ಗಂಧದ ಎಣ್ಣೆ
ಗಂಧದ ಮರದಿಂದ (ಸ್ಯಾಂಟಲಮ್ ಆಲ್ಬಮ್) ಪಡೆಯಲಾಗುವ ಸುಗಂಧಪೂರಿತ ಸಾರ ತೈಲ. ಸುಗಂಧದ್ರವ್ಯಗಳ ತಯಾರಿಕೆಯಲ್ಲೂ ಔಷಧಿಯಾಗೂ ಬಹಳ ಹೆಸರುವಾಸಿಯಾಗಿದೆ. ಪ. ಆಸ್ಟ್ರೇಲಿಯದಲ್ಲಿ ಬೆಳೆಯುವ ಸಾಂಟಲಮ್ ಜಾತಿಯ ಬೇರೆ ಪ್ರಭೇದಗಳಿಂದಲೂ ಗಂಧದ ಎಣ್ಣೆಯನ್ನು ತೆಗೆಯಬಹುದಾದರೂ ಇವುಗಳಿಂದ ಪಡೆಯುವ ಎಣ್ಣೆ ಭಾರತದಲ್ಲಿನ ಗಂಧದ ಮರದ ಎಣ್ಣೆಗಿಂತ ಕೊಂಚ ಭಿನ್ನಬಗೆಯದು. ಗುಣದಲ್ಲೂ ಕೊಂಚ ಕೆಳಮಟ್ಟದ್ದು.
ಪದಾರ್ಥಗಳು
[ಬದಲಾಯಿಸಿ]ಗಂಧದಮರದ ಕಾಂಡ ಹಾಗೂ ಬೇರುಗಳಲ್ಲಿ ಹೆಚ್ಚು ಪರಿಮಾಣದಲ್ಲೂ ಎಲೆ, ಕಾಯಿ ಮತ್ತಿತರ ಭಾಗಗಳಲ್ಲಿ ಕೊಂಚ ಪರಿಮಾಣದಲ್ಲೂ ಎಣ್ಣೆ ಇದೆ. ಬೇರು ಮತ್ತು ಕಾಂಡದ ಚೇಗುಭಾಗದಲ್ಲಿನ ಪರಿಮಾಣವೇ ಅತಿ ಹೆಚ್ಚು.. ಗಂಧದೆಣ್ಣೆಯನ್ನು ಲಾಭದಾಯಕ ಪ್ರಮಾಣದಲ್ಲಿ ಪಡೆಯಲು ಚೇಗುಭಾಗ ಕನಿಷ್ಠ 8 ಸೆಂ ಮೀ. ದಪ್ಪವಾದರೂ ಇರಬೇಕು. ಈ ಗಾತ್ರಕ್ಕೆ ಬೆಳೆಯಲು ಮರಕ್ಕೆ ಸುಮಾರು 30 ವರ್ಷ ಬೇಕಾಗುತ್ತದೆ.[೧]
ತಯಾರಿಕೆ
[ಬದಲಾಯಿಸಿ]- ಮೊದಲು ಗಂಧದ ಮರವನ್ನು ವಿದ್ಯುತ್ ಕೊಡಲಿಯಿಂದ ಸಣ್ಣ ಸಣ್ಣ ಚೂರುಗಳಾಗಿಯೂ ಅನಂತರ ಸಣ್ಣ ಸಣ್ಣ ಬಿಲ್ಲೆಗಳಾಗಿಯೂ ಕೊನೆಗೆ ಈ ಯಂತ್ರದ ಸಹಾಯದಿಂದ ಪುಡಿಯಾಗಿಯೂ ಮಾಡುತ್ತಾರೆ. ಹೀಗೆ ತಯಾರಿಸಿದ ಪುಡಿಯನ್ನು ಬಟ್ಟಿ ಇಳಿಸುವ ಅನೇಕ ಪಾತ್ರೆಗಳಿಗೆ ಹಾಕಿ ಆವಿ ಆಸವೀಕರಣಕ್ಕೆ ಒಳಪಡಿಸುತ್ತಾರೆ. ಇದರಿಂದಾಗಿ ಪುಡಿಯಲ್ಲಿರುವ ಎಣ್ಣೆ ಬೇರ್ಪಡುತ್ತದೆ. ತೈಲ ಮಿಶ್ರಿತ ಆವಿಯನ್ನು ಸಾಂದ್ರೀಕರಣಯಂತ್ರಗಳಿಗೆ ಹಾಯಿಸುತ್ತಾರೆ. ಅಲ್ಲಿ ನೀರಿನ ಆವಿ ಮತ್ತು ಎಣ್ಣೆಯ ಆವಿ ತಣ್ಣಗಾಗಿ ಅವುಗಳ ಮಿಶ್ರಣ ಸಂಗ್ರಹ ಪಾತ್ರೆಯಲ್ಲಿ ಶೇಖರವಾಗುತ್ತದೆ. ಮಿಶ್ರಣದಲ್ಲಿನ ಎಣ್ಣೆಯ ಭಾಗ ಮೇಲೆ ತೇಲುತ್ತಿರುತ್ತದೆ ಆಗಿಂದಾಗ್ಗೆ ಈ ಭಾಗವನ್ನು ಮಾತ್ರ ಬೇರೆ ತೆಗೆದು ನಿರ್ವಾತ ಪಾತ್ರೆಯಲ್ಲಿ ಕಾಸಿ ಶೋಧಿಸಿ, ಶುದ್ಧಿ ಮಾಡುತ್ತಾರೆ.
- ಆನಂತರ ಶುದ್ಧಿ ಮಾಡಿದ ಎಣ್ಣೆಯನ್ನು ಪ್ರಯೋಗ ಶಾಲೆಯಲ್ಲಿ ಪರೀಕ್ಷಿಸಿ ಗುಣಗಳೆಲ್ಲ ಸರಿ ಕಂಡುಬಂದಮೇಲೆ ಮಾರುವುದಕ್ಕೆ ಬೇಕಾದ ಶೀಸೆ ಇಲ್ಲವೆ ಅಲ್ಯೂಮಿನಿಯಮ್ ಡಬ್ಬಗಳಲ್ಲಿ ತುಂಬಿ ಮಾರುಕಟ್ಟೆಗಳಿಗೆ ಆಗ್‍ಮಾರ್ಕ್ ಸರ್ಟಿಫಿಕೇಟಿನೊಡನೆ ಕಳಿಸುತ್ತಾರೆ.
- ಗಂಧದ ಎಣ್ಣೆ ನಸುಹಳದಿ ಬಣ್ಣದ ಇಲ್ಲವೆ ಬಣ್ಣವಿಲ್ಲದ ಸ್ನಿಗ್ಧ ದ್ರವ. ತುಂಬ ಸುವಾಸನೆಯೂ ಕಟುರುಚಿಯೂ ಇದಕ್ಕೆ ಉಂಟು. ಆಲ್ಕೊಹಾಲಿನಲ್ಲಿ ವಿಲೀನವಾಗುತ್ತದೆ. ಗಂಧದೆಣ್ಣೆಯ ಇತರ ಗುಣಗಳು ಈ ರೀತಿ ಇವೆ-ಸಾಪೇಕ್ಷ ಸಾಂದ್ರತೆ : 0.973-0.985, ದ್ಯುತಿ ಆವರ್ತನೆ -150 ಯಿಂದ -200 ರಿಫ್ರೇಕ್ಷಣಾಂಕ 1.500-1510, ಕುದಿಬಿಂದು 3000 ಸೆಂ.
