ಕತ್ತಾಳೆ

ವಿಕಿಪೀಡಿಯ ಇಂದ
Jump to navigation Jump to search
ಕತ್ತಾಳೆ
Agave americana a-m.jpg
ಅಗಾವೆ ಅಮೇರಿಕಾನ ಪ್ರಭೇದದ ಕತ್ತಾಳೆ
ವೈಜ್ಞಾನಿಕ ವರ್ಗೀಕರಣ
ಸಾಮ್ರಾಜ್ಯ: plantae
ವಿಭಾಗ: ಹೂಬಿಡುವ ಸಸ್ಯ
ವರ್ಗ: Liliopsida
ಗಣ: Asparagales
ಕುಟುಂಬ: Agavaceae
ಕುಲ: Agave
L.
Species

see text.

ಕತ್ತಾಳೆ ಏಕದಳ ಸಸ್ಯಗಳ ಗುಂಪಿನಲ್ಲಿನ ಅಮರಿಲ್ಲಿಡೇಸೀ ಕುಟುಂಬಕ್ಕೆ ಸೇರಿದ ಅಗೇವ್ ಎಂಬ ಶಾಸ್ತ್ರೀಯ ಹೆಸರಿನ ಒಂದು ಸಸ್ಯಜಾತಿ.ಈ ಸಂಕುಲದಲ್ಲಿ ಹಲವಾರು ಪ್ರಭೇದಗಳಿದ್ದು, ಕೆಲವು ಪ್ರಭೇದಗಳನ್ನು ದಕ್ಷಿಣ ಅಮೇರಿಕ, ಮೆಕ್ಸಿಕೋಗಳಿಂದ ಕೈಗಾರಿಕಾ ದೃಷ್ಟಿಯಿಂದ ಅಥವಾ ಅಲಂಕಾರಕ್ಕಾಗಿ ಭಾರತಕ್ಕೆ ತಂದು ಬೆಳೆಸಲಾಗಿದೆ. ಸಂಸ್ಕೃತದ ಶಬ್ದ' ಕಂತಾಳ ' ಎಂಬುದು ಇದೇ ಸಸ್ಯವನ್ನು ಕುರಿತಾದುದು ಎಂದು ಕೆಲವರ ಅಭಿಪ್ರಾಯ. ಭಾರತದಲ್ಲಿ ಸುಮಾರು ೧೬ನೇ ಶತಮಾನದಿಂದ ಇದನ್ನು ಕೃಷಿ ಮಾಡಲಾಗಿದೆ ಎಂದು ಅಂದಾಜು ಮಾಡಲಾಗಿದೆ.

ಸಸ್ಯಶಾಸ್ತ್ರೀಯ ವರ್ಗೀಕರಣ[ಬದಲಾಯಿಸಿ]

ಅಗಾವೆಸಿ ಕುಟುಂಬದಲ್ಲಿ ನೂರಾರು ಪ್ರಭೇದಗಳಿದ್ದು ಭಾರತದಲ್ಲಿ ಅಗಾವೆ ಸಿಸಿಲಾನ, ಅಗಾವೆ ಕಂಟಾಲ, ಅಗಾವೆ ವೈಟ್ಟಿ, ಅಗಾವೆ ಅಮೆರಿಕಾನ ಮುಖ್ಯವಾಗಿ ಕಂಡುಬರುತ್ತದೆ.ಭೂತಾಳೆ, ರಕ್ಕಸಪಟ್ಟಿ ಪರ್ಯಾಯನಾಮಗಳು.

ಪ್ರಭೇದಗಳು[ಬದಲಾಯಿಸಿ]

