿನಿಧಿಕ ಸಣ್ಣ ಕಥೆಗಳ ಒಂದು ಬೃಹತ್ ಸಂಪುಟ ಪ್ರಕಟವಾಯಿತು. 1900ರಿಂದ ರಾಜಕೀಯದಲ್ಲಿನಂತೆಯೇ ಸಾಹಿತ್ಯಕ್ಷೇತ್ರದಲ್ಲೂ ಬುಲೆಟಿನ್ (ಸ್ಥಾಪನೆ 1880) ಎಂಬ ವಾರಪತ್ರಿಕೆ ಪ್ರಮುಖ ಪಾತ್ರ ವಹಿಸಿತು. ಅಂದಿನ ಕಥೆ ಮತ್ತು ಕವನಗಳ ಕ್ಷೇತ್ರ ವಿಸ್ತಾರವಾಗಲು ಸಹಕರಿಸಿತು. ಅಂದಿನ ಹಳ್ಳಿಗಾಡು ಜೀವನದ ನೈಜಸ್ವರೂಪವನ್ನು ತೋರುವ ಮತ್ತು ಜಾನಪದದಲ್ಲಿ ಬಳಕೆಯಲ್ಲಿದ್ದ ಅನೇಕ ಕಥೆಗಳು ಈ ಪತ್ರಿಕೆಯಲ್ಲಿ ಪ್ರಕಟವಾದುವು. ಆಸ್ಟ್ರೇಲಿಯದ ಅನೇಕ ಪ್ರಮುಖ ಕಾದಂಬರಿಗಳು ಧಾರಾವಾಹಿಯಾಗಿ ಈ ಪತ್ರಿಕೆಯ ಮೂಲಕ ಜನರ ಕೈ ಸೇರಿದವು. ಇಂದಿಗೂ ಈ ಪತ್ರಿಕೆ ಜನಜೀವನದಲ್ಲಿ ತನ್ನದೇ ಆದ ಪ್ರಭಾವವನ್ನು ಹೊಂದಿದೆ.

ಉಲ್ಲೇಖ

[ಬದಲಾಯಿಸಿ]

??