ವಿಷಯಕ್ಕೆ ಹೋಗು

ಕೇದಗೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕೇದಗೆಯು ಪ್ಯಾಂಡನೇಸೀ ಕುಟುಂಬಕ್ಕೆ ಸೇರಿದ ಒಂದು ಸಸ್ಯ. ಇದಕ್ಕೆ ತಾಳೆಗಿಡ ಎಂಬ ಹೆಸರೂ ಇದೆ. ಇಂಗ್ಲಿಷಿನಲ್ಲಿ ಸಾಮಾನ್ಯವಾಗಿ ಸ್ಕ್ರೂ ಪೈನ್ ಎನ್ನಲಾಗುತ್ತದೆ. ಇದರ ವೈಜ್ಞಾನಿಕ ಹೆಸರು ಪ್ಯಾಂಡಾನಸ್ ಓಡರೇಟಿಸಿಮಸ್, ಸುವಾಸನಾಯುಕ್ತವಾದ ಹೂಗೊಂಚಲಿನಿಂದಾಗಿ ಬಹಳ ಹಿಂದಿನಿಂದಲೂ ಪ್ರಸಿದ್ಧವಾಗಿದೆ.

ಕೇದಿಗೆ

ಎಲ್ಲೆಲ್ಲಿ ಬೆಳೆಯುವುದು

[ಬದಲಾಯಿಸಿ]
ಕೇದಿಗೆ ಗಿಡ

ಪ್ರಪಂಚದ ತೇವಪೂರಿತ ಉಷ್ಣಪ್ರದೇಶಗಳಲ್ಲೆಲ್ಲ ಇದು ಸಾಮಾನ್ಯ. ಪಶ್ಚಿಮದಲ್ಲಿ ಆಫ್ರಿಕದಿಂದ ಹಿಡಿದು ಪೂರ್ವದಲ್ಲಿ ಪೆಸಿಫಿಕ್ ದ್ವೀಪಗಳವರೆಗೂ ಇದರ ವ್ಯಾಪ್ತಿ ಇದೆ.

ಕೇದಗೆ ಸ್ವಾಭಾವಿಕವಾಗಿ ನದಿ, ಹಳ್ಳ ಹಾಗೂ ಸಮುದ್ರಗಳ ದಂಡೆಗಳಲ್ಲಿ ಬೆಳೆಯುತ್ತದೆ. ಹೊಲಗದ್ದೆಗಳ ಇಕ್ಕೆಲಗಳಲ್ಲೂ ಕಂಡುಬರುವುದುಂಟು. ಅಲ್ಲದೆ ಇದರ ಕೆಲವು ಬಗೆಗಳನ್ನು ಅಲಂಕಾರಕ್ಕಾಗಿ, ಸುವಾಸನಾಯುಕ್ತ ಗುಣಕ್ಕಾಗಿ, ಇವುಗಳಿಂದ ತೆಗೆಯಲಾಗುವ ಸುಗಂಧದ್ರವ್ಯಕ್ಕಾಗಿ ಬೆಳೆಸುವುದೂ ಉಂಟು. ಕೇದಗೆ ವಿಸ್ತಾರವಾಗಿ ಹರಡಿಕೊಂಡು ಬೆಳೆಯುವ ಹಾಗೂ ನಿತ್ಯಹಸಿರಾಗಿರುವ ಸಸ್ಯ. ಇದರಲ್ಲಿ ಹಲವಾರು ವಿಭಿನ್ನ ಬಗೆಗಳಿದ್ದು ಕೆಲವು ಪೊದೆಸಸ್ಯಗಳಾಗಿಯೂ ಇನ್ನು ಕೆಲವು ಚಿಕ್ಕ ಮರಗಳಾಗಿಯೊ ಬೆಳೆಯುವುದುಂಟು. ಕೆಲವು ಬಗೆಗಳ ಎಲೆಗಳ ಅಂಚು ಮುಳ್ಳಿನಂತಿದ್ದರೆ ಮತ್ತೆ ಕೆಲವು ಬಗೆಗಳ ಎಲೆಗಳಲ್ಲಿ ಮುಳ್ಳುಗಳೇ ಇಲ್ಲ. ವಿವಿಧ ಬಗೆಗಳಲ್ಲಿನ ವ್ಯತ್ಯಾಸದಿಂದಾಗಿ ಅವನ್ನು ಬೇರೆ ಬೇರೆ ಪ್ರಭೇದಗಳೆಂದು ಭಾವಿಸಿರುವುದಲ್ಲದೆ ಕೇದಗೆಯನ್ನು ಬಹುರೂಪಿ (ಪಾಲಿಮಾರ್ಫಿಕ್) ಸಸ್ಯ ಎಂದು ಸಹ ಕರೆಯಲಾಗುತ್ತದೆ. ಕೇದಗೆಯ ವಿವಿಧ ಬಗೆಗಳಲ್ಲಿನ ವ್ಯತ್ಯಾಸ ಹಾಗೂ ಬಗೆಗಳ ಕ್ರಮಬದ್ಧ ಅಂತಸ್ತಿನ ಬಗ್ಗೆ ಹೆಚ್ಚಿನ ಅಧ್ಯಯನ ನಡೆಯುತ್ತಿದೆ.

