ಗ್ರಂಥಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮಾನವನ ಕೆಳದವಡೆಯ ಗ್ರಂಥಿ

ಗ್ರಂಥಿಯು ನಿರ್ದಿಷ್ಟವಾದ ಸ್ರಾವವನ್ನು (ಸೆಕ್ರಿಷನ್) ಇಲ್ಲವೇ ರಸವನ್ನು ಉತ್ಪಾದಿಸುವ ಅಂಗಭಾಗ (ಗ್ಲ್ಯಾಂಡ್). ಜೀವಿಯ ಬಾಳ್ವೆಗೆ ಈ ಸ್ರವಣ ಅವಶ್ಯ. ದೇಹದಲ್ಲಿನ ಹಲವಾರು ನಿಶ್ಚಿತ ಕೆಲಸಗಳನ್ನು ನಡೆಸಬಲ್ಲ ವಿಶಿಷ್ಟ ರಸಗಳನ್ನು ವಿಶಿಷ್ಟ ಗ್ರಂಥಿಗಳು ಉತ್ಪಾದಿಸುತ್ತವೆ. ರಸವನ್ನು ಸ್ರವಿಸುವ ಬಗೆ, ರಸದ ಗುಣ, ಗ್ರಂಥಿಯೊಳಗಿನ ಕೋಶದ ವರ್ತನೆ ಮತ್ತು ಗ್ರಂಥಿಗಳು ದೇಹಕ್ಕೆ ಬೇಡವಾದ ಮಲಿನ ಮತ್ತು ಹಾನಿಕರ ವಸ್ತುಗಳನ್ನು ರಕ್ತದಿಂದ ಬೇರ್ಪಡಿಸಿ ಹೊರದೂಡುತ್ತವೆ. ಇವು ವಿಸರ್ಜಕ (ಎಕ್ಸ್‍ಕ್ರೀಟರಿ) ಗ್ರಂಥಿಗಳು. ಮೂತ್ರ ಪಿಂಡಗಳು ಮತ್ತು ಸ್ವೇದ ಗ್ರಂಥಿಗಳು ಈ ರೀತಿಯವು. ಮತ್ತೆ ಕೆಲವು ಗ್ರಂಥಿಗಳು ದೇಹಸೌಖ್ಯದ ವಿಷಯದಲ್ಲಿ ಮುಖ್ಯಪಾತ್ರ ವಹಿಸುವುವು. ಇವುಗಳಲ್ಲಿ ಮುಖ್ಯವಾದವು ಜೀರ್ಣಕಾರಿ ಗ್ರಂಥಿಗಳು. ಜೀರ್ಣಪಥದಲ್ಲಿರುವ (ಡೈಜೆಸ್ಟಿವ್ ಟ್ರ್ಯಾಕ್ಟ್) ಜಠರ ಹಾಗು ಕರುಳು ಗ್ರಂಥಿಗಳು, ತಮ್ಮ ಸ್ರಾವವನ್ನು ನಾಳಗಳ ಮೂಲಕ ಜೀರ್ಣಪಥಕ್ಕೆ ಸೇರಿಸುವ ಲಾಲಾಗ್ರಂಥಿಗಳು, ಯಕೃತ್ತು ಮತ್ತು ಮೇದೋಜೀರಕಾಂಗಗಳು ಈ ಗುಂಪಿಗೆ ಸೇರಿ ಆಹಾರ ವಸ್ತುಗಳು ರಕ್ತಗತವಾಗುವಂತೆ ಅವನ್ನು ಅರಗಿಸುವ ಕ್ರಿಯೆಯಲ್ಲಿ ನಿರತವಾಗಿವೆ. ಇನ್ನು ಕೆಲವು ಗ್ರಂಥಿಗಳು ದೇಹದ ನಾನಾ ಕ್ರಿಯೆಗಳು ಕ್ಲುಪ್ತವಾಗಿ ನಡೆಯುವಂತೆ ನಿಯಂತ್ರಿಸುತ್ತವೆ. ಪಿಟ್ಯುಯಿಟರಿ, ಅಡ್ರಿನಲ್ ಮುಂತಾದ ಗ್ರಂಥಿಗಳು ಈ ಗುಂಪಿಗೆ ಸೇರಿವೆ. ಹೀಗೆ ಅನೇಕ ವಿಧಗಳಲ್ಲಿ ಗ್ರಂಥಿಗಳು ದೇಹದ ಆರ್ಥಿಕತೆಗೆ (ಬಾಡಿ ಎಕಾನಮಿ) ಮುಖ್ಯವಾಗಿವೆ. ಪುರುಷರಲ್ಲಿ ಗುದನಾಳದ ಮುಂದುಗಡೆ ಮೂತ್ರಕೋಶದ ಕೆಳಗಿರುವ ಶುಕ್ಲಗ್ರಂಥಿ (ಪ್ರಾಸ್ಟೇಟ್) ಸಂಭೋಗ ಕಾಲದಲ್ಲಿ ಒಂದು ಬಗೆಯ ರಸವನ್ನು ಸ್ರವಿಸಿ ಮೂತ್ರನಾಳಕ್ಕೆ ಸೇರಿಸುತ್ತದೆ. ಈ ಸ್ರಾವ ದೇಹದ ಆರ್ಥಿಕತೆಗೆ ಮುಖ್ಯವಲ್ಲವಾದರೂ ವೀರ್ಯಾಣುಗಳ ಬಾಳ್ವೆಗೆ ಅಗತ್ಯ.

