ಮಂಡಲ ಹಾವು
ಮಂಡಲದ ಹಾವು ದಬೋಯ ರಸೆಲಿಯೈ | |
---|---|
ಪುಣೆ ಭಾರತದಲ್ಲಿ ಒಂದು ಮಂಡಲದ ಹಾವು. | |
Scientific classification | |
ಸಾಮ್ರಾಜ್ಯ: | ಅನಿಮೇಲಿಯಾ
|
ವಿಭಾಗ: | |
ಉಪವಿಭಾಗ: | |
ವರ್ಗ: | |
ಗಣ: | ಸ್ಕ್ವಾಮೇಟಾ
|
ಉಪಗಣ: | |
ಕುಟುಂಬ: | ವೈಪರಿಡೇ
|
ಉಪಕುಟುಂಬ: | ವೈಪರಿನೇ
|
ಕುಲ: | ದಬೋಯ Gray, 1842
|
ಪ್ರಜಾತಿ: | ದ. ರಸೆಲಿಯೈ
|
Binomial name | |
ದಬೋಯ ರಸೆಲಿಯೈ | |
Synonyms | |
|
ಮಂಡಲದ ಹಾವು ವೈಪರಿಡೀ ಕುಟುಂಬದ ವೈಪರಿನೀ ಉಪಕುಟುಂಬಕ್ಕೆ ಸೇರಿದ ವಿಷಪೂರಿತ ಹಾವು (ರಸೆಲ್ಸ್ ವೈಪರ್ - Russell's Viper).[೨][೩] ದಬೋಯ ರಸೆಲಿಯೈ (Daboia Russelii) ಇದರ ವೈಜ್ಞಾನಿಕ ಹೆಸರು. ಭಾರತದ ನಾಲ್ಕು ಅತ್ಯಂತ ವಿಷಯುಕ್ತ ಹಾವುಗಳ ಪೈಕಿ ಇದು ಒಂದು.
ದೇಹರಚನೆ
[ಬದಲಾಯಿಸಿ]ಸಾಧಾರಣವಾಗಿ 1.5 ಮೀ ಉದ್ದಕ್ಕೆ ಬೆಳೆಯುತ್ತದೆ. ದೇಹ ಸ್ಥೂಲವಾದದ್ದು. ತಲೆ ಮುಮ್ಮೂಲೆಯಾಕಾರದ್ದು. ಮೂತಿ ಚೂಪು. ಮೂಗಿನ ಹೊಳ್ಳೆಗಳು ಪ್ರಧಾನವಾಗಿದೆ. ಕಣ್ಣುಗಳ ಸುತ್ತ ಬಿಳಿ ಅಂಚು ಉಂಟು. ತಲೆಯ ಮೇಲೆ ಶಲ್ಕಗಳ ಬದಲು ಫಲಕಗಳಿವೆ. ಮೈಬಣ್ಣ ಕಂದು ಇಲ್ಲವೆ ಹಳದಿ. ಉದರಭಾಗ ಬಿಳಿ. ಆಗ್ನೇಯ ಮತ್ತು ಈಶಾನ್ಯ ಭಾಗದ ಪ್ರದೇಶಗಳಲ್ಲಿರುವ ಬಗೆಗಳಲ್ಲಿ ಉದರದ ಮೇಲೆ ಚುಕ್ಕೆಗಳುಂಟು. ತಲೆಯಿಂದ ಬಾಲದವರೆಗೆ ಬೆನ್ನು ಹಾಗೂ ಪಾರ್ಶ್ವಗಳ ಮೇಲೆ ಮೂರು ಸಾಲುಗಳಲ್ಲಿ ವೃತ್ತಾಕಾರದ ಗುರುತುಗಳಿವೆ. ಬೆನ್ನುಹುರಿ ಗುಂಟ ಇರುವ ಗುರುತುಗಳು ಕ್ರಮಬದ್ಧವಾಗಿ ಜೋಡಣೆಗೊಂಡಿವೆ.
ಆವಾಸಸ್ಥಾನ
[ಬದಲಾಯಿಸಿ]ಇದರ ವಾಸಸ್ಥಾನ ದಕ್ಷಿಣ ಏಷ್ಯಾ. ಇದು ಭಾರತಾದ್ಯಂತ 3000 ಮೀ ಎತ್ತರ ಮೀರದ ಎಲ್ಲ ಪ್ರದೇಶಗಳಲ್ಲೂ ವಾಸಿಸುತ್ತವೆ. ಸಾಮಾನ್ಯವಾಗಿ ಹಗಲಿನಲ್ಲಿ, ಉಷ್ಣತೆ ಹೆಚ್ಚಾಗಿರುವ ವೇಳೆಯಲ್ಲಿ ಕಲ್ಲುಪೊಟರೆ ತರಗೆಲೆಗಳ ಅಡಿ, ಮುಳ್ಳುಪೊದರು, ಕತ್ತಾಳೆ ಮೆಳೆ ಮುಂತಾದ ತಾಣಗಳಲ್ಲಿ ಅಡಗಿರುತ್ತದೆ. ಕೇದಗೆ, ಕತ್ತಾಳೆ ಪೊದೆಗಳು, ಬಿದಿರು ಮೆಳೆಗಳು ಇದರ ಮೆಚ್ಚಿನ ತಾಣಗಳು.
