ಪುಂಕೇಸರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬಿಳಿ ತಂತುಗಳು ಮತ್ತು ಪರಾಗಕೋಶಗಳಿರುವ ಪುಂಕೇಸರಗಳು

ಪುಂಕೇಸರವು ಪರಾಗವನ್ನು ಉತ್ಪಾದಿಸುವ ಹೂವಿನ ಸಂತಾನೋತ್ಪತ್ತಿ ಅಂಗ. ಪುಂಕೇಸರಗಳು ಒಟ್ಟಾಗಿ ಕೇಸರಗುಚ್ಛವನ್ನು ರಚಿಸುತ್ತವೆ.[೧] ಪುಂಕೇಸರವು ಸಾಮಾನ್ಯವಾಗಿ ತಂತು ಎಂಬ ಕಾಂಡ ಮತ್ತು ಸೂಕ್ಷ್ಮಬೀಜಕಧಾರಿಗಳಿರುವ ಪರಾಗಕೋಶವನ್ನು ಹೊಂದಿರುತ್ತದೆ. ಬಹಳ ಸಾಮಾನ್ಯವಾಗಿ ಪರಾಗಕೋಶಗಳು ಎರಡು ಪಾಲೆಗಳನ್ನು ಹೊಂದಿದ್ದು ತಂತುಗಳಿಗೆ ಪರಾಗಕೋಶದ ಕೆಳಭಾಗ ಅಥವಾ ಮಧ್ಯ ಪ್ರದೇಶಕ್ಕೆ ಜೋಡಣೆಯಾಗಿರುತ್ತವೆ. ಪಾಲೆಗಳ ನಡುವಿನ ಬರಡಾದ ಅಂಗಾಂಶವನ್ನು ಸಂಯೋಜಕವೆಂದು ಕರೆಯಲಾಗುತ್ತದೆ. ಪರಾಗಕಣವು ಸೂಕ್ಷ್ಮಬೀಜಕಧಾರಿಯಲ್ಲಿನ ಸೂಕ್ಷ್ಮ ಬೀಜಾಣುವಿನಿಂದ ವಿಕಸನಗೊಳ್ಳುತ್ತದೆ ಮತ್ತು ಪುರುಷ ಗಮೀಟಫ಼ೈಟ್‍ನ್ನು ಹೊಂದಿರುತ್ತದೆ.

ಕೇಸರಗುಚ್ಛವು ಅರ್ಧದಷ್ಟು ಪುಂಕೇಸರವನ್ನು (ಅಂದರೆ ಏಕಮಾತ್ರ ಕಿರುಕುಳಿ) ಅಥವಾ ೩,೪೮೨ ದಷ್ಟು ಸಂಖ್ಯೆಯ ಪುಂಕೇಸರಗಳನ್ನು ಹೊಂದಿರಬಹುದು. ಸಸ್ಯಗಳ ವಿವಿಧ ಪ್ರಜಾತಿಗಳಲ್ಲಿನ ಕೇಸರಗುಚ್ಛವು ಬಹಳ ವೈವಿಧ್ಯಮಯ ಮಾದರಿಗಳನ್ನು ರೂಪಿಸುತ್ತದೆ, ಮತ್ತು ಇವುಗಳಲ್ಲಿ ಕೆಲವು ಅತಿಹೆಚ್ಚು ಸಂಕೀರ್ಣವಾಗಿರುತ್ತವೆ. ಇದು ಸಾಮಾನ್ಯವಾಗಿ ಜಾಯಾಂಗವನ್ನು ಸುತ್ತುವರಿಯುತ್ತದೆ ಮತ್ತು ಪುಷ್ಪದಳದಿಂದ ಸುತ್ತುವರಿಯಲ್ಪಟ್ಟಿರುತ್ತದೆ. ಕೆಲವು ಪ್ರಜಾತಿಗಳು ಒಂದು ದೃಷ್ಟಿಯಲ್ಲಿ ಅಸಾಧಾರಣವಾಗಿವೆ, ಹೇಗೆಂದರೆ ಇವುಗಳಲ್ಲಿ ಜಾಯಾಂಗಗಳು ಕೇಸರಗುಚ್ಛವನ್ನು ಸುತ್ತುವರಿಯುತ್ತವೆ.