ರಸವನ್ನು ಗ್ರಂಥಿಯಿಂದ ಹೊರಕ್ಕೆ ನಾಳಗಳ ಮೂಲಕ ಸಾಗಿಸುವವು ಸನಾಳ ಗ್ರಂಥಿಗಳು. ಇವುಗಳಿಗೆ ಬಾಹ್ಯಸ್ರಾವಿಗಳು ಎಂದು ಹೆಸರು (ಎಕ್ಸೋಕ್ರೈನ್ಸ್). ನಾಳಗಳ ಮೂಲಕ ರಸ ಹೊರಬರದೆ ನೇರವಾಗಿ ರಕ್ತಕ್ಕೋ ದುಗ್ಧರಸಕ್ಕೋ ಸೇರುವಂತಿರುವ ಗ್ರಂಥಿಗಳು ನಿರ್ನಾಳ ಗ್ರಂಥಿಗಳು. ಇವುಗಳಿಗೆ ಅಂತಃ ಸ್ರಾವಿಗಳು (ಎಂಡೋಕ್ರೈನ್ಸ್) ಎಂದು ಹೆಸರು. ಪಿಟ್ಯುಯಿಟರಿ, ಗುರಾಣಿಕ ಗ್ರಂಥಿ ಮುಂತಾದವು ಇಂಥವು. ಇವು ಉತ್ಪಾದಿಸುವ ಅಂತಃ ಸ್ರಾವಗಳಿಗೆ ಹಾರ್ಮೊನುಗಳು ಎಂದು ಹೆಸರು. ಕೆಲವು ಗ್ರಂಥಿಗಳು ಮಿಶ್ರ ಗ್ರಂಥಿಗಳಾಗಿ ಬಾಹ್ಯಸ್ರಾವ ಅಂತಃಸ್ರಾವಗಳೆರಡನ್ನೂ ಉತ್ಪಾದಿಸುತ್ತವೆ. ಮೇದೋಜೀರಕಾಂಗ (ಪ್ಯಾಂಕ್ರಿಯಾಸ್) ಇಂಥ ಒಂದು ಗ್ರಂಥಿ. ಇದರ ಬಾಹ್ಯಸ್ರಾವವಾದ ಮೇದೋಜೀರಕರಸ ನಾಳದ ಮೂಲಕ ಸಣ್ಣ ಕರುಳೊಳಕ್ಕೆ ಪ್ರವಹಿಸಿ ತಿಂದ ಆಹಾರದಲ್ಲಿರುವ ಹಿಟ್ಟು ಸಕ್ಕರೆಗಳು ಮತ್ತು ಪ್ರೋಟೀನು ಕೊಬ್ಬುಗಳನ್ನು ಅರಗಿಸುವುದಕ್ಕೆ ಸಹಾಯ ಮಾಡುತ್ತವೆ. ಅಂತಃಸ್ರಾವವಾದ ಇನ್ಸುಲಿನ್ ನೇರವಾಗಿ ರಕ್ತಗತವಾಗಿ ವ್ಯಕ್ತಿ ಮಧುಮೇಹ ರೋಗದಿಂದ (ಡಯಾಬೆಟಿಸ್ ಮೆಲೈಟಸ್) ನರಳದಂತೆ ಕಾಪಾಡುವುದು. ಪುರುಷರ ವೃಷಣಗಳೂ ಸ್ತ್ರೀಯರ ಅಂಡಾಶಯಗಳೂ ಒಂದು ರೀತಿಯ ಮಿಶ್ರ ಗ್ರಂಥಿಗಳು. ಇವು ವ್ಯಕ್ತಿಯ ಪ್ರಜನನಶೀಲ ಅವಧಿಯಲ್ಲಿ ಕಾರ್ಯ ಸಾಫಲ್ಯಕ್ಕೆ ಅಗತ್ಯವಾದ ವಿಶೇಷ ಅಂತಃಸ್ರಾವಗಳನ್ನು ಉತ್ಪಾದಿಸುತ್ತವೆ. ಮತ್ತು ಅದೇ ವೇಳೆ ಕೋಟಿಗಟ್ಟಲೆ ಪುರುಷಾಣುಗಳನ್ನೂ ಅಂಡಾಶಯ ನಿರ್ದಿಷ್ಟ ಕಾಲಕ್ಕೆ ಒಂದೊಂದು ಅಂಡಾಣುವನ್ನು ತಯಾರಿಸಿ ಅವನ್ನು ಬಾಹ್ಯಸ್ರಾವದಂತೆ ನಾಳಗಳ ಮೂಲಕ ಹೊರ ಹಾಕುತ್ತವೆ ಕೂಡ.