ಸ್ವಭಾವ
[ಬದಲಾಯಿಸಿ]ನೋಟಕ್ಕೆ ಇದು ತುಂಬ ಆಲಸಿಯಾಗಿ ಕಾಣುತ್ತದೆ. ಆದರೆ ರೇಗಿದಾಗ ಇಲ್ಲವೇ ಉದ್ರೇಕಗೊಂಡಾಗ ಛಂಗನೆ ನೆಗೆಯಬಲ್ಲದು. ಆಗ ತಲೆ ಎತ್ತಿ, ನಾಲಗೆ ಹೊರಚಾಚಿ ಅಲುಗಿಸಿ, ಒಂದೇ ಸಮನೆ ಜೋರಾಗಿ ಭುಸುಗುಡುತ್ತ ಕಚ್ಚಲು ನುಗ್ಗುತ್ತದೆ. ಸ್ವಭಾವತಃ ಇದು ಅಳ್ಳೆದೆಯದು. ಅಪಾಯ ಒದಗಿದೆ ಎನಿಸಿದಾಗ ಅವಿತುಕೊಳ್ಳುವುದೇ ಸಹಜ ಪ್ರವೃತ್ತಿ. ಮನುಷ್ಯನಿಂದ ಆದಷ್ಟು ದೂರದಲ್ಲೇ ಇರುತ್ತದೆ. ಆದರೆ ಅತ್ಯಂತ ವಿಷಪೂರಿತವಾದ್ದರಿಂದ ಇದನ್ನು ಲಘುವಾಗಿ ಕಾಣಲಾಗದು.
ವಿಷ
[ಬದಲಾಯಿಸಿ]ಈ ಹಾವಿನಲ್ಲಿ ಸುಮರು ೧೩೦-೨೫೦ ಮಿ.ಗ್ರಾಂನಷ್ಟು ವಿಷ ಉತ್ಪತ್ತಿಯಾಗುತ್ತದೆ. ಇದರ ವಿಷದ ಹಲ್ಲುಗಳು ಸೂಜಿಯಂತೆ ಬಲು ಉದ್ದ ಹಾಗೂ ತೀಕ್ಷ್ಣ. ಚುಚ್ಚುಮದ್ದಿನ ಸೂಜಿಯಂತೆ ಒಳಗೆ ಕೊಳವೆಯಿಂದ ಕೂಡಿವೆ. ಬಾಯಿಯ ಹಿಂಭಾಗದಲ್ಲಿ ಎರಡೂ ಪಾರ್ಶ್ವಗಳಲ್ಲಿರುವ ವಿಷಗ್ರಂಥಿಗಳಲ್ಲಿ ಉತ್ಪತ್ತಿಯಾಗುವ ವಿಷ ಈ ಕೊಳವೆಗಳ ಮೂಲಕ ಹರಿದುಬರುತ್ತದೆ. ಕೆಲವೂಮ್ಮೆ ಹಾವು ಬಾಯಿ ತೆರೆದಕ್ಷಣ ವಿಷ ಚಿಮ್ಮುವುದೂ ಉಂಟು. ಇದರ ವಿಷಕ್ಕೆ ರಕ್ತಹೆಪ್ಪುಗಟ್ಟುವ ಕ್ರಿಯೆಯನ್ನು ಶಿಥಿಲಗೊಳಿಸುವ ಶಕ್ತಿ ಇದೆ. ದಂಶನಕ್ಕೆ ಒಳಗಾದ ಅಂಗ ಬಾತುಕೊಂಡು ಅಲ್ಲಿ ವಿಪರೀತ ಉರಿಉಂಟಾಗುತ್ತದೆ. ಮಂಡಲದ ಹಾವಿನ ಕಡಿತದಿಂದ ಸಾವು ಸಂಭವಿಸುವುದು ವಿಷದ ಮೊತ್ತವನ್ನವಲಂಬಿಸಿದೆಯಾದರೂ ಪ್ರತಿವಿಷವನ್ನು ಧಾರಾಳ ಮೊತ್ತದಲ್ಲಿ ಕೊಡುವುದು ಉತ್ತಮ ಎನ್ನಲಾಗಿದೆ. ತುರ್ತು ವೈದ್ಯಕೀಯ ಚಿಕಿತ್ಸೆ ಅಗತ್ಯ.
