ಹುಲಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹುಲಿ
ಭಾರತದ ಬಂಧ್ವಾಗಢ್ ರಾಷ್ಟ್ರೀಯ ಉದ್ಯಾನದಲ್ಲಿ ಒಂದು ಬಂಗಾಳದ ಹುಲಿ.
Scientific classification
Kingdom:
ಅನಿಮೇಲಿಯಾ
Phylum:
ಕಾರ್ಡೇಟಾ
Class:
ಸಸ್ತನಿ
Order:
ಕಾರ್ನಿವೋರಾ
Family:
ಫೆಲಿಡೇ
Genus:
ಪ್ಯಾಂಥೆರಾ
Species:
ಪ್ಯಾಂಥೆರಾ ಟೈಗ್ರಿಸ್
Binomial name
'ಪ್ಯಾಂಥೆರಾ ಟೈಗ್ರಿಸ್'
( ಕಾರ್ಲ್ ಲಿನ್ನೇಯಸ್, 1758)
ಐತಿಹಾಸಿಕ ಕಾಲದಲ್ಲಿ ಹುಲಿಗಳ ವ್ಯಾಪ್ತಿ (ತಿಳಿ ಹಳದಿ ಬಣ್ಣ) ಮತ್ತು ೨೦೦೬ರಲ್ಲಿ (ಹಸಿರು ಬಣ್ಣ)
೧೯೯೦ರಲ್ಲಿ ಹುಲಿಗಣತಿ
ಹುಲಿ ( ವೈಜ್ಞಾನಿಕ ಹೆಸರು ಪ್ಯಾಂಥೆರಾ ಟೈಗ್ರಿಸ್) ಪ್ರಾಣಿಶಾಸ್ತ್ರದ ಪ್ರಕಾರ ಫೆಲಿಡೇ ಕುಟುಂಬಕ್ಕೆ ಸೇರಿದ ಒಂದು ಜೀವಿ. ಪ್ಯಾಂಥೆರಾ ವಂಶಕ್ಕೆ ಸೇರಿದ ೪ ದೊಡ್ಡ ಬೆಕ್ಕುಗಳ ಪೈಕಿ ಹುಲಿ ಅತ್ಯಂತ ದೊಡ್ಡ ಪ್ರಾಣಿ. ದಕ್ಷಿಣ ಮತ್ತು ಪೂರ್ವ ಏಷ್ಯಾಗಳಲ್ಲಿ ವ್ಯಾಪಕವಾಗಿ ಕಾಣಬರುವ ಹುಲಿ ತನ್ನ ಆಹಾರವನ್ನು ಬೇಟೆಯಾಡಿ ಮಾಂಸ ಸಂಪಾದಿಸುವ ಪ್ರಾಣಿಗಳ ಗುಂಪಿಗೆ ಸೇರಿದೆ. ಹುಲಿಯು ೪ ಮೀ. ವರೆಗೆ (೧೩ ಅಡಿ) ಉದ್ದವನ್ನು ಹಾಗೂ ೩೦೦ ಕಿ.ಗ್ರಾಂ ವರೆಗೆ ತೂಕವನ್ನು ಹೊಂದಬಹುದು. ದೊಡ್ಡ ದೇಹ ಮತ್ತು ಅಪಾರ ಬಲ ಹೊಂದಿರುವ ಹುಲಿಯ ಕಣ್ಸೆಳೆಯುವ ಲಕ್ಷಣವೆಂದರೆ ಬಿಳೀ ಅಥವಾ ಹಳದಿ ಯಾ ಕೇಸರಿ ಬಣ್ಣದ ಮೈ ಮೇಲೆ ನೀಳವಾಗಿ ಮೇಲಿನಿಂದ ಕೆಳಗೆ ಇರುವ ಗಾಢ ಬಣ್ಣದ ಪಟ್ಟೆಗಳು. ಸಾಮಾನ್ಯವಾಗಿ ಹುಲಿಯ ದೇಹದ ಅಡಿಯ ಭಾಗ ತೆಳು ಬಣ್ಣದ್ದಾಗಿರುತ್ತದೆ. ಹುಲಿಗಳ ಜಾತಿಗಳ ಪೈಕಿ ಸೈಬೀರಿಯಾದ ಹುಲಿ ಅತ್ಯಂತ ದೊಡ್ಡ ಕಾಯವನ್ನು ಹೊಂದಿರುತ್ತದೆ.
  • ಹುಲಿಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದಕ್ಕಾಗಿ ಮತ್ತು ಹುಲಿಗಳ ಸಂರಕ್ಷಣೆಯನ್ನು ಮಾಡಲು ಪ್ರತಿ ವರ್ಷದ ಜುಲೈ ೨೯ನ್ನು ‘ವಿಶ್ವ ಹುಲಿ ದಿನ’ವನ್ನಾಗಿ ಆಚರಿಸಲಾಗುತ್ತದೆ. ಈ ಆಚರಣೆಯ ಹಿಂದಿನ ಪ್ರಮುಖ ಉದ್ದೇಶ ಅಪಾಯದಂಚಿನಲ್ಲಿರುವ ಹುಲಿಗಳ ಸಂರಕ್ಷಣೆಗಾಗಿ ಜನರಲ್ಲಿ ಅರಿವು ಮೂಡಿಸುವುದು. [೧]

ಕೆಲವು ವೈಶಿಷ್ಟ್ಯಗಳು[ಬದಲಾಯಿಸಿ]

  • ಪ್ರಕೃತಿಯೊಂದಿಗೆ ಸುಲಭವಾಗಿ ಹೊಂದಾಣಿಕೆ ಮಾಡಿಕೊಂಡು ಜೀವಿಸುವ ಹುಲಿಗಳು ಸೈಬೀರಿಯಾದ ಟೈಗಾ ಕಾಡುಗಳಲ್ಲಿ, ತೆರೆದ ಹುಲ್ಲುಗಾವಲುಗಳಲ್ಲಿ ಮತ್ತು ಉಷ್ಣವಲಯದ ಕಾಡುಗಳಲ್ಲಿ ನೆಲೆಸಿವೆ. ಹುಲಿಗಳು ತಮ್ಮ ತಮ್ಮ ಭೂಮಿತಿಯೊಳಗೆಯೇ ಜೀವಿಸುವ ಪ್ರಾಣಿಗಳು. ಸಾಮಾನ್ಯವಾಗಿ ಅವು ಒಂಟಿಜೀವಿ ಸಹ. ತನ್ನ ಪರಿಸರದಲ್ಲಿ ಲಭ್ಯವಿರುವ ಆಹಾರದ ಪ್ರಾಣಿಗಳ ಸಂಖ್ಯೆಗನುಗುಣವಾಗಿ ಪ್ರತಿ ಹುಲಿಯು ತನ್ನ ಸರಹದ್ದನ್ನು ಗುರುತಿಸಿಟ್ಟುಕೊಳ್ಳುತ್ತದೆ.
  • ವಿಶಾಲ ಪ್ರದೇಶದ ಮೇಲೆ ಒಡೆತನ ಸಾಧಿಸಬಯಸುವ ಮತ್ತು ಕೆಲ ಪ್ರದೇಶಗಳಲ್ಲಿ ಅಲ್ಪ ಸ್ಥಳದಲ್ಲಿ ದೊಡ್ಡ ಸಂಖ್ಯೆಯಲ್ಲಿರುವ ಕಾರಣದಿಂದಾಗಿ ಹುಲಿಗಳು ಬಹಳಷ್ಟು ಬಾರಿ ಮಾನವನೊಡನೆ ಸಂಘರ್ಷಕ್ಕಿಳಿಯುತ್ತವೆ. ಇಂದಿನ ಯುಗದ ಹುಲಿಗಳ ೮ ಉಪತಳಿಗಳ ಪೈಕಿ ೨ ಈಗಾಗಲೇ ನಶಿಸಿಹೋಗಿದ್ದು ಉಳಿದ ೬ ತೀವ್ರ ಅಪಾಯದಲ್ಲಿರುವ ಜೀವತಳಿಗಳೆಂದು ಗುರುತಿಸಲ್ಪಟ್ಟಿವೆ. ನೆಲೆಗಳ ನಾಶ ಮತ್ತು ಬೇಟೆಯಾಡುವಿಕೆಗಳು ಹುಲಿಗೆ ದೊಡ್ಡ ಕುತ್ತಾಗಿವೆ.
  • ಇಂದು ವಿಶ್ವದಲ್ಲಿರುವ ಎಲ್ಲಾ ಹುಲಿ ಪ್ರಭೇದಗಳು ಸಂರಕ್ಷಣೆಗೊಳಪಟ್ಟಿದ್ದರೂ ಸಹ ಹುಲಿಗಳ ಕಳ್ಳಬೇಟೆ ಮುಂದುವರಿದೇ ಇದೆ.ತನ್ನ ಆಕರ್ಷಕ ರೂಪ, ಬಲ ಮತ್ತು ಸಾಹಸಪ್ರವೃತ್ತಿಗಳಿಂದಾಗಿ ಹುಲಿ ವನ್ಯಜೀವಿಗಳ ಪೈಕಿ ಮಾನವನಿಂದ ಅತಿ ಹೆಚ್ಚು ಗೌರವಿಸಲ್ಪಟ್ಟಿದೆ. ಹುಲಿಯು ಅನೇಕ ಧ್ವಜಗಳಲ್ಲಿ ಕಾಣಬರುತ್ತದೆ. ಅಲ್ಲದೆ ಏಷ್ಯಾದ ಹಲವು ರಾಷ್ಟ್ರಗಳ ರಾಷ್ಟ್ರೀಯ ಪ್ರಾಣಿ ಎಂಬ ಸ್ಥಾನವನ್ನು ಸಹ ಪಡೆದಿದೆ.
೧೯೦೦ ಮತ್ತು ೧೯೯೦ರಲ್ಲಿ ಹುಲಿಗಳ ವ್ಯಾಪ್ತಿ