ಪ್ರಭೇದಗಳು

[ಬದಲಾಯಿಸಿ]

ಭಾರತದಲ್ಲಿ ಮೇಲೆ ಹೇಳಿದ ಪ್ರಭೇದವೂ ಇದನ್ನೇ ಬಹುವಾಗಿ ಹೋಲುವ ಇನ್ನಿತರ 35 ಪ್ರಭೇದಗಳೂ ಬೆಳೆಯುತ್ತವೆ. ಉಳಿದ ಪ್ರಭೇದಗಳಲ್ಲಿ ಮುಖ್ಯವಾದವು-ಪ್ಯಾಂಡೇನಸ್ ಫೀಟಿಡಸ್ ಪ್ಯಾ, ಫರ್ಕೇಟಸ್, ಪ್ಯಾ, ಲಿರಾಮ್ ಮತ್ತು ಪ್ಯಾ, ಅಂಡಮಾನೆನ್ಸಿಯಮ್ ಇವೆಲ್ಲಕ್ಕೂ ರೂಢಿಯಲ್ಲಿ ಕೇದಗೆ ಎಂಬ ಹೆಸರೇ ಇದೆ.

ಕೇದಗೆಯ ಬಲು ಸಾರ್ವತ್ರಿಕ ಹಾಗೂ ಪ್ರಮುಖ ಪ್ರಭೇದವಾದ ಓಡರೇಟಿಸಿಮಸ್ ಸುಮಾರು 6 ಮೀಟರ್ ಎತ್ತರಕ್ಕೆ ಬೆಳೆಯುವ ಚಿಕ್ಕ ಮರ. ಮುಖ್ಯ ಕಾಂಡ ನೇರವಾಗಿ ಬೆಳೆಯುವುದಾದರೂ ಕಾಲಕ್ರಮೇಣ ಇದು ಒಂದು ಕಡೆ ಬಾಗುತ್ತದೆ. ಕಾಂಡದುದ್ದಕ್ಕೂ ಅಲ್ಲಲ್ಲೆ ದಪ್ಪನೆಯ ಹಾಗೂ ದೃಢವಾದ ಬೇರುಗಳು ಹುಟ್ಟಿ ಭೂಮಿಯ ಕಡೆಗೆ ಬೆಳೆದು ನೆಲದಲ್ಲಿ ಆಳವಾಗಿ ಇಳಿದು ಮುಖ್ಯ ಕಾಂಡ ನೆಲದ ಮೇಲೆ ಒರಗಿ ಬೀಳದಂತೆ ತಡೆದು ಕಾಂಡಕ್ಕೆ ಆಧಾರವನ್ನೀಯುತ್ತದೆ. ಇದರಿಂದಾಗಿ ಇವಕ್ಕೆ ಆಧಾರ ಬೇರುಗಳೆಂದು (ಸ್ಟಿಲ್ಟ್ ರೂಟ್ಸ್) ಹೆಸರಿದೆ. ಬೇರುಗಳು ಗಿಡಕ್ಕೆ ಆಧಾರವನ್ನು ಕೊಡುವುದು ಮಾತ್ರವಲ್ಲ ಮಣ್ಣು ಸುಲಭವಾಗಿ ಕುಸಿಯದಂತೆಯೂ ತಡೆಯುತ್ತವೆ. ಮುಖ ಕಾಂಡದಿಂದ ಹೆಚ್ಚಿನ ಸಂಖ್ಯೆಯಲ್ಲಿ ರೆಂಬೆಗಳು ದಟ್ಟವಾಗಿ ಹೆಣೆದುಕೊಂಡು ಬೆಳೆಯುತ್ತವೆ. ಇದರಿಂದಾಗಿ ಇದು ಯಾವ ಪ್ರಾಣಿಯೂ ನುಸುಳಿ ಹೋಗಲಾರದಂಥ ಪೊದೆಯಾಗುತ್ತದೆ. ಕೇದಗೆಯ ಎಲೆಗಳ ಉದ್ದ ಸುಮಾರು 1-1.5 ಮೀ., ಆಕಾರ ಕತ್ತಿಯಂತೆ. ಇವುಗಳ ಬಣ್ಣ ನೀಲಿಮಿಶ್ರಿತ ಹಸಿರು. ಮೊನಚಾದ ತುದಿ, ಚರ್ಮದಂತೆ ಒರಟಾಗಿರುವ ಮೇಲ್ಮ್ಯೆ, ಮಧ್ಯನರ ಹಾಗೂ ಅಂಚಿನ ಮೇಲೆ ಚಿಕ್ಕ ಮುಳ್ಳುಗಳಿರುವುದು ಎಲೆಗಳ ವೈಶಿಷ್ಟ್ಯ. ಕೆಲವು ಬಗೆಗಳಲ್ಲಿ ಮುಳ್ಳುಗಳಿಲ್ಲ. ಹೂಗಳು ಏಕಲಿಂಗಿಗಳು. ಗಂಡು ಮತ್ತು ಹೆಣ್ಣು ಹೂಗಳು ಬೇರೆ ಬೇರೆ ಹೂಗೊಂಚಲುಗಳಲ್ಲಿ ಸಮಾವೇಶಗೊಂಡಿವೆ. ಹೂಗೊಂಚಲು ತಾಳಗುಚ್ಛ ಮಾದರಿಯದು. ಗಂಡು ತಾಳಗುಚ್ಛ 25-50 ಸೆಂಮೀ. ಉದ್ದವಿದ್ದು 5-10 ಸೆಂಮೀ. ಉದ್ದದ ಅನೇಕ ಕದಿರು ಗೊಂಚಲುಗಳನ್ನೊಳಗೊಂಡಿದೆ. ಉದ್ದನೆಯ ಹಾಗೂ ಬಿಳಿಯ ಇಲ್ಲವೆ ತಿಳಿಹಳದಿ ಬಣ್ಣದ ಕವಚವೊಂದು ತಾಳಗುಚ್ಛವನ್ನು ಆವರಿಸಿದೆ. ಈ ಕವಚ ಬಹಳ ಸುಗಂಧಪೂರಿತವಾಗಿದೆ. ಗಂಡುಹೂಗಳು ಬಲು ಚಿಕ್ಕ ಗಾತ್ರದವು. ಒಂದೊಂದರಲ್ಲೂ ಅನೇಕ ಕೇಸರಗಳಿವೆ. ಹೆಣ್ಣು ತಾಳಗುಚ್ಛ ಸಾಮಾನ್ಯವಾಗಿ ಗಿಡದ ತುದಿಯಲ್ಲಿ ಹುಟ್ಟುತ್ತದೆ. ಒಂದೊಂದು ಗೊಂಚಲಿನಲ್ಲೂ ಅಸಂಖ್ಯಾತ ಹೆಣ್ಣು ಹೂಗಳಿವೆ. ಒಂದು ಹೂಗೊಂಚಲಿನ ಎಲ್ಲ ಅಂಡಾಶಯಗಳೂ ಗರ್ಭಧಾರಣೆಯಾದ ಮೇಲೆ ಒಟ್ಟಿಗೆ ಕೂಡಿಕೊಂಡು ಬೆಳೆದು ಗುಂಡನೆಯ ಇಲ್ಲವೆ ದೀರ್ಘ ಚತುರಸ್ರಾಕಾರದ ಒಂದೇ ಫಲವಾಗಿ ರೂಪುಗೊಳ್ಳುತ್ತವೆ. ಈ ರೀತಿ ಉತ್ಪತ್ತಿಯಾಗುವ ಫಲಕ್ಕೆ ಸಂಯುಕ್ತ ಫಲ ಎಂದು ಹೆಸರು. ಹಲಸಿನ ಹಣ್ಣಿನಲ್ಲಿರುವಂತೆ ಇದರ ಮೇಲ್ಮೈಯಲ್ಲಿ ಕಾಣುವ ಅನೇಕ ಸಣ್ಣ ಸಣ್ಣ ಗುಬುಟುಗಳಿಂದಾಗಿ ಇದನ್ನು ಸಂಯುಕ್ತಫಲವೆಂದು ಗುರುತಿಸಬಹುದು. ಒಂದೊಂದು ಗುಬುಟೂ ಒಂದೊಂದು ಅಷ್ಟಿಫಲ. ಫಲ ಚಿಕ್ಕದಾಗಿದ್ದಾಗ ಹಸಿರು ಬಣ್ಣದ್ದಾಗಿದ್ದು ಮಾಗಿದಂತೆ ಹಳದಿ ಇಲ್ಲವೆ ಕೆಂಪು ಬಣ್ಣಕ್ಕೆ ತಿರುಗುತ್ತದೆ.

ಕೇದಗೆಯ ಸ್ವಾಭಾವಿಕ ಸಂತಾನಾಭಿವೃದ್ಧಿ ಅಬೀಜ ಪುನರುತ್ಪತ್ತಿ ಕ್ರಮದಿಂದ ನಡೆಯುವುದೇ ಹೆಚ್ಚು. ಗಿಡದ ರೆಂಬೆಗಳು ಬೆಳೆಯುತ್ತ ಹೋದಂತೆ ಅಲ್ಲಲ್ಲೆ ಬೇರುಗಳು ಹುಟ್ಟಿಕೊಂಡು ರೆಂಬೆಗಳು ಮೂಲಸಸ್ಯದಿಂದ ಬೇರ್ಪಟ್ಟು ಹೊಸ ಸಸ್ಯಗಳಾಗುತ್ತವೆ. ಇದೇ ಗುಣವನ್ನು ಉಪಯೋಗಿಸಿಕೊಂಡು ಕೇದಗೆಯನ್ನು ಬೆಳೆಸಬಹುದು. ಕಾಂಡವನ್ನು ಒಂದೊಂದೇ ಗೆಣ್ಣುಳ್ಳ ಅನೇಕ ತುಂಡುಗಳನ್ನಾಗಿ ಕತ್ತರಿಸಿ ನೆಟ್ಟು ಹೊಸಗಿಡಗಳನ್ನು ಉತ್ಪಾದಿಸಬಹುದು. ಒಳ್ಳೆಯ ಬೆಳೆವಣಿಗೆ ಫಲವತ್ತಾದ ಹಾಗೂ ನೀರಿನ ಸೌಕರ್ಯ ಚೆನ್ನಾಗಿರುವ ಭೂಮಿ ಅತ್ಯಗತ್ಯ. ತುಂಡುಗಳು ನೆಟ್ಟ 3-4 ವರ್ಷಗಳಲ್ಲಿ ಬೆಳೆದು ಹೂಬಿಡಲು ಪ್ರಾರಂಭಿಸುತ್ತವೆ. ಹೂ ಬಿಡುವ ಕಾಲ ಸಾಮಾನ್ಯವಾಗಿ ಜುಲೈಯಿಂದ ಅಕ್ಟೋಬರ್ ತಿಂಗಳುಗಳ ನಡುವಣ ಕಾಲ. ಪೂರ್ಣ ಬಲಿತ ಗಿಡಗಳು ವರ್ಷಕ್ಕೆ 30-40 ಹೂಗೊಂಚಲುಗಳನ್ನು ಬಿಡುತ್ತವೆ.

