ಜೌಗು ನೆಲ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಒಂದು ಸಣ್ಣ ನದಿಯ ಅಂಚಿನುದ್ದಕ್ಕೆ ಇರುವ ಜೌಗು ನೆಲ

ಜೌಗು ನೆಲ ಎಂದರೆ ಪ್ರಧಾನವಾಗಿ ಸೊಪ್ಪುಸದೆಗಳಿಂದ ಆವೃತವಾಗಿ ಆಗಾಗ ನೀರು ಹರಿದು ತೇವವಾಗಿರುವ ಭೂಮಿ (ಮಾರ್ಷ್). ಸಮುದ್ರದ ಅಲೆಗಳಿಗೆ ಸಿಲುಕಿ ನೆಲ ಹೀಗಾಗಿರಬಹುದು ಇಲ್ಲವೇ ನದಿ, ಕೆರೆ ಬಯಲುಗಳಲ್ಲಿ ನಿಂತ ನೀರಿನಿಂದಾಗಿರಬಹುದು. ಕಾಲುವೆ ನೀರಾವರಿ ಪ್ರದೇಶಗಳಲ್ಲಿ ಕೆಳಗಿನ ನೆಲದಿಂದ ನೀರು ಹೊರಹೋಗಲು ಆಗದೆ ಹೀಗಾಗಿರಬಹುದು.

ಮರಳು, ಒಂಡು ಜೇಡಿ ಮುಂತಾದ ವಿವಿಧ ಗಾತ್ರದ ಕಣಗಳಿಂದ ಕೂಡಿ ಮಣ್ಣು ಉಂಟಾಗುತ್ತದೆ. ಈ ಕಣಗಳು ಒಟ್ಟುಗೂಡಿ ಕಾಳುಗಳಾಗುವುದಲ್ಲದೆ ತಮ್ಮ ನಡುವೆ ಸೂಕ್ಷ್ಮ ರಂಧ್ರ ಅಥವಾ ಕಣಾಂತರಗಳನ್ನು ಒಳಗೊಂಡಿರುತ್ತವೆ. ಭೂಮಿಯ ಮೇಲೆ ಬಿದ್ದ ನೀರು ಈ ಅವಕಾಶಗಳ ಮೂಲಕ ಇಳಿದು ಅಂತರ್ಜಲವನ್ನು ಸೇರುತ್ತದೆ. ಅಲ್ಲದೆ ಸಸ್ಯ ಬೆಳವಣಿಗೆಯ ದೃಷ್ಟಿಯಿಂದ ಉಪಯುಕ್ತವಾದ ನೀರು ಸಹ ಇಂಥ ಅವಕಾಶಗಳಲ್ಲಿ ಸಂಗ್ರಹಗೊಂಡಿರುವುದು. ಈ ನೀರಿಗೆ ಲೋಮನಾಳ ನೀರು ಎಂದು ಹೆಸರು.

ಜೌಗು ನೆಲದಲ್ಲಿರುವ ಇಂಥ ಎಲ್ಲ ಅವಕಾಶಗಳೂ ಗಾಳಿಸಂಚಾರಕ್ಕೆ ಅವಕಾಶವಿಲ್ಲದಂತೆ ನೀರಿನಿಂದ ತುಂಬಿರುತ್ತದೆ. ಇದರಿಂದಾಗಿ ಸಸ್ಯಬೇರುಗಳಿಗೆ ವಾಯುವಿನ ಪೂರೈಕೆ ಆಗದೆ ಹೋಗಿ ಸಸ್ಯದ ಬೆಳೆವಣಿಗೆ ಕುಂಠಿತವಾಗುತ್ತದೆ. ಹೆಚ್ಚಾಗಿ ಈ ನೀರನ್ನು ಹೊರ ಹೊರಡಿಸದೆ ಜಮೀನಿನ ಸಾಗುವಳಿ ಸಾಧ್ಯವಾಗುವುದಿಲ್ಲ. ಇದನ್ನು ಆಗ ಮಾಡಿಸಲು ಕೆಲವು ಕ್ರಮಗಳನ್ನು ಅನುಸರಿಸಬೇಕಾಗುತ್ತದೆ. ಫಲವತ್ತಾದ ಭೂಮಿ ಜೌಗುನೆಲವಾಗುವಂತೆ ತಡೆಯಲು ಹೆಚ್ಚಿಗೆ ನೀರನ್ನು ಬಸಿಯುವ ವ್ಯವಸ್ಥೆ ಮಾಡುವುದು ಬಹಳ ಆವಶ್ಯಕ. ಮಣ್ಣಿನಲ್ಲಿರುವ ನೀರು ಬಸಿದು ಹೋದಾಗ ಖಾಲಿಯಾದ ಜಾಗದಲ್ಲಿ ವಾಯು ಸಂಗ್ರಹಗೊಂಡು ಸಸ್ಯಗಳಿಗೆ ಒದಗುತ್ತದೆ. ಸಾವಯವ ವಸ್ತುಗಳನ್ನು ಮತ್ತು ರಾಸಾಯನಿಕ ಗೊಬ್ಬರಗಳನ್ನು ಸಸ್ಯಗಳಿಗೆ ಉಪಯುಕ್ತವಾಗುವ ರೂಪಕ್ಕೆ ಬದಲಾಯಿಸಲು ಬೇಕಾಗುವ ಬ್ಯಾಕ್ಟೀರಿಯಗಳಿಗೆ ಈ ವಾಯು ಹಾಗೂ ಉಷ್ಣತೆ ಬೇಕಾಗುತ್ತದೆ.

