ದೊಡ್ಡ ಕರುಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ದೊಡ್ಡ ಕರುಳು ಜೀರ್ಣನಾಳದ ಕೊನೆಕೊನೆಯ ಭಾಗ (ಕೋಲನ್ ; ಲಾರ್ಜ್ ಇನ್‍ಟೆಸ್‍ಟೈನ್). ಉದರದಲ್ಲಿ ಸಣ್ಣ ಕರುಳಿನ ಕುಣಿಕೆಗಳ ಸುತ್ತ ಕಮಾನಿನ ರೀತಿಯಲ್ಲಿ ಬಳಸಿಕೊಂಡಿರುವಂತಿದೆ. ಜೀರ್ಣನಾಳದಲ್ಲಿ ದೊಡ್ಡ ಕರುಳು ಸಣ್ಣ ಕರುಳಿನ ಮುಂದುವರಿದ ಭಾಗವಾದರೂ ಅವುಗಳ ಆದಿ ಅಂತ್ಯಗಳು ಜಂಟಿ ಆಗುವುದಿಲ್ಲ. ಬದಲು ದೊಡ್ಡ ಕರುಳಿನ ಅಗ್ರದಿಂದ ಸುಮಾರು 6.35-7.6 ಸೆಂಮೀ ಮೇಲೆ ಅದನ್ನು ಸಣ್ಣ ಕರುಳು ಲಂಬವಾಗಿ ಸೇರಿಕೊಳ್ಳುತ್ತದೆ. ಕರುಳುಗಳ ಒಟ್ಟು ಉದ್ದದಲ್ಲಿ ದೊಡ್ಡ ಕರುಳು 1/5 ರಷ್ಟು ಅಂದರೆ ಸುಮಾರು 1.5 ಮೀಟರುಗಳಷ್ಟು ಇದೆ. ಸಣ್ಣ ಕರುಳಿನ ನಯವಾದ ಹೊರಮೈಗೆ ಭಿನ್ನವಾಗಿ ದೊಡ್ಡ ಕರುಳಿನ ಉದ್ದಕ್ಕೂ ಮೂರು ಸ್ನಾಯುಪಟ್ಟಿಗಳೂ (ಟೀನಿಯ ಕೋಲೈ) ಹಲವು ಉಬ್ಬು ಚೀಲಗಳೂ (ಸ್ಯಾಕ್ಯುಲೇಷನ್ಸ್) ಕೊಬ್ಬಿನ ಗಂಟುಗಳೂ (ಅಪೆಂಡಿಸಿಸ್ ಎಪಿಪ್ಲೋಯಿಕೆ) ಇವೆ.

ದೊಡ್ಡ ಕರುಳು ಕಿಬ್ಬೊಟ್ಟೆಯ ಬಲಮೂಲೆಯಲ್ಲಿ ಸೊಂಟದ ಮೂಳೆಯ ಮುಂದೆ ಪ್ರಾರಂಭವಾಗಿ ಉದರದ ಬಲ ಅಂಚಿನಲ್ಲಿ ಏರಿ ಪಕ್ಕೆಲುಬುಗಳ ಮಟ್ಟವನ್ನು ತಲುಪುತ್ತದೆ. ಅಲ್ಲಿ ಎಡಕ್ಕೆ ಬಾಗಿ, ಉದರದ ಎಡ ಉನ್ನತ ಮೂಲೆಯ ತನಕ ಮಾಲೆಯಂತೆ ಡೊಂಕಾಗಿ ಹಾಗೂ ಅಡ್ಡವಾಗಿ ಸಾಗುತ್ತದೆ. ಈ ಮೂಲೆಯಲ್ಲೂ ಪುನಃ ಕೆಳಕ್ಕೆ ಬಾಗಿ ಉದರದ ಎಡಕೆಳ ಮೂಲೆಯ ತನಕ ಇಳಿದು ತೊಡೆ ಸಂದಿಗೆ ಸಮಾಂತರವಾಗಿ ಕ್ರಮಿಸಿ ಕಿಬ್ಬೊಟ್ಟೆಯಲ್ಲಿ ~ ಆಕಾರದಂತೆ ಇಮ್ಮೊಗವಾಗಿ ಬಾಗಿ ದೇಹದ ನಡುಮಧ್ಯ ಗೆರೆಯಲ್ಲಿ ಮುಂದುವರಿದು ಆಸನ ದ್ವಾರದಲ್ಲಿ ಕೊನೆಗೊಳ್ಳುತ್ತದೆ. ಅಂಧಾಂತ್ರ (ಸೀಕಮ್) ಮತ್ತು ಕ್ರಿಮಿ ರೂಪದ ಅಂತ್ರಪುಚ್ಛ (ವರ್ಮಿಫಾರಮ್ ಅಪೆಂಡಿಕ್ಸ್), ಸ್ವಯಂ ದೊಡ್ಡ ಕರುಳು (ಕೋಲನ್ ಪ್ರಾಪರ್), ಗುದನಾಳ (ರೆಕ್ಟಮ್) ಮತ್ತು ಆಸನನಾಳ (ಏನಲ್ ಕೆನಾಲ್) ಇವು ದೊಡ್ಡ ಕರುಳಿನಲ್ಲಿ ಗುರುತಿಸಲಾಗುವ ಭಾಗಗಳು. ಅಂಧಾಂತ್ರ ಮತ್ತು ಗುದನಾಳಗಳ ವ್ಯಾಸ ಮಿಕ್ಕ ಭಾಗಗಳಿಗಿಂತ ಸ್ವಲ್ಪ ಹೆಚ್ಚು.[೧][೨][೩][೪][೫][೬]

ಅಂಧಾಂತ್ರ[ಬದಲಾಯಿಸಿ]

ದೊಡ್ಡ ಕರುಳಿನ ಆದಿ ಭಾಗ ಬಲಸೊಂಟ ಮೂಳೆಯ ಮುಂದೆ ಇದೆ. ತುದಿ ಮುಚ್ಚಿದ ಕುರುಡು ಕೊಳವೆಯಂತೆ ಇದು ಪ್ರಾರಂಭವಾಗುವುದರಿಂದ ಇದಕ್ಕೆ ಪಾಶ್ಚಾತ್ಯ ವೈದ್ಯದಲ್ಲಿ ಸೀಕಮ್ ಎಂದು ಹೆಸರುಂಟು (ಸೀಕಮ್ ತುದಿ ಮುಚ್ಚಿದ ಕೊಳವೆ). ದೊಡ್ಡ ಕರುಳಿನ ಅಗ್ರದಿಂದ ಸಣ್ಣ ಕರುಳು ದೊಡ್ಡ ಕರುಳನ್ನು ಸೇರುವ ಸ್ಥಳದ ವರೆಗೆ ಇದರ ವ್ಯಾಪ್ತಿ. ಈ ಉದ್ದ 6.25 ಸೆಂಮೀ. ವ್ಯಾಸ ಕೂಡ ಸಾಮಾನ್ಯವಾಗಿ ಇಷ್ಟೆ ಅಥವಾ ಇದಕ್ಕಿಂತ 1 ಸೆಂಮೀ ಹೆಚ್ಚಾಗಿಯೆ ಇರಬಹುದು. ಅಂಧಾಂತ್ರ ಭರ್ತಿ ಆಗಿರುವಾಗ ಅದು ಉದರದ ಹಿಂದುಮುಂದು ಭಿತ್ತಿಗಳಿಗೆ ತಾಗಿಕೊಂಡಿರುತ್ತದೆ. ನೆಟ್ಟಗೆ ನಿಂತಾಗ ಅಂಧಾಂತ್ರ ಸಾಮಾನ್ಯವಾಗಿ ಕಿಬ್ಬೊಟ್ಟೆಗೆ ಇಳಿದಿರುತ್ತದೆ. ಖಾಲಿ ಆಗಿದ್ದಾಗ ಇದರ ಮುಂದೆ ಸಣ್ಣ ಕರುಳಿನ ಕುಣಿಕೆಗಳು ಇರಬಹುದು. ಅಂಧಾಂತ್ರವನ್ನು ಸಾಮಾನ್ಯವಾಗಿ ಪರಿವೇಷ್ಟನ (ಪೆರಿಟೋನಿಯಮ್) ಪೂರ್ಣವಾಗಿ ಕವಿದಿರುತ್ತದೆ. ಯಾವ ಬಂಧನವೂ ಇಲ್ಲದೆ ಬಿಡುವಾಗಿರುವುದರಿಂದ ಅನೇಕ ವೇಳೆ ಅಂತ್ರವೃದ್ಧಿಯಲ್ಲಿ (ಹರ್ನಿಯ) ಕಂಡುಬರಬಹುದು. ಸುಮಾರು 5% ರಷ್ಟು ಜನರಲ್ಲಿ ಅಂಧಾಂತ್ರ ಉದರದ ಹಿಂಭಿತ್ತಿಗೆ ಅಂಟಿಕೊಂಡು ಅದರ ಮುಂಭಾಗದಲ್ಲಿ ಮಾತ್ರ ಪರಿವೇಷ್ಟನದ ಮುಸುಕು ಇರುತ್ತದೆ. ಟ್ರೀವ್ಸ್ ಎಂಬ ಅಂಗರಚನಾ ವಿಜ್ಞಾನಿಯ ವಿವರಣೆಯಂತೆ ಅಂಧಾಂತ್ರದ ವಿನ್ಯಾಸ 4 ಬಗೆ :

  1. ಸುಮಾರು 2% ಜನರಲ್ಲಿ ಇದರ ಆಕಾರ ಬುದ್ಧಿವಂತದಂತೆ (ಲಾಳಿಕೆ, ಫನಲ್) ಇದರ ಕೆಳತುದಿಯಿಂದ ಅಂತ್ರಪುಚ್ಛ ಕೆಳಕ್ಕೆ ಚಾಚಿಕೊಂಡಿರುತ್ತದೆ.
  2. ಸುಮಾರು 3% ಜನರಲ್ಲಿ ಅಂಧಾಂತ್ರ ಆಳವಾದ ಬಿರುಕಿನಿಂದ ಎರಡು ಭಾಗಗಳಾಗಿ ವಿಂಗಡವಾಗಿದೆ. ಇವುಗಳ ನಡುವೆ ಮುಂದಿನ ಪಟ್ಟೆಸ್ನಾಯು ಪ್ರಾರಂಭವಾಗುತ್ತದೆ. ಅಂತ್ರಪುಚ್ಛ ದೊಡ್ಡ ಕರುಳಿಗೆ ಅಂಟಿಕೊಂಡಿರುವುದೂ ಅಲ್ಲೇ.
  3. ಸುಮಾರು 90% ಜನರಲ್ಲಿ ಅಂಧಾಂತ್ರದ ಬಲಭಾಗ ಪ್ರಧಾನ. ಇದೇ ಸ್ವಯಂ ಅಂಧಾಂತ್ರದಂತೇ ಕಂಡುಬಂದು ಎಡಭಾಗ ಅಗಣನೀಯ ಉಬ್ಬಾಗಿ ಸಣ್ಣ ಕರುಳು ಸೇರಿಕೊಳ್ಳುವ ಸ್ಥಳದಲ್ಲಿ ಕಂಡುಬರಬಹುದು. ಅಂತ್ರಪುಚ್ಛ ಅಂಟಿಕೊಂಡಿರುವುದೂ ಈ ಸ್ಥಳದಲ್ಲೆ. ಬಲಭಾಗವೇ ಪ್ರಧಾನವಾಗಿರುವುದರಿಂದ ದೊಡ್ಡ ಕರುಳಿನ ಸ್ನಾಯುಪಟ್ಟೆಗಳು ಸಮಾಂತರವಾಗಿ ಇಲ್ಲದೆ ಎಡಕ್ಕಿರುತ್ತವೆ.
  4. ಸುಮಾರು 4% ಜನರಲ್ಲಿ ಎಡಭಾಗ ಪೂರ್ಣವಾಗಿ ಲೋಪವಾಗಿದ್ದು ಸಣ್ಣ ಕರುಳು ದೊಡ್ಡ ಕರುಳಿನ ಅಗ್ರತುದಿಗೇ ಸೇರಿಕೊಂಡಿರುತ್ತದೆ.

ಅಂತ್ರಪುಚ್ಛ[ಬದಲಾಯಿಸಿ]

ಹುಳುವಿನಂತಿರುವ ಈ ಅಂಗದ ಉದ್ದ 2 ರಿಂದ 20 ಸೆಂಮೀ. ಇರಬಹುದು. ಸರಾಸರಿ ಉದ್ದ 8 ಸೆಂಮೀ. ವ್ಯಾಸ 5 ರಿಂದ 10 ಮಿಮೀ. ಸಣ್ಣ ಕರುಳು ದೊಡ್ಡ ಕರುಳುಗಳ ಸಂಗಮ ಸ್ಥಳದಲ್ಲಿ ಪ್ರಾರಂಭವಾಗಿ ಇದು ಸಾಮಾನ್ಯವಾಗಿ ದೊಡ್ಡ ಕರುಳಿನ ಹಿಂದೆ ಇರುತ್ತದೆ. ಅಪರೂಪವಾಗಿ ಅಂತ್ರಪುಚ್ಛ ಕೆಳಮುಖವಾಗಿದ್ದು ಕಿಬ್ಬೊಟ್ಟೆಯ ಅಂಗವಾಗಿರಬಹುದು. ಅಂತ್ರಪುಚ್ಛಪೊಳ್ಳು, ಆದರೆ ಒಳವ್ಯಾಸ ಬಲು ಸಣ್ಣ. ಸಂಗಮದ ಕೆಳಗೆ ಅಂಧಾಂತ್ರದೊಳಕ್ಕೆ ತೆರೆದುಕೊಂಡಿರುತ್ತದೆ.

ಸಣ್ಣ ಕರುಳು ದೊಡ್ಡ ಕರುಳುಗಳ ಸಂಗಮ ಸ್ಥಳದಲ್ಲಿ ಸಣ್ಣ ಕರುಳು ದೊಡ್ಡ ಕರುಳಿನೊಳಗೆ ಚಾಚಿಕೊಂಡು ಎರಡು ತುಟಿಗಳಂತೆ ಕಂಡುಬರುತ್ತದೆ. ಈ ತುಟಿಗಳು ಸಂಗಮ ದ್ವಾರದ ಕವಾಟದಂತೆ (ಐಲಿಯೊಸೀಕಲ್ ವಾಲ್ವ್) ವರ್ತಿಸುತ್ತವೆ.

ಸ್ವಯಂ ದೊಡ್ಡ ಕರುಳು[ಬದಲಾಯಿಸಿ]

ಇದನ್ನು ಏರುಭಾಗ (ಅಸೆಂಡಿಂಗ್ ಕೋಲನ್) ಅಡ್ಡಭಾಗ (ಟ್ರಾನ್ಸ್‍ವರ್ಸ್ ಕೋಲನ್), ಇಳಿಭಾಗ (ಡಿಸೆಂಡಿಂಗ್ ಕೋಲನ್), ಸೊಂಟಭಾಗ, (ಐಲಿಯಕ್ ಕೋಲನ್) ಮತ್ತು ಇಮ್ಮೊಗ ಇಳಿಭಾಗ (ಸಿಗ್‍ಮಾಯ್ಡ್ ಕೋಲನ್) ಎಂಬುದಾಗಿ ಗುರುತಿಸಬಹುದಾಗಿದೆ. ಏರುಭಾಗದ ಉದ್ದ 12.7-20.3 ಸೆಂಮೀ. ಉದರದ ಬಲಭಾಗದಲ್ಲಿ ಏರುತ್ತ ಯಕೃತ್ತಿನ ಬಲಹಾಲೆ ಮಟ್ಟವನ್ನು ತಲುಪಿ ಅಲ್ಲಿ ಎಡಗಡೆಗೆ ತಿರುಗುತ್ತದೆ. ಇದೇ ದೊಡ್ಡ ಕರುಳಿನ ಬಲಬಾಗು (ರೈಟ್ ಕಾಲಿಕ್ ಫ್ಲೆಕ್ಷರ್). ಯಕೃತ್ತನ್ನು ಸದಾ ಒತ್ತುತ್ತಿರುವುದರಿಂದ ಯಕೃತ್ತಿನ ಆ ಸ್ಥಳದಲ್ಲಿ ಒಂದು ಗುಳಿ ಇರುತ್ತದೆ. ಏರುಗರುಳು ಉದರದ ಹಿಂಭಿತ್ತಿಗೆ ಅಲುಗಾಡದಂತೆ ಅಂಟಿಕೊಂಡಿದೆ. ಮುಂಭಾಗದಲ್ಲಿ ಮಾತ್ರ ಪರಿವೇಷ್ಟನದ ಹೊದಿಕೆ ಇದೆ. ಏರುಗರುಳಿನ ಮುಂದೆ ಸಣ್ಣ ಕರುಳಿನ ಕುಣಿಕೆಗಳೂ ಉದರದ ಮುಂಭಿತ್ತಿಯೂ ಇವೆ.

