ವಿಷಯಕ್ಕೆ ಹೋಗು

ಮ್ಯಾಂಗ್ರೋವ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮ್ಯಾಂಗ್ರೋವ್‍ಗಳು ಉಪ್ಪು ನೀರಿನಲ್ಲಿ ಹುಲುಸಾಗಿ ಬೆಳೆಯುವ ಕಷ್ಣಸಹಿಷ್ಣುವಾದ ಪೊದರುಗಳು ಮತ್ತು ಮರಗಳು. ಇವು ಬಹುಬೇಗ ಬದಲಾಗುವ ಶಕ್ತಿಗಳನ್ನು ಎದುರಿಸಿ ಉಳಿಯಲು ವಿಶೇಷೀಕೃತ ಹೊಂದಾಣಿಕೆಗಳನ್ನು ಹೊಂದಿವೆ.

ಮ್ಯಾಂಗ್ರೋವ್ ಅತಿ ಹೆಚ್ಚು ಲವಣ (ಸೋಡಿಯಮ್ ಕ್ಲೋರೈಡ್) ಇರುವಂಥ ಜೌಗುಪ್ರದೇಶಗಳಲ್ಲಿ ಮಾತ್ರ ಬೆಳೆಯುವ ವಿಶಿಷ್ಟ ಸಸ್ಯವರ್ಗ. ಇವನ್ನು ಉಷ್ಣ ಹಾಗೂ ಉಪೋಷ್ಣವಲಯಗಳ ಕರಾವಳಿ ಪ್ರದೇಶಗಳಲ್ಲಿ, ನದೀಮುಖಜ ಭೂಮಿಗಳಲ್ಲಿ ಕಾಣಬಹುದು. ಭಾರತದಲ್ಲಿ ಪಶ್ಚಿಮ ಬಂಗಾಲದ ಸುಂದರಬನ್, ಭಾರತ ಬರ್ಮಗಳ ನದೀಮುಖಜ ಪ್ರದೇಶಗಳು, ಮುಂಬಯಿಯಿಂದ ಕೇರಳದವರೆಗೆ ಅಲ್ಲಲ್ಲಿ, ಕಡಲ ತಡಿಗಳು, ಮದರಾಸಿನ ಎನ್ನೋರ್ ಮತ್ತು ಪಿಚಾವರಮ್ ತೀರಗಳು, ಗೋದಾವರಿ ನದಿ ಸಮುದ್ರ ಸೇರುವೆಡೆ, ಅಂಡಮಾನ್ - ನಿಕೋಬಾರ್ ದ್ವೀಪ ಸಮೂಹಗಳು ಇಂಥ ಸಸ್ಯವರ್ಗಕ್ಕೆ ಹೆಸರಾಂತವಾಗಿವೆ. ಪಶ್ಚಿಮ ಬಂಗಾಲದ ಸುಂದರಬನ್ ಪ್ರದೇಶ ಸು. 6000 ಚ. ಕಿಮೀ. ವಿಸ್ತಾರವಾಗಿದ್ದು ಪ್ರಪಂಚದಲ್ಲೇ ಅತಿ ದೊಡ್ಡ ಮ್ಯಾಂಗ್ರೋವ್ ಕಾಡು ಎನಿಸಿಕೊಂಡಿದೆ.

ವೈಶಿಷ್ಟ್ಯಗಳು

[ಬದಲಾಯಿಸಿ]

ಇವು ಬೆಳೆಯುವ ನೀರಿನಲ್ಲಿ ಅತಿಯಾದ ಮೊತ್ತದ ಉಪ್ಪು ಇದೆಯಲ್ಲದೆ ಈ ಪ್ರದೇಶದಲ್ಲಿ ವಿಪರೀತ ಮಳೆ. ವಾಯುಮಂಡಲದಲ್ಲಿ ಹೆಚ್ಚು ಆರ್ದ್ರತೆ, ಹೆಚ್ಚು ಉಷ್ಣತೆ ಮತ್ತು ಸಡಿಲವಾದ ಮರಳು ಮಣ್ಣು ಇರುವುದರಿಂದ ಇಲ್ಲಿನ ಸಸ್ಯಜಾತಿಗಳು ಇಂಥ ನೆಲದಲ್ಲಿ ಬೆಳೆಯಲು ಅನುಕೂಲವಾಗುವಂತೆ ಹಲವಾರು ತೆರನ ಹೊಂದಾಣಿಕೆಗಳನ್ನು ರೂಪಿಸಿಕೊಂಡಿದೆ. ಈ ಸಸ್ಯವರ್ಗಕ್ಕೆ ಉಪ್ಪು ನೀರಿನ ಸಸ್ಯಗಳು (ಹಾಲೊಫೈಟ್ಸ್) ಎಂಬ ಹೆಸರೇ ಇದೆ.