ಹೆಚ್ಚಾದ ನೀರು ಬಸಿದುಹೋಗುವಂತೆ ಮಾಡಲು ತೆರೆದ ಬಸಿಗಾಲುವೆಗಳನ್ನೊ ಮುಚ್ಚಿದ ಬಸಿಗಾಲುವೆಗಳನ್ನೊ (ಹೆಂಚಿನ ಬಸಿಗಾಲುವೆಗಳು) ತೋಡಬೇಕಾಗುತ್ತದೆ.

ತೆರೆದ ಬಸಿಗಾಲುವೆಗಳು ಜಮೀನಿನ ಕೆಲಭಾಗಗಳನ್ನು ಆಕ್ರಮಿಸುವುದಲ್ಲದೆ, ಬೇಸಾಯದ ಯಂತ್ರೋಪಕರಣಗಳು ಹಾದುಹೋಗಲು ಅಡ್ಡಿಯುಂಟುಮಾಡುತ್ತವೆ. ಇದಲ್ಲದೆ ಇವು ಆಗಾಗ ತುಂಬಿ ಹೋಗುವುದರಿಂದ, ಚೊಕ್ಕಟ ಮಾಡುವುದು ಅವಶ್ಯವಾಗುತ್ತದೆ.

ಹೆಂಚಿನ ಬಸಿಗಾಲುವೆಗಳು ಬೇಸಾಯ ಕಾರ್ಯಗಳಿಗೆ ಅಡ್ಡಿಬರುವುದಿಲ್ಲ. ಇವುಗಳಲ್ಲಿ ನೀರು ಸರಿಯಾಗಿ ಬಸಿದುಹೋಗುವುದರಿಂದ ಬೆಳೆಗಳ ಬೇರುಗಳು ಸರಿಯಾಗಿ ಹರಡಲು ಅವಕಾಶವಾಗುತ್ತದೆ. ಇಂಥ ಕಾಲುವೆಗಳಿಗೆ ಪ್ರಾರಂಭಿಕ ವೆಚ್ಚ ಹೆಚ್ಚು. ಬಸಿಗಾಲುವೆಗಳನ್ನು ತೋಡುವ ಮೊದಲು ಆ ಪ್ರದೇಶದ ಸ್ಥಿತಿಗನುಗುಣವಾಗಿ ತೋಡಬೇಕಾದ ಬಸಿಗಾಲುವೆ ಯಾವ ಬಗೆಯದು ಎಂಬುದನ್ನು ನಿರ್ಧರಿಸಬೇಕು. ಒಂದು ಸ್ಥಳಕ್ಕೆ ಸೂಕ್ತವಾದ ಬಗೆ, ಇನ್ನೊಂದು ಸ್ಥಳಕ್ಕೆ ಹೊಂದದೆ ಹೋಗಬಹುದು. ಮಣ್ಣು, ನೆಲದ ಇಳಿಜಾರು, ಬೆಳೆ ಮತ್ತು ಜಮೀನಿನ ಮೌಲ್ಯ-ಇವೆಲ್ಲವನ್ನೂ ಪರಿಗಣಿಸಬೇಕು.

ಬಸಿಗಾಲುವೆ ತೋಡಲು ಪ್ರಾರಂಭಿಸುವ ಮೊದಲು ಒಂದು ನಕ್ಷೆ ತಯಾರಿಸಿ, ಅದರಲ್ಲಿ ಮುಂದೆ ಕಾಣಿಸಿರುವ ಅಂಶಗಳನ್ನು ಗುರುತಿಸಬೇಕು.

1. ಬಸಿದು ಹೋಗುವಿಕೆಯ ಅಗತ್ಯವಿರುವ ಪ್ರದೇಶಗಳ ಎಲ್ಲೆ ಮತ್ತು ಇಳಿಜಾರು 2 ಸದ್ಯ ಇರುವ ಬಸಿಗಾಲುವೆಗಳು. 3 ಎಲ್ಲ ದಿಣ್ಣೆಗಳು, ನೀರು ಹರಿಯುವ ಪಾತ್ರಗಳು ಮತ್ತು ದಿಂಡುಗಳ ಎತ್ತರ ಹಾಗೂ ಸ್ಥಾನ ನಿರ್ದೇಶನ. 4 ವ್ಯವಸ್ಥೆಯ ಪ್ರತಿಯೊಂದು ಭಾಗದಲ್ಲಿಯೂ ಬಸಿದುಹೋಗುವ ಪ್ರದೇಶ.

ಎಲ್ಲ ಬಸಿಗಾಲುವೆಗಳ ನೀರು ಹೊರಗೆ ಹೋಗಲು ಅನುಕೂಲವಾಗುವಂತೆ ಹೊರದಾರಿ ದೊಡ್ಡದಾಗಿರಬೇಕಲ್ಲದೆ ಬಂದ ನೀರನ್ನೆಲ್ಲ ಒಯ್ಯುವಂತಿರಬೇಕು. ಹೊರದಾರಿ ಬಸಿಗಾಲುವೆಗಳಿಗಿಂತ ಆಳವಾಗಿರುವುದೂ ಅಗತ್ಯ.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಜೌಗು_ನೆಲ&oldid=952893" ಇಂದ ಪಡೆಯಲ್ಪಟ್ಟಿದೆ