ವಿಷಯಕ್ಕೆ ಹೋಗು

ಎಲೆಕೋಸು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಎಲೆಕೋಸು

ಪೋಷಕಾಂಶಗಳು[ಬದಲಾಯಿಸಿ]

೧೦೦ ಗ್ರಾಂ ಎಲೆಕೋಸಿನಲ್ಲಿರುವ ಪೋಷಕಾಂಶಗಳು

ಮೇದಸ್ಸು ೦.೧ ಗ್ರಾಂ
ಕಾರ್ಬೋಹೈಡ್ರೇಟ್ ಗ್ರಾಂ
ಮೆಗ್ನೀಶಿಯಂ %
ಸೋಡಿಯಂ ೧೮ ಮಿಲಿಗ್ರಾಂ
ಪೊಟ್ಯಾಶಿಯಂ ೧೭೦ ಮಿಲಿಗ್ರಾಂ
ಕಬ್ಬಿಣ %
ಕ್ಯಾಲೊರಿ ೨೫ ಗ್ರಾಂ
ನಾರಿನಾಂಶ ೨.೫ ಗ್ರಾಂ
ಎಲೆಕೋಸು ಮತ್ತು ಅದರ ಅಡ್ಡ ಕೊಯ್ತ

ಎಲೆಕೋಸು ಬ್ರಾಸಿಕೇಸೀ (ಅಥವಾ ಕ್ರೂಸಿಫರೇ) ಕುಟುಂಬದ ಬ್ರಾಸೀಕಾ ಆಲರೇಸಿಯಾ ಲಿನ್ ಜಾತಿಯ (ಕ್ಯಾಪಿಟೇಟಾ ಗುಂಪು) ಒಂದು ಜನಪ್ರಿಯ ಕೃಷಿ ಪ್ರಭೇದ, ಮತ್ತು ಒಂದು ಹಸಿರು ಎಲೆ ತರಕಾರಿಯಾಗಿ ಬಳಸಲ್ಪಡುತ್ತದೆ. ಅದು ಒಂದು ಚಿಕ್ಕ ಕಾಂಡದ ಮೇಲೆ, ಸಾಮಾನ್ಯವಾಗಿ ಹಸಿರು ಆದರೆ ಕೆಲವು ಪ್ರಭೇದಗಳಲ್ಲಿ ಕೆಂಪು ಅಥವಾ ನೇರಳೆ ಬಣ್ಣದ, ಎಳೆಯಿದ್ದಾಗ ವಿಶಿಷ್ಟವಾಗಿ ಒತ್ತಾಗಿರುವ, ಗೋಳಾಕಾರದ ಗುಚ್ಛವಾಗಿ ಕಾಣುವ, ಎಲೆರಾಶಿಯಿಂದ ಆವೃತವಾಗಿ ವಿಶಿಷ್ಟವಾಗಿರುವ ಒಂದು ಎಲೆಎಲೆಯಾದ, ದ್ವೈವಾರ್ಷಿಕ, ದ್ವಿದಳ ಹೂಬಿಡುವ ಸಸ್ಯ. ಎಲೆಕೋಸಿನ ಎಲೆಗಳು ಹಲವುವೇಳೆ ಬ್ಲೂಮ್ ಎಂದು ಕರೆಯಲಾಗುವ ಒಂದು ಮೃದು, ಪುಡಿಪುಡಿಯಾದ, ಮೇಣದಂತಹ ಲೇಪವನ್ನು ತೋರುತ್ತವೆ.