ಕೇದಗೆಗೆ ಸಾಧಾರಣವಾಗಿ ಯಾವ ಬಗೆಯ ರೋಗಗಳಾಗಲಿ, ಕೀಟಗಳಾಗಲಿ ಅಂಟುವುದಿಲ್ಲ. ಆದರೆ ಅಧಿಕ ತೇವ ಮತ್ತು ಉಷ್ಣತೆ ಇರುವ ಋತುಗಳಲ್ಲಿ ಇದರ ಎಲೆಗಳಿಗೆ ಆಲ್ಟರ್ನೇರಿಯ ಎಂಬ ಹಾನಿಕಾರಕವಾದ ಬೂಷ್ಟು ತಗಲುವುದುಂಟು. ಇದರಿಂದ ಎಲೆಗಳ ಮೇಲೆಲ್ಲ ಕಪ್ಪು ಕಲೆಗಳು ಕಾಣಿಸಿಕೊಂಡು ಕ್ರಮೇಣ ಈ ಜಾಗಗಳಲ್ಲಿ ತೂತುಗಳುಂಟಾಗಿ ಎಲೆಗಳು ಬಿದ್ದು ಹೋಗುತ್ತವೆ. ಇದರ ಫಲವಾಗಿ ಹೂಗಳ ಉತ್ಪತ್ತಿಯೂ ಕ್ಷೀಣಿಸುತ್ತದೆ.

ಉಪಯೋಗಗಳು

[ಬದಲಾಯಿಸಿ]