ಬಾಹ್ಯಸ್ರಾವಿ ಗ್ರಂಥಿಗಳು ಒಂದೇ ಕೋಶದಿಂದಾಗಿರಬಹುದು. ಜಠರ ಕರುಳಿನ ನಾಳ ಮತ್ತು ಶ್ವಾಸನಾಳಗಳಲ್ಲಿ ಇವು ಕಾಣಬರುತ್ತವೆ. ಇವುಗಳಿಗೆ ಗಾಬ್ಲೆಟ್ (ಲೋಟಾಕೃತಿ) ಕಣಗಳೆಂದು ಹೆಸರು. ಇವು ನಿರಂತರವಾಗಿ ಲೋಳೆಯನ್ನು ಸ್ರವಿಸಿ ಹೊರಹಾಕುತ್ತವೆ. ಅದು ಸುತ್ತಲು ಹರಡಿ ಆ ಭಾಗವನ್ನು ಒದ್ದೆಯಾಗಿ ಜಾರುವಂತೆ ಇಟ್ಟಿರುತ್ತದೆ. ಸಾವಿರ, ಲಕ್ಷ, ಕೋಟಿಗಟ್ಟಲೆ ಕೋಶಗಳು ನಿರ್ದಿಷ್ಟ ರಚನೆಗೆ ಒಳಪಟ್ಟು ಆಗಿರುವುದು ಗ್ರಂಥಿಗಳ ಸಾಮಾನ್ಯ ಲಕ್ಷಣ. ಗ್ರಂಥಿಗಳು ಕಣ್ಣಿಗೆ ಕಾಣದಷ್ಟು ಸಣ್ಣವಿರಬಹುದು ಇಲ್ಲವೇ ಯಕೃತ್ತು, ಮೂತ್ರಪಿಂಡಗಳಂತೆ ಬಹುಗಾತ್ರದ ಗ್ರಂಥಿಗಳಾಗಿರಬಹುದು. ಮಿದುಳಿನ ಕೋರಾಯ್ಡ್ ಪ್ಲೆಕ್ಸಸಿನಲ್ಲಿ ಕೋಶಗಳು ಮಡಿಸಿದ ಹಾಳೆಯಂತೆ ಜೋಡಿಕೊಂಡಿವೆ. ಇವುಗಳಿಗೆ ಮಿಕ್ಕಗ್ರಂಥಿಗಳಂತೆಯೇ ಸ್ರಾವಸಾಮಥ್ರ್ಯ ಉಂಟು. ಕರುಳಿನಲ್ಲಿರುವ ಗ್ರಂಥಿಗಳು ಪ್ರಯೋಗನಳಿಕೆ (ಟೆಸ್ಟ್ ಟ್ಯೂಬ್) ಆಕಾರದಲ್ಲಿವೆ. ಜಠರದ ಗ್ರಂಥಿಗಳು ಕೂಡ ನಳಿಕೆಯಾಕಾರದಲ್ಲಿವೆ. ಆದರೆ ಅವುಗಳಲ್ಲಿ ಸ್ರವಿಸುವ ಭಾಗ ಮತ್ತು ಸ್ರಾವವನ್ನು ಹೊರಕ್ಕೊಯ್ಯುವ ನಾಳಭಾಗವೆಂದು ಗುರುತಿಸಬಹುದು. ಸ್ವೇದಗ್ರಂಥಿಗಳಲ್ಲಿ ಸ್ರವಿಸುವ ಭಾಗ ಸುರುಳಿ ಸುತ್ತಿಕೊಂಡಿರುವ ನಾಳದಂತೆಯೂ ಸ್ರಾವವನ್ನು ಹೊರಕ್ಕೊಯ್ಯುವ ಮತ್ತು ಸ್ವತಃ ಸ್ರಾವಸಾಮಥ್ರ್ಯ ಇಲ್ಲದ ನಾಳಭಾಗ ಸುಮಾರಾಗಿ ನೇರವಾಗಿಯೂ ಇವೆ.