ವ್ಯಾಪ್ತಿ[ಬದಲಾಯಿಸಿ]

  • ಐತಿಹಾಸಿಕ ಕಾಲದಲ್ಲಿ ಹುಲಿಗಳು ಕಾಕಸಸ್ ಮತ್ತು ಕ್ಯಾಸ್ಪಿಯನ್ ಸಮುದ್ರದಿಂದ ಸೈಬೀರಿಯಾ ಮತ್ತು ಇಂಡೋನೇಷ್ಯಾ ವರೆಗೆ ಏಷ್ಯಾದ ಎಲ್ಲಾ ಭಾಗಗಳಲ್ಲಿ ಜೀವಿಸಿದ್ದವು. ೧೯ನೆಯ ಶತಮಾನದಲ್ಲಿ ಹುಲಿಗಳು ಪಶ್ಚಿಮ ಏಷ್ಯಾದಿಂದ ಸಂಪೂರ್ಣವಾಗಿ ಕಣ್ಮರೆಯಾದವು. ಅಲ್ಲದೆ ಖಂಡವ್ಯಾಪ್ತಿಯನ್ನು ಹೊಂದಿದ್ದ ಹುಲಿಗಳ ನೆಲೆಗಳು ಬಹುವಾಗಿ ಕುಗ್ಗಿ ಇಂದು ಹುಲಿಗಳು ಕೆಲ ಪ್ರದೇಶಗಳಿಗ ಮಾತ್ರ ಸೀಮಿತವಾಗಿವೆ.
  • ಇಂದು ಸೈಬೀರಿಯಾದ ಆಮೂರ್ ನದಿಯ ದಕ್ಷಿಣಭಾಗದಿಂದ ಹುಲಿಗಳ ನೆಲೆ ಆರಂಭ. ದ್ವೀಪಗಳ ಪೈಕಿ ಸುಮಾತ್ರಾದಲ್ಲಿ ಮಾತ್ರ ಹುಲಿಗಳು ಕಾಣುತ್ತವೆ. ೨೦ನೆಯ ಶತಮಾನದಲ್ಲಿ ಜಾವಾ ಮತ್ತು ಬಾಲಿ ದ್ವೀಪಗಳಿಂದ ಹುಲಿಗಳು ಶಾಶ್ವತವಾಗಿ ಮರೆಯಾದವು.

ಶಾರೀರಿಕ ಲಕ್ಷಣಗಳು ಮತ್ತು ತಳಿಗಳು[ಬದಲಾಯಿಸಿ]

ಸೈಬೀರಿಯಾದ ಹುಲಿ
ಹುಲಿಯ ಅಸ್ಥಿಪಂಜರ
  • ಹುಲಿಗಳು ತುಕ್ಕಿನ ಬಣ್ಣದ ಇಲ್ಲವೆ ಕಂದು ಬಣ್ಣದ ಪಟ್ಟೆಗಳನ್ನು ಹೊಂದಿದ್ದು ಮುಖದ ಪರಿಧಿಯಲ್ಲಿ ಬಿಳಿ ಬಣ್ಣವನ್ನು ಪಡೆದಿರುತ್ತವೆ. ಪಟ್ಟೆಗಳ ಆಕಾರ ಹಾಗೂ ಸಾಂದ್ರತೆಯು ಜಾತಿಯಿಂದ ಜಾತಿಗೆ ಬದಲಾಗುತ್ತವೆ. ಹೆಚ್ಚಿನ ಹುಲಿಗಳು ನೂರಕ್ಕೂ ಹೆಚ್ಚು ಪಟ್ಟೆಗಳನ್ನು ಹೊಂದಿರುತ್ತವೆ. ಪಟ್ಟೆಗಳ ವಿನ್ಯಾಸವು ಪ್ರತಿ ಹುಲಿಗೂ ಬದಲಾಗುತ್ತದೆ. ಬೇಟೆಗಾಗಿ ಹೊಂಚು ಹಾಕುತ್ತಿರುವಾಗ ಹುಲಿಯು ಸುತ್ತಲಿನ ಪರಿಸರದೊಂದಿಗೆ ಸೇರಿಹೋಗಲು ಈ ಪಟ್ಟೆಗಳು ಅನುವಾಗುವುವೆಂದು ನಂಬಲಾಗಿದೆ.
  • ಬೆಕ್ಕಿನ ಜಾತಿಯ ಇತರ ಪ್ರಾಣಿಗಳಿಗಿರುವಂತೆ ಹುಲಿಗೆ ಸಹ ಕಿವಿಯ ಹಿಂಭಾಗದಲ್ಲಿ ದೊಡ್ಡ ಬಿಳಿ ಮಚ್ಚೆಯಿರುವುದು. ಬೆಕ್ಕುಗಳಲ್ಲಿ ಹುಲಿಯ ದೇಹತೂಕ ಅತಿ ಅಧಿಕ. ಹುಲಿಯ ಭುಜಗಳು ಮತ್ತು ಕಾಲುಗಳು ಬಲವಾಗಿ ರೂಪುಗೊಂಡಿದ್ದು ಇವುಗಳ ಸಹಾಯದಿಂದ ಹುಲಿಯು ತನಗಿಂತ ದೊಡ್ಡ ಗಾತ್ರದ ಬೇಟೆಯ ಪ್ರಾಣಿಯನ್ನು ಸುಲಭವಾಗಿ ನೆಲಕ್ಕೆ ಕೆಡವಬಲ್ಲುದು.
  • ಜಗತ್ತಿನ ಉತ್ತರಭಾಗದಲ್ಲಿರುವ ಹುಲಿಗಳು ದಕ್ಷಿಣದಲ್ಲಿರುವುವಕ್ಕಿಂತ ಗಾತ್ರದಲ್ಲಿ ದೊಡ್ಡವು. ಹೆಣ್ಣು ಹುಲಿಯು ಗಾತ್ರದಲ್ಲಿ ಗಂಡಿಗಿಂತ ಚಿಕ್ಕದು. ಗಂಡು ಹುಲಿಗಳ ಮುಂಪಾದ ಹೆಣ್ಣಿನದಕ್ಕಿಂತ ಹೆಚ್ಚು ಅಗಲವಾಗಿರುತ್ತದೆ. ಈ ಲಕ್ಷಣದ ಸಹಾಯದಿಂದ ತಜ್ಞರು ಹೆಜ್ಜೆ ಗುರುತಿನ ಆಧಾರದ ಮೇಲೆ ಹುಲಿಯ ಲಿಂಗವನ್ನು ಗುರುತಿಸುತ್ತಾರೆ.

ಉಪತಳಿಗಳು[ಬದಲಾಯಿಸಿ]

ಆಧುನಿಕ ಯುಗದ ಹುಲಿಗಳಲ್ಲಿ ೮ ಉಪತಳಿಗಳಿವೆ. ಇವುಗಳ ಪೈಕಿ ಎರಡು ಭೂಮಿಯಿಂದ ಮರೆಯಾಗಿವೆ. ಇಂದು ಜೀವಿಸಿರುವ ಉಪತಳಿಗಳೆಂದರೆ :