- ಗಂಧದೆಣ್ಣೆ ಹಲವಾರು ಬಗೆಯ ಆಲ್ಕೋಹಾಲುಗಳು ಮತ್ತು ಅವುಗಳ ಆಲ್ಡಿ ಹೈಡುಗಳ ಮಿಶ್ರಣ. ಇವುಗಳಲ್ಲೆಲ್ಲ ಅತಿ ಪ್ರಮುಖವಾದುದು ಸ್ಯಾಂಟಲಾಲ್ ಎಂಬ ಆಲ್ಕೊಹಾಲ್. ಇದು ಸು. 90% ಕಿಂತಲೂ ಹೆಚ್ಚಿನ ಪರಿಮಾಣದಲ್ಲಿದೆ. ಗಂಧದೆಣ್ಣೆಯ ಗುಣಮಟ್ಟಕ್ಕೆ ಇದೇ ಕಾರಣ. ಸ್ಯಾಂಟಲಾಲ್ ಅಲ್ಫ ಮತ್ತು ಬೀಟ ಎಂಬ ಎರಡು ಬಗೆಗಳನ್ನು ಒಳಗೊಂಡಿವೆ. ಗಂಧದೆಣ್ಣೆಯಲ್ಲಿನ ಮಿಕ್ಕ ವಸ್ತುಗಳ ಪೈಕಿ ಮುಖ್ಯವಾದವು ಸ್ಯಾಂಟಲೋನ್ (ಅ11 ಊ16 ಔ), ಸ್ಯಾಂಟಿನಾಲ್ (ಅ9 ಊ16 ಔ) ಮತ್ತು ಸ್ಯಾಂಟೀನ್ (ಅ9 ಊ14).
ಕಾರ್ಖಾನೆಗಳು
[ಬದಲಾಯಿಸಿ]ಜಗತ್ತಿನ ಉತ್ಪಾದನೆಯಾಗುವ ಗಂಧದೆಣ್ಣೆಯಲ್ಲಿ ಬಹುಪಾಲು ಮೈಸೂರು ರಾಜ್ಯದ್ದೇ. 1916 ಅಂದಿನ ಮೈಸೂರು ಸರ್ಕಾರ ಬೆಂಗಳೂರಿನಲ್ಲಿ ಪ್ರಥಮ ಗಂಧದೆಣ್ಣೆಯ ಕಾರ್ಖಾನೆಯನ್ನು ಸ್ಥಾಪಿಸಿತು. ಅನಂತರ ಮೈಸೂರು ನಗರದಲ್ಲೂ ಶಿವಮೊಗ್ಗದಲ್ಲೂ ಒಂದೊಂದು ಕಾರ್ಖಾನೆಗಳು ಸ್ಥಾಪಿತವಾದುವು. ಈಗ ಮೈಸೂರು ಮತ್ತು ಶಿವಮೊಗ್ಗಗಳಲ್ಲಿ ಮಾತ್ರ ಸರ್ಕಾರೀ ಸ್ವಾಮ್ಯದ ಗಂಧದೆಣ್ಣೆ ಕಾರ್ಖಾನೆಗಳಿವೆ. ಗಂಧದಣ್ಣೆಯನ್ನು ತೆಗೆಯಲು ಬೇಕಾಗುವ ಎಲ್ಲ ರೀತಿಯ ಯಂತ್ರಸೌಲಭ್ಯಗಳೂ ಮೈಸೂರಿನಲ್ಲಿನ ಕಾರ್ಖಾನೆಯಲ್ಲಿದ್ದು ಇದು ಜಗತ್ತಿನ ಅತಿ ದೊಡ್ಡ ಹಾಗೂ ಸುಸಜ್ಜಿತ ಗಂಧದಣ್ಣೆ ಕಾರ್ಖಾನೆ ಎನಿಸಿದೆ. ಅತ್ಯಂತ ಆಧುನಿಕವಾದ ಗುಣನಿಯಂತ್ರಣ ಪ್ರಯೋಗಾಲಯವೂ ಇಲ್ಲಿದೆ. ಮುಂಬಯಿ, ಕನೂಜ್, ಕಾನ್ಪುರ, ಕುಪ್ಪಂ, ರೇಣಿಗುಂಟ, ಮೆಟ್ಟೂರು, ಸೇಲಂ, ತಿರುಪತ್ತೂರು ಮೊದಲಾದ ಕಡೆಗಳಲ್ಲೂ ಸಣ್ಣ ಪ್ರಮಾಣದ ಕಾರ್ಖಾನೆಗಳಿವೆ. ಭಾರತದಲ್ಲಿ ಸುಮಾರು 300,000 ಪೌಂಡುಗಳಿಗೂ ಹೆಚ್ಚಿನ ಪರಿಮಾಣದಲ್ಲಿ ಗಂಧದೆಣ್ಣೆ ತಯಾರಾಗುತ್ತದೆ. ಇದರಲ್ಲಿ ಅರ್ಧದಷ್ಟು ಮೈಸೂರು ನಗರದ ಕಾರ್ಖಾನೆಯಲ್ಲಿ ತಯಾರಾಗುತ್ತದೆ. ಭಾರತದ ತಯಾರಿಕೆಯ 60% ರಷ್ಟು ಎಣ್ಣೆ ಹೊರದೇಶಗಳಿಗೆ ಮುಖ್ಯವಾಗಿ ಅಮೆರಿಕ, ಇಂಗ್ಲೆಂಡ್, ಫ್ರಾನ್ಸ್, ಸ್ವಿಟ್ಜರ್ಲೆಂಡ್, ಇಟಲಿ, ಜಪಾನ್, ಆಸ್ಟ್ರೇಲಿಯ ಮತ್ತು ಜರ್ಮನಿಗಳಿಗೆ ರಫ್ತಾಗುತ್ತದೆ. ಅಲ್ಲದೆ ಮೈಸೂರಿನಿಂದ ಅಮೆರಿಕಕ್ಕೆ ಕೊಂಚ ಪ್ರಮಾಣದಲ್ಲಿ ಗಂಧದ ಮರವೂ ರಫ್ತಾಗುತ್ತದೆ.
ಉಪಯೋಗಗಳು
[ಬದಲಾಯಿಸಿ]ಗಂಧದ ಎಣ್ಣೆಯನ್ನು ಸುಗಂಧ ದ್ರವ್ಯಗಳ ಕೈಗಾರಿಕೆಯಲ್ಲಿ ಹೇರಳವಾಗಿ ಉಪಯೋಗಿಸುತ್ತಾರೆ. ಅತ್ಯಂತ ಹೆಸರುವಾಸಿಯಾದ ಪರಿಮಳಗಳ ತಯಾರಿಕೆಗೆ ಇದು ಬಹು ಉಪಯುಕ್ತವಾದ ಮೂಲವಸ್ತು. ಒಳ್ಳೆಯ ಪೂತಿನಾಶಕವೆಂದು ಹೆಸರಾಗಿರುವ ಇದನ್ನು ಔಷಧಿ ರೂಪದಲ್ಲೂ ಬಳಸಲಾಗುತ್ತದೆ. ಗಾನರೀಯ ಮುಂತಾದ ಮೇಹರೋಗಗಳಲ್ಲಿ ಇದರ ಬಳಕೆ ಇದೆ. ಸಾಲ್ವರ್‍ಸಾನ್ ಎಂಬ ಔಷಧಿಯಲ್ಲಿ ಗಂಧದೆಣ್ಣೆಯಿದ್ದೇ ಇದೆ. ಅಜ್ವಾನದ ನೀರು ಇಲ್ಲವೆ ಶುಂಠಿ ಕಷಾಯದೊಂದಿಗೆ ಗಂಧದೆಣ್ಣೆಯನ್ನು ಸೇರಿಸಿ ಶ್ವಾಸನಾಳದ ಶೀತಕ್ಕೆ ಔಷಧಿಯಾಗಿ ಬಳಸುತ್ತಾರೆ. ಕಜ್ಜಿಗೂ ಇದು ಒಳ್ಳೆಯ ಔಷಧಿ. ಬಿಟ್ಟುಬಿಟ್ಟು ಬರುವ ಜ್ವರಗಳಲ್ಲಿ ಇದನ್ನು ಸ್ವೇದಾಕಾರಿಯಾಗಿ ಉಪಯೋಗಿಸುತ್ತಾರೆ. (ಎಂ.ಎಸ್.ಎಸ್.ಕೆ.)
ಉಲ್ಲೇಖಗಳು
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- ↑ "ಆರ್ಕೈವ್ ನಕಲು". Archived from the original on 2019-03-22. Retrieved 2016-10-19.