ಆಹಾರ
[ಬದಲಾಯಿಸಿ]ಮಂಡಲದ ಹಾವಿನ ಪ್ರಧಾನ ಆಹಾರ ಇಲಿ, ಹೆಗ್ಗಣ, ಓತಿ, ಹಲ್ಲಿ, ಏಡಿ, ಕೆಲವು ತೆರನ ಕೀಟಗಳು. ಬೇರೆ ಹಾವುಗಳನ್ನೂ ಹಕ್ಕಿಗಳನ್ನೂ, ಅವುಗಳ ಮರಿಗಳನ್ನೂ ತಿನ್ನುವುದಿದೆ. ಹಲವು ಸಲ ಸ್ವಜಾತಿ ಹಾವುಗಳನ್ನು ತಿನ್ನುವುದುಂಟು.
ಸಂತಾನೋತ್ಪತ್ತಿ
[ಬದಲಾಯಿಸಿ]ಇದರ ಸಂತಾನವೃದ್ಧಿ ಶ್ರಾಯ ಜುಲೈ-ಆಗಸ್ಟ್. ಮಂಡಲದ ಹಾವು ತನ್ನ ದೇಹದಲ್ಲಿಯೇ ಮೊಟ್ಟೆಯಿಟ್ಟು ಕಾವುಕೊಟ್ಟು ಮರಿಮಾಡಿ ಮರಿಗಳನ್ನು ಪ್ರಸವಿಸುತ್ತದೆ. ಕೆಲವು ಸರಿಸೃಪಗಳಲ್ಲಿ ಕಾಣಬಹುದಾದ ಒಂದು ವಿಶೇಷ ಬಗೆಯ ವಂಶಾಭಿವೃದ್ಧಿ ಇದು.[೪] ಇದನ್ನೆ ಜನರು ಮಂಡಲದ ಹಾವು ನೇರವಾಗಿ ಮರಿಹಾಕುತ್ತದೆ ಎಂದು ತಪ್ಪಾಗಿ ಗ್ರಹಿಸುತ್ತಾರೆ. ಒಂದು ಸಲಕ್ಕೆ 20-40 ಮರಿಗಳು ಹುಟ್ಟುವವು.[೫] ಕೆಲವೊಮ್ಮೆ 80-90 ಮರಿಗಳು ಹುಟ್ಟುವುದೂ ಉಂಟು. ಹುಟ್ಟಿದಾಗ ಸುಮಾರು 130 ಮಿಮೀ ಉದ್ದವಿರುವ ಇವು ವಯಸ್ಕಗಳಿಗಿಂತ ಹೆಚ್ಚು ಹೊಳೆಯುತ್ತಿರುತ್ತವೆ. ಮರಿಗಳೂ ವಯಸ್ಕಗಳಷ್ಟೇ ಅಪಾಯಕಾರಿ.
ಉಲ್ಲೇಖಗಳು
[ಬದಲಾಯಿಸಿ]- ↑ McDiarmid RW, Campbell JA, Touré T. 1999. Snake Species of the World: A Taxonomic and Geographic Reference, Volume 1. Washington, District of Columbia: Herpetologists' League. 511 pp. ISBN 1-893777-00-6 (series). ISBN 1-893777-01-4 (volume).
- ↑ Britannica, The Editors of Encyclopaedia. "Russell’s viper". Encyclopedia Britannica, 24 Aug. 2023, https://www.britannica.com/animal/Russells-viper. Accessed 18 October 2023.
- ↑ https://animalia.bio/russells-viper?property=73
- ↑ Stidworthy, J. (1974). Snakes of the World (Revised ed.). New York: Grosset & Dunlap Inc. ISBN 0-448-11856-4.
- ↑ Mallow D, Ludwig D, Nilson G (2003). True Vipers: Natural History and Toxinology of Old World Vipers. Malabar, Florida: Krieger Publishing Company. 359 pp. ISBN 0-89464-877-2.
ಹೊರಗಿನ ಕೊಂಡಿಗಳು
[ಬದಲಾಯಿಸಿ]- Daboia russelii at the Reptarium.cz Reptile Database. Accessed 5 September 2007.
- Russell's viper at Michigan Engineering. Accessed 5 September 2007.
- Russell's viper at SurvivalIQ. Accessed 5 September 2007.
- Mark O'Shea in Sri Lanka Archived 2018-04-19 ವೇಬ್ಯಾಕ್ ಮೆಷಿನ್ ನಲ್ಲಿ. at Mark O'Shea. Accessed 5 September 2007.
- Common Poisonous Snakes in Taiwan Archived 2010-02-13 ವೇಬ್ಯಾಕ್ ಮೆಷಿನ್ ನಲ್ಲಿ. at Formosan Fat Tire. Accessed 5 September 2007.
- Video of Daboia russelii on YouTube. Accessed 5 September 2007.
- Video of Daboia russelii feeding on YouTube. Accessed 5 September 2007.
- Toxicology