  • ಬಂಗಾಳ ಹುಲಿ ( ರಾಯಲ್ ಬೆಂಗಾಲ್ ಟೈಗರ್ ಅಥವಾ ಪ್ಯಾಂಥೆರಾ ಟೈಗ್ರಿಸ್ ಟೈಗ್ರಿಸ್ ) : ಇದು ಭಾರತ, ಬಾಂಗ್ಲಾದೇಶ, ಭೂತಾನ್, ಬರ್ಮಾ ಮತ್ತು ನೇಪಾಳದ ಭಾಗಗಳಲ್ಲಿ ಕಾಣಬರುತ್ತದೆ. ಹುಲ್ಲುಗಾವಲು, ಮಳೆಕಾಡು, ಕುರುಚಲು ಕಾಡು, ಎಲೆ ಉದುರಿಸುವ ಕಾಡು ಮತ್ತು ಮ್ಯಾಂಗ್ರೋವ್‌ಗಳಂತಹ ವಿಭಿನ್ನ ಪರಿಸರಗಳಲ್ಲಿ ಬಂಗಾಳ ಹುಲಿ ಜೀವಿಸಬಲ್ಲುದು. ಉತ್ತರ ಭಾರತ ಮತ್ತು ನೇಪಾಳಗಳಲ್ಲಿ ಕಾಣುವ ಹುಲಿಯು ದಕ್ಷಿಣ ಭಾರತದಲ್ಲಿರುವುದಕ್ಕಿಂತ ದೊಡ್ಡ ದೇಹವನ್ನು ಹೊಂದಿರುತ್ತದೆ. ಇಂದು ಬಂಗಾಳದ ಹುಲಿಗಳ ಒಟ್ಟು ಸಂಖ್ಯೆ ಸುಮಾರು ೨೦೦೦ ದಷ್ಟು. ತೀವ್ರ ಗತಿಯಲ್ಲಿ ಅವನತಿಯತ್ತ ಸಾಗುತ್ತಿದ್ದ ಈ ಜೀವಿಯನ್ನು ಇಂದು ಭಾರತದಲ್ಲಿ ಸಂರಕ್ಷಿತ ಜೀವಿಯನ್ನಾಗಿ ಘೋಷಿಸಲಾಗಿದ್ದು ಪ್ರಾಜೆಕ್ಟ್ ಟೈಗರ್ ಎಂಬ ಮಹತ್ವಾಕಾಂಕ್ಷೆಯ ಯೋಜನೆಯಡಿಯಲ್ಲಿ ಕಾಪಾಡಿಕೊಳ್ಳಲಾಗುತ್ತಿದೆ. ಆದರೆ ಕಳ್ಳಬೇಟೆಯಿಂದಾಗಿ ಈ ಹುಲಿಯು ದಿನೇ ದಿನೇ ವಿನಾಶದತ್ತ ಸಾಗುತ್ತಿದೆ. ಇದರ ಫಲವಾಗಿ ಸಾರಿಸ್ಕಾ ಹುಲಿ ಮೀಸಲಿನಲ್ಲಿ ಇಂದು ಒಂದು ಹುಲಿ ಸಹ ಜೀವಿಸಿಲ್ಲ.
  • ಇಂಡೋಚೀನಾ ಹುಲಿ ( ಪ್ಯಾಂಥೆರಾ ಟೈಗ್ರಿಸ್ ಕಾರ್ಬೆಟ್ಟಿ ) : ಇದು ಲಾವೋಸ್, ಕಾಂಬೋಡಿಯಾ, ಚೀನಾ, ಬರ್ಮಾ, ಥೈಲ್ಯಾಂಡ್ ಮತ್ತು ವಿಯೆಟ್ನಾಮ್‌ಗಳಲ್ಲಿ ನೆಲೆಸಿದೆ. ಇವು ಬಂಗಾಳದ ಹುಲಿಗಳಿಗಿಂತ ಚಿಕ್ಕದಾಗಿದ್ದು ಮೈಬಣ್ಣವು ಹೆಚ್ಚು ಗಾಢವಾಗಿರುತ್ತದೆ. ಇವು ಸಾಮಾನ್ಯವಾಗಿ ಬೆಟ್ಟಗುಡ್ಡಗಳ ಕಾಡುಗಳಲ್ಲಿ ಹೆಚ್ಚಾಗಿ ವಾಸಿಸುತ್ತವೆ. ಇಂದು ಈ ತಳಿಯ ಹುಲಿಗಳು ೧೨೦೦ ರಿಂದ ೧೮೦೦ರಷ್ಟು ಭೂಮಿಯ ಮೇಲಿವೆ.ಇವುಗಳಲ್ಲಿ ಕಾಡಿನಲ್ಲಿ ಕೆಲವು ನೂರು ಮಾತ್ರ ಇದ್ದು ಉಳಿದವು ಜಗತ್ತಿನ ಬೇರೆಬೇರೆ ಕಡೆ ಮೃಗಾಲಯಗಳಲ್ಲಿವೆ.
  • ಮಲಯಾ ಹುಲಿ (ಪ್ಯಾಂಥೆರಾ ಟೈಗ್ರಿಸ್ ಜಾಕ್ಸನಿ) : ಈ ಉಪತಳಿಯು ಮಲಯಾ ಜಂಬೂದ್ವೀಪದ ದಕ್ಷಿಣ ಭಾಗದಲ್ಲಿ ಮಾತ್ರ ಕಂಡುಬರುತ್ತದೆ. ಈ ಜಾತಿಯ ಸುಮಾರು ೬೦೦ ರಿಂದ ೮೦೦ ಹುಲಿಗಳು ಇಂದು ಜೀವಿಸಿವೆ. ಮಲಯಾ ಹುಲಿಯು ಗಾತ್ರದಲ್ಲಿ ಬಲು ಚಿಕ್ಕದಾಗಿದ್ದು ಭೂಖಂಡದ ತಳಿಗಳ ಪೈಕಿ ಅತಿ ಸಣ್ಣ ತಳಿಯಾಗಿದೆ. ಮಲಯಾ ಹುಲಿಯು ಮಲೇಷ್ಯಾದ ರಾಷ್ಟ್ರಚಿಹ್ನೆಯಾಗಿದೆ.
  • ಸುಮಾತ್ರಾ ಹುಲಿ (ಪ್ಯಾಂಥೆರಾ ಟೈಗ್ರಿಸ್ ಸುಮಾತ್ರೇ) : ಇದು ಇಂಡೋನೇಷ್ಯಾದ ಸುಮಾತ್ರಾ ದ್ವೀಪದಲ್ಲಿ ಮಾತ್ರ ಜೀವಿಸಿದೆ. ಅತ್ಯಂತ ಅಪಾಯಕ್ಕೊಳಗಾಗಿರುವ ಸುಮಾತ್ರಾ ಹುಲಿಯು ಭೂಮಿಯ ಎಲ್ಲಾ ಹುಲಿಗಳ ಪೈಕಿ ಅತ್ಯಂತ ಸಣ್ಣಗಾತ್ರವುಳ್ಳದ್ದಾಗಿದೆ. ಗಂಡು ಹುಲಿಯು ೧೦೦ ರಿಂದ ೧೪೦ ಕಿ.ಗ್ರಾಂ ತೂಗಿದರೆ ಹೆಣ್ಣು ಕೇವಲ ೭೫ ರಿಂದ ೧೧೦ ಕಿ.ಗ್ರಾಂ ತೂಕವುಳ್ಳದ್ದಾಗಿದೆ. ಇಂದು ಜಗತ್ತಿನಲ್ಲಿ ಸುಮಾರು ೪೦೦ ರಿಂದ ೫೦೦ ಸುಮಾತ್ರಾ ಹುಲಿಗಳು ಜೀವಿಸಿವೆಯೆಂದು ಅಂದಾಜು ಮಾಡಲಾಗಿದೆ.
  • ಸೈಬೀರಿಯಾ ಹುಲಿ ( ಪ್ಯಾಂಥೆರಾ ಟೈಗ್ರಿಸ್ ಆಲ್ಟೈಕಾ ) : ಇದಕ್ಕೆ ಮಂಚೂರಿಯನ್ ಹುಲಿ, ಕೊರಿಯನ್ ಹುಲಿ, ಆಮೂರ್ ಹುಲಿ ಮತ್ತು ಉತ್ತರ ಚೀನಾ ಹುಲಿಯೆಂದು ಇತರ ಹೆಸರುಗಳಿವೆ. ಈ ಹುಲಿಗಳ ನೆಲೆಯು ಇಂದು ಸೈಬೀರಿಯಾದ ಆಮೂರ್ ನದಿ ಮತ್ತು ಉಸ್ಸೂರಿ ನದಿಗಳ ನಡುವಣ ಪ್ರದೇಶಕ್ಕೆ ಸೀಮಿತವಾಗಿದೆ. ಭೂಮಿಯ ಮೇಲಿರುವ ಹುಲಿಗಳ ಪೈಕಿ ಸೈಬೀರಿಯಾ ಹುಲಿ ಎಲ್ಲಕ್ಕಿಂತ ದೊಡ್ಡದು. ಅತಿ ಶೀತಲ ವಾತಾವರಣದಲ್ಲಿ ಜೀವಿಸುವ ಕಾರಣದಿಂದಾಗಿ ಈ ಹುಲಿಗಳ ತುಪ್ಪಳ ಬಲು ಮಂದವಾಗಿರುತ್ತದೆ. ಇವುಗಳ ಬಣ್ಣವು ಪೇಲವವಾಗಿದ್ದು ಪಟ್ಟೆಗಳ ಸಂಖ್ಯೆಯು ಕಡಿಮೆಯಿರುತ್ತದೆ. ಈ ತಳಿಯನ್ನು ಇಂದು ಸೈಬೀರಿಯಾದಲ್ಲಿ ಅತಿ ಜಾಣತನದಿಂದ ಕಾಪಾಡಿಕೊಳ್ಳಲಾಗುತ್ತಿದೆ.
  • ದಕ್ಷಿಣ ಚೀನಾ ಹುಲಿ (ಪ್ಯಾಂಥೆರಾ ಟೈಗ್ರಿಸ್ ಅಮೊಯೆನ್ಸಿಸ್ ) : ಇದಕ್ಕೆ ಅಮೊಯೆನ್ ಅಥವಾ ಕ್ಸಿಯಾಮೆನ್ ಹುಲಿ ಎಂದು ಇತರ ಹೆಸರುಗಳು. ಈ ಹುಲಿಗಳು ಇಂದು ಹೆಚ್ಚೂ ಕಡಿಮೆ ಭೂಮಿಯ ಮೇಲಿನಿಂದ ಮರೆಯಾಗಿವೆ. ಜಗತ್ತಿನಲ್ಲಿ ಅತ್ಯಂತ ಹೆಚ್ಚು ಅಪಾಯಕ್ಕೊಳಗಾಗಿರುವ ೧೦ ಪ್ರಾಣಿಗಳ ಪೈಕಿ ಈ ಹುಲಿ ಸಹ ಒಂದು. ಈಗ ಒಟ್ಟು ೫೯ ದಕ್ಷಿಣ ಚೀನಾ ಹುಲಿಗಳು ಜೀವಿಸಿವೆ. ಇವೆಲ್ಲವೂ ಚೀನಾದಲ್ಲಿ ಮಾನವನ ರಕ್ಷಣೆಯಡಿ ಬಾಳುತ್ತಿವೆ. ಆದರೆ ಈ ಎಲ್ಲ ೫೯ ಹುಲಿಗಳು ಕೇವಲ ೬ ಹಿರಿಯರ ಪೀಳಿಗೆಯವಾಗಿದ್ದು ಒಂದು ಪ್ರಾಣಿಯ ಆರೋಗ್ಯಕರ ವಂಶಾಭಿವೃದ್ಧಿಗೆ ಬೇಕಾದ ವಂಶ ವೈವಿಧ್ಯ ಇಲ್ಲವಾಗಿದೆ. ಆದ್ದರಿಂದ ಈ ತಳಿಯನ್ನು ಉಳಿಸಿಕೊಳ್ಳುವುದು ಬಹುಶ ಅಸಾಧ್ಯವೆಂಬ ತೀರ್ಮಾನಕ್ಕೆ ತಜ್ಞರು ಬಂದಿದ್ದಾರೆ.