ಇದರಲ್ಲಿ ಸು. 275 ಪ್ರಭೇದಗಳಿವೆ. ಇವುಗಳಲ್ಲಿ ಅ. ಅಮೆರಿಕಾನ, ಅ. ಕಂತಾಲ, ಅ. ಅಂಗಸ್ಟಿಫೋಲಿಯ, ಅ. ಸಿಸಾಲಾನ, ಅ. ಫೋರ್ಕ್ರೋಯ ಮತ್ತು ಅ. ವೀರ-ಕ್ರುಜ್ ಎಂಬುವು ಮುಖ್ಯವಾದವು. ಕತ್ತಾಳೆ ಮೂಲತಃ ಮೆಕ್ಸಿಕೋದ ನಿವಾಸಿ. ಅಲ್ಲಿಂದ ಉಳಿದ ಎಲ್ಲ ಉಷ್ಣದೇಶಗಳಿಗೆ ಹರಡಿತೆಂದೂ ಪೋರ್ಚುಗೀಸರು ಸು. 15ನೆಯ ಶತಮಾನದಲ್ಲಿ ಇದನ್ನು ಭಾರತಕ್ಕೆ ತಂದರೆಂದೂ ಹೇಳಲಾಗಿದೆ. ಎಲ್ಲ ಕಡೆಗಳಲ್ಲಿಯೂ ಕಾಣಬರುವ ಇದು ಸಾಮಾನ್ಯವಾಗಿ ಬಂಜರು ಪ್ರದೇಶಗಳಲ್ಲಿ ಬೆಳೆಯುತ್ತದೆ. ಇದನ್ನು ತೋಟಗಳಲ್ಲಿ, ಹೊಲಗಳಲ್ಲಿ, ಬೇಲಿಯ ಸಾಲಿನಲ್ಲಿ ಬೆಳೆಸುವುದೂ ಉಂಟು. ಅಲ್ಲದೆ ಅಲಂಕಾರಕ್ಕಾಗಿ ಕುಂಡಗಳಲ್ಲಿ ಬೆಳೆಸುತ್ತಾರೆ. ಇದಕ್ಕೆ ಬಲು ಚಿಕ್ಕದಾದರೂ ಗಟ್ಟಿಯಾದ ಕಾಂಡವಿದೆ. ಕಾಂಡದ ಸುತ್ತ ಕಮಲದಳಗಳಂತೆ ಜೋಡಣೆಗೊಂಡಿರುವ ಸು. 1-2 ಮೀ ಉದ್ದ ಮತ್ತು 10-15 ಸೆಂಮೀ ಅಗಲವಿರುವ ಹಚ್ಚಹಸಿರುಬಣ್ಣದ ಅನೇಕ ಎಲೆಗಳಿವೆ. ಎಲೆಗಳು ಕತ್ತಿಯಂತಿವೆ, ಅವುಗಳ ತುದಿ ಮತ್ತು ಅಂಚುಗಳಲ್ಲಿ ಮುಳ್ಳುಗಳಿವೆ. ಅವು ಬುಡದಲ್ಲಿ ಸ್ವಲ್ಪ ದಪ್ಪನಾಗಿದ್ದು ಲೋಳೆಯಂಥ ರಸದಿಂದ ತುಂಬಿವೆ. ಗಿಡಕ್ಕೆ ಸು. 8-10 ವರ್ಷ ವಯಸ್ಸಾದಾಗ ಅದರ ಕೇಂದ್ರ ಭಾಗದಿಂದ ಒಂದು ದಿಂಡು ಹೊರಟು ಸು. 5-10 ಮೀ ಉದ್ದಕ್ಕೆ ಕಂಬದಂತೆ ಬೆಳೆಯುವುದು. ಇದೇ ಕತ್ತಾಳೆಯ ವಿಶೇಷ ಬಗೆಯ ಹೂಗೊಂಚಲು. ಅದರ ತುದಿಯಲ್ಲಿ ಅನೇಕ ಕವಲುಗಳಿದ್ದು ಅವುಗಳಲ್ಲೆಲ್ಲ ಅಸಂಖ್ಯಾತವಾದ ಹೂಗಳಿವೆ. ಕೆಲವು ಮೊಗ್ಗುಗಳು ಹೂವಾಗಿ ಅರಳದೆ ಬಲ್ಬಿಲುಗಳೆಂಬ ವಿಶಿಷ್ಟ ಬಗೆಯ ರಚನೆಗಳಾಗಿ ಮಾರ್ಪಾಟಾಗುತ್ತವೆ. ಗೆಡ್ಡೆಗಳಂತಿರುವ ಇವು ಸಸ್ಯದ ಸಂತಾನಾಭಿವೃದ್ಧಿಯಲ್ಲಿ ಪ್ರಮುಖಪಾತ್ರವಹಿಸುತ್ತವೆ. ಪುರ್ಣವಾಗಿ ಬಲಿತ ಬಲ್ಬಿಲುಗಳು ಹೂ ದಿಂಡಿನಿಂದ ಉದುರಿ ನೆಲದ ಮೇಲೆ ಬಿದ್ದು ಪರಿಸ್ಥಿತಿ ಅನುಕೂಲವಾಗಿದ್ದಲ್ಲಿ ಮೊಳೆತು ಸಸಿಗಳಾಗುತ್ತದೆ. ಇದೊಂದು ಬಗೆಯಲ್ಲದೆ ಇನ್ನೊಂದು ರೀತಿಯಿಂದ ಕತ್ತಾಳೆಯ ಸಂತಾನಾಭಿವೃದ್ಧಿಯಾಗುವುದೂ ಉಂಟು. ಬೇರಿನಿಂದ ಕೆಲವು ಗೆಡ್ಡೆಗಳು (ಸಕರ್ಸ್‌) ಉತ್ಪತ್ತಿಯಾಗುತ್ತವೆ. ಇವೂ ಕೂಡ ಅನುಕೂಲ ಪರಿಸ್ಥಿತಿಯಲ್ಲಿ ಸಣ್ಣ ಸಸಿಗಳಾಗಿ ಬೆಳೆಯುವುದುಂಟು. ಕತ್ತಾಳೆಯಲ್ಲಿ ಬೀಜದ ಮುಖಾಂತರ ಸಂತಾನಾಭಿವೃದ್ಧಿಯಾಗುವುದು ವಿರಳ. ಕಾಯಿಗಳು ಬಲಿತಮೇಲೆ ಗಿಡ ಸತ್ತು ಹೋಗುತ್ತದೆ.