ಎಲೆಕೋಸು ಒಂದು ತರಕಾರಿಸಸ್ಯ (ಕ್ಯಾಬೇಜ್). ಇದು ಒಂದು ಜನಪ್ರಿಯ ತರಕಾರಿ, ಆಹಾರವನ್ನು ಸಂಗ್ರಹಿಸಿಕೊಂಡಿರುವ ಇದರ ಬಿಳಿಯ ಎಲೆಗಳು ಒಂದರ ಮೇಲೊಂದು ಕವುಚಿಕೊಂಡು ಗೆಡ್ಡೆಯ ರೂಪವನ್ನು ತಾಳಿರುತ್ತವೆ. ಈ ಗೆಡ್ಡೆಯೇ ಹುಳಿ, ಪಲ್ಯ ಇತ್ಯಾದಿ ಅಡಿಗೆಗಳಿಗೆ ಬಳಸುವ ತರಕಾರಿ. ವಿಶೇಷವಾಗಿ ಯುರೋಪ್ ಮತ್ತು ಏಷ್ಯ ಖಂಡಗಳ ತೀರ ಪ್ರದೇಶಗಳಲ್ಲಿ ಬಹು ಹಿಂದಿನಿಂದಲೂ ವ್ಯವಸಾಯದಲ್ಲಿದೆ. ಹಸಿಯ ಕೋಸಿನಲ್ಲಿ ಎ, ಬಿ ಮತ್ತು ಬಿ2 ಜೀವಾತು ಗಳಿವೆ. ಸಿ ಜೀವಾತುವಂತೂ ಅತಿ ಹೆಚ್ಚಾ ಗಿದೆ. ಕೋಸನ್ನು ಬೇಯಿಸಿದರೆ ಬಿ ಮತ್ತು ಬಿ2 ಅಂಶಗಳು ನಾಶವಾಗಿ ಎ ಮತ್ತು ಸಿ ಗಳು ಅತ್ಯಲ್ಪ ಪ್ರಮಾಣದಲ್ಲಿ ಉಳಿಯುತ್ತವೆ. ಆದ್ದರಿಂದ ಕೋಸನ್ನು ಹಸಿಯಾಗಿ ಅಥವಾ ಅರೆಬೇಯಿಸಿ ಉಪಯೋಗಿಸಬೇಕು. ಪಾಶ್ಚಾತ್ಯರಲ್ಲಿ ಬೇಯಿಸದೆ ತಿನ್ನುವ ಪದ್ದತಿ ಹೆಚ್ಚು. ಹೊರಭಾಗದ ಹಸಿರು ಎಲೆಗಳಲ್ಲಿ ಇರುವಷ್ಟು ಎ ಅಂಶ ಒಳಭಾಗದ ಎಲೆಗಳಲ್ಲಿ ಇಲ್ಲ. ಕೋಸು ಜಾತಿಯ ಗಿಡಗಳ ಬೆಳೆವಣಿಗೆಗೆ ಜೌಗು ಪ್ರದೇಶಕ್ಕಿಂತ ಮರಳು ಮಿಶ್ರವಾದ ಕೆಬ್ಬೆ ನೆಲ ಅಥವಾ ಗೋಡು ಮಣ್ಣಿನ ಭೂಮಿ ಉತ್ತಮ. ನೀರು ನಿಲ್ಲದೆ ಇಂಗಿ ಹೋಗುವ ಭೂಮಿಯಲ್ಲಿ ಚೆನ್ನಾಗಿ ಬೆಳೆಯುತ್ತದೆ. ಭೂಮಿಯನ್ನು ಒಂದು ಮೀನಷ್ಟು ಆಳವಾಗಿ ಅಗೆದು ಮಣ್ಣಿನ ಹೆಂಟೆಗಳನ್ನು ಪುಡಿಮಾಡಬೇಕು. ಚೆನ್ನಾಗಿ ಕೊಳೆತ ಕೊಟ್ಟಿಗೆ ಗೊಬ್ಬರವನ್ನು 304.8 ಮೀ ಗಳಿಗೆ ಒಂದು ಗಾಡಿಯಂತೆ ಅಥವಾ ಎಕರೆಗೆ 10 ಕಿಗ್ರಾಂ ನಂತೆ ಹಾಕಿ ಭೂಮಿಯನ್ನು ಸಿದ್ಧಪಡಿಸಬೇಕು. ಒಟ್ಟಲು ಪಾತಿಗಳಲ್ಲಿ ಬೀಜವನ್ನು ತೆಳುವಾಗಿ ಬಿತ್ತಿ ಸಸಿಗಳು 0.3048 ಮೀ ಬೆಳೆದು ನಾಲ್ಕರಿಂದ ಆರು ಎಲೆಗಳು ಕಾಣಿಸಿಕೊಂಡ ಕೂಡಲೆ ಜಾಗರೂಕತೆಯಿಂದ ತೆಗೆದು, ಸಿದ್ಧಪಡಿಸಿದ ಭೂಮಿಯಲ್ಲಿ ನೆಡಬೇಕು. ಸಾಲಿನಿಂದ ಸಾಲಿಗೆ ಎರಡಡಿ ಅಂತರ ಬಿಟ್ಟು ಸಸಿಯಿಂದ ಸಸಿಗೆ ಒಂದೂವರೆ ಅಡಿ ಅಂತರದಲ್ಲಿ ಒಂದೊಂದಾಗಿ ನೆಡಬೇಕು. ಬೇಸಗೆಯಲ್ಲಿ ನಾಲ್ಕು ದಿನಗಳಿಗೊಮ್ಮೆ ನೀರನ್ನು ಹಾಕಬೇಕು. ಇದಕ್ಕೆ ಮೀನಿನ ಗೊಬ್ಬರವನ್ನು ಉಪಯೋಗಿಸುವುದು ಒಳ್ಳೆಯದು. ಅದರಿಂದ ಗೆಡ್ಡೆಗಳು ದೊಡ್ಡವಾಗಿಯೂ ರುಚಿಕರವಾಗಿಯೂ ಆಗುತ್ತವೆ. ಒಟ್ಟಲು ಪಾತಿಯಿಂದ ಎಳೆ ಸಸಿಗಳನ್ನು ಬದಲಾಯಿಸುವಾಗ ತಂಪಾದ ಸಂಜೆಯಲ್ಲಿ, ಬೇರು ಮತ್ತು ಸ್ವಲ್ಪ ಮಣ್ಣಿನ ಸಹಿತವಾಗಿ ಸಸಿಗಳನ್ನು ತೆಗೆದು ಹೊಸ ಪಾತಿಗಳಲ್ಲಿ ನೆಟ್ಟು ನೀರನ್ನು ಒದಗಿಸಬೇಕು. ಹಣ್ಣೆಲೆಗಳನ್ನು ಆಗಾಗ್ಗೆ ತೆಗೆಯಬೇಕು. ಆಗಾಗ್ಗೆ ಮಣ್ಣನ್ನು ಕೆದಕಿ ಕಳೆ ತೆಗೆಯಬೇಕು. ಮಳೆ ಬಂದಾಗ ಸಸಿಗಳಿಗೆ ಅಪಾಯವಾಗದಂತಿರಲು ಮಾಡಲು ಸಸಿಗಳನ್ನು ಬದುಗಳ ಮೇಲೆ ನೆಡುವುದು ಉತ್ತಮ. ಸಸಿಗಳು 30 ಸೆಂಮೀ ಎತ್ತರ ಬೆಳೆದಾಗ ಬುಡದ ಮಣ್ಣನ್ನು ಕೆದಕಿ, ಬುಡದ ಸುತ್ತಲೂ ಗೋಪುರದಂತೆ ಮಣ್ಣನ್ನು ಏರಿ ಹಾಕಬೇಕು. ಬಿತ್ತನೆ ಮಾಡಿದ ಮೂರರಿಂದ ಮೂರುವರೆ ತಿಂಗಳಲ್ಲಿ ಕೋಸುಗೆಡ್ಡೆಗಳು ಕೊಯ್ಲಿಗೆ ಸಿದ್ಧವಾಗುತ್ತವೆ. ಕೋಸಿನಲ್ಲಿ ಜಾಗ್ರತೆ ಫಲ ಬಿಡುವ ನಿಧಾನವಾಗಿ ಫಲಬಿಡುವ ಎಂಬ ಎರಡು ಬಗೆಗಳಿವೆ. ಸಕ್ಕರೆ ಎಲೆ ಎಂಬುದು ಮತ್ತೊಂದು ವಿಧದ ಕೋಸು. ಡ್ರಂಹೆಡ್ ಎಂಬ ಜಾತಿಯ ಕೋಸಿನ ಎಲೆಗಳು ಸಿಹಿಯಾಗಿರುತ್ತವೆ. ಕೆಂಪು ಕೋಸನ್ನು ಉಪ್ಪಿನಕಾಯಿಗೆ ಉಪಯೋಗಿಸುತ್ತಾರೆ. ಎಲೆಕೋಸಿಗೆ ಅನೇಕ ವಿಧವಾದ ಕೀಟಗಳು ಮುತ್ತುತ್ತವೆ. ರೆಕ್ಕೆ ಹುಳುಗಳೂ ಅವುಗಳ ಮರಿಗಳೂ ಕ್ಯಾಟರ್ಪಿಲ್ಲರ್ ಈ ಬೆಳೆಗೆ ಮಾರಕವಾಗಿ ಪರಿಣಮಿಸುತ್ತವೆ. ಮುಂಜಾನೆಯಲ್ಲಿ ಫಾಲಿಡಾಲ್ ಮುಂತಾದ ರಾಸಾಯನಿಕಗಳನ್ನು ಸಿಂಪಡಿಸುವುದರಿಂದ ಹುಳುಗಳ ಹಾವಳಿಯನ್ನು ತಡೆಯಬಹುದು (ನೋಡಿ- ಕೋಸು). (ಎನ್.ಆರ್.ವಿ.)


ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:
"https://kn.wikipedia.org/w/index.php?title=ಎಲೆಕೋಸು&oldid=1201887" ಇಂದ ಪಡೆಯಲ್ಪಟ್ಟಿದೆ