ಮರೆಯಾದ ಉಪತಳಿಗಳು[ಬದಲಾಯಿಸಿ]

  1. ಬಾಲಿ ಹುಲಿ : ಇದು ಇಂಡೋನೇಷ್ಯಾದ ಬಾಲಿ ದ್ವೀಪದಲ್ಲಿ ಮಾತ್ರ ಜೀವಿಸಿತ್ತು. ಕೇವಲ ೯೦ರಿಂದ ೧೦೦ ಕಿ.ಗ್ರಾಂ. ತೂಗುತ್ತಿದ್ದ ಇವು ಹುಲಿಗಳ ಪೈಕಿ ಅತಿ ಸಣ್ಣವಾಗಿದ್ದವು. ಮಾನವನ ಬೇಟೆಯ ಹುಚ್ಚಿಗೆ ಬಲಿಯಾದ ಈ ತಳಿ ಸಂಪೂರ್ಣವಾಗಿ ೧೯೩೭ರಲ್ಲಿ ಭೂಮಿಯಿಂದ ಶಾಶ್ವತವಾಗಿ ಮರೆಯಾಯಿತು. ಆದರೆ ಬಾಲಿ ದ್ವೀಪದ ಹಿಂದೂ ಸಂಸ್ಕೃತಿಯಲ್ಲಿ ಈ ಹುಲಿಗೆ ಇನ್ನೂ ಗೌರವದ ಸ್ಥಾನವಿದೆ.
  2. ಜಾವಾ ಹುಲಿ : ಇಂಡೋನೇಷ್ಯಾದ ಜಾವಾ ದ್ವೀಪದಲ್ಲಿ ಮಾತ್ರ ಜೀವಿಸಿದ್ದ ಈ ಹುಲಿ ೧೯೮೦ರ ದಶಕದಲ್ಲಿ ಪೂರ್ಣವಾಗಿ ಮರೆಯಾಯಿತೆಂದು ನಂಬಲಾಗಿದೆ. ಬಾಲಿ ಹುಲಿಯಂತೆ ಜಾವಾ ಹುಲಿಯನ್ನು ಸಹ ಮಾನವನು ಭೂಮಿಯ ಮೇಲಿನಿಂದ ಅಳಿಸಿಹಾಕಿದನು.

ಮಿಶ್ರತಳಿಗಳು[ಬದಲಾಯಿಸಿ]

  • ಮಾನವನು ಹಣ ಮಾಡಿಕೊಳ್ಳಲು ಹಲವು ವಿಚಿತ್ರಗಳನ್ನು ಸೃಷ್ಟಿಸಿದನು. ಇವುಗಳಲ್ಲಿ ದೊಡ್ಡ ಬೆಕ್ಕುಗಳ ಮಿಶ್ರತಳಿಗಳು ಸಹ ಸೇರಿವೆ. ಮೃಗಾಲಯಗಳಲ್ಲಿ ಇಂದು ಸಹ ಹುಲಿ ಮತ್ತು ಸಿಂಹಗಳ ಸಂಯೋಗದಿಂದ ಮಿಶ್ರತಳಿಗಳ ಜೀವಿಗಳನ್ನು ಪಡೆಯಲಾಗುತ್ತಿದೆ. ಆದರೆ ಇವು ಹುಲಿಗಳನ್ನು ಕಾಪಿಟ್ಟುಕೊಳ್ಳುವಲ್ಲಿ ಯಾವುದೇ ಪ್ರಯೋಜನಕ್ಕೆ ಬಂದಿಲ್ಲ. ಗಂಡು ಸಿಂಹ ಮತ್ತು ಹೆಣ್ಣು ಹುಲಿಯ ಸಂಯೋಗದಿಂದ ಜನಿಸುವ ಜೀವಿಗೆ ಲೈಜರ್ ಎಂದು ಹೆಸರಿಸಲಾಗಿದೆ.
  • ಅದೇ ರೀತಿ ಹೆಣ್ಣು ಸಿಂಹ ಮತ್ತು ಗಂಡು ಹುಲಿಗಳ ಸಂಯೋಗದಿಂದ ಟೈಗಾನ್ ಎಂಬ ಮಿಶ್ರತಳಿಯ ಜೀವಿಯನ್ನು ಪಡೆಯಲಾಗುತ್ತಿದೆ. ಆದರೆ ಈ ವಿಚಿತ್ರ ಜೀವಿಗಳು ಬೆಕ್ಕು ಎಂಬ ಮೂಲ ಗುಣವನ್ನು ಹೊರತುಪಡಿಸಿದರೆ ಅತ್ತ ಹುಲಿಯೂ ಅಲ್ಲ ಇತ್ತ ಸಿಂಹವೂ ಅಲ್ಲ ಎಂಬಂತಹ ಜೀವಿಗಳಾಗಿವು

ವರ್ಣ ವೈವಿಧ್ಯ[ಬದಲಾಯಿಸಿ]

ಬಿಳಿ ಹುಲಿಗಳು[ಬದಲಾಯಿಸಿ]

ಬಿಳಿ ಹುಲಿಗಳ ಜೋಡಿ
ಅಪರೂಪದ ಚಿನ್ನದ ಬಣ್ಣದ ಹುಲಿ
  • ವಾಸ್ತವವಾಗಿ ಬಿಳಿ ಹುಲಿಯು ಹುಲಿಗಳ ತಳಿಗಳಲ್ಲಿ ಒಂದಲ್ಲ. ಮಾನವರಲ್ಲಿ ಕೆಲವೊಮ್ಮೆ ಉಂಟಾಗುವ ವರ್ಣರಾಹಿತ್ಯವು ಹುಲಿಗಳಲ್ಲಿ ಸಹ ಉಂಟಾದಾಗ ಅಂತಹ ಹುಲಿಯು ಬಿಳಿಯದಾಗಿ ಕಾಣುತ್ತದೆ. ಇಂತಹ ಹುಲಿಗಳ ರೂಪವು ಮಾನವನಿಗೆ ಆಕರ್ಷಕವಾಗಿ ಕಂಡಿದ್ದು ಹೆಚ್ಚು ಹೆಚ್ಚು ಬಿಳಿ ಹುಲಿಗಳನ್ನು ಇಂದು ಮೃಗಾಲಯಗಳಲ್ಲಿ ಹುಟ್ಟಿಸಲಾಗುತ್ತಿದೆ. ಬಿಳಿ ಹುಲಿಗಳನ್ನು ಪಡೆಯುವ ಮುಖ್ಯ ವಿಧಾನವೆಂದರೆ ಒಳಸಂತಾನ. ಅತಿ ಸಮೀಪದ ಬಂಧುಗಳಾಗಿರುವ ಹುಲಿಗಳ ಸಂಯೋಗದಿಂದ ಇಂತಹ ವಾಸ್ತವವಾಗಿ ವಿಕೃತ ಜೀವಿಗಳನ್ನು ಪಡೆಯಲಾಗುತ್ತಿದೆ.
  • ಒಳಸಂತಾನದ ಮುಖ್ಯ ಪರಿಣಾಮವಾದ ಅಂಗವೈಕಲ್ಯವು ಬಿಳಿಹುಲಿಗಳಲ್ಲಿ ವ್ಯಾಪಕವಾಗಿ ಕಂಡುಬರುತ್ತದೆ. ಅಲ್ಲದೆ ಇಂತ ಹುಲಿಗಳು ಸಾಮಾನ್ಯವಾಗಿ ಅಲ್ಪಾಯುಗಳಾಗಿವೆ. ಮೈಬಣ್ಣದ ಹೊರತಾಗಿ ಬಿಳಿ ಹುಲಿಗಳು ನೀಲಿ ಕಣ್ಣುಗಳನ್ನು ಹೊಂದಿದ್ದು ಮೂಗು ಗುಲಾಬಿ ಬಣ್ಣದ್ದಾಗಿರುತ್ತದೆ. ಸಾಮಾನ್ಯ ಹುಲಿಗೂ ಬಿಳಿ ಹುಲಿಗೂ ಇರುವ ಮೂರು ಮುಖ್ಯ ವ್ಯತ್ಯಾಸಗಳು ಇವು. ಬಿಳಿ ಹುಲಿಯು ಬಂಗಾಳ ಹುಲಿಯ ಒಂದು ವಿಕೃತ ರೂಪ.

ಚಿನ್ನದ ಬಣ್ಣದ ಹುಲಿ[ಬದಲಾಯಿಸಿ]

ಬಂಗಾಳ ಹುಲಿಗಳ ಒಂದು ಉಪಗುಂಪಾದ ಇವು ಹೊಳೆಯುವ ಚಿನ್ನದ ಮೈಬಣ್ಣವನ್ನು ಹೊಂದಿರುತ್ತವೆ. ಇವುಗಳ ಪಟ್ಟೆಯು ತಿಳಿ ಕಿತ್ತಳೆ ಬಣ್ಣದ್ದಾಗಿದ್ದು ತುಪ್ಪಳವು ಹೆಚ್ಚು ದಪ್ಪವಾಗಿರುತ್ತದೆ. ಇಂದು ಸುಮಾರು ೩೦ ಇಂತಹ ಹುಲಿಗಳು ಜೀವಿಸಿವೆ. ಇದಲ್ಲದೆ ನೀಲಿ ಬಣ್ಣದ ಹುಲಿ, ಕಪ್ಪು ಹುಲಿಗಳನ್ನು ಕಾಣಲಾಗಿರುವ ವದಂತಿಗಳಿವೆ. ಆದರೆ ಇವು ನಿಜವೇ ಆಗಿದ್ದಲ್ಲಿ ಇಂತಹ ಹುಲಿಗಳು ಸಾಮಾನ್ಯ ಹುಲಿಯ ವಂಶವಾಹಿಗಳ ವೈಪರೀತ್ಯದಿಂದ ಜನಿಸಿದ ಪ್ರಾಣಿಗಳಾಗಿದ್ದು ಸ್ವತಹ ಬೇರೆ ಉಪತಳಿಗಳಲ್ಲವೆಂದು ಅಭಿಪ್ರಾಯಪಡಲಾಗಿದೆ.

ನಡವಳಿಕೆ[ಬದಲಾಯಿಸಿ]

ಹುಲಿ ಸಾಮಾನ್ಯವಾಗಿ ಒಂಟಿಜೀವಿ

ಹುಲಿಯ ಸರಹದ್ದು[ಬದಲಾಯಿಸಿ]

  • ಹುಲಿಗಳು ತನ್ನ ಪ್ರಾಂತ್ಯವನ್ನು ಸ್ಪಷ್ಟವಾಗಿ ನಿಗದಿಮಾಡಿಕೊಂಡು ಅದರೊಳಗೆ ಜೀವಿಸುವ ಒಂದು ಒಂಟಿಜೀವಿ. ಹುಲಿಯ ಸರಹದ್ದಿನ ವ್ಯಾಪ್ತಿ ಆ ಪ್ರದೇಶದಲ್ಲಿ ದೊರೆಯುವ ಬೇಟೆ ಮತ್ತು ಗಂಡು ಹುಲಿಗಾದರೆ ಆ ಸುತ್ತಲಿನ ಪರಿಸರದಲ್ಲಿ ಇರಬಹುದಾದ ಹೆಣ್ಣು ಸಂಗಾತಿಗಳ ಮೇಲೆ ನಿರ್ಧಾರಿತವಾಗುತ್ತದೆ. ಸಾಮಾನ್ಯವಾಗಿ ಹೆಣ್ಣು ಹುಲಿಯ ಪ್ರಾಂತ್ಯ ೨೦ ಚ. ಕಿ.ಮೀ. ಇದ್ದರೆ ಒಂದು ಗಂಡು ಹುಲಿಯ ಪ್ರಾಂತ್ಯ ೬೦ ರಿಂದ ೧೦೦ ಚ.ಕಿ.ಮೀ. ವಿಸ್ತಾರವಾಗಿರುವುದು. ಒಂದು ಗಂಡು ಹುಲಿಯ ಪ್ರಾಂತ್ಯವು ಹಲವು ಹೆಣ್ಣು ಹುಲಿಗಳ ಸರಹದ್ದನ್ನು ಸಹ ಒಳಗೊಂಡಿರುತ್ತದೆ.
  • ಹುಲಿಗಳ ನಡುವಣ ಸಂಬಂಧವು ಸಾಕಷ್ಟು ಸಂಕೀರ್ಣವಾಗಿರುತ್ತದೆ. ತನ್ನ ಪ್ರಾಂತ್ಯದ ಮೇಲಿನ ಅಧಿಕಾರ ಸಾಧಿಸುವುದರಲ್ಲಾಗಲೀ ಅಥವಾ ಅತಿಕ್ರಮಣವುಂಟಾದಾಗ ಪ್ರತಿಕ್ರಿಯೆ ನೀಡುವಲ್ಲಾಗಲೀ ಒಂದೇ ನಿರ್ದಿಷ್ಟ ನಿಯಮ ಮತ್ತು ನಡಾವಳಿಗಳು ಹುಲಿಗಳಲ್ಲಿ ಕಾಣವು. ಸಾಮಾನ್ಯವಾಗಿ ಪರಸ್ಪರರಿಂದ ದೂರವಿದ್ದರೂ ಸಹ ಕೆಲವೊಮ್ಮೆ ಗಂಡು ಮತ್ತು ಹೆಣ್ಣು ಹುಲಿಗಳು ಬೇಟೆಯನ್ನು ಹಂಚಿಕೊಂಡು ಉಣ್ಣುವುದನ್ನು ಕಾಣಲಾಗಿದೆ. ಹೆಣ್ಣು ಹುಲಿಯು ಗಂಡು ಹುಲಿಯನ್ನು ತನ್ನ ಮರಿಗಳ ಬಳಿ ಸುಳಿಯಗೊಡುವುದಿಲ್ಲ.
ಹುಲಿಯ ದವಡೆಗಳು ಬಲಯುತವಾಗಿದ್ದು ಹಲ್ಲುಗಳು ಬಲು ತೀಕ್ಷ್ಣವಾಗಿರುತ್ತವೆ.
ಹುಲಿಯು ತನ್ನ ಎತ್ತರದ ಎರಡರಷ್ಟು ಮೇಲಕ್ಕೆ ಜಿಗಿಯಬಲ್ಲುದು.
  • ಹುಲಿಯ ಹೆಣ್ಣು ಮರಿಗಳು ಪ್ರೌಢಾವಸ್ಥೆಯನ್ನು ತಲುಪಿ ತನ್ನದೇ ಆದ ನೆಲೆಯನ್ನು ಸ್ಥಾಪಿಸುವಾಗ ಮೊದಲು ತಮ್ಮ ತಾಯಿಯ ವಾಸಸ್ಥಳದ ಆಸುಪಾಸಿನಲ್ಲಿಯೇ ಜಾಗ ಹುಡುಕುತ್ತವೆ. ಗಂಡು ಮರಿಯು ಪ್ರಾರಂಭದಲ್ಲಿಯೇ ತನ್ನ ತಾಯಿಯಿಂದ ಮತ್ತು ಸೋದರಿಯರಿಂದ ದೂರ ಸಾಗಿ ತನ್ನ ಪ್ರತ್ಯೇಕ ನೆಲೆಯನ್ನು ಗುರುತಿಸಿಕೊಳ್ಳುವುದು.
  • ಮೊದಮೊದಲು ಗಂಡು ಮರಿಯು ಹುಲಿರಹಿತ ಪ್ರದೇಶದಲ್ಲಿ ಅಥವಾ ಇನ್ನೊಂದು ದೊಡ್ಡ ಗಂಡು ಹುಲಿಯ ಪ್ರಾಂತ್ಯದ ಒಂದು ಭಾಗದಲ್ಲಿ ನವಜೀವನ ಆರಂಭಿಸಿ ಬಲಿತು ಬಲಶಾಲಿಯಾಗುತ್ತಿದ್ದಂತೆ ಕ್ರಮೇಣ ಅಲ್ಲಿನ ಮೂಲ ಗಂಡು ಹುಲಿಗೆ ಸವಾಲೆಸೆಯುತ್ತದೆ. ಆ ಸಂದರ್ಭದಲ್ಲಿ ಭೀಕರ ಕಾಳಗ ನಡೆದು ಕಡಿಮೆ ಬಲವುಳ್ಳ ಹುಲಿ ಒಂದೋ ಮರಣಿಸುತ್ತದೆ ಇಲ್ಲವೇ ಪ್ರಾಂತ್ಯ ತೊರೆದು ದೂರ ಪಲಾಯನ ಮಾಡುವುದು. ಕಾಡಿನ ಹುಲಿಗಳಲ್ಲಿ ಯುವ ಗಂಡು ಹುಲಿಗಳ ಸಾವಿಗೆ ಇದು ಬಲು ದೊಡ್ಡ ಕಾರಣವಾಗಿದೆ.
  • ಗಂಡು ಹುಲಿಗಳಲ್ಲಿ ಪರಸ್ಪರರ ಬಗ್ಗೆ ಅಸಹನೆ ಹೆಣ್ಣುಗಳಲ್ಲಿಗಿಂತ ಅಧಿಕ. ಸರಹದ್ದುಗಳ ವ್ಯಾಪ್ತಿಯ ಬಗ್ಗೆ ವಿವಾದವುಂಟಾದಾಗ ಮುಖಾಮುಖಿ ಸಹಜವಾಗಿಯೇ ಏರ್ಪಡುವುದು. ಆದರೆ ಈ ಸನ್ನಿವೇಶದಲ್ಲಿ ಘೋರ ಕಾಳಗವು ಬಲು ಅಪರೂಪ. ತಮ್ಮ ತಮ್ಮ ಶಕ್ತಿ ತೋರಿಸುತ್ತ ಎದುರಾಳಿ ಯನ್ನು ಹೆದರಿಸುವ ಯತ್ನಗಳು ಹೆಚ್ಚಾಗಿರುತ್ತವೆ. ಸೋಲೊಪ್ಪುವ ಹುಲಿಯು ತನ್ನ ಬೆನ್ನ ಮೇಲೆ ಉರುಳಿ ಹೊಟ್ಟೆಯ ಕೆಳಭಾಗವನ್ನು ಎದುರಾಳಿಗೆ ತೋರಿಸುವುದು ಶರಣಾಗತಿಯ ಸೂಚನೆ.
  • ಇಂತಹ ಸಂದರ್ಭಗಳಲ್ಲಿ ಕೆಲವೊಮ್ಮೆ ವಿಜೇತ ಹುಲಿಯು ಸೋತವನನ್ನು ತನ್ನ ಪ್ರಾಂತ್ಯದಲ್ಲಿಯೇ ಉಳಿಯಗೊಡುವುದು ಸಹ ಇದೆ. ಗಂಡು ಹುಲಿಗಳ ನಡುವೆ ಬಲು ತೀವ್ರ ವಿವಾದ ಒಂದು ಹೆಣ್ಣಿನ ಬಗ್ಗೆ ಸಂಭವಿಸುವುದು. ಇಂತಹ ಸಂದರ್ಭಗಳಲ್ಲಿ ನಡೆಯುವ ಕದನ ಒಮ್ಮೊಮ್ಮೆ ಒಂದು ಹುಲಿಯ ಸಾವಿನೊಂದಿಗೆ ಮುಗಿಯುವುದು. ಹುಲಿಗಳು ತಮ್ಮ ಸರಹದ್ದನ್ನು ಮರಗಳನ್ನು ಮೂತ್ರದಿಂದ ಗುರುತುಮಾಡುವುದರ ಮೂಲಕ ನಿಗದಿಮಾಡಿಕೊಳ್ಳುತ್ತವೆ. ಜೊತೆಗೆ ಸೀಮೆಯ ಗಡಿಯುದ್ದಕ್ಕೂ ಮಲದಿಂದ ಗುರುತಿನ ಚಿಹ್ನೆಗಳನ್ನು ಹಾಕಿರುತ್ತವೆ.