ಮೈಜಿಡ್ಡಿನ ಗ್ರಂಥಿಗಳಲ್ಲಿ (ಸೆಬೇಶಿಯಸ್ ಗ್ಲ್ಯಾಂಡ್ಸ್) ಸ್ರವಿಸುವ ಭಾಗ ಕುಡಿಕೆಯಂತಿದೆ. ಇಲ್ಲಿ ಸಹ ಸ್ರಾವವನ್ನು ಹೊರಕ್ಕೆ ಒಯ್ಯುವ ಭಾಗವನ್ನು ನಾಳವಾಗಿ ಗುರುತಿಸಬಹುದು. ಇಂಥ ಗ್ರಂಥಿಗಳೆಲ್ಲ ಸರಳ ಗ್ರಂಥಿಗಳು ಮತ್ತು ಕಣ್ಣಿಗೆ ಕಾಣಿಸದವು. ಹೀಗಲ್ಲದೇ ನಾಳ ಕವಲೊಡೆದು ಪ್ರತಿ ಕವಲೂ ನಳಿಕೆಯಾಕಾರದ ಇಲ್ಲವೇ ಕುಡಿಕೆಯಾಕಾರದ ಸ್ರವಿಸುವ ಭಾಗಗಳಲ್ಲಿ ಕೊನೆಗೊಂಡಿದ್ದರೆ ಅಂಥ ಗ್ರಂಥಿಗಳಿಗೆ ಜಟಿಲ ರಚನೆಯ ಗ್ರಂಥಿಗಳೆಂದು ಹೆಸರು. ಇವು ಸಾಮಾನ್ಯವಾಗಿ ದ್ರಾಕ್ಷಿ ಗೊಂಚಲಿನಂತಿವೆ. ಸೂಕ್ಷ್ಮದರ್ಶಕದಲ್ಲಿ ಮಾತ್ರ ಕಾಣಬಹುದು. ಅನೇಕ ಗ್ರಂಥಿಗಳಲ್ಲದೇ ದೊಡ್ಡ ಗ್ರಂಥಿಗಳಾದ ಲಾಲಾಗ್ರಂಥಿಗಳು, ಮೇದೋಜೀರಕಾಂಗಗಳು ಕೂಡ ಈ ಬಗೆಯವು. ಮುಖ್ಯ ನಾಳದ ಬೇರೆ ಬೇರೆ ಪ್ರಾಥಮಿಕ ಮತ್ತು ದ್ವಿತೀಯಕ ಕವಲುಗಳಿಗೆ ಅಂಟಿದಂತೆ ಗ್ರಂಥಿಭಾಗಗಳನ್ನು ಗುರುತಿಸಬಹುದು. ಈ ಗ್ರಂಥಿ ಭಾಗಗಳನ್ನೆಲ್ಲ ಅಥವಾ ಹಾಲೆಗಳನ್ನೆಲ್ಲ ಜೋಡಿಸಿ ಗ್ರಂಥಿಯನ್ನು ಒಂದು ಅಂಗವಾಗಿ ಪ್ರತ್ಯೇಕಿಸುವ ಹೊರಕವಚ ಉಂಟು. ಗ್ರಂಥಿಯ ಸ್ರವಣ ಭಾಗಗಳು, ಸಾಗುನಾಳಗಳು, ಗ್ರಂಥಿಗೆ ಪೂರೈಕೆಯಾಗುವ ರಕ್ತ ಮತ್ತು ದುಗ್ಧರಸನಾಳಗಳು, ನರಗಳು-ಇವನ್ನು ಯುಕ್ತಸ್ಥಾನಗಳಲ್ಲಿ ಹೊಂದಿಸಿ ಇಡಲು ಗ್ರಂಥಿಯ ಮಿಕ್ಕ ಭಾಗವನ್ನೆಲ್ಲ ತುಂಬಿಕೊಂಡಿರುವ ಬಂಧನಾಂಗಾಂಶ (ಕನೆಕ್ಟಿವ್ ಟಿಶ್ಯೂ) ಉಂಟು. ಗ್ರಂಥಿಯ ಸ್ರವಿಸುವ ಭಾಗದ ಕೋಶಗಳು ರಕ್ತದಿಂದ ಬೇಕಾದ ವಸ್ತುಗಳನ್ನು ಹೀರಿಕೊಂಡು ನಿರ್ದಿಷ್ಟವಾದ ಸ್ರಾವವನ್ನು ಉತ್ಪಾದಿಸುತ್ತವೆ. ಇದು ಕೋಶಗಳಿಂದ ಊರಿ (ಊಜ್) ಹೊರಬಂದು ನಾಳವನ್ನು ಸೇರಬಹುದು. ಲಾಲಾಗ್ರಂಥಿಗಳು, ಯಕೃತ್ತು ಮುಂತಾದವುಗಳಲ್ಲಿ ಈ ರೀತಿಯ ಸ್ರಾವವನ್ನು ನೋಡಬಹುದು. ಸ್ರಾವ ತುಂಬಿದ ಕೋಶವೇ ಕಳಚಿಕೊಂಡು ದ್ರವವಾಗಿ ನಾಳವನ್ನು ಸೇರಬಹುದು. ಮೈಜಿಡ್ಡಿನ ಗ್ರಂಥಿಗಳು ಈ ಬಗೆಯವು. ಇವೆರಡಕ್ಕೂ ಮಧ್ಯಸ್ಥವಾಗಿ ಸ್ರಾವ ತುಂಬಿದ ಕೋಶದ ತುದಿ ಭಾಗ ವಿಸರ್ಜಿಸಲ್ಪಟ್ಟು ದ್ರವವಾಗಿ ನಾಳದೊಳಕ್ಕೆ ಸೇರಬಹುದು. ಕರುಳಿನ ವಿಶೇಷ ಸ್ವೇದಗ್ರಂಥಿಗಳು ಮತ್ತು ಸ್ತನಗ್ರಂಥಿಗಳು ಈ ಗುಂಪಿಗೆ ಸೇರಿದುವು. ಗ್ರಂಥಿಗಳ ನಾಳ ಭಾಗಗಳು ಸ್ರಾವವನ್ನು ಹೊರಕ್ಕೆ ಒಯ್ಯುತ್ತವೆ. ಮಾತ್ರವಲ್ಲ ಕೆಲವು ಗ್ರಂಥಿಗಳಲ್ಲಿ ಸ್ರವಿಸುವ ಮತ್ತು/ಅಥವಾ ಇಂಗಿಸುವ ಸಾಮಥ್ರ್ಯವೂ ಇವುಗಳಿಗುಂಟು. ಲಾಲಾಗ್ರಂಥಿಗಳಲ್ಲಿಯೂ ಯಕೃತ್ತಿನಲ್ಲಿಯೂ ಈ ಕ್ರಿಯೆ ಕಾಣಬರುತ್ತದೆ. ಒಂದು ಗ್ರಂಥಿಗೆ ಒಂದೇ ನಾಳವಿರುವುದು ಸಾಮಾನ್ಯ. ಆದರೆ ಕೆಲವೆಡೆ ಒಂದೇ ಗ್ರಂಥಿಗೆ ಅನೇಕ ನಾಳಗಳಿರುವುದೂ ಉಂಟು. ಅಶ್ರು ಗ್ರಂಥಿಗಳು, ಸ್ತನ, ನಾಲಿಗೆ ತಳದಲ್ಲಿರುವ ಲಾಲಾಗ್ರಂಥಿ, ಪುರುಷರಲ್ಲಿರುವ ಶುಕ್ಲ ಗ್ರಂಥಿ ಇವು ಈ ಗುಂಪಿಗೆ ಸೇರಿದುವು.