ಸಸ್ಯದ ಪ್ರಜಾತಿಯನ್ನು ಅವಲಂಬಿಸಿ, ಒಂದು ಹೂವಿನಲ್ಲಿನ ಕೆಲವು ಅಥವಾ ಎಲ್ಲ ಪುಂಕೇಸರಗಳು ಪಕಳೆಗಳು ಅಥವಾ ಹೂವಿನ ಅಕ್ಷಕ್ಕೆ ಜೋಡಣೆಯಾಗಿರಬಹುದು. ಅವು ಮುಕ್ತವಾಗಿ ನಿಂತಿರಲೂಬಹುದು ಅಥವಾ ಒಂದಕ್ಕೊಂದು ಬೆಸೆದುಕೊಂಡಿರಬಹುದು. ಇದರಲ್ಲಿ ಎಲ್ಲ ಪುಂಕೇಸರಗಳದ್ದಾಗಿರದೇ ಕೆಲವು ಪುಂಕೇಸರಗಳು ಬೆಸೆದುಕೊಂಡಿರಬಹುದು. ತಂತುಗಳು ಬೆಸೆದುಕೊಂಡಿರಬಹುದು ಮತ್ತು ಪರಾಗಕೋಶಗಳು ಮುಕ್ತವಾಗಿರಬಹುದು, ಅಥವಾ ತಂತುಗಳು ಮುಕ್ತವಾಗಿದ್ದು ಪರಾಗಕೋಶಗಳು ಬೆಸೆದುಕೊಂಡಿರಬಹುದು. ಎರಡು ಕಿರುಕುಳಿಗಳಿರುವ ಬದಲಾಗಿ, ಪುಂಕೇಸರದ ಒಂದು ಕಿರುಕುಳಿಯು ವಿಕಸನಗೊಳ್ಳುವಲ್ಲಿ ವಿಫಲವಾಗಬಹುದು, ಅಥವಾ ಪರ್ಯಾಯವಾಗಿ ವಿಕಸನದಲ್ಲಿ ತಡವಾಗಿ ಎರಡೂ ಕಿರುಕುಳಿಗಳು ವಿಲೀನಗೊಂಡು ಒಂದು ಏಕಮಾತ್ರ ಕಿರುಕುಳಿಯನ್ನು ನೀಡಬಹುದು. ಪುಂಕೇಸರ ಬೆಸುಗೆಯ ವಿಪರೀತ ಸಂದರ್ಭಗಳು ಕುಕುರ್ಬಿಟೇಸಿ ಕುಟುಂಬದಲ್ಲಿನ ಕೆಲವು ಪ್ರಜಾತಿಗಳಲ್ಲಿ ಆಗುತ್ತವೆ. ಫ಼ಿಲ್ಯಾಂಥಸ್ ಕುಲದ ಸೈಕ್ಲ್ಯಾಂಥೆರಾ ವಿಭಾಗದಲ್ಲಿ, ಪುಂಕೇಸರಗಳು ಜಾಯಾಂಗದ ಸುತ್ತ ಏಕ ಕಿರುಕುಳಿಯಿರುವ ವರ್ತುಲವನ್ನು ರಚಿಸುತ್ತವೆ.

ಉಲ್ಲೇಖಗಳು[ಬದಲಾಯಿಸಿ]

  1. Beentje, Henk (2010). The Kew Plant Glossary. Richmond, Surrey: Royal Botanic Gardens, Kew. ISBN 978-1-84246-422-9., p. 10
"https://kn.wikipedia.org/w/index.php?title=ಪುಂಕೇಸರ&oldid=888135" ಇಂದ ಪಡೆಯಲ್ಪಟ್ಟಿದೆ