ಬೇಟೆ ಮತ್ತು ಆಹಾರ[ಬದಲಾಯಿಸಿ]

ತನ್ನ ಮರಿಯೊಂದಿಗೆ ಸೈಬೀರಿಯಾ ಹುಲಿ.
ಈಜುತ್ತಿರುವ ಒಂದು ಹುಲಿ

ಮುದಿಹುಲಿಗಳು ಮತ್ತು ತೀವ್ರ ಗಾಯಗೊಂಡು ಬೇಟೆಯಾಡಲು ಅಸಮರ್ಥವಾದ ಹುಲಿಗಳು ನರಭಕ್ಷಕವಾಗುತ್ತವೆ. ಭಾರತದಲ್ಲಿ ಈ ಸನ್ನಿವೇಶ ಸಾಮಾನ್ಯ.

  • ಸುಂದರಬನದಲ್ಲಿ ಬೆಸ್ತರು ಮತ್ತು ಇತರ ವಾಸಿಗಳು ಹುಲಿಗಳಿಗೆ ತುತ್ತಾಗುವುದು ಆಗಾಗ ಘಟಿಸುತ್ತದೆ. ಶರೀರಕ್ಕೆ ಬೇಕಾದ ನಾರನ್ನು ಪಡೆಯಲು ಹುಲಿಗಳು ಒಮ್ಮೊಮ್ಮೆ ಸಸ್ಯಾಹಾರಿಗಳಾಗುವುದು ಸಹ ಇದೆ. ಹುಲಿಗಳು ಸಾಮಾನ್ಯವಾಗಿ ರಾತ್ರಿಯ ಹೊತ್ತು ಬೇಟೆಯಾಡುತ್ತವೆ. ಒಂಟಿಯಾಗಿ ಬೇಟೆಯಾಡುವ ಹುಲಿ ತನ್ನ ಬೇಟೆಯನ್ನು ಕೆಳಗೆ ಕೆಡವುದರ ಮೂಲಕ ವಶಕ್ಕೆ ತೆಗೆದುಕೊಳ್ಳುತ್ತದೆ. ತನ್ನ ಭಾರೀ ದೇಹತೂಕದ ಹೊರತಾಗಿಯೂ ಹುಲಿಯು ಗಂಟೆಗೆ ೫೦ ರಿಂದ ೬೫ ಕಿ.ಮೀ. ವರೆಗಿನ ಓಟದ ವೇಗವನ್ನು ತಲುಪಬಲ್ಲುದು.
  • ಆದರೆ ಇಂತಹ ಓಟವು ಬಲು ಕಡಿಮೆ ದೂರದ್ದಾಗಿರುವುದು. ಹುಲಿಯು ದೊಡ್ಡ ಜಿಗಿತಕ್ಕೆ ಹೆಸರಾಗಿದೆ. ಹಲವು ಬಾರಿ ಹುಲಿ ೧೦ ಮೀ. ದೂರಕ್ಕೆ ಸಹ ಜಿಗಿಯಬಲ್ಲುದು. ಹುಲಿಯು ನಡೆಸುವ ಪ್ರತಿ ೨೦ ಬೇಟೆಯಾಡುವಿಕೆಯಲ್ಲಿ ಒಂದು ಮಾತ್ರ ಯಶ ನೀಡುವುದೆಂದು ಅಂದಾಜು ಮಾಡಲಾಗಿದೆ. ದೊಡ್ಡ ಗಾತ್ರದ ಪ್ರಾಣಿಯನ್ನು ಬೇಟೆಯಾಡುವಾಗ ಹುಲಿಯು ತನ್ನ ಮುಂಗಾಲುಗಳಿಂದ ಬೇಟೆಯನ್ನು ಹಿಡಿದು ಅದರ ಕೊರಳನ್ನು ಕಚ್ಚಿ ಹಿಡಿಯುತ್ತದೆ.
  • ಬಲಿಯು ಉಸಿರುಗಟ್ಟಿ ಪ್ರಾಣ ನೀಗುವವರೆಗೆ ಹುಲಿಯು ಅದರ ಕೊರಳನ್ನು ಕಚ್ಚಿಕೊಂಡೇ ಇರುತ್ತದೆ. ಈ ವಿಧಾನದಿಂದಾಗಿ ಹುಲಿಯು ತನಗಿಂತ ಗಣನೀಯವಾಗಿ ದೊಡ್ಡವಾದ ಪ್ರಾಣಿಗಳನ್ನು ಸಹ ಸಾಯಿಸಬಲ್ಲುದು. ಸಣ್ಣ ಪ್ರಾಣಿಗಳನ್ನು ಬೇಟೆಯಾಡುವಾಗ ಹುಲಿಯು ಬಲಿಯ ಬೆನ್ನುಹುರಿ, ಶ್ವಾಸನಾಳ ಮತ್ತು ಮುಖ್ಯ ರಕ್ತನಾಳಗಳನ್ನು ಛೇದಿಸುವ ಮೂಲಕ ಕೊಲ್ಲುವುದು.

ಸಂತಾನೋತ್ಪತ್ತಿ[ಬದಲಾಯಿಸಿ]

  • ಹುಲಿಗಳಿಗೆ ಬೆದೆಗೆ ಬರುವ ಋತುಗಳಿಲ್ಲ. ಸಂತಾನೋತ್ಪತ್ತಿ ವರ್ಷದ ಯಾವ ಸಮಯದಲ್ಲಾದರೂ ನಡೆಯಬಹುದಾದರೂ ಹುಲಿಗಳ ಹೆಣ್ಣು ಗಂಡುಗಳ ಸಂಗಮ ನವೆಂಬರ್ ನಿಂದ ಎಪ್ರಿಲ್ ವರೆಗೆ ಹೆಚ್ಚು ಸಾಮಾನ್ಯ. ಹುಲಿಯ ಗರ್ಭಧಾರಣೆಯ ಅವಧಿ ೧೬ ವಾರಗಳು. ಒಂದು ಬಾರಿಗೆ ಮೂರರಿಂದ ೪ ಮರಿಗಳು ಜನಿಸುತ್ತವೆ. ನವಜಾತ ಮರಿಯು ೧ ಕಿ.ಗ್ರಾಂ. ತೂಕ ಹೊಂದಿದ್ದು ಕುರುಡಾಗಿದ್ದು ಸಂಪೂರ್ಣ ನಿಸ್ಸಹಾಯಕ ಸ್ಥಿತಿಯಲ್ಲಿರುವುದು. ಮರಿಗಳ ಪಾಲನೆ ಮತ್ತು ಪೋಷಣೆಯ ಪೂರ್ಣ ಜವಾಬ್ದಾರಿ ತಾಯಿ ಹುಲಿಯದು ಮಾತ್ರ.
  • ಮರಿಗಳನ್ನು ಬಂಡೆಗಳ ಕೊರಕಲಿನಲ್ಲಿ ಅಥವಾ ದಟ್ಟ ಪೊದೆಗಳಲ್ಲಿ ಮರೆಸಿಟ್ಟು ತಾಯಿ ಹುಲಿಯು ಅವುಗಳನ್ನು ಪಾಲಿಸುತ್ತದೆ. ಹುಲಿಗಳಲ್ಲಿ ಶಿಶುಗಳ ಮರಣ ಅಧಿಕವಾಗಿದ್ದು ಅರ್ಧಕ್ಕೂ ಹೆಚ್ಚು ಮರಿಗಳು ಎರಡು ವರ್ಷದೊಳಗೆ ಮರಣಿಸುತ್ತವೆ. ಜನಿಸಿದ ೮ ವಾರಗಳ ಬಳಿಕ ಮರಿಯು ತನ್ನ ತಾಯಿಯನ್ನು ಹಿಂಬಾಲಿಸಿ ಮನೆಯಿಂದ ಹೊರಹೋಗಲು ಸಮರ್ಥವಾಗಿರುತ್ತದೆ. ಪ್ರಾರಂಭದಲ್ಲಿ ಈ ಚಲನೆ ನೆಲೆಯ ಆಸುಪಾಸಿಗಷ್ಟೇ ಸೀಮಿತವಾಗಿರುವುದು. ಮರಿಯು ೧೮ ತಿಂಗಳುಗಳಲ್ಲಿ ಸ್ವಾವಲಂಬಿಯಾಗುವುದು.
  • ೨ ರಿಂದ ೨ ೧/೨ ವರ್ಷಗಳ ಸಮಯದಲ್ಲಿ ಮರಿಯು ತನ್ನ ತಾಯಿಯನ್ನು ತೊರೆದು ಸ್ವತಂತ್ರ ಜೀವನ ರೂಪಿಸಿಕೊಳ್ಳುವುದು. ಹೆಣ್ಣು ಹುಲಿಗಳು ೩ ರಿಂದ ೪ ವರ್ಷಗಳಲ್ಲಿ ಲೈಂಗಿಕವಾಗಿ ಪ್ರೌಢಾವಸ್ಥೆಯನ್ನು ತಲುಪಿದರೆ ಗಂಡುಗಳಲ್ಲಿ ಈ ಅವಧಿ ೪ ರಿಂದ ೫ ವರ್ಷಗಳು. ತನ್ನ ಜೀವನಾವಧಿಯಲ್ಲಿ ಒಂದು ಹೆಣ್ಣು ಹುಲಿಯು ಸರಿಸುಮಾರು ಸಮಾನ ಸಂಖ್ಯೆಯ ಗಂಡು ಮತ್ತು ಹೆಣ್ಣು ಮರಿಗಳಿಗೆ ಜನ್ಮವೀಯುತ್ತದೆ. ಹುಲಿಗಳು ಬಂಧನದಲ್ಲಿ ಕೂಡ ಸರಾಗವಾಗಿ ಸಂತಾನೋತ್ಪತ್ತಿಯನ್ನು ನಡೆಸಬಲ್ಲವು.