ಅಡ್ಡ ಭಾಗ : ಉದ್ದ 45. 7-50.8 ಸೆಂಮೀ. ದೊಡ್ಡ ಕರುಳಿನ ಅತ್ಯಂತ ದೊಡ್ಡ ಭಾಗವಿದು. ಅದರ ಬಲಬಾಗಿನಿಂದ ಪ್ರಾರಂಭವಾಗಿ ಹೊಕ್ಕಳಿನಿಂದ ಸ್ವಲ್ಪ ಮೇಲ್ಮಟ್ಟದಲ್ಲಿ ಎಡಕ್ಕೆ ಹಾದು ಉದರದ ಎಡಪಾಶ್ರ್ವವನ್ನು ಸೇರುತ್ತದೆ. ಅಲ್ಲಿಂದ ಗುಲ್ಮದವರೆಗೆ ಮೇಲೇರಿ ಪುನಃ ಮಡಿಚಿಕೊಂಡು ಕೆಳಕ್ಕೆ ಇಳಿಯುತ್ತದೆ. ಈ ಮಡಿಕೆಯೇ ದೊಡ್ಡ ಕರುಳಿನ ಎಡಬಾಗು (ಲೆಫ್ಟ್ ಕಾಲಿಕ್ ಫ್ಲೆಕ್ಷರ್). ಇದು ಬಲಬಾಗಿಗಿಂತ ಹೆಚ್ಚು ಮೇಲ್ಮಟ್ಟ ಮತ್ತು ಇನ್ನಷ್ಟು ಹಿಂದುಗಡೆ ಇದೆ. ಫ್ರೆನಿಕೊಕಾಲಿಕ್ ಲಿಗಮೆಂಟ್ ಎಂಬ ಬಂಧನ ಇದನ್ನೂ ಸ್ವಲ್ಪಮಟ್ಟಿಗೆ ಗುಲ್ಮವನ್ನೂ ವಪೆಗೆ ಬಂಧಿಸಿ ಸ್ಥಳಾಂತರಗೊಳ್ಳದಂತೆ ಮಾಡಿದೆ. ನೆಟ್ಟಗೆ ನಿಂತಾಗ ಅಡ್ಡಭಾಗದ ಮಧ್ಯೆ ಮಾಲೆಯಂತೆ ಗಂಡಸರಲ್ಲಿ 7.66 - 10.2 ಸೆಂಮೀ. ಹೆಂಗಸರಲ್ಲಿ 10.2 - 12.7 ಸೆಂಮೀ. ಕೆಳಕ್ಕೆ ಇಳಿ ಬಿದ್ದಿರುತ್ತದೆ. ಅಡ್ಡ ಭಾಗಕ್ಕೆ ಪರಿವೇಷ್ಟನದ ಕವಚ ಪೂರ್ಣವಾಗಿದೆ. ಅಲ್ಲದೆÀ ಅಂತ್ರಪಟಲದ ಮಡಿಕೆಯೂ (ಮಿಸೆಂಟರಿ) ಇರುವುದರಿಂದ ಅಡ್ಡಭಾಗ ಸ್ವಲ್ಪ ಮೇಲಕ್ಕೆ ಅಥವಾ ಕೆಳಕ್ಕೆ ಸ್ಥಳಾಂತರಗೊಳ್ಳಬಹುದು.

ಇಳಿಭಾಗ : ಉದ್ದ 10 - 15 ಸೆಂಮೀ. ಎಡಬಾಗಿನಿಂದ ಉದರದ ಎಡ ಅಂಚಿನಲ್ಲಿ ಇಳಿಯುವುದು. ಏರುಭಾಗದಂತೆಯೇ ಪರಿವೇಷ್ಟನದಿಂದ ಮುಂದುಗಡೆ ಮಾತ್ರ ಹೊದ್ದಿಸಲ್ಪಟ್ಟು ಅಲ್ಲಾಡದಂತೆ ಉದರದ ಹಿಂಭಿತ್ತಿಗೆ ಅಂಟಿಕೊಂಡಿದೆ. ಸಾಮಾನ್ಯವಾಗಿ ಇದು ಸಂಕುಚಿಸಿಯೇ ಇರುವುದರಿಂದ ಇದರ ವ್ಯಾಸ ಏರುಭಾಗಕ್ಕಿಂತ ಕಡಿಮೆ. ಉದರದಲ್ಲಿ ಇದು ಏರುಭಾಗಕ್ಕಿಂತ ಹಿಂದೆ ಇದೆ.

ಸೊಂಟ ಭಾಗ : ಇಳಿಭಾಗ ಮುಂದುವರಿದು ಸೊಂಟದ ಮೂಳೆಯ ಮುಂದಿರುವ ಭಾಗ. ಉದ್ದ 12.5 - 15 ಸೆಂಮೀ. ಕಿಬ್ಬೊಟ್ಟೆಯಲ್ಲಿ ಅಡ್ಡವಾಗಿ ಎಡದಿಂದ ಮಧ್ಯರೇಖೆಯವರೆಗೆ ಗಮಿಸುತ್ತದೆ. ಇದೂ ಉದರದ ಹಿಂಭಿತ್ತಿಗೆ ಅಂಟಿಕೊಂಡು ಮುಂದೆ ಮಾತ್ರ ಪರಿವೇಷ್ಟನದಿಂದ ಹೊದ್ದಿಸಲ್ಪಟ್ಟಿದೆ.

ಇಮ್ಮೊಗಡೊಂಕು ಭಾಗ : ಉದ್ದ 40 - 42.5 ಸೆಮಮೀ. ಪರಿವೇಷ್ಟನದ ಹಾಗೂ ಅಂತ್ರಪಟಲದ ಮಡಿಕೆ ಇದೆ. ಸ್ವಲ್ಪಮಟ್ಟಿಗೆ ಚಲನೆ ಸಾಧ್ಯವಿರುವುದರಿಂದ ನೆಟ್ಟಗೆ ನಿಂತಾಗ ಸಾಮನ್ಯವಾಗಿ ಕಿಬ್ಬೊಟ್ಟೆಯ ಅಂಗವಾಗಿಯೇ ಇರುತ್ತದೆ. ಇದರ ಆದಿ ಕಿಬ್ಬೊಟ್ಟೆಯ ಮೇಲು ಭಾಗದಲ್ಲಿ ಅಂತ್ಯ ತ್ರಿಕಾಸ್ಥಿಯ (ಸೇಕ್ರಮ್) ಮೂರನೆ ಮಣಿಯ ಮುಂದೆ.

ಗುದನಾಳ[ಬದಲಾಯಿಸಿ]