ಅಂತಃಸ್ರಾವೀ ಗ್ರಂಥಿಗಳು ನಿರ್ನಾಳ ಗ್ರಂಥಿಗಳು. ಇವುಗಳ ಸ್ರಾವ ಬಾಹ್ಯ ಸ್ರಾವಗಳಿಗಿಂತ ಬಹುಕಡಿಮೆ ಪ್ರಮಾಣದಲ್ಲಿ ಉತ್ಪಾದನೆಯಾಗಿ ನೇರವಾಗಿ ರಕ್ತಗತವಾಗಿ ದೇಹಕ್ರಿಯಾನಿಯಂತ್ರಣದಲ್ಲಿ ಮುಖ್ಯ ಪಾತ್ರವಹಿಸುತ್ತವೆ. ಇವುಗಳಿಗೆ ರಾಸಾಯನಿಕ ದೂತಗಳೆಂದೂ ಅಂತಃಸ್ರಾವಗಳೆಂದೂ ಹಾರ್ಮೋನುಗಳೆಂದೂ ಹೆಸರುಂಟು. ಇವು ರಕ್ತದಲ್ಲಿ ಕಲೆತು ದೇಹದ ಎಲ್ಲ ಭಾಗಗಳಿಗೂ ಒಯ್ಯಲ್ಪಟ್ಟರೂ ನಿರ್ದಿಷ್ಟ ಅಂಗಗಳ ಮೇಲೆ ಮಾತ್ರ ತಮ್ಮ ಪ್ರಭಾವ ಬೀರಿ ಅವುಗಳ ಕ್ರಿಯೆಯನ್ನು ನಿಯಂತ್ರಿಸುತ್ತವೆ. ಈ ಗ್ರಂಥಿಗಳ ಪೈಕಿ ತಲೆಚಿಪ್ಪಿನೊಳಗೆ ಮಿದುಳಿನ ಕೆಳಭಾಗದಲ್ಲಿ ಸ್ಥಾಪಿತವಾಗಿರುವ ಬಟಾಣಿಕಾಳಿನ ಗಾತ್ರದ ಪಿಟ್ಯುಯಿಟರಿ ಗ್ರಂಥಿ ಬಹುಮುಖ್ಯವಾದದ್ದು. ಇದರ ಸ್ರಾವಗಳು ಗುರಾಣಿಕ ಗ್ರಂಥಿ, ಅಡ್ರಿನಲ್ ಗ್ರಂಥಿ ಲೈಂಗಿಕ ಗ್ರಂಥಿಗಳು ಮುಂತಾದವುಗಳ ಕ್ರಿಯೆಯನ್ನು ನಿಯಂತ್ರಿಸುತ್ತವೆ. ಅಂತಃಸ್ರಾವಗಳ ಪ್ರಭಾವ ರಾಸಾಯನಿಕ ದೂತಕ್ರಿಯೆಯಿಂದಾಗುತ್ತದೆ. ಆದ್ದರಿಂದ ಕುರಿ, ದನ, ಹಂದಿ ಮುಂತಾದವುಗಳಿಂದ ವಿಶೇಷ ರೀತಿಯಲ್ಲಿ ಅಂತಃಸ್ರಾವಗಳು ಸಂಗ್ರಹಿಸಲ್ಪಟ್ಟು ವೈದ್ಯದಲ್ಲಿ ಬಳಕೆಯಲ್ಲಿವೆ. ಕೆಲವು ಅಂತಃಸ್ರಾವಗಳ ರಾಸಾಯನಿಕ ರಚನೆ ಗೊತ್ತಿರುವುದರಿಂದ ಅವನ್ನು ಸಂಯೋಗಿಸಿ ಕೃತಕ ಅಂತಃಸ್ರಾವವಾಗಿ ಉಪಯೋಗಿಸಲಾಗುತ್ತದೆ. ದೇಹದಲ್ಲಿ ಅಂತಃಸ್ರಾವಗಳ ಪರಿಮಾಣದ ಏರುಪೇರಿನಿಂದ ಅನೇಕ ರೋಗಸ್ಥಿತಿಗಳು ಉಂಟಾಗುವುದರಿಂದ ಮತ್ತು ಕೆಲವು ವೇಳೆ ಇವು ಮಾರಕಗಳಾಗುವುದರಿಂದ ಚಿಕಿತ್ಸೆಯಲ್ಲಿ ಅಂತಃಸ್ರಾವಗಳ ಪ್ರಾಮುಖ್ಯ ಎಷ್ಟೆಂಬುದನ್ನು ಅರಿಯಬಹುದು. ಎಲ್ಲ ರೀತಿಯ ಗ್ರಂಥಿಗಳ ಕೋಶಗಳಲ್ಲೂ ಮಿಕ್ಕ ಕೋಶಗಳಲ್ಲಿರುವಂತೆಯೇ ಕೋಶದ ಎಲ್ಲ ಭಾಗಗಳೂ ಇರುತ್ತವೆ. ವಿಶೇಷವಾಗಿ ಸ್ರಾವವೋ ಸ್ರಾವಜನಕವೋ ಆದ ಕಿರುಕಣಗಳೂ (ಗ್ರಾನ್ಯೂಲ್ಸ್), ಮೈಟೋಕಾಂಡ್ರಿಯ ಮತ್ತು ಗಾಲ್ಜಿ ವಸ್ತುವೂ ಕಂಡುಬಂದು ಅವುಗಳ ಆಕಾರ, ಗಾತ್ರಗಳಲ್ಲಿ ಸ್ರಾವಚಟುವಟಿಕೆಗೆ ಅನುಗುಣವಾದ ಬದಲಾವಣೆಗಳಾಗುತ್ತವೆ.

ಸಸ್ಯಗಳಲ್ಲಿ[ಬದಲಾಯಿಸಿ]

ಪ್ರಾಣಿಗಳಲ್ಲಿರುವಂತೆಯೆ ಸಸ್ಯಗಳ ಗ್ರಂಥಿಗಳು ಕೂಡ ನಿರ್ದಿಷ್ಟ ಬಗೆಯ ರಸವನ್ನು ಉತ್ಪಾದಿಸುವ ಅಂಗ ಭಾಗಗಳು. ಅಂತೆಯೇ ಇವುಗಳಲ್ಲಿ ಸ್ರಾವ ಇಲ್ಲವೇ ವಿಸರ್ಜಿತ ಪದಾರ್ಥ ಸಂಗ್ರಹವಾಗಿರುತ್ತದೆ. ಗ್ರಂಥಿಗಳು ಬಿಡಿಕೋಶಗಳ ಇಲ್ಲವೆ ಅನೇಕ ಚಿಕ್ಕಕೋಶಗಳ ಸಮೂಹದ ರೂಪದಲ್ಲಿರಬಹುದು. ಗ್ರಂಥಿಗಳ ರೂಪರಚನೆ ಯಾವ ಬಗೆಯೇ ಇರಲಿ ಸಸ್ಯಗಳಲ್ಲಿ ಮಾತ್ರ ನಾಳ ವ್ಯವಸ್ಥೆ ಇರುವುದಿಲ್ಲ. ಪ್ರಾಣಿಗಳಲ್ಲಿ ಉಂಟು. ಆದ್ದರಿಂದ ಸಸ್ಯಗ್ರಂಥಿಗಳಲ್ಲಿ ಉತ್ಪತ್ತಿಯಾಗುವ ರಸ ಫ್ಲೋಯೆಮ್ ನಾಳ ವ್ಯವಸ್ಥೆಯ ಮೂಲಕ ಸಸ್ಯ ದೇಹದಲ್ಲಿ ವ್ಯಾಪಿಸುತ್ತದೆ. ಸಸ್ಯಗಳಲ್ಲಿ ಗ್ರಂಥಿಗಳು ದೇಹದ ಹೊರಪದರವಾದ ಎಪಿಡರ್ಮಿಸಿನ ಮೇಲಿರಬಹುದು ಅಥವಾ ದೇಹದ ಒಳಗಿನ ಇತರ ಬಗೆಯ ಅಂಗಾಂಶಗಳ ಮಧ್ಯೆ ಇರಬಹುದು. ಮೊದಲನೆಯ ಬಗೆಗೆ ಬಹಿರ್‍ಗ್ರಂಥಿಗಳೆಂದೂ ಎರಡನೆಯವಕ್ಕೆ ಅಂತರ್‍ಗ್ರಂಥಿಗಳೆಂದೂ ಹೆಸರು.

ಬಹಿರ್ ಗ್ರಂಥಿಗಳು[ಬದಲಾಯಿಸಿ]

ಇವುಗಳಲ್ಲಿ ಹಲವು ಬಗೆಗಳಿವೆ.

  1. ರೋಮಗಳಂತಹ ಗ್ರಂಥಿಗಳು : ಇವು ಕೂದಲುಗಳಂತೆ ಕಾಣುವ ಗ್ರಂಥಿಗಳು. ಇವಕ್ಕೆ ಬಹುಕೋಶಿ ಇಲ್ಲವೆ ಏಕಕೋಶಿ ಅಗ್ರಭಾಗವೂ ತೊಟ್ಟಿನಂಥ ಬುಡವೂ ಇವೆ. ಅಗ್ರಭಾಗಕ್ಕೆ ಮಾತ್ರ ಸ್ರಾವಕಸಾಮಥ್ರ್ಯವಿರುತ್ತದೆ. ಉದಾಹರಣೆಗೆ ಚುರುಚುರುಕೆ ಗಿಡದ ಕುಟುಕು ರೋಮಗಳು, ಲ್ಯಾವೆಂಡರ್, ಪಚ್ಚೆತೆನೆ, ತುಳಸಿ ಮುಂತಾದವುಗಳ ಸುವಾಸನಾ ಗ್ರಂಥಿಗಳು, ಹೊಗೆಸೊಪ್ಪು, ಸೇಬು, ಭೂರ್ಜಪತ್ರ ಮುಂತಾದ ಸಸ್ಯಗಳಲ್ಲಿ ಜಿಗುಟು ವಸ್ತುಗಳನ್ನು ಉತ್ಪಾದಿಸುವ ಗ್ರಂಥಿಗಳು.
  2. ಮಧು ಗ್ರಂಥಿಗಳು : ಅನೇಕ ಬಗೆಯ ಹೂಗಳ ಅಂಡಾಶಯದ ಕೆಳಗೆ ಅಥವಾ ಸುತ್ತುವರಿದಂತೆ ಇರುವ ಗ್ರಂಥಿಗಳಿವು. ಉದಾಹರಣೆಗೆ ಯೂಫೋರ್ಬಿಯ, ತುಂಬೆ, ಗುಲಾಬಿ, ದಾಸವಾಳ ಇತ್ಯಾದಿ. ಕೆಲವೊಮ್ಮೆ ಎಲೆ, ಕಾಂಡ, ವೃಂತಪತ್ರ ಮುಂತಾದವುಗಳ ಮೇಲೂ ಮಧು ಗ್ರಂಥಿಗಳಿರಬಹುದು. ಈ ಗ್ರಂಥಿಗಳಲ್ಲೆಲ್ಲ ಸಿಹಿಯಾದ ದ್ರವ ಉತ್ಪತ್ತಿಯಾಗುತ್ತಿದ್ದು ಕೀಟಗಳನ್ನು ಆಕರ್ಷಿಸಲು ಅದು ಸಹಾಯಕವಾಗುತ್ತದೆ.
  3. ಹೈಡತೋಡುಗಳು : ಟೊಮ್ಯಾಟೊ, ನಾಸ್ಟುರ್ಷಿಯಮ್, ಟ್ರೋಪಿಯೋಲಮ್, ಹುಲ್ಲು, ತೆರ್ಮೆ (ಫರ್ನ್) ಮುಂತಾದ ಗಿಡಗಳ ಎಲೆಗಳ ತುದಿ ಮತ್ತು ಅಂಚುಗಳಲ್ಲಿ ಇರುವ ಗ್ರಂಥಿಗಳಿವು. ಇವುಗಳ ಮುಖಾಂತರ ವಿಲೀನವಾದ ಲವಣಗಳುಳ್ಳ ನೀರು ವಿಸರ್ಜಿತವಾಗುತ್ತದೆ. ಈ ಕಾರ್ಯಕ್ಕೆ ಗಟೇಷನ್ ಎಂದು ಹೆಸರು.
  4. ಪಾಚಕ ಗ್ರಂಥಿಗಳು : ಇವನ್ನು ಕೀಟಭಕ್ಷಕ ಸಸ್ಯಗಳಾದ ಡ್ರಾಸಿರ, ನೆಪೆಂತೆಸ್, ಯುಟ್ರಿಕ್ಯುಲೇರಿಯ ಇತ್ಯಾದಿಗಳಲ್ಲಿ ಕಾಣಬಹುದು. ಇವು ಎಲೆಗಳ ಮೈಮೇಲೆ ಇದು ಒಂದು ರೀತಿಯ ಪಾಚಕರಸವನ್ನು ಉತ್ಪ್ಪಾದಿಸುತ್ತವೆ. ಇದರಿಂದ ಗಿಡ ಸೆರೆ ಹಿಡಿಯುವ ಕೀಟಗಳನ್ನು ಜೀರ್ಣಿಸಲು ಅನುಕೂಲವಾಗುತ್ತದೆ.