ವಾಸದ ನೆಲೆಗಳು[ಬದಲಾಯಿಸಿ]

  • ಸಾಮಾನ್ಯವಾಗಿ ಹುಲಿಯ ವಾಸದ ನೆಲೆಯ ಪರಿಸರವು ಮೂರು ಮುಖ್ಯ ಲಕ್ಷಣಗಳನ್ನು ಹೊಂದಿರುವುದು. ಇವೆಂದರೆ ಗಿಡಮರಗಳಿಂದ ಒದಗುವ ನೈಸರ್ಗಿಕ ಮರೆ, ನೀರಿನಾಶ್ರಯ ಮತ್ತು ಧಾರಾಳವಾಗಿ ಒದಗುವ ಆಹಾರದ ಪ್ರಾಣಿಗಳು. ಮೊದಲೇ ತಿಳಿಸಿದಂತೆ ಬಂಗಾಳದ ಹುಲಿಗಳು ಎಲ್ಲ ಬಗೆಯ ಅರಣ್ಯಗಳಲ್ಲಿ ವಾಸಿಸುವುದು. ಹುಲಿಗಳು ದಟ್ಟ ಸಸ್ಯರಾಜಿಯನ್ನು ಬಯಸುತ್ತವೆ.
  • ಹುಲಿಯು ಒಂದು ನುರಿತ ಈಜುಗಾರ ಸಹ ಆಗಿದೆ. ಒಂದು ಸಲಕ್ಕೆ ಹುಲಿಯು ೪ ಮೈಲಿಗಳಷ್ಟು ದೂರವನ್ನು ಈಜಬಲ್ಲುದು. ತನ್ನ ಬೇಟೆಯನ್ನು ಕಚ್ಚಿಹಿಡಿದು ಹುಲಿಯು ಈಜಿಕೊಂಡು ನದಿ ಕೆರೆಗಳನ್ನು ದಾಟುವುದಿದೆ.

ಹುಲಿ ಸಂರಕ್ಷಣೆಯ ಯತ್ನಗಳು[ಬದಲಾಯಿಸಿ]

  • ಹುಲಿಯನ್ನು ಅದರ ಚರ್ಮ ಮತ್ತು ಉಗುರುಗಳಿಗೋಸ್ಕರವಾಗಿ ವ್ಯಾಪಕವಾಗಿ ಬೇಟೆಯಾಡಲಾಗುತ್ತದೆ. ಜೊತೆಗೆ ವಾಸದ ನೆಲೆಗಳ ನಾಶವು ಸಹ ಸೇರಿ ಹುಲಿಗಳ ಸಂಖ್ಯೆ ಇಂದು ಗಣನೀಯವಾಗಿ ಕುಸಿದಿದೆ. ೨೦ ನೆಯ ಶತಮಾನದ ಆದಿಯಲ್ಲಿ ಜಗತ್ತಿನಲ್ಲಿ ಸುಮಾರು ಒಂದು ಲಕ್ಷ ಹುಲಿಗಳಿದ್ದರೆ ಇಂದು ಈ ಸಂಖ್ಯೆ ವಿಶ್ವದ ಅರಣ್ಯಗಳಲ್ಲಿ 3890 ಮಾತ್ರ.
  • ಇಂದು ಸುಮಾರು ೨೦೦೦೦ ಹುಲಿಗಳು ಜಗತ್ತಿನೆಲ್ಲೆಡೆ ಮೃಗಾಲಯಗಳಲ್ಲಿ ಮತ್ತಿತರ ಕಡೆ ಬಂಧನದಲ್ಲಿವೆ. ಈ ದೊಡ್ಡ ಸಂಖ್ಯೆಯಿಂದಾಗಿ ಹುಲಿಗಳು ಹಠಾತ್ತಾಗಿ ಭೂಮಿಯಿಂದ ಶಾಶ್ವತವಾಗಿ ಮರೆಯಾಗುವ ಅಪಾಯ ಇಲ್ಲವಾಗಿದೆ.

ಭಾರತ[ಬದಲಾಯಿಸಿ]

  • ಭಾರತವು ವಿಶ್ವದ ಅತಿ ದೊಡ್ಡ ಸಂಖ್ಯೆಯ ಕಾಡಿನ ಹುಲಿಗಳನ್ನು ಹೊಂದಿದೆ. ಹುಲಿಗಳನ್ನು ಕಾಪಾಡಿಕೊಳ್ಳಲು ೧೯೭೩ರಲ್ಲಿ ಪ್ರಾಜೆಕ್ಟ್ ಟೈಗರ್ ಎಂಬ ಮಹತ್ವಾಕಾಂಕ್ಷೆಯ ಯೋಜನೆಯನ್ನು ರೂಪಿಸಲಾಗಿದೆ. ಈ ಯೋಜನೆಯಡಿಯಲ್ಲಿ ದೇಶದಾದ್ಯಂತ ೨೫ ಹುಲಿ ಮೀಸಲು ಕ್ಷೇತ್ರಗಳನ್ನು ರಚಿಸಲಾಗಿದ್ದು ಇವುಗಳ ವ್ಯಾಪ್ತಿಯಲ್ಲಿ ಮಾನವ ಚಟುವಟಿಕೆಯನ್ನು ಪೂರ್ಣವಾಗಿ ನಿಷೇಧಿಸಲಾಗಿದೆ.
  • ಇದರ ಫಲಸ್ವರೂಪವಾಗಿ ೧೯೭೩ರಲ್ಲಿ ೧೨೦೦ ರಷ್ಟಿದ್ದ ಹುಲಿಗಳ ಸಂಖ್ಯೆ ೯೦ರ ದಶಕದಲ್ಲಿ ೩೦೦೦ಕ್ಕೆ ಮುಟ್ಟಿತು. ಆದರೆ ೨೦೦೭ರಲ್ಲಿ ನಡೆದ ಹುಲಿಗಣತಿಯು ಭಾರತದಲ್ಲಿ ಇರುವ ಹುಲಿಗಳ ಒಟ್ಟು ಸಂಖ್ಯೆಯು ೧೪೧೧ ಎಂದು ತಿಳಿಸಿದೆ. ಈಚಿನ ದಿನಗಳಲ್ಲಿ ಮತ್ತೆ ಹೆಚ್ಚುತ್ತಿರುವ ಕಳ್ಳಬೇಟೆ ಹುಲಿಗಳ ಅವನತಿಗೆ ಕಾರಣವೆಂದು ಈ ವರದಿಯಲ್ಲಿ ತಿಳಿಸಲಾಗಿದೆ.->>ಭಾರತದಲ್ಲಿ ಹುಲಿ

ರಷ್ಯಾ[ಬದಲಾಯಿಸಿ]