ಉದ್ದ 12.5 - 15 ಸೆಂಮೀ. ತ್ರಿಕಾಸ್ಥಿಯ ಮೂರನೆ ಮಣಿಯ ಮಟ್ಟದಿಂದ ಕೆಳಕ್ಕೆ ಇಳಿದು ಆಸನನಾಳವಾಗಿ ಕೊನೆಯಲ್ಲಿ ಆಸನದ್ವಾರದ ಮೂಲಕ ಹೊರಕ್ಕೆ ತೆರೆದುಕೊಳ್ಳುತ್ತದೆ. ಗುದನಾಳದ ಮೇಲೆ ಸ್ನಾಯುಪಟ್ಟಿಯಾಗಲಿ, ಉಬ್ಬಚೀಲ ಕೊಬ್ಬಿನ ಗಂಟುಗಳಾಗಲಿ ಇಲ್ಲ. ಕೊನೆಕೊನೆಯಲ್ಲಿ ಇದರ ವ್ಯಾಸ ಹೆಚ್ಚಾಗುತ್ತದೆ. ಈ ಭಾಗ ವಿಸ್ತøತ ಗುದನಾಳಾಗ್ರ (ರೆಕ್ಟಲ್ ಆಂಪುಲ್ಲ). ಗುದನಾಳದ ಮೇಲು ತುದಿ ಹಿಂದಕ್ಕೂ ಕೆಳತುದಿ ಮುಂದಕ್ಕೂ ಬಾಗಿವೆ. ಅಲ್ಲದೆ ಮೇಲುಭಾಗದಲ್ಲಿ ಬಲಕ್ಕೂ ತ್ರಿಕಾಸ್ಥಿ ಗುದಾಸ್ಥಿಗಳ (ಕಾಕ್ಸಿಕ್ಸ್) ಸಂಧಿಯ ಮಟ್ಟದಲ್ಲಿ ಎಡಕ್ಕೂ ಬಾಗಿವೆ. ಗುದನಾಳದ ಕೆಳಭಾಗ ಸಂಕುಚಿಸಿ ವ್ಯಾಸ ಕಡಿಮೆ ಆದಾಗ ಲೋಳೆಪೊರೆಯಲ್ಲಿ ಉದ್ದುದ್ದ ಮಡಿಕೆಗಳು ಕಂಡುಬರುತ್ತವೆ. ಅಲ್ಲದೆ ಅರ್ಧಚಂದ್ರಾಕಾರದ ಮೂರು ಅಡ್ಡ ಮಡಿಕೆಗಳು ಗುದನಾಳದಲ್ಲಿ ಸ್ಥಿರವಾಗಿ ಇರುತ್ತವೆ ; ಮೊದಲನೆಯದು ಮೇಲುತುದಿಯ ಬಲಗಡೆ. ಎರಡನೆಯದು ಸುಮಾರು 2.5 ಸೆಂಮೀ ಕೆಳಗೆ ಎಡಗಡೆ ಮೂರನೆಯದು ಮೂತ್ರಕೋಶದ ಮೇಲುಮಟ್ಟದಲ್ಲಿ. ಮೂರನೆಯ ಮಡಿಕೆಯೇ ಎಲ್ಲಕ್ಕಿಂತ ದೊಡ್ಡದು. ಈ ಮಡಿಕೆಗಳನ್ನು ಸುಶ್ರುತ ತನ್ನ ಸಂಹಿತೆಯ ಶಾರೀರ ಭಾಗದಲ್ಲಿ ಪ್ರವಾಹನೆ, ವಿಸರ್ಜನಿ ಮತ್ತು ಸಂವರಣೀ ಎಂದು ವಿವರಿಸಿದ್ದಾನೆ. ಕೆಲವರಲ್ಲಿ ನಾಲ್ಕನೆಯ ಮಡಿಕೆಯೂ ಇರುವುದುಂಟು. ಇದು ಆಸನದ್ವಾರದಿಂದ ಸುಮಾರು 2.5 ಸೆಂಮೀ ಮೇಲಿದೆ. ಈ ಅಡ್ಡಮಡಿಕೆಗಳು ಸುಮಾರು 1.25 ಸೆಂಮೀ ಅಗಲವಾಗಿದ್ದು ಸೆಟೆದುಕೊಂಡಿರುತ್ತವೆ. ಮಡಿಕೆಗಳಲ್ಲಿರುವ ಸ್ನಾಯುತಂತುಗಳ ಸಂಕೋಚನ ಇದಕ್ಕೆ ಕಾರಣ. ಗುದನಾಳ ಖಾಲಿಯಾಗಿದ್ದಾಗ ಮಡಿಕೆಗಳು ಒಂದಕ್ಕೊಂದು ತಾಗಿಕೊಂಡಿರುತ್ತವೆ. ಹೀಗಿರುವಾಗ ಗುದಾಸ್ತ್ರವನ್ನು (ಪ್ರಾಕ್ಟಾಸ್ಕೋಪ್) ಸುಲಭವಾಗಿ ಗುದನಾಳದೊಳಗೆ ತೂರಿಸಲಾಗುವುದಿಲ್ಲ. ಮಲ ನಿರಂತರವಾಗಿ ಆಸನ ನಾಳಕ್ಕೆ ನುಗ್ಗದಂತೆ ಈ ಮಡಿಕೆಗಳು ತಡೆಯುತ್ತವೆ. ಆಸನ ನಾಳಕ್ಕೆ ಮಲ ನುಗ್ಗಿದ ಕೂಡಲೇ ಮಲವಿಸರ್ಜನೆಗೆ ಅವಸರವಾಗುತ್ತದೆ. ಗುದನಾಳದ ಉದ್ದಕ್ಕೂ ಪೂರ್ತಿಯಗಿ ಪರಿವೇಷ್ಟನವಿಲ್ಲ. ಆಸನದ್ವಾರದಿಂದ ಗಂಡಸರಲ್ಲಿ 7.5 ಸೆಂಮೀ. ಹೆಂಗಸರಲ್ಲಿ 5.5 ಸೆಂಮೀ. ಮೇಲೆ ಮಾತ್ರ ಪರಿವೇಷ್ಟನವಿದೆ. ಶಸ್ತ್ರಕ್ರಿಯೆಯಿಂದ ಗುದನಾಳದ ಕೆಳಭಾಗವನ್ನು ತೆಗೆದು ಹಾಕಬೇಕಾದ ಸಂದರ್ಭಗಳಲ್ಲಿ ಇದನ್ನು ಜ್ಞಾಪಕದಲ್ಲಿ ಇಟ್ಟುಕೊಂಡಿರಬೇಕಾದದ್ದು ಮುಖ್ಯ.

ಆಸನನಾಳ[ಬದಲಾಯಿಸಿ]

ದೊಡ್ಡಕರುಳಿನ ಅಂತ್ಯಭಾಗ. ಸುಮಾರು 2.5 - 4 ಸೆಂಮೀ. ಉದ್ದ. ಗುದನಾಳ ಹಠಾತ್ತಾಗಿ ಹಿಂದಕ್ಕೆ ಬಾಗಿ ಮುಂದುವರಿದು ಆಸನನಾಳವಾಗಿದೆ. ಆಸನನಾಳಕ್ಕೆ ಪರಿವೇಷ್ಟನವಿಲ್ಲ. ಆಸನನಾಳದ ಮೇಲುಭಾಗದ ಭಿತ್ತಿಯಲ್ಲಿ ಸುತ್ತುವರಿದ ಸ್ನಾಯು ಒಳ ಉಂಗುರ ಸ್ನಾಯುವಾಗಿದೆ (ಇಂಟರ್‍ನರ್ ಸ್ಫೊಂಕ್ಟರ್). ಎರಡು ಪಕ್ಕಗಳಲ್ಲಿಯೂ ಲಿವೇಟರ್ ಏನೈ ಎಂಬ ಸ್ನಾಯುಗಳು ಆಸನನಾಳಕ್ಕೆ ಆಸರೆ ಆಗಿವೆ. ಹೊರ ಅಥವಾ ಉಂಗುರ ಸ್ನಾಯು ಆಸನದ್ವಾರವನ್ನು ಸುತ್ತುವರಿದಿದೆ. ಮಾಂಸ ಮತ್ತು ನಾರು ಕೂಡಿದ ಮುದ್ದೆ ನಾಳದ ಹಿಂದಿದೆ. ಆಸನನಾಳದ ಮೇಲಿನ ಅರ್ಧದಲ್ಲಿ ಅಭಿದಮನಿ ಬಲೆಗಳಿರುವ ಹಲವು ಉದ್ದುದ್ದ ಮಡಿಕೆಗಳು (ಗುದಮಡಿಕೆಗಳು, ರೆಕ್ಟಲ್ ಕಾಲಮ್ಸ್) ಉಂಟು. ಇವುಗಳ ನಡುವೆ ಗುದಕುಳಿಗಳೂ (ರೆಕ್ಟಲ್ ಸೈನ್ಯೂಸಸ್) ಇವುಗಳ ಕೆಳ ಅಂಚುಗಳಲ್ಲಿ ಒಂದರ ಕೊನೆಗೆ ಇನ್ನೊಂದರ ಕೊನೆ ಅಂಟಿಕೊಂಡಿರುವ ಅಸನ ಕವಾಟಗಳೂ ಇವೆ. ಉರಿಯೂತವಾದ ಗುದಮಡಿಕೆಗಳಿಂದ ರಕ್ತ ಸೋರುವುದೇ ಮೂಲವ್ಯಾಧಿ.

ದೊಡ್ಡ ಕರುಳಿನ ಸೂಕ್ಷ್ಮ ರಚನೆ[ಬದಲಾಯಿಸಿ]

ದೊಡ್ಡ ಕರುಳಿನ ಭಿತ್ತಿಯಲ್ಲಿ ನಾಲ್ಕು ಪದರಗಳಿದ್ದು ಸ್ನಾಯು ಪಟ್ಟಿಗಳ ಉದ್ದ ಮಿಕ್ಕ ಪದರಗಳಿಗಿಂತ ಚಿಕ್ಕದಾಗಿರುವುದರಿಂದ ಭಿತ್ತಿಗೆ ನಿರಿಗೆ ಮಾಡಿದಂತಾಗಿ ದೊಡ್ಡ ಕರುಳಿನ ಒಳಗೆ ಅರ್ಧಚಂದ್ರ ಮಡಿಕೆಗಳಾಗಿವೆ. ಅರ್ಧಚಂದ್ರ ಮಡಿಕೆಗಳಲ್ಲಿ ಮೇಲಕ್ಕೆ ನಾಲ್ಕು ಪದರಗಳೂ ಇದೆ. ನಾಲ್ಕು ಪದರಗಳೆಂದರೆ

  1. ಲೋಳೆಪೊರೆ ಚಿಕ್ಕ ಕರುಳಿನಲ್ಲಿ ಲೋಮಗಳಿವೆ ; ಆದರೆ ಇಲ್ಲಿ ಅವು ಇಲ್ಲ. ಅದ್ದರಿಂದ ಒಳಮೈ ನುಣ್ಣಗಿದೆ. ಒಳಮೈ ಮೇಲೆ ಅನೇಕ ಸಣ್ಣ ತೂತುಗಳು ಕಾಣುತ್ತವೆ. ಇವು ದೊಡ್ಡಕರುಳಿಗೆ ವಿಶಿಷ್ಟವಾದ ಕೊಳವೆ ಗ್ರಂಥಿಗಳ ಬಾಯಿಗಳು. ಒಳಮೈ ಕೋಶಗಳ ನಡುವೆ ಲೋಳೆ ಸ್ರವಿಸುವ ಹಲವು ಹೂಜಿಕಣಗಳುಂಟು. ಲೋಳೆಪೊರೆಯ ಸ್ನಾಯು ಪದರದಲ್ಲಿ ಒಳವರ್ತುಲ ಮತ್ತು ಹೊರ ಉದ್ದುದ್ದ ಸ್ನಾಯುತಂತುಗಳಿವೆ. ಅಲ್ಲಲ್ಲಿ ದುಗ್ಧ ರಸಗ್ರಂಥಿಗಳು ಇವೆ.
  2. ಲೋಳೆಪೊರೆಯ ಅಡಿಯೂತಕ : ದಪ್ಪ ಉದ್ದಕ್ಕೂ ಒಂದೇ. ಸಡಿಲ ನಾರೆಳೆಗಳ ಜಲದಿಂದಾಗಿದ್ದು ಇದು ಲೋಳೆಪೊರೆಯನ್ನು ಪೇಶಿಪದರಕ್ಕೆ ಬಂಧಿಸುತ್ತದೆ. ಇದರಲ್ಲಿ ಕವಲೊಡೆಯುವ ಸಣ್ಣ ರಕ್ತ ಮತ್ತು ದುಗ್ಧನಾಳಗಳ ಜಾಲಗಳೂ ಹುದುಗಿವೆ.
  3. ಸ್ನಾಯುಪದರ ಅನೈಚ್ಛಿಕ ಸ್ನಾಯುತಂತುಗಳಿಂದಾಗಿವೆ. ಒಳವರ್ತುಲ ಪದರ ಅಂಧಾಂತ್ರದಲ್ಲಿ ಮತ್ತು ಸ್ವಯಂ ದೊಡ್ಡ ಕರುಳಿನಲ್ಲಿ ತೆಳುವಾಗಿದೆ ; ಅರ್ಧಚಂದ್ರ ಮಡಿಕೆಗಳಲ್ಲಿ ಸ್ವಲ್ಪ ದಪ್ಪವಾಗಿದೆ ; ಗುದನಾಳದ ಉದ್ದಕ್ಕೂ ಒಂದೇ ದಪ್ಪವುಳ್ಳುದಾಗಿದೆ. ಒಳ ಆಸನ ಉಂಗುರಸ್ನಾಯು ಈ ಪದರದಿಂದಾಗಿದೆ.
  4. ಉದ್ದುದ್ದ ಸ್ನಾಯು ಪದರದ ತಂತುಗಳು 12 ಮಿಮೀ ಅಗಲವುಳ್ಳ ಮೂರು ಪಟ್ಟಿಗಳಲ್ಲಿ ಕೂಡಿಕೊಂಡು ಸಮಾಂತರ ಲಾಡಿಗಳಾಗಿವೆ. (a) ಹಿಂದಿನ ಲಾಡಿ ಅಡ್ಡ ಕರುಳಿಗೆ ಅಂತ್ರಪಟಲ ಅಂಟಿಕೊಂಡಿರುವ ಅಂಚಿನಲ್ಲಿದೆ. (b) ಮುಂದಿನ ಲಾಡಿಯನ್ನು ಏರು ಮತ್ತು ಇಳಿಗರುಳುಗಳ ಮುಮ್ಮೈಮೇಲೆ ಸುಲಭವಾಗಿ ನೋಡಬಹುದು. ದೊಡ್ಡ ಪರಿವೇಷ್ಟನ ಪಟಲ (ಗ್ರೇಟರ್ ಒಮೆನ್‍ಟಮ್) ಅಂಟಿಕೊಂಡಿರುವುದರಿಂದ ಅಡ್ಡಗರುಳಿನ ಮೇಲೆ ಮುಂದಿನ ಲಾಡಿ ಕಾಣಿಸುವುದಿಲ್ಲ. (c) ಪಕ್ಕದ ಲಾಡಿ ಏರುಗರುಳಿನ ಎಡದಲ್ಲೂ ಇಳಿಗರುಳಿನ ಬಲದಲ್ಲೂ ಅಡ್ಡಗರುಳಿನ ಹಿಂದೆಯೂ ಇದೆ. ಅಂಧಾಂತ್ರದ ಮೇಲಿರುವ ಮುಂದಿನ ಲಾಡಿಯಿಂದ ಅಂತ್ರಪುಚ್ಛವನ್ನು ಸುಲಭವಗಿ ಪತ್ತೆಮಾಡಬಹುದು. ಲಾಡಿಗಲು ಭಿತ್ತಿಯ ಇತರ ಪದರಗಳಿಗಿಂತ ಹ್ರಸ್ವವಾಗಿರುವುದರಿಂದ ಭಿತ್ತಿಗೆ ನಿರಿಗೆ ಹಾಕಿದಂತಾಗಿ ದೊಡ್ಡಕರುಳಿಗೆ ವಿಶಿಷ್ಟವಾದ ಸಮಾಂತರ ಉಬ್ಬುಗಳಾಗಿ ಇವುಗಳ ನಡುವೆ ಒಳಕ್ಕೆ ನುಗ್ಗುವ ಅರ್ಧಚಂದ್ರ ಮಡಿಕೆಗಳಿವೆ.

ವಸೆಪೊರೆಯ ಪದರ[ಬದಲಾಯಿಸಿ]

ಕರುಳಿನ ಹೊರನುಣುಪು ವಸೆಪೊರೆ (ಸೀರಸ್ ಕೋಟ್) ಪರಿವೇಷ್ಟನದಿಂದಾದುದು. ಅಂಧಾಂತ್ರ, ಅಂತ್ರಪುಚ್ಛ, ಅಡ್ಡ ಮತ್ತು ಇಮ್ಮೊಗಡೊಂಕು. ಕರುಳುಗಳ ಮೇಲೆ ಅಂತ್ರಪಟಲ ಅಂಟಿಕೊಂಡಿರುವ ರೇಖೆಯನ್ನು ಬಿಟ್ಟು ಮಿಕ್ಕೆಲ್ಲ ಭಾಗಗಳ ಮೇಲೆ ಆದು ಪೂರ್ಣ ಹೊದಿಕೆಯಾಗಿದೆ. ಏರು ಮತ್ತು ಇಳಿಗರುಳುಗಳ ಹಾಗೂ ಗುದನಾಳದ ಮೇಲೆ ವಸೆಪೊರೆ ಅಪೂರ್ಣ ಹೊದಿಕೆಯಾಗಿದೆ.

ವಿಶೇಷ ಲಕ್ಷಣಗಳು[ಬದಲಾಯಿಸಿ]