ಅಂತರ್‍ಗ್ರಂಥಿಗಳು[ಬದಲಾಯಿಸಿ]

ಇವುಗಳಲ್ಲಿ ಸ್ರಾವಕ ಕೋಶಗಳು (ಸೆಕ್ರೀಟರಿ ಸೆಲ್ಸ್), ಸ್ರಾವಕ ನಾಳಗಳು (ಸೆಕ್ರೀಟರಿ ಕ್ಯನಾಲ್ಸ್) ಮತ್ತು ಲೇಟಿಸಿಫರ್ಸ್ ಎಂಬ ಮೂರು ಮುಖ್ಯ ಬಗೆಗಳಿವೆ.

  1. ಸ್ರಾವಕ ಕೋಶಗಳು : ಇವು ಬೇರೆ ಬೇರೆ ರೀತಿಯ ಕೋಶಗಳ ನಡುವೆ ಹರಡಿಕೊಂಡಿರುತ್ತವೆ. ಇವುಗಳಲ್ಲಿ ಸಂಗ್ರಹವಾಗುವ ಪದಾರ್ಥದ ಆಧಾರದ ಮೇಲೆ ಇವಕ್ಕೆ ಹಲವಾರು ಹೆಸರುಗಳನ್ನು ಕೊಡಲಾಗಿದೆ. ಇವುಗಳ ಸ್ರಾವ ತೈಲವಾಗಿರಬಹುದು. (ಉದಾಹರಣೆಗೆ ಕೊತ್ತಂಬರಿ, ಜೀರಿಗೆ, ದಾಲ್ಚಿನ್ನಿ, ಸಂಪಿಗೆ ಇತ್ಯಾದಿ), ರಾಳ (ರೆಸಿನ್) ಅಗಿರಬಹುದು (ಉದಾಹರಣೆಗೆ ಸೂರ್ಯಕಾಂತಿ, ಪೈನ್, ಇತ್ಯಾದಿ), ಲೋಳೆಯಂಥ ವಸ್ತುವಾಗಿರಬಹುದು (ಉದಾಹರಣೆಗೆ ಕಳ್ಳಿ, ಗೊಡ್ಡು ಈಚಲು, ದಾಸವಾಳ ಮುಂತಾದವು) ಅಥವಾ ಟ್ಯಾನಿನ್ ಆಗಿರಬಹುದು (ಉದಾಹರಣೆಗೆ ತಂಗಡಿ, ಕ್ರ್ಯಾಸ್ಯುಲ, ರೂಬಸ್ ಮುಂತಾದವು).
  2. ಸ್ರಾವಕನಾಳಗಳು : ಇವು ಹಲವಾರು ಕೋಶಗಳು ಕ್ಷಯಿಸುವುದರಿಂದ ಇಲ್ಲವೆ ಬೇರೆ ಬೇರೆಯಾಗುವುದರಿಂದ ಉಂಟಾಗುತ್ತದೆ. ಇವು ಕೂಡ ತೈಲ, ರಾಳ ಟ್ಯಾನಿನ್ ಅಥವಾ ಲೋಳೆಯಿಂದ ಕೂಡಿರಬಹುದು. ಉದಾಹರಣೆಗೆ ಪೈನ್, ನಿಂಬೆ, ಹತ್ತಿ, ಇತ್ಯಾದಿ.
  3. ಲೇಟಿಸಿಫರ್ಸ್ : ಹಾಲ್ನೊರೆಯ (ಲೇಟೆಕ್ಸ್) ಉತ್ಪಾದನೆಯಲ್ಲಿ ತೊಡಗಿರುವ ಗ್ರಂಥಿಗಳಿವು. ಇವು ಒಂದೇ ಜೀವಕೋಶದಿಂದ ಕೂಡಿದ ಸರಳ ರೀತಿಯವಾಗಿರಬಹುದು, ಇಲ್ಲವೆ ಹಲವಾರು ಜೀವಕೋಶಗಳಿಂದ ಕೂಡಿದ ಸಂಕೀರ್ಣ ರೀತಿಯವಾಗಿರಬಹುದು. ಇವುಗಳಲ್ಲಿ ತಯಾರಾಗುವ ಹಾಲ್ನೊರೆ ಬಣ್ಣರಹಿತವಾಗಿರಬಹುದು. ಇಲ್ಲವೆ ಬಿಳಿ, ಕಿತ್ತಳೆ, ಕಂದು ಬಣ್ಣಗಳಿಂದ ಕೂಡಿರಬಹುದು. ಉದಾಹರಣೆಗೆ ಹೀವಿಯ ಬ್ರಸಿಲಿಯನ್ಸಿಸ್ (ರಬ್ಬರ್‍ಮರ), ಪಪ್ಯಾವರ್ ಸಾಮ್ನಿಫೆರಮ್ (ಅಫೀಮು ಗಿಡ), ಕೇರಿಕ ಪಪಾಯ (ಪಪ್ಪಾಯಿ), ಡ್ಯಾಂಡೆಲಿಯನ್, ಲ್ಯಾಕ್ಟುಕ ಇತ್ಯಾದಿ.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಗ್ರಂಥಿ&oldid=914218" ಇಂದ ಪಡೆಯಲ್ಪಟ್ಟಿದೆ