ಭಾರತದಲ್ಲಿ

[ಬದಲಾಯಿಸಿ]

ಪ್ರಪಂಚದ ಎಲ್ಲ ಮ್ಯಾಂಗ್ರೋವ್ ಕಾಡುಗಳಲ್ಲಿ ಸುಮಾರು 75 ಕುಟುಂಬಗಳಿಗೆ ಸೇರಿದ 334 ಪ್ರಭೇದಗಳು ಬೆಳೆಯುತ್ತವೆ ಎಂದು ಅಂದಾಜು ಮಾಡಲಾಗಿದೆ. ಭಾರತದಲ್ಲಿ 12 ಕುಟುಂಬಗಳಿಗೆ ಸೇರಿದ 20 ಕ್ಕೂ ಹೆಚ್ಚು ಸಸ್ಯಗಳು ಕಂಡುಬರುತ್ತವೆ. ಇವುಗಳ ಪೈಕಿ ಮುಖ್ಯವಾದವು: ರೈಜೊಫೊರ, ಸೀರಿಯಾಪ್ಸ್, ಕ್ಯಾಂಡೆಲಿಯ, ಬ್ರುಗ್ವೀರ (ರೈಜೊಫೊರೇಸೀ), ಎಕ್ಸೊಕೇರಿಯ (ಯುಫೋರ್ಬಿಯೇಸೀ), ಅವಿಸಿನಿಯ (ನರ್ಬಿನೇಸೀ), ಸ್ಯಾಲಿಕಾರ್ನಿಯ (ಕೀನೊಪೋಡೀಯೇಸೀ) ಈಜಿಸಿರಸ್ (ಮಿರ್ಸಿನೇಸೀ), ಲುಮ್ನಿಟ್ಸೆರಾ (ಕಾಂಬ್ರಿಟೇಸೀ), ಅಕ್ಯಾಂತಸ್ (ಅಕ್ಯಾಂತೇಸೀ) ಸೊನರೇಷಿಯ (ಸೊನರೇಷಿಯೆಸೀ) ಇತ್ಯಾದಿ. ಜೊತೆಗೆ ಕೆಲವು ಆರ್ಕಿಡ್ ಸಸ್ಯಗಳೂ ಜರೀಗಿಡಗಳೂ ಕಾಣದೊರೆಯುತ್ತವೆ.

ಮ್ಯಾಂಗ್ರೋವ್ ಸಸ್ಯಗಳ ಹೊಂದಾಣಿಕೆಗಳು

[ಬದಲಾಯಿಸಿ]

ಮ್ಯಾಂಗ್ರೋವ್ ಸಸ್ಯಗಳು ತಮ್ಮ ವಿಚಿತ್ರ ಪರಿಸರಕ್ಕೆ ಹೊಂದಿಕೊಳ್ಳುವ ಸಲುವಾಗಿ ತಮ್ಮ ಲಕ್ಷಣಗಳಲ್ಲೂ ಸ್ವಭಾವಗಳಲ್ಲೂ ಅನೇಕ ಮಾರ್ಪಾಟುಗಳನ್ನು ರೂಪಿಸಿಕೊಂಡಿವೆ ಎಂದು ಹೇಳಿದೆಯಷ್ಟೆ. ಇಂಥ ಹೊಂದಾಣಿಕೆಗಳು ಈ ಮುಂದಿನಂತಿವೆ:

  1. ಇವು ಬೆಳೆಯುವ ನೆಲದಲ್ಲಿ ವಿಪರೀತ ನೀರಿರುವುದರಿಂದ ಬೇರುಗಳ ಉಸಿರಾಟಕ್ಕೆ ಸಾಕಷ್ಟು ಆಕ್ಸಿಜನ್ ದೊರಕದು.[] ಈ ಕೊರತೆಯನ್ನು ನಿವಾರಿಸಿ ಸರಾಗವಾಗಿ ಉಸಿರಾಡಲು ಸಹಾಯಕವಾಗುವಂತೆ ಈ ಸಸ್ಯಗಳ ಕೆಲವು ಬೇರುಗಳು ಊರ್ಧ್ವಮುಖವಾಗಿ ಬೆಳೆದು ನೆಲದಿಂದ ಹೊರಚಾಚಿರುತ್ತವೆ. ಉಸಿರಾಟದ ಸೌಲಭ್ಯಕ್ಕೆ ಇವುಗಳ ಮೇಲ್ಮೈಯಲ್ಲಿ ಸೂಕ್ಷ್ಮವಾದ ರಂಧ್ರಗಳಿರುತ್ತವೆ. ಇಂಥ ಬೇರುಗಳಿಗೆ ನ್ಯೂಮ್ಯಾಟೊಫೋರ್ಸ್ ಎಂದು ಹೆಸರು.[][]
  2. ಇಲ್ಲಿನ ಮಣ್ಣು ತುಂಬ ಸಡಿಲವಾಗಿರವುದರಿಂದ ಗಿಡಗಳು ಸಲೀಸಾಗಿ ನೆಟ್ಟಗೆ ಬೆಳೆಯವು. ಗಿಡಗಳಿಗೆ ಸರಿಯಾದ ಆಧಾರ ಒದಗಿಸುವ ಸಲುವಾಗಿ ಬಿಳಲುಬೇರು ಮತ್ತು ಆಧಾರ ಬೇರುಗಳು ಹುಟ್ಟುತ್ತವೆ.
  3. ಈ ಗಿಡಗಳ ಬೀಜಗಳು ನೆಲದ ಮೇಲೆ ಬಿದ್ದಾಗ ಅತಿಯಾದ ನೀರಿನ ದೆಸೆಯಿಂದ ಮೊಳೆಯಲಾರವು. ಈ ಕೊರತೆಯನ್ನು ನಿವಾರಿಸುವ ಸಲುವಾಗಿ ಬೀಜಗಳು (ಹಣ್ಣುಗಳೂ) ಗಿಡದಿಂದ ಬೀಳುವ ಮೊದಲೇ ಅಂದರೆ ಸಸ್ಯಕ್ಕೆ ಅಂಟಿಕೊಂಡಿರುವಾಗಲೇ ಮೊಳೆತು ಒಳಗಿನ ಹೈಪೊಕಾಟೈಲ್ ಭಾಗ ಹೊರಬಂದಿರುತ್ತದೆ. ಒಂದು ರೀತಿಯಲ್ಲಿ ಬೀಜ ಪುಟ್ಟ ಸಸಿಯಾಗಿಯೇ ಗಿಡದಿಂದ ಬೇರ್ಪಡುತ್ತದೆ. ಇದು ನೆಲಕ್ಕೆ ಬಿದ್ದು ಕತ್ತಿಯಂತೆ ಮಣ್ಣಿನೊಳಕ್ಕೆ ಸಿಕ್ಕಿಕೊಂಡು ಕೆಲ ಕಾಲಾನಂತರ ಬೆಳೆಯತೊಡಗುತ್ತದೆ. ಈ ಲಕ್ಷಣಕ್ಕೆ ವೈವಿಪ್ಯಾರಿ ಎಂದು ಹೆಸರು.
  4. ಮ್ಯಾಂಗ್ರೋವ್ ಸಸ್ಯಗಳ ಎಲೆಗಳು ರಸಭರಿತವಾಗಿದ್ದು ಮಾಂಸಲವಾಗಿದೆ. ಜೊತೆಗೆ ಗಿಡಗಳ ಆಸ್ಮಾಟಿಕ್ ಒತ್ತಡ ಹೊರಗಿನ ನೀರಿನದಕ್ಕಿಂತ ಹೆಚ್ಚಾಗಿರುತ್ತದೆ. ಇದರಿಂದ ನೀರನ್ನು ಹೀರಲು ಅನುಕೂಲವಾಗಿದೆ.

ಉಪಯೋಗಗಳು

[ಬದಲಾಯಿಸಿ]

ಮ್ಯಾಂಗ್ರೋವ್ ಸಸ್ಯಗಳು ಉರುವಲು ಮತ್ತು ಮರಮುಟ್ಟುಗಳಿಗಾಗಿ ಉಪಯುಕ್ತವಾಗಿವೆ. ಜೊತೆಗೆ ಮಣ್ಣಿನ ಸವಕಳಿಯನ್ನು ತಡೆಯುವಲ್ಲಿ ಇವು ಸಹಾಯಕ.

ಉಲ್ಲೇಖಗಳು

[ಬದಲಾಯಿಸಿ]
  1. Flowers, T. J.; Colmer, T. D. (2015). "Plant salt tolerance: adaptations in halophytes". Annals of Botany. 115 (3): 327–331. doi:10.1093/aob/mcu267. PMC 4332615. PMID 25844430.
  2. "Black Mangrove (Avicennia germinans)". The Department of Environment and Natural Resources, Government of Bermuda. Retrieved 13 August 2021.
  3. "Morphological and Physiological Adaptations". Newfound Harbor Marine Institute. Retrieved 13 August 2021.


ಹೊರಗಿನ ಕೊಂಡಿಗಳು

[ಬದಲಾಯಿಸಿ]