ಉಪಯೋಗಗಳು[ಬದಲಾಯಿಸಿ]

ಕತ್ತಾಳೆ ಅದರ ಎಲೆಗಳಿಂದ ತೆಗೆಯಲಾಗುವ ನಾರಿನಿಂದ ಬಹಳ ಪ್ರಸಿದ್ಧವಾಗಿದೆ. ಇದರ ಎಲೆ ಮತ್ತು ಹೂಗೊಂಚಲಿನ ದಿಂಡಿನಿಂದ ಒಂದು ರೀತಿಯ ರಸವನ್ನು ತೆಗೆದು ಅದನ್ನು ಹುಳಿಯಾಗಲು ಬಿಡುತ್ತಾರೆ. ಮೆಕ್ಸಿಕೋದಲ್ಲಿ ಈ ಹುಳಿಯಾದ ರಸವನ್ನು ಪಲ್ಕ್‌ ಎನ್ನುತ್ತಾರೆ. ಮಾದಕ ಗುಣವುಳ್ಳ ಇದನ್ನು ಅಲ್ಲಿನ ರಾಷ್ಟ್ರೀಯ ಪಾನೀಯವಾಗಿ ಪರಿಗಣಿಸುತ್ತಾರೆ. ಕತ್ತಾಳೆ ನಾರು ಬಲವಾಗಿರುವುದಲ್ಲದೆ ಉಪ್ಪು ನೀರಿನಲ್ಲಿ ಹೆಚ್ಚು ಕೊಳೆಯುವುದಿಲ್ಲ. ಅದರ ಸಲುವಾಗಿ ನಾರುಗಳನ್ನು ಸಾಕಷ್ಟು ಪ್ರಮಾಣದಲ್ಲಿ ಜೋಡಿಸಿ ಹೊಸೆದು ದಾರ, ಹಗ್ಗ ಮುಂತಾದುವನ್ನು ಮಾಡುವರು. ಅಲ್ಲದೆ ಚಾಪೆ, ಚೀಲ ಹಾಗೂ ಸೋಫಾ ಒಳಗೆ ತುಂಬುವುದಕ್ಕೂ ಬ್ರಷ್ಗಳನ್ನು ಮಾಡುವುದಕ್ಕೂ ಉಪಯೋಗಿಸುವರು. ಕತ್ತಾಳೆ ಎಲೆಯಿಂದ ನಾರನ್ನು ಪ್ರತ್ಯೇಕಿಸಿದ ಅನಂತರ ಉಳಿಯುವ ಪದಾರ್ಥಗಳಿಂದ ಅತ್ಯಂತ ಉಪಯುಕ್ತವಾದ ಕಾರ್ಟಿಸಾನ್ ಮತ್ತು ಸೆಕ್ಸ್‌ ಹಾರ್ಮೋನುಗಳನ್ನು ತಯಾರಿಸಲು ಬೇಕಾಗುವ ಹೆಕೋಜೆನಿನ್ ದ್ರಾವಕವನ್ನು ತಯಾರಿಸುವರು.

ಕತ್ತಾಳೆನಾರು[ಬದಲಾಯಿಸಿ]

ಕತ್ತಾಳೆ ಎಲೆಗಳಿಂದ ನಾರನ್ನು ಪ್ರತ್ಯೇಕಿಸುವುದಕ್ಕೆ ತೆಂಗಿನ ಕಾಯಿನ ಮೇಲಿನ ಮಟ್ಟೆಯಿಂದ ಜುಂಗನ್ನು ಬೇರ್ಪಡಿಸುವಂತೆ ಕೆಲವು ವಿಧಾನಗಳನ್ನು ಅನುಸರಿಸುವರು. ಪಾಶ್ಚಾತ್ಯ ದೇಶದಲ್ಲಿ ಅನುಸರಿಸುವ ರೀತಿಗೂ ಭಾರತದಲ್ಲಿನ ರೀತಿಗೂ ವ್ಯತ್ಯಾಸಗಳಿವೆ. ಎಲೆಗಳು ಚೆನ್ನಾಗಿ ಬಲಿತಮೇಲೆ ಹರಿತವಾದ ಚಾಕು, ಮಚ್ಚು ಅಥವಾ ಕುಡುಗೋಲಿನಿಂದ ಬುಡದಲ್ಲಿ ಅದನ್ನು ಒಂದೊಂದಾಗಿ ಕತ್ತರಿಸುವರು. ಹೀಗೆ ಕತ್ತರಿಸಿದ ಎಲೆಗಳಿಂದ ನಾರನ್ನು ತೆಗೆಯುವುದಕ್ಕೆ ಎರಡು ಪದ್ಧತಿಗಳಿರುವುವು. ಒಂದು ಪದ್ಧತಿಯಲ್ಲಿ ಕುಯ್ದ ಎಲೆಗಳ ಮೇಲ್ಭಾಗವನ್ನು ಹರಿತವಾದ ಚಾಕುವಿನಿಂದ ಹೆರೆದು ಹಾಕುವರು. ಇದರಿಂದ ನಾರಿನೊಂದಿಗೆ ಸೇರಿರುವ ಹಸಿರು ದಿಂಡು ಪದಾರ್ಥಗಳು ಪ್ರತ್ಯೇಕವಾಗಿ ನಾರು ಬಿಡಿಸಿದಂತಾಗುವುದು. ಅಲ್ಲದೆ ಎಲೆಗಳು ಸೀಳಿದಂತೆ ಆಗುವುದು. ಅನಂತರ ಇದನ್ನು 8-15 ದಿವಸ ನೀರಿನಲ್ಲಿ ಮುಳುಗಿಸಿಟ್ಟಿರುವರು. ಹೀಗೆ ನೀರಿನಲ್ಲಿ ಕೊಳೆಯುವುದರಿಂದ ನಾರು ಇತರ ಅಂಟು ಪದಾರ್ಥಗಳಿಂದ ಬೇರೆಯಾಗಲು ಸಹಾಯವಾಗುವುದು. ಅನಂತರ ನೀರಿನಿಂದ ತೆಗೆದು ಲಘುವಾಗಿ ಚಚ್ಚಿ ಪುನಃ ನೀರಿನಲ್ಲಿ ಜಾಲಾಡಿ ನಾರನ್ನು ಪ್ರತ್ಯೇಕಿಸುವರು. ಇದನ್ನು ಒಣಗಿಸಿದ ತರುವಾಯ ಹಳದಿ ಛಾಯೆ ಕೂಡಿದ ಬಿಳೀ ಬಣ್ಣದ ಶುಭ್ರವಾದ ನಾರು ಬರುವುದು. ಪಾಶ್ಚಾತ್ಯ ದೇಶಗಳಲ್ಲಿ ರಾಸ್ಟಡಾರ್ ತರಹದ ಯಂತ್ರಗಳ ಮೂಲಕ ಹೆರೆದು ನಾರನ್ನು ಪ್ರತ್ಯೇಕಿಸಿ ತೊಳೆದು ಶುಭ್ರಮಾಡಿ ಒಣಗಿಸಿ ಬೇಲುಗಳಾಗಿ ಪ್ಯಾಕ್ ಮಾಡಿ ರವಾನಿಸುವರು. ಎರಡನೆಯ ಪದ್ಧತಿಯಲ್ಲಿ-ಇದೇ ಹೆಚ್ಚಾಗಿ ಭಾರತದಲ್ಲಿನ ಪದ್ಧತಿ-ಕುಯ್ದ ಎಲೆಗಳನ್ನು ಉದ್ದವಾಗಿ ಪಟ್ಟಿಯಂತೆ ಮೊದಲು ಸೀಳಿ ಒಣಗಿಸುವರು. ಅನಂತರ ಅವುಗಳನ್ನು ನೀರಿನಲ್ಲಿ 10-15 ದಿವಸ ಮುಳುಗಿಸುವರು. ಇದರಿಂದ ದಿಂಡು ಮತ್ತಿತರ ಅಂಟು ಪದಾರ್ಥಗಳು ಮೆತ್ತಗಾಗಿ ನಾರಿನಿಂದ ಸಡಿಲವಾಗುವುವು. ಆಮೇಲೆ ಮರದ ತುಂಡುಗಳಿಂದ ಅವುಗಳನ್ನು ಬಡಿದು ನಾರನ್ನೂ ಇತರ ಪದಾರ್ಥಗಳನ್ನೂ ಪ್ರತ್ಯೇಕಿಸಿ ನೀರಿನಲ್ಲಿ ಚೆನ್ನಾಗಿ ತೊಳೆದು ಒಣಗಿಸುವರು. ಹೀಗೆ ಪ್ರತ್ಯೇಕಿಸಿದ ಕತ್ತಾಳೆ ನಾರು ಸ್ವಲ್ಪ ಕಂದುಬಣ್ಣವಾಗಿರುವುದು ಮತ್ತು ಇತರ ದೇಶದ ನಾರಿನಷ್ಟು ಬಿಳುಪಾಗಿರುವುದಿಲ್ಲ. ಕೆಲವು ವೇಳೆ ಎಲೆಗಳನ್ನು ನೀರಿನಲ್ಲಿ ಕುದಿಸಿ ಅನಂತರ ಬಡಿದು ಈ ನಾರನ್ನು ಪ್ರತ್ಯೇಕಿಸುವರು. ಬೆಳೆಯು ಹೆಚ್ಚಾಗಿದ್ದರೆ ವಿದ್ಯುತ್ತಿನಿಂದ ಅಥವಾ ಕೈಯಿಂದ ಚಲಾಯಿಸಲಾಗುವ ಡಿಕಾರ್ಟಿಕೇಟರ್ ಯಂತ್ರದಿಂದ ನಾರನ್ನು ಬೇರ್ಪಡಿಸುವರು. ಅನಂತರ ಈ ನಾರನ್ನು ತೊಳೆದು ಒಣಗಿಸುವರು. ಕೆಲವು ವೇಳೆ ಒಣಗಿದ ನಾರನ್ನು ಮರಳಿನ ಮೇಲೆ ಹರಡಿ ನೀರು ಚುಮಕಿಸಿ ಒಣಗಿಸುವರು. ಇದರಿಂದ ನಾರು ಶುಭ್ರವಾಗಿ ಬೆಳ್ಳಗಾಗುವುದು. ಪ್ರಪಂಚದಲ್ಲಿ ವರ್ಷಂಪ್ರತಿ ಸು. 1,300 ಲಕ್ಷ ಪೌಂಡು ಕತ್ತಾಳೆ ನಾರು ಉತ್ಪನ್ನವಾಗುವುದು. ಇಂಡಿಯದಲ್ಲಿ ಒಂದು ಹೆಕ್ಟೇರಿಗೆ 600 ಕಿಗ್ರಾಂ ನಾರು ಬರುವುದು. ಅನ್ಯದೇಶದಲ್ಲಿ ಹೆಕ್ಟೇರಿಗೆ 2,000 ಕಿಗ್ರಾಂ ವರೆವಿಗೂ ಉತ್ಪತ್ತಿಯಾಗುವುದು. 600 ಕಿಗ್ರಾಂ ಎಲೆಗಳಿಗೆ ಸು. 32 ಕಿಗ್ರಾಂ ನಾರು ಬರುವುದು. ಕತ್ತಾಳೆ ನಾರಿಗೆ ಬೆಂಕಿ ತಗಲಿದರೆ ಅದು ಹತ್ತಿಯಂತೆ ಭಗ್ಗನೆ ಹತ್ತಿ ಕೆಂಪು ಛಾಯೆಯ ಹಳದಿಬಣ್ಣದ ಬೆಳಕಿನಿಂದ ಉರಿಯುವುದು ಮತ್ತು ಕಾಗದ ಸುಟ್ಟಂತೆ ವಾಸನೆ ಬರುವುದು. ಬೂದಿಯು ಕೆದರದಿರುವುದು. ಕ್ಯೂಪ್ರಮೋನಿಯಂ ಹೈಡ್ರಾಕ್ಸೈಡ್ ದ್ರಾವಕದಲ್ಲಿ ಹತ್ತಿಯು ಕರಗುವುದು, ಆದರೆ ಕತ್ತಾಳೆ ನಾರು ಕರಗುವುದಿಲ್ಲ. ಪ್ರಬಲ ಸಲ್ಫ್ಯೂರಿಕ್ ಆಮ್ಲದಲ್ಲಿ ನಾರು ಸ್ವಲ್ಪ ಹಳದಿಬಣ್ಣಕ್ಕೆ ತಿರುಗಿ ಅಡ್ಡಗೀಟುಗಳು ಕಾಣಬರುವುವು. ಕತ್ತಾಳೆನಾರಿನಲ್ಲಿ ಶೇ. 77.2 ಭಾಗ ಸೆಲ್ಯುಲೋಸ್, ಶೇ. 6.2 ಭಾಗ ನೀರು, ಶೇ. 14.5 ಭಾಗ ಲಿಗ್ನಿನ್ ಮತ್ತು ಪೆಕ್ಟಿನ್ ಪದಾರ್ಥಗಳು ಮತ್ತು ಶೇ. 2.1 ಭಾಗ ಇತರ ವಸ್ತುಗಳು ಇರುವುವು. ಸೆಣಬಿನಂತೆ ಒಂದೊಂದು ಕತ್ತಾಳೆ ನಾರು ಕೂಡಾ ಅನೇಕ ಸೂಕ್ಷ್ಮ ಎಳೆಗಳಿಂದ ಕೂಡಿದ್ದಾಗಿದೆ. ಒಂದೊಂದು ಸೂಕ್ಷ್ಮ ಎಳೆಯೂ 1ರಿಂದ 5 ಮಿಮೀ ಉದ್ದವಿದ್ದು ಸು. 24 ಮೈಕ್ರಾನ್ ಅಗಲವಿರುತ್ತದೆ. ಸೂಕ್ಷ್ಮದರ್ಶಕದಲ್ಲಿ ನೋಡಿದಾಗ ಎಳೆಯ ಮಧ್ಯ ಭಾಗದಲ್ಲಿ ಖಾಲಿ ಪ್ರದೇಶವೂ (ಲೂಮೆನ್) ಅದರ ಸುತ್ತ ದಪ್ಪ ಗೋಡೆಯೂ (ಸೆಲ್ವಾಲ್) ಇರುವುದು ಕಾಣಿಸುತ್ತದೆ. ತುದಿ ಮೊಂಡಾಗಿಯೋ, ಚೂಪಾಗಿಯೊ, ಕವಲೊಡೆದಂತೆಯೊ ಇರುತ್ತದೆ. ಸಾಧಾರಣವಾಗಿ ಲೂಮೆನ್ನಿನ ಅಗಲ ಸುತ್ತು ಗೋಡೆಯ ದಪ್ಪಕ್ಕಿಂತ ಜಾಸ್ತಿಯಾಗಿರುವುದು. ಇಂಥ ಎಳೆಗಳು ಡಿನಿಯರ್ ಒಂದಕ್ಕೆ 5.30 ಗ್ರಾಂನಷ್ಟು ತೂಕ ಬಲ ಉಳ್ಳದ್ದಾಗಿಯೂ ಶೇಕಡ 2ರಷ್ಟು ಸ್ಥಿತಿಸ್ಥಾಪಕ ಶಕ್ತಿಯುಳ್ಳದ್ದಾಗಿರುವುದು.

ಛಾಯಾಂಕಣ[ಬದಲಾಯಿಸಿ]

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

Wikisource-logo.svg
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಕತ್ತಾಳೆ&oldid=684523" ಇಂದ ಪಡೆಯಲ್ಪಟ್ಟಿದೆ