೧೯ನೆಯ ಶತಮಾನದಲ್ಲಿ ಭಾರತದಲ್ಲಿ ಆನೆಯ ಮೇಲೆ ಕುಳಿತು ಹುಲಿ ಬೇಟೆ.
  • ಭೂಮಿಯ ಅತಿ ದೊಡ್ಡ ಹುಲಿಯಾದ ಸೈಬೀರಿಯಾದ ಹುಲಿ ಹೆಚ್ಚೂಕಡಿಮೆ ವಿನಾಶದಂಚನ್ನು ತಲುಪಿತ್ತು. ೧೯೪೦ರಲ್ಲಿ ಈ ತಳಿಯ ಕೇವಲ ೪೦ ಹುಲಿಗಳು ಜಗತ್ತಿನಲ್ಲಿದ್ದವು. ಅಪಾಯವನ್ನರಿತ ಅಂದಿನ ಸೋವಿಯತ್ ಒಕ್ಕೂಟದ ಸರಕಾರವು ಈ ಹುಲಿಗಳ ಬೇಟೆಯ ವಿರುದ್ಧ ಅತಿ ಕಠಿಣ ಕ್ರಮಗಳನ್ನು ಕೈಗೊಂಡು ಜೊತೆಗೆ ಹಲವು ಸಂರಕ್ಷಿತ ಹುಲಿ ವಲಯಗಳನ್ನು ರಚಿಸಿತು.
  • ಇದರ ಫಲಸ್ವರೂಪವಾಗಿ ೮೦ರ ದಶಕದ ಕೊನೆಯ ವೇಳೆಗೆ ಸೈಬೀರಿಯಾದ ಹುಲಿಗಳ ಸಂಖ್ಯೆ ಹಲವು ನೂರನ್ನು ತಲುಪಿತು. ಆದರೆ ೯೦ರ ದಶಕದಲ್ಲಿ ಸೋವಿಯೆತ್ ಒಕ್ಕೂಟ ಮುರಿದುಬಿದ್ದು ರಷ್ಯಾದ ಆರ್ಥಿಕಸ್ಥಿತಿ ದಯನೀಯವಾಗಿ ಕುಸಿದಾಗ ಈ ಹುಲಿವಲಯಗಳಲ್ಲಿ ಕಳ್ಳ ನಾಟಾ ಧಂದೆ ಮತ್ತು ಹುಲಿಗಳ ಕಳ್ಳಬೇಟೆ ಹೆಚ್ಚಿತು. ಆದರೆ ಈಚೆಗೆ ರಷ್ಯಾದ ಹಣಕಾಸು ಪರಿಸ್ಥಿತಿ ಉತ್ತಮಗೊಂಡಿದ್ದು ಹುಲಿ ಸಂರಕ್ಷಣೆಯತ್ತ ಮತ್ತೆ ಹೆಚ್ಚಿನ ನಿಗಾವಹಿಸಲಾಗಿತ್ತಿದೆ.

ಹುಲಿ ಮತ್ತು ಮಾನವ[ಬದಲಾಯಿಸಿ]

ಕರ್ಣಾಟಕಬೇಲೂರಿನಲ್ಲಿರುವ ಹೊಯ್ಸಳ ಅರಸರ ಲಾಂಛನ. ಹುಲಿಯೊಂದಿಗೆ ಹೋರಾಡುತ್ತಿರುವ ಸಳ.
  • ಏಷ್ಯಾದಲ್ಲಿ ಮಾನವನು ಬೇಟೆಯಾಡುವ ಐದು ದೊಡ್ಡ ವನ್ಯಪ್ರಾಣಿಗಳಲ್ಲಿ ಹುಲಿ ಸಹ ಒಂದು. ಹುಲಿ ಬೇಟೆಯು ಇಲ್ಲಿ ಮಾನವನಿಗೆ ಒಂದು ಪ್ರತಿಷ್ಠೆಯ ವಿಷಯವಾಗಿತ್ತು. ಜೊತೆಗೆ ಹುಲಿ ಚರ್ಮವನ್ನು ಹೊಂದಿರುವುದು ಸಮಾಜದಲ್ಲಿ ಗೌರವದ ಸಂಕೇತವಾಗಿತ್ತು. ಮಾನವ ಮತ್ತು ಹುಲಿಗಳ ನಡುವೆ ಘರ್ಷಣೆ ಸಾಮಾನ್ಯವಾಗಿದ್ದು ಪರಿಣಾಮವಾಗಿ ಹುಲಿಗಳಲ್ಲಿ ಕೆಲವು ನರಭಕ್ಷಕಗಳಾದರೆ ಇನ್ನೊಂದೆಡೆ ಮಾನವನು ಹುಲಿಗಳನ್ನು ನಿರ್ದಯವಾಗಿ ಕೊಲ್ಲುತ್ತಿರುವನು.
  • ಜೊತೆಗೆ ಹುಲಿಯ ಉಗುರು ಮತ್ತು ಇತರ ಕೆಲವು ಅಂಗಗಳನ್ನು ಮಾನವನು ಔಷಧಿಗಳಲ್ಲಿ ಮತ್ತು ಅಲಂಕಾರಿಕವಾಗಿ ಬಳಸುವನು. ಚೀನಾದಲ್ಲಿ ಹುಲಿಯ ಅಂಗಗಳಿಂದ ತಯಾರಿಸಲಾದ ಔಷಧಿಗಳ ಬಳಕೆ ಹೆಚ್ಚಿದ್ದು ಇದರ ಬಿಸಿ ಹುಲಿಗಳ ಸಂಖ್ಯೆಯ ಮೇಲೆ ತಾಗಿದೆ.

ಹುಲಿಗಳ ಸಂಖ್ಯೆ-ಇತ್ತೀಚಿನ ಗಣತಿ[ಬದಲಾಯಿಸಿ]

  • 13/08/2016 ರಲ್ಲಿ:
ದೇಶ 2010 2011 2016
ಭಾರತ 1706 1411 2226
ಬಾಂಗ್ಲಾ 440 440 106
ನೇಪಾಳ 155/198 155 198
ಭೂತಾನ್ 50/75 75 103
ರಷ್ಯಾ 360 360 433
ಇಂಡೊನೇಷ್ಯಾ 225/670 325 371
ಮಲೇಷ್ಯಾ 300 500 250
ಚೀನಾ 7 45 7
ಥಾಯ್ಲೆಂಡ್ 185/221 200 189
ಲಾವೊಪಿಡಿಆರ್ 2/17 17 2
ವಿಯೆಟ್ನಾಂ 5/20 10 5
ಮ್ಯಾನ್ಮಾರ್ 7 85 -
ಕಾಂಬೋಡಿಯಾ 20 20 0
ಒಟ್ಟು 3068/4041 3643 3980

[೨]

ಹುಲಿ 2018ರ ಗಣತಿಯಂತೆ[ಬದಲಾಯಿಸಿ]

  • 2018 ರ ಗಣತಿಯಂತೆ ಹುಲಿಗಳ ಸಂಖ್ಯೆ ಜಗತ್ತಿನಲ್ಲಿ 3980 ಇದೆ. ಅವುಗಳ ಸಂಖ್ಯೆಯಲ್ಲಿ ಸ್ವಲ್ಪ ಏರಿಕೆಯಾಗಿದೆ. ಹೆಚ್ಚು ಹುಲಿಗಳನ್ನು ಹೊಂದಿರುವುದು ಭಾರತ -ಭಾರತದಲ್ಲಿ 2264 ಹುಲಿಗಳಿರುವುದಾಗಿ ತಿಳಿದು ಬಂದಿದೆ. ಅವು 90,000 ಚದರ ಕಿ.ಮೀಟರ್ ಪ್ರದೇಶದಲ್ಲಿ ಹರಡಿಕೊಂಡಿವೆ. ಆದರೆ ಕಾಡಿನಲ್ಲಿ ಅವುಗಳಿಗೆ ಆಹಾರಕ್ಕೆ ಬೇಕಾದ ಪ್ರಾಣಿಗಳ ಕೊರತೆಯಿಂದ ಕಾಡಿನ ಪಕ್ಕದ ಊರುಗಳಿಗೆ ಪ್ರವೇಶ ಮಾಡುತ್ತಿವೆ. ಸುಮಾತ್ರಾದಲ್ಲಿ 400; ಥಾಯ್ಲೆಂಡ್ ಪ್ರದೇಶದಲ್ಲಿ 340; ರಷ್ಯಾ, ಚೀನಾಗಳಲ್ಲಿ ಸೈಬೀರಿಯಾದ ದೊಡ್ಡ ಜಾತಿಯ ಹುಲಿ 540; ಥಾಯ್ಲೆಂಡ್ ಮ್ಯನ್ಮಾರ್ ಗಡಿ ಪ್ರದೇಶದಲ್ಲಿ 250 ಹುಲಿಗಳು ಇರುವುದಾಗಿ ತಿಳಿದು ಬಂದಿದೆ. ಭಾರತ ದೇಶದಲ್ಲಿ 2967 ಹುಲಿಗಳು ಇರುವುದಾಗಿ 2018ರ ಹುಲಿ ಗಣತಿ ವರದಿಯಿಂದ ತಿಳಿದು ಬಂದಿದೆ. ಕರ್ನಾಟಕದಲ್ಲಿರುವ ಹುಲಿಗಳ ಸಂಖ್ಯೆ 524 ಎಂದು ಲೆಕ್ಕಹಾಕಲಾಗಿದೆ.[೩]

ಗ್ಯಾಲರಿ[ಬದಲಾಯಿಸಿ]

ಬಾಹ್ಯ ಸಂಪರ್ಕಕೊಂಡಿಗಳು[ಬದಲಾಯಿಸಿ]

ಉಲ್ಲೇಖ[ಬದಲಾಯಿಸಿ]

  1. ವಿಶ್ವ ಹುಲಿದಿನ
  2. ಇನ್ನೂ ಕಾಲ ಮಿಂಚಿಲ್ಲ
  3. ಭಾರತದಲ್ಲಿ ಹುಲಿ
"https://kn.wikipedia.org/w/index.php?title=ಹುಲಿ&oldid=1169013" ಇಂದ ಪಡೆಯಲ್ಪಟ್ಟಿದೆ