ಕೇದಗೆ ತನ್ನ ಸುಗಂಧಪೂರಿತ ಹೂಗಳಿಂದಾಗಿ ಬಹಳ ಜನಪ್ರಿಯವಾಗಿದೆ. ಭಾರತ ಮತ್ತು ಬರ್ಮಗಳಲ್ಲಿ ಇದರ ಗಂಡು ತಾಳಗುಚ್ಛದ ಕವಚಗಳನ್ನು ಹೆಣ್ಣುಮಕ್ಕಳ ಕೇಶಾಲಂಕಾರಕ್ಕಾಗಿ ಬಳಸುತ್ತಾರೆ. ಅಲ್ಲದೆ ಈ ಹೊದಿಕೆಗಳಿಂದ ಕೆವ್ಡ ಅತ್ತರು ಎಂಬ ಹೆಸರಿನ ಸುಗಂಧ ತೈಲವನ್ನು ತೆಗೆಯುತ್ತಾರೆ. ಹೂಗೊಂಚಲಿನ ಹೊದಿಕೆಗಳನ್ನು ಬೇರ್ಪಡಿಸಿ, ಆವಿ ಆಸವೀಕರಣಗೊಳಿಸಿ ಹೊರ ಬರುವ ಹಬೆಯನ್ನು ಶ್ರೀಗಂಧ ತೈಲದಲ್ಲೊ ಇಲ್ಲವೆ ಶುದ್ಧವಾದ ಪ್ಯಾರಫಿನ್ ಎಣ್ಣೆಯಲ್ಲೂ ಕರಗಿಸಿದರೆ ದೊರೆಯುವ ತೈಲವೇ ಕೆವ್ಡ ಅತ್ತರು. ಇದಕ್ಕೆ ಆಹ್ಲಾದಕರ ಸುಗಂಧ ಉಂಟು. ಈ ತೈಲ ಅತ್ಯಂತ ಬೆಲೆಬಾಳುವಂಥದೂ ಆಗಿದೆ. ಆಸವೀಕರಣದಲ್ಲಿ ಬಳಸಲಾಗುವ ಗಂಧದೆಣ್ಣೆಯ ಪರಿಮಾಣ ಹಾಗೂ ಕೇದಗೆಯ ಬಗೆಯನ್ನವಲಂಬಿಸಿ ಕೆವ್ಡ ಅತ್ತರಿನ ಗುಣ ವ್ಯತ್ಯಾಸವಾಗುತ್ತದೆ. ಆಸವೀಕರಣದಲ್ಲಿ ಉತ್ಪತ್ತಿಯಾಗುವ ಹಬೆಯನ್ನು ಗಂಧದೆಣ್ಣೆಯಲ್ಲಿ ಕರಗಿಸದೆ ಬರಿಯ ನೀರಿನಲ್ಲಿ ಕರಗಿಸಿದರೆ ಕೆವ್ಡದ್ರವ ದೊರೆಯುತ್ತದೆ. ಕೆವ್ಡ ಅತ್ತರು ನೀರಿನೊಂದಿಗೆ ಸುಲಭವಾಗಿ ಬೆರೆಯಬಲ್ಲದು. ಇದರಲ್ಲಿ ್ನ-ಫೀನೈಲ್ ಈಥೈಲ್ ಆಲ್ಕೊಹಾಲ್, ಮೀಥೈಲ್ ಈಥರ್, ಫೀನೈಲ್ ಈಥರ್, ಅಸಿಟೇಟ್, ಸಿಟ್ರಾಲ್ ಮುಂತಾದ ಅನೇಕ ರಾಸಾಯನಿಕ ಘಟಕಗಳಿವೆ. ಕೆವ್ಡ ಅತ್ತರು ಬಹಳ ಹಿಂದಿನಿಂದಲೂ ಅಲಂಕಾರ ವಸ್ತುವಾಗಿ ಭಾರತದಲ್ಲಿ ಬಳಕೆಯಲ್ಲಿದೆ. ಇದನ್ನು ನೇರವಾಗಿ ಮಾತ್ರವಲ್ಲದೆ ಬೇರೆ ಸುಗಂಧ ದ್ರವ್ಯಗಳೊಂದಿಗೆ ಮಿಶ್ರ ಮಾಡಿಯೂ ಬಳಸಬಹುದು. ಅಗರಬತ್ತಿ ತಯಾರಿಕೆಯಲ್ಲೂ ಸಿಹಿತಿಂಡಿ ಮತ್ತು ಪಾನೀಯಗಳಿಗೆ ಸುವಾಸನೆ ಕೊಡಲು ಇದನ್ನು ಬಳಸುವುದುಂಟು. ಕೇದಗೆಗೆ ಮೇಲೆ ಹೇಳಿದ ಉಪಯೋಗವಲ್ಲದೆ ಇತರ ಉಪಯೋಗಗಳು ಉಂಟು. ಇದರ ತುದಿ ಮೊಗ್ಗನ್ನು ಎಲೆ ಕೋಸಿನಂತೆ ತರಕಾರಿಯಾಗಿ ಉಪಯೋಗಿಸುತ್ತಾರೆ. ಫಿಲಿಫೀನ್ಸ್ ದ್ವೀಪಗಳ ನಿವಾಸಿಗಳಲ್ಲಿ ಇದರ ಎಲೆಗಳನ್ನು ಆಹಾರವಾಗಿ ಬಳಸುವ ರೂಢಿಯಿದೆ. ಬರಗಾಲದ ಸಂದರ್ಭಗಳಲ್ಲಿ ಇದರ ಕಾಯಿಗಳನ್ನು ತಿನ್ನುತ್ತಾರೆಂದು ಹೇಳಲಾಗಿದೆ. ಕೇದಿಗೆಯ ಎಲೆಗಳನ್ನು ಗುಡಿಸಲುಗಳ ಛಾವಣಿ, ಮುಸುಕು, ಚಾಪೆ, ಹಗ್ಗ, ಬುಟ್ಟಿ, ಕೊಡೆ ಮತ್ತು ಒಂದು ಬಗೆಯ ಒರಟು ಕಾಗದ ಮುಂತಾದವನ್ನು ಮಾಡಲೂ ಬಳಸುವುದುಂಟು. ಅಲ್ಲದೆ, ಎಲೆಗಳಿಂದ ಒಂದು ಬಗೆಯ ನಾರನ್ನು ತೆಗೆದು ಚೀಲಗಳನ್ನು ಹೆಣೆಯುವ ರೂಢಿ ಕೆಲವೆಡೆ ಇದೆ. ಕೇದಗೆಯ ಬೇರು ಕೂಡ ಇದೇ ತೆರನ ಉಪಯೋಗಕ್ಕೆ ಬರುತ್ತದೆ. ಬೇರುಗಳಿಂದ ಕುಂಚಗಳ ಹಿಡಿಗಳನ್ನೂ ತಯಾರಿಸಬಹುದು. ಕೇದಗೆಗೆ ಔಷಧೀಯ ಪ್ರಾಮುಖ್ಯವೂ ಉಂಟು. ಎಲೆಗಳನ್ನು ಕುಷ್ಠ, ಸಿಡಿಬು ಮತ್ತು ಕೆಲವು ಚರ್ಮ ರೋಗಗಳನ್ನು ಗುಣಪಡಿಸಲು ಉಪಯೋಗಿಸುತ್ತಾರೆ. ಹೃದಯ ಮತ್ತು ಮಿದುಳಿನ ಕೆಲವು ರೋಗಗಳನ್ನು ಶಮನಗೊಳಿಸುವ ಶಕ್ತಿಯೂ ಎಲೆಗಳಿಗಿದೆ. ಕೇಸರಗಳಿಂದ ತಯಾರಿಸಲಾಗುವ ಔಷಧಿಯನ್ನು ಕಿವಿ ನೋವು, ತಲೆ ನೋವು ಮತ್ತು ರಕ್ತ ಸಂಬಂಧವಾದ ಕಾಯಿಲೆಗಳಲ್ಲಿ ಬಳಸುತ್ತಾರೆ. ಹೂಗೊಂಚಲಿನಿಂದ ತೆಗೆದ ಸಾರ ಪ್ರಾಣಿಗಳ ಸಂಧಿವಾತ ರೋಗದ ಉಪಶಮನಕಾರಿ ಎನ್ನಿಸಿದೆ.

ಕೇದಗೆ ಇನ್ನಿತರ ಪ್ರಭೇದಗಳನ್ನು ಅಲಂಕಾರ ಸಸ್ಯಗಳಾಗಿ ಕುಂಡದಲ್ಲಿ ಬಳಸುವುದುಂಟು. ಇವುಗಳಲ್ಲಿ ಮುಖ್ಯವಾದುವು ಪ್ಯಾಂಡೇನಸ್ ಯೂಟಲಿಸ್, ಪ್ಯಾ. ವೆಚಿಯೈ, ಪ್ಯಾ. ಗ್ರಾಮಿನಿಫೋಲಿಯಸ್ ಮುಂತಾದುವು.

"https://kn.wikipedia.org/w/index.php?title=ಕೇದಗೆ&oldid=891617" ಇಂದ ಪಡೆಯಲ್ಪಟ್ಟಿದೆ