(a) ಸಣ್ಣ ದೊಡ್ಡ ಕರುಳುಗಳ ಸಂಗಮ ಕವಾಟ. ಇದರ ಎರಡು ತುಟಿಗಳೂ ವರ್ತುಲ ಸ್ನಾಯುತಂತುಗಳಿರುವ ಲೋಳೆಪೊರೆ ಮಡಿಕೆಗಳು ಉದ್ದುದ್ದ ಸ್ನಾಯುತಂತುಗಳೂ ಪರಿವೇಷ್ಟನವೂ ಸಣ್ಣ ಕರುಳಿನಿಂದ ದೊಡ್ಡ ಕರುಳಿಗೆ ತಡೆಯಿಲ್ಲದೆ ಹೋಗುತ್ತದೆ. ಸಣ್ಣ ಕರುಳಿನ ಕಡೆ ಮೇಲ್ತುಟಿಯ ಮೇಲೆ ಲೋಮಗಳಿವೆ ; ದೊಡ್ಡಕರುಳಿನ ಕಡೆ ಲೋಮಗಳಿಲ್ಲದೆ ದೊಡ್ಡ ಕರುಳಿಗೆ ವಿಸಿಷ್ಟವಾದ ಕೊಳವೆ ಗ್ರಂಥಿಗಳ ಸಣ್ಣ ರಂಧÀ್ರಗಳಿವೆ. ದೊಡ್ಡ ಕರುಳುನಿಂದ ಆಹಾರಶೇಷ ಸಣ್ಣ ಕರುಳಿಗೆ ಹಿನ್ನುಗುವುದನ್ನು ಈ ಕವಾಟ ತಡೆಯುತ್ತದೆ ಎಂಬುದು ಹಲವರ ಅಭಿಪ್ರಾಯ. ಸಣ್ಣ ಕರುಳಿನಲ್ಲಿರುವ ದ್ರವರೂಪದ ಅಹಾರ ಶೇಷ ಬೇಗ ಬೇಗ ದೊಡ್ಡ ಕರುಳಿಗೆ ನುಗ್ಗಿ ಹೋಗುವುದನ್ನು ಬಹುಶಃ ಅದು ತಪ್ಪಿಸಬಹುದು. (b) ಕ್ಷುದ್ರ ಅಂತ್ರಪುಚ್ಛಗಳು : ಇವು ದೊಡ್ಡ ಕರುಳಿನ ವೈಲಕ್ಷಣ್ಯಗಳು. ಉದರದ ಗಾಯದಿಂದ ಹೊರಬಂದ ಕರುಳು ದೊಡ್ಡದೊ ಚಿಕ್ಕದೊ ಎಂಬುದನ್ನು ಇವುಗಳಿಂದ ಸುಲಭವಾಗಿ ಗುರ್ತಿಸಬಹುದು. ಇವುಗಳ ವ್ಯಾಸ 0.5 ರಿಂದ 1 ಸೆಂಮೀ. ಇವು ಪರಿವೇಷ್ಟನದ ಹೊದಿಕೆಯಿರುವ ಮತ್ತು ಸುಮಾರಾಗಿ ದುಂಡಗಿರುವ ಕೊಬ್ಬಿನ ಸಣ್ಣ ಮುದ್ದೆಗಳು. ಸಣ್ಣ ತೊಟ್ಟುಗಳಿಂದ ಇವು ಕರುಳಿಗೆ ಅಂಟಿಕೊಂಡು ಜೋತುಬಿದ್ದಿವೆ. ಸಾಮಾನ್ಯವಾಗಿ ಲಾಡಿಯ ಹತ್ತಿರ ಹೆಚ್ಚು ಸಂಖ್ಯೆಯಲ್ಲಿವೆ. ಅಡ್ಡಗರುಳಿನ ಮೇಲೆ ಇವುಗಳ ಸಂಖ್ಯೆ ಹೆಚ್ಚು. (C) ಕ್ರಿಮಿರೂಪದ ಅಂತ್ರಪುಚ್ಛ : ಇದರ ಭಿತ್ತಿಯಲ್ಲೂ ನಾಲ್ಕು ಪದರಗಳಿವೆ. ಒಳಮೈ ಕೋಶಗಳು ಮತ್ತು ಗ್ರಂಥಿಗಳು ದೊಡ್ಡ ಕರುಳಿನ ಇತರ ಭಾಗಗಳಲ್ಲಿ ಇದ್ದಂತಿವೆ. ಅದರೆ ಗ್ರಂಥಿಗಳ ಸಂಖ್ಯೆ ಕಡಿಮೆ. ಲೋಳೆಪೊರೆ ಮತ್ತು ಲೋಳೆಪೊರೆಯ ಅಡಿ ಊತಕಗಳ ದಪ್ಪ ಹೆಚ್ಚು. ಇವುಗಳಲ್ಲಿ ದುಗ್ಧರಸ ಗ್ರಂಥಿಗಳೂ ತುಂಬಿಕೊಂಡಿವೆ. ಲಾಡಿಗಳ ಆಕಾರದಲ್ಲಿಲ್ಲದೆ ಉದ್ದುದ್ದ ಸ್ನಾಯುತಂತುಗಳು ಸಮವಾಗಿ ಹರಡಿವೆ. ಉದ್ದುದ್ದ ಸ್ನಾಯುತಂತುಗಳಿಗಿಂತ ವರ್ತುಲ ತಂತುಗಳೆ ಹೆಚ್ಚು. (D) ಗುದನಾಳ: ಇದರ ಲೋಳೆಪೊರೆ ಮಿಕ್ಕ ಕಡೆಗಿಂತ ಹೆಚ್ಚು ದಪ್ಪವಾಗಿದ್ದು ಹೆಚ್ಚು ರಕ್ತನಾಳಗಳಿಂದ ಕೂಡಿದೆ. ಅನ್ನನಾಳದಲ್ಲಿ ಇರುವಂತೆಯೆ ಲೋಳೆಪೊರೆಸ್ನಾಯು ಪದರಕ್ಕೆ ಹೆಚ್ಚು ಸಡಿಲವಾಗಿ ಅಂಟಿಕೊಂಡಿದೆ. ಉದ್ದ ಸ್ನಾಯುತಂತುಗಳು ಭಿತ್ತಿಯಲ್ಲಿ ಸಮವಾಗಿ ಹರಡಿಕೊಂಡಿವೆ. ಮುಂಭಿತ್ತಿಯಲ್ಲಿ ಉದ್ದುದ್ದ ಸ್ನಾಯುವಿನ ದಪ್ಪ ಹೆಚ್ಚು. (E) ಆಸನನಾಳ: ಇದರ ಲೋಳೆಪೊರೆ ದಪ್ಪವಾಗಿದ್ದು ಹೆಚ್ಚು ರಕ್ತನಾಳಗಳಿಂದ ಕೂಡಿದೆ. ಗುದಮಡಿಕೆಗಳ ಕೆಳಗೆ ದೊಡ್ಡ ಅಭಿಧಮನಿಗಳು ಯದ್ವಾತದ್ವಾ ಗಂಟುಹಾಕಿಕೊಂಡಿವೆ. ಮೇಲಿನ ಮತ್ತು ಕೆಳ ಅಂತ್ರಪಟಲ ಅಭಿಧಮನಿಗಳೂ ಉಪಾಭಿಧಮನಿಗಳೂ ಕೊನೆಗಳಿಂದ ಒಂದಕ್ಕೊಂದು ಕೂಡಿವೆ. ಆಸನದಿಂದ 1.5 ರಿಂದ 2 ಸೆಂಮೀ ಮೇಲಕ್ಕೆ ಮೇಲ್ಮಟ್ಟದ ಒಂಟಿಕೋಶಗಳಿಂದಾದ ಪೊರೆ ಇದ್ದಕ್ಕಿದ್ದಂತೆ ಹಲವು ಪದರಗಳ ಪೊರೆಯಾಗಿ ಚರ್ಮದ ಹೊರಪದರದೊಡನೆ ಅವಿಚ್ಛಿನ್ನವಾಗುತ್ತದೆ. ಈ ಬದಲಾವಣೆ ಬರಿಗಣ್ಣಿಗೆ ಬಿಳಿಗೆರೆಯಂತೆ ಕಾಣುತ್ತದೆ. ಇದಕ್ಕಿಂತ ಕೆಳಗಿರುವ ಭಾಗ ಚರ್ಮದಂತಿದೆ. ಬಿಳಿಗೆರೆಯಲ್ಲಿ ಆಸನಗ್ರಂಥಿಗಳ ಸಣ್ಣ ಬಾಯಿಗಳಿವೆ. ಇವು ವಿಶೇಷಗೊಂಡ ಚರ್ಮ ಗ್ರಂಥಿಗಳು. ವರ್ತುಲ ಪೇಶಿಪದರ ಗುದನಾಳದ ಪದರದೊಡನೆ ಅವಿಚ್ಛಿನ್ನವಾಗಿದ್ದರೂ ಹೆಚ್ಚು ದಪ್ಪವಾಗಿದ್ದು ಆಸನದ ಒಳ ಉಂಗುರಪೇಶಿಯಾಗಿದೆ. ಆಸನದ ಹೊರ ಉಂಗುರ ಪೇಶಿ ತಂತುಗಳು ಅಡ್ಡಗೆರೆಗಳುಳ್ಳವು. ಇವು ಆಸನದ್ವಾರವನ್ನು ಸುತ್ತುವರಿದಿವೆ. ಆಸನವನ್ನೆತ್ತುವ ಪೇಶಿ ಇದರಿಂದ ಮೇಲಕ್ಕೆ ಹರಡಿ ಶ್ರೋಣಿಭಿತ್ತಿಗೆ ಅಂಟಿಕೊಂಡಿದೆ. ಆಸನದ ಸುತ್ತಲಿರುವ ಚರ್ಮವನ್ನು ನಿರಿಗೆ ಮಾಡುವ ಪೇಶಿ ಚರ್ಮದ ಕೆಳಗೆ ಅಡ್ಡಗೆರೆಗಳಿರುವ ಸಣ್ಣ ಪೇಶಿ ತಂತುಗಳಿಂದಾಗಿದೆ. ಇವುಗಳಲ್ಲಿ ಕೆಳಗುದ ಅಭಿದಮನಿಗಳ ಉಪಶಾಖೆಗಳ ಜಾಲವಾಗಿ ಗುದಮಡಿಕೆಗಳಲ್ಲಿ ಇರುವ ಉಪಾಭಿಧಮನಿಜಾಲಗಳ ರಕ್ತ ಈ ಉಪಶಾಕೆಗಳಲ್ಲಿ ಹರಿದುಹೊಗುತ್ತದೆ. ಪೇಶಿತಂತುಗಳು ಸಂಕುಚಿಸಿದ ಸ್ಥಿತಿಯಲ್ಲೇ ಮುಂದುವರಿದರೆ ರಕ್ತ ಹರಿದು ಹೋಗಲು ಕಷ್ಟವಾಗುತ್ತದೆ.

ರಕ್ತನಾಳಗಳು[ಬದಲಾಯಿಸಿ]

ಮೇಲಿನ ಕೆಳ ಮಧ್ಯಾಂತ್ರ ಅಪಧಮನಿಗಳು ಆಯೋರ್ಟಾದ ನೇರಶಾಖೆಗಳು. ಇವುಗಳ ಶಾಖೆಗಳು ಪಟ್ಟಿಗರುಳಿನ ಭಿತ್ತಿಯನ್ನು ಪ್ರವೇಶಿಸಿ ಪೇಶಿಪದರಗಳ ನಡುವೆ ಕವಲೊಡೆದು ರಕ್ತ ಒದಗಿಸುತ್ತವೆ. ಕೆಳಲೋಳೆಪೊರೆಯಲ್ಲಿ ಸಣ್ಣ ಶಾಖೆಗಳು ಕವಲೊಡೆದು ಲೋಳೆಪೊರೆಗೆ ರಕ್ತ ಒದಗಿಸುತ್ತವೆ. ಇವಲ್ಲದೆ ಮೇಲಿನ ಗುದರಕ್ತನಾಳ ಒಂಟಿಯಾಗಿ ಕೆಳಕ್ಕಿಳಿದು ಎರಡು ಶಾಖೆಗಳನ್ನು ಕೊಡುತ್ತದೆ. ಇವು ಗುದನಾಳದ ಪಕ್ಕಭಿತ್ತಿಯಲ್ಲಿ ಇಳಿದು ಆಸನದಿಂದ 1.25 ಸೆಂಮೀ ಮೇಲೆ ಆರು ಶಾಖೆಗಳಾಗಿ ಪೇಶಿಪದರವನ್ನು ತೂರಿ ಪೇಶಿಪದರ ಲೋಳೆಪೊರೆಗಳ ನಡುವೆ ಸಾಗಿ ಗುದಮಡಿಕೆಗಳಲ್ಲಿ ಶಾಖೆಗಳಾಗುತ್ತವೆ. ಇವು ಕೆಳಕ್ಕಿಳಿದು ಅಸನದ್ವಾರದ ಸುತ್ತ ಒಂದಕ್ಕೊಂದು ಸಂಬಂಧ ಹೊಂದಿ ಕುಣಿಕೆಗಳ ಮಾಲೆಯಾಗುತ್ತದೆ.

ಅಭಿಧಮನಿಗಳು ಗುದಭಿತ್ತಿಯಲ್ಲಿ ಮೊದಲಾಗುತ್ತವೆ. ಆಸನನಾಳ ಭಿತ್ತಿಯಲ್ಲಿರುವ ಅಭಿದಮನಿ ಜಾಲದಲ್ಲಿ ಕೆಲವು ಆಸನದ ಅಂಚಿನಲ್ಲಿ ಉಬ್ಬಿವೆ. ಆರು ಅಭಿಧಮನಿಗಳು ಸಮಾಂತರದಲ್ಲಿ ಲೋಳೆಪೊರೆ ಪೇಶಿಪದಗಳ ನಡುವೆ 12 ಸೆಂಮೀ ಅಷ್ಟು ಏರಿ ಒಂದುಗೂಡಿದಾಗ ಮೇಲ್ಗುದದ ಅಭಿಧಮನಿ ಪ್ರಾರಂಭವಾಗುತ್ತದೆ. ಈ ಅಭಿಧಮನಿ ವ್ಯವಸ್ಥೆಯೇ ಗುದ ಅಥವಾ ಮೂಲ (ರಕ್ತಸ್ರಾವ) ಅಭಿಧಮನಿ. ಇದು ಕೆಳ ಹಾಗೂ ಮಧ್ಯ ಗುದ ಅಭಿಧಮನಿ ಪ್ರಾರಂಭವೇ ಅಲ್ಲದೆ ಸಾಮಾನ್ಯ (ದೇಹ) ರಕ್ತಪರಿಚಲನೆ ಹಾಗೂ ಯಕೃದ್ದ್ವಾರ ರಕ್ತಪರಿಚಲನೆಗಳ ಸಂಧಿ. ಕುಡಿತ ಇಲ್ಲವೇ ಇತರ ಕಾರಣದಿಂದ ಯಕೃತ್ ಕೆಟ್ಟು ನಾರುಮುದ್ದೆಯಾದಾಗ ಅಡಚಣೆ ಉಂಟಾಗಿ ಆಹಾರನಾಳ ಭಿತ್ತಿಯ ರಕ್ತ ಕೆಳಕ್ಕಿಳಿದು ಗುದ ಅಭಿಧಮನಿಗಳು ಉಬ್ಬಿಕೊಂಡು ಮೂಲವ್ಯಾಧಿ ಆಗುತ್ತದೆ.

ನರಗಳು[ಬದಲಾಯಿಸಿ]

ದೊಡ್ಡ ಕರುಳಿನ ಎಡಬಾಗಿನವರೆಗೆ ಹತ್ತನೆಯ ತಲೆ (ಅಲೆಮಾರಿ) ನರಗಳೂ ಅನುವೇದನ ನರಗಳೂ ಅಲ್ಲಿಂದ ಮುಂದೆ ತ್ರಿಕಾಸ್ಥಿನರಗಳೂ ಕೆಳ ಅನುವೇದನ ನರಗಳೂ ದೊಡ್ಡ ಕರುಳು ಭಿತ್ತಿಗೆ ಒದಗುತ್ತವೆ. ಅನುವೇದನ ನರಗಳಿಂದ ಕರುಳು ವಿಕಾಸಗೊಂಡು ಆಸನನಾಳದ ಒಳ ಉಂಗುರ ಪೇಶಿ ಸಂಕುಚಿಸಿ ಕರುಳು ತುಂಬಿಕೊಳ್ಳುತ್ತದೆ. ತಲೆ ಮತ್ತು ತ್ರಿಕಾಸ್ಥಿ ನರಗಳಿಂದ ಮಲವಿಸರ್ಜನೆಯಾಗುತ್ತದೆ.

ಹೋಲಿಕೆ ರಚನೆ[ಬದಲಾಯಿಸಿ]

ಮೃದ್ವಸ್ಥಿ ಮೀನುಗಳು, ಚಿಮರ ಮತ್ತು ಕೆಲವು ಮೂಳೆ ಮೀನುಗಳಲ್ಲಿ ಜಠರದಿಂದ ಆಸನದವರೆಗೆ ಕರುಳು ನೆಟ್ಟಗಿದೆ. ಫುಪ್ಫುಸಮೀನುಗಳಲ್ಲಿ ಕರುಳು ಸಿಗ್ಮದಂತಿದೆ. ಹಲವು ವಿಶಿಷ್ಟ ಮೀನುಗಳಲ್ಲಿ ಕರುಳು ಹೆಚ್ಚು ನುಲುಚಿಕೊಂಡಿದ್ದು ಗಡಿಯಾರದ ಸುರುಳಿಯಂತಿರುವ ಕುಣಿಕೆಗಳನ್ನು ಹೊಂದಿದೆ. ಹಲವು ಪ್ರಾಣಿವರ್ಗಗಳಲ್ಲಿ ಕರುಳಿನ ಒಳಮೈ ಹೆಚ್ಚುವುದು ಉದ್ದ ಹೆಚ್ಚುವುದಕ್ಕಿಂತಲೂ ಒಳಗೆ ಸುರುಳಿ ಮಡಿಕೆಯಾಗುವುದರಿಂದ ಜಠರದ ಅಂಧಕೋಶಗಳು ಮೀನುಗಳ ವೈಶಿಷ್ಟ್ಯ. ಇವು 1 ರಿಂದ 200 ರಷ್ಟಿರಬಹುದು. ಉಭಯಚರಿಗಳಲ್ಲಿ ಜಠರದಿಂದ ಮಲಕೂಪದವರೆಗೆ ಕರುಳು ನೆಟ್ಟಗಿದೆ. ಮೀನು, ಉಭಯಚರಿ ಮತ್ತು ಸರೀಸೃಪಗಳಲ್ಲಿ ಪರಿವೇಷ್ಟನದಿಂದಾಗುವ ಮಧ್ಯಾಂತ್ರ ಕರುಳಿಗೆ ಆಧಾರಪೊರೆ ಆಗಿರುತ್ತದೆ. ಇವುಗಳಲ್ಲಿ ಹೊಕ್ಕುಳ ಕಡೆಯ ಮಧ್ಯಾಂತ್ರ ಮಾಯವಾಗಿ ಅದರ ಅಲ್ಪಾವಶೇಷಗಳು ಮಾತ್ರ ಇವೆ. ಪಕ್ಷಿ ಮತ್ತು ಸ್ತನಿಗಳ ಸಾಮಾನ್ಯ ಪೂರ್ವಜರಲ್ಲಿ ಕರುಳಿನ ಉದ್ದ ಹೆಚ್ಚಿ ಮಡಿಕೆಗಳಾದವು. ಈಗ ಜೀವಿಸಿರುವ ಪಕ್ಷಸ್ತನಿಗಳಲ್ಲಿ ಕರುಳಿನ ಮೂರು ಭಾಗಗಳಿವೆ : (i) ದ್ವಾದಶಾಂತ್ರ (ಡೀಯೋಡೀನಮ್), (ii) ಮೆಕೆಲ್ ನಾಳ (ಮಾನವನ ಜೆಜುನಮ್ ಮತ್ತು ಐಲಿಯಮ್), (iii) ಕುರುಡುಗರುಳು ಆಸನಗಳ ನಡುವೆ ಇರುವ ಹಿಂಗರುಳು, ಈ ವಿಭಾಗಗಳು ಅವುಮಾಡುವ ಬೇರೆ ಬೇರೆ ಕೆಲಸಗಳಿಗೆ ತಕ್ಕಂತೆ ಆಗಿವೆ. ಮೆಕೆಲ್ ನಾಳದ ಮುಖ್ಯ ಕೆಲಸ ಜೀರ್ಣವಾದ ಆಹಾರವನ್ನು ಹೀರುವುದು. ಹೀಗಾಗಿ ಇದು ಅತಿ ಉದ್ದವಾಗಿದೆ. ಅದರೆ ಅದು ಸದ್ಯಂತ್ರದ ಬಹು ಸ್ವಲ್ಪ ಭಾಗದಿಂದ (2-3) ದೇಹ ಮಣಿಗಳಷ್ಟು ಮಾತ್ರ) ವಿಕಾಸ ಹೊಂದಿದೆ. ಪ್ರಾಣಿವಿಕಾಸದಲ್ಲಿ ಕಾರ್ಯಕ್ಕೆ ತಕ್ಕಂತೆ ಅಂಗಗಳು ಹೊಂದಿಕೊಳ್ಳುತ್ತವೆ. ಕರುಳು ಕೂಡ ಅದೇ ರೀತಿ ಹೊಂದಿಕೊಳ್ಳುತ್ತದೆ. ಮುಖ್ಯ ಹೊಂದಾಣಿಕೆಯೆಂದರೆ ರಕ್ತನಾಳಗಳು ಹೆಚ್ಚಿ ಕರಗಿದ ಆಹಾರವನ್ನು ಹೀರಿಕೊಳ್ಳಲು ಲೋಳೆಪೊರೆಯ ಒಳಮೈ ಹೆಚ್ಚುವುದು. ಆಹಾರದ ಸ್ವಭಾವಕ್ಕೆ ತಕ್ಕಂತೆ ವ್ಯತ್ಯಾಸಗಳಾಗುತ್ತವೆ. ಸಸ್ಯಾಹಾರವಾದÀರೆ ಕರುಳಿನ ಉದ್ದ ಹೆಚ್ಚು. ಮೀನೇ ಆಹಾರವಾಗಿರುವ ಹಕ್ಕಿ ಸಸ್ತನಿಗಳಲ್ಲಿ ಆಹಾರÀನಾಳದ ಉದ್ದ ಹೆಚ್ಚಿ ಭಿತ್ತಿ ದಪ್ಪವಾಗಿ ಒಳವ್ಯಾಸ ಕಡಿಮೆಯಾಗಿರುತ್ತದೆ; ಜಠರ, ಚಿಕ್ಕ ದೊಡ್ಡ ಕರುಳು ಇತ್ಯಾದಿಗಳ ನಡುವೆ ವ್ಯತ್ಯಾಸ ಕಡಿಮೆ.

ಹಣ್ಣೇ ಆಹಾರವಾಗುಳ್ಳ ಹಕ್ಕಿಗಳಲ್ಲಿ ಆಹಾರನಾಳ ಅತಿ ಕುರುಚಾಗಿ ಅಗಲವಾಗಿ ಸರಳವಾಗಿರುತ್ತದೆ. ಆದರೆ ಹಣ್ಣುಗಳನ್ನೇ ತಿನ್ನುವ ಸ್ತನಿಗಳಲ್ಲಿ ಈ ರೀತಿಯ ವ್ಯವಸ್ಥೆ ಕಾಣಬರುವುದಿಲ್ಲ. ಮಾಂಸಾಹಾರಿ ಪಕ್ಷಿ ಸ್ತನಿಗಳಲ್ಲಿ ಆಹಾರನಾಳದ ಉದ್ದ ಕಡಿಮೆ.

ಕುರುಡುಗರುಳು : ಇದು ಮೆಕೆಲ್ ನಾಳ ಮತ್ತು ಹಿಂಗರುಳ ಸಂಧಿಯಲ್ಲಿ, ಅಂದರೆ ಚಿಕ್ಕದೊಡ್ಡ ಕರುಳುಗಳು ಕೂಡುವೆಡೆಯಲ್ಲಿ, ಜೊತೆಯಾಗಿ ಇಲ್ಲವೇ ಒಂಟಿಯಾಗಿ ಉಂಟು. ಸ್ಥಾನದಲ್ಲಿ ವ್ಯತ್ಯಾಸವಿದ್ದಂತೆ ಕಂಡುಬಂದರೂ ಪಕ್ಷಿ ಮತ್ತು ಸ್ತನಿಗಳೆರಡರಲ್ಲೂ ಕುರುಡುಗರುಳಿನ ಉಗಮ ಒಂದೇ. ಇದು ದೊಡ್ಡಕರುಳಿನ ಆದಿಭಾಗದಿಂದ ಬೆಳೆಯುವ, ಕೊನೆ ಮುಚ್ಚಿಕೊಂಡಿರುವ ಕೊಳವೆ. ಇದರ ಗಾತ್ರ ವ್ಯತ್ಯಾಸವುಳ್ಳದ್ದು. ಇದರ ವೃದ್ಧಿಗೂ ಆಹಾರದ ಸ್ವಭಾವಕ್ಕೂ ಒಂದೇ ರೀತಿಯ ಸಂಬಂಧವಿಲ್ಲ. ಹಲವು ಪ್ರಾಣಿಗಳಲ್ಲಿ ಕುರುಡುಗರುಳಿನ ಭಿತ್ತಿ ಗ್ರಂಥಿಯುತವಾಗಿ ದಿಗ್ಧಧಾತುವಿನಿಂದ ಕೂಡಿದೆ. ಕೆಲವು ಪಕ್ಷಿ ಹಾಗೂ ಸ್ತನಿಗಳಲ್ಲಿ ಒಳಗೆ ಟೊಳ್ಳೇ ಇಲ್ಲದೆ ಗಟ್ಟಿಯಾಗಿರುವಷ್ಟು ದುಗ್ಧ ಧಾತು ಹೆಚ್ಚಿರುತ್ತದೆ. ಕುರುಡುಗರುಳು ಸಾಧಾರಣವಾಗಿ ಸಸ್ಯಾಹಾರಿಗಳಲ್ಲಿ ದೊಡ್ಡದಾಗಿದ್ದು ಇದರಲ್ಲಿ ಕ್ರಿಮಿಗಳ ಸಹಾಯದಿಂದ ಸಸ್ಯಗಳಲ್ಲಿರುವ ನಾರಿನ ಅಂಶದ ಪಚನಕ್ರಿಯೆ ನಡೆಯುತ್ತದೆ. ಬೇಸಾಯ ಮಾಡಿ ಅಡುಗೆಮಾಡಿ ತಿನ್ನುವ ಮಾನವನಲ್ಲಿ ಇದಕ್ಕೆ ಕಾರ್ಯವಿಲ್ಲದೆ ಬೆಳೆಯದೆ ಕುರುಚಾಗಿದೆ. ವೃದ್ಧಿಹೊಂದದ ಕುರುಡುಗರುಳಿನ ಭಾಗವಾದ ಹುಳುಗರುಳು ಮನುಷ್ಯ ಮತ್ತು ಇತರ ಕೆಲವು ಪ್ರಾಣಿಗಳಲ್ಲಿ ಮಾತ್ರ ಇದೆ. ಇದು ನಿಜವಾಗಿ ವೃದ್ಧಿಕುಂಠಿತವಾದ ಕುರುಡುಗರುಳಿನ ಭಾಗ.

ಉಲ್ಲೇಖಗಳು[ಬದಲಾಯಿಸಿ]

  1. "Colon Anatomy: Gross Anatomy, Microscopic Anatomy, Natural Variants". 2018-07-05. {{cite journal}}: Cite journal requires |journal= (help)
  2. Kapoor, Vinay Kumar (13 Jul 2011). Gest, Thomas R. (ed.). "Large Intestine Anatomy". Medscape. WebMD LLC. Retrieved 2013-08-20.
  3. Gray, Henry (1918). Gray's Anatomy. Philadelphia: Lea & Febiger.
  4. "large intestine". Mosby's Medical Dictionary (8th ed.). Elsevier. 2009. ISBN 9780323052900.
  5. "intestine". Concise Medical Dictionary. Oxford University Press. 2010. ISBN 9780199557141.
  6. "large intestine". A Dictionary of Biology. Oxford University Press. 2013. ISBN